ಜೀವ ಸ್ವರವೇ.. ಅಲ್ಲ ಅಲ್ಲ.. ಇವರಿಬ್ಬರಿಗೂ ಮತ್ತು ಇವರ ತಂಡಕ್ಕೆ ಸ್ವರಗಳೇ ಜೀವ.. ಜೀವಸ್ವರದ ಇನ್ನೊಂದು ಕಾರ್ಯಕ್ರಮ ಮತ್ತೊಂದು ಮಧುರ ಲಹರಿ ಮನದಲ್ಲಿ ಮನೆಮಾಡಿತು..
ಮಹೇಶ್ ಅವರ ಗೋಡೆಯಿಂದ ಕದ್ದದ್ದು.. |
ಎರಡು ವರ್ಷಗಳ ಗೆಳೆತನ ಮಹೇಶ್ ಅವರ ಸಿಹಿ ಒತ್ತಾಯ ಪೂರ್ವಕ ಆಗ್ರಹಕ್ಕೆ ಮನವು ಸಜ್ಜಾಗಿತ್ತು.. ಮಹೇಶ್ ಅವರ ಕಾರ್ಯಕ್ರಮವನ್ನು ಪರಿಚಯಿಸಿದ್ದ ಗುರು ಪ್ರಸಾದ್ ಅವರನ್ನು ಕರೆದುಕೊಂಡು ಹೊರಟ ನನ್ನ ಸಾರಥಿ ನಿಂತದ್ದು ಚಿತ್ರಕೂಟ ಶಾಲೆಯ ವಾಹನ ನಿಲ್ದಾಣದಲ್ಲಿ.. ಗುರು ಪ್ರಸಾದ್ ಅವರಿಗೆ ಮತ್ತೊಮ್ಮೆ ಅಭಾರಿ.. ಇಂತಹ ಸುಮಧುರ ಸಂಗೀತ ಮಾಂತ್ರಿಕರನ್ನು ಪರಿಚಯಿಸಿದ್ದಕ್ಕೆ..
ಒಳಗೆ ಕಾಲಿಟ್ಟರೆ ..ತುಂಬಿ ತುಳುಕುತಿದ್ದ ಸಭಾಂಗಣ.. ಶಾಲೆಯ ವಿದ್ಯಾರ್ಥಿಗಳ ಪೋಷಕರು, ಶಾಲೆಯ ಸಿಬ್ಬಂದಿ.. ಮಹೇಶ್ ಮತ್ತು ಸಹಗಾಯಕರ ಅಭಿಮಾನಿಗಳು, ಜೀವಸ್ವರವನ್ನು ಜೀವದ ಸ್ವರವಾಗಿ ಹಿಂಬಾಲಿಸುತ್ತಿರುವ ಕಲಾರಸಿಕರು.. ಇವರ ಜೊತೆಯಲ್ಲಿ.. ಆರೋಗ್ಯವೇ ಭಾಗ್ಯ ಅದೇ ನಮ್ಮ ಗುಟ್ಟು ಎನ್ನುವ ಜೀಲ್ ತಂಡದ ಸದಸ್ಯರು..
ಡಬಲ್ ಧಮಾಕ ಇತ್ತು ಈ ಕಾರ್ಯಕ್ರಮದಲ್ಲಿ.. ಹದಿನೈದು ವಸಂತಗಳ ಸಂಭ್ರಮದಲ್ಲಿ ಚಿತ್ರಕೂಟ ಶಾಲೆ ಮೀಯುತ್ತಿದ್ದರೆ.. ಶರೀರವನ್ನು ಧೃಡವಾಗಿ ಇಟ್ಟುಕೊಳ್ಳುವಲ್ಲಿ ಸಹಾಯ ಮಾಡುತ್ತಿರುವ ಜೀಲ್ ತಂಡ ತನ್ನ ಮೂರನೇ ವರ್ಷವನ್ನು ಸಂಭ್ರಮಿಸುತ್ತಿತ್ತು..
ಜೀಲ್ ತಂಡ ಸಭಾಂಗಣದಲ್ಲಿದ್ದವರನ್ನು ಉತ್ತೇಜಿಸುವುದಕ್ಕಾಗಿ ಟೈರನ್ನು ತಂದು ಅದನ್ನು ಎತ್ತಿಸುವ ಸ್ಪರ್ಧೆ ಮಾಡಿದರು.. ಬಂದವರು ಆರಾಮಾಗಿ ಎತ್ತಿದ್ದು.. ಮತ್ತು ಜೀಲ್ ತಂಡದ ಪ್ರತಿಯೊಬ್ಬರೂ ಸ್ಪರ್ಧಾಳುಗಳನ್ನು ಹುರುದುಂಬಿಸಿದ್ದು ಖುಷಿಯಾಯಿತು..
ಈ ವೇದಿಕೆಯಲ್ಲಿ ಮುಂದೆ ನೆಡೆದದ್ದು ಹಾಡುಗಳ ಜಾತ್ರೆ.. ಈ ಕಾರ್ಯಕ್ರಮವನ್ನು ಸವಿಯುತ್ತಾ ಕಾರ್ಯಕ್ರಮ ಮುಗಿಯುವ ತನಕ ಆಸನದಿಂದ ಏಳದಂತೆ ಕೂರಿಸಿದ್ದು ಜೀವಸ್ವರದ ತಾಕತ್ತು ಮತ್ತು ಜೀವ ತುಂಬಿ ನುಡಿಸುವ ಪ್ರತಿಭೆಯ ಸಂಗೀತ ವಾದ್ಯ ಗೋಷ್ಠಿ..
ಇಡೀ ತಂಡಕ್ಕೆ ಅಭಿನಂದನೆಗಳು.. ಹಾಗೂ ಇಂಥಹ ಕಾರ್ಯಕ್ರಮವನ್ನು ಆಯೋಜಿಸಿರುವ ಚಿತ್ರಕೂಟ ಶಾಲೆಯ ತಂಡಕ್ಕೆ ಅಭಿನಂದನೆಗಳು ಹಾಗೂ ಧನ್ಯವಾದಗಳು..
****
ಜೀವನದಲ್ಲಿ ಕಠಿಣವಾದ ಹಾದಿ ತುಳಿದು ಬಂದಿದ್ದ ನಂದನ್ ಕಾರ್ಯಕ್ರಮಕ್ಕೆ ಬಂದಿದ್ದ.. ಮನಸ್ಸು ಗೊಂದಲದ ಗೂಡಾಗಿತ್ತು.. ಬೇಸರದಿಂದ ಕುಸಿದಿದ್ದ ನಂದನ್.. ಸ್ವಲ್ಪ ತನಗೆ ತಾನೇ ಸಮಯ ಕೊಟ್ಟುಕೊಂಡು ಮನಸ್ಸಿಗೆ ಕೊಂಚ ವಿಶ್ರಾಂತಿ ಕೊಡಲು ಜೀವ ಸ್ವರದ ಕಾರ್ಯಕ್ರಮಕ್ಕೆ ಬಂದಿದ್ದ..
ತನ್ನ ಪಾಡಿಗೆ ತಾನು ಹಿಂದಿನ ಸಾಲಿನಲ್ಲಿ ಕೂತು ಕಾರ್ಯಕ್ರಮ ನೋಡಲು ಯೋಚಿಸಿದ್ದ.. ಕಾಡುವ ಮೊಬೈಲನ್ನು ಆಫ್ ಮಾಡಿ ತನ್ನ ಕಾರಿನಲ್ಲಿ ಒಗೆದು ಬಂದಿದ್ದ..
ಮಹೇಶ್ ಸೊಗಸಾದ ಧ್ವನಿಯಲ್ಲಿ ಎಲ್ಲರನ್ನು ಪರಿಚಯಿಸಿ.. ಕೃತಜ್ಞತಾ ಪೂರ್ವಕವಾಗಿ ಎಲ್ಲರಿಗೂ ಧನ್ಯವಾದಗಳನ್ನು ತಿಳಿಸಿ.. ಕಾರ್ಯಕ್ರಮವನ್ನು ಶುರು ಮಾಡಿದರು..
ಮಹಿಳೆಯರಿಗೆ ಮೊದಲ ಅವಕಾಶ ಎಂದು.. "ತೆರೆದಿದೆ ಮನೆ ಓ ಬಾ ಅತಿಥಿ" ಹಾಡು ಶುರುವಾಯಿತು.... ಹಾಡು ಕೇಳುತ್ತಾ ಹಾಗೆ ಮೈ ಮರೆತಿದ್ದ ನಂದನ್ ಗೆ ಒಂದು ಕೋಗಿಲೆ ದನಿ ಕೇಳಿದ ಅನುಭವ.. ಕಿವಿಗೆ ದೊಡ್ಡ ಇಯರ್ ರಿಂಗ್ ಹಾಕಿಕೊಂಡು ಪಿಂಕ್ ಬಣ್ಣದ ಚೂಡಿದಾರ್ ತೊಟ್ಟಿದ್ದ ತರುಣಿ.. "ಸರ್ ಇಲ್ಲಿ ಕೂರಬಹುದೇ.. ಯಾರಾದರೂ ಬರುತ್ತಾರಾ?" ..
"ಇಲ್ಲ ಮೇಡಂ ಯಾರೂ ಇಲ್ಲ ಕೂತುಕೊಳ್ಳಿ" ಎಂದ..
"ಇಲ್ಲ ಮೇಡಂ ಯಾರೂ ಇಲ್ಲ ಕೂತುಕೊಳ್ಳಿ" ಎಂದ..
ಹಾಡು ಇಂಪಾಗಿ ಮೂಡಿ ಬರುತಿತ್ತು.. ಬೆಳಕು ಕಣ್ಣು ಮುಚ್ಚಾಲೆ ಆಡುತ್ತಿತ್ತು.. ಅಲ್ಪ ಸ್ವಲ್ಪ ಬೆಳಕಲ್ಲಿ ಆ ತರುಣಿಯನ್ನೊಮ್ಮೆ ನೋಡಿದ.. ಮುದ್ದಾದ ಮೊಗ.. ಪುಟ್ಟ ಬೈತಲೆ.. ಕಣ್ಣುಗಳು ಕಾಡುವಂತಿತ್ತು.. ಅಲ್ಲಿದ್ದ ಯಾರೋ ತನ್ನ ಗೆಳತಿಗೆ ಒಮ್ಮೆ ಒಂದು ನಗುಕೊಟ್ಟಳು .. ಆ ನಗುವನ್ನು ಆ ಅರೆ ಬರೇ ಕತ್ತಲೆಯಲ್ಲೂ ಗುರುತಿಸುವಂತಿತ್ತು.. ಯಾಕೋ ಇದ್ದಕಿದ್ದ ಹಾಗೆ ನಂದನ್ ತುಸು ಗಮನಿಸತೊಡಗಿದ..
ಹಾಡು ಮುಗಿದಾಗ ಜೋರಾದ ಚಪ್ಪಾಳೆ ಬಿದ್ದಾಗ ಮತ್ತೆ ತನ್ನ ಲೋಕದಿಂದ ಜಾರಿಬಂದ..
ಮಹೇಶ್ ಗಾಯಕಿಯರಿಗೆ ಧನ್ಯವಾದಗಳನ್ನು ಹೇಳುತ್ತಾ ಮುಂದಿನ ಹಾಡು ಎಂದು ಹೇಳುತ್ತಿದ್ದರು..
ಇತ್ತ ನಂದನ್ ಗೆ ಈ ತರುಣಿಯ ಧ್ವನಿ ಕೇಳುವ ಆಸೆ ಇತ್ತು.. ವೇದಿಕೆಯಲ್ಲಿ "ಬೋಲೇ ರೇ ಪಪಿ.. ಪಪಿಹರ.. " ಹಾಡಿನಂತೆ.. ಈ ತರುಣಿಯ ಧ್ವನಿಯೂ ಕೋಗಿಲೆಯ ಧ್ವನಿಯಂತೆ.. ಮೆಲುದನಿಯಲ್ಲಿ ಮೊಬೈಲಿನಲ್ಲಿ ಯಾರಿಗೂ ಹೇಳುತ್ತಿದ್ದಳು.. ಅವಳು ಏನು ಹೇಳಿದಳು ಎನ್ನುವುದಕ್ಕಿಂತ.. ಆ ದನಿ ಕೇಳುವುದರಲ್ಲಿಯೇ ಮೈ ಮರೆತಿದ್ದ ನಂದನ್..
ಮನದಲ್ಲಿಯೇ.. "ಚುರಾಲಿಯ ಹೇ ತುಮ್ ನೇ ಜೋ ದಿಲ್ ಕೋ ನಜರ್ ನಹಿ ಚುರಾನ ಸನಮ್" ಹಾಡಿಕೊಂಡು.. ಯಾಕೋ ಆ ಹುಡುಗಿಯ ಕಡೆಗೆ ತಿರುಗಿದ.. ಸಂಪಿಗೆ ಮೂಗು.. ಅದಕ್ಕೆ ಒಪ್ಪುವ ಹರಳಿನ ಹೊಳೆಯುವ ಮೂಗುತಿ.. ನಿಜಕ್ಕೂ ನಂದನ್ ಮನಸ್ಸನ್ನು ಗೆಲ್ಲುವತ್ತಾ ಹೆಜ್ಜೆ ಹಾಕುತ್ತಿದ್ದಳು ಆ ತರುಣಿ.. ಅವಳ ಬಗ್ಗೆ ಇವನಿಗೆ ಗೊತ್ತಿಲ್ಲ.. ಇವನ ಬಗ್ಗೆ ಅವಳಿಗೆ ಗೊತ್ತಿಲ್ಲ..
ಅತ್ತ.. ರೇವತಿ ಅವತ್ತು ತಾನೇ ವಿಚ್ಚೇದನದ ಒಪ್ಪಿಗೆ ಪತ್ರ ಕೈಗೆ ಸಿಕ್ಕಿತ್ತು.. ಬಿಡುಗಡೆಯಾಗಿತ್ತು ಮನಸ್ಸು.. ಯಾವ ಬಂಧನವೂ ಇಲ್ಲ ಎಂದು ಮನಸ್ಸು ಹಗುರಾಗಿತ್ತು.. ತನ್ನ ಫೇಸ್ಬುಕ್ ಗೆಳತಿ ಈ ಕಾರ್ಯಕ್ರಮದ ಬಗ್ಗೆ ಹೇಳಿದ್ದರಿಂದ.. ಮರು ಮಾತಾಡದೆ ಬಂದಿದ್ದಳು.. ಆದರೆ ತಡವಾಗಿದ್ದರಿಂದ.. ಹಿಂದೆಯೇ ಕುಳಿತುಕೊಳ್ಳಬೇಕಿತ್ತು.. ತುಂಬಿ ತುಳುಕುತ್ತಿದ್ದ ಸಭಾಂಗಣ.. ಆಕೆಯ ಗೆಳತಿ ಮುಂದಿನ ಸಾಲಿನಲ್ಲೆಲ್ಲೋ ಇದ್ದದ್ದರಿಂದ ಅಲ್ಲಿಗೆ ಹೋಗಲು ಸಾಧ್ಯವಾಗದೆ.. ಆಮೇಲೆ ಹೋಗೋಣ ಅಂತ ನಂದನ್ ಪಕ್ಕದಲ್ಲಿಯೇ ಕೂತಿದ್ದಳು..
ಮನಸ್ಸು ಹಕ್ಕಿಯ ಹಾಗೆ ಆಗಿತ್ತು.. "ನನ್ನ ದೈವ ಕಣ್ಣ ಮುಂದಿರೇ.. ಮೌನ ಕೂಡ ಮಾತಾಡಿದೆ" ಈ ಮೌನದಲ್ಲಿಯೂ ಮಾತಾಡುವ ಸಂಗಾತಿಯ ಹುಡುಕಾಟದಲ್ಲಿದ್ದಳು.. ಆಕೆಯ ಗೆಳತೀ ಇದಕ್ಕೆ ಸಹಾಯ ಮಾಡುವುದಾಗಿ ಹೇಳಿದ್ದಳು..
ತನ್ನ ಮನದ ಕದವ ತಟ್ಟಿ "ಛೂಕರ್ ಮೇರೇ ಮನ್ ಕೋ ತೂನೇ ಕಿ ಯೆ ಇಶಾರ" ಎನ್ನುವ ಆ ಹೊಸ ವಸಂತಕ್ಕೆ ಆಕೆಯ ಮನ ಕಾದಿತ್ತು.. ತನ್ನ ಬಾಳಿನಲ್ಲಿ "ಪಂಚವೇದ ಪ್ರೇಮದ ನಾದ" ಕೇಳಬಹುದೇ ಎನ್ನುವ ಆಶಾ ಭಾವನೆ ನಿಧಾನವಾಗಿ ಮುಳುಗುತ್ತಿರುವ ಮನಸ್ಸನ್ನು ತೇಲಿಸುವ ಪ್ರಯತ್ನ ಮಾಡುತಿತ್ತು ..
ತನ್ನ ಕಂಗಳಲ್ಲಿ ಮುದ್ದಾದ ಒಂದು ಕನಸು ಕಾಣುತ್ತಾ "ಸುರು ಮೈ ಅಕ್ಕಿಯೊಮೆ ಏಕ್ ನನ್ಹ ಮುನ್ನ ಸಪುನಾ ದೇ ಜಾರೇ" ಆ ಒಂದು ಕನಸಿಗೆ ಕಾಯುತ್ತಿದ್ದಳು...
ನಂದನ್ ಅವಳನ್ನು ನೋಡುತ್ತಲೇ ಇದ್ದ.. ಮಾತಾಡಿಸಬೇಕು ಎನ್ನುವ ಕಾತುರತೆ.. ಆದರೆ ಮನದಲ್ಲಿ ಹೆದರಿಕೆ.. ಆ ಹೆದರಿಕೆಗೆ ತಕ್ಕಂತೆ "ಬಾಬೂಜಿ ಧೀರೆ ಚಲ್ ನಾ.. ಸಾಮುನೇ ಝರಾ ಸಂಬಲ್ನ" ಹಾಡು ಬಂದಾಗ.. ಛೆ ಎನ್ನುತ್ತಾ ತನ್ನ ಕುರ್ಚಿಯನ್ನು ಸರಿಯಾಗಿ ಎಳೆದುಕೊಂಡು ಆ ಹುಡುಗಿಯಿಂದ ತುಸು ದೂರ ಕೂತ.. ಆದರೂ ಮನಸ್ಸು ಕೇಳಬೇಕೆ "ಏ ಮೇರಾ ದಿಲ್ ಪ್ಯಾರ್ ಕಾ ದೀವಾನಾ" ಎನ್ನುತ್ತಾ ಮತ್ತೆ ಆಕೆಯ ಕಡೆಗೆ ಸೆಳೆಯುತಿತ್ತು.. ತನ್ನ ಮನಸ್ಸಿಗೆ ಕೇಳುತ್ತಲೇ ಇದ್ದ.. ಯಾಕೋ ಅಷ್ಟು ಸೆಳೆಯುತ್ತಾಳೆ ಆ ಹುಡುಗಿ ಅಂಥದ್ದು ಏನು ಸೆಳೆಯುತ್ತಿದೆ.. ಸ್ವಲ್ಪ ಸಮಾಧಾನ ಮಾಡಿಕೊಳ್ಳಪ್ಪಾ ಎಂದು ತಾನೇ ಮನಸ್ಸನ್ನು ಒಮ್ಮೆ ತಟ್ಟಿಕೊಂಡ..
ಮನಸ್ಸು ಹೇಳಿತು.. "ಲೋ ಮಂಗ್ಯಾ ನಂದನ್.. ಗುಲಾಬಿ ಆಂಕೆ..ಕಣೋ ಅದೇ ನಿನ್ನ ಸೆಳೆಯುತ್ತಿರುವುದು.. ಆರಾಮಾಗಿ ಇರು.. ಎಲ್ಲವೂ ಸರಿಯಾಗುತ್ತೆ.. " ಎಂದರೂ ಮನಸ್ಸು ತಡೆಯುತ್ತಲೇ ಇರಲಿಲ್ಲ..
"ಕಾಣದ ಕಡಲಿಗೆ ಹಂಬಲಿಸಿದೆ ಮನ" ಎನ್ನುವ ಗೊಂದಲ ರೇವತಿಗೆ ಕಾದಿದ್ದರೂ.. ಆಕೆಗೆ ಅವಳ ಗೆಳತಿಯಲ್ಲಿ ಏನೋ ಒಂದು ವಿಚಿತ್ರ ನಂಬಿಕೆ.. ಆಕೆ ತನ್ನ ಜೀವನವನ್ನು ಸರಿ ದಾರಿಗೆ ತರುತ್ತಾಳೆ ಎನ್ನುವ ನಂಬಿಕೆ.. ಹಾಗಾಗಿ ನಂದನ್ ತನ್ನನ್ನು ಗಮನಿಸುತ್ತಿದ್ದರೂ ಆಕೆಗೆ ಅದರ ಬಗ್ಗೆ ಕುತೂಹಲವಿರಲಿಲ್ಲ..ಅದರ ಕಡೆಗೆ ಗಮನವಿರಲಿಲ್ಲ.. ಆಕೆಯ ಮನದಲ್ಲಿ ಓಡುತ್ತಿದ್ದದ್ದು ಒಂದೇ.. "ಒಲುಮೆ ಪೂಜೆಗೆಂದೇ.. ಕರೆಯ ಕೇಳಿ ಬಂದೆ" ಎನ್ನುವ ಒಂದು ಹೃದಯದ ಕೂಗು..
ತನ್ನ ಹಣಕಾಸಿನ ಪರಿಸ್ಥಿತಿಯನ್ನು ಒಂದು ಹಂತಕ್ಕೆ ತರುವ ಹೊಣೆ ನಂದನ್ ಮೇಲೆ ಇತ್ತು.. ಬದುಕಿನಲ್ಲಿ ಸಿಕ್ಕ ತಿರುವು ಅವನನ್ನು ಹಿಂಡಿ ಹಿಪ್ಪೆ ಮಾಡಿತ್ತು.. ಉಳಿಸಿದ್ದು ಗಳಿಸಿದ್ದು ಎಲ್ಲವೂ ದಿನಕರನ ತಾಪಕ್ಕೆ ಸಿಕ್ಕ ಮಂಜಿನ ಗೆಡ್ಡೆಯಾಗಿತ್ತು.. ಹಾಗಾಗಿ ಜೀವನವನ್ನು ಮತ್ತೆ ತಿರುಗಿಸಬೇಕಾದ ಅವಶ್ಯಕತೆ ಇತ್ತು.. ಮನದಲ್ಲಿ ಆ ಕಾಂಚಾಣದ ಬಗ್ಗೆ ಯೋಚಿಸುತ್ತಲೇ ಬೇಂದ್ರೆ ಅಜ್ಜನ "ಕುರುಡು ಕಾಂಚಾಣ" ಪದ್ಯ ಶಾಲೆಯಲ್ಲಿ ಓದಿದ್ದು ನೆನಪಿಗೆ ಬಂದು.. ಹಾಗೆ ತುಟಿಯಲ್ಲಿ ಒಂದು ಮಂದಹಾಸ ಸುಳಿದು. ತನ್ನಷ್ಟಕ್ಕೆ ತಾನೇ ನಕ್ಕು.. ಪಕ್ಕದ ಸೀಟಿನ ಮೇಲೆ ಅರಿಯದೆ ತನ್ನ ಕೈಯನ್ನು ಚಾಚಿದ.. ಅವನಿಗರಿವಿಲ್ಲದೆ.. ಅವನ ಕೈ.. ರೇವತಿಯ ಭುಜದ ಸುತ್ತಾ ಬಳಸಿತ್ತು.
ಅಚಾನಕ್ ಕೈ ಸ್ಪರ್ಶವಾದದ್ದಕ್ಕೆ ಗಾಬರಿ ಬಿದ್ದು.. ರೇವತಿ ತಿರುಗಿ ನೋಡಿದಾಗ.. ಕಂಡದ್ದು ನಂದನ್ ರೂಪ..
"ಸಾರಿ ಮೇಡಂ.. ಬೇಕು ಅಂತ ಮಾಡಲಿಲ್ಲ.. ಗೊತ್ತಾಗಲಿಲ್ಲ ಕ್ಷಮಿಸಿ.. ಸಾರಿ.. ಸಾರಿ "
"ಸರ್ ಪರವಾಗಿಲ್ಲ.. its ok.. dont worry" ಎಂದು heart stopping smile ಕೊಟ್ಟಳು ರೇವತಿ.. ಮತ್ತೆ
ಮೆಲ್ಲನೆ ಅವನ ಕಡೆ ನೋಡಿದಾಗ ಏನೋ ಒಂದು ರೀತಿಯ ಸೆಳೆಯುವ ವ್ಯಕ್ತಿತ್ವ ಈತನಲ್ಲಿದೆ ಅನಿಸಿತು.. ಸಾಮಾನ್ಯ ಯಾರಾದರೂ ಗೊತ್ತಿದ್ದೋ ಗೊತ್ತಿಲದೆಯೋ ತನ್ನನ್ನು ಮುಟ್ಟಿದರೆ ದುರ್ಗಿಯ ಅವತಾರ ತಾಳುತಿದ್ದ ರೇವತಿ ಸಂಯಮದಲ್ಲಿದ್ದದ್ದು ಅವಳಿಗೆ ಅಚ್ಚರಿ ತಂದಿತ್ತು..
ತುಸು ಶಾಮಲ ವರ್ಣವಾದರೂ ಏನೋ ಪಾಸಿಟಿವ್ ವೈಬ್ಸ್.. ಇದೆ ಅನಿಸಿತ್ತು ಅವಳಿಗೆ.. ಮತ್ತೆ ಕ್ಷಮೆ ಕೇಳಿ ಎರಡೆರಡು ಬಾರಿ ಸಾರಿ ಹೇಳಿ... ಕುರ್ಚಿಯನ್ನು ತನ್ನಿಂದ ತುಸು ದೂರದಲ್ಲಿ ಜರುಗಿಸಿಕೊಂಡದ್ದು.. ಅರಿಯದೆ ಆ ವ್ಯಕ್ತಿಯ ಬಗ್ಗೆ ಒಂದು ರೀತಿಯ ಗೌರವ ಮೂಡಿತು.. ಅದೇ ಗುಂಗಿನಲ್ಲಿ ಹಾಡು ಕೇಳುತ್ತಿದ್ದಳು.. ಮನದಲ್ಲಿ "ಒಲುಮೆ ಪೂಜೆಗೆಂದೇ" ಹಾಡು ಮಾರ್ದನಿಯುತಿತ್ತು..
ಆ ನಗುವನ್ನು ನೋಡುತ್ತಲೇ.. "ನಗುವ ನೀನು ಮಿಂಚಂತೆ.. ಗೀತಾ ಸಂಗೀತಾ" ಹಾಡು ನೆನಪಿಗೆ ಬಂತು ..
ಕಾರ್ಯಕ್ರಮ ಮುಗಿಯುವ ಹಂತಕ್ಕೆ ಜಾರುತ್ತಿತ್ತು.. ಸಂಗೀತ ಮಾಂತ್ರಿಕ ಇಳಯರಾಜ ಅವರ ಒಂದಷ್ಟು ಗೀತೆಗಳನ್ನು ಜೊತೆ ಮಾಡಿಕೊಂಡು.. ಸರ ಸರ ಹಾಡುತ್ತಿದ್ದರು.. ಎಲ್ಲವೂ ಒಂದಕ್ಕಿಂತ ಒಂದು ಸೊಗಸಾಗಿತ್ತು.. ಕನ್ನಡ, ತಮಿಳು, ತೆಲುಗು ಭಾಷೆಗಳ ಹಾಡುಗಳನ್ನು ಸರಾಗವಾಗಿ ಹಾಡುತ್ತಿದ್ದರು..
ಸುಮಾರು ಹತ್ತು ಹಾಡುಗಳ ಗುಚ್ಛವನ್ನು ಇಳಯರಾಜ ಅವರಿಗೆ ಸಮರ್ಪಿಸಿ.. ಎರಡು ಘಂಟೆಗಳಿಂದ ಕೂತು ಸಂಗೀತವನ್ನು ಆಸ್ವಾಧಿಸುತ್ತಿದ್ದ ಸಂಗೀತ ರಸಿಕರಿಗೆ.. ಹುಚ್ಚೆಬಿಸುವಂತೆ ಹನ್ನೊಂದು ಹಾಡುಗಳ ಫಾಸ್ಟ್ ಬೀಟ್ ತುಂಬಿಸಿ ಕುಣಿಸಿದರು.. ಒಂದಕ್ಕಿಂತ ಒಂದು ಸೂಪರ್ ಹಿಟ್ ಹಾಡುಗಳು ಅವು.. ವಯಸ್ಸಿನ ಇತಿಮಿತಿಯಿಲ್ಲದೆ ಕುಣಿಯಲೇ ಬೇಕು ಎನ್ನಿಸುವಂಥ ಹಾಡುಗಳು ಅವು..
ಸಂಗೀತ ಕಾರ್ಯಕ್ರಮದ ಅಲಿಖಿತ ನಿಯಮದ ಕೊನೆ ಹಾಡು "ಕುಲದಲ್ಲಿ ಕೀಳ್ಯಾವುದೋ" ಹಾಡು ಬಂದಾಗ ಪ್ರಾಯಶಃ ಇಡೀ ಸಭಾಂಗಣ ಕುಣಿಯಿತು..
ಇಡೀ ಕಾರ್ಯಕ್ರಮವನ್ನು ತಮ್ಮ ಭುಜದ ಮೇಲೆ ಹೊತ್ತು ನಿರೂಪಣೆ ಮಾಡಿದ ಮಹೇಶ್ ಎಲ್ಲರಿಗೂ ಧನ್ಯವಾದಗಳನ್ನು ಅರ್ಪಿಸಿದರು.. ಇದಕ್ಕೆ ತುಸು ಮುಂಚೆ ಚಿತ್ರಕೂಟ ಶಾಲೆಯ ಶ್ರೀ ಚೈತನ್ಯ ಅವರು ವೇದಿಕೆಗೆ ಬಂದು.. ಶ್ರುತಿ ಮಹೇಶ್ ದಂಪತಿಗಳನ್ನು ಎಲ್ಲರಿಗೂ ಪರಿಚಯಿಸಿದಾಗ ಸೂರು ಕಿತ್ತೋಗುವಷ್ಟು ಜೋರಾದ ಚಪ್ಪಾಳೆ ಬಂದಿತ್ತು ..
ಮಾಲತಿ ಕಣವಿ ಅವರು ಗಾಯಿತ್ರಿ ಮದುವೆ ಚಿತ್ರದ "ನನ್ನ ದೈವ ಕಣ್ಣ ಮುಂದಿರೇ" ಹಾಡಿನಲ್ಲಿ ಹಲವಾರು ಸಂಗತಿಗಳನ್ನು, ಸ್ವರಗಳ ಆರೋಹಣ ಅವರೋಹಣವನ್ನು ವಾದ್ಯಗಾರರ ಜೊತೆಯಲ್ಲಿ ಜುಗಲ್ಬಂದಿ ಮಾಡಿದಾಗ ನೆರೆದಿದ್ದವರಿಂದ ಬಂದ ಚಪ್ಪಾಳೆ.... ಬೋಲೇ ರೇ ಪಪಿಹರ ಹಾಡನ್ನು ಏಕ್ ದಂ ಟೇಕ್ ಆಫ್ ಮಾಡಿದ ಶ್ರುತಿ ಅವರ ಕಂಠ ಸಿರಿಗೆ... ಓಹೋ ಒಹೋ.. ಏ ಮೇರೇ ದಿಲ್ ದಿವಾನ ಹಾಡನ್ನು ಕುಣಿಯುವಂತೆಯೇ ಹಾಡಿದ ಅರುಂಧತಿ ವಸಿಷ್ಠ ಅವರ ಧ್ವನಿಗೆ.. ಕಾಣದ ಕಡಲಿಗೆ ಹಾಡಿನಲ್ಲಿ ಅಕ್ಷರಶಃ ಭಾವನೆಗಳ ಕಡಲಿಗೆ ಕೊಂಡೊಯ್ದ ಮಹೇಶ್... ನಗಲು ನೀನು ಮಿಂಚಂತೆ ಎಂದು ಎಲ್ಲರ ಮನಸ್ಸನ್ನು ಗೆದ್ದ ಮನೋಜ್ ವಸಿಷ್ಠ.. ಕೀ ಪ್ಯಾಡ್ ನಲ್ಲಿ ಜಾದೂ ಮಾಡಿದ ಕೃಷ್ಣ ಉಡುಪ.. ಇನ್ನೊಂದು ಕೀ ಬೋರ್ಡ್ ನಲ್ಲಿ ಗಮನ ಸೆಳೆದ ಸಾಲೊಮನ್.. ಪ್ರತಿ ಹಾಡಿಗೂ ಲಯಬದ್ಧವಾಗಿ ಕುಣಿಯುವಂತೆ ಮಾಡಿದ ಡ್ರಮ್ಸ್ ನ ಕೃಷ್ಣ.. ತಬಲಾದಲ್ಲಿ ಕೈಬೆರಳುಗಳು ನರ್ತಿಸುವುದುನ್ನು ತೋರಿಸಿದ ಕಾರ್ತಿಕ್ ಭಟ್.. ಇವರುಗಳ ಪರಿಶ್ರಮವನ್ನು ಎಲ್ಲರಿಗೂ ತಲುಪಿಸಿದ ಧ್ವನಿ ಆಯೋಜಕರು .. ಇದಕ್ಕೆಲ್ಲ ಕಳಶವಿಟ್ಟಂತೆ ಚಿತ್ರಕೂಟ ಶಾಲೆ.. ಅದರ ಸಿಬ್ಬಂದಿ ಎಲ್ಲರಿಗೂ ವಂದನೆಗಳನ್ನು ಅರ್ಪಿಸಿ.. ಮಹೇಶ್ ಶುಭರಾತ್ರಿ ಹೇಳಿದರು..
ಮಹೇಶ್ ಅವರ ಪ್ರಾಣಪ್ರಿಯರಾದ ಶ್ರೀ ಸಿ ಅಶ್ವಥ್ ಮತ್ತು ಜಿ ಎಸ್ ಶಿವರುದ್ರಪ್ಪ ಅವರು ಮಹೇಶ್ ಕಂಠ ಸಿರಿಯಲ್ಲಿ ಕಾಣದ ಕಡಲಿಗೆ ಹಾಡನ್ನು ಭಾವ ಪೂರ್ಣವಾಗಿ ಹಾಡಿದಾಗ ಅವರು ಹರಸಿದ್ದು ನನ್ನ ಮನದ ಕಣ್ಣಿಗೆ ಕಂಡಿತು.. ಅದೇ ಮೊಬೈಲ್ ಕ್ಯಾಮೆರಾದಲ್ಲಿ ಸೆರೆಯಾಯಿತು.. ಎರಡು ಬೆಳಕಿನ ಕಿರಣವಾಗಿ ಅಶ್ವಥ್ ಸರ್ ಮತ್ತು ಜಿ ಎಸ್ ಎಸ್ ಅವರು ಹರಸಿದರು ಎಂದು ನನ್ನ ಮನಸ್ಸು ಹೇಳಿತು.
ಎರಡು ಜೀವಾತ್ಮಗಳು ಮಹೇಶ್ ಅವರನ್ನು ಹರಸಿದ್ದು ಬೆಳಕಿನ ಕಿರಣಗಳಾಗಿ |
ರೇವತಿ ತಕ್ಷಣ ತನ್ನ ಗೆಳತಿಗೆ ಕರೆ ಮಾಡಿ ತಾನು ಇರುವ ಜಾಗವನ್ನು ಹೇಳಿದಳು.. ಆಗಲೇ ಜನರು ಎದ್ದು ಹೊರಡುತ್ತಿದ್ದರಿಂದ... ಆ ಗಡಿಬಿಡಿಯಲ್ಲಿ ಕಳೆದು ಹೋಗಬಹುದೆಂದು.. ಆಕೆಯ ಗೆಳತೀ.. ರೇವತಿಗೆ ಎಲ್ಲಿ ಕೂತಿದ್ದಳೋ ಅಲ್ಲಿಯೇ ಇರುವಂತೆ ಹೇಳಿದಳು.. ತುಸು ಜೋರಾಗಿಯೇ.. ತಾನು ಕೂತಿದ್ದ ಜಾಗವನ್ನು ಮತ್ತೆ ಹೇಳಿ ಕೂತಳು..
ನಂದನ್ ಗೆ ಹೋಗುವ ಇಷ್ಟವಿರಲಿಲ್ಲ.. ಎಲ್ಲ ದೀಪಗಳನ್ನು ಹಾಕಿದ್ದರಿಂದ.. ಈ ತರುಣಿಯ ಮೊಗ ಸೊಗಸಾಗಿ ಕಾಣುತ್ತಿತ್ತು.. ಆ ಬೆಳಕು.. ಅವಳು ತೊಟ್ಟಿದ್ದ ಪಿಂಕ್ ಚೂಡಿದಾರ್... ಕತ್ತಿಗೆ ಹಾಕಿದ್ದ ತುಸು ದಪ್ಪನೆಯ ಸರ.. ಕಿವಿಯಲ್ಲಿ ದೊಡ್ಡ ರಿಂಗ್.. ಹಣೆಯಲ್ಲಿ ಪುಟ್ಟದಾದ ಕಪ್ಪನೆಯ ಸ್ಟಿಕ್ಕರ್..ಬ್ಲೂ ಟೂತ್ ಹ್ಯಾಂಡ್ಸ್ ಫ್ರೀ.. ಅವಳ ಕತ್ತಿನಲ್ಲಿ ತೂಗಾಡುತಿತ್ತು.. ಅವಳ ವ್ಯಾನಿಟಿ ಬ್ಯಾಗ್... ಅವಳಿಗೆ ಹೊಂದುವಂತೆ ಸರಿಯಾಗಿ ಅವಳನ್ನು ಸುತ್ತಿ ಬಳಸಿ ನೇತಾಡುತ್ತಿತ್ತು..
ರೇವತಿ ಕೂಡ ಅರಿಯದೆ ನಂದನ್ ಕಡೆ ತಿರುಗಿ ಮತ್ತೊಮ್ಮೆ ಕಿರುನಗೆಯನ್ನು ಬೀರಿದಳು..
ನಂದನ್ . "ಏನ್ಲಾ ಯಾವುದೋ ಹುಡುಗಿಯ ಪಕ್ಕದಲ್ಲಿ ನಿಂತಿದ್ದೀಯಾ... ಹುಡುಗಿ ಇದ್ದಾಗ ಪ್ರಪಂಚ ಎಲ್ಲಿ ಕಾಣುತ್ತೆ.. ಆ ದನಿಯನ್ನು ಕೇಳಿ ಕೋಳಿಯ ಹಾಗೆ ಆ ಕಡೆ ಈ ಕಡೆ ನೋಡಿದಾಗ ತನ್ನ ಗೆಳೆಯ ಸಮೀರ್ ಕಾಣಿಸಿದ.. ಅರೆ ಸಾಲೇ ಎಂದು ಬರಸೆಳೆದು ಅಪ್ಪಿಕೊಂಡ..
ರೇವತಿ ಮತ್ತೆ ತನ್ನ ಗೆಳತಿಗೆ ಕರೆ ಮಾಡಿದಳು.. ಅತ್ತ ಕಡೆಯಿಂದ ಬೇಗನೆ ಬರುವುದಾಗಿ ಸಂದೇಶ ಸಿಕ್ಕಿತು ಅನಿಸುತ್ತೆ.. "ಬೇಗನೆ ಬಾರೆ" ಎನ್ನುತ್ತಾ ತುಸು ಮುನಿಸಿನಿಂದಲೇ ಕೂಗಿದಳು..
ರೇವತಿಯ ಜಡೆಯನ್ನು ಮೆಲ್ಲಗೆ ಯಾರೋ ಎಳೆದಾಗ ಸರಕ್ಕನೆ ತಿರುಗಿದಾಗ ಕಂಡಿದ್ದು ಆಕೆಯ ಪ್ರಾಣದ ಗೆಳತೀ.. ಸಂಗೀತ... ಇಬ್ಬರೂ ಅಪ್ಪಿಕೊಂಡು.. ಪಕ್ಕಕ್ಕೆ ಕರೆದು.. "ಅಲ್ವೇ ನಾನು ನಿನಗೆ ಒಂದು ಪ್ರಪೋಸಲ್ ತೋರಿಸ್ತೀನಿ ಅಂದ್ರೆ.. ಅವನ ಜೊತೆಯಲ್ಲಿಯೇ ಕೂತಿದ್ದೆಯಲ್ಲೇ.. " ಎಂದಾಗ ರೇವತಿ ಬೊಗಸೆ ಕಣ್ಣಿನಿಂದ ಯಾರು ಎನ್ನುತ್ತಾ ನಂದನ್ ಕಡೆ ತಿರುಗಿ ಮತ್ತೆ ಸಂಗೀತಾಳ ಕಡೆಗೆ ಕಣ್ಣು ಬೀರಿದಳು..
ಸಂಗೀತ ಹೌದು ಎನ್ನುವಂತೆ ತಲೆಯಾಡಿಸಿದಳು.. ಮತ್ತೆ ಸಮೀರನ್ನು ನೋಡಿ.. ರೀ ನಿಮಗಾಗಿ ಇಡೀ ಶಾಲೆಯಲ್ಲಿ ಹುಡುಕಿ ಬಂದೆ.. ನೀವು ನೋಡಿದರೆ ಇಲ್ಲಿ ಇದ್ದೀರಾ.. "
"ಸಂಗೀತ ಇವನು ನನ್ನ ಗೆಳೆಯ .. ನಂದನ್ ಕಣೆ.. ಅದೇ ಹೇಳಿದ್ದೆ ಅಲ್ವ.. " ಎಂದು ಕಣ್ಣು ಹೊಡೆದ..
ಸಂಗೀತಳಿಗೆ ವಿಷಯ ಗೊತ್ತಿದ್ದರೂ ಪರಿಚಯವಿರಲಿಲ್ಲ.. ಮೊಗವರಳಿಸಿ . ಓಹೋ ಇಬ್ಬರೂ ಇಲ್ಲಿಯೇ ಇದ್ದಾರೆ.. ನಮ್ಮ ಕೆಲಸ ಸಲೀಸಾಯಿತು..
"ರೇವತಿ.. ಇವರೇ ನಂದನ್.. ನನ್ನ ಗಂಡನ ಜಿಗ್ರಿ ದೋಸ್ತ್..ನಾ ಭೇಟಿಯಾಗಿರಲಿಲ್ಲ ಇಂದು ನಿನ್ನಿಂದಾಗಿ ಇವರನ್ನು ಪರಿಚಯ ಆದ ಖುಷಿ ನನಗೆ.. .. ರೀ ನಂದನ್ ಇವಳೇ ರೇವತಿ ನನ್ನ ಖಾಸಾ ದೋಸ್ತ್.. "
ರೇವತಿ ಮೊಗವರಳಿತು.. ನಂದನ್ ಮೊಗದಲ್ಲಿ ನಗುವರಳಿತು..
ಅವರ ಪಕ್ಕದಲ್ಲಿ ಕಾರ್ಯಕ್ರಮವನ್ನು ಮೊಬೈಲ್ ನಲ್ಲಿ ರೆಕಾರ್ಡ್ ಮಾಡಿಕೊಂಡಿದ್ದ ಒಬ್ಬರು.. ಅದನ್ನು ಚೆಕ್ ಮಾಡೋದಕ್ಕೆ ಹಾಕಿದ್ದ ಹಾಡು "ಒಲುಮೆ ಪೂಜೆಗೆಂದೇ" ಹಾಡು ಬರುತಿತ್ತು..
ರೇವತಿ ಕಣ್ಣು ಹೊಡೆದಳು.. ನಂದನ್ ಕಣ್ಣಲಿಯೇ ಸಮ್ಮತಿಸಿದ.. !!!!
ಒಳ್ಳೆಯ ಬರವಣಿಗೆ ಶ್ರೀ.... ಸುಂದರ ಚಿತ್ರ ಗಳೊಂದಿಗೆ ನಾವೇ ಕುಳಿತು ಸವಿದ ಅನುಭವ simply superb
ReplyDelete