Monday, August 17, 2026

ದೇವರು ನಕ್ಕೆ ನಗುತ್ತಾನೆ - 8

"ಎಲ್ಲೋ ಹುಡುಕಿದೆ ಇಲ್ಲದ ದೇವರ
ಕಲ್ಲು ಮಣ್ಣುಗಳ ಗುಡಿಯೊಳಗೆ
ಇಲ್ಲೇ ಇರುವ ಪ್ರೀತಿ ಸ್ನೇಹಗಳ
ಗುರುತಿಸದಾದೆನು ನಮ್ಮೊಳಗೆ"

ಶ್ರೀ ಜಿ ಎಸ್ ಶಿವರುದ್ರಪ್ಪ ಅವರ ಈ ಪ್ರಸಿದ್ಧ ಕವಿತೆ ಬೆಳಿಗ್ಗೆ ನೆನಪಿಗೆ ಬರ್ತಾ ಇತ್ತು.. ಕಾರಣ ಗೊತ್ತಿರಲಿಲ್ಲ.. 

ಕೆಲವೊಂದು ಬಾರಿ ವರ್ತಮಾನದಲ್ಲಿ ಭವಿಷ್ಯವನ್ನು ಕಾಣುವ ದೂರದರ್ಶಿತ್ವವನ್ನು ಆ ಭಗವಂತ ಕ್ಷಣ ಕಾಲ ನೀಡಿರುತ್ತಾನೆ ಅನಿಸುತ್ತೆ..ಕುರುಕ್ಷೇತ್ರದ ಯುದ್ಧವನ್ನು ದೃತರಾಷ್ಟ್ರನಿಗೆ ವರದಿ ಒಪ್ಪಿಸುವ ಸಲುವಾಗಿ ಸಂಜಯನಿಗೆ ವ್ಯಾಸರು ದಿವ್ಯ ದೃಷ್ಟಿ ನೀಡಿದಂತೆ..

ಹೊಟ್ಟೆ ಹಸಿಯುತ್ತಿತ್ತು..ಊಟದ ಡಬ್ಬ ಹಿಡಿದುಕೊಂಡು ಹೋದಾಗ ನನ್ನ ಮಾನಸಿಕ ಮಾರ್ಗದರ್ಶಿ/ ಸಹೋದ್ಯೋಗಿ ಶ್ರೀಧರ್ ಊಟ ಮಾಡುತ್ತಿದ್ದರು.. ಅವರ ಜೊತೆ.. ಇನ್ನೊಬ್ಬರಿದ್ದರು ....ಅವರು ಯಾರೆಂದರೆ ಇರಿ ಇರಿ..ಅವರೇ ಈ ಬರಹದ ಮುಖ್ಯ ನಾಯಕ.. 

Sri Girish Kulakarni

ಶ್ರೀಧರ್ ಅವರಿಗೆ ಎಷ್ಟು ಕೃತಜ್ಞತೆ ಸಲ್ಲಿಸಿದ್ದೇನೋ ಗೊತ್ತಿಲ್ಲ.... ಕಾರಣ ಅದ್ಭುತ ವ್ಯಕ್ತಿಯ ಪರಿಚಯ ಮಾಡಿಕೊಟ್ಟಿದ್ದರು.. ಒಂದು ಆರೇಳು ತಿಂಗಳ ಹಿಂದೆ.. 

ಆಗಲ್ಲಪ್ಪಾ.. ನಾನು ಸುಳ್ಳು ಹೇಳೋಕೆ ಇಷ್ಟಪಡಲ್ಲ.. ನೀ ಮತ್ತೆ ನೆಡೆಯೋಕೆ ಸಾಧ್ಯವೇ ಇಲ್ಲ  .. ಗಾಲಿ ಕುರ್ಚಿಯೇ ನಿನ್ನ ಜೀವನಕ್ಕೆ ಆಧಾರ.. 

ಸೋತು ಕೂತಿದ್ದರು

ಇದು ನೆಡೆದದ್ದು ಗೌರಿ ಶಂಕರದ ಚಾರಣದಲ್ಲಿ (ಮೌಂಟ್ ಎವರೆಸ್ಟ್).. ಹಿಮಪಾತಕ್ಕೆ ತುತ್ತಾಗಿ.. ಬೆನ್ನು ಮೂಳೆ,  ಮಂಡಿಗೆ ಅಸಾಧ್ಯ ಆಘಾತವಾಗಿ ಖಟ್ಮಂಡು ಆಸ್ಪತ್ರೆಯಲ್ಲಿ ಪ್ಯಾಕ್ ಆಗಿ ಬಂದಿದ್ದ ಅವರ ದೇಹ... ಅದರ ಪಕ್ಕದಲ್ಲಿಯೇ ಪೋಸ್ಟ್ ಮಾರ್ಟಮ್ ಮಾಡೋಕೆ ಸಿದ್ಧವಾಗಿದ್ದ ದೇಹ.. ಅಂದರೆ ಅವರ ಪರಿಸ್ಥಿತಿ ಅದಕ್ಕಿಂತ  ದುಸ್ತರವಾಗಿತ್ತು.. ಶಸ್ತ್ರ  ಚಿಕಿತ್ಸೆ ಆದ ಮೇಲೂ ಡಾಕ್ಟರ್  ಹೇಳಿದ್ದು ಅದೇ ಮಾತು 

ವೈದ್ಯರು ಹೇಳಿದ್ದು.. ಗಾಲಿ ಖುರ್ಚಿಯೇ ಗತಿ.. 

ಅಲ್ಲಿಂದ ಧಾರವಾಡದ SDM ಆಸ್ಪತ್ರೆಗೆ ಬಂದರೆ..ಅಲ್ಲಿದ್ದ ಪ್ರಸಿದ್ಧ ವೈದ್ಯರು ಇಂಗ್ಲಿಷ್ ಭಾಷೆಯಲ್ಲಿ ಅದನ್ನೇ ಹೇಳಿದ್ದು.. 

ಬಸವಳಿದ ಮನಸ್ಸು.. ನಿತ್ರಾಣಗೊಂಡಿದ್ದ ದೇಹ.. ದಿನದಲ್ಲಿ ಸುಮಾರು ಇಪ್ಪತ್ತಮೂರು ಘಂಟೆಗಳಿಗೂ ಮಿಕ್ಕಿದ ಸಮಯದಲ್ಲಿ ಒಂದೇ ಆಸನದಲ್ಲಿ ಕೂತಿರೋದು.. 

ಇದು ಎಂಥಹ ಗಟ್ಟಿ ಗುಂಡಿಗೆ ಇರುವವರಿಗೂ ಧಸಕ್ ಎನ್ನುವಂತಹ ಪ್ರಸಂಗ.. ಜೀವನದಲ್ಲಿ ಇನ್ನೂ ಬೆಳಕೇ ಇಲ್ಲ ಎನ್ನುವಂತಹ ವಾತಾವರಣ..ಬದುಕೋದಾ.. ಇಲ್ಲವೇ ಗೋಡೆಯ ಮೇಲೆ ಫೋಟೋ  ಆಗೋದ ಎನ್ನುವ ಪರಿಸ್ಥಿತಿ.. 

ಆದರೆ ಅಲ್ಲಿಗೆ ಕಾಲಿಟ್ಟದ್ದು ದೇವರು.. ಹೌದು ದೇವರೇ ಹೌದು.. ಅದು ತಾಯಿ ದೇವರು.. 

ನೋಡಪ್ಪ .. ನಿನ್ನ ಆಸೆ ಏನು.. 

ಅಮ್ಮ ನಾ ಕ್ರಿಕೆಟ್ ಆಡಬೇಕು.. 

ಹಾಗಾದರೆ ಮೊದಲು ವೈದ್ಯರು ಹೇಳಿದ್ದು ತಲೆಯಿಂದ ತೆಗೆದು ಬಿಡು.. ಅವರು ಕೊಟ್ಟ ಮಾತ್ರೆ ಔಷಧ ಬಿಟ್ಟಾಕು.. ನಾ ಹೇಳಿದ್ದು ಮಾತ್ರ ನಿನ್ನ ತಲೆಯಲ್ಲಿ ಇರಲಿ.. ನಾ ನಿನ್ನನ್ನು ಸರಿ ಮಾಡುತ್ತೇನೆ.. 

ದೇವರ ಪ್ರತಿಬಿಂಬ ತಾಯಿ ದೇವರು ಹೇಳಿದ ಮೇಲೆ.. ಮುಗಿಯಿತು.. ಅದೇ ಕಲ್ಲು ಶಾಸನ.. 

ಆ ಕ್ಷಣದಿಂದ ತನ್ನನ್ನು ತಾಯಿ ದೇವರಿಗೆ ಅರ್ಪಿಸಿಕೊಂಡು ಬಿಟ್ಟರು.. 

ಅಲ್ಲಿಂದ ಶುರು ಆಯಿತು ನೋಡಿ ಪವಾಡ.. 

ಒಂದು ವರ್ಷ ಸುಮಾರು ಅಮ್ಮನ ಆರೈಕೆಯಲ್ಲಿ, ಶುಶ್ರೂಷೆಯಲ್ಲಿ ಮತ್ತ್ತೆ ಉತ್ಸಾಹ ಪುಟಿದೆದ್ದಿತು.. 

ಮುಂದಿನ ನಿಲ್ದಾಣ ಶ್ರವಣಬೆಳಗೊಳದ ಬೆಟ್ಟ.. 

ತಾಯಿ ದೇವರು ಆಜ್ಞಾಪಿಸಿದ್ದು "ನಿನ್ನ ಗೆಳೆಯರ ಜೊತೆ ಹೋಗು..ಅವರಿಗೆ ಹೇಳು.. ನನಗೆ ಯಾವುದೇ ಸಹಾಯ ಬೇಡ.. ಇಲ್ಲ ನಾ ಮುಂದೆ ಹೋಗುತ್ತೇನೆ.. ಇಲ್ಲವೇ ನಿಮ್ಮ ಹಿಂದೆ ಬರುತ್ತೇನೇ..ಆದರೆ ಸಹಾಯ ಬೇಡ.. ಇದು ತಾಯಿ ದೇವರ ಆಜ್ಞೆ.. ಮತ್ತು ನಾ ಮತ್ತೆ ಎದ್ದು ನಿಲ್ಲೋಕೆ ಒಂದು ಸಾಧ್ಯತೆ ಇರುವ ಅವಕಾಶ.. "

ಮುಂದೆ ಅನೇಕಾನೇಕ ಸಾಹಸಗಳನ್ನು ಮಾಡಿದರು.. ಗೌರಿ ಶಂಕರಕ್ಕೆ ಮತ್ತೆರಡು ಬಾರಿ ಹೋಗಿ ಬಂದಾಯ್ತು.. ಶಿಖರಾಗ್ರಕ್ಕಿಂತ ಕೊಂಚ ಕೆಳಗಿನ ಕ್ಯಾಂಪ್ ತನಕ ಹೋಗಿ ಬಂದ ಸಾಧನೆ.. 

ಆಮೇಲೆ ಲೆಕ್ಕವಿಲ್ಲದಷ್ಟು ಬಾರಿ ಚಾರಣ, ಕಾಡು ಒಳಗಿನ ಚಾರಣ, ದುರ್ಗಮ ಹಾದಿಯ ಚಾರಣ, ಕಾಡು ಪ್ರಾಣಿಗಳನ್ನು ರಕ್ಷಿಸುವ, ಸಂರಕ್ಷಿಸುವ, ಹಾಗೂ ಗಣತಿಗೆ ಹೋಗುವ ಕಾಯಕ.. ಇದರ ಮಧ್ಯೆ ಹುಲಿಯ ಆಕ್ರಮಣ, ಆನೆಯ ಆಕ್ರಮಣ.. ಇದೆಲ್ಲವನ್ನು ಜಯಿಸಿ ಮೆಟ್ಟಿ ನಿಂತರು.. 

ಕಳೆದ ವಾರವಷ್ಟೇ ಗಡುವು ನೀಡಿದ್ದ ೬೬ ಘಂಟೆಗಳ ಅದ್ಭುತ ಚಾರಣ ಸುಮಾರು ೮೦ ಕಿಮೀಗಳು (ಎರಡೂ ಕಡೆ.. ಅಂದರೆ ಹೋಗಿದ್ದು ಮತ್ತೆ ತಿರುಗಿ ಬಂದಿದ್ದ ಹಾದಿ).. ಈ ದುರ್ಗಮ ಚಾರಣವನ್ನು ಗಡುವು ನೀಡಿದ್ದ ಸಮಯ ಇನ್ನೇನು ಆರು ನಿಮಿಷಗಳಲ್ಲಿ ಮುಗಿಯಿತು ಎನ್ನುವಷ್ಟರಲ್ಲಿ ಜಯಶಾಲಿಯಾಗಿ ಹಿಂದಿರುಗಿದ್ದು.. 

ಹೌದು ಸ್ಪೂರ್ತಿಗಾಗಿ ಪುಸ್ತಕ, ಸಾಹಸ ಚರಿತ್ರೆ, ರೀಲ್ಸ್, ವಿಡಿಯೋ ಅಂತ ಅನೇಕ ಮಾಧ್ಯಮಗಳ ಮೊರೆ ಹೋಗುತ್ತೇನೆ.. ಇಂದು ಊಟದ ಸಮಯದಲ್ಲಿ ಅದ್ಭುತ ಇಪ್ಪತ್ತು ನಿಮಿಷಗಳಲ್ಲಿ ಸಿಕ್ಕ ಸ್ಫೂರ್ತಿ ಬೆಲೆ ಕಟ್ಟಲಾಗದ್ದು.. ಅದನ್ನು ಬಿಡಬಾರದು ಎಂದು ಇಲ್ಲಿ ದಾಖಲಿಸಿದ್ದೇನೆ...

ಇವರ ಪಾತ್ರ ಪರಿಚಯ ಮಾಡೋದು ಬೇಕಾದಷ್ಟಿದೆ.. ಆದರೆ ನನ್ನ ಅರಿವಿಗೆ ತಲುಪಿದ್ದು ಸಿಕ್ಕಿದ್ದು ಇಷ್ಟು.. ಇವರೇ...... ನಾ ಇವರ ಸಹೋದ್ಯೋಗಿ ಎಂದು ಹೇಳಿಕೊಳ್ಳಲು ಹೆಮ್ಮೆ ಪಡುವ ಶ್ರೀ ಗಿರೀಶ್ ಕುಲಕರ್ಣಿ!

ಅಮ್ಮ ಹೇಳಿಕೊಟ್ಟ ಅಮರ ವಾಕ್ಯವನ್ನು ಇವರು ಚಾಚೂ ತಪ್ಪದೇ ಪಾಲಿಸುತ್ತಾ ಇದ್ದಾರೆ...ಅದು ಏನು ಗೊತ್ತಾ...ಕೆಳಗಿನ ಚಿತ್ರದಲ್ಲಿ ಹೇಳುತ್ತೆ..THE ROAD'S END....but honestly THE REAL ROAD STARTS FROM HERE!!!

ಇದೇ ಆ ಅಮರ ವಾಕ್ಯ...!




ದೇವರು ನಗುತ್ತಿದ್ದ.. ನಾ ಸೃಷ್ಟಿ ಮಾಡಿದ ಜೀವಿ..ಎಲ್ಲಾ ಭಾದಕಗಳನ್ನು  ದಾಟಿ ಗೆದ್ದು ಮೆಟ್ಟಿ ನಿಂತಿದೆ ಅಂದರೆ.. ನಾ ಸೃಷ್ಟಿ ಮಾಡಿದ್ದಕ್ಕೆ ಸಾರ್ಥಕವಾಯಿತು.. 

ದೇವರು ಎರಡೂ ಅಭಯಹಸ್ತವನ್ನು ತೋರಿಸಿ "ಶ್ರೀ ಗಿರೀಶ್ ಕುಲಕರ್ಣಿ ನಿಮಗೆ ಸದಾ ಒಳಿತಾಗಲಿ.. ಇನ್ನಷ್ಟು, ಮೊಗೆದಷ್ಟು ಸಾಹಸಗಳು ನಿಮ್ಮ ಬದುಕಿನಲ್ಲಿ ಸಾಗಲಿ.. ಆ ತಾಯಿ ದೇವರಿಗೆ ನನ್ನ ಕಡೆಯಿಂದ ಎರಡೂ ಕೈಯೆತ್ತಿ ಮುಗಿಯುವೆ.. .. ಅದಕ್ಕೆ ತಾಯಿಯನ್ನು ತಾಯಿ ದೇವರು ಎನ್ನೋದು" ಅಂತ ಹೇಳಿ ದೇವರು ಮಂದಹಾಸ ಬೀರಿದ.. 


Thursday, May 7, 2026

ಡಿವೈನ್ ವುಮನ್- DFR DFR

ಬೆಲ್ಲಕ್ಕೆ ನೊಣ ಮುತ್ತಿದ ಹಾಗೆ ಎಲ್ಲರೂ ನನ್ನ ಲ್ಯಾಪ್ಟಾಪ್ ಸುತ್ತಾ ಕೂತು ನೋಡುತ್ತಿದ್ದರು.. 

"ನೋಡ್ರಪ್ಪಾ ದೇವರಿಗೆ ನೈವೈದ್ಯ ಇಟ್ಟು ಅದರ ಕಡೆ ನೋಡುತ್ತಲೇ ಇದ್ದರೇ ದೇವರಿಗೂ ಸಂಕೋಚವಲ್ಲವೇ.. ಜೊತೆಗೆ ದೇವರಿಗೆ ಹೇಗೆ ಬಂದು ನೈವೇದ್ಯ ಸ್ವೀಕರಿಸಬೇಕು..  ಎನ್ನುವ ಗೊಂದಲವೂ ಕಾಡುತ್ತದೆ.. ಹಾಡುವ ಕೋಗಿಲೆಗೆ ಸ್ವತಂತ್ರ ಕೊಟ್ಟಾಗ ಮಾತ್ರವೇ ಹಾಡೋದು ಅಲ್ಲವೇ.. "

ಕಲಿತ ಬುದ್ದಿಯನ್ನೆಲ್ಲಾ ಉಪಯೋಗಿಸಿ ಒಂದಷ್ಟು ಹೇಳಿದ ಮೇಲೆ, ಪ್ರಸಾದ ಸ್ವೀಕರಿಸಿದ ಮೇಲೆ ಭಕ್ತರು ದೇವಸ್ಥಾನದಿಂದ ಹೊರಗೆ ಹೋಗುವಂತೆ.. ಜಾಗ ಖಾಲಿಯಾಯಿತು.. 

ಬರಹಕ್ಕೆ ೧೯೪೭ ಆಗಸ್ಟ್ ೧೫ ಸಿಕ್ಕಿತು .. 

ಅದೊಂದು ಸುಂದರ ಮುಂಜಾವು.. 

ಬಿಳಿ ಧಿರಿಸಿನಲ್ಲಿ ಮೈಸೂರು ರಸ್ತೆಯ ನಾಯಂಡಹಳ್ಳಿಯ ಬಳಿ ಬಸ್ಸು ಹತ್ತಿದ್ದು ನೋಡಿದ್ದು..

ಡಿವೈನ್ ಫೀಲಿಂಗ್ ಬಂದದ್ದು ಮೊದಲ ನೋಟದಲ್ಲಿಯೇ.. 

ಹೌದು ಕೆಲವು ಬಂಧಗಳಿಗೆ ಯಾವುದೇ ಬಂಧವಿರೋಲ್ಲ ಅಂತಾರೆ.. ಇವರು ಹಾಗೆ.. 

ನೀರು ಯಾವುದೇ ಪಾತ್ರೆಗೆ ಹಾಕಿದಾಗ ಆ ಪಾತ್ರಕ್ಕೆ ಹೊಂದುವಂತೆ..ಇವರ ವ್ಯಕ್ತಿತ್ವ.. 

ಸಮಾಜಮುಖಿ ಕೆಲಸ ಮಾಡಿದರೂ ಇವರು ಅನ್ಮೋಲ್ ರತ್ನ ಆಗೋಕೆ ಇಷ್ಟ ಪಡಲ್ಲ 

ತಿರುಗಾಲ ತಿಪ್ಪಿ ಅಂದರೆ ವಾರಾಂತ್ಯಕ್ಕೆ ಪ್ರವಾಸ ಹೊರಟರೂ ಇವರು ತನ್ನನ್ನು ತಾನು ಅಲೆಮಾರಿ ಅಂದುಕೊಳ್ಳೋಲ್ಲ 

ವಿದ್ಯೆ ಕಲಿಸುವ ಶಾಲೆಯಲ್ಲಿ ತೊಡಗಿಕೊಂಡಿದ್ದರೂ ತನ್ನನ್ನು ಶಿಕ್ಷಕಿ ಎಂದುಕೊಳ್ಳೋಲ್ಲ 

ಸಮಾಜದ ಅಂಕುಡೊಂಕುಗಳನ್ನು ತಿದ್ದುವ ಗುಂಪಿನಲ್ಲಿ ತಾನು ಸಕ್ರಿಯವಾಗಿದ್ದರೂ ತಾನು ಸಮಾಜ ಸೇವಕಿ ಎಂದು ಗುರುತಿಸಿಕೊಳ್ಳೋಕೆ ಇಷ್ಟ ಪಡಲ್ಲ 

ಬದುಕಿನಲ್ಲಿ ಹೆಜ್ಜೆಯನ್ನು ಭಾರವಾಗಿಟ್ಟುಕೊಂಡು ಬಂದಿದ್ದರೂ ಬದುಕು ಹೂವಿನ ಹಾಸಿಗೆ ಎಂದೇ ನಂಬಿ..ಅದನ್ನು ಸಮಾಜಕ್ಕೂ ತೋರಿಸುವ ಗುಣವಿದ್ದರೂ ತಾನು ಸವಾಲುಗಳನ್ನು ಮೆಟ್ಟಿ ನಿಂತ ಈ ಶತಮಾನದ ಮಾದರಿ ಹೆಣ್ಣು ಎಂದು ಕರೆಸಿಕೊಳ್ಳೋದು ಇಷ್ಟವಿಲ್ಲ 

ಗೌರೀಶಂಕರಾದ ತಪ್ಪಲಿಗೆ ಹೋಗಿ ಕರುನಾಡ ಬಾವುಟದಲ್ಲಿ ರಾರಾಜಿಸಿದರೂ ತಾನು ಹೆಮ್ಮೆಯ ಕನ್ನಡತಿ ಎಂದು ಹೇಳಿಕೊಳ್ಳುತ್ತಾರೆ ವಿನಹ ಅಸಾಮಾನ್ಯ ಚಾರಣಗಿತ್ತಿ ಎಂದು ಪೋಸ್ಟ್ ಹಾಕೋಲ್ಲ 

ಕಾಡುಮೃಗಗಳ ದಟ್ಟ ಕಾಡಿನೊಳಗೆ ಸುತ್ತಾಡಿದರೂ ಪೇಟೆ ಮಂದಿ ಕಾಡಿಗೆ ಬಂದ್ರೂ ಅಂತ ಹೇಳಿಕೊಳ್ಳೋಲ್ಲ 

ಸಂತ್ರಸ್ತರಿಗೆ ಆಸರೆ ನೀಡುತ್ತಾರೆ ಸಮಾಜ ಸುಧಾರಕಿಯಲ್ಲ ಮನೋಶಾಸ್ತ್ರಜ್ಞೆ ಅಲ್ಲ 

ನೊಂದಿರುವವರಿಗೆ ಸಾಂತ್ವನ ಹೇಳುತ್ತಾರೆ.. 

ಕವನ ಬರೆಯುತ್ತಾರೆ ಕವಿಯತ್ರಿಯಲ್ಲ 

ಲೇಖನ ಬರೆಯುತ್ತಾರೆ ಸಾಹಿತಿಯಲ್ಲ 

ತಂಡ ಕಟ್ಟಿ ನೆಡೆಸುತ್ತಾರೆ ನಾಯಕಿಯಲ್ಲ 

ಹಾಡುತ್ತಾರೆ ಗಾಯಕಿಯಲ್ಲ 

ನರ್ತಿಸುತ್ತಾರೆ ಆದರೆ ನರ್ತಕಿಯಲ್ಲ 

ಫೋಟೋ ತೆಗೆಯುತ್ತಾರೆ ಛಾಯಾಗ್ರಾಹಕಿಯಲ್ಲ 

ತಾವು ಎಲ್ಲರ ತರಹ ಅನ್ನುತ್ತಾರೆ ಆದರೆ ಮಾನವರಲ್ಲ 

ಇವರು ಅಸಾಧಾರಣ ಗುಣವುಳ್ಳ ಭಗವಂತನ ಅದ್ಭುತ ಸೃಷ್ಟಿ  ಡಿವೈನ್ ವುಮನ್ 

DFR DFR ಜನುಮದಿನದಂದು ಇಲ್ಲ ಇಲ್ಲ ಎಂದು ಬರೆದು ನಿಮ್ಮ ಅಗಾಧ ಗುಣಗಳ ಖಜಾನೆಯನ್ನು ತೆರೆದಿಡಲು ಪ್ರಯತ್ನ ಪಟ್ಟಿದ್ದೇನೆ.. ನೀವೊಂದು ಸಾಗರ ಹೇಳಿದಷ್ಟು ಹೇಳುವಂತೆ ಮಾಡುವ ಅಪೂರ್ವ ಗುಣಸಾಗರಿ ನೀವು 

ನಿಮ್ಮ ಬ್ಲಾಗ್ ಹೆಸರು ಹೇಳುವಂತೆ.. ಬಿಳಿಮುಗಿಲು ಅದಕ್ಕೆ ಕೊನೆಯೇ ಇಲ್ಲ.. ಆ ಬಿಳುಪಿನ ಹೊಳಪಿಗೆ ಮಾರು ಹೋಗುವವರೇ ಎಲ್ಲಾ... !

ಶುಭವಾಗಲಿ..ಜನುಮದಿನದಂದು ಪ್ರತಿದಿನವೂ .. ಅನುಕ್ಷಣವೂ .. ಸಂತಸ ನಿಮ್ಮ ಸ್ವತ್ತಾಗಿರಲಿ!

Wednesday, January 28, 2026

Raja & Burman... The Ultimate Jam!!!

ಕನ್ನಡವೋ ಇಂಗ್ಲೀಸೋ ಅಂತ ಗೊಂದಲವಿದ್ದಾಗ.. ತಾಯಿ ಮೊದಲು ಆಮೇಲೆ ಮಿಕ್ಕಿದ್ದು ಅಂತ ಮನಸ್ಸು ಹೇಳಿತು.. ಅಂಗಾಗಿ ಕನ್ನಡಲ್ಲಿ ಬರೆಯುವ ಅಂತ ನಿರ್ಧಾರವಾಯ್ತು.. 

ಮಹೇಶ್ ಮತ್ತು ಶ್ರುತಿ ಡಿಸೆಂಬರ್ ಹದಿನಾರು ೨೦೧೭ರಲ್ಲಿ ಒಂದು ಸಂಗೀತ ಸಂಜೆ ಜೀವ ಸ್ವರ ತಂಡದಿಂದ ಕಾರ್ಯಕ್ರಮದಲ್ಲಿ ಪರಿಚಯವಾದ ಸ್ನೇಹ.. ಅದು ಅದ್ಭುತ ಗೆಳೆತನಕ್ಕೆ ತಿರುಗಿ ಅಲೆಮಾರಿಯಾಗಿದ್ದ ನನಗೆ ಅನೇಕ ಚಾರಣಗಳಲ್ಲಿ ಜೊತೆಯಾದವರು. 

ಇವರದು ಸುಂದರ ಕುಟುಂಬ..ಸಂಗೀತ ಕುಟುಂಬ ಅಂದರೂ ತಪ್ಪಿಲ್ಲ.. ಅವರ ಪುಟ್ಟ ತುಂಟ ಮಗ ಮೊಬೈಲಿನಲ್ಲಿ ಆಟವಾಡೋದು ಇದ್ದರೂ.. ಯು ಟ್ಯೂಬ್ ನಲ್ಲಿ ಶಾಸ್ತ್ರೀಯ ಸಂಗೀತ ಹಾಕಿಕೊಂಡು ಅದರ ಜೊತೆ ಹಾಡುವುದು.. ಇವರ ಪರಂಪರೆಯನ್ನು ಮುಂದುವರೆಸುವ ಎಲ್ಲಾ ಲಕ್ಷಣಗಳು ಕಾಣುತ್ತಿವೆ.. ಅದಕ್ಕೆ ಅಲ್ಲವೇ ಹೇಳೋದು ಬೆಳೆಯುವ ಪೈರು ಮೊಳಕೆಯಲ್ಲಿ ಅಂತ.. 

ಶ್ರೀಕಿ ನೀನು ಬರಬೇಕು.. (ಸರ್ ಸರ್ ಅಂತ ಇದ್ದ ಪರಿಚಯ.. ಹೋಗೋ ಬಾರೋ ಹಂತಕ್ಕೆ ಬಂದಿದೆ ಎಂದರೆ ನೋಡಿ ಗೆಳೆತನ ಒಂದು ಝರಿಯ ತರಹ ಸಣ್ಣ ಒರತೆಯಲ್ಲಿ ಶುರುವಾಗಿ ಜಲಪಾತವಾಗಿ ಸಾಗರ ಸೇರುತ್ತದೆ.. "ಸ್ನೇಹದ ಕಡಲಲ್ಲಿ ನೆನಪಿನ ದೋಣಿಯಲಿ ಪಯಣಿಗ ನಾನಮ್ಮ" ನನ್ನ ಆರಾಧ್ಯ ದೈವ ಶ್ರೀ ಪುಟ್ಟಣ್ಣ ಕಣಗಾಲ್ ಅವರ ಶುಭಮಂಗಲದ ಹಾಡು ನೆನಪಿಗೆ ಬಂತು)

ಬರ್ತೀನಿ.. ಬರೋಕೆ ಎಲ್ಲಾ ಪ್ರಯತ್ನ ಮಾಡುವೆ ಅಂತ ಆಶ್ವಾಸನೆ ಕೊಟ್ಟೆ.. ಬದುಕಿನ ಜಂಜಾಟದಲ್ಲಿ ಸ್ವಲ್ಪ ಮನಃಶಾಂತಿ ಬೇಕಿತ್ತು.. ಬದಲಾವಣೆ ಬೇಕಿತ್ತು.. ಇಂತಹ ಕಾರ್ಯಕ್ರಮವನ್ನು ಹೃದಯದಿಂದ ಸಂಭ್ರಮಿಸುವ ನನ್ನ ಮನದನ್ನೆ ಊರಿಗೆ ಹೋಗಿದ್ದಳು.. ಆ ಬೇಜಾರಿತ್ತು.. ಅವಳಿದ್ದಿದ್ದರೆ ಆ ಸಂಗೀತ ಸಂಭ್ರಮದಲ್ಲಿ ಅವಳನ್ನು ಹಿಡಿಯುವುದು ನನಗೆ ಕಷ್ಟವಾಗುತಿತ್ತು.. ಇರಲಿ ಇರಲಿ.. ಹೊರಟೆ ನನ್ನ ಸದ್ದಿಲ್ಲದೇ ಸಂಭ್ರಮಿಸುವ ನನ್ನ ಗೆಳತೀ ಅರ್ಥಾತ್ ಮಗಳ ಜೊತೆ ಹೊರಟೆ. 

ಎಲ್ಲರೂ ಅಪರಿಚಿತರು ಸಭಾಂಗಣದಲ್ಲಿ ನೆರೆದಿದ್ದರು.. ಎಲ್ಲರೂ ಅಪರಿಚಿತರೇ ಆದರೆ ಎಲ್ಲರನ್ನೂ ಬಂಧಿಸಿದ್ದು ಸಂಗೀತದ ಸೆಳೆತ ಅದರಲ್ಲೂ ಇಬ್ಬರು ದಿಗ್ಗಜರು.. 

ಒಬ್ಬರು ಮಾಮೂಲಿ ಎನಿಸುವ ಸಂಗೀತಕ್ಕೆ ಅನೇಕಾನೇಕ ವಿಭಿನ್ನವಾದ ಸದ್ದು ಮಾಡಬಲ್ಲ ಉಪಕರಣಗಳಿಂದ ನಾದದ ಜಾದೂ ಮಾಡುವ ಶ್ರೀ ರಾಹುಲ್ ದೇವ್ ಬರ್ಮನ್.. (ಮೇರೇ ಸಾಂನೆ ವಾಲೀ ಕಿಡಕಿ ಹಾಡಿನಲ್ಲಿ ಬಾಚಣಿಗೆ, ಡಬ್ಬ.. ಚುರಾಲಿಯ ಚಿತ್ರದಲ್ಲಿ ಗಾಜಿನ ಲೋಟ, ಮೆಹಬೂಬ ಮೆಹಬೂಬ ಹಾಡಿನಲ್ಲಿ ಖಾಲಿ ಗಾಜಿನ ಸೀಸೆಯನ್ನು ಊದಿ ಬರುವ ನಾದ)

ಇನ್ನೊಬ್ಬರು ಸವಾಲು ಹಾಕಿದರೆ ಅದಕ್ಕೆ ತಕ್ಕಂತೆ ಸವಾಲು ಗೆದ್ದು ಅವರು ಕೇಳಿದ್ದಕ್ಕಿಂತ ಅದ್ಭುತ ಸಂಗೀತ ಕೊಡುವ ಮಾಂತ್ರಿಕ ಶ್ರೀ ಇಳಯರಾಜ (ನನಗೆ ನೆನಪಿದ್ದಂತೆ ಸಂಧ್ಯಾರಾಗಂ ಸಿನೆಮಾದ ಹಿನ್ನೆಲೆ ಸಂಗೀತಕ್ಕೆ ಬರಿ ಕೊಳಲು ಮಾತ್ರ ಉಪಯೋಗಿಸಿದ್ದರು ಅಂತ.. ತಪ್ಪಿದ್ದರೆ ತಿದ್ದಿ .. ಅಗ್ನಿ ನಕ್ಷತ್ರಂ ಚಿತ್ರದ ರಾಜ ರಾಜಾಧಿರಾಜ ಹಾಡಿನಲ್ಲಿ ಬರಿ ಡ್ರಮ್ ಮತ್ತು ಅದರ ಜೊತೆವಾದ್ಯಗಳನ್ನು ಮಾತ್ರ ಉಪಯೋಗಿಸಿದ್ದು. ಕನ್ನಡದ ಗೀತಾ ಚಿತ್ರದ ಕೇಳದೆ ನಿಮಗೀಗ ಹಾಡಿನಲ್ಲಿ ವಯೊಲಿನ್ ವಾದ್ಯಗಾರರಿಗೆ ವಯೊಲಿನ್ ಕೆಳಗೆ ಇಟ್ಟು ಬರಿ ಬಾಯಲ್ಲಿ "ಜುಂಜುಂ ತನನ ನಾ" ಸದ್ದು ಮಾಡಿಸಿ ಹಾಡನ್ನು ಗೆಲ್ಲಿಸಿದ್ದು.. ಅಣ್ಣಾವ್ರ ಚಿತ್ರಗಳ ಹಾಡಿನಲ್ಲಿಯೇ ತೀರಾ ವಿಶಿಷ್ಟ್ರವಾದ ಸಂಗೀತ ಕೊಟ್ಟಿದ್ದು ನೀ ನನ್ನ ಗೆಲ್ಲಲಾರೆ ಚಿತ್ರದ ಹಾಡುಗಳ ಸಂಗೀತ.. ಹೀಗೆ ಒಂದೇ ಎರಡೇ)  

ಈ ಕಾರ್ಯಕ್ರಮದ ಹೆಸರು ರಾಜ & ಬರ್ಮನ್ ಅಲ್ಟಿಮೇಟ್ ಜಾಮ್ ಅಂತ ಅಡ್ಡ ಪಂಕ್ತಿ ಇದ್ದ ಈ ಕಾರ್ಯಕ್ರಮ ಅದ್ಭುತ ಪ್ರತಿಭೆಗಳ ಸಮಾಗಮ.. ಒಬ್ಬೊಬ್ಬರು ಅವರವರ ಕಾರ್ಯಕ್ಷೇತ್ರದಲ್ಲಿ ಘಟಾನುಘಟಿಗಳು.. ಅವರೆಲ್ಲ ಒಂದು ಛಾವಣಿಯ ಅಡಿ ಸೇರಿದ ಮೇಲೆ ಸಂಗೀತ ಬರ್ಸಾತ್ ಅಂದರೆ ಸಂಗೀತ ಮಳೆಯೇ ಬರಬೇಕಲ್ಲವೇ.. ಅದೇ ಬಂದಿದ್ದು.. 

ಸಿಗರೇಟು ಹಚ್ಚಿಕೊಂಡ ಸಿ ಐ ಡಿ ವಿಜಯ್ ಕ್ರೈಂ ಅಂದರೆ ಅಪರಾಧ ನೆಡೆದ ಜಾಗದಲ್ಲಿ ಸುಮಾರು ಹೊತ್ತು ನಿಂತಿದ್ದ.. ಅಪರಾಧ ನೆಡೆದ ಬಗ್ಗೆ ಸುಳಿವು ಹುಡುಕಿದಷ್ಟು ಸಿಗುವುದು ಕಠಿಣವಾಗುತ್ತಲೇ ಇತ್ತು.. ಅದಕ್ಕೆ ಸ್ವಲ್ಪ ವಿರಾಮಕ್ಕೆ ಅಂತ ಹೊರಗೆ ಬಂದು ಸಿಗರೇಟು ಹಚ್ಚಿದ್ದ.. 

ಪಕ್ಕದ ಕಟ್ಟಡದಲ್ಲಿ ಜೋರಾದ ಸಂಗೀತ ತರಂಗಗಳು ಕೇಳುತ್ತಿದ್ದವು.. ಸರಿ ಒಂದು ನಿಮಿಷ ನೋಡಿ ಬರೋಣ ಅಂತ ಆ ಚುಮುಚುಮು ಚಳಿಯಲ್ಲಿದ್ದರೂ ಅರ್ಧ ಸೇದಿದ್ದ ಸಿಗರೇಟು ಬಿಸಾಕಿ ಸಂಗೀತ ಕಾರ್ಯಕ್ರಮಕ್ಕೆ ಬಂದ.. 

ಆಗಲೇ ವೇದಿಕೆಯಲ್ಲಿ ಉದ್ಘಾಟನೆ ಮಾಡಿದ್ದೆ ಅನ್ನುವ ಕುರುಹು ಸೂಚಿಸಿದ್ದ ದೀಪದ ಕಂಬ ಇತ್ತು.. ಸಂಗೀತಮಯ ಯಾತ್ರೆ ಶುರುವಾಗಿತ್ತು.. 

ವಿರಾಮಕ್ಕೆಂದು ಬಂದಿದ್ದರೂ.. ಅವನ ತಲೆಯೊಳಗೆ ಅಪರಾಧಿ ಯಾರು. ಹೇಗೆ ಕಂಡು ಹಿಡಿಯೋದು ಇದೆ ತಲೆಯೊಳಗೆ ಓಡುತ್ತಿತ್ತು. ಎಷ್ಟೇ ಆದರೂ ವೃತ್ತಿ ಅಲ್ಲವೇ.. 

ಸುಮ್ಮನೆ ಕಂಬಕ್ಕೆ ಒರಗಿಕೊಂಡು ನಿಂತು ಕಾರ್ಯಕ್ರಮ ನೋಡುತ್ತಿದ್ದವ .. ವಂದೇ ಮಾತರಂ ಹಾಡು ಶುರುವಾದ ತಕ್ಷಣ.. ಏಕ್ ದಂ ಖಡಕ್ ಆಗಿ ನಿಂತ.. ಹಾಡು ಪೂರ್ಣವಾದಂತೆ ತುಟಿಯಂಚಿನಲ್ಲಿ ನಗೂ ಎಂದಿದೆ ಮಂಜಿನ ಬಿಂದು  ಎಂಬ ಮಾತಿನಂತೆ ನಗು ಸುಳಿಯಿತು.. ಏನೋ ಹೊಳೆಯಿತು.. ಅಪರಾಧ ನೆಡೆದ ಮಾಹಿತಿಯನ್ನು ಪೂರ್ತಿ ಮತ್ತೆ ಮೊದಲಿಂದ ಯೋಚಿಸ ತೊಡಗಿದ.. ಹೊರಗೆ ಸಣ್ಣ ಮಳೆ ಅದಕ್ಕೆ ತಕ್ಕಂತೆ ಈ ಹಾಡು ವೇದಿಕೆಯಿಂದ .. ರಿಂ ಜಿಮ್ ಗಿರೆ ಸಾವನ್ ಬರುತ್ತಿತ್ತು.. 

ಆಪಾದಿತರು ಯಾರು ಅಂತ ಗೊತ್ತಿಲ್ಲ.. ಆದರೆ ಅಲ್ಲಿದ್ದ ಸೆಕ್ಯೂರಿಟಿ ಗಾರ್ಡ್ ಹೇಳಿದ ವಿಚಾರಗಳು ತಲೆಯೊಳಗೆ ರುಬ್ಬುತ್ತಿತ್ತು.. ಮಾತೆ ಮಂತ್ರಮು ಮನಸೇ  ಬಂಧಮು.. ತಲೆಯೊಳಗೆ ಏನೋ ದಿಗ್ಗನೆ ಬಲ್ಬ್ ಹತ್ತಿದ ಹಾಗೆ ಆಯ್ತು. 

ಇದು ಸುಮ್ಮನೆ ನೆಡೆದಿರೋ ಘಟನೆಯಲ್ಲ. ಇದರ ಹಿಂದೆ ಏನೋ ಉದ್ದೇಶ ಇದೆ.. ಸೆಕ್ಯೂರಿಟಿ ಗಾರ್ಡ್ ಹೇಳುತ್ತಲೇ ಇದ್ದ ಸರ್ ಕಳ್ಳತನ ಏನೂ ನೆಡೆದ ಸೂಚನೆಯಿಲ್ಲ ಆದರೆ ಅಲ್ಲಿರುವ ಸಾಕ್ಷಿಗಳು ಹೇಳುತ್ತಿವೆ ಚುರಾಲಿಯ ಅಂತ .. ಯಾಕೋ ಮತ್ತೆ ತಲೆ ಮೊಸರಿನ ಗಡಿಗೆಯಾಯಿತು.. ಮತ್ತೆ ಹೊರಕ್ಕೆ ಬಂದ.. ಸಭಾಂಗಣದಲ್ಲಿ ದಂ ಮಾರೋ ದಂ ಹಾಡು  .. ಇವನ ಕೈಯಲ್ಲಿ ದಂ... ಹಹಹಹ 

ಸರಿ ಒಂದಷ್ಟು ಹೊಗೆ ಹೊರಗೆ ಹೋದ ಮೇಲೆ .. ಅವನಿಗೆ ಗೊತ್ತಾಯಿತು.. ಇದು ನಾ ಒಬ್ಬನೇ ಆಗೋಲ್ಲ ಬದಲಿಗೆ ಸುಳಿವುಗಳ  ಜೊತೆಯಲಿ ಜೊತೆಯಲಿ ಸಾಗಿದರೆ ಮಾತ್ರ ಈ ಕೇಸಿಗೊಂದು ತಾರ್ಕಿಕ ಅಂತ್ಯ ಕೊಡಬಹುದು ಅಂತ  .. .. ಇಳಯನಿಲ ಪೊಝೀಗಿರತೇ ಅರ್ಥಾತ್ ಬೆಳೆಯುತ್ತಿರುವ ಚಂದಿರ  ಹೊಳೆಯುತ್ತಿದ್ದಾನೆ ಅಂದರೆ ತನ್ನ ಕೇಸಿಗೆ ಸುಳಿವು ಸಿಗುತ್ತಿದೆ.. ಎಂದು ಒಂದಷ್ಟು ಖುಷಿಯಾಯಿತು..

ಅಷ್ಟರಲ್ಲಿ ಅವನ ಮೊಬೈಲ್ ಕೂಗತೊಡಗಿತು.. ತನ್ನ ಪ್ರೇಯಸಿ.. ಅವನ ಹೃದಯ ಬಡಿತ ಏರಿತು.. ಅದಕ್ಕೆ ತಕ್ಕ ಹಾಗೆ ಓ ಮೇರೇ ದಿಲ್ ಕೆ ಚೈನ್ .. ಅದರಲ್ಲಿನ ಒಂದು ಸಾಲು "ತುಂ ಜೋ ಪಕಡಲೋ ಹಾಥ್ ಮೇರಾ ದುನಿಯಾ ಬದಲ್ ಸಕ್ಕತಾ ಹೂ ಮೇ" ವಾಹ್.. ಥ್ಯಾಂಕ್ ಯು ಕಣೆ.. ಒಂದು ಕೇಸಿನ ಮೇಲೆ ಇದ್ದೀನಿ ಆಮೇಲೆ ಮಾಡ್ತೀನಿ ಅಂತ ಫೋನ್ ಕಟ್ ಮಾಡಿದ.. 

ಅವನಿಗೆ ಸಿಕ್ಕಿದ ಸುಳಿವು... ಹೊಳೆದ ಸೂಚನೆಗಳು .. ಅದಕ್ಕೆ ಸಿಗಬಹುದಾದ ಮಾರ್ಗ .. ಎಲ್ಲವೂ ಒಂದು ಹಂತಕ್ಕೆ ಅವನಿಗೆ ಖುಷಿ ಕೊಡುತ್ತಿತ್ತು.. ಅವನಿಗಿಷ್ಠವಾದ ದೈವ ಶಿವನಿಗೆ ಮನದಲ್ಲಿಯೇ ವಂದಿಸಿದ.. ಪ್ರಾರ್ಥಿಸಿದ.. ಓಂ ಶಿವೋಹಂ .. ಬಾಲ್ಯದಲ್ಲಿ ಚಿನ್ನ ತಾಯ್ವಳ ಅಂದರೆ ಚಿನ್ನದಂತಹ ತನ್ನ ತಾಯಿ ಕಳಿಸಿದ ಶ್ಲೋಕವದು.. ತನಗೆ ಸಂಕಷ್ಟವಾದಾಗೆಲ್ಲ ಶಿವನನ್ನು ನೆನೆಸಿಕೊಂಡು ಪ್ರಾರ್ಥಿಸುತಿದ್ದ .. ಆಗ ಶಿವನೇ ತನ್ನ ಮುಂದೆ ಬಂದು ನಿಂತು ಬಾಹೋ ಮೇ ಚಲಿ ಆವ್ ಅಂತ ಎರಡೂ ಕೈಯಿಂದ ತನ್ನನ್ನು ಅಪ್ಪಿಕೊಂಡು ಸಂತೈಸುತ್ತಿದ್ದ ಅನ್ನುವ ಅನುಭವ ಸದಾ ಆಗುತಿತ್ತು ಈ ಶ್ಲೋಕವನ್ನು ಹೇಳಿಕೊಂಡಾಗ..  ಏನೇ ಸವಾಲು ಇದ್ದರೂ.. ಏನೇ ಸಂಕಷ್ಟಗಳು ಇದ್ದರೂ "ಏ ಜಿಂದಗಿ ಗಲೇ ಲಗಾಲೆ"  ಅಂತ ಖುಷಿಯಿಂದ ಹಾಡುತ್ತಿದ್ದದ್ದು ನೆನಪಿಗೆ ಬಂದು ತನ್ನ ಪ್ರೇಯಸಿ ಯಾವಾಗಲೂ ನನ್ನನು ಕಂಡು "ಯಾವ ಶಿಲ್ಪಿ ಕಂಡ ಕನಸು ನೀನೋ.. ನನ್ನ ಜೀವ ನೀನು.. ನಿನ್ನ ಪ್ರಾಣ ನಾನು ದೇವರಾಣೆ ನಂಬು ನನ್ನನೂ" ಅಂತ ಹಾಡಿದಾಗೆಲ್ಲ  ನಾನು ಕಡಿಮೆ ಏನೂ ಇರದೇ "ಪಿಯ ತೂ ಅಬ್ ತೋ ಆಜಾ" ಅವಳಿಗಿಷ್ಟವಾದ ಹಾಡನ್ನು ನಾ ಹಾಡುತಿದ್ದೆ..  ಆಗ ಅವಳ ಮೊಗದಲ್ಲಿ ಕಾಣುತ್ತಿದ್ದದ್ದು "ನಗುವ ನಯನ ಮಧುರ ಮೌನ"  .. ಮನಸಿನ ಅಣುಅಣುವಲ್ಲಿಯೂ  ಪಂಚಮವೇದವಾಗಿದ್ದ ಪ್ರೇಮದ ನಾದ ವೇದಂ ಅಣುಅಣುವುಲು ಅಂತ ಮುದ್ದಾದ ಅನುಭವ ಕೊಡುತ್ತಿತ್ತು.. .. 

ಅರೆ ಇದೇನು ಕೇಸಿನ ವಿಷಯ ಬಿಟ್ಟು ಬೇರೇನೋ ಯೋಚನೆ ಮಾಡುತ್ತಿದ್ದೇನೆ.. ಅಂತ ಮತ್ತೆ ಸಿಗರೇಟ್ ಹಚ್ಚಿದ.. ಹಾಡಿನ ಸಂಜೆ ಮುಂದುವರೆದಿತ್ತು.. ಹಾಡಬೇಕು ಅಂದು ಕೊಂಡು ಆದರೆ ಸಮಯದ ಅಭಾವದಿಂದ ಹಾಡಲು ಆಗದ ಮಧುರ ಹಾಡುಗಳ ತುಣುಕು ತುಣುಕುಗಳನ್ನು ಸೇರಿಸಿ ಗುಂಪು ಗುಂಪು ಹಾಡು ಅಂದರೆ medley of songs ಹಾಡುತ್ತಿದ್ದರು.. ಒಂದಕ್ಕಿಂತ ಒಂದು ಅದ್ಭುತವಾದ ಹಾಡುಗಳು.. ಮನಸ್ಸಿಗೆ ಮುದ ಕೊಡುತ್ತಿತ್ತು.. ಯಾಕೋ ಅಲ್ಲಿಂದ ಹೊರಡೋಕೆ ಮನಸ್ಸು ಆಗುತ್ತಿರಲಿಲ್ಲ.. ಬಲವಂತವಾಗಿ ಹೆಜ್ಜೆ ಹೊರಗಿಡಲು ಹೋದರೆ ಸಂಗೀತ ವಾದ್ಯಗಳ ಮಹಾಸಂಗಮ instrumental medley ಶುರು ಮಾಡಿದರು.. ತಬಲಾ, ಟ್ಯಾಂಗೋ, ಗಿಟಾರ್, ರಿದಮ್ ಪ್ಯಾಡ್, ಕೀ ಬೋರ್ಡ್.. ಇವುಗಳ ಜೊತೆಯಲ್ಲಿ ಡ್ರಮ್ಸ್.. ಆಹಾ ಅದ್ಭುತ ಸಂಗೀತ ಸುರಿಮಳೆ ನೆಡೆದಿತ್ತು.. 

ಮನಸ್ಸಿಗೆ ಸ್ವಲ್ಪ ಮೌನ ಬೇಕು ಅನಿಸಿತು.. ಮೌನ ಮೇಲುನೋಯಿ ಹಾಡು ಮನಸ್ಸಿಗೆ ಒಂದು ಮಟ್ಟಿಗೆ ಸಮಾಧಾನ ತಂದು ಕೊಟ್ಟಿತು..   ಸಮುದ್ರದಲ್ಲಿ ದಡದಲ್ಲಿ ನಿಂತು ಅಲೆಗಳ ಅಬ್ಬರಗಳ ಮುಂದೆ ಮನಸ್ಸನ್ನು ಹತೋಟಿಗೆ ತರುತ್ತಾ ತನ್ನ ಪ್ರೇಯಸಿಯನ್ನು ಒಮ್ಮೆ ನೆನೆದು "ಸಾಗರ ಕಿನಾರೆ ದಿಲ್ ಏ ಪುಕಾರೆ"  ಅಂತ ಮನಸ್ಸಲ್ಲಿ ಹಾಡಿಕೊಂಡ.

ಸತತವಾಗಿ ಸುಮಾರು ಏಳೆಂಟು ದಿನಗಳಿಂದ ಅದು ಇದು ಕೇಸು.. ತನಿಖೆ, ಅದರ ಸುಳಿವುಗಳ ಮಧ್ಯೆ ಪರಿಹಾರ, ಅದಕ್ಕೆ ಒಂದು ತಿರುವು ಹೀಗೆ ನೊರೆಂಟು ತಾಕಲಾಟಗಳಲ್ಲಿ ಅವನಿಗೆ ನಿದ್ದೆ ಒಂದು ಮರೀಚಿಕೆಯಾಗಿತ್ತು.. ಅದನ್ನು ಅರಿತಿದ್ದ ಅವಳು ಅವನಿಗೆ ದಿನವೂ ಮಲಗುವ ಮುಂಚೆ.. "ನೋಡು ವಿಜಯ್ ನೀನು ನನ್ನ ಮಡಿಲಲ್ಲಿ ಮಲಗಿದ್ದೀಯ ಅಂತ ಭಾವಿಸಿಕೊ.. ನಾನು ಈ ಲಾಲಿಹಾಡನ್ನು ಹೇಳುತ್ತೇನೆ ನೀನು ನಿದ್ದೆ ಮಾಡುವಿಯಂತೆ.. ಸರಿ ನಾ" ಮಕ್ಕಳಾಟ ಅನ್ನಿಸಬಹುದು. ಭಾವಗಳ ಹುಚ್ಚು ಎನ್ನ ಬಹುದು ಆದರೆ ಪ್ರತಿ ನಿತ್ಯ ಅವು ಮಲಗುವ ಮುಂಚೆ ಸುರ್ ಮೈ ಅಕ್ಕಿಯೋ ಮೇ ಹಾಡು ಕೇಳಿಯೇ ಮಲಗುತ್ತಿದ್ದದ್ದು . 

ಕೆಲವೊಮ್ಮೆ ಮಧ್ಯ ರಾತ್ರಿ ಎಚ್ಚರವಾಗಿಬಿಡುತ್ತಿತ್ತು..  ಅಪರಾಧಿಗಳನ್ನು ಹುಡುಕುತ್ತಾ "ಜಾನೇ ಜಾ ಡುಂಡೂತ ಫಿರ್ ರಹ.. ಯು ತುಮ್ ರಾತ್ ದಿನ್ ಮೇ ಯಹಾ ಸೆ ವಹಾ" ಅಂದು ಹಾಡಿಕೊಂಡು ಬೈಕ್ ಹತ್ತಿ ರಾತ್ರಿಯೆಲ್ಲಾ ಹುಡುಕುತಿದ್ದದ್ದು ಉಂಟು.. ಅಪರಾಧಿಗಳಿಗೆ ಗೊತ್ತಿತ್ತು ವಿಜಯ್ ಒಬ್ಬ ಖಡಕ್ ಅಧಿಕಾರಿ ನಮ್ಮನ್ನು ಹುಡುಕುತ್ತ ಹಾಡುತ್ತಾ ಬಚ್ಚನಾ ಏ ಹಸೀನೋ ಅಂತ ಬಂದೆ ಬರುತ್ತಾನೆ. ಅಂತ.. 

ಇಷ್ಟೆಲ್ಲಾ ಕಷ್ಟ ಪಟ್ಟು.. ಹಗಲು ರಾತ್ರಿ ಪರಿಶ್ರಮ ಪಟ್ಟು ಕೇಸನ್ನು ತಾರ್ಕಿಕವಾಗಿ ಮುಗಿಸಿದಾಗ ಅವನಿಗರಿವಿಲ್ಲದೆ ಹಾಡು ಸಂತೋಷಕ್ಕೆ ಹಾಡು ಸಂತೋಷಕ್ಕೆ ಅಂತ ಜೋರಾಗಿ ಹಾಡಿಕೊಂಡು ಖುಷಿ ಪಡುತ್ತಿದ್ದ... 

ಇಂದು ಹಾಗೆ ಆಯಿತು.. ಐದಾರು ಸಿಗರೇಟುಗಳು.. ಸೆಕ್ಯೂರಿಟಿ ಗಾರ್ಡ್ ಹೇಳಿದ ಮಾತುಗಳು.. ತನ್ನ ತಲೆಯೊಳಗೆ ಮೂಡಿದ ವಿಚಾರ ಸರಣಿಗಳು.. ಹಾಡಿನ ಸಂಭ್ರಮ.. ಹಾಡಿನ ಮಧ್ಯೆ ತನ್ನ ಬಾಲ್ಯ, ತನ್ನ ಪ್ರೇಯಸಿ.. ತನ್ನ ವೃತ್ತಿ.. ಅವುಗಳ ಕೇಸುಗಳು .. ಅಪರಾಧಿಗಳ ಹೃದಯದಲ್ಲಿ ಮೂಡಿಸಿದ್ದ ಭಯ.. ಎಲ್ಲವೂ ಅವನಿಗೆ ಹೊಸ ಚೈತನ್ಯ ತಂದುಕೊಟ್ಟಿತು.. ಸಂಗೀತ ಸಂಜೆಯೂ ಮುಗಿದಿತ್ತು.. ತನ್ನ ಕೇಸಿಗೂ ಒಂದು ಅಂತ್ಯ ಸಿಕ್ಕಿತ್ತು.. ಅಪರಾಧಿಯನ್ನು ಹಿಡಿದು ಸಲಾಕೆಗಳ ಹಿಂದೆ ನಿಲ್ಲಿಸಲು ಸಂತೋಷಕ್ಕೆ ಈ ಕೇಸು ಸಂತೋಷಕ್ಕೆ ಅಂತ ಹಾಡಿಕೊಂಡು ಜೀಪು ಹತ್ತಿದ.. 

                                                                   **************
ನನ್ನ ಬೈಕೋತಾ ಇದ್ದೀರಾ ಆಲ್ವಾ... ಸಿ ಐ ಡಿ ಕೇಸಿನ ವಿಚಾರ ಏನಾಯ್ತು ಅಂತ.. ಅರೆ ಬಿಡ್ರಿ ವಿಜಯ್ ಗಟ್ಟಿ ಆಫೀಸರ್ ಹೇಗೋ ಆ ಕೇಸನ್ನು ಮುಗಿಸುತ್ತಾನೆ.. ಅವನಿಗೆ ಇನ್ನೊಂದು ಮೆಡಲ್.. ಇನ್ನೊಂದು ಪ್ರಮೋಷನ್, ಇನ್ನಷ್ಟು ಹೆಸರು.. ಇದು ಅವನ ವೃತ್ತಿ ಬದುಕಿನಲ್ಲಿ ಮಾಮೂಲಿ.. ಜೊತೆಗೆ ಪ್ರೇಯಸಿಯ ಜೊತೆ ಪ್ರೀತಿಯ ಮಾತುಗಳು.. ಅಮ್ಮನ ಆರೈಕೆ.. ಮೂವತ್ತರ ಆಸುಪಾಸಿನಲ್ಲಿದ್ದಾನೆ.. ಮುಂದಿನ ವರ್ಷ ಮದುವೆ ಫಿಕ್ಸ್ ಆಗಿದೆ.. ಹೊಸ ಬದುಕು ಶುರುವಾಗುತ್ತದೆ.. 

ಆದರೆ ಇಲ್ಲಿ ಹೇಳ್ರಿ.. ಇಡೀ ಸಭಾಂಗಣವನ್ನೇ ಕುಣಿಸಿದ ಮಹೇಶ್ ಶ್ರುತಿ ಅವರ ತಂಡ.. ನೆರೆದಿದ್ದ ನೂರಾರು ಸಂಗೀತ ಪ್ರಿಯರು ಸಾರ್ಥಕ ಭಾವದಿಂದ ಗಾಯಕರ ತಂಡವನ್ನು ಅಭಿನಂದಿಸಿ, ಅವರ ಜೊತೆಗೆ ಸೆಲ್ಫಿ ತೆಗೆದುಕೊಂಡು ... ಫೋಟೋಗಳಿಗೆ ನೂಕು ನುಗ್ಗುಲು ಇದ್ದರೂ ಬೇಸರಿಸದೆ .. ಎಲ್ಲರಿಗೂ ಮುಗುಳುನಗೆ ಬೀರುತ್ತಾ.. ಸಂಗೀತ ರಸಿಕರಿಗೆ ಅಭಿನಂದನೆ ಸಲ್ಲಿಸೋದು.. ಮತ್ತೆ ಸಂಗೀತ ವಾದ್ಯಗಾರರನ್ನು ಪರಿಚಯ ಮಾಡಿಕೊಂಡು ಅವರ ಪ್ರತಿಭೆಯನ್ನು ಹೇಳುವುದು.. ಇವೆಲ್ಲವೂ ನಮ್ಮ ಸಂಭ್ರಮಕ್ಕೆ ಹೆಚ್ಚಿನ ಮೈಲೇಜ್ ನೀಡುತ್ತದೆ ಅಲ್ಲವೇ.. 

ನಿಜ.. ಹಾಡಿದ ಅಷ್ಟು ಹಾಡುಗಳೂ ಅದ್ಭುತವಾಗಿದ್ದವು.. ರಾಜ ಬರ್ಮನ್ ಜುಗಲ್ಬಂದಿ ಒಂದು ಅದ್ಭುತ ಕ್ಷಣಗಳು.. ಹೇಳುತ್ತಾರೆ ಎರಡು ಮಾದಗಜಗಳು ಸೆಣೆಸಾಡಿದರೆ ಹುಲ್ಲುಗಳಿಗೆ ಸಂಭ್ರಮವಂತೆ ಕಾರಣ ಅವುಗಳ ಕಾಲುತುಳಿತದಲ್ಲಿ ಮತ್ತೆ ಹೊಸ ಚೈತನ್ಯ ತುಂಬಿಕೊಂಡು ನಿಲ್ಲಬಹುದು ಅಂತ. .. ನಿಜವಲ್ಲವೇ ಬಳಲಿ ಬೆಂಡಾದ.. ಒತ್ತಡಗಳ ಹಿಮಾಲಯಗಳನ್ನೇ ಹೆಗಲಿಗೆ ಏರಿಸಿಕೊಂಡು, ವೃತ್ತಿ ಬದುಕಿನ ಸಮಸ್ಯೆಗಳು ಎಲ್ಲವನ್ನೂ ಒಂದು ಕಡೆ ಕಟ್ಟಿಟ್ಟು ನಲಿಯುವ ಈ ಕ್ಷಣಗಳು ಬದುಕಿಗೆ ಸಂಭ್ರಮ ನೀಡುತ್ತದೆ.. ಮತ್ತು ಸಂಭ್ರಮದ ಪ್ರಮಾಣವನ್ನು ಹೆಚ್ಚಿಸುತ್ತದೆ. 

ಮಹೇಶ್ ಅದ್ಭುತ ಹಾಡುಗಾರ. ಜೇನು ದನಿಯ ಗಾಯಕ ಅಂತ ನಾ ಸದಾ ಹೇಳುತ್ತಿರುತ್ತೇನೆ.. ಅವರ ಧ್ವನಿಯಲ್ಲಿ ಕಾಣದ ಕಡಲಿಗೆಹಾಡನ್ನು ಸುಮಾರು ಎರಡೂ ಮೂರು ಸಾವಿರ ಎತ್ತರದ ಬೆಟ್ಟದ ಮೇಲೆ ಕೂತು ಕೇಳಿದ್ದು ಅದ್ಭುತ ಅನುಭವ.. 

ಶೃತಿ  .. ಇವರ ಸಂಗೀತ ಶೃತಿ .. ಶ್ರುತಿಗೆ ಸಂಗೀತ ಎರಡಕ್ಕೂ ಇವರು ಸಲ್ಲುವವರು.. ಇವರನ್ನು ನೋಡಿದರೆ ಅರೆ ಈಕೆ ಎತ್ತರದ ಸ್ಥಾಯಿಯಲ್ಲಿ ಹಾಡಬಲ್ಲರೇ ಎಂದು ಕೊಂಚ ಅನುಮಾನಿಸಿದರೆ ಮುಗೀತು ಪಿಯ ತೂ ಅಬ್ ತೊ ಆಜಾ ಹಾಡನ್ನು ಕೇಳಿ.. ಹಾಗೂ ಅನೇಕ ಕಾರ್ಯಕ್ರಮಗಳಲ್ಲಿ ಇವರ ಎತ್ತರದ ಸ್ಥಾಯಿಯಲ್ಲಿ ಉಲಿಯುವ ಹಾಡುಗಳನ್ನು ಕೇಳಿದ್ದೇನೆ.. 
 
ಸುನೀತಾ ಮುರಳಿ ಅಲಿಯಾಸ್ ಜೋಗಿ ಸುನೀತಾ.. ಅಬ್ಬಬ್ಬಾ ನವಿರಾದ ಗೀತೆಗಳನ್ನು ಕೇಳುವಾಗ ಇಂತಹ ಧ್ವನಿ ಅನಿಸುತ್ತದೆ.. ಹಾಗೆಯೇ ದಂ ಮಾರೋ ದಂ ಹಾಡುಗಳನ್ನು ಕೇಳುವಾಗ ಇವರ ರೇಂಜ್ ಗೊತ್ತಾಗುತ್ತದೆ.. ಅದ್ಭುತ ಗಾಯಕಿ 

ಚಿನ್ಮಯ್ ... ಆಗಿನ ರಿಯಲ್ ಸಂಗೀತ ಪ್ರತಿಭೆಗಳನ್ನು ಹೊರತರುತ್ತಿದ್ದ ಸಂಗೀತದ ರಿಯಾಲಿಟಿ ಷೋಗಳಲ್ಲಿ ಗೆದ್ದು ಎಲ್ಲರ ಮನಸ್ಸಿನಲ್ಲಿ ಕೂತಿದ್ದ ಚಿನ್ಮಯ್ ಇಲ್ಲಿ ಎಲ್ಲಾ ತರಹದ ಹಾಡುಗಳಿಗೂ ಸಾತ್ ಕೊಡುತ್ತಿದ್ದದ್ದು ಮತ್ತು ಸಂಗೀತ ರಸಿಕರನ್ನು ಸಂಗೀತ ಅಲೆಯಲ್ಲಿ ತೇಲಾಡಿಸಿದ್ದು ಅದ್ಭುತವಾಗಿತ್ತು.. ಬಚ್ನ ಏ ಹಸಿನೋ .. ಇಡೀ ಸಭಾಂಗಣವೇ ಕುಣಿಯುತಿತ್ತು.. ಸುರ್ ಮೈ ಅಕ್ಕಿಯೋ ಮೇ ಹಾಡಿನಲ್ಲಿ ಎಲ್ಲರೂ ಲಾಲಿ ಹಾಡಿಗೆ ತೂಗಾಡುತ್ತಿದ್ದರು.. 

ಸಂಗೀತ ಮಾಂತ್ರಿಕರು ವಾದ್ಯಗಳ ಜೊತೆಯಲ್ಲಿದ್ದರು.. ಎಲ್ಲರ ಹೆಸರುಗಳು ಪರಿಚಯವಿರಲಿಲ್ಲ.. ಆದರೆ ಅದ್ಭುತ ಮಾಂತ್ರಿಕರಿಗೆ ಒಂದು ನಮನ ನನ್ನ ಮತ್ತು ಎಲ್ಲಾ ಸಂಗೀತ ಪ್ರಿಯರ ಪ್ರಪಂಚದಿಂದ.. 

ಒಂದು ಸುಂದರ ಸಂಜೆ ಅದ್ಭುತವಾಗಿ ಕಳೆದದ್ದು ಸಂತಸ ತಂದಿತು.. ಬೆಳದಿಂಗಳ ಮಳೆಯಲ್ಲಿ ಮಿಂದ ಅನುಭವ.. ಬದುಕಿಗೆ ಇನ್ನಷ್ಟು ಉತ್ಸಾಹ ತುಂಬಿಕೊಳ್ಳಲು ಕಾರಣವಾಯಿತು.. 

ಅದಕ್ಕಾಗಿ ಈ ಸುಂದರ ಸಂಜೆಯನ್ನು ಆಯೋಜಿಸಿದ್ದ, ಪ್ರಾಯೋಜಿಸಿದ್ದ ಎಲ್ಲಾ ಸಂಗೀತ ಮನಗಳಿಗೆ ಅಭಿನಂದನೆಗಳು.. ಇನ್ನೂ ಹೆಚ್ಚಿನ ಯಶಸ್ಸು, ಕೀರ್ತಿ, ಐಶ್ವರ್ಯ ಎಲ್ಲವನ್ನೂ ಆ ಭಗವಂತ ನೀಡಲಿ ಎಂದು ಹಾರೈಸುತ್ತೇನೆ.. 

Friday, October 31, 2025

ಸಿಂಗಾಸನ್ ಬತ್ತೀಸ್

 ಅದೊಂದು  ಪುಟ್ಟ ಹಳ್ಳಿ ಅಲ್ಲಿನ ಗ್ರಾಮಸ್ಥರು ಮುಗ್ಧರು.. ಆ ಊರಿನ ವ್ಯಾಜ್ಯ ಏನೇ ಇದ್ದರೂ ಅವರೇ ಪರಿಹರಿಸಿ ಕೊಳ್ಳುತ್ತಿದ್ದರು.. ಆ ಪ್ರದೇಶದ ರಾಜ ನ್ಯಾಯ ತೀರ್ಮಾನಕ್ಕೆ ಹೆಸರಾಗಿದ್ದ ವಿಕ್ರಮಾದಿತ್ಯ.. ಅವನ ಸಿಂಹಾಸನದಲ್ಲಿ ೩೨ ಬೊಂಬೆಗಳಿದ್ದವು.. ರಾಜನಿಗೆ ನ್ಯಾಯ ನಿರ್ಣಯಿಸಲು ಆ ಗೊಂಬೆಗಳು ಸಹಾಯ

 ಸುತ್ತಮುತ್ತಲ ಹಳ್ಳಿಗಳ ಮಂದಿ ನ್ಯಾಯ ತೀರ್ಮಾನಕ್ಕೆ ಆ ರಾಜನ ಬಳಿ ಬರುತ್ತಿದ್ದದ್ದು ವಾಡಿಕೆ.. ಈ ಹಳ್ಳಿಯ ಮಂದಿ ಮಾತ್ರ ಒಮ್ಮೆಯೂ ಆ ರಾಜನ ಬಳಿ ತಮ್ಮ ಅಹವಾಲು ತೆಗೆದುಕೊಂಡು ಹೋದ ಉದಾಹರಣೆಗಳೇ ಇರಲಿಲ್ಲ ಅಂತ ಆ ಊರಿನ ಪ್ರಮುಖರೆಲ್ಲ ಮಾತಾಡಿಕೊಳ್ಳುತ್ತಿದ್ದರು.. 

ಇದು ಹೇಗೋ ಆ ಕಿವಿ ಈ ಕಿವಿ ಕಿವಿಗೆ ಅಂತ ಸಾಗಿ ಕಡೆಗೆ ಮಂತ್ರಿಯ ಕಿವಿಗೆ ಬಿತ್ತು.. ಇದೊಂದು ರೀತಿಯ ಅಹಂಗೆ ಪೆಟ್ಟು ಬಿದ್ದ ಹಾಗಿತ್ತು.. ಕಾರಣ ನ್ಯಾಯ ಅಂದರೆ ವಿಕ್ರಮಾದಿತ್ಯ ಅನ್ನೋವಷ್ಟು ಖ್ಯಾತಿಯಿದ್ದ ಆ ರಾಜ್ಯದಲ್ಲಿ ಈ ರೀತಿ ಆಗಲು ಸಾಧ್ಯವೇ ಎನ್ನುವ ಕುತೂಹಲ ಕೂಡ ಸೇರಿದ್ದು ವಿಶೇಷ.. 

ಇದನ್ನು ಸೂಕ್ಷ್ಮವಾಗಿ ರಾಜನ ಕಿವಿಗೆ ಸಾಗಿಸಿಸಿದರು ಮಂತ್ರಿಗಳು.. 

ರಾಜನಿಗೆ  ಕೋಪದ ಬದಲು ಕುತೂಹಲ ಹೆಚ್ಚಾಯಿತು.. ಸರಿ ತನ್ನ ಮಂತ್ರಿಗಳ ಜೊತೆಯಲ್ಲಿ ಮಾರುವೇಷ ಧರಿಸಿ ಆ  ಹಳ್ಳಿಯ ಕಡೆಗೆ ಹೊರಟರು.. 

ಮಾರ್ಗ ಮಧ್ಯೆ ಹಲವಾರು ಜನ ಮಾತಾಡುತ್ತ "ವಿಕ್ರಮಾದಿತ್ಯರಂಥಹ ಅರಸರ ಕಾಲದಲ್ಲಿ ನಾವಿರೋದು ಪುಣ್ಯ.. ಅವರ ನ್ಯಾಯ ತೀರ್ಮಾನದ ಬಗ್ಗೆ ಎರಡನೇ ಮಾತುಗಳೇ ಇಲ್ಲ.. ಸರಿಯಾದ ತೀರ್ಪು ಕೊಡೊದರಲ್ಲಿಎತ್ತಿದ ಕೈ.. ಆ ಗೊಂಬೆಗಳು ಸರಿಯಾದ ಮಾರ್ಗದರ್ಶನ ನೀಡುತ್ತವೆ.. ಹಾಗೆಯೇ ಈ ಹಳ್ಳಿಯಲ್ಲಿಯೂ ಎಷ್ಟು ಚೆನ್ನಾದ ಹಾಗೂ ಸರಿಯಾದ ತೀರ್ಮಾನ ಕೊಡುತ್ತಾರೆ.. 

ವ್ಯಾಜ್ಯ ೧ : ಅಣ್ಣ ತಮ್ಮಂದಿರ ಮಧ್ಯೆ ಭೂಮಿ ಪಾಲು ಮಾಡುವ ವಿಷಯದಲ್ಲಿ ತಕರಾರು ಬಂದಿತ್ತು.. ಆದರೆ ಅವರಿಬ್ಬರೂ ಜಗಳವಾಡದೆ ಆ ಹಳ್ಳಿಯ ಪ್ರಮುಖರ ಬಳಿ ಬಂದು ತಮ್ಮ ಸಮಸ್ಯೆಯನ್ನು ಹೇಳಿಕೊಂಡರು.. ಸಮಸ್ಯೆ ಇದ್ದದ್ದು ಅವರ ಹೊಲ ಗದ್ದೆಗಳ ಆಕಾರದಲ್ಲಿ ಸರಿಯಾಗಿ ಭಾಗ ಮಾಡಲು ಸಾಧ್ಯವಿರಲಿಲ್ಲ.. ಆಗ ಅಲ್ಲಿನ ಪ್ರಮುಖರು ಮುಖ್ಯ ಭೂಮಿಯನ್ನು ಭಾಗ ಮಾಡಿ ಉಳಿದ ಭಾಗಮಾಡಲು ಆಗದ ಭೂಮಿಯನ್ನು ಒಂದು ವರ್ಷ ಒಬ್ಬನಿಗೆ ಇನ್ನೊಂದು ವರ್ಷ ಇನ್ನೊಬ್ಬನಿಗೆ ಉಳುಮೆ ಮಾಡಲು ಹೇಳಿದರು.. ಒಪ್ಪುವಂತಹ ನಿರ್ಣಯವೇ ಹೌದು.. ಕಾರಣ ಭೂಮಿಯೂ ಫಲವತ್ತಾಗಿರುತ್ತದೆ.. ಬೆಲೆಯೂ ಚೆನ್ನಾಗಿ ಬರುತ್ತದೆ.. ವಾಹ್ ವಾಹ್.. 

ವ್ಯಾಜ್ಯ ೨ - ಅದ್ಭುತ ಗೆಳೆತನದ ಇಬ್ಬರೂ ಕಾರಣಾಂತರಗಳಿಂದ ಕೆಲಸದ ಒತ್ತಡ.. ಉದ್ಯೋಗದಲ್ಲಿ ಬೆಳೆಯಲೇ ಬೇಕಾದ ಅನಿವಾರ್ಯತೆ, ಬೆಳೆಯುತ್ತಿರುವ ಬದುಕು ಇವುಗಳಿಂದ ಮೊದಲಿನ ಹಾಗೆ ಮಾತಾಡಲು ಪುರುಸೊತ್ತು ಸಿಗುತ್ತಿರಲಿಲ್ಲ ಆದರೂ ಪ್ರತಿದಿನದ ಶುಭಾಶಯಗಳೊಂದಿಗೆ ದಿನ ಆರಂಭವಾಗುತ್ತಿತ್ತು..ಆದರೆ ಜನುಮದಿನದ ಶುಭಾಶಯಗಳನ್ನು ಹೇಳೋದಕ್ಕೆ ತಡವಾಗಿತ್ತು.. ಆದರೆ ಒಬ್ಬರಲ್ಲಿ ಬೇಸರವಿಲ್ಲ.. ಇನ್ನೊಬ್ಬರಲ್ಲಿ ಕೋಪವಿಲ್ಲ.. ಆದರೂ ಯಾಕೆ ಏನಾಯಿತು ಅನ್ನುವ ತವಕ.. ಈ ಸಮಸ್ಯೆಗೆ ಎಷ್ಟು ಸುಲಭವಾಗಿ ಉತ್ತರ ಕೊಟ್ಟರು.. ನೋಡಿ ಸುಮ್ಮನೆ ಶುಭಾಶಯಗಳು ಅಂತ ಹೇಳಿದರೆ ಒಪ್ಪಿಕೊಳ್ಳುವ ಮನಸ್ಸಲ್ಲ ಅದು.. ಸ್ವಲ್ಪ ವಿಭಿನ್ನವಾಗಿ ಬರೆಯಬೇಕು ಅಂದರೆ ಸಮಯದ ಅಭಾವ.. ಮತ್ತೆ ಬೇಕಾಬಿಟ್ಟಿ ಬರೆಯುವ ಮನಸ್ಸು ಅಲ್ಲವಲ್ಲ.. ಹಾಗೆ ಬರೆದರೂ ಇಲ್ಲೇನೂ ಸಮಸ್ಯೆ ಇದೆ ಎನ್ನುವ ಆಲೋಚನೆಗಳು ಬರುತ್ತಿದ್ದವು.. ಆದರೆ ಅದಕ್ಕೆ ಉತ್ತರ ಸಿಗುತ್ತಿರಲಿಲ್ಲ.. ಹಾಗಾಗಿ ತಿಂಗಳ ಅಂತ್ಯದ ತನಕ ಕಾಯೋದು.. ಆಗಲೂ ಬರಲಿಲ್ಲ ಅಂದರೆ ಕರೆ ಮಾಡಬಹುದು ಅಂತ ತೀರ್ಪು ಕೊಟ್ಟರು.. ತೀರ್ಪು ಎಂದರೆ ಇದು..ಬಾರದ ಕೋಪವೂ ಮಾಯಾ .ಇಲ್ಲದ ಬೇಸರವೂ ಮಾಯಾ.. 

ವಿಕ್ರಮಾದಿತ್ಯ ಎರಡೂ ತೀರ್ಪುಗಳ ಕತೆಯನ್ನು ಕೇಳಿ ಇನ್ನಷ್ಟು ಖುಷಿಯಾಯಿತು.. ಎರಡೂ ತೀರ್ಪುಗಳಲ್ಲಿ ಭಾಗಿಯಾಗಿದ್ದ  ಮಂದಿಯನ್ನು ನೋಡಬೇಕು ಅಂತ ಬಯಸಿದಾಗ ಅಲ್ಲಿನ ಊರ ಜನರು 

ಮೊದಲನೇ ತೀರ್ಪಿನಲ್ಲಿದ್ಧ ಅಣ್ಣ ತಮ್ಮಂದಿರು ಹೆಗಲ ಮೇಲೆ ಹೆಗಲು ಕೈ ಹಾಕಿ ಕೊಂಡು ತಮ್ಮ ಹೊಲ ಗದ್ದೆಗಳ ಕಡೆ ಹೊರಟಿದ್ದರು.. 

ಎರಡನೇ ತೀರ್ಪಿನಲ್ಲಿದ್ದವರನ್ನು ಹುಡುಕಿದರು.. ಆದರೆ ಸಿಗಲಿಲ್ಲ.. ಕಾಣಲಿಲ್ಲ.. ಆಗ ಅವರೆಲ್ಲಿ ಎಂದಾಗ.. ನೋಡ್ರಪ್ಪಾ ಒಬ್ಬರು ಈ ಲೇಖನವನ್ನು ಬರೆಯುತ್ತಿದ್ದಾರೆ.. ಇನ್ನೊಬ್ಬರು ಈ ಲೇಖನವನ್ನು ಓದುತ್ತಿದ್ದಾರೆ.. 

ಓದುತ್ತಿದ್ದಾರಲ್ಲ ಅವರದೇ ಜನುಮದಿನ.. ಅವರಿಗೆ ಶುಭಾಶಯಗಳನ್ನು ಕೋರುತ್ತಾ ನಮ್ಮ ದಿನ ನಿತ್ಯದ ಕೆಲ್ಸದ ಕಡೆಗೆ ಗಮನ ಕೊಡೋಣ.. 

ವಿಕ್ರಮಾದಿತ್ಯರಿಗೆ ಪೂರ್ಣ ಖುಷಿಯಾಯಿತು. ಇಷ್ಟು ಸರಳವಾಗಿ ಆದರೆ ಗಂಭೀರವಾಗಿ ತೀರ್ಪು ಕೊಡಬೇಕಾದರೆ ಈ ಹಳ್ಳಿಯ ಮಂದಿ ಸಾಮಾನ್ಯರಲ್ಲ.. ಏನೋ ದಿವ್ಯಶಕ್ತಿ ಇದೆ .. ಏನದು ಅಂತ ಕೇಳಿದಾಗ.. 

ನೋಡಿ ಈ ಹಳ್ಳಿಯ ಮಂದಿಗೆ ಪ್ರತಿ ತಿಂಗಳಿಗೆ ಒಮ್ಮೆನಿವೇದಿತಾ ಚಿರಂತನ್  ವಿಚಾರ ವಿನಿಮಯ ಕಾರ್ಯಕ್ರಮ ಮಾಡುತ್ತಾರೆ.. ನಾವೆಲ್ಲರೂ ಒಂದೇ ಮನಸ್ಸಿನಿಂದ ಪೂರ್ಣ ಇಚ್ಚೆಯಿಂದ ಭಾಗವಹಿಸುತ್ತೇವೆ.. ಅವರು ಹೇಳಿ ಕೊಡುವ ಅವರು ತೋರಿಸುವ ಹಾದಿಯಲ್ಲಿ ನೆಡೆಯುತ್ತಿರುವುದರಿಂದ ನಮಗೆ ಈ ರೀತಿಯ ದಿವ್ಯ ಜ್ಞಾನ ಪ್ರಾಪ್ತಿಯಾಗಿದೆ.. ಇದರ ಸಮಸ್ತ ಯಶಸ್ಸು ಅವರಿಗೆ.. 




ವಿಕ್ರಮಾದಿತ್ಯರ ಸಂತಸಕ್ಕೆ ಪಾರವೇ ಇರಲಿಲ್ಲ.. 

ನಿವೇದಿತಾ ಚಿರಂತನ್ ಅವರಿಗೆ ಶುಭಾಶಯಗಳು ಹಾಗೆ ಇದೆ ಹಳ್ಳಿಯಂತೆ ನನ್ನ ದೇಶದಲ್ಲಿರುವ ಎಲ್ಲಾ ಹಳ್ಳಿಗಳಿಗೂ ಈ ರೀತಿಯ ದಿವ್ಯ ಜ್ಞಾನ ನೀಡಿ ಎಂಬ ಕಳಕಳಿಯ ಮನವಿಯೊಂದಿಗೆ ಈ ದೇಶದ ಅರಸನಾಗಿ ನಿಮಗೆ ಶುಭ ಕೋರುತ್ತಿದ್ದೇನೆ ಎಂದು ಹೇಳಿ ತಮ್ಮ ಅರಮನೆಗೆ ತಮ್ಮ ಪರಿವಾರದ ಗಣಗಳ ಜೊತೆ ಹೊರಟರು.. 

*************************** 

ಸಿಬಿ ತಡವಾಯಿತು.. ಕ್ಷಮೆ ಇರಲಿ.. ಭಗವಂತ ನೀಡಿದ ಅದ್ಭುತ ಗೆಳತಿಗೆ ಜನುಮದಿನದ ತಡವಾದ ಶುಭಾಶಯಗಳು  (ಫೋಟೋಗಳನ್ನು ಕದಿಯಲಾಗಿದೆ -----  ಕ್ಷಮೆ ಇರಲಿ)

Wednesday, May 7, 2025

Divine ... Divine...Divine DFR DFR!

 ದೃಶ್ಯ ೧

ಕೇಳು ನಿನಗೇನು ಕೇಳು.. 

ನನಗೆ DFR ತರಹ ತಾಳ್ಮೆ ಬೇಕು.. 

ಬೇರೆ ಏನೂ ಬೇಡವೇ.. ದುಡ್ಡು, ಅಂತಸ್ತು, ರಾಜ್ಯ, ಕೋಶ.. 

ಇಲ್ಲ ನನಗೆ ೩ಕೆ ತಂಡದವರು ಇದೆ ಬೇಕು ಅಂತ ಕೇಳಿದ್ದಾರೆ ನನಗೆ ಅದೇ ಬೇಕು 


ದೃಶ್ಯ ೨

ಚಾವಟಿಯಲ್ಲಿ ಬಾಸುಂಡೆ ಬರುವ ತರಹ ಹೊಡೆಯುತ್ತಿರುತ್ತಾರೆ.. 

"ಇನ್ನೂ ಬಲವಂತವಾಗಿ ಹೊಡಿ.. ಇನ್ನೂ ಜೋರಾಗಿ ಹೊಡಿ"

"ಹೊಡೆಯುವೆ" ಆದರೆ ಏತಕ್ಕೆ ಹೀಗೆ ಚಾವಟಿಯಲ್ಲಿ ಏಕೆ ಒದೆ ತಿನ್ನುತ್ತಿದ್ದೀರಾ"

"ನೋಡಿ ಅಲ್ಲಿ ಎಲ್ಲರೂ DFR DFR ತರಹ ಕೆಲಸ ಮಾಡದೆ.. ಸೋಮಾರಿತನದಿಂದ ಇದ್ದಾರೆ.. ಅದಕ್ಕೆ ಅವರ ತರಹ ಪಾದರಸದಂತೆ ಇರಬೇಕು .. ಇಲ್ಲದೇ ಹೋದರೆ ಹೀಗೆ ಎಲ್ಲರಿಗೂ ಏಟು ಅದು ಎಲ್ಲರಿಗೂ ಪಾಠವಾಗಲಿ ಅಂತ ಬಾರಿಸು ಅಂತ ಹೇಳುತ್ತಿದ್ದೇನೆ"


ದೃಶ್ಯ ೩ 

"ಎಲ್ಲಿ ಮರೆಯಾದೆ ವಿಠಲ ... ಏಕೆ ದೂರದೇ.. ವಿಠಲ ರಂಗ ವಿಠಲ ರಂಗಾಅಅಅಅಅಅಅಅಅಅ"

"ಅರೆ ಗೋರಾ.. ವಿಠಲ ಪಂಡರಾಪುರದಲ್ಲಿ ಸಿಗುತ್ತಾನೆ.. ಆದರೆ ನೀನು ಅಲ್ಲಿಗೆ ಹೋಗಿ ದರ್ಶನ ಪಡೆದು ಬಂದಿದ್ದೀಯಾ.. ಆದರೂ ಯಾಕೆ ಇನ್ನೂ ಹಣೆಯಲ್ಲಿ ಗೆರೆಗಳು ಇದ್ದಾವೆ"

"ಹೌದು ನಾಮದೇವರೇ.. ವಿಠಲನ ದರ್ಶನವೇನೋ ಆಯಿತು.. ಆದರೆ DFR DFR ಅವರ ಅಭಿಮಾನಿಗಳಿಗೆ ಸಿಗುತ್ತಿಲ್ಲ ಏನು ಮಾಡೋದು"

ಟಂ ಅಂತ ಪಾಂಡುರಂಗನೂ ಮಾಯಾ.. ನಾಮದೇವರು ಮಾಯಾ.. ಈ ಪ್ರಶ್ನೆಗೆ ಉತ್ತರ ಬರಿ DFR DFR ಅವರಿಗೆ ಮಾತ್ರ ಗೊತ್ತಿರೋದು


ದೃಶ್ಯ ೪

"ಎಲ್ಲಿರುವನೋ ನಿನ್ನ ಹರಿ.. ಈ ಕಂಬದಲ್ಲಿರುವನೇ.. ಈ ಕಂಬದಲ್ಲಿರುವನೇ?"

ಟಿ"ತಂದೆಯೇ ನಿನಗೆ ನಾ ಹರಿಯನು ಹೇಗೋ ತೋರಿಸುತ್ತೇನೆ.. ಪುರುಸೊತ್ತು ಇಲ್ಲದೆ ಸದಾ ಕಾಲಿಗೆ ಚಕ್ರ ಕಟ್ಟಿಕೊಂಡು ಟೂರು, ಸಿನಿಮಾ, ನಾಟಕ, ಕಾರ್ಯಕ್ರಮ ನಿರೂಪಣೆ, ಹಿಮಾಲಯದ ತಪ್ಪಲು, ಫೆಂಚ್ ಅರಣ್ಯ, ರಂಗ ಶಂಕರ, ಜನದನಿ, ೩ಕೆ ರಾಜ್ಯೋತ್ಸವ, NGO, ಚಂಪಕಧಾಮ ದೇವಸ್ಥಾನ ಅಂತ ಸುತ್ತುತ್ತಲೇ ಇರುವ ಅವರನ್ನು ನೀನು ತೋರಿಸು.. ನಾ ಹರಿಯನ್ನು ತೋರಿಸುತ್ತೇನೆ"

ಹಿರಣ್ಯಕಶಿಪು ಹರಿಯನ್ನು ಹುಡುಕೋದು ಬಿಟ್ಟು.. ನಾ ಸೋತೆ ಅವರನ್ನು ಹುಡುಕೋದು ಕಷ್ಟ.. ಅದಕ್ಕೆ ಬದಲು ಹರಿನಾಮ ಸ್ಮರಣೆ ಮಾಡೋದೇ ಉತ್ತಮ "ನಾರಾಯಣ ನಾರಾಯಣ" 

ದೃಶ್ಯ ೫

"ಹೊಂಚು ಮಾಡಿ ಸಂಚು ಮಾಡಿ ನಮ್ಮ ರಾಜ್ಯವನ್ನು ಕಬಳಿಸಿ ಮೆರೆಯುತ್ತಿರುವ ಶಿವಸ್ಕಂದ ವರ್ಮಾ.. ಕದಂಬರ  ವೃಕ್ಷ ತಲೆಯೆತ್ತಿ ನಿಂತಿದೆ .. "

ಶಿವಸ್ಕಂದ ವರ್ಮಾ ಮಯೂರನಿಗೆ "ಮಯೂರ ನಿನಗೆ ರಾಜ್ಯ ಬೇಕು ತಾನೇ ನಾ ಖುಷಿಯಿಂದ ಕೊಡುತ್ತೇನೆ.. ಆದರೆ DFR DFR ಎಲ್ಲರ ಮನವನ್ನು ಗೆಲ್ಲುತ್ತಾರೆ ಅಲ್ಲವೇ.. ಆ ರೀತಿಯ ಗುಣವನ್ನು ನನಗೂ ಹೇಳಿಕೊಡಿ ಅಂತ ನೀವು DFR DFR ಗೆ ಹೇಳಿ ಪ್ಲೀಸ್"


ದೃಶ್ಯ ೬

ಇದು DFR DFR ತಾಕತ್ತು.. ಎಲ್ಲೇ ಹೋದರೂ ಮತ್ತೆ ಬಂದು ನಿಲ್ಲೋದು DFR DFR ಅವರ ನೀರಿನಂತಹ ಗುಣ.. ಯಾವುದೇ ಪರಿಸ್ಥಿತಿಗೆ, ಯಾವುದೇ ವಾತಾವರಣಕ್ಕೆ, ಯಾವುದೇ ಸ್ಥಿತಿಯಲ್ಲಿಯೂ ಕೂಡ ಸದಾ ಇನ್ನೊಬ್ಬರ ಬಗ್ಗೆ ಯೋಚಿಸುವ, ಸಹಾಯ ಚಾಚುವ ಅವರ ಗುಣ ಎಲ್ಲರಿಗೂ ಮಾದರಿ.. ಅಷ್ಟಿಲ್ಲದೆ ನಾ ಎಲ್ಲರಿಗೂ ಗುಣವಾಚಕವಾಗಿ ಹೆಸರಿಡುವ ನಾನು ಅವರನ್ನು DFR DFR ಅಂತ ಕರೆಯುತ್ತೇನೆಯೇ!

ಜನುಮದಿನದ ಶುಭಾಶಯಗಳು DFR DFR!

Monday, April 28, 2025

ದೇವರು ನಕ್ಕೆ ನಗುತ್ತಾನೆ - ೭

ಮೊಬೈಲಿನಲ್ಲಿ ನಗುನಗುತಾ ನಲಿ ನಲಿ ಏನೇ ಆಗಲಿ.. ಅಣ್ಣಾವ್ರ ಹಾಡು ಬರುತ್ತಿತ್ತು.. ಮೊಬೈಲಿನಲ್ಲಿದ್ದ ಕೃಷ್ಣ ಅರ್ಜುನ ನಗಲು ಶುರು ಮಾಡಿದರು. 

ಲೋ ಹೈದ ನಗು ನಗು ಅಂತ ಹೇಳುತ್ತಾ ನಗೋದನ್ನೇ ಮರೆತಿದ್ದೀಯಾ ಅಥವ ಅದರ ಬಗ್ಗೆ ಬರೆಯೋದನ್ನು ಮರೆತಿದ್ದೀಯಾ.. ಏನ್ಲಾ ನಿನ್ನ ಕಥೆ.. ಐದು ವರ್ಷ ಇದರ ಬಗ್ಗೆ ಒಂದು ಚೂರು ಬರೆದಿಲ್ವಲ್ಲೋ..

ಹೌದು ಕೆಲವೊಮ್ಮೆ.. ನಾಳೆ ನಾಡಿದ್ದು ಆಚೆ ನಾಡಿದ್ದು ಅಂತ ಹೇಳುತ್ತಾ ವಾರಗಳು, ತಿಂಗಳು, ವರ್ಷಗಳೇ ಕಳೆದು ಹೋಗುತ್ತವೆ.. 

ಹಾಗೆ ಲೇಖನದ ದಿನಾಂಕ ನೋಡಿದೆ  ಅರೆ ನಾಲ್ಕು ವರ್ಷ ಆಗೋಗಿದೆ.. ದೇವರ ನಗುವಿನ ಸರಣಿ ಬರೆದು.. 

ಸರಿ ಬರೆದು ಬಿಡೋಣ ಅಂತ ಶುರು ಮಾಡಿದೆ.. ಈ ಐದು ವರ್ಷಗಳಲ್ಲಿ ಕಾವೇರಿ ನದಿಯಲ್ಲಿ ಎಷ್ಟೋ  ಸಹಸ್ರ ಸಹಸ್ರ ಗ್ಯಾಲನ್ ನೀರು ಸಮುದ್ರದ ಪಾಲಾಗಿದೆ.. ಎಷ್ಟೋ ಘಟನೆಗಳು ಎಷ್ಟೋ ನಗುವಿನ ದೃಶ್ಯಗಳು ಸ್ಮೃತಿ ಪಟಲದಿಂದ ಮರೆಯಾಗಿ ಹೋಗಿದೆ.. ಆದರೂ ಕೆಲವು ನೆನಪುಗಳು ಅಚ್ಚಳಿಯದೆ ನಿಂತಿರುವುದನ್ನು.. ಕೆಲವು ಘಟನೆಗಳು ಇತ್ತೀಚಿಗೆ ನೆಡೆದಿರುವುದು ಇಲ್ಲಿ ದಾಖಲಿಸಿ ಕಡೆ ಪಕ್ಷ ಪಶ್ಚಿಮ ವಾಹಿನಿ ಹಾದಿಯಲ್ಲಿರುವ ಈ ಸರಣಿಯನ್ನು ಮತ್ತೆ ಮುಖ್ಯ ಹಾದಿಗೆ ತರುವ ಪ್ರಯತ್ನ ಮಾಡುವ ಒಂದು ಪುಟ್ಟ ಶ್ರಮ.. 

                                                                       ******* 

ದೃಶ್ಯ ೧ 

ಜೀವನದ ಓಟದ ಹಾದಿಯಲ್ಲಿಅಡೆತಡೆಯಿಲ್ಲದೆ .. ಬಂದರೂ ಲೆಕ್ಕಿಸದೆ ಪಯಣ ಸಾಗಿತ್ತು.. ಉದ್ಯೋಗ ಕ್ಷೇತ್ರದಲ್ಲಿ ಒಂದು ಪುಟ್ಟ ತಿರುವು ಸಿಕ್ಕಾಗ ಮತ್ತೆ ನಿಂತ ಬದುಕು ಓಡಲು ಶುರುವಾಗಿತ್ತು.. 

ಮೊದಲ ದಿನ.. ಸಹಸ್ರಾರು ಬಾರಿ ಸಾಗಿದ್ದ ಮೈಸೂರು ರಸ್ತೆಯ ಮೇಲ್ ಸೇತುವೆ.. ಕೆ ಆರ್ ಮಾರುಕಟ್ಟೆಯ ಬಳಿಯ ನನ್ನ ನೆಚ್ಚಿನ ಗಣಪನ ದೇವಾಲಯ.. ಅಲ್ಲಿಗೆ ಹೋಗಬೇಕು ಅನ್ನುವ ಅವಕಾಶ ಇನ್ನೂ ಒದಗಿಲ್ಲ ಅನ್ನೋದಕ್ಕಿಂತ ಆ ರಸ್ತೆಯಲ್ಲಿ ಸಾಗುವಾಗ ಸೇತುವೆ ಮೇಲೆ ಇರುವುದರಿಂದ ಗಣಪನ ದೇವಾಲಯದ ಗೋಪುರ ಮಾತ್ರ ಕಾಣುತ್ತದೆ.. ಸೇತುವೆ ಕೆಳಗೆ ಸಾಗೋಣ ಎಂದರೆ ಅಸಾಧ್ಯ ವಾಹನ ದಟ್ಟಣೆ.. ಬೆಳಿಗ್ಗೆ ಹೋಗುವಾಗ ಆತುರ.. ಬರುವಾಗ ಮನೆಯನ್ನು ಸೇರುವ ಕಾತುರ.. ಹಾಗಾಗಿ ಆ ದೇವಾಲಯಕ್ಕೆ ಭೇಟಿಯ ಪುಣ್ಯ ಇನ್ನೂ ಸಿಕ್ಕಿಲ್ಲ.. ಸೋಮಾರಿತನವೂ ಕಾರಣ.. ಶನಿವಾರ ಭಾನುವಾರ ಹೋಗಿ ಬರಬಹುದು ಅದೇನು ದೊಡ್ಡ ಕೆಲಸವಲ್ಲ ಆದರೆ ಮನುಷ್ಯನನ್ನು ಸೋಮಾರಿ ಮಾಡುವ ಆಲಸ್ಯ.. ನನಗೂ ತುಸು ಹೆಚ್ಚೇ ಇರುವುದರಿಂದ.. ಹೋಗಲಾಗಿಲ್ಲ.. ಆದರೆ ಹೋಗಿ ಬರುವ ಖಂಡಿತ.. 

ಸರಿ ವಿಷಯಕ್ಕೆ ಬರುತ್ತೇನೆ.. ಆ ಸೇತುವೆ ಮೇಲೆ ಹೋಗುವಾಗ ಬರುವಾಗ ಆ ಗೋಪುರ ನೋಡಿ ಕೈ ಮುಗಿದು ಮುಂದುವರೆಯುವುದು ನನ್ನ ಅಭ್ಯಾಸ.. ಎಷ್ಟೇ ದಟ್ಟಣೆ ಇರಲಿ. ಹಿಂದಿನವ ಬಡ್ಕೊಂಡ್ರು ಸರಿ ಒಂದು ಕ್ಷಣ ಕೈಮುಗಿದು ಹೋಗುವುದು ಅಭ್ಯಾಸ.. 



ಕೆಲಸದ ಮೊದಲ ದಿನ.. ಅದೇ ದಾರಿಯಲ್ಲಿ ಪಯಣ ಸಾಗಿತ್ತು..ಅದೇ ದೇವಾಲಯ.. ಅದೇ ಸೇತುವೆ.. ಸಾಗುವಾಗ ... ಆಗಲೇ ತಡವಾಗಿತ್ತು.. ಆದ್ದರಿಂದ ತುಸು ವೇಗವಾಗಿ ಜೊತೆಗೆ ಅಷ್ಟೇ ಗಾಬರಿ ಸಹಿತ.. ದೇವಾಯ ಹಾದು ಹೋದೆ ಆದರೆ.. ಕೈ ಮುಗಿಯೋದು ಆ ಕ್ಷಣಕ್ಕೆ ಮರೆಯಾಗಿತ್ತು... 

ಟರ್ ಟರ್ ಶಬ್ದ ಕೂಡ ಕಿವಿಗೆ ಕೇಳಿಸದಷ್ಟು ಬೇಗ ಸಾಗುವ ಇರಾದೆಯಿಂದ ಸಾಗುತ್ತಿದ್ದೆ.. ನನ್ನ ಪಕ್ಕದ ಬೈಕಿನವ .. ಸರ್ ಚಕ್ರ ನೋಡಿ ಚಕ್ರ ನೋಡಿ ಅಂತ ಕೂಗುತ್ತಾ ಹೋದ.. ನಾನು ಅಯ್ಯೋ ಪಂಚರ್ ಆಗಿದೆಯಾ .. ಏನಪ್ಪಾ ಮಾಡೋದು ಹೊತ್ತಾಗುತ್ತೆ ಅಂತ ಬೈಕ್ ನಿಲ್ಲಿಸಿದೆ.. ನೋಡಿದರೆ.. ಒಂದು ಪ್ಲಾಸ್ಟಿಕ್ ಕ್ಯಾನ್ ಚಕ್ರಕ್ಕೆ ಸಿಕ್ಕಿ ಹಾಕಿಕೊಂಡು ಸದ್ದು ಮಾಡುತ್ತಿದೆ.. ಅಯ್ಯೋ ಅಂತ ಆ ಕ್ಯಾನ್ ತೆಗೆದು ರಸ್ತೆ ಬದಿಯಲ್ಲಿಟ್ಟು ಎದ್ದು ನಿಂತು.. ನೋಡಿದೆ... ತಣ್ಣನೆ ಗಾಳಿ ಮುಖದ ಮೇಲೆ ಬಿದ್ದ ಅನುಭವ.. ಕತ್ತೆತ್ತಿ ಸುತ್ತಾ ನೋಡಿದೆ.... ಯಾರೋ ಫ್ಯಾನ್ ಹಾಕಿದ್ದಾರೆ ಅನಿಸುವ ಅನುಭವ.. ಪೈಪಿನಿಂದ ಗಾಳಿ ಬೀಸಿದ ಅನುಭವ.. ಮೆಲ್ಲನೆ ತಿರುಗಿ ನೋಡಿದೆ.. ಪ್ರತಿ ದಿನ ಕೈಮುಗಿಯುತಿದ್ದ ಗಣಪನ ದೇವಾಲಯ.. ಅರೆ ಇವತ್ತು ಮರೆತೇ ಬಿಟ್ಟೆನಲ್ಲ ಅಂತ ಬೇಸರ ಪಟ್ಟುಕೊಂಡು ತಿರುಗಿ ಕೈಮುಗಿದೆ.. ಬೈಕ್ ಸ್ಟಾರ್ಟ್ ಮಾಡಿದೆ.. ಶ್ರೀ ಆಲ್ ದಿ ಬೆಸ್ಟ್ ಅಂತ ಗಣಪ ಆಶೀರ್ವಾದ ಮಾಡಿದಂತೆ ಅನುಭವ.. 

ತಲೆಯೆತ್ತಿ ನೋಡಿದೆ.. ಶ್ರೀ ನಿನ್ನ ಗಡಿಬಿಡಿಯಲ್ಲಿ ನೀ ನನ್ನ ಮರೆಯಬಹುದು ಆದರೆ ನಾ ನಿನ್ನ ಮರೆಯೋಲ್ಲ ಕಣೋ.. ಶುಭವಾಗಲಿ.. ಹೊಸ ತಿರುವು ಹೊಸ ಯಶಸ್ಸನ್ನು ತಂದು ಕೊಡಲಿ.. ಶುಭವಾಗಲಿ ಎಂದು ಹರಸಿದ ಗಣಪ.. ಅದನ್ನು ಕಂಡು ನಾ ನಕ್ಕೆ.. ದೇವರು ಕೂಡ ಖಂಡಿತ ಒಂದು ಸುಮಧುರ ನಗು ಕೊಟ್ಟ.. 

                                                             *****

ದೃಶ್ಯ ೨

ಮನೆಯ ಹತ್ತಿರದ ಒಂದು ಸ್ವಸಹಾಯ ಪದ್ದತಿಯ ಹೋಟೆಲ್.. ನಮಗೆ ಬೇಕಾಗಿದ್ದು ಹೇಳಿ ಚೀಟಿ ಪಡೆದು ಕಾಯುತ್ತಿದ್ದೆವು.. ಸ್ವಲ್ಪ ಹೊತ್ತು.. ಕೇಳಿದ ತಿಂಡಿ ಬಂತು.. ತಿನ್ನುತ್ತಿದ್ದೆವು.. ಒಬ್ಬ ಹಣ್ಣು ಹಣ್ಣು ಮುದುಕ.. ವಯಸ್ಸಾಗಿತ್ತು ಅನ್ನೋದು ಗೊತ್ತಾಗುತಿತ್ತು.. ಆದರೆ ಅದಕ್ಕಿಂತ ಆ ವಯೋವೃದ್ಧರಿಗೆ ನೆಡೆಯಲು ಕಷ್ಟವಾಗುತಿತ್ತು.. ಒಂದು ಕೋಲಿನ ಆಸರೆ ಇತ್ತು.. 

ಒಂದು ಕುರ್ಚಿಯಲ್ಲಿ ಸುಮ್ಮನೆ ಕೂತಿದ್ದರು.. ಅವರಿಗೆ ಇದು ಸ್ವಸಹಾಯ ಅಂತ ಗೊತ್ತಿರಲಿಲ್ಲ.. ಸುಮಾರು ಹೊತ್ತು ಕೂತೆ ಇದ್ದರು.. ಯಾರೋ ಒಬ್ಬರು ಅಲ್ಲಿ ಹೋಗಿ ಚೀಟಿ ಕೊಂಡು ಊಟ ಮಾಡಿ ಅಂತ ಹೇಳಿದರು.. ಆತ ಬಹಳ ಕಷ್ಟ ಪಟ್ಟು ನಿಧಾನಕ್ಕೆ ಹೋಗಿ ಚೀಟಿ ಪಡೆದರು.. ಮತ್ತೆ ಆ ಕಡೆ ಹೋಗಿ ತಿಂಡಿ ಕೊಡುವವನ ಹತ್ತಿರ ಆ ಚೀಟಿ ಕೊಟ್ಟರು.. 

ಆತ ಆ ಚೀಟಿಯನ್ನು ನೋಡಿ ಓಹ್ ನಾರ್ತ್ ಇಂಡಿಯನ್ ಊಟ ಅಂತ ಹುಬ್ಬು ಮೇಲೆತ್ತಿ "ತಾತಾ ನೀವು ಅಲ್ಲಿ ಕೂತುಕೊಳ್ಳಿ ನಾನೇ ತಂದು ಕೊಡುತ್ತೇನೆ ಅಂದರು.. ಆ ತಾತನಿಗೆ ಕೇಳಿಸಿತೋ ಅರ್ಥವಾಯಿತೋ ಗೊತ್ತಿಲ್ಲ.. ಅಲ್ಲೇ ನಿಂತಿದ್ದರು.. 

ಆತ ಮತ್ತೆ ಹೋಗಿ ತಾತಾ ಕುಳಿತುಕೊಳ್ಳಿ ತಂದು ಕೊಡುತ್ತೇನೆ ಅಂತ ತುಸು ಜೋರಾಗಿ ಹೇಳಿ ಕೈ ತೋರಿಸಿದಾಗ ತಾತನಿಗೆ ಗೊತ್ತಾಯಿತು ಅಂತ ಅನಿಸುತ್ತೆ.. ಒಂದು ಕುರ್ಚಿಯಲ್ಲಿ ತಮ್ಮ ಕೈ ಚೀಲವನ್ನು ಇಟ್ಟು ಇನ್ನೊಂದು ಕುರ್ಚಿಯಲ್ಲಿ ಕೂತರು.. ಆತ ನಾ ಕುಳಿತ ಟೇಬಲಿನ ಮುಂದೆ ಕೂತಿದ್ದರಿಂದ ನನಗೂ ಕುತೂಹಲವಿತ್ತು ಮುಂದೆ ಏನು ನೆಡೆಯುತ್ತೆ ಅಂತ.. 

ಅಷ್ಟರಲ್ಲಿ ತಾತನ ಊಟ ತಯಾರಾಗಿದೆ ಅಂತ ಆತ ಕೂಗಿದ.. ತಾತ ನಿಧಾನವಾಗಿ ಏಳೋಕೆ ನಿಲ್ಲುವ ಪ್ರಯತ್ನ ಮಾಡಿದರು.. ಹೋಟೆಲಿನವ ತಾತ ಇರಿ ನಾನು ತರುತ್ತೇನೆ ಎಂದರು.. ಆದರೆ ಆತ ಒಂದು ಸುತ್ತು ಬಳಸಿಬರಬೇಕಿತ್ತು.. 

ಏಕೋ ನನಗೆ ಏನೋ ಅನಿಸಿತು.. ತಿನ್ನುತ್ತಿದ್ದವ ನಾನು ಎದ್ದು ಹೋಗಿ ಆ ತಟ್ಟೆಯನ್ನು ತೆಗೆದುಕೊಂಡು ತಾತ ತೆಗೆದುಕೊಳ್ಳಿ ಆರಾಮಾಗಿ ಊಟ ಮಾಡಿ ಎಂದೇ.. 

ತಾತ ಕಣ್ಣಲ್ಲೇ ಕೃತಜ್ಞತೆ ಹೇಳುತ್ತಾ ಕೈಯಲ್ಲಿ ಕುಡಿಯಲು ನೀರು ಬೇಕು ಎಂದು ದಯನೀಯವಾದ ದೃಷ್ಟಿ ಬೀರಿದರು.. ನನ್ನ ಹೊಟ್ಟೆ ಚುರುಕ್ ಎಂದಿತು.. ನೀರು ತರಲು ಹೋದೆ.. ಹೋಟೆಲಿನವ ಸರ್ ನೀವು ಊಟ ಮಾಡಿ ನಾ ನೀರು ಕೊಡುತ್ತೇನೆ.. ಧನ್ಯವಾದಗಳು ಅಂತ ಹೇಳಿ.. ನೀರು ಕೊಡಲು ಅಲ್ಲೇ ಇದ್ದ ಹುಡುಗನಿಗೆ ಹೇಳಿದ.. ನೀರು ಬಂತು.. ತಾತ ನೀರು ಕುಡಿದು ನಿಧಾನವಾಗಿ ನಾರ್ತ್ ಇಂಡಿಯನ್ ಊಟ ಸವಿಯಲು ಶುರು ಮಾಡಿದರು.. 

ಇಲ್ಲಿ ನನಗೆ ಅನಿಸಿದ್ದು.. ತಾತನಿಗೆ ನಾರ್ತ್ ಇಂಡಿಯನ್ ಸೌತ್ ಇಂಡಿಯನ್ ಊಟದ ವ್ಯತ್ಯಾಸ ಗೊತ್ತಾಯಿತೋ.. ಅಥವ ಊಟ ಎಂದಾಗ ಸಾಮಾನ್ಯ ಬೆಂಗಳೂರಿನಲ್ಲಿ ಸಂಜೆ ಹೊತ್ತು ಅನ್ನ ಸಾರಿನ ಊಟ ಸಿಗೋಲ್ಲ.. ಊಟ ಬೇಕು ಅಂತ ತಾತ ಹೇಳಿದಾಗ.. ಹೋಟೆಲಿನವರು ಸುಮ್ಮನೆ ಒಂದು ಚೀಟಿ ಹರಿದುಕೊಟ್ಟರೋ ಏನೋ ಅಂತ.. 

ಒಟ್ಟಿನಲ್ಲಿತಾತ ಏನೂ ಕಿರಿ ಕಿರಿ ಮಾಡಿಕೊಳ್ಳದೆ ತಣ್ಣನೆ ಊಟ ಮಾಡುತ್ತಿರುವ ದೃಶ್ಯ ನೋಡಿ ನನಗೆ ಕರುಳು ಚುರುಕ್ ಎಂದಿತು.. ತಮ್ಮ ಭವ್ಯವಾದ ಹಿಂದಿನ ತಾರುಣ್ಯದಲ್ಲಿ ಎಷ್ಟು ಭರ್ಜರಿ ಜೀವನ ಮಾಡಿರಬಹುದು.. ಅಥವ ಹೊಡೆದಾಟದಲ್ಲಿಯೇ ಜೀವನದ ಅಂಚಿಗೆ ಬಂದು ನಿಂತಿದ್ದರೋ ಅರಿಯದು.. ಆದರೆ ತಾತ ನೀರು ಬೇಕು ಅಂತ ಕೇಳಿದ ದೃಶ್ಯ ಮನದಲ್ಲಿ ಅಚ್ಚಳಿಯದೆ ನಿಂತು ಬಿಟ್ಟಿದೆ.. 

ಹೋಟೆಲಿನಿಂದ ಹೊರಗೆ ಬರುವಾಗ ಗಲ್ಲಾಪೆಟ್ಟಿಗೆಯ ಮೇಲೆ ಸ್ಥಿತಪ್ರಜ್ಞನಾಗಿದ್ದ ಗಣಪತಿ ಗುಡ್ ಜಾಬ್ ಶ್ರೀ ಅಂತ ಹೇಳಿ ನಕ್ಕಿದ್ದು ಕೇಳಿಸಿತು.. !


Thursday, October 24, 2024

madness in random...!

ಸಿಬಿ : ಹಾಯ್ ಅರ್ಪಿತಾ

ಅರ್ಪಿತಾ : ಹಾಯ್ ಸಿಬಿ 

ಸಿಬಿ : ಏನಿದು New journey?

ಅರ್ಪಿತಾ : ನಥಿಂಗ್ Dog eat Dog world ಅನ್ನುವ ಪುಸ್ತಕ ಓದುತ್ತಿದ್ದೆ.. ಅದರಲ್ಲಿನ Small details ಬಹಳ ಇಷ್ಟವಾಯಿತು.. ಆದರೆ ಅಷ್ಟರಲ್ಲಿ Thu ut ke gayi ........ ನಿಮಗಾಗಿ Intezaar ಮಾಡಿದೆ.. ಆದರೆ The perfect day ಬರಲು ತುಂಬಾ ದಿನಗಳಾಯ್ತು.. ನನಗೂ ಒಂದು ರೀತಿಯ ಪ್ರಶ್ನೆ Nostalgic.. am I ???? ಅಂತ ಅನಿಸಿತು.. ಸರಿ What happened now  ಅಂತ ಪ್ರಶ್ನೆ.. ಮನದಲ್ಲಿ ಒಂದು ರೀತಿಯ Grief .. ಆದರೂ ಮೊಗದಲ್ಲಿ Smile ... ಮನಸ್ಸಿನಲ್ಲಿ ಅನಿಸಿತ್ತು Happiness is waiting, Soak no more ಅಂತ.. ಖಂಡಿತ Battery recharged ಆಗುತ್ತೆ ಕಾಯೋಣ ಅನಿಸಿತು.. ಅದೇ ಯೋಚನೆಯಲ್ಲಿದ್ದಾಗ ಬಸ್ ನಿಲ್ದಾಣದಲ್ಲಿ The woman with red toe nails ಪುಸ್ತಕ ಓದುತ್ತಿದ್ದೆ ಕಣೆ ಸಿಬಿ.. ಯಾಕೋ ಈ ಕಥೆಯಲ್ಲಿ Untold ಘಟನೆಗಳಿದ್ದಾವೆ ಅನಿಸಿತು.. ಇದಕ್ಕೆ ಒಂದಷ್ಟು ಹಾಡನ್ನು ಗುನುಗುಣಿಸೋಣ ಅಂತ ಮೊಬೈಲಿನಲ್ಲಿ My 10 most favourite songs ಹಾಕಿಕೊಂಡು ಕೂತೆ ... ಹಾಡುಗಳು ಮಧುರವಾಗಿದ್ದವು.. ಜೊತೆಗೆ Second Chance ಕೊಡೋಣ.. ಕಾಯೋಣ ಅನಿಸಿತು.. 

ಇವರಿಬ್ಬರ ಮಾತುಕತೆ ಮುಂದುವರೆಯುತ್ತಿತ್ತು .. 

ಆ ಕಡೆಯಿಂದ ಇವರಿಬ್ಬರ ನೆಚ್ಚಿನ ರೋಹಿಣಿ ನೆಡೆದು ಬರುತ್ತಿದ್ದಳು ಬಂದವಳೇ 

ರೋಹಿಣಿ : "Did I ever tell you????? ಅರ್ಪಿತ"  ಅಂದಳು.. 

ಅರ್ಪಿತಾ : ಇಲ್ಲ ರೋಹಿಣಿ ಅಂದೇ.. 

ಅವಳು ತನ್ನ ಬ್ಯಾಗಿಂದ ಮೈಸೂರು ಪಾಕು Pieces ಕೊಟ್ಟಳು.. 

ಸಿಬಿ :  If Only............ ಬಾಕ್ಸ್ ಫುಲ್ ಇದ್ದರೆ ಚೆನ್ನಾಗಿತ್ತು ರೋಹಿಣಿ 

ರೋಹಿಣಿ :   ಹೌದು ಕಣೆ .. .. ಇರಲಿ ಇರಲಿ Housewife wala life ಹಾಗಾಗಿ ಮನೆಯಲ್ಲಿ ಕೆಲಸ ಮಾಡುತ್ತಾ ಹಾಗೆ ತಿಂದು ಹಾಕಿದೆ.. ಉಳಿದದ್ದು ನಿನಗೆ ತಂದೆ ... 

ಅರ್ಪಿತಾ : ಅದು ಹೋಗಲಿ ಬಿಡು ಮೈಸೂರು ಪಾಕು ಚೆನ್ನಾಗಿದೆ.. 

ರೋಹಿಣಿ:  ಅದಿರಲಿ ನಿನ್ನ ಡ್ರೆಸ್ ಯಾಕೆ So Ordinary .... ಎನಿಥಿಂಗ್ ಆಯ್ತಾ ... 

ಅರ್ಪಿತಾ :  Doomsday ಕಣೆ 

ಸಿಬಿ: .. Give me one reason...ಯಾಕೆ ಅಂತ .. 

ಅರ್ಪಿತಾ : ಇಲ್ಲ ಕಣೆ ಇದು Last chance ಆಮೇಲೆ ನೋಡೋಣ.. ಇಲ್ಲವೇ ಪೂರ್ತಿ Silence ಅಷ್ಟೇ 

ಸಿಬಿ : ಏನಾಯಿತು 

ಅರ್ಪಿತಾ : ಇದು ಎರಡು ಭಾಗದಲ್ಲಿ ಬರುವ ಕಥೆ ಕಣೆ  Over a cup of tea...... (Part 1) (Part 2) ..

ಸಿಬಿ : ಅದು ಸರಿ ಅರ್ಪಿತಾ Do you think they know???.... ........ Nah..

ಅರ್ಪಿತಾ : ಹೌದು ಕಣೆ ಸಿಬಿ At that moment... Am fine ಅನಿಸಿತು ಯಾರಿಗೆ ಹೇಳೋದು Friends ??  Forever :) ಅಂತ ಅನಿಸಿಕೊಂಡ ಕೆಲವರ ಹತ್ತಿರ ಹೇಳೋಣ ಅಂದುಕೊಂಡೆ ajeeb dastan he ye..... ಅಂತ ರೇಗಿಸ್ತಾರೆ.. ಅದಕ್ಕೆ ನಿಮ್ಮಿಬ್ಬರ ಹತ್ತಿರ ಹೇಳೋಣ ಅಂತ ಬಂದೆ  ಜೀವನದಲ್ಲಿ Twice in a lifetime (Part I) (Part II) ಆಯಿತು..  Good bye ಹೇಳೋಣ ಅನಿಸಿತು.. ಆದರೆ ಅವನು ಹೇಳ್ತಾನೆ My brother ..ಗೆ ಹೇಳಿದೆ  After this day............. Almost..... in love ... ಇದು Journey of Mr.X, Lucky Charms ಅದು ಇದು ಅಂತ ನೂರೆಂಟು ಹೇಳಿದಾಗ The world as I understood.....ಅಂತ ಅರ್ಥ ಆಯಿತು.. ಸರಿಯೋ ತಪ್ಪೋ ಗೊತ್ತಿಲ್ಲ ಆದ್ರೆ What defines you??... ಅಂತ ಯೋಚನೆ ಮಾಡುತ್ತಲೇ Valentine's day ಬಂದೆ ಬಿಡ್ತು New beginning ಅಂತ ಅನಿಸಿತು.. ಕಾಲವೂ ಬದಲಾಗಬೇಕಲ್ಲವೇ Spring ಕೂಡ ಬಂದೆ ಬಿಡ್ತು.. ಸರಿ ಧೈರ್ಯ ಮಾಡಿ ಮಾತಾಡೋಣ ಅನಿಸಿತು Coffeeಗೆ ಕರೆದು confusion ಆಗಿರೋದನ್ನು ಸರಿ ಮಾಡಿಕೊಳ್ಳೋಣ ಅನಿಸಿ .. ತನ್ನ ಮನದಲ್ಲಿದ್ದನ್ನು ಬೊಗಸೆ ತುಂಬಾ ಹೇಳಲು ಶುರು ಮಾಡಿದಾಗ ಆ ಮಾತುಗಳು  confessions of a confused soul – 1, 2,3,4,5,6,7,,8,9,10,11,12,13, ಅಂತ ವೆಬ್ ಸೀರೀಸ್ ಬಂದ ಹಾಗೆ ಬಂದಿತು ಸಿಬಿ  ... ಏನು ಮಾಡಲಿ ಕಡೆಗೆ ಇದೆಲ್ಲಾ ಅರ್ಥವಾಗಿ.. ಸ್ವಲ್ಪ ಮಟ್ಟಿಗೆ ತಿಳಿಯಾಗಿ One summer afternoon... ಮೊಬೈಲಿನಲ್ಲಿ Hold my hand ಅಂತ ಮೆಸೇಜ್ ಬಂತು... Conscience calls ಪ್ರಕಾರ "Best Friend" ಅನ್ನಿಸ್ತು ಒಪ್ಪಿಕೊಂಡೆ.. ಈ ಕುಶಿಗೆ ಏನಾದರೂ ಕೊಡೋಣ ಅನಿಸಿತು..  ಅವನು ಬುಲೇಟ್ ಬೈಕ್ ನನಗೆ ಬಲು ಇಷ್ಟ.. ಒಂದು ರೀತಿಯಲ್ಲಿ ನಾನೇ ಅವನಿಗೆ ಬಲವಂತ ಮಾಡಿ ಕೊಡಿಸಿದ್ದೆ.. ಶೋ ರೂಮಿನ ಹತ್ತಿರ A humble plea to bullet riders - From a drooling onlooker ಅಂತ ಒಂದು ಪುಸ್ತಕ ಕೊಟ್ಟು.. ದಯಮಾಡಿ ಇದನ್ನು ಅನುಸರಿಸಿ ಅಂತ ಹೇಳಿದ್ದಷ್ಟೇ ಅಲ್ಲದೆ IMHO - Blue mug epiphany ಅನ್ನುವ ಒಂದು ಪುಸ್ತಕ ಕೊತ್ತಿದ್ದರು .ಅದು ನನ್ನ ಬಳಿಯೇ ಇತ್ತು . Crossroads ನಲ್ಲಿದ್ದ ಬದುಕು ಮತ್ತೆ ಹಾದಿಗೆ ಬಂತು ಕಣೆ .. ಅವನಿಗೆ ಈ ಪುಸ್ತಕಗಳನ್ನು ಕೊಟ್ಟಾಗ ನನ್ನ Butterfly girl ಅಂತ ಹೇಳಿ...  ಬಾಕಿ ಪ್ರೇಮಿಗಳು ಕೂಡ ಹೊಟ್ಟೆ ಕಿಚ್ಚು ಪಡುವಷ್ಟು Confessions- jealousy ಆಯಿತು ಕಣೆ ಎಂದು ಹೇಳಿದಾಗ ನನಗಾದ ಸಂತೋಷ ಅಷ್ಟಿಷ್ಟಲ್ಲ.. . ಈಗ ನಾವಿಬ್ಬರು Walking Partners ಮತ್ತೆ ಮೆಲ್ಲನೆ Walking Partners & Couples.ಆದೆವು .. ಒಂದು ವರ್ಷ ನಮ್ಮ ಜೊತೆ Walking Partners - Ramesh Uncle ಅಂದರೆ ನನ್ನ ಮಾವ ಕೂಡ ಸೇರಿಕೊಂಡರು .. ನಮ್ಮ ಬದುಕು Random madness ಇಂದ madness in random ಆಗಿದೆ.. ಬದುಕು ಸುಂದರ ಅನಿಸಿದೆ ಸಿಬಿ.. 

ಸಿಬಿ : ವಾಹ್ ವಾಹ್ ಸುಂದರ ಬದುಕು ಕಣೆ ಅರ್ಪಿತಾ ನಿಂದು.. ಒಂದು ಹಗ್ ನಿನಗೆ 

ರೋಹಿಣಿ : ಓಯೆ ನಾನೂ ಇಲ್ಲಿದ್ದೀನಿ.. ಮೈಸೂರು ಪಾಕು ಗುಳುಂ ಮಾಡಿದಂಗೆ ಅಲ್ಲ.. ನಾನೂ ಇಲ್ಲಿದ್ದೀನಿ.. ನನಗೂ ಒಂದು ಕೊಡ್ರೋ.. 

ಅರ್ಪಿತಾ : ರೋಹಿಣಿ ನೀ ಇದ್ದಾರೆ ಸಾಕು ಕಣೆ.. ಸಿಬಿ ಜಗತ್ತನ್ನೇ ಗೆಲ್ಲುತ್ತಾಳೆ.. 

ಸಿಬಿ : ಹ ಹ .. you know what am a gigling ,mug!!!

ಅದ್ಭುತ ಗೆಳೆತನ ಎಂದರೆ ಇದೆ ಅಲ್ಲವೇ.. ಲೇಖನದಲ್ಲಿ ಮೂಡಿ ಬಂದ ಒಂದು ಪಾತ್ರ.. ಸಿಬಿ  ಅವರನ್ನು ಇಷ್ಟೊಂದು ಹಚ್ಚಿಕೊಂಡಿದ್ದು.. ಸಿಬಿ  ಕೂಡ ಆ ಪಾತ್ರವನ್ನು ಬಲು ಮುತುವರ್ಜಿಯಿಂದ ಸಿದ್ಧಪಡಿಸಿದ್ದು ...ಅದ್ಭುತ.. ಜೊತೆಗೆ ಗೆಳೆತನಕ್ಕೆ ಕಲಶ ಪ್ರಾಯದಂತೆ ರೋಹಿಣಿಯ ಹಾಜರಿ.. ಎಲ್ಲವೂ ಸಸತ್ಯಂ ಶಿವಂ ಸುಂದರಂ.. !

************************

ಗೆಳೆತನ ಅನ್ನೋದು ಎಲ್ಲರಿಗೂ ಸುಲಭವಾಗಿ ಸಿಗುವ ವಸ್ತುವಲ್ಲ ಗೆಳೆಯರಾಗಿರಬಹುದು.. ಆದರೆ ಪ್ರತಿಯೊಂದು ಕ್ಷಣದಲ್ಲೂ ನಿಲ್ಲುವ ಗೆಳೆಯರು ನಿಜವಾಗಿಯೂ ಈ ಆಧುನಿಕ ತಂತ್ರಜ್ಞಾನ ಕೂಡಿರುವ ಜಗತ್ತೇ ಒಂದು ಹಳ್ಳಿಯಾಗಿರುವ ಈ ಕಾಲದಲ್ಲಿ ತಾನುಂಟು ಮೂರು ಲೋಕವುಂಟು ಎನ್ನುವ ಗೆಳೆತನವೆ ಹೆಚ್ಚು.. ಅಂಥದ್ದರಲ್ಲಿ ಅಚಾನಕ್ ಒಂದು ಬ್ಲಾಗ್ ಓದಿ ಪ್ರತಿಕ್ರಿಯೆ ಕೊಟ್ಟ ಕ್ಷಣ ಸಿಕ್ಕಿದು ದೇವರು ಕೊಟ್ಟ ಗೆಳತನ ಅದೇ ನಿವೇದಿತಾ ಚಿರಂತನ್.. ಅಕ್ಷರಗಳ ಮಧ್ಯೆ ಇರುವ ಖಾಲಿ ಜಾಗದಲ್ಲಿ ಭಾವನೆಗಳನ್ನು ಕಂಡು ಹಿಡಿಯುವಷ್ಟು ಚಾಣಾಕ್ಷೆ ಇವರು.. ೨೦೧೨ ರಲ್ಲಿ ಶುರುವಾದ ಗೆಳೆತನಕ್ಕೆ ಭರ್ತಿ ೧೨ ವರ್ಷಗಳು.. ಜನುಮದಿನಕ್ಕೆ ಮರೆಯದೆ ಶುಭಾಶಯಗಳನ್ನು ತಲುಪಿಸುವ ನನಗೆ.. ಒಂದು ವರ್ಷ ಯಾವುದೋ ಕಾರಣಕ್ಕೆ ಹೇಳಲಾಗಲಿಲ್ಲ.. ಆದರೆ ಸಂದರ್ಭಗಳನ್ನು ಹೇಳಿ.. ಒಪ್ಪಿಸಿದ ಮೇಲೆ ಆ ಮುಗುಳ್ನಗೆ ತುಂಬಿದ ಗೆಳೆತನಕ್ಕೆ ಮತ್ತೆ ಹಸಿರಾಯಿತು.. 

ಹನ್ನೆರಡು ವರ್ಷಗಳ ಗೆಳೆತನಕ್ಕೆ ಏನು ಉಡುಗೊರೆ ಕೊಡೋದು.. ಅಕ್ಕ ಅಲ್ಲ ತಂಗಿ ಅಲ್ಲ ಗೆಳತೀ ಅಲ್ಲ ಬಂಧುವಲ್ಲ.. 

ಆದರೆ ಮಾರ್ಗದರ್ಶಿ, ಗುರು ಈ ಪದಗಳು ಒಪ್ಪುವಂತಹ ಗೆಳತೀ ಇವರು... ಒಂದು ಸಮಸ್ಯೆಯನ್ನು ಇವರ ಮುಂದಿಟ್ಟರೆ ಸಾಕು.. ಅದನ್ನು ಒಪ್ಪವಾಗಿ ಬಿಡಿಸಿ ಹೀಗಲ್ಲ ಶ್ರೀ ಹೀಗೆ ಎಂದು ಹೇಳಿ ತಿಳಿ ಹೇಳುವ ಅದ್ಭುತ ಇವರು.. ಹೀಗೆ ಮಾತಾಡುತ್ತಿದ್ದಾಗ ನೀವು ಏನು ಓದಿರುವುದು ಅಂದಾಗ ಪುಸ್ತಕ ಅಂದರು.. ನಾ ನಕ್ಕು ಅದು ಸರಿ ಆ ಪುಸ್ತಕದ ಮೇಲೆ ಕರ್ನಾಟಕ ಸರ್ಕಾರ ಅದು ಇದು ಅಂತ ಬರೆದಿರುತ್ತಲ್ಲ ಅದರ ಕೆಳಗೆ ಆ ಪುಸ್ತಕದ ವಿಷಯ ಅಂತ ಪ್ರಿಂಟ್ ಮಾಡಿರುತ್ತೆ..ಅದು ಏನು ಅಂದಾಗ .. ಕಾನೂನು ಅಂದರು.. ಅಬ್ಬಬ್ಬಾ ಆಗ ಗೊತ್ತಾಯಿತು.. ಈ ರೀತಿಯ ತರ್ಕಬದ್ಧ ಮಾತುಗಳು ಕಾನೂನು ಪದವೀಧರರರಿಗೆ ಬಿಟ್ಟು ಬೇರೆ ಎಲ್ಲಿ ಹೋಗಲು ಸಾಧ್ಯ ಅಂತ.. 

ಇಂತಹ ಅದ್ಭುತ ಗೆಳೆತನಕ್ಕೆ ಒಂದು ಶುಭಾಶಯ ಹೇಳೋಣ ಅಂತ ಅಂದುಕೊಂಡಾಗ ಮೂಡಿ ಬಂದದ್ದು ಈ ಬರಹ.. 

Saturday, September 7, 2024

ನಿರ್ದೇಶಕರು ಕಟ್ ಕಟ್..

ಮಹೇಂದ್ರಾ.. 

ಮಹೇಂದ್ರ ಬರುತ್ತಾನೆ.. ನಿನ್ನ ವಜ್ರಾಯುಧದಿಂದ ಒಮ್ಮೆ ಅಪ್ಪಳಿಸಿಬಿಡು.

ಆಗದು ಹಿರಣ್ಯ.. 

ಅಗ್ನಿ .. 

ಅಗ್ನಿ ಒಮ್ಮೆ ಈ ಬಾಲಕನನ್ನು ಅಪ್ಪಿಕೊಂಡು ಬಿಡು.. 

ಅಪ್ಪಿಕೊಂಡರೂ ಬಾಲಕನನ್ನು ಸುಡಲಿಲ್ಲ 

ಆನೆಯಿಂದ ತುಳಿಸಿದರು 

ಹಾವು ಬಿಟ್ಟರು 

ಪ್ರಪಾತಕ್ಕೆ ತಳ್ಳಿದರು 

ಊಹೂಂ 

ಏನೂ ಬದಲಾಗಲಿಲ್ಲ.. 

ಕಡೆಗೆ ಸ್ವಗತ "ನಾನಾರು.. ಕಶ್ಯಪಬ್ರಹ್ಮನ ಮಗ.. ದಿತಿ ಗರ್ಭ ಸಂಜಾತ..... "

ಮುಂದಿನ ದೃಶ್ಯ.. 

ಕಯಾದು ನನ್ನ ಮೇಲೆ ಅತಿಶಯ ಪ್ರೀತಿಯಿದೆ ಅಲ್ಲವೇ 

ಹೌದು ಸ್ವಾಮಿ 

ಹಾಗಾದರೆ ತಗೋ.. ವಿಷ 

ನಾ ಕುಡಿಯಲೇ 

ಇಲ್ಲ ನೀನೆ ನಿನ್ನ ಕೈಯಾರೆ ಪ್ರಹ್ಲಾದಕುಮಾರನಿಗೆ ವಿಷ ಪ್ರಾಶನ ಮಾಡಿಸಬೇಕು.. 

ಒಂದಷ್ಟು ಸಂಭಾಷಣೆ.. ಕಡೆಗೆ ಪ್ರಹ್ಲಾದ ವಿಷವನ್ನು ಗಟಗಟ ಕುಡಿದುಬಿಡುತ್ತಾನೆ.. 

ಸ್ವಲ್ಪ ಕ್ಷಣ ಮತ್ತೆ ಮರಳಿ ಅಮ್ಮ ಎಂದು ಕರೆಯುತ್ತಾನೆ.. 

ತಾಯಿ ಕಯಾದುಗೆ ಅಚ್ಚರಿ,ಸ್ ಸಂತಸ ಎಲ್ಲವೂ ಒಮ್ಮೆಲೇ.. 

ವಿಷ ನಿನಗೆ ಏನೂ ಮಾಡಲಿಲ್ಲವೇ ಕಂದ.. 

ಏನೂ ಮಾಡಲಿಲ್ಲ..  ಹತ್ತಾರು ಶುಭಾಶಯ ಪತ್ರಗಳನ್ನು ಬಿಡುವಿಲ್ಲದಿದ್ದರೂ ಬಿಡದೆ ಬರೆದು ಕಳಿಸಿದೆ 

ಲ್ಯಾಮಿನೇಟ್ ಮಾಡಿಸಿದೆ.. ಫ್ರೇಮ್ ಮಾಡಿಸಿದೆ 

ನಾಚಿಕೆಯಿಂದ ಅದನ್ನು ಕಬೋರ್ಡ್ ನಲ್ಲಿ ಬಚ್ಚಿಟ್ಟರು.. 

ಗೃಹಪ್ರವೇಶಕ್ಕೆ ಲ್ಯಾಮಿನೇಟ್ ಮಾಡಿದ ಪ್ರತಿ ಕೊಟ್ಟೆ.. ಊಹೂಂ ಉಪಯೋಗವಾಗಲಿಲ್ಲ 

ಒಮ್ಮೆ ಅವರ ಮನೆಗೆ ಹೋದರು.. ಗೋಡೆ ಗೋಡೆ ಹುಡುಕಿದರೂ ಕಾಣಲಿಲ್ಲ 

ಕಡೆ ಪಕ್ಷ ಮಂದಿಗಳ ಸಹಮತಕ್ಕಾದರೂ, ಆ ಪ್ರೀತಿಗಾದರೂ ಒಪ್ಪುತ್ತಾರೆ ಅಂದುಕೊಂಡೆ.. ಊಹೂಂ ಅವರು ಒಪ್ಪುತ್ತಾರೆ ಅಂತ ನಾ ಅಂದುಕೊಂಡೆ.. ಆದರೆ ನನಗಿಂತ ತಿಳಿಗೇಡಿ ಇನ್ನೊಬ್ಬರಿಲ್ಲ.. 

ಕಯಾದು ಸ್ವಾಮೀ ಏನು ಮಾಡುತ್ತಿದ್ದೀರಾ.. ಚಿ ಉದಯಶಂಕರ್ ಬರೆದ ಸಂಭಾಷಣೆ ಇದಲ್ಲ.. ಏನಾಯಿತು.. ಯಾವುದೋ ಬೇರೆ ಮಾತಾಡುತ್ತಿದ್ದೀರಲ್ಲ.. ಏನೂ ಸಮಾಚಾರ.. ಏನಾಯಿತು.. 

ಹಿರಣ್ಯಕಶಿಪು ಒಮ್ಮೆಲೇ ಗಾಬರಿಯಾಗಿ.. ಅಯ್ಯೋ ತಪ್ಪಾಯಿತಲ್ಲ.. ನನ್ನ ಮೆಚ್ಚಿನ ಅಭಿಮಾನಿ ಶ್ರೀಯ ಅನುಭವ ನನ್ನ ತಲೆಯೊಳಗೆ ಓಡುತ್ತಿತ್ತು.. ಅದೇ ಸಂಭಾಷಣೆ ಹಾಗೆ ಬಾಯಿಗೆ ಬಂತು.. 

ನಿರ್ದೇಶಕರೇ ಕಟ್ ಮಾಡಿ.. ಮತ್ತೊಮ್ಮೆ ಟೇಕ್ ಮಾಡುತ್ತೀನಿ.. 

ಮುಂದಿನ ದೃಶ್ಯ .. ಅಗ್ನಿ ಸುಡದವನನ್ನು, ಸರ್ಪ ಕಚ್ಚದವನನ್ನು, ಆನೆ ತುಳಿದಯವನನ್ನು.. ಕಯಾದು ಕಡೇಪಕ್ಷ ಜನದಣಿಯ ಪೀತಿಗಾಗಿಯಾದರೂ ತಲೆಬಾಗುತ್ತಾರೆ ಅಂದು ಕೊಂಡಿದ್ದೆ.. 

ನಿರ್ದೇಶಕರು ಕಟ್ ಕಟ್.. 

ಅಣ್ಣಾವ್ರೇ ಯಾಕೋ ನಿಮ್ಮ ಗಮನ ಈ ಕಡೆ ಇಲ್ಲ..  ಕೆಲವೊಂದು ವಿಷಯಗಳು ಎಷ್ಟು ಪ್ರಯತ್ನ ಪಟ್ಟರೂ ಆಗೋಲ್ಲ.. ಆ ಪ್ರೀತಿ ವಿಶ್ವಾಸ ಸದಾ ಇರುತ್ತದೆ.. ಆದರೆ ಮುಜುಗರ ಪಟ್ಟುಕೊಂಡು ಸ್ವೀಕರಿಸುವ ಪ್ರಶಸ್ತಿ ಹಿಂಸೆ ಮಾಡುತ್ತೆ.. ಆಗಲಿ ಬಿಡಿ.. ಇವತ್ತು ವಿಶ್ರಾಂತಿ ಮಾಡಿ ನಾಳೆ ಈ ದೃಶ್ಯ ಚಿತ್ರೀಕರಿಸೋಣ.. 

ಆಗಲಿ ನಿರ್ದೇಶಕರೇ.. ಸಾರಿ ಸಾರಿ .. ಮತ್ತೊಮ್ಮೆ ಹೀಗಾಗೋದಿಲ.. ಕ್ಷಮಿಸಿ ಬಿಡಿ. 

ಅಯ್ಯೋ ಅಣ್ಣಾವ್ರೇ ಈ ರೀತಿಯ ಅನೇಕಾನೇಕ ಪಾತ್ರಗಳನ್ನು ಲೀಲಾಜಾಲವಾಗಿ ಮಾಡಿರುವ ನಿಮ್ಮ ಮನಸ್ಥಿತಿ ನನಗೆ ಅರ್ಥವಾಗುತ್ತೆ.. ತೊಂದರೆ ಇಲ್ಲ.. ನಾಳೆ ಮಾಡೋಣ.. 

ಇಂದು ಗಣೇಶನ ಹಬ್ಬ.. ಆ ವಿಘ್ನವಿನಾಶಕ ಸಕಲ ಸಮೃದ್ಧಿಯನ್ನು ನೀಡಲಿ DFR!.... ಶುಭವಾಗಲಿ.. ಜೀವನ್ಮುಖಿಯಾಗಿರುವ ನಿಮಗೆ ಸದಾ ಸಮಾಜಮುಖಿ ಕಾರ್ಯಕ್ರಮದಲ್ಲಿ ತೊಡಗಿಕೊಳ್ಳುವ ನಿಮಗೆ ಶುಭವಾಗಲಿ ಎಂದಷ್ಟೇ ನಾನು ಹಾರೈಸುವುದು DFR.. ಒಳ್ಳೆಯದಾಗಲಿ.. ನಿಮ್ಮ ಪ್ರಯತ್ನಗಳಿಗೆ, ನಿಮ್ಮ ಪರಿಶ್ರಮಗಳಿಗೆ.. ನಿಮ್ಮ ಸಮಾಜಮುಖಿ ಮನಸ್ಸಿಗೆ, ನಿಮ್ಮ ದಣಿವರಿಯದ ಶಕ್ತಿಗೆ ಈ ರಾಜಕುಮಾರ .. ಈ ನಿಮ್ಮ ನೆಚ್ಚಿನ ಅಣ್ಣಾವ್ರು.. ನನ್ನೆಲ್ಲ ಅಭಿಮಾನಿ ದೇವರುಗಳ ಪರವಾಗಿ ನಿಮಗೆ ಸದಾ ಶುಭ ಹಾರೈಸುತ್ತೇನೆ.. ಇದು ಶುಭಾಶೀರ್ವಾದಗಳು DFR!

DFR ಒಮ್ಮೆಲೇ ಗಾಬರಿ ಬಿದ್ದು ಬೆಳಿಗ್ಗೆ ಎದ್ದರು.. ನೋಡಿದರೆ.. ಶ್ರೀ ಮೆಸೇಜ್ ಮೊಬೈಲಿನಲ್ಲಿ ನಗುತಿತ್ತು.. !

Tuesday, May 7, 2024

ಜನುಮದಿನದ ಶುಭಾಶಯಗಳು DFR DFR!

 ​ಹಿರಣ್ಯಕಶಿಪು ಘನಘೋರ ತಪಸ್ಸು ಮಾಡುತ್ತಿದ್ದ.. ಇಡೀ ಭೂಮಂಡಲ, ಉಳಿದ ಲೋಕಗಳು ಆ ತಪದ ತಾಪ ತಡೆಯಲಾಗದೆ ಕಂಪಿಸುತ್ತಿತ್ತು.. ಆ ಕಾವು ಎಲ್ಲರನ್ನೂ ಸುಡುತಿತ್ತು.. ಈ ವರ್ಷದ ಬೆಂಗಳೂರಿನ ಹಾಗೂ ಭಾರತದ ಉಳಿದ ಕಡೆಯಂತೆ ಬಿಸಿಲಿನ ಝಳದಂತೆ ಸುಡುತಿತ್ತು.. 

ಬ್ರಹ್ಮನಿಗೆ ಬೇರೆ ದಾರಿ ಕಾಣಲಿಲ್ಲ.. ಲೋಕಗಳನ್ನು ಈ ಬಾಧೆಯಿಂದ ರಕ್ಷಿಸಲು ಸಂಕಲ್ಪ ಮಾಡಿದ.. ಜೊತೆಗೆ ಸ್ವಲ್ಪ ಹೊತ್ತು ಧ್ಯಾನದಲ್ಲಿ ಕೂತು.. ಹಿರಣ್ಯಕಶಿಪು ಏನೇನು ವರಗಳನ್ನು ಬೇಡಬಹುದು .. ಜೊತೆಗೆ ಆ ವರಗಳು ಸಿಕ್ಕಮೇಲೆ ಹಿರಣ್ಯಕಶಿಪು ಎಲ್ಲಾ ಲೋಕಗಳನ್ನು ಗೋಳಾಡಿಸುವುದು ಮತ್ತು ದೇವತೆಗಳನ್ನು ಪೀಡಿಸುವುದು ಇದನ್ನು ರಕ್ಷಿಸುವುದರ ಬಗ್ಗೆ ಅದೇ ಹೇಳ್ತೀವಲ್ಲ ವೈರಸ್ ಮತ್ತೆ ಅದಕ್ಕೆ ಪ್ರತಿ Anti ವೈರಸ್ ತರಬೇಕಲ್ಲ ಅದಕ್ಕಾಗಿ ಮಹಾಮಹಿಮ ತನ್ನ ಪಿತ ವಿಷ್ಣುವಿನ ಹತ್ತಿರ ಅದಕ್ಕೆ ಉಪಾಯಗಳನ್ನು ತಿಳಿದು ಭೂಲೋಕದ ಕಡೆಗೆ ಹೊರಟಾಗ.. ಸರಸ್ವತಿ ಓಡೋಡಿ ಬಂದು.. ಇದೇನು ಮತ್ತೆ ಹೊರಟಿರಿ.. ಇರಿ ಅಂತ ಹೇಳಿ ಆಕೆ ಒಂದು ಚೀಟಿಯನ್ನು ಕೊಡುತ್ತಾಳೆ.. ಅದನ್ನು ಪಡೆದು ವಿಷಲ್ ಹೊಡೆಯುತ್ತಾ ಭುವಿಗೆ ಬರುವ ಬ್ರಹ್ಮ.. 

"ಮಗು ಹಿರಣ್ಯಕಶಿಪು.. ನಿನಗೇನು ವರ ಬೇಕು ಕೇಳಿಕೊ" ಎಂದಾಗ 

ಹೇ ಸರಸಿಜೋದ್ಭವ ಸರಸಿಜಾಸನ 
ಸರಸತಿಯ ಪ್ರಿಯಕರನೇ ಬ್ರಹ್ಮನೇ 
ಸ್ಮರಣೆ ಮಾತ್ರದಿ ಬಂದು 
ಸಲಹುವ ಹಂಸ ವಾಹನನೇ... 

ಪರಮ ಕರುಣಾಮೂರ್ತಿ 
ಪರಮ ಕರುಣಾಮೂರ್ತಿ 
ನಿನ್ನೀ ಚರಣಕಮಲದಿ ಶಿರವನಿಡುತಲಿ 
ನಿನ್ನೀ ಚರಣಕಮಲದಿ ಶಿರವನಿಡುತಲಿ 
ವರವನೊಂದನು ಬೇಡುವೆನು
ವರವನೊಂದನು ಬೇಡುವೆನು
ಕೃಪೆ ಮಾಡಿ ಹರಸೆನ್ನಾ 
ಕೃಪೆ ಮಾಡಿ ಹರಸೆನ್ನಾ 
ಓ... ಬ್ರಹ್ಮದೇವಾ.. ಓ... ಬ್ರಹ್ಮದೇವಾ.. 

(ಅಣ್ಣಾವ್ರ ಶೈಲಿಯಲ್ಲಿ ಹಾಡಿಕೊಳ್ಳಿ)


ಬ್ರಹ್ಮ ನಸುನಗುತ್ತಾ "ಮಗು ಹಿರಣ್ಯಕಶಿಪು ನಿನಗೇನು ವರಬೇಕು ಕೇಳಿಕೋ" ಅಂತ ಮತ್ತೊಮ್ಮೆ ಹೇಳುತ್ತಾನೆ

ಹಿರಣ್ಯಕಶಿಪು ಅಣ್ಣಾವ್ರ ಶೈಲಿಯಲ್ಲಿ "ಬ್ರಹ್ಮದೇವ ನನ್ನ ಕೋರಿಕೆ ಹಾ.. " ಅನ್ನುವಾಗ ಬ್ರಹ್ಮ ನಾಲ್ಕನೇ ಕೈಯಿಂದ ಸರಸ್ವತಿ ಕೊಟ್ಟ ಚೀಟಿಯನ್ನು ಬೀಳಿಸುತ್ತಾನೆ.. ಅದರಿಂದ ಬೆಳಕೊಂದು ಹೊರಗೆ ಬಂದು ಹಿರಣ್ಯನ ಕಣ್ಣನ್ನು ಕೋರೈಸುತ್ತದೆ.. ಆ ಬೆಳಕನ್ನೇ ನೋಡುತ್ತಾ .. ತಪಸ್ಸು ಮಾಡುವಾಗ ಅರಮನೆಯಿಂದ ತಂದಿದ್ದ ಟ್ರಾಲಿ ಬ್ಯಾಗ್ ನೋಡುತ್ತಾ 

"ಬ್ರಹ್ಮದೇವ.. 
ವಾರದ ಆರಂಭವೇ ಆಗಲಿ 
ವಾರದ ಅಂತ್ಯವೇ ಆಗಲಿ 
ವಾರದ ಮಧ್ಯವೇ ಆಗಲಿ 
ವಾರದ ಒಳಗೆ ಆಗಲಿ 
ನೀನು ಸೃಷ್ಟಿಸಿರುವ ಅಣು ರೇಣು ತೃಣಕಾಷ್ಠಗಳ ಜೊತೆಯಲ್ಲಿ 
ಕಾರಿನಲ್ಲಿನಾಗಲಿ, ಬೈಕಿನಲ್ಲಾಗಲಿ
ರೈಲಿನಲ್ಲಿಯಾಗಲಿ, ವಿಮಾನದಲ್ಲಿಯಾಗಲಿ 
ಕ್ಯಾಬಿನಲ್ಲಾಗಲಿ, ಸೈಕಲ್ಲಿನಾಗಲಿ 
ಅನವರತ ನನ್ನ ಟ್ರಾಲಿ ಬ್ಯಾಗ್ ಸದಾ ಸುತ್ತುತ್ತಿರುವಂತೆ 
ಅನುಗ್ರಹಿಸು ದೇವಾ"

ಈ ಮಾತುಗಳನ್ನು ಕೇಳಿ ಸರಸ್ವತಿ ಹೆಬ್ಬೆರಳು ಮೇಲೆತ್ತಿ ಬ್ರಹ್ಮನ ಮೊಗವನ್ನು ನೋಡಿದಳು.. 

ಹಿರಣ್ಯಕಶಿಪುವಿನ ಮುಖಕ್ಕೆ ವಿರುದ್ಧವಾಗಿದ್ದ ಬ್ರಹ್ಮನ ನಾಲ್ಕನೇ ಮುಖ ಸರಸತಿಯನ್ನು ಕಂಡು ನಕ್ಕಿತು"

ಇತ್ತ ಸ್ವರ್ಗ ಮತ್ತು ಉಳಿದ ಲೋಕಗಳಲ್ಲಿ ಇದ್ದ ದೇವಾನುದೇವತೆಗಳು ಸಂತಸದಿಂದ ಉಫ್ ಒಂದು ಗಂಡಾಂತರದಿಂದ ಪಾರಾದೆವು ಎಂದು ಖುಷಿಪಟ್ಟರು.. 

ಮೇಕ್ ಮೈ ಟ್ರಿಪ್, ಯುಲೂ, ಉಬರ್, ಓಲಾ, ಕೆ ಎಸ್ ಆರ್ ಟಿ ಸಿ, ಇಂಡಿಯನ್ ರೈಲ್ವೆ, ಜೆಟ್ ಏರ್ವೇಸ್, ಇಂಡಿಯನ್ ಏರ್ಲೈನ್, ಹೀಗೆ ಹತ್ತಾರು ವಿಮಾನಯಾನದ ಕಂಪನಿಗಳು ತನ್ನ ಸಿಬ್ಬಂಧಿಗಳಿಗೆ ಮೂರು ತಿಂಗಳ ಬೋನಸ್ ಘೋಷಿಸಿತು.. 

ಕಾರಣ ಟ್ರಾಲಿ ಬ್ಯಾಗನ್ನೇ ಅಸ್ತ್ರವಾಗಿಟ್ಟುಕೊಂಡಿರುವ DFR DFR ನಾರದರಂತೆ ಲೋಕವೆಲ್ಲಾ ಸಂಚಾರ ಮಾಡಲು ಸಿದ್ಧವಾಗಿದ್ದರು.. 

DFR DFR ಅದ್ಭುತ ಪಯಣಿಗರು ನೀವು.. 
ನಿಮ್ಮ ಜನುಮದಿನಕ್ಕೆ ಇದಕ್ಕಿಂತ ಇನ್ನೇನು ಬರೆಯಲಿ.. ಪದಗಳು ಸಿಗುತ್ತಿಲ್ಲ.. 
ಅಣ್ಣಾವ್ರ ಕೋರಿಕೆಯಂತೆ ಭೂಮಂಡಲವನ್ನೆಲ್ಲಾ ಸುತ್ತುತ್ತಾ ಆಗಲೇ ಎಲ್ಲರ ಮನಗೆದ್ದಿರುವ ನೀವು ಇನ್ನಷ್ಟು ಪ್ರಸಿದ್ಧಿಯಾಗಿ.. ! ಸದಾ ಯಶೋವಂತೆ, ಕೀರ್ತಿವಂತೆಯಾಗಿ!!!


ಜನುಮದಿನದ ಶುಭಾಶಯಗಳು DFR DFR!

Sunday, October 24, 2021

CBM....Nice story!!!

ಅಂಗಡಿಯವ ತಲೆ ಮೇಲೆ ಕೈ ಹೊತ್ತು ಕೂತಿದ್ದ.. ಯಾರಿಗೂ ಅಂಗಡಿಗೆ ಬಂದಿದ್ದವ ಕೇಳಿದ ಉಪಕರಣ ಸಿಗುತ್ತಿರಲಿಲ್ಲ.. ಇಡೀ ನಗರಕ್ಕೆ ಹೆಸರುವಾಸಿಯಾಗಿದ್ದ ಇಲೆಕ್ಟ್ರಾನಿಕ್ ಉಪಕರಣದ ಅಂಗಡಿಯದು.. ಅಂಗಡಿಯೆನ್ನೋದು ತುಂಬಾ ಚಿಕ್ಕ ಮಾತು.. ಸೂಪರ್ ಶಾಪ್ ಅನ್ನೋಣವೇ.. ಹೌದು ಇದು ಸರಿಯಾದ ಶಬ್ದ.. 

ಅಂಗಡಿಯಲ್ಲಿದ್ದ ಸಾರಿ ಸೂಪರ್ ಶಾಪಿನಲ್ಲಿದ್ದ ಉಪಕರಣಗಳನ್ನೆಲ್ಲ ಒಂದೊದಾಗಿ ತೋರಿಸಿದರೂ ಬಂದಿದ್ದ ವ್ಯಕ್ತಿ ತಲೆಯಾಡಿಸುತ್ತಲೇ ತನ್ನ ನಕಾರಾತ್ಮಕ ಉತ್ತರ  ಕೊಡುತ್ತಿದ್ದ.. 

ಸರ್ ನಿಮಗೆ ಯಾವ ಉಪಕರಣ ಬೇಕು ಅದರ ಚಿತ್ರ, ಮಾಹಿತಿ, ಇಲ್ಲವೇ ಗೂಗಲ್ ಕೊಂಡಿ ಇದ್ದರೇ ಕೊಡಿ ಸರ್.. ನಮ್ಮ ನೆಟ್ವರ್ಕ್ ದೊಡ್ಡದಿದೆ.. ನಮ್ಮ ಸಹೋದರ ಸಂಸ್ಥೆಯಲ್ಲಿಯೋ, ನಮ್ಮ ಗೆಳೆಯರ ಅಂಗಡಿಯಲ್ಲೋ.. ಹೇಗಾದರೂ ಕೊಡಿಸುತ್ತೇವೆ.. ಆದರೆ ಕೊಂಚ ಸಮಯಬೇಕು ಅಂದರೆ ಒಂದಷ್ಟು ದಿನ ಬೇಕು.. 

"ಸರ್ ನಾ ಕೇಳುತ್ತಿರುವ ಉಪಕರಣ ತುಂಬಾ ಉಪಯೋಗವಾದದ್ದು ಸರ್.. ಬಲು ಶಾರ್ಪ್ ಅದು.. ಖಂಡಿತ ಇದು ಎಲ್ಲೆಡೆ ಸಿಗುವುದಲ್ಲ.. ಆದರೆ.. ನಿಮ್ಮ ಶಾಪ್ ಈ ನಗರದಲ್ಲಿಯೇ ವರ್ಲ್ಡ್ ಫೇಮಸ್.. ಹಾಗಾಗಿ ನಿಮ್ಮ ಕಡೆ ಇರಲೇಬೇಕು.. "

"ನಿಮ್ಮ ಮಾತು ಖರೆ ಅದಾ ಸ್ವಾಮೀ.. ಆದರೆ ನಾವು ನೋಡಿಲ್ಲವಲ್ಲ.. ನನಗೆ ಬುದ್ದಿ ಬಂದಾಗಿನಿಂದ ಈ ದುಖಾನ್ ನೋಡ್ಕೋತ್ತಾ ಇದ್ದೀನಿ... ಈ ರೀತಿಯ ಉಪಕರಣ ಕೇಳಿಕೊಂಡು ಯಾರೂ ಬಂದಿಲ್ಲ.. ಹಾ ಒಂದು ನಿಮಿಷ ಇರಿ.. ನನ್ನ ಅಪ್ಪ ಮತ್ತು ನನ್ನ ತಾತನನ್ನು ಒಮ್ಮೆ ಕೇಳುತ್ತೇನೆ.. ನೀವು ನಮ್ಮ ಶಾಪಿಗೆ ಯಾವಾಗಲೂ ಬರುವವರು.. ನಿಮಗೆ ಇಲ್ಲ ಎನ್ನೊಕೆ ಮನಸಿಲ್ಲ.. ಖಂಡಿತ ಇರಿ.. ಏನಾದರೂ ಮಾಡೋಣ.. .. ಅರೆ ಚೋಟು ಸಾಹೇಬ್ರಿಗೆ ಒಂದು ಜ್ಯೂಸ್ ತಂದುಕೊಂಡು.. ಸರ್.. ನೀವು ಜ್ಯೂಸ್ ಕುಡಿದು.. ಸ್ವಲ್ಪ ವಿರಮಿಸಿಕೊಳ್ಳಿ.. ಒಂದು ಹದಿನೈದು ನಿಮಿಷ ಏನಾದರೂ ದಾರಿ ಹುಡುಕೋಣ.. "

ಬಿಸಿಲಲ್ಲಿ ಬಂದು ತಲೆ ನೋಯುತ್ತಿತ್ತು.. "ಸರ್ ಆಗಲಿ.. ಜ್ಯೂಸ್ ಬೇಡಾ ಒಂದು ಸ್ಟ್ರಾಂಗ್ ಕಾಫೀ ತರಿಸಿ.. ಈ ಕುರ್ಚಿಯಲ್ಲಿ ಹಾಗೆ ವಿಶ್ರಮಿಸಿಕೊಳ್ಳುತ್ತೇನೆ"

ಬಿಸಿ ಬಿಸಿ ಕಾಫೀ.. ತಲೆ ನೋವಿನಾ ಮಾತ್ರೆ.. ಹೊಟ್ಟೆಗೆ ಹೋದ ಮೇಲೆ ಸ್ವಲ್ಪ ಆರಾಮೆನಿಸಿತು.. ಮೇಲೆ ಮೆಲ್ಲಗೆ ತಿರುಗುತ್ತಿದ್ದ ಫ್ಯಾನ್.. ಮಲೆನಾಡಿನ ಕಡೆಯಾಗಿದ್ದರಿಂದ.. ಇವರ ಶಾಪಿನ ಸುತ್ತಾ ಹಸಿರು ಸಿರಿ ಹಾಸಿತ್ತು... ಬೆಟ್ಟ ಗುಡ್ಡಗಳ ತಣ್ಣನೆ ಗಾಳಿಗೆ ಹಾಗೆ ನಿದ್ದೆ ಬಂದಿತ್ತು.. 

"ಶ್ರೀ ಶ್ರೀ.. ಏಳಿ ಇದೇನು ಇಲ್ಲಿ ನಿದ್ದೆ ಹೊಡೀತಾ ಇದ್ದೀರಾ.. ?"

ಚಿತ್ರಪರಿಚಿತ ಧ್ವನಿ.. ಕಣ್ಣು ಬಿಟ್ಟಾಗ ಎದುರಲ್ಲಿ DFR .. 

"ಅರೆ DFR ನೀವೇನು ಇಲ್ಲಿ.. ?"

"ಶ್ರೀ .. ಇವರು ಕರೆ ಮಾಡಿ ಬರೋಕೆ ಹೇಳಿದರು.. "

"ಅರೆ ಸಾಹೇಬ್ರೆ.. ಇವರನ್ಯಾಕೆ ಕರೆದಿರಿ.. "

"ಸರ್ ನೀವು ಕೇಳಿದ ಉಪಕರಣ ಇವರಿಗೆ ಗೊತ್ತು ಅಂತ ನಮ್ಮ ತಂದೆ ಹೇಳಿದರು... . ಅದಕ್ಕೆ ಇವರಿಗೆ ಬರೋಕೆ ಹೇಳಿದ್ವಿ.. ಮೇಡಂ.. ಈ ವಯ್ಯಾ.. ಬೆಳಿಗ್ಗೆ ಇಂದ ತಲೆ ತಿಂತಾ ಐತೆ.. ಅದೇನು ಬೇಕು ಕೇಳಿ.. ನಂಗೂ ಸಾಕಾಗೈತೆ.. ಈ ಕೊರೋನಾ ದೆಸೆಯಿಂದ ಇರಲಿಲ್ಲ.. ಈಗ ಚಿಗುರುತ್ತಾ ಇದೆ.. ಗಿರಾಕಿಗಳು ಬಂದು ನಿಂತವ್ರೆ.. ಅವರನ್ನು ಅಟೆಂಡ್ ಮಾಡೋಣ ಅಂದ್ರೆ ಈ ವಯ್ಯಾ ಬಿಡ್ತಾ ಇಲ್ಲ.. ಅದೇನು ಕೇಳಿ ಮೇಡಂ.. ಏ ಚೋಟು ರೂಪ ಮೇಡಂಗೆ ಒಂದು ಸ್ಟ್ರಾಂಗ್ ಕಾಫೀ.. ಮತ್ತೆ ಒಂದು ಡೈರಿ ಮಿಲ್ಕ್ ಚಾಕೊಲೇಟ್ ಬಾರ್ ತಾ.. ಮೇಡಂ ಪ್ಲೀಸ್.. ಬೇಗ ಹೇಳಿ.. " ಎನ್ನುತ್ತಾ ಬೇರೆಯವರನ್ನು ಅಟೆಂಡ್ ಮಾಡೋಕೆ ಹೋದರು.. 

"ಶ್ರೀ.. ಒಂದು ನಿಮಿಷ ಇರಿ.. " ಎಂದು ಹೇಳುತ್ತಾ.. ಯಾರಿಗೋ ಕರೆ ಮಾಡಿದರು.. ನಂತರ ಕರೆ ಮಾಡಿದವರಿಗೆ ಗೂಗಲ್ ನಕ್ಷೆ ಕೂಡ ಕಳಿಸಿದರು.. ಬರೋಕೆ ಸುಲಭ ಆಗಲಿ ಎಂದು.. 

ಬರಿಯ ಏನೂ ಕೆಲಸ ಇಲ್ಲದ್ದರಿಂದ.. ಸುಮ್ಮನೆ ಕಾಲ ಕಳೆಯೋದು ಕಷ್ಟವಾಗಿತ್ತು.. ಶಾಪಿನಲ್ಲಿದ್ದ ಉಪಕರಣಗಳನ್ನು ನೋಡುತ್ತಾ ಸಮಯವನ್ನು ಓಡಿಸಿದರು.. . 

೧೨೦೦ ಸೆಕೆಂಡುಗಳು ಆದವು.. .. ಒಂದು ಆಕ್ಟಿವಾ ಬೈಕ್ ಶಾಪಿನ ಮುಂದೆ ನಿಂತಿತು.. DFR ಮೊಗವರಳಿತು.. "ಅರೆ ನಿವ್ಸ್.. ಸೂಪರ್ ಸರಿಯಾಗಿ ಬಂದಿದ್ದೀರಾ.. ದಾರಿ ಮಿಸ್ ಆಗ್ಲಿಲ್ಲ ತಾನೇ.. ?"

"ರೂಪಕ್ಕ ನೀವು ಕಳಿಸಿದ ನಕ್ಷೆ ಸೀದಾ ಇಲ್ಲಿಗೆ ಕರೆ ತಂದಿತು.. ದಿಕ್ಕು ಸರಿಯಾಗಿ ಸಿಕ್ಕಿದೆ ಈ ನಕ್ಷೆಯಿಂದ..  ಏನು ರೂಪಕ್ಕ ಬರೋಕೆ ಹೇಳಿದ್ದು.. ?"

"ನೋಡಿ ನಿವ್ಸ್ .. ಆ ಕಡೆ ನೋಡಿ"

"ಅರೆ ಶ್ರೀ.. ನೀವು ಇಲ್ಲಿ ಏನು ಸಮಾಚಾರ.....ಏನಿದು ರೂಪಕ್ಕ"

"ನಿವ್ಸ್ ... ಸೋಲ್ ಗೆಳೆಯರಾಗಿರುವ ನಾವು ಒಂದೇ ಮನೆಯಲ್ಲಿ ಹುಟ್ಟಲಿಲ್ಲ.. ಆದರೆ ಒಂದೇ ಮನಸ್ಸು ನಮ್ಮ ಮೂವರದ್ದು.. ನಾವು ನಮ್ಮ ಕೆಲಸಗಳಲ್ಲಿ ಬ್ಯುಸಿ.. ಕೊರೋನಾ ಗಲಾಟೆ.. ಭೇಟಿ ಮಾಡೋಕೆ ಆಗಿರಲಿಲ್ಲ.. ಅದಕ್ಕೆ ಶ್ರೀ ಈ ಉಪಾಯ ಮಾಡಿಯೇ ಮೂವರನ್ನು ಸೇರಿಸಿದ್ದಾರೆ.. "

"ಓಹ್ ಶ್ರೀ.. ಇದು ನಿಮ್ಮ ಪ್ಲಾನ್ ಆ ಆ ಆ.. ಈ ರೀತಿಯ ತರಲೆ ಐಡಿಯಗಳು ನಿಮ್ಮ ತಲೆಗೆ ಮಾತ್ರ ಬರೋದು.. ಆದರೂ ಬಂದಿದ್ದು.. ನಿಮ್ಮನ್ನೆಲ್ಲಾ ಭೇಟಿ ಮಾಡಿದ್ದು ಖುಷಿಯಾಯಿತು.. "

ಶ್ರೀ ಮೊಗದಲ್ಲಿ ನಗು ಬಂದಿದ್ದು.. ಸಂತಸ ಮೂಡಿದ್ದು ಕಂಡಿದ್ದೆ.. ಅಂಗಡಿಯವ ಓಡೋಡಿ ಬಂದು.. "ಸರ್ ನಿಮಗೆ ಬೇಕಾದ ಉಪಕಾರ ಸಿಕ್ತಾ.. ಏ ಚೋಟು.. ಬೇಗ ಬಿಲ್ ಮಾಡ್ಲೆ.. ಈ ವಯ್ಯನನ್ನು ಹೊರಗೆ ಕಳಿಸಿದರೆ ಸಾಕು.. .. ಇಷ್ಟು ಹೊತ್ತಿಗೆ ಹತ್ತು ಕಸ್ಟಮರ್ಸ್ ಆರ್ಡರುಗಳನ್ನು ಪಾರ್ಸೆಲ್ ಮಾಡಬಹುದಿತ್ತು.. " ತಲೆ ಕೆರೆದುಕೊಂಡು ಮತ್ತೆ ಮಾರ್ವಾಡಿ ಟೋಪಿ ಹಾಕಿಕೊಂಡು ದೇವರ ಕಡೆ ನೋಡಿ ಕೈ ಮುಗಿದ.. 

"ಸರ್... ಕೇಳಿದ ಉಪಕರಣ ಇವರೇ.. ನಿವೇದಿತ ಚಿರಂತನ್ ... ಒಂದು ವಾಕ್ಯದಲ್ಲಿ ದೊಡ್ಡಕ್ಷರ, ಸಣ್ಣಕ್ಷರ, ಅಲ್ಪ ವಿರಾಮ, ದೀರ್ಘ ವಿರಾಮ, ಆಶ್ಚರ್ಯಕರ ಚಿನ್ಹೆ, ಪ್ರಶ್ನಾರ್ಥಕ ಚಿನ್ಹೆ.. ಒಂದು ಪದ ಮತ್ತೊಂದು ಪದಗಳ ನಡುವೆ ಕೊಂಚ ಜಾಗ ಕೊಟ್ಟಿದ್ದರೂ ಕೂಡ.. ಸಂದೇಶ ಕಳಿಸಿದವರ ಮನಸ್ಥಿತಿ ಅರಿಯುವ ಈ ರೀತಿಯ ಉಪಕರಣ ನಿಮ್ಮಲ್ಲಿದೆಯೇ.. ಇರಬಹುದು ಎನ್ನುವ ಒಂದು ಕುತೂಹಲ ನನಗೆ ಕಾಡಿತ್ತು. .ಹಾಗಾಗಿ ನಿಮಗೆ ತೊಂದರೆ ಕೊಡಬೇಕಾಯಿತು.. "

"ಸರ್.. ನೀವೊಳ್ಳೆ ಪ್ರಾಣಿ.. ಇದು ದೇವರು ಕಳಿಸಿರುವ ಉಪಕರಣ ಸರ್.. ಆ ದೇವರು ಈ ವಮ್ಮನ ತಲೆಯೊಳಗೆ ಎಲ್ಲಾ ಉಪಕರಣಗಳ ಮಾಹಿತಿಗಳನ್ನು ತುಂಬಿ ಕಳಿಸಿದ್ದಾನೆ.. ಅದಕ್ಕೆ ಈ ವಮ್ಮ ಡಬಲ್ ಡಿಗ್ರಿ ಮಾಡಿರೋದು.. .. ಆದರೂ ಈ ರೀತಿಯ ಉಪಕರಣ ಇದ್ದಿದ್ದರೆ ಈ ಜಗತ್ತು ಎಷ್ಟು ಪ್ರಶಾಂತತೆಯಿಂದ ಕೂಡಿರುತ್ತಿತ್ತು.. ಆಗಲಿ.. ಇಂತಹ ಒಬ್ಬರು ನಿಮ್ಮ ಸೋಲ್ ಗೆಳೆತನದಲ್ಲಿರೋದು ಬಹಳ ಖುಷಿ ತರುವ ವಿಚಾರ.. ದಯವಿಟ್ಟು ತಪ್ಪು ತಿಳಿಯಬೇಡಿ.. ನನಗೂ ನಿಮ್ಮ ಕೋರಿಕೆಯಿಂದ ಕೋಪ ಬಂದಿತ್ತು.. ಹಾಗಾಗಿ ಸ್ವಲ್ಪ ಕೊಂಚ ಖಾರವಾಗಿ ವಯ್ಯಾ ಅಂತೆಲ್ಲ ಹೇಳಿಬಿಟ್ಟೆ.. "

"ಇರಲಿ ಸರ್... ಪರವಾಗಿಲ್ಲ.. ಕೋಪ ಬರೋದೇ ಇಲ್ಲ ನನಗೆ.. ಆದರೆ ನಿಮ್ಮನ್ನು ಗೋಳು ಹುಯ್ಕೊಂಡಿದ್ದು ಖುಷಿ ಕೊಟ್ಟಿತು.. ಆ ರೀತಿಯ ಉಪಕರಣ ಸಿಕ್ಕಿದ್ದಿದ್ದರೆ.. ಇರಲಿ ಬಿಡಿ.. "

"ಶ್ರೀ ನಿಮ್ಮ ಮಹಾಭಾರತ ಸಾಕು.. ಅರೆ ಚೋಟು.. ಮೆಲ್ಲಗೆ ಆ ಕೇಕು ತಗಂಡು ಬಾ.. ನಿವ್ಸ್ ಬನ್ನಿ ಈ ಕಡೆ.. ಕೇಕ್ ಕಟ್ ಮಾಡಿ.. ಜನುಮದಿನ ಆಚರಿಸೋಣ.."

ಕೇಕು ನೋಡಿ ನಿವೇದಿತಾ ಅವರಿಗೆ ಖುಷಿ ಆಯಿತು.. ಕೇಕಿನ ಮೇಲೆ "ನಿವಿಯಸ್ ಆರ್ಟ್ಸ್"  ಅಂತಿತ್ತು.. 

DFR ಉವಾಚ.. "ನಿವ್ಸ್ ಜನುಮದಿನದ ಶುಭಾಶಯಗಳು"

ಅಂಗಡಿಯವ "ಮೇಡಂ ಜನುಮದಿನದ ಶುಭಾಶಯಗಳು"

ಶ್ರೀ ... ಸಿಬಿ ಜನುಮದಿನದ ಶುಭಾಶಯಗಳು.. !

Tuesday, April 13, 2021

ಸೀಮಾವಲೋಕನ .....!

ಅಣ್ಣಾವ್ರ ಕವಿರತ್ನ ಕಾಳಿದಾಸ ಚಿತ್ರವನ್ನು ನೋಡುತ್ತಿದ್ದೆ... 

"ನೋಡಿದ ಆ ಆ  ಕ್ಷಣದಲಿ ನಿಂತೇ ನೀ ಕಣ್ಣಲ್ಲಿ" ಸಾಲುಗಳು ಹಾಗೆ ಮನಸೆಳೆದಿತ್ತು.. ಮನಸ್ಸು ಹಾಗೆ ಹಿಂದಕ್ಕೆ ಜಾರಿತ್ತು.. 

ಅಂತರ್ಜಾಲ ಕೆಟ್ಟದು.. ಅದು ಇದು.. ಅಂತ ನೂರೆಂಟು ಬೇಡದ ಕಾರಣಗಳನ್ನು ನೂರಾರು ಮಂದಿ ಹೇಳಿದ್ದರು.. ನಾ ತಲೆ ಕೆಡಿಸಿಕೊಂಡಿಲ್ಲ.. ನನಗೆ ಅಂತರ್ಜಾಲ ನೂರಾರು ಸುಮಧುರ ಮನದ ಗೆಳೆಯರನನ್ನು ಕೊಟ್ಟಿದೆ.. 

ಬದುಕು ಕವಲು ದಾರಿಗೆ ಹೊರಳಿದಾಗ.. ಸಿಕ್ಕ ಅದ್ಭುತ ಗೆಳತೀ ಇವಳು.. ಹೆಸರಿಗೆ ಸೀಮಾ.. ಆದರೆ ಇವಳ ಪ್ರೀತಿಗೆ ಸೀಮೆಯೆ ಇಲ್ಲ.. ಪುಟ್ಟ ಹಾಯ್ ಇಂದ ಶುರುವಾದ ಪರಿಚಯ. ಮನದ ಒಡತಿಯಾಗಿ ಬರುವ ತನಕ ಹಾದು ಬಂತು.. 

ಆ ಪುಟ್ಟ ಹೃದಯದೊಳಗೆ ಸಾಗರದಷ್ಟು ಪ್ರೀತಿ ತುಂಬಿಕೊಂಡಿರುವ ಸೀಮಾ.. ಸದಾ ನೆಟ್ವರ್ಕ್ ಸಿಗುವ ಮೊಬೈಲ್ ತರಹ.. ನನ್ನ ಜೊತೆಯಲ್ಲಿ ನನ್ನ ನೆರಳಾಗಿ ನಿಂತಿದ್ದಾಳೆ.. 

                                                                                  ****

"ಶ್ರೀ.. ನಿಮ್ಮ ನೆಚ್ಚಿನ ಅಣ್ಣಾವ್ರ ಶೈಲಿಯಲ್ಲಿ ಯಾವುದಾದರೂ ಒಂದು ಸಿನೆಮಾವನ್ನು ಸಮೀಕರಿಸಿ ಏನಾದರೂ ಬರೆಯಿರಿ"

"ಸೀಮು.. ಅದೆಂಗೋ.. ಗೊತ್ತಾಗ್ತಾ ಇಲ್ಲ.."

"ಶ್ರೀ.. ಅದೆಲ್ಲ ಹರಿಕತೆ ಬೇಡ.. ನನ್ನ ಮೇಲೆ ಪ್ರೀತಿ ಇದ್ದರೇ.. ನಿಮ್ಮ ನೆಚ್ಚಿನ ರಾಜಕುಮಾರ್ ಸಿನಿಮಾದ ಬಗ್ಗೆ ಬರೆದು ಹೇಳಿ.. ಅಷ್ಟೇ.. " ತುಸು ಮುನಿಸಿನಿಂದ ಹೇಳಿದಳು.. 

" ಅಣ್ಣಾವ್ರೇ ಇದೊಳ್ಳೆ ಪರೀಕ್ಷೆ ಆಯ್ತಲ್ಲ.. ನೀವೇ ನನ್ನ ಕಾಪಾಡಬೇಕು.. "

ದೇಹದೊಳಗೆ ಏನೋ ಒಂದು ಶಕ್ತಿ ಹೋದ ಅನುಭವ.. ಕೈಗಳು ತಂತಾನೇ ಕೀ ಬೋರ್ಡಿನ ಮೇಲೆ ಹರಿದಾದ ತೊಡಗಿತು.. ಅದರ ಫಲವೇ ಈ ಬರಹ.. !

                                                                                  ****

ಶ್ರುತಿ ಸೇರಿದಾಗ ಸಿನಿಮಾದಲ್ಲಿ ಧರ್ಮಸ್ಥಳದಲ್ಲಿ ಹಾಡುತ್ತಿದ್ದ ಗೀತಾಳನ್ನು ನೋಡಿ ಹಾಡಿಗೆ ಮನಸೋಲುತ್ತಾರೆ.. 

ಅಂತರ್ಜಾಲದಲ್ಲಿ ಸೀಮಾಳನ್ನು ಕಂಡು.. ಅವಳ ಮುಗ್ಧ ಮನಸ್ಸಿಗೆ ಮನ ಸೋಲುತ್ತಾನೆ ಶ್ರೀ.. 

ಕಾರಣಾಂತರಗಳಿಂದ ಗೀತಾ ರಾಜಕುಮಾರ್ ಮನೆಗೆ ಬರುವ ಹಾಗೆ ಆಗುತ್ತದೆ.. 

ಸೀಮಾಳ ಜೊತೆ ಮಾತಾಡುತ್ತ ಮಾತಾಡುತ್ತಾ ತನ್ನ ಮನೆಗೆ ಒಮ್ಮೆ ಬರಲು ಹೇಳುತ್ತಾನೆ.. . 

ಜಾತಕ ಅದು ಇದು ಅಂತ ರಾಜಕುಮಾರ್ ಮನಸ್ಸಿಗೆ ಘಾಸಿಯಾಗಿರುತ್ತದೆ.. 

ವಿಧಿಯ ಆಟದಲ್ಲಿ ಶ್ರೀ ಬದುಕು ಕವಲು ಕಂಡಿರುತ್ತದೆ.. 

ಸುಂದರ ಚಂದದ ಗೀತಾ ರಾಜಕುಮಾರ್ ಮನೆ ಮನವನ್ನು ಆವರಿಸಿಕೊಂಡು.. ರಾಜ್ ಕುಮಾರ್ ಬದುಕನ್ನು ಚಂದ ಮಾಡುತ್ತಾರೆ. 

ಈ ಮುದ್ದು ಸೀಮೂ ಕೂಡ ಹಾಗೆ ಮುರಿದಿದ್ದ ಶ್ರೀ ಬದುಕನ್ನು ಮತ್ತೆ ಎತ್ತಿ ಕಟ್ಟಿ ನಿಲ್ಲಿಸಲು ಶ್ರೀ ಯ ಹೆಗಲಿಗೆ ಹೆಗಲು ಕೊಟ್ಟು ನಿಂತಿದ್ದಾರೆ.. 

ಆಹಾ ಸೂಪರ್ ಸೂಪರ್ ಶ್ರೀ
 

                                                                                  ****

ಶ್ರೀ ಗೀತಾಳನ್ನು ನನ್ನನ್ನು ಸಮೀಕರಿಸಿ ಹೇಳಿ.. 

ಏನೋ ಇದು ಸೀಮು ಇಷ್ಟೊಂದು ಪರೀಕ್ಷೆ.. 

ಹೇ ಬರೀರಿ ಶ್ರೀ.. 

                                                                                  ****

ಗೀತಾಳ ಮುಖ ಪುಟ್ಟದು.. 
ಸೀಮಾಳ ಮುಖ ಪುಟ್ಟದು 

ಗೀತಾಳ ಕಣ್ಣುಗಳು ಸುಂದರ 
ಸೀಮಾಳ ಕಣ್ಣುಗಳು ಸುಂದರ 

ಗೀತಾ ಪುಟ್ಟ ನಾಸಿಕ ನೋಡಲು ಚಂದ 
ಸೀಮಾಳ ಪುಟ್ಟ ನಾಸಿಕ ಅಂದ 

ಗೀತಾಳ ಎತ್ತರದ ನಿಲುವು ಆಕರ್ಷಕ 
ಸೀಮಾಳ ಪುಟ್ಟ ಗೌರಿಯ ಅಂದ ಚಂದ 

ಶ್ರುತಿ ಸೇರಿದಾಗ ಚಿತ್ರದಲ್ಲಿ ರಾಜ್ ಕುಮಾರ್ ಪಾತ್ರದ ಮೇಲೆ ಅಪರಿಮಿತ ಪ್ರೀತಿ 
ಶ್ರೀ ಬದುಕಿಗೆ ಶ್ರುತಿ ಸೇರಿಸಿದ ಸೀಮಾಳ ಪ್ರೀತಿ ಕೂಡ ಅಪರಿಮಿತ.. 

ಗೀತ್ ... ಸೀಮು 


                                                                        ****

ತುಂಹೇ ಕೊಯಿ ಔರ್ ದೇಖೇ ತೋ ಜಲ್ ತಾ ಹೇ ದಿಲ್ 
ಬಡಿ ಮುಷ್ಕಿಲೋ ಸೆ ಸಂಬಲ್ ತಾ ಹೇ ದಿಲ್ 
ಕ್ಯಾ ಕ್ಯಾ ಜತನ್ ಕರತೇ ಹೇ ತುಂಹೆ ಕ್ಯಾ ಪತಾ 
ಹಮೇ ತುಮ್ ಸೆ ಪ್ಯಾರ್ ಕಿತ್ನಾ 
ಎ ಹಮ್ ನಹೀ ಜಾನ್ ತೇ
ಮಗರ್ ಜೀ ನಹಿ ಸಕ್ತೆ ತುಮ್ಹಾರೇ ಬಿನಾ... !

ಪುಟ್ಟ ಹೃದಯದಲ್ಲಿ ಕಡಲಾಳದಷ್ಟು ಪ್ರೀತಿ ಬಚ್ಚಿಟ್ಟುಕೊಂಡಿರುವ ಸೀಮು ಜನುಮದಿನದ ಶುಭಾಶಯಗಳು!!!!


Tuesday, January 19, 2021

ದೇವರು ನಕ್ಕೆ ನಗುತ್ತಾನೆ - ೬

"ಏನೋ ಶ್ರೀ ನನಗೆ ನಗೋಕೆ ಅವಕಾಶನೇ ಕೊಡ್ತಾ ಇಲ್ಲ.. ನಗೋದು ಮರೆತು ಬಿಟ್ಟೆಯ.. ಅಥವ ಜೀವನದ ಜಂಜಾಟ ನಗೋದನ್ನು ಮರೆಸಿ ಬಿಟ್ಟಿದೆಯಾ. "

ಕಣ್ಣು ಬಿಟ್ಟೆ.. ತೇಜೋಮಯನಾದ ಆ ಮಹಾಮಹಿಮ ಕಣ್ಣ ಮುಂದೆ ನಿಂತಿದ್ದ..  ಒಮ್ಮೆ ಕೊಳಲು ಕಂಡರೆ.. ಇನ್ನೊಮ್ಮೆ ಸೊಂಡಿಲು ಕಾಣೋದು.. ಇನ್ನೊಮ್ಮೆ ನಾಲ್ಕು ತಲೆ ಕಾಣೋದು.. ಹೀಗೆ ಬಗೆ ಬಗೆ ರೂಪದಲ್ಲಿ ಕಾಣುವ ಆ ಮಹಾಮಹಿಮ ದರ್ಶನ ಮಾಡಿ ಸಂತುಷ್ಟನಾಗಿ.... ಮೆಲ್ಲಗೆ ಕಣ್ಣು ಮುಚ್ಚಿದೆ.. ಕಣ್ಣು ತುಂಬಿ ಬಂದಿತ್ತು.. ಅರೆ ಹೌದಲ್ವಾ ಈ ದೇವರು ನಗುತ್ತಾನೆ ಅಂಕಣವನ್ನು ಮುಂದುವರೆಸಲು ಆಗಲೇ ಇಲ್ಲವಲ್ಲ.. ಸರಿ ಒಂದು ಲೇಖನ ಬರೆದೆ ಬಿಡೋಣ ಅಂತ ಇವತ್ತು ಆಫೀಸಿನಿಂದ ಬಂದ ಕೂಡಲೇ ಹಠ ತೊಟ್ಟಂತೆ ಕೂತೆ ಬಿಟ್ಟೆ.. ಪರಿಣಾಮ ಈ ಲೇಖನ.... !

                                                                        *****

ಆಫೀಸಿನಲ್ಲಿ ಸರಸರ ಕೆಲಸ ಸಾಗುತ್ತಿತ್ತು.. "ತುಲಾಮಾಸೇತು ಕಾವೇರಿ" ನನ್ನ ಮೊಬೈಲ್ ಶ್ರೀ ನನ್ನ ಎತ್ತಿಕೊಳ್ಳೋ ಅಂತ ಕೂಗತೊಡಗಿತು.. ಸರಿ ಏನಪ್ಪಾ ಸಮಾಚಾರ ಅಂತ ಕರೆ ಸ್ವೀಕರಿಸಿ "ಹಲೋ" ಅಂದೇ.. 

"ಸರ್ ಶ್ರೀಕಾಂತ್ ಮಂಜುನಾಥ್ ಆಲ್ವಾ ಮಾತಾಡ್ತಾ ಇರೋದು"

"ಹೌದು ಮೇಡಂ"

"ಸರ್.. ನಮ್ಮದು ಇನ್ಶೂರೆನ್ಸ್ ಕಂಪನಿ ಇಂದ ಕರೆ... ಈ ವರ್ಷದ ತೆರಿಗೆ ಉಳಿಸೋಕೆ ಒಂದು ಉತ್ತಮ ಉಳಿತಾಯ ಯೋಜನೆ ಇದೆ.. ಅದರ ಬಗ್ಗೆ.... "

ಆಕೆ ಇನ್ನೂ ಹೇಳುತ್ತಲೇ ಇದ್ದರು.. 

"ಮೇಡಂ.. ನಿಮ್ಮ ಕರೆಗೆ ಧನ್ಯವಾದಗಳು ಮೇಡಂ.. ಸದ್ಯಕ್ಕೆ ಯಾವ ಉಳಿತಾಯವೂ ಬೇಡ.. ಆದಾಯವೇ ಮಠ ಹತ್ತಿದೆ.. ನಿಮ್ಮ ಕರೆಗೆ ಧನ್ಯವಾದಗಳು ಮೇಡಂ" ಅಂತ ಕರೆಯನ್ನು ಕಟ್ ಮಾಡೋಕೆ ಹೋದೆ.. 

"ಸರ್.. ನಮ್ಮ ಕಂಪನಿಯ ಉಳಿತಾಯದ ಯೋಜನೆ ಬಗ್ಗೆ ಹೇಳಿಬಿಡುತ್ತೇನೆ.. ನಿಮಗೆ ಇಷ್ಟವಾದರೆ ತಗೊಳ್ಳಿ ಇಲ್ಲವಾದರೆ ಬಿಡಿ.. ಆದರೆ ಹೇಳೋದು ಮಾತ್ರ ಕೇಳಿ ಸರ್" ಅಂದರು 

ನನಗೂ ಕೆಲಸ ಮಾಡಿ ಮಾಡಿ ಸುಸ್ತಾಗಿತ್ತು.. ಸ್ವಲ್ಪ ವಿರಾಮ ಬೇಕಿತ್ತು.. 

"ಸರಿ ಮೇಡಂ ಹೇಳಿ"

"ಸರ್ ನಮ್ಮ ಇನ್ಶೂರೆನ್ಸ್ ಪ್ಲಾನ್ ಹೀಗಿದೆ" ಅಂತ ಗರಗಸ ಶುರುವಾಯಿತು .. ಆ ಕಡೆಯವರಿಗೆ ನನ್ನ ಅನ್ಯಮನಸ್ಕತೆ ಗೊತ್ತಾಯಿತು ಅನ್ನಿಸುತ್ತೆ.. 

"ಸರ್ ನಾ ಹೇಳೋದು ಗೊತ್ತಾಗ್ತಾ ಇದೆಯೇ ಸರ್.. ಈ ಪ್ಲಾನ್ ನಲ್ಲಿ ನೀವು ಒಂದು ಲಕ್ಷ ಕಟ್ಟಿದರೆ.. ಪ್ರತಿ ವರ್ಷ ಮೂವತ್ತು ಸಾವಿರ ಬರುತ್ತೆ ಸರ್.. ಹಾಗೆ ಇದನ್ನು ಕಟ್ಟುತ್ತಾ ಹೋದರೆ.. ಪ್ರತಿ ವರ್ಷವೂ ಬರ್ತಾ ಇರುತ್ತೆ ಸರ್... "

"ಓಕೆ ಮೇಡಂ"

"ನಮ್ಮ ಮಕ್ಕಳಿಗೂ ಬರುತ್ತೆ ಸರ್"

"ಹಾ ನಮ್ಮ ಮಕ್ಕಳ ಏನ್ ಮೇಡಂ ನೀವು ಹೇಳ್ತಾ ಇರೋದು"

"ಸರ್ ಅಂದ್ರೆ... ನೀವು ಇನ್ಶೂರೆನ್ಸ್ ಮಾಡಿಸಿದರೆ ನಿಮ್ಮ ಮಕ್ಕಳೂ ಕೂಡ ಇದರ ಉಪಯೋಗ ಮಾಡಿಕೊಳ್ಳಬಹುದು.. ಅವರೂ ಕೂಡ ಹಣವನ್ನು ಡ್ರಾ ಮಾಡಬಹುದು.. ಮತ್ತೆ ನಾವಿಲ್ಲದೆ ಹೋದರೂ ಮಕ್ಕಳಿಗೆ ಉಪಯೋಗವಾಗುತ್ತದೆ.. "

"ಏನ್ ಮೇಡಂ.. ಏನೇನೋ ಹೇಳ್ತಾ ಇದ್ದೀರಾ"

"ಸರ್.. ಈ ಪ್ಲಾನ್ ತುಂಬಾ ಚೆನ್ನಾಗಿದೆ ಸರ್.. ಇನ್ವೆಸ್ಟ್ ಮಾಡಿ ಸರ್.. ಯಾವಾಗ ಮಾಡ್ತೀರಾ ಸರ್"

"ಮೇಡಂ.. ನಾ ಆಗಲೇ ಹೇಳಿದ್ದೀನಿ.. ನನಗೆ ಇನ್ವೆಸ್ಟ್ ಮಾಡೋಕೆ ಆಸೆಯೂ ಇಲ್ಲ ಅವಕಾಶವೂ ಇಲ್ಲ.. ಧನ್ಯವಾದಗಳು ಮೇಡಂ ನಿಮ್ಮ ಕರೆಗೆ" ಅಂತ ಹೇಳಿ ಕಟ್ ಮಾಡೋಕೆ ಹೋದರೆ.. 

"ಸರ್.. ಈ ಪ್ಲಾನ್ ತುಂಬಾ ಚೆನ್ನಾಗಿದೆ ಇನ್ಶೂರೆನ್ಸ್ ಮಾಡಿಸಿ ಸರ್"

"ಮೇಡಂ.. ನೀವು ಇದನ್ನೇ ಸಂಜೆ ತನಕ ಹೇಳಿದರೂ.. ನಾನೂ ಸುಮ್ಮನೆ ನಿಮ್ಮ ಮಾತುಗಳನ್ನು ಕೇಳ್ತಾ ಇರ್ತೀನಿ.. ಆದರೆ ನನ್ನ ಕಡೆ ಉತ್ತರ ಆಗೋಲ್ಲ ಅಂತಾನೆ ಇರುತ್ತೆ ನಾ ಇನ್ವೆಸ್ಟ್ ಮಾಡೋಲ್ಲ.. ಇನ್ವೆಸ್ಟ್ ಮಾಡುವಷ್ಟು ದುಡ್ಡು ಇಲ್ಲ " 

ಅಷ್ಟು ಹೊತ್ತಿಗೆ ಆಕೆಗೆ ನಗು ಬರೋಕೆ ಶುರುವಾಗಿತ್ತು.. ನನ್ನ ಮಾತುಗಳನ್ನು ಕ್ಕೇಳಿ ಕೇಳಿ.. 

"ಸರ್ ಒಂದು ಪಾಲಿಸಿ ಮಾಡಿಸಿ.. ನಿಮ್ಮ ಸಂಬಳ ಎಷ್ಟು ಕೇಳಬಹುದಾ ಸರ್.. "

"ಮೇಡಂ ಹೆಣ್ಣು ಮಕ್ಕಳ ವಯಸ್ಸು ಗಂಡು ಮಕ್ಕಳ ಸಂಪಾದನೆ ಕೇಳಬಾರದು.. ನಿಮ್ಮ ಕರೆಗೆ ಧನ್ಯವಾದಗಳು ಮೇಡಂ"

ಜೋರಾಗಿ ನಗುತ್ತಾ.. "ಸರ್ ಪ್ಲೀಸ್  ಒಂದು ಪಾಲಿಸಿ ಮಾಡಿಸಿ ಸರ್"

"ಮೇಡಂ ಆಗಲಿ ಈ ಕರೆಯನ್ನು ಸ್ಪೀಕರ್ ಮೋಡಿನಲ್ಲಿ ಇಡುತ್ತೇನೆ.. ಸಂಜೆ ತನಕ ಮಾತಾಡುತ್ತಲೇ ಇರಿ. ನನಗೂ ಆಫೀಸ್ ಕೆಲಸ ಮಾಡೋಕೆ ಸ್ಫೂರ್ತಿ ಬರುತ್ತೆ..ಮುಂದುವರೆಸಿ.. ನಿಮ್ಮ ಕಂಪನಿಯ ಎಲ್ಲಾ ಪಾಲಿಸಗಳ ಬಗ್ಗೆ ಹೇಳೋಕೆ ಶುರು ಮಾಡಿ.. ಓಕೇ ನಾ ಮೇಡಂ"

ಜೋರಾಗಿ ನಕ್ಕು "ಧನ್ಯವಾದಗಳು ಸರ್.. ಪಾಲಿಸಿ ಬೇಕಿದ್ದರೆ ಈ ನಂಬರ್ ಸೇವ್ ಮಾಡಿಕೊಳ್ಳಿ ಸರ್.. ನಿಮ್ಮ ಅಮೂಲ್ಯ ಸಮಯಕ್ಕೆ ಧನ್ಯವಾದಗಳು ಸರ್ " 

"ಹ ಹ ಹ.. ಸರಿ ಮೇಡಂ"

ಕರೆ ಕಟ್ ಆಯಿತು.. 

ಆಫೀಸಿನ ಫಾಲ್ಸ್ ಸೀಲಿಂಗ್ ನೋಡಿದೆ... ಅದರ ಪುಟ್ಟ ಕಂಡಿಯಲ್ಲಿ ದೇವನ ನಗು ಸದ್ದು ಕೇಳಿಸಿತು ... 

"ಶ್ರೀ.. ಈ ಟೆಲಿ ಮಾರ್ಕೆಟಿಂಗ್ ಕರೆಗಳನ್ನು ಹಲವಾರು ಮಂದಿ ಬಯ್ದು ಬಯ್ದು ಕಿರ್ಚಾಡ್ತಾರೆ... ಆದರೆ ನೀನು ಸಮಾಧಾನವಾಗಿ ಕೇಳುತ್ತೀಯೆ ಮತ್ತೆ ಧನ್ಯವಾದಗಳನ್ನು ಹೇಳುತ್ತೀಯೆ... ಅದು ಹೆಂಗೆ.. ಮತ್ತೆ ಯಾಕೆ"

"ಬಾಸ್.. ನನಗೆ ಮೂವತ್ತು ದಿನಗಳನ್ನು ಆಫೀಸಿನ ಕೆಲಸದಲ್ಲಿ ತೊಡಗಿಸಿಕೊಂಡರೆ ಸಂಬಳ ಕೊಡುವುದು.. ಹಾಗೆ ಅವರಿಗೂ ಕೂಡ ದಿನಕ್ಕೆ ಇಷ್ಟು ಕರೆಗಳನ್ನು ಮಾಡಲೇ ಬೇಕು ಅಂತ ಟಾರ್ಗೆಟ್ ಕೊಟ್ಟಿರುತ್ತಾರೆ... ಮತ್ತೆ ಆ ಕರೆಗಳಲ್ಲಿ ಕೆಲವು ಕರೆಗಳನ್ನು ರೆಕಾರ್ಡ್ ಅವರಿಗೆ ಅರಿವಿಲ್ಲದೆ ರೆಕಾರ್ಡ್ ಕೂಡ ಮಾಡ್ತಾರೆ ಅಂತ ಕೇಳಿದ್ದೇನೆ. ಅದು ಅವರ ಕೆಲಸ.. ಅದನ್ನು ಮಾಡಿದರೆ ಅವರಿಗೆ ಸಂಬಳ ಕೊಡುವುದು.. ಅದಕ್ಕೆ ಯಾಕೆ ನಾ ಕಿರುಚಾಡಬೇಕು.. ತಾಳ್ಮೆ ಇಂದ ಉತ್ತರಿಸಿದರೆ ನನ್ನ ಏಕಾಗ್ರತೆ ಹಾಳಾಗೋಲ್ಲ.. ಮತ್ತೆ ಆ ಕಡೆಯವರಿಗೂ ನಿರಾಳ ಮತ್ತೆ ಮನಸ್ಸಿಗೆ ಹಿಂಸೆ ಆಗೋಲ್ಲ.. ಅಂತಹ ಕರೆಗಳು ಬಂದಾಗ.. ಆ ಕ್ಷಣ ನಾ ಅವರ ಸ್ಥಾನದಲ್ಲಿ ನಿಂತು ಮಾತಾಡುತ್ತೇನೆ.. ಆಗ ನನಗೂ ಖುಷಿ ಅವರಿಗೂ ಖುಷಿ"

ದೇವರು ಕಣ್ಣು ಹೊಡೆದು  ಹೆಬ್ಬೆರಳನ್ನು ಎತ್ತಿ ಸೂಪರ್ ಶ್ರೀ ಅಂದ.. ಅಂದಿದ್ದು ಮಾತ್ರ ಕೇಳಿಸಿತು.. ಬೆಳಕಲ್ಲಿ ಬೆಳಕಾಗಿ ಮಾಯವಾದ!!!

ಚಿತ್ರಕೃಪೆ : ಗೂಗಲೇಶ್ವರ 



Thursday, June 18, 2020

ಏನ್ರಿ ಪಾಪ ನಿಮ್ಮ ಕತೆ!!!

ಶ್ರೀರಂಗಪಟ್ಟಣದ ದೇವಸ್ಥಾನದ ಬಳಿ ಜಾತ್ರೆ ನೆಡೆಯುತಿತ್ತು.. 

ಚಿತ್ರ ಕೃಪೆ : ಗೂಗಲೇಶ್ವರ 
ಅನೇಕ ಅಂಗಡಿ ಮುಂಗಟ್ಟುಗಳು ವಿಧವಿಧವಾದ ತಿಂಡಿ  ತಿನಿಸುಗಳನ್ನು, ಬಟ್ಟೆಗಳನ್ನು, ಆಟಿಕೆಗಳನ್ನು ಹೀಗೆ ಅನೇಕ ತರಹಾವರಿ ವಸ್ತುಗಳನ್ನು ಇಟ್ಟು ಮಾರುತ್ತಿದ್ದವು.. 

ಸಣ್ಣ ಪುಟ್ಟ ಹೈಕಳುಗಳು ಖುಷಿ ಪಡುತ್ತಿದ್ದವು.. ಕಾಲೇಜು ಹುಡುಗ ಹುಡುಗಿಯರು ಚಂದ ಚಂದ ಉಡುಪು ತೊಟ್ಟು ಮಿಂಚುತ್ತಿದ್ದವು.. ಹಿರಿಯರು ಸಮೀಪದ ದೇವಸ್ಥಾನಕ್ಕೆ ಹೋಗಿ ದರ್ಶನ ಪಡೆದು ಆಶೀರ್ವಾದ ಪೂರ್ವಕ ಕುಂಕುಮ ಹಚ್ಚಿಕೊಂಡು ಭಕ್ತಿಯನ್ನು ತೋರಿಸುತ್ತಿದ್ದರು.. 

ಚಿತ್ರಕೃಪೆ: ಬಾಲು ಸರ್ 
ಸಂಜೆಯಾಗುತಿತ್ತು.. ಅಲ್ಲಿದ್ದ ಒಂದು ವೇದಿಕೆಯಲ್ಲಿ ಏನೋ ಕಲರವ.. ಮೈಕ್ ತೆಗೆದುಕೊಂಡು ಒಬ್ಬ ಪುಟ್ಟ ಪೋರ ಕಿರುಚುತ್ತಿದ್ದ.. "ಮಾನ್ಯರೇ  ಇಂದು ಏಳು ಘಂಟೆಗೆ ಸರಿಯಾಗಿ ಕುರುಕ್ಷೇತ್ರ ನಾಟಕ ಶುರುವಾಗುತ್ತೆ ಎಲ್ಲರೂ ದಯಮಾಡಿ ಬನ್ನಿ.. ಮಧ್ಯೆ ಮಧ್ಯೆ ಚುರುಮುರು ಹಂಚುತ್ತೇವೆ... ಬನ್ನಿ ಬನ್ನಿ" ಅಂತ ಕೂಗುತ್ತಲೇ ಇದ್ದ.. 

ಅಲ್ಲಿದ್ದ ಒಬ್ಬರು ಸರಿ ದೇವರ ದರ್ಶನ  ಆಗಿತ್ತು.. ಮನೆಗೆ ಹೋಗೋಕೆ ಇನ್ನೂ ಸಮಯವಿತ್ತು.. ಇನ್ನೇನು ಮಾಡೋದು.. ಒಂದಷ್ಟು ಫೋಟೋ ತೆಗೆಯುತ್ತಾ ಸಮಯ ಕಳೆಯೋಕೆ ನಿರ್ಧಾರ ಮಾಡಿದ್ದರು.. ಈ ನಾಟಕದ ವಿಚಾರ ತಿಳಿದು ಕುಶಿಯಾಯ್ತು.. ಓಕೆ ಸಮಯ ಕಳೆಯೋಕೆ ಇನ್ನೊಂದು ಸಾಧನ ಸಿಕ್ಕಿತು ಅಂತ ಆ  ಹೆಜ್ಜೆ ಹಾಕತೊಡಗಿದರು.. 

ಹೊಟ್ಟೆ ಹಸೀತಾ ಇತ್ತು.. ಅಲ್ಲಿಯೇ ಇದ್ದ ಪಾನಿ ಪೂರಿ ಗಾಡಿಯಲ್ಲಿ ಮಸಾಲೆ ಪುರಿ, ಪಾನಿ ಪುರಿ ತಿಂದು ಒಂದೆರಡು ಲೋಟ ಪಾನಿ ಕುಡಿದು.. ಆ ನಾಟಕದ ವೇದಿಕೆಯತ್ತ ಹೆಜ್ಜೆ ಹಾಕಿದರು.. ನಾಟಕ ಇನ್ನೇನು ಶುರುವಾಗಲಿತ್ತು.. 

"ನಮೋ ವೆಂಕಟೇಶ.. ನಮೋ ತಿರುಮಲೇಶ" ಹಾಡಿನಿಂದ ನಾಟಕ ಶುರುವಾಯಿತು.. ನಾಟಕದ ಸೆಟ್, ವೇದಿಕೆ, ಬಣ್ಣ ಬಣ್ಣ ದೀಪಗಳು ವೇದಿಕೆಯನ್ನು ಬೆಳಗುತ್ತಿದ್ದವು.. 

ಪರದೆ ಸರಿಯಿತು.. 

ವೇದಿಕೆಯ ಮಧ್ಯದಲ್ಲಿ ಒಂದು ಬೃಹತ್ ರಥ.. ಮರದ ಕುದುರೆಗಳನ್ನು ಚೆನ್ನಾಗಿ ಸಿಂಗರಿಸಿದ್ದರು.. ರಥದ ಮೇಲೆ ಹನುಮಂತನ ಲಾಂಛನ.. ಎಲ್ಲವೂ ಸುಂದರ.. 

ಅರ್ಜುನ ಚಿಂತಾಕ್ರಾಂತನಾಗಿ ಕೂತಿದ್ದ.. ಶ್ರೀ ಕೃಷ್ಣ ಅರ್ಜುನನ  ಚಿಂತೆಯ ಗೆರೆಯನ್ನು ನೋಡುತ್ತಾ.. 

"ಅರ್ಜುನ ಯಾಕ್ಲಾ ಏನಿದು ಚಿಂತೆ.. ಯುದ್ಧಕ್ಕೆ ಸಜ್ಜಾಗಿರುವೆ.. ದಿವ್ಯಾಸ್ತ್ರಗಳು ಸಾನೇ ಇವೆ.. ಮತ್ಯಾಕೆ ವೇಚನೆ ಮಾಡ್ತಾ ಇದ್ಯಾ.. ಬಿಲ್ಲು ಎತ್ತು ಬಾಣ ಊಡು.. ಸುರು ಹಚ್ಕೋ.. ಆ ದಿನಗಳ ಅವಮಾನ ಇನ್ನೂ ನೆನಪಿದೆ ತಾನೇ.. ನೀವೆಲ್ಲಾ ಉಟ್ಟಿದಾಗಿಂದ ಆ ಕೌರವರು ನಿಮ್ಗೆ ಕೊಟ್ಟಾ ಕ್ವಾಟ್ಲೆ ಎಲ್ಲಾ ಗೆಪ್ತಿ ಮಾಡ್ಕೋ.. ಸುರು ಮಾಡ್ಕೋ ಅರ್ಜುನ.. "

"ಕೃಷ್ಣಣ್ಣ ಯಾಕೋ ತಲೆ ಸಾನೇ ಕೆಟ್ಟೋಗಯ್ತೆ ... ಎದುರು ಇರೋರೆಲ್ಲ ನಮಗೆ ಗೊತ್ತಿರೋರು.. ಜೊತೆಯಲ್ಲಿ ಆಟವಾಡಿ ಬೆಳೆದವರು .. ವಿದ್ಯೆ ಹೇಳಿಕೊಟ್ಟ ಗುರ್ಗಳು.. ತಿದ್ದಿ ತೀಡಿದ ಆಚಾರ್ಯರು.. ಜೊತೆಗೆ ವಯಸ್ಸಾಗಿದ್ದರೂ ಈಗಲೂ ಫಳ ಫಳ ಹೊಳೆಯುತ್ತಿರುವ ಪಿತಾಮಹ ಭೀಷ್ಮರು.. ಇವರೆಲ್ಲರ ಎದುರು ಯುದ್ಧ ಮಾಡಬೇಕು ಅಂದರೆ ಸಾನೇ ಬೇಸರ ಕಣಪ್ಪ ಕೃಷ್ಣಣ್ಣ..  ನೀನೆ ನನ್ನ ಈ ಗೊಂದಲ ಪರಿಹರಿಸಬೇಕು.. "

ನಾಟಕದ ಮಾಸ್ತರು "ಲೋ ಕೃಷ್ಣಣ್ಣ .. ಈಗ ನಿನ್ನ ಡೈಲಾಕು ಸುರು.. ಭಗವದ್ಗೀತೆ ಸುರು ಹಚ್ಕೋ.. ನೀ ಸುಮ್ಕೆ ತುಟಿ ಚಾಲನೆ ಮಾಡು.. ನಾನು ಇಲ್ಲಿಂದಲೇ ಸ್ಲೋಕ ಹೇಳ್ತೀನಿ.. ಸರಿ ನಾ" ಅಂತ ಕೃಷ್ಣನಿಗೆ ಕೇಳುವ ಹಾಗೆ ಸನ್ನೆ ಮಾಡಿ ಹೇಳಿದರು.. 

ಕೃಷ್ಣ ಕಿರೀಟವನ್ನು ಸರಿ ಮಾಡಿಕೊಂಡು ಆ ಕಡೆ ಈ ಕಡೆ ನೋಡ್ತಾ ಇದ್ದ...

ಅರ್ಜುನ ಕಿರೀಟ ತೆಗೆದು ತಲೆಕೆರೆದುಕೊಂಡು..."ಲೋ‌ ಕಿಟ್ಟ.. ನನ್ನ ,,confusion ದೂರ ಮಾಡ್ತೀನಿ ಅಂದು ...ಈಗ ಆ ಕಡೆ ಈ ಕಡೆ ನೋಡ್ರಾ ಇದ್ದೀಯಲ್ಲ..ಏನಾಯ್ತು ನಿಂಗೆ"

"ಇಲ್ಲಾ ಕಣ್ಲಾ ಅರ್ಜುನ..ಆ ಕಡೆ ನೋಡು.. ನಮ್ಮ ನಾಟಕದ ಗುರುಗಳಿಗೆ ಒಬ್ಬ ಸನ್ನೆ ಮಾಡ್ತಾ ಅವ್ನೆ.. ಗುರುಗಳ ಅತ್ರ ಒಂದು ನಾಲ್ಕು ಪೇಜು ಡೈಲಾಕು ಮಿಸ್ ಆಗೈತಂತೆ... ಅದಕೆ ಅಲ್ಲಿ ಫೋಟೋ ತೆಗಿತಾ ಇದ್ದಾರಲ್ಲ .. ಆ ವಯ್ಯಾ ಬಾಲೂ ಸರ್ ಅಂತ .. ..ಆ ವಯ್ಯನಿಗೆ ಎಲ್ಲಾ ಗೊತ್ತೈತೆ..ಭಗವದ್ಗೀತೆ ಕೂಡಾ ಗೊತ್ತು ಅದ್ಕೆ ಅವರು ಒಮ್ಮೆ ಈ ಕಡೆ ಬಂದರೆ ಗುರುಗಳಿಗೆ ಮಿಸ್ ಆದ ಡೈಲಾಕು ಅವರು ಯೋಳ್ತಾರೆ .! ಅಂತೇ ಅದಕ್ಕೆ ವೇದಿಕೆ ಹತ್ರ ಬರೋತರ ನಾ ಸನ್ನೆ ಮಾಡ್ತಾ ಇದ್ದೀನಿ ಕನ್ಲಾ"

"ಲೋ‌ಕಿಟ್ಟಿ..ಭಗವದ್ಗೀತೆ ಈಗ ತಾನೇ ನೀ ಹೇಳ್ತಾ ಇರೋದು..ಅದೆಂಗೆ ಆ ವಯ್ಯನಿಗೆ ಮೊದ್ಲೆ ಗೊತ್ತಾಗುತ್ತೆ..ಅದೆಂಗೆ ಆ  ಡೈಲಾಕುಗಳು ಅವರ ಅತ್ರ ಇರ್ತಾವೆ.. !"

ಆ ವಯ್ಯನ ಪೆಸಾಲಿಟಿ ಅದು..
ಮಹಾಭಾರತದಾಗೆ ಇಲ್ದೇ ಇರೋದು ಪರಂಪಂಚದಾಗೆ  ಇಲ್ಲ..
ಅಂಗೇ ಪರಪಂಚದಾಗೆ ಇರೋದೆಲ್ಲಾ ಈ ವಯ್ಯನಿಗೆ ಗೊತ್ತಿಲ್ಲದೇ ಇಲ್ಲಾ‌..

ಅರ್ಜುನ ತಲೆ ಕೆರೆದುಕೊಂಡು   "ಯುದ್ದಾನೂ ಬೇಡ..ಏನೂ ಬೇಡ" ಅಂತ ಫೋಟಾದಾ

ಆಗ ಕೃಷ್ಣಣ್ಣ ಅರ್ಜುನನ ಹಿಂದೆ ಓಡುತ್ತಾ .. 

"ಅರ್ಜುನ ಅವರೊಂತರಹ ಕೊತ್ತಂಬರೀ ಸೊಪ್ಪು ಇದ್ದ ಹಾಗೆ...
ಅಡಿಗೆಗೆ ಹಾಕಿದರೂ ಘಮ್ ಅನ್ನುತ್ತೆ..
ಕೈಯಲ್ಲಿ ಹಿಡಿದರೂ ಘಮ್ ಅನ್ನುತ್ತೆ.
ನಮ್ಮ ನಾಟಕ ಚೆನ್ನಾಗಿ ಬರೋಕೆ ಬಾಲೂ ಸರ್ ಬೇಕು 
ಅಡಿಗೆ ಚೆನ್ನಾಗಿ ಆಗೋಕೆ ಕೊತ್ತಂಬರಿ ಸೊಪ್ಪು ಬೇಕು"
ಅವರ ಜ್ಞಾನ ಉಪಯೋಗಿಸ್ಕಂಡು ಈ ನಾಟಕ ಮುಗಿಸುವ.. 
ಬಂದ ಜನರಿಗೆ ಕುಸಿ ಆಗ್ಲಿ.. ಏನಂತೀಯಾ.. "

ಇವರಿಬ್ಬರ ಸಂಭಾಷಣೆ ಕೇಳುತ್ತಾ ಜನರೆಲ್ಲಾ ಬಿದ್ದು ಬಿದ್ದು ನಗುತ್ತಾ.. ಫೋಟೋ ತೆಗೆಯುತ್ತಿದ್ದ ಬಾಲು ಸರ್ ಅವರನ್ನು ವೇದಿಕೆಗೆ ಕರೆದು.. ಒಂದು ಹಾರ ಹಾಕಿ ಪುಟ್ಟ ಹೂ  ಗುಚ್ಛ ಕೊಟ್ಟು .. "ಸರ್ ಇವತ್ತು ನಿಮ್ಮ ಜನುಮದಿನ .. ನಿಮಗೆ ಶುಭವಾಗಲಿ.. ಜೊತೆಗೆ ಈ ನಾಟಕವನ್ನು ಒಸಿ ತೂಗಿಸಿಕೊಂಡು ಹೋಗಿ .." ಅನ್ನುತ್ತಾ ಕೈ ಮುಗಿದರು.. 

ಬರ್ತ್ಡೇ ಬಾಯ್ -- ಬಾಲೂ ಸರ್
(ಚಿತ್ರಕೃಪೆ.. ಅವರದೇ ಸಮಯದ ಗೆರೆ)
ಬಾಲೂ ಸರ್ ಅವರಿಗೆ ನಾಚಿಕೆ, ಖುಷಿ, ಸಂತಸ ಎಲ್ಲವೂ ಒಮ್ಮೆಲೇ.. "ಸರಿ ಕಣಪ್ಪ.. ಇದು ನಾ ಇಷ್ಟ ಪಡುವ ಶ್ರೀರಂಗಪಟ್ಟಣ.. ಆಗಲಿ ನಿಮ್ಮ ಜೊತೆ ನನ್ನನ್ನು ಗುರುತಿಸಿಕೊಳ್ಳೋಕೆ ಖುಷಿ ಆಗುತ್ತೆ.. ನಾಟಕಕ್ಕೆ ಶುಭ ಹಾರೈಕೆಗಳು"ಎಂದು ಕೈ ಮುಗಿದರು.. 

ನೆರೆದಿದ್ದ ಜನರೆಲ್ಲಾ ಖುಷಿಯಿಂದ ಜೋರಾಗಿ ಚಪ್ಪಾಳೆ ತಟ್ಟುತ್ತ 

"ಜನುಮದಿನದ ಶುಭಾಶಯಗಳು ಬಾಲೂ ಸರ್.. " ಎಂದು ಶುಭಾಶಯಗಳನ್ನು ಕೋರಿದರು.. 

ನಾಟಕ ಅಭೂತಪೂರ್ವ ಯಶಸ್ಸು ಕಂಡಿತು ಅಂತ ಹೇಳಲೇ ಬೇಕಿಲ್ಲ ಅಲ್ವೇ ..!

Tuesday, May 26, 2020

ಪ್ರತಿಭಾ ಹೇಗಿದ್ದೀರಾ... !


ಪ್ರತಿಭಾ ಹೇಗಿದ್ದೀರಾ

ಚೆನ್ನಾಗಿದ್ದೀನಿ ಸಮತಾ.. ನೀವೆಲ್ಲಾ ಹೇಗಿದ್ದೀರಾ

ನಾವು ಚೆನ್ನಾಗಿದ್ದೀವಿ ..  ಒಂದು ಮಾತು ಕೇಳಬೇಕಿತ್ತು..

ಆ ಸಮತಾ.. ಹೇಳಿ..

ಶ್ರೀಕಾಂತ್ ನಿಮಗೆ ವಿಶ್ ಮಾಡಿದ್ರ

ಹ ಹ ಹ.. ಅವರು ವಿಶ್ ಮಾಡ್ಲಿಲ್ಲ ಅಂದ್ರೆ ಅರುಂಧತಿ ಚಿತ್ರದಲ್ಲಿಪಶುಪತಿ ಕಾಡ್ತಾನೇ ಅಲ್ವ.. ಹಾಗೆ ಗೋಳಾಡಿಸಿಬಿಡ್ತೀನಿ ಅದಕ್ಕೆ ಹೆದರಿಕೊಂಡು ನನಗೆ ವಿಶ್ ಮಾಡೋದು ಅವರು ಮರೆಯೋಲ್ಲ
ಹ ಹ ಹ

ಹೌದಾ... ನಾನು ತುಂಬಾ ಸಾಫ್ಟ್..  ಮತ್ತೆ ಶ್ರೀಕಾಂತ್ ನನ್ನ ಲವ್ಲೀ ಬ್ರದರ್.. ಅವರನ್ನು ಬಯ್ಯೋಕೆ ನನಗೆ ಇಷ್ಟ ಆಗೋಲ್ಲ.. ಆದರೆ..

ಹೌದು ಸಮತಾ..  ನನಗೂ ಅವರು ಅದ್ಭುತ ಅಣ್ಣ.. ಆದರೆ ಅವರ ಸುಂದರ ಪದಗಳಿಂದ ವಿಶ್ ಮಾಡ್ಲಿಲ್ಲ ಅಂದ್ರೆ ಕೆಟ್ಟ ಕೋಪ ಬರುತ್ತೆ.. ಒಮ್ಮೆ ನನ್ನ ಮದುವೆ ಸಂಭ್ರಮಕ್ಕೆ ವಿಶ್ ಮಾಡಿರಲಿಲ್ಲ.. ಅದಕ್ಕೆ ಅವರನ್ನು ಒಂದು ವರ್ಷ ಮಾತಾಡಿಸಿರಲಿಲ್ಲ... ಆಮೇಲೆ ಅವರು ಸಾರಿ ಅಂತ ಕೇಳಿದ ಮೇಲೆ.. ನಾನು ಅವರ ಹತ್ರ ಮಾತಾಡಿದ್ದು.. ಆದರೆ ಸಮತಾ.. ನಿಮ್ಮ ವಿವಾಹ ದಿನಕ್ಕೆ ಏನೋ ತರಲೆ ಆಗಿದೆ.. ಇಲ್ಲ ಅಂದರೆ ಅವರು ಮರೆಯೋಲ್ಲ.. ಅವರು ಜೀವನದ ಒಂದು ಮುಖ್ಯ ತಿರುವಿನಲ್ಲಿ ಇದ್ದಾರೆ.. ಪ್ರಾಯಶಃ ಅದರಲ್ಲಿ  ಮುಳುಗಿದ್ದರಿಂದ ಬಹುಶಃ ಮಿಸ್ ಆಗಿದೆ..

ಹೌದು ಪ್ರತಿಭಾ.. ಅವರು ವಿಶ್ ಮಾಡೋ ರೀತಿ ಸೊಗಸಾಗಿರುತ್ತೆ.. ಆದರೂ ಅವರ ಸತೀಶ್ ಹೇಳಿದ ಮೇಲೆ ಅವರೆಲ್ಲರಿಗೂ ನೆನಪಿಗೆ ಬಂದದ್ದು ಬೇಸರ ಆಯ್ತು.. ಇದಕ್ಕೆಲ್ಲ ಕಾರಣ ಶ್ರೀಕಾಂತ್.. ಅವನಿಗೆ ಸರಿಯಾದ ಶಿಕ್ಷೆ ಕೊಡಬೇಕು..

ಸಮತಾ ಅವನು ಇಲ್ಲೇ ಇದ್ದರಿಂದ ನಾನು ಮೌನವ್ರತದ ಶಿಕ್ಷೆ ಕೊಟ್ಟಿದ್ದೆ.. ನೀವು ಅಷ್ಟು ದೂರದಲ್ಲಿರುವುದರಿಂದ ಅದು ಉಪಯೋಗ ಆಗೋಲ್ಲ.. ಅದರ ಬದಲು ನಾನೊಂದು ಉಪಾಯಕೊಡ್ತೀನಿ ..  ಹೇಗೂ ಮುಂದಿನ ಒಂದೆರಡು ವರ್ಷಗಳಲ್ಲಿ ನಾವೆಲ್ಲರೂ ನಿಮ್ಮ ದೇಶಕ್ಕೆ ಬರ್ತೀವಲ್ಲ.. ಅವಾಗ ನಾವು ಇರುವಷ್ಟು ದಿನ.. ಶ್ರೀಕಾಂತ್ ಗೆ ಟೊಮೇಟೊ ಸಮಾರಾಧನೆ ಮಾಡಿ.. ಟೊಮೇಟೊ ಸೂಪು, ಟೊಮೇಟೊ ಸಾರು, ಟೊಮೇಟೊ ಹಾಕಿದ ಉಪ್ಪಿಟ್ಟು,  ಬಿಸಿಬೇಳೆ ಬಾತು, ಟೊಮೇಟೊ ಗೊಜ್ಜು, ಟೊಮೇಟೊ ಉಪ್ಪಿನಕಾಯಿ, ಟೊಮೇಟೊ ತೊಕ್ಕು ಎಲ್ಲವೂ ಟೊಮೇಟೊ ಮಯವಾಗಿರಬೇಕು.. ಹೊರಗೆ ಹೋಗಿ ತಿನ್ನೋಕೆ ಆಗಲ್ಲ.. ಬೇರೆ ದಾರಿ ಇಲ್ಲದೆ ಅದೇ ತಿನ್ನಬೇಕಾಗುತ್ತದೆ

ಪ್ರತಿಭಾ  ಸೂಪರ್ ಇದೆ.. ಹೌದು ನನ್ನ ವಿವಾಹ ದಿನಕ್ಕೆ ಶುಭಾಶಯ  ಹೇಳದೆ ಇರೋಕೆ ಸರಿಯಾದ ಶಿಕ್ಷೆ..

ಹೌದು.. ಶ್ರೀಕಾಂತ್ ಗೆ ನಮಗಿಂತ  ಹೊಸ ಹೊಸ ಗೆಳೆಯರು, ಗೆಳತಿಯರು, ತಂಗಿಯರು ಹೆಚ್ಚಾಗಿದ್ದಾರೆ... ಅದಕ್ಕೆ ನಮ್ಮನ್ನುಮರೀತಾರೆ... ನಾನು  ಇರ್ತೀನಲ್ಲ ಸರಿಯಾಗಿ ಗೋಳು ಹುಯ್ಕೊಳೋಣ..

ಥ್ಯಾಂಕ್ಸ್ ಪ್ರತಿಭಾ.. ಅರೆ ನಾನು ಮರೀತಿದ್ದೆ ಜನುಮದಿನದ ಶುಭಾಶಯಗಳು ಪ್ರತಿಭಾ.. ನಿಮ್ಮ ದಿನ ಸುಂದರವಾಗಿರಲಿ
..
ಥ್ಯಾಂಕ್ಸ್ ಸಮತಾ.. ಸರಿ ನಾನು ನೋಡ್ತೀನಿ ಈ ಬಾರಿ ಶ್ರೀಕಾಂತ್ ಏನೂ ಬರೆದಿದ್ದಾನೆ ಅಂತ.. ಬರೆಯದೆ ಇದ್ದರೇ ಒಂದು ಕೈ  ನೋಡ್ಕೋತೀನಿ..

ಪ್ರತಿಭಾ... ಅವನು ಯಾರಿಗೆ ವಿಶ್ ಮಾಡದೆ ಇದ್ದರೂ ನಿಮಗೆ ವಿಶ್ ಮಾಡೋದು ಮರೆಯೋಲ್ಲ.  ಒಳ್ಳೆ ಹವಾ ಇಟ್ಟೀದ್ದೀರಾ..  ಓಹ್ ಸರಿ ಸರಿ.. ಸತೀಶ್ ಆಫೀಸಿಗೆ ಹೋಗುವ ಸಮಯ ಆಯಿತು.. ಧನುಷ್ ಆನ್ಲೈನ್ ಕ್ಲಾಸ್  ಶುರು ಆಗುತ್ತೆ ತಿಂಡಿ ಮಾಡಬೇಕು.. ಸರಿ ಸಿಗ್ತೀನಿ ಮತ್ತೆ.. ಹ್ಯಾಪಿ ಬರ್ತ್ಡೇ ಅಗೈನ್.. ಪ್ರತಿಭಾ..

ಥಾಂಕ್ ಯು ಸಮತಾ.. ನನಗೂ ಸಮಯ ಆಯಿತು.. ಶಶಿ ಮತ್ತು ಸಾತ್ವಿಕ್ ರೆಡಿ ಆಗಿದ್ದಾರೆ.. ದೇವಸ್ಥಾನಕ್ಕೆ ಹೋಗಿ ನಮಸ್ಕಾರ ಮಾಡಿಬರಬೇಕು.. ಲೊಕ್ಡೌನ್ ಇಂದ ದೇವಸ್ಥಾನದ ಬಾಗಿಲು ತೆರೆದಿರೋಲ್ಲ ಆದರೂ ಬಾಗಿಲ ಬಳಿ ಹೋಗಿ ನಮಸ್ಕಾರ ಮಾಡಿಬರ್ತೀವಿ ..

 ಓಕೆ ಬೈ..

******
ನನ್ನ ಇಬ್ಬರು ಮುದ್ದು ತಂಗಿಯರ ನಡುವಿನ ಮಾತುಕತೆ ಮುದಕೊಡುತ್ತದೆ..
ಸಮತಾ ಮತ್ತು ಜೆ ಎಂ ಇವರಿಗೆ ವಿವಾಹ ಸಂಭ್ರಮದ  ಶುಭಾಶಯಗಳು.. ಇಡುವ ಪ್ರತಿ ಹೆಜ್ಜೆಯೂ ಯಶಸ್ವೀ ಹಾದಿಯಾಗಲಿ.. ಕಂಡ ಯೋಜಿಸಿದ ಯೋಜನೆಗಳು ಸದಾ ಯಶಸ್ಸುಸಿಗಲಿ .. ವಿವಾಹ ಸಂಭ್ರಮದ ಶುಭಾಶಯಗಳು! (ಮೇ ಹದಿಮೂರನೇ ತಾರೀಕು)

ಪ್ರತಿಭಾ ಅಲಿಯಾಸ್ ಅಕ್ಕಯ್ಯ ಜನುಮದಿನ ಸುಂದರವಾಗಿರಲಿ... ರಣಚಂಡಿ ಅವತಾರ ಸದಾ ಶಾಂತವಾಗಿರಲಿ... 

Sunday, December 15, 2019

ಜೀವಸ್ವರದಲ್ಲಿ ಸ್ವರಗಳಿಗೆ ಸಿಕ್ಕ ಜೀವ

 ಜೀವ ಸ್ವರವೇ.. ಅಲ್ಲ ಅಲ್ಲ.. ಇವರಿಬ್ಬರಿಗೂ ಮತ್ತು ಇವರ ತಂಡಕ್ಕೆ ಸ್ವರಗಳೇ ಜೀವ..  ಜೀವಸ್ವರದ ಇನ್ನೊಂದು ಕಾರ್ಯಕ್ರಮ ಮತ್ತೊಂದು ಮಧುರ ಲಹರಿ ಮನದಲ್ಲಿ ಮನೆಮಾಡಿತು..
ಮಹೇಶ್ ಅವರ ಗೋಡೆಯಿಂದ ಕದ್ದದ್ದು.. 

ಎರಡು ವರ್ಷಗಳ ಗೆಳೆತನ ಮಹೇಶ್ ಅವರ ಸಿಹಿ ಒತ್ತಾಯ ಪೂರ್ವಕ ಆಗ್ರಹಕ್ಕೆ ಮನವು ಸಜ್ಜಾಗಿತ್ತು.. ಮಹೇಶ್ ಅವರ ಕಾರ್ಯಕ್ರಮವನ್ನು ಪರಿಚಯಿಸಿದ್ದ ಗುರು ಪ್ರಸಾದ್ ಅವರನ್ನು ಕರೆದುಕೊಂಡು ಹೊರಟ ನನ್ನ ಸಾರಥಿ ನಿಂತದ್ದು ಚಿತ್ರಕೂಟ ಶಾಲೆಯ ವಾಹನ ನಿಲ್ದಾಣದಲ್ಲಿ.. ಗುರು ಪ್ರಸಾದ್ ಅವರಿಗೆ ಮತ್ತೊಮ್ಮೆ ಅಭಾರಿ.. ಇಂತಹ ಸುಮಧುರ ಸಂಗೀತ ಮಾಂತ್ರಿಕರನ್ನು ಪರಿಚಯಿಸಿದ್ದಕ್ಕೆ.. 

ಒಳಗೆ ಕಾಲಿಟ್ಟರೆ ..ತುಂಬಿ ತುಳುಕುತಿದ್ದ ಸಭಾಂಗಣ.. ಶಾಲೆಯ ವಿದ್ಯಾರ್ಥಿಗಳ ಪೋಷಕರು, ಶಾಲೆಯ ಸಿಬ್ಬಂದಿ.. ಮಹೇಶ್ ಮತ್ತು ಸಹಗಾಯಕರ ಅಭಿಮಾನಿಗಳು, ಜೀವಸ್ವರವನ್ನು ಜೀವದ ಸ್ವರವಾಗಿ ಹಿಂಬಾಲಿಸುತ್ತಿರುವ ಕಲಾರಸಿಕರು.. ಇವರ ಜೊತೆಯಲ್ಲಿ.. ಆರೋಗ್ಯವೇ ಭಾಗ್ಯ ಅದೇ ನಮ್ಮ ಗುಟ್ಟು ಎನ್ನುವ ಜೀಲ್ ತಂಡದ ಸದಸ್ಯರು.. 

ಡಬಲ್ ಧಮಾಕ ಇತ್ತು ಈ ಕಾರ್ಯಕ್ರಮದಲ್ಲಿ.. ಹದಿನೈದು ವಸಂತಗಳ ಸಂಭ್ರಮದಲ್ಲಿ ಚಿತ್ರಕೂಟ ಶಾಲೆ ಮೀಯುತ್ತಿದ್ದರೆ.. ಶರೀರವನ್ನು ಧೃಡವಾಗಿ ಇಟ್ಟುಕೊಳ್ಳುವಲ್ಲಿ ಸಹಾಯ ಮಾಡುತ್ತಿರುವ ಜೀಲ್ ತಂಡ ತನ್ನ ಮೂರನೇ ವರ್ಷವನ್ನು ಸಂಭ್ರಮಿಸುತ್ತಿತ್ತು.. 

ಜೀಲ್ ತಂಡ ಸಭಾಂಗಣದಲ್ಲಿದ್ದವರನ್ನು ಉತ್ತೇಜಿಸುವುದಕ್ಕಾಗಿ ಟೈರನ್ನು ತಂದು ಅದನ್ನು ಎತ್ತಿಸುವ ಸ್ಪರ್ಧೆ ಮಾಡಿದರು.. ಬಂದವರು ಆರಾಮಾಗಿ ಎತ್ತಿದ್ದು.. ಮತ್ತು ಜೀಲ್ ತಂಡದ ಪ್ರತಿಯೊಬ್ಬರೂ ಸ್ಪರ್ಧಾಳುಗಳನ್ನು ಹುರುದುಂಬಿಸಿದ್ದು ಖುಷಿಯಾಯಿತು.. 




ಈ ವೇದಿಕೆಯಲ್ಲಿ ಮುಂದೆ ನೆಡೆದದ್ದು ಹಾಡುಗಳ ಜಾತ್ರೆ.. ಈ ಕಾರ್ಯಕ್ರಮವನ್ನು ಸವಿಯುತ್ತಾ ಕಾರ್ಯಕ್ರಮ ಮುಗಿಯುವ ತನಕ ಆಸನದಿಂದ ಏಳದಂತೆ ಕೂರಿಸಿದ್ದು ಜೀವಸ್ವರದ ತಾಕತ್ತು ಮತ್ತು ಜೀವ ತುಂಬಿ ನುಡಿಸುವ ಪ್ರತಿಭೆಯ ಸಂಗೀತ ವಾದ್ಯ ಗೋಷ್ಠಿ.. 





ಇಡೀ ತಂಡಕ್ಕೆ ಅಭಿನಂದನೆಗಳು.. ಹಾಗೂ ಇಂಥಹ ಕಾರ್ಯಕ್ರಮವನ್ನು ಆಯೋಜಿಸಿರುವ ಚಿತ್ರಕೂಟ ಶಾಲೆಯ ತಂಡಕ್ಕೆ ಅಭಿನಂದನೆಗಳು ಹಾಗೂ ಧನ್ಯವಾದಗಳು.. 

****

ಜೀವನದಲ್ಲಿ ಕಠಿಣವಾದ ಹಾದಿ ತುಳಿದು ಬಂದಿದ್ದ ನಂದನ್ ಕಾರ್ಯಕ್ರಮಕ್ಕೆ ಬಂದಿದ್ದ.. ಮನಸ್ಸು ಗೊಂದಲದ ಗೂಡಾಗಿತ್ತು.. ಬೇಸರದಿಂದ ಕುಸಿದಿದ್ದ ನಂದನ್.. ಸ್ವಲ್ಪ ತನಗೆ ತಾನೇ ಸಮಯ ಕೊಟ್ಟುಕೊಂಡು ಮನಸ್ಸಿಗೆ ಕೊಂಚ ವಿಶ್ರಾಂತಿ ಕೊಡಲು ಜೀವ ಸ್ವರದ ಕಾರ್ಯಕ್ರಮಕ್ಕೆ ಬಂದಿದ್ದ.. 

ತನ್ನ ಪಾಡಿಗೆ ತಾನು ಹಿಂದಿನ ಸಾಲಿನಲ್ಲಿ ಕೂತು ಕಾರ್ಯಕ್ರಮ ನೋಡಲು ಯೋಚಿಸಿದ್ದ.. ಕಾಡುವ ಮೊಬೈಲನ್ನು ಆಫ್  ಮಾಡಿ  ತನ್ನ ಕಾರಿನಲ್ಲಿ ಒಗೆದು ಬಂದಿದ್ದ.. 

ಮಹೇಶ್ ಸೊಗಸಾದ ಧ್ವನಿಯಲ್ಲಿ ಎಲ್ಲರನ್ನು ಪರಿಚಯಿಸಿ.. ಕೃತಜ್ಞತಾ ಪೂರ್ವಕವಾಗಿ ಎಲ್ಲರಿಗೂ ಧನ್ಯವಾದಗಳನ್ನು ತಿಳಿಸಿ.. ಕಾರ್ಯಕ್ರಮವನ್ನು ಶುರು ಮಾಡಿದರು.. 

 ಮಹಿಳೆಯರಿಗೆ ಮೊದಲ ಅವಕಾಶ ಎಂದು.. "ತೆರೆದಿದೆ ಮನೆ ಓ ಬಾ ಅತಿಥಿ"  ಹಾಡು ಶುರುವಾಯಿತು.... ಹಾಡು ಕೇಳುತ್ತಾ ಹಾಗೆ ಮೈ ಮರೆತಿದ್ದ ನಂದನ್ ಗೆ ಒಂದು ಕೋಗಿಲೆ ದನಿ ಕೇಳಿದ ಅನುಭವ.. ಕಿವಿಗೆ ದೊಡ್ಡ ಇಯರ್ ರಿಂಗ್ ಹಾಕಿಕೊಂಡು ಪಿಂಕ್ ಬಣ್ಣದ ಚೂಡಿದಾರ್ ತೊಟ್ಟಿದ್ದ ತರುಣಿ.. "ಸರ್ ಇಲ್ಲಿ ಕೂರಬಹುದೇ.. ಯಾರಾದರೂ ಬರುತ್ತಾರಾ?" ..
"ಇಲ್ಲ ಮೇಡಂ ಯಾರೂ ಇಲ್ಲ ಕೂತುಕೊಳ್ಳಿ" ಎಂದ.. 

ಹಾಡು ಇಂಪಾಗಿ ಮೂಡಿ ಬರುತಿತ್ತು.. ಬೆಳಕು ಕಣ್ಣು ಮುಚ್ಚಾಲೆ ಆಡುತ್ತಿತ್ತು.. ಅಲ್ಪ ಸ್ವಲ್ಪ ಬೆಳಕಲ್ಲಿ ಆ ತರುಣಿಯನ್ನೊಮ್ಮೆ ನೋಡಿದ.. ಮುದ್ದಾದ ಮೊಗ.. ಪುಟ್ಟ ಬೈತಲೆ.. ಕಣ್ಣುಗಳು ಕಾಡುವಂತಿತ್ತು.. ಅಲ್ಲಿದ್ದ ಯಾರೋ ತನ್ನ ಗೆಳತಿಗೆ ಒಮ್ಮೆ ಒಂದು ನಗುಕೊಟ್ಟಳು .. ಆ ನಗುವನ್ನು ಆ ಅರೆ ಬರೇ ಕತ್ತಲೆಯಲ್ಲೂ ಗುರುತಿಸುವಂತಿತ್ತು.. ಯಾಕೋ ಇದ್ದಕಿದ್ದ ಹಾಗೆ ನಂದನ್ ತುಸು ಗಮನಿಸತೊಡಗಿದ.. 

ಹಾಡು ಮುಗಿದಾಗ ಜೋರಾದ ಚಪ್ಪಾಳೆ ಬಿದ್ದಾಗ ಮತ್ತೆ ತನ್ನ ಲೋಕದಿಂದ ಜಾರಿಬಂದ.. 

ಮಹೇಶ್ ಗಾಯಕಿಯರಿಗೆ ಧನ್ಯವಾದಗಳನ್ನು ಹೇಳುತ್ತಾ ಮುಂದಿನ ಹಾಡು ಎಂದು ಹೇಳುತ್ತಿದ್ದರು.. 

ಇತ್ತ ನಂದನ್ ಗೆ ಈ ತರುಣಿಯ ಧ್ವನಿ ಕೇಳುವ ಆಸೆ ಇತ್ತು.. ವೇದಿಕೆಯಲ್ಲಿ "ಬೋಲೇ ರೇ ಪಪಿ.. ಪಪಿಹರ.. " ಹಾಡಿನಂತೆ.. ಈ ತರುಣಿಯ ಧ್ವನಿಯೂ ಕೋಗಿಲೆಯ ಧ್ವನಿಯಂತೆ.. ಮೆಲುದನಿಯಲ್ಲಿ ಮೊಬೈಲಿನಲ್ಲಿ ಯಾರಿಗೂ ಹೇಳುತ್ತಿದ್ದಳು.. ಅವಳು ಏನು ಹೇಳಿದಳು ಎನ್ನುವುದಕ್ಕಿಂತ.. ಆ ದನಿ ಕೇಳುವುದರಲ್ಲಿಯೇ ಮೈ ಮರೆತಿದ್ದ ನಂದನ್.. 

ಮನದಲ್ಲಿಯೇ.. "ಚುರಾಲಿಯ ಹೇ ತುಮ್ ನೇ ಜೋ ದಿಲ್ ಕೋ ನಜರ್ ನಹಿ ಚುರಾನ ಸನಮ್" ಹಾಡಿಕೊಂಡು.. ಯಾಕೋ ಆ ಹುಡುಗಿಯ ಕಡೆಗೆ ತಿರುಗಿದ.. ಸಂಪಿಗೆ ಮೂಗು.. ಅದಕ್ಕೆ ಒಪ್ಪುವ ಹರಳಿನ ಹೊಳೆಯುವ ಮೂಗುತಿ.. ನಿಜಕ್ಕೂ ನಂದನ್ ಮನಸ್ಸನ್ನು ಗೆಲ್ಲುವತ್ತಾ ಹೆಜ್ಜೆ ಹಾಕುತ್ತಿದ್ದಳು ಆ ತರುಣಿ.. ಅವಳ ಬಗ್ಗೆ ಇವನಿಗೆ ಗೊತ್ತಿಲ್ಲ.. ಇವನ ಬಗ್ಗೆ ಅವಳಿಗೆ ಗೊತ್ತಿಲ್ಲ.. 

ಅತ್ತ.. ರೇವತಿ ಅವತ್ತು ತಾನೇ ವಿಚ್ಚೇದನದ ಒಪ್ಪಿಗೆ ಪತ್ರ ಕೈಗೆ ಸಿಕ್ಕಿತ್ತು.. ಬಿಡುಗಡೆಯಾಗಿತ್ತು ಮನಸ್ಸು.. ಯಾವ ಬಂಧನವೂ ಇಲ್ಲ ಎಂದು ಮನಸ್ಸು ಹಗುರಾಗಿತ್ತು.. ತನ್ನ ಫೇಸ್ಬುಕ್ ಗೆಳತಿ ಈ ಕಾರ್ಯಕ್ರಮದ ಬಗ್ಗೆ ಹೇಳಿದ್ದರಿಂದ.. ಮರು ಮಾತಾಡದೆ ಬಂದಿದ್ದಳು.. ಆದರೆ ತಡವಾಗಿದ್ದರಿಂದ.. ಹಿಂದೆಯೇ ಕುಳಿತುಕೊಳ್ಳಬೇಕಿತ್ತು.. ತುಂಬಿ ತುಳುಕುತ್ತಿದ್ದ  ಸಭಾಂಗಣ.. ಆಕೆಯ ಗೆಳತಿ ಮುಂದಿನ ಸಾಲಿನಲ್ಲೆಲ್ಲೋ ಇದ್ದದ್ದರಿಂದ ಅಲ್ಲಿಗೆ ಹೋಗಲು ಸಾಧ್ಯವಾಗದೆ.. ಆಮೇಲೆ ಹೋಗೋಣ ಅಂತ ನಂದನ್ ಪಕ್ಕದಲ್ಲಿಯೇ ಕೂತಿದ್ದಳು.. 

ಮನಸ್ಸು ಹಕ್ಕಿಯ ಹಾಗೆ ಆಗಿತ್ತು.. "ನನ್ನ ದೈವ ಕಣ್ಣ ಮುಂದಿರೇ.. ಮೌನ ಕೂಡ ಮಾತಾಡಿದೆ" ಈ ಮೌನದಲ್ಲಿಯೂ ಮಾತಾಡುವ ಸಂಗಾತಿಯ ಹುಡುಕಾಟದಲ್ಲಿದ್ದಳು.. ಆಕೆಯ ಗೆಳತೀ ಇದಕ್ಕೆ ಸಹಾಯ ಮಾಡುವುದಾಗಿ ಹೇಳಿದ್ದಳು.. 

ತನ್ನ  ಮನದ ಕದವ ತಟ್ಟಿ "ಛೂಕರ್ ಮೇರೇ ಮನ್ ಕೋ ತೂನೇ ಕಿ ಯೆ ಇಶಾರ" ಎನ್ನುವ ಆ ಹೊಸ ವಸಂತಕ್ಕೆ ಆಕೆಯ ಮನ ಕಾದಿತ್ತು.. ತನ್ನ ಬಾಳಿನಲ್ಲಿ "ಪಂಚವೇದ ಪ್ರೇಮದ ನಾದ" ಕೇಳಬಹುದೇ ಎನ್ನುವ ಆಶಾ ಭಾವನೆ ನಿಧಾನವಾಗಿ ಮುಳುಗುತ್ತಿರುವ ಮನಸ್ಸನ್ನು ತೇಲಿಸುವ ಪ್ರಯತ್ನ ಮಾಡುತಿತ್ತು .. 

ತನ್ನ ಕಂಗಳಲ್ಲಿ ಮುದ್ದಾದ ಒಂದು ಕನಸು ಕಾಣುತ್ತಾ "ಸುರು ಮೈ ಅಕ್ಕಿಯೊಮೆ ಏಕ್ ನನ್ಹ ಮುನ್ನ ಸಪುನಾ ದೇ ಜಾರೇ" ಆ ಒಂದು ಕನಸಿಗೆ ಕಾಯುತ್ತಿದ್ದಳು... 

ನಂದನ್ ಅವಳನ್ನು ನೋಡುತ್ತಲೇ ಇದ್ದ.. ಮಾತಾಡಿಸಬೇಕು ಎನ್ನುವ ಕಾತುರತೆ.. ಆದರೆ ಮನದಲ್ಲಿ ಹೆದರಿಕೆ.. ಆ ಹೆದರಿಕೆಗೆ ತಕ್ಕಂತೆ "ಬಾಬೂಜಿ ಧೀರೆ ಚಲ್ ನಾ.. ಸಾಮುನೇ ಝರಾ ಸಂಬಲ್ನ"  ಹಾಡು ಬಂದಾಗ.. ಛೆ ಎನ್ನುತ್ತಾ ತನ್ನ ಕುರ್ಚಿಯನ್ನು  ಸರಿಯಾಗಿ ಎಳೆದುಕೊಂಡು ಆ ಹುಡುಗಿಯಿಂದ ತುಸು ದೂರ ಕೂತ.. ಆದರೂ ಮನಸ್ಸು ಕೇಳಬೇಕೆ "ಏ ಮೇರಾ ದಿಲ್ ಪ್ಯಾರ್ ಕಾ ದೀವಾನಾ"  ಎನ್ನುತ್ತಾ ಮತ್ತೆ ಆಕೆಯ ಕಡೆಗೆ ಸೆಳೆಯುತಿತ್ತು.. ತನ್ನ ಮನಸ್ಸಿಗೆ ಕೇಳುತ್ತಲೇ ಇದ್ದ.. ಯಾಕೋ ಅಷ್ಟು ಸೆಳೆಯುತ್ತಾಳೆ ಆ ಹುಡುಗಿ ಅಂಥದ್ದು ಏನು ಸೆಳೆಯುತ್ತಿದೆ.. ಸ್ವಲ್ಪ ಸಮಾಧಾನ ಮಾಡಿಕೊಳ್ಳಪ್ಪಾ ಎಂದು ತಾನೇ  ಮನಸ್ಸನ್ನು ಒಮ್ಮೆ ತಟ್ಟಿಕೊಂಡ.. 

ಮನಸ್ಸು ಹೇಳಿತು.. "ಲೋ ಮಂಗ್ಯಾ ನಂದನ್.. ಗುಲಾಬಿ ಆಂಕೆ..ಕಣೋ ಅದೇ ನಿನ್ನ ಸೆಳೆಯುತ್ತಿರುವುದು.. ಆರಾಮಾಗಿ ಇರು.. ಎಲ್ಲವೂ ಸರಿಯಾಗುತ್ತೆ.. " ಎಂದರೂ ಮನಸ್ಸು ತಡೆಯುತ್ತಲೇ ಇರಲಿಲ್ಲ.. 

"ಕಾಣದ ಕಡಲಿಗೆ ಹಂಬಲಿಸಿದೆ ಮನ"  ಎನ್ನುವ ಗೊಂದಲ ರೇವತಿಗೆ ಕಾದಿದ್ದರೂ.. ಆಕೆಗೆ ಅವಳ ಗೆಳತಿಯಲ್ಲಿ ಏನೋ ಒಂದು ವಿಚಿತ್ರ ನಂಬಿಕೆ.. ಆಕೆ ತನ್ನ ಜೀವನವನ್ನು ಸರಿ ದಾರಿಗೆ ತರುತ್ತಾಳೆ ಎನ್ನುವ ನಂಬಿಕೆ.. ಹಾಗಾಗಿ ನಂದನ್ ತನ್ನನ್ನು ಗಮನಿಸುತ್ತಿದ್ದರೂ ಆಕೆಗೆ ಅದರ ಬಗ್ಗೆ ಕುತೂಹಲವಿರಲಿಲ್ಲ..ಅದರ ಕಡೆಗೆ ಗಮನವಿರಲಿಲ್ಲ.. ಆಕೆಯ ಮನದಲ್ಲಿ ಓಡುತ್ತಿದ್ದದ್ದು ಒಂದೇ.. "ಒಲುಮೆ ಪೂಜೆಗೆಂದೇ.. ಕರೆಯ ಕೇಳಿ ಬಂದೆ" ಎನ್ನುವ ಒಂದು ಹೃದಯದ ಕೂಗು..  

ತನ್ನ ಹಣಕಾಸಿನ ಪರಿಸ್ಥಿತಿಯನ್ನು ಒಂದು ಹಂತಕ್ಕೆ ತರುವ ಹೊಣೆ ನಂದನ್ ಮೇಲೆ ಇತ್ತು.. ಬದುಕಿನಲ್ಲಿ ಸಿಕ್ಕ ತಿರುವು ಅವನನ್ನು ಹಿಂಡಿ ಹಿಪ್ಪೆ ಮಾಡಿತ್ತು.. ಉಳಿಸಿದ್ದು ಗಳಿಸಿದ್ದು ಎಲ್ಲವೂ ದಿನಕರನ ತಾಪಕ್ಕೆ ಸಿಕ್ಕ ಮಂಜಿನ ಗೆಡ್ಡೆಯಾಗಿತ್ತು.. ಹಾಗಾಗಿ ಜೀವನವನ್ನು ಮತ್ತೆ ತಿರುಗಿಸಬೇಕಾದ ಅವಶ್ಯಕತೆ ಇತ್ತು.. ಮನದಲ್ಲಿ ಆ ಕಾಂಚಾಣದ ಬಗ್ಗೆ ಯೋಚಿಸುತ್ತಲೇ ಬೇಂದ್ರೆ ಅಜ್ಜನ "ಕುರುಡು ಕಾಂಚಾಣ" ಪದ್ಯ ಶಾಲೆಯಲ್ಲಿ ಓದಿದ್ದು ನೆನಪಿಗೆ ಬಂದು.. ಹಾಗೆ ತುಟಿಯಲ್ಲಿ ಒಂದು ಮಂದಹಾಸ ಸುಳಿದು. ತನ್ನಷ್ಟಕ್ಕೆ ತಾನೇ ನಕ್ಕು.. ಪಕ್ಕದ ಸೀಟಿನ ಮೇಲೆ ಅರಿಯದೆ ತನ್ನ ಕೈಯನ್ನು ಚಾಚಿದ..  ಅವನಿಗರಿವಿಲ್ಲದೆ.. ಅವನ ಕೈ.. ರೇವತಿಯ ಭುಜದ ಸುತ್ತಾ ಬಳಸಿತ್ತು. 

ಅಚಾನಕ್ ಕೈ ಸ್ಪರ್ಶವಾದದ್ದಕ್ಕೆ ಗಾಬರಿ ಬಿದ್ದು.. ರೇವತಿ ತಿರುಗಿ ನೋಡಿದಾಗ.. ಕಂಡದ್ದು ನಂದನ್ ರೂಪ.. 

"ಸಾರಿ ಮೇಡಂ.. ಬೇಕು ಅಂತ ಮಾಡಲಿಲ್ಲ.. ಗೊತ್ತಾಗಲಿಲ್ಲ ಕ್ಷಮಿಸಿ.. ಸಾರಿ.. ಸಾರಿ "

"ಸರ್ ಪರವಾಗಿಲ್ಲ.. its ok.. dont worry" ಎಂದು heart stopping smile ಕೊಟ್ಟಳು ರೇವತಿ.. ಮತ್ತೆ
ಮೆಲ್ಲನೆ ಅವನ ಕಡೆ ನೋಡಿದಾಗ ಏನೋ ಒಂದು ರೀತಿಯ ಸೆಳೆಯುವ ವ್ಯಕ್ತಿತ್ವ ಈತನಲ್ಲಿದೆ ಅನಿಸಿತು.. ಸಾಮಾನ್ಯ ಯಾರಾದರೂ ಗೊತ್ತಿದ್ದೋ ಗೊತ್ತಿಲದೆಯೋ ತನ್ನನ್ನು ಮುಟ್ಟಿದರೆ ದುರ್ಗಿಯ ಅವತಾರ ತಾಳುತಿದ್ದ ರೇವತಿ ಸಂಯಮದಲ್ಲಿದ್ದದ್ದು ಅವಳಿಗೆ ಅಚ್ಚರಿ ತಂದಿತ್ತು.. 

ತುಸು ಶಾಮಲ ವರ್ಣವಾದರೂ ಏನೋ ಪಾಸಿಟಿವ್ ವೈಬ್ಸ್.. ಇದೆ ಅನಿಸಿತ್ತು ಅವಳಿಗೆ.. ಮತ್ತೆ ಕ್ಷಮೆ ಕೇಳಿ ಎರಡೆರಡು ಬಾರಿ ಸಾರಿ ಹೇಳಿ... ಕುರ್ಚಿಯನ್ನು ತನ್ನಿಂದ ತುಸು ದೂರದಲ್ಲಿ ಜರುಗಿಸಿಕೊಂಡದ್ದು.. ಅರಿಯದೆ ಆ ವ್ಯಕ್ತಿಯ ಬಗ್ಗೆ ಒಂದು ರೀತಿಯ ಗೌರವ ಮೂಡಿತು.. ಅದೇ ಗುಂಗಿನಲ್ಲಿ ಹಾಡು ಕೇಳುತ್ತಿದ್ದಳು.. ಮನದಲ್ಲಿ "ಒಲುಮೆ ಪೂಜೆಗೆಂದೇ" ಹಾಡು ಮಾರ್ದನಿಯುತಿತ್ತು..  

ಆ ನಗುವನ್ನು ನೋಡುತ್ತಲೇ.. "ನಗುವ ನೀನು ಮಿಂಚಂತೆ.. ಗೀತಾ ಸಂಗೀತಾ" ಹಾಡು ನೆನಪಿಗೆ ಬಂತು ..

ಕಾರ್ಯಕ್ರಮ ಮುಗಿಯುವ ಹಂತಕ್ಕೆ ಜಾರುತ್ತಿತ್ತು.. ಸಂಗೀತ ಮಾಂತ್ರಿಕ ಇಳಯರಾಜ ಅವರ ಒಂದಷ್ಟು ಗೀತೆಗಳನ್ನು ಜೊತೆ ಮಾಡಿಕೊಂಡು.. ಸರ ಸರ ಹಾಡುತ್ತಿದ್ದರು.. ಎಲ್ಲವೂ ಒಂದಕ್ಕಿಂತ ಒಂದು ಸೊಗಸಾಗಿತ್ತು.. ಕನ್ನಡ, ತಮಿಳು, ತೆಲುಗು ಭಾಷೆಗಳ ಹಾಡುಗಳನ್ನು ಸರಾಗವಾಗಿ ಹಾಡುತ್ತಿದ್ದರು.. 

ಸುಮಾರು ಹತ್ತು ಹಾಡುಗಳ ಗುಚ್ಛವನ್ನು ಇಳಯರಾಜ ಅವರಿಗೆ ಸಮರ್ಪಿಸಿ.. ಎರಡು ಘಂಟೆಗಳಿಂದ ಕೂತು ಸಂಗೀತವನ್ನು ಆಸ್ವಾಧಿಸುತ್ತಿದ್ದ ಸಂಗೀತ ರಸಿಕರಿಗೆ.. ಹುಚ್ಚೆಬಿಸುವಂತೆ ಹನ್ನೊಂದು ಹಾಡುಗಳ  ಫಾಸ್ಟ್ ಬೀಟ್ ತುಂಬಿಸಿ ಕುಣಿಸಿದರು.. ಒಂದಕ್ಕಿಂತ ಒಂದು ಸೂಪರ್ ಹಿಟ್ ಹಾಡುಗಳು ಅವು.. ವಯಸ್ಸಿನ ಇತಿಮಿತಿಯಿಲ್ಲದೆ ಕುಣಿಯಲೇ ಬೇಕು ಎನ್ನಿಸುವಂಥ ಹಾಡುಗಳು ಅವು.. 

ಸಂಗೀತ ಕಾರ್ಯಕ್ರಮದ ಅಲಿಖಿತ ನಿಯಮದ ಕೊನೆ ಹಾಡು "ಕುಲದಲ್ಲಿ ಕೀಳ್ಯಾವುದೋ" ಹಾಡು ಬಂದಾಗ ಪ್ರಾಯಶಃ ಇಡೀ ಸಭಾಂಗಣ ಕುಣಿಯಿತು.. 

ಇಡೀ ಕಾರ್ಯಕ್ರಮವನ್ನು ತಮ್ಮ ಭುಜದ ಮೇಲೆ ಹೊತ್ತು ನಿರೂಪಣೆ ಮಾಡಿದ ಮಹೇಶ್ ಎಲ್ಲರಿಗೂ ಧನ್ಯವಾದಗಳನ್ನು ಅರ್ಪಿಸಿದರು.. ಇದಕ್ಕೆ ತುಸು ಮುಂಚೆ ಚಿತ್ರಕೂಟ ಶಾಲೆಯ ಶ್ರೀ ಚೈತನ್ಯ ಅವರು ವೇದಿಕೆಗೆ ಬಂದು.. ಶ್ರುತಿ ಮಹೇಶ್ ದಂಪತಿಗಳನ್ನು ಎಲ್ಲರಿಗೂ ಪರಿಚಯಿಸಿದಾಗ ಸೂರು ಕಿತ್ತೋಗುವಷ್ಟು ಜೋರಾದ ಚಪ್ಪಾಳೆ ಬಂದಿತ್ತು .. 

ಮಾಲತಿ ಕಣವಿ ಅವರು ಗಾಯಿತ್ರಿ ಮದುವೆ ಚಿತ್ರದ "ನನ್ನ ದೈವ ಕಣ್ಣ ಮುಂದಿರೇ" ಹಾಡಿನಲ್ಲಿ ಹಲವಾರು ಸಂಗತಿಗಳನ್ನು, ಸ್ವರಗಳ ಆರೋಹಣ ಅವರೋಹಣವನ್ನು ವಾದ್ಯಗಾರರ ಜೊತೆಯಲ್ಲಿ ಜುಗಲ್ಬಂದಿ ಮಾಡಿದಾಗ ನೆರೆದಿದ್ದವರಿಂದ ಬಂದ ಚಪ್ಪಾಳೆ.... ಬೋಲೇ ರೇ ಪಪಿಹರ ಹಾಡನ್ನು ಏಕ್ ದಂ ಟೇಕ್ ಆಫ್ ಮಾಡಿದ ಶ್ರುತಿ ಅವರ ಕಂಠ ಸಿರಿಗೆ... ಓಹೋ ಒಹೋ.. ಏ ಮೇರೇ ದಿಲ್ ದಿವಾನ ಹಾಡನ್ನು ಕುಣಿಯುವಂತೆಯೇ ಹಾಡಿದ ಅರುಂಧತಿ ವಸಿಷ್ಠ ಅವರ  ಧ್ವನಿಗೆ.. ಕಾಣದ ಕಡಲಿಗೆ ಹಾಡಿನಲ್ಲಿ ಅಕ್ಷರಶಃ ಭಾವನೆಗಳ ಕಡಲಿಗೆ ಕೊಂಡೊಯ್ದ ಮಹೇಶ್... ನಗಲು ನೀನು ಮಿಂಚಂತೆ ಎಂದು ಎಲ್ಲರ ಮನಸ್ಸನ್ನು ಗೆದ್ದ ಮನೋಜ್ ವಸಿಷ್ಠ.. ಕೀ ಪ್ಯಾಡ್ ನಲ್ಲಿ ಜಾದೂ ಮಾಡಿದ ಕೃಷ್ಣ ಉಡುಪ.. ಇನ್ನೊಂದು ಕೀ ಬೋರ್ಡ್ ನಲ್ಲಿ ಗಮನ ಸೆಳೆದ ಸಾಲೊಮನ್.. ಪ್ರತಿ ಹಾಡಿಗೂ ಲಯಬದ್ಧವಾಗಿ ಕುಣಿಯುವಂತೆ ಮಾಡಿದ ಡ್ರಮ್ಸ್ ನ ಕೃಷ್ಣ.. ತಬಲಾದಲ್ಲಿ ಕೈಬೆರಳುಗಳು ನರ್ತಿಸುವುದುನ್ನು ತೋರಿಸಿದ ಕಾರ್ತಿಕ್ ಭಟ್.. ಇವರುಗಳ ಪರಿಶ್ರಮವನ್ನು ಎಲ್ಲರಿಗೂ ತಲುಪಿಸಿದ ಧ್ವನಿ ಆಯೋಜಕರು .. ಇದಕ್ಕೆಲ್ಲ ಕಳಶವಿಟ್ಟಂತೆ ಚಿತ್ರಕೂಟ ಶಾಲೆ.. ಅದರ ಸಿಬ್ಬಂದಿ  ಎಲ್ಲರಿಗೂ ವಂದನೆಗಳನ್ನು ಅರ್ಪಿಸಿ.. ಮಹೇಶ್ ಶುಭರಾತ್ರಿ ಹೇಳಿದರು.. 

ಮಹೇಶ್ ಅವರ ಪ್ರಾಣಪ್ರಿಯರಾದ ಶ್ರೀ ಸಿ ಅಶ್ವಥ್ ಮತ್ತು ಜಿ ಎಸ್ ಶಿವರುದ್ರಪ್ಪ ಅವರು ಮಹೇಶ್ ಕಂಠ ಸಿರಿಯಲ್ಲಿ ಕಾಣದ ಕಡಲಿಗೆ ಹಾಡನ್ನು ಭಾವ ಪೂರ್ಣವಾಗಿ ಹಾಡಿದಾಗ ಅವರು ಹರಸಿದ್ದು ನನ್ನ ಮನದ ಕಣ್ಣಿಗೆ ಕಂಡಿತು.. ಅದೇ ಮೊಬೈಲ್ ಕ್ಯಾಮೆರಾದಲ್ಲಿ ಸೆರೆಯಾಯಿತು.. ಎರಡು ಬೆಳಕಿನ ಕಿರಣವಾಗಿ ಅಶ್ವಥ್ ಸರ್ ಮತ್ತು ಜಿ ಎಸ್ ಎಸ್ ಅವರು ಹರಸಿದರು ಎಂದು ನನ್ನ ಮನಸ್ಸು ಹೇಳಿತು. 

ಎರಡು ಜೀವಾತ್ಮಗಳು ಮಹೇಶ್ ಅವರನ್ನು
ಹರಸಿದ್ದು ಬೆಳಕಿನ ಕಿರಣಗಳಾಗಿ 
ರೇವತಿ ತಕ್ಷಣ ತನ್ನ ಗೆಳತಿಗೆ ಕರೆ ಮಾಡಿ ತಾನು ಇರುವ ಜಾಗವನ್ನು ಹೇಳಿದಳು.. ಆಗಲೇ ಜನರು ಎದ್ದು ಹೊರಡುತ್ತಿದ್ದರಿಂದ... ಆ ಗಡಿಬಿಡಿಯಲ್ಲಿ ಕಳೆದು ಹೋಗಬಹುದೆಂದು.. ಆಕೆಯ ಗೆಳತೀ.. ರೇವತಿಗೆ ಎಲ್ಲಿ ಕೂತಿದ್ದಳೋ ಅಲ್ಲಿಯೇ ಇರುವಂತೆ ಹೇಳಿದಳು.. ತುಸು ಜೋರಾಗಿಯೇ.. ತಾನು ಕೂತಿದ್ದ ಜಾಗವನ್ನು ಮತ್ತೆ ಹೇಳಿ ಕೂತಳು.. 

ನಂದನ್ ಗೆ ಹೋಗುವ ಇಷ್ಟವಿರಲಿಲ್ಲ.. ಎಲ್ಲ ದೀಪಗಳನ್ನು ಹಾಕಿದ್ದರಿಂದ.. ಈ ತರುಣಿಯ ಮೊಗ ಸೊಗಸಾಗಿ ಕಾಣುತ್ತಿತ್ತು.. ಆ ಬೆಳಕು.. ಅವಳು ತೊಟ್ಟಿದ್ದ ಪಿಂಕ್ ಚೂಡಿದಾರ್... ಕತ್ತಿಗೆ ಹಾಕಿದ್ದ ತುಸು ದಪ್ಪನೆಯ ಸರ.. ಕಿವಿಯಲ್ಲಿ ದೊಡ್ಡ ರಿಂಗ್.. ಹಣೆಯಲ್ಲಿ ಪುಟ್ಟದಾದ ಕಪ್ಪನೆಯ ಸ್ಟಿಕ್ಕರ್..ಬ್ಲೂ ಟೂತ್ ಹ್ಯಾಂಡ್ಸ್ ಫ್ರೀ.. ಅವಳ ಕತ್ತಿನಲ್ಲಿ ತೂಗಾಡುತಿತ್ತು.. ಅವಳ ವ್ಯಾನಿಟಿ ಬ್ಯಾಗ್... ಅವಳಿಗೆ ಹೊಂದುವಂತೆ ಸರಿಯಾಗಿ ಅವಳನ್ನು ಸುತ್ತಿ ಬಳಸಿ ನೇತಾಡುತ್ತಿತ್ತು.. 

ರೇವತಿ ಕೂಡ ಅರಿಯದೆ ನಂದನ್ ಕಡೆ ತಿರುಗಿ ಮತ್ತೊಮ್ಮೆ ಕಿರುನಗೆಯನ್ನು ಬೀರಿದಳು.. 

ನಂದನ್ . "ಏನ್ಲಾ ಯಾವುದೋ ಹುಡುಗಿಯ ಪಕ್ಕದಲ್ಲಿ ನಿಂತಿದ್ದೀಯಾ... ಹುಡುಗಿ ಇದ್ದಾಗ ಪ್ರಪಂಚ ಎಲ್ಲಿ ಕಾಣುತ್ತೆ..  ಆ ದನಿಯನ್ನು ಕೇಳಿ ಕೋಳಿಯ ಹಾಗೆ ಆ ಕಡೆ ಈ ಕಡೆ ನೋಡಿದಾಗ ತನ್ನ ಗೆಳೆಯ ಸಮೀರ್ ಕಾಣಿಸಿದ.. ಅರೆ ಸಾಲೇ ಎಂದು ಬರಸೆಳೆದು ಅಪ್ಪಿಕೊಂಡ.. 

ರೇವತಿ ಮತ್ತೆ ತನ್ನ ಗೆಳತಿಗೆ ಕರೆ ಮಾಡಿದಳು.. ಅತ್ತ ಕಡೆಯಿಂದ ಬೇಗನೆ ಬರುವುದಾಗಿ ಸಂದೇಶ ಸಿಕ್ಕಿತು ಅನಿಸುತ್ತೆ.. "ಬೇಗನೆ ಬಾರೆ" ಎನ್ನುತ್ತಾ ತುಸು ಮುನಿಸಿನಿಂದಲೇ ಕೂಗಿದಳು.. 

ರೇವತಿಯ ಜಡೆಯನ್ನು ಮೆಲ್ಲಗೆ ಯಾರೋ ಎಳೆದಾಗ ಸರಕ್ಕನೆ ತಿರುಗಿದಾಗ ಕಂಡಿದ್ದು ಆಕೆಯ ಪ್ರಾಣದ ಗೆಳತೀ.. ಸಂಗೀತ... ಇಬ್ಬರೂ ಅಪ್ಪಿಕೊಂಡು.. ಪಕ್ಕಕ್ಕೆ ಕರೆದು.. "ಅಲ್ವೇ ನಾನು ನಿನಗೆ ಒಂದು ಪ್ರಪೋಸಲ್ ತೋರಿಸ್ತೀನಿ ಅಂದ್ರೆ.. ಅವನ ಜೊತೆಯಲ್ಲಿಯೇ ಕೂತಿದ್ದೆಯಲ್ಲೇ.. " ಎಂದಾಗ ರೇವತಿ ಬೊಗಸೆ ಕಣ್ಣಿನಿಂದ ಯಾರು ಎನ್ನುತ್ತಾ ನಂದನ್ ಕಡೆ ತಿರುಗಿ ಮತ್ತೆ ಸಂಗೀತಾಳ ಕಡೆಗೆ ಕಣ್ಣು ಬೀರಿದಳು.. 

ಸಂಗೀತ ಹೌದು ಎನ್ನುವಂತೆ ತಲೆಯಾಡಿಸಿದಳು.. ಮತ್ತೆ ಸಮೀರನ್ನು ನೋಡಿ.. ರೀ ನಿಮಗಾಗಿ ಇಡೀ ಶಾಲೆಯಲ್ಲಿ ಹುಡುಕಿ ಬಂದೆ.. ನೀವು ನೋಡಿದರೆ ಇಲ್ಲಿ ಇದ್ದೀರಾ.. "

"ಸಂಗೀತ ಇವನು ನನ್ನ ಗೆಳೆಯ .. ನಂದನ್ ಕಣೆ.. ಅದೇ ಹೇಳಿದ್ದೆ ಅಲ್ವ.. " ಎಂದು ಕಣ್ಣು ಹೊಡೆದ.. 

ಸಂಗೀತಳಿಗೆ ವಿಷಯ ಗೊತ್ತಿದ್ದರೂ ಪರಿಚಯವಿರಲಿಲ್ಲ.. ಮೊಗವರಳಿಸಿ . ಓಹೋ ಇಬ್ಬರೂ ಇಲ್ಲಿಯೇ ಇದ್ದಾರೆ.. ನಮ್ಮ ಕೆಲಸ ಸಲೀಸಾಯಿತು.. 

"ರೇವತಿ.. ಇವರೇ ನಂದನ್.. ನನ್ನ ಗಂಡನ ಜಿಗ್ರಿ ದೋಸ್ತ್..ನಾ ಭೇಟಿಯಾಗಿರಲಿಲ್ಲ ಇಂದು ನಿನ್ನಿಂದಾಗಿ ಇವರನ್ನು ಪರಿಚಯ ಆದ ಖುಷಿ ನನಗೆ..  .. ರೀ ನಂದನ್ ಇವಳೇ ರೇವತಿ ನನ್ನ ಖಾಸಾ ದೋಸ್ತ್.. "

ರೇವತಿ ಮೊಗವರಳಿತು.. ನಂದನ್ ಮೊಗದಲ್ಲಿ ನಗುವರಳಿತು.. 

ಅವರ ಪಕ್ಕದಲ್ಲಿ ಕಾರ್ಯಕ್ರಮವನ್ನು ಮೊಬೈಲ್ ನಲ್ಲಿ ರೆಕಾರ್ಡ್ ಮಾಡಿಕೊಂಡಿದ್ದ ಒಬ್ಬರು.. ಅದನ್ನು ಚೆಕ್ ಮಾಡೋದಕ್ಕೆ ಹಾಕಿದ್ದ ಹಾಡು "ಒಲುಮೆ ಪೂಜೆಗೆಂದೇ" ಹಾಡು ಬರುತಿತ್ತು.. 

ರೇವತಿ ಕಣ್ಣು ಹೊಡೆದಳು.. ನಂದನ್ ಕಣ್ಣಲಿಯೇ ಸಮ್ಮತಿಸಿದ.. !!!!