Sunday, October 24, 2021

CBM....Nice story!!!

ಅಂಗಡಿಯವ ತಲೆ ಮೇಲೆ ಕೈ ಹೊತ್ತು ಕೂತಿದ್ದ.. ಯಾರಿಗೂ ಅಂಗಡಿಗೆ ಬಂದಿದ್ದವ ಕೇಳಿದ ಉಪಕರಣ ಸಿಗುತ್ತಿರಲಿಲ್ಲ.. ಇಡೀ ನಗರಕ್ಕೆ ಹೆಸರುವಾಸಿಯಾಗಿದ್ದ ಇಲೆಕ್ಟ್ರಾನಿಕ್ ಉಪಕರಣದ ಅಂಗಡಿಯದು.. ಅಂಗಡಿಯೆನ್ನೋದು ತುಂಬಾ ಚಿಕ್ಕ ಮಾತು.. ಸೂಪರ್ ಶಾಪ್ ಅನ್ನೋಣವೇ.. ಹೌದು ಇದು ಸರಿಯಾದ ಶಬ್ದ.. 

ಅಂಗಡಿಯಲ್ಲಿದ್ದ ಸಾರಿ ಸೂಪರ್ ಶಾಪಿನಲ್ಲಿದ್ದ ಉಪಕರಣಗಳನ್ನೆಲ್ಲ ಒಂದೊದಾಗಿ ತೋರಿಸಿದರೂ ಬಂದಿದ್ದ ವ್ಯಕ್ತಿ ತಲೆಯಾಡಿಸುತ್ತಲೇ ತನ್ನ ನಕಾರಾತ್ಮಕ ಉತ್ತರ  ಕೊಡುತ್ತಿದ್ದ.. 

ಸರ್ ನಿಮಗೆ ಯಾವ ಉಪಕರಣ ಬೇಕು ಅದರ ಚಿತ್ರ, ಮಾಹಿತಿ, ಇಲ್ಲವೇ ಗೂಗಲ್ ಕೊಂಡಿ ಇದ್ದರೇ ಕೊಡಿ ಸರ್.. ನಮ್ಮ ನೆಟ್ವರ್ಕ್ ದೊಡ್ಡದಿದೆ.. ನಮ್ಮ ಸಹೋದರ ಸಂಸ್ಥೆಯಲ್ಲಿಯೋ, ನಮ್ಮ ಗೆಳೆಯರ ಅಂಗಡಿಯಲ್ಲೋ.. ಹೇಗಾದರೂ ಕೊಡಿಸುತ್ತೇವೆ.. ಆದರೆ ಕೊಂಚ ಸಮಯಬೇಕು ಅಂದರೆ ಒಂದಷ್ಟು ದಿನ ಬೇಕು.. 

"ಸರ್ ನಾ ಕೇಳುತ್ತಿರುವ ಉಪಕರಣ ತುಂಬಾ ಉಪಯೋಗವಾದದ್ದು ಸರ್.. ಬಲು ಶಾರ್ಪ್ ಅದು.. ಖಂಡಿತ ಇದು ಎಲ್ಲೆಡೆ ಸಿಗುವುದಲ್ಲ.. ಆದರೆ.. ನಿಮ್ಮ ಶಾಪ್ ಈ ನಗರದಲ್ಲಿಯೇ ವರ್ಲ್ಡ್ ಫೇಮಸ್.. ಹಾಗಾಗಿ ನಿಮ್ಮ ಕಡೆ ಇರಲೇಬೇಕು.. "

"ನಿಮ್ಮ ಮಾತು ಖರೆ ಅದಾ ಸ್ವಾಮೀ.. ಆದರೆ ನಾವು ನೋಡಿಲ್ಲವಲ್ಲ.. ನನಗೆ ಬುದ್ದಿ ಬಂದಾಗಿನಿಂದ ಈ ದುಖಾನ್ ನೋಡ್ಕೋತ್ತಾ ಇದ್ದೀನಿ... ಈ ರೀತಿಯ ಉಪಕರಣ ಕೇಳಿಕೊಂಡು ಯಾರೂ ಬಂದಿಲ್ಲ.. ಹಾ ಒಂದು ನಿಮಿಷ ಇರಿ.. ನನ್ನ ಅಪ್ಪ ಮತ್ತು ನನ್ನ ತಾತನನ್ನು ಒಮ್ಮೆ ಕೇಳುತ್ತೇನೆ.. ನೀವು ನಮ್ಮ ಶಾಪಿಗೆ ಯಾವಾಗಲೂ ಬರುವವರು.. ನಿಮಗೆ ಇಲ್ಲ ಎನ್ನೊಕೆ ಮನಸಿಲ್ಲ.. ಖಂಡಿತ ಇರಿ.. ಏನಾದರೂ ಮಾಡೋಣ.. .. ಅರೆ ಚೋಟು ಸಾಹೇಬ್ರಿಗೆ ಒಂದು ಜ್ಯೂಸ್ ತಂದುಕೊಂಡು.. ಸರ್.. ನೀವು ಜ್ಯೂಸ್ ಕುಡಿದು.. ಸ್ವಲ್ಪ ವಿರಮಿಸಿಕೊಳ್ಳಿ.. ಒಂದು ಹದಿನೈದು ನಿಮಿಷ ಏನಾದರೂ ದಾರಿ ಹುಡುಕೋಣ.. "

ಬಿಸಿಲಲ್ಲಿ ಬಂದು ತಲೆ ನೋಯುತ್ತಿತ್ತು.. "ಸರ್ ಆಗಲಿ.. ಜ್ಯೂಸ್ ಬೇಡಾ ಒಂದು ಸ್ಟ್ರಾಂಗ್ ಕಾಫೀ ತರಿಸಿ.. ಈ ಕುರ್ಚಿಯಲ್ಲಿ ಹಾಗೆ ವಿಶ್ರಮಿಸಿಕೊಳ್ಳುತ್ತೇನೆ"

ಬಿಸಿ ಬಿಸಿ ಕಾಫೀ.. ತಲೆ ನೋವಿನಾ ಮಾತ್ರೆ.. ಹೊಟ್ಟೆಗೆ ಹೋದ ಮೇಲೆ ಸ್ವಲ್ಪ ಆರಾಮೆನಿಸಿತು.. ಮೇಲೆ ಮೆಲ್ಲಗೆ ತಿರುಗುತ್ತಿದ್ದ ಫ್ಯಾನ್.. ಮಲೆನಾಡಿನ ಕಡೆಯಾಗಿದ್ದರಿಂದ.. ಇವರ ಶಾಪಿನ ಸುತ್ತಾ ಹಸಿರು ಸಿರಿ ಹಾಸಿತ್ತು... ಬೆಟ್ಟ ಗುಡ್ಡಗಳ ತಣ್ಣನೆ ಗಾಳಿಗೆ ಹಾಗೆ ನಿದ್ದೆ ಬಂದಿತ್ತು.. 

"ಶ್ರೀ ಶ್ರೀ.. ಏಳಿ ಇದೇನು ಇಲ್ಲಿ ನಿದ್ದೆ ಹೊಡೀತಾ ಇದ್ದೀರಾ.. ?"

ಚಿತ್ರಪರಿಚಿತ ಧ್ವನಿ.. ಕಣ್ಣು ಬಿಟ್ಟಾಗ ಎದುರಲ್ಲಿ DFR .. 

"ಅರೆ DFR ನೀವೇನು ಇಲ್ಲಿ.. ?"

"ಶ್ರೀ .. ಇವರು ಕರೆ ಮಾಡಿ ಬರೋಕೆ ಹೇಳಿದರು.. "

"ಅರೆ ಸಾಹೇಬ್ರೆ.. ಇವರನ್ಯಾಕೆ ಕರೆದಿರಿ.. "

"ಸರ್ ನೀವು ಕೇಳಿದ ಉಪಕರಣ ಇವರಿಗೆ ಗೊತ್ತು ಅಂತ ನಮ್ಮ ತಂದೆ ಹೇಳಿದರು... . ಅದಕ್ಕೆ ಇವರಿಗೆ ಬರೋಕೆ ಹೇಳಿದ್ವಿ.. ಮೇಡಂ.. ಈ ವಯ್ಯಾ.. ಬೆಳಿಗ್ಗೆ ಇಂದ ತಲೆ ತಿಂತಾ ಐತೆ.. ಅದೇನು ಬೇಕು ಕೇಳಿ.. ನಂಗೂ ಸಾಕಾಗೈತೆ.. ಈ ಕೊರೋನಾ ದೆಸೆಯಿಂದ ಇರಲಿಲ್ಲ.. ಈಗ ಚಿಗುರುತ್ತಾ ಇದೆ.. ಗಿರಾಕಿಗಳು ಬಂದು ನಿಂತವ್ರೆ.. ಅವರನ್ನು ಅಟೆಂಡ್ ಮಾಡೋಣ ಅಂದ್ರೆ ಈ ವಯ್ಯಾ ಬಿಡ್ತಾ ಇಲ್ಲ.. ಅದೇನು ಕೇಳಿ ಮೇಡಂ.. ಏ ಚೋಟು ರೂಪ ಮೇಡಂಗೆ ಒಂದು ಸ್ಟ್ರಾಂಗ್ ಕಾಫೀ.. ಮತ್ತೆ ಒಂದು ಡೈರಿ ಮಿಲ್ಕ್ ಚಾಕೊಲೇಟ್ ಬಾರ್ ತಾ.. ಮೇಡಂ ಪ್ಲೀಸ್.. ಬೇಗ ಹೇಳಿ.. " ಎನ್ನುತ್ತಾ ಬೇರೆಯವರನ್ನು ಅಟೆಂಡ್ ಮಾಡೋಕೆ ಹೋದರು.. 

"ಶ್ರೀ.. ಒಂದು ನಿಮಿಷ ಇರಿ.. " ಎಂದು ಹೇಳುತ್ತಾ.. ಯಾರಿಗೋ ಕರೆ ಮಾಡಿದರು.. ನಂತರ ಕರೆ ಮಾಡಿದವರಿಗೆ ಗೂಗಲ್ ನಕ್ಷೆ ಕೂಡ ಕಳಿಸಿದರು.. ಬರೋಕೆ ಸುಲಭ ಆಗಲಿ ಎಂದು.. 

ಬರಿಯ ಏನೂ ಕೆಲಸ ಇಲ್ಲದ್ದರಿಂದ.. ಸುಮ್ಮನೆ ಕಾಲ ಕಳೆಯೋದು ಕಷ್ಟವಾಗಿತ್ತು.. ಶಾಪಿನಲ್ಲಿದ್ದ ಉಪಕರಣಗಳನ್ನು ನೋಡುತ್ತಾ ಸಮಯವನ್ನು ಓಡಿಸಿದರು.. . 

೧೨೦೦ ಸೆಕೆಂಡುಗಳು ಆದವು.. .. ಒಂದು ಆಕ್ಟಿವಾ ಬೈಕ್ ಶಾಪಿನ ಮುಂದೆ ನಿಂತಿತು.. DFR ಮೊಗವರಳಿತು.. "ಅರೆ ನಿವ್ಸ್.. ಸೂಪರ್ ಸರಿಯಾಗಿ ಬಂದಿದ್ದೀರಾ.. ದಾರಿ ಮಿಸ್ ಆಗ್ಲಿಲ್ಲ ತಾನೇ.. ?"

"ರೂಪಕ್ಕ ನೀವು ಕಳಿಸಿದ ನಕ್ಷೆ ಸೀದಾ ಇಲ್ಲಿಗೆ ಕರೆ ತಂದಿತು.. ದಿಕ್ಕು ಸರಿಯಾಗಿ ಸಿಕ್ಕಿದೆ ಈ ನಕ್ಷೆಯಿಂದ..  ಏನು ರೂಪಕ್ಕ ಬರೋಕೆ ಹೇಳಿದ್ದು.. ?"

"ನೋಡಿ ನಿವ್ಸ್ .. ಆ ಕಡೆ ನೋಡಿ"

"ಅರೆ ಶ್ರೀ.. ನೀವು ಇಲ್ಲಿ ಏನು ಸಮಾಚಾರ.....ಏನಿದು ರೂಪಕ್ಕ"

"ನಿವ್ಸ್ ... ಸೋಲ್ ಗೆಳೆಯರಾಗಿರುವ ನಾವು ಒಂದೇ ಮನೆಯಲ್ಲಿ ಹುಟ್ಟಲಿಲ್ಲ.. ಆದರೆ ಒಂದೇ ಮನಸ್ಸು ನಮ್ಮ ಮೂವರದ್ದು.. ನಾವು ನಮ್ಮ ಕೆಲಸಗಳಲ್ಲಿ ಬ್ಯುಸಿ.. ಕೊರೋನಾ ಗಲಾಟೆ.. ಭೇಟಿ ಮಾಡೋಕೆ ಆಗಿರಲಿಲ್ಲ.. ಅದಕ್ಕೆ ಶ್ರೀ ಈ ಉಪಾಯ ಮಾಡಿಯೇ ಮೂವರನ್ನು ಸೇರಿಸಿದ್ದಾರೆ.. "

"ಓಹ್ ಶ್ರೀ.. ಇದು ನಿಮ್ಮ ಪ್ಲಾನ್ ಆ ಆ ಆ.. ಈ ರೀತಿಯ ತರಲೆ ಐಡಿಯಗಳು ನಿಮ್ಮ ತಲೆಗೆ ಮಾತ್ರ ಬರೋದು.. ಆದರೂ ಬಂದಿದ್ದು.. ನಿಮ್ಮನ್ನೆಲ್ಲಾ ಭೇಟಿ ಮಾಡಿದ್ದು ಖುಷಿಯಾಯಿತು.. "

ಶ್ರೀ ಮೊಗದಲ್ಲಿ ನಗು ಬಂದಿದ್ದು.. ಸಂತಸ ಮೂಡಿದ್ದು ಕಂಡಿದ್ದೆ.. ಅಂಗಡಿಯವ ಓಡೋಡಿ ಬಂದು.. "ಸರ್ ನಿಮಗೆ ಬೇಕಾದ ಉಪಕಾರ ಸಿಕ್ತಾ.. ಏ ಚೋಟು.. ಬೇಗ ಬಿಲ್ ಮಾಡ್ಲೆ.. ಈ ವಯ್ಯನನ್ನು ಹೊರಗೆ ಕಳಿಸಿದರೆ ಸಾಕು.. .. ಇಷ್ಟು ಹೊತ್ತಿಗೆ ಹತ್ತು ಕಸ್ಟಮರ್ಸ್ ಆರ್ಡರುಗಳನ್ನು ಪಾರ್ಸೆಲ್ ಮಾಡಬಹುದಿತ್ತು.. " ತಲೆ ಕೆರೆದುಕೊಂಡು ಮತ್ತೆ ಮಾರ್ವಾಡಿ ಟೋಪಿ ಹಾಕಿಕೊಂಡು ದೇವರ ಕಡೆ ನೋಡಿ ಕೈ ಮುಗಿದ.. 

"ಸರ್... ಕೇಳಿದ ಉಪಕರಣ ಇವರೇ.. ನಿವೇದಿತ ಚಿರಂತನ್ ... ಒಂದು ವಾಕ್ಯದಲ್ಲಿ ದೊಡ್ಡಕ್ಷರ, ಸಣ್ಣಕ್ಷರ, ಅಲ್ಪ ವಿರಾಮ, ದೀರ್ಘ ವಿರಾಮ, ಆಶ್ಚರ್ಯಕರ ಚಿನ್ಹೆ, ಪ್ರಶ್ನಾರ್ಥಕ ಚಿನ್ಹೆ.. ಒಂದು ಪದ ಮತ್ತೊಂದು ಪದಗಳ ನಡುವೆ ಕೊಂಚ ಜಾಗ ಕೊಟ್ಟಿದ್ದರೂ ಕೂಡ.. ಸಂದೇಶ ಕಳಿಸಿದವರ ಮನಸ್ಥಿತಿ ಅರಿಯುವ ಈ ರೀತಿಯ ಉಪಕರಣ ನಿಮ್ಮಲ್ಲಿದೆಯೇ.. ಇರಬಹುದು ಎನ್ನುವ ಒಂದು ಕುತೂಹಲ ನನಗೆ ಕಾಡಿತ್ತು. .ಹಾಗಾಗಿ ನಿಮಗೆ ತೊಂದರೆ ಕೊಡಬೇಕಾಯಿತು.. "

"ಸರ್.. ನೀವೊಳ್ಳೆ ಪ್ರಾಣಿ.. ಇದು ದೇವರು ಕಳಿಸಿರುವ ಉಪಕರಣ ಸರ್.. ಆ ದೇವರು ಈ ವಮ್ಮನ ತಲೆಯೊಳಗೆ ಎಲ್ಲಾ ಉಪಕರಣಗಳ ಮಾಹಿತಿಗಳನ್ನು ತುಂಬಿ ಕಳಿಸಿದ್ದಾನೆ.. ಅದಕ್ಕೆ ಈ ವಮ್ಮ ಡಬಲ್ ಡಿಗ್ರಿ ಮಾಡಿರೋದು.. .. ಆದರೂ ಈ ರೀತಿಯ ಉಪಕರಣ ಇದ್ದಿದ್ದರೆ ಈ ಜಗತ್ತು ಎಷ್ಟು ಪ್ರಶಾಂತತೆಯಿಂದ ಕೂಡಿರುತ್ತಿತ್ತು.. ಆಗಲಿ.. ಇಂತಹ ಒಬ್ಬರು ನಿಮ್ಮ ಸೋಲ್ ಗೆಳೆತನದಲ್ಲಿರೋದು ಬಹಳ ಖುಷಿ ತರುವ ವಿಚಾರ.. ದಯವಿಟ್ಟು ತಪ್ಪು ತಿಳಿಯಬೇಡಿ.. ನನಗೂ ನಿಮ್ಮ ಕೋರಿಕೆಯಿಂದ ಕೋಪ ಬಂದಿತ್ತು.. ಹಾಗಾಗಿ ಸ್ವಲ್ಪ ಕೊಂಚ ಖಾರವಾಗಿ ವಯ್ಯಾ ಅಂತೆಲ್ಲ ಹೇಳಿಬಿಟ್ಟೆ.. "

"ಇರಲಿ ಸರ್... ಪರವಾಗಿಲ್ಲ.. ಕೋಪ ಬರೋದೇ ಇಲ್ಲ ನನಗೆ.. ಆದರೆ ನಿಮ್ಮನ್ನು ಗೋಳು ಹುಯ್ಕೊಂಡಿದ್ದು ಖುಷಿ ಕೊಟ್ಟಿತು.. ಆ ರೀತಿಯ ಉಪಕರಣ ಸಿಕ್ಕಿದ್ದಿದ್ದರೆ.. ಇರಲಿ ಬಿಡಿ.. "

"ಶ್ರೀ ನಿಮ್ಮ ಮಹಾಭಾರತ ಸಾಕು.. ಅರೆ ಚೋಟು.. ಮೆಲ್ಲಗೆ ಆ ಕೇಕು ತಗಂಡು ಬಾ.. ನಿವ್ಸ್ ಬನ್ನಿ ಈ ಕಡೆ.. ಕೇಕ್ ಕಟ್ ಮಾಡಿ.. ಜನುಮದಿನ ಆಚರಿಸೋಣ.."

ಕೇಕು ನೋಡಿ ನಿವೇದಿತಾ ಅವರಿಗೆ ಖುಷಿ ಆಯಿತು.. ಕೇಕಿನ ಮೇಲೆ "ನಿವಿಯಸ್ ಆರ್ಟ್ಸ್"  ಅಂತಿತ್ತು.. 

DFR ಉವಾಚ.. "ನಿವ್ಸ್ ಜನುಮದಿನದ ಶುಭಾಶಯಗಳು"

ಅಂಗಡಿಯವ "ಮೇಡಂ ಜನುಮದಿನದ ಶುಭಾಶಯಗಳು"

ಶ್ರೀ ... ಸಿಬಿ ಜನುಮದಿನದ ಶುಭಾಶಯಗಳು.. !

Tuesday, April 13, 2021

ಸೀಮಾವಲೋಕನ .....!

ಅಣ್ಣಾವ್ರ ಕವಿರತ್ನ ಕಾಳಿದಾಸ ಚಿತ್ರವನ್ನು ನೋಡುತ್ತಿದ್ದೆ... 

"ನೋಡಿದ ಆ ಆ  ಕ್ಷಣದಲಿ ನಿಂತೇ ನೀ ಕಣ್ಣಲ್ಲಿ" ಸಾಲುಗಳು ಹಾಗೆ ಮನಸೆಳೆದಿತ್ತು.. ಮನಸ್ಸು ಹಾಗೆ ಹಿಂದಕ್ಕೆ ಜಾರಿತ್ತು.. 

ಅಂತರ್ಜಾಲ ಕೆಟ್ಟದು.. ಅದು ಇದು.. ಅಂತ ನೂರೆಂಟು ಬೇಡದ ಕಾರಣಗಳನ್ನು ನೂರಾರು ಮಂದಿ ಹೇಳಿದ್ದರು.. ನಾ ತಲೆ ಕೆಡಿಸಿಕೊಂಡಿಲ್ಲ.. ನನಗೆ ಅಂತರ್ಜಾಲ ನೂರಾರು ಸುಮಧುರ ಮನದ ಗೆಳೆಯರನನ್ನು ಕೊಟ್ಟಿದೆ.. 

ಬದುಕು ಕವಲು ದಾರಿಗೆ ಹೊರಳಿದಾಗ.. ಸಿಕ್ಕ ಅದ್ಭುತ ಗೆಳತೀ ಇವಳು.. ಹೆಸರಿಗೆ ಸೀಮಾ.. ಆದರೆ ಇವಳ ಪ್ರೀತಿಗೆ ಸೀಮೆಯೆ ಇಲ್ಲ.. ಪುಟ್ಟ ಹಾಯ್ ಇಂದ ಶುರುವಾದ ಪರಿಚಯ. ಮನದ ಒಡತಿಯಾಗಿ ಬರುವ ತನಕ ಹಾದು ಬಂತು.. 

ಆ ಪುಟ್ಟ ಹೃದಯದೊಳಗೆ ಸಾಗರದಷ್ಟು ಪ್ರೀತಿ ತುಂಬಿಕೊಂಡಿರುವ ಸೀಮಾ.. ಸದಾ ನೆಟ್ವರ್ಕ್ ಸಿಗುವ ಮೊಬೈಲ್ ತರಹ.. ನನ್ನ ಜೊತೆಯಲ್ಲಿ ನನ್ನ ನೆರಳಾಗಿ ನಿಂತಿದ್ದಾಳೆ.. 

                                                                                  ****

"ಶ್ರೀ.. ನಿಮ್ಮ ನೆಚ್ಚಿನ ಅಣ್ಣಾವ್ರ ಶೈಲಿಯಲ್ಲಿ ಯಾವುದಾದರೂ ಒಂದು ಸಿನೆಮಾವನ್ನು ಸಮೀಕರಿಸಿ ಏನಾದರೂ ಬರೆಯಿರಿ"

"ಸೀಮು.. ಅದೆಂಗೋ.. ಗೊತ್ತಾಗ್ತಾ ಇಲ್ಲ.."

"ಶ್ರೀ.. ಅದೆಲ್ಲ ಹರಿಕತೆ ಬೇಡ.. ನನ್ನ ಮೇಲೆ ಪ್ರೀತಿ ಇದ್ದರೇ.. ನಿಮ್ಮ ನೆಚ್ಚಿನ ರಾಜಕುಮಾರ್ ಸಿನಿಮಾದ ಬಗ್ಗೆ ಬರೆದು ಹೇಳಿ.. ಅಷ್ಟೇ.. " ತುಸು ಮುನಿಸಿನಿಂದ ಹೇಳಿದಳು.. 

" ಅಣ್ಣಾವ್ರೇ ಇದೊಳ್ಳೆ ಪರೀಕ್ಷೆ ಆಯ್ತಲ್ಲ.. ನೀವೇ ನನ್ನ ಕಾಪಾಡಬೇಕು.. "

ದೇಹದೊಳಗೆ ಏನೋ ಒಂದು ಶಕ್ತಿ ಹೋದ ಅನುಭವ.. ಕೈಗಳು ತಂತಾನೇ ಕೀ ಬೋರ್ಡಿನ ಮೇಲೆ ಹರಿದಾದ ತೊಡಗಿತು.. ಅದರ ಫಲವೇ ಈ ಬರಹ.. !

                                                                                  ****

ಶ್ರುತಿ ಸೇರಿದಾಗ ಸಿನಿಮಾದಲ್ಲಿ ಧರ್ಮಸ್ಥಳದಲ್ಲಿ ಹಾಡುತ್ತಿದ್ದ ಗೀತಾಳನ್ನು ನೋಡಿ ಹಾಡಿಗೆ ಮನಸೋಲುತ್ತಾರೆ.. 

ಅಂತರ್ಜಾಲದಲ್ಲಿ ಸೀಮಾಳನ್ನು ಕಂಡು.. ಅವಳ ಮುಗ್ಧ ಮನಸ್ಸಿಗೆ ಮನ ಸೋಲುತ್ತಾನೆ ಶ್ರೀ.. 

ಕಾರಣಾಂತರಗಳಿಂದ ಗೀತಾ ರಾಜಕುಮಾರ್ ಮನೆಗೆ ಬರುವ ಹಾಗೆ ಆಗುತ್ತದೆ.. 

ಸೀಮಾಳ ಜೊತೆ ಮಾತಾಡುತ್ತ ಮಾತಾಡುತ್ತಾ ತನ್ನ ಮನೆಗೆ ಒಮ್ಮೆ ಬರಲು ಹೇಳುತ್ತಾನೆ.. . 

ಜಾತಕ ಅದು ಇದು ಅಂತ ರಾಜಕುಮಾರ್ ಮನಸ್ಸಿಗೆ ಘಾಸಿಯಾಗಿರುತ್ತದೆ.. 

ವಿಧಿಯ ಆಟದಲ್ಲಿ ಶ್ರೀ ಬದುಕು ಕವಲು ಕಂಡಿರುತ್ತದೆ.. 

ಸುಂದರ ಚಂದದ ಗೀತಾ ರಾಜಕುಮಾರ್ ಮನೆ ಮನವನ್ನು ಆವರಿಸಿಕೊಂಡು.. ರಾಜ್ ಕುಮಾರ್ ಬದುಕನ್ನು ಚಂದ ಮಾಡುತ್ತಾರೆ. 

ಈ ಮುದ್ದು ಸೀಮೂ ಕೂಡ ಹಾಗೆ ಮುರಿದಿದ್ದ ಶ್ರೀ ಬದುಕನ್ನು ಮತ್ತೆ ಎತ್ತಿ ಕಟ್ಟಿ ನಿಲ್ಲಿಸಲು ಶ್ರೀ ಯ ಹೆಗಲಿಗೆ ಹೆಗಲು ಕೊಟ್ಟು ನಿಂತಿದ್ದಾರೆ.. 

ಆಹಾ ಸೂಪರ್ ಸೂಪರ್ ಶ್ರೀ
 

                                                                                  ****

ಶ್ರೀ ಗೀತಾಳನ್ನು ನನ್ನನ್ನು ಸಮೀಕರಿಸಿ ಹೇಳಿ.. 

ಏನೋ ಇದು ಸೀಮು ಇಷ್ಟೊಂದು ಪರೀಕ್ಷೆ.. 

ಹೇ ಬರೀರಿ ಶ್ರೀ.. 

                                                                                  ****

ಗೀತಾಳ ಮುಖ ಪುಟ್ಟದು.. 
ಸೀಮಾಳ ಮುಖ ಪುಟ್ಟದು 

ಗೀತಾಳ ಕಣ್ಣುಗಳು ಸುಂದರ 
ಸೀಮಾಳ ಕಣ್ಣುಗಳು ಸುಂದರ 

ಗೀತಾ ಪುಟ್ಟ ನಾಸಿಕ ನೋಡಲು ಚಂದ 
ಸೀಮಾಳ ಪುಟ್ಟ ನಾಸಿಕ ಅಂದ 

ಗೀತಾಳ ಎತ್ತರದ ನಿಲುವು ಆಕರ್ಷಕ 
ಸೀಮಾಳ ಪುಟ್ಟ ಗೌರಿಯ ಅಂದ ಚಂದ 

ಶ್ರುತಿ ಸೇರಿದಾಗ ಚಿತ್ರದಲ್ಲಿ ರಾಜ್ ಕುಮಾರ್ ಪಾತ್ರದ ಮೇಲೆ ಅಪರಿಮಿತ ಪ್ರೀತಿ 
ಶ್ರೀ ಬದುಕಿಗೆ ಶ್ರುತಿ ಸೇರಿಸಿದ ಸೀಮಾಳ ಪ್ರೀತಿ ಕೂಡ ಅಪರಿಮಿತ.. 

ಗೀತ್ ... ಸೀಮು 


                                                                        ****

ತುಂಹೇ ಕೊಯಿ ಔರ್ ದೇಖೇ ತೋ ಜಲ್ ತಾ ಹೇ ದಿಲ್ 
ಬಡಿ ಮುಷ್ಕಿಲೋ ಸೆ ಸಂಬಲ್ ತಾ ಹೇ ದಿಲ್ 
ಕ್ಯಾ ಕ್ಯಾ ಜತನ್ ಕರತೇ ಹೇ ತುಂಹೆ ಕ್ಯಾ ಪತಾ 
ಹಮೇ ತುಮ್ ಸೆ ಪ್ಯಾರ್ ಕಿತ್ನಾ 
ಎ ಹಮ್ ನಹೀ ಜಾನ್ ತೇ
ಮಗರ್ ಜೀ ನಹಿ ಸಕ್ತೆ ತುಮ್ಹಾರೇ ಬಿನಾ... !

ಪುಟ್ಟ ಹೃದಯದಲ್ಲಿ ಕಡಲಾಳದಷ್ಟು ಪ್ರೀತಿ ಬಚ್ಚಿಟ್ಟುಕೊಂಡಿರುವ ಸೀಮು ಜನುಮದಿನದ ಶುಭಾಶಯಗಳು!!!!


Tuesday, January 19, 2021

ದೇವರು ನಕ್ಕೆ ನಗುತ್ತಾನೆ - ೬

"ಏನೋ ಶ್ರೀ ನನಗೆ ನಗೋಕೆ ಅವಕಾಶನೇ ಕೊಡ್ತಾ ಇಲ್ಲ.. ನಗೋದು ಮರೆತು ಬಿಟ್ಟೆಯ.. ಅಥವ ಜೀವನದ ಜಂಜಾಟ ನಗೋದನ್ನು ಮರೆಸಿ ಬಿಟ್ಟಿದೆಯಾ. "

ಕಣ್ಣು ಬಿಟ್ಟೆ.. ತೇಜೋಮಯನಾದ ಆ ಮಹಾಮಹಿಮ ಕಣ್ಣ ಮುಂದೆ ನಿಂತಿದ್ದ..  ಒಮ್ಮೆ ಕೊಳಲು ಕಂಡರೆ.. ಇನ್ನೊಮ್ಮೆ ಸೊಂಡಿಲು ಕಾಣೋದು.. ಇನ್ನೊಮ್ಮೆ ನಾಲ್ಕು ತಲೆ ಕಾಣೋದು.. ಹೀಗೆ ಬಗೆ ಬಗೆ ರೂಪದಲ್ಲಿ ಕಾಣುವ ಆ ಮಹಾಮಹಿಮ ದರ್ಶನ ಮಾಡಿ ಸಂತುಷ್ಟನಾಗಿ.... ಮೆಲ್ಲಗೆ ಕಣ್ಣು ಮುಚ್ಚಿದೆ.. ಕಣ್ಣು ತುಂಬಿ ಬಂದಿತ್ತು.. ಅರೆ ಹೌದಲ್ವಾ ಈ ದೇವರು ನಗುತ್ತಾನೆ ಅಂಕಣವನ್ನು ಮುಂದುವರೆಸಲು ಆಗಲೇ ಇಲ್ಲವಲ್ಲ.. ಸರಿ ಒಂದು ಲೇಖನ ಬರೆದೆ ಬಿಡೋಣ ಅಂತ ಇವತ್ತು ಆಫೀಸಿನಿಂದ ಬಂದ ಕೂಡಲೇ ಹಠ ತೊಟ್ಟಂತೆ ಕೂತೆ ಬಿಟ್ಟೆ.. ಪರಿಣಾಮ ಈ ಲೇಖನ.... !

                                                                        *****

ಆಫೀಸಿನಲ್ಲಿ ಸರಸರ ಕೆಲಸ ಸಾಗುತ್ತಿತ್ತು.. "ತುಲಾಮಾಸೇತು ಕಾವೇರಿ" ನನ್ನ ಮೊಬೈಲ್ ಶ್ರೀ ನನ್ನ ಎತ್ತಿಕೊಳ್ಳೋ ಅಂತ ಕೂಗತೊಡಗಿತು.. ಸರಿ ಏನಪ್ಪಾ ಸಮಾಚಾರ ಅಂತ ಕರೆ ಸ್ವೀಕರಿಸಿ "ಹಲೋ" ಅಂದೇ.. 

"ಸರ್ ಶ್ರೀಕಾಂತ್ ಮಂಜುನಾಥ್ ಆಲ್ವಾ ಮಾತಾಡ್ತಾ ಇರೋದು"

"ಹೌದು ಮೇಡಂ"

"ಸರ್.. ನಮ್ಮದು ಇನ್ಶೂರೆನ್ಸ್ ಕಂಪನಿ ಇಂದ ಕರೆ... ಈ ವರ್ಷದ ತೆರಿಗೆ ಉಳಿಸೋಕೆ ಒಂದು ಉತ್ತಮ ಉಳಿತಾಯ ಯೋಜನೆ ಇದೆ.. ಅದರ ಬಗ್ಗೆ.... "

ಆಕೆ ಇನ್ನೂ ಹೇಳುತ್ತಲೇ ಇದ್ದರು.. 

"ಮೇಡಂ.. ನಿಮ್ಮ ಕರೆಗೆ ಧನ್ಯವಾದಗಳು ಮೇಡಂ.. ಸದ್ಯಕ್ಕೆ ಯಾವ ಉಳಿತಾಯವೂ ಬೇಡ.. ಆದಾಯವೇ ಮಠ ಹತ್ತಿದೆ.. ನಿಮ್ಮ ಕರೆಗೆ ಧನ್ಯವಾದಗಳು ಮೇಡಂ" ಅಂತ ಕರೆಯನ್ನು ಕಟ್ ಮಾಡೋಕೆ ಹೋದೆ.. 

"ಸರ್.. ನಮ್ಮ ಕಂಪನಿಯ ಉಳಿತಾಯದ ಯೋಜನೆ ಬಗ್ಗೆ ಹೇಳಿಬಿಡುತ್ತೇನೆ.. ನಿಮಗೆ ಇಷ್ಟವಾದರೆ ತಗೊಳ್ಳಿ ಇಲ್ಲವಾದರೆ ಬಿಡಿ.. ಆದರೆ ಹೇಳೋದು ಮಾತ್ರ ಕೇಳಿ ಸರ್" ಅಂದರು 

ನನಗೂ ಕೆಲಸ ಮಾಡಿ ಮಾಡಿ ಸುಸ್ತಾಗಿತ್ತು.. ಸ್ವಲ್ಪ ವಿರಾಮ ಬೇಕಿತ್ತು.. 

"ಸರಿ ಮೇಡಂ ಹೇಳಿ"

"ಸರ್ ನಮ್ಮ ಇನ್ಶೂರೆನ್ಸ್ ಪ್ಲಾನ್ ಹೀಗಿದೆ" ಅಂತ ಗರಗಸ ಶುರುವಾಯಿತು .. ಆ ಕಡೆಯವರಿಗೆ ನನ್ನ ಅನ್ಯಮನಸ್ಕತೆ ಗೊತ್ತಾಯಿತು ಅನ್ನಿಸುತ್ತೆ.. 

"ಸರ್ ನಾ ಹೇಳೋದು ಗೊತ್ತಾಗ್ತಾ ಇದೆಯೇ ಸರ್.. ಈ ಪ್ಲಾನ್ ನಲ್ಲಿ ನೀವು ಒಂದು ಲಕ್ಷ ಕಟ್ಟಿದರೆ.. ಪ್ರತಿ ವರ್ಷ ಮೂವತ್ತು ಸಾವಿರ ಬರುತ್ತೆ ಸರ್.. ಹಾಗೆ ಇದನ್ನು ಕಟ್ಟುತ್ತಾ ಹೋದರೆ.. ಪ್ರತಿ ವರ್ಷವೂ ಬರ್ತಾ ಇರುತ್ತೆ ಸರ್... "

"ಓಕೆ ಮೇಡಂ"

"ನಮ್ಮ ಮಕ್ಕಳಿಗೂ ಬರುತ್ತೆ ಸರ್"

"ಹಾ ನಮ್ಮ ಮಕ್ಕಳ ಏನ್ ಮೇಡಂ ನೀವು ಹೇಳ್ತಾ ಇರೋದು"

"ಸರ್ ಅಂದ್ರೆ... ನೀವು ಇನ್ಶೂರೆನ್ಸ್ ಮಾಡಿಸಿದರೆ ನಿಮ್ಮ ಮಕ್ಕಳೂ ಕೂಡ ಇದರ ಉಪಯೋಗ ಮಾಡಿಕೊಳ್ಳಬಹುದು.. ಅವರೂ ಕೂಡ ಹಣವನ್ನು ಡ್ರಾ ಮಾಡಬಹುದು.. ಮತ್ತೆ ನಾವಿಲ್ಲದೆ ಹೋದರೂ ಮಕ್ಕಳಿಗೆ ಉಪಯೋಗವಾಗುತ್ತದೆ.. "

"ಏನ್ ಮೇಡಂ.. ಏನೇನೋ ಹೇಳ್ತಾ ಇದ್ದೀರಾ"

"ಸರ್.. ಈ ಪ್ಲಾನ್ ತುಂಬಾ ಚೆನ್ನಾಗಿದೆ ಸರ್.. ಇನ್ವೆಸ್ಟ್ ಮಾಡಿ ಸರ್.. ಯಾವಾಗ ಮಾಡ್ತೀರಾ ಸರ್"

"ಮೇಡಂ.. ನಾ ಆಗಲೇ ಹೇಳಿದ್ದೀನಿ.. ನನಗೆ ಇನ್ವೆಸ್ಟ್ ಮಾಡೋಕೆ ಆಸೆಯೂ ಇಲ್ಲ ಅವಕಾಶವೂ ಇಲ್ಲ.. ಧನ್ಯವಾದಗಳು ಮೇಡಂ ನಿಮ್ಮ ಕರೆಗೆ" ಅಂತ ಹೇಳಿ ಕಟ್ ಮಾಡೋಕೆ ಹೋದರೆ.. 

"ಸರ್.. ಈ ಪ್ಲಾನ್ ತುಂಬಾ ಚೆನ್ನಾಗಿದೆ ಇನ್ಶೂರೆನ್ಸ್ ಮಾಡಿಸಿ ಸರ್"

"ಮೇಡಂ.. ನೀವು ಇದನ್ನೇ ಸಂಜೆ ತನಕ ಹೇಳಿದರೂ.. ನಾನೂ ಸುಮ್ಮನೆ ನಿಮ್ಮ ಮಾತುಗಳನ್ನು ಕೇಳ್ತಾ ಇರ್ತೀನಿ.. ಆದರೆ ನನ್ನ ಕಡೆ ಉತ್ತರ ಆಗೋಲ್ಲ ಅಂತಾನೆ ಇರುತ್ತೆ ನಾ ಇನ್ವೆಸ್ಟ್ ಮಾಡೋಲ್ಲ.. ಇನ್ವೆಸ್ಟ್ ಮಾಡುವಷ್ಟು ದುಡ್ಡು ಇಲ್ಲ " 

ಅಷ್ಟು ಹೊತ್ತಿಗೆ ಆಕೆಗೆ ನಗು ಬರೋಕೆ ಶುರುವಾಗಿತ್ತು.. ನನ್ನ ಮಾತುಗಳನ್ನು ಕ್ಕೇಳಿ ಕೇಳಿ.. 

"ಸರ್ ಒಂದು ಪಾಲಿಸಿ ಮಾಡಿಸಿ.. ನಿಮ್ಮ ಸಂಬಳ ಎಷ್ಟು ಕೇಳಬಹುದಾ ಸರ್.. "

"ಮೇಡಂ ಹೆಣ್ಣು ಮಕ್ಕಳ ವಯಸ್ಸು ಗಂಡು ಮಕ್ಕಳ ಸಂಪಾದನೆ ಕೇಳಬಾರದು.. ನಿಮ್ಮ ಕರೆಗೆ ಧನ್ಯವಾದಗಳು ಮೇಡಂ"

ಜೋರಾಗಿ ನಗುತ್ತಾ.. "ಸರ್ ಪ್ಲೀಸ್  ಒಂದು ಪಾಲಿಸಿ ಮಾಡಿಸಿ ಸರ್"

"ಮೇಡಂ ಆಗಲಿ ಈ ಕರೆಯನ್ನು ಸ್ಪೀಕರ್ ಮೋಡಿನಲ್ಲಿ ಇಡುತ್ತೇನೆ.. ಸಂಜೆ ತನಕ ಮಾತಾಡುತ್ತಲೇ ಇರಿ. ನನಗೂ ಆಫೀಸ್ ಕೆಲಸ ಮಾಡೋಕೆ ಸ್ಫೂರ್ತಿ ಬರುತ್ತೆ..ಮುಂದುವರೆಸಿ.. ನಿಮ್ಮ ಕಂಪನಿಯ ಎಲ್ಲಾ ಪಾಲಿಸಗಳ ಬಗ್ಗೆ ಹೇಳೋಕೆ ಶುರು ಮಾಡಿ.. ಓಕೇ ನಾ ಮೇಡಂ"

ಜೋರಾಗಿ ನಕ್ಕು "ಧನ್ಯವಾದಗಳು ಸರ್.. ಪಾಲಿಸಿ ಬೇಕಿದ್ದರೆ ಈ ನಂಬರ್ ಸೇವ್ ಮಾಡಿಕೊಳ್ಳಿ ಸರ್.. ನಿಮ್ಮ ಅಮೂಲ್ಯ ಸಮಯಕ್ಕೆ ಧನ್ಯವಾದಗಳು ಸರ್ " 

"ಹ ಹ ಹ.. ಸರಿ ಮೇಡಂ"

ಕರೆ ಕಟ್ ಆಯಿತು.. 

ಆಫೀಸಿನ ಫಾಲ್ಸ್ ಸೀಲಿಂಗ್ ನೋಡಿದೆ... ಅದರ ಪುಟ್ಟ ಕಂಡಿಯಲ್ಲಿ ದೇವನ ನಗು ಸದ್ದು ಕೇಳಿಸಿತು ... 

"ಶ್ರೀ.. ಈ ಟೆಲಿ ಮಾರ್ಕೆಟಿಂಗ್ ಕರೆಗಳನ್ನು ಹಲವಾರು ಮಂದಿ ಬಯ್ದು ಬಯ್ದು ಕಿರ್ಚಾಡ್ತಾರೆ... ಆದರೆ ನೀನು ಸಮಾಧಾನವಾಗಿ ಕೇಳುತ್ತೀಯೆ ಮತ್ತೆ ಧನ್ಯವಾದಗಳನ್ನು ಹೇಳುತ್ತೀಯೆ... ಅದು ಹೆಂಗೆ.. ಮತ್ತೆ ಯಾಕೆ"

"ಬಾಸ್.. ನನಗೆ ಮೂವತ್ತು ದಿನಗಳನ್ನು ಆಫೀಸಿನ ಕೆಲಸದಲ್ಲಿ ತೊಡಗಿಸಿಕೊಂಡರೆ ಸಂಬಳ ಕೊಡುವುದು.. ಹಾಗೆ ಅವರಿಗೂ ಕೂಡ ದಿನಕ್ಕೆ ಇಷ್ಟು ಕರೆಗಳನ್ನು ಮಾಡಲೇ ಬೇಕು ಅಂತ ಟಾರ್ಗೆಟ್ ಕೊಟ್ಟಿರುತ್ತಾರೆ... ಮತ್ತೆ ಆ ಕರೆಗಳಲ್ಲಿ ಕೆಲವು ಕರೆಗಳನ್ನು ರೆಕಾರ್ಡ್ ಅವರಿಗೆ ಅರಿವಿಲ್ಲದೆ ರೆಕಾರ್ಡ್ ಕೂಡ ಮಾಡ್ತಾರೆ ಅಂತ ಕೇಳಿದ್ದೇನೆ. ಅದು ಅವರ ಕೆಲಸ.. ಅದನ್ನು ಮಾಡಿದರೆ ಅವರಿಗೆ ಸಂಬಳ ಕೊಡುವುದು.. ಅದಕ್ಕೆ ಯಾಕೆ ನಾ ಕಿರುಚಾಡಬೇಕು.. ತಾಳ್ಮೆ ಇಂದ ಉತ್ತರಿಸಿದರೆ ನನ್ನ ಏಕಾಗ್ರತೆ ಹಾಳಾಗೋಲ್ಲ.. ಮತ್ತೆ ಆ ಕಡೆಯವರಿಗೂ ನಿರಾಳ ಮತ್ತೆ ಮನಸ್ಸಿಗೆ ಹಿಂಸೆ ಆಗೋಲ್ಲ.. ಅಂತಹ ಕರೆಗಳು ಬಂದಾಗ.. ಆ ಕ್ಷಣ ನಾ ಅವರ ಸ್ಥಾನದಲ್ಲಿ ನಿಂತು ಮಾತಾಡುತ್ತೇನೆ.. ಆಗ ನನಗೂ ಖುಷಿ ಅವರಿಗೂ ಖುಷಿ"

ದೇವರು ಕಣ್ಣು ಹೊಡೆದು  ಹೆಬ್ಬೆರಳನ್ನು ಎತ್ತಿ ಸೂಪರ್ ಶ್ರೀ ಅಂದ.. ಅಂದಿದ್ದು ಮಾತ್ರ ಕೇಳಿಸಿತು.. ಬೆಳಕಲ್ಲಿ ಬೆಳಕಾಗಿ ಮಾಯವಾದ!!!

ಚಿತ್ರಕೃಪೆ : ಗೂಗಲೇಶ್ವರ