Monday, June 17, 2013

ಸಾಮೀ ಎದ್ದು ಕೂತವ್ನಂತೆ!!!

ಜನರೆಲ್ಲಾ ಎದ್ದು ಬಿದ್ದು ಓಡುತ್ತಿದ್ದರು.. !

ಇತರರಿಗೆ ಆಶ್ಚರ್ಯವಾಯಿತು... ವೇಗವಾಗಿ ಓಡುತ್ತಿದ್ದ ಒಬ್ಬನನ್ನು ಬಲವಂತವಾಗಿ ಹಿಡಿದು "ಏನಪ್ಪಾ?...  ಏನಾಯ್ತು? ಯಾಕೆ ಹೀಗೆ ದೆವ್ವ ಕಂಡವರ ಹಾಗೆ ಓಡ್ತಾ ಇದ್ದೀರಾ?"  ಅಂತ ಕೇಳಿದ ಒಬ್ಬ. 

ಏದುಸಿರು ಬಿಡುತ್ತಾ "ಸಾಮೀ ಎದ್ದು ಕೂತವ್ನಂತೆ?... ಬಿಡಿ ಸಾಮೀ ನಾನು ಹೋಗ್ಬೇಕು" ಅಂತ ಬಲವಂತವಾಗಿ ಬಿಡಿಸಿಕೊಂಡು ಓಡಲು ಶುರು ಮಾಡಿದ... ಮತ್ತೆ ಅವನ ಹಿಂದೆ ಓಡಿ ಹೋಗಿ ಹಿಡಿದುಕೊಂಡು, 

"ಏನಪ್ಪಾ... ಸರಿಯಾಗಿ ಅರ್ಥವಾಗುವಂತೆ ಕನ್ನಡದಲ್ಲಿ ಹೇಳಬಾರದೇ.. ದಯಮಾಡಿ ಹೇಳಪ್ಪ" ಅಂತ ಅಂಗಲಾಚಿದ,

"ಸಾಮೇ ಬುಡಿ ಸಾಮೇ ನನ್ನ" ಅಂತ ಕೊಸರಾಡಿದ... ಹಿಡಿದವನು ಪಟ್ಟು ಬಿಡಲಿಲ್ಲ.. 

"ಸಾಮಿ.. ನೀವೂ ಬನ್ನಿ ನಾ ಅಲ್ಲಿಗೆ ಹೋಯ್ತಾ ಇವ್ನೀ.. " ಅಂತ ಆತನನ್ನು ಕರೆದೊಯ್ದಾ!

ಎಲ್ಲರೂ ದೇವಸ್ಥಾನದೊಳಗೆ  ಬಂದರು.. ಅಲ್ಲಿನ ಅರ್ಚಕರು ಗಡ ಗಡ ನಡುಗುತ್ತಿದ್ದರು... ಒಮ್ಮೆ ಗರ್ಭ ಗುಡಿಯ ಕಡೆ ನೋಡುತ್ತಾರೆ ಇನ್ನೊಮ್ಮೆ ಜನಗಳ ಕಡೆ ನೋಡುತ್ತಾರೆ.... 

ಅಲ್ಲಿ ನೆರೆದಿದ್ದ ಜನರಿಗೆ ಆಶ್ಚರ್ಯ... ಭಯ... ಎಲ್ಲವೂ ಒಮ್ಮೆಲೇ...! ಏನಾಯ್ತಪ್ಪ? ಅಂತ ಹುಬ್ಬನ್ನು ಮೇಲೆ ಮಾಡಿ ಅರ್ಚಕರಿಗೆ ಕಣ್ಣು ಸನ್ನೆಯಲ್ಲೇ ಕೇಳಿದರು

ಅರ್ಚಕರು ನಡುಗುವ ತನುವಿಂದ.. ಕಣ್ಣನ್ನು ಗರ್ಭಗುಡಿಯ ಕಡೆ ತೋರಿಸಿದರು... 

ಅಲ್ಲಿನ ದೃಶ್ಯ ನೋಡಿ ಜನಗಳ ಕೈಗಳು, ತುಟಿಗಳು, ಕಾಲುಗಳು ನಡುಕ ಹತ್ತಿದವು.. ಇದ್ದದರಲ್ಲಿ ಧೈರ್ಯವಂತರಂತಿದ್ದ  ಒಬ್ಬರು ಗರ್ಭ ಗುಡಿಯ ಒಳಗೆ ಹೋಗಿಯೇ ಬಿಟ್ಟರು.. ಅಲ್ಲಿನ ದೃಶ್ಯ ನೋಡಿ ಅವರ ಕಣ್ಣುಗಳು ತುಂಬಿಬಂದವು... 

ಕಣ್ಣನ್ನು ಒರೆಸಿಕೊಂಡು  ನಡುಗುವ ಕೈಗಳಿಂದ ರಂಗನಾಥನಿಗೆ ಸಾಷ್ಟ್ರಾಂಗ ನಮಸ್ಕಾರ ಮಾಡಿ "ದೇವನೇ ಏನಪ್ಪಾ ಇದು ನಿನ್ನ ಲೀಲೆ... ಸನಕ ಸನಂದಾದಿಗಳಿಗೆ ಸಿಕ್ಕದ ಭಾಗ್ಯ ನನಗೆ ಸಿಕ್ಕುವಂತೆ ಮಾಡಿದೆ.. ದೇವನೇ ನಿನ್ನ ಕರುಣೆ ಸದಾ ನಮ್ಮೆಲ್ಲರ ಮೇಲೂ ಇರಲಿ ತಂದೆ" ಎನ್ನುತ್ತಾ ಹೊರಗೆ ಬಂದು.. 

ಅಲ್ಲಿನ ಅರ್ಚಕರನ್ನು ಕರೆದು "ಬನ್ನಿ ಸ್ವಾಮೀ ಒಳಗೆ ಹೋಗಿ ಬನ್ನಿ" ಎಂದರು..  

"ಸರ್ ನೀವು ಬಂದರೆ ಮಾತ್ರ ನಾವು ಒಳಗೆ ಬರುತ್ತೇವೆ... !"ಎಂದರು ಅರ್ಚಕರು.. 

"ಸರಿ ನಡೆಯಿರಿ ಬರುತ್ತೇನೆ" ಎಂದು ಮತ್ತೆ ಗರ್ಭಗುಡಿಯೊಳಗೆ ಬಂದರು

ಅರ್ಚಕರಿಗೆ ಕಣ್ಣ ಮುಂದೆ ನೆಡೆಯುತ್ತಿರುವುದು ನಿಜವೋ...... ಸುಳ್ಳೋ.... ಪವಾಡವೋ...  ತಿಳಿಯುತ್ತಿಲ್ಲ.. ಕಣ್ಣಿನ ಎವೆ ಕೂಡ ಮಿಟುಕಿಸದೆ  ನೋಡುತ್ತಲೇ ಇದ್ದರು.. !

ಧೈರ್ಯವಂತರಾಗಿದ್ದ ಅವರು ಧೈರ್ಯ ಮಾಡಿ ಕೇಳಿಯೇ ಬಿಟ್ಟರು 

"ಏನು ಸ್ವಾಮೀ..ನಿನ್ನ ಲೀಲೆ ...  ಧರೆಗಿಳಿದು ಬಂದ ಕಾರಣ ತಿಳಿಯುತ್ತಿಲ್ಲ...." 

ಪ್ರಸನ್ನ ಚಿತ್ತನಾದ ಶ್ರೀ ರಂಗನಾಥ ಸ್ವಾಮೀ .. ಅಲ್ಲಿಯೇ ಕುಳಿತಿದ್ದ ಶ್ರೀ ಲಕ್ಷ್ಮಿಯ ಕಡೆ ನೋಡಿ ಮುಗುಳು ನಗೆ ಬೀರಿದರು.. 

ಆಗ ಶ್ರೀಲಕ್ಷ್ಮೀ "ಭಕ್ತ.. ಸ್ವಾಮಿಗೆ ಮುಂಜಾನೆ ಏನು ಅನ್ನಿಸಿತೋ ಏನೋ.. ಅಚಾನಕ್ಕಾಗಿ ಶ್ರೀಲಕ್ಷ್ಮಿ ಕಾಲು ಒತ್ತಿದ್ದು ಸಾಕು ಅಲ್ಲಿಯೇ ಇರುವ ಲ್ಯಾಪ್-ಟಾಪ್ ಕೊಡು" ಎಂದರು.. 

ನಾನು ಆಶ್ಚರ್ಯಚಕಿತಳಾಗಿ  "ಯಾಕೆ ಸ್ವಾಮೀ.. ಏನಾಯಿತು ನಾಥ" ಎಂದು ಕೇಳಿದೆ 

ಅದಕ್ಕೆ ಸ್ವಾಮಿಯು "ಲಕ್ಷ್ಮಿ.. ಯಾಕೋ ಮಲಗಿ ಮಲಗಿ ಸಾಕಾಗಿದೆ ಶ್ರೀರಂಗಪಟ್ಟಣದ ಚರಿತ್ರೆಯನ್ನು ಒಮ್ಮೆ ಓದುವ ಆಸೆ ಮೂಡುತ್ತಿದೆ.. ಅದಕ್ಕಾಗಿ  ಲ್ಯಾಪ್-ಟಾಪ್ ಬೇಕು" ಅಂತ ಹೇಳಿದರು 

"ಹೇಗೆ ನೋಡುತ್ತೀರಿ ಸ್ವಾಮಿ" ಎಂದೇ ನಾನು

"ಮೈಸೂರಿನಲ್ಲಿರುವ ನಿಮ್ಮೊಳಗೊಬ್ಬ ಬಾಲೂ ಎನ್ನುವವರು ಶ್ರೀರಂಗಪಟ್ಟಣದ ಕಲ್ಲು ಕಲ್ಲಿನ ಇತಿಹಾಸವನ್ನು ಬಿಡಿಸಿ ಇಟ್ಟಿದ್ದಾರೆ ಅವರ ಕಾವೇರಿ ರಂಗ !!!! ಎನ್ನುವ ಬ್ಲಾಗಿನಲ್ಲಿ... ಶ್ರೀರಂಗಪಟ್ಟಣದ ಅಧಿನಾಯಕನಾದ ನನ್ನ ಚರಿತೆ.. ನನ್ನ ನೆಲವನ್ನು ಸುತ್ತುವರೆದಿರುವ ಕಾವೇರಿ ಮಾತೆಯ ಇತಿಹಾಸ.. ಈ ಕ್ಷೇತ್ರದ ಸ್ಥಳ ಪುರಾಣ.. ಇಲ್ಲಿ ಆಳಿದ ರಾಜ ಮಹಾರಾಜರ ಚರಿತ್ರೆ.. ನನ್ನ ಮಡದಿ ಭೂದೇವಿಯಲ್ಲಿ ಅಡಗಿರುವ  ವಿಸ್ಮಯಗಳು ಎಲ್ಲವೂ ಈ ಬ್ಲಾಗಿನಲ್ಲಿ ಅನಾವರಣಗೊಂಡಿದೆ.. ವಿದೇಶದಿಂದ ಬಂದಿದ್ದ ಮಹಿಳೆಯೊಬ್ಬರಿಗೆ ಈ ಪ್ರದೇಶದ ಇತಿಹಾಸವನ್ನು ಮಕ್ಕಳಿಗೆ ಹೇಳುವಂತೆ ವರ್ಣಿಸಿರುವ ಅವರ ಬರಹದ ಮಹತ್ವ..  ಓದಿಯೇ ತಿಳಿಯಬೇಕು.. ನನ್ನ ಆಶೀರ್ವಾದದ ಬಲದಿಂದ ಈ ಕಾವೇರಿ-ರಂಗನ ಇತಿಹಾಸ ಮುದ್ರಣ ರೂಪದಲ್ಲಿ ಬಂದು ಸಮಸ್ತ ಕುಲಕೋಟಿಗೂ ತಲುಪುವಂತೆ ಆಗುತ್ತದೆ.."

ಬಾಲೂ ಸರ್ ಅವರ ಕಾವೇರಿ-ರಂಗ ಬ್ಲಾಗಿನ ಕೊಂಡಿ http://shwethadri.blogspot.in/
"ಒಹ್.. ಹೌದಾ ಸ್ವಾಮೀ ನಿಮ್ಮ ಮಾತುಗಳನ್ನ ಕೇಳಿ ಕ್ಷೀರಸಾಗರದ ಕ್ಷೀರವನ್ನು ಕುಡಿದಷ್ಟೇ ಸಂತಸವಾಗುತ್ತಿದೆ.. ಅಂದ ಹಾಗೆ ಬೆಳಿಗ್ಗೆ ದಿನಸೂಚಿ ನೋಡಿದೆ.. ಇಂದು ಆ ಮಹನೀಯರ ಹುಟ್ಟು ಹಬ್ಬ ಅಲ್ಲವೇ ಸ್ವಾಮೀ?"

"ಹೌದು ಲಕ್ಷ್ಮಿ.. ಅದಕ್ಕಾಗಿಯೆ ಆ ಭಕ್ತನ ನೋಡಲು ನಾನು ಇಂದು ಎದ್ದು ಕೂತಿದ್ದು.. ನೋಡು ಗರ್ಭಗುಡಿಯ ಒಳಗೆ ಧೈರ್ಯ ಮಾಡಿ ಬಂದ ಇವರೇ ಅವರು ... ಮೈಸೂರು ಪ್ರಾಂತ್ಯದ  ತನ್ನ ಗೆಳೆಯರ ಬಳಗದಲ್ಲಿ ಬಾಲೂ ಸರ್.. ಬಾಲಣ್ಣ ಎಂದು ಖ್ಯಾತಿಯಾಗಿರುವ  ಬಾಲಸುಬ್ರಮಣ್ಯ... ಎಲ್ಲರೊಳಗೊಬ್ಬ ಸುಂದರ ಜೀವಿ ಈ ಬಾಲೂ!"

ನಮ್ಮ ಹೆಮ್ಮೆಯ ನಲ್ಮೆಯ ಬಾಲೂ ಸರ್  (ಚಿತ್ರ ಕೃಪೆ - ಪ್ರಕಾಶ ಹೆಗಡೆ)
"ಭಕ್ತ ಇಂದಿನ ನಿಮ್ಮ ಹುಟ್ಟು ಹಬ್ಬಕ್ಕೆ ನಾವಿಬ್ಬರು ನಿಮ್ಮ ಕಾವೇರಿ-ರಂಗ ಬ್ಲಾಗನ್ನು ಓದಿ ಸಂತೋಷಿಸಿದ್ದೇವೆ.. ಆದಷ್ಟು ಬೇಗ ಇದು ಮುದ್ರಣ ರೂಪದಲ್ಲಿ ಮೂಡಿಬರಲೆಂದು ಆಶೀರ್ವದಿಸುತ್ತಾ... ಹಾಗೆಯೇ ಆಯಸ್ಸು, ಆರೋಗ್ಯ,  ಗೆಳೆಯರ ಪ್ರೀತಿ, ವಿಶ್ವಾಸ ,ಐಶ್ವರ್ಯ,  ಕುಟುಂಬದ ಸೌಖ್ಯ ಎಲ್ಲವೂ ಇರುವುದಕ್ಕಿಂತ ಹೆಚ್ಚಿಗೆ ಸಿಗಲಿ ಎಂದು ಹಾರೈಸುವೆ"  ಎಂದಾನಾ ದೇವಾದಿದೇವ!

ದಾರಿಯ  ಮಾಡಿ ಗರ್ಭ ಗುಡಿಯೊಳಗೆ ಬಂದಿದ್ದ ಬಾಲೂ ಸರ್ ಕಂಗಳನ್ನು ತುಂಬಿಕೊಂಡು.. ದೇವ ಕೃತಾರ್ಥನಾದೆ.. ನಿಮ್ಮ ಈ ಆಶೀರ್ವಾದ ನನಗೆ ಸಹಸ್ರ ಆನೆಬಲ ತಂದಿದೆ.. ಖಂಡಿತ ನಿಮ್ಮ ಹಾರೈಕೆಯಂತೆ ಕಾವೇರಿ ರಂಗನ ಮೊದಲ ಪ್ರತಿಯನ್ನು ನಿಮಗೆ ಅರ್ಪಿಸುತ್ತೇನೆ " ಎಂದು ಸಾಷ್ಟ್ರಂಗ ಪ್ರಣಾಮ ಮಾಡಿದರು.

ಬಾಲೂ ಸರ್ ಇಂತಹ ಶ್ರೀರಂಗಪಟ್ಟಣದ ಉತ್ಕೃಷ್ಠ ಇತಿಹಾಸದ ಪುಟಗಳನ್ನೂ ನಮಗೆ ಪರಿಚಯಿಸಿರುವ.... ಹಾಗೆಯೇ ಅನೇಕ ಪ್ರೇಕ್ಷಣೀಯ ಸ್ಥಳಗಳ ಬಗ್ಗೆ ಪರಿಚಯ ಮಾಡಿಕೊಟ್ಟಿರುವ ನಿಮಗೆ ಹುಟ್ಟು ಹಬ್ಬದ ಶುಭಾಶಯಗಳು.. ನಿಮ್ಮನ್ನು ಗೆಳೆಯರನ್ನಾಗಿ ಪಡೆದ ನಾವೇ ಭಾಗ್ಯವಂತರು ....!

ಹುಟ್ಟು ಹಬ್ಬದ ಶುಭಕಾಮನೆಗಳೊಂದಿಗೆ ಬ್ಲಾಗ್ ಹಾಗು ಫೇಸ್ ಬುಕ್ ಬಳಗ ನಿಮಗೆ ಶುಭಾಶಯಗಳನ್ನು ಕೋರಿ ಅಭಿನಂದಿಸುತ್ತದೆ!!!

17 comments:

 1. ಬಾಲಣ್ಣಾ ,
  ಜನುಮ ದಿನದ ಪ್ರೀತಿಯ ಶುಭಾಶಯಗಳು .
  ಮೊದಲ ಮಾತಿಗೆ ಅತೀ ಆತ್ಮೀಯ ಅನ್ನೋ ತರ ಮಾತಾಡ್ತಾ ,ಬ್ಲಾಗಿಗರ ಬೆನ್ನು ತಟ್ತಾ ,ಬ್ಲಾಗ್ ಕುಟುಂಬದಲ್ಲಿ "ನಿಮ್ಮೊಳಗೊಬ್ಬ ಬಾಲು" ಅಂತಾನೇ ಹೇಳ್ತಾ ನಮ್ಮೆಲ್ಲರಿಗೆ ಬಾಲಣ್ಣನಾಗಿ ,ದೊಡ್ಡಣ್ಣನಾಗಿ ನೀವಿತ್ತ ಪ್ರೋತ್ಸಾಹವೇ ನಮ್ಮಗಳ ಉತ್ಸಾಹ :)
  ಕ್ಯಾಮರಾ ಕಣ್ಣಲ್ಲೇ ಎಲ್ಲರನೂ ಮೋಡಿ ಮಾಡೋ ನಿಮಗೊಂದು ನಮನ.
  ಶ್ರೀಕಾಂತಣ್ಣ ಹೇಳಿದಂತೆ ನಾನೂ ನಿಮ್ಮ ಪುಸ್ತಕದ ನಿರೀಕ್ಷೆಯಲ್ಲಿ :)
  ಮತ್ತೊಮ್ಮೆ ಹುಟ್ಟು ಹಬ್ಬದ ಶುಭಾಶಯಗಳು ಬಾಲಣ್ಣ .
  ನಿಮ್ಮೆಲ್ಲಾ ಕನಸುಗಳು ಕೈಗೂಡಲಿ.
  ಈ ನಗು ಹೀಗೆಯೇ ಇರ್ಲಿ :)


  ಶ್ರೀಕಾಂತಣ್ಣ ಸೂಪರ್ .ನೀವು ಕಟ್ಟಿಕೊಟ್ಟ ಈ ಪರಿಯ ನೋಡಿ ಬೆರಗಾದೆ ಕ್ಷಣವೊಂದಕ್ಕೆ .
  ಬಾಲಣ್ಣನಿಗೊಂದು ಮೆಮೋರೆಬಲ್ ಉಡುಗೊರೆ ಕೊಟ್ರಿ .
  ಪ್ರೀತಿಯ ಅಣ್ಣನಿಂದ ಪ್ರೀತಿಯ ಬಾಲಣ್ಣನಿಗೆ ಹೇಳಿದ ಹೊಸ ತರದ ಶುಭಾಶಯ ಪತ್ರ ಇಷ್ಟವಾಯ್ತು

  ReplyDelete
 2. ಹುಟ್ಟುಹಬ್ಬದ ಶುಭಾಶಯಗಳು ಬಾಲು ಸರ್ ಅವರಿಗೆ...
  ಶ್ರೀಕಾಂತ್ ಮತ್ತೊಮ್ಮೆ ನಿಮ್ಮದೇ ವಿಭಿನ್ನ ಶೈಲಿಯಲ್ಲಿ ಆತ್ಮೀಯರ ಜನ್ಮದಿನಕ್ಕೆ ಉಡುಗೊರೆ...
  ಇಷ್ಟ ಆಯ್ತು... :-)

  ReplyDelete
 3. ಅಮೋಘ
  ಅದ್ಭುತ
  ವಿಚಾರಪೂರ್ಣ
  ಮಾಹಿತಿ ಕಣಜ
  ಬಾಲಣ್ಣನ ಹುಟ್ಟಿದ ಹಬ್ಬಕ್ಕೆ ಶ್ರೀಮಾನ್ ಕೊಟ್ಟ ಈ ಬ್ಲಾಗ್ ಕೊಡುಗೆ ಅನನ್ಯವಾಗಿದೆ. ರಂಗನಾಥ ಸ್ವಾಮಿಗೆ ಲ್ಯಾಪ್ ಟಾಪ್ ಕೊಡಬಲ್ಲ ಏಕೈಕ ವ್ಯಕ್ತಿ ಎಂದರೆ ನಮ್ಮ ಬಾಲಣ್ಣನೇ ಸರಿ.

  ಇವರು ನಮ್ಮ ಸಚಿವ ಸಂಪುಟದಲ್ಲಿ ಪ್ರವಾಸೋದ್ಯಮ ಸಚಿವರು!

  ಬಾಲಣ್ಣ ನೂರ್ಕಾಲ ಖುಷಿಯಾಗಿ ಬಾಳಲಿ ಎನ್ನುವುದು ಅವರ ಅಭಿಮಾನಿಗಳ ಹಾರೈಕೆ.

  ReplyDelete
 4. ಬಾಲಣ್ಣಾ ....
  ಜನುಮ ದಿನದ ಶುಭಾಶಯಗಳು...

  SAhreekanthu... jai ho !!

  ReplyDelete
 5. ಬಾಲಣ್ಣನಿಗೆ ಸುಖ.ಸಂಪತ್ತು ಆಯುರಾರೋಗ್ಯ ದೇವರು ಕೊಡಲಿ ಎಂದು ನಮ್ಮ ಪ್ರಾರ್ಥನೆ...
  ಬಾಲಣ್ಣಾ ....ಜನುಮ ದಿನದ ಶುಭಾಶಯಗಳು...

  ReplyDelete
 6. ವರ್ಷವಾಗಿಲ್ಲ ಇನ್ನೂ.. ಐದು ದಿನಗಳು ಬಾಕಿ ಇವೆ. ಹೌದು ಈ ಅಣ್ಣನನ್ನು ಮೊದಲು ಭೇಟಿಯಾದದ್ದು ಬಸ್ ನಲ್ಲಿ. ಓದುವ , ಇತಿಹಾಸಗಳ ಬಗೆಗೆ ಆಸಕ್ತಿ ಇರುವ ನನಗೆ ಇವರು ಮೊದಲು ತೋರಿಸಿದ್ದು ಸರಸ್ವತಿ ಅಸ್ಥಾನವನ್ನು. ಪ್ರತಿ ಸ್ಥಳಕ್ಕೆ ಹೋದಾಗ ಅಲ್ಲಿನ ಇತಿಹಾಸವನ್ನು ತಾವು ತಿಳಿದು ಬರುವುದಲ್ಲದೆ ಅದನ್ನು ಬೇರೆಯವರಿಗೂ ಹಂಚುವ ಇವರ ಪರಿ ತುಂಬಾ ತುಂಬಾ ಇಷ್ಟ.

  ಈಗೊಂದು ತಿಂಗಳ ಹಿಂದೆ ಆಫೀಸ್ ನಲ್ಲಿ ಶಿರಸಿಯ ಹತ್ತಿರದ ಕೊಂಕಿ ಕೋಟೆಯ ಬಗೆಗೆ ವಿಷಯ ಬಂತು, ಅರೆ ಅಲ್ಲೇ ಹುಟ್ಟಿ ಬೆಳೆದಿದ್ದರೂ ನನಗದರ ಬಗ್ಗೆ ಮಾಹಿತಿ ಇರಲಿಲ್ಲ. ತಕ್ಷಣ ನೆನಪಾದದ್ದು ಬಾಲಣ್ಣ. ಫೋನ್ ಮಾಡಿ ಕೇಳಿದೆ. ನೋಡಿ ಸಂಜೆ ಹೇಳತೀನಮ್ಮ , ಎಂದ ಇದೇ ಬಾಲಣ್ಣ ಮುಂದಿನ ಎರಡು ಕೇವಲ ಎರಡೇ ಗಂಟೆಗಳಲ್ಲಿ ಆ ಸ್ಥಳದ ಸಂಪೂರ್ಣ ಮಾಹಿತಿಯನ್ನು ನನ್ನ ಮುಂದೆ ತೆರೆದಿಟ್ಟಿದ್ದರು ...!!!

  ಇನ್ನು ಇವರ ಕ್ಯಾಮರ ಕಮಾಲ್ ಬಗೆಗೆ ಹೇಳುವುದೇನೂ ಬೇಕಿಲ್ಲ. ಅವರ ಫೋಟೋಗಳೇ ಮಾತನಾಡುತ್ತವೆ. ಕದ್ದು ಫೋಟೋ ತೆಗೆದುಕೊಳ್ಳುವ ಈ ಅಣ್ಣನಿಗೆ ಪ್ರೀತಿಯದೊಂದು ಗುದ್ದು.. :)


  ತಂಗ್ಯಮ್ಮಾ ಎಂದು ಬಾಯ್ತುಂಬಾ ಕರೆಯುತ್ತಾ ಆತ್ಮೀಯರಾದ ಪರಿಗೆ ನನ್ನಲ್ಲಿ ಖಂಡಿತಾ ಮಾತುಗಳಿಲ್ಲ ..

  ಇವರು, ಪ್ರಕಾಶಣ್ಣ , ಅಜಾದ್ ಭಯ್ಯಾ , ಶ್ರೀಕಾಂತಣ್ಣ ಇದ್ದಲ್ಲಿ ನಗುವಿಗೆ ಕೊರತೆಯೇ ಇಲ್ಲ ...:)

  ಹ್ಯಾಪಿ ಬರ್ತ್ಡೇ ಬಾಲಣ್ಣ ... :) :)

  ReplyDelete
 7. ತುಂಬ ಚೆನ್ನಾಗಿದೆ:) ಆರಂಭದಲ್ಲಿ ಯಾರ ಬಗ್ಗೆ ಬರೆದಿದ್ದೀರ ಅನ್ನೋ ಪ್ರಶ್ನೆ
  ಮೂಡಿತು...ಆರಂಭ ತುಂಬ ಚೆನ್ನಾಗಿದೆ ಕೊನೆಯಲ್ಲಿ ಯಾರ ಬಗ್ಗೆ ಬರೆದಿದ್ದೀರ ಅಂತ
  ತಿಳಿಯಿತು ಅಲ್ಲಿಯ ತನಕ ರಹಸ್ಯವನ್ನು ಬಿಟ್ಟುಕೊಟ್ಟಿಲ್ಲ ನಿಮ್ಮ ಯೋಚನಾ ಲಹರಿಗೆ
  ಹ್ಯಾಟ್'ಸ ಆಫ್:)
  ಜನುಮ ದಿನದ ಶುಭಾಶಯಗಳು ಬಾಲಣ್ಣಾ:)

  ReplyDelete
 8. ಬಾಲಣ್ಣ ಅವರ ಬಗ್ಗೆ ಹೇಳೋಕೆ ಸಾಧ್ಯವೇ ಇಲ್ಲ. ಅವರು ನಿಜಕ್ಕೂ ನಮ್ಮಗಳಿಗೆ ಪರಿಚಿತರು ಆತ್ಮೀಯರು ಎಂದು ಹೇಳಿಕೊಳ್ಳಲು ಹೆಮ್ಮೆ ಎನಿಸುತ್ತದೆ.
  ಬಾಲಣ್ಣ ಸದಾ ನಿಮಗೆ ದೇವರು ಆರೋಗ್ಯ ಭಾಗ್ಯ ಎಲ್ಲವನ್ನು ನೀಡಿ ಸಂತಸದಿಂದ ಕೂಡಿರುವಂತೆ ಮಾಡಲಿ.

  ReplyDelete
 9. balu sir many many happy returns of the day...

  nimma hosa pustaka baruva vichara tiliyitu...congrats...nanu kayuthiddene..

  ReplyDelete

 10. ಅಣ್ಣಯ್ಯ.. ಲೇಖನದ ಬಗ್ಗೆ ಮಾತೇ ಇಲ್ಲಾ.. ದೇವಾನುದೇವತೆಗಳೂ ನಿಮ್ಮ ಲೇಖನಕ್ಕೆ ನಿಬ್ಬೆರಗಾಗಿ ಧರೆಗಿಳಿದು ಬರುತ್ತಾರೆ.. ಸೂಪರ್ ...
  ಬಾಲು ಸರ್, ಹುಟ್ಟು ಹಬ್ಬದ ಹಾರ್ದಿಕ ಶುಭಾಶಯಗಳು.. :)

  ReplyDelete
 11. ಆಹ...ಶ್ರೀಕಾ೦ತ್....ಎಷ್ಟು ಚೆನ್ನಾಗಿ ಬರೆದಿದ್ದೀರಿ.....
  ಬಾಲು ಸರ್ ನಿಮಗೆ ಹುಟ್ಟು ಹಬ್ಬದ ಶುಭಾಶಯಗಳು ಮತ್ತೊಮ್ಮೆ.....
  ನನ್ನ ಪಾಲಿಗೆ ಶ್ರೀರ೦ಗಪಟ್ಟಣವೆ೦ದರೆ ಮೊದಲು ನೆನಪಾಗುವುದು ಬಾಲು ಸರ್, ನ೦ತರ ರ೦ಗನಾಥ
  ಶುಭವಾಗಲಿ....

  ReplyDelete
 12. ಓದಿ ಮತ್ತೊಮ್ಮೆ ಬಾಲೂ ಸರ್ ಅವರಿಗೆಹುಟ್ಟು ಹಬ್ಬದ ಶುಭಾಶಯಗಳನ್ನು ಸಲ್ಲಿಸಿದ ಎಲ್ಲರಿಗೂ ಧನ್ಯವಾದಗಳು

  ReplyDelete
 13. ಕೊಸರು:
  ಬಾಲಣ್ಣ ನನಗೆ ಥೇಟ್ ಬಿಳಿಗಿರಂಗನಾಥ ಸ್ವಾಮಿ ಇದ್ದ ಹಾಗೆ. ಚಲುವಾಂತ ಚನ್ನಿಗರಾಯ.

  ReplyDelete
 14. ಪ್ರೀತಿಯ ಶ್ರೀಕಾಂತ್ ಈ ನಿಮ್ಮ ಮಾತುಗಳಿಗೆ ಮೂಕನಾಗಿದ್ದೇನೆ , ನಿಮ್ಮ ಹೊಗಳಿಕೆಯ ಮಾತುಗಳಿಗೆ ನನಗೆ ಎಷ್ಟು ಅರ್ಹತೆ ಇದೆಯೋ ಗೊತ್ತಿಲ್ಲ . ನೀವೆಲ್ಲಾ ಬ್ಲಾಗ್ ಗೆಳೆಯರು ನೀಡುವ ಒಳ್ಳೆಯ ಮಾತುಗಳು ನನಗೆ ಶ್ರೀ ರಕ್ಷೆ, ನಿಮ್ಮ ಬ್ಲಾಗ್ ಬರಹ ಓದಿ ಶ್ರೀ ರಂಗನಾಥ ನನ್ನನ್ನು ನೋಡಿ ಗಹಗಹಿಸಿ ನಗದಿದ್ದರೆ ಸಾಕು, ಈ ಅಜ್ಞಾನಿ ಯಲ್ಲಿ ಏನುಕಂಡು ಇಷ್ಟು ಹೊಗಳಿಕೆ ಬರುತ್ತಿದೆಯೋ ಕಾಣೆ, ಆದರೂ ನಿಮ್ಮೆಲ್ಲರ ಪ್ರೀತಿಯ ಮಾತು ನನ್ನ ಅಹಂಕಾರ ಕಡಿಮೆಮಾಡಿದರೆ , ಅದೇ ನನ್ನ ಜನ್ಮದ ಸಾರ್ಥಕತೆ . ಶುಭ ಹಾರೈಸಿದ ಎಲ್ಲರಿಗೂ ಗೌರವ ಪೂರ್ಣ ಕೃತಜ್ಞತೆಗಳು .

  ReplyDelete
 15. Super!! tumba chennagide... but aagle ardha varsha aagoitalla... aadru irali... Belated Birthday Wishes Balu Sir!

  ReplyDelete
 16. ನಿಮ್ಮ ಬ್ಲಾಗ್ ಓದುತ್ತಾ ಓದುತ್ತಾ ಸಮಯವೇ ಎಷ್ಟಾಯಿತೆಂದು ಗೊತ್ತಾಗಿಲ್ಲ... ತುಂಬಾ ಚನ್ನಾಗಿದೆ ಶ್ರೀಕಾಂತಣ್ಣ....

  ReplyDelete
 17. ಬಹಳ ಚೆನ್ನಾಗಿ ನಿಮ್ಮ ಪೀಠಿಕೆಯ ಮುದ್ರೆ ಒತ್ತಿದ್ದೀರಿ :) ಹೇಗೋ ಆರಂಭಿಸಿ, ಸುತ್ತಿ ಬಳಸಿ ಒಬ್ಬರ ಮೇಲ್ಮೆಯನ್ನು ಹಾರೈಸುವ ನಿಮ್ಮ " ಚಮತ್ಕಾರ " ಮೆಚ್ಚಬೇಕಾದ್ದೇ.. ಶ್ರೀರಂಗನ ಲ್ಯಾಪ್ - ಟಾಪ್ ಪ್ರಹಸನ ಚೆನ್ನಾಗಿದೆ . FB - ರಿಕ್ವೆಸ್ಟ್ ಕಳಿಸದಿದ್ದರೆ ಸರಿ ... :)

  ReplyDelete