Tuesday, June 21, 2016

ಬಾಲೂ ಸರ್.. ಹಹಹಹ..

"ನಾರಾಯಣ ನಾರಾಯಣ... "

ಅರೆ ಏನಿದು..  ದೇವಲೋಕದಲ್ಲಿ ಯಾರೂ ಇಲ್ಲ.. ಇರಿ ಬ್ರಹ್ಮ ದೇವನ ಹತ್ತಿರ  ಹೋಗಿ ಬರ್ತೀನಿ.. ಅಲ್ಲೂ ಖಾಲಿ ಖಾಲಿ.. ವೈಕುಂಠ  ಸಪ್ತ ದ್ವಾರವನ್ನು ದಾಟಿ ಒಳಗೆ ಹೋಗಿ ನೋಡಿದರೆ.. ಆದಿಶೇಷನೂ ಇಲ್ಲ, ರಮಾ ಮತ್ತು ಆಕೆಯ ಕಾಂತನೂ ಇಲ್ಲ.. ನಡುಗುತ್ತಲೇ ಮಂಜಿನ ಕೈಲಾಸಕ್ಕೆ ಹೊಕ್ಕರೆ.. ನಂದಿ ಒಂದೇ ಬೇಜಾರಲ್ಲಿ ಕೂತಿತ್ತು.

"ಓಹ್ ಏನಪ್ಪಾ ಇದು.. ಏನಾಯಿತು.. " ಏನೋ ಸಮಸ್ಯೆ ಇದೆ ಏನಾಯಿತು ಎಂದು ಕೈಲಾಸದ ಮಂಜಿನ ಒಂದು ಮಂಜಿನ ಗೆಡ್ದೆಗೆ ಒಂದು ದಿನಸೂಚಿ ತಗಲಾಕಿತ್ತು..

ನಾರದರ ಕಣ್ಣು ಅಂದಿನ ದಿನಾಂಕ ನೋಡಿದಾಗ.. ಮೊಗದಲ್ಲಿ ಸಣ್ಣ ನಗು .. ಹಾಗೆ ಎರಡು ಹಾಳೆಗಳನ್ನು ಹರಿದರು.. ದಿನಾಂಕ ೨೧ ಎಂದು ತೋರುತ್ತಿತ್ತು..

ನಂದಿ ಕಿವಿಯಲ್ಲಿ ಹೋಗಿ ಮೆಲ್ಲಗೆ ಹೇಳಿದರು.. ನಂದಿ ಇಂದು ತಾರೀಕು ೨೧ ಎಂದು ಜೋರಾಗಿ ಹೇಳು..

ದೇವಲೋಕದ ಬಂಧುಗಳೇ.. ಸ್ವರ್ಗಲೋಕದ ನಿವಾಸಿಗಳೇ.. ಆ ದಿನ ದಾಟಿಯಾಗಿದೆ.. ಇಂದು ತಾರೀಕು ೨೧  ಜೂನ್ ೨೦೧೬.. ನೀವೆಲ್ಲಾ ಹೊರಗೆ ಬರಬಹುದು.. ಬೇಗನೆ ಬನ್ನಿ..


ಉಫ಼್ಫ಼್ ಉಫ಼್ಫ಼್ಫ಼್ ಎಂದು ನಿಧಾನವಾಗಿ ಉಸಿರು ಬಿಟ್ಟು.. ಎಲ್ಲರೂ ನಗೊಮೊಗ ಹೊತ್ತು ತಾವಿದ್ದ ತಾಣದಿಂದ ಹೊರಗೆ ಬಂದರು.

ಫಳ್ ಅಂತ ಒಂದು ಬೆಳಕು ತೂರಿ ಬಂತು..

ಅಯ್ಯೋ ಇಷ್ಟು ದಿನ ನಾವು ಮರೆಯಲ್ಲಿ ಇವರಿಗೆ ಕಾಣದೆ ಇದ್ದದ್ದು ವ್ಯರ್ಥವಾಯಿತು.. .. ಇವರು ಅಹಲ್ಯೆ ಶ್ರೀ ರಾಮನಿಗೆ ಕಾದ ಹಾಗೆ, ಶಬರಿ ರಘುರಾಮನಿಗೆ ಕಾದು ಕುಳಿತಿದ್ದ ಹಾಗೆ.. ಕ್ಯಾಮೆರ ಹಿಡಿದು ಕೊಂಡು ನಮಗಾಗಿ ಕಾಯುತ್ತಲೇ ಇದ್ದಾರೆ.. ಇವರ ತಾಳ್ಮೆಗೆ ಒಂದು ಶಭಾಶ್ ಹೇಳಲೇ ಬೇಕು. ಜ಼ೊತೆಯಲ್ಲಿ ಇವರಿಗೆ ಸುಂದರವಾದ ಶುಭಾಶಯಗಳನ್ನು ಕೋರುತ್ತಿದ್ದೇವೆ..

ಬಾಲಸುಬ್ರಮಣ್ಯ ಅವರೇ.. ನಿಮ್ಮ ತಾಳ್ಮೆಗೆ ಒಂದು ಜೈ.. ನಾವು ನೆಲೆನಿಂತ ತಾಣದ ಬಗ್ಗೆ ನಮಗಿಂತ ಚೆನ್ನಾಗಿಯೇ ತಿಳಿದು, ಗ್ರಂಥಗಳನ್ನು, ಗೆಜೆಟ್ ಗಳನ್ನೂ ಓದಿ, ಬಲ್ಲವರಿಂದ ಮಾಹಿತಿ ಕಲೆಹಾಕಿ.. ಜೇನುನೊಣ ಊರಲ್ಲಿರುವ ಎಲ್ಲಾ ಹೂಗಳ ಮಕರಂದವನ್ನು ಕಲೆಹಾಕಿ, ಅದ್ಭುತವಾದ ರಸವತ್ತಾದ ಜೇನುಗೂಡನ್ನು ಕಟ್ಟುವ ಹಾಗೆ, ನೀವು ಆ ಮಾಹಿತಿಯನ್ನು ನಿಮ್ಮ "ನಿಮ್ಮೊಳಗೊಬ್ಬ ಬಾಲು" ಎನ್ನುವ ಸುಂದರ ಅಂಕಣದಲ್ಲಿ ಮನಮುಟ್ಟುವಂತೆ ವಿವರಿಸುವ ನಿಮ್ಮ ಪರಿಗೆ ನಾವೆಲ್ಲಾರೂ ಬಹುಪರಾಕ್ ಹೇಳುತ್ತೇವೆ..

ನಿಮ್ಮ ಜನುಮದಿನ ಸುಂದರವಾಗಿದ್ದು ಗೊತ್ತಾಯಿತು.. ಎಲ್ಲರೂ ನಿಮ್ಮ ಆರೋಗ್ಯಕ್ಕೆ, ಉತ್ಸಾಹಕ್ಕೆ, ನಿಮ್ಮ ಗೆಳೆತನಕ್ಕೆ ಶುಭ ಕೋರಿದ್ದಾರೆ.. ಈಗ ನಮ್ಮಸರದಿ .

ನಿಮ್ಮ ಪ್ರತಿದಿನದ ಶುಭ ಮುಂಜಾನೆ ಶುಭಾಷಯ ಪತ್ರ ಫೇಸ್ಬುಕ್ ನಲ್ಲಿ ಮತ್ತೆ ಶುರುವಾಗಬೇಕು .. ಈ ಪತ್ರ ನಿಮ್ಮ ಸ್ನೇಹಲೋಕದ ವಲಯದಲ್ಲಿ ಉತ್ಸಾಹ ತುಂಬುತ್ತದೆ, ಚೈತನ್ಯ ನೀಡುತ್ತದೆ .. ಮತ್ತೆ ನೀವು ಶುರುಮಾಡಲೇ ಬೇಕು..  ಇದು ನಮ್ಮೆಲ್ಲರ ಆಜ್ಞೆ ಮತ್ತು ಶುಭ ಆಶೀರ್ವಾದ..

ಮತ್ತೆ ನೀವು ಮೊದಲಿನಂತೆಯೇ ಬೇಗ ಆಗುತ್ತೀರಿ ಮತ್ತು ಅದಕ್ಕೆ ಈ ನಿಮ್ಮ ಬೆಳಗಿನ ಶುಭಪತ್ರ ನಿಮಗೆ ಸಹಾಯ ಮಾಡುತ್ತದೆ ..

ಮುಂದಿನ  ಜನುಮದಿನದ ಹೊತ್ತಿಗೆ ನೀವು ನಿಮ್ಮ ಆರೋಗ್ಯ, ಉದ್ಯೋಗ, ನಿಮ್ಮ ಬರಹಗಳ ಅಂಕಣ, ಶ್ರೀ ರಂಗಪಟ್ಟಣದ ಬಗ್ಗೆ ಹೊತ್ತಿಗೆ.. ಎಲ್ಲವೂ ಸಮಾಗಮಿಸುತ್ತದೆ..


ಮತ್ತೊಮ್ಮೆ ಜನುಮದಿನಕ್ಕೆ ಶುಭಾಶಯಗಳು.. !!!

Sunday, May 15, 2016

ಸಂತ್ಯಾಗ ನಿಂತಾರಾ - ಗೋಪಾಲ್ ವಾಜಪೇಯಿ ಸರ್

ಬೆಳಿಗ್ಗೆ ಎದ್ದೆ..

ರೇಡಿಯೋ ಎಫ್ ಎಂ ೯೨.೭ ನಲ್ಲಿ "ಕಾಲವನ್ನು ತಡೆಯೋರು ಯಾರೂ .. ಗಾಳಿಯನ್ನು ಹಿಡಿಯೋರು ಯಾರೂ ಇಲ್ಲ".. ಮನಸ್ಸು ಎಲ್ಲೋ ಹಿಂದಕ್ಕೆ ಹೋಯಿತು..

ಸ್ವಲ್ಪ ಹೊತ್ತು ಕಾಣದ ಕಡಲಿನಲ್ಲಿ ಸುತ್ತಾಡಿದ ಮನಸ್ಸು ಮತ್ತೆ ಭುವಿಗೆ ಬಂದದ್ದು.. ಅಣ್ಣಾವ್ರ ಪ್ರೇಮದ ಕಾಣಿಕೆ ಚಿತ್ರದ ಗೀತೆಯಲ್ಲಿ "ಹುಟ್ಟು ಸಾವು ಬಾಳಿನಲ್ಲಿ ಎರಡು ಕೊನೆಗಳು.. ಬಯಸಿದಾಗ ಕಾಣದಿರುವ ಎರಡು ಮುಖಗಳು".. ಅರೆ ಅಣ್ಣಾವ್ರು ಒಂದೆರಡು ಸಾಲುಗಳಲ್ಲಿ ಎಷ್ಟೊಂದು ಬ್ರಹ್ಮಾಂಡ ತುಂಬುವ ಸಂದೇಶ ಹೇಳಿದ್ದಾರೆ ಅನ್ನಿಸಿತು!

ಮನಸ್ಸು ತಹಬದಿಗೆ ಬಂತು "ನಗುತಾ ನಲಿ ನಲಿ ಏನೇ ಆಗಲಿ.. " ಹಾಡು ಮತ್ತೆ ನನ್ನನ್ನು ಮಾಮೂಲಿ ಸ್ಥಿತಿಗೆ ತಂದಿತು.

ಕಣ್ಣು ಮುಚ್ಚಿ ಕೂತೆ ಸ್ವಲ್ಪ ಹೊತ್ತು..

"ಶ್ರೀಕಾಂತ್.. ಪೀಠಿಕೆ ಹಾಕದೆ ನೀವು ಏನು ಹೇಳೋಕೂ ಆಗೋಲ್ಲ ಆಲ್ವಾ.. ಒಂದು ಪೀಠಿಕೆ ಹಾಕೇ ಬಿಟ್ಟಿದ್ದೀರ.. ಹಾಗೆ ಒಂದು ಕಾರ್ಯಕ್ರಮದ ಜಲಕ್ ಕೊಟ್ಟು ಬಿಡಿ"

ಕಣ್ಣು ತೆಗೆದ.. ಕಾಣಲಿಲ್ಲ ಏನೂ... ಮತ್ತೆ ಕಣ್ಣು ಮುಚ್ಚಿದೆ..

ಕಳೆದ ಬಾರಿ ಗೋಪಾಲ ವಾಜಪೇಯಿ ಗುರುಗಳ ಪುಸ್ತಕ ಬಿಡುಗಡೆಗೊಂಡಾಗ ಹರಿಣಿ ಮೇಡಂ ಜೊತೆ ನಾನು ಬಂದಿದ್ದೆ.. ಅವರು ಬಹಳ ಕುಶಿ ಪಟ್ಟಿದ್ದರು... ಇಂದು ಬೆಳಿಗ್ಗೆ ಯಾಕೋ ಗೊತ್ತಿಲ್ಲ ಅವರ ನೆನಪು ಕಾಡುತ್ತಿತ್ತು.. ಪ್ರಾಯಶಃ ಅದೇ ಕಾರಣ ಮೇಲಿನ ಗೀತೆಗಳು ಮೂಡಿ ಬಂದು ನನ್ನ ಮನಸ್ಸೊಳಗೆ ಹರಿಣಿ ಮೇಡಂ ಕೂತು ಈ ಕಾರ್ಯಕ್ರಮದ ಬಗ್ಗೆ ವಿವರ ಕೇಳುತ್ತಿದ್ದಾರೆ ಅನ್ನಿಸಿತು.

ಹರಿಣಿ ಮೇಡಂ... ಖಂಡಿತ ಹೇಳುತ್ತೇನೆ..

*****

ಭಾನುವಾರ ಬೆಳಿಗ್ಗೆ ಸುಮಾರು ಹನ್ನೊಂದಕ್ಕೆ ಕಾರ್ಯಕ್ರಮಕ್ಕೆ ಒಬ್ಬೊಬ್ಬರೇ ಬರಲು ಶುರುಮಾಡಿದರು. ಕಣ್ಣಿನ ಶಸ್ತ್ರ ಚಿಕಿತ್ಸೆಗೆ ಒಳಗಾಗಿ ಡಿಎಂಕೆ ಪಕ್ಷದ ಅಭ್ಯರ್ಥಿಯಂತಿದ್ದ ನಮ್ಮ ಗುರುಗಳು ವಾಜಪೇಯಿ ಸರ್ ನಿಧಾನವಾಗಿ ಕಾರಿಂದ ಇಳಿದು ಬಂದು ನೆರೆದಿದ್ದ ಮಿತ್ರರನ್ನು ಮಾತಾಡಿಸಿದರು. 

ಅವರ ಜೀವದ ಗೆಳೆಯರು, ಅವರ ಜೊತೆಗೆ ಹೆಗಲು ಕೊಟ್ಟು ದುಡಿದಿದ್ದ ಸಹೋದ್ಯೋಗಿಗಳು, ಅವರು ಹಿರಿಯರಾಗಿದ್ದರೂ, ತಮಗಿಂತ ಅರ್ಧಷ್ಟು ವಯೋಮಾನದವರನ್ನು ತಮ್ಮ ಗೆಳೆಯರು ಎಂದು ಪರಿಚಯಿಸುತ್ತಾ, ಕಿರಿಯರ ಹೆಗಲ ಮೇಲೆ ಕೈ ಇಟ್ಟುಕೊಂಡು ಮಾತಾಡಿಸುತ್ತಿದ್ದ ಪರಿ ಸೊಗಸಾಗಿತ್ತು. 

ಅತಿಥಿಗಳು ಈ ಕೆಳಗಿನವರು 
  •  ಮಲೆಗಳಲ್ಲಿ ಮದುಮಗಳು ನಾಟಕವನ್ನು ಪುಸ್ತಕದಿಂದ ರಂಗಕ್ಕೆ ಕರೆತಂದವರು, ಜೊತೆಯಲ್ಲಿಯೇ ರಂಗಶಾಲೆಗೇ ಹೊಸ ಆಯಾಮ ನೀಡುತ್ತಿರುವ, ಮತ್ತು ಸಾಧನೆ ಮಾಡಿರುವ, ಮಾಡುತ್ತಿರುವ ಶ್ರೀ ಬಸವಲಿಂಗಯ್ಯ, 
  • ಶ್ರೀ ಸೇತುರಾಂ ಅವರ ಮಂಥನ ಎಂಬ ಮಂಥನ ಧಾರಾವಾಹಿಯಲ್ಲಿ ಮಠದ ಗುರುಗಳಾಗಿ ಅದ್ಭುತ ಅಭಿನಯ ನೀಡಿದ್ದ ಶ್ರೀ ಸಿ ಗುಂಡಣ್ಣ 
  • ನನ್ನ ಇಷ್ಟ ದೈವ ನಿರ್ದೇಶಕರಾದ ಶ್ರೀ ಪುಟ್ಟಣ್ಣ ಕಣಗಾಲ್ ಅವರು ಶುಭಮಂಗಳ ಚಿತ್ರದಲ್ಲಿ ಮಗ್ಗಿ, ಲೆಕ್ಕದ ಹಾಡನ್ನು ಒಬ್ಬ ಬ್ಯಾಂಕ್ ನಲ್ಲಿ ಕೆಲಸ ಮಾಡುವವರಿಂದಲೇ ಹಾಡು ಬೇಕು ಎಂದು  "ನಾಲ್ಕೊಂದ್ಲ ನಾಲ್ಕು ನಾಲ್ಕೆರಡ್ಲ ಎಂಟು"ಹಾಡಿನ ಕತೃ ಶ್ರೀ ಎಂ ಏನ್ ವ್ಯಾಸರಾವ್ ಅವರು.. 
ಇವರ ಜೊತೆಯಲ್ಲಿ ನಮ್ಮ ಗುರುಗಳು ಶ್ರೀ ಗೋಪಾಲ ವಾಜಪೇಯಿ ಅವರ ಬಗ್ಗೆ... ಮಹಾನ್ ತಾರೆಗಳೊಂದಿಗೆ, ಪ್ರತಿಭೆಗಳೊಂದಿಗೆ ಹೆಗಲು ತಾಕಿಸಿ ಓಡಾಡಿ, ಆ ದಿಗ್ಗಜರ ಜಲಕ್ ಅನುಭವವನ್ನು ತಮ್ಮ ಎಲ್ಲಾ ಬರವಣಿಗೆಗಳಲ್ಲಿ, ಕೆಲವು ಚಿತ್ರಗಳಲ್ಲಿ ತೋರಿಸಿರುವ ಇವರು, ಅವರ ಮುಂದೇ ಏನೂ ಅಲ್ಲದ ನನ್ನನ್ನು ಆತ್ಮೀಯವಾಗಿ ಮಾತಾಡಿಸಿ, ಎಲ್ಲರೆದುರು ಪರಿಚಯ ಮಾಡಿಸಿ, ನನ್ನೊಳಗೆ ನಾನು ಬೀಗುವಂತೆ ಮಾಡುವ ಇವರು ನಿಜವಾಗಿಯೂ ನಮ್ಮ ನಡುವೆ ಇರುವ ಚೈತನ್ಯದ ಚಿಲುಮೆ. 

ಕಾರ್ಯಕ್ರಮಕ್ಕೆ ಅತಿಥಿಗಳನ್ನು ಅಂಗಣಕ್ಕೆ ಆಹ್ವಾನ ಮಾಡಿದ ಮೇಲೆ, ಗೋಪಾಲ್ ಸರ್ ಅವರ ಜೀವದ ಗೆಳೆಯರಲ್ಲಿ ಒಬ್ಬರಾದ ಶ್ರೀಪತಿ ಅವರಿಂದ ಪ್ರಾರ್ಥನಾ ಗೀತ ಅನ್ನುವುದಕ್ಕಿಂತ ಒಂದು ಅದ್ಭುತ ರಂಗ ಗೀತೆಯಿಂದ ಕಾರ್ಯಕ್ರಮಕ್ಕೆ ಚಾಲ್ತಿ ನೀಡಿದರು.

ಕಾರ್ಯಕ್ರಮದಲ್ಲಿ ಗಡಿಬಿಡಿ ಕಂಡು ಕಾಣದಂತೆ ಇದ್ದಾಗ ಅದನ್ನು ತಿಳಿಯಾಗಿಸಿದವರು ಶ್ರೀ ಬಸವಲಿಂಗಯ್ಯ ಅವರು.. "ಸಂತೆಯಲ್ಲಿ ನಿಂತ ಮೇಲೆ ಗಡಿಬಿಡಿ ಆಗಬೇಕಾದ್ದೇ, ಅದಕ್ಕೆ ಮುಜುಗರ ಬೇಡ" ಎನ್ನುತ್ತಾ ಕಬೀರನ ಒಂದು ಪುಟವನ್ನೇ ಹಾಗೆ ಬಿಚ್ಚಿಟ್ಟರು. ದೇಹವನ್ನು ಒಂದು ಚಾದರ್ ಗೆ ಹೋಲಿಸಿದ್ದಾನೆ ಆ ಕಬೀರ ಎಂದರು.. 

(ತಕ್ಷಣ ಹರಿಣಿ ಮೇಡಂ ಮದ್ಯೆ ನನ್ನ ಜೊತೆ ಮಾತಾಡಿ.. ಶ್ರೀಕಾಂತ್ ಇವಾಗ ಅರಿವಾಯಿತು ನೀವು ಆರಂಭದಲ್ಲಿ ಹಾಕಿದ ಕೆಲವು ಗೀತೆಗಳ ಸಂದೇಶ.. ಸೂಪರ್ ಸೂಪರ್ ಮುಂದುವರೆಸಿ)

 ನಿರರ್ಗಳವಾಗಿ ಕಬೀರನ ಜೊತೆಯಲ್ಲಿ ನಮ್ಮನ್ನು ಐದಾರು ಶತಮಾನಗಳ ಹಿಂದಕ್ಕೆ ಕರೆದೊಯ್ದು ದರುಶನ ಮಾಡಿಸಿದ ಶ್ರೀ ಬಸವಲಿಂಗಯ್ಯ ಅವರ ಮಾತಿನ ಸರಮಾಲೆಗೆ ಅರ್ಥವಿತ್ತು. ಸುಂದರವಾಗಿತ್ತು. ಮುತ್ತಿನಹಾರವನ್ನು ಪೋಣಿಸಿದಂತೆ ಮಾತಿನ ಭಂಡಾರ ಸೊಗಸಾಗಿ ಹೊಳೆಯುತ್ತಿತ್ತು. ಈ ಕೃತಿ ಸಂತ್ಯಾಗೆ ನಿಂತಾನ ಕಬೀರ ನಾಟಕ ಅನುವಾದಗೊಂಡು ರಂಗಕ್ಕೆ ಏರಲು ಕಾರಣ ಕರ್ತರು ಅವರೇ ಎಂದು ಗೊತ್ತಾದಾಗ ಸಂತೋಷವಾಯಿತು. ತಮ್ಮ ಮತ್ತು ಗೋಪಾಲ್ ಸರ್ ಅವರ ಗೆಳೆತನ, ಪರಿಚಯದ ಒಂದು ಚಿಕ್ಕ ಪುಟವನ್ನು ನಮ್ಮಲ್ಲಿ ಹಂಚಿಕೊಂಡರು. 


ನಂತರ ಮಾತಾಡಿದ ಶ್ರೀ ಸಿ ಗುಂಡಣ್ಣ ಅವರು, ಕಬೀರನ ದೋಹಾಗಳ ಬಗ್ಗೆ, ಗೋಪಾಲ್ ಸರ್ ಮತ್ತು ತಮ್ಮ ಗೆಳೆತನ, ಜೊತೆಯಲ್ಲಿ ಬಸವಲಿಂಗಯ್ಯ ಅವರ ಜೊತೆಗಿನ ನಂಟು, ಎಂ ಏನ್ ವ್ಯಾಸರಾವ್ ಅವರ ಜೊತೆಗಿನ ಒಡನಾಟ, ಇವುಗಳ ಬಗ್ಗೆ ಚುಟುಕಾಗಿ ವಿವರಿಸಿ ತಮ್ಮ ಮಾತನ್ನು ಸುಂದರವಾದ ಚೌಕಟ್ಟಿನೊಳಗೆ ನಿಲ್ಲಿಸಿದರು. 

ಅಧ್ಯಕ್ಷ ಸ್ಥಾನದಲ್ಲಿ ಕೂತಿದ್ದ ಶ್ರೀ ಎಂ ಏನ್ ವ್ಯಾಸರಾವ್ ಅವರು ಕಬೀರನ ಬಗ್ಗೆ, ಈ ನಾಟಕದ ಬಗ್ಗೆ, ಅನುವಾದದ ಬಗ್ಗೆ ಎಲ್ಲವನ್ನು ತಿಳಿ ತಿಳಿಯಾಗಿ ಹೇಳುತ್ತಾ, ಒಂದು ಒಳ್ಳೆಯ ಒಡನಾಟ ಎಂಥಹ ಅದ್ಭುತ ಕಾರ್ಯವನ್ನು ಮಾಡಿಸುತ್ತದೆ ಎಂದು ಹೇಳುತ್ತಾ, ತಮಗೆ ಅರಿವಿಗೆ ಬಂದ ವಿಚಾರಗಳನ್ನು ಸಂಕ್ಷಿಪ್ತವಾಗಿ ಹೇಳಿದರು. 

ಇವರಿಗಿಂತ ಕೊಂಚ ಹೊತ್ತು ಮುಂಚೆ ಮಾತಾಡಿದ ಗೋಪಾಲ್ ಸರ್ ಅವರು, ತಮ್ಮ ಕೆಲಸದ ಆರಂಭದ ದಿನಗಳ ಬಗ್ಗೆ ಹೇಳುತ್ತಾ, ಈ ನಾಟಕ ಅನುವಾದ ಮಾಡುವ ಸುವರ್ಣ ಘಳಿಗೆಯನ್ನು ನೆನೆಸಿಕೊಳ್ಳುತ್ತಾ, ಒತ್ತಡದಲ್ಲಿ ಎಷ್ಟೊಂದು ಸುಂದರ ಕೆಲಸಗಳು, ಸಾಧನೆಗಳು ಆಗುತ್ತದೆ ಎನ್ನುವುದನ್ನು ತಮ್ಮ ಶೈಲಿಯಲ್ಲಿ ತಿಳಿಸಿದರು.  ತಮ್ಮ ಗೆಳೆಯರ ಸಹಕಾರವನ್ನು ಪರಿಚಯಿಸುತ್ತಾ, ಅವರೆನ್ನಲ್ಲಾ ವೇದಿಕೆಗೆ ಕರೆದು ಈ ದಿನ ಬಿಡುಗಡೆಗೊಂಡ ಕೃತಿಯನ್ನು ಗೌರವ ಪೂರ್ವಕವಾಗಿ ಕೊಟ್ಟು ತಮ್ಮ ಗೆಳೆತನಕ್ಕೆ ಸುವರ್ಣ ಚೌಕಟ್ಟನ್ನು ಹಾಕಿದರು. 

ಪ್ರತಿಭಾ ಖನಿಗಳ ಹಸ್ತದಿಂದ ನನಗೂ ಒಂದು ಕೃತಿಯನ್ನು ಕೊಡಿಸಿದ್ದು ಮನದೊಳಗೆ ನಾನು ಕುಣಿದಾಡುವಂತೆ ಮಾಡಿತು ಎಂದರೆ ನನ್ನ ಮಾತು ಸುಳ್ಳಲ್ಲ. 

ಯಾಜಿ ಪ್ರಕಾಶನದ ಶ್ರೀ ಗಣೇಶ್ ಯಾಜಿ ಅವರು ತಮ್ಮ ಈ ಸಾಹಸಕ್ಕೆ ಜೊತೆಯಾದವರೆನ್ನಲ್ಲ ನೆನೆಸಿಕೊಂಡು ಅವರ ಶುಭ ಆಶೀರ್ವಾದಗಳು ಹೀಗೆ ಸದಾ ಇರಲಿ ಎಂದು ಹೇಳುತ್ತಾ ಈ ಚಿಕ್ಕ ಚೊಕ್ಕ ಕಾರ್ಯಕ್ರಮಕ್ಕೆ ತೆರೆ ಎಳೆದರು. 

ಹಮ್ಮು ಬಿಮ್ಮು ಇಲ್ಲದ ಸರಳ ವಿರಳ ಎನ್ನುವಂಥ ಈ ಕಾರ್ಯಕ್ರಮ ಶುರುವಾಗಿದ್ದು ಮಾತು ಮುಕ್ತಾಯಗೊಂಡಿದ್ದರ ನಡುವೆ ಕಂಡದ್ದು ಸರಳ ಗೆಳೆತನ, ವಿಶ್ವಾಸ, ಮತ್ತು ಪ್ರತಿಭೆಯ ಮೇಲೆ ಅಚಲ ನಂಬಿಕೆ ಜೊತೆಯಲ್ಲಿ ಸಾಧನೆ ಶಿಖರ ಏರಿದರು ಜೊತೆಯಲ್ಲಿ ಹೆಜ್ಜೆ ಹಾಕುತ್ತಾ ಸಾಗುತ್ತಿದ್ದ ವಿನಯವಂತಿಕೆ. 

ಸಂತೆಯಲ್ಲಿ ನಿಂತ ಕಬೀರ ಹೇಳಿರುವ ಸರಳ ಮಾತುಗಳಲ್ಲಿನ ಸಂದೇಶಗಳನ್ನು ಈ ಭುವಿಯಲ್ಲಿರುವ ಎಲ್ಲರರೂ ಅಳವಡಿಸಿಕೊಂಡರೆ ಜೀವನ ಚಿತ್ರದಲ್ಲಿ ಅಣ್ಣಾವ್ರು  ಹಾಡಿದಂತೆ "ಭುವಿಯೆ ಸರ್ಗ ಭುವಿಯೆ ಸ್ವರ್ಗ ಎನುತಿಹರು.. ನಾದಮಯ ಈ ಲೋಕವೆಲ್ಲಾ ನಾದಮಯ"

ಸುಂದರ ಚಿಕ್ಕ ಚೊಕ್ಕ ಕಾರ್ಯಕಮದಲ್ಲಿ ಭಾಗವಹಿಸಲಿಕ್ಕೆ ಅವಕಾಶವಿತ್ತ ಶ್ರೀ ಗೋಪಾಲ್ ವಾಜಪೇಯಿ ಅವರಿಗೆ ಧನ್ಯವಾದಗಳು ಅರ್ಪಿಸಿ ನಾ ಅಲ್ಲಿಂದ ಹೊರಟೆ.... :-)

*****

ಶ್ರೀಕಾಂತ್ ನಿಮಗೆ ಧನ್ಯವಾದಗಳು.. ಕಳೆದ ಸಾರಿಯ ಗೋಪಾಲ್ ಸರ್ ಅವರ ಪುಸ್ತಕ ಬಿಡುಗಡೆ ನಾ ನಿಮ್ಮ ಜೊತೆ ಬಂದಿದ್ದೆ.. ಆದರೆ ಈ ಕಾರ್ಯಕ್ರಮಕ್ಕೆ ಕಬೀರ ಹೇಳಿದ ಚಾದರ್ ನನ್ನ ಬಳಿಯಲ್ಲಿ ಇರದೇ ಹೋಯಿತು.. ಅದನ್ನು ಆ ದೇವ ತನ್ನ ಬಳಿಗೆ ಒಯ್ದು ಬಿಟ್ಟಾ.. ಹಾಗಾಗಿ ನಿಮ್ಮ ಮನದೊಳಗೆ ಕೂತು ಈ ಕಾರ್ಯಕ್ರಮವನ್ನು ಅನುಭವಿಸಬೇಕು ಎಂಬಾ ಆಸೆಯಾಯಿತು. ಹಾಗಾಗಿ ನನಗೆ ಈ ಕಾರ್ಯಕ್ರಮವನ್ನು ನೋಡಲಿಕ್ಕೆ, ಅನುಭವಿಸಲಿಕ್ಕೆ ಅವಕಾಶ ಮಾಡಿಕೊಟ್ಟ ಆ ದೇವನಿಗೆ ನಮಸ್ಕರಿಸುತ್ತೇನೆ. ಮತ್ತೆ... 

ಮೇಡಂ ನನಗೆ ಧನ್ಯವಾದಗಳನ್ನು ಹೇಳಬೇಡಿ.. ಗುರುಗಳ ಮೇಲಿನ ಗೌರವ ಭಕ್ತಿ ನನಗೆ ಈ ಕೆಲಸ ಮಾಡಲು ಅನುಕೂಲ ಮಾಡಿಕೊಟ್ಟಿತು. ಅವರಿಗಾಗಿ ಬಂದೆ, ಅವರಿಗಾಗಿ ನಿಂದೆ.. ಗುರುಗಳು ಹೇಳಿದರೆ ಶ್ರೀಕಾಂತ ಕೂಡ ಸಂತ್ಯಾಗ ಏನೂ ಎಲ್ಲಿ ಬೇಕಾದರೂ ನಿಂತಾನಾ...ಬರ್ತಾನಾ.. :-)

ಹರಿಣಿ ಮೇಡಂ ಅಲ್ಲಿಯೇ ಬೆಳಗುತ್ತಿದ್ದ ದೀಪದೊಳಗೆ ಸಾಗುತ್ತಾ ಹೋದಂತೆ.. ಒಂದು ಚಿಕ್ಕ ಬಿಂಧುವಾಗಿ ಹೊಳೆಯುವ ತಾರೆಯಾಗಿ ನಿಂತು ಬಿಟ್ಟರು.. 

ಒಂದು ಸುಮಧುರ ಕಾರ್ಯಕ್ರಮಕ್ಕೆ ಭೇಟಿ ಕೊಟ್ಟ ಕುಶಿ ಕೊಟ್ಟ ಪರಿ ಒಂದು ಕಡೆಯಾದರೆ.. ನನ್ನ ನೆಚ್ಚಿನ ಹರಿಣಿ ಮೇಡಂ ನನ್ನೊಳಗೆ ನುಗ್ಗಿ ಬಂದು ಬರೆಸಿದರು ಎನ್ನುವ ಸಂತಸ ಇನ್ನೊಂದು ಕಡೆ.. ಡಬಲ್ ಧಮಾಕ.. 

ಗುರುಗಳೇ ಗೋಪಾಲ್ ವಾಜಪೇಯಿ  ಸರ್ ನಿಮಗೆ ಮತ್ತು ನಿಮ್ಮ ಸ್ನೇಹ ಭಂಡಾರಕ್ಕೆ ನನ್ನ ಧನ್ಯವಾದಗಳು...!!!

Saturday, May 7, 2016

DFR ಹಾಯ್ ಬೆಳಗು - ಶ್ರೀ

ಅಣ್ಣಾವ್ರ "ಹೇ ದಿನಕರ ಶುಭಕರ ಧರೆಗೆ ಬಾ" ಹಾಡು ಬರುತ್ತಿತ್ತು..

ಅರೆ ಅರೆ.. ಯಾರೂ ಕೂಗುತ್ತಿದ್ದಾರೆ, ಇರಪ್ಪ ಇರಪ್ಪ, ನೋಡೋಣ ಎಂದು, ಭಾಸ್ಕರ ತನ್ನ ಕೊನೆಯ ಬಾಗಿಲನ್ನು ತೆಗೆದ.. ಅದು ಕಿರ್ ಎಂದು ಸದ್ದು ಮಾಡಿತು..

"ಹಾಯ್ ಬೆಳಗು" ಎನ್ನುತ್ತಾ ಒಂದು ಕೋಗಿಲೆ ಕಂಠ ಉಳಿಯಿತು..

ಅರೆ ಇದೇನಿದು DFR ನೀವು ಇಲ್ಲಿಗೆ ಬಂದಿದ್ದೀರಿ.. ಏನ್ ಸಮಾಚಾರ..

"ನೋಡಿ Rav's  (DFR ರವಿಯನ್ನು ಕರೆಯುವ ರೀತಿ).. ಇವತ್ತು ಹಿಮಾಲಯದಲ್ಲಿ ಹೆಜ್ಜೆ ಇಟ್ಟೇ.. ಯಾಕೋ ನೀ ಇನ್ನು ಬಂದಿರಲ್ಲಿಲ್ಲ.. ಅದಕ್ಕೆ ನಿನ್ನ ಮೀಟ್ ಮಾಡಿ, ನಿನಗೆ ಶುಭಕೋರಿ.. ಒಂದು ಸಂದೇಶ ಹೇಳೋಣ ಅಂತ ಬಂದೆ.. "

"ಹೇಳಿ DFR"

"ಹಿಮಾಲಯದಲ್ಲಿ ನೀವು ನಿಮ್ಮ ಮನೆಯಿಂದ ಹೆಚ್ಚು ಬೇಡ ಕಡಿಮೆಯೂ ಬೇಡ ಆ ರೀತಿಯ ಶಾಖ ಮತ್ತು ಬೆಳಕನ್ನು ನೀಡಿ.. ನನಗೆ ನನ್ನ ಮತ್ತು ಸಹ ಚಾರಣಿಗರಿಗೆ ಈ ಚಾರಣ ಸುಸ್ತಾಗದಂತೆ, ಮತ್ತು ನಿನ್ನ ಕಣ್ಬೇಳಕಲ್ಲಿ ಭೂರಮೆ ಸುಂದರವಾಗಿ ಕಾಣುವಂತೆ ಮಾತು.. ಸುಮಾರು ಸೆಲ್ಫಿ ತಗೊಳಿದಿದೆ.. "

"ಇದನ್ನ ನೀವು ಹೇಳಬೇಕೇ DFR ಖಂಡಿತ ಹಾಗೆ ಮಾಡುತ್ತೇನೆ.. ನಿಮ್ಮ ಚಾರಣ ಸುಂದರವಾಗಿರಲಿ.. ಶುಭವಾಗಲಿ.. "

ಅರುಣ ಸೂರ್ಯದೇವನಿಗೆ ಕಾಯುತ್ತಿದ್ದ.. ರಥದತ್ತ ಸೂರ್ಯ ದೇವ ಬರುತ್ತಿದ್ದಂತೆ, ರಥವೂ ನಿಧಾನವಾಗಿ ಸಾಗತೊಡಗಿತು..

ಇತ್ತ DFR ತನ್ನ ಸಹ ಚಾರಣಿಗರ ಜೊತೆಯಲ್ಲಿ ಚಾರಣದ ವೇಳಾ ಪಟ್ಟಿಯ ಪ್ರಕಾರ ಬೇಸ್ ಕ್ಯಾಂಪ್ ಕಡೆಗೆ ಹೊರಟರು.

ಅಲ್ಲಿ ಸುರಕ್ಷತಾ ಸಿಬ್ಬಂಧಿ, ತಪಾಸಣೆ ಮಾಡುತ್ತಾ ಸುಮಾರು ನೂರಾರು ಯಾತ್ರಿಕರನ್ನು, ಚಾರಣಿಗರನ್ನು ತಪಸಾನೆ ಮಾಡುತ್ತಲೇ, ನಗುಮೊಗದಿಂದಲೇ ಎಲ್ಲರಿಗೂ ಶುಭ ಹಾರೈಸುತ್ತಾ ಕಳಿಸುತ್ತಿದ್ದರು.

"ನಾರಾಯಣ ನಾರಾಯಣ" ಧ್ವನಿ ಕೇಳಿ ಎಲ್ಲರೂ ಚಕಿತಗೊಂಡರು.

ನಾರದ ಮಹಾಮುನಿ ಅಲ್ಲಿ ನಗುಮೊಗದಿಂದ ಒಂದು ಫಲಕವನ್ನು ಹಿಡಿದು ನಿಂತಿದ್ದರು.

DFR ನಾರದ ಮುನಿಗೆ ನಮಸ್ಕರಿಸಿ, ನಾರದ ಮುನಿಗಳೇ.. "ಏನು ಸಮಾಚಾರ, ಫಲಕದಲ್ಲಿ ನನ್ನ ಹೆಸರು ಏಕಿದೆ, ಹೇಳಿ ಏನು ಸಮಾಚಾರ"

"DFR ನಿಮಗೆ HMT ಕಾರ್ಖಾನೆ ಮುಚ್ಚುತ್ತಲಿರುವುದು, ಮತ್ತು ಕೆಲವು ಘಟಕಗಳು ಮುಚ್ಚಿರುವುದು ನಿಮಗೆ ಗೊತ್ತೇ ಇದೆ. ಧರಣಿಮಂಡಲ ಮಧ್ಯದೊಳಗೆ  ಮೆರೆಯುತಿರುವ ಕರ್ನಾಟಕದ ರಾಜಧಾನಿ ಬೆಂಗಳೂರಿನ ಜಾಲಹಳ್ಳಿ ಬಳಿಯ HMT ಕಾರ್ಖಾನೆಯ ಮುಂದೆ ಲಕ್ಷಾಂತರ ಮಂದಿ ಧರಣಿ ಹೂಡಿದ್ದಾರೆ, ಅದಕ್ಕೆ ನೀವು ಬರಬೇಕಂತೆ"

"ಅರೆ... ಮುನಿಗಳೇ.. ಅದು ಹೇಗೆ ಸಾಧ್ಯ, ನಾನು ಚಾರಣಕ್ಕೆ ಬಂದಿದ್ದೇನೆ, ಜೊತೆಯಲ್ಲಿಯೇ, ಆ ಕಾರ್ಖಾನೆ ಮುಚ್ಚಿರುವುದು ಆಡಳಿತ ಮಂಡಳಿಯ ಸಮಸ್ಯೆ, ನಾನು ಏನು ಮಾಡಲಿ, ನನ್ನನ್ನು ಏಕೆ ಬರಲು ಹೇಳುತ್ತಿದ್ದಾರೆ. ಕಾರಣ ಗೊತ್ತಾಗುತ್ತಿಲ್ಲ"

"DFR,, ಚಾರಣದ ಬಗ್ಗೆ ನೀವೇನು ಯೋಚನೆ ಮಾಡಬೇಡಿ.. ಬನ್ನೇರುಘಟ್ಟದ ಬಳಿಯಲ್ಲಿರುವ ಚಂಪಕಧಾಮ ದೇವಸ್ಥಾನದ ಅಂಜನೇಯ ನಮಗಾಗಿ ಪುಷ್ಪಕ ವಿಮಾನ ತಂದಿದ್ದಾರೆ, ಅದರಲ್ಲಿ ಯೋಜನಾಗಟ್ಟಲೆ ದೂರವನ್ನು ಕ್ಷಣಮಾತ್ರದಲ್ಲಿ ತಲುಪಬಹುದು.. ಕೇವಲ ಮೂವತ್ತು ನಿಮಿಷ ಅಷ್ಟೇ.. ನಾನು ನಿಮ್ಮ ಸಹಚಾರಣಿಗರಿಗೆ ಹೇಳುತ್ತೇನೆ.. ಮತ್ತು ೧೮೦೦ ಕ್ಷಣಗಳಲ್ಲಿ ನಿಮ್ಮನ್ನು ವಾಪಾಸ್ ಇಲ್ಲಿಗೆ ಕರೆದುಕೊಂಡು ಬರುವ ಜವಾಬ್ಧಾರಿ ನನ್ನದು.. ಮತ್ತು ಹನುಮನದು. ಯೋಚಿಸಬೇಡಿ"

"ರೈಟ್.. ಓಕೆ ನಾರದ ಮುನಿಗಳೇ.. "

"ಡಿಯರ್ ಫ್ರೆಂಡ್ಸ್.. ನಾನು ನಿಮ್ಮೆಲ್ಲರ ನಾಯಕಿ 3ಕ ತಂಡದ ಒಡತಿ, ಅನೇಕ ಸಾಮಾಜಿಕ ಕಾರ್ಯಕ್ರಮಗಳಲ್ಲಿ ತನ್ನನ್ನೇ ತೊಡಗಿಸಿಕೊಂಡು ಸಮಾಜಮುಖಿಯಾಗಿರುವ, ಮತ್ತು ತಾನು ಸ್ಪೂರ್ತಿಗೊಂಡು, ಇತರರಿಗೂ ಆ ಸ್ಫೂರ್ತಿ ಸಾಂಕ್ರಾಮಿಕವಾಗಿ ಹಬ್ಬುವಂತೆಮಾಡಿ  ಮೇಕ್ A ಡಿಫರೆನ್ಸ್ ಅನ್ನುತ್ತಾ ಹತ್ತು ಹಲವು ಕಾರ್ಯಕ್ರಮಗಳನ್ನು ಮಾಡುತ್ತಿರುವ ನಿಮ್ಮೆಲ್ಲರ ಅಧಿನಾಯಕಿ DFR ಅವರನ್ನು ಕೇವಲ ೧೮೦೦ ಸೆಕೆಂಡ್ಸ್ ಅಂದರೆ ೩೦ ನಿಮಿಷ ಬೆಂಗಳೂರಿನ ಜಾಲಹಳ್ಳಿ ಬಳಿಯ HMT ಕೈ ಗಡಿಯಾರ ಕಾರ್ಖಾನೆಗೆ ಕರೆದೊಯುತ್ತೇನೆ. ೩೧ ನಿಮಿಷಕ್ಕೆ ಅಂದರೆ ೧೮೦೧ ಕ್ಷಣಕ್ಕೆ ನಾವು ಇಲ್ಲಿಯೇ ಇರುತ್ತೇವೆ, ಓಕೆ ನಾ"

"ಓಕೆ ಓಕೆ.. ರೂಪಕ್ಕ, ರೂಪ ಮೇಡಂ, ರೂಪ ಹೋಗಿ ಬನ್ನಿ.. ನೀವು ಬರುವ ತನಕ ನಾವಿಲ್ಲೇ ಕೂತಿರುತ್ತೇವೆ" ಎಂದರು ಸಹಚಾರಣಿಗರು.

ಹನುಮ ದೇವರು ತಂದ ಪುಷ್ಪಕ ವಿಮಾನದಲ್ಲಿ, ನಾರದ ಮುನಿಗಳು, ಹನುಮ ದೇವರು, ಮತ್ತು DFR ಕುಳಿತು ಹಿಮಾಲಯದಿಂದ ಬೆಂಗಳೂರಿನ ಕಡೆಗೆ ಹಾರಿದರು.. DFR ಕೈಯಲ್ಲಿ HMT ಕೈಗಡಿಯಾರ ಒಂದು ಮುಗುಳುನಗೆ ನಕ್ಕು, ಅಬ್ಬಾ, ಅಂತೂ ನನ್ನ ಸಮಸ್ಯೆ ಬಗೆ ಹರಿಯಿತು ಎಂದು ಸಂತಸದಿಂದ ಕುಣಿಯುತ್ತಿತ್ತು.


ಮುಂದೆ ಏನಾಗುತ್ತೆ.. ಎರಡನೇ ಭಾಗದಲಿ ನೋಡಿ.. ಹಾಯ್ ಬೆಳಗು - ನಿವ್ಸ್   ಹುರ್ರಾ....

(ಅದ್ಭುತ ಬರಹಗಾರ್ತಿ ಮತ್ತು ಸ್ನೇಹಿತೆ ನಿವೇದಿತ ಚಿರಂತನ್ ಅವರು ಕೊಟ್ಟ ಒಂದು ಸಲಹೆ.. ಶ್ರೀ ಇಂದು ನಮ್ಮಿಬ್ಬರ ಮತ್ತು ನೂರಾರು ಸ್ನೇಹಿತರ ಸ್ಪೂರ್ತಿಯ ಚಿಲುಮೆ ರೂಪ ಸತೀಶ್ ಅಲಿಯಾಸ್ ನಿಮ್ಮ DFR ಮತ್ತು ನನ್ನ ರೂಪಕ್ಕ ಅವರ ಹುಟ್ಟು ಹಬ್ಬಕ್ಕೆ ಒಂದು ಉಡುಗೊರೆ ಕೊಡೋಣ.. ನಾ ಬ್ಲಾಗ್ ಶುರು ಮಾಡುತ್ತೀನಿ ನೀವು ಅದನ್ನು ಕಂಪ್ಲೀಟ್ ಮಾಡಿ.. ಇಲ್ಲ ನೀವು ಬರೆಯಿರಿ ನಾ ಕಂಪ್ಲೀಟ್ ಮಾಡುತ್ತೀನಿ ಅಂದ್ರು.. ವಾಹ್ ಅನ್ನಿಸಿತು ಒಂದು ಅದ್ಭುತ ಐಡಿಯಾ.. ಸರಿ ಸವಾಲಿಗೆ ಸಿದ್ಧವಾಯಿತು.. ಅದರ ಫಲವೇ.. ಎರಡು ಬ್ಲಾಗ್ ಗಳು DFR ಹುಟ್ಟು ಹಬ್ಬಕ್ಕೆ ಉಡುಗೊರೆಯಾಗಿ ನಿಮ್ಮ ಕಣ್ಣ ಮುಂದೆ.. ಧನ್ಯವಾದಗಳು CB..)


(DFR  ಈ ಹೆಸರೇ ಸಾಕು ಉತ್ಸಾಹದ ಚಿಲುಮೆಗೆ ಇನ್ನೊಂದು ಹೆಸರು.. 
ಏನು ಬರೆಯುವುದು ಎನ್ನುವ ಗೊಂದಲವಿರಲ್ಲಿಲ್ಲ.. ಬ್ಲಾಗ್ ಟೈಟಲ್ ಕೂಡ ಮೊದಲೇ ನಿರ್ಧಾರವಾಗಿತ್ತು 
೨೩ನೆ ಫೆಬ್ರವರಿ ೨೦೧೬ ... ಮುಂಜಾವು DFR ನನಗೆ ಶುಭಾಷಯ ಕೋರಿದ್ದು.. ಹೀಗೆ 
ಶ್ರೀ "ಹಾಯ್ ಬೆಳಗು"..
ಆಗ ಅವರಿಗೆ ಹೇಳಿದ್ದೆ ಇದೆ ಪದಗಳನ್ನು ಟೈಟಲ್ ಆಗಿ ಮಾಡಿ ಒಂದು ಲೇಖನ ಬರೆಯುತ್ತೇನೆ ಎಂದು 
ಇಂದು ಆ ಸುದಿನ ಬಂದಿದೆ.. ಅದೇ ಹೆಸರಿನಲ್ಲಿ ಒಂದು ಬ್ಲಾಗ್ ಬರೆದಿದ್ದೇನೆ..)

Sunday, November 29, 2015

3K - ಹೊಂಗೆ ಮರದಡಿಯಲ್ಲಿ ಹೇಳಿದ ಕಥೆಗಳು

ಕಚೇರಿಯ ಕೆಲಸದ ಒತ್ತಡ ಒಮ್ಮೊಮ್ಮೆ ಕುತ್ತಿಗೆ ಮಟ್ಟಕ್ಕೆ ಬರುತ್ತಿತ್ತು.. ಆ ಒತ್ತಡ ನಿವಾರಿಸಿಕೊಳ್ಳೋಕೆ ನನಗೆ ಸಹಾಯ ಮಾಡುತ್ತಿದ್ದದು ಚಲನ ಚಿತ್ರಗಳು.. ಮನೆಗೆ ಬಂದೊಡನೆ ಯಾವುದಾದರೂ ಅಣ್ಣಾವ್ರ ಚಿತ್ರಗಳನ್ನು ನೋಡಿದರೆ ಸಾಕು ಮತ್ತೆ ಮಾಮೂಲಿನ ಸ್ಥಿತಿಗೆ ಬಂದು ಬಿಡುತ್ತಿದ್ದೆ. 

ನನ್ನ ಅತ್ಯಂತ ಪ್ರೀತಿಯ ಚಿತ್ರಗಳಲ್ಲಿ ಒಂದು ಶಂಕರ್ ಗುರು.. ಅಣ್ಣಾವ್ರ ಜಾದೂ ಈ ಚಿತ್ರವನ್ನು ಐವತ್ತಕ್ಕೂ ಹೆಚ್ಚು ಬಾರಿ ನೋಡಿಸಿದೆ. ಚಿತ್ರ ನೋಡುತ್ತಿದೆ... ಜೀಪು ಬಂತು.. ಅಣ್ಣಾವ್ರ ಸ್ನೇಹಿತರು ಬಂದರು, ಶುಭಾಶಯಗಳನ್ನು ಕೋರಿದರು.. ಅವರೆಲ್ಲ ಹೋದ ಮೇಲೆ ಶುರುವಾಯಿತು.. ಸುಂದರ ಹಾಡು.. ಹೊಂಗೆಯ ನೆರಳು



"ಬೆಳಗಿನ ಬಿಸಿಲು ಚೆನ್ನಾ.. ಹೊಂಗೆಯ ನೆರಳು ಚೆನ್ನಾ.. ಗೆಳತಿಯೆ ನಿನ್ನ ಸ್ನೇಹ ಚಿನ್ನಕ್ಕಿಂತ ಚೆನ್ನಾ" ಅಣ್ಣಾವ್ರ ಈ ಹಾಡು ಗುನುಗುನಿಸುತ್ತಾ ನೋಡುತ್ತಿದ್ದಾಗ.. ಟನ್ ಅಂಥಾ ಮೊಬೈಲ್ ಸದ್ದು ಮಾಡಿತು.. ನೋಡಿದೆ.. 3K ಕಥನ ಸಂಕಲನಕ್ಕೆ ಹೆಸರು "ಹೊಂಗೆ ಮರದಡಿ ನಮ್ಮ ನಿಮ್ಮ ಕತೆಗಳು"... ಮನಸ್ಸಿಗೆ ಆನಂದ ತಾಳಲಾಗದೆ ಆ ಒಂದು ಕ್ಷಣ ಮನಸ್ಸು ಮಗುವಿನಂತೆ ನಲಿದಾಡಿತು. 

ಇಂಥಹ ಒಂದು ಸುಂದರ ಹೆಸರಿನ ಪುಸ್ತಕ ನನ್ನ ಕಪಾಟನ್ನು ಬೆಳಗಲಿದೆ ಎನ್ನುವ ಸಂತೋಷ ಇನ್ನಷ್ಟು ಖುಷಿಯನ್ನು ಹೆಚ್ಚು ಮಾಡಿತ್ತು. 

ಭಾನುವಾರ ೨೯ ನವೆಂಬರ್ ೨೦೧೫ ದಿನಕ್ಕೆ ಕಾಯುತ್ತಿತ್ತು ಮನಸ್ಸು. 

ಬೆಳಗಿನ ಲಘು ಉಪಹಾರ, ಮದುವೆ ಮನೆಯಲ್ಲಿನ ಸಡಗರ.. ಬಂದವರನ್ನು ವಿಚಾರಿಸಿಕೊಳ್ಳುವ ಪರಿ, ಅರೆ ಇದು ನಮ್ಮ ಮನೆಯ ಸಮಾರಂಭವೇ ಆಗಿ ಹೋಗಿತ್ತು. 

ಆರೋಗ್ಯದ ಕಾರಣ ಗುರುಗಳು ಗೋಪಾಲ ವಾಜಪೇಯಿ ಅವರ ಅನುಪಸ್ಥಿತಿಯಲ್ಲಿ ಕಾರ್ಯಕ್ರಮ ಜರುಗಿತು.  ಸುಂದರ ಪ್ರಾರ್ಥನಾ ಗೀತೆಯೊಂದಿಗೆ ಆರಂಭವಾದ ಕಾರ್ಯಕ್ರಮ ಸುಂದರ ಪಥದಲ್ಲಿ ಸಾಗಿತು. 

ಶ್ರೀ ಜೋಗಿ ಅವರ ಕಥಾ ಸಂಕಲನದ ಬಗ್ಗೆ ಚುಟುಕು ಮಾತುಗಳು, ಕಥೆಗಳಲ್ಲಿನ ಇಷ್ಟವಾದ ಭಾವಗಳು, ಕಾದಂಬರಿ ಎನ್ನುವುದಕ್ಕಿಂತ ಈ ರೀತಿಯ ಪುಟ್ಟ ಪುಟ್ಟ ಕಥೆಗಳ ಸಂಕಲನ ಓದುಗರನ್ನು ಹಿಡಿದಿಡುತ್ತದೆ ಮತ್ತು ತಲುಪುತ್ತದೆ ಎನ್ನುವ ಮಾತುಗಳು ಇಷ್ಟವಾದವು. ಹಿರಿಯ ಕವಿಗಳ, ಸಾಹಿತಿಗಳ ಕಥಾ ರೂಪಕವನ್ನು ಈ ನಿಟ್ಟಿನಲ್ಲಿ ಉದಾಹರಿಸಿದ ಅವರ ಮಾತಿನ ಝರಿ  ಸೊಗಸಾಗಿತ್ತು. 

ಶ್ರೀ ಮಂಜುನಾಥ ಕೊಳ್ಳೇಗಾಲ ಅವರು, ಈ ಕಥೆಗಳನ್ನು ಓದಿದ ಬಗೆ, ಅದನ್ನು ಆರಿಸಿದ ಬಗೆ ಹೇಳಿದರು. ಇದಕ್ಕಿಂತ ಮೊದಲು ಕಥೆಗಳು ಶುರುವಾದ ಬಗೆ, ತಂದೆ ತಾಯಿಯಿಂದ ಮಕ್ಕಳಿಗೆ ಕಥೆ ಹೇಳುವ ಪರಂಪರೆ, ಇದು ಬೆಳೆದು ಬಂದ ಹಾದಿಯ ಬಗ್ಗೆ ವಿವರಿಸಿದರು. ಅವರ ಮಾತುಗಳು "ಮೊದಲು ಅಪ್ಪನ ಮೂಲಕ ಮಾತಾಡುತ್ತಿದ್ದ ಕಥೆಗಳು, ಅಪ್ಪ ಕೊಟ್ಟ ಒಂದು ಹಠಾತ್ ತಿರುವಿನಿಂದ ಕಥೆಗಳು ನನ್ನ ಬಳಿ ಮಾತನಾಡಲು ಶುರುಮಾಡಿದವು". ಅದ್ಭುತ ಮಾತುಗಳು.  ಈ ಪರಂಪರೆಯನ್ನು ಖಂಡಿತ ನಮ್ಮ ಮಕ್ಕಳ ಪೀಳಿಗೆಗೆ ಹೇಳಿಕೊಡಬೇಕು ಎನ್ನುವ ಅವರ ಮಾತುಗಳು ನಿಜಕ್ಕೂ ಗಮನಿಸಬೇಕಾಗಿದೆ. ಪುರಾಣ ಕಥೆಗಳಲ್ಲಿ ಬರುವ ರಾಕ್ಷಸ, ದೇವತೆಗಳು, ದೆವ್ವ, ಪಿಶಾಚಿಗಳು, ಗಂಧರ್ವ, ಕಿನ್ನರ, ಕಿಂಪುರುಷ ಇವರುಗಳ ಬಗ್ಗೆ ಹೇಳಿದಾಗ ಮಕ್ಕಳಿಗೆ ಆಸಕ್ತಿ ಹುಟ್ಟುತ್ತದೆ ಎಂದಾಗ ಹೌದು ಎನ್ನುತ್ತಾ ಹೃದಯ ಅವರಿಗೆ ಸಲಾಂ ಹೇಳಿತು. 

ನನ್ನ ಪಕ್ಕದಲ್ಲಿಯೇ ಕೂತಿದ್ದ ಡಾಕ್ಟರ್ ಡಿ ಟಿ ಕೃಷ್ಣಮೂರ್ತಿ ಅವರ ಹೇಳಿದರು "ಶ್ರೀ ಮಕ್ಕಳಿಗೆ ಕಥೆಗಳನ್ನು ಹೇಳುತ್ತಾ ಹೋದ ಹಾಗೆಲ್ಲ, ಮಕ್ಕಳ ನರವ್ಯೂಹ ಜಾಗೃತಿಗೊಳ್ಳುತ್ತದೆ, ವಿಕಸನಗೊಳ್ಳುತ್ತದೆ, ಯೋಚನಾ ಲಹರಿ ವಿಕಸಿತವಾಗುತ್ತದೆ. ಇದನ್ನೆಲ್ಲಾ ಜಗತ್ತಿನ ವಿಜ್ಞಾನಿಗಳು ಸಂಶೋಧನೆ ಮಾಡಿದ್ದಾರೆ ಮತ್ತು ಮಾಡುತಿದ್ದಾರೆ ಎಂದಾಗ ಅಜ್ಜಿ ಹೇಳಿದ ಕಥೆಗಳು ಅಥವಾ ಹಳ್ಳಿ ಮನೆಯಲ್ಲಿ ಚಳಿಗಾಲದ ರಾತ್ರಿಯಲ್ಲಿ ಮನೆಮುಂದಿನ ಚಳಿ ಕಾಯಿಸುವ ಬೆಂಕಿ ಕೆಂಡದ ಮುಂದೆ ಅಜ್ಜ ಹೇಳುತ್ತಿದ್ದ ಕಥೆಗಳಲ್ಲಿನ ಗಮ್ಮತ್ತು ಅರಿವಾಗುತ್ತಾ ಹೋಯಿತು. 

ಹೊರಗೆ ಬಂದೆ ನಗುವಿನ ಸರದಾರ ನವೀನ ಕೇಳಿದೆ.. ಈ ಹೆಸರನ್ನು ಯಾರು ಸೂಚಿಸಿದ್ದು ಎಂದು. ಅವರ ಉತ್ತರ ಸೂಪರ್ ಆಗಿತ್ತು. ಇದು ನಮ್ಮ ತಂಡದಿಂದ ಅನುಮೋದನೆ  ಹೆಸರು.  ಯಾಕೆ ಅಂದರೆ  ಜಗುಲಿ ಮೇಲೆ, ಇಲ್ಲವೇ ಅರಳಿ ಮರದ ಕೆಳಗೆ, ಇಲ್ಲವೇ, ಬೇಸಿಗೆಯಲ್ಲಿ ಹೊಂಗೆ ಮರದ ನೆರಳಲ್ಲಿ ಚಿಕ್ಕ ಪುಟ್ಟ ಹರಟೆಗಳು ಕಥೆಗಳಾಗಿ ಬದಲಾಗುತ್ತವೆ, ಅಂಥಹ ಹೆಸರು ಬೇಕು ಎಂದು ಈ ಕಥಾ ಸಂಕಲನಕ್ಕೆ ಇಟ್ಟೆವು ಎಂದರು. ಹೌದು ಅರ್ಥವತ್ತಾದ ಹೆಸರು. 

ಈ ಸಂಕಲನಕ್ಕೆ ಕಥೆಗಳನ್ನು ಬರೆದುಕೊಟ್ಟ ಎಲ್ಲಾ ಕಥೆಗಾರರಿಗೂ ನೆನಪಿನ ಕಾಣಿಕೆ ಕೊಟ್ಟು ಗೌರವಿಸಿದರು. ಹಾಗೆ ಎಲ್ಲಾ ಕಥೆಗಾರ ಜೊತೆಯಲ್ಲಿನ ಒಂದು ಚಿತ್ರ ನೆನಪಿನಲ್ಲಿ ಸಂಚಿಕೆಯಲ್ಲಿ ದಾಖಲಾಯಿತು. 


ಕನ್ನಡ ಕನ್ನಡ ಎಂದು ಕೂಗಾಡದೆ ಸದ್ದಿಲ್ಲದೇ ತಮ್ಮ ಪಾಡಿಗೆ ಕನ್ನಡಾಂಬೆಯ ಸೇವೆ ಮಾಡುತ್ತಿರುವ ಅಜಾತ ಶತ್ರು ನಮ್ಮೆಲ್ಲರ ಪ್ರೀತಿಯ ಹರಿಣಿ ಮೇಡಂ ಅವರಿಗೆ ರಾಜ್ಯೋತ್ಸವ ಪ್ರಶಸ್ತಿ ಕೊಟ್ಟು, ಪ್ರಶಸ್ತಿಗೆ ಗೌರವ ತಂದು ಕೊಟ್ಟಿದ್ದು ಈ 3K ತಂಡ. 
ಹರಿಣಿ ಮೇಡಂ ಅವರ ಬಳಿ ಇರದ ಮಾಹಿತಿ ಇಲ್ಲ ಎಂದು ಹೇಳಿದರೆ ತಪ್ಪಿಲ್ಲ. ಪ್ರವಾಸದ ಕಥನಗಳು, ಸಂಸ್ಕೃತಿಯ ಬಗೆಗಿನ ತಿಳುವಳಿಕೆ, ಪೌರಾಣಿಕ ಕಥನಗಳು, ಹಬ್ಬ ಹರಿದಿನಗಳ ಬಗ್ಗೆ ಮಾಹಿತಿ, ಭಾಷೆಯ ಬಗೆಗಿನ ಪ್ರೀತಿ ಎಲ್ಲವೂ ಸೇರಿರುವ ಒಂದು ಅದ್ಭುತ ಹೃದಯ ಹರಿನಿಂ ಮೇಡಂ ಅವರದು. ಇಂಥವರಿಗೆ ಸಂದ ಗೌರವದಿಂದ ತಾಯಿ ಭುವನೇಶ್ವರಿ ಹೆಮ್ಮೆಯಿಂದ ಈ ಪ್ರಶಸ್ತಿಯನ್ನು ಬೆನ್ನು ತಟ್ಟಿ ಹರಸುವುದೊಂತು ಖಂಡಿತವಾದ ಮಾತು. 

ಸಮೂಹದ ಕವಿಗಳಿಂದ ಕವಿತಾ ಸ್ಪರ್ಧೆಯನ್ನು ಏರ್ಪಡಿಸಿ ಕರುನಾಡಿನ ಸಾಹಿತಿ ಜಯಂತ್ ಕಾಯ್ಕಿಣಿ ಅವರಿಂದ ಆಯ್ಕೆ ಮಾಡಿಸಿ ಕವಿಗಳಿಗೆ ಬಹುಮಾನ ಕೊಟ್ಟಿದ್ದು ಇನ್ನೊಂದು ವಿಶೇಷ. 

ಒಂದು ಸರಳ ಆದರೆ ಆತ್ಮೀಯ ಸಮಾರಂಭ ಎಂದರೆ ಹೀಗೆಯೇ ಇರಬೇಕು ಎನ್ನುವ ಪಂಕ್ತಿಗೆ ತಕ್ಕ ಉದಾಹರಣೆ ಈದಿನದ ಕಾರ್ಯಕ್ರಮ. ಬಂದವರ ಮೊಗದಲ್ಲಿ ಸಂತಸ, ಹೃದಯದಲ್ಲಿ ಹೇಳಲಾರದ ಕನ್ನಡ ಭಾಷೆಯ ಬಗ್ಗೆ ಗೌರವ, ಒಂದು ಸಾರ್ಥಕ ಕ್ಷಣಗಳನ್ನು ಕಳೆದ ಹೆಮ್ಮೆ ಎಲ್ಲರಲ್ಲೂ ಮನೆ ಮಾಡಿತ್ತು. 

ಈ ಕಾರ್ಯಕ್ರಮದಲ್ಲಿ ತೆಗೆದ ಎಲ್ಲಾ ಚಿತ್ರಗಳು ಸುಂದರ ಅತಿ ಸುಂದರ.. ಆದರೆ ದೇವಸ್ಥಾನದ ಪ್ರಸಾದದ ಹಾಗೆ ಸ್ವಲ್ಪ ಮಾತ್ರ ಬಡಿಸಿದ್ದೇನೆ, ಮಿಕ್ಕವು ಫೇಸ್ಬುಕ್ ಕೊಂಡಿಯಲ್ಲಿ ಸಿಗುತ್ತದೆ. 

3K ತಂಡಕ್ಕೆ ಶಿರಬಾಗಿ ನಮಿಸುತ್ತಾ, ಅಭಿನಂದನೆ ಹಾಗೂ ಧನ್ಯವಾದಗಳನ್ನು ಒಮ್ಮೆಲೇ ಹೇಳುತ್ತಿದ್ದೇನೆ. 

"ಎಂದರೋ ಮಹಾನುಭಾವುಲು ಅಂದರೀಕಿ ವಂದನಮು"

Thursday, June 18, 2015

ಬೆಳಿಗ್ಗೆ ೫ ಗಂಟೆಗೆ ಗಾಯಬ್ ಆಗಿರ್ತೇನೆ!!!!


"ದೇವರ ದೇವ ಎಂಬುದ ಮರೆತೇ ಸೇವಕನಂತೆ ನನ್ನೆಡೆ ನಿಂತೇ ಮಾಧವ ನಿನ್ನ ಮಾಯಾಜಾಲ ಮಾನವ ನಾನು ತಿಳಿಯಲಿಲ್ಲ ವಿಠಲ ರಂಗಾSSSSSSS"

ಭಕ್ತ ಕುಂಬಾರ ಮೈ ಮರೆತು ತನ್ನ ಮನೆಯಲ್ಲಿದ್ದ ರಂಗನನ್ನು ನೆನೆದು ಬಿಕ್ಕಳಿಸುತ್ತಾ ಹಾಡುತ್ತಿರುತ್ತಾನೆ.. ಮಾರ್ಗ ಮಧ್ಯೆ ಸಂತ ಜ್ಞಾನದೇವ, ನಾಮದೇವ ಮಿಕ್ಕ ಸಂತರೆಲ್ಲರೂ ಕಾಣ ಸಿಗುತ್ತಾರೆ....

ಕುಂಬಾರ ಭಕ್ತಿಪರವಶದಿಂದ ಮೈ ಮರೆತು.. ಸಂತರೆಲ್ಲರಿಗೂ ಚರಣ ಕಮಲಗಳಿಗೆ ಎರಗುತ್ತಾ.. "ಎಲ್ಲಿ ಎಲ್ಲಿ ನನ್ನ ರಂಗ.. ವಿಠಲ.. ನೋಡಬೇಕಲ್ಲ.. ನನ್ನ ಜೊತೆಯಲ್ಲಿದ್ದ ರಂಗ.. ನನಗೆ ಸೇವೆ ಮಾಡಿದ ರಂಗ.. ತಾಯಿಯಂತೆ, ಮಗುವಂತೆ, ಅಣ್ಣನಂತೆ, ತಮ್ಮನಂತೆ ಸೇವೆ ಮಾಡಿದ ರಂಗಣ್ಣನನ್ನು ನೋಡಬೇಕು.. ಕಣ್ಣಲ್ಲಿ ತುಂಬಿಕೊಳ್ಳಬೇಕು.. ಹೀಗೆ ಬಡ ಬಡಿಸುತ್ತಲೇ ಇದ್ದರು.. ಅದಕ್ಕಿಂತಲೂ ... "

ಸಮಾಧಾನ ಮಾಡಿದಸಂತರು . " ಗೋರಾ ಯಾಕೆ ಈ ವೇದನೆ, ಯಾಕೆ ಗೋಳಾಟ .. ಯಾಕೆ ಅರ್ಧದಲ್ಲಿಯೇ ನಿಲ್ಲಿಸಿ ಬಿಟ್ಟೆ.. ಹೇಳು ಮುಂದುವರೆಸು.. "

"ಸಂತರೇ.. ರಂಗನನ್ನು ನೋಡಬೇಕು ಮಾತಾಡಿಸಬೇಕು ಎನ್ನುವ ಹಂಬಲ, ಆಸೆ, ಗುರಿ ಬಹಳ ದಿನಗಳದ್ದು.. ಹೇಗಾದರೂ ಸರಿ ನೋಡಬೇಕು ಎಂದು ಅಂದುಕೊಂಡಿದ್ದೆ.. ಆದರೆ ನನ್ನ ಅಜ್ಞಾನ.. ನನ್ನ ಜೊತೆಯಲ್ಲಿಯೇ ರಂಗ ಇದ್ದರೂ ನನಗೆ ತಿಳಿಯಲಿಲ್ಲ.. ನಾಮದೇವರು ಹೇಳಿದ ಮೇಲೆಯೇ ನನಗೆ ಅರಿವಾಗಿದ್ದು.. ಆದರೆ ಈಗ" ಮತ್ತೆ ನಿಲ್ಲಿಸಿದರು ಕುಂಬಾರ

"ಈಗ ಏನಾಯಿತು.. ಹೇಳು ಗೋರಾ"

"ನಿಮ್ಮೆಲ್ಲರ ಜೊತೆಯಲ್ಲಿ ಪಂಡರಾಪುರಕ್ಕೆ ಹೊರಟಿದ್ದೇವೆ.. ಅಯ್ಯೋ ಅಯ್ಯೋ ಏನು ಮಾಡಲಿ.. ಅಲ್ಲಿಗೆ ಹೋಗುವ ನಕಾಶೆಯನ್ನೇ ತಂದಿಲ್ಲ.. ಈ ನನ್ನ ಗೋಳಾಟದಲ್ಲಿ ನಕಾಶೆ ತರುವುದನ್ನೇ ಮರೆತುಬಿಟ್ಟಿದ್ದೇನೆ.. ಹಾಗೆಯೇ ಪಂಡರಾಪುರದ ಸುತ್ತಾ ಮುತ್ತಾ ಮಿಕ್ಕ ಸ್ಥಳಗಳನ್ನು ನೋಡಬೇಕು ಎನ್ನುವ ನನ್ನ ಆಸೆ ಹಾಗೆ ಉಳಿದುಬಿಡುತ್ತದೆ.. ಏನು ಮಾಡಲಿ ನಾನು ಹೇಗೆ ಹೇಳಲಿ.. " ಗೋರನ ರೋಧನೆ ಇನ್ನು ಮುಗಿದಿರಲಿಲ್ಲ.. ರಂಗನನ್ನು ನೋಡುವತವಕ , ನಕಾಶೆ ಮರೆತ ದುಃಖ ಎಲ್ಲವೂ ಮಿಳಿತವಾಗಿ ಕಾಡುತ್ತಿತ್ತು..

ಜ್ಞಾನದೇವರು ಹೇಳುತ್ತಾರೆ "ನೋಡು ಗೋರಾ... ನಮ್ಮ ಗುಂಪಿನಲ್ಲಿ ಒಬ್ಬರಿದ್ದಾರೆ.. ಅವರು ಇದ್ದ ಕಡೆ ನಕಾಶೆ ಯಾವುದು ಬೇಡ.. .. ನೋಡು ಅವರು ಫೇಸ್ಬುಕ್ ನಲ್ಲಿ ಆಗಲೇ ತಮ್ಮ ಗೋಡೆಯ ಮೇಲೆ ಬರೆದುಕೊಂಡು ಬಿಟ್ಟಿದ್ದಾರೆ ಈ ಕೆಳಗಿನ ರೀತಿಯಲ್ಲಿ"

"ಇವತ್ತಿನ ಶುಭರಾತ್ರಿ ಹಾಗು ನಾಳಿನ ಶುಭ ಮುಂಜಾನೆ ಶುಭ ದಿನಕ್ಕೆ ಒಂದೇ ಚಿತ್ರ ಇದೆ ಸ್ವಲ್ಪ ಅಡ್ಜೆಸ್ಟ್ ಮಾಡ್ಕೊಳಿ ಯಾಕಂದ್ರೆ ನಾಳೆ ಬೆಳಿಗ್ಗೆ ೫ ಗಂಟೆಗೆ ಮೈಸೂರಿಂದ ಗಾಯಬ್ ಆಗಿರ್ತೇನೆ"

"ಅವರು ನಮ್ಮನ್ನು ಸೇರಲು ಓಡೋಡಿ ಬರುತ್ತಿದ್ದಾರೆ.. ಅಗೋ ಅಗೋ ನೋಡು ಬಂದೆ ಬಿಟ್ಟರು.. ಇವರೇ ಮೈಸೂರಿನ ಬಾಲಣ್ಣ, ನಿಮ್ಮೊಳಗೊಬ್ಬ ಬಾಲೂ, ಬಾಲಸುಬ್ರಮಣ್ಯ, ಬಾಲೂ ಸರ್.. ಹೀಗೆ ಅನೇಕ ನಾಮಧೇಯದಿಂದ ಹೆಸರಾಗಿರುವ ಇವರೆ ನಮಗೆ ಮಾರ್ಗದರ್ಶಕ.. "

ಓಡೋಡಿ ಬಂದ ಬಾಲೂ ಸರ್.. "ಗುರುಗಳಿಗೆ ನಮಸ್ಕಾರಗಳು .." ಎಂದು ಎಲ್ಲಾ ಸಂತರಿಗೆ ನಮಸ್ಕರಿಸಿದರು.. 

ಗೋರ ಕುಂಬಾರ.. ಬಾಲೂ ಸರ್ ಅವರಿಗೆ "ಬಾಲೂ ಅವರೇ ದಯಮಾಡಿ ಪಂಡರಾಪುರಕ್ಕೆ ದಾರಿ ತೋರಿಸಿ.. ರಂಗನನ್ನು ನೋಡಬೇಕು.. ದರ್ಶನಮಾಡಬೇಕು" ಎಂದು ವಿನಂತಿಸಿಕೊಂಡರು.. 

ಜ್ಞಾನದೇವರು "ಬಾಲೂ ಅವರೇ ನಡೆಯಿರಿ ನಿಮ್ಮ ಮಾರ್ಗದರ್ಶನದಲ್ಲಿ ನಮಗೆಲ್ಲ ವಿಠಲನ ದರ್ಶನವಾಗಲಿ.. "
 
ಆಗ ಬಾಲೂ ಸರ್ "ಸಂತರೇ,ಗುರುಗಳೇ .. ಪಂಡರಾಪುರಕ್ಕೆ ಹೋಗೋಣ ಅದಕ್ಕಿಂತ ಮೊದಲು ,,, ಬಿಳಿಗಿರಿ ರಂಗನಬೆಟ್ಟದಲ್ಲಿ ರಂಗಣ್ಣನಿಗೆ ಅಭಿಷೇಕ ಇಟ್ಟುಕೊಂಡಿದ್ದೇವೆ.. ದಯಮಾಡಿ  ಎಲ್ಲರೂ ಅಲ್ಲಿಗೆ ಬನ್ನಿ.. ಅಲ್ಲಿಂದ ನಮ್ಮ ಶಿಷ್ಯ ನವೀನನ ಕುದುರೆಗಾಡಿ ಇದೆ ಒಟ್ಟಿಗೆ ಪಂಡರಾಪುರಕ್ಕೆ ಹೋಗೋಣ.. ... ಇಂದು ನನ್ನ ಜನುಮದಿನ.. ಹಾಗಾಗಿ ನಿಮ್ಮೆಲ್ಲರ ಆಶೀರ್ವಾದ ಬೇಕು"

ಹೀಗೆ ಪಂಡರಾಪುರಕ್ಕೆ ಹೊರಟ ಕುಂಬಾರನ ಪಡೆಯನ್ನು ಬಿಳಿಗಿರಿ ರಂಗನ  ಬೆಟ್ಟಕ್ಕೆ ಕರೆದೊಯ್ಯುವ ಸಾಮರ್ಥ್ಯ ಇರುವ ನಮ್ಮೆಲ್ಲರ ಮೆಚ್ಚಿನ ಬಾಲೂ ಸರ್ ಅವರಿಗೆ ಜನುಮದಿನದ ಶುಭಾಶಯಗಳು.. !!!!

ಇತಿಹಾಸಕ್ಕೆ ಜೂಮ್ ಹಾಕುವ ಶಕ್ತಿ ಇರುವ ಬಾಲೂ ಸರ್!!!
ಬಾಲೂ ಸರ್ ನಿಮ್ಮ ಇತಿಹಾಸ ನೋಡುವ,  ಅರಿಯುವ, ಕಲಿಸುವ, ಎಲ್ಲರಿಗೂ ತಿಳಿಸುವ ಹಂಬಲ, ಉತ್ಸಾಹ ನಮಗೆಲ್ಲರಿಗೂ ಅಚ್ಚುಮೆಚ್ಚು.. ಎಲ್ಲರೊಡನೆ ನಾನು ಒಬ್ಬ ಎನ್ನುವ ನಿಮ್ಮ ಮನಸ್ಸು ಹಾಲಿನಂತೆ.. ಇಂಥಹ  ಸುಮಧುರ ಮನಸ್ಸಿನ ನಿಮಗೆ ಹುಟ್ಟು ಹಬ್ಬಕ್ಕೆ ಶುಭ ಕೋರುವುದು ನಮ್ಮ ಭಾಗ್ಯ... !

ಹುಟ್ಟು ಹಬ್ಬದ ಶುಭಾಶಯಗಳು ಸರ್ಜಿ!!!

Thursday, May 7, 2015

DFR - ಉತ್ಸಾಹ ಉಲ್ಲಾಸದ ಕೇಂದ್ರ ಬಿಂಧು!!

ಯಾಕೋ ಬೆಳಿಗ್ಗೆ ಬೆಳಿಗ್ಗೆ ರೇಡಿಯೋ ಕೇಳೋಣ ಎನ್ನಿಸಿತು.

ನಾನು ಇದು... ನೀವು ಕೇಳ್ತಾ ಇರೋದು ಇದು.. ಎನ್ನುವ ಸತ್ವ ರಹಿತ ಮಾತುಗಳಿಗಿಂತ ಬೇರೆ ಏನಾದರೂ ಸರಳವಾಗಿ ಬರುವ ಕಾರ್ಯಕ್ರಮಗಳನ್ನು ಕೇಳ ಬೇಕು ಎನಿಸಿತು.

ಡಂಬಾಚಾರ, ಚಮಕ್, ಧಮಕ್ ಏನೂ ಇಲ್ಲದ ಎಫ್ ಎಂ ಕಾಮನಬಿಲ್ಲು, ದೂರದರ್ಶನದ ಚಂದನ ಕಾರ್ಯಕ್ರಮಗಳು ನನಗೆ ಬಲು ಇಷ್ಟ. ಇಡಿ ದಿನ ತಾವು ನಂಬಿದ ಕೆಲವು ಸಿದ್ಧಾಂತಗಳನ್ನು ಮುಂದೆ ಇಟ್ಟುಕೊಂಡು ಕಾರ್ಯಕ್ರಮಗಳನ್ನು ರೂಪಿಸುತ್ತಾರೆ ಆ ವಾಹಿನಿಗಳಲ್ಲಿ.

ಸರಿ.. ಕಾಮನಬಿಲ್ಲು ಎಫ್ ಎಂ ಕೆ ಕಿವಿ ಹಿಂಡಿದೆ.. ಮೊದಲೇ ಅಣ್ಣಾವ್ರ ಮೇಲೆ ಅಪರಿಮಿತ ಪ್ರೀತಿ, ಪ್ರೇಮ, ಅಭಿಮಾನ ತುಂಬಿರುವ ನನಗೆ... ಅಣ್ಣಾವ್ರ ಧ್ವನಿಯಲ್ಲಿ ಹಾಡುಗಳು ಭಿತ್ತರಗೊಳ್ಳುತ್ತಿದ್ದವು.

"ಹಾಡು ಕೋಗಿಲೆ ನಲಿದಾಡು ಕೋಗಿಲೆ..  ಬೆಳದಿಂಗಳ ಮಳೆಯಲ್ಲಿ ನಡೆವ ಹಾಗೆ ನನ್ನಲ್ಲಿ.. ಏನೋ ಮಧುರ ಭಾವನೆ.. ಏನೋ ಕಂಡ ಕಲ್ಪನೆ... "

"ಗುರುವಾರ ಬಂತಮ್ಮ ರಾಯರ ನೆನೆಯಮ್ಮ... ಹಿಂದೆ ಬರುವನಮ್ಮ ರಾಯರ ನೆರಳಿನಂತೆ ಹನುಮ.. "

"ಹಾಲಲ್ಲಾದರೂ ಹಾಕು.. ನೀರಲ್ಲಾದರೂ ಹಾಕು.. ಹಾಲಲ್ಲಿ ಕೆನೆಯಾಗಿ ನೀರಲ್ಲಿ ಮೀನಾಗಿ ಹಾಯಾಗಿರುವೆ"

"ಕರ ಮುಗಿವೆ ಗುರುರಾಯ ನೀ ಹರಸಬೇಕು.. ವರವೊಂದ ಬೇಡುವೆನು ನೀಡಲೇ ಬೇಕು"

ಹೀಗೆ ಸಾಲು ಸಾಲಾಗಿ ಹಾಡುಗಳು ಬರುತ್ತಲೇ ಹೋದವು.. ಆ ಹೊತ್ತಿನಲ್ಲಿ ಮೂಡಿದ ಲೇಖನ ಇದು.

ಈ ಹಾಡುಗಳಲ್ಲಿ ಬರುವ ರಾಘವೇಂದ್ರ, ಹನುಮ, ಕೃತಜ್ಞತಾ ಭಾವ, ಪರಿಸ್ಥಿತಿಗೆ ತಮ್ಮನ್ನು ಅರ್ಪಿಸಿಕೊಳ್ಳುವುದು, ನಸು ನಗುತ್ತಾ ಬದುಕ ಬಂಡಿಯಲ್ಲಿ ಸಾಗುವುದು.. ಒಂದು ತಾಳ್ಮೆಯ ಮನೋಭಾವ, ನಾನು ಎಂಬ ಅಹಂ ಇಲ್ಲದೆ ನಾವು ಎನ್ನುವ ಉಧಾತ್ತ ಭಾವ ಎಲ್ಲವೂ ಈ ಹಾಡುಗಳಲ್ಲಿ ತುಂಬಿ ತುಳುಕುತ್ತಿತ್ತು. ಈ ಹಾಡುಗಳನ್ನು ಹಾಡಿದ ಅಣ್ಣಾವ್ರು ಕೂಡ ಹಾಗೆ ಜೀವನದಲ್ಲಿ ಸಾಧನೆಯ ಶಿಖರ ಏರಿದ್ದರೂ ನೀವೇ ನೀವೇ ನನಗೆ ಅನ್ನದಾತರು.. ನೀವೇ ನನಗೆ ಅಭಿಮಾನಿ ದೇವರುಗಳು ಎನ್ನುವ ಭಾವ ಹೊಂದಿದ್ದವರು.

ಹೀಗೆ ನಮ್ಮ ನಡುವೆ ಇರುವ ಸರಳ ವಿರಳ ಜೀವಿ DFR..

ಕಾದ ಕಬ್ಬಿಣದ ಸರಳುಗಳೇ ಪಕ್ಕದಲ್ಲಿ ಹಾಯುತ್ತಾ ಹೋದರೂ.. ಅದೇ ನಗು.. ಅದೇ ತಾಳ್ಮೆಯ ಮಾತುಗಳು, ನಿಧಾನವಾಗಿ ಹರಿದು ಹರಿದು  ಬರುವ ನುಡಿಮುತ್ತುಗಳು..

ಕೈಯಲ್ಲಿ ಕಟ್ಟಿದ ಗಡಿಯಾರ ಗರ ಗರ ತಿರುಗುತ್ತದೆ ನಮ್ಮ ಕೈಯಲ್ಲಿದ್ದರೆ.. ಆದರೆ ಇವರ ಕೈಯಲ್ಲಿ ಇರುವ ಗಡಿಯಾರಕ್ಕೆ ಇವರ ಮೇಲೆ ಅದೇನೋ ವಿಪರೀತ ಮಮತೆ.. ನನಗೆ ಅನುಮಾನ ಬಂದಿತ್ತು ಒಮ್ಮೆ.. ಅದಕ್ಕೆ ಕೇಳಿದ್ದೆ "ನಿಮ್ಮ ಗಡಿಯಾರದಲ್ಲಿ ಹನ್ನೆರೆಡು ಸಂಖ್ಯೆಗಳು ಮಾತ್ರವೇ ಇರೋದು ಅಥವಾ ಹೆಚ್ಚಿವೆಯೇ ಎಂದು....
ಒಮ್ಮೆ ನಿಮ್ಮಲ್ಲಿರುವ ಕೈ ಗಡಿಯಾರ ನನಗೆ ಕೊಡಿ.. ಸಮಯಪಾಲನೆ, ಸಮಯೋಚಿತ ಪಾಲನೆ ಕಲಿಯಬೇಕು ಎಂದು ಹೇಳಿದ್ದೆ.. ಇವೆಲ್ಲಾ ಉತ್ಪ್ರೇಕ್ಷೆ ಎನಿಸಬಹುದು ಆದರೆ ದಿನದ ಇಪ್ಪತ್ತನಾಲ್ಕು ಘಂಟೆಗಳನ್ನು ಹೇಗೆ ಉಪಯೋಗಿಸಬೇಕು ಎನ್ನುವುದನ್ನು ಖಂಡಿತ ಇವರಿಂದ ಕಲಿಯಬೇಕು ನಾನು.

ಬರೆಯುತ್ತಾರೆ, ಓದುತ್ತಾರೆ, ಕಚೇರಿಯ ಒತ್ತಡ ಕೆಲಸದಲ್ಲೂ ಇವರ ಚಟುವಟಿಕೆಗಳು ಯಾವುದೇ ಕಾರಣಕ್ಕೂ ನಿಲ್ಲುವುದಿಲ್ಲ. ಕಿರಿಯರ ಜೊತೆಯಲ್ಲಿ ಕಿರಿಯಯವರಾಗಿ, ಅವರಿಂದ ಕಲಿಯುವ ಗುಣ ಒಂದು ಕಡೆಯಾದರೆ , ಹಿರಿಯರ ಜೊತೆಯಲ್ಲಿ ಕಿರಿಯವರಾಗಿ, ಹಿರಿಯರ ಮಾರ್ಗದರ್ಶನ ಪಡೆವ ಮನೋಭಾವ ಒಂದು ಕಡೆ.. ಇಂಥಹ ಅದ್ಭುತ ಗುಣಗಳ ಸಾಗರ ನಮ್ಮ DFR..

ಇದೆಲ್ಲಾ ಹೇಗೆ ಸಾಧ್ಯ ಎಂದರೆ.. ಅಣ್ಣಾವ್ರ ಪ್ರೇಮದ ಕಾಣಿಕೆ ಹಾಡಿನಂತೆ "ಅದೇನೆ ಬಂದರೂ…. ಅವನ ಕಾಣಿಕೆ" ಎಂದು ಹೇಳುತ್ತಾ ಈ ಕೆಳಗಿನ ಚಿತ್ರದಂತೆ ನಿಂತು ಬಿಡುತ್ತಾರೆ..


ಈ ಲೇಖನ ಓದಿದ ಮೇಲೆ ನನಗೆ ಬಯ್ತಾರೆ, ಕೋಪಮಾಡಿಕೊಳ್ಳುತ್ತಾರೆ... ಸ್ವಲ್ಪ ದಿನ ಸದ್ದಿಲ್ಲದೇ ಇರುತ್ತಾರೆ.. ಹೌದು ನಿಜ.. ಆದರೆ ಕಾಳಿದಾಸ ಕಂಡು ಆರಾಧಿಸಿದ ಕಾಳಿಮಾತೆಯ ಭಕ್ತನಂತೆ ನಾ ಅವರಿಗೆ ಈ ಹುಟ್ಟು ಹಬ್ಬದ ಸಡಗರ ತುಂಬಿದ ಕ್ಷಣಗಳನ್ನು ಅವರಿಗಾಗಿ ಆ ಭಗವಂತನಲ್ಲಿ ಬೇಡಿಕೊಳ್ಳುತ್ತೇನೆ.

ಹುಟ್ಟು ಹಬ್ಬದ ಶುಭಾಶಯಗಳು DFR.. ನೀವೊಂದು ಸ್ಪೂರ್ತಿಯ ಕೇಂದ್ರ ಬಿಂಧು.. ಸ್ಪೂರ್ತಿಯ ಸೆಲೆ.. ಸ್ಪೂರ್ತಿಯ ನೆಲೆ..
ಅದಕ್ಕಾಗಿ ಈ ಒಂದು ಪುಟ್ಟ ಲೇಖನ ನಿಮ್ಮ ಜನುಮದಿನಕ್ಕಾಗಿ.. !!!

Saturday, April 11, 2015

ಶ್ರೀ ಸಂಧ್ಯಾದರ್ಪಣ....!

ಶ್ರೀ ನಿಮಿಷಾಂಬ ದೇವಾಲಯದಲ್ಲಿ  ಹರಿಕಥಾ ವಿಧ್ವಾನರು ಒಂದು ಸುಧೀರ್ಘ ಹರಿಕಥೆ ಹೇಳಿದ ನಂತರ.. ಒಂದು ಸಣ್ಣ ವಿರಾಮಕ್ಕೆ ಹಾತೊರೆಯುತ್ತಿದ್ದರು..

ಅಲ್ಲಿ ನೆರೆದಿದ್ದ ಹರಿಕಥೆ ಅಭಿಮಾನಿಗಳು, ಭಕ್ತರು.. ಎಲ್ಲರೂ ಸೇರಿ "ಗುರುಗಳೇ ಪುರಾಣ ಪುಣ್ಯ ಕಥೆಯನ್ನು ನಿಮ್ಮಷ್ಟು ಸೊಗಸಾಗಿ ಹೇಳುವವರನ್ನು ಕೇಳಿಲ್ಲ.. ನೋಡಿಲ್ಲ. ನಿಮಗೆ ಅಚ್ಚರಿ ಪಡಿಸುವಂತಹ ಅಥವಾ ಅಚ್ಚರಿ ಪಡಿಸಿದ ಯಾವುದಾದರೂ ಘಟನೆ, ಸಂಗತಿ ಹೇಳಿ" ಎಂದಾಗ..

ಬಳಿಯಲ್ಲಿಯೇ ಇದ್ದ ಕಾವೇರಿ ನದಿಗೆ ಬೊಗಸೆಯಲ್ಲಿ ಆ ಕಾವೇರಿ ಮಾತೆಯನ್ನು ಹಿಡಿದುಕೊಳ್ಳಲು ಹೋದರು... ಸಿಕ್ಕಷ್ಟೇ ನೀರಿನಿಂದ ತಮ್ಮ ದಾಹವನ್ನು ತಣಿಸಿಕೊಂಡು.. ಯಾಕೋ ಗಾಬರಿಗೊಂಡರು. ಮತ್ತೆ ಬೊಗಸೆಯಲ್ಲಿ ನೀರು ತುಂಬಿಕೊಂಡು ಕುಡಿದರು, ಮತ್ತೆ ಹರಿಯುವ ನೀರನ್ನು ನೋಡಿದರು. ಮನಸ್ಸು ಸಂತಸ ಭರಿತವಾಯಿತು, ಆಯಾಸವೆಲ್ಲ ಒದ್ದೆ ಬಟ್ಟೆಯ ನೀರು ರವಿಯನ್ನು ಕಂಡೊಡನೆ ಆರಿ ಹೋಗುವಂತೆ.. ಮೈ ಮನವೆಲ್ಲ ಹಗುರಾಯಿತು.. ಕಾವೇರಿ ಮಾತೆ ನಿನ್ನ ಮಹಿಮೆಯೆ ಮಹಿಮೆ ಎಂದು ತಾಯಿ ಕಾವೇರಿಗೆ ನಮಿಸಿ... ಒಂದೆರಡು ಹನಿಯನ್ನು ತಮ್ಮ ತಲೆಯ ಮೇಲೆ ಸಿಂಪಡಿಸಿಕೊಂಡು ಕೃತಾರ್ಥರಾದ ಭಾವದೊಡನೆ ಮತ್ತೆ ಹರಿಕಥೆ ನಡೆಯುತ್ತಿದ್ದ ಸ್ಥಳಕ್ಕೆ ಬಂದು..

ಭಕ್ತರೆ, ಸುಧೀರ್ಘ ಹರಿಕಥೆ ಹೇಳಿದನಂತರ ಈಗ ಒಂದು ಚಿಕ್ಕ ಉಪಕಥೆಯನ್ನು ಹೇಳುತ್ತೇನೆ.. ಕೇಳುವಂತವರಾಗಿ

*************************

ಕೀರ್ತಾನರಂಭ ಕಾಲದಲ್ಲಿ ಶಾಲಿವಾಹನ ಶಕೆಯಲ್ಲಿ ಮಹಿಶೂರು ಪ್ರಾಂತ್ಯದ ಶ್ರೀ ಮಾತೆ ನಿಮಿಷಾಂಬ ಕ್ಷೇತ್ರದಲ್ಲಿ ನಾ ಹೇಳುವ ಈ ಘಟನೆ ನನಗೆ ಒಮ್ಮೆಲೇ ಆಹ್ ಎನ್ನುವಂತಾಯಿತು ...  

ಈಗ ತಾನೇ ಕಾವೇರಿ ನದಿಗೆ ನೀರು ಕುಡಿಯಲು ಹೋಗಿದ್ದೆ.. ಮುಖವನ್ನು ನೋಡಿಕೊಳ್ಳಲೆಂದು ನೀರಲ್ಲಿ ನೋಡಿದೆ.. ಅರೆ ನನ್ನ ಮುಖ ಕಾಣುತ್ತಿದೆ.. ಮತ್ತೆ ನೀರನ್ನು ನೋಡಿದೆ.. ಸರಾಗವಾಗಿ, ರಭಸವಾಗಿ ಹರಿಯುತ್ತಿತ್ತು . ಹರಿಯುವ ನೀರಲ್ಲಿ ಅಲೆಗಳ ಎಬ್ಬಿಸುತ್ತ ಹರಿಯುತ್ತಿದ್ದ ನೀರಲ್ಲಿ ಪ್ರತಿಬಿಂಬವೇ ಏನು ತಾಯಿ ನಿನ್ನ ಲೀಲೆ. ಎಂದು ಕಾವೇರಿ ಮಾತೆಗೆ ನಮಿಸಿದೆ.. ಆಗ ತಾಯಿ ನಿಮಿಷಾಂಬೆ ಹೇಳಿದಳು 

"ಭಕ್ತ.. ನಿಂತ ನೀರಲ್ಲಿ ಬಿಂಬ ಪ್ರತಿಬಿಂಬ ಸಹಜ.. ನೀರು ಮನಸ್ಸನ್ನು ಪ್ರತಿಫಲಿಸುತ್ತದೆ.. ಆದರೆ ನೀರು ಹರಿಯುತ್ತಲಿದ್ದಾಗ ನಮಗೆ ಪ್ರತಿಬಿಂಬ ಇರಲಾರದು, ಬರಲಾರದು ಎನ್ನಿಸುವುದು ಸಹಜ.. ಆದ್ರೆ ಮನಸ್ಸು ಒಂದೇ ಆದಾಗ, ನೋಡುವ ನೋಟ, ಆಡುವ ಮಾತುಗಳು, ಯೋಚಿಸುವ ದಾಟಿ ಒಂದೇ ಆದಾಗ ರಭಸದಿಂದ ಹರಿಯುವ ನೀರಲ್ಲೂ ಈ ಚಮತ್ಕಾರ ಸಾಧ್ಯ"  

ಯಾಕೋ ವಿಧ್ವಾನರ ಮುಖದಲ್ಲಿ ಸಮಾಧಾನಕ್ಕಿಂತ ಹಣೆಯಲ್ಲಿ ಇನ್ನಷ್ಟು ಗೆರೆಗಳು ಮೂಡಿದವು, ಹುಬ್ಬುಗಳು ಇನ್ನೊಂದು ಇಂಚು ಮೇಲಕ್ಕೆ ಹೋಗಿ ಮತ್ತೆ ನಾ ಕೆಳಗಿಳಿಯುವುದಿಲ್ಲ ಎಂದು ಶಪಥ ಮಾಡಿದವು.. ಹೃದಯದ ಬಡಿತ ತೀವ್ರ ಆಯಿತು.. 

"ಮಾತೆ ನಿನ್ನ ಮೇಲೆ ನನಗೆ ಸಂಪೂರ್ಣ ನಂಬಿಕೆಯಿದೆ.. ಆದರೆ ನೀ ಹೇಳಿದ ಮಾತುಗಳು ಯಾಕೋ ನನಗೆ ಒಲಿಯುತ್ತಿಲ್ಲ.. ದಯಮಾಡಿ ಇದನ್ನೇ ಒಂದು ಉದಾಹರಣೆ ಸಹಿತ ವಿವರಿಸುತ್ತೀಯ ಪ್ಲೀಸ್"

ದೇವಿ ನಸುನಗುತ್ತಾ ಭಕ್ತನ ಮನದಲ್ಲಿ ಇದ್ದ ಆತಂಕ, ಸಂದೇಹಗಳನ್ನು  ಅರಿತ ಮಾತೆ ಹೇಳಿದಳು "ಭಕ್ತ.. ಮಂಜು ಎನ್ನುವ ಪದ ನೀ ಕೇಳಿರುವೆ.. ಅದು ನಮ್ಮನ್ನು ಆವರಿಸಿದಾಗ, ಸುತ್ತ ಮುತ್ತಲ ಪರಿಸರವನ್ನು ತುಂಬಿಕೊಂಡಾಗ ಎದುರಿಗೆ ಇರುವ ವಸ್ತುಗಳು ಕಾಣುವುದಿಲ್ಲ ಆದರೆ.. ಅದು ತಿಳಿಯಾಗಿ ತೆಳುವಾಗಿ ನಿಂತಾಗ ಆ ಮಂಜಿನಲ್ಲಿ ಕಾಣುವ ದೃಶ್ಯಗಳೇ ಅಪರೂಪದ್ದು  ಅಲ್ಲವೇ.. ಹಾಗೆಯೇ ಇಲ್ಲೊಂದು ಸುಂದರ ನಂಟಿದೆ.. ಎಲ್ಲೋ ಹುಟ್ಟಿ ಎಲ್ಲೋ ಬೆಳೆದ ಒಂದು ಹೆಣ್ಣು ಮಗು ಇನ್ನೊಂದು ಮನೆಯನ್ನು ಬೆಳಗುವಂತೆ.. ಎಲ್ಲೋ ಹುಟ್ಟಿ ಎಲ್ಲೋ ಹರಿವ ಕಾವೇರಿ ಮಾತೆ ಸಾಗರ ಸೇರುವಂತೆ.. ಈ ಒಂದು ಪುಟಾಣಿ ಮಗು ಮಂಜು ತುಂಬಿರುವ ಮಂಜುಗುಣಿಯಲ್ಲಿ ಹುಟ್ಟಿ, ಬೆಳೆದು.. ಬೆಂಗಳೂರು ಎಂಬ ಮಾಯಾನಗರಿಯಲ್ಲಿ ನೆಲೆಸಿದಳು..ಈಗಿನಿಂದ ಸುಮಾರು ಮೂರು ವಸಂತಗಳ ಹಿಂದೆ.. ಅಚಾನಕ್ ಒಂದು ಪ್ರವಾಸದಲ್ಲಿ ಈ ಲೇಖನವನ್ನು ಬರೆಯುತ್ತಿರುವ ಕಾಂತನಿಗೆ ಸಿಕ್ಕಿದಳು.. ಇನ್ನು ಈ ಕತೆಯನ್ನು ಈ ಲೇಖಕ ಮುಂದುವರೆಸುತ್ತಾನೆ.. ಭಕ್ತ ಕಾಂತ ಶುರು ಮಾಡಿಕೊ.... !!!

ಕಾಂತ ನಮಸ್ಕರಿಸಿ "ಮಾತೆ ನಾ ಹೆಚ್ಚು ಹೇಳುವುದಿಲ್ಲ...  ಇದು ಉಪಕಥೆ.. ಆಗಲೇ ಸಮಯ ಹೆಚ್ಚಾಗಿದೆ.. ನಾ ಹೇಳುವುದಿಷ್ಟೇ.. ಕನ್ನಡಿ, ಮನಸ್ಸಿನ ಕನ್ನಡಿ.. ದರ್ಪಣ ಹೀಗೆ ನೂರಾರು ಮಾತಲ್ಲಿ ಹೇಳುವ ಒಂದು ವಸ್ತು ಬಿಂಬದ ಪ್ರತಿಬಿಂಬ ತೋರುತ್ತದೆ.. ಇವಳು ಹಾಗೆಯೇ ಅವಳು ಯೋಚಿಸುವ ಪರಿ, ಅವಳು ಮಾತಾಡುವ ಪರಿ, ಹೌದು ನಾ ಕೂಡ ಹೀಗೆ ಮಾಡುತ್ತಿದ್ದೆ ಎಂಬ ಭಾವ ಕೊಡುತ್ತದೆ ಹಾಗೆಯೇ ಇವೆಲ್ಲವೂ ಒಂದಕ್ಕೊಂದು ಹೊಂದಾಣಿಕೆಯಾಗುತ್ತದೆ.. ಅದಕ್ಕೆ ನಾ ಅವಳನ್ನು ನನ್ನ ಕನ್ನಡಿ ಎನ್ನುವುದು ಅಥವ ನಾನು ಅವಳ ಕನ್ನಡಿ.. ಆ ಇದು ಸರಿಯಾದ ಮಾತು.. ನಾ ಅವಳ ಕನ್ನಡಿ.. ಅವಳಲ್ಲಿ ಮೂಡುವ ಮಾತು ನನ್ನಲ್ಲಿ ಮೂಡುತ್ತದೆ.. ಇವಳು ಯಾರು ಬಲ್ಲಿರೇನು ಅಂತ ಸಂದೇಹವೇ ಬೇಡ.. ಇವಳು ಸಂಧ್ಯಾ ಪುಟ್ಟಿ ನನ್ನ ಪ್ರೀತಿಯ SP.. ನನ್ನ ಮುದ್ದು ಸಹೋದರಿ.. "

"ಅದು ಸರಿ ಕಾಂತ.. ಮಾತೆ ಹೇಳಿದ ಮಾತುಗಳು, ನೀ ಹೇಳಿದ ಮಾತುಗಳು ಎರಡು ಅರ್ಥವಾಯಿತು.. ಆದರೆ ಕಾವೇರಿ ನದಿಯಲ್ಲಿ ಹರಿಯುತ್ತಿರುವ ನೀರಿನಲ್ಲಿ ಪ್ರತಿಬಿಂಬ ಹೇಗೆ ಸಾಧ್ಯ.... ಅದು ನನ್ನ ಯಕ್ಷಪ್ರಶ್ನೆ.."

ದೇವಿ ನಗುತ್ತಾ "ಭಕ್ತ .. ಇಂದು ಸಂಧ್ಯಾಳ ಹುಟ್ಟು ಹಬ್ಬ.. ಕಾಂತ ಮತ್ತು ಸಂಧ್ಯಾ ಬಿಂಬ ಪ್ರತಿಬಿಂಬದಂತೆ.. ಸಂಧ್ಯಾ ಎನ್ನುವ ಈ ಮುದ್ದು ಪುಟಾಣಿ ಹರಿಯುವ ನೀರಿನಂತೆ .. ನಮ್ಮ ಕಾವೇರಿಯಂತೆ .. ಅದರ ಒಡಲಲ್ಲಿ ಇರುವ ಅನೇಕ ಜೀವಾತ್ಮ ಅಂಶಗಳು ಇರುವಂತೆಯೇ  ಈ ಮುದ್ದು ಪೋರಿಯಲ್ಲಿ ಇರುವ ಕಲೆ ಅಬ್ಬಾ ಎನಿಸುತ್ತದೆ.. ಇವಳ ಕೈಗೆ ಒಂದು ತೆಂಗಿನ ನಾರನ್ನೇ ಕೊಡು ಒಂದು ಕಲಾಕೃತಿ ಸಿದ್ಧವಾಗುತ್ತದೆ.. ಅಂಥಹ ಚಮತ್ಕಾರ ಮಾಡುತ್ತಾಳೆ.. ಇನ್ನು ಇವಳ "ಸಂಧ್ಯೆಯಂಗಳದಿ" ಅಂಕಣದಲ್ಲಿ ಬರೆಯುವ ಲೇಖನಗಳು ಹೀಗೂ ಬರೆಯಬಹುದೆ ಎಂದು ಅಚ್ಚರಿ ಹುಟ್ಟಿಸುತ್ತದೆ.. ಅಂಥಹ ಚಮತ್ಕಾರಿಕ ಕಾಂತನ ಸಹೋದರಿಗೆ ಶುಭಾಶಯಗಳನ್ನು ಹೇಳಲು ಕಾವೇರಿ ಮಾತೆ ದರ್ಪಣವಾಗಿದ್ದಾಳೆ"

ಕಾಂತ.. ನೀನೆ ಧನ್ಯ.. ಇಂದು ಮುದ್ದು ಪುಟಾಣಿಯನ್ನು ತಂಗಿಯಾಗಿ ದರ್ಪಣವಾಗಿ ಪಡೆದ ನೀನೆ ಧನ್ಯ.. 
*********************

ಭಕ್ತರೆಲ್ಲಾ ಹರ್ಷದಿಂದ.. ಒಂದು ವಿಭಿನ್ನ ಕಥೆಯನ್ನು ಕೇಳಿದ ಅನುಭವ ಪಡೆದ ಅವರೆಲ್ಲರೂ  ಎದ್ದು ನಿಂತು "ಸಂಧ್ಯಾ.. ನಿನ್ನ ಹೆಸರಲ್ಲಿಯೇ ಸುಂದರ ಮುಂಜಾವಿದೆ, ಸುಂದರ ಸಂಜೆಯಿದೆ... ಆ ಸಂಧ್ಯಾಕಾಲದಲ್ಲಿ ಸೂರ್ಯ ಚಂದ್ರ ತಾರೆಗಳು ಅಂಬರದಲ್ಲಿ ಕಾಣುವ ಹಾಗೆ.. ನಿನ್ನ ಜೀವನದಲ್ಲಿ ಸಂತಸ ಎನ್ನುವ ಚಂದ್ರ ಬೆಳದಿಂಗಳು ಚೆಲ್ಲಲಿ , ನೆಮ್ಮದಿ ಎನ್ನುವ ಸೂರ್ಯ ಪ್ರಜ್ವಲಿಸಲಿ, ಆಸೆ ಆಕಾಂಕ್ಷೆಗಳು ಎನ್ನುವ ತಾರೆಗಳು ಸದಾ ಮಿನುಗುತ್ತಲಿರಲಿ.. ಕಲೆ ಎನುವ ನಿನ್ನ ಬಾಂದಳ ಬೆಳಗುತ್ತಲಿರಲಿ.."                                                                             
                                                               *********************
ಮತ್ತೆ ಹರಿಕಥಾ ವಿಧ್ವಾನರು ನಿಮಿಶಾಂಬೆಗೆ ನಮಿಸಿ ಕಾವೇರಿ ಮಾತೆಯನ್ನು ಒಮ್ಮೆ ನೋಡಿ ನಮಿಸಿ ಮತ್ತೊಂದು ಸುಂದರ ಪುರಾಣ ಪುಣ್ಯ ಕಥೆಯನ್ನು ಹೇಳಲು ಸಿದ್ಧವಾದರು.. 
                                                              **********************

ಅಲ್ಲಿಯೇ ನಿಂತಿದ್ದ ನಿಮಿಶಾಂಬೆ ಸಂಧ್ಯಾ ಪುಟ್ಟಿಯನ್ನು ಹರಸಿ ಗರ್ಭಗುಡಿಯಲ್ಲಿ ಹೋಗಿ ನಿಂತಳು ಎನ್ನುವಲ್ಲಿಗೆ ಈ ಹರಿಕಥಾ ಉಪಪ್ರಸಂಗ ಮಂಗಳವಾಯಿತು.. !!!


ಜನುಮದಿಂದ ಶುಭಾಶಯಗಳು SP!!!