- ಪರ್ಪಲ್ ಕೋಟ್ ಆಯಿತು -
- ರೀಡಿಂಗ್ ಬಿಟ್ವೀನ್ ದಿ ಲೈನ್ಸ್ ಆಯಿತು
- ಟೀಚರಮ್ಮ ಆಯಿತು
- ಸೈಂಟಿಫಿಕ್ ಉಪಕರಣ ಆಯಿತು
- ದೇವರು ಕೊಟ್ಟ ಗೆಳತೀ ಆಯಿತು
- ಚಿತ್ರಕಲೆ, ಪೇಂಟಿಂಗ್, ಮಣ್ಣಿನ ಪಾತ್ರೆಗಳ ಮೇಲೆ ಚಿತ್ರ ಆಯಿತು
- ಅರ್ಪಿತಾ ಆಯಿತು
- ಅವರು ಬರೆದಿದ್ದ ಬ್ಲಾಗಿನ ಲೇಖನಗಳ ಹೆಸರುಗಳನ್ನೂ ಸಂಭಾಷಣೆ ಮಾಡಿದ್ದು ಆಯಿತು
- ಫೋಟೋಗ್ರಫಿ ಬಗ್ಗೆ ಆಯಿತು
ಮುಂದೆ ಅಂತ ಕಾದು ಕೂತಿತ್ತು ಲ್ಯಾಪ್ಟಾಪ್ ಕೀಲಿ ಮಣೆಗಳು.. ಮೌಸ್ ಅಲ್ಲಾಡಿದರೆ ಬೇರೆ ಏನಾದರೂ ಟೈಪ್ ಆಗುತ್ತೆ ಅಂತ.. ಮಿಸುಕಾಡದೆ ಕೂತಿತ್ತು..
ಅಣ್ಣಾವ್ರ ಕಡೆಯ ಬಾಂಡ್ ಚಿತ್ರ ಆಪರೇಷನ್ ಡೈಮಂಡ್ ರಾಕೆಟ್.. ಅದರ ಆಂಗ್ಲ ಭಾಷೆಯ ಹಾಡು ಮನದಲ್ಲಿಯೇ ಗುನುಗುನಿಸುತಿತ್ತು..
"If you come today, its too early
If you come tomorrow, its too late
If you come today, its too early
If you come tomorrow, its too late
You pick the time
tick tick tick tick tick tick (4)"
ಜಗತ್ತು ಒಂದು ರೀತಿಯಲ್ಲಿ ಸ್ಥಬ್ಧವಾಗಿತ್ತು ಅಂದರೂ ನಂಬಬಹುದಿತ್ತು.. ಅಂತಹ ವಿಶೇಷವೆನಪ್ಪಾ ಅಂತ ಕೇಳೋದೇ ಬೇಡ.. ಇಂದು ಸಿಬಿಯ ಜನುಮದಿನ.. ಒಮ್ಮೆ ಮಿಸ್ ಮಾಡಿದರೆ ಜ್ವಾಲಾಮುಖಿ ಸಿಡಿದರೂ ತಡೆದುಕೊಳ್ಳಬಹುದು.. ಆದರೆ ಮೌನ ಸಹಿಸಲಾಸಾಧ್ಯ.. .. ಈ ಯೋಚನೆ ಬಂದಾಗ ಮೊಬೈಲಿನಲ್ಲಿ "ಈ ಮೌನವ ತಾಳೆನು.. ಮಾತಾಡೇ ದಾರಿಯ ಕಾಣೆನು" ಹಾಡು ಸಂದರ್ಭಕ್ಕೆ ಸರಿ ಎನಿಸುವ ಹಾಗೆ ಬಂದಿತ್ತು..
ಹೌದು.. ಗೆಳೆತನದಲ್ಲಿ ಮೌನ ಇರಬಾರದು.. ಇಲ್ಲವೇ ಶೋಲೆ ಚಿತ್ರದ ಎ ಕೆ ಹಾನಗಲ್ "ಇತ್ನಾ ಸನ್ನಾಟ ಕ್ಯೋ ಹೇ ಭಾಯ್" ಅಂತ ಬಂದುಬಿಡುತ್ತಾರೆ..
ಜನುಮದಿನಕ್ಕೆ ಶುಭಾಶಯ ಕೊರೋಕೆ ಆಗಲಿಲ್ಲ ಅಂದರೆ "ತೇರಾ ಕ್ಯಾ ಹೋಗಾ ಕಾಲಿಯಾ" ಅಂತ ಗಬ್ಬರ್ ತರಹ ಮೌನದಲ್ಲಿಯೇ ಸಿಗ್ತಾರೆ..
ಯಾಕೆ ಹೀಗಾಯ್ತು.. ನಿಮಗೆ ಅಹಂ ಜಾಸ್ತಿ ಆಯಿತು.. ಒಂದು ಸಣ್ಣ ಸಂದೇಶ ಶುಭಾಶಯಗಳು ಅಂತ ಕಳಿಸೋಕೆ ಆಗಿಲ್ಲ ಅಂದರೆ ನಾನು ನಂಬೋಲ್ಲ.. ಅಚಾನಕ್ ನಿಮಗೆ ಬಹತೇಕ ಹೊಸಬ ಸ್ನೇಹಿತರು ಸಿಕ್ಕಿದ್ದಾರೆ ಅನಿಸುತ್ತೆ ಅಂತಾರೆ
ಆದರೆ ತ್ರಿಶೂಲದ ಅಮಿತಾಬ್ ರೀತಿ "ನನಗೆ ಹೊಸ ಸ್ನೇಹಿತರು ಯಾರೂ ಸಿಕ್ಕಿಲ್ಲ.. ಸಿಕ್ಕಿದ್ದರೂ ನಿಮ್ಮ ರೀತಿಯ ಗೆಳಯರು ಸಿಗೋಕೆ ಚಾನ್ಸ್ ಇಲ್ಲ" ಅಂತ ಹೇಳಿದ್ದನ್ನು ಕೇಳುವಷ್ಟು ಕೂಡ ಆಗದಷ್ಟು ಮೌನವಹಿಸುತ್ತಾರೆ..
ಈ ರೀತಿ ಗೆಳೆತನದ ಮಹತ್ವನ್ನು ವರ್ಣಿಸುವ ಹತ್ತಾರು ಸಂಭಾಷಣೆ.. ಹತ್ತಾರು ಹಾಡುಗಳ ವಿನಿಮಯ ಆಗೋದರಲ್ಲಿತ್ತು.. ಕೈಗೆ ಕಟ್ಟಿದ ಗಡಿಯಾರ ಹಿಂದಕ್ಕೆ ಓಡಿತು.. ಆಗ ಸಿಕ್ಕಿದ್ದು.. ಒಂದು ಅದ್ಭುತ ಸನ್ನಿವೇಶ...
ಮೇಯರ್ ಮುತ್ತಣ್ಣ ಸಿನೆಮಾವನ್ನು ಅವರು ಟಿವಿಯಲ್ಲಿ ನೋಡುತ್ತಿದ್ದರೆ.. ನಾನು ಕಾರು ಚಲಾಯಿಸಿಕೊಂಡು ಆಫೀಸಿನಿಂದ ಮನೆಗೆ ಹೋಗುತ್ತಿದ್ದೆ.. ಅವರು ಟಿವಿಯಲ್ಲಿ ಬರುವ ದೃಶ್ಯವನ್ನು ನಾ ಮೊಬೈಲಿನಲ್ಲಿ ಮಾತಾಡುತ್ತಾ ಹೇಳುತಿದ್ದೆ.. ನಮ್ಮ ಸಿನಿಮಾದ ಹುಚ್ಚು ಆ ಮಟ್ಟದಲ್ಲಿತ್ತು..
ಇನ್ನೊಮ್ಮೆ ಅಣ್ಣಾವ್ರ ಪುಣ್ಯಭೂಮಿಗೆ ಹೋದಾಗ ಆದ ಅದ್ಭುತ ಅನುಭವ ತಕ್ಷಣ ಹೇಳಿದಾಗ.. ಇದರ ಬಗ್ಗೆ ಬರೆದುಬಿಡಿ ಎಂದಾಗ.. ತಕ್ಷಣವೇ ಮನೆಗೆ ಹೋದ ಕೂಡಲೇ ಅಕ್ಷರ ರೂಪಕ್ಕೆ ಇಳಿದಿತ್ತು..
ಮನಸ್ಸು ಮಿಕ್ಸಿ ಮೋಟಾರ್ ತರಹ ಆಗಿತ್ತು.. ಕಾರಣ ಒಂದು ಬೇಸರದ ಸಂಗತಿ ನನ್ನ ಆಫೀಸಿನ ಸಹೋದ್ಯೋಗಿ ಮನೆಯಲ್ಲಿ ನೆಡೆದಿತ್ತು.. ಅಂದು "ನೀ ಇರಲು ಜೊತೆಯಲ್ಲಿ" ಗುಣ ನೋಡಿ ಹೆಣ್ಣು ಕೊಡು ಚಿತ್ರದ ಗೀತೆ ಬಹಳ ಮನವನ್ನು ಕಾಡಿತ್ತು.. ಅದರ ಬಗ್ಗೆ ಬರೆದುಬಿಡಿ. ಮನಸ್ಸು ನಿರಾಳವಾಗುತ್ತೆ ಎಂದು ಹೇಳಿದ್ದರು.. ಅದು ನಿಜವೂ ಆಗಿತ್ತು...
ಸಂದೇಶ ಕಳಿಸಿದರೆ.. ಯಾಕೆ ಹುಷಾರಿಲ್ವಾ, ಯಾಕೆ ಬೇಸರ.. ಏನಾಯಿತು.. ಅಂತ ಎಸ್ ಎಂ ಎಸ್, ವಾಟ್ಸಾಪ್ ಸಂದೇಶಗಳಲ್ಲಿ ಬರುವ ಮಾತುಗಳನ್ನು ವಿಶ್ಲೇಷಣೆ ಮಾಡಿ ಆ ಕಡೆಯಲ್ಲಿರುವ ಮನಸ್ಥಿತಿಯನ್ನು ಅರಿಯುವಂಥಹ ಜಾಣ್ಮೆ ಇವರಿಗೆ ದೈವದತ್ತ ಕೊಡುಗೆ..
ಜಟಿಲ ಸಮಸ್ಯೆ ಎಂದು ಕೊಂಡು ಇವರ ಮುಂದಿಟ್ಟರೆ.. ಅದನ್ನು ಒಂದು ಅಣುವಿನ ಗಾತ್ರಕ್ಕೆ ಮಾಡಿ ನಮ್ಮ ಮುಂದೆ ಇಟ್ಟು .. ಇಷ್ಟೇ ಇದರ ಗಾತ್ರ.. ಎಂದು ಹೇಳಿ ಸಮಸ್ಯೆಗೆ ತಕ್ಕ ಪರಿಹಾರ ಕೊಡುವ ಅದ್ಭುತ ಮನಶಾಸ್ತ್ರಜ್ಞೆ..
ಕಾನೂನು ಸ್ನಾತಕೋತ್ತರ ಪದವೀಧರೆಯಾಗಿದ್ದು .. ಪರಿಹಾರ ಕೇಳಿದಾಗ ಅದನ್ನು ಮನಃಪೂರ್ವಕವಾಗಿ ಇನ್ನೊಬ್ಬರ ಮನವನ್ನು ಮುಟ್ಟುವ ಹಾಗೆ ವಿವರಿಸುವುದು ಇವರ ಅದ್ಭುತ ಗುಣಕ್ಕೆ ಸಾಕ್ಷಿ..
ಸಕಲಕಲವಲ್ಲಭೆ ಎಂದು ಸುಮ್ಮನೆ ಹೇಳೋದು ಬೇಡ.. ಮೇಲೆ ಹೇಳಿದ ಇವರ ಬಗ್ಗೆ ಬರೆದ ಬ್ಲಾಗ್ ಲೇಖನಗಳು ಇದಕ್ಕೆ ಸಾಕ್ಷಿ.. ಹಿಂದಿನ ಕಾಲದ ಶೆಟ್ಟರ ಅಂಗಡಿ ಅಥವ ಈಗಿನ ಕಾಲದ ಶಾಪಿಂಗ್ ಮಾಲ್.. ರೀತಿ ಇವರು.. ಇವರು ಪರಿಹರಿಸದ ಸಮಸ್ಯೆಗಳೇ ಇಲ್ಲ.. ಸಿನೆಮಾ ನೋಡುವ ಪರಿ, ಹಾಡಿನ ಒಂದು ಸಾಲನ್ನು ವಿವರಿಸುವ ರೀತಿ..ಸಾತ್ವಿಕ ಕೋಪ.. ಫೋಟೋಗ್ರಫಿ, ಪೈಂಟಿಂಗ್, ಇವರ ಲೇಖನಗಳು, ಬರವಣಿಗೆ.. ಇದಕ್ಕೆಲ್ಲ ಕಳಶವಿಟ್ಟಂತೆ ಈಚೆಗಿನ ವರ್ಷಗಳಲ್ಲಿ ಸಮಾಜವನ್ನು ಬೆಳೆಸುವ, ನಿರ್ಮಿಸುವ ಶಿಕ್ಷಕರಿಗೆ ಇವರು ಕೊಡುವ ಟಿಪ್ಪಣಿ ಸಹಿತ ಮಾರ್ಗದರ್ಶನಗಳು.. ಹಾಗೆಯೆ ಮುಂದಿನ ಸಮಾಜವನ್ನು ಭುಜದಲ್ಲಿ ಎತ್ತಿ ನೆಡೆಸುವ ವಿದ್ಯಾರ್ಥಿ ಪೀಳಿಗೆಗಳಿಗೆ ಮಾರ್ಗದರ್ಶನ.. ಅದ್ಭುತವಾಗಿದೆ..
ಸಮುದ್ರದಲ್ಲಿ ಬರುವ ಅಲೆಗಳು ಒಂದೇ ರೀತಿ ಇರೋದಿಲ್ಲ.. ಹಾಗೆಯೇ ಇವರ ಯೋಚನಾ ಲಹರಿ , ವಿಶ್ಲೇಷಿಸುವ ರೀತಿಯೂ ಹಾಗೆ.. ಇವರಿಗೆ ಪ್ರಶ್ನೆ ಕೊಟ್ಟು ಸುಮ್ಮನೆ ಕೂತರೆ ಆಯಿತು.. ವೈಕುಂಠ ಏಕಾದಶಿಯಲ್ಲಿ ಸಪ್ತ ಬಾಗಿಲುಗಳು ತೆರೆಯುತ್ತಾ ಹೋದಂತೆ.. ಇವರು ಪ್ರಶ್ನೆಗಳ ಒಳಗೆ ಹೋಗಿ.. ಒಂದೊಂದೇ ಪದರವನ್ನು ಬಿಡಿಸುತ್ತಾ.. ನಮ್ಮ ಪ್ರಶ್ನೆಗೆ ಸಮಪರ್ಕವಾದ ಉತ್ತರ ನಮ್ಮಿಂದಲೇ ದೊರಕಿಸಿಕೊಡುತ್ತಾರೆ..
ನನಗೆ ಗೊಂದಲ.. ಪರಿಹರಿಸಲಾಗದ ಕಗ್ಗಂಟನ್ನು ಇವರಿಗೆ ಒಂದು ಸಂದೇಶದಲ್ಲಿ ಕಳಿಸಿ ಸುಮ್ಮನೆ ಕೂತುಬಿಡುತ್ತೇನೆ.. ಉತ್ತರಗಳು ಅಲೆಗಳ ರೂಪದಲ್ಲಿ ಬರುತ್ತಿರುತ್ತದೆ.... ಅದು ಇವರ ವಿಶೇಷ..
ಇಂತಹ ದೇವರು ಕೊಟ್ಟ ಗೆಳತಿ ನನಗೆ ಸಿಕ್ಕಿರುವುದು ಕಂಡು ಅಣ್ಣಾವ್ರ ಅಪೂರ್ವ ಸಂಗಮದ ಸಿನಿಮಾ ಹಾಡು ನೆನಪಿಗೆ ಬಂತು "ಭಾಗ್ಯ ಎನ್ನಲೇ ಪುಣ್ಯ ಎನ್ನಲೇ"
ಜನುಮದಿನದ ಶುಭಾಶಯಗಳು ಸಿಬಿ... ಸದಾ ನಿಮ್ಮ ನಗುವಿನಂತೆ ಬದುಕು ಸುಂದರಮಯವಾಗಿರಲಿ!