Tuesday, December 3, 2019

೩ಕೆ ತಂಡದ ದಶಕದ ಸಂಭ್ರಮ...!

ನಾನು ನನಗೆ ನನ್ನಿಂದಲೇ ಎನ್ನುವ ಜಗದಲ್ಲಿ 
ನಾವು ನಿಮಗೆ ನಿಮ್ಮಿಂದಲೇ ಎನ್ನುವ ತತ್ವ ಹಿಡಿದು
ದಶಕದ ಸಂಭ್ರಮ ಆಚರಿಸುತ್ತಿರುವ 
ಸುಮಧುರ ಮನದ ೩ಕೆ ತಂಡಕ್ಕೆ ಅಭಿನಂದನೆಗಳು. 

ಶಿವಭಕ್ತನಾದ ರಾವಣ ದಶಕಂಠನಾದದ್ದು 
ತನ್ನ ಹತ್ತಾರು ವಿಧದ ಬುದ್ಧಿಮತ್ತೆಯಿಂದ 
೩ಕೆ ತಂಡವು ಹತ್ತಾರು ಸುಂದರಮನಸ್ಸಿನ ತಾಣವಾಗಿ 
ದಶಕದ ಸಂಭ್ರಮದಲ್ಲಿ ಮೀಯುತ್ತಿದೆ.. 

ಶುಭವಾಗಲಿ!!!

ಚಿತ್ರಕೃಪೆ : ೩ಕೆ ತಂಡ 

(೩ಕೆ ಕನ್ನಡ ಕವಿತೆ ಕಥನ ತಂಡವು ಅನೇಕ ವರ್ಷಗಳಿಂದ ಸಮಾಜ ಮುಖಿ ಕೆಲಸ ಮಾಡುತ್ತಲೇ.. ತನಗೆ ಅರಿವಿಲ್ಲದೆ ಒಂದು ಹೆಮ್ಮರವಾಗಿ ಬೆಳೆದಿದೆ.. ಈ ತಂಡದಲ್ಲಿರುವ ಪ್ರತಿಯೊಬ್ಬರೂ ರಾವಣರೇ.. ಅಯ್ಯೋ ಗಾಬರಿಯಾಗಬೇಡಿ.. ರಾವಣ ಅಂದ ಮಾತ್ರಕ್ಕೆ ಸೀತಾಪಹರಣ ಎನ್ನುವ ದೃಶ್ಯಕ್ಕೆ ಹೋಗಬೇಡಿ.. ರುದ್ರವೀಣೆ, ಕೈಲಾಸವನ್ನೇ ಭುಜದ ಮೇಲೆ ಹೊತ್ತಿದ್ದು,  ಶಿವನನ್ನು ಒಲಿಸಿ ಆತ್ಮ ಲಿಂಗ.ವನ್ನು ಹೊತ್ತು ತಂದದ್ದು, ಗಣಪನ ಕಾರ್ಯ ಸಾಧನೆಯ ಫಲದಿಂದ ಭೂಸ್ಪರ್ಶವಾದ ಆತ್ಮಲಿಂಗವನ್ನು ಕಿತ್ತು ಐದು ಪುಣ್ಯ ಕ್ಷೇತ್ರಗಳಾಗಿದ್ದು ..  ಶ್ರೀ ರಾಮನಿಂದ ಸೋಲುವೆ ಎಂಬ ವಿಷಯ ಗೊತ್ತಿದ್ದರೂ.. ರಣವೀಳ್ಯ ಸ್ವೀಕಾರ ಮಾಡಿ.. ಶ್ರೀ ರಾಮನಿಗೆ ಕಂಕಣ ಕಟ್ಟುವ ಪರಾಕ್ರಮಿ.. ತನ್ನ ಅದ್ಭುತ ಜ್ಞಾನ ಸಂಪತ್ತಿನಿಂದ ದಶಕಂಠನಾದ ರಾವಣನ ಹಾಗೆ ಇಲ್ಲಿ ಹತ್ತಾರು ಅದ್ಭುತ ಮನಸ್ಸುಗಳು ಸಾಧಿಸುತ್ತಿರುವ ಯಶಸ್ಸು ಸದಾ ಇರಲಿ ಎಂದು ಹಾರೈಸುತ್ತ..ಈ ತಂಡದ ಸಮಾಜ ಮುಖಿ ಸೇವೆಗೆ ಅಭಿನಂದನೆಗಳು ಸಲ್ಲಿಸುತ್ತಾ.. ದಶಮಾನೋತ್ಸವ ಬೆಳ್ಳಿ ಸಂಭ್ರಮ ಕಾಣಲಿ ಎಂದು ಆಶಿಸುತ್ತಾ ಈ ಪುಟ್ಟ ಲೇಖನವನ್ನು ತಂಡದ ಮಡಿಲಿಗೆ ಹಾಕುತ್ತಿದ್ದೇನೆ.. )

ಚಿತ್ರಕೃಪೆ : ೩ಕೆ ತಂಡ 

ಸ್ಪರ್ಧೆ ಎಂದು ಪುಟ್ಟ ಚಿತ್ರ ಮೊಬೈಲಿಗೆ ಬಂದಾಗ.. ಆಯ್ಕೆ ಮಾಡಿಕೊಂಡದ್ದು ಸಣ್ಣ ಹಗ್ಗ ಕುತ್ತಿಗೆಗೆ ಕಟ್ಟಿಸಿಕೊಂಡಿದ್ದ ಒಂದು ಮಂಗಾ... ಮಾನವರ ಗುಂಪಿನಲ್ಲಿ ವಿಚಿತ್ರ ಭಂಗಿಯಲ್ಲಿ ನೋಡುತ್ತಾ ಕೂತಿದ್ದು.ಮನಸೆಳೆದಿತ್ತು.. 

ನನ್ನ ಅದ್ಭುತ ಗೆಳತೀ ನಿವೇದಿತಾ ಚಿರಂತನ್ ಅವರನ್ನು ಯಾವ ಚಿತ್ರಕ್ಕೆ ಬರೆಯಲಿ.. ಏನು ಬರೆಯಲಿ ಎಂದಾಗ.. ಅವರಿಗೆ ನಾ ಕೊಟ್ಟ ಆಯ್ಕೆ.. ಥ್ರಿಲ್ಲರ್, ಸಸ್ಪೆನ್ಸ್, ಲವ್ ಸ್ಟೋರಿ, ಹಾರರ್, ಸ್ಪಿರಿಚುಯಲ್, ಜನರಲ್ ಟಾಕ್.. ಅವರು ಸೂಚಿಸಿದ್ದು ಥ್ರಿಲ್ಲರ್ / ಸ್ಪಿರಿಚುಯಲ್... 

ಸರಿ ಮನಸ್ಸಿಗೆ ಬಂದದ್ದನ್ನು ಹಾಗೆ ಬರೆದು ಮುಗಿಸಿದೆ.. ಅದರ ಫಲವೇ ಈ ಲೇಖನದಲ್ಲಿ ನೀಲಿ ಅಕ್ಷಗಳಲ್ಲಿ ಕಾಣ ಸಿಗುವ ಅಕ್ಷರಗಳ ಮಾಲಿಕೆ.. ೩ಕೆ ಕಥಾ ಸ್ಪರ್ಧೆಗೆ ಬರೆದ ಐನೂರು ಪದಗಳಿಗೆ ಮೀರದ ಒಂದು ಪುಟ್ಟ ಕಥೆ.. ಅದನ್ನು ತುಸು ಹಿಗ್ಗಿಸಿ ೩ಕೆ ಸಮಾರಂಭವು ನನ್ನ ಕಣ್ಣಿಗೆ ಕಾಣಿಸಿದಂತೆ ಪದಗಲ್ಲಿ ಕಟ್ಟಿಕೊಡಲು ಪ್ರಯತ್ನ ಪಟ್ಟಿದ್ದೇನೆ.. ಇದು ಇಷ್ಟವಾದರೆ ಆ ಗೆಲುವು ನಿಮ್ದೇ.. ಇಷ್ಟವಾಗದಿದ್ದರೆ.. ಆ ಭಗವಂತ ಹೇಳಿದ ಕತೆಯನ್ನುಸರಿಯಾಗಿ ಕೇಳಿಸಿಕೊಳ್ಳದೆ ಬರೆದ ತಪ್ಪು ನನ್ನದು.. 

ಓದಿ ಸಂಭ್ರಮಿಸಿ.. ವಿರಮಿಸಿ.. 

*****
ಅಂದು ಹೋಳಿ.. ಎಲ್ಲರ ಮೈ ಮನಸ್ಸು ರಂಗು ರಂಗಾಗಿತ್ತು.... 

ಜೀಪಿಗೆ ಒರಗಿ ನಿಂತಿದ್ದ ಶ್ರೀಕಾಂತ್ ಯೋಚಿಸಿ ಯೋಚಿಸಿ ತಲೆಕೆಟ್ಟು.. ಕಿಂಗ್ ಸಿಗರೇಟ್ ಹಚ್ಚಿದ್ದ.. ಆ ಬಣ್ಣಗಳ ಹೊಗೆಯ ಜೊತೆ.. ಸಿಗರೇಟ್ ಹೊಗೆ ಕೂಡ ರಂಗಾಗಿದೆಯೋ ಅನ್ನುವಷ್ಟು ರಂಗಾಗಿತ್ತು 
ವಾತಾವರಣ.. 

ಎರಡು ದಿನಗಳ ಹಿಂದೆಯಷ್ಟೇ ನೆಡೆದಿದ್ದ ಒಂದು ಕೊಲೆಯ ತನಿಖೆಗೆ ರೆಂಬೆ ಕೊಂಬೆಗಳು ಕಾಣದೆ ನಿಂತಲ್ಲಿಯೇ ಗಟ್ಟಿಯಾಗಿ ನಿಂತಿತ್ತು.. ದೇವಸ್ಥಾನದ ಮೆಟ್ಟಿಲುಗಳನ್ನು ಹತ್ತಿಳಿಯುತಿದ್ದ ಗುಂಪನ್ನೇ ನೋಡುತ್ತಾ ನಿಂತಿದ್ದ.. 

ಬಣ್ಣ ಬಣ್ಣಗಳ ಸವಾರಿ ಮಾಡಿಕೊಂಡು ನೂರಾರು ಹುಡುಗ ಹುಡುಗಿಯರು ಓಡಾಡುತ್ತಿದ್ದರು.. 
ಜೀನ್ಸ್, ಹರಿದ ಜೀನ್ಸ್, ಚಿಕ್ಕ ಚಣ್ಣ.. ಮೊಳಕಾಲುದ್ದದ ಪ್ಯಾಂಟ್.. ಹೀಗೆ ಹತ್ತಾರು ಬಗೆ ಬಗೆಯ ದಿರಸುಕಾಣುತಿತ್ತು. 

ಕೊಲೆಯ ರಿಪೋರ್ಟ್ ತರಲು ಅವನ ಆಪ್ತ ಪೇದೆ.. ಶಂಕರ ಹೋಗಿದ್ದ..  ರಿಪೋರ್ಟ್ ಮಧ್ಯ 
ದಾರಿಯಲ್ಲಿ ತೆಗೆದುಕೊಳ್ಳಲು.. ಶಂಕರನ ಊರಿನ ದಾರಿಯಲ್ಲಿ ದುರ್ಗಿಗುಡಿಯ ಹತ್ತಿರ ಕಾಯುತ್ತಿದ್ದ .. ಶಂಕರ ರಜದ ಮೇಲೆ ಊರಿಗೆ ಹೋಗಲು ಅನುಮತಿ ಪಡೆದಿದ್ದರಿಂದ..ಅವ ಊರಿಗೆ  ಹೋಗುವ ದಾರಿಯಲ್ಲಿಯೇ ಬಸ್ಸಿನಲ್ಲಿ ಶಂಕರನ ಆಗಮನದ ನಿರೀಕ್ಷೆಯಲ್ಲಿ  ಕಾಯುತ್ತಿದ್ದ.. ಆಗಲೇ ನಾಲ್ಕು ಸಿಗರೇಟ್ ಖಾಲಿಯಾಗಿದ್ದವು, ತಲೆಗೂದಲು ಹುಲ್ಲಗಾವಲಾಗಿತ್ತು.. 

ಸುಮ್ಮನೆ ದೇವಸ್ಥಾನದ ಮೆಟ್ಟಿಲು ನೋಡುತ್ತಿದ್ದವನಿಗೆ., ಕುತ್ತಿಗೆಗೆ ಬೆಲ್ಟ್ ಕಟ್ಟಿಕೊಂಡಿದ್ದ ಕೋತಿ ಕಾಣಿಸಿತು. ಈ ಹುಡುಗ ಹುಡುಗಿಯರ ಬಣ್ಣದ ಓಕುಳಿಯಾಟದಲ್ಲಿ,ಕೋತಿಯ ಮೊಗವೂ ರಂಗಾಗಿತ್ತು. ಸುಮ್ಮನೆ ಕೂತು ಎಲ್ಲರನ್ನೂ ಗಮನಿಸುತ್ತಿತ್ತು. ಅಚಾನಕ್ ದೃಷ್ಟಿ ಹೊರಳಿಸಿ  ಬಳಿಯೇ ಬಿದ್ದಿದ್ದ ಒಂದು ಕಾಗದದ ಪೊಟ್ಟಣವನ್ನು ನೋಡಿ .. ಅದನ್ನು ಬಿಡಿಸಲು ಹರಸಾಹಸ ಮಾಡಲು ಶುರುಮಾಡಿತು .. ಏನೋ ಕೆಟ್ಟ ಕುತೂಹಲ ಅದಕ್ಕೆ.. 

ಯಾಕೋ ಅತ್ತ ಕಡೆ ಗಮನ ಹರಿಸಿದ ಶ್ರೀಕಾಂತನಿಗೆ ಏನೋ ಹೊಳೆಯಿತು.. ಅದನ್ನೇ ದಿಟ್ಟೆಸುತ್ತ ಇನ್ನೊಂದು ಸಿಗರೇಟ್ ಹಚ್ಚಿದ.. 

ಕೋತಿಗೆ ಆ ಪೊಟ್ಟಣ ಏನೋ ವಿಶೇಷ ಅನಿಸಿತು . ಬಿಡಿಸುತ್ತ ಹೋದಾಗ,  ಅದರ ಕೈಗೆ ರಂಗು ಹತ್ತಿತು.. ಶ್ರೀಕಾಂತನ ತಲೆಯಲ್ಲಿ ಸಾವಿರ ವಾಟ್ಸ್ ದೀಪ ಹತ್ತಿಕೊಂಡಿತು. ಓಡಿ ಹೋಗಿ, ಕೋತಿಯ ಬಳಿಯಿಂದ ಆ ಪೊಟ್ಟಣ ಕೈಗೆ ತೆಗೆದುಕೊಂಡ.. 

ಕಣ್ಣುಗಳು ಅರಳಿತು. ಗೆದ್ದೇ ಎಂದು ತುಸು ಜೋರಾಗಿಯೇ ಕೂಗಿದ.. ಅಷ್ಟು ಹೊತ್ತಿಗೆ.. ಶಂಕರ ರಿಪೋರ್ಟ್ ತಂದಿದ್ದ ಬಸ್ಸು ಜೋರಾಗಿ ಹಾರ್ನ್ ಮಾಡುತ್ತಾ ಬಂತು.. 

"ಸಾಹೇಬ್ರೆ ಶಂಕರಪ್ಪ ಅವರು, ನಿಮ್ಮನ್ನು ಕಾಣೋಕೆ ಬರ್ತಾ ಇದ್ದಾರೆ..ತುಸು ಬೇಗ ಮಾಡಿ  ಹೊತ್ತಾಗುತ್ತೆ" ಎಂದ ಡ್ರೈವರ್ ಮಾಮ.  

"ಸರಿ ಕಣಣ್ಣ" ಎನ್ನುತ್ತಾ ಓಡಿ ಬಂದು ಆ ರಿಪೋರ್ಟ್ ತೆಗೆದುಕೊಂಡ..ಅನುಮಾನ ಪಟ್ಟಿದ್ದು ಸರಿ ಇದೆ ಎನಿಸಿತು.  ಶಂಕರನಿಗೆ "ಯಾಕೆ ಶಂಕ್ರಪ್ಪ.. ಎರಡು ಘಂಟೆ ತಡವಾಯಿತೇಕೆ.. ನಿಮ್ಮನ್ನು ಕಾಯ್ತಾ ಕಾಯ್ತಾ .. ನೋಡಿ ಒಂದು ಫುಲ್ ಪ್ಯಾಕ್ ಮಟಾಷ್.. "

"ಸಾಹೇಬ್ರೆ ಏನು ಹೇಳಲಿ.. ನಿಮ್ಮಿಂದ ಲೆಟರ್ ತಗಂಡು.. ಬಸ್ ಸ್ಥಾಪಿನಾಗೆ ನಿಂತಿದ್ದೆ.. ಒಂದು ೩ಕೆ .. ಕನ್ನಡ ಕಥನ ಕವನ ಎಂದು ಬೊಲ್ದು ಹಾಕ್ಕಂಡು.. ದಶಮಾನೋತ್ಸವದ ಸಂಭ್ರಮ ಅಂತ ಮೈಕಿನಲ್ಲಿ ಕೂಗುತ್ತಾ ಮಹೇಶ್ ಮೂರ್ತಿಗಳು ಹೋಗುತ್ತಿದ್ದರು.. ಬಸ್ಸಿನಲ್ಲಿ ಉಷಾ ಉಮೇಶ್ ಪ್ರಾರ್ಥನೆ .ಹಾಡುತ್ತಿದ್ದರು.. ನಂತರ ಸ್ವಲ್ಪ ಹೊತ್ತಿನಲ್ಲಿಯೇ.. ಎಲ್ಲರೂ ಬಸ್ಸಿಂದ ಇಳಿದು.. ಅಲ್ಲಿಯೇ ದೇವಸ್ಥಾನದ ಬಳಿ ಬಂದು.. ಮಂಜುನಾಥರು.. ಧರ್ಮೇಂದ್ರ ಸಾರು.. ನಾಯ್ಡುಗಳು, ರೂಪ ಮೇಡಂ.. ಮತ್ತು ದಿವಾಕರ್ ಸಾಹೇಬ್ರು.. ಎಲ್ಲರೂ ದೇವರಿಗೆ ನಮಸ್ಕರಿಸಿ.. ನಮ್ಮ ನಾಡ  ಗೀತೆನಾ ಹಾಡಿಯೇ ಬಿಡೊದ.. ಗೌರವ ಕೊಡ್ಬೇಕಲ್ಲ ಸಾರು.. ಅಂಗಾಗಿ ಅಂಗೇ ನಿಂತು.. ನಾನು ಒಸಿ ಹಾಡಿಯೇ ಬಿಟ್ಟೆ.. 
ಆಮ್ಯಾಕೆ ಕನ್ನಡಾಂಬೆ ಮೂರ್ತಿಯ ಮುಂದೆ ದೀಪ ಬೆಳಗಿದರು.. .. ಬಸ್ಸಿನ ಜೊತೆ ಬಂದಿದ್ದ ಎಲ್ಲರೂ ಜೋರಾಗಿ ಚಪ್ಪಾಳೆ ತಟ್ಟಿದ್ದೆ ತಟ್ಟಿದ್ದು..  

ಯಾರೀ ದಾಸ ಸಾಹಿತ್ಯದ ಊರಿಗೆ ಬರ್ತೀರಾ.. ಅಂಗೇ ಓಡಾಡಿಕಂಡು ಬರುಮ.. ಒಂದು ಐದು ನೂರು ವರ್ಸಾ ಇಂದಕ್ಕೆ ಒಗ್ಬಹುದು.. ಮತ್ತೆ ಇಲ್ಲಿಗೆ ತಂದು ಬಿಡ್ತೀವಿ ಅಂತ.. ಮಹೇಶ್ ಮೂರ್ತಿಗಳು ಹೇಳಿದಾಗ.. ಅಯ್ಯೋ ಈ ಕೊಲೆ, ಕಳ್ತನ.. ಆ ಕೇಸು ಈ ಕೇಸು ಅಂತ ಓಡಾಡಿ ಸಾಕಾಗಿತ್ತು.. ಸುಮ್ನೆ ಅಂಗೇ ಬಸ್ಸು ಹತ್ತಿಯೇ ಬಿಟ್ಟೆ.. 

ಚಿತ್ರಕೃಪೆ : ೩ಕೆ ತಂಡ 

ಮಂಜುನಾಥ ಮೇಷ್ಟ್ರು ... ಏನ್ ಮಾತಾಡ್ತಾರಪ್ಪ.. ಅವರ ಬಾಸೇ.. ಅದ್ನ ಏಳೋ ವಿಧಾನ... ಎಂಥವ್ರಿಗೂ ಅರ್ಥ ಆಗೇ ಬಿಡ್ಬೇಕು.. ಆ ಪಾಟಿ ಸರಳ.. ನಗು ನಗುತ್ತಲೇ ಮಾತಾಡುವ ಅವರ ಸೈಲಿ ಬಾಳ ಇಷ್ಟ ಆಯ್ತು ಸಾರು.. ಪುರಂದರ ದಾಸ್ರು, ಕನಕ ದಾಸ್ರು, ಹರಿದಾಸರು, ಜಗನ್ನಾಥ ದಾಸರು.. ವ್ಯಾಸ ತೀರ್ಥರು.. ಅವ್ರು ಇವರು ಅಂತ ಐನೂರು ವರ್ಷದ ಇಂದಕ್ಕೆ ಕರ್ಕೊಂಡು ಓಗಿಯೇ ಬಿಟ್ರು.. ಅವರ ಮಾತಿನ ವೈಖರಿಗೆ ಅಲ್ಲಿಯೇ ಇದ್ದು ಬಿಡುಮ ಅನ್ನಿಸ್ತು.. ಆದರೇನು ಮಾಡೋದು.. ಈ ರೆಪೋಲ್ಟ್ ನಂತಾವ ಇತ್ತು ಅಲ್ಲುವ್ರ ಅಂಗಾಗಿ ಒಸಿ ಕಷ್ಟ ಪಟ್ಟೆ ಒರಕ್ಕೆ ಬಂದೆ ಬಿಟ್ಟೆ.. ಸುಮಾರು ಹೊತ್ತು ಅವರ ಮಾತುಗಳು ಅಂಗೂ ಕೇಳಿಸ್ತಾನೆ ಇತ್ತು.. ಎಲ್ಲರೂ ಜೋರಾಗಿ ಚಪ್ಪಾಳೆ ತಟ್ಟಿದಾಗ ನಾನೂ ಅಂಗೇ ಚಪ್ಪಾಳೆ ತಟ್ಟಿಯೇ ಬಿಟ್ಟೆ.. 

ಮಹೇಶ್ ಮೂರ್ತಿಗಳು ಮತ್ತೆ ಬಂದು.. "ನೋಡ್ರಪ್ಪಾ ಐನೂರು ವರ್ಸಾ ಇಂದಕ್ಕೆ ಹೋಗಿದ್ವಲ್ಲ.. ಈಗ ತುಸು ನೂರು ವರ್ಷ ಇಂದಕ್ಕೆ ಹೋಗುಮಾ.. ಎಲ್ಲರೂ ಸಿದ್ವಾ.. ?

ಚಿತ್ರಕೃಪೆ : ೩ಕೆ ತಂಡ 

ಓ ಅಂತ ಎಲ್ಲರೂ ಕೂಗಿದ್ವಿ.. . ಅದರಲ್ಲಿ ನನ್ನ ಧ್ವನಿಯೇ ತುಸು ಜೋರಾಗಿಯೇ ಇತ್ತು.. ದಿವಾಕರ್ ಸರ್.. ತಮ್ಮ ಸಣ್ಣ ಕತೆಗಳ ಬಗ್ಗೆ ಒಂದು ಪುಟ್ಟ ಮಾತುಗಳನ್ನು ಬಿಚ್ಚಿಡುತ್ತಾ.. ಅವರ ಅನುಭವಗಳನ್ನು, ಓದಿನ ಹಸಿವನ್ನು ತಣಿಸುವ ಅನೇಕ ಪುಸ್ತಕಗಳ ಬಗ್ಗೆ, ಲೇಖಕರ ಬಗ್ಗೆ, ಸಣ್ಣ ಕತೆಗಳು ಉಗಮವಾದ ಬಗೆ.. ಕರುನಾಡಿನಲ್ಲಿ ಏನೇ ಹೊಸದು ಮಾಡಿದರೂ .. ಅದಕ್ಕೊಂದು ಆಯಾಮ ಇದ್ದೆ ಇರುತ್ತೆ.. ಹತ್ತೊಂಬತ್ತನೆಯ ಶತಮಾನದ ಆರಂಭದಲ್ಲಿ ಜನನವಾದ ಈ ಕಾದಂಬರಿ ಪರ್ವ.. ಸಣ್ಣ ಕತೆಗಳು ಆವರಿಸಿಕೊಂಡದ್ದು.. ಹೀಗೆ ನಿರರ್ಗಳವಾಗಿ ಮಾತಾಡಿದ ದಿವಾಕರ್ ಸರ್.. ಸಣ್ಣ ಕತೆಗಳ ಅದ್ಭುತಗಳ ಜೊತೆಗೆ ನಮ್ಮನ್ನು ಕರೆದೊಯ್ದಿದ್ದರು.. ಆಂಗ್ಲ ಸಾಯಿತ್ಯ.. ಅಲ್ಲಿನ ಲೇಖಕರ ಬಗ್ಗೆ ಒಸಿ ಮಾತು.. ಇಲ್ಲಿನ ಲೇಖಕರ ಬಗೆ ಮಾತು ಇಂಗೆ ಆ ಸಾರು ಮಾತಾಡಿದ ರೀತಿಗೆ ನಾನು ಬಂದ ಇಸ್ಯಾನೆ ಮರ್ತು ಬಿಟ್ಟಿದ್ದೆ.. ಆಗ ನನ್ನ ಕಾರ್ಯ ನೆನೆಪಿಸಿದ್ದು.. ನೂತನ್ ಸಾಹೇಬ್ರು.. ಅವತ್ತು ಏನೋ ಸ್ಪರ್ಧೆ ಆಂತ ಮಾಡಿದ್ರಂತೆ.. ಸಣ್ಣ ಕತೆಗೆಳು ಅಂತ.. ಸ್ಪರ್ಧೆ ಮಾಡಿ.. ನಾಲ್ಕು ಮಂದಿಗೆ ಬಹುಮಾನ ಕೊಡುವ ಕಾರ್ಯಕ್ರಮ ಅಂತ ಯೋಳಿದ್ದೇ... ಅವರು ಬರೆದ ಕತೆಗಳ ಬಗ್ಗೆ ತುಸು ಮಾತಾಡಿ.. ಅವರಿಗೆ ಪ್ರಶಸ್ತಿ  ಕೊಟ್ಟು ಗೌರವಿಸಿದರು ಸಾರು.. 

ಅರುಣ್ ಶೃಂಗೇರಿ ಈ ಕಾರ್ಯಕ್ರಮದ ಪ್ರಶಸ್ತಿಗೆ ಪಾತ್ರರಾದ ಧರ್ಮೇಂದ್ರ ಸಾರ್ ಅವರ ಕಿರುಪರಿಚಯ, ಅವರ ಸಾಧನೆ  ಇದರ ಬಗ್ಗೆ ಫಲಕದಲ್ಲಿದ್ದುದ್ದನ್ನು ಓದಿದರೆ.. ಈ ೩ಕೆ ತಂಡದ ಮತ್ತಿತರರು ಸೇರಿ.. ಧರ್ಮೇಂದ್ರ ಅವರಿಗೆ ಪೇಟ ತೊಡಿಸಿ, ಶಾಲು ಹೊದ್ದಿಸಿ, ಹಾರ ಹಾಕಿ.. ಫಲಕ ಕೊಟ್ಟು.. ಸನ್ಮಾನಿಸಿದರು.. 

ಚಿತ್ರಕೃಪೆ : ೩ಕೆ ತಂಡ 
ಧರ್ಮೇಂದ್ರ ಸರ್ ಅವರು ಮೈಸೂರಿನ ಇತಿಹಾಸ ಹೇಳುತ್ತಲೇ.. ತಾವು ನಿಂತಿದ್ದ ಜಾಗದ ಬಗ್ಗೆಯೂ ಒಸಿ ಮಾಹಿತಿ ಕೊಟ್ರು.. ನನಗೆ ಆಶ್ಚರ್ಯ.. ನಾವು ಯಾಪಾಟಿ ಕೇಸುಗಳ ಬಗ್ಗೆ ಬರ್ದು ಬಿಸಾಕಿರ್ತೀವಿ.. ಆದರೆ ಈ ರೀತಿಯ ಮಾಹಿತಿ ಕಣಜವನ್ನು ನಾನೊಂತು ಓದಿರಲಿಲ್ಲ.. ಅಂಗೇ ಅವರ ಜೊತೆ ಇತಿಹಾಸದೊಳಗೆ ಓಡಾಡಿ ಬಂದೆ ಅನ್ನಿಸ್ತು. ಮಾತಾಡಿದ್ದು ಚೂರೇ ಆದರೂ ಬ್ರಹ್ಮಾಂಡವನ್ನೇ ತನ್ನ ಬಾಯಲ್ಲಿ ತೋರಿಸಿದ ಕೃಷ್ಣನ ಹಾಗೆ.. ಚುಟುಕು ಹೊತ್ತಿನಲ್ಲಿಯೇ ಇತಿಹಾಸದ ಬ್ರಹ್ಮಾಂಡವನ್ನೇ ನಮ್ಮ ಮುಂದೆ ತೆರೆದಿಟ್ಟರು.. 

ಕಡೆಯಲ್ಲಿ ಎಲ್ಲರೂ ಒಂದಷ್ಟು ಫೋಟೋ ತೆಗಿಸಿಕೊಂಡರು.. ಸುಮಧುರ ತಂಡದ ಫೋಟೋಗಳು ಆಯ್ತು.. ಪುಷ್ಕಳವಾಗಿ ಪೊಂಗಲ್, ಆಂಬೊಡೆ.. ಸಿಹಿ.. ಚಟ್ನಿ .. ಕಾಫೀ, ಟೀ.. ಎಲ್ಲವೂ ಹೊಟ್ಟೆಯೊಳಗೆ ಗುಳುಂ ಸ್ವಾಹಾ ಆಯ್ತು.. ಹೊಟ್ಟೆ ಭಾರವಾಗಿತ್ತು.. ಅಂಗೇ.. ಆ ಬಸ್ಸಿನಿಂದ ಇಳಿದು ಇನ್ನೊಂದು ಬಸ್ಸಿನೊಳಗೆ ಬಂದು ಕೂತೆ.. ಡ್ರೈವರ್ ಮಾಮನಿಗೆ .. ನನ್ನ ಸ್ಟಾಪ್ ಬಂದಾಗ ಒಸಿ ಹೇಳಪ್ಪ ಅಂದಾಗ.. "ಶಂಕರಪ್ಪ ನೀವು ಆರಾಮಾಗಿ ಮಲಗಿ.. ನಾ ಎಬ್ಬಿಸುತ್ತೇನೆ" ಅಂತ ಸಿಗರೇಟ್ ಹಚ್ಚಿಕೊಂಡು ಬಸ್ಸಿನಿಂದ ಇಳಿದು ಹೋಗಿದ್ದ.. ನನಗೆ ಅಂಗೇ ನಿದ್ದೆ.. 

"ಶಂಕರಪ್ಪ.. ನಿಮ್ಮ ಸಾಹೇಬ್ರು ಕಾಯ್ತಾ ಅವ್ರೆ.. ಬೇಗ ಇಳೀರಿ.. ಬೇಗ ಹೋಗಬೇಕು.. ನಿಮ್ಮೋರು ತಲುಪಬೇಕೋ ಇಲ್ವೋ.. ಶಂಕರಪ್ಪ.. ಶಂಕರಪ್ಪ.. ಈ ಆಸಾಮಿ ನಿದ್ದೆಗೊಮ್ಮೆ ನಿತ್ಯ ಮರಣ ಎನ್ನುವ ಬೇಂದ್ರೆ ಅಜ್ಜನ ಕವಿತೆ ತರಹ.. ಒಳ್ಳೆ ಆಸಾಮಿ ಎಂದು ಲಘು ನಗೆಯಿಂದ ಮತ್ತ್ತೆ ನಗುತ್ತಾ ಜೋರಾಗಿ ಶಂಕರಪ್ಪನನ್ನು ಅಲ್ಲಾಡಿಸಿದಾಗ.. ಆ ಬಸ್ಸಿನಲ್ಲಿ "ಜೀವನ ಟಾನಿಕ್ ಬಾಟ್ಲಿ ಕುಡಿಯೋ ಮುಂಚೆ ಅಲ್ಲಾಡ್ಸು" ಹಾಡು ಜೋರಾಗಿ ಬರ್ತಿತ್ತು.. 

ಕಣ್ಣುಜ್ಜಿಕೊಂಡು.. ಶೇಖರಪ್ಪ ಬರ್ತಾ ಇದ್ದದ್ದನ್ನು ನೋಡಿಯೂ ನೋಡದಂತಿದ್ದ ಸಾಹೇಬ್ರನ್ನು ಕಂಡು.. ಛೆ ನಿದ್ದೆ ಮಾಡಬಾರದಿತ್ತು ಎನ್ನುತ್ತಲೇ  ಸಾಹೇಬ್ರ ಹತ್ತಿರ ನಿಂತು ಪೂರ್ಣ ಕತೆಯನ್ನು ಹೇಳಿ.. ಶಂಕರಪ್ಪ ಲಗುಬಗೆಯಿಂದ ಹಾರನ್ ಜೊತೆಗೆ ಜೋರಾಗಿಯೇ ಮಾತಾಡುತ್ತಾ ಬಸ್ಸಿನೊಳಗೆ ಹೋದ.. 

ಶಂಕರಪ್ಪನಿಗೆ ಊರಿಗೆ ಹೋಗಲು ಅನುಮತಿ ನೀಡಿ, ಜೀಪು ತೆಗೆದುಕೊಂಡು ಸೀದಾ ಅದೇ ಊರಿನಲ್ಲಿದ್ದ ಪುಂಡು ಪೋಕರಿಯಾಗಿದ್ದ ತಿಮ್ಮನ ಮನೆಯ ಮುಂದೆ ಜೀಪು ನಿಲ್ಲಿಸಿದ.. 

ಜೀಪು ಕಂಡೊಡನೆ ಜಗಲಿಯ ಮೇಲೆ ಕೂತು.. ಗೆಳೆಯರೊಡನೆ ಇಸ್ಪೀಟು ಆಡುತ್ತಿದ್ದ ತಿಮ್ಮ.. ಮೆಲ್ಲನೆ ಬೆವರಲು ಶುರು ಮಾಡಿದ.. ಆದರೂ ತೋರಿಸಿಕೊಳ್ಳದೆ ಸುಮ್ಮನೆ ಆಡುತ್ತಾ ಕೂತ.. 

ಶ್ರೀಕಾಂತ  ತನ್ನ ಲಾಠಿಯನ್ನು ಜಗುಲಿಗೆ ಕುಟ್ಟಿ.. "ಲೋ ತಿಮ್ಮ ನೀನೆ ಬರ್ತೀಯೋ.. ಇಲ್ಲಾ ಏರೋಪ್ಲೇನ್ ಹತ್ತಿಸಬೇಕಾ"

ಕೈಮೀರಿದೆ ಎಂದು ಗೊತ್ತಾದ ತಿಮ್ಮ, ಇನ್ನು ಕೊಸರಾಡಿದರೆ ಬಯಲಲ್ಲಿ ಬೆತ್ತಲಾದಂತೆ ಮನದೊಳಗೆ ಅಂದುಕೊಂಡು  ಏನೂ ಆಗೇ ಇಲ್ಲ ಎನ್ನುವಂತೆ.. ತಲೆಗೂದಲ ಕ್ರಾಪ್ ಸರಿಮಾಡಿಕೊಂಡು.. ದೇಶಾವರಿ ನಗೆ ನಗುತ್ತಾ.. "ನಡೀರಿ ಇನ್ಸ್ಪೆಕ್ಟರ್ " ಎನ್ನುತ್ತಾ ಅವನ ಜೀಪು ಹತ್ತಿ ಮೆಲ್ಲಗೆ ಶ್ರೀಕಾಂತನ ಕಿವಿಯಲ್ಲಿ "ಸರ್ ಬೇಡಿ ಹಾಕೋದು ಎಲ್ಲಾ ಬೇಡ.. ನೀವು ಹೇಳಿದಂತೆ ಕೇಳುತ್ತೇನೆ”

ಠಾಣೆಯಲ್ಲಿ ಒಂದು ಮೂಲೆಯಲ್ಲಿ ನಿಂತ ತಿಮ್ಮ, ಶ್ರೀಕಾಂತನ ದನಿಗೆ ತಿರುಗಿದ  "ಅಲ್ಲ ಲೇ.. ಅವನನ್ನು ಕೊಲೆ ಮಾಡುವಂತದ್ದು ಏನಾಗಿತ್ತೋ.. "

"ಸರ್ ಕಾರಣ ಇರಲಿ, ಹೇಳುತ್ತೇನೆ, ಮೊದಲು ಹೇಳಿ, ನಾನೇ ಅಂತ ಹೇಗೆ ಗೊತ್ತಾಯ್ತು?"

"ನೋಡು ತಿಮ್ಮ. ಪ್ರಪಂಚದಲ್ಲಿ ಸುಳಿವು ಇಲ್ಲದೆ ಅಪರಾಧ ಮಾಡಲು ಸಾಧ್ಯವೇ ಇಲ್ಲ.. ದೇವಸ್ಥಾನದ ಹತ್ತಿರ ಕೋತಿಯ ಕೈಗೆ ಸಿಕ್ಕಿದ ಪೊಟ್ಟಣದಲ್ಲಿ ನಿನ್ನ ಇಷ್ಟವಾದ ನೀಲಿ ಬಣ್ಣದ ಪುಡಿಯಿತ್ತು.. ಆ ಕಾಗದ ಇನ್ಯಾವುದು ಅಲ್ಲ.. ನಿಮ್ಮ ಮನೆಯಲ್ಲಿ ಮೂರು ತಿಂಗಳ ಹಿಂದೆ ನೀನೆ ಆಯೋಜಿಸಿದ್ದ ಅಭಿನಂದನಾ ಕಾರ್ಯಕ್ರಮದ ತಿದ್ದುಪಡಿ ಆಗದೆ ಇದ್ದ ಪಾಂಪ್ಲೆಟ್ ಅದು.. ನಿನಗೆ ಗೊತ್ತಿದೆ.. ನಿನ್ನ ಅಪ್ಪನ ಹೆಸರು ತಪ್ಪಾಗಿ ಪ್ರಿಂಟ್ ಆಗಿದೆ ಎಂದು.. ಆ ಪ್ರಿಂಟಿಂಗ್ ಪ್ರೆಸ್ ಮಾಲೀಕನಿಗೆ ಅವನ ಪ್ರೆಸ್ಸಿನಲ್ಲಿದ್ದ ಅಚ್ಚಿನಿಂದ ಹೊಡೆದು ಬಂದಿದ್ದೆ.. ಮತ್ತು ಆ ಪಾಂಪ್ಲೆಟ್ ಹೊರಗೆ ಬರಬಾರದು ಎಂದು ಅವಷ್ಟನ್ನು ನೀನೆ ಪ್ರೆಸ್ಸಿಗೆ ಹೋಗಿ ಹೊತ್ತುಕೊಂಡು ಮನೆಗೆ ತಂದಿದ್ದೆ. ಆ ಪಾಂಪ್ಲೆಟ್ ದೇವಸ್ಥಾನದ ಮೆಟ್ಟಿಲ ಮೇಲೆ ಸಿಕ್ಕಿದಾಗ ಇದರಲ್ಲಿ ನಿನ್ನ ಕೈವಾಡ ಇರಬಹುದು ಎಂಬ ಅನುಮಾನ ಬಂತು.. ಸತ್ತ ವ್ಯಕ್ತಿಯ ದೇಹದಲ್ಲಿಅಫೀಮು ತುಂಬಾ ಹೆಚ್ಚಿದೆ ಎಂದು ರಿಪೋರ್ಟ್ ಹೇಳುತ್ತಿತ್ತು. ಪೊಟ್ಟಣದಲ್ಲಿ ಅದರ ಅಂಶ ಕಂಡು ಬಂದಿದ್ದು.... ಕೋತಿ ಆ ಪೊಟ್ಟಣವನ್ನು ಬಿಡಿಸಲು ಯತ್ನಿಸಿ.. ಅಫೀಮನ್ನು ಯಾವುದೊ ಪುಡಿ ಎಂದು ತನ್ನ ಮೂಗಿನ ಹತ್ತಿರ ಇಟ್ಟುಕೊಂಡಾಗ.. ಅದು ಪೆದ್ದು ಪೆದ್ದಾಗಿ ಎಲ್ಲಾ ಕಡೆ ನೋಡುತ್ತಾ.. ತಲೆ ಗಿರ್ ಎನ್ನುವಂತೆ ಬಿತ್ತು.. ಆಗ ಅನುಮಾನ ನಿಜವಾಯಿತು.. ಅದಕ್ಕೆ ಸೀದಾ ನಿಮ್ಮ ಮನೆಗೆ ಬಂದೆ.. ನೀನು ಬಂಡ ಮಾಡಿದ್ದು ತಪ್ಪಾದರೂ.. ಏನೂ ಆಗೇ ಇಲ್ಲ ಎನ್ನುವಂತೆ ಕೂತಿದ್ದೆ.. ನಿನ್ನ ಪಕ್ಕದಲ್ಲಿ ಅದೇ ಪಾಂಪ್ಲೆಟ್.. ಅದರೊಳಗೆ ಅದೇ ಮತ್ತು ಬರುವ ಅಫೀಮಿನ ಪುಡಿ.. ನನ್ನ ಲೆಕ್ಕ ಸರಿಯಾಗಿದೆ ಎನಿಸಿತು"

"ಹೌದು ಸರ್ ಮೊನ್ನೆ ದೇವಸ್ಥಾನಕ್ಕೆ ಹೋಗೋಣ ಎಂದು ಮೆಟ್ಟಿಲು ಹತ್ತಿ ಹೋಗಿದ್ದೆ.. ಹೋಗುವಾಗ ನನ್ನ ಜೇಬಿಂದ ಪೊಟ್ಟಣ ಬಿದ್ದಿದೆ ಅನ್ಸುತ್ತೆ"

ಮತ್ತೆ ತಿಮ್ಮ ಏನೂ ಮಾತಾಡದೆ ಸೆಲ್ ಒಳಗೆ ಹೋಗಿ ತಾನೇ ಬಾಗಿಲು ಹಾಕಿಕೊಂಡ!!!

ಶ್ರೀಕಾಂತ್ ಸ್ಟೇಷನಲ್ಲಿ ಕೂತು.. ಟಿವಿ ಆನ್ ಮಾಡಿದಾಗ ಹೊಸದಿಗಂತ ವಾಹಿನಿಯಲ್ಲಿ ೩ಕೆ ತಂಡದ ದಶಮಾನೋತ್ಸವ ಕಾರ್ಯಕ್ರಮದ ತುಣುಕು ಬರುತ್ತಿತ್ತು.. ಶಂಕರಪ್ಪ ಅದ್ಭುತ ನಿರೂಪಕ.. ಸ್ವಲ್ಪ ಹಳ್ಳಿ ಭಾಷೆ, ಜೋರು.. ೩ಕೆ ತಂಡದ ದಶಮಾನೋತ್ಸವ ಕಾರ್ಯಕ್ರಮದ ಬಗ್ಗೆ ಸರಳವಾಗಿ ಅಂದಿನ ಕಾರ್ಯಕ್ರಮವನ್ನು ಕಣ್ಣೆದುರಿಗೆ ತಂದು ಕೊಟ್ಟ ಶಂಕರಪ್ಪನಿಗೆ ಕರೆ ಮಾಡಿ ಮೆಚ್ಚುಗೆಯ ಮಾತುಗಳನ್ನು ಹೇಳಿ.. . ಅದನ್ನು ನಿರೂಪಿಸಿದ ಶಂಕರಪ್ಪನವರ ಬುದ್ಧಿಮತ್ತೆಗೆ ಮತ್ತೊಮ್ಮೆ ಶಭಾಷ್ ಹೇಳುತ್ತಾ.. ಮನದಲ್ಲಿಯೇ ೩ಕೆ ತಂಡಕ್ಕೆ ಶುಭವಾಗಲಿ ಎಂದು ಹಾರೈಸಿದ.. !

3 comments:

  1. OMG!! How could you tweak it such small story, yet narrate everything ...super

    ReplyDelete
  2. Adbhutha nimma kalpane haagu shaili 🙏🙋😊 3K balagada paravaagi vandanegalu nimage. Karyakramada vivarane heegoo bareyabahudu antha gottirlilla 😂👌👌. Dhan5lyavaada Sri.

    ReplyDelete
  3. ಶ್ರೀಕಾಂತ್ ಸರ್, ನಿಮ್ಮ ತುಂಬು ಹೃದಯದಿಂದ ಆತ್ಮೀಯವಾಗಿ 3ಕೆ ದಶಮಾನೋತ್ಸವ ಕಾರ್ಯಕ್ರಮ ದ ಬಗ್ಗೆ ವಿಶೇಷ ಶೈಲಿಯಲ್ಲಿ ಬರೆದಿದ್ದೀರಿ.... ನಿಮಗೆಷ್ಟು ಧನ್ಯವಾದಗಳು ಹೇಳಿದರು ಸಾಲದು..... ಈಗ ನಮ್ಮ ದಶಮಾನೋತ್ಸವ ಕಾರ್ಯಕ್ರಮಕ್ಕೆ ಪರಿಪೂರ್ಣತೆ ಸಿಕ್ಕಿತು....

    ReplyDelete