Sunday, November 3, 2013

ನಗುವ ನಯನ ಮಧುರ ಪುಸ್ತಕ ... ಒಂದು ಸುಂದರ ಪುಸ್ತಕ ಬಿಡುಗಡೆ ಸಮಾರಂಭ

"ಪಾಯಿಂಟ್ ಪಂಚರಂಗಿಗೆ ಕಾಯ್ತಾ ಇರ್ತೀನಿ ಬೇಗ ಹಾಕಿ ಬಿಡಿ"

ಯಾಕೋ ದನಿ ಬಂದೆಡೆ ತಿರುಗಿದೆ... ಗಿಜಿ ಗಿಜಿ ಗುಜು ಗುಜು.. ಶಬ್ದಮಾಲಿನ್ಯ ವಿಪರೀತವಾಗಿತ್ತು.. ಎಲ್ಲರಲ್ಲಿಯೂ ಒಂದೇ ಪ್ರಶ್ನೆ..

"ಯಾಕಿಷ್ಟು ಸದ್ದು.. ಏನಿದು ಸದ್ದು?"

ಉತ್ತರ ಹೊಳೆಯುತ್ತಿಲ್ಲ ಯಾರಿಗೂ.. ಕಡೆಗೆ ಮಂಜುನಾಥ ಕಾಪಾಡಪ್ಪ ಎಂದು ಮೊರೆ ಹೋದರು

"ದೇವರು ಪ್ರತ್ಯಕ್ಷನಾಗಿ.. ಹೋಗ್ರಯ್ಯ.. ನನ್ನ ತಲೆ ನೋವು ನನಗೆ.. ಇದರ ಮಧ್ಯೆ ನಿಮ್ಮದು ಬೇರೆ"

"ಏನಾಯ್ತು ಸ್ವಾಮೀ ಹೇಳಿ"

"ಸತ್ಯಲೋಕದಲ್ಲಿ ಸರಸ್ವತಿ ಇಲ್ಲ.. ವೈಕುಂಠದಲ್ಲಿ ಲಕ್ಷ್ಮಿ ಇಲ್ಲ... ವಿಷ್ಣು ಕಾಲು ಚಾಚಿ ನಿದ್ದೆ ಮಾಡಿಬಿಟ್ಟಿದ್ದಾನೆ.. ಬ್ರಹ್ಮನ ನಾಲ್ಕೂ ತಲೆಗೆ ನೋವು ಬಂದು ಔಷದಿಗಾಗಿ ಧನ್ವಂತ್ರಿ ಹತ್ತಿರ ಹೋಗಿದ್ದಾನೆ.. ನನಗೆ ಅವರಿಬ್ಬರನ್ನು ಹುಡುಕುವ ಕೆಲಸ ಕೊಟ್ಟಿದ್ದಾನೆ... ಅದಕ್ಕೆ ನಾನು ಈ ನಾಲ್ವರಿಗೆ  ನನ್ನ ಅಂಶವನ್ನು ತುಂಬಿ ನಾಲ್ವರು ಈಶ್ವರರನ್ನು ಕಳಿಸಿದ್ದೇನೆ!"

ನಾಲ್ವರು ಈಶ್ವರರು 

ಆ ಮೂವರು ಈಶ್ವರ ಸ್ವರೂಪಿಗಳು  ನಿಧಾನವಾಗಿ ಹುಡುಕುತ್ತಾ ಬಂದರು.. ಎಲ್ಲಿಗೆ ಜಯಚಾಮರಾಜ ರಸ್ತೆಯ ಕನ್ನಡ ಭವನಕ್ಕೆ.. ಅರೆ ನಮ್ಮ ನಯನ ಇಲ್ಲೇ ಇದೆ.. ನೆಡಿರೋ ಹುಡುಕೋಣ ಅಂದು ಒಳಗೆ ಹೊಕ್ಕರು..

ಸರಸ್ವತಿ ಮತ್ತು ಲಕ್ಷ್ಮಿಯ ಸಮಾಗಮ 

ನೋಡಿದರೆ ಅಲ್ಲಿ ಸರಸ್ವತಿಯು ತನ್ನ ಪುತ್ರ ರತ್ನಗಳ ಪುಸ್ತಕದೊಳಗೆ ಕೂತಿದ್ದಾರೆ.. ಲಕ್ಷ್ಮಿಯು ಸರಸ್ವತಿ ಪುತ್ರನ ಕೈಯೊಳಗೆ ಅಡಗಿ ಕೂತಿದ್ದಳು..

ಇಲ್ಲಿಂದ ನೋಡಿ ಆರಂಭವಾಯಿತು ಅವರಿಬ್ಬರ ಹರಿಕಥೆ!

*********
ಶಾಲಿವಾಹನ ಶಕೆಯಲ್ಲಿ ಒಮ್ಮೆ ಸರಸ್ವತಿ, ಲಕ್ಷ್ಮಿ ಇಬ್ಬರು ಅಲೆದಾಡುತ್ತಾ ಬರುವಾಗ 
"ಅರೆ ಅಲ್ಲಿ ನೋಡು.. ಅಲ್ಲಿ ನೋಡು ಧಾರವಾಡದಿಂದ  ಬೇಂದ್ರೆ ಅಜ್ಜ  ಶಿಶುನಾಳದಿಂದ ಶರೀಫ  ಅಜ್ಜ ನೆಡೆದಾಡುತ್ತ ಬರುವಂತೆ, ನಮ್ಮ ಜೊತೆಯಲ್ಲಿ ಮಾತಾಡುವಂತೆ, ಅವರ ಮಾತುಗಳನ್ನು ಅನುಭವಿಸುವಂತೆ ಮಾಡುವ ಬ್ಲಾಗ್ ಲೋಕದ ಕಾಕ ಸುನಾಥ ಕಾಕ ಬರುತ್ತಿದ್ದಾರೆ.. ಆಹಾ ಎಂಥಹ ಭಾಗ್ಯ ನಮ್ಮದು ಇಂತಹ ಮೇರು ವ್ಯಕ್ತಿತ್ವವನ್ನು ಕಂಡ ನಾವೇ ಧನ್ಯರು.. ಬ್ಲಾಗ್ ಲೋಕದ ಅಂಬರದಲ್ಲಿ ಶ್ರೀ ಸುನಾಥ ಕಾಕ ಎಂದೇ ಹೆಸರಾದ ಶ್ರೀ ಎಸ್ ಎಲ್ ದೇಶಪಾಂಡೆಯವರು ಸರಳ ಸಜ್ಜನಿಕೆಗೆ ಒಂದು ಕಾವ್ಯಮಯ ಹೆಸರು.. ಪ್ರತಿಯೊಬ್ಬರನ್ನು ಮಾತಾಡಿಸುವ ರೀತಿ, ಎಲ್ಲರ ಲೇಖನಗಳಿಗೆ ಅವರು ಕೊಡುವ ಪ್ರತಿಕ್ರಿಯೆ ಆಹಾ ನಿಜಕ್ಕೂ ಒಂದು ವರವೇ ಸರಿ.. .. "ದೇಸಿ" ಪುಸ್ತಕ ಸಂಸ್ಕೃತಿಯನ್ನು ಹೆಚ್ಚಿಸುವ ಇಂತಹ ಪುತ್ರರತ್ನವನ್ನು ಪಡೆದ ಕರುನಾಡು ನಿಜಕ್ಕೂ ಹೆಮ್ಮೆಯ ನಾಡು..

"ಬದರಿನಾಥ ಎಂಬ ಹೃದಯಂಗಮ ಕವಿಯು ತನ್ನ ತನಗೆ ವಿದ್ಯೆ ಕಲಿಸಿದ ಗುರುಗಳನ್ನು ಸನ್ಮಾನಿಸಿ ತಾನು ಗುರು ಕಾಣಿಕೆಯನ್ನು ಸಲ್ಲಿಸಿದ್ದೆ ಅಲ್ಲದೆ.. ಗುರುಗಳು ಹೇಳಿಕೊಟ್ಟ ಪ್ರತಿ ಅಕ್ಷರಕ್ಕೂ ಅವರು ಹೆಮ್ಮೆ ಪಡುವಂತೆ ಕವನಗಳನ್ನು ರಚಿಸಿ ಓದುಗರ ಮನಸ್ಸನ್ನು ಸೂರೆಗೊಂಡಿದ್ದಾರೆ. ನಾನು ನನ್ನದು ಎನ್ನುವ ಈ ಪ್ರಪಂಚದಲ್ಲಿ ನಾವು ನಮ್ಮವರು ಎನ್ನುವ ಕಾಳಜಿ ಇರುವ ಅಶೋಕ್ ಶೆಟ್ಟಿ ಅಂಥಹ ಸುಮಧುರ ಸ್ನೇಹಿತ ಜೊತೆ ಇರುವಾಗ ಇಂತಹ ಸುಮಧುರ ಪ್ರಯತ್ನಕ್ಕೆ ಯಾವಾಗಲೂ ನಮ್ಮಿಬ್ಬರ  ಆಶೀರ್ವಾದ ಇದ್ದೆ ಇರುತ್ತದೆ . ಅದೇ ತಾನೇ ನಮಗೆ "ಕುಶಿ . ನಮ್ಮ ಮನೆಯ ದೀಪ"  ಅಲ್ಲವೇ ಲಕ್ಷ್ಮಿ ಎಂದರು ದೇವಿ ಸರಸ್ವತಿ..  

"ಹೌದು ಸರಸ್ವತಿ ನಿನ್ನ ಮಾತು ನಿಜ... ಅರೆ ಅಲ್ಲಿ ನೋಡು.. ಪಶ್ಚಿಮ ಘಟ್ಟಗಳ ತಿರುವು ಮುರುವು ರಸ್ತೆಯಂತೆ ಕಥೆಗಳಿಗೆ ಅಪೂರ್ವ ತಿರುವು ಕೊಡುತ್ತಾ ದಾರಿ ದೀವಿಗೆಯಾದ ಅಣ್ಣನನ್ನು ಸನ್ಮಾನಿಸುತ್ತಾ ಅವರ ಹಿರಿಮೆಯಲ್ಲಿ ತನ್ನ ಗರಿಮೆ ಕಾಯ್ದುಕೊಳ್ಳುವ ಬ್ಲಾಗ್ ಲೋಕದ ಪಡೆಯಪ್ಪ ಎಂದು ನಾಮಾಂಕಿತರಾದ ದಿನಕರ ಮೊಗೆರ ಅವರ ಸಂತಸವನ್ನು ನೀನು ಕಾಣೆಯ.  ಅವರ ಪ್ರಥಮ ಕೃತಿ ಚಾರ್ಮಾಡಿ ಘಟ್ಟದಷ್ಟೇ ಹಿತಕರ, ರೋಮಾಂಚಕಾರಿ.. ಅಷ್ಟೇ ವಸ್ತು ನಿಷ್ಠ ಪ್ರಸ್ತುತಿ..ಬಹಳ ಹಿತಕರ ವಾತಾವರಣವನ್ನು "ಸೃಷ್ಟಿ" ಮಾಡುತ್ತದೆ ಹೌದು ತಾನೇ ಸರಸ್ವತಿ !" 

"ತಮ್ಮ ಬರವಣಿಗೆಯನ್ನು ಇಷ್ಟಪಟ್ಟು ಬರೆಯುವ ಸ್ಪುರದ್ರೂಪಿ ಈ ಮಹೇಶ್ ಶ್ರೀ ದೇಶಪಾಂಡೆಯವರು.. ತಮ್ಮ ಮನಸ್ಸಿಗೆ ಅನ್ನಿಸಿದ ಅಕ್ಷರಗಳನ್ನು ಮಾಲೆಯನ್ನಾಗಿ ಮಾಡಿ ಅದಕ್ಕೆ ಕವನದ ರೂಪಕೊಟ್ಟು ಶತಪಥ ತಿರುಗುತ್ತಾ ತನ್ನ ಒಡಲಲ್ಲಿ ಜಿನುಗಿದ ಭಾವಗಳನ್ನು ಸುಳಿದಾಡುತ್ತ "ಸೃಷ್ಟಿ"ಯ ಸುಂದರ ಮಡಿಲಿಗೆ ಹಾಕಿರುವ  ಈ ಘಳಿಗೆ ಒಂದು ಸುಂದರ ಸೃಷ್ಟಿಯೇ ಸರಿ"

"ಹೌದು ಸರಸ್ವತಿ ಇವತ್ತು ನೀನು ಇವರ ಪುಸ್ತಕಗಳ ಒಳಗೆ ಕೂತು ಬಿಡುಗಡೆಗೊಳ್ಳುತ್ತಿರುವೆ... ಯಾರು ಯಾರು ಬಂದಿದ್ದಾರೆ ಹೇಳುವೆಯ"

"ಸುಂದರವಾಗಿರುವ ಐ ಪಿ ಎಸ್ ಅಧಿಕಾರಿ ಶ್ರೀ ಎಂ ನಂಜುಂಡಸ್ವಾಮಿ, ಅವಧಿ ಎನ್ನುವ ಅಂತರ್ಜಾಲ ಪತ್ರಿಕೆಯ ಪ್ರಧಾನ ಸಂಪಾದಕರು ಶ್ರೀ ಜಿ ಏನ್ ಮೋಹನ್, ಕಿರುತೆರೆಯಲ್ಲಿ ಮಂಗಳತ್ತೆ ಎಂದೇ ಖ್ಯಾತಿಯಾಗಿರುವ ಶ್ರೀಮತಿ ಜಯಲಕ್ಷ್ಮಿ ಪಾಟೀಲ್, ಸುವರ್ಣ ವಾಹಿನಿಯ ಪ್ರಧಾನ ಛಾಯಗ್ರಾಹಕರು ಶ್ರೀ ಸತ್ಯಬೋಧ ಜೋಷಿ.. ಇವರ ಜೊತೆಯಲ್ಲಿ ಲೇಖಕರಾದ ಶ್ರೀ ಸುನಾಥ ದೇಶಪಾಂಡೆ, ಶ್ರೀ ಬದರಿನಾಥ ಪಲವಳ್ಳಿ, ಶ್ರೀ ದಿನಕರ್ ಮೊಗೆರ, ಮತ್ತು ಶ್ರೀ ಮಹೇಶ ದೇಶಪಾಂಡೆ.. ಇವರೆಲ್ಲ ವೇದಿಕೆಯಲ್ಲಿ ಆಸೀನರಾಗಿದ್ದಾರೆ.. "

ಓಹ್ ಸುಂದರ ಸಮಾರಂಭಕ್ಕೆ ಸುಂದರ ಆರಂಭ ಬೇಕು... ಬುದ್ದಿವಂತೆ, ಚತುರಮತಿ, ಅಪಾರ ಜ್ಞಾನ ವಾಹಿನಿ ಕುಮುದಾವಲ್ಲಿ ಅವರ ಆರಂಬಿಕ ಮಾತುಗಳು ಸೊಗಸಾಗಿತ್ತು. ಇಡಿ ಕಾರ್ಯಕ್ರಮ ಅವರ ಸುಂದರ ನಿರೂಪಣೆಯಿಂದ ಶೋಭಾಯಮಾನವಾಗಿತ್ತು.. ಹಳಿ ತಪ್ಪಿದಂತೆ ಕಂಡಾಗ ಮತ್ತೆ ಆ ರೈಲು ಗಾಡಿಯನ್ನು ಮತ್ತೆ ಹಳಿಗೆ ತಂದು ಕಾರ್ಯಕ್ರಮ ಒಂದು ಸಂತಸದ ಪೆಟ್ಟಿಗೆ ಯನ್ನಾಗಿ ಮಾಡಿದ ಅವರ ಪರಿಶ್ರಮ ನಿಜಕ್ಕೂ ಶ್ಲಾಘನೀಯ. 

"ನಂತರ ಉಷಾ ಉಮೇಶ ಅವರ ಪ್ರಾರ್ಥನಾ ಗೀತೆ, ನಂತರ ಶುರುವಾಯಿತು ನಿಜಕ್ಕೂ ಒಂದು ಸ್ಮರಣೀಯ ಘಳಿಗೆ.. "

ಸುಂದರ ಸುವರ್ಣ ಸಂಭ್ರಮ!

"ವೇದಿಕೆಯಲ್ಲಿದ್ದ ಎಲ್ಲರೂ ಪ್ರೇಕ್ಷಕರ ಕರತಾಡನದ ನಡುವೆ ಪುಸ್ತಕದಲ್ಲಿದ್ದ ಸರಸ್ವತಿಯನ್ನು "ಪ್ರಕಾಶ"ಕ್ಕೆ ತಂದರು.. ವೇದಿಕೆಯ ಮಹನೀಯರೆಲ್ಲ  ಪುಸ್ತಕಗಳ ಬಗ್ಗೆ ತಮ್ಮ ತಮ್ಮ ಅನಿಸಿಕೆ, ಅಭಿಪ್ರಾಯಗಳನ್ನು, ಮೆಚ್ಚುಗೆಗಳನ್ನು ಚುಟುಕು ಮಾತುಗಳಲ್ಲಿ ತಮ್ಮ ಧನ್ಯತೆಯನ್ನು ಸಲ್ಲಿಸಿದರು.. "
ಆತ್ಮೀಯ ಮಾತುಗಾರಿಕೆ - ಶ್ರೀ ಸುನಾಥ ದೇಶಪಾಂಡೆ 
ಮನಮೋಹಕ ನಿರೂಪಣೆ - ಶ್ರೀಮತಿ ಕುಮುದವಲ್ಲಿ 

ಸುಂದರ ಅಧಿಕಾರಿ ಶ್ರೀ ನಂಜುಂಡಯ್ಯ 

ಸುಮಧುರ ಮಾತುಗಳ ಸರದಾರಿಣಿ ಮಂಗಳತ್ತೆ ಅಲಿಯಾಸ್ ಶ್ರೀಮತಿ ಜಯಲಕ್ಷ್ಮಿ ಪಾಟೀಲ್ 

 ಪ್ರಧಾನ ಛಾಯಗ್ರಾಹಕರು ಶ್ರೀ ಸತ್ಯಬೋಧ ಜೋಷಿ

ನಮ್ಮೆಲ್ಲರ ಪ್ರೀತಿಯ ದಿನಕರ್ ಸೆರೆಯಾದದ್ದು ಹೀಗೆ ಉಮೇಶ್ ಮತ್ತು ಪ್ರಕಾಶಣ್ಣ ನ ಪ್ರೀತಿಯ ಬಂಧನದಲ್ಲಿ 

ಮಹೇಶ್ ದೇಶಪಾಂಡೆ ಯವರ ಮಾತುಗಾರಿಕೆ 

ಪ್ರೀತಿಯ ಡಾಕ್ಟರ್ ಡಿ ಟಿ ಕೃಷ್ಣಮೂರ್ತಿ ಗಾಯನದ ಹಾದಿಯಲ್ಲಿ 

ಅವಧಿಯ ಶ್ರೀ ಜಿ ಏನ್ ಮೋಹನ್ ಸುಂದರ ಮಾತುಗಳು 
"ಎಲ್ಲರನ್ನು ಸನ್ಮಾನಿಸಿ ಸಡಗರದಿಂದ ಸ್ವಾಗತ ಭಾಷಣ ಮಾಡಿದ ಎಲ್ಲರ ಸಹೃದಯ ಮಿತ್ರ ಶ್ರೀ ಅಶೋಕ್ ಶೆಟ್ಟಿಯವರಿಗೆ, ಸೊಗಸಾದ ವಂದನಾರ್ಪಣೆ ಮಾತುಗಳನ್ನು ಹೇಳಿದ ಶ್ರೀ ಉಮೇಶ್ ದೇಸಾಯಿಯವರಿಗೆ, ಮತ್ತು ನಮ್ಮೆಲ್ಲರ ಕೊಳಲು ಬ್ಲಾಗ್ ಲೇಖಕ ಸುಂದರ, ಸಿರಿವಂತ ಮನಸ್ಸಿನ, ಹಾಗೂ ಸಿರಿ ಕಂಠದ ಡಾಕ್ಟರ್ ಡಿ ಟಿ ಕೃಷ್ಣಮೂರ್ತಿ  ಇವರೆಲ್ಲ ಕಾರ್ಯಕ್ರಮವನ್ನು ಉತ್ತಮ ಮಜಲಿಗೆ ಕೊಂಡೊಯ್ದರು..  ಅಲ್ವ ಲಕ್ಷ್ಮಿ"

"ಇವರೆನ್ನಲ್ಲ ಒಂದೇ ಭಾವ ಬಂಧನದಲ್ಲಿ ಬೆಸೆಯುವ ಇಟ್ಟಿಗೆ ಸಿಮೆಂಟ್ ಬ್ಲಾಗ್ ಕತೃ ಅಮೋಘ ಹಾಸ್ಯ ಪ್ರಜ್ಞೆ ಇರುವ, ಹೃದಯವಂತ ಶ್ರೀ ಪ್ರಕಾಶ್ ಹೆಗಡೆ ಮತ್ತು ಗೆಳೆತನಕ್ಕೆ ಒಂದು ಉತ್ತಮ ಉದಾಹರಣೆಯಾಗುವ ಶ್ರೀ ಆಜಾದ್ ಸರ್ ಮತ್ತು ಪ್ರತಿಯೊಬ್ಬರ ಹೆಸರನ್ನು ಹೇಳದೆ ಇದ್ದರೂ ಬ್ಲಾಗ್ ಲೋಕದ ತಾರೆಗಳು ಎಂದರೆ ಸಾಕು ಎನ್ನುವ ಬ್ಲಾಗ್ ಲೋಕದ ಕಲಾ ಮಣಿಗಳು ಸೇರಿ ಮುನ್ನೆಡೆಸಿದ ಈ ಕಾರ್ಯಕ್ರಮ ಒಂದು ನವಿರಾದ ಘಳಿಗೆಗಳು ಎಂದರೆ ತಪ್ಪಿಲ್ಲ ಅಲ್ಲವೇ ಸರಸ್ವತಿ" 

ಹಿರಿ ಕಿರಿಯರನ್ನು ಸನ್ಮಾನಿಸುವ, ಅವರ ಆಶೀರ್ವಾದ ಅಭಿನಂದನೆಗಳನ್ನು ಪಡೆಯುವ ಬ್ಲಾಗ್ ಲೋಕದ ಶ್ರಮ ಸಂಪ್ರದಾಯ ನಿಜಕ್ಕೂ ಅನುಕರಣೀಯ... ಅಕ್ಷರ ಸಂಬಂಧ ರಕ್ತ ಸಂಬಂಧಕ್ಕಿಂತ ದೊಡ್ಡದು ಎಂದು ಪ್ರತಿಪಾದಿಸಿದ ಈ ಕಾರ್ಯಕ್ರಮ ನಿಜಕ್ಕೂ ಒಂದು ಅಮರ ಸಂದೇಶ ಸಾರುತ್ತದೆ. ದೀಪಾವಳಿ ಹಬ್ಬ, ಭಾನುವಾರ, ಸಾಲು ಸಾಲು ರಜ ಇಷ್ಟಿದ್ದರೂ ತುಂಬಿ ತುಳುಕುತ್ತಿದ್ದ ಸಭಾಂಗಣ, ಆಸಕ್ತರಿಂದ ಕೂಡಿದ್ದ ಸಭೆಯಲ್ಲಿ ಕುಳಿತುಕೊಳ್ಳಲು ಸ್ಥಳವಿಲ್ಲದಿದ್ದರೂ ನಿಂತೇ ನೋಡಿ ಇಡಿ ಸಮಾರಂಭವನ್ನು ಕಣ್ಣಲ್ಲಿ, ಕ್ಯಾಮರದಲ್ಲಿ  ತುಂಬಿಕೊಂಡು ಬಂದ ಪ್ರೇಕ್ಷಕರು ದೇವರ ಕಡೆಗೆ ತಿರುಗಿ 

"ದೇವರೇ ಸರಸ್ವತಿ ಲಕ್ಷ್ಮಿ ಒಂದೇ ಕಡೆ ನೆಲೆಸಿರುವ ಈ ಬ್ಲಾಗ್ ಲೋಕದಲ್ಲಿ ಸದಾ ನಗು ಲವಲವಿಕೆ ತುಂಬಿರಲಿ" ಎನ್ನುವಲ್ಲಿಗೆ ಈ ಹರಿಕಥೆ ಮುಕ್ತಾಯ ವಾಯಿತು.. 

ಆದರೆ ಇದು ಅಂತ್ಯವಲ್ಲ ಆರಂಭ... !!!

Tuesday, October 8, 2013

ಕರಾವಳಿಯ ಮದುಮಗಳು ನಮ್ಮ ಸುಲತ ಸಿಸ್ಟರ್ (ಎಸ್ ಎಸ್)

"ಆಕಾಶ ಬಾಗಿದೆ
 ನಿನ್ನಂದ ನೋಡಲೆಂದು... 
ಆನಂದ ಹೊಂದಲೆಂದು 
ನೋಡಲ್ಲಿ ಮೋಹಿನಿ ಕಾಮಿನಿ ಭಾಮಿನಿ
ಆಕಾಶ ಬಾಗಿದೆ.... "

ದೇವಲೋಕದ ಶಿಲ್ಪಿ "ಮಯ" ತನ್ನ  ಕರ ಕುಶಲತೆಯನ್ನೆಲ್ಲ ಒರಗೆ ಹಚ್ಚಿ ಸುಂದರ ಕೃತಿ ನಿರ್ಮಾಣ ಕಾರ್ಯದಲ್ಲಿ ತೊಡಗಿದ್ದ. ಯಾಕೋ ಮನಸ್ಸು  ಎದುರಿಗಿದ್ದ ಬಳ್ಳಿಯ ಕಡೆಯೇ ಹರಿಯುತ್ತಿತ್ತು. ಅದನ್ನು ನೋಡುತ್ತಲೇ ಅದರಿಂದ ಸ್ಪೂರ್ತಿಗೊಂಡು ಒಂದು ಸುಂದರ ಕಲಾಕೃತಿಯ ರಚನೆಗೆ ತನ್ನನ್ನೇ ತೊಡಗಿಸಿಕೊಂಡ....

ಬ್ರಹ್ಮ ದೇವನಿಂದ ಎರವಲು ತಂದಿದ್ದ ಅಚ್ಚಿನಿಂದ ಸುಂದರ ಮುಖಾರವಿಂದವನ್ನು ಕೆತ್ತಿದ ಮೇಲೆ.. ಕೊಂಚ ವಿರಮಿಸಲು ತಂಗಾಳಿಯಲ್ಲಿ ಹಾಗೆ ನಡೆದುಕೊಂಡು ಹೋಗುತಿದ್ದ... ಮೆಲ್ಲನೆ ತಿಳಿ ಸಂಗೀತ ತೇಲಿ ಬರುತ್ತಿತ್ತು

"ಮಂದಾರ ಪುಷ್ಪವು ನೀನು 
ಸಿಂಧೂರ ಪ್ರತಿಮೆಯು ನೀನು.. 
ಗಂಧರ್ವ ಗಾನವಾಣಿ... 
"         "   "       "  "       " 
ಎಂದೋ ಮೆಚ್ಚಿದೆ ನಾನು.. 
ನಿನ ಎಂದೋ ಮೆಚ್ಚಿದೆ ನಾನು"

ಅಚಾನಕ್ ಸ್ಫೂರ್ತಿ ಸಿಕ್ಕಿತು.. ಬೇಗ ಬೇಗನೆ ಮತ್ತೆ ವಿಗ್ರಹದ ಬಳಿ ಬಂದು..  ಏನೋ ಸ್ಫೂರ್ತಿ ಸಿಕ್ಕಿದಂತಾಗಿ ಸುಂದರ ನಗುವಿನ ರೂಪ ಕೊಟ್ಟ..

"ಏನು ಮಯ ಶಿಲ್ಪಿಗಳೇ ಯಾವುದೋ ಒಂದು ಸುಂದರ ಶಿಲ್ಪ ತಯಾರಾಗುತ್ತಿದೆ.. "

"ಹೌದು ನಾರದರೆ..ಬ್ರಹ್ಮನ ಅಣತಿಯಂತೆ ಸುಂದರ ಕಲಾಕೃತಿ ಮಾಡುತಿದ್ದೆ.. ಅದೇನೋ ನೋಡಿ ಕನ್ನಡ ಚಿತ್ರಗೀತೆಗಳು ಎಷ್ಟು ಸ್ಫೂರ್ತಿ ಕೊಡುತ್ತದೆ.. ಅಲ್ಲವೇ"

"ಹೌದು ಶಿಲ್ಪಿಗಳೇ.. ಆ ಸಾಹಿತ್ಯ, ಪದಜೋಡಣೆ, ಅದಕ್ಕೆ ಕೊಡುವ ಸಂಗೀತ ಸಂಯೋಜನೆ... ನಾನು ಮತ್ತು ತುಂಬುರ ಕೂಡ ಅಷ್ಟೊಂದು ಸೊಗಸಾಗಿ ಕೊಡಲಾಗುವುದಿಲ್ಲ ಅನ್ನಿಸುತ್ತೆ.. "

"ಸರೀ ನಾರದರೆ ಶಿಲ್ಪ ಕೆತ್ತನೆ ಮುಗಿಯುತ್ತಾ ಬಂದಿದೆ.. ನಿಧಾನವಾಗಿ ಅದರ ವಾರಸುದಾರರಿಗೆ ತಲುಪಿಸಬೇಕು.. ಸರಿ ನಾ ಹೊರಡುತ್ತೇನೆ.. "

ಶುಭವಾಗಲಿ ಮಯ ಶಿಲ್ಪಿಗಳೇ... ಅರೆ ನೋಡಿ ಒಂದು  ಹಾಡು ನನ್ನ ಮೊಬೈಲ್ ನಲ್ಲಿ ಕೇಳಿ ಬರುತ್ತಿದೆ...

"ಆಕಾಶದಿಂದ ಧರೆಗಿಳಿದ ರಂಬೆ 
ಇವರೇ ಇವರೇ ಕರಾವಳಿಯ ಗೊಂಬೆ 
ಚೆಲುವಾದ ಗೊಂಬೆ 
ಚಂದನದ ಗೊಂಬೆ"

ಮಯ ಒಂದು ಸುಂದರ ನಗುವನ್ನು ಬೀರಿ ಭೂಲೋಕದೆಡೆಗೆ ಹೊರಡುತ್ತಾನೆ...

ಘಟ್ಟದ ರಸ್ತೆಯಲ್ಲಿ ಆ ಮೂರ್ತಿಯನ್ನು ಜೋಪಾನ ಮಾಡುತ್ತಾ, ಪ್ರಕೃತಿ ಸೊಬಗನ್ನು ಸವಿಯುತ್ತಾ ಅ ತಂಗಾಳಿಯಲ್ಲಿ ಹಾಗೆ ಮೈ ಮರೆತು ತನ್ನ ಪಾಡಿಗೆ ತಾನು ಹಾಡುತ್ತಾ ಹೋಗುತ್ತಾನೆ..

ಎಂಥಾ ಸೌಂದರ್ಯ ನೋಡು 
ನಮ್ಮಾ ಕರುನಾಡ ಬೀಡು
ಗಂಧದ ಗೂಡಿದು"

"ರೀ ಶಿಲ್ಪಿಗಳೇ " ಸುಮಧುರ ಧ್ವನಿಗೆ ಎಚ್ಚರವಾಗುತ್ತದೆ..

"ಓಹ್ ಆಗಲೇ ಶ್ಯಾಮಿಲಿ ಸಭಾ ಭವನಕ್ಕೆ ಬಂದುಬಿಟ್ಟಿದ್ದೇನೆ... ಆ ಘಟ್ಟಗಳ ಇಳಿಜಾರಿನ ರಸ್ತೆಯಲ್ಲಿ ಪ್ರಕೃತಿಯ  ಸುಂದರ ಮಡಿಲಲ್ಲಿ ಪಯಣಿಸಿದ್ದು ತಿಳಿಯಲೇ ಇಲ್ಲ.. ಕ್ಷಮಿಸಿ ನೀವು ತಾನೇ "ರೋಹಿತ್"....?

"ಹೌದು ನಾನೇ ...... "ರೋಹಿತ್ "

"ತುಂಬಾ ಸಂತೋಷವಾಯಿತು ನಿಮ್ಮ ಭೇಟಿ ಮಾಡಿ... ಇದೋ ಈ ಸುಂದರ ಶಿಲ್ಪ ಸಮಸ್ತ ಬ್ಲಾಗ್ ಲೋಕದ ಮುದ್ದು ಸಹೋದರಿ "ಸುಲತ"... ಇನ್ನು ಮುಂದೇ ನಿಮ್ಮ ಹೃದಯದ ರಾಣಿ.... !

 "ಇನ್ನು ಮುಂದೇ ನಿಮ್ಮ ಹೃದಯದ ರಾಣಿ.... !" ಇನ್ನು ಮುಂದೆ ನನ್ನ ಹೃದಯದ ರಾಣಿ......! ಹೃದಯದ ರಾಣಿ ಈ ಮಾತುಗಳು ಕೇಳುತ್ತಲೇ ರೋಹಿತ್ ಮನಸ್ಸು ಆಕಾಶದಲ್ಲಿ ಹಾರಾಡಲು ಶುರುವಾಯಿತು.. ಅವರಿಗರಿವಿಲ್ಲದೆ ಹಾಡಾಯಿತು

"ನಾಚಿಕೆ ಇನ್ನೇಕೆ ಅಂಜಿಕೆ ಇನ್ನೇಕೆ 
ನಾನಿಲ್ಲಿ ಇರುವಾಗ"

ಚಿತ್ರ ಕೃಪೆ - ನಿಮ್ಮೊಳಗೊಬ್ಬ ಬಾಲೂ 

ಆ ಶಿಲ್ಪ ನಸು ನಗುತ್ತಾ.....ತುಸು ನಾಚಿಕೆಯಲ್ಲಿ ತುಸು ಕೋಪದಲ್ಲಿ  "ಗೊತ್ತು ನನಗೆ ಗೊತ್ತು ಅವರು ಏನೋ ಈ ರೀತಿಯ ತರಲೆ ಮಾಡ್ತಾರೆ ಅಂತ .. ಶಿಲ್ಪಿಗಳೇ ಅಣ್ಣನ ಮೊಬೈಲ್ ನಂಬರ್ ಕೊಡಿ.. ನಾ ಅವರಿಗೆ ಜೋರು ಮಾಡ್ಬೇಕು.. ನೋಡಿ ಒಬ್ಬರೂ ಕೂಡ ಬಂದಿಲ್ಲ.. "

ಮೊಬೈಲ್ ರಿಂಗಾಗ ತೊಡಗಿತು 
"ಏನೀ ಸ್ನೇಹಾ ಸಂಬಂಧಾ.. 
ಎಲ್ಲಿಯದೋ ಈ ಅನುಬಂಧ"

"ಹಾಯ್ ಎಸ್ ಎಸ್ ... ನಿಮ್ಮ ವೈವಾಹಿಕ ಜೀವನಕ್ಕೆ ಹಾರ್ಧಿಕ ಶುಭಾಶಯಗಳು.. ನಿಮಗಾಗಿ ಬರೆದ ಒಂದು ಪುಟ್ಟ ಕವಿತೆ

"ನಗೆ ಎಂಬ ಬಳ್ಳಿ ನಾಚುತ್ತಾ ನಿಂತಾಗ 
ಉಗಮವಾಗಿದ್ದು ನಗೆಯ ಮಾಲಿಕೆ 
ಪಾರ್ವತಿ ಬೆವರಿನಿಂದ ಉಗಮವಾದ ಗಣಪನ ಹಾಗೆ 
ಸುಂದರ ಬಳ್ಳಿಯಿಂದ ಮೂಡಿದ್ದು 
"ಸುಲತ" ಎಂಬ ನಗುವಿನ ಬಳ್ಳಿ 
ಬ್ಲಾಗ್ ಲೋಕದ ಈ ಸುಂದರ ಬಳ್ಳಿಗೆ 
ಮರಳುಗಾಡಿನ (ರೋ)ಹಿತಕರ ಆಸರೆಯಲ್ಲಿ  
ಸಾಗಲಿ ನಿಮ್ಮ ಸುಂದರ ದಾಂಪತ್ಯ.. 
ಚಿರನೂತನವಾಗಿರಲಿ ನಿಮ್ಮಿಬ್ಬರ ಅನುಬಂಧ"

"ಥ್ಯಾಂಕ್ ಯು ಅಣ್ಣಾ.. ಮದುವೆಗೆ ಬಂದಿಲ್ಲ ಅಂತ ಬಯ್ಯೋಣ ಅಂತ ಅಂದ್ರೆ.. ಏನೋ ಪದಗಳನ್ನು ಕಟ್ಟಿ ನನ್ನ ಸುಮ್ಮನಾಗಿಸಿ ಬಿಟ್ಟಿರಿ.. ಈಗ ನಸು ನಗು ಬೀರುವುದಲ್ಲದೆ ನನಗೆ ಬೇರೆ ಏನೂ ತೋಚುತ್ತಿಲ್ಲ"

"ಹ ಹ ಹ... ಎಸ್ ಎಸ್ ಪುಟ್ಟಿ ಈ ಹಾಡು ನಿಮಗಾಗಿ.. ನಿಮ್ಮ ವಿವಾಹ ಮಹೋತ್ಸವಕ್ಕಾಗಿ"

"ನೂರೊಂದು ನೆನಪು 
ಎದೆಯಾಳದಿಂದ 
ಹಾಡಾಗಿ ಬಂತು ಆನಂದದಿಂದ 
ಸಿಂಧೂರ ಬಿಂದು 
ನಗಲಮ್ಮ ಎಂದು 
ಎಂದೆಂದೂ ಇರಲಮ್ಮ ಈ ದಿವ್ಯ ಬಂಧ" 
  
"ಥ್ಯಾಂಕ್ ಯು ಸೊ ಮಚ್ ಅಣ್ಣಾ.. ತುಂಬಾ ಖುಷಿಯಾಯಿತು.. ಅಣ್ಣಾ.... ಮಯ ಶಿಲ್ಪಿಗಳಿಗೆ ಏನಾದರು ಹೇಳಬೇಕಾ... ಫೋನ್ ಕೊಡ್ತೀನಿ ಅವರಿಗೆ "

"ನೀವು ಹೇಳಿದ್ದು ಮಾಡಿದ್ದೇನೆ... ಇವರ ವಿವಾಹ ಕಾರ್ಯಕ್ರಮ ಪೂರ್ತಿ ನೋಡಿ ನಂತರ ನಾನು ಹೊರಡುತ್ತೇನೆ ಆಗಬಹುದೇ..."

ಓಕೆ ಆಗಬಹುದು.. ಬ್ಲಾಗ್ ಲೋಕದ ಎಲ್ಲಾ ಸದಸ್ಯರ ಪರವಾಗಿ ನೀವು ಅಲ್ಲಿರುವುದು ನಮಗೆ ಖುಷಿ ಕೊಟ್ಟಿದೆ..

ಚಿತ್ರ ಕೃಪೆ - ನಿಮ್ಮೊಳಗೊಬ್ಬ ಬಾಲೂ 

ಉಡುಪಿ ಕೃಷ್ಣನ ಅನುಗ್ರಹ ಸದಾ ಈ ದಂಪತಿಗಳ ಮೇಲೆ ಇರಲಿ ಎಂದು ಹಾರೈಸಿರಿ ಮಯ ಶಿಲ್ಪಿಗಳೇ.. ಹಾಗೆಯೇ ಮರಳುಗಾಡಿನ ರಾಜಕುಮಾರನಿಗೆ ಈ ಹಾಡು ಕೇಳಿಸಿ ಮತ್ತು ಯಾವಾಗಲೂ ಹಾಡುತ್ತಿರುವಂತೆ ಹೇಳಿ"

"..... ಸುಲತ... ನಿನ್ನ ನಗುವು ಹೂವಂತೆ... ನಿನ್ನ ನುಡಿಯು ಹಾಡಂತೆ 
ಬದುಕಿನ ಅನುಕ್ಷಣ ನಮಗೆ ಸಂತೋಷವೇ.. 

ರೋಹಿತ್ ನಿಮ್ಮ ನಗುವು ಹೂವಂತೆ.. ನಿಮ್ಮ ನುಡಿಯು ಹಾಡಂತೆ 
ಬದುಕಿನ ಅನುಕ್ಷಣ ನಮಗೆ ಸಂತೋಷವೇ... " 

ವಿವಾಹ ಜೀವನಕ್ಕೆ ಕಾಲಿಡುತ್ತಿರುವ ಈ ಕ್ಷಣದಲ್ಲಿ ...ಸುಲತ ರೋಹಿತ್ ಜೋಡಿಯ ಜೀವನದುದ್ದಕ್ಕೂ ಸುಮಧುರ ಹೂವಿನ ಸುಗಂಧ.. ಜೇನಿನ ನಗು.. ಕ್ಯಾಮೆರಾದ ಬೆಳಕು ಸದಾ ಬೀರುತ್ತಲಿರಲಿ... "


ಚಿತ್ರ ಕೃಪೆ - ಎಸ್ ಎಸ್

Wish you happy married life to RSS!

Thursday, August 8, 2013

ಹಾಗೆಯೇ ಆರಿಸಿಕೊಂಡೆ ಆಗ ಮೂಡಿಬಂದದ್ದು .......!!!

***********
"ಅರೆ ಇದೇನಿದು ಏನಾಯ್ತು ಅಣ್ಣಯ್ಯ? ಬರಿ ಖಾಲಿ ಖಾಲಿ?"

"ಹೌದು ಕಣೋ.. ಕೀಲಿ ಮನೆಯಲ್ಲಿ ಬರೆಯುತ್ತಾ ಹೋದೆ.. ಅಕ್ಷರ ಬಣ್ಣ ಬಣ್ಣ ಇರಲಿ ಅಂತ ಕೆಲ ಬಣ್ಣವನ್ನು ಆಯ್ಕೆ ಮಾಡಿಕೊಂಡೆ.. ಆದರೆ ಆ ವರ್ಣ ಚಕ್ರ ಒಮ್ಮೆ ಗಿರ್ರ್ ಅಂತ ತಿರುಗಿತು..ಹಾಗೆಯೇ ಆರಿಸಿಕೊಂಡೆ ಆಗ ಮೂಡಿಬಂದದ್ದು ಮೂಡಬಿದ್ರಿಯ ಶುಭ್ರ ಬಿಳುಪಿನ ಬಣ್ಣ.."

"ಸಾವಿರ ಕಂಭದ ಬಸದಿಯ ಊರಲ್ಲಿ ಉಗಮವಾದ ಕೂಸು.. ಉದ್ಯಾನ ನಗರಿಯಲ್ಲಿ ಮೌನರಾಗದಲ್ಲಿ ಹಾಡುತ್ತಾ ಕನಸು ಕಂಗಳನ್ನು ಬಿಡುತ್ತಾ ಅನೇಕರ ಅಣ್ಣಂದಿರ ಹೃದಯ ಕಮಲದಲ್ಲಿ ಮುದ್ದಿನ ಪುಟ್ಟಿಯಾಗಿ ನಿಂತಿರುವ ಪುಟ್ಟಿ ಸುಷ್ಮಾಳಿಗೆ ಹುಟ್ಟು ಹಬ್ಬದ ಶುಭಾಶಯಗಳು... ಸುಂದರ ನಗುವಿನ ಪುಟ್ಟ ತಂಗಿಯ ದೊಡ್ಡ ಕನಸುಗಳು ಕೆನ್ನೆಯಲ್ಲಿನ ಗುಳಿಯಂತೆಯೇ ಸುಂದರವಾದ ನನಸಾಗಲಿ.. ಬೆಸುಗೆ ಬೆಸುಗೆ ಜೀವನವೆಲ್ಲಾ ಸುಂದರ ಬೆಸುಗೆ... ಎನ್ನುವಂತೆ ಮುದ್ದಿನ ತಂಗಿಯಾದ ಪುಟ್ಟಿ ಸುಷ್ಮಾಳಿಗೆ ಶುಭ ಹಾರೈಕೆಗಳು... ಹುಟ್ಟು ಹಬ್ಬದ ಶುಭಾಶಯಗಳು... "

"ಧನ್ಯವಾದಗಳು ಅಣ್ಣಯ್ಯ.. ತುಂಬಾ ಖುಷಿಯಾಗುತ್ತಿದೆ.. ಬ್ಲಾಗ್ ಲೋಕದಲ್ಲಿ ಸಿಕ್ಕಿರುವ ಅನೇಕ ಸಹೃದಯರ ಸ್ನೇಹ ಪುಷ್ಪ ನನ್ನ ಪಾಲಿಗೆ ಸಿಕ್ಕಿರುವುದು ನನ್ನ ಪುಣ್ಯ ಅಣ್ಣಯ್ಯ.. "

"ಮತ್ತೆ ಹೇಗೆ ಕಳೆದೆ ನಿನ್ನ ಹುಟ್ಟು ಹಬ್ಬದ ದಿನವನ್ನ ಹೇಗಿತ್ತು... ?"

"ಚೆನ್ನಾಗಿತ್ತು ಅಣ್ಣಯ್ಯ.. .. ಆಫೀಸ್ ನಲ್ಲಿ ಸಹೋದ್ಯೋಗಿಗಳು.. ನನ್ನ ಗೆಳತಿಯರು, ಬ್ಲಾಗ್ ಲೋಕದ ತಾರೆಗಳು ಎಲ್ಲರೂ  ಕರೆ ಮಾಡಿ ಶುಭಾಷಯ ಕೋರಿದರು.. ಇದಕ್ಕಿಂತ ಬೇರೆ ಏನು ಬೇಕು ಅಣ್ಣಯ್ಯ ಅಲ್ವ.. ದೂರದ ಊರಿಂದ ಬಂದು ಇಲ್ಲಿಯೇ ಬೆಳೆಯುತ್ತಿರುವ ನನಗೆ ನಿಮ್ಮೆಲ್ಲರ ಅಭಿಮಾನದ ಪ್ರೀತಿಯೇ ನನಗೆ ಬೆಳೆಯಲು ದಾರಿ ತೋರುತ್ತಿದೆ.. ತುಂಬಾ ಖುಷಿಯಾಗುತ್ತಿದೆ ಅಣ್ಣಯ್ಯ.. ಆದರೂ....  "

"ಹ ಹ ಹ.. ನಿನ್ನ ಮನದಲ್ಲಿರುವ ಗೊಂದಲ ನನಗೆ ಅರ್ಥವಾಗುತ್ತಿದೆ... ಎಲ್ಲಿ ಒಮ್ಮೆ ಮುಂದೇ ನೋಡು.. "

"ಏನಿದೆ ಅಣ್ಣಯ್ಯ.. " ಎನುತ್ತಾ ಮುಂದೆ ತಿರುಗಿ ನೋಡಿದರೆ......... :-)

ಕಣ್ಣ ಮುಂದೆ.. ಸಾವಿರ ಕಂಬಗಳು ಮುಂದೆ ದೀಪಾವಳಿಯ ಪಟಾಕಿಗಳು, ನಕ್ಷತ್ರ ಕಡ್ಡಿಗಳು, ಹೂವಿನ ಕುಂಡಗಳು  ಬೆಳಗಲು ಶುರುಮಾಡಿದವು.. ಪುಟ್ಟಿ ಸುಷ್ಮಾಳ ಕಣ್ಣಲ್ಲಿ ಮಿಂಚು..
************
ರಾಮನ ವಾನರ ಸೇನೆ ರಾಮೇಶ್ವರದ ಧನುಷ್ಕೋಟಿಯ ಹತ್ತಿರ ಬೀಡು ಬಿಟ್ಟಿತ್ತು..... ಸಾಗರವನ್ನು ಲಂಘಿಸಿ ಸೀತಾ ಮಾತೆಯ ದರುಶನ ಮಾಡಿ ಅವರ ಕ್ಷೇಮ ಸಮಾಚಾರವನ್ನು ಹೇಳಬೇಕಿತ್ತು.. ಆದರೆ ಸಾಗರವನ್ನು ದಾಟಲು ಯಾರು ಸಮರ್ಥರಿರಲಿಲ್ಲ.. ಆದರೆ ಎಲ್ಲರೂ ಆಗ ಮಾಡುತ್ತಿದೆ, ಈಗ ಮಾಡುತ್ತಿದ್ದೆ.. ಅದು ಇದು ಅಂತ ಸಬೂಬು ಹೇಳುತ್ತಾ ತಮ್ಮ ಪರಾಕ್ರಮ(?) ಕೊಚ್ಚಿಕೊಳ್ಳುತ್ತಿದ್ದರು... 


ಒಂದು ದೊಡ್ಡ ಬಂಡೆಯ ಮೇಲೆ ಹನುಮಂತ ಸುಮ್ಮನೆ ಕುಳಿತ್ತಿದ್ದ.. ಅದನ್ನ ನೋಡಿದ ಜಾಂಬುವಂತ.. "ಅಲ್ಲಾ ಹನುಮ ಎಲ್ಲರೂ ಅದು ಇದು ಅಂತ ಮಾತಾಡುತಿದ್ದಾರೆ ಆದರೆ ನೀನು ಮಾತ್ರ ತುಟಿ ಪಿಟಿಕ್ ಅನ್ನದೆ ಕುಳಿತಿರುವೆ.. ನಿನಗೆ ಶಕ್ತಿ ಇದೆ, ನಿನ್ನಲ್ಲಿ ಆತ್ಮ ವಿಶ್ವಾಸವಿದೆ, ಛಲವಿದೆ, ನಿನ್ನ ಸಹೋದರರ ಒಳಿತನ್ನು ಯೋಚಿಸುವ ಒಲವಿದೆ, ವಿನಯವಿದೆ ಇನ್ನು ಯಾಕೆ ಯೋಚನೆ.. ಹೊರಡು ವೀರ ಹೊರಡು... " ಎಂದು ಹೇಳುತ್ತಾ ಹನುಮನನ್ನು ಹುರಿದುಂಬಿಸಲು ಯತ್ನಿಸಿದ ಜಾಂಬುವಂತ. 

ಅದಕ್ಕೆ ಏನು ಪ್ರತಿಸ್ಪಂದಿಸದ ಹನುಮ.. "ಅಣ್ಣಾ ಜಾಂಬುವಂತ ನನ್ನ ವಿಚಾರ ಬಿಡು.. ನೋಡು ನನ್ನಷ್ಟೇ ಛಲವಿರುವ, ಶಕ್ತಿಯಿರುವ, ವಿನಯವಿರುವ, ಭ್ರಾತೃ ಮಮತೆ ತುಂಬಿಕೊಂಡಿರುವ, ಆತ್ಮ ವಿಶ್ವಾಸವಿರುವ ಒಂದು ಮುದ್ದು ಕಂದ ಅಲ್ಲಿ ಕುಳಿತಿದೆ.. ತನ್ನೆಲ್ಲ ಶಕ್ತಿಯನ್ನು ಒಗ್ಗೂಡಿಸಿಕೊಂಡು ಸಹಸ್ರ ಬಸದಿಯ ಊರಿಂದ ರವಿ ಮೂಡುವ ದಿಕ್ಕಿನ ತಟದಿಂದ ಉದ್ಯಾನನಗರಿಗೆ ಬಂದು ಎಲ್ಲರ ಮುದ್ದಿನ ತಂಗಿಯಾಗಿ, ಮಗಳಾಗಿ ಮಿಂಚುತ್ತಿರುವ ಆ ಪುಟ್ಟಿಯನ್ನು ನೋಡು.. ಆ ಮಗುವಿಗೆ ನಮ್ಮೆಲ್ಲರ ಆಶೀರ್ವಾದ ಬೇಕಿದೆ.. ಅಲ್ಲವೇ... ಸೀತಾಮಾತೆಯನ್ನು ಹುಡುಕಿ ಬರುವೆ.. ಹಾಗೆಯೇ ಈ ಮಗುವಿಗೆ ಶುಭವಾಗಲಿ ಎಂದು ಹೇಳಬೇಕು ಅಲ್ವೇ" 


"ನಿನ್ನ ಮಾತು ನಿಜ ಹನುಮ.. ಹೌದು ಮನುಜ ಕುಲದಲ್ಲಿ ಹುಟ್ಟಿದ ಮೇಲೆ ಅವರದ್ದು ಸಾಹಸ ಬದುಕು.. ಮೌನರಾಗದಲ್ಲಿ, ಅದೇ ತಾಳದಲ್ಲಿ, ಎರಡು ಕಣ್ಣಲ್ಲಿ ಕಾಣುವ ಕನಸು ತುಂಬಾ ಇಷ್ಟವಾಗುತ್ತೆ.. ಆ ಕನಸುಗಳೆಲ್ಲ ನನಸಾಗಲಿ ಎಂದು ಹಾರೈಸುತ್ತೇನೆ.. ಅಲ್ಲಿ ನೋಡು ಆ ವಾನರರು ಒಂದು ಕಲ್ಲನ್ನು ರಾಮ ಎಂದು ಹೇಳಿ ನೀರಿಗೆ ಹಾಕಿದರೆ ತೇಲುತ್ತದೆ.. ಹಾಗೆಯೇ ನಗು ನಗುತ್ತಾ ಬಂದ ಜೀವನವನ್ನು ಸ್ವೀಕರಿಸಿ.. ಅಣ್ಣಾವ್ರ "ನಗುತಾ ನಲಿ ನಲಿ ಏನೇ ಆಗಲಿ" ಹಾಡಿನಂತೆ ಇದ್ದರೇ ಜೀವನದ ಹಾದಿ ಮಂಜಿನ ಹನಿಗಳನ್ನು ಹೊದ್ದು ಮಲಗಿರುವ ಹೂವಿನ ಹಾದಿಯಂತೆ ಇರುತ್ತದೆ" 

"ಹೌದು ಜಾಂಬುವಂತ.. ಆ ಪುಟ್ಟಿಗೆ ಸುಮಧುರ ಶುಭಾಶಯಗಳನ್ನು ಹೇಳುತ್ತಲೇ.. ಆ ಮಗುವಿನ ಆಸೆ ಆಕಾಂಕ್ಷೆ, ಗುರಿ ಎಲ್ಲವೂ  ಶ್ರೀ ರಾಮನ ಬಾಣದಂತೆ ಸರಿಯಾದ ಗುರಿ ಸೇರಲಿ ಎಂದು ಹಾರೈಸೋಣ.. ಪುಟ್ಟಿ ಸುಷ್ಮಾ ಹುಟ್ಟು ಹಬ್ಬದ ಶುಭಾಶಯಗಳು... "
***********
ಇದೀಗ ಬಂದ ಸುದ್ದಿ.. ಸುಷ್ಮಾ ಪುಟ್ಟಿ ಈ ಲೇಖನ ಓದಿದ ಮೇಲೆ ಜೋರಾಗಿ ನಕ್ಕಿದ್ದನ್ನ ಕೇಳಿದ ರಾಮನಗರದ ಹಾದಿಯಲ್ಲಿರುವ ಕೆಂಗಲ್ ಹನುಮಂತರಾಯ ಒಮ್ಮೆ ಜೋರಾಗಿ ನಕ್ಕನಂತೆ ಹಾಗೂ ಆಶೀರ್ವಾದವಾಗಿ ಒಮ್ಮೆ ಕೆಂಗಲ್ ನಲ್ಲಿನ ಹನುಮಂತನ ದೇವಸ್ಥಾನಕ್ಕೆ ಭೇಟಿ ನೀಡಬೇಕು ಎಂದು ಆದೇಶಪೂರ್ವಕವಾಗಿ ಆಶೀರ್ವಾದ ನೀಡಿದನಂತೆ!!!!!

Thursday, July 11, 2013

ಸಡಗರದಿಂದಾ ಗಗನದ ಅಂಚಿಂದ........!

ಭಕ್ತ ಅಂಬರೀಷ ತನ್ನ ರಾಜ್ಯದ ಹಿತಕ್ಕಾಗಿ ಮಳೆಯಿಲ್ಲದೆ ಬೆಂಡಾಗಿದ್ದ ಇಳೆಯನ್ನು ತಣಿಸುವುದಕ್ಕಾಗಿ, ಮಳೆಯನ್ನು ಸುರಿಸಲು ಇಂದ್ರಾದಿದೇವತೆಗಳಿಗೆ ಮೊರೆ ಹೊಕ್ಕು ಬೃಹತ್ ಯಜ್ಞವನ್ನು ಕೈಗೊಂಡಿದ್ದ.. ವರುಣ ದೇವನನ್ನು ತೃಪ್ತಿ ಪಡಿಸಲು ಯಜ್ಞದ ಹವ್ವಿಸ್ಸಿನ ಜೊತೆಯಲ್ಲಿ ಮಂತ್ರಗಳು, ಶ್ಲೋಕಗಳು, ಹಾಡುಗಳು ಎಲ್ಲವೂ ಮೇಳೈಸಿದ್ದವು....

ಯಜ್ಞ ಕುಂಡದಲ್ಲಿ ಅಗ್ನಿ ದೇವ ಪ್ರತ್ಯಕ್ಷನಾಗಿದ್ದ.. ತುಪ್ಪ, ಸಮಿತ್ತುಗಳು ಹೇರಳವಾಗಿ ಗಾಡಿಗಟ್ಟಲೆ ಕುಂಡದ ಸುತ್ತಾ ರಾಶಿ ಬಿದ್ದಿದ್ದವು .. ಹೋತ್ರಿಗಳು ಭಕ್ತಿ ಪರವಶರಾಗಿ  ಮಂತ್ರಗಳನ್ನು ಪಠಣ ಮಾಡುತ್ತಿದ್ದರು. ವೇದಮಂತ್ರಗಳ ಘೋಷಗಳು  ಅಂಬರ ಮುಟ್ಟುತ್ತಿತ್ತು..

ಯಾಗ ಮಾಡುತ್ತಲೇ ಭಕ್ತ ಅಂಬರೀಷ ದೇವತೆಗಳನ್ನು ಮೆಚ್ಚಿಸಲು ಅನೇಕ ಪದ್ಯಗಳನ್ನು, ಸುಂದರ ಕವನಗಳನ್ನು ಹಾಡಲು ಶುರುಮಾಡಿದ ...

"ಸ್ವರಗಳ ಮಾಧುರ್ಯ ರಾಗದ ಸೌಂದರ್ಯ
ಮೃಗಗಳ ತಣಿಸೆ ಖಗಗಳ ಕುಣಿಸೆ
ಸಡಗರದಿಂದಾ ಗಗನದ ಅಂಚಿಂದ
ಆ….ಆ….ಆ….ಆ…
ಸಡಗರದಿಂದಾ ಗಗನದ ಅಂಚಿಂದ
ಸುರರು ಬಂದು ಹರಿಯ ಕಂಡು ಹರುಷದಿ
ಭುವಿಯೆ ಸ್ವರ್ಗ ಭುವಿಯೆ ಸ್ವರ್ಗ ಎನುತಿರಲು
ನಾದಮಯ ಈ ಲೋಕವೆಲ್ಲಾ"

ಹಾಡಿನ ಗಾಯನ, ಪದಗಳ ಜೋಡಣೆ, ರಾಗ ಎಲ್ಲವೂ ದೇವತೆಗಳನ್ನು ಮಂತ್ರ ಮುಗ್ಧರನ್ನಾಗಿಸಿತು. ಬೇರೆ ದಾರಿ ಕಾಣದೆ ಭುವಿಗಿಳಿದು ಬಂದರು..

"ಭಕ್ತ ಅಂಬರೀಷ.. ನಿನ್ನ ಗಾನ ಸುಧೆ, ನಿನ್ನ ಪರಿಶ್ರಮ, ಯಜ್ಞ ಯಾಗಾದಿಗಳಿಂದ ನಮ್ಮನ್ನು ತೃಪ್ತಿ ಪಡಿಸಿದ್ದೀಯ.. ನಿನಗೆ ಏನು ವರ ಬೇಕೋ ಕೇಳಿಕೋ"

"ದೇವತೆಗಳೇ.. ನಿಮ್ಮ ಆಗಮನದಿಂದ ನನ್ನ ಹಾಗು ನಾಡಿನ ಪ್ರಜೆಗಳ ಜನ್ಮ ಪಾವನವಾಯಿತು .ನನ್ನ ಭಾಗ್ಯ ನಿಮ್ಮನ್ನು ನೋಡಲು ಸಾಧ್ಯವಾಗಿದ್ದು.. ನನ್ನ ಬೇಡಿಕೆಗಳು ಬಹಳ ಸರಳ... ಈ ಯಜ್ಞ ಯಾಗಾದಿಗಳಿಂದ ಸಂತೃಪ್ತರಾಗಿ ವರುಣ ಮಳೆರಾಯನನ್ನು ಖಂಡಿತ ಕಳಿಸುತ್ತಾನೆ.. ಆ ನಂಬಿಕೆ ಇದೆ ಎನಗೆ.. ಅದು ಬಿಟ್ಟು ಬೇರೆ ವರ ಕೇಳಲೇ"

"ಅಗತ್ಯವಾಗಿ ಭಕ್ತ.. ನಿನ್ನ ಭಕ್ತಿಗೆ ಮೆಚ್ಚಿದ್ದೇವೆ ಏನೇ ಕೇಳಿದರೂ ಅದು ಸಿಗುತ್ತದೆ"

"ಮೊದಲನೆಯ ವರ.... ನೋಡಿ ಇದುವರೆವಿಗೂ ನಾ ಹಾಡಿದ ಅನೇಕ ಕವಿತೆಗಳನ್ನು ಬರೆದಿರುವ,  ಭಾರತ ಮಾತೆಯ ಪುಣ್ಯಕ್ಷೇತ್ರದ ಹೆಸರಾದ,  ನಮ್ಮ ಆಸ್ಥಾನ ಕವಿ ಬದರಿನಾಥರ ಮೇಲೆ.... ಶ್ರೀ ಬದರಿನಾಥನ ಅನುಗ್ರಹ ನಮ್ಮ  ಸದಾ ಇರಬೇಕು..  "

"ತಥಾಸ್ತು"

"ಎರಡನೆಯ ವರ.... ಪ್ರತಿವಾರವೂ ಬರೆಯುವ,  ಲೋಕದಲ್ಲಿ ನಡೆಯುವ ಘಟನೆಗಳ,  ಕವಿತೆಗಳು ಎಲ್ಲಾ ಕಡೆಯೂ ಸಿಗುವಂತಾಗಬೇಕು"

"ತಥಾಸ್ತು"

"ಮೂರನೆಯ ವರ....  ಮುದ್ರಣಗೊಂಡ ಇವರ ಕವಿತೆಗಳ ಹೊತ್ತಿಗೆ... ವಿಶ್ವದಗಲಕ್ಕೂ ಪಸರಿಸಿ ಕೊಲ್ಲಾಪುರದಲ್ಲಿ ನೆಲೆಸಿರುವ ಶ್ರೀ ಲಕ್ಷ್ಮಿ ದೇವಿಯೂ ಇವರ ಮನೆಯಲ್ಲಿ ಸದಾ ನಗು ನಗುತ್ತಿರಬೇಕು"

"ತಥಾಸ್ತು.. ಭಕ್ತ ಅಂಬರೀಷ.. ನಿನಗಾಗಿ ನಿನ್ನ ನಾಡಿನ ಜನತೆಗಾಗಿ ಏನು ಕೇಳಲಿಲ್ಲ... ಬದಲಿಗೆ ಸುಂದರ ಮನಸ್ಸಿನ ಬದರಿನಾಥರ ಬಗ್ಗೆ ಎಲ್ಲವನ್ನು ಕೇಳಿದೆ.. ಏನು ಇದಕ್ಕೆ ಕಾರಣ?"

"ದೇವತೆಗಳೇ.. ನನ್ನಿಂದ ನಡೆಸಿದ ಯಜ್ಞ ಯಾಗಾದಿಗಳಿಂದ ತೃಪ್ತಿ ಹೊಂದಿ ನನ್ನ ನಾಡನ್ನು ಪ್ರಜೆಗಳನ್ನು ಹರಸುತ್ತೀರಾ.. ಆ ವಿಷಯ ನಾ ಬಲ್ಲೆ..ಆದರೆ ಇಂತಹ ಒಬ್ಬ ಸಹೃದಯಿ ಗೆಳೆಯನನ್ನು ಹೊಂದಿರುವ ಹದಿನೈದನೆ ಲೋಕ ಬ್ಲಾಗ್ ಲೋಕದಲ್ಲಿ, ವಿಶಿಷ್ಟ ಪ್ರತಿಭೆಯಿಂದ,  ತನ್ನ ಕವಿತೆಗಳ ಮೂಲಕ ಜಗದಗಲ ನಡೆಯುತ್ತಿರುವ ವಿಷಯಗಳನ್ನು ಸುಂದರ ಪದಗಳಲ್ಲಿ ನೇಯ್ದು ಬರೆಯುತ್ತಿರುವ ಕವಿತೆಗಳು ಎಲ್ಲರ ಪ್ರಶಂಸೆಗೆ ಪಾತ್ರವಾಗಿವೆ. ಅದನ್ನು ಎಲ್ಲರೂ ಜತನದಿಂದ ತಮ್ಮ ಬಳಿಯಲ್ಲಿ ಇಟ್ಟುಕೊಳ್ಳಲು ಸದಾ ಓದಲು ಮುದ್ರಣಗೊಂಡ ಪ್ರತಿಗಳ ರೂಪದಲ್ಲಿ ಎಲ್ಲರನ್ನು ಸೇರಬೇಕು ಹಾಗೆಯೇ ಮಹಾವಿಷ್ಣುವಿನ ಹಾಗೂ ಶ್ರೀ ಲಕ್ಷ್ಮಿಯ ಕೃಪೆ ಸದಾ ಇರಬೇಕು.. ಅದಕ್ಕಾಗಿಯೆ ನಮ್ಮ ಆಸ್ಥಾನದ ಕವಿ ಬದರಿನಾಥರ ಬಗ್ಗೆ ವರಗಳನ್ನು ಕೇಳಿದ್ದು"

"ತಥಾಸ್ತು.. ನಿನ್ನ ಮಾತಿಗೆ ಮೆಚ್ಚಿದ್ದೇವೆ.. ಅಂಬರೀಷ ನಿನ್ನ ನಾಡು, ಜನತೆ ಸುಭೀಕ್ಷವಾಗಿರುವುದು ಅಷ್ಟೇ ಅಲ್ಲದೆ ನಿನ್ನ ಎಲ್ಲಾ ಆಸೆ ಆಕಾಂಕ್ಷೆಗಳು ಸಂಪೂರ್ಣವಾಗಿ ನೆರವೇರಲಿ ಹಾಗೆ ಬದರಿನಾಥರ ಎಲ್ಲ ಕವಿತೆಗಳು ಎಲ್ಲರ ಮನೆ ಮನ ಮುಟ್ಟಲಿ ಶ್ರೀ ವಿಷ್ಣುವಿನ ಹಾಗೂ ಮಹಾಲಕ್ಷ್ಮಿಯ ಅನುಗ್ರಹ ಸದಾ ಅವರ ಕುಟುಂಬದ ಮೇಲಿರಲಿ" ಎಂದು ಹೇಳಿ ದೇವತೆಗಳು ಅಂತರ್ದಾನರಾದರು...

ಭಕ್ತ ಅಂಬರೀಷನ ಕಣ್ಣಲ್ಲಿ ಧಾರಾಕಾರವಾಗಿ ಹರಿಯುತಿದ್ದ ಆನಂದ ಭಾಷ್ಪ.. ಪಕ್ಕದಲ್ಲೇ ವಿನೀತರಾಗಿ ನಿಂತಿದ್ದ ಬದರಿನಾಥರು ಸಂತಸದಲ್ಲಿ ಆನಂದಭಾಷ್ಪದ ಮಜ್ಜನದಲ್ಲಿ ತೋಯ್ದು ತೊಪ್ಪೆಯಾಗಿದ್ದರು.

"ಅಂಬರೀಷ ಮಹಾಪ್ರಭು ನಿಮ್ಮ ಆಶೀರ್ವಾದಕ್ಕೆ ನಾ ಏನು ಹೇಳಲಿ... ನಿಮ್ಮ ಒಲುಮೆ ಸದಾ ಹೀಗೆ ಇರಲಿ.. ನನ್ನ ಕವಿತೆಗಳನ್ನು ಓದಿ, ನಲಿದು, ಹಾಡಿ  ಹರಸಿದ್ದೀರ.. ನಿಮ್ಮ ಒಲುಮೆಗೆ ನಾ ಶರಣಾದೆ"

"ಬದರಿನಾಥ.. ನೀವು ಸುಂದರ ಮನದ ಕವಿಗಳು ನಿಮ್ಮ ಒಲುಮೆ, ಗೆಳೆತನ ಬ್ಲಾಗ್ ಲೋಕದ ಒಂದು ಶಕ್ತಿ.. ದೇವತೆಗಳೇ ನಿಮಗೆ ಹರಸಿ ಹೋಗಿದ್ದಾರೆ.. ಇನ್ನು ನಿಮಗೆ ಯಾವ ಆತಂಕವೂ ಇರುವುದಿಲ್ಲ.. ಇಂದಿನ ಹುಟ್ಟು ಹಬ್ಬದ ಸಂಭ್ರಮದಲ್ಲಿ ತೇಲಾಡಿ ಈಜಾಡಿ ಆನಂದಿಸಿ.. ನಿಮ್ಮ ನಗು ಸದಾ ನಿಮ್ಮ ಮುಖದಲ್ಲಿರಲಿ... ಹುಟ್ಟು ಹಬ್ಬದ ಶುಭಾಶಯಗಳು ಬದರಿನಾಥ" ಎಂದು ಮತ್ತೊಮ್ಮೆ ಭಕ್ತ ಅಂಬರೀಷ ಹೇಳಿದಾಗ ಬದರಿನಾಥರ ಮೊಗದಲ್ಲಿ ಹೇಳಲಾರದ ಸಂತಸ ಗಂಗೆಯಾಗಿ ಹೃದಯದ ಲೋಕದಿಂದ ಕಣ್ಣಿನ ಲೋಕದ ಮಾರ್ಗವಾಗಿ ಧರಣಿಗೆ ತಲುಪಿದಳು..

"ಇಂತಹ ಪ್ರಭುಗಳನ್ನು ಪಡೆದ ನಾನೆ ಧನ್ಯ.. ಬ್ಲಾಗ್ ಲೋಕದ ತಾರೆಗಳ ಆಶೀರ್ವಾದದಿಂದ,  ನೀವು ದೇವತೆಗಳಿಂದ ಕರುಣಿಸಿದ ವರದ ಆಶೀರ್ವಾದದ ಬಲದಿಂದ ಇನ್ನಷ್ಟು ಕವನಗಳು ಹೊರಬರಲು ಸಹಾಯವಾಗುತ್ತದೆ... "


"ಬದರಿನಾಥ ಶುಭವಾಗಲಿ.. ನಿಮ್ಮ ಕನಸೆಲ್ಲ ನನಸಾಗಲಿ.. ಮುದ್ರಿತಗೊಂಡ ಒಂದು ಪ್ರತಿಯನ್ನು ಈ ವಿಳಾಸಕ್ಕೆ ತಪ್ಪದೆ ಕಳಿಸಬೇಕು.. ಅಲ್ಲಿಯೇ ನಾ ಕಾಯುತ್ತಿರುವೆ"

"ಭಕ್ತ ಅಂಬರೀಷ"
ಅರಮನೆ ಮನೆ ಸಂಖ್ಯೆ : ಓಂ
ಲೇಖನಗಳ ಮುಖ್ಯ ರಸ್ತೆ
ಕವನಗಳ ಬೀದಿ
ಕಥಾಸಾಗರ
ಬ್ಲಾಗ್ ಲೋಕ
ವಸುಂಧರೆ

"ಖಂಡಿತ ಮಹಾಪ್ರಭು... ಖಂಡಿತ ಕಳಿಸುವೆ.. ಹಾಗೆಯೇ ನನ್ನ ಜನುಮದಿನಕ್ಕೆ ನೀವು ಕರುಣಿಸಿದ ವರದ ಮೂಟೆ ಸಿಹಿಯಾದ ಸಕ್ಕರೆ ಮೂಟೆ... !"

***********************

ಬ್ಲಾಗ್ ಲೋಕದ ಸಮಸ್ತ ಜನತೆಗಳ ಪರವಾಗಿ ಹಬ್ಬದ ಶುಭಾಶಯಗಳು ಬದರಿ ಸರ್.. ನಿಮ್ಮ ಕನಸೆಲ್ಲ ಹಕ್ಕಿಯಾಗಿ ಹಾರಿ ಹೊಸ ಹೊಸ ಕನಸುಗಳ ಜೊತೆ ನನಸಾದ ಸಡಗರ ಸಂಭ್ರಮಗಳನ್ನು ತರಲಿ.. ಶುಭವಾಗಲಿ"

 ಶುಭಮಸ್ತು 

*************************

Monday, June 17, 2013

ಸಾಮೀ ಎದ್ದು ಕೂತವ್ನಂತೆ!!!

ಜನರೆಲ್ಲಾ ಎದ್ದು ಬಿದ್ದು ಓಡುತ್ತಿದ್ದರು.. !

ಇತರರಿಗೆ ಆಶ್ಚರ್ಯವಾಯಿತು... ವೇಗವಾಗಿ ಓಡುತ್ತಿದ್ದ ಒಬ್ಬನನ್ನು ಬಲವಂತವಾಗಿ ಹಿಡಿದು "ಏನಪ್ಪಾ?...  ಏನಾಯ್ತು? ಯಾಕೆ ಹೀಗೆ ದೆವ್ವ ಕಂಡವರ ಹಾಗೆ ಓಡ್ತಾ ಇದ್ದೀರಾ?"  ಅಂತ ಕೇಳಿದ ಒಬ್ಬ. 

ಏದುಸಿರು ಬಿಡುತ್ತಾ "ಸಾಮೀ ಎದ್ದು ಕೂತವ್ನಂತೆ?... ಬಿಡಿ ಸಾಮೀ ನಾನು ಹೋಗ್ಬೇಕು" ಅಂತ ಬಲವಂತವಾಗಿ ಬಿಡಿಸಿಕೊಂಡು ಓಡಲು ಶುರು ಮಾಡಿದ... ಮತ್ತೆ ಅವನ ಹಿಂದೆ ಓಡಿ ಹೋಗಿ ಹಿಡಿದುಕೊಂಡು, 

"ಏನಪ್ಪಾ... ಸರಿಯಾಗಿ ಅರ್ಥವಾಗುವಂತೆ ಕನ್ನಡದಲ್ಲಿ ಹೇಳಬಾರದೇ.. ದಯಮಾಡಿ ಹೇಳಪ್ಪ" ಅಂತ ಅಂಗಲಾಚಿದ,

"ಸಾಮೇ ಬುಡಿ ಸಾಮೇ ನನ್ನ" ಅಂತ ಕೊಸರಾಡಿದ... ಹಿಡಿದವನು ಪಟ್ಟು ಬಿಡಲಿಲ್ಲ.. 

"ಸಾಮಿ.. ನೀವೂ ಬನ್ನಿ ನಾ ಅಲ್ಲಿಗೆ ಹೋಯ್ತಾ ಇವ್ನೀ.. " ಅಂತ ಆತನನ್ನು ಕರೆದೊಯ್ದಾ!

ಎಲ್ಲರೂ ದೇವಸ್ಥಾನದೊಳಗೆ  ಬಂದರು.. ಅಲ್ಲಿನ ಅರ್ಚಕರು ಗಡ ಗಡ ನಡುಗುತ್ತಿದ್ದರು... ಒಮ್ಮೆ ಗರ್ಭ ಗುಡಿಯ ಕಡೆ ನೋಡುತ್ತಾರೆ ಇನ್ನೊಮ್ಮೆ ಜನಗಳ ಕಡೆ ನೋಡುತ್ತಾರೆ.... 

ಅಲ್ಲಿ ನೆರೆದಿದ್ದ ಜನರಿಗೆ ಆಶ್ಚರ್ಯ... ಭಯ... ಎಲ್ಲವೂ ಒಮ್ಮೆಲೇ...! ಏನಾಯ್ತಪ್ಪ? ಅಂತ ಹುಬ್ಬನ್ನು ಮೇಲೆ ಮಾಡಿ ಅರ್ಚಕರಿಗೆ ಕಣ್ಣು ಸನ್ನೆಯಲ್ಲೇ ಕೇಳಿದರು

ಅರ್ಚಕರು ನಡುಗುವ ತನುವಿಂದ.. ಕಣ್ಣನ್ನು ಗರ್ಭಗುಡಿಯ ಕಡೆ ತೋರಿಸಿದರು... 

ಅಲ್ಲಿನ ದೃಶ್ಯ ನೋಡಿ ಜನಗಳ ಕೈಗಳು, ತುಟಿಗಳು, ಕಾಲುಗಳು ನಡುಕ ಹತ್ತಿದವು.. ಇದ್ದದರಲ್ಲಿ ಧೈರ್ಯವಂತರಂತಿದ್ದ  ಒಬ್ಬರು ಗರ್ಭ ಗುಡಿಯ ಒಳಗೆ ಹೋಗಿಯೇ ಬಿಟ್ಟರು.. ಅಲ್ಲಿನ ದೃಶ್ಯ ನೋಡಿ ಅವರ ಕಣ್ಣುಗಳು ತುಂಬಿಬಂದವು... 

ಕಣ್ಣನ್ನು ಒರೆಸಿಕೊಂಡು  ನಡುಗುವ ಕೈಗಳಿಂದ ರಂಗನಾಥನಿಗೆ ಸಾಷ್ಟ್ರಾಂಗ ನಮಸ್ಕಾರ ಮಾಡಿ "ದೇವನೇ ಏನಪ್ಪಾ ಇದು ನಿನ್ನ ಲೀಲೆ... ಸನಕ ಸನಂದಾದಿಗಳಿಗೆ ಸಿಕ್ಕದ ಭಾಗ್ಯ ನನಗೆ ಸಿಕ್ಕುವಂತೆ ಮಾಡಿದೆ.. ದೇವನೇ ನಿನ್ನ ಕರುಣೆ ಸದಾ ನಮ್ಮೆಲ್ಲರ ಮೇಲೂ ಇರಲಿ ತಂದೆ" ಎನ್ನುತ್ತಾ ಹೊರಗೆ ಬಂದು.. 

ಅಲ್ಲಿನ ಅರ್ಚಕರನ್ನು ಕರೆದು "ಬನ್ನಿ ಸ್ವಾಮೀ ಒಳಗೆ ಹೋಗಿ ಬನ್ನಿ" ಎಂದರು..  

"ಸರ್ ನೀವು ಬಂದರೆ ಮಾತ್ರ ನಾವು ಒಳಗೆ ಬರುತ್ತೇವೆ... !"ಎಂದರು ಅರ್ಚಕರು.. 

"ಸರಿ ನಡೆಯಿರಿ ಬರುತ್ತೇನೆ" ಎಂದು ಮತ್ತೆ ಗರ್ಭಗುಡಿಯೊಳಗೆ ಬಂದರು

ಅರ್ಚಕರಿಗೆ ಕಣ್ಣ ಮುಂದೆ ನೆಡೆಯುತ್ತಿರುವುದು ನಿಜವೋ...... ಸುಳ್ಳೋ.... ಪವಾಡವೋ...  ತಿಳಿಯುತ್ತಿಲ್ಲ.. ಕಣ್ಣಿನ ಎವೆ ಕೂಡ ಮಿಟುಕಿಸದೆ  ನೋಡುತ್ತಲೇ ಇದ್ದರು.. !

ಧೈರ್ಯವಂತರಾಗಿದ್ದ ಅವರು ಧೈರ್ಯ ಮಾಡಿ ಕೇಳಿಯೇ ಬಿಟ್ಟರು 

"ಏನು ಸ್ವಾಮೀ..ನಿನ್ನ ಲೀಲೆ ...  ಧರೆಗಿಳಿದು ಬಂದ ಕಾರಣ ತಿಳಿಯುತ್ತಿಲ್ಲ...." 

ಪ್ರಸನ್ನ ಚಿತ್ತನಾದ ಶ್ರೀ ರಂಗನಾಥ ಸ್ವಾಮೀ .. ಅಲ್ಲಿಯೇ ಕುಳಿತಿದ್ದ ಶ್ರೀ ಲಕ್ಷ್ಮಿಯ ಕಡೆ ನೋಡಿ ಮುಗುಳು ನಗೆ ಬೀರಿದರು.. 

ಆಗ ಶ್ರೀಲಕ್ಷ್ಮೀ "ಭಕ್ತ.. ಸ್ವಾಮಿಗೆ ಮುಂಜಾನೆ ಏನು ಅನ್ನಿಸಿತೋ ಏನೋ.. ಅಚಾನಕ್ಕಾಗಿ ಶ್ರೀಲಕ್ಷ್ಮಿ ಕಾಲು ಒತ್ತಿದ್ದು ಸಾಕು ಅಲ್ಲಿಯೇ ಇರುವ ಲ್ಯಾಪ್-ಟಾಪ್ ಕೊಡು" ಎಂದರು.. 

ನಾನು ಆಶ್ಚರ್ಯಚಕಿತಳಾಗಿ  "ಯಾಕೆ ಸ್ವಾಮೀ.. ಏನಾಯಿತು ನಾಥ" ಎಂದು ಕೇಳಿದೆ 

ಅದಕ್ಕೆ ಸ್ವಾಮಿಯು "ಲಕ್ಷ್ಮಿ.. ಯಾಕೋ ಮಲಗಿ ಮಲಗಿ ಸಾಕಾಗಿದೆ ಶ್ರೀರಂಗಪಟ್ಟಣದ ಚರಿತ್ರೆಯನ್ನು ಒಮ್ಮೆ ಓದುವ ಆಸೆ ಮೂಡುತ್ತಿದೆ.. ಅದಕ್ಕಾಗಿ  ಲ್ಯಾಪ್-ಟಾಪ್ ಬೇಕು" ಅಂತ ಹೇಳಿದರು 

"ಹೇಗೆ ನೋಡುತ್ತೀರಿ ಸ್ವಾಮಿ" ಎಂದೇ ನಾನು

"ಮೈಸೂರಿನಲ್ಲಿರುವ ನಿಮ್ಮೊಳಗೊಬ್ಬ ಬಾಲೂ ಎನ್ನುವವರು ಶ್ರೀರಂಗಪಟ್ಟಣದ ಕಲ್ಲು ಕಲ್ಲಿನ ಇತಿಹಾಸವನ್ನು ಬಿಡಿಸಿ ಇಟ್ಟಿದ್ದಾರೆ ಅವರ ಕಾವೇರಿ ರಂಗ !!!! ಎನ್ನುವ ಬ್ಲಾಗಿನಲ್ಲಿ... ಶ್ರೀರಂಗಪಟ್ಟಣದ ಅಧಿನಾಯಕನಾದ ನನ್ನ ಚರಿತೆ.. ನನ್ನ ನೆಲವನ್ನು ಸುತ್ತುವರೆದಿರುವ ಕಾವೇರಿ ಮಾತೆಯ ಇತಿಹಾಸ.. ಈ ಕ್ಷೇತ್ರದ ಸ್ಥಳ ಪುರಾಣ.. ಇಲ್ಲಿ ಆಳಿದ ರಾಜ ಮಹಾರಾಜರ ಚರಿತ್ರೆ.. ನನ್ನ ಮಡದಿ ಭೂದೇವಿಯಲ್ಲಿ ಅಡಗಿರುವ  ವಿಸ್ಮಯಗಳು ಎಲ್ಲವೂ ಈ ಬ್ಲಾಗಿನಲ್ಲಿ ಅನಾವರಣಗೊಂಡಿದೆ.. ವಿದೇಶದಿಂದ ಬಂದಿದ್ದ ಮಹಿಳೆಯೊಬ್ಬರಿಗೆ ಈ ಪ್ರದೇಶದ ಇತಿಹಾಸವನ್ನು ಮಕ್ಕಳಿಗೆ ಹೇಳುವಂತೆ ವರ್ಣಿಸಿರುವ ಅವರ ಬರಹದ ಮಹತ್ವ..  ಓದಿಯೇ ತಿಳಿಯಬೇಕು.. ನನ್ನ ಆಶೀರ್ವಾದದ ಬಲದಿಂದ ಈ ಕಾವೇರಿ-ರಂಗನ ಇತಿಹಾಸ ಮುದ್ರಣ ರೂಪದಲ್ಲಿ ಬಂದು ಸಮಸ್ತ ಕುಲಕೋಟಿಗೂ ತಲುಪುವಂತೆ ಆಗುತ್ತದೆ.."

ಬಾಲೂ ಸರ್ ಅವರ ಕಾವೇರಿ-ರಂಗ ಬ್ಲಾಗಿನ ಕೊಂಡಿ http://shwethadri.blogspot.in/
"ಒಹ್.. ಹೌದಾ ಸ್ವಾಮೀ ನಿಮ್ಮ ಮಾತುಗಳನ್ನ ಕೇಳಿ ಕ್ಷೀರಸಾಗರದ ಕ್ಷೀರವನ್ನು ಕುಡಿದಷ್ಟೇ ಸಂತಸವಾಗುತ್ತಿದೆ.. ಅಂದ ಹಾಗೆ ಬೆಳಿಗ್ಗೆ ದಿನಸೂಚಿ ನೋಡಿದೆ.. ಇಂದು ಆ ಮಹನೀಯರ ಹುಟ್ಟು ಹಬ್ಬ ಅಲ್ಲವೇ ಸ್ವಾಮೀ?"

"ಹೌದು ಲಕ್ಷ್ಮಿ.. ಅದಕ್ಕಾಗಿಯೆ ಆ ಭಕ್ತನ ನೋಡಲು ನಾನು ಇಂದು ಎದ್ದು ಕೂತಿದ್ದು.. ನೋಡು ಗರ್ಭಗುಡಿಯ ಒಳಗೆ ಧೈರ್ಯ ಮಾಡಿ ಬಂದ ಇವರೇ ಅವರು ... ಮೈಸೂರು ಪ್ರಾಂತ್ಯದ  ತನ್ನ ಗೆಳೆಯರ ಬಳಗದಲ್ಲಿ ಬಾಲೂ ಸರ್.. ಬಾಲಣ್ಣ ಎಂದು ಖ್ಯಾತಿಯಾಗಿರುವ  ಬಾಲಸುಬ್ರಮಣ್ಯ... ಎಲ್ಲರೊಳಗೊಬ್ಬ ಸುಂದರ ಜೀವಿ ಈ ಬಾಲೂ!"

ನಮ್ಮ ಹೆಮ್ಮೆಯ ನಲ್ಮೆಯ ಬಾಲೂ ಸರ್  (ಚಿತ್ರ ಕೃಪೆ - ಪ್ರಕಾಶ ಹೆಗಡೆ)
"ಭಕ್ತ ಇಂದಿನ ನಿಮ್ಮ ಹುಟ್ಟು ಹಬ್ಬಕ್ಕೆ ನಾವಿಬ್ಬರು ನಿಮ್ಮ ಕಾವೇರಿ-ರಂಗ ಬ್ಲಾಗನ್ನು ಓದಿ ಸಂತೋಷಿಸಿದ್ದೇವೆ.. ಆದಷ್ಟು ಬೇಗ ಇದು ಮುದ್ರಣ ರೂಪದಲ್ಲಿ ಮೂಡಿಬರಲೆಂದು ಆಶೀರ್ವದಿಸುತ್ತಾ... ಹಾಗೆಯೇ ಆಯಸ್ಸು, ಆರೋಗ್ಯ,  ಗೆಳೆಯರ ಪ್ರೀತಿ, ವಿಶ್ವಾಸ ,ಐಶ್ವರ್ಯ,  ಕುಟುಂಬದ ಸೌಖ್ಯ ಎಲ್ಲವೂ ಇರುವುದಕ್ಕಿಂತ ಹೆಚ್ಚಿಗೆ ಸಿಗಲಿ ಎಂದು ಹಾರೈಸುವೆ"  ಎಂದಾನಾ ದೇವಾದಿದೇವ!

ದಾರಿಯ  ಮಾಡಿ ಗರ್ಭ ಗುಡಿಯೊಳಗೆ ಬಂದಿದ್ದ ಬಾಲೂ ಸರ್ ಕಂಗಳನ್ನು ತುಂಬಿಕೊಂಡು.. ದೇವ ಕೃತಾರ್ಥನಾದೆ.. ನಿಮ್ಮ ಈ ಆಶೀರ್ವಾದ ನನಗೆ ಸಹಸ್ರ ಆನೆಬಲ ತಂದಿದೆ.. ಖಂಡಿತ ನಿಮ್ಮ ಹಾರೈಕೆಯಂತೆ ಕಾವೇರಿ ರಂಗನ ಮೊದಲ ಪ್ರತಿಯನ್ನು ನಿಮಗೆ ಅರ್ಪಿಸುತ್ತೇನೆ " ಎಂದು ಸಾಷ್ಟ್ರಂಗ ಪ್ರಣಾಮ ಮಾಡಿದರು.

ಬಾಲೂ ಸರ್ ಇಂತಹ ಶ್ರೀರಂಗಪಟ್ಟಣದ ಉತ್ಕೃಷ್ಠ ಇತಿಹಾಸದ ಪುಟಗಳನ್ನೂ ನಮಗೆ ಪರಿಚಯಿಸಿರುವ.... ಹಾಗೆಯೇ ಅನೇಕ ಪ್ರೇಕ್ಷಣೀಯ ಸ್ಥಳಗಳ ಬಗ್ಗೆ ಪರಿಚಯ ಮಾಡಿಕೊಟ್ಟಿರುವ ನಿಮಗೆ ಹುಟ್ಟು ಹಬ್ಬದ ಶುಭಾಶಯಗಳು.. ನಿಮ್ಮನ್ನು ಗೆಳೆಯರನ್ನಾಗಿ ಪಡೆದ ನಾವೇ ಭಾಗ್ಯವಂತರು ....!

ಹುಟ್ಟು ಹಬ್ಬದ ಶುಭಕಾಮನೆಗಳೊಂದಿಗೆ ಬ್ಲಾಗ್ ಹಾಗು ಫೇಸ್ ಬುಕ್ ಬಳಗ ನಿಮಗೆ ಶುಭಾಶಯಗಳನ್ನು ಕೋರಿ ಅಭಿನಂದಿಸುತ್ತದೆ!!!