Monday, June 12, 2017

Sumದೀಪ ಸಿಂಚNaaaaaaaa.... !

"ಸಂದೀಪದ ಅಲೆಗಳ ಮೇಲೆ ಮೌನದ ಮೆರವಣಿಗೆ
ಆ ಆ ಇ ಈ ಕಲಿಸಲು ಹೋಗುವರು ಹಳ್ಳಿಯ ಮನೆ ಮನೆಗೆ
ಲಾ ಲಾ ಲಾ ಲಾ ಲಾ ಲಾ ಲಾ ಲಾ
ಯಾರೀ ನೀವು ಮೌನದ ಹುಡುಗ ಯಾರಿಗೆ ಕಾದಿರುವೆ
ಇನೋವಾ ಕ್ಯಾಬಿನಲ್ಲಿ ಕೂತು ಮೌನವಾಗಿರುವೆ.."

ಇವರನ್ನು ಮೊದಲು ನೋಡಿದಾಗ ಮತ್ತು ಇವರೇನಾ ನಾ ಮೊದಲು ನೋಡಿದ್ದು ಎನ್ನುವ ಭಾವಗಳ ನಡುವೆ .. ಮಾತು ಮೌನಗಳ ನಡುವೆ ಹೀಗೆ ಒಂದಕ್ಕೊಂದು ಸಂಬಂಧವಿಲ್ಲದೆ ಹಾಡು ಮನದಲ್ಲಿ ಮೂಡಿತ್ತು..

"ಅಲೆಮಾರಿಗಳು" ತಂಡ ಜನನವಾಗೋದಕ್ಕೆ ಇವರೇ ಒಂದು ಕಾರಣಕರ್ತರು.. ಹಾಗೆಯೇ ನಾ ಮನಸ್ಸಿಗೆ ಬಂದಂತೆ ಮಾತಾಡೋದು ನೋಡಿ.. ಶ್ರೀಕಾಂತ್.. ಇದನ್ನೆಲ್ಲಾ ನೀವು ಒಂದು ಕಡೆ ಬರೀಬೇಕು.. ಅಂತ ಹೇಳಿ.. ಈ ಬ್ಲಾಗ್ ಶುರುಮಾಡೋಕೂ ಇವರೇ ಕಾರಣ.. ಪಾಯಿಂಟ್ ಪಂಚರಂಗಿ ಅಂತ ನಾಮಕರಣವಾದಾಗ ಅತಿ ಸಂತೋಷ ಪಟ್ಟ ಪ್ರಜೆ ಇವರು..

ನಾವು ಮಾತಾಡಿದ್ದು ಬಹಳ ಬಹಳ ಕಡಿಮೆ.. ಕ್ಯಾಬ್ ನಲ್ಲಿದ್ದಾಗ, ಕೆಲವೊಮ್ಮೆ ದೂರವಾಣಿ ಕರೆಗಳು.. ಟ್ರಿಪ್ ನಲ್ಲಿ ಹೀಗೆ ಯಾವುದೇ ರೂಪದಲ್ಲಿಯೂ ಅಥವಾ ಸ್ಥಳಗಳಲ್ಲಿಯೂ ಕೆಲವೇ ಕೆಲವು ಮಾತುಗಳು.. ಅದು ಹಿತ ಮಿತ.. ಆದರೆ ನನ್ನ ಬಗ್ಗೆ ಅಪಾರವಾದ ನಂಬಿಕೆ.. ನನಗೂ ಹಾಗೆಯೇ ...

ನಾನೂ ಹಳ್ಳಕ್ಕೆ ಬೀಳುತ್ತಿದ್ದೇನೆ.. ದಯಮಾಡಿ ಬರಬೇಕು ಎಂದಾಗ.. ಸೂಪರ್ ಸಂದೀಪ್.. ಜೀವನದಲ್ಲಿ ಖುಷಿನೇ ಎಲ್ಲಾ ಅಲ್ಲ.. ಮದುವೆನೂ ಆಗಬೇಕು ಎಂದು ಕಾಲು ಎಳೆದಿದ್ದೇ.. !!!

ಸಕ್ಕರೆ ನಾಡಲ್ಲಿ ಆರತಕ್ಷತೆ ಎಂದಾಗ.. ಮುಲಾಜಿಲ್ಲದೆ ನನ್ನ ಮನೆಯ ಪರಿವಾರದವರು.. ಖಂಡಿತ ಹೋಗೋಣ  "ಶ್ರೀ"ಎಂದಿದ್ದಳು.. ನಾ ಓಕೇ ಅಂದಿದ್ದೆ (ಗೃಹಮಂತ್ರಿಗೆ ಇಲ್ಲ ಅನ್ನುವುದುಂಟೆ).. ಆದರೆ ಅಚಾನಕ್ ಮನೆಗೆ ಬಂದ "ಅನಾರೋಗ್ಯ" ಎಂಬ ಅತಿಥಿ ಗೃಹಮಂತಿಗೆ ಗೃಹಬಂಧನ ಮಾಡಿಬಿಟ್ಟಿತು.. ನೀವೊಬ್ಬರೇ ಹೋಗಿ ಬನ್ನಿ.. ಹಸಿರು ನಿಶಾನೆ ತೋರಿಸಿಯೇ ಬಿಟ್ಟಿದ್ದಳು..

ಆಫೀಸ್ ಕೆಲಸ.. ಗಡಿಬಿಡಿ.. ಆರತಕ್ಷತೆಯ ಕಾರ್ಯಕ್ರಮದ ಕಡೆಗೆ ಗಮನ ಹರಿಸಿರಲಿಲ್ಲ.. ನಮ್ಮ ವಾಟ್ಸಾಪ್ ಅಲೆಮಾರಿಗಳು ತಂಡಕ್ಕೂ ಸುಮ್ಮನೆ ಒಂದು ಸಂದೇಶ ಹಾಕಿದ್ದೆ.. ಯಾರು ಯಾರು ಬರುತ್ತೀರಾ ಅಂತ.. ಆದರೆ ಅವರವರ ಲೋಕ.. ಕಚೇರಿಯ ಒತ್ತಡ.. ವಿಮುಖರನ್ನಾಗಿ ಮಾಡಿತ್ತು ಅನ್ನಿಸುತ್ತದೆ..

"ಗುರುಗಳೇ.. ಯಾವಾಗ. ಹೇಗೆ.. ನಾ ಬರುತ್ತೇನೆ.. " ನಿಖಿತಾ ಅಲಿಯಾಸ್ ದರ್ಶನ ಕರೆವಾಣಿ ಮತ್ತೆ ಶನಿವಾರ ಜೂನ್ ಹತ್ತರ ಕಡೆ ಮುಖ ಮಾಡುವಂತೆ ಮಾಡಿತ್ತು.. ಹೋಗೋಣ ಬನ್ನಿ ಎಂದಿದ್ದೆ.. ಹೇಗಾದರೂ ಸರಿ.. ನೆಡೆದು.. ಕಾರು.. ಬಸ್ಸು.. ಬೈಕು.. ರೈಲು.. ಹೇಗಾದರೂ ಸರಿಯೇ ಎಂದಿದ್ದೆ.. ಲೋಕಾಭಿರಾಮವಾಗಿ.. !!!

"ಗುರುಗಳೇ.. ನಾ ಬರುತ್ತೇನೆ ಜೊತೆಯಲ್ಲಿ ಹೋಗೋಣ.. " ಶರವೇಗದ ಸರದಾರ ಹರೀಶ್ ಮಾತು.. ಮುಂದೆ ಆಲೋಚನೆಯೇ ಇಲ್ಲ.. ಕೌನ್  ಬನೇಗಾ ಕರೋಡ್ ಪತಿ ಸ್ಪರ್ಧೆಯಲ್ಲಿ ಆಯ್ಕೆಗಳೆಲ್ಲ ಮುಗಿದಿದ್ದು ಅಚಾನಕ್ ಸುಲಭ ಪ್ರಶ್ನೆ ಬಂದ ಹಾಗೆ..  ನಮ್ಮ ಮನೆಯ ಹತ್ತಿರ ಸಂಜೆ ಐದು ಮೂವತ್ತು ಕಣ್ಣು ಹೊಡೆಯುತ್ತಾ ನಿಂತಿತ್ತು ಅವರ ಕಾರು..

"ಹರೀಶ್ ಕೆಳಗೆ ಇಳಿಯಿರಿ.. "

"ಯಾಕೆ?"

"ನೀವು ಇಳಿಯಿರಿ ಮೊದಲು.. " ಗಾಬರಿ ಮೊಗದಲ್ಲಿ ಹರೀಶ್ ಕೆಳಗೆ ಇಳಿದರು.. ಒಂದು ಕರಡಿ ಅಪ್ಪುಗೆ ಕೊಟ್ಟೆ..ಈಗ ನೆಡೆಯಿರಿ ಮಂಡ್ಯಕ್ಕೆ ಅಂದೇ.. ಹೊಟ್ಟೆ ಹಿಡಿದುಕೊಂಡು ನಗಲು ಶುರುಮಾಡಿದರು..

ಅಲ್ಲಿಂದ ಶುರುವಾಯಿತು.. ಶರವೇಗದ ಸರದಾರನ ಜೊತೆಯಲ್ಲಿ ಒಂದು ಅದ್ಭುತ ಪಯಣ..

ಮಾತು. ಕಥೆ.. ನಗೆ.. ತಮಾಷೆ.. ಕಾಲು ಎಳೆಯುವಿಕೆ.. ಎಲ್ಲವೂ ಮುಂದಿನ ೯೦ ಕಿಮೀಗಳ ರಸ್ತೆಯಲ್ಲಿ ಮೈಲುಗಲ್ಲುಗಳಾಗಿ ನಿಂತು ಹಲ್ಲು ಬಿಡುತ್ತಿದ್ದವು.. ಸುಸ್ತು ಅನ್ನುವ ಪದವೇ ನಮಗೆ ಗೊತ್ತಾಗಲಿಲ್ಲ.. ಅವತ್ತು ನಾನು, ನಿಖಿತಾ (ದರ್ಶನ್) ಮತ್ತು ಹರೀಶ್ ನಮ್ಮ ನಮ್ಮ ಕೆಲಸಗಳಲ್ಲಿ ಸುಸ್ತಾಗುವಷ್ಟು ತಿರುಗಾಡಿದ್ದೆವು.. ತಂಪಾದ ಗಾಳಿಗೆ ನಿದ್ದೆ ಬರಬಹುದೇನೋ ಎನ್ನುವಂತಾಗಿತ್ತು .. ಆದರೆ ಅದಕ್ಕೆ ಅವಕಾಶವೇ ಇರಲಿಲ್ಲ.. ಆ ಪಾಟಿ ಮಾತುಗಳು..

ಸರ್.. ಇಷ್ಟು ವರ್ಷ ಏನು ಕಳೆದುಕೊಂಡಿದ್ದೆ ಇವಾಗ ಅರ್ಥವಾಗುತ್ತಿದೆ ಎಂದರು ಹರೀಶ್.. ಕಳೆದುಕೊಳ್ಳುವ ಅವಕಾಶವೇ ಇಲ್ಲ.. ಹರೀಶ್.. ನಾವೆಲ್ಲಾ.. ಜಂಗಮವಾಣಿಯಾದರೆ ಹತ್ತು ಸಂಖ್ಯೆ ಅಥವಾ ಸ್ಥಿರವಾಣಿಯಾದರೆ ಎಂಟು ಸಂಖ್ಯೆ ಅಷ್ಟೇ ದೂರ.. ವಾಟ್ಸಾಪ್, ಫೇಸ್ಬುಕ್ ಅದು ಇದು ಇದ್ದೆ ಇದೆ.. ಅಲ್ಲವೇ..

ದಾರಿಯುದ್ದಕ್ಕೂ.. ಹಲವಾರು ಪೋಸ್ಟರ್ ಗಳು ನಮ್ಮನ್ನು ಸ್ವಾಗತಿಸುತ್ತಿದ್ದವು.. ಕೈಮುಗಿದುಕೊಂಡ  ಭಂಗಿ.. ನಗುತ್ತಿರುವ ಭಂಗಿ.. ನಾವೆಲ್ಲರೂ ನಿಮ್ಮ ಜೊತೆ ಅನ್ನುವ ಭಂಗಿ.. ಹೀಗೆ.. ಸಾರ್ಥಕ ಶನಿವಾರ ಎಂದು ಮನಸ್ಸಿಗೆ ಅನ್ನಿಸಿಬಿಟ್ಟಿತ್ತು..

ಆರತಕ್ಷತೆ.. ಆಗಲೇ ಅಣ್ಣಾವ್ರ ಹಾಡಿನ ಹಿನ್ನೆಲೆಯಲ್ಲಿ "ಹೊಸ ಬಾಳಿನ ಹೊಸಿಲಲ್ಲಿ ನಿಂತಿರುವ ನವ ಜೋಡಿಗೆ ಶುಭವಾಗಲಿ" ಎಂದು ಹರಸಿಕೊಂಡು .. ನವ ದಂಪತಿಗಳು .. ಬಂದವರಿಗೆ, ಫೋಟೋದವರಿಗೆ, ವಿಡಿಯೋದವರಿಗೆ ದಂತ ಪಂಕ್ತಿಗಳ ಪ್ರದರ್ಶನದ ಸವಾಲನ್ನು  ಸ್ವೀಕರಿಸಿ ಆಗಲೇ ಅರ್ಧ ಘಂಟೆಯಾಗಿತ್ತು..

ಒಳಗೆ ಹೆಜ್ಜೆ ಇಟ್ಟೆವು.. ಸಿಸ್ಕೋದ ಹಲವಾರು ಸ್ನೇಹಿತರು ಸಿಕ್ಕಿದ್ರು.. ಉಭಯ ಕುಶೋಲೋಪರಿ ಸಾಂಪ್ರತ ಮುಗಿಸಿ.. ಮೆಲ್ಲಗೆ ಸಂಭ್ರಮದ ತೇರಿನಲ್ಲಿ ಕೂತಿರುವ ವಧುವರರನ್ನು ಒಂದಷ್ಟು ಕಿಚಾಯಿಸಿ ಶುಭ ಹಾರೈಸೋಣ ಅಂತ ಇಡೀ ದಂಡೇ ನುಗ್ಗಿತು..
ವಿಡಿಯೋ ಮತ್ತು ಛಾಯಾಚಿತ್ರಕಾರನಿಗೆ ಸಮಸ್ಯೆ ಶುರುವಾಯಿತು.. ಎಲ್ಲಿಂದ ಎಲ್ಲಿ ತನಕ ಕವರ್ ಮಾಡಬೇಕು ಎಂಬ ಗೊಂದಲ.. ಅಮೀರ್ ಖಾನ್ ಅಂದು ಸಿನಿಮಾ ಮಾಡೋ ಹಾಗಿದ್ದರೆ.. "ಎಲ್ಲಿ  ಸೆ ಎಲ್ಲಿ ತಕ್"  ಅಂತ ಹೆಸರಿಡ್ತಾ ಇದ್ದಾ ಅನ್ಸುತ್ತೆ... :-)

ಸುಮಧುರ ಹಾಡುಗಳನ್ನು ರಸಮಂಜರಿ ರೂಪದಲ್ಲಿ ಹಾಡುತ್ತಿದ್ದರು.. ಆಗ ಕೆಲವು ವಿಷಯಗಳು ಗೋಚರವಾಯಿತು.. ಅಥವಾ ಜ್ಞಾನೋದಯವಾಯಿತು...
ತಬಲಾ ವಾದಕನ ಎರಡು ಕೈಗಳ ಬೆರಳುಗಳು.. ನರ್ತನಮಾಡುತ್ತಿತ್ತು..
ರಿದಮ್ ಪ್ಯಾಡ್ ಎರಡು ಕೈಗಳಲ್ಲಿ ಕೋಲಿನ ಮೂಲಕ ಸಂಗೀತದ ಅಲೆಗಳನ್ನು ಸೃಷ್ಟಿಸುತ್ತಿತ್ತು..
ಕೀ ಬೋರ್ಡ್ ತನ್ನ ಹಲವಾರು ಮನೆಗಳಲ್ಲಿ ಅಡಗಿಸಿಕೊಂಡಿದ್ದ ಸ ರಿ ಗ ಮ ಪ ಗಳನ್ನು ಬಿತ್ತರಿಸುತ್ತಿತ್ತು
ಸ್ಯಾಕ್ಸೋಫೋನ್ ಮಾರುತವನ್ನು ತನ್ನ ಒಡಲಿಗೆ ಬಿಟ್ಟುಕೊಂಡು.. ಅಲ್ಲಿಂದ ಹೊರಡಿಸುತ್ತಿದ್ದ ನಾದಕ್ಕೆ ಕೈ ಮುಗಿಯುವ ಅನ್ನಿಸಿತು..

ಎರಡು ಕೈಗಳು.. ಜೊತೆ.. ಜೋಡಿ.. ಪೇರ್.. ಅಂತಹ ಸುಮಧುರ ಸಮಯ ಇನ್ನೊಂದು ವಿಚಾರ ಹೇಳುತ್ತಿತ್ತು... ಸಂದೀಪ್ ಮತ್ತು ಸಿಂಚನ.. ಆರತಕ್ಷತೆಯಲ್ಲಿ ಮಿಂಚುತ್ತಿದ್ದ  ಈ ಜೋಡಿ ತಮ್ಮ ಮನದಲ್ಲಿಯೇ ಹೇಳಿಕೊಳ್ಳುತ್ತಿತ್ತು

"ಜೊತೆಯಲಿ ಜೊತೆ ಜೊತೆಯಲಿ ಹೀಗೆ ಎಂದು"
"ಜೊತೆಯಾಗಿ ಹಿತವಾಗಿ ಸೇರಿ ನೆಡೆವ ಸೇರಿ ನುಡಿವ"
"ಜೊತೆ ಜೊತೆಯಲಿ ಪ್ರೀತಿ ಜೊತೆಯಲಿ ಅನುದಿನ ಬಯಸಿ ಬಯಸಿ"

ಸಂಗೀತ, ಗಾಯನ.. ಎಲ್ಲವೂ ಹಿತಮಿತವಾಗಿ ಮೂಡಿಬರುತ್ತಿತ್ತು.. ಆ ಸುಧೆಯನ್ನು ಸವಿಯುತ್ತಿದ್ದಾಗ.. ಸಿಸ್ಕೋ ಸಹೋದ್ಯೋಗಿಗಳಿಗೆ ಹೊಳೆದದ್ದು.. "ಅಭಿನಯ ಧೀರೇಂದ್ರ ಗೋಪಾಲ್" ಎಂದು ನಾ ಹೆಸರಿಟ್ಟಿರುವ ಶ್ರೀ ಚೇತನ್ ಅವರ ಒಂದು ಕಿರು ಮಿಮಿಕ್ರಿ ಕಾರ್ಯಕ್ರಮ ಯಾಕೆ ಮಾಡಬಾರದು ಎಂದು..

ಭಾಸ್ಕರ್ ಮತ್ತು ಅವರ ಸ್ನೇಹಿತರು.. ಆ ರಸಮಂಜರಿ ಕಾರ್ಯಕ್ರಮದ ರೂವಾರಿಗಳನ್ನು ಒಪ್ಪಿಸಿಯೇ ಬಿಟ್ಟರು.. ಅಲ್ಲಿಂದ ಶುರುವಾಯಿತು ಹದಿನೈದು ನಿಮಿಷಗಳ ಭರ್ಜರಿ ಔತಣ.. ಸಿನಿ ತಾರೆಗಳು ಆ ಛತ್ರಕ್ಕೆ ನುಗ್ಗಿ ಬಂದಿದ್ದರು.. ಸಮಯದ ಅಭಾವ.. ಆದ್ದರಿಂದ ಅಣ್ಣಾವ್ರು, ಟೈಗರ್ ಪ್ರಭಾಕರ್, ಜಗ್ಗೇಶ್, ಶಿವಣ್ಣ, ಬಾಲಣ್ಣ, ಅಂಬಿ ಹಾಗೂ ಶಂಕರಣ್ಣ ಆರತಕ್ಷತೆಗೆ ಬಂದು ಹರಸಿದರು.. ವಿಡಿಯೋ ತುಣುಕು ಸಿಕ್ಕಾಪಟ್ಟೆ ದೊಡ್ಡದ್ದರಿಂದ ಇಲ್ಲಿ ಹಂಚಿಕೊಳ್ಳಲು ಕಷ್ಟವಾಗುತ್ತಿದೆ.. ನನ್ನ ಸ್ನೇಹಿತರು ಟೆಕ್ ಜ್ಞಾನಿಗಳು ಆ ವಿಡಿಯೋವನ್ನು ಸಂಕುಚಿತಗೊಳಿಸಿ ಹಾಕುತ್ತಾರೆ ಎನ್ನುವ ನಂಬಿಕೆ ನನ್ನದು..

ಸಂದೀಪ್ ಅವರಿಗೆ ಏನಾದರೂ ಉಡುಗೊರೆ ಕೊಡೋಣ ಅಂದರೆ.. ಸಂಕೋಚದ ತುಂಬಿದ ಮನುಷ್ಯ ಅವರು.. ಎಲ್ಲರಿಗೂ ಹೇಳಿದ್ದರು ನಿಮ್ಮ ಉಪಸ್ಥಿತಿಯೇ ಉಡುಗೊರೆ ಎಂದು.. ಆದರೆ ನನಗೆ ಏನೂ ತೋಚದಾಯಿತು.. ಇನ್ನೇನು ಆರತಕ್ಷತೆಗೆ ಕೆಲವೇ ಘಂಟೆಗಳು ಉಳಿದಿದ್ದವು.. ಆ ಗಡಿಬಿಡಿಯಲ್ಲಿ ಹೇಗೂ ಒಂದು ಕಿರಿದಾದ ಶುಭಕೋರಿಕಾ ಪತ್ರವನ್ನು ತಲುಪಿಸಿದೆವು..

ಅದನ್ನು ನೋಡಿ ಖುಷಿ ಪಟ್ಟ ಸಂದೀಪ್ ತನ್ನ ಮದುವೆಯ ಸಡಗರದ ಮದ್ಯೆ  ನನಗೆ ಕರೆಮಾಡಿದ್ದು.. ಆ ಉಡುಗೊರೆಗಿಂತಾ ಹೆಚ್ಚು ಖುಷಿ ನೀಡಿತು .. ಗೆಳೆತನ ಅಂದರೆ ಅದೇ ಅಲ್ಲವೇ..

ಭರ್ಜರಿ ಊಟವಾಗಿತ್ತು.. ಎಲ್ಲರೂ ಹೆಬ್ಬಾವಾಗಿದ್ದೆವು.. ಊಟ ಮಾಡಿ ಸುಸ್ತಾಗಿ ಹೋಗಿತ್ತು.. ಹೊರಗೆ ಗಾಳಿಯಲ್ಲಿ ನಿಂತು ಲೋಕಾಭಿರಾಮವಾಗಿ ಮಾತಾಡುತ್ತಾ.. ನಕ್ಕು ನಕ್ಕು ಇನ್ನಷ್ಟು ಸುಸ್ತಾದೆವು.. ಈ ಕಡೆ ಊಟದಿಂದ ಹೊಟ್ಟೆ ಕನ್ನಂಬಾಡಿ ಕಟ್ಟೆಯಾಗಿದ್ದರೆ.. ನಕ್ಕು ನಕ್ಕು ಕೆರೆ ತೊಣ್ಣೂರು ಆಗಿತ್ತು ನಮ್ಮ ಕಣ್ಣುಗಳು.. !!!

ಊಟ ಮುಗಿದಿತ್ತು.. ಸುಮ್ಮನೆ ಮೇಲೆ ಬಂದೆವು.. "ನಾಗಮಂಡಲ" ಚಿತ್ರದ.. ನಮ್ಮ ಗುರುಗಳು ಕಳೆದ ವರ್ಷ ಸ್ವರ್ಗಕ್ಕೆ ಆಹ್ವಾನ ಸಿಕ್ಕಿದ ಶ್ರೀ ಗೋಪಾಲ ವಾಜಪೇಯಿ ಅವರ ಸಾಹಿತ್ಯ "ಕಂಬದಾ ಮ್ಯಾಲಿನ ಗೊಂಬೆಯೇ" ಈ ಹಾಡು ಶುರುವಾಯಿತು.. ಅದನ್ನ ವಿಡಿಯೋ ಮಾಡೋಣ ಎನ್ನುವ ನನ್ನ ಅತಿ ಮೂರ್ಖತನದ ಉತ್ಸಾಹಕ್ಕೆ ಬಲಿಯಾಗಿದ್ದು ವಿದ್ಯುತ್ ವೈರ್ ಗಳು.. ಸೂಪರ್ ಆಗಿ ಶುರುಮಾಡಿದ್ದರು ಗಾಯಕಿ.. ಆದರೆ ನನ್ನ ಮಂಕುತನದಿಂದ ಆ ಹಾಡು ಮತ್ತೆ ಶುರುವಾಗಿದ್ದು ಒಂದೈದು ನಿಮಿಷ ಆದ ಮೇಲೆ.. ಕ್ಷಮಾಪಣೆ ಕೇಳಿದೆ.. ಹೇಳಿದೆ .. ಆದರೂ ... :-(

ವೈರನ್ನು ತುಳಿದು.. ವಿದ್ಯುತ್ ಪೂರೈಕೆ ಮೈಕಿಗೆ ಹೋಗದ ಕಾರಣ.. ಎಲ್ಲರ ಕೇಂದ್ರ ಬಿಂದುವಾಗಿದ್ದೆ.. ತಲೆ ತಗ್ಗಿಸಿಕೊಂಡು ಕಂಬವನ್ನು ಸುತ್ತಿಕೊಂಡು ಬಂದಾಗ.. ಸಿಸ್ಕೋದ ಗೆಳೆಯ "ಏನ್ ಸರ್ ನಿಮ್ಮ ಕಾಲಲ್ಲಿ ಪವರ್" ಅಂದಾಗ ತಲೆ ಎತ್ತಿ ನೋಡಿದೆ..ಕೆಟ್ಟದಾಗಿ ಹಲ್ಲು ಬಿಟ್ಟೆ "ಪವಾರ್ ಸ್ಟಾರ್" ಅಂದೇ.. ಮನದಲ್ಲಿ ನೋವು.. ತುಟಿಯಲ್ಲಿ ನಗು.. :-)

ಹೊರಗೆ ಬಂದೆವು.. !!!

ಮನೋಜ್ಞ ಅಲಿಯಾಸ್ ಜೂನಿಯರ್ ಅಣ್ಣಾವ್ರು.. ಸಿಕ್ಕಿದ್ದು ಖುಷಿ ಪಡಲು ಇನ್ನಷ್ಟು ಕಾರಣವಾಗಿತ್ತು.. ಮಾರ್ಗದರ್ಶಿ ಮಂಜು ಶಂಕರ್, ಚಿನಕುರಳಿ ಅವಿನಾಶ್, ಎನಿರ್ಜಟಿಕ್ ಸಿದ್ದು, ಸುಂದರ ವೀರು, ಚಟುವಟಿಕಾ ರತ್ನ ಭಾಸ್ಕರ್, ಹಡಿ ತರಲೆ ಮತ್ತು ಪ್ರತಿಭಾವಂತ ಕಾರ್ತಿಕ್, ಮತ್ತೆ ಇನ್ನೂ ಕೆಲವು ಹೆಸರು ನನಗೆ ಗೊತ್ತಿರದ ಸ್ನೇಹಿತರು.. ನಕ್ಕಿದ್ದೆ ಭಾಗ್ಯ ಎನ್ನುವಂತಾಗಿತ್ತು..
ರವಿಕಾಂತ್ ಪರಿವಾರ, ಸೋಮ ಮತ್ತು ಅವನ ಮಂಗಳೂರು ಪ್ರವಾಸದ ಕಥಾನಕ.. ಒಂದೇ ಎರಡೇ.. ಇದರ ಮದ್ಯೆ ನಿಕಿತಾ ಅಲಿಯಾಸ್ ದರ್ಶನ ಅವರ ಕುಮಾರಪರ್ವತದ  ಸಾಹಸಗಳು.. ಇವೆಲ್ಲಾ ಸುಮಾರು ಒಂದೂವರೆ ಘಂಟೆ ಬಿತ್ತರ ಗೊಂಡಿತ್ತು ನಮ್ಮ ಮನಸ್ಸಿನ ಸರ್ವರ್ ಸ್ಟೋರೇಜ್ ಇಂದಾ.. ಸೀದಾ ನೇರ ಪ್ರಸಾರ..

ಆಗಲೇ ಗಡಿಯಾರ ಹತ್ತು ಘಂಟೆ ಕನ್ಲಾ.. ಅಂತ ಕಿರುಚುತಿತ್ತು.. ಸರಿ ಹೊರಡೋಣ ಅಂತ.. ಬೆಂಗಳೂರು ದಾರಿ ಹಿಡಿದೆವು.. ನಾ ಮನದಲ್ಲಿ ಲೆಕ್ಕ ಹಾಕುತ್ತಿದ್ದೆ.. ೯೦ ಕಿಮೀಗಳು.. ಅಂದರೆ.. ಸರಿ ಸುಮಾರು ರಾತ್ರಿ ಹನ್ನೆರಡು ಮೂವತ್ತು ಮನೆ ಸೇರಬಹುದು.. ನನ್ನ ಮನೆಯ ಬಾಗಿಲಿಗೆ ಕಾರು ಬಂದಾಗ.. ಗಡಿಯಾರ ನೋಡಿಕೊಂಡೆ.. ಸೆಕೆಂಡ್ ಮುಳ್ಳು ಗರ ಗರ ತಿರುಗುತ್ತಿತ್ತು.. ನಿಮಿಷದ ಮುಳ್ಳು ಹೊಡಿ ಮಗ ಹೊಡಿ ಮಗ ಬಿಡಬೇಡ ಅವನ್ನಾ ಅಂತ ಸೆಕೆಂಡ್ ಮುಳ್ಳನ್ನು ಚೇಸ್ ಮಾಡುತ್ತಿತ್ತು.. ಘಂಟೆಯ ಮುಳ್ಳು ಮಾತ್ರ ಬಿಡ್ರಲೇ.. ನಾ ಬರಿ ಮುಂದಿನ ಸಂಖ್ಯೆಗೆ ಮಾತ್ರ ಹೋಗೋಕೆ ವೀಸಾ ಇರೋದು ಎಂದಿತು..

ಕಾರಣ ಅಂದ್ರೆ.. ಸೂಜಿಗಲ್ಲಿನ ಹಾಗೆ ಕಾರು ಚಲಾಯಿಸುತ್ತಿದ್ದ ಶರವೇಗದ ಸರದಾರ ಹರೀಶ್..  ಮಾತಾಡುತ್ತಲೇ ಇದ್ದರು.. ಆದರೆ ವೇಗದ ಮುಳ್ಳು ನೂರಲ್ಲೇ ಅಟಕಾಯಿಸಿಕೊಂಡಿತ್ತು.. ಆದ್ರೆ ಒಂದು ಕಡೆಯೂ ಜರ್ಕ್ ಇಲ್ಲ.. ಟರ್ರ್ರ್ರ್ ಅಂತ ಬ್ರೇಕ್ ಇಲ್ಲ.. ದಬಕ್ ಅಂತ ನಿಲ್ಲಿಸಲಿಲ್ಲ.. ಕಾರು ಲೀಲಾಜಾಲವಾಗಿ ಬೆಂಗಳೂರಿನ ರಸ್ತೆಯಲ್ಲಿ ನುಗ್ಗುತ್ತಿತ್ತು..

ಹರೀಶ್ ಅವರಿಗೆ ವಂದನೆ ಸಲ್ಲಿಸುತ್ತಾ.. ನಮ್ಮ ಪ್ರೀತಿಯ ಸಿಸ್ಕೋ ಸಹೋದ್ಯೋಗಿ  ಅಲಿಯಾಸ್ ಗೆಳೆಯರ ಅದ್ಭುತ ಸಮಾಗಮದ ಈ ಸಂದೀಪ್-ಸಿಂಚನ  ಅರತಕ್ಷತೆಯ ಸರೋವರದಲ್ಲಿ ಮಿಂದು ಬಂದದ್ದು ಸೋನೇ ಫೆ ಸುಹಾಗ ಆಗಿತ್ತು..

ಬಲು ದಿನಗಳ ನಂತರ.. ಉಂಡಿದ್ದು ಕಡಿಮೆ ನಕ್ಕಿದ್ದು ಜಾಸ್ತಿ ಎನ್ನುವ ಹಂತಕ್ಕೆ ಬಂದಿದ್ದೆವು..

ನನ್ನ ಪ್ರೀತಿಯ ಗೆಳೆಯ ಮತ್ತು ನಮ್ಮೆಲ್ಲರ ಅದ್ಭುತ ಗೆಳೆಯ ಸಂದೀಪ್.. ಜೀವನದ ಮಹೋನ್ನತ ತಿರುವಿನಲ್ಲಿ ಹೆಜ್ಜೆ ಹಾಕುತ್ತಿದ್ದಾರೆ.. ಅವರ ಜೊತೆಯಲ್ಲಿ ಏಳು ಹೆಜ್ಜೆ ಹಾಕಿ ನೆಡೆದ ಸಿಂಚನ ಅವರಿಗೆ ನಮ್ಮೆಲ್ಲರ ಕಡೆಯಿಂದ ಶುಭಾಶಯಗಳನ್ನು ಕೋರೋಣ..

ಮೃದುಮಾತಿನ ಸಂದೀಪ್..
ಮೃದು ಹೃದಯದ ಸಂದೀಪ್
ನಾ someದೀಪ್ ಎನ್ನದೆ
ನಾ sumದೀಪ್ ಎನ್ನುತ್ತಾ
ನಮ್ಮ ಗೆಳೆತನದ ಹೂ ಬನದಲ್ಲಿ ಮೃದು ಹೂವಾಗಿ ಅರಳಿ
ಜೀವನದ ಪಥದಲ್ಲಿ ಪುಷ್ಪ ಮಾಲೆಯಾಗಿ ನಿಂತಿರುವ ಸಂದೀಪ್ ಅವರಿಗೆ ಮದುವೆಯ ಸಂಭ್ರಮದ ಶುಭಾಶಯಗಳು..


ಇದು ಟ್ರೋಲ್ / ಟ್ರಾಲ್ /  ಟ್ರಾಲಿ ಅಲ್ಲಾ..

ಇದು ಗೆಳೆತನದ ಟೋಲ್ ಗೇಟ್.. :-)

ಮತ್ತೊಮ್ಮೆ ಈ ಮಧುರ ಮಧುರ ನೆನಪಿನ ಈ ಕಾರ್ಯಕ್ರಮವನ್ನು ಸವಿಯೋಣ.. ಮೆಲುಕು ಹಾಕೋಣ.. ನೀವೆಲ್ಲರೂ ನನ್ನ ಜೊತೆಯಲ್ಲಿ ಇರುತ್ತೀರಾ ಅಲ್ಲವೇ.. !!!..

ಇರುತ್ತೀರಾ ಅಲ್ಲಾ.. ಇದು ನಿಮ್ಮ ಡ್ಯೂಟಿ ಇದ್ದೆ ಇರ್ತೀರ (ಇದು ಸಂದೀಪ್ ಡೈಲಾಗ್)!!!!