Sunday, March 25, 2018

ಮೈತ್ರಿ ಪ್ರಕಾಶನದ ನಾಲ್ಕು ರತ್ನಗಳು ಹೊಳಪು ಕಂಡ ಕ್ಷಣ

"ಕೊಂಡು ತಂದು ಹೊತ್ತು ಮಾರಿ ಲಾಭಗಳಿಸಲು ವಿದ್ಯೆಯೇನೂ ಬಲೆಯ ಮಲಾರವೇ" ನಾಲ್ಕನೇ ತರಗತಿಯಲ್ಲಿ ರನ್ನನ ಊರುಭಂಗ ಪಾಠದಲ್ಲಿ ಅಜಿತಸೇನಾಚಾರ್ಯರು ವಿದ್ಯಾಕಾಂಕ್ಷಿ ರನ್ನನಿಗೆ ಹೇಳುವ ಮಾತಿದು..

ಇಂದಿನ ಸಮಾರಂಭ ಕಂಡಾಗ ಇದರ ಇನ್ನೊಂದು ಮಗ್ಗುಲು ನೋಡುವ ಹಾಗೆ ಆಯಿತು.. ಶ್ರೀಯುತ ಜೋಗಿಯವರು ಪುಸ್ತಕ ಬಿಡುಗಡೆ ಮಾಡಿ ಅದನ್ನು ಜಗತ್ತಿಗೆ ತಲುಪಿಸುವ ಕಾರ್ಯ ಆಗಬೇಕು ಎಂದು ಹೇಳುತ್ತಾ ಕೆಲವು ಪ್ರಕಾಶಕರು ಅನುಸರಿಸುತ್ತಿದ್ದ ಮಾರ್ಗವನ್ನು ಹೇಳುತ್ತಾ ಹೋದಾಗ ನನಗೆ ಈ ಮೇಲಿನ ಮಾತು ನೆನಪಿಗೆ ಬಂತು. .

ಪುಸ್ತಕ ಬಿಡುಗಡೆ ಎಂದಾಗ  ಒಂದಷ್ಟು ಮಂದಿ ಬಂದು ಶುಭ ಹಾರೈಸಿ ಹೋಗುತ್ತಾರೆ ಎನ್ನುವ ವಾಡಿಕೆಯ ಮಾತಿಗೆ ವಾಡಿಯಾ ಸಭಾಂಗಣ ವಿರುದ್ಧವಾಗಿ ನಿಂತಿತ್ತು..

ಪ್ರಾರ್ಥನಾ ಗೀತೆಗಳನ್ನು ಹಾಡಿದ ಇಬ್ಬರೂ ಗಾಯಕರಿಂದ ಶುರುವಾದ ಕಾರ್ಯಕ್ರಮ.. ದೀಪ ಬೆಳಗಿ ನಂತರ ಸ್ವಾಗತ ಭಾಷಣ.. ನಂತರ ಬಂದ ಅತಿಥಿಗಳನ್ನು ಪರಿಚಯ ಮಾಡಿಸಿದ್ದು.. ಪುಸ್ತಕ  ಬಿಡುಗಡೆ ಎಲ್ಲವೂ ಸುಂದರವಾಗಿತ್ತು..

ಇಡೀ ಸಭಾಂಗಣ ತುಂಬಿ ತುಳುಕುತ್ತಿತ್ತು.. ಎಲ್ಲರ ಮೊಗದಲ್ಲಿಯೂ ಹಬ್ಬದ ಸಡಗರ ತುಂಬಿತ್ತು.. ಮೈತ್ರಿ ಪ್ರಕಾಶನ ತನ್ನ ಮಡಿಲಿನಿಂದ ನಾಲ್ಕು ಪುಸ್ತಕಗಳನ್ನು ಓದುಗರಿಗೆ ಒದಗಿಸಿದ್ದು.. ಮತ್ತೆ ಅದರ ವಿಶೇಷತೆ ನಾಲ್ಕು ಪುಸ್ತಕಗಳು ವಿಭಿನ್ನ ಮುಖ ಹೊತ್ತು ಮೂಡಿ ಬಂದವು..

ಭಿನ್ನ ಭಿನ್ನ ವಿಷಯ.. ಅದನ್ನು ಪ್ರಸ್ತುತ ಪಡಿಸಿದ ರೀತಿ ಎಲ್ಲವೂ ವಿಭಿನ್ನ ಹಾದಿಯನ್ನುತೋರಿಸುತ್ತಿತ್ತು.. ಈ ಎಲ್ಲಾ ಪುಸ್ತಕಗಳನ್ನು ಓದಿ ಮುಂದೆ ನನ್ನ ಮಸ್ತಕಕ್ಕೆ ಅರಿವಾದ ವಿಷಯಗಳನ್ನು ಹಂಚಿಕೊಳ್ಳುವ ತವಕ ಇದೆ.. ನೋಡೋಣ ಕಾಲಾಯ ತಸ್ಮೈ ನಮಃ..

ಶ್ರೀಯುತ ಜೋಗಿಯವರ ನೇರ ಮಾತುಗಳು ಸೊಗಸಾಗಿದ್ದವು.. ಶ್ರೀಮತಿ ಶೈಲಜಾ ನಾಗರಾಜ ಅವರ ಮಾತುಗಳು.. ಮುಂದೆ ತುರ್ತು ಕೆಲಸ ಇದ್ದ ಕಾರಣ ಶ್ರೀಯುತ ಸೇತುರಾಂ ಅವರ ಮಾತುಗಳನ್ನು ಕೇಳಲಾಗಲಿಲ್ಲ.. ಅದರ ವಿಡಿಯೋ ತುಣುಕು ಸಿಗಬಹುದೇನೋ ನೋಡೋಣ..

ಅನೇಕ ದಿನಗಳಾದ ಮೇಲೆ ಸಿಕ್ಕ ಸ್ನೇಹಿತರು.. ಮಾತುಗಳು.. ನಗು.. ಜೊತೆಯಲ್ಲಿ ಗೆಳೆಯರ ಮಿಲನ.. ಖುಷಿ ಕೊಟ್ಟಿತು..

ಇನ್ನೊಂದು ವಿಶೇಷ ಕಾದಿತ್ತು.. ಬಿಪಿ ವಾಡಿಯ ಸಭಾಂಗಣವನ್ನು ಸುಮಾರು ಮೂವತ್ತೈದು ವರ್ಷಗಳಿಂದ ನೋಡುತ್ತಿದ್ದೇನೆ.. ನನ್ನ ಬಾಲ್ಯದಲ್ಲಿ ವಾಡಿಯಾ ಪಕ್ಕದಲ್ಲಿದ್ದ ಲೈಬ್ರರಿಯಲ್ಲಿ ಕಾಮಿಕ್ ಪುಸ್ತಕಗಳನ್ನು ಓದಲು ಹೋಗುತ್ತಿದ್ದೆ.. ಈ ನಾಲ್ಕೈದು ವರ್ಷಗಳಲ್ಲಿ ಬ್ಲಾಗ್ ಗೆಳೆಯರ ಅನೇಕ ಪುಸ್ತಕಗಳ ಬಿಡುಗಡೆ ಮತ್ತು ಪದಕಮ್ಮಟ ಕಾರ್ಯಕ್ರಮ.. ಒಂದೆರಡು ಸಂಗೀತ ಸಂಜೆ ಕಾರ್ಯಕ್ರಮಗಳನ್ನು ನೋಡಿದ್ದೇ.. ಆದರೆ ಈ ಸಭಾಂಗಣವನ್ನು ನವೀಕರಿಸಿ.. ಹೊಸ ಹೊಸ ದೀಪಗಳನ್ನು ಹಾಕಿ ಚೊಕ್ಕವಾಗಿ ಮಾಡಿದ್ದಾರೆ.. ಸೊಗಸಾಗಿದೆ..

ಸುಂದರ ಕಾರ್ಯಕ್ರಮವನ್ನು ನೋಡಿ ಬಂದ ಖುಷಿಯಾಗಿದ್ದ ಮನಸ್ಸು.. ಹೇಳಿದ್ದು ಸರಸ್ವತಿ ನೆಲೆಸಿರುವ ತಾಣವೇ ಇದು.. ಈ ಕಾರ್ಯಕ್ರಮವನ್ನು ಆಯೋಜಿಸಿದ್ದ ಮೈತ್ರಿ ಪ್ರಕಾಶನದ ಶ್ರೀ ಉಮೇಶ್ ದೇಸಾಯಿ ದಂಪತಿಗಳು.. ಅಪ್ಪ ಎನ್ನುವ ಅದ್ಭುತ ಶಕ್ತಿಯನ್ನು ಕುರಿತು ತಮ್ಮ ಅನುಭವಗಳನ್ನು ಲೇಖನವನ್ನಾಗಿಸಿ ಸಂಪಾದಕತ್ವ ವಹಿಸಿದ್ದ ಶ್ರೀ ಗುರುಪ್ರಸಾದ್ ಕುರ್ತುಕೋಟಿ ಅವರಿಗೆ ಧನ್ಯವಾದಗಳು.. ಮತ್ತು ಮೊದಲ ಪ್ರಯತ್ನದಲ್ಲಿಯೇ ಶಭಾಷ್ ಗಿರಿ ಗಿಟ್ಟಿಸಿದ ಶ್ರೀ ಲಕ್ಷ್ಮಣ್ ಅವರಿಗೆ ಅಭಿನಂದನೆಗಳು ..

ಪುಟ ಪುಟವೂ ಹೊಸ ಜಗತ್ತನ್ನು ಪರಿಚಯಿಸುವ ಈ ರೀತಿಯ ಪುಸ್ತಕದ ಸಮಾರಂಭವನ್ನು ಅಚ್ಚುಕಟ್ಟಾಗಿ ಏರ್ಪಡಿಸಿದ ಪ್ರಕಾಶಕರಿಗೂ ಸಂಪಾದಕರಿಗೂ ಸಭೆಯಲ್ಲಿ ಸೇರಿದ್ದ ಎಲ್ಲಾ ಶ್ರೀ ಉಮೇಶ್ ದೇಸಾಯಿಯವರ ಮಾತಿನಲ್ಲಿ ಹೇಳುವುದಾದರೆ ಓದುಗ ದೊರೆಗಳಿಗೆ ಧನ್ಯವಾದಗಳು ಶುಭ ಹಾರೈಕೆಗಳು..

ನನ್ನ  ಕಣ್ಣಿಗೆ ಕಂಡ ಕೆಲವು ಚಿತ್ರಗಳು ನಿಮಗಾಗಿ.. !!!


Wednesday, March 21, 2018

ಜ್ಞಾನದ ಆಣೆಕಟ್ಟಿಗೆ ಒಂದು ಕಾಗಜ :-)

"ಸರ್ ಸರ್..!"

"ಏನಪ್ಪಾ?"

"ವಿಜಯನಗರ ಸಾಮ್ರಾಜ್ಯದಲ್ಲಿ ಮುತ್ತು ರತ್ನಗಳನ್ನು  ಬೀದಿಯಲ್ಲಿ ಮಾರುತ್ತಿದ್ದರೆಂದು ಕೇಳಿದ್ದೆ.."  

"ಹೌದು ನೀ ಕೇಳಿದ್ದು ನಿಜಾ ಆರೇಳು ಶತಮಾನಗಳ ಹಿಂದೆ.. ಇವಾಗ ಏನು ಸಮಾಚಾರ?" 

"ಸರ್..  ಅದೇ ತರಹ ಸುಂದರ ಮಾತುಗಳು ,ಒಳ್ಳೆಯ ಅರ್ಥವಿಸ್ತಾರ..ಮುಂತಾದ ಮನಸ್ಸಿಗೆ ನೆಮ್ಮದಿ ಕೊಡುವ ಮಾತುಗಳನ್ನು ಮಾರುವ / ಹಂಚಿಕೊಳ್ಳುವ  ತಾಣವಿದೆಯೇ..  ಇವುಗಳು ಹೇರಳವಾಗಿ ಸಿಗುವ ಜಾಗವಿದೆಯೇ.."

"ನೀ ಭೂಲೋಕಕ್ಕೆ ಬಂದಿರುವುದು ಸರಿಯಾಗಿದೆ.. ಮತ್ತು  ಸರಿಯಾದ ವ್ಯಕ್ತಿಯ ವಿಳಾಸವನ್ನೇ ಕೇಳುತ್ತಿರುವೆ.. ನೋಡು  ಈ ಮನುಜರು ಕಾಡುವ ಸಮಯದಲ್ಲಿ ಸಮಯವನ್ನು ಕಾಡುವುದಕ್ಕೆ ಫೇಸ್ಬುಕ್. .. ವಾಟ್ಸಾಪ್ ಮಾಧ್ಯಮವನ್ನು ಬಳಸುತ್ತಿದ್ದಾರೆ.. ಅದರಲ್ಲಿ   ಶ್ರೀಯುತ ... .. .. .. ... ... ... ... ... ಇವರನ್ನು  ಹುಡುಕು.. ನೀ ಹುಡುಕಿದ್ದಕ್ಕಿಂತ ಹೆಚ್ಚಿಗೆ ಸಿಗುತ್ತದೆ ..ಇದು ಖಂಡಿತವಾದ ಮಾತು!!!"

ಟಕ್ ಅಂತ ಮೊಬೈಲ್ ತೆಗೆದು ಹುಡುಕಿಯೇ ಬಿಟ್ಟಾ.. ಸಿಕ್ಕೇ  ಬಿಟ್ಟಿತು ಹುಡುಕುತ್ತಿದ್ದ ತಾಣ.. 
 
ಹುಡುಕಿದ ತಾಣವಾವುದು ಗೊತ್ತೇ? 

ಕಗ್ಗಗಳನ್ನು ರಸವಾಗಿ ಎಲ್ಲರಿಗೂ ತಲುಪುವುವಂತೆ ಹಂಚಿದ... ಸ್ತೋತ್ರಗಳನ್ನು ಲಘುವಾಗಿ ಅರ್ಥೈಸುವಂತೆ ಹಂಚುತ್ತಿರುವ ಶ್ರೀಯುತ  ತಿರುಮಲೈ ಅವರು 

ಇವರ ಸಾಹಿತ್ಯ ಕೃಷಿಯನ್ನು ಕಂಡು  ಕಗ್ಗಗಳ ಪಿತಾಮಹರೇ ಇವರಿಗೆ ಕನಸಲ್ಲಿ ಬಂದು ಆಶೀರ್ವದಿಸುತ್ತಾರೆ..  ಕಗ್ಗಗಳು ಆಯ್ತು ಮುಂದಕ್ಕೆ ಎಂದುಕೊಂಡಾಗ ಇನ್ನೊಂದು ಹಾದಿಗೆ ಹೊರಳಿ ಸಂಸ್ಕೃತ ಶ್ಲೋಕಗಳನ್ನು, ಸ್ತೋತ್ರಗಳನ್ನು ಅರ್ಥೈಸಿಕೊಂಡು ತಮ್ಮ ಬಳಗಕ್ಕೆ ಹಂಚಿಕೊಳ್ಳುತ್ತಿದ್ದಾರೆ.. 

ವಿಜಯನಗರದ ಕಾಲದಲ್ಲಿ ಮುತ್ತು ರತ್ನಗಳು ವಜ್ರ ವೈಡೂರ್ಯಗಳು ರಸ್ತೆಯಲ್ಲಿ ಬಿಕರಿಯಾಗುತ್ತಿದ್ದವು .. ಆ ಆಭರಣಗಳ ರಾಶಿಯನ್ನು ಬೀಗ ಹಾಕಿ ಜೋಪಾನ ಮಾಡುತ್ತಾ ಹೆಚ್ಚಿನ ಬೆಲೆಗೆ ಮಾರುತ್ತಿರುವ ಈ ಕಾಲದಲ್ಲಿ,  ಕಳುವಾಗದ.. ಖಾಲಿಯಾಗದ.. ಮುಚ್ಚಿಟ್ಟುಕೊಳ್ಳಲಾಗದ ಜ್ಞಾನ ಸಂಪತ್ತನ್ನು ಹೆಕ್ಕಿ ಹೆಕ್ಕಿ ತಮ್ಮ ಬಳಗಕ್ಕೆ ತಲುಪಿಸುತ್ತಿರುವುದು ಒಂದು ಮಹಾನ್ ಸಾಧನೆಯೇ ಹೌದು.. 

ಹತ್ತೇ ಹತ್ತು ನಿಮಿಷ ಇವರ ಬಳಿ ಮಾತಾಡಿದರೂ ಸಾಕು .. ಜ್ಞಾನ ಭಂಡಾರವನ್ನೇ ಹೊತ್ತು ಸಾಗುತ್ತೇವೆ..ಸಂಗೀತ , ಆಧ್ಯಾತ್ಮ, ಜ್ಞಾನ, ಸಂಸ್ಕಾರ, ಊಟೋಪಚಾರ, ಮೃದು ಮಾತು ಇವೆಲ್ಲ ಇವರ ಸ್ವತ್ತು.. 

ಇಂದು ಶ್ರೀಯುತ ರವಿ ತಿರುಮಲೈ ಅವರ ಜನುಮದಿನ .. ಬರೆಯೋದಕ್ಕೆ ಏನಿದೆ ಅಂತ ಯೋಚನೆ ಬಂತು.. ಕಾರಣ ಕಳೆದ ನಾಲ್ಕು ವರ್ಷಗಳಿಂದ ಕಗ್ಗ ರಸಧಾರೆ ಪುಸ್ತಕ ಹೊರಬರುತ್ತಿತ್ತು.. ಅದರ ಮರೆಯಲ್ಲಿ ಮನಕ್ಕೆ ತೋಚಿದ ಬಾಲ ಭಾಷೆಯಲ್ಲಿ ಒಂದಷ್ಟು ಪದಗಳನ್ನು ಕೂಡಿಸಿಡುತ್ತಿದ್ದೆ.. ಈ ಬಾರಿ ಡಿವಿಜಿ ಅಜ್ಜ ಕೂಡ ಶ್ರೀಕಾಂತ ಅದೇನೂ ಕಿಸೀತೀಯ ನೋಡೋಣ ಅಂತ ರೇಗಿಸುತ್ತಾ ನನ್ನ ಹುಮ್ಮಸ್ಸನ್ನು ಹೆಚ್ಚು ಮಾಡಿದಂತೆ ಕನಸು ಬಿತ್ತು. 

ಅದೇನು ಬರೀತೀ  ನೋಡೇ ಬಿಡ್ತೀನಿ ..

ಇತ್ತ ಅಜ್ಜ  ಅತ್ತ ಗುರುಗಳಾದ   ಶ್ರೀ ರವಿ ಅವರು.. ಇತ್ತ ಧರಿ ಅತ್ತ ಪುಲಿ ತರಹ ಆಗದೆ ಇತ್ತ ಜ್ಞಾನದ ಕಡಲು ಅತ್ತ ಜ್ಞಾನದ ಆಣೆಕಟ್ಟು.. ಇಬ್ಬರೂ ಪ್ರೋತ್ಸಾಹಿಸಿದ  ಫಲ.. ಒಂದಷ್ಟು  ಪದಗಳನ್ನು ಕಲೆ ಹಾಕಿ ಶುಭಾಶಯ ಕೋರಿಯೇ ಬಿಡೋಣ ಅನ್ನುವ ದುಸ್ಸಾಹಸಕ್ಕೆ  ಕೈ ಹಾಕಿರುವೆ.. !

ಗುರುಗಳೇ ಜನುಮದಿನದ ಶುಭಾಶಯಗಳು :-) :-) :-)

ಸದಾ :-) :-) ಇರಿ!!!

Sunday, March 4, 2018

ಆಲದ ಮರದಲ್ಲಿ ಆಂತರ್ಯದ ಗಾನ

ಒಂದು ಹಳ್ಳಿ.. ಆ ಹಳ್ಳಿಯಲ್ಲಿ ಒಂದು ಆಶ್ರಮ.. ಅಲ್ಲಿ ಒಂದು ದೊಡ್ಡ ಆಲದ ಮರ.. ಹಳ್ಳಿಯ ಮಕ್ಕಳಿಗೆಲ್ಲ ಅಲ್ಲಿಯೇ ಪಾಠ ನೆಡೆಯುತ್ತಿತ್ತು.. ಮಕ್ಕಳಿಗೆ ಆಟ ಪಾಠ ಎಲ್ಲವೂ ಅಲ್ಲಿಯೇ ನೆಡೆಯುತಿತ್ತು.. ಆ ಹಳ್ಳಿಯಲ್ಲಿ ಏನೇ ಸಮಾರಂಭ ನೆಡೆದರೂ, ವ್ಯಾಜ್ಯಗಳು ತೀರ್ಮಾನವಾಗಬೇಕು ಎಂದರೂ ಅದಕ್ಕೆ ಆಲದ ಮರವೇ ಸಾಕ್ಷಿ..

ಒಂದು ಸುಂದರ ಮುಂಜಾವು.. ಹಕ್ಕಿಗಳ ಕಲರವ .. ತಣ್ಣಗೆ ಹಿತವಾದ ಗಾಳಿ ಬೀಸುತಿತ್ತು.. ಊರಿನ ದನಕರುಗಳು ಮೇಯುವುದಕ್ಕೆ ಧೂಳೆಬ್ಬಿಸಿಕೊಂಡು ಹೊರಟಿದ್ದವು.. ಹಿತಮಿತವಾದ ಮಂಜು.. ಗಾಳಿ.. ಸೂರ್ಯನ ಕಿರಣಗಳು ಬರಲೋ ಬೇಡವೋ ಅನ್ನುವಂತೆ ಕಣ್ಣ ಮುಚ್ಚಾಲೆ ಆಡುತ್ತಿತ್ತು... ಒಮ್ಮೆ ಆ ವಾತಾವರಣದಲ್ಲಿದ್ದರೇ ಅಲ್ಲಿಯೇ ಇರಬೇಕು ಎನ್ನುವಂತಹ ಸ್ವರ್ಗದ ಅನುಭವ.. .

"ಕೇಳ್ರಪ್ಪೋ ಕೇಳ್ರಿ.. ಕೇಳ್ರಪ್ಪೋ  ಕೇಳ್ರಿ... ಇಂದು ಬೆಳಿಗ್ಗೆ ಹತ್ತು ಘಂಟೆಗೆ ಶ್ರೀಮತಿ ನಾಗಲಕ್ಷ್ಮಿ ಕಡೂರು ಅವರು ತಮ್ಮ ಆಂತರ್ಯದ ಮಾತುಗಳನ್ನು ಲೇಖನ ಮಾಡಿ ಅದನ್ನು ಪುಸ್ತಕ ಮಾಡಿದ್ದಾರೆ ಅದರ ಬಿಡುಗಡೆ ಇದೆ.. ಕೇಳ್ರಪ್ಪೋ ಕೇಳ್ರಪ್ಪೋ ಇದನ್ನು ಬಿಡುಗಡೆ ಮಾಡಲು ಬೆಮೆಲ್ ಸಂಸ್ಥೆಯ ಶ್ರೀ ಸೆಲ್ವಕುಮಾರ್  ಬರ್ತಾರೆ.. ಅವರ ಜೊತೆಯಲ್ಲಿ ಶ್ರೀಮತಿ ಪದ್ಮಾವತಿ ಚಂದ್ರು ಇರ್ತಾರೆ.. ಪುಸ್ತಕದ ಬಗ್ಗೆ ಮಾತಾಡೋಕೆ ಕೊಳ್ಳೇಗಾಲದ ಹೆಸರಿಗೆ ಇನ್ನಷ್ಟು ಮೆರುಗು ಕೊಟ್ಟ ಶ್ರೀ ಮಂಜುನಾಥ ಕೊಳ್ಳೇಗಾಲರವರು.. ಬಂದವರನ್ನು ಉದ್ದೇಶಿಸಿ ಮಾತಾಡಿ ಎಲ್ಲರಿಗೂ ಶುಭಕೋರೋಕೆ ೩ಕೆ ತಂಡದ ಅಧ್ಯಕ್ಷೆ ಶ್ರೀಮತಿ ರೂಪ ಸತೀಶ್ ಇರ್ತಾರೆ... ಎಲ್ಲರೂ ಬನ್ರಪ್ಪ.. ಬನ್ರೀ.. "  ಡಂಗೂರ ಸಾರುವವ ಬಾಯಲ್ಲಿ ಬೀಡಿ ಕಚ್ಚಿಕೊಂಡು ಹೇಳಬೇಕಾದ ವಿಷಯವನ್ನು ತನ್ನದೇ ಶೈಲಿಯಲ್ಲಿ ಹೇಳುತ್ತಾ ಪ್ರತಿ ಬೀದಿಯಲ್ಲಿಯೂ ಸಾರುತ್ತಾ ಹೋದ. .ಒಬ್ಬ ಹಿರಿಯಜ್ಜ.. "ಲೋ ಡಂಗೂರ ಸಾರುವ ಕಿಟ್ಟಾ.. ಒಸಿ ನಿಲ್ಲಲೇ ಲೇ..ಕಾರ್ಯಕ್ರಮ ಸರಿ ಊರಿನ ಮಂದಿ ಸೇರ್ತೀವಿ... ಏನಾದರೂ ಸ್ಪೆಷಲ್ ಇದೆಯಾ.. "

"ಅರೆ ಅಜ್ಜ.. ಅದರ ಬಗ್ಗೆ ಹೇಳೋದು ಮರೆತು ಹೋಯ್ತು... ಅದನ್ನ ಮತ್ತೆ ಸೇರಿಸಿ ಇನ್ನೊಮ್ಮೆ ಹೇಳ್ತೀನಿ... ಸರಿನಾ ಅಜ್ಜಾ"

"ಸರಿ ಕಣ್ಮಗ.. ಹಂಗೆ ಆಗಲಿ.. " ಅಜ್ಜ ಕೋಲೂರಿಕೊಂಡು ಹೆಜ್ಜೆ ಹಾಕುತ್ತಾ ಹೋದರು..

ಡಂಗೂರದ ಕಿಟ್ಟಾ  "ಕೇಳ್ರಪ್ಪೋ.. ಇವತ್ತಿನ ಕಾರ್ಯಕ್ರಮದ ಆರಂಭಕ್ಕೆ ಗಾನಕೊಗಿಲೆಗಳಾದ ಶ್ರೀ ಮಹೇಶ್ ಪ್ರಿಯದರ್ಶನ್ ಹಾಗೂ ಶ್ರೀಮತಿ ಶ್ರುತಿ ಅವರ ಹಾಡುಗಾರಿಕೆ ಇರುತ್ತೆ.. ಅವರಿಗೆ ಜೋತೆಯಾಗಿ ಕೀ ಬೋರ್ಡ್ ನುಡಿಸುತ್ತಾ ಶ್ರೀ ರವಿ ಅವರು ಹಾಗೂ ತಬಲಾದ ಜೊತೆ ಶ್ರೀ ಶ್ರೀನಿವಾಸ್ ಇರುತ್ತಾರೆ.. ನೀವೆಲ್ಲಾ ಹೆಚ್ಚು ಸದ್ದು ಮಾಡುತ್ತೀರಾ ಅದಕ್ಕೆ ಎಲ್ಲರಿಗೂ ಕೇಳಲಿ ಅಂತ ಮೈಕ್ ಎಲ್ಲ ತರ್ತಾರೆ..  ಅದನ್ನ ಶ್ರೀ ರಘು ಅವರ ಉಸ್ತುವಾರಿಗೆ ಕೊಟ್ಟಿರುತ್ತಾರೆ.. ಎಲ್ರೂ ಬನ್ರಪ್ಪ.. ನೀವೆಲ್ಲ ಬಂದರೆ ಈ ಕಾರ್ಯಕ್ರಮ ಸೊಗಸಾಗಿರುತ್ತೆ.. "
ಅವನ ಧ್ವನಿ ಕ್ಷೀಣವಾಗುತ್ತಾ ಹೋಯಿತು.. ಇಡೀ ಹಳ್ಳಿಯನ್ನ ಸುತ್ತಿ ಸುತ್ತಿ ಹೇಳಬೇಕಾಗಿತ್ತು..

ಹಳ್ಳಿಯ ಮಂದಿ ತಮ್ಮ ಬೆಳಗಿನ ದೈನಂದಿನ ಕೆಲಸವನ್ನು ಆಲದ ಮರದ ಕಡೆಗೆ ಹೆಜ್ಜೆ ಹಾಕುತ್ತ ಬಂದರು..

ಬಂದವರನ್ನು ಸ್ವಾಗತ ಮಾಡಿ ಆಲದ ಮರದ ಸುತ್ತಾ ಜಮಖಾನ ಮೇಲೆ ಕೂರಲು ಹೇಳಿದರು.. ಬಂದವರು ಮಾತು ಕಮ್ಮಿ ಮಾಡಿ.. ಎಲ್ಲರೂ ಮೈಯೆಲ್ಲಾ ಕಿವಿಯಾಗಿ ಕೂತರು..

" ಅಜಂ ನಿರ್ವಿಕಲ್ಪಂ ನಿರಾಕಾರ ಮೇಕಂ" ಗಣಪನ ಸ್ತುತಿ ಶ್ರೀಮತಿ ಶ್ರುತಿ ಗಾಯನದ ಆರಂಭ ಕಳೆಕೊಟ್ಟಿತು.. ತುಟಿಪಿಟಿಕ್ ಎನ್ನದೆ ಆಲದ ಮರದ ಸುತ್ತಾ ಕೈಮುಗಿದುಕೊಂಡು ಕೂತಿದ್ದರು...

ದೇವನಿಲ್ಲದ ಜಗ ಹೂವಿಲ್ಲದ ವನ ಎರಡೂ ಒಂದೇ.. ಭಕುತರು ಮುಂದೆ.. ದೇವ ನಮ್ಮ ಹಿಂದೆ ಎನ್ನುತ್ತಾ ಕೈಮುಗಿದು "ಭಕುತ ಜನ ಮುಂದೆ ನೀ ಅವರ ಹಿಂದೆ" ಎನ್ನುತ್ತಾ ಶ್ರೀ ಮಹೇಶ್ ಅವರು ಗಾಯನದ ಸಿರಿ ಅನುಭವಿಸಿದ ಮೇಲೆ ಜನರಿಗೆ ಕುತೂಹಲ ಜಾಸ್ತಿಯಾಯಿತು..

ಎಲ್ಲರ ಕಣ್ಣಲ್ಲಿ ಆನಂದಭಾಷ್ಪ.. ಅದನ್ನು ಧರೆಗಿಳಿಸಲು "ಇಳಿದು ಬಾ ತಾಯೆ ಇಳಿದು ಬಾ"  ಕುವೆಂಪುರವರ ಸಾಹಿತ್ಯ ಸಿರಿವಂತಿಗೆಯನ್ನು ಸಂಗೀತಕ್ಕೆ ಇಳಿಸಿದ್ದನ್ನು ಮತ್ತೊಮ್ಮೆ ಪ್ರಸ್ತುತ ಪಡಿಸಿದರು ಶ್ರೀ ಮಹೇಶ್ ಮತ್ತು ಶ್ರುತಿ..

ಬಂದಿದ್ದವರೆಲ್ಲ ಸುತ್ತ ಮುತ್ತಲು  ನೋಡುತ್ತಿದ್ದರು.. ಜನಸಾಗರವೇ ಸೇರುತ್ತಿತ್ತು.. ಕೂತಿದ್ದರು ಎಲ್ಲರ ತಾಳಕ್ಕೆ ಮನಸ್ಸು ಕುಣಿಯುತ್ತಿತ್ತು.. ಅಜ್ಜ ಸೇದುತ್ತಿದ್ದ ಬೀಡಿ ಬಿಸಾಕಿ.. "ಅಲ್ಲಲೇ ಜನಸಾಗರವೇ ಸೇರುತ್ತಿದೆ.. ಇದೇನು ಜನರ ಸಂತೆಯೋ.. ಕುರಿ ಸಂತೆಯೋ.. ಲೋ ಮಗ.. ಒಂದು ಕುರಿಗಳ ಮೇಲೆ ಒಂದು ಹಾಡು ಅಂಗೇ ಬಿಡು ಮಗ" ಎಂದು ಹೇಳಿದ ತಕ್ಷಣ.. ಶ್ರೀ ಮಹೇಶ್ "ಕುರಿಗಳು ಸರ್ ಕುರಿಗಳು" ಹಾಡನ್ನು ಶ್ರೀಮತಿ ಶೃತಿಯವರ ಕೋರಸ್ ಹಾಡಿನಲ್ಲಿ ಹಾಡಿಯೇ ಬಿಟ್ಟರು..

"ಪೇ ಪೇ. .ಆ ಆ" ಅಂತ ಒಂದು ಪುಟ್ಟ ಮಗು ಆಲದ ಮರದ ಬಿಳುಲು ಹಿಡಿದುಕೊಂಡು ಜೀಕಾಡುತ್ತಿತ್ತು.. ಆ ಸದ್ದಿಗೆ ಎಲ್ಲರೂ ಆ ಕಡೆ ತಿರುಗಿದಾಗ.. ಅವರ ಗಮನವನ್ನು ಮತ್ತೆ ಇತ್ತ ಸೆಳೆಯಲು ಶ್ರೀಮತಿ ಶೃತಿಯವರು "ಅಮ್ಮ ನಿನ್ನ ಎದೆಯಾಳದಲ್ಲಿ ಗಾಳಕ್ಕೆ ಸಿಕ್ಕ ಮೀನು" ಹಾಡು ಮೂಡಿ ಬಂದಾಗ ಆ ಮಗು ಸದ್ದು ಮಾಡದೆ ಸುಮ್ಮನೆ ಆಟವಾಡಲು ಶುರುಮಾಡಿತು.. !!!

ಡಂಗೂರದ ಕಿಟ್ಟಾ "ನೋಡ್ರಪ್ಪಾ.. ಇವತ್ತು ಪುಸ್ತಕ ಬಿಡುಗಡೆ ಆಗುತ್ತೆ.. ಅದರ ಕತೃ ನಾಗಲಕ್ಷ್ಮಿ ಕಡೂರು ಅವರು ರಚಿಸಿದ ಒಂದು ಪುಟ್ಟ ಕವಿತೆಯನ್ನು ಹಾಡಬೇಕು ಅಂತ ಈ ಅಜ್ಜನ ಆಸೆ.. ಅದಕ್ಕೆ ಶ್ರೀ ಮಹೇಶ್ ಚೊಕ್ಕವಾಗಿ ಸಂಗೀತ ಸೇರಿಸಿದ್ದಾರೆ ಅದನ್ನು ಈಗ ಪ್ರಸ್ತುತ ಮಾಡುತ್ತಾರೆ.. ಒಂದು ಚಪ್ಪಾಳೆ ಬರಲಿ"

ಕರತಾಡನ ಜೋರಾಯಿತು.. "ಭರಿಸಲಾರದ ಜೀವ ಬೇಡವಾದ ಜೀವ" ಎನ್ನುವ ಆಂತರ್ಯಕ್ಕೆ ತಾಕುವ ಹಾಡಿಗೆ ಎಲ್ಲರ ಪ್ರೋತ್ಸಾಹ ಸಿಕ್ಕಿತು..

ಅಜ್ಜ.. ಎದ್ದು ನಿಂತು. .ಜೋರಾಗಿ ಚಪ್ಪಾಳೆ ತಟ್ಟಿತು.. ಅಜ್ಜ ತನ್ನ ಜೇಬಿನಲ್ಲಿದ್ದ ಒಂದು ಪುಟ್ಟ ಚೀಟಿಯಲ್ಲಿ "ಮಹೇಶ ಮಗ ಆದರೆ ನೀ ಹಿಂಗ ನೋಡಬೇಡ ನನ್ನ"  ಪದವನ್ನು ಹಾಡೋಕೆ ಆಗುತ್ತಾ ಅಂತ ಬರೆದು ಕೊಡಬೇಕೆಂದು ಹೆಜ್ಜೆ ಹಾಕಿದಾಗ ಶ್ರೀ ಮಹೇಶ್ ರವರು "ಈಗ ಕಾರ್ಯಕ್ರಮದ ಕೊನೆಯ ಗೀತೆ ಬೇಂದ್ರೆ ಅಜ್ಜನ "ಶ್ರಾವಣ ಬಂತು ಕಾಡಿಗೆ ನಾಡಿಗೆ" ಹಾಡು.. ಈ ಹಾಡುಗಾರಿಕೆ ಮುಖ್ಯವಾದ ಕಾರ್ಯಕ್ರಮ ಅಲ್ಲ.. ಪುಸ್ತಕದ ಲೋಕಾರ್ಪಣೆ ಈ ಕಾರ್ಯಕ್ರಮದ ಉದ್ದೇಶ.. ಅದರ ಜೊತೆ ಇದು ಸೇರಿಕೊಂಡಿತು.. ಇದು ಶ್ರೀಮತಿ ನಾಗಲಕ್ಹ್ಮೀ ಕಡೂರು ಅವರ ಕೋರಿಕೆಯಾಗಿತ್ತು... ಇನ್ನೊಮ್ಮೆ ಸೇರೋಣ. ಎಲ್ಲಾ ರೀತಿಯ ಹಾಡುಗಳನ್ನು ಹಾಡೋಣ.. ನಲಿಯೋಣ.. " ಎಂದು ಹೇಳುತ್ತಾ ಶ್ರೀಮತಿ ಶೃತಿಯವರ ಜೊತೆಯಲ್ಲಿ ಹಾಡನ್ನು ಮುಗಿಸಿದಾಗ ಎಲ್ಲರೂ ಕರತಾಡನ ಮಾಡಿ ತಮ್ಮ ಸಂತಸ ವ್ಯಕ್ತಪಡಿಸಿದರು..

ಅಲ್ಲಿಯ ತನಕ ಆಲದ ಮರದಲ್ಲಿದ್ದ ಪಕ್ಷಿಸಂಕುಲಗಳು ಸುಮ್ಮನೆ ಕೂತು ಸಂಗೀತದ ಸ್ವಾಧವನ್ನು ಅನುಭವಿಸಿದವು..

ಎಲ್ಲರ ಮನಸ್ಸು ತಣಿಯಿತು....

ಎಲ್ಲರಿಗೂ ಕಾಫಿ ಟೀ ವ್ಯವಸ್ಥೆ ಇದೆ.. ಒಂದು ಹತ್ತು ನಿಮಿಷ ವಿರಮಿಸಿ ಎಂದು ಡಂಗೂರದ ಕಿಟ್ಟಾ ಹೇಳಿದ..

ಹತ್ತು ಹದಿನೈದು ನಿಮಿಷ.. ಮತ್ತೆ ಶುರುವಾಯಿತು..

ಅಜ್ಜ.. ನೋಡ್ರಪ್ಪಾ ಈಗ ಕಾರ್ಯಕ್ರಮ ಶುರು ಆಗುತ್ತೆ.. ನಾವೆಲ್ಲರೂ ಈ ಕರುನಾಡಲ್ಲಿ ಇದ್ದೀವಿ.. ನಮ್ಮ ರಾಷ್ಟ್ರಕವಿ ರಚಿಸಿದ ನಾಡಗೀತೆ ಹೇಳುತ್ತಾ ಶುರು ಮಾಡೋಣ ಅಂದ್ರು..

ಎಲ್ಲರೊ ಎದ್ದು ನಿಂತು "ಜಯ ಭಾರತ ಜನನಿಯ ತನುಜಾತೆ ಜಯ ಹೇ ಕರ್ನಾಟಕ ಮಾತೆ" ಹಾಡನ್ನು ಎಲ್ಲರೂ ಹೇಳಿದರು.. ಅದರ ಮುಖ್ಯ ಧ್ವನಿಯಾಗಿದ್ದು ಶ್ರೀ ಮಹೇಶ್ ಮತ್ತು ಶ್ರೀಮತಿ ಶ್ರುತಿಯವರು..

ಆಕಾಶವಾಣಿಯ ಉದ್ಘೋಷಕರ ಸುಂದರ ಧ್ವನಿಯಲ್ಲಿ ಕಾರ್ಯಕ್ರಮದ ವಿವರಗಳನ್ನು ಹೇಳಿದರು.. ನಂತರ ಶ್ರೀ ಸುಬ್ರಮಣ್ಯಭಟ್ ಅವರು ಕಾರ್ಯಕ್ರಮದ ಬಗ್ಗೆ ಮತ್ತು ನೆರೆದಿದ್ದ ಗಣ್ಯರ ಬಗ್ಗೆ ಸುಮಧುರ ನುಡಿಗಳಲ್ಲಿ ಹೇಳಿದ ಮಾತುಗಳು ಕಾರ್ಯಕ್ರಮಕ್ಕೆ ಅಡಿಪಾಯ ಒದಗಿಸಿದವು..

ವೇದಿಕೆಯಲ್ಲಿದ್ದ ಎಲ್ಲಾ ಗಣ್ಯರ ಅಮೃತ ಹಸ್ತದಲ್ಲಿ ದೀಪ ಬೆಳಗಿಸಿ ಕಾರ್ಯಕ್ರಮ ಉದ್ಘಾಟಿಸಿದರು.. ಕೇಂದ್ರ ಬಿಂದು.. . ಪುಸ್ತಕ ಬಿಡುಗಡೆಯಾಯಿತು..


ತನ್ನ ಗೆಳತಿ ಶ್ರೀಮತಿ ನಾಗಲಕ್ಷ್ಮಿ ಕಡೂರು ಅವರ ಪುಟ್ಟ ಪರಿಚಯ.. ಅವರ ಜೊತೆಯ ಒಡನಾಟ.. ಅವರ ಪುಸ್ತಕದ ಬಗ್ಗೆ ಒಂದು ಮಾತು ಹೇಳುತ್ತಾ.. ಕಾರ್ಯಕ್ರಮಕ್ಕೆ ಚಾಲನೆ ನೀಡಿದವರು ಶ್ರೀಮತಿ ರೂಪ ಸತೀಶ್..

ನಂತರ ಲೇಖಕಿ ಶ್ರೀಮತಿ ನಾಗಲಕ್ಷ್ಮಿ ಕಡೂರು ಅವರು ಆಂತರ್ಯ ಮೂಡಿದ ರೀತಿ ಅದಕ್ಕೆ ಸಿಕ್ಕ ಸ್ಫೂರ್ತಿ.. ಈ ಹೊತ್ತಿಗೆಗೆ  ಜೊತೆಯಾದವರನ್ನು ನೆನೆಯುತ್ತ.. ಆಂತರ್ಯದ ಆಂತರ್ಯವನ್ನು ತೆರೆದಿಟ್ಟರು..

ಶ್ರೀಮತಿ ಪದ್ಮಾವತಿ ಚಂದ್ರು ಅವರು ಚುಟುಕು ಹೇಳುತ್ತಾ ಸೇರಿದ್ದವರನ್ನು ನಗೆಯಲ್ಲಿ ತೇಲಿಸಿದರು.. ಜೊತೆಯಲ್ಲಿ ಪುಸ್ತಕದ ಆಂತರ್ಯದ ಹೂರಣವನ್ನು ಬಡಿಸಿದರು..

ಶ್ರೀ ಬೆಮೆಲ್  ಶ್ರೀ ಸೆಲ್ವಕುಮಾರ್    ಆವರ ಪ್ರಾಸ್ತಾವಿಕ ಮಾತುಗಳು ಕಾರ್ಯಕ್ರಮಕ್ಕೆ ಹಿಡಿದ ಕನ್ನಡಿಯಾಗಿತ್ತು.. ಹಿತಮಿತವಾದ ಮಾತುಗಳು ಖುಷಿಯಾಗಿತ್ತು..

ಪುಸ್ತಕದ ಬಗ್ಗೆ ಶ್ರೀ ಮಂಜುನಾಥ್ ಕೊಳ್ಳೇಗಾಲ ಮಾತುಗಳು.. ಅವರ ಜ್ಞಾನ ಭಂಡಾರವನ್ನೇ ತೆಗೆದು.. ಉಣ ಬಡಿಸಿದರು.. ಅವರ ವ್ಯಕ್ತಿತ್ವ.. ಅವರ ಜ್ಞಾನ.. ಅವರ ಮನಸ್ಸೆಳೆಯುವ ಮಾತುಗಾರಿಕೆ ಆಹಾ ಕರ್ಣಾನಂದಕರ..

ಹಳ್ಳಿಯ ಬೆಳಗಿನ ಹೊತ್ತು ಸಾರ್ಥಕವಾಗಿ ಕಳೆದ ಖುಷಿ ಎಲ್ಲರದು.. ಅಜ್ಜ ಮತ್ತೊಮ್ಮೆ ಕೂಗಿತು.. "ಎನ್ರಪ್ಪ.. ಎಲ್ಲರೂ ಹೊರಡುವ ಮುಂಚೆ ಈ ಕಾರ್ಯಕ್ರಮ ಹೇಗಿತ್ತು.. ಅಂತ ಹೇಳ್ರೋ.. "

ಎಲ್ಲರೂ ಎದ್ದು ನಿಂತು.. ಹೆಬ್ಬೆರಳನ್ನು ಮೇಲೆ ಎತ್ತಿದರು.. ಅಜ್ಜನಿಗೆ ಖುಷಿಯೋ ಖುಷಿಯೋ.. ಅಜ್ಜ ತನ್ನ ಜೇಬಿನಿಂದ ಬೀಡಿಯ ಕಟ್ಟು ತೆಗೆದು.. ಒಂದು ಬೀಡಿ ಹಚ್ಚಿಕೊಂಡು ಮೆಲ್ಲನೆ ಕೋಲೂರಿಕೊಂಡು ಹೆಜ್ಜೆ ಹಾಕುತ್ತ ಹೋಯಿತು..

ಡಂಗೂರದ ಕಿಟ್ಟಾ "ಇಂದಿನ ಪುಟ್ಟ ಕಾರ್ಯಕ್ರಮಕ್ಕೆ ಬಂದಿದ್ದ ನಿಮಗೆಲ್ಲ ಧನ್ಯವಾದಗಳು.. ಇಂದಿನ ಕಾರ್ಯಕ್ರಮದ ಕೆಲವು ಚಿತ್ರಗಳನ್ನು ಎದುರಿಗೆ ಇರುವ ಸರ್ಕಾರಿ ಶಾಲೆಯ ಗೋಡೆಯ ಮೇಲೆ ಹಚ್ಚುತ್ತೇನೆ ಎಲ್ಲರೂ ನೋಡಿ ಆನಂದಿಸಿ..
ಜೊತೆಯಲ್ಲಿ ಕರುನಾಡ ಭಾವುಟದ ಧ್ವಜದ ಕಟ್ಟೆಯ ಮೇಲೆ ಈ ಪುಸ್ತಕಗಳನ್ನು ಇಟ್ಟಿರುತ್ತೇನೆ ಎಲ್ಲರೂ ಕೊಂಡುಕೊಳ್ಳಿ ಓದಿ ಸಂಭ್ರಮಿಸಿ..ಇನ್ನೊಂದು ಮಾತು ರವಿವಾರದ ದಿನ ಎಲ್ಲರೂ ಬಂದಿದ್ದೀರಿ.. ಕಿವಿಗೆ ಇಂಪಾದ ಹಾಡುಗಳು ಆಯ್ತು... ಹೃದಯಕ್ಕೆ ತಾಗುವ ಬರಹದ ಸಿಕ್ಕಿತು.. ಮತ್ತೆ ಉದರಕ್ಕೆ ನಿಮಗೆ ಇಷ್ಟವಾದ ಪುಳಿಯೋಗರೆ, ಮೊಸರನ್ನ, ಜಿಲೇಬಿ, ಮೆಣಸಿನಕಾಯಿ ಬಜ್ಜಿ, ಹೆಸರುಕಾಳಿನ ಖಾದ್ಯ ಸಿದ್ಧವಾಗಿದೆ.. ದಯಮಾಡಿ ಎಲ್ಲರೂ ಭೋಜನ ಮಾಡಿಕೊಂಡೆ ಹೋಗಬೇಕು ಇದು ಶ್ರೀಮತಿ ನಾಗಲಕ್ಷ್ಮಿ ಅವರ ಕುಟುಂಬದ ಅಪೇಕ್ಷೆ, ಆಶಯ ಮತ್ತು ಆದೇಶ .. !"

ಎಲ್ಲರಿಗೂ ಶುಭವಾಗಲಿ..