ಶ್ರೀರಂಗಪಟ್ಟಣದ ದೇವಸ್ಥಾನದ ಬಳಿ ಜಾತ್ರೆ ನೆಡೆಯುತಿತ್ತು..
ಚಿತ್ರ ಕೃಪೆ : ಗೂಗಲೇಶ್ವರ |
ಅನೇಕ ಅಂಗಡಿ ಮುಂಗಟ್ಟುಗಳು ವಿಧವಿಧವಾದ ತಿಂಡಿ ತಿನಿಸುಗಳನ್ನು, ಬಟ್ಟೆಗಳನ್ನು, ಆಟಿಕೆಗಳನ್ನು ಹೀಗೆ ಅನೇಕ ತರಹಾವರಿ ವಸ್ತುಗಳನ್ನು ಇಟ್ಟು ಮಾರುತ್ತಿದ್ದವು..
ಸಣ್ಣ ಪುಟ್ಟ ಹೈಕಳುಗಳು ಖುಷಿ ಪಡುತ್ತಿದ್ದವು.. ಕಾಲೇಜು ಹುಡುಗ ಹುಡುಗಿಯರು ಚಂದ ಚಂದ ಉಡುಪು ತೊಟ್ಟು ಮಿಂಚುತ್ತಿದ್ದವು.. ಹಿರಿಯರು ಸಮೀಪದ ದೇವಸ್ಥಾನಕ್ಕೆ ಹೋಗಿ ದರ್ಶನ ಪಡೆದು ಆಶೀರ್ವಾದ ಪೂರ್ವಕ ಕುಂಕುಮ ಹಚ್ಚಿಕೊಂಡು ಭಕ್ತಿಯನ್ನು ತೋರಿಸುತ್ತಿದ್ದರು..
ಚಿತ್ರಕೃಪೆ: ಬಾಲು ಸರ್ |
ಸಂಜೆಯಾಗುತಿತ್ತು.. ಅಲ್ಲಿದ್ದ ಒಂದು ವೇದಿಕೆಯಲ್ಲಿ ಏನೋ ಕಲರವ.. ಮೈಕ್ ತೆಗೆದುಕೊಂಡು ಒಬ್ಬ ಪುಟ್ಟ ಪೋರ ಕಿರುಚುತ್ತಿದ್ದ.. "ಮಾನ್ಯರೇ ಇಂದು ಏಳು ಘಂಟೆಗೆ ಸರಿಯಾಗಿ ಕುರುಕ್ಷೇತ್ರ ನಾಟಕ ಶುರುವಾಗುತ್ತೆ ಎಲ್ಲರೂ ದಯಮಾಡಿ ಬನ್ನಿ.. ಮಧ್ಯೆ ಮಧ್ಯೆ ಚುರುಮುರು ಹಂಚುತ್ತೇವೆ... ಬನ್ನಿ ಬನ್ನಿ" ಅಂತ ಕೂಗುತ್ತಲೇ ಇದ್ದ..
ಅಲ್ಲಿದ್ದ ಒಬ್ಬರು ಸರಿ ದೇವರ ದರ್ಶನ ಆಗಿತ್ತು.. ಮನೆಗೆ ಹೋಗೋಕೆ ಇನ್ನೂ ಸಮಯವಿತ್ತು.. ಇನ್ನೇನು ಮಾಡೋದು.. ಒಂದಷ್ಟು ಫೋಟೋ ತೆಗೆಯುತ್ತಾ ಸಮಯ ಕಳೆಯೋಕೆ ನಿರ್ಧಾರ ಮಾಡಿದ್ದರು.. ಈ ನಾಟಕದ ವಿಚಾರ ತಿಳಿದು ಕುಶಿಯಾಯ್ತು.. ಓಕೆ ಸಮಯ ಕಳೆಯೋಕೆ ಇನ್ನೊಂದು ಸಾಧನ ಸಿಕ್ಕಿತು ಅಂತ ಆ ಹೆಜ್ಜೆ ಹಾಕತೊಡಗಿದರು..
ಹೊಟ್ಟೆ ಹಸೀತಾ ಇತ್ತು.. ಅಲ್ಲಿಯೇ ಇದ್ದ ಪಾನಿ ಪೂರಿ ಗಾಡಿಯಲ್ಲಿ ಮಸಾಲೆ ಪುರಿ, ಪಾನಿ ಪುರಿ ತಿಂದು ಒಂದೆರಡು ಲೋಟ ಪಾನಿ ಕುಡಿದು.. ಆ ನಾಟಕದ ವೇದಿಕೆಯತ್ತ ಹೆಜ್ಜೆ ಹಾಕಿದರು.. ನಾಟಕ ಇನ್ನೇನು ಶುರುವಾಗಲಿತ್ತು..
"ನಮೋ ವೆಂಕಟೇಶ.. ನಮೋ ತಿರುಮಲೇಶ" ಹಾಡಿನಿಂದ ನಾಟಕ ಶುರುವಾಯಿತು.. ನಾಟಕದ ಸೆಟ್, ವೇದಿಕೆ, ಬಣ್ಣ ಬಣ್ಣ ದೀಪಗಳು ವೇದಿಕೆಯನ್ನು ಬೆಳಗುತ್ತಿದ್ದವು..
ಪರದೆ ಸರಿಯಿತು..
ವೇದಿಕೆಯ ಮಧ್ಯದಲ್ಲಿ ಒಂದು ಬೃಹತ್ ರಥ.. ಮರದ ಕುದುರೆಗಳನ್ನು ಚೆನ್ನಾಗಿ ಸಿಂಗರಿಸಿದ್ದರು.. ರಥದ ಮೇಲೆ ಹನುಮಂತನ ಲಾಂಛನ.. ಎಲ್ಲವೂ ಸುಂದರ..
ಅರ್ಜುನ ಚಿಂತಾಕ್ರಾಂತನಾಗಿ ಕೂತಿದ್ದ.. ಶ್ರೀ ಕೃಷ್ಣ ಅರ್ಜುನನ ಚಿಂತೆಯ ಗೆರೆಯನ್ನು ನೋಡುತ್ತಾ..
"ಅರ್ಜುನ ಯಾಕ್ಲಾ ಏನಿದು ಚಿಂತೆ.. ಯುದ್ಧಕ್ಕೆ ಸಜ್ಜಾಗಿರುವೆ.. ದಿವ್ಯಾಸ್ತ್ರಗಳು ಸಾನೇ ಇವೆ.. ಮತ್ಯಾಕೆ ವೇಚನೆ ಮಾಡ್ತಾ ಇದ್ಯಾ.. ಬಿಲ್ಲು ಎತ್ತು ಬಾಣ ಊಡು.. ಸುರು ಹಚ್ಕೋ.. ಆ ದಿನಗಳ ಅವಮಾನ ಇನ್ನೂ ನೆನಪಿದೆ ತಾನೇ.. ನೀವೆಲ್ಲಾ ಉಟ್ಟಿದಾಗಿಂದ ಆ ಕೌರವರು ನಿಮ್ಗೆ ಕೊಟ್ಟಾ ಕ್ವಾಟ್ಲೆ ಎಲ್ಲಾ ಗೆಪ್ತಿ ಮಾಡ್ಕೋ.. ಸುರು ಮಾಡ್ಕೋ ಅರ್ಜುನ.. "
"ಕೃಷ್ಣಣ್ಣ ಯಾಕೋ ತಲೆ ಸಾನೇ ಕೆಟ್ಟೋಗಯ್ತೆ ... ಎದುರು ಇರೋರೆಲ್ಲ ನಮಗೆ ಗೊತ್ತಿರೋರು.. ಜೊತೆಯಲ್ಲಿ ಆಟವಾಡಿ ಬೆಳೆದವರು .. ವಿದ್ಯೆ ಹೇಳಿಕೊಟ್ಟ ಗುರ್ಗಳು.. ತಿದ್ದಿ ತೀಡಿದ ಆಚಾರ್ಯರು.. ಜೊತೆಗೆ ವಯಸ್ಸಾಗಿದ್ದರೂ ಈಗಲೂ ಫಳ ಫಳ ಹೊಳೆಯುತ್ತಿರುವ ಪಿತಾಮಹ ಭೀಷ್ಮರು.. ಇವರೆಲ್ಲರ ಎದುರು ಯುದ್ಧ ಮಾಡಬೇಕು ಅಂದರೆ ಸಾನೇ ಬೇಸರ ಕಣಪ್ಪ ಕೃಷ್ಣಣ್ಣ.. ನೀನೆ ನನ್ನ ಈ ಗೊಂದಲ ಪರಿಹರಿಸಬೇಕು.. "
ನಾಟಕದ ಮಾಸ್ತರು "ಲೋ ಕೃಷ್ಣಣ್ಣ .. ಈಗ ನಿನ್ನ ಡೈಲಾಕು ಸುರು.. ಭಗವದ್ಗೀತೆ ಸುರು ಹಚ್ಕೋ.. ನೀ ಸುಮ್ಕೆ ತುಟಿ ಚಾಲನೆ ಮಾಡು.. ನಾನು ಇಲ್ಲಿಂದಲೇ ಸ್ಲೋಕ ಹೇಳ್ತೀನಿ.. ಸರಿ ನಾ" ಅಂತ ಕೃಷ್ಣನಿಗೆ ಕೇಳುವ ಹಾಗೆ ಸನ್ನೆ ಮಾಡಿ ಹೇಳಿದರು..
ಕೃಷ್ಣ ಕಿರೀಟವನ್ನು ಸರಿ ಮಾಡಿಕೊಂಡು ಆ ಕಡೆ ಈ ಕಡೆ ನೋಡ್ತಾ ಇದ್ದ...
ಅರ್ಜುನ ಕಿರೀಟ ತೆಗೆದು ತಲೆಕೆರೆದುಕೊಂಡು..."ಲೋ ಕಿಟ್ಟ.. ನನ್ನ ,,confusion ದೂರ ಮಾಡ್ತೀನಿ ಅಂದು ...ಈಗ ಆ ಕಡೆ ಈ ಕಡೆ ನೋಡ್ರಾ ಇದ್ದೀಯಲ್ಲ..ಏನಾಯ್ತು ನಿಂಗೆ"
"ಇಲ್ಲಾ ಕಣ್ಲಾ ಅರ್ಜುನ..ಆ ಕಡೆ ನೋಡು.. ನಮ್ಮ ನಾಟಕದ ಗುರುಗಳಿಗೆ ಒಬ್ಬ ಸನ್ನೆ ಮಾಡ್ತಾ ಅವ್ನೆ.. ಗುರುಗಳ ಅತ್ರ ಒಂದು ನಾಲ್ಕು ಪೇಜು ಡೈಲಾಕು ಮಿಸ್ ಆಗೈತಂತೆ... ಅದಕೆ ಅಲ್ಲಿ ಫೋಟೋ ತೆಗಿತಾ ಇದ್ದಾರಲ್ಲ .. ಆ ವಯ್ಯಾ ಬಾಲೂ ಸರ್ ಅಂತ .. ..ಆ ವಯ್ಯನಿಗೆ ಎಲ್ಲಾ ಗೊತ್ತೈತೆ..ಭಗವದ್ಗೀತೆ ಕೂಡಾ ಗೊತ್ತು ಅದ್ಕೆ ಅವರು ಒಮ್ಮೆ ಈ ಕಡೆ ಬಂದರೆ ಗುರುಗಳಿಗೆ ಮಿಸ್ ಆದ ಡೈಲಾಕು ಅವರು ಯೋಳ್ತಾರೆ .! ಅಂತೇ ಅದಕ್ಕೆ ವೇದಿಕೆ ಹತ್ರ ಬರೋತರ ನಾ ಸನ್ನೆ ಮಾಡ್ತಾ ಇದ್ದೀನಿ ಕನ್ಲಾ"
"ಲೋಕಿಟ್ಟಿ..ಭಗವದ್ಗೀತೆ ಈಗ ತಾನೇ ನೀ ಹೇಳ್ತಾ ಇರೋದು..ಅದೆಂಗೆ ಆ ವಯ್ಯನಿಗೆ ಮೊದ್ಲೆ ಗೊತ್ತಾಗುತ್ತೆ..ಅದೆಂಗೆ ಆ ಡೈಲಾಕುಗಳು ಅವರ ಅತ್ರ ಇರ್ತಾವೆ.. !"
ಆ ವಯ್ಯನ ಪೆಸಾಲಿಟಿ ಅದು..
ಮಹಾಭಾರತದಾಗೆ ಇಲ್ದೇ ಇರೋದು ಪರಂಪಂಚದಾಗೆ ಇಲ್ಲ..
ಅಂಗೇ ಪರಪಂಚದಾಗೆ ಇರೋದೆಲ್ಲಾ ಈ ವಯ್ಯನಿಗೆ ಗೊತ್ತಿಲ್ಲದೇ ಇಲ್ಲಾ..
ಅರ್ಜುನ ತಲೆ ಕೆರೆದುಕೊಂಡು "ಯುದ್ದಾನೂ ಬೇಡ..ಏನೂ ಬೇಡ" ಅಂತ ಫೋಟಾದಾ
ಆಗ ಕೃಷ್ಣಣ್ಣ ಅರ್ಜುನನ ಹಿಂದೆ ಓಡುತ್ತಾ ..
"ಅರ್ಜುನ ಅವರೊಂತರಹ ಕೊತ್ತಂಬರೀ ಸೊಪ್ಪು ಇದ್ದ ಹಾಗೆ...
ಅಡಿಗೆಗೆ ಹಾಕಿದರೂ ಘಮ್ ಅನ್ನುತ್ತೆ..
ಕೈಯಲ್ಲಿ ಹಿಡಿದರೂ ಘಮ್ ಅನ್ನುತ್ತೆ.
ನಮ್ಮ ನಾಟಕ ಚೆನ್ನಾಗಿ ಬರೋಕೆ ಬಾಲೂ ಸರ್ ಬೇಕು
ಅಡಿಗೆ ಚೆನ್ನಾಗಿ ಆಗೋಕೆ ಕೊತ್ತಂಬರಿ ಸೊಪ್ಪು ಬೇಕು"
ಅವರ ಜ್ಞಾನ ಉಪಯೋಗಿಸ್ಕಂಡು ಈ ನಾಟಕ ಮುಗಿಸುವ..
ಬಂದ ಜನರಿಗೆ ಕುಸಿ ಆಗ್ಲಿ.. ಏನಂತೀಯಾ.. "
ಇವರಿಬ್ಬರ ಸಂಭಾಷಣೆ ಕೇಳುತ್ತಾ ಜನರೆಲ್ಲಾ ಬಿದ್ದು ಬಿದ್ದು ನಗುತ್ತಾ.. ಫೋಟೋ ತೆಗೆಯುತ್ತಿದ್ದ ಬಾಲು ಸರ್ ಅವರನ್ನು ವೇದಿಕೆಗೆ ಕರೆದು.. ಒಂದು ಹಾರ ಹಾಕಿ ಪುಟ್ಟ ಹೂ ಗುಚ್ಛ ಕೊಟ್ಟು .. "ಸರ್ ಇವತ್ತು ನಿಮ್ಮ ಜನುಮದಿನ .. ನಿಮಗೆ ಶುಭವಾಗಲಿ.. ಜೊತೆಗೆ ಈ ನಾಟಕವನ್ನು ಒಸಿ ತೂಗಿಸಿಕೊಂಡು ಹೋಗಿ .." ಅನ್ನುತ್ತಾ ಕೈ ಮುಗಿದರು..
ಬರ್ತ್ಡೇ ಬಾಯ್ -- ಬಾಲೂ ಸರ್ (ಚಿತ್ರಕೃಪೆ.. ಅವರದೇ ಸಮಯದ ಗೆರೆ) |
ಬಾಲೂ ಸರ್ ಅವರಿಗೆ ನಾಚಿಕೆ, ಖುಷಿ, ಸಂತಸ ಎಲ್ಲವೂ ಒಮ್ಮೆಲೇ.. "ಸರಿ ಕಣಪ್ಪ.. ಇದು ನಾ ಇಷ್ಟ ಪಡುವ ಶ್ರೀರಂಗಪಟ್ಟಣ.. ಆಗಲಿ ನಿಮ್ಮ ಜೊತೆ ನನ್ನನ್ನು ಗುರುತಿಸಿಕೊಳ್ಳೋಕೆ ಖುಷಿ ಆಗುತ್ತೆ.. ನಾಟಕಕ್ಕೆ ಶುಭ ಹಾರೈಕೆಗಳು"ಎಂದು ಕೈ ಮುಗಿದರು..
ನೆರೆದಿದ್ದ ಜನರೆಲ್ಲಾ ಖುಷಿಯಿಂದ ಜೋರಾಗಿ ಚಪ್ಪಾಳೆ ತಟ್ಟುತ್ತ
"ಜನುಮದಿನದ ಶುಭಾಶಯಗಳು ಬಾಲೂ ಸರ್.. " ಎಂದು ಶುಭಾಶಯಗಳನ್ನು ಕೋರಿದರು..
ನಾಟಕ ಅಭೂತಪೂರ್ವ ಯಶಸ್ಸು ಕಂಡಿತು ಅಂತ ಹೇಳಲೇ ಬೇಕಿಲ್ಲ ಅಲ್ವೇ ..!