Monday, August 17, 2026

ದೇವರು ನಕ್ಕೆ ನಗುತ್ತಾನೆ - 8

"ಎಲ್ಲೋ ಹುಡುಕಿದೆ ಇಲ್ಲದ ದೇವರ
ಕಲ್ಲು ಮಣ್ಣುಗಳ ಗುಡಿಯೊಳಗೆ
ಇಲ್ಲೇ ಇರುವ ಪ್ರೀತಿ ಸ್ನೇಹಗಳ
ಗುರುತಿಸದಾದೆನು ನಮ್ಮೊಳಗೆ"

ಶ್ರೀ ಜಿ ಎಸ್ ಶಿವರುದ್ರಪ್ಪ ಅವರ ಈ ಪ್ರಸಿದ್ಧ ಕವಿತೆ ಬೆಳಿಗ್ಗೆ ನೆನಪಿಗೆ ಬರ್ತಾ ಇತ್ತು.. ಕಾರಣ ಗೊತ್ತಿರಲಿಲ್ಲ.. 

ಕೆಲವೊಂದು ಬಾರಿ ವರ್ತಮಾನದಲ್ಲಿ ಭವಿಷ್ಯವನ್ನು ಕಾಣುವ ದೂರದರ್ಶಿತ್ವವನ್ನು ಆ ಭಗವಂತ ಕ್ಷಣ ಕಾಲ ನೀಡಿರುತ್ತಾನೆ ಅನಿಸುತ್ತೆ..ಕುರುಕ್ಷೇತ್ರದ ಯುದ್ಧವನ್ನು ದೃತರಾಷ್ಟ್ರನಿಗೆ ವರದಿ ಒಪ್ಪಿಸುವ ಸಲುವಾಗಿ ಸಂಜಯನಿಗೆ ವ್ಯಾಸರು ದಿವ್ಯ ದೃಷ್ಟಿ ನೀಡಿದಂತೆ..

ಹೊಟ್ಟೆ ಹಸಿಯುತ್ತಿತ್ತು..ಊಟದ ಡಬ್ಬ ಹಿಡಿದುಕೊಂಡು ಹೋದಾಗ ನನ್ನ ಮಾನಸಿಕ ಮಾರ್ಗದರ್ಶಿ/ ಸಹೋದ್ಯೋಗಿ ಶ್ರೀಧರ್ ಊಟ ಮಾಡುತ್ತಿದ್ದರು.. ಅವರ ಜೊತೆ.. ಇನ್ನೊಬ್ಬರಿದ್ದರು ....ಅವರು ಯಾರೆಂದರೆ ಇರಿ ಇರಿ..ಅವರೇ ಈ ಬರಹದ ಮುಖ್ಯ ನಾಯಕ.. 

Sri Girish Kulakarni

ಶ್ರೀಧರ್ ಅವರಿಗೆ ಎಷ್ಟು ಕೃತಜ್ಞತೆ ಸಲ್ಲಿಸಿದ್ದೇನೋ ಗೊತ್ತಿಲ್ಲ.... ಕಾರಣ ಅದ್ಭುತ ವ್ಯಕ್ತಿಯ ಪರಿಚಯ ಮಾಡಿಕೊಟ್ಟಿದ್ದರು.. ಒಂದು ಆರೇಳು ತಿಂಗಳ ಹಿಂದೆ.. 

ಆಗಲ್ಲಪ್ಪಾ.. ನಾನು ಸುಳ್ಳು ಹೇಳೋಕೆ ಇಷ್ಟಪಡಲ್ಲ.. ನೀ ಮತ್ತೆ ನೆಡೆಯೋಕೆ ಸಾಧ್ಯವೇ ಇಲ್ಲ  .. ಗಾಲಿ ಕುರ್ಚಿಯೇ ನಿನ್ನ ಜೀವನಕ್ಕೆ ಆಧಾರ.. 

ಸೋತು ಕೂತಿದ್ದರು

ಇದು ನೆಡೆದದ್ದು ಗೌರಿ ಶಂಕರದ ಚಾರಣದಲ್ಲಿ (ಮೌಂಟ್ ಎವರೆಸ್ಟ್).. ಹಿಮಪಾತಕ್ಕೆ ತುತ್ತಾಗಿ.. ಬೆನ್ನು ಮೂಳೆ,  ಮಂಡಿಗೆ ಅಸಾಧ್ಯ ಆಘಾತವಾಗಿ ಖಟ್ಮಂಡು ಆಸ್ಪತ್ರೆಯಲ್ಲಿ ಪ್ಯಾಕ್ ಆಗಿ ಬಂದಿದ್ದ ಅವರ ದೇಹ... ಅದರ ಪಕ್ಕದಲ್ಲಿಯೇ ಪೋಸ್ಟ್ ಮಾರ್ಟಮ್ ಮಾಡೋಕೆ ಸಿದ್ಧವಾಗಿದ್ದ ದೇಹ.. ಅಂದರೆ ಅವರ ಪರಿಸ್ಥಿತಿ ಅದಕ್ಕಿಂತ  ದುಸ್ತರವಾಗಿತ್ತು.. ಶಸ್ತ್ರ  ಚಿಕಿತ್ಸೆ ಆದ ಮೇಲೂ ಡಾಕ್ಟರ್  ಹೇಳಿದ್ದು ಅದೇ ಮಾತು 

ವೈದ್ಯರು ಹೇಳಿದ್ದು.. ಗಾಲಿ ಖುರ್ಚಿಯೇ ಗತಿ.. 

ಅಲ್ಲಿಂದ ಧಾರವಾಡದ SDM ಆಸ್ಪತ್ರೆಗೆ ಬಂದರೆ..ಅಲ್ಲಿದ್ದ ಪ್ರಸಿದ್ಧ ವೈದ್ಯರು ಇಂಗ್ಲಿಷ್ ಭಾಷೆಯಲ್ಲಿ ಅದನ್ನೇ ಹೇಳಿದ್ದು.. 

ಬಸವಳಿದ ಮನಸ್ಸು.. ನಿತ್ರಾಣಗೊಂಡಿದ್ದ ದೇಹ.. ದಿನದಲ್ಲಿ ಸುಮಾರು ಇಪ್ಪತ್ತಮೂರು ಘಂಟೆಗಳಿಗೂ ಮಿಕ್ಕಿದ ಸಮಯದಲ್ಲಿ ಒಂದೇ ಆಸನದಲ್ಲಿ ಕೂತಿರೋದು.. 

ಇದು ಎಂಥಹ ಗಟ್ಟಿ ಗುಂಡಿಗೆ ಇರುವವರಿಗೂ ಧಸಕ್ ಎನ್ನುವಂತಹ ಪ್ರಸಂಗ.. ಜೀವನದಲ್ಲಿ ಇನ್ನೂ ಬೆಳಕೇ ಇಲ್ಲ ಎನ್ನುವಂತಹ ವಾತಾವರಣ..ಬದುಕೋದಾ.. ಇಲ್ಲವೇ ಗೋಡೆಯ ಮೇಲೆ ಫೋಟೋ  ಆಗೋದ ಎನ್ನುವ ಪರಿಸ್ಥಿತಿ.. 

ಆದರೆ ಅಲ್ಲಿಗೆ ಕಾಲಿಟ್ಟದ್ದು ದೇವರು.. ಹೌದು ದೇವರೇ ಹೌದು.. ಅದು ತಾಯಿ ದೇವರು.. 

ನೋಡಪ್ಪ .. ನಿನ್ನ ಆಸೆ ಏನು.. 

ಅಮ್ಮ ನಾ ಕ್ರಿಕೆಟ್ ಆಡಬೇಕು.. 

ಹಾಗಾದರೆ ಮೊದಲು ವೈದ್ಯರು ಹೇಳಿದ್ದು ತಲೆಯಿಂದ ತೆಗೆದು ಬಿಡು.. ಅವರು ಕೊಟ್ಟ ಮಾತ್ರೆ ಔಷಧ ಬಿಟ್ಟಾಕು.. ನಾ ಹೇಳಿದ್ದು ಮಾತ್ರ ನಿನ್ನ ತಲೆಯಲ್ಲಿ ಇರಲಿ.. ನಾ ನಿನ್ನನ್ನು ಸರಿ ಮಾಡುತ್ತೇನೆ.. 

ದೇವರ ಪ್ರತಿಬಿಂಬ ತಾಯಿ ದೇವರು ಹೇಳಿದ ಮೇಲೆ.. ಮುಗಿಯಿತು.. ಅದೇ ಕಲ್ಲು ಶಾಸನ.. 

ಆ ಕ್ಷಣದಿಂದ ತನ್ನನ್ನು ತಾಯಿ ದೇವರಿಗೆ ಅರ್ಪಿಸಿಕೊಂಡು ಬಿಟ್ಟರು.. 

ಅಲ್ಲಿಂದ ಶುರು ಆಯಿತು ನೋಡಿ ಪವಾಡ.. 

ಒಂದು ವರ್ಷ ಸುಮಾರು ಅಮ್ಮನ ಆರೈಕೆಯಲ್ಲಿ, ಶುಶ್ರೂಷೆಯಲ್ಲಿ ಮತ್ತ್ತೆ ಉತ್ಸಾಹ ಪುಟಿದೆದ್ದಿತು.. 

ಮುಂದಿನ ನಿಲ್ದಾಣ ಶ್ರವಣಬೆಳಗೊಳದ ಬೆಟ್ಟ.. 

ತಾಯಿ ದೇವರು ಆಜ್ಞಾಪಿಸಿದ್ದು "ನಿನ್ನ ಗೆಳೆಯರ ಜೊತೆ ಹೋಗು..ಅವರಿಗೆ ಹೇಳು.. ನನಗೆ ಯಾವುದೇ ಸಹಾಯ ಬೇಡ.. ಇಲ್ಲ ನಾ ಮುಂದೆ ಹೋಗುತ್ತೇನೆ.. ಇಲ್ಲವೇ ನಿಮ್ಮ ಹಿಂದೆ ಬರುತ್ತೇನೇ..ಆದರೆ ಸಹಾಯ ಬೇಡ.. ಇದು ತಾಯಿ ದೇವರ ಆಜ್ಞೆ.. ಮತ್ತು ನಾ ಮತ್ತೆ ಎದ್ದು ನಿಲ್ಲೋಕೆ ಒಂದು ಸಾಧ್ಯತೆ ಇರುವ ಅವಕಾಶ.. "

ಮುಂದೆ ಅನೇಕಾನೇಕ ಸಾಹಸಗಳನ್ನು ಮಾಡಿದರು.. ಗೌರಿ ಶಂಕರಕ್ಕೆ ಮತ್ತೆರಡು ಬಾರಿ ಹೋಗಿ ಬಂದಾಯ್ತು.. ಶಿಖರಾಗ್ರಕ್ಕಿಂತ ಕೊಂಚ ಕೆಳಗಿನ ಕ್ಯಾಂಪ್ ತನಕ ಹೋಗಿ ಬಂದ ಸಾಧನೆ.. 

ಆಮೇಲೆ ಲೆಕ್ಕವಿಲ್ಲದಷ್ಟು ಬಾರಿ ಚಾರಣ, ಕಾಡು ಒಳಗಿನ ಚಾರಣ, ದುರ್ಗಮ ಹಾದಿಯ ಚಾರಣ, ಕಾಡು ಪ್ರಾಣಿಗಳನ್ನು ರಕ್ಷಿಸುವ, ಸಂರಕ್ಷಿಸುವ, ಹಾಗೂ ಗಣತಿಗೆ ಹೋಗುವ ಕಾಯಕ.. ಇದರ ಮಧ್ಯೆ ಹುಲಿಯ ಆಕ್ರಮಣ, ಆನೆಯ ಆಕ್ರಮಣ.. ಇದೆಲ್ಲವನ್ನು ಜಯಿಸಿ ಮೆಟ್ಟಿ ನಿಂತರು.. 

ಕಳೆದ ವಾರವಷ್ಟೇ ಗಡುವು ನೀಡಿದ್ದ ೬೬ ಘಂಟೆಗಳ ಅದ್ಭುತ ಚಾರಣ ಸುಮಾರು ೮೦ ಕಿಮೀಗಳು (ಎರಡೂ ಕಡೆ.. ಅಂದರೆ ಹೋಗಿದ್ದು ಮತ್ತೆ ತಿರುಗಿ ಬಂದಿದ್ದ ಹಾದಿ).. ಈ ದುರ್ಗಮ ಚಾರಣವನ್ನು ಗಡುವು ನೀಡಿದ್ದ ಸಮಯ ಇನ್ನೇನು ಆರು ನಿಮಿಷಗಳಲ್ಲಿ ಮುಗಿಯಿತು ಎನ್ನುವಷ್ಟರಲ್ಲಿ ಜಯಶಾಲಿಯಾಗಿ ಹಿಂದಿರುಗಿದ್ದು.. 

ಹೌದು ಸ್ಪೂರ್ತಿಗಾಗಿ ಪುಸ್ತಕ, ಸಾಹಸ ಚರಿತ್ರೆ, ರೀಲ್ಸ್, ವಿಡಿಯೋ ಅಂತ ಅನೇಕ ಮಾಧ್ಯಮಗಳ ಮೊರೆ ಹೋಗುತ್ತೇನೆ.. ಇಂದು ಊಟದ ಸಮಯದಲ್ಲಿ ಅದ್ಭುತ ಇಪ್ಪತ್ತು ನಿಮಿಷಗಳಲ್ಲಿ ಸಿಕ್ಕ ಸ್ಫೂರ್ತಿ ಬೆಲೆ ಕಟ್ಟಲಾಗದ್ದು.. ಅದನ್ನು ಬಿಡಬಾರದು ಎಂದು ಇಲ್ಲಿ ದಾಖಲಿಸಿದ್ದೇನೆ...

ಇವರ ಪಾತ್ರ ಪರಿಚಯ ಮಾಡೋದು ಬೇಕಾದಷ್ಟಿದೆ.. ಆದರೆ ನನ್ನ ಅರಿವಿಗೆ ತಲುಪಿದ್ದು ಸಿಕ್ಕಿದ್ದು ಇಷ್ಟು.. ಇವರೇ...... ನಾ ಇವರ ಸಹೋದ್ಯೋಗಿ ಎಂದು ಹೇಳಿಕೊಳ್ಳಲು ಹೆಮ್ಮೆ ಪಡುವ ಶ್ರೀ ಗಿರೀಶ್ ಕುಲಕರ್ಣಿ!

ಅಮ್ಮ ಹೇಳಿಕೊಟ್ಟ ಅಮರ ವಾಕ್ಯವನ್ನು ಇವರು ಚಾಚೂ ತಪ್ಪದೇ ಪಾಲಿಸುತ್ತಾ ಇದ್ದಾರೆ...ಅದು ಏನು ಗೊತ್ತಾ...ಕೆಳಗಿನ ಚಿತ್ರದಲ್ಲಿ ಹೇಳುತ್ತೆ..THE ROAD'S END....but honestly THE REAL ROAD STARTS FROM HERE!!!

ಇದೇ ಆ ಅಮರ ವಾಕ್ಯ...!




ದೇವರು ನಗುತ್ತಿದ್ದ.. ನಾ ಸೃಷ್ಟಿ ಮಾಡಿದ ಜೀವಿ..ಎಲ್ಲಾ ಭಾದಕಗಳನ್ನು  ದಾಟಿ ಗೆದ್ದು ಮೆಟ್ಟಿ ನಿಂತಿದೆ ಅಂದರೆ.. ನಾ ಸೃಷ್ಟಿ ಮಾಡಿದ್ದಕ್ಕೆ ಸಾರ್ಥಕವಾಯಿತು.. 

ದೇವರು ಎರಡೂ ಅಭಯಹಸ್ತವನ್ನು ತೋರಿಸಿ "ಶ್ರೀ ಗಿರೀಶ್ ಕುಲಕರ್ಣಿ ನಿಮಗೆ ಸದಾ ಒಳಿತಾಗಲಿ.. ಇನ್ನಷ್ಟು, ಮೊಗೆದಷ್ಟು ಸಾಹಸಗಳು ನಿಮ್ಮ ಬದುಕಿನಲ್ಲಿ ಸಾಗಲಿ.. ಆ ತಾಯಿ ದೇವರಿಗೆ ನನ್ನ ಕಡೆಯಿಂದ ಎರಡೂ ಕೈಯೆತ್ತಿ ಮುಗಿಯುವೆ.. .. ಅದಕ್ಕೆ ತಾಯಿಯನ್ನು ತಾಯಿ ದೇವರು ಎನ್ನೋದು" ಅಂತ ಹೇಳಿ ದೇವರು ಮಂದಹಾಸ ಬೀರಿದ..