Saturday, April 11, 2015

ಶ್ರೀ ಸಂಧ್ಯಾದರ್ಪಣ....!

ಶ್ರೀ ನಿಮಿಷಾಂಬ ದೇವಾಲಯದಲ್ಲಿ  ಹರಿಕಥಾ ವಿಧ್ವಾನರು ಒಂದು ಸುಧೀರ್ಘ ಹರಿಕಥೆ ಹೇಳಿದ ನಂತರ.. ಒಂದು ಸಣ್ಣ ವಿರಾಮಕ್ಕೆ ಹಾತೊರೆಯುತ್ತಿದ್ದರು..

ಅಲ್ಲಿ ನೆರೆದಿದ್ದ ಹರಿಕಥೆ ಅಭಿಮಾನಿಗಳು, ಭಕ್ತರು.. ಎಲ್ಲರೂ ಸೇರಿ "ಗುರುಗಳೇ ಪುರಾಣ ಪುಣ್ಯ ಕಥೆಯನ್ನು ನಿಮ್ಮಷ್ಟು ಸೊಗಸಾಗಿ ಹೇಳುವವರನ್ನು ಕೇಳಿಲ್ಲ.. ನೋಡಿಲ್ಲ. ನಿಮಗೆ ಅಚ್ಚರಿ ಪಡಿಸುವಂತಹ ಅಥವಾ ಅಚ್ಚರಿ ಪಡಿಸಿದ ಯಾವುದಾದರೂ ಘಟನೆ, ಸಂಗತಿ ಹೇಳಿ" ಎಂದಾಗ..

ಬಳಿಯಲ್ಲಿಯೇ ಇದ್ದ ಕಾವೇರಿ ನದಿಗೆ ಬೊಗಸೆಯಲ್ಲಿ ಆ ಕಾವೇರಿ ಮಾತೆಯನ್ನು ಹಿಡಿದುಕೊಳ್ಳಲು ಹೋದರು... ಸಿಕ್ಕಷ್ಟೇ ನೀರಿನಿಂದ ತಮ್ಮ ದಾಹವನ್ನು ತಣಿಸಿಕೊಂಡು.. ಯಾಕೋ ಗಾಬರಿಗೊಂಡರು. ಮತ್ತೆ ಬೊಗಸೆಯಲ್ಲಿ ನೀರು ತುಂಬಿಕೊಂಡು ಕುಡಿದರು, ಮತ್ತೆ ಹರಿಯುವ ನೀರನ್ನು ನೋಡಿದರು. ಮನಸ್ಸು ಸಂತಸ ಭರಿತವಾಯಿತು, ಆಯಾಸವೆಲ್ಲ ಒದ್ದೆ ಬಟ್ಟೆಯ ನೀರು ರವಿಯನ್ನು ಕಂಡೊಡನೆ ಆರಿ ಹೋಗುವಂತೆ.. ಮೈ ಮನವೆಲ್ಲ ಹಗುರಾಯಿತು.. ಕಾವೇರಿ ಮಾತೆ ನಿನ್ನ ಮಹಿಮೆಯೆ ಮಹಿಮೆ ಎಂದು ತಾಯಿ ಕಾವೇರಿಗೆ ನಮಿಸಿ... ಒಂದೆರಡು ಹನಿಯನ್ನು ತಮ್ಮ ತಲೆಯ ಮೇಲೆ ಸಿಂಪಡಿಸಿಕೊಂಡು ಕೃತಾರ್ಥರಾದ ಭಾವದೊಡನೆ ಮತ್ತೆ ಹರಿಕಥೆ ನಡೆಯುತ್ತಿದ್ದ ಸ್ಥಳಕ್ಕೆ ಬಂದು..

ಭಕ್ತರೆ, ಸುಧೀರ್ಘ ಹರಿಕಥೆ ಹೇಳಿದನಂತರ ಈಗ ಒಂದು ಚಿಕ್ಕ ಉಪಕಥೆಯನ್ನು ಹೇಳುತ್ತೇನೆ.. ಕೇಳುವಂತವರಾಗಿ

*************************

ಕೀರ್ತಾನರಂಭ ಕಾಲದಲ್ಲಿ ಶಾಲಿವಾಹನ ಶಕೆಯಲ್ಲಿ ಮಹಿಶೂರು ಪ್ರಾಂತ್ಯದ ಶ್ರೀ ಮಾತೆ ನಿಮಿಷಾಂಬ ಕ್ಷೇತ್ರದಲ್ಲಿ ನಾ ಹೇಳುವ ಈ ಘಟನೆ ನನಗೆ ಒಮ್ಮೆಲೇ ಆಹ್ ಎನ್ನುವಂತಾಯಿತು ...  

ಈಗ ತಾನೇ ಕಾವೇರಿ ನದಿಗೆ ನೀರು ಕುಡಿಯಲು ಹೋಗಿದ್ದೆ.. ಮುಖವನ್ನು ನೋಡಿಕೊಳ್ಳಲೆಂದು ನೀರಲ್ಲಿ ನೋಡಿದೆ.. ಅರೆ ನನ್ನ ಮುಖ ಕಾಣುತ್ತಿದೆ.. ಮತ್ತೆ ನೀರನ್ನು ನೋಡಿದೆ.. ಸರಾಗವಾಗಿ, ರಭಸವಾಗಿ ಹರಿಯುತ್ತಿತ್ತು . ಹರಿಯುವ ನೀರಲ್ಲಿ ಅಲೆಗಳ ಎಬ್ಬಿಸುತ್ತ ಹರಿಯುತ್ತಿದ್ದ ನೀರಲ್ಲಿ ಪ್ರತಿಬಿಂಬವೇ ಏನು ತಾಯಿ ನಿನ್ನ ಲೀಲೆ. ಎಂದು ಕಾವೇರಿ ಮಾತೆಗೆ ನಮಿಸಿದೆ.. ಆಗ ತಾಯಿ ನಿಮಿಷಾಂಬೆ ಹೇಳಿದಳು 

"ಭಕ್ತ.. ನಿಂತ ನೀರಲ್ಲಿ ಬಿಂಬ ಪ್ರತಿಬಿಂಬ ಸಹಜ.. ನೀರು ಮನಸ್ಸನ್ನು ಪ್ರತಿಫಲಿಸುತ್ತದೆ.. ಆದರೆ ನೀರು ಹರಿಯುತ್ತಲಿದ್ದಾಗ ನಮಗೆ ಪ್ರತಿಬಿಂಬ ಇರಲಾರದು, ಬರಲಾರದು ಎನ್ನಿಸುವುದು ಸಹಜ.. ಆದ್ರೆ ಮನಸ್ಸು ಒಂದೇ ಆದಾಗ, ನೋಡುವ ನೋಟ, ಆಡುವ ಮಾತುಗಳು, ಯೋಚಿಸುವ ದಾಟಿ ಒಂದೇ ಆದಾಗ ರಭಸದಿಂದ ಹರಿಯುವ ನೀರಲ್ಲೂ ಈ ಚಮತ್ಕಾರ ಸಾಧ್ಯ"  

ಯಾಕೋ ವಿಧ್ವಾನರ ಮುಖದಲ್ಲಿ ಸಮಾಧಾನಕ್ಕಿಂತ ಹಣೆಯಲ್ಲಿ ಇನ್ನಷ್ಟು ಗೆರೆಗಳು ಮೂಡಿದವು, ಹುಬ್ಬುಗಳು ಇನ್ನೊಂದು ಇಂಚು ಮೇಲಕ್ಕೆ ಹೋಗಿ ಮತ್ತೆ ನಾ ಕೆಳಗಿಳಿಯುವುದಿಲ್ಲ ಎಂದು ಶಪಥ ಮಾಡಿದವು.. ಹೃದಯದ ಬಡಿತ ತೀವ್ರ ಆಯಿತು.. 

"ಮಾತೆ ನಿನ್ನ ಮೇಲೆ ನನಗೆ ಸಂಪೂರ್ಣ ನಂಬಿಕೆಯಿದೆ.. ಆದರೆ ನೀ ಹೇಳಿದ ಮಾತುಗಳು ಯಾಕೋ ನನಗೆ ಒಲಿಯುತ್ತಿಲ್ಲ.. ದಯಮಾಡಿ ಇದನ್ನೇ ಒಂದು ಉದಾಹರಣೆ ಸಹಿತ ವಿವರಿಸುತ್ತೀಯ ಪ್ಲೀಸ್"

ದೇವಿ ನಸುನಗುತ್ತಾ ಭಕ್ತನ ಮನದಲ್ಲಿ ಇದ್ದ ಆತಂಕ, ಸಂದೇಹಗಳನ್ನು  ಅರಿತ ಮಾತೆ ಹೇಳಿದಳು "ಭಕ್ತ.. ಮಂಜು ಎನ್ನುವ ಪದ ನೀ ಕೇಳಿರುವೆ.. ಅದು ನಮ್ಮನ್ನು ಆವರಿಸಿದಾಗ, ಸುತ್ತ ಮುತ್ತಲ ಪರಿಸರವನ್ನು ತುಂಬಿಕೊಂಡಾಗ ಎದುರಿಗೆ ಇರುವ ವಸ್ತುಗಳು ಕಾಣುವುದಿಲ್ಲ ಆದರೆ.. ಅದು ತಿಳಿಯಾಗಿ ತೆಳುವಾಗಿ ನಿಂತಾಗ ಆ ಮಂಜಿನಲ್ಲಿ ಕಾಣುವ ದೃಶ್ಯಗಳೇ ಅಪರೂಪದ್ದು  ಅಲ್ಲವೇ.. ಹಾಗೆಯೇ ಇಲ್ಲೊಂದು ಸುಂದರ ನಂಟಿದೆ.. ಎಲ್ಲೋ ಹುಟ್ಟಿ ಎಲ್ಲೋ ಬೆಳೆದ ಒಂದು ಹೆಣ್ಣು ಮಗು ಇನ್ನೊಂದು ಮನೆಯನ್ನು ಬೆಳಗುವಂತೆ.. ಎಲ್ಲೋ ಹುಟ್ಟಿ ಎಲ್ಲೋ ಹರಿವ ಕಾವೇರಿ ಮಾತೆ ಸಾಗರ ಸೇರುವಂತೆ.. ಈ ಒಂದು ಪುಟಾಣಿ ಮಗು ಮಂಜು ತುಂಬಿರುವ ಮಂಜುಗುಣಿಯಲ್ಲಿ ಹುಟ್ಟಿ, ಬೆಳೆದು.. ಬೆಂಗಳೂರು ಎಂಬ ಮಾಯಾನಗರಿಯಲ್ಲಿ ನೆಲೆಸಿದಳು..ಈಗಿನಿಂದ ಸುಮಾರು ಮೂರು ವಸಂತಗಳ ಹಿಂದೆ.. ಅಚಾನಕ್ ಒಂದು ಪ್ರವಾಸದಲ್ಲಿ ಈ ಲೇಖನವನ್ನು ಬರೆಯುತ್ತಿರುವ ಕಾಂತನಿಗೆ ಸಿಕ್ಕಿದಳು.. ಇನ್ನು ಈ ಕತೆಯನ್ನು ಈ ಲೇಖಕ ಮುಂದುವರೆಸುತ್ತಾನೆ.. ಭಕ್ತ ಕಾಂತ ಶುರು ಮಾಡಿಕೊ.... !!!

ಕಾಂತ ನಮಸ್ಕರಿಸಿ "ಮಾತೆ ನಾ ಹೆಚ್ಚು ಹೇಳುವುದಿಲ್ಲ...  ಇದು ಉಪಕಥೆ.. ಆಗಲೇ ಸಮಯ ಹೆಚ್ಚಾಗಿದೆ.. ನಾ ಹೇಳುವುದಿಷ್ಟೇ.. ಕನ್ನಡಿ, ಮನಸ್ಸಿನ ಕನ್ನಡಿ.. ದರ್ಪಣ ಹೀಗೆ ನೂರಾರು ಮಾತಲ್ಲಿ ಹೇಳುವ ಒಂದು ವಸ್ತು ಬಿಂಬದ ಪ್ರತಿಬಿಂಬ ತೋರುತ್ತದೆ.. ಇವಳು ಹಾಗೆಯೇ ಅವಳು ಯೋಚಿಸುವ ಪರಿ, ಅವಳು ಮಾತಾಡುವ ಪರಿ, ಹೌದು ನಾ ಕೂಡ ಹೀಗೆ ಮಾಡುತ್ತಿದ್ದೆ ಎಂಬ ಭಾವ ಕೊಡುತ್ತದೆ ಹಾಗೆಯೇ ಇವೆಲ್ಲವೂ ಒಂದಕ್ಕೊಂದು ಹೊಂದಾಣಿಕೆಯಾಗುತ್ತದೆ.. ಅದಕ್ಕೆ ನಾ ಅವಳನ್ನು ನನ್ನ ಕನ್ನಡಿ ಎನ್ನುವುದು ಅಥವ ನಾನು ಅವಳ ಕನ್ನಡಿ.. ಆ ಇದು ಸರಿಯಾದ ಮಾತು.. ನಾ ಅವಳ ಕನ್ನಡಿ.. ಅವಳಲ್ಲಿ ಮೂಡುವ ಮಾತು ನನ್ನಲ್ಲಿ ಮೂಡುತ್ತದೆ.. ಇವಳು ಯಾರು ಬಲ್ಲಿರೇನು ಅಂತ ಸಂದೇಹವೇ ಬೇಡ.. ಇವಳು ಸಂಧ್ಯಾ ಪುಟ್ಟಿ ನನ್ನ ಪ್ರೀತಿಯ SP.. ನನ್ನ ಮುದ್ದು ಸಹೋದರಿ.. "

"ಅದು ಸರಿ ಕಾಂತ.. ಮಾತೆ ಹೇಳಿದ ಮಾತುಗಳು, ನೀ ಹೇಳಿದ ಮಾತುಗಳು ಎರಡು ಅರ್ಥವಾಯಿತು.. ಆದರೆ ಕಾವೇರಿ ನದಿಯಲ್ಲಿ ಹರಿಯುತ್ತಿರುವ ನೀರಿನಲ್ಲಿ ಪ್ರತಿಬಿಂಬ ಹೇಗೆ ಸಾಧ್ಯ.... ಅದು ನನ್ನ ಯಕ್ಷಪ್ರಶ್ನೆ.."

ದೇವಿ ನಗುತ್ತಾ "ಭಕ್ತ .. ಇಂದು ಸಂಧ್ಯಾಳ ಹುಟ್ಟು ಹಬ್ಬ.. ಕಾಂತ ಮತ್ತು ಸಂಧ್ಯಾ ಬಿಂಬ ಪ್ರತಿಬಿಂಬದಂತೆ.. ಸಂಧ್ಯಾ ಎನ್ನುವ ಈ ಮುದ್ದು ಪುಟಾಣಿ ಹರಿಯುವ ನೀರಿನಂತೆ .. ನಮ್ಮ ಕಾವೇರಿಯಂತೆ .. ಅದರ ಒಡಲಲ್ಲಿ ಇರುವ ಅನೇಕ ಜೀವಾತ್ಮ ಅಂಶಗಳು ಇರುವಂತೆಯೇ  ಈ ಮುದ್ದು ಪೋರಿಯಲ್ಲಿ ಇರುವ ಕಲೆ ಅಬ್ಬಾ ಎನಿಸುತ್ತದೆ.. ಇವಳ ಕೈಗೆ ಒಂದು ತೆಂಗಿನ ನಾರನ್ನೇ ಕೊಡು ಒಂದು ಕಲಾಕೃತಿ ಸಿದ್ಧವಾಗುತ್ತದೆ.. ಅಂಥಹ ಚಮತ್ಕಾರ ಮಾಡುತ್ತಾಳೆ.. ಇನ್ನು ಇವಳ "ಸಂಧ್ಯೆಯಂಗಳದಿ" ಅಂಕಣದಲ್ಲಿ ಬರೆಯುವ ಲೇಖನಗಳು ಹೀಗೂ ಬರೆಯಬಹುದೆ ಎಂದು ಅಚ್ಚರಿ ಹುಟ್ಟಿಸುತ್ತದೆ.. ಅಂಥಹ ಚಮತ್ಕಾರಿಕ ಕಾಂತನ ಸಹೋದರಿಗೆ ಶುಭಾಶಯಗಳನ್ನು ಹೇಳಲು ಕಾವೇರಿ ಮಾತೆ ದರ್ಪಣವಾಗಿದ್ದಾಳೆ"

ಕಾಂತ.. ನೀನೆ ಧನ್ಯ.. ಇಂದು ಮುದ್ದು ಪುಟಾಣಿಯನ್ನು ತಂಗಿಯಾಗಿ ದರ್ಪಣವಾಗಿ ಪಡೆದ ನೀನೆ ಧನ್ಯ.. 
*********************

ಭಕ್ತರೆಲ್ಲಾ ಹರ್ಷದಿಂದ.. ಒಂದು ವಿಭಿನ್ನ ಕಥೆಯನ್ನು ಕೇಳಿದ ಅನುಭವ ಪಡೆದ ಅವರೆಲ್ಲರೂ  ಎದ್ದು ನಿಂತು "ಸಂಧ್ಯಾ.. ನಿನ್ನ ಹೆಸರಲ್ಲಿಯೇ ಸುಂದರ ಮುಂಜಾವಿದೆ, ಸುಂದರ ಸಂಜೆಯಿದೆ... ಆ ಸಂಧ್ಯಾಕಾಲದಲ್ಲಿ ಸೂರ್ಯ ಚಂದ್ರ ತಾರೆಗಳು ಅಂಬರದಲ್ಲಿ ಕಾಣುವ ಹಾಗೆ.. ನಿನ್ನ ಜೀವನದಲ್ಲಿ ಸಂತಸ ಎನ್ನುವ ಚಂದ್ರ ಬೆಳದಿಂಗಳು ಚೆಲ್ಲಲಿ , ನೆಮ್ಮದಿ ಎನ್ನುವ ಸೂರ್ಯ ಪ್ರಜ್ವಲಿಸಲಿ, ಆಸೆ ಆಕಾಂಕ್ಷೆಗಳು ಎನ್ನುವ ತಾರೆಗಳು ಸದಾ ಮಿನುಗುತ್ತಲಿರಲಿ.. ಕಲೆ ಎನುವ ನಿನ್ನ ಬಾಂದಳ ಬೆಳಗುತ್ತಲಿರಲಿ.."                                                                             
                                                               *********************
ಮತ್ತೆ ಹರಿಕಥಾ ವಿಧ್ವಾನರು ನಿಮಿಶಾಂಬೆಗೆ ನಮಿಸಿ ಕಾವೇರಿ ಮಾತೆಯನ್ನು ಒಮ್ಮೆ ನೋಡಿ ನಮಿಸಿ ಮತ್ತೊಂದು ಸುಂದರ ಪುರಾಣ ಪುಣ್ಯ ಕಥೆಯನ್ನು ಹೇಳಲು ಸಿದ್ಧವಾದರು.. 
                                                              **********************

ಅಲ್ಲಿಯೇ ನಿಂತಿದ್ದ ನಿಮಿಶಾಂಬೆ ಸಂಧ್ಯಾ ಪುಟ್ಟಿಯನ್ನು ಹರಸಿ ಗರ್ಭಗುಡಿಯಲ್ಲಿ ಹೋಗಿ ನಿಂತಳು ಎನ್ನುವಲ್ಲಿಗೆ ಈ ಹರಿಕಥಾ ಉಪಪ್ರಸಂಗ ಮಂಗಳವಾಯಿತು.. !!!


ಜನುಮದಿಂದ ಶುಭಾಶಯಗಳು SP!!!