Sunday, May 15, 2016

ಸಂತ್ಯಾಗ ನಿಂತಾರಾ - ಗೋಪಾಲ್ ವಾಜಪೇಯಿ ಸರ್

ಬೆಳಿಗ್ಗೆ ಎದ್ದೆ..

ರೇಡಿಯೋ ಎಫ್ ಎಂ ೯೨.೭ ನಲ್ಲಿ "ಕಾಲವನ್ನು ತಡೆಯೋರು ಯಾರೂ .. ಗಾಳಿಯನ್ನು ಹಿಡಿಯೋರು ಯಾರೂ ಇಲ್ಲ".. ಮನಸ್ಸು ಎಲ್ಲೋ ಹಿಂದಕ್ಕೆ ಹೋಯಿತು..

ಸ್ವಲ್ಪ ಹೊತ್ತು ಕಾಣದ ಕಡಲಿನಲ್ಲಿ ಸುತ್ತಾಡಿದ ಮನಸ್ಸು ಮತ್ತೆ ಭುವಿಗೆ ಬಂದದ್ದು.. ಅಣ್ಣಾವ್ರ ಪ್ರೇಮದ ಕಾಣಿಕೆ ಚಿತ್ರದ ಗೀತೆಯಲ್ಲಿ "ಹುಟ್ಟು ಸಾವು ಬಾಳಿನಲ್ಲಿ ಎರಡು ಕೊನೆಗಳು.. ಬಯಸಿದಾಗ ಕಾಣದಿರುವ ಎರಡು ಮುಖಗಳು".. ಅರೆ ಅಣ್ಣಾವ್ರು ಒಂದೆರಡು ಸಾಲುಗಳಲ್ಲಿ ಎಷ್ಟೊಂದು ಬ್ರಹ್ಮಾಂಡ ತುಂಬುವ ಸಂದೇಶ ಹೇಳಿದ್ದಾರೆ ಅನ್ನಿಸಿತು!

ಮನಸ್ಸು ತಹಬದಿಗೆ ಬಂತು "ನಗುತಾ ನಲಿ ನಲಿ ಏನೇ ಆಗಲಿ.. " ಹಾಡು ಮತ್ತೆ ನನ್ನನ್ನು ಮಾಮೂಲಿ ಸ್ಥಿತಿಗೆ ತಂದಿತು.

ಕಣ್ಣು ಮುಚ್ಚಿ ಕೂತೆ ಸ್ವಲ್ಪ ಹೊತ್ತು..

"ಶ್ರೀಕಾಂತ್.. ಪೀಠಿಕೆ ಹಾಕದೆ ನೀವು ಏನು ಹೇಳೋಕೂ ಆಗೋಲ್ಲ ಆಲ್ವಾ.. ಒಂದು ಪೀಠಿಕೆ ಹಾಕೇ ಬಿಟ್ಟಿದ್ದೀರ.. ಹಾಗೆ ಒಂದು ಕಾರ್ಯಕ್ರಮದ ಜಲಕ್ ಕೊಟ್ಟು ಬಿಡಿ"

ಕಣ್ಣು ತೆಗೆದ.. ಕಾಣಲಿಲ್ಲ ಏನೂ... ಮತ್ತೆ ಕಣ್ಣು ಮುಚ್ಚಿದೆ..

ಕಳೆದ ಬಾರಿ ಗೋಪಾಲ ವಾಜಪೇಯಿ ಗುರುಗಳ ಪುಸ್ತಕ ಬಿಡುಗಡೆಗೊಂಡಾಗ ಹರಿಣಿ ಮೇಡಂ ಜೊತೆ ನಾನು ಬಂದಿದ್ದೆ.. ಅವರು ಬಹಳ ಕುಶಿ ಪಟ್ಟಿದ್ದರು... ಇಂದು ಬೆಳಿಗ್ಗೆ ಯಾಕೋ ಗೊತ್ತಿಲ್ಲ ಅವರ ನೆನಪು ಕಾಡುತ್ತಿತ್ತು.. ಪ್ರಾಯಶಃ ಅದೇ ಕಾರಣ ಮೇಲಿನ ಗೀತೆಗಳು ಮೂಡಿ ಬಂದು ನನ್ನ ಮನಸ್ಸೊಳಗೆ ಹರಿಣಿ ಮೇಡಂ ಕೂತು ಈ ಕಾರ್ಯಕ್ರಮದ ಬಗ್ಗೆ ವಿವರ ಕೇಳುತ್ತಿದ್ದಾರೆ ಅನ್ನಿಸಿತು.

ಹರಿಣಿ ಮೇಡಂ... ಖಂಡಿತ ಹೇಳುತ್ತೇನೆ..

*****

ಭಾನುವಾರ ಬೆಳಿಗ್ಗೆ ಸುಮಾರು ಹನ್ನೊಂದಕ್ಕೆ ಕಾರ್ಯಕ್ರಮಕ್ಕೆ ಒಬ್ಬೊಬ್ಬರೇ ಬರಲು ಶುರುಮಾಡಿದರು. ಕಣ್ಣಿನ ಶಸ್ತ್ರ ಚಿಕಿತ್ಸೆಗೆ ಒಳಗಾಗಿ ಡಿಎಂಕೆ ಪಕ್ಷದ ಅಭ್ಯರ್ಥಿಯಂತಿದ್ದ ನಮ್ಮ ಗುರುಗಳು ವಾಜಪೇಯಿ ಸರ್ ನಿಧಾನವಾಗಿ ಕಾರಿಂದ ಇಳಿದು ಬಂದು ನೆರೆದಿದ್ದ ಮಿತ್ರರನ್ನು ಮಾತಾಡಿಸಿದರು. 

ಅವರ ಜೀವದ ಗೆಳೆಯರು, ಅವರ ಜೊತೆಗೆ ಹೆಗಲು ಕೊಟ್ಟು ದುಡಿದಿದ್ದ ಸಹೋದ್ಯೋಗಿಗಳು, ಅವರು ಹಿರಿಯರಾಗಿದ್ದರೂ, ತಮಗಿಂತ ಅರ್ಧಷ್ಟು ವಯೋಮಾನದವರನ್ನು ತಮ್ಮ ಗೆಳೆಯರು ಎಂದು ಪರಿಚಯಿಸುತ್ತಾ, ಕಿರಿಯರ ಹೆಗಲ ಮೇಲೆ ಕೈ ಇಟ್ಟುಕೊಂಡು ಮಾತಾಡಿಸುತ್ತಿದ್ದ ಪರಿ ಸೊಗಸಾಗಿತ್ತು. 

ಅತಿಥಿಗಳು ಈ ಕೆಳಗಿನವರು 
  •  ಮಲೆಗಳಲ್ಲಿ ಮದುಮಗಳು ನಾಟಕವನ್ನು ಪುಸ್ತಕದಿಂದ ರಂಗಕ್ಕೆ ಕರೆತಂದವರು, ಜೊತೆಯಲ್ಲಿಯೇ ರಂಗಶಾಲೆಗೇ ಹೊಸ ಆಯಾಮ ನೀಡುತ್ತಿರುವ, ಮತ್ತು ಸಾಧನೆ ಮಾಡಿರುವ, ಮಾಡುತ್ತಿರುವ ಶ್ರೀ ಬಸವಲಿಂಗಯ್ಯ, 
  • ಶ್ರೀ ಸೇತುರಾಂ ಅವರ ಮಂಥನ ಎಂಬ ಮಂಥನ ಧಾರಾವಾಹಿಯಲ್ಲಿ ಮಠದ ಗುರುಗಳಾಗಿ ಅದ್ಭುತ ಅಭಿನಯ ನೀಡಿದ್ದ ಶ್ರೀ ಸಿ ಗುಂಡಣ್ಣ 
  • ನನ್ನ ಇಷ್ಟ ದೈವ ನಿರ್ದೇಶಕರಾದ ಶ್ರೀ ಪುಟ್ಟಣ್ಣ ಕಣಗಾಲ್ ಅವರು ಶುಭಮಂಗಳ ಚಿತ್ರದಲ್ಲಿ ಮಗ್ಗಿ, ಲೆಕ್ಕದ ಹಾಡನ್ನು ಒಬ್ಬ ಬ್ಯಾಂಕ್ ನಲ್ಲಿ ಕೆಲಸ ಮಾಡುವವರಿಂದಲೇ ಹಾಡು ಬೇಕು ಎಂದು  "ನಾಲ್ಕೊಂದ್ಲ ನಾಲ್ಕು ನಾಲ್ಕೆರಡ್ಲ ಎಂಟು"ಹಾಡಿನ ಕತೃ ಶ್ರೀ ಎಂ ಏನ್ ವ್ಯಾಸರಾವ್ ಅವರು.. 
ಇವರ ಜೊತೆಯಲ್ಲಿ ನಮ್ಮ ಗುರುಗಳು ಶ್ರೀ ಗೋಪಾಲ ವಾಜಪೇಯಿ ಅವರ ಬಗ್ಗೆ... ಮಹಾನ್ ತಾರೆಗಳೊಂದಿಗೆ, ಪ್ರತಿಭೆಗಳೊಂದಿಗೆ ಹೆಗಲು ತಾಕಿಸಿ ಓಡಾಡಿ, ಆ ದಿಗ್ಗಜರ ಜಲಕ್ ಅನುಭವವನ್ನು ತಮ್ಮ ಎಲ್ಲಾ ಬರವಣಿಗೆಗಳಲ್ಲಿ, ಕೆಲವು ಚಿತ್ರಗಳಲ್ಲಿ ತೋರಿಸಿರುವ ಇವರು, ಅವರ ಮುಂದೇ ಏನೂ ಅಲ್ಲದ ನನ್ನನ್ನು ಆತ್ಮೀಯವಾಗಿ ಮಾತಾಡಿಸಿ, ಎಲ್ಲರೆದುರು ಪರಿಚಯ ಮಾಡಿಸಿ, ನನ್ನೊಳಗೆ ನಾನು ಬೀಗುವಂತೆ ಮಾಡುವ ಇವರು ನಿಜವಾಗಿಯೂ ನಮ್ಮ ನಡುವೆ ಇರುವ ಚೈತನ್ಯದ ಚಿಲುಮೆ. 

ಕಾರ್ಯಕ್ರಮಕ್ಕೆ ಅತಿಥಿಗಳನ್ನು ಅಂಗಣಕ್ಕೆ ಆಹ್ವಾನ ಮಾಡಿದ ಮೇಲೆ, ಗೋಪಾಲ್ ಸರ್ ಅವರ ಜೀವದ ಗೆಳೆಯರಲ್ಲಿ ಒಬ್ಬರಾದ ಶ್ರೀಪತಿ ಅವರಿಂದ ಪ್ರಾರ್ಥನಾ ಗೀತ ಅನ್ನುವುದಕ್ಕಿಂತ ಒಂದು ಅದ್ಭುತ ರಂಗ ಗೀತೆಯಿಂದ ಕಾರ್ಯಕ್ರಮಕ್ಕೆ ಚಾಲ್ತಿ ನೀಡಿದರು.

ಕಾರ್ಯಕ್ರಮದಲ್ಲಿ ಗಡಿಬಿಡಿ ಕಂಡು ಕಾಣದಂತೆ ಇದ್ದಾಗ ಅದನ್ನು ತಿಳಿಯಾಗಿಸಿದವರು ಶ್ರೀ ಬಸವಲಿಂಗಯ್ಯ ಅವರು.. "ಸಂತೆಯಲ್ಲಿ ನಿಂತ ಮೇಲೆ ಗಡಿಬಿಡಿ ಆಗಬೇಕಾದ್ದೇ, ಅದಕ್ಕೆ ಮುಜುಗರ ಬೇಡ" ಎನ್ನುತ್ತಾ ಕಬೀರನ ಒಂದು ಪುಟವನ್ನೇ ಹಾಗೆ ಬಿಚ್ಚಿಟ್ಟರು. ದೇಹವನ್ನು ಒಂದು ಚಾದರ್ ಗೆ ಹೋಲಿಸಿದ್ದಾನೆ ಆ ಕಬೀರ ಎಂದರು.. 

(ತಕ್ಷಣ ಹರಿಣಿ ಮೇಡಂ ಮದ್ಯೆ ನನ್ನ ಜೊತೆ ಮಾತಾಡಿ.. ಶ್ರೀಕಾಂತ್ ಇವಾಗ ಅರಿವಾಯಿತು ನೀವು ಆರಂಭದಲ್ಲಿ ಹಾಕಿದ ಕೆಲವು ಗೀತೆಗಳ ಸಂದೇಶ.. ಸೂಪರ್ ಸೂಪರ್ ಮುಂದುವರೆಸಿ)

 ನಿರರ್ಗಳವಾಗಿ ಕಬೀರನ ಜೊತೆಯಲ್ಲಿ ನಮ್ಮನ್ನು ಐದಾರು ಶತಮಾನಗಳ ಹಿಂದಕ್ಕೆ ಕರೆದೊಯ್ದು ದರುಶನ ಮಾಡಿಸಿದ ಶ್ರೀ ಬಸವಲಿಂಗಯ್ಯ ಅವರ ಮಾತಿನ ಸರಮಾಲೆಗೆ ಅರ್ಥವಿತ್ತು. ಸುಂದರವಾಗಿತ್ತು. ಮುತ್ತಿನಹಾರವನ್ನು ಪೋಣಿಸಿದಂತೆ ಮಾತಿನ ಭಂಡಾರ ಸೊಗಸಾಗಿ ಹೊಳೆಯುತ್ತಿತ್ತು. ಈ ಕೃತಿ ಸಂತ್ಯಾಗೆ ನಿಂತಾನ ಕಬೀರ ನಾಟಕ ಅನುವಾದಗೊಂಡು ರಂಗಕ್ಕೆ ಏರಲು ಕಾರಣ ಕರ್ತರು ಅವರೇ ಎಂದು ಗೊತ್ತಾದಾಗ ಸಂತೋಷವಾಯಿತು. ತಮ್ಮ ಮತ್ತು ಗೋಪಾಲ್ ಸರ್ ಅವರ ಗೆಳೆತನ, ಪರಿಚಯದ ಒಂದು ಚಿಕ್ಕ ಪುಟವನ್ನು ನಮ್ಮಲ್ಲಿ ಹಂಚಿಕೊಂಡರು. 


ನಂತರ ಮಾತಾಡಿದ ಶ್ರೀ ಸಿ ಗುಂಡಣ್ಣ ಅವರು, ಕಬೀರನ ದೋಹಾಗಳ ಬಗ್ಗೆ, ಗೋಪಾಲ್ ಸರ್ ಮತ್ತು ತಮ್ಮ ಗೆಳೆತನ, ಜೊತೆಯಲ್ಲಿ ಬಸವಲಿಂಗಯ್ಯ ಅವರ ಜೊತೆಗಿನ ನಂಟು, ಎಂ ಏನ್ ವ್ಯಾಸರಾವ್ ಅವರ ಜೊತೆಗಿನ ಒಡನಾಟ, ಇವುಗಳ ಬಗ್ಗೆ ಚುಟುಕಾಗಿ ವಿವರಿಸಿ ತಮ್ಮ ಮಾತನ್ನು ಸುಂದರವಾದ ಚೌಕಟ್ಟಿನೊಳಗೆ ನಿಲ್ಲಿಸಿದರು. 

ಅಧ್ಯಕ್ಷ ಸ್ಥಾನದಲ್ಲಿ ಕೂತಿದ್ದ ಶ್ರೀ ಎಂ ಏನ್ ವ್ಯಾಸರಾವ್ ಅವರು ಕಬೀರನ ಬಗ್ಗೆ, ಈ ನಾಟಕದ ಬಗ್ಗೆ, ಅನುವಾದದ ಬಗ್ಗೆ ಎಲ್ಲವನ್ನು ತಿಳಿ ತಿಳಿಯಾಗಿ ಹೇಳುತ್ತಾ, ಒಂದು ಒಳ್ಳೆಯ ಒಡನಾಟ ಎಂಥಹ ಅದ್ಭುತ ಕಾರ್ಯವನ್ನು ಮಾಡಿಸುತ್ತದೆ ಎಂದು ಹೇಳುತ್ತಾ, ತಮಗೆ ಅರಿವಿಗೆ ಬಂದ ವಿಚಾರಗಳನ್ನು ಸಂಕ್ಷಿಪ್ತವಾಗಿ ಹೇಳಿದರು. 

ಇವರಿಗಿಂತ ಕೊಂಚ ಹೊತ್ತು ಮುಂಚೆ ಮಾತಾಡಿದ ಗೋಪಾಲ್ ಸರ್ ಅವರು, ತಮ್ಮ ಕೆಲಸದ ಆರಂಭದ ದಿನಗಳ ಬಗ್ಗೆ ಹೇಳುತ್ತಾ, ಈ ನಾಟಕ ಅನುವಾದ ಮಾಡುವ ಸುವರ್ಣ ಘಳಿಗೆಯನ್ನು ನೆನೆಸಿಕೊಳ್ಳುತ್ತಾ, ಒತ್ತಡದಲ್ಲಿ ಎಷ್ಟೊಂದು ಸುಂದರ ಕೆಲಸಗಳು, ಸಾಧನೆಗಳು ಆಗುತ್ತದೆ ಎನ್ನುವುದನ್ನು ತಮ್ಮ ಶೈಲಿಯಲ್ಲಿ ತಿಳಿಸಿದರು.  ತಮ್ಮ ಗೆಳೆಯರ ಸಹಕಾರವನ್ನು ಪರಿಚಯಿಸುತ್ತಾ, ಅವರೆನ್ನಲ್ಲಾ ವೇದಿಕೆಗೆ ಕರೆದು ಈ ದಿನ ಬಿಡುಗಡೆಗೊಂಡ ಕೃತಿಯನ್ನು ಗೌರವ ಪೂರ್ವಕವಾಗಿ ಕೊಟ್ಟು ತಮ್ಮ ಗೆಳೆತನಕ್ಕೆ ಸುವರ್ಣ ಚೌಕಟ್ಟನ್ನು ಹಾಕಿದರು. 

ಪ್ರತಿಭಾ ಖನಿಗಳ ಹಸ್ತದಿಂದ ನನಗೂ ಒಂದು ಕೃತಿಯನ್ನು ಕೊಡಿಸಿದ್ದು ಮನದೊಳಗೆ ನಾನು ಕುಣಿದಾಡುವಂತೆ ಮಾಡಿತು ಎಂದರೆ ನನ್ನ ಮಾತು ಸುಳ್ಳಲ್ಲ. 

ಯಾಜಿ ಪ್ರಕಾಶನದ ಶ್ರೀ ಗಣೇಶ್ ಯಾಜಿ ಅವರು ತಮ್ಮ ಈ ಸಾಹಸಕ್ಕೆ ಜೊತೆಯಾದವರೆನ್ನಲ್ಲ ನೆನೆಸಿಕೊಂಡು ಅವರ ಶುಭ ಆಶೀರ್ವಾದಗಳು ಹೀಗೆ ಸದಾ ಇರಲಿ ಎಂದು ಹೇಳುತ್ತಾ ಈ ಚಿಕ್ಕ ಚೊಕ್ಕ ಕಾರ್ಯಕ್ರಮಕ್ಕೆ ತೆರೆ ಎಳೆದರು. 

ಹಮ್ಮು ಬಿಮ್ಮು ಇಲ್ಲದ ಸರಳ ವಿರಳ ಎನ್ನುವಂಥ ಈ ಕಾರ್ಯಕ್ರಮ ಶುರುವಾಗಿದ್ದು ಮಾತು ಮುಕ್ತಾಯಗೊಂಡಿದ್ದರ ನಡುವೆ ಕಂಡದ್ದು ಸರಳ ಗೆಳೆತನ, ವಿಶ್ವಾಸ, ಮತ್ತು ಪ್ರತಿಭೆಯ ಮೇಲೆ ಅಚಲ ನಂಬಿಕೆ ಜೊತೆಯಲ್ಲಿ ಸಾಧನೆ ಶಿಖರ ಏರಿದರು ಜೊತೆಯಲ್ಲಿ ಹೆಜ್ಜೆ ಹಾಕುತ್ತಾ ಸಾಗುತ್ತಿದ್ದ ವಿನಯವಂತಿಕೆ. 

ಸಂತೆಯಲ್ಲಿ ನಿಂತ ಕಬೀರ ಹೇಳಿರುವ ಸರಳ ಮಾತುಗಳಲ್ಲಿನ ಸಂದೇಶಗಳನ್ನು ಈ ಭುವಿಯಲ್ಲಿರುವ ಎಲ್ಲರರೂ ಅಳವಡಿಸಿಕೊಂಡರೆ ಜೀವನ ಚಿತ್ರದಲ್ಲಿ ಅಣ್ಣಾವ್ರು  ಹಾಡಿದಂತೆ "ಭುವಿಯೆ ಸರ್ಗ ಭುವಿಯೆ ಸ್ವರ್ಗ ಎನುತಿಹರು.. ನಾದಮಯ ಈ ಲೋಕವೆಲ್ಲಾ ನಾದಮಯ"

ಸುಂದರ ಚಿಕ್ಕ ಚೊಕ್ಕ ಕಾರ್ಯಕಮದಲ್ಲಿ ಭಾಗವಹಿಸಲಿಕ್ಕೆ ಅವಕಾಶವಿತ್ತ ಶ್ರೀ ಗೋಪಾಲ್ ವಾಜಪೇಯಿ ಅವರಿಗೆ ಧನ್ಯವಾದಗಳು ಅರ್ಪಿಸಿ ನಾ ಅಲ್ಲಿಂದ ಹೊರಟೆ.... :-)

*****

ಶ್ರೀಕಾಂತ್ ನಿಮಗೆ ಧನ್ಯವಾದಗಳು.. ಕಳೆದ ಸಾರಿಯ ಗೋಪಾಲ್ ಸರ್ ಅವರ ಪುಸ್ತಕ ಬಿಡುಗಡೆ ನಾ ನಿಮ್ಮ ಜೊತೆ ಬಂದಿದ್ದೆ.. ಆದರೆ ಈ ಕಾರ್ಯಕ್ರಮಕ್ಕೆ ಕಬೀರ ಹೇಳಿದ ಚಾದರ್ ನನ್ನ ಬಳಿಯಲ್ಲಿ ಇರದೇ ಹೋಯಿತು.. ಅದನ್ನು ಆ ದೇವ ತನ್ನ ಬಳಿಗೆ ಒಯ್ದು ಬಿಟ್ಟಾ.. ಹಾಗಾಗಿ ನಿಮ್ಮ ಮನದೊಳಗೆ ಕೂತು ಈ ಕಾರ್ಯಕ್ರಮವನ್ನು ಅನುಭವಿಸಬೇಕು ಎಂಬಾ ಆಸೆಯಾಯಿತು. ಹಾಗಾಗಿ ನನಗೆ ಈ ಕಾರ್ಯಕ್ರಮವನ್ನು ನೋಡಲಿಕ್ಕೆ, ಅನುಭವಿಸಲಿಕ್ಕೆ ಅವಕಾಶ ಮಾಡಿಕೊಟ್ಟ ಆ ದೇವನಿಗೆ ನಮಸ್ಕರಿಸುತ್ತೇನೆ. ಮತ್ತೆ... 

ಮೇಡಂ ನನಗೆ ಧನ್ಯವಾದಗಳನ್ನು ಹೇಳಬೇಡಿ.. ಗುರುಗಳ ಮೇಲಿನ ಗೌರವ ಭಕ್ತಿ ನನಗೆ ಈ ಕೆಲಸ ಮಾಡಲು ಅನುಕೂಲ ಮಾಡಿಕೊಟ್ಟಿತು. ಅವರಿಗಾಗಿ ಬಂದೆ, ಅವರಿಗಾಗಿ ನಿಂದೆ.. ಗುರುಗಳು ಹೇಳಿದರೆ ಶ್ರೀಕಾಂತ ಕೂಡ ಸಂತ್ಯಾಗ ಏನೂ ಎಲ್ಲಿ ಬೇಕಾದರೂ ನಿಂತಾನಾ...ಬರ್ತಾನಾ.. :-)

ಹರಿಣಿ ಮೇಡಂ ಅಲ್ಲಿಯೇ ಬೆಳಗುತ್ತಿದ್ದ ದೀಪದೊಳಗೆ ಸಾಗುತ್ತಾ ಹೋದಂತೆ.. ಒಂದು ಚಿಕ್ಕ ಬಿಂಧುವಾಗಿ ಹೊಳೆಯುವ ತಾರೆಯಾಗಿ ನಿಂತು ಬಿಟ್ಟರು.. 

ಒಂದು ಸುಮಧುರ ಕಾರ್ಯಕ್ರಮಕ್ಕೆ ಭೇಟಿ ಕೊಟ್ಟ ಕುಶಿ ಕೊಟ್ಟ ಪರಿ ಒಂದು ಕಡೆಯಾದರೆ.. ನನ್ನ ನೆಚ್ಚಿನ ಹರಿಣಿ ಮೇಡಂ ನನ್ನೊಳಗೆ ನುಗ್ಗಿ ಬಂದು ಬರೆಸಿದರು ಎನ್ನುವ ಸಂತಸ ಇನ್ನೊಂದು ಕಡೆ.. ಡಬಲ್ ಧಮಾಕ.. 

ಗುರುಗಳೇ ಗೋಪಾಲ್ ವಾಜಪೇಯಿ  ಸರ್ ನಿಮಗೆ ಮತ್ತು ನಿಮ್ಮ ಸ್ನೇಹ ಭಂಡಾರಕ್ಕೆ ನನ್ನ ಧನ್ಯವಾದಗಳು...!!!

Saturday, May 7, 2016

DFR ಹಾಯ್ ಬೆಳಗು - ಶ್ರೀ

ಅಣ್ಣಾವ್ರ "ಹೇ ದಿನಕರ ಶುಭಕರ ಧರೆಗೆ ಬಾ" ಹಾಡು ಬರುತ್ತಿತ್ತು..

ಅರೆ ಅರೆ.. ಯಾರೂ ಕೂಗುತ್ತಿದ್ದಾರೆ, ಇರಪ್ಪ ಇರಪ್ಪ, ನೋಡೋಣ ಎಂದು, ಭಾಸ್ಕರ ತನ್ನ ಕೊನೆಯ ಬಾಗಿಲನ್ನು ತೆಗೆದ.. ಅದು ಕಿರ್ ಎಂದು ಸದ್ದು ಮಾಡಿತು..

"ಹಾಯ್ ಬೆಳಗು" ಎನ್ನುತ್ತಾ ಒಂದು ಕೋಗಿಲೆ ಕಂಠ ಉಳಿಯಿತು..

ಅರೆ ಇದೇನಿದು DFR ನೀವು ಇಲ್ಲಿಗೆ ಬಂದಿದ್ದೀರಿ.. ಏನ್ ಸಮಾಚಾರ..

"ನೋಡಿ Rav's  (DFR ರವಿಯನ್ನು ಕರೆಯುವ ರೀತಿ).. ಇವತ್ತು ಹಿಮಾಲಯದಲ್ಲಿ ಹೆಜ್ಜೆ ಇಟ್ಟೇ.. ಯಾಕೋ ನೀ ಇನ್ನು ಬಂದಿರಲ್ಲಿಲ್ಲ.. ಅದಕ್ಕೆ ನಿನ್ನ ಮೀಟ್ ಮಾಡಿ, ನಿನಗೆ ಶುಭಕೋರಿ.. ಒಂದು ಸಂದೇಶ ಹೇಳೋಣ ಅಂತ ಬಂದೆ.. "

"ಹೇಳಿ DFR"

"ಹಿಮಾಲಯದಲ್ಲಿ ನೀವು ನಿಮ್ಮ ಮನೆಯಿಂದ ಹೆಚ್ಚು ಬೇಡ ಕಡಿಮೆಯೂ ಬೇಡ ಆ ರೀತಿಯ ಶಾಖ ಮತ್ತು ಬೆಳಕನ್ನು ನೀಡಿ.. ನನಗೆ ನನ್ನ ಮತ್ತು ಸಹ ಚಾರಣಿಗರಿಗೆ ಈ ಚಾರಣ ಸುಸ್ತಾಗದಂತೆ, ಮತ್ತು ನಿನ್ನ ಕಣ್ಬೇಳಕಲ್ಲಿ ಭೂರಮೆ ಸುಂದರವಾಗಿ ಕಾಣುವಂತೆ ಮಾತು.. ಸುಮಾರು ಸೆಲ್ಫಿ ತಗೊಳಿದಿದೆ.. "

"ಇದನ್ನ ನೀವು ಹೇಳಬೇಕೇ DFR ಖಂಡಿತ ಹಾಗೆ ಮಾಡುತ್ತೇನೆ.. ನಿಮ್ಮ ಚಾರಣ ಸುಂದರವಾಗಿರಲಿ.. ಶುಭವಾಗಲಿ.. "

ಅರುಣ ಸೂರ್ಯದೇವನಿಗೆ ಕಾಯುತ್ತಿದ್ದ.. ರಥದತ್ತ ಸೂರ್ಯ ದೇವ ಬರುತ್ತಿದ್ದಂತೆ, ರಥವೂ ನಿಧಾನವಾಗಿ ಸಾಗತೊಡಗಿತು..

ಇತ್ತ DFR ತನ್ನ ಸಹ ಚಾರಣಿಗರ ಜೊತೆಯಲ್ಲಿ ಚಾರಣದ ವೇಳಾ ಪಟ್ಟಿಯ ಪ್ರಕಾರ ಬೇಸ್ ಕ್ಯಾಂಪ್ ಕಡೆಗೆ ಹೊರಟರು.

ಅಲ್ಲಿ ಸುರಕ್ಷತಾ ಸಿಬ್ಬಂಧಿ, ತಪಾಸಣೆ ಮಾಡುತ್ತಾ ಸುಮಾರು ನೂರಾರು ಯಾತ್ರಿಕರನ್ನು, ಚಾರಣಿಗರನ್ನು ತಪಸಾನೆ ಮಾಡುತ್ತಲೇ, ನಗುಮೊಗದಿಂದಲೇ ಎಲ್ಲರಿಗೂ ಶುಭ ಹಾರೈಸುತ್ತಾ ಕಳಿಸುತ್ತಿದ್ದರು.

"ನಾರಾಯಣ ನಾರಾಯಣ" ಧ್ವನಿ ಕೇಳಿ ಎಲ್ಲರೂ ಚಕಿತಗೊಂಡರು.

ನಾರದ ಮಹಾಮುನಿ ಅಲ್ಲಿ ನಗುಮೊಗದಿಂದ ಒಂದು ಫಲಕವನ್ನು ಹಿಡಿದು ನಿಂತಿದ್ದರು.

DFR ನಾರದ ಮುನಿಗೆ ನಮಸ್ಕರಿಸಿ, ನಾರದ ಮುನಿಗಳೇ.. "ಏನು ಸಮಾಚಾರ, ಫಲಕದಲ್ಲಿ ನನ್ನ ಹೆಸರು ಏಕಿದೆ, ಹೇಳಿ ಏನು ಸಮಾಚಾರ"

"DFR ನಿಮಗೆ HMT ಕಾರ್ಖಾನೆ ಮುಚ್ಚುತ್ತಲಿರುವುದು, ಮತ್ತು ಕೆಲವು ಘಟಕಗಳು ಮುಚ್ಚಿರುವುದು ನಿಮಗೆ ಗೊತ್ತೇ ಇದೆ. ಧರಣಿಮಂಡಲ ಮಧ್ಯದೊಳಗೆ  ಮೆರೆಯುತಿರುವ ಕರ್ನಾಟಕದ ರಾಜಧಾನಿ ಬೆಂಗಳೂರಿನ ಜಾಲಹಳ್ಳಿ ಬಳಿಯ HMT ಕಾರ್ಖಾನೆಯ ಮುಂದೆ ಲಕ್ಷಾಂತರ ಮಂದಿ ಧರಣಿ ಹೂಡಿದ್ದಾರೆ, ಅದಕ್ಕೆ ನೀವು ಬರಬೇಕಂತೆ"

"ಅರೆ... ಮುನಿಗಳೇ.. ಅದು ಹೇಗೆ ಸಾಧ್ಯ, ನಾನು ಚಾರಣಕ್ಕೆ ಬಂದಿದ್ದೇನೆ, ಜೊತೆಯಲ್ಲಿಯೇ, ಆ ಕಾರ್ಖಾನೆ ಮುಚ್ಚಿರುವುದು ಆಡಳಿತ ಮಂಡಳಿಯ ಸಮಸ್ಯೆ, ನಾನು ಏನು ಮಾಡಲಿ, ನನ್ನನ್ನು ಏಕೆ ಬರಲು ಹೇಳುತ್ತಿದ್ದಾರೆ. ಕಾರಣ ಗೊತ್ತಾಗುತ್ತಿಲ್ಲ"

"DFR,, ಚಾರಣದ ಬಗ್ಗೆ ನೀವೇನು ಯೋಚನೆ ಮಾಡಬೇಡಿ.. ಬನ್ನೇರುಘಟ್ಟದ ಬಳಿಯಲ್ಲಿರುವ ಚಂಪಕಧಾಮ ದೇವಸ್ಥಾನದ ಅಂಜನೇಯ ನಮಗಾಗಿ ಪುಷ್ಪಕ ವಿಮಾನ ತಂದಿದ್ದಾರೆ, ಅದರಲ್ಲಿ ಯೋಜನಾಗಟ್ಟಲೆ ದೂರವನ್ನು ಕ್ಷಣಮಾತ್ರದಲ್ಲಿ ತಲುಪಬಹುದು.. ಕೇವಲ ಮೂವತ್ತು ನಿಮಿಷ ಅಷ್ಟೇ.. ನಾನು ನಿಮ್ಮ ಸಹಚಾರಣಿಗರಿಗೆ ಹೇಳುತ್ತೇನೆ.. ಮತ್ತು ೧೮೦೦ ಕ್ಷಣಗಳಲ್ಲಿ ನಿಮ್ಮನ್ನು ವಾಪಾಸ್ ಇಲ್ಲಿಗೆ ಕರೆದುಕೊಂಡು ಬರುವ ಜವಾಬ್ಧಾರಿ ನನ್ನದು.. ಮತ್ತು ಹನುಮನದು. ಯೋಚಿಸಬೇಡಿ"

"ರೈಟ್.. ಓಕೆ ನಾರದ ಮುನಿಗಳೇ.. "

"ಡಿಯರ್ ಫ್ರೆಂಡ್ಸ್.. ನಾನು ನಿಮ್ಮೆಲ್ಲರ ನಾಯಕಿ 3ಕ ತಂಡದ ಒಡತಿ, ಅನೇಕ ಸಾಮಾಜಿಕ ಕಾರ್ಯಕ್ರಮಗಳಲ್ಲಿ ತನ್ನನ್ನೇ ತೊಡಗಿಸಿಕೊಂಡು ಸಮಾಜಮುಖಿಯಾಗಿರುವ, ಮತ್ತು ತಾನು ಸ್ಪೂರ್ತಿಗೊಂಡು, ಇತರರಿಗೂ ಆ ಸ್ಫೂರ್ತಿ ಸಾಂಕ್ರಾಮಿಕವಾಗಿ ಹಬ್ಬುವಂತೆಮಾಡಿ  ಮೇಕ್ A ಡಿಫರೆನ್ಸ್ ಅನ್ನುತ್ತಾ ಹತ್ತು ಹಲವು ಕಾರ್ಯಕ್ರಮಗಳನ್ನು ಮಾಡುತ್ತಿರುವ ನಿಮ್ಮೆಲ್ಲರ ಅಧಿನಾಯಕಿ DFR ಅವರನ್ನು ಕೇವಲ ೧೮೦೦ ಸೆಕೆಂಡ್ಸ್ ಅಂದರೆ ೩೦ ನಿಮಿಷ ಬೆಂಗಳೂರಿನ ಜಾಲಹಳ್ಳಿ ಬಳಿಯ HMT ಕೈ ಗಡಿಯಾರ ಕಾರ್ಖಾನೆಗೆ ಕರೆದೊಯುತ್ತೇನೆ. ೩೧ ನಿಮಿಷಕ್ಕೆ ಅಂದರೆ ೧೮೦೧ ಕ್ಷಣಕ್ಕೆ ನಾವು ಇಲ್ಲಿಯೇ ಇರುತ್ತೇವೆ, ಓಕೆ ನಾ"

"ಓಕೆ ಓಕೆ.. ರೂಪಕ್ಕ, ರೂಪ ಮೇಡಂ, ರೂಪ ಹೋಗಿ ಬನ್ನಿ.. ನೀವು ಬರುವ ತನಕ ನಾವಿಲ್ಲೇ ಕೂತಿರುತ್ತೇವೆ" ಎಂದರು ಸಹಚಾರಣಿಗರು.

ಹನುಮ ದೇವರು ತಂದ ಪುಷ್ಪಕ ವಿಮಾನದಲ್ಲಿ, ನಾರದ ಮುನಿಗಳು, ಹನುಮ ದೇವರು, ಮತ್ತು DFR ಕುಳಿತು ಹಿಮಾಲಯದಿಂದ ಬೆಂಗಳೂರಿನ ಕಡೆಗೆ ಹಾರಿದರು.. DFR ಕೈಯಲ್ಲಿ HMT ಕೈಗಡಿಯಾರ ಒಂದು ಮುಗುಳುನಗೆ ನಕ್ಕು, ಅಬ್ಬಾ, ಅಂತೂ ನನ್ನ ಸಮಸ್ಯೆ ಬಗೆ ಹರಿಯಿತು ಎಂದು ಸಂತಸದಿಂದ ಕುಣಿಯುತ್ತಿತ್ತು.


ಮುಂದೆ ಏನಾಗುತ್ತೆ.. ಎರಡನೇ ಭಾಗದಲಿ ನೋಡಿ.. ಹಾಯ್ ಬೆಳಗು - ನಿವ್ಸ್   ಹುರ್ರಾ....

(ಅದ್ಭುತ ಬರಹಗಾರ್ತಿ ಮತ್ತು ಸ್ನೇಹಿತೆ ನಿವೇದಿತ ಚಿರಂತನ್ ಅವರು ಕೊಟ್ಟ ಒಂದು ಸಲಹೆ.. ಶ್ರೀ ಇಂದು ನಮ್ಮಿಬ್ಬರ ಮತ್ತು ನೂರಾರು ಸ್ನೇಹಿತರ ಸ್ಪೂರ್ತಿಯ ಚಿಲುಮೆ ರೂಪ ಸತೀಶ್ ಅಲಿಯಾಸ್ ನಿಮ್ಮ DFR ಮತ್ತು ನನ್ನ ರೂಪಕ್ಕ ಅವರ ಹುಟ್ಟು ಹಬ್ಬಕ್ಕೆ ಒಂದು ಉಡುಗೊರೆ ಕೊಡೋಣ.. ನಾ ಬ್ಲಾಗ್ ಶುರು ಮಾಡುತ್ತೀನಿ ನೀವು ಅದನ್ನು ಕಂಪ್ಲೀಟ್ ಮಾಡಿ.. ಇಲ್ಲ ನೀವು ಬರೆಯಿರಿ ನಾ ಕಂಪ್ಲೀಟ್ ಮಾಡುತ್ತೀನಿ ಅಂದ್ರು.. ವಾಹ್ ಅನ್ನಿಸಿತು ಒಂದು ಅದ್ಭುತ ಐಡಿಯಾ.. ಸರಿ ಸವಾಲಿಗೆ ಸಿದ್ಧವಾಯಿತು.. ಅದರ ಫಲವೇ.. ಎರಡು ಬ್ಲಾಗ್ ಗಳು DFR ಹುಟ್ಟು ಹಬ್ಬಕ್ಕೆ ಉಡುಗೊರೆಯಾಗಿ ನಿಮ್ಮ ಕಣ್ಣ ಮುಂದೆ.. ಧನ್ಯವಾದಗಳು CB..)


(DFR  ಈ ಹೆಸರೇ ಸಾಕು ಉತ್ಸಾಹದ ಚಿಲುಮೆಗೆ ಇನ್ನೊಂದು ಹೆಸರು.. 
ಏನು ಬರೆಯುವುದು ಎನ್ನುವ ಗೊಂದಲವಿರಲ್ಲಿಲ್ಲ.. ಬ್ಲಾಗ್ ಟೈಟಲ್ ಕೂಡ ಮೊದಲೇ ನಿರ್ಧಾರವಾಗಿತ್ತು 
೨೩ನೆ ಫೆಬ್ರವರಿ ೨೦೧೬ ... ಮುಂಜಾವು DFR ನನಗೆ ಶುಭಾಷಯ ಕೋರಿದ್ದು.. ಹೀಗೆ 
ಶ್ರೀ "ಹಾಯ್ ಬೆಳಗು"..
ಆಗ ಅವರಿಗೆ ಹೇಳಿದ್ದೆ ಇದೆ ಪದಗಳನ್ನು ಟೈಟಲ್ ಆಗಿ ಮಾಡಿ ಒಂದು ಲೇಖನ ಬರೆಯುತ್ತೇನೆ ಎಂದು 
ಇಂದು ಆ ಸುದಿನ ಬಂದಿದೆ.. ಅದೇ ಹೆಸರಿನಲ್ಲಿ ಒಂದು ಬ್ಲಾಗ್ ಬರೆದಿದ್ದೇನೆ..)