Tuesday, January 19, 2021

ದೇವರು ನಕ್ಕೆ ನಗುತ್ತಾನೆ - ೬

"ಏನೋ ಶ್ರೀ ನನಗೆ ನಗೋಕೆ ಅವಕಾಶನೇ ಕೊಡ್ತಾ ಇಲ್ಲ.. ನಗೋದು ಮರೆತು ಬಿಟ್ಟೆಯ.. ಅಥವ ಜೀವನದ ಜಂಜಾಟ ನಗೋದನ್ನು ಮರೆಸಿ ಬಿಟ್ಟಿದೆಯಾ. "

ಕಣ್ಣು ಬಿಟ್ಟೆ.. ತೇಜೋಮಯನಾದ ಆ ಮಹಾಮಹಿಮ ಕಣ್ಣ ಮುಂದೆ ನಿಂತಿದ್ದ..  ಒಮ್ಮೆ ಕೊಳಲು ಕಂಡರೆ.. ಇನ್ನೊಮ್ಮೆ ಸೊಂಡಿಲು ಕಾಣೋದು.. ಇನ್ನೊಮ್ಮೆ ನಾಲ್ಕು ತಲೆ ಕಾಣೋದು.. ಹೀಗೆ ಬಗೆ ಬಗೆ ರೂಪದಲ್ಲಿ ಕಾಣುವ ಆ ಮಹಾಮಹಿಮ ದರ್ಶನ ಮಾಡಿ ಸಂತುಷ್ಟನಾಗಿ.... ಮೆಲ್ಲಗೆ ಕಣ್ಣು ಮುಚ್ಚಿದೆ.. ಕಣ್ಣು ತುಂಬಿ ಬಂದಿತ್ತು.. ಅರೆ ಹೌದಲ್ವಾ ಈ ದೇವರು ನಗುತ್ತಾನೆ ಅಂಕಣವನ್ನು ಮುಂದುವರೆಸಲು ಆಗಲೇ ಇಲ್ಲವಲ್ಲ.. ಸರಿ ಒಂದು ಲೇಖನ ಬರೆದೆ ಬಿಡೋಣ ಅಂತ ಇವತ್ತು ಆಫೀಸಿನಿಂದ ಬಂದ ಕೂಡಲೇ ಹಠ ತೊಟ್ಟಂತೆ ಕೂತೆ ಬಿಟ್ಟೆ.. ಪರಿಣಾಮ ಈ ಲೇಖನ.... !

                                                                        *****

ಆಫೀಸಿನಲ್ಲಿ ಸರಸರ ಕೆಲಸ ಸಾಗುತ್ತಿತ್ತು.. "ತುಲಾಮಾಸೇತು ಕಾವೇರಿ" ನನ್ನ ಮೊಬೈಲ್ ಶ್ರೀ ನನ್ನ ಎತ್ತಿಕೊಳ್ಳೋ ಅಂತ ಕೂಗತೊಡಗಿತು.. ಸರಿ ಏನಪ್ಪಾ ಸಮಾಚಾರ ಅಂತ ಕರೆ ಸ್ವೀಕರಿಸಿ "ಹಲೋ" ಅಂದೇ.. 

"ಸರ್ ಶ್ರೀಕಾಂತ್ ಮಂಜುನಾಥ್ ಆಲ್ವಾ ಮಾತಾಡ್ತಾ ಇರೋದು"

"ಹೌದು ಮೇಡಂ"

"ಸರ್.. ನಮ್ಮದು ಇನ್ಶೂರೆನ್ಸ್ ಕಂಪನಿ ಇಂದ ಕರೆ... ಈ ವರ್ಷದ ತೆರಿಗೆ ಉಳಿಸೋಕೆ ಒಂದು ಉತ್ತಮ ಉಳಿತಾಯ ಯೋಜನೆ ಇದೆ.. ಅದರ ಬಗ್ಗೆ.... "

ಆಕೆ ಇನ್ನೂ ಹೇಳುತ್ತಲೇ ಇದ್ದರು.. 

"ಮೇಡಂ.. ನಿಮ್ಮ ಕರೆಗೆ ಧನ್ಯವಾದಗಳು ಮೇಡಂ.. ಸದ್ಯಕ್ಕೆ ಯಾವ ಉಳಿತಾಯವೂ ಬೇಡ.. ಆದಾಯವೇ ಮಠ ಹತ್ತಿದೆ.. ನಿಮ್ಮ ಕರೆಗೆ ಧನ್ಯವಾದಗಳು ಮೇಡಂ" ಅಂತ ಕರೆಯನ್ನು ಕಟ್ ಮಾಡೋಕೆ ಹೋದೆ.. 

"ಸರ್.. ನಮ್ಮ ಕಂಪನಿಯ ಉಳಿತಾಯದ ಯೋಜನೆ ಬಗ್ಗೆ ಹೇಳಿಬಿಡುತ್ತೇನೆ.. ನಿಮಗೆ ಇಷ್ಟವಾದರೆ ತಗೊಳ್ಳಿ ಇಲ್ಲವಾದರೆ ಬಿಡಿ.. ಆದರೆ ಹೇಳೋದು ಮಾತ್ರ ಕೇಳಿ ಸರ್" ಅಂದರು 

ನನಗೂ ಕೆಲಸ ಮಾಡಿ ಮಾಡಿ ಸುಸ್ತಾಗಿತ್ತು.. ಸ್ವಲ್ಪ ವಿರಾಮ ಬೇಕಿತ್ತು.. 

"ಸರಿ ಮೇಡಂ ಹೇಳಿ"

"ಸರ್ ನಮ್ಮ ಇನ್ಶೂರೆನ್ಸ್ ಪ್ಲಾನ್ ಹೀಗಿದೆ" ಅಂತ ಗರಗಸ ಶುರುವಾಯಿತು .. ಆ ಕಡೆಯವರಿಗೆ ನನ್ನ ಅನ್ಯಮನಸ್ಕತೆ ಗೊತ್ತಾಯಿತು ಅನ್ನಿಸುತ್ತೆ.. 

"ಸರ್ ನಾ ಹೇಳೋದು ಗೊತ್ತಾಗ್ತಾ ಇದೆಯೇ ಸರ್.. ಈ ಪ್ಲಾನ್ ನಲ್ಲಿ ನೀವು ಒಂದು ಲಕ್ಷ ಕಟ್ಟಿದರೆ.. ಪ್ರತಿ ವರ್ಷ ಮೂವತ್ತು ಸಾವಿರ ಬರುತ್ತೆ ಸರ್.. ಹಾಗೆ ಇದನ್ನು ಕಟ್ಟುತ್ತಾ ಹೋದರೆ.. ಪ್ರತಿ ವರ್ಷವೂ ಬರ್ತಾ ಇರುತ್ತೆ ಸರ್... "

"ಓಕೆ ಮೇಡಂ"

"ನಮ್ಮ ಮಕ್ಕಳಿಗೂ ಬರುತ್ತೆ ಸರ್"

"ಹಾ ನಮ್ಮ ಮಕ್ಕಳ ಏನ್ ಮೇಡಂ ನೀವು ಹೇಳ್ತಾ ಇರೋದು"

"ಸರ್ ಅಂದ್ರೆ... ನೀವು ಇನ್ಶೂರೆನ್ಸ್ ಮಾಡಿಸಿದರೆ ನಿಮ್ಮ ಮಕ್ಕಳೂ ಕೂಡ ಇದರ ಉಪಯೋಗ ಮಾಡಿಕೊಳ್ಳಬಹುದು.. ಅವರೂ ಕೂಡ ಹಣವನ್ನು ಡ್ರಾ ಮಾಡಬಹುದು.. ಮತ್ತೆ ನಾವಿಲ್ಲದೆ ಹೋದರೂ ಮಕ್ಕಳಿಗೆ ಉಪಯೋಗವಾಗುತ್ತದೆ.. "

"ಏನ್ ಮೇಡಂ.. ಏನೇನೋ ಹೇಳ್ತಾ ಇದ್ದೀರಾ"

"ಸರ್.. ಈ ಪ್ಲಾನ್ ತುಂಬಾ ಚೆನ್ನಾಗಿದೆ ಸರ್.. ಇನ್ವೆಸ್ಟ್ ಮಾಡಿ ಸರ್.. ಯಾವಾಗ ಮಾಡ್ತೀರಾ ಸರ್"

"ಮೇಡಂ.. ನಾ ಆಗಲೇ ಹೇಳಿದ್ದೀನಿ.. ನನಗೆ ಇನ್ವೆಸ್ಟ್ ಮಾಡೋಕೆ ಆಸೆಯೂ ಇಲ್ಲ ಅವಕಾಶವೂ ಇಲ್ಲ.. ಧನ್ಯವಾದಗಳು ಮೇಡಂ ನಿಮ್ಮ ಕರೆಗೆ" ಅಂತ ಹೇಳಿ ಕಟ್ ಮಾಡೋಕೆ ಹೋದರೆ.. 

"ಸರ್.. ಈ ಪ್ಲಾನ್ ತುಂಬಾ ಚೆನ್ನಾಗಿದೆ ಇನ್ಶೂರೆನ್ಸ್ ಮಾಡಿಸಿ ಸರ್"

"ಮೇಡಂ.. ನೀವು ಇದನ್ನೇ ಸಂಜೆ ತನಕ ಹೇಳಿದರೂ.. ನಾನೂ ಸುಮ್ಮನೆ ನಿಮ್ಮ ಮಾತುಗಳನ್ನು ಕೇಳ್ತಾ ಇರ್ತೀನಿ.. ಆದರೆ ನನ್ನ ಕಡೆ ಉತ್ತರ ಆಗೋಲ್ಲ ಅಂತಾನೆ ಇರುತ್ತೆ ನಾ ಇನ್ವೆಸ್ಟ್ ಮಾಡೋಲ್ಲ.. ಇನ್ವೆಸ್ಟ್ ಮಾಡುವಷ್ಟು ದುಡ್ಡು ಇಲ್ಲ " 

ಅಷ್ಟು ಹೊತ್ತಿಗೆ ಆಕೆಗೆ ನಗು ಬರೋಕೆ ಶುರುವಾಗಿತ್ತು.. ನನ್ನ ಮಾತುಗಳನ್ನು ಕ್ಕೇಳಿ ಕೇಳಿ.. 

"ಸರ್ ಒಂದು ಪಾಲಿಸಿ ಮಾಡಿಸಿ.. ನಿಮ್ಮ ಸಂಬಳ ಎಷ್ಟು ಕೇಳಬಹುದಾ ಸರ್.. "

"ಮೇಡಂ ಹೆಣ್ಣು ಮಕ್ಕಳ ವಯಸ್ಸು ಗಂಡು ಮಕ್ಕಳ ಸಂಪಾದನೆ ಕೇಳಬಾರದು.. ನಿಮ್ಮ ಕರೆಗೆ ಧನ್ಯವಾದಗಳು ಮೇಡಂ"

ಜೋರಾಗಿ ನಗುತ್ತಾ.. "ಸರ್ ಪ್ಲೀಸ್  ಒಂದು ಪಾಲಿಸಿ ಮಾಡಿಸಿ ಸರ್"

"ಮೇಡಂ ಆಗಲಿ ಈ ಕರೆಯನ್ನು ಸ್ಪೀಕರ್ ಮೋಡಿನಲ್ಲಿ ಇಡುತ್ತೇನೆ.. ಸಂಜೆ ತನಕ ಮಾತಾಡುತ್ತಲೇ ಇರಿ. ನನಗೂ ಆಫೀಸ್ ಕೆಲಸ ಮಾಡೋಕೆ ಸ್ಫೂರ್ತಿ ಬರುತ್ತೆ..ಮುಂದುವರೆಸಿ.. ನಿಮ್ಮ ಕಂಪನಿಯ ಎಲ್ಲಾ ಪಾಲಿಸಗಳ ಬಗ್ಗೆ ಹೇಳೋಕೆ ಶುರು ಮಾಡಿ.. ಓಕೇ ನಾ ಮೇಡಂ"

ಜೋರಾಗಿ ನಕ್ಕು "ಧನ್ಯವಾದಗಳು ಸರ್.. ಪಾಲಿಸಿ ಬೇಕಿದ್ದರೆ ಈ ನಂಬರ್ ಸೇವ್ ಮಾಡಿಕೊಳ್ಳಿ ಸರ್.. ನಿಮ್ಮ ಅಮೂಲ್ಯ ಸಮಯಕ್ಕೆ ಧನ್ಯವಾದಗಳು ಸರ್ " 

"ಹ ಹ ಹ.. ಸರಿ ಮೇಡಂ"

ಕರೆ ಕಟ್ ಆಯಿತು.. 

ಆಫೀಸಿನ ಫಾಲ್ಸ್ ಸೀಲಿಂಗ್ ನೋಡಿದೆ... ಅದರ ಪುಟ್ಟ ಕಂಡಿಯಲ್ಲಿ ದೇವನ ನಗು ಸದ್ದು ಕೇಳಿಸಿತು ... 

"ಶ್ರೀ.. ಈ ಟೆಲಿ ಮಾರ್ಕೆಟಿಂಗ್ ಕರೆಗಳನ್ನು ಹಲವಾರು ಮಂದಿ ಬಯ್ದು ಬಯ್ದು ಕಿರ್ಚಾಡ್ತಾರೆ... ಆದರೆ ನೀನು ಸಮಾಧಾನವಾಗಿ ಕೇಳುತ್ತೀಯೆ ಮತ್ತೆ ಧನ್ಯವಾದಗಳನ್ನು ಹೇಳುತ್ತೀಯೆ... ಅದು ಹೆಂಗೆ.. ಮತ್ತೆ ಯಾಕೆ"

"ಬಾಸ್.. ನನಗೆ ಮೂವತ್ತು ದಿನಗಳನ್ನು ಆಫೀಸಿನ ಕೆಲಸದಲ್ಲಿ ತೊಡಗಿಸಿಕೊಂಡರೆ ಸಂಬಳ ಕೊಡುವುದು.. ಹಾಗೆ ಅವರಿಗೂ ಕೂಡ ದಿನಕ್ಕೆ ಇಷ್ಟು ಕರೆಗಳನ್ನು ಮಾಡಲೇ ಬೇಕು ಅಂತ ಟಾರ್ಗೆಟ್ ಕೊಟ್ಟಿರುತ್ತಾರೆ... ಮತ್ತೆ ಆ ಕರೆಗಳಲ್ಲಿ ಕೆಲವು ಕರೆಗಳನ್ನು ರೆಕಾರ್ಡ್ ಅವರಿಗೆ ಅರಿವಿಲ್ಲದೆ ರೆಕಾರ್ಡ್ ಕೂಡ ಮಾಡ್ತಾರೆ ಅಂತ ಕೇಳಿದ್ದೇನೆ. ಅದು ಅವರ ಕೆಲಸ.. ಅದನ್ನು ಮಾಡಿದರೆ ಅವರಿಗೆ ಸಂಬಳ ಕೊಡುವುದು.. ಅದಕ್ಕೆ ಯಾಕೆ ನಾ ಕಿರುಚಾಡಬೇಕು.. ತಾಳ್ಮೆ ಇಂದ ಉತ್ತರಿಸಿದರೆ ನನ್ನ ಏಕಾಗ್ರತೆ ಹಾಳಾಗೋಲ್ಲ.. ಮತ್ತೆ ಆ ಕಡೆಯವರಿಗೂ ನಿರಾಳ ಮತ್ತೆ ಮನಸ್ಸಿಗೆ ಹಿಂಸೆ ಆಗೋಲ್ಲ.. ಅಂತಹ ಕರೆಗಳು ಬಂದಾಗ.. ಆ ಕ್ಷಣ ನಾ ಅವರ ಸ್ಥಾನದಲ್ಲಿ ನಿಂತು ಮಾತಾಡುತ್ತೇನೆ.. ಆಗ ನನಗೂ ಖುಷಿ ಅವರಿಗೂ ಖುಷಿ"

ದೇವರು ಕಣ್ಣು ಹೊಡೆದು  ಹೆಬ್ಬೆರಳನ್ನು ಎತ್ತಿ ಸೂಪರ್ ಶ್ರೀ ಅಂದ.. ಅಂದಿದ್ದು ಮಾತ್ರ ಕೇಳಿಸಿತು.. ಬೆಳಕಲ್ಲಿ ಬೆಳಕಾಗಿ ಮಾಯವಾದ!!!

ಚಿತ್ರಕೃಪೆ : ಗೂಗಲೇಶ್ವರ