Sunday, October 24, 2021

CBM....Nice story!!!

ಅಂಗಡಿಯವ ತಲೆ ಮೇಲೆ ಕೈ ಹೊತ್ತು ಕೂತಿದ್ದ.. ಯಾರಿಗೂ ಅಂಗಡಿಗೆ ಬಂದಿದ್ದವ ಕೇಳಿದ ಉಪಕರಣ ಸಿಗುತ್ತಿರಲಿಲ್ಲ.. ಇಡೀ ನಗರಕ್ಕೆ ಹೆಸರುವಾಸಿಯಾಗಿದ್ದ ಇಲೆಕ್ಟ್ರಾನಿಕ್ ಉಪಕರಣದ ಅಂಗಡಿಯದು.. ಅಂಗಡಿಯೆನ್ನೋದು ತುಂಬಾ ಚಿಕ್ಕ ಮಾತು.. ಸೂಪರ್ ಶಾಪ್ ಅನ್ನೋಣವೇ.. ಹೌದು ಇದು ಸರಿಯಾದ ಶಬ್ದ.. 

ಅಂಗಡಿಯಲ್ಲಿದ್ದ ಸಾರಿ ಸೂಪರ್ ಶಾಪಿನಲ್ಲಿದ್ದ ಉಪಕರಣಗಳನ್ನೆಲ್ಲ ಒಂದೊದಾಗಿ ತೋರಿಸಿದರೂ ಬಂದಿದ್ದ ವ್ಯಕ್ತಿ ತಲೆಯಾಡಿಸುತ್ತಲೇ ತನ್ನ ನಕಾರಾತ್ಮಕ ಉತ್ತರ  ಕೊಡುತ್ತಿದ್ದ.. 

ಸರ್ ನಿಮಗೆ ಯಾವ ಉಪಕರಣ ಬೇಕು ಅದರ ಚಿತ್ರ, ಮಾಹಿತಿ, ಇಲ್ಲವೇ ಗೂಗಲ್ ಕೊಂಡಿ ಇದ್ದರೇ ಕೊಡಿ ಸರ್.. ನಮ್ಮ ನೆಟ್ವರ್ಕ್ ದೊಡ್ಡದಿದೆ.. ನಮ್ಮ ಸಹೋದರ ಸಂಸ್ಥೆಯಲ್ಲಿಯೋ, ನಮ್ಮ ಗೆಳೆಯರ ಅಂಗಡಿಯಲ್ಲೋ.. ಹೇಗಾದರೂ ಕೊಡಿಸುತ್ತೇವೆ.. ಆದರೆ ಕೊಂಚ ಸಮಯಬೇಕು ಅಂದರೆ ಒಂದಷ್ಟು ದಿನ ಬೇಕು.. 

"ಸರ್ ನಾ ಕೇಳುತ್ತಿರುವ ಉಪಕರಣ ತುಂಬಾ ಉಪಯೋಗವಾದದ್ದು ಸರ್.. ಬಲು ಶಾರ್ಪ್ ಅದು.. ಖಂಡಿತ ಇದು ಎಲ್ಲೆಡೆ ಸಿಗುವುದಲ್ಲ.. ಆದರೆ.. ನಿಮ್ಮ ಶಾಪ್ ಈ ನಗರದಲ್ಲಿಯೇ ವರ್ಲ್ಡ್ ಫೇಮಸ್.. ಹಾಗಾಗಿ ನಿಮ್ಮ ಕಡೆ ಇರಲೇಬೇಕು.. "

"ನಿಮ್ಮ ಮಾತು ಖರೆ ಅದಾ ಸ್ವಾಮೀ.. ಆದರೆ ನಾವು ನೋಡಿಲ್ಲವಲ್ಲ.. ನನಗೆ ಬುದ್ದಿ ಬಂದಾಗಿನಿಂದ ಈ ದುಖಾನ್ ನೋಡ್ಕೋತ್ತಾ ಇದ್ದೀನಿ... ಈ ರೀತಿಯ ಉಪಕರಣ ಕೇಳಿಕೊಂಡು ಯಾರೂ ಬಂದಿಲ್ಲ.. ಹಾ ಒಂದು ನಿಮಿಷ ಇರಿ.. ನನ್ನ ಅಪ್ಪ ಮತ್ತು ನನ್ನ ತಾತನನ್ನು ಒಮ್ಮೆ ಕೇಳುತ್ತೇನೆ.. ನೀವು ನಮ್ಮ ಶಾಪಿಗೆ ಯಾವಾಗಲೂ ಬರುವವರು.. ನಿಮಗೆ ಇಲ್ಲ ಎನ್ನೊಕೆ ಮನಸಿಲ್ಲ.. ಖಂಡಿತ ಇರಿ.. ಏನಾದರೂ ಮಾಡೋಣ.. .. ಅರೆ ಚೋಟು ಸಾಹೇಬ್ರಿಗೆ ಒಂದು ಜ್ಯೂಸ್ ತಂದುಕೊಂಡು.. ಸರ್.. ನೀವು ಜ್ಯೂಸ್ ಕುಡಿದು.. ಸ್ವಲ್ಪ ವಿರಮಿಸಿಕೊಳ್ಳಿ.. ಒಂದು ಹದಿನೈದು ನಿಮಿಷ ಏನಾದರೂ ದಾರಿ ಹುಡುಕೋಣ.. "

ಬಿಸಿಲಲ್ಲಿ ಬಂದು ತಲೆ ನೋಯುತ್ತಿತ್ತು.. "ಸರ್ ಆಗಲಿ.. ಜ್ಯೂಸ್ ಬೇಡಾ ಒಂದು ಸ್ಟ್ರಾಂಗ್ ಕಾಫೀ ತರಿಸಿ.. ಈ ಕುರ್ಚಿಯಲ್ಲಿ ಹಾಗೆ ವಿಶ್ರಮಿಸಿಕೊಳ್ಳುತ್ತೇನೆ"

ಬಿಸಿ ಬಿಸಿ ಕಾಫೀ.. ತಲೆ ನೋವಿನಾ ಮಾತ್ರೆ.. ಹೊಟ್ಟೆಗೆ ಹೋದ ಮೇಲೆ ಸ್ವಲ್ಪ ಆರಾಮೆನಿಸಿತು.. ಮೇಲೆ ಮೆಲ್ಲಗೆ ತಿರುಗುತ್ತಿದ್ದ ಫ್ಯಾನ್.. ಮಲೆನಾಡಿನ ಕಡೆಯಾಗಿದ್ದರಿಂದ.. ಇವರ ಶಾಪಿನ ಸುತ್ತಾ ಹಸಿರು ಸಿರಿ ಹಾಸಿತ್ತು... ಬೆಟ್ಟ ಗುಡ್ಡಗಳ ತಣ್ಣನೆ ಗಾಳಿಗೆ ಹಾಗೆ ನಿದ್ದೆ ಬಂದಿತ್ತು.. 

"ಶ್ರೀ ಶ್ರೀ.. ಏಳಿ ಇದೇನು ಇಲ್ಲಿ ನಿದ್ದೆ ಹೊಡೀತಾ ಇದ್ದೀರಾ.. ?"

ಚಿತ್ರಪರಿಚಿತ ಧ್ವನಿ.. ಕಣ್ಣು ಬಿಟ್ಟಾಗ ಎದುರಲ್ಲಿ DFR .. 

"ಅರೆ DFR ನೀವೇನು ಇಲ್ಲಿ.. ?"

"ಶ್ರೀ .. ಇವರು ಕರೆ ಮಾಡಿ ಬರೋಕೆ ಹೇಳಿದರು.. "

"ಅರೆ ಸಾಹೇಬ್ರೆ.. ಇವರನ್ಯಾಕೆ ಕರೆದಿರಿ.. "

"ಸರ್ ನೀವು ಕೇಳಿದ ಉಪಕರಣ ಇವರಿಗೆ ಗೊತ್ತು ಅಂತ ನಮ್ಮ ತಂದೆ ಹೇಳಿದರು... . ಅದಕ್ಕೆ ಇವರಿಗೆ ಬರೋಕೆ ಹೇಳಿದ್ವಿ.. ಮೇಡಂ.. ಈ ವಯ್ಯಾ.. ಬೆಳಿಗ್ಗೆ ಇಂದ ತಲೆ ತಿಂತಾ ಐತೆ.. ಅದೇನು ಬೇಕು ಕೇಳಿ.. ನಂಗೂ ಸಾಕಾಗೈತೆ.. ಈ ಕೊರೋನಾ ದೆಸೆಯಿಂದ ಇರಲಿಲ್ಲ.. ಈಗ ಚಿಗುರುತ್ತಾ ಇದೆ.. ಗಿರಾಕಿಗಳು ಬಂದು ನಿಂತವ್ರೆ.. ಅವರನ್ನು ಅಟೆಂಡ್ ಮಾಡೋಣ ಅಂದ್ರೆ ಈ ವಯ್ಯಾ ಬಿಡ್ತಾ ಇಲ್ಲ.. ಅದೇನು ಕೇಳಿ ಮೇಡಂ.. ಏ ಚೋಟು ರೂಪ ಮೇಡಂಗೆ ಒಂದು ಸ್ಟ್ರಾಂಗ್ ಕಾಫೀ.. ಮತ್ತೆ ಒಂದು ಡೈರಿ ಮಿಲ್ಕ್ ಚಾಕೊಲೇಟ್ ಬಾರ್ ತಾ.. ಮೇಡಂ ಪ್ಲೀಸ್.. ಬೇಗ ಹೇಳಿ.. " ಎನ್ನುತ್ತಾ ಬೇರೆಯವರನ್ನು ಅಟೆಂಡ್ ಮಾಡೋಕೆ ಹೋದರು.. 

"ಶ್ರೀ.. ಒಂದು ನಿಮಿಷ ಇರಿ.. " ಎಂದು ಹೇಳುತ್ತಾ.. ಯಾರಿಗೋ ಕರೆ ಮಾಡಿದರು.. ನಂತರ ಕರೆ ಮಾಡಿದವರಿಗೆ ಗೂಗಲ್ ನಕ್ಷೆ ಕೂಡ ಕಳಿಸಿದರು.. ಬರೋಕೆ ಸುಲಭ ಆಗಲಿ ಎಂದು.. 

ಬರಿಯ ಏನೂ ಕೆಲಸ ಇಲ್ಲದ್ದರಿಂದ.. ಸುಮ್ಮನೆ ಕಾಲ ಕಳೆಯೋದು ಕಷ್ಟವಾಗಿತ್ತು.. ಶಾಪಿನಲ್ಲಿದ್ದ ಉಪಕರಣಗಳನ್ನು ನೋಡುತ್ತಾ ಸಮಯವನ್ನು ಓಡಿಸಿದರು.. . 

೧೨೦೦ ಸೆಕೆಂಡುಗಳು ಆದವು.. .. ಒಂದು ಆಕ್ಟಿವಾ ಬೈಕ್ ಶಾಪಿನ ಮುಂದೆ ನಿಂತಿತು.. DFR ಮೊಗವರಳಿತು.. "ಅರೆ ನಿವ್ಸ್.. ಸೂಪರ್ ಸರಿಯಾಗಿ ಬಂದಿದ್ದೀರಾ.. ದಾರಿ ಮಿಸ್ ಆಗ್ಲಿಲ್ಲ ತಾನೇ.. ?"

"ರೂಪಕ್ಕ ನೀವು ಕಳಿಸಿದ ನಕ್ಷೆ ಸೀದಾ ಇಲ್ಲಿಗೆ ಕರೆ ತಂದಿತು.. ದಿಕ್ಕು ಸರಿಯಾಗಿ ಸಿಕ್ಕಿದೆ ಈ ನಕ್ಷೆಯಿಂದ..  ಏನು ರೂಪಕ್ಕ ಬರೋಕೆ ಹೇಳಿದ್ದು.. ?"

"ನೋಡಿ ನಿವ್ಸ್ .. ಆ ಕಡೆ ನೋಡಿ"

"ಅರೆ ಶ್ರೀ.. ನೀವು ಇಲ್ಲಿ ಏನು ಸಮಾಚಾರ.....ಏನಿದು ರೂಪಕ್ಕ"

"ನಿವ್ಸ್ ... ಸೋಲ್ ಗೆಳೆಯರಾಗಿರುವ ನಾವು ಒಂದೇ ಮನೆಯಲ್ಲಿ ಹುಟ್ಟಲಿಲ್ಲ.. ಆದರೆ ಒಂದೇ ಮನಸ್ಸು ನಮ್ಮ ಮೂವರದ್ದು.. ನಾವು ನಮ್ಮ ಕೆಲಸಗಳಲ್ಲಿ ಬ್ಯುಸಿ.. ಕೊರೋನಾ ಗಲಾಟೆ.. ಭೇಟಿ ಮಾಡೋಕೆ ಆಗಿರಲಿಲ್ಲ.. ಅದಕ್ಕೆ ಶ್ರೀ ಈ ಉಪಾಯ ಮಾಡಿಯೇ ಮೂವರನ್ನು ಸೇರಿಸಿದ್ದಾರೆ.. "

"ಓಹ್ ಶ್ರೀ.. ಇದು ನಿಮ್ಮ ಪ್ಲಾನ್ ಆ ಆ ಆ.. ಈ ರೀತಿಯ ತರಲೆ ಐಡಿಯಗಳು ನಿಮ್ಮ ತಲೆಗೆ ಮಾತ್ರ ಬರೋದು.. ಆದರೂ ಬಂದಿದ್ದು.. ನಿಮ್ಮನ್ನೆಲ್ಲಾ ಭೇಟಿ ಮಾಡಿದ್ದು ಖುಷಿಯಾಯಿತು.. "

ಶ್ರೀ ಮೊಗದಲ್ಲಿ ನಗು ಬಂದಿದ್ದು.. ಸಂತಸ ಮೂಡಿದ್ದು ಕಂಡಿದ್ದೆ.. ಅಂಗಡಿಯವ ಓಡೋಡಿ ಬಂದು.. "ಸರ್ ನಿಮಗೆ ಬೇಕಾದ ಉಪಕಾರ ಸಿಕ್ತಾ.. ಏ ಚೋಟು.. ಬೇಗ ಬಿಲ್ ಮಾಡ್ಲೆ.. ಈ ವಯ್ಯನನ್ನು ಹೊರಗೆ ಕಳಿಸಿದರೆ ಸಾಕು.. .. ಇಷ್ಟು ಹೊತ್ತಿಗೆ ಹತ್ತು ಕಸ್ಟಮರ್ಸ್ ಆರ್ಡರುಗಳನ್ನು ಪಾರ್ಸೆಲ್ ಮಾಡಬಹುದಿತ್ತು.. " ತಲೆ ಕೆರೆದುಕೊಂಡು ಮತ್ತೆ ಮಾರ್ವಾಡಿ ಟೋಪಿ ಹಾಕಿಕೊಂಡು ದೇವರ ಕಡೆ ನೋಡಿ ಕೈ ಮುಗಿದ.. 

"ಸರ್... ಕೇಳಿದ ಉಪಕರಣ ಇವರೇ.. ನಿವೇದಿತ ಚಿರಂತನ್ ... ಒಂದು ವಾಕ್ಯದಲ್ಲಿ ದೊಡ್ಡಕ್ಷರ, ಸಣ್ಣಕ್ಷರ, ಅಲ್ಪ ವಿರಾಮ, ದೀರ್ಘ ವಿರಾಮ, ಆಶ್ಚರ್ಯಕರ ಚಿನ್ಹೆ, ಪ್ರಶ್ನಾರ್ಥಕ ಚಿನ್ಹೆ.. ಒಂದು ಪದ ಮತ್ತೊಂದು ಪದಗಳ ನಡುವೆ ಕೊಂಚ ಜಾಗ ಕೊಟ್ಟಿದ್ದರೂ ಕೂಡ.. ಸಂದೇಶ ಕಳಿಸಿದವರ ಮನಸ್ಥಿತಿ ಅರಿಯುವ ಈ ರೀತಿಯ ಉಪಕರಣ ನಿಮ್ಮಲ್ಲಿದೆಯೇ.. ಇರಬಹುದು ಎನ್ನುವ ಒಂದು ಕುತೂಹಲ ನನಗೆ ಕಾಡಿತ್ತು. .ಹಾಗಾಗಿ ನಿಮಗೆ ತೊಂದರೆ ಕೊಡಬೇಕಾಯಿತು.. "

"ಸರ್.. ನೀವೊಳ್ಳೆ ಪ್ರಾಣಿ.. ಇದು ದೇವರು ಕಳಿಸಿರುವ ಉಪಕರಣ ಸರ್.. ಆ ದೇವರು ಈ ವಮ್ಮನ ತಲೆಯೊಳಗೆ ಎಲ್ಲಾ ಉಪಕರಣಗಳ ಮಾಹಿತಿಗಳನ್ನು ತುಂಬಿ ಕಳಿಸಿದ್ದಾನೆ.. ಅದಕ್ಕೆ ಈ ವಮ್ಮ ಡಬಲ್ ಡಿಗ್ರಿ ಮಾಡಿರೋದು.. .. ಆದರೂ ಈ ರೀತಿಯ ಉಪಕರಣ ಇದ್ದಿದ್ದರೆ ಈ ಜಗತ್ತು ಎಷ್ಟು ಪ್ರಶಾಂತತೆಯಿಂದ ಕೂಡಿರುತ್ತಿತ್ತು.. ಆಗಲಿ.. ಇಂತಹ ಒಬ್ಬರು ನಿಮ್ಮ ಸೋಲ್ ಗೆಳೆತನದಲ್ಲಿರೋದು ಬಹಳ ಖುಷಿ ತರುವ ವಿಚಾರ.. ದಯವಿಟ್ಟು ತಪ್ಪು ತಿಳಿಯಬೇಡಿ.. ನನಗೂ ನಿಮ್ಮ ಕೋರಿಕೆಯಿಂದ ಕೋಪ ಬಂದಿತ್ತು.. ಹಾಗಾಗಿ ಸ್ವಲ್ಪ ಕೊಂಚ ಖಾರವಾಗಿ ವಯ್ಯಾ ಅಂತೆಲ್ಲ ಹೇಳಿಬಿಟ್ಟೆ.. "

"ಇರಲಿ ಸರ್... ಪರವಾಗಿಲ್ಲ.. ಕೋಪ ಬರೋದೇ ಇಲ್ಲ ನನಗೆ.. ಆದರೆ ನಿಮ್ಮನ್ನು ಗೋಳು ಹುಯ್ಕೊಂಡಿದ್ದು ಖುಷಿ ಕೊಟ್ಟಿತು.. ಆ ರೀತಿಯ ಉಪಕರಣ ಸಿಕ್ಕಿದ್ದಿದ್ದರೆ.. ಇರಲಿ ಬಿಡಿ.. "

"ಶ್ರೀ ನಿಮ್ಮ ಮಹಾಭಾರತ ಸಾಕು.. ಅರೆ ಚೋಟು.. ಮೆಲ್ಲಗೆ ಆ ಕೇಕು ತಗಂಡು ಬಾ.. ನಿವ್ಸ್ ಬನ್ನಿ ಈ ಕಡೆ.. ಕೇಕ್ ಕಟ್ ಮಾಡಿ.. ಜನುಮದಿನ ಆಚರಿಸೋಣ.."

ಕೇಕು ನೋಡಿ ನಿವೇದಿತಾ ಅವರಿಗೆ ಖುಷಿ ಆಯಿತು.. ಕೇಕಿನ ಮೇಲೆ "ನಿವಿಯಸ್ ಆರ್ಟ್ಸ್"  ಅಂತಿತ್ತು.. 

DFR ಉವಾಚ.. "ನಿವ್ಸ್ ಜನುಮದಿನದ ಶುಭಾಶಯಗಳು"

ಅಂಗಡಿಯವ "ಮೇಡಂ ಜನುಮದಿನದ ಶುಭಾಶಯಗಳು"

ಶ್ರೀ ... ಸಿಬಿ ಜನುಮದಿನದ ಶುಭಾಶಯಗಳು.. !