Sunday, December 15, 2019

ಜೀವಸ್ವರದಲ್ಲಿ ಸ್ವರಗಳಿಗೆ ಸಿಕ್ಕ ಜೀವ

 ಜೀವ ಸ್ವರವೇ.. ಅಲ್ಲ ಅಲ್ಲ.. ಇವರಿಬ್ಬರಿಗೂ ಮತ್ತು ಇವರ ತಂಡಕ್ಕೆ ಸ್ವರಗಳೇ ಜೀವ..  ಜೀವಸ್ವರದ ಇನ್ನೊಂದು ಕಾರ್ಯಕ್ರಮ ಮತ್ತೊಂದು ಮಧುರ ಲಹರಿ ಮನದಲ್ಲಿ ಮನೆಮಾಡಿತು..
ಮಹೇಶ್ ಅವರ ಗೋಡೆಯಿಂದ ಕದ್ದದ್ದು.. 

ಎರಡು ವರ್ಷಗಳ ಗೆಳೆತನ ಮಹೇಶ್ ಅವರ ಸಿಹಿ ಒತ್ತಾಯ ಪೂರ್ವಕ ಆಗ್ರಹಕ್ಕೆ ಮನವು ಸಜ್ಜಾಗಿತ್ತು.. ಮಹೇಶ್ ಅವರ ಕಾರ್ಯಕ್ರಮವನ್ನು ಪರಿಚಯಿಸಿದ್ದ ಗುರು ಪ್ರಸಾದ್ ಅವರನ್ನು ಕರೆದುಕೊಂಡು ಹೊರಟ ನನ್ನ ಸಾರಥಿ ನಿಂತದ್ದು ಚಿತ್ರಕೂಟ ಶಾಲೆಯ ವಾಹನ ನಿಲ್ದಾಣದಲ್ಲಿ.. ಗುರು ಪ್ರಸಾದ್ ಅವರಿಗೆ ಮತ್ತೊಮ್ಮೆ ಅಭಾರಿ.. ಇಂತಹ ಸುಮಧುರ ಸಂಗೀತ ಮಾಂತ್ರಿಕರನ್ನು ಪರಿಚಯಿಸಿದ್ದಕ್ಕೆ.. 

ಒಳಗೆ ಕಾಲಿಟ್ಟರೆ ..ತುಂಬಿ ತುಳುಕುತಿದ್ದ ಸಭಾಂಗಣ.. ಶಾಲೆಯ ವಿದ್ಯಾರ್ಥಿಗಳ ಪೋಷಕರು, ಶಾಲೆಯ ಸಿಬ್ಬಂದಿ.. ಮಹೇಶ್ ಮತ್ತು ಸಹಗಾಯಕರ ಅಭಿಮಾನಿಗಳು, ಜೀವಸ್ವರವನ್ನು ಜೀವದ ಸ್ವರವಾಗಿ ಹಿಂಬಾಲಿಸುತ್ತಿರುವ ಕಲಾರಸಿಕರು.. ಇವರ ಜೊತೆಯಲ್ಲಿ.. ಆರೋಗ್ಯವೇ ಭಾಗ್ಯ ಅದೇ ನಮ್ಮ ಗುಟ್ಟು ಎನ್ನುವ ಜೀಲ್ ತಂಡದ ಸದಸ್ಯರು.. 

ಡಬಲ್ ಧಮಾಕ ಇತ್ತು ಈ ಕಾರ್ಯಕ್ರಮದಲ್ಲಿ.. ಹದಿನೈದು ವಸಂತಗಳ ಸಂಭ್ರಮದಲ್ಲಿ ಚಿತ್ರಕೂಟ ಶಾಲೆ ಮೀಯುತ್ತಿದ್ದರೆ.. ಶರೀರವನ್ನು ಧೃಡವಾಗಿ ಇಟ್ಟುಕೊಳ್ಳುವಲ್ಲಿ ಸಹಾಯ ಮಾಡುತ್ತಿರುವ ಜೀಲ್ ತಂಡ ತನ್ನ ಮೂರನೇ ವರ್ಷವನ್ನು ಸಂಭ್ರಮಿಸುತ್ತಿತ್ತು.. 

ಜೀಲ್ ತಂಡ ಸಭಾಂಗಣದಲ್ಲಿದ್ದವರನ್ನು ಉತ್ತೇಜಿಸುವುದಕ್ಕಾಗಿ ಟೈರನ್ನು ತಂದು ಅದನ್ನು ಎತ್ತಿಸುವ ಸ್ಪರ್ಧೆ ಮಾಡಿದರು.. ಬಂದವರು ಆರಾಮಾಗಿ ಎತ್ತಿದ್ದು.. ಮತ್ತು ಜೀಲ್ ತಂಡದ ಪ್ರತಿಯೊಬ್ಬರೂ ಸ್ಪರ್ಧಾಳುಗಳನ್ನು ಹುರುದುಂಬಿಸಿದ್ದು ಖುಷಿಯಾಯಿತು.. 




ಈ ವೇದಿಕೆಯಲ್ಲಿ ಮುಂದೆ ನೆಡೆದದ್ದು ಹಾಡುಗಳ ಜಾತ್ರೆ.. ಈ ಕಾರ್ಯಕ್ರಮವನ್ನು ಸವಿಯುತ್ತಾ ಕಾರ್ಯಕ್ರಮ ಮುಗಿಯುವ ತನಕ ಆಸನದಿಂದ ಏಳದಂತೆ ಕೂರಿಸಿದ್ದು ಜೀವಸ್ವರದ ತಾಕತ್ತು ಮತ್ತು ಜೀವ ತುಂಬಿ ನುಡಿಸುವ ಪ್ರತಿಭೆಯ ಸಂಗೀತ ವಾದ್ಯ ಗೋಷ್ಠಿ.. 





ಇಡೀ ತಂಡಕ್ಕೆ ಅಭಿನಂದನೆಗಳು.. ಹಾಗೂ ಇಂಥಹ ಕಾರ್ಯಕ್ರಮವನ್ನು ಆಯೋಜಿಸಿರುವ ಚಿತ್ರಕೂಟ ಶಾಲೆಯ ತಂಡಕ್ಕೆ ಅಭಿನಂದನೆಗಳು ಹಾಗೂ ಧನ್ಯವಾದಗಳು.. 

****

ಜೀವನದಲ್ಲಿ ಕಠಿಣವಾದ ಹಾದಿ ತುಳಿದು ಬಂದಿದ್ದ ನಂದನ್ ಕಾರ್ಯಕ್ರಮಕ್ಕೆ ಬಂದಿದ್ದ.. ಮನಸ್ಸು ಗೊಂದಲದ ಗೂಡಾಗಿತ್ತು.. ಬೇಸರದಿಂದ ಕುಸಿದಿದ್ದ ನಂದನ್.. ಸ್ವಲ್ಪ ತನಗೆ ತಾನೇ ಸಮಯ ಕೊಟ್ಟುಕೊಂಡು ಮನಸ್ಸಿಗೆ ಕೊಂಚ ವಿಶ್ರಾಂತಿ ಕೊಡಲು ಜೀವ ಸ್ವರದ ಕಾರ್ಯಕ್ರಮಕ್ಕೆ ಬಂದಿದ್ದ.. 

ತನ್ನ ಪಾಡಿಗೆ ತಾನು ಹಿಂದಿನ ಸಾಲಿನಲ್ಲಿ ಕೂತು ಕಾರ್ಯಕ್ರಮ ನೋಡಲು ಯೋಚಿಸಿದ್ದ.. ಕಾಡುವ ಮೊಬೈಲನ್ನು ಆಫ್  ಮಾಡಿ  ತನ್ನ ಕಾರಿನಲ್ಲಿ ಒಗೆದು ಬಂದಿದ್ದ.. 

ಮಹೇಶ್ ಸೊಗಸಾದ ಧ್ವನಿಯಲ್ಲಿ ಎಲ್ಲರನ್ನು ಪರಿಚಯಿಸಿ.. ಕೃತಜ್ಞತಾ ಪೂರ್ವಕವಾಗಿ ಎಲ್ಲರಿಗೂ ಧನ್ಯವಾದಗಳನ್ನು ತಿಳಿಸಿ.. ಕಾರ್ಯಕ್ರಮವನ್ನು ಶುರು ಮಾಡಿದರು.. 

 ಮಹಿಳೆಯರಿಗೆ ಮೊದಲ ಅವಕಾಶ ಎಂದು.. "ತೆರೆದಿದೆ ಮನೆ ಓ ಬಾ ಅತಿಥಿ"  ಹಾಡು ಶುರುವಾಯಿತು.... ಹಾಡು ಕೇಳುತ್ತಾ ಹಾಗೆ ಮೈ ಮರೆತಿದ್ದ ನಂದನ್ ಗೆ ಒಂದು ಕೋಗಿಲೆ ದನಿ ಕೇಳಿದ ಅನುಭವ.. ಕಿವಿಗೆ ದೊಡ್ಡ ಇಯರ್ ರಿಂಗ್ ಹಾಕಿಕೊಂಡು ಪಿಂಕ್ ಬಣ್ಣದ ಚೂಡಿದಾರ್ ತೊಟ್ಟಿದ್ದ ತರುಣಿ.. "ಸರ್ ಇಲ್ಲಿ ಕೂರಬಹುದೇ.. ಯಾರಾದರೂ ಬರುತ್ತಾರಾ?" ..
"ಇಲ್ಲ ಮೇಡಂ ಯಾರೂ ಇಲ್ಲ ಕೂತುಕೊಳ್ಳಿ" ಎಂದ.. 

ಹಾಡು ಇಂಪಾಗಿ ಮೂಡಿ ಬರುತಿತ್ತು.. ಬೆಳಕು ಕಣ್ಣು ಮುಚ್ಚಾಲೆ ಆಡುತ್ತಿತ್ತು.. ಅಲ್ಪ ಸ್ವಲ್ಪ ಬೆಳಕಲ್ಲಿ ಆ ತರುಣಿಯನ್ನೊಮ್ಮೆ ನೋಡಿದ.. ಮುದ್ದಾದ ಮೊಗ.. ಪುಟ್ಟ ಬೈತಲೆ.. ಕಣ್ಣುಗಳು ಕಾಡುವಂತಿತ್ತು.. ಅಲ್ಲಿದ್ದ ಯಾರೋ ತನ್ನ ಗೆಳತಿಗೆ ಒಮ್ಮೆ ಒಂದು ನಗುಕೊಟ್ಟಳು .. ಆ ನಗುವನ್ನು ಆ ಅರೆ ಬರೇ ಕತ್ತಲೆಯಲ್ಲೂ ಗುರುತಿಸುವಂತಿತ್ತು.. ಯಾಕೋ ಇದ್ದಕಿದ್ದ ಹಾಗೆ ನಂದನ್ ತುಸು ಗಮನಿಸತೊಡಗಿದ.. 

ಹಾಡು ಮುಗಿದಾಗ ಜೋರಾದ ಚಪ್ಪಾಳೆ ಬಿದ್ದಾಗ ಮತ್ತೆ ತನ್ನ ಲೋಕದಿಂದ ಜಾರಿಬಂದ.. 

ಮಹೇಶ್ ಗಾಯಕಿಯರಿಗೆ ಧನ್ಯವಾದಗಳನ್ನು ಹೇಳುತ್ತಾ ಮುಂದಿನ ಹಾಡು ಎಂದು ಹೇಳುತ್ತಿದ್ದರು.. 

ಇತ್ತ ನಂದನ್ ಗೆ ಈ ತರುಣಿಯ ಧ್ವನಿ ಕೇಳುವ ಆಸೆ ಇತ್ತು.. ವೇದಿಕೆಯಲ್ಲಿ "ಬೋಲೇ ರೇ ಪಪಿ.. ಪಪಿಹರ.. " ಹಾಡಿನಂತೆ.. ಈ ತರುಣಿಯ ಧ್ವನಿಯೂ ಕೋಗಿಲೆಯ ಧ್ವನಿಯಂತೆ.. ಮೆಲುದನಿಯಲ್ಲಿ ಮೊಬೈಲಿನಲ್ಲಿ ಯಾರಿಗೂ ಹೇಳುತ್ತಿದ್ದಳು.. ಅವಳು ಏನು ಹೇಳಿದಳು ಎನ್ನುವುದಕ್ಕಿಂತ.. ಆ ದನಿ ಕೇಳುವುದರಲ್ಲಿಯೇ ಮೈ ಮರೆತಿದ್ದ ನಂದನ್.. 

ಮನದಲ್ಲಿಯೇ.. "ಚುರಾಲಿಯ ಹೇ ತುಮ್ ನೇ ಜೋ ದಿಲ್ ಕೋ ನಜರ್ ನಹಿ ಚುರಾನ ಸನಮ್" ಹಾಡಿಕೊಂಡು.. ಯಾಕೋ ಆ ಹುಡುಗಿಯ ಕಡೆಗೆ ತಿರುಗಿದ.. ಸಂಪಿಗೆ ಮೂಗು.. ಅದಕ್ಕೆ ಒಪ್ಪುವ ಹರಳಿನ ಹೊಳೆಯುವ ಮೂಗುತಿ.. ನಿಜಕ್ಕೂ ನಂದನ್ ಮನಸ್ಸನ್ನು ಗೆಲ್ಲುವತ್ತಾ ಹೆಜ್ಜೆ ಹಾಕುತ್ತಿದ್ದಳು ಆ ತರುಣಿ.. ಅವಳ ಬಗ್ಗೆ ಇವನಿಗೆ ಗೊತ್ತಿಲ್ಲ.. ಇವನ ಬಗ್ಗೆ ಅವಳಿಗೆ ಗೊತ್ತಿಲ್ಲ.. 

ಅತ್ತ.. ರೇವತಿ ಅವತ್ತು ತಾನೇ ವಿಚ್ಚೇದನದ ಒಪ್ಪಿಗೆ ಪತ್ರ ಕೈಗೆ ಸಿಕ್ಕಿತ್ತು.. ಬಿಡುಗಡೆಯಾಗಿತ್ತು ಮನಸ್ಸು.. ಯಾವ ಬಂಧನವೂ ಇಲ್ಲ ಎಂದು ಮನಸ್ಸು ಹಗುರಾಗಿತ್ತು.. ತನ್ನ ಫೇಸ್ಬುಕ್ ಗೆಳತಿ ಈ ಕಾರ್ಯಕ್ರಮದ ಬಗ್ಗೆ ಹೇಳಿದ್ದರಿಂದ.. ಮರು ಮಾತಾಡದೆ ಬಂದಿದ್ದಳು.. ಆದರೆ ತಡವಾಗಿದ್ದರಿಂದ.. ಹಿಂದೆಯೇ ಕುಳಿತುಕೊಳ್ಳಬೇಕಿತ್ತು.. ತುಂಬಿ ತುಳುಕುತ್ತಿದ್ದ  ಸಭಾಂಗಣ.. ಆಕೆಯ ಗೆಳತಿ ಮುಂದಿನ ಸಾಲಿನಲ್ಲೆಲ್ಲೋ ಇದ್ದದ್ದರಿಂದ ಅಲ್ಲಿಗೆ ಹೋಗಲು ಸಾಧ್ಯವಾಗದೆ.. ಆಮೇಲೆ ಹೋಗೋಣ ಅಂತ ನಂದನ್ ಪಕ್ಕದಲ್ಲಿಯೇ ಕೂತಿದ್ದಳು.. 

ಮನಸ್ಸು ಹಕ್ಕಿಯ ಹಾಗೆ ಆಗಿತ್ತು.. "ನನ್ನ ದೈವ ಕಣ್ಣ ಮುಂದಿರೇ.. ಮೌನ ಕೂಡ ಮಾತಾಡಿದೆ" ಈ ಮೌನದಲ್ಲಿಯೂ ಮಾತಾಡುವ ಸಂಗಾತಿಯ ಹುಡುಕಾಟದಲ್ಲಿದ್ದಳು.. ಆಕೆಯ ಗೆಳತೀ ಇದಕ್ಕೆ ಸಹಾಯ ಮಾಡುವುದಾಗಿ ಹೇಳಿದ್ದಳು.. 

ತನ್ನ  ಮನದ ಕದವ ತಟ್ಟಿ "ಛೂಕರ್ ಮೇರೇ ಮನ್ ಕೋ ತೂನೇ ಕಿ ಯೆ ಇಶಾರ" ಎನ್ನುವ ಆ ಹೊಸ ವಸಂತಕ್ಕೆ ಆಕೆಯ ಮನ ಕಾದಿತ್ತು.. ತನ್ನ ಬಾಳಿನಲ್ಲಿ "ಪಂಚವೇದ ಪ್ರೇಮದ ನಾದ" ಕೇಳಬಹುದೇ ಎನ್ನುವ ಆಶಾ ಭಾವನೆ ನಿಧಾನವಾಗಿ ಮುಳುಗುತ್ತಿರುವ ಮನಸ್ಸನ್ನು ತೇಲಿಸುವ ಪ್ರಯತ್ನ ಮಾಡುತಿತ್ತು .. 

ತನ್ನ ಕಂಗಳಲ್ಲಿ ಮುದ್ದಾದ ಒಂದು ಕನಸು ಕಾಣುತ್ತಾ "ಸುರು ಮೈ ಅಕ್ಕಿಯೊಮೆ ಏಕ್ ನನ್ಹ ಮುನ್ನ ಸಪುನಾ ದೇ ಜಾರೇ" ಆ ಒಂದು ಕನಸಿಗೆ ಕಾಯುತ್ತಿದ್ದಳು... 

ನಂದನ್ ಅವಳನ್ನು ನೋಡುತ್ತಲೇ ಇದ್ದ.. ಮಾತಾಡಿಸಬೇಕು ಎನ್ನುವ ಕಾತುರತೆ.. ಆದರೆ ಮನದಲ್ಲಿ ಹೆದರಿಕೆ.. ಆ ಹೆದರಿಕೆಗೆ ತಕ್ಕಂತೆ "ಬಾಬೂಜಿ ಧೀರೆ ಚಲ್ ನಾ.. ಸಾಮುನೇ ಝರಾ ಸಂಬಲ್ನ"  ಹಾಡು ಬಂದಾಗ.. ಛೆ ಎನ್ನುತ್ತಾ ತನ್ನ ಕುರ್ಚಿಯನ್ನು  ಸರಿಯಾಗಿ ಎಳೆದುಕೊಂಡು ಆ ಹುಡುಗಿಯಿಂದ ತುಸು ದೂರ ಕೂತ.. ಆದರೂ ಮನಸ್ಸು ಕೇಳಬೇಕೆ "ಏ ಮೇರಾ ದಿಲ್ ಪ್ಯಾರ್ ಕಾ ದೀವಾನಾ"  ಎನ್ನುತ್ತಾ ಮತ್ತೆ ಆಕೆಯ ಕಡೆಗೆ ಸೆಳೆಯುತಿತ್ತು.. ತನ್ನ ಮನಸ್ಸಿಗೆ ಕೇಳುತ್ತಲೇ ಇದ್ದ.. ಯಾಕೋ ಅಷ್ಟು ಸೆಳೆಯುತ್ತಾಳೆ ಆ ಹುಡುಗಿ ಅಂಥದ್ದು ಏನು ಸೆಳೆಯುತ್ತಿದೆ.. ಸ್ವಲ್ಪ ಸಮಾಧಾನ ಮಾಡಿಕೊಳ್ಳಪ್ಪಾ ಎಂದು ತಾನೇ  ಮನಸ್ಸನ್ನು ಒಮ್ಮೆ ತಟ್ಟಿಕೊಂಡ.. 

ಮನಸ್ಸು ಹೇಳಿತು.. "ಲೋ ಮಂಗ್ಯಾ ನಂದನ್.. ಗುಲಾಬಿ ಆಂಕೆ..ಕಣೋ ಅದೇ ನಿನ್ನ ಸೆಳೆಯುತ್ತಿರುವುದು.. ಆರಾಮಾಗಿ ಇರು.. ಎಲ್ಲವೂ ಸರಿಯಾಗುತ್ತೆ.. " ಎಂದರೂ ಮನಸ್ಸು ತಡೆಯುತ್ತಲೇ ಇರಲಿಲ್ಲ.. 

"ಕಾಣದ ಕಡಲಿಗೆ ಹಂಬಲಿಸಿದೆ ಮನ"  ಎನ್ನುವ ಗೊಂದಲ ರೇವತಿಗೆ ಕಾದಿದ್ದರೂ.. ಆಕೆಗೆ ಅವಳ ಗೆಳತಿಯಲ್ಲಿ ಏನೋ ಒಂದು ವಿಚಿತ್ರ ನಂಬಿಕೆ.. ಆಕೆ ತನ್ನ ಜೀವನವನ್ನು ಸರಿ ದಾರಿಗೆ ತರುತ್ತಾಳೆ ಎನ್ನುವ ನಂಬಿಕೆ.. ಹಾಗಾಗಿ ನಂದನ್ ತನ್ನನ್ನು ಗಮನಿಸುತ್ತಿದ್ದರೂ ಆಕೆಗೆ ಅದರ ಬಗ್ಗೆ ಕುತೂಹಲವಿರಲಿಲ್ಲ..ಅದರ ಕಡೆಗೆ ಗಮನವಿರಲಿಲ್ಲ.. ಆಕೆಯ ಮನದಲ್ಲಿ ಓಡುತ್ತಿದ್ದದ್ದು ಒಂದೇ.. "ಒಲುಮೆ ಪೂಜೆಗೆಂದೇ.. ಕರೆಯ ಕೇಳಿ ಬಂದೆ" ಎನ್ನುವ ಒಂದು ಹೃದಯದ ಕೂಗು..  

ತನ್ನ ಹಣಕಾಸಿನ ಪರಿಸ್ಥಿತಿಯನ್ನು ಒಂದು ಹಂತಕ್ಕೆ ತರುವ ಹೊಣೆ ನಂದನ್ ಮೇಲೆ ಇತ್ತು.. ಬದುಕಿನಲ್ಲಿ ಸಿಕ್ಕ ತಿರುವು ಅವನನ್ನು ಹಿಂಡಿ ಹಿಪ್ಪೆ ಮಾಡಿತ್ತು.. ಉಳಿಸಿದ್ದು ಗಳಿಸಿದ್ದು ಎಲ್ಲವೂ ದಿನಕರನ ತಾಪಕ್ಕೆ ಸಿಕ್ಕ ಮಂಜಿನ ಗೆಡ್ಡೆಯಾಗಿತ್ತು.. ಹಾಗಾಗಿ ಜೀವನವನ್ನು ಮತ್ತೆ ತಿರುಗಿಸಬೇಕಾದ ಅವಶ್ಯಕತೆ ಇತ್ತು.. ಮನದಲ್ಲಿ ಆ ಕಾಂಚಾಣದ ಬಗ್ಗೆ ಯೋಚಿಸುತ್ತಲೇ ಬೇಂದ್ರೆ ಅಜ್ಜನ "ಕುರುಡು ಕಾಂಚಾಣ" ಪದ್ಯ ಶಾಲೆಯಲ್ಲಿ ಓದಿದ್ದು ನೆನಪಿಗೆ ಬಂದು.. ಹಾಗೆ ತುಟಿಯಲ್ಲಿ ಒಂದು ಮಂದಹಾಸ ಸುಳಿದು. ತನ್ನಷ್ಟಕ್ಕೆ ತಾನೇ ನಕ್ಕು.. ಪಕ್ಕದ ಸೀಟಿನ ಮೇಲೆ ಅರಿಯದೆ ತನ್ನ ಕೈಯನ್ನು ಚಾಚಿದ..  ಅವನಿಗರಿವಿಲ್ಲದೆ.. ಅವನ ಕೈ.. ರೇವತಿಯ ಭುಜದ ಸುತ್ತಾ ಬಳಸಿತ್ತು. 

ಅಚಾನಕ್ ಕೈ ಸ್ಪರ್ಶವಾದದ್ದಕ್ಕೆ ಗಾಬರಿ ಬಿದ್ದು.. ರೇವತಿ ತಿರುಗಿ ನೋಡಿದಾಗ.. ಕಂಡದ್ದು ನಂದನ್ ರೂಪ.. 

"ಸಾರಿ ಮೇಡಂ.. ಬೇಕು ಅಂತ ಮಾಡಲಿಲ್ಲ.. ಗೊತ್ತಾಗಲಿಲ್ಲ ಕ್ಷಮಿಸಿ.. ಸಾರಿ.. ಸಾರಿ "

"ಸರ್ ಪರವಾಗಿಲ್ಲ.. its ok.. dont worry" ಎಂದು heart stopping smile ಕೊಟ್ಟಳು ರೇವತಿ.. ಮತ್ತೆ
ಮೆಲ್ಲನೆ ಅವನ ಕಡೆ ನೋಡಿದಾಗ ಏನೋ ಒಂದು ರೀತಿಯ ಸೆಳೆಯುವ ವ್ಯಕ್ತಿತ್ವ ಈತನಲ್ಲಿದೆ ಅನಿಸಿತು.. ಸಾಮಾನ್ಯ ಯಾರಾದರೂ ಗೊತ್ತಿದ್ದೋ ಗೊತ್ತಿಲದೆಯೋ ತನ್ನನ್ನು ಮುಟ್ಟಿದರೆ ದುರ್ಗಿಯ ಅವತಾರ ತಾಳುತಿದ್ದ ರೇವತಿ ಸಂಯಮದಲ್ಲಿದ್ದದ್ದು ಅವಳಿಗೆ ಅಚ್ಚರಿ ತಂದಿತ್ತು.. 

ತುಸು ಶಾಮಲ ವರ್ಣವಾದರೂ ಏನೋ ಪಾಸಿಟಿವ್ ವೈಬ್ಸ್.. ಇದೆ ಅನಿಸಿತ್ತು ಅವಳಿಗೆ.. ಮತ್ತೆ ಕ್ಷಮೆ ಕೇಳಿ ಎರಡೆರಡು ಬಾರಿ ಸಾರಿ ಹೇಳಿ... ಕುರ್ಚಿಯನ್ನು ತನ್ನಿಂದ ತುಸು ದೂರದಲ್ಲಿ ಜರುಗಿಸಿಕೊಂಡದ್ದು.. ಅರಿಯದೆ ಆ ವ್ಯಕ್ತಿಯ ಬಗ್ಗೆ ಒಂದು ರೀತಿಯ ಗೌರವ ಮೂಡಿತು.. ಅದೇ ಗುಂಗಿನಲ್ಲಿ ಹಾಡು ಕೇಳುತ್ತಿದ್ದಳು.. ಮನದಲ್ಲಿ "ಒಲುಮೆ ಪೂಜೆಗೆಂದೇ" ಹಾಡು ಮಾರ್ದನಿಯುತಿತ್ತು..  

ಆ ನಗುವನ್ನು ನೋಡುತ್ತಲೇ.. "ನಗುವ ನೀನು ಮಿಂಚಂತೆ.. ಗೀತಾ ಸಂಗೀತಾ" ಹಾಡು ನೆನಪಿಗೆ ಬಂತು ..

ಕಾರ್ಯಕ್ರಮ ಮುಗಿಯುವ ಹಂತಕ್ಕೆ ಜಾರುತ್ತಿತ್ತು.. ಸಂಗೀತ ಮಾಂತ್ರಿಕ ಇಳಯರಾಜ ಅವರ ಒಂದಷ್ಟು ಗೀತೆಗಳನ್ನು ಜೊತೆ ಮಾಡಿಕೊಂಡು.. ಸರ ಸರ ಹಾಡುತ್ತಿದ್ದರು.. ಎಲ್ಲವೂ ಒಂದಕ್ಕಿಂತ ಒಂದು ಸೊಗಸಾಗಿತ್ತು.. ಕನ್ನಡ, ತಮಿಳು, ತೆಲುಗು ಭಾಷೆಗಳ ಹಾಡುಗಳನ್ನು ಸರಾಗವಾಗಿ ಹಾಡುತ್ತಿದ್ದರು.. 

ಸುಮಾರು ಹತ್ತು ಹಾಡುಗಳ ಗುಚ್ಛವನ್ನು ಇಳಯರಾಜ ಅವರಿಗೆ ಸಮರ್ಪಿಸಿ.. ಎರಡು ಘಂಟೆಗಳಿಂದ ಕೂತು ಸಂಗೀತವನ್ನು ಆಸ್ವಾಧಿಸುತ್ತಿದ್ದ ಸಂಗೀತ ರಸಿಕರಿಗೆ.. ಹುಚ್ಚೆಬಿಸುವಂತೆ ಹನ್ನೊಂದು ಹಾಡುಗಳ  ಫಾಸ್ಟ್ ಬೀಟ್ ತುಂಬಿಸಿ ಕುಣಿಸಿದರು.. ಒಂದಕ್ಕಿಂತ ಒಂದು ಸೂಪರ್ ಹಿಟ್ ಹಾಡುಗಳು ಅವು.. ವಯಸ್ಸಿನ ಇತಿಮಿತಿಯಿಲ್ಲದೆ ಕುಣಿಯಲೇ ಬೇಕು ಎನ್ನಿಸುವಂಥ ಹಾಡುಗಳು ಅವು.. 

ಸಂಗೀತ ಕಾರ್ಯಕ್ರಮದ ಅಲಿಖಿತ ನಿಯಮದ ಕೊನೆ ಹಾಡು "ಕುಲದಲ್ಲಿ ಕೀಳ್ಯಾವುದೋ" ಹಾಡು ಬಂದಾಗ ಪ್ರಾಯಶಃ ಇಡೀ ಸಭಾಂಗಣ ಕುಣಿಯಿತು.. 

ಇಡೀ ಕಾರ್ಯಕ್ರಮವನ್ನು ತಮ್ಮ ಭುಜದ ಮೇಲೆ ಹೊತ್ತು ನಿರೂಪಣೆ ಮಾಡಿದ ಮಹೇಶ್ ಎಲ್ಲರಿಗೂ ಧನ್ಯವಾದಗಳನ್ನು ಅರ್ಪಿಸಿದರು.. ಇದಕ್ಕೆ ತುಸು ಮುಂಚೆ ಚಿತ್ರಕೂಟ ಶಾಲೆಯ ಶ್ರೀ ಚೈತನ್ಯ ಅವರು ವೇದಿಕೆಗೆ ಬಂದು.. ಶ್ರುತಿ ಮಹೇಶ್ ದಂಪತಿಗಳನ್ನು ಎಲ್ಲರಿಗೂ ಪರಿಚಯಿಸಿದಾಗ ಸೂರು ಕಿತ್ತೋಗುವಷ್ಟು ಜೋರಾದ ಚಪ್ಪಾಳೆ ಬಂದಿತ್ತು .. 

ಮಾಲತಿ ಕಣವಿ ಅವರು ಗಾಯಿತ್ರಿ ಮದುವೆ ಚಿತ್ರದ "ನನ್ನ ದೈವ ಕಣ್ಣ ಮುಂದಿರೇ" ಹಾಡಿನಲ್ಲಿ ಹಲವಾರು ಸಂಗತಿಗಳನ್ನು, ಸ್ವರಗಳ ಆರೋಹಣ ಅವರೋಹಣವನ್ನು ವಾದ್ಯಗಾರರ ಜೊತೆಯಲ್ಲಿ ಜುಗಲ್ಬಂದಿ ಮಾಡಿದಾಗ ನೆರೆದಿದ್ದವರಿಂದ ಬಂದ ಚಪ್ಪಾಳೆ.... ಬೋಲೇ ರೇ ಪಪಿಹರ ಹಾಡನ್ನು ಏಕ್ ದಂ ಟೇಕ್ ಆಫ್ ಮಾಡಿದ ಶ್ರುತಿ ಅವರ ಕಂಠ ಸಿರಿಗೆ... ಓಹೋ ಒಹೋ.. ಏ ಮೇರೇ ದಿಲ್ ದಿವಾನ ಹಾಡನ್ನು ಕುಣಿಯುವಂತೆಯೇ ಹಾಡಿದ ಅರುಂಧತಿ ವಸಿಷ್ಠ ಅವರ  ಧ್ವನಿಗೆ.. ಕಾಣದ ಕಡಲಿಗೆ ಹಾಡಿನಲ್ಲಿ ಅಕ್ಷರಶಃ ಭಾವನೆಗಳ ಕಡಲಿಗೆ ಕೊಂಡೊಯ್ದ ಮಹೇಶ್... ನಗಲು ನೀನು ಮಿಂಚಂತೆ ಎಂದು ಎಲ್ಲರ ಮನಸ್ಸನ್ನು ಗೆದ್ದ ಮನೋಜ್ ವಸಿಷ್ಠ.. ಕೀ ಪ್ಯಾಡ್ ನಲ್ಲಿ ಜಾದೂ ಮಾಡಿದ ಕೃಷ್ಣ ಉಡುಪ.. ಇನ್ನೊಂದು ಕೀ ಬೋರ್ಡ್ ನಲ್ಲಿ ಗಮನ ಸೆಳೆದ ಸಾಲೊಮನ್.. ಪ್ರತಿ ಹಾಡಿಗೂ ಲಯಬದ್ಧವಾಗಿ ಕುಣಿಯುವಂತೆ ಮಾಡಿದ ಡ್ರಮ್ಸ್ ನ ಕೃಷ್ಣ.. ತಬಲಾದಲ್ಲಿ ಕೈಬೆರಳುಗಳು ನರ್ತಿಸುವುದುನ್ನು ತೋರಿಸಿದ ಕಾರ್ತಿಕ್ ಭಟ್.. ಇವರುಗಳ ಪರಿಶ್ರಮವನ್ನು ಎಲ್ಲರಿಗೂ ತಲುಪಿಸಿದ ಧ್ವನಿ ಆಯೋಜಕರು .. ಇದಕ್ಕೆಲ್ಲ ಕಳಶವಿಟ್ಟಂತೆ ಚಿತ್ರಕೂಟ ಶಾಲೆ.. ಅದರ ಸಿಬ್ಬಂದಿ  ಎಲ್ಲರಿಗೂ ವಂದನೆಗಳನ್ನು ಅರ್ಪಿಸಿ.. ಮಹೇಶ್ ಶುಭರಾತ್ರಿ ಹೇಳಿದರು.. 

ಮಹೇಶ್ ಅವರ ಪ್ರಾಣಪ್ರಿಯರಾದ ಶ್ರೀ ಸಿ ಅಶ್ವಥ್ ಮತ್ತು ಜಿ ಎಸ್ ಶಿವರುದ್ರಪ್ಪ ಅವರು ಮಹೇಶ್ ಕಂಠ ಸಿರಿಯಲ್ಲಿ ಕಾಣದ ಕಡಲಿಗೆ ಹಾಡನ್ನು ಭಾವ ಪೂರ್ಣವಾಗಿ ಹಾಡಿದಾಗ ಅವರು ಹರಸಿದ್ದು ನನ್ನ ಮನದ ಕಣ್ಣಿಗೆ ಕಂಡಿತು.. ಅದೇ ಮೊಬೈಲ್ ಕ್ಯಾಮೆರಾದಲ್ಲಿ ಸೆರೆಯಾಯಿತು.. ಎರಡು ಬೆಳಕಿನ ಕಿರಣವಾಗಿ ಅಶ್ವಥ್ ಸರ್ ಮತ್ತು ಜಿ ಎಸ್ ಎಸ್ ಅವರು ಹರಸಿದರು ಎಂದು ನನ್ನ ಮನಸ್ಸು ಹೇಳಿತು. 

ಎರಡು ಜೀವಾತ್ಮಗಳು ಮಹೇಶ್ ಅವರನ್ನು
ಹರಸಿದ್ದು ಬೆಳಕಿನ ಕಿರಣಗಳಾಗಿ 
ರೇವತಿ ತಕ್ಷಣ ತನ್ನ ಗೆಳತಿಗೆ ಕರೆ ಮಾಡಿ ತಾನು ಇರುವ ಜಾಗವನ್ನು ಹೇಳಿದಳು.. ಆಗಲೇ ಜನರು ಎದ್ದು ಹೊರಡುತ್ತಿದ್ದರಿಂದ... ಆ ಗಡಿಬಿಡಿಯಲ್ಲಿ ಕಳೆದು ಹೋಗಬಹುದೆಂದು.. ಆಕೆಯ ಗೆಳತೀ.. ರೇವತಿಗೆ ಎಲ್ಲಿ ಕೂತಿದ್ದಳೋ ಅಲ್ಲಿಯೇ ಇರುವಂತೆ ಹೇಳಿದಳು.. ತುಸು ಜೋರಾಗಿಯೇ.. ತಾನು ಕೂತಿದ್ದ ಜಾಗವನ್ನು ಮತ್ತೆ ಹೇಳಿ ಕೂತಳು.. 

ನಂದನ್ ಗೆ ಹೋಗುವ ಇಷ್ಟವಿರಲಿಲ್ಲ.. ಎಲ್ಲ ದೀಪಗಳನ್ನು ಹಾಕಿದ್ದರಿಂದ.. ಈ ತರುಣಿಯ ಮೊಗ ಸೊಗಸಾಗಿ ಕಾಣುತ್ತಿತ್ತು.. ಆ ಬೆಳಕು.. ಅವಳು ತೊಟ್ಟಿದ್ದ ಪಿಂಕ್ ಚೂಡಿದಾರ್... ಕತ್ತಿಗೆ ಹಾಕಿದ್ದ ತುಸು ದಪ್ಪನೆಯ ಸರ.. ಕಿವಿಯಲ್ಲಿ ದೊಡ್ಡ ರಿಂಗ್.. ಹಣೆಯಲ್ಲಿ ಪುಟ್ಟದಾದ ಕಪ್ಪನೆಯ ಸ್ಟಿಕ್ಕರ್..ಬ್ಲೂ ಟೂತ್ ಹ್ಯಾಂಡ್ಸ್ ಫ್ರೀ.. ಅವಳ ಕತ್ತಿನಲ್ಲಿ ತೂಗಾಡುತಿತ್ತು.. ಅವಳ ವ್ಯಾನಿಟಿ ಬ್ಯಾಗ್... ಅವಳಿಗೆ ಹೊಂದುವಂತೆ ಸರಿಯಾಗಿ ಅವಳನ್ನು ಸುತ್ತಿ ಬಳಸಿ ನೇತಾಡುತ್ತಿತ್ತು.. 

ರೇವತಿ ಕೂಡ ಅರಿಯದೆ ನಂದನ್ ಕಡೆ ತಿರುಗಿ ಮತ್ತೊಮ್ಮೆ ಕಿರುನಗೆಯನ್ನು ಬೀರಿದಳು.. 

ನಂದನ್ . "ಏನ್ಲಾ ಯಾವುದೋ ಹುಡುಗಿಯ ಪಕ್ಕದಲ್ಲಿ ನಿಂತಿದ್ದೀಯಾ... ಹುಡುಗಿ ಇದ್ದಾಗ ಪ್ರಪಂಚ ಎಲ್ಲಿ ಕಾಣುತ್ತೆ..  ಆ ದನಿಯನ್ನು ಕೇಳಿ ಕೋಳಿಯ ಹಾಗೆ ಆ ಕಡೆ ಈ ಕಡೆ ನೋಡಿದಾಗ ತನ್ನ ಗೆಳೆಯ ಸಮೀರ್ ಕಾಣಿಸಿದ.. ಅರೆ ಸಾಲೇ ಎಂದು ಬರಸೆಳೆದು ಅಪ್ಪಿಕೊಂಡ.. 

ರೇವತಿ ಮತ್ತೆ ತನ್ನ ಗೆಳತಿಗೆ ಕರೆ ಮಾಡಿದಳು.. ಅತ್ತ ಕಡೆಯಿಂದ ಬೇಗನೆ ಬರುವುದಾಗಿ ಸಂದೇಶ ಸಿಕ್ಕಿತು ಅನಿಸುತ್ತೆ.. "ಬೇಗನೆ ಬಾರೆ" ಎನ್ನುತ್ತಾ ತುಸು ಮುನಿಸಿನಿಂದಲೇ ಕೂಗಿದಳು.. 

ರೇವತಿಯ ಜಡೆಯನ್ನು ಮೆಲ್ಲಗೆ ಯಾರೋ ಎಳೆದಾಗ ಸರಕ್ಕನೆ ತಿರುಗಿದಾಗ ಕಂಡಿದ್ದು ಆಕೆಯ ಪ್ರಾಣದ ಗೆಳತೀ.. ಸಂಗೀತ... ಇಬ್ಬರೂ ಅಪ್ಪಿಕೊಂಡು.. ಪಕ್ಕಕ್ಕೆ ಕರೆದು.. "ಅಲ್ವೇ ನಾನು ನಿನಗೆ ಒಂದು ಪ್ರಪೋಸಲ್ ತೋರಿಸ್ತೀನಿ ಅಂದ್ರೆ.. ಅವನ ಜೊತೆಯಲ್ಲಿಯೇ ಕೂತಿದ್ದೆಯಲ್ಲೇ.. " ಎಂದಾಗ ರೇವತಿ ಬೊಗಸೆ ಕಣ್ಣಿನಿಂದ ಯಾರು ಎನ್ನುತ್ತಾ ನಂದನ್ ಕಡೆ ತಿರುಗಿ ಮತ್ತೆ ಸಂಗೀತಾಳ ಕಡೆಗೆ ಕಣ್ಣು ಬೀರಿದಳು.. 

ಸಂಗೀತ ಹೌದು ಎನ್ನುವಂತೆ ತಲೆಯಾಡಿಸಿದಳು.. ಮತ್ತೆ ಸಮೀರನ್ನು ನೋಡಿ.. ರೀ ನಿಮಗಾಗಿ ಇಡೀ ಶಾಲೆಯಲ್ಲಿ ಹುಡುಕಿ ಬಂದೆ.. ನೀವು ನೋಡಿದರೆ ಇಲ್ಲಿ ಇದ್ದೀರಾ.. "

"ಸಂಗೀತ ಇವನು ನನ್ನ ಗೆಳೆಯ .. ನಂದನ್ ಕಣೆ.. ಅದೇ ಹೇಳಿದ್ದೆ ಅಲ್ವ.. " ಎಂದು ಕಣ್ಣು ಹೊಡೆದ.. 

ಸಂಗೀತಳಿಗೆ ವಿಷಯ ಗೊತ್ತಿದ್ದರೂ ಪರಿಚಯವಿರಲಿಲ್ಲ.. ಮೊಗವರಳಿಸಿ . ಓಹೋ ಇಬ್ಬರೂ ಇಲ್ಲಿಯೇ ಇದ್ದಾರೆ.. ನಮ್ಮ ಕೆಲಸ ಸಲೀಸಾಯಿತು.. 

"ರೇವತಿ.. ಇವರೇ ನಂದನ್.. ನನ್ನ ಗಂಡನ ಜಿಗ್ರಿ ದೋಸ್ತ್..ನಾ ಭೇಟಿಯಾಗಿರಲಿಲ್ಲ ಇಂದು ನಿನ್ನಿಂದಾಗಿ ಇವರನ್ನು ಪರಿಚಯ ಆದ ಖುಷಿ ನನಗೆ..  .. ರೀ ನಂದನ್ ಇವಳೇ ರೇವತಿ ನನ್ನ ಖಾಸಾ ದೋಸ್ತ್.. "

ರೇವತಿ ಮೊಗವರಳಿತು.. ನಂದನ್ ಮೊಗದಲ್ಲಿ ನಗುವರಳಿತು.. 

ಅವರ ಪಕ್ಕದಲ್ಲಿ ಕಾರ್ಯಕ್ರಮವನ್ನು ಮೊಬೈಲ್ ನಲ್ಲಿ ರೆಕಾರ್ಡ್ ಮಾಡಿಕೊಂಡಿದ್ದ ಒಬ್ಬರು.. ಅದನ್ನು ಚೆಕ್ ಮಾಡೋದಕ್ಕೆ ಹಾಕಿದ್ದ ಹಾಡು "ಒಲುಮೆ ಪೂಜೆಗೆಂದೇ" ಹಾಡು ಬರುತಿತ್ತು.. 

ರೇವತಿ ಕಣ್ಣು ಹೊಡೆದಳು.. ನಂದನ್ ಕಣ್ಣಲಿಯೇ ಸಮ್ಮತಿಸಿದ.. !!!!

Tuesday, December 3, 2019

೩ಕೆ ತಂಡದ ದಶಕದ ಸಂಭ್ರಮ...!

ನಾನು ನನಗೆ ನನ್ನಿಂದಲೇ ಎನ್ನುವ ಜಗದಲ್ಲಿ 
ನಾವು ನಿಮಗೆ ನಿಮ್ಮಿಂದಲೇ ಎನ್ನುವ ತತ್ವ ಹಿಡಿದು
ದಶಕದ ಸಂಭ್ರಮ ಆಚರಿಸುತ್ತಿರುವ 
ಸುಮಧುರ ಮನದ ೩ಕೆ ತಂಡಕ್ಕೆ ಅಭಿನಂದನೆಗಳು. 

ಶಿವಭಕ್ತನಾದ ರಾವಣ ದಶಕಂಠನಾದದ್ದು 
ತನ್ನ ಹತ್ತಾರು ವಿಧದ ಬುದ್ಧಿಮತ್ತೆಯಿಂದ 
೩ಕೆ ತಂಡವು ಹತ್ತಾರು ಸುಂದರಮನಸ್ಸಿನ ತಾಣವಾಗಿ 
ದಶಕದ ಸಂಭ್ರಮದಲ್ಲಿ ಮೀಯುತ್ತಿದೆ.. 

ಶುಭವಾಗಲಿ!!!

ಚಿತ್ರಕೃಪೆ : ೩ಕೆ ತಂಡ 

(೩ಕೆ ಕನ್ನಡ ಕವಿತೆ ಕಥನ ತಂಡವು ಅನೇಕ ವರ್ಷಗಳಿಂದ ಸಮಾಜ ಮುಖಿ ಕೆಲಸ ಮಾಡುತ್ತಲೇ.. ತನಗೆ ಅರಿವಿಲ್ಲದೆ ಒಂದು ಹೆಮ್ಮರವಾಗಿ ಬೆಳೆದಿದೆ.. ಈ ತಂಡದಲ್ಲಿರುವ ಪ್ರತಿಯೊಬ್ಬರೂ ರಾವಣರೇ.. ಅಯ್ಯೋ ಗಾಬರಿಯಾಗಬೇಡಿ.. ರಾವಣ ಅಂದ ಮಾತ್ರಕ್ಕೆ ಸೀತಾಪಹರಣ ಎನ್ನುವ ದೃಶ್ಯಕ್ಕೆ ಹೋಗಬೇಡಿ.. ರುದ್ರವೀಣೆ, ಕೈಲಾಸವನ್ನೇ ಭುಜದ ಮೇಲೆ ಹೊತ್ತಿದ್ದು,  ಶಿವನನ್ನು ಒಲಿಸಿ ಆತ್ಮ ಲಿಂಗ.ವನ್ನು ಹೊತ್ತು ತಂದದ್ದು, ಗಣಪನ ಕಾರ್ಯ ಸಾಧನೆಯ ಫಲದಿಂದ ಭೂಸ್ಪರ್ಶವಾದ ಆತ್ಮಲಿಂಗವನ್ನು ಕಿತ್ತು ಐದು ಪುಣ್ಯ ಕ್ಷೇತ್ರಗಳಾಗಿದ್ದು ..  ಶ್ರೀ ರಾಮನಿಂದ ಸೋಲುವೆ ಎಂಬ ವಿಷಯ ಗೊತ್ತಿದ್ದರೂ.. ರಣವೀಳ್ಯ ಸ್ವೀಕಾರ ಮಾಡಿ.. ಶ್ರೀ ರಾಮನಿಗೆ ಕಂಕಣ ಕಟ್ಟುವ ಪರಾಕ್ರಮಿ.. ತನ್ನ ಅದ್ಭುತ ಜ್ಞಾನ ಸಂಪತ್ತಿನಿಂದ ದಶಕಂಠನಾದ ರಾವಣನ ಹಾಗೆ ಇಲ್ಲಿ ಹತ್ತಾರು ಅದ್ಭುತ ಮನಸ್ಸುಗಳು ಸಾಧಿಸುತ್ತಿರುವ ಯಶಸ್ಸು ಸದಾ ಇರಲಿ ಎಂದು ಹಾರೈಸುತ್ತ..ಈ ತಂಡದ ಸಮಾಜ ಮುಖಿ ಸೇವೆಗೆ ಅಭಿನಂದನೆಗಳು ಸಲ್ಲಿಸುತ್ತಾ.. ದಶಮಾನೋತ್ಸವ ಬೆಳ್ಳಿ ಸಂಭ್ರಮ ಕಾಣಲಿ ಎಂದು ಆಶಿಸುತ್ತಾ ಈ ಪುಟ್ಟ ಲೇಖನವನ್ನು ತಂಡದ ಮಡಿಲಿಗೆ ಹಾಕುತ್ತಿದ್ದೇನೆ.. )

ಚಿತ್ರಕೃಪೆ : ೩ಕೆ ತಂಡ 

ಸ್ಪರ್ಧೆ ಎಂದು ಪುಟ್ಟ ಚಿತ್ರ ಮೊಬೈಲಿಗೆ ಬಂದಾಗ.. ಆಯ್ಕೆ ಮಾಡಿಕೊಂಡದ್ದು ಸಣ್ಣ ಹಗ್ಗ ಕುತ್ತಿಗೆಗೆ ಕಟ್ಟಿಸಿಕೊಂಡಿದ್ದ ಒಂದು ಮಂಗಾ... ಮಾನವರ ಗುಂಪಿನಲ್ಲಿ ವಿಚಿತ್ರ ಭಂಗಿಯಲ್ಲಿ ನೋಡುತ್ತಾ ಕೂತಿದ್ದು.ಮನಸೆಳೆದಿತ್ತು.. 

ನನ್ನ ಅದ್ಭುತ ಗೆಳತೀ ನಿವೇದಿತಾ ಚಿರಂತನ್ ಅವರನ್ನು ಯಾವ ಚಿತ್ರಕ್ಕೆ ಬರೆಯಲಿ.. ಏನು ಬರೆಯಲಿ ಎಂದಾಗ.. ಅವರಿಗೆ ನಾ ಕೊಟ್ಟ ಆಯ್ಕೆ.. ಥ್ರಿಲ್ಲರ್, ಸಸ್ಪೆನ್ಸ್, ಲವ್ ಸ್ಟೋರಿ, ಹಾರರ್, ಸ್ಪಿರಿಚುಯಲ್, ಜನರಲ್ ಟಾಕ್.. ಅವರು ಸೂಚಿಸಿದ್ದು ಥ್ರಿಲ್ಲರ್ / ಸ್ಪಿರಿಚುಯಲ್... 

ಸರಿ ಮನಸ್ಸಿಗೆ ಬಂದದ್ದನ್ನು ಹಾಗೆ ಬರೆದು ಮುಗಿಸಿದೆ.. ಅದರ ಫಲವೇ ಈ ಲೇಖನದಲ್ಲಿ ನೀಲಿ ಅಕ್ಷಗಳಲ್ಲಿ ಕಾಣ ಸಿಗುವ ಅಕ್ಷರಗಳ ಮಾಲಿಕೆ.. ೩ಕೆ ಕಥಾ ಸ್ಪರ್ಧೆಗೆ ಬರೆದ ಐನೂರು ಪದಗಳಿಗೆ ಮೀರದ ಒಂದು ಪುಟ್ಟ ಕಥೆ.. ಅದನ್ನು ತುಸು ಹಿಗ್ಗಿಸಿ ೩ಕೆ ಸಮಾರಂಭವು ನನ್ನ ಕಣ್ಣಿಗೆ ಕಾಣಿಸಿದಂತೆ ಪದಗಲ್ಲಿ ಕಟ್ಟಿಕೊಡಲು ಪ್ರಯತ್ನ ಪಟ್ಟಿದ್ದೇನೆ.. ಇದು ಇಷ್ಟವಾದರೆ ಆ ಗೆಲುವು ನಿಮ್ದೇ.. ಇಷ್ಟವಾಗದಿದ್ದರೆ.. ಆ ಭಗವಂತ ಹೇಳಿದ ಕತೆಯನ್ನುಸರಿಯಾಗಿ ಕೇಳಿಸಿಕೊಳ್ಳದೆ ಬರೆದ ತಪ್ಪು ನನ್ನದು.. 

ಓದಿ ಸಂಭ್ರಮಿಸಿ.. ವಿರಮಿಸಿ.. 

*****
ಅಂದು ಹೋಳಿ.. ಎಲ್ಲರ ಮೈ ಮನಸ್ಸು ರಂಗು ರಂಗಾಗಿತ್ತು.... 

ಜೀಪಿಗೆ ಒರಗಿ ನಿಂತಿದ್ದ ಶ್ರೀಕಾಂತ್ ಯೋಚಿಸಿ ಯೋಚಿಸಿ ತಲೆಕೆಟ್ಟು.. ಕಿಂಗ್ ಸಿಗರೇಟ್ ಹಚ್ಚಿದ್ದ.. ಆ ಬಣ್ಣಗಳ ಹೊಗೆಯ ಜೊತೆ.. ಸಿಗರೇಟ್ ಹೊಗೆ ಕೂಡ ರಂಗಾಗಿದೆಯೋ ಅನ್ನುವಷ್ಟು ರಂಗಾಗಿತ್ತು 
ವಾತಾವರಣ.. 

ಎರಡು ದಿನಗಳ ಹಿಂದೆಯಷ್ಟೇ ನೆಡೆದಿದ್ದ ಒಂದು ಕೊಲೆಯ ತನಿಖೆಗೆ ರೆಂಬೆ ಕೊಂಬೆಗಳು ಕಾಣದೆ ನಿಂತಲ್ಲಿಯೇ ಗಟ್ಟಿಯಾಗಿ ನಿಂತಿತ್ತು.. ದೇವಸ್ಥಾನದ ಮೆಟ್ಟಿಲುಗಳನ್ನು ಹತ್ತಿಳಿಯುತಿದ್ದ ಗುಂಪನ್ನೇ ನೋಡುತ್ತಾ ನಿಂತಿದ್ದ.. 

ಬಣ್ಣ ಬಣ್ಣಗಳ ಸವಾರಿ ಮಾಡಿಕೊಂಡು ನೂರಾರು ಹುಡುಗ ಹುಡುಗಿಯರು ಓಡಾಡುತ್ತಿದ್ದರು.. 
ಜೀನ್ಸ್, ಹರಿದ ಜೀನ್ಸ್, ಚಿಕ್ಕ ಚಣ್ಣ.. ಮೊಳಕಾಲುದ್ದದ ಪ್ಯಾಂಟ್.. ಹೀಗೆ ಹತ್ತಾರು ಬಗೆ ಬಗೆಯ ದಿರಸುಕಾಣುತಿತ್ತು. 

ಕೊಲೆಯ ರಿಪೋರ್ಟ್ ತರಲು ಅವನ ಆಪ್ತ ಪೇದೆ.. ಶಂಕರ ಹೋಗಿದ್ದ..  ರಿಪೋರ್ಟ್ ಮಧ್ಯ 
ದಾರಿಯಲ್ಲಿ ತೆಗೆದುಕೊಳ್ಳಲು.. ಶಂಕರನ ಊರಿನ ದಾರಿಯಲ್ಲಿ ದುರ್ಗಿಗುಡಿಯ ಹತ್ತಿರ ಕಾಯುತ್ತಿದ್ದ .. ಶಂಕರ ರಜದ ಮೇಲೆ ಊರಿಗೆ ಹೋಗಲು ಅನುಮತಿ ಪಡೆದಿದ್ದರಿಂದ..ಅವ ಊರಿಗೆ  ಹೋಗುವ ದಾರಿಯಲ್ಲಿಯೇ ಬಸ್ಸಿನಲ್ಲಿ ಶಂಕರನ ಆಗಮನದ ನಿರೀಕ್ಷೆಯಲ್ಲಿ  ಕಾಯುತ್ತಿದ್ದ.. ಆಗಲೇ ನಾಲ್ಕು ಸಿಗರೇಟ್ ಖಾಲಿಯಾಗಿದ್ದವು, ತಲೆಗೂದಲು ಹುಲ್ಲಗಾವಲಾಗಿತ್ತು.. 

ಸುಮ್ಮನೆ ದೇವಸ್ಥಾನದ ಮೆಟ್ಟಿಲು ನೋಡುತ್ತಿದ್ದವನಿಗೆ., ಕುತ್ತಿಗೆಗೆ ಬೆಲ್ಟ್ ಕಟ್ಟಿಕೊಂಡಿದ್ದ ಕೋತಿ ಕಾಣಿಸಿತು. ಈ ಹುಡುಗ ಹುಡುಗಿಯರ ಬಣ್ಣದ ಓಕುಳಿಯಾಟದಲ್ಲಿ,ಕೋತಿಯ ಮೊಗವೂ ರಂಗಾಗಿತ್ತು. ಸುಮ್ಮನೆ ಕೂತು ಎಲ್ಲರನ್ನೂ ಗಮನಿಸುತ್ತಿತ್ತು. ಅಚಾನಕ್ ದೃಷ್ಟಿ ಹೊರಳಿಸಿ  ಬಳಿಯೇ ಬಿದ್ದಿದ್ದ ಒಂದು ಕಾಗದದ ಪೊಟ್ಟಣವನ್ನು ನೋಡಿ .. ಅದನ್ನು ಬಿಡಿಸಲು ಹರಸಾಹಸ ಮಾಡಲು ಶುರುಮಾಡಿತು .. ಏನೋ ಕೆಟ್ಟ ಕುತೂಹಲ ಅದಕ್ಕೆ.. 

ಯಾಕೋ ಅತ್ತ ಕಡೆ ಗಮನ ಹರಿಸಿದ ಶ್ರೀಕಾಂತನಿಗೆ ಏನೋ ಹೊಳೆಯಿತು.. ಅದನ್ನೇ ದಿಟ್ಟೆಸುತ್ತ ಇನ್ನೊಂದು ಸಿಗರೇಟ್ ಹಚ್ಚಿದ.. 

ಕೋತಿಗೆ ಆ ಪೊಟ್ಟಣ ಏನೋ ವಿಶೇಷ ಅನಿಸಿತು . ಬಿಡಿಸುತ್ತ ಹೋದಾಗ,  ಅದರ ಕೈಗೆ ರಂಗು ಹತ್ತಿತು.. ಶ್ರೀಕಾಂತನ ತಲೆಯಲ್ಲಿ ಸಾವಿರ ವಾಟ್ಸ್ ದೀಪ ಹತ್ತಿಕೊಂಡಿತು. ಓಡಿ ಹೋಗಿ, ಕೋತಿಯ ಬಳಿಯಿಂದ ಆ ಪೊಟ್ಟಣ ಕೈಗೆ ತೆಗೆದುಕೊಂಡ.. 

ಕಣ್ಣುಗಳು ಅರಳಿತು. ಗೆದ್ದೇ ಎಂದು ತುಸು ಜೋರಾಗಿಯೇ ಕೂಗಿದ.. ಅಷ್ಟು ಹೊತ್ತಿಗೆ.. ಶಂಕರ ರಿಪೋರ್ಟ್ ತಂದಿದ್ದ ಬಸ್ಸು ಜೋರಾಗಿ ಹಾರ್ನ್ ಮಾಡುತ್ತಾ ಬಂತು.. 

"ಸಾಹೇಬ್ರೆ ಶಂಕರಪ್ಪ ಅವರು, ನಿಮ್ಮನ್ನು ಕಾಣೋಕೆ ಬರ್ತಾ ಇದ್ದಾರೆ..ತುಸು ಬೇಗ ಮಾಡಿ  ಹೊತ್ತಾಗುತ್ತೆ" ಎಂದ ಡ್ರೈವರ್ ಮಾಮ.  

"ಸರಿ ಕಣಣ್ಣ" ಎನ್ನುತ್ತಾ ಓಡಿ ಬಂದು ಆ ರಿಪೋರ್ಟ್ ತೆಗೆದುಕೊಂಡ..ಅನುಮಾನ ಪಟ್ಟಿದ್ದು ಸರಿ ಇದೆ ಎನಿಸಿತು.  ಶಂಕರನಿಗೆ "ಯಾಕೆ ಶಂಕ್ರಪ್ಪ.. ಎರಡು ಘಂಟೆ ತಡವಾಯಿತೇಕೆ.. ನಿಮ್ಮನ್ನು ಕಾಯ್ತಾ ಕಾಯ್ತಾ .. ನೋಡಿ ಒಂದು ಫುಲ್ ಪ್ಯಾಕ್ ಮಟಾಷ್.. "

"ಸಾಹೇಬ್ರೆ ಏನು ಹೇಳಲಿ.. ನಿಮ್ಮಿಂದ ಲೆಟರ್ ತಗಂಡು.. ಬಸ್ ಸ್ಥಾಪಿನಾಗೆ ನಿಂತಿದ್ದೆ.. ಒಂದು ೩ಕೆ .. ಕನ್ನಡ ಕಥನ ಕವನ ಎಂದು ಬೊಲ್ದು ಹಾಕ್ಕಂಡು.. ದಶಮಾನೋತ್ಸವದ ಸಂಭ್ರಮ ಅಂತ ಮೈಕಿನಲ್ಲಿ ಕೂಗುತ್ತಾ ಮಹೇಶ್ ಮೂರ್ತಿಗಳು ಹೋಗುತ್ತಿದ್ದರು.. ಬಸ್ಸಿನಲ್ಲಿ ಉಷಾ ಉಮೇಶ್ ಪ್ರಾರ್ಥನೆ .ಹಾಡುತ್ತಿದ್ದರು.. ನಂತರ ಸ್ವಲ್ಪ ಹೊತ್ತಿನಲ್ಲಿಯೇ.. ಎಲ್ಲರೂ ಬಸ್ಸಿಂದ ಇಳಿದು.. ಅಲ್ಲಿಯೇ ದೇವಸ್ಥಾನದ ಬಳಿ ಬಂದು.. ಮಂಜುನಾಥರು.. ಧರ್ಮೇಂದ್ರ ಸಾರು.. ನಾಯ್ಡುಗಳು, ರೂಪ ಮೇಡಂ.. ಮತ್ತು ದಿವಾಕರ್ ಸಾಹೇಬ್ರು.. ಎಲ್ಲರೂ ದೇವರಿಗೆ ನಮಸ್ಕರಿಸಿ.. ನಮ್ಮ ನಾಡ  ಗೀತೆನಾ ಹಾಡಿಯೇ ಬಿಡೊದ.. ಗೌರವ ಕೊಡ್ಬೇಕಲ್ಲ ಸಾರು.. ಅಂಗಾಗಿ ಅಂಗೇ ನಿಂತು.. ನಾನು ಒಸಿ ಹಾಡಿಯೇ ಬಿಟ್ಟೆ.. 
ಆಮ್ಯಾಕೆ ಕನ್ನಡಾಂಬೆ ಮೂರ್ತಿಯ ಮುಂದೆ ದೀಪ ಬೆಳಗಿದರು.. .. ಬಸ್ಸಿನ ಜೊತೆ ಬಂದಿದ್ದ ಎಲ್ಲರೂ ಜೋರಾಗಿ ಚಪ್ಪಾಳೆ ತಟ್ಟಿದ್ದೆ ತಟ್ಟಿದ್ದು..  

ಯಾರೀ ದಾಸ ಸಾಹಿತ್ಯದ ಊರಿಗೆ ಬರ್ತೀರಾ.. ಅಂಗೇ ಓಡಾಡಿಕಂಡು ಬರುಮ.. ಒಂದು ಐದು ನೂರು ವರ್ಸಾ ಇಂದಕ್ಕೆ ಒಗ್ಬಹುದು.. ಮತ್ತೆ ಇಲ್ಲಿಗೆ ತಂದು ಬಿಡ್ತೀವಿ ಅಂತ.. ಮಹೇಶ್ ಮೂರ್ತಿಗಳು ಹೇಳಿದಾಗ.. ಅಯ್ಯೋ ಈ ಕೊಲೆ, ಕಳ್ತನ.. ಆ ಕೇಸು ಈ ಕೇಸು ಅಂತ ಓಡಾಡಿ ಸಾಕಾಗಿತ್ತು.. ಸುಮ್ನೆ ಅಂಗೇ ಬಸ್ಸು ಹತ್ತಿಯೇ ಬಿಟ್ಟೆ.. 

ಚಿತ್ರಕೃಪೆ : ೩ಕೆ ತಂಡ 

ಮಂಜುನಾಥ ಮೇಷ್ಟ್ರು ... ಏನ್ ಮಾತಾಡ್ತಾರಪ್ಪ.. ಅವರ ಬಾಸೇ.. ಅದ್ನ ಏಳೋ ವಿಧಾನ... ಎಂಥವ್ರಿಗೂ ಅರ್ಥ ಆಗೇ ಬಿಡ್ಬೇಕು.. ಆ ಪಾಟಿ ಸರಳ.. ನಗು ನಗುತ್ತಲೇ ಮಾತಾಡುವ ಅವರ ಸೈಲಿ ಬಾಳ ಇಷ್ಟ ಆಯ್ತು ಸಾರು.. ಪುರಂದರ ದಾಸ್ರು, ಕನಕ ದಾಸ್ರು, ಹರಿದಾಸರು, ಜಗನ್ನಾಥ ದಾಸರು.. ವ್ಯಾಸ ತೀರ್ಥರು.. ಅವ್ರು ಇವರು ಅಂತ ಐನೂರು ವರ್ಷದ ಇಂದಕ್ಕೆ ಕರ್ಕೊಂಡು ಓಗಿಯೇ ಬಿಟ್ರು.. ಅವರ ಮಾತಿನ ವೈಖರಿಗೆ ಅಲ್ಲಿಯೇ ಇದ್ದು ಬಿಡುಮ ಅನ್ನಿಸ್ತು.. ಆದರೇನು ಮಾಡೋದು.. ಈ ರೆಪೋಲ್ಟ್ ನಂತಾವ ಇತ್ತು ಅಲ್ಲುವ್ರ ಅಂಗಾಗಿ ಒಸಿ ಕಷ್ಟ ಪಟ್ಟೆ ಒರಕ್ಕೆ ಬಂದೆ ಬಿಟ್ಟೆ.. ಸುಮಾರು ಹೊತ್ತು ಅವರ ಮಾತುಗಳು ಅಂಗೂ ಕೇಳಿಸ್ತಾನೆ ಇತ್ತು.. ಎಲ್ಲರೂ ಜೋರಾಗಿ ಚಪ್ಪಾಳೆ ತಟ್ಟಿದಾಗ ನಾನೂ ಅಂಗೇ ಚಪ್ಪಾಳೆ ತಟ್ಟಿಯೇ ಬಿಟ್ಟೆ.. 

ಮಹೇಶ್ ಮೂರ್ತಿಗಳು ಮತ್ತೆ ಬಂದು.. "ನೋಡ್ರಪ್ಪಾ ಐನೂರು ವರ್ಸಾ ಇಂದಕ್ಕೆ ಹೋಗಿದ್ವಲ್ಲ.. ಈಗ ತುಸು ನೂರು ವರ್ಷ ಇಂದಕ್ಕೆ ಹೋಗುಮಾ.. ಎಲ್ಲರೂ ಸಿದ್ವಾ.. ?

ಚಿತ್ರಕೃಪೆ : ೩ಕೆ ತಂಡ 

ಓ ಅಂತ ಎಲ್ಲರೂ ಕೂಗಿದ್ವಿ.. . ಅದರಲ್ಲಿ ನನ್ನ ಧ್ವನಿಯೇ ತುಸು ಜೋರಾಗಿಯೇ ಇತ್ತು.. ದಿವಾಕರ್ ಸರ್.. ತಮ್ಮ ಸಣ್ಣ ಕತೆಗಳ ಬಗ್ಗೆ ಒಂದು ಪುಟ್ಟ ಮಾತುಗಳನ್ನು ಬಿಚ್ಚಿಡುತ್ತಾ.. ಅವರ ಅನುಭವಗಳನ್ನು, ಓದಿನ ಹಸಿವನ್ನು ತಣಿಸುವ ಅನೇಕ ಪುಸ್ತಕಗಳ ಬಗ್ಗೆ, ಲೇಖಕರ ಬಗ್ಗೆ, ಸಣ್ಣ ಕತೆಗಳು ಉಗಮವಾದ ಬಗೆ.. ಕರುನಾಡಿನಲ್ಲಿ ಏನೇ ಹೊಸದು ಮಾಡಿದರೂ .. ಅದಕ್ಕೊಂದು ಆಯಾಮ ಇದ್ದೆ ಇರುತ್ತೆ.. ಹತ್ತೊಂಬತ್ತನೆಯ ಶತಮಾನದ ಆರಂಭದಲ್ಲಿ ಜನನವಾದ ಈ ಕಾದಂಬರಿ ಪರ್ವ.. ಸಣ್ಣ ಕತೆಗಳು ಆವರಿಸಿಕೊಂಡದ್ದು.. ಹೀಗೆ ನಿರರ್ಗಳವಾಗಿ ಮಾತಾಡಿದ ದಿವಾಕರ್ ಸರ್.. ಸಣ್ಣ ಕತೆಗಳ ಅದ್ಭುತಗಳ ಜೊತೆಗೆ ನಮ್ಮನ್ನು ಕರೆದೊಯ್ದಿದ್ದರು.. ಆಂಗ್ಲ ಸಾಯಿತ್ಯ.. ಅಲ್ಲಿನ ಲೇಖಕರ ಬಗ್ಗೆ ಒಸಿ ಮಾತು.. ಇಲ್ಲಿನ ಲೇಖಕರ ಬಗೆ ಮಾತು ಇಂಗೆ ಆ ಸಾರು ಮಾತಾಡಿದ ರೀತಿಗೆ ನಾನು ಬಂದ ಇಸ್ಯಾನೆ ಮರ್ತು ಬಿಟ್ಟಿದ್ದೆ.. ಆಗ ನನ್ನ ಕಾರ್ಯ ನೆನೆಪಿಸಿದ್ದು.. ನೂತನ್ ಸಾಹೇಬ್ರು.. ಅವತ್ತು ಏನೋ ಸ್ಪರ್ಧೆ ಆಂತ ಮಾಡಿದ್ರಂತೆ.. ಸಣ್ಣ ಕತೆಗೆಳು ಅಂತ.. ಸ್ಪರ್ಧೆ ಮಾಡಿ.. ನಾಲ್ಕು ಮಂದಿಗೆ ಬಹುಮಾನ ಕೊಡುವ ಕಾರ್ಯಕ್ರಮ ಅಂತ ಯೋಳಿದ್ದೇ... ಅವರು ಬರೆದ ಕತೆಗಳ ಬಗ್ಗೆ ತುಸು ಮಾತಾಡಿ.. ಅವರಿಗೆ ಪ್ರಶಸ್ತಿ  ಕೊಟ್ಟು ಗೌರವಿಸಿದರು ಸಾರು.. 

ಅರುಣ್ ಶೃಂಗೇರಿ ಈ ಕಾರ್ಯಕ್ರಮದ ಪ್ರಶಸ್ತಿಗೆ ಪಾತ್ರರಾದ ಧರ್ಮೇಂದ್ರ ಸಾರ್ ಅವರ ಕಿರುಪರಿಚಯ, ಅವರ ಸಾಧನೆ  ಇದರ ಬಗ್ಗೆ ಫಲಕದಲ್ಲಿದ್ದುದ್ದನ್ನು ಓದಿದರೆ.. ಈ ೩ಕೆ ತಂಡದ ಮತ್ತಿತರರು ಸೇರಿ.. ಧರ್ಮೇಂದ್ರ ಅವರಿಗೆ ಪೇಟ ತೊಡಿಸಿ, ಶಾಲು ಹೊದ್ದಿಸಿ, ಹಾರ ಹಾಕಿ.. ಫಲಕ ಕೊಟ್ಟು.. ಸನ್ಮಾನಿಸಿದರು.. 

ಚಿತ್ರಕೃಪೆ : ೩ಕೆ ತಂಡ 
ಧರ್ಮೇಂದ್ರ ಸರ್ ಅವರು ಮೈಸೂರಿನ ಇತಿಹಾಸ ಹೇಳುತ್ತಲೇ.. ತಾವು ನಿಂತಿದ್ದ ಜಾಗದ ಬಗ್ಗೆಯೂ ಒಸಿ ಮಾಹಿತಿ ಕೊಟ್ರು.. ನನಗೆ ಆಶ್ಚರ್ಯ.. ನಾವು ಯಾಪಾಟಿ ಕೇಸುಗಳ ಬಗ್ಗೆ ಬರ್ದು ಬಿಸಾಕಿರ್ತೀವಿ.. ಆದರೆ ಈ ರೀತಿಯ ಮಾಹಿತಿ ಕಣಜವನ್ನು ನಾನೊಂತು ಓದಿರಲಿಲ್ಲ.. ಅಂಗೇ ಅವರ ಜೊತೆ ಇತಿಹಾಸದೊಳಗೆ ಓಡಾಡಿ ಬಂದೆ ಅನ್ನಿಸ್ತು. ಮಾತಾಡಿದ್ದು ಚೂರೇ ಆದರೂ ಬ್ರಹ್ಮಾಂಡವನ್ನೇ ತನ್ನ ಬಾಯಲ್ಲಿ ತೋರಿಸಿದ ಕೃಷ್ಣನ ಹಾಗೆ.. ಚುಟುಕು ಹೊತ್ತಿನಲ್ಲಿಯೇ ಇತಿಹಾಸದ ಬ್ರಹ್ಮಾಂಡವನ್ನೇ ನಮ್ಮ ಮುಂದೆ ತೆರೆದಿಟ್ಟರು.. 

ಕಡೆಯಲ್ಲಿ ಎಲ್ಲರೂ ಒಂದಷ್ಟು ಫೋಟೋ ತೆಗಿಸಿಕೊಂಡರು.. ಸುಮಧುರ ತಂಡದ ಫೋಟೋಗಳು ಆಯ್ತು.. ಪುಷ್ಕಳವಾಗಿ ಪೊಂಗಲ್, ಆಂಬೊಡೆ.. ಸಿಹಿ.. ಚಟ್ನಿ .. ಕಾಫೀ, ಟೀ.. ಎಲ್ಲವೂ ಹೊಟ್ಟೆಯೊಳಗೆ ಗುಳುಂ ಸ್ವಾಹಾ ಆಯ್ತು.. ಹೊಟ್ಟೆ ಭಾರವಾಗಿತ್ತು.. ಅಂಗೇ.. ಆ ಬಸ್ಸಿನಿಂದ ಇಳಿದು ಇನ್ನೊಂದು ಬಸ್ಸಿನೊಳಗೆ ಬಂದು ಕೂತೆ.. ಡ್ರೈವರ್ ಮಾಮನಿಗೆ .. ನನ್ನ ಸ್ಟಾಪ್ ಬಂದಾಗ ಒಸಿ ಹೇಳಪ್ಪ ಅಂದಾಗ.. "ಶಂಕರಪ್ಪ ನೀವು ಆರಾಮಾಗಿ ಮಲಗಿ.. ನಾ ಎಬ್ಬಿಸುತ್ತೇನೆ" ಅಂತ ಸಿಗರೇಟ್ ಹಚ್ಚಿಕೊಂಡು ಬಸ್ಸಿನಿಂದ ಇಳಿದು ಹೋಗಿದ್ದ.. ನನಗೆ ಅಂಗೇ ನಿದ್ದೆ.. 

"ಶಂಕರಪ್ಪ.. ನಿಮ್ಮ ಸಾಹೇಬ್ರು ಕಾಯ್ತಾ ಅವ್ರೆ.. ಬೇಗ ಇಳೀರಿ.. ಬೇಗ ಹೋಗಬೇಕು.. ನಿಮ್ಮೋರು ತಲುಪಬೇಕೋ ಇಲ್ವೋ.. ಶಂಕರಪ್ಪ.. ಶಂಕರಪ್ಪ.. ಈ ಆಸಾಮಿ ನಿದ್ದೆಗೊಮ್ಮೆ ನಿತ್ಯ ಮರಣ ಎನ್ನುವ ಬೇಂದ್ರೆ ಅಜ್ಜನ ಕವಿತೆ ತರಹ.. ಒಳ್ಳೆ ಆಸಾಮಿ ಎಂದು ಲಘು ನಗೆಯಿಂದ ಮತ್ತ್ತೆ ನಗುತ್ತಾ ಜೋರಾಗಿ ಶಂಕರಪ್ಪನನ್ನು ಅಲ್ಲಾಡಿಸಿದಾಗ.. ಆ ಬಸ್ಸಿನಲ್ಲಿ "ಜೀವನ ಟಾನಿಕ್ ಬಾಟ್ಲಿ ಕುಡಿಯೋ ಮುಂಚೆ ಅಲ್ಲಾಡ್ಸು" ಹಾಡು ಜೋರಾಗಿ ಬರ್ತಿತ್ತು.. 

ಕಣ್ಣುಜ್ಜಿಕೊಂಡು.. ಶೇಖರಪ್ಪ ಬರ್ತಾ ಇದ್ದದ್ದನ್ನು ನೋಡಿಯೂ ನೋಡದಂತಿದ್ದ ಸಾಹೇಬ್ರನ್ನು ಕಂಡು.. ಛೆ ನಿದ್ದೆ ಮಾಡಬಾರದಿತ್ತು ಎನ್ನುತ್ತಲೇ  ಸಾಹೇಬ್ರ ಹತ್ತಿರ ನಿಂತು ಪೂರ್ಣ ಕತೆಯನ್ನು ಹೇಳಿ.. ಶಂಕರಪ್ಪ ಲಗುಬಗೆಯಿಂದ ಹಾರನ್ ಜೊತೆಗೆ ಜೋರಾಗಿಯೇ ಮಾತಾಡುತ್ತಾ ಬಸ್ಸಿನೊಳಗೆ ಹೋದ.. 

ಶಂಕರಪ್ಪನಿಗೆ ಊರಿಗೆ ಹೋಗಲು ಅನುಮತಿ ನೀಡಿ, ಜೀಪು ತೆಗೆದುಕೊಂಡು ಸೀದಾ ಅದೇ ಊರಿನಲ್ಲಿದ್ದ ಪುಂಡು ಪೋಕರಿಯಾಗಿದ್ದ ತಿಮ್ಮನ ಮನೆಯ ಮುಂದೆ ಜೀಪು ನಿಲ್ಲಿಸಿದ.. 

ಜೀಪು ಕಂಡೊಡನೆ ಜಗಲಿಯ ಮೇಲೆ ಕೂತು.. ಗೆಳೆಯರೊಡನೆ ಇಸ್ಪೀಟು ಆಡುತ್ತಿದ್ದ ತಿಮ್ಮ.. ಮೆಲ್ಲನೆ ಬೆವರಲು ಶುರು ಮಾಡಿದ.. ಆದರೂ ತೋರಿಸಿಕೊಳ್ಳದೆ ಸುಮ್ಮನೆ ಆಡುತ್ತಾ ಕೂತ.. 

ಶ್ರೀಕಾಂತ  ತನ್ನ ಲಾಠಿಯನ್ನು ಜಗುಲಿಗೆ ಕುಟ್ಟಿ.. "ಲೋ ತಿಮ್ಮ ನೀನೆ ಬರ್ತೀಯೋ.. ಇಲ್ಲಾ ಏರೋಪ್ಲೇನ್ ಹತ್ತಿಸಬೇಕಾ"

ಕೈಮೀರಿದೆ ಎಂದು ಗೊತ್ತಾದ ತಿಮ್ಮ, ಇನ್ನು ಕೊಸರಾಡಿದರೆ ಬಯಲಲ್ಲಿ ಬೆತ್ತಲಾದಂತೆ ಮನದೊಳಗೆ ಅಂದುಕೊಂಡು  ಏನೂ ಆಗೇ ಇಲ್ಲ ಎನ್ನುವಂತೆ.. ತಲೆಗೂದಲ ಕ್ರಾಪ್ ಸರಿಮಾಡಿಕೊಂಡು.. ದೇಶಾವರಿ ನಗೆ ನಗುತ್ತಾ.. "ನಡೀರಿ ಇನ್ಸ್ಪೆಕ್ಟರ್ " ಎನ್ನುತ್ತಾ ಅವನ ಜೀಪು ಹತ್ತಿ ಮೆಲ್ಲಗೆ ಶ್ರೀಕಾಂತನ ಕಿವಿಯಲ್ಲಿ "ಸರ್ ಬೇಡಿ ಹಾಕೋದು ಎಲ್ಲಾ ಬೇಡ.. ನೀವು ಹೇಳಿದಂತೆ ಕೇಳುತ್ತೇನೆ”

ಠಾಣೆಯಲ್ಲಿ ಒಂದು ಮೂಲೆಯಲ್ಲಿ ನಿಂತ ತಿಮ್ಮ, ಶ್ರೀಕಾಂತನ ದನಿಗೆ ತಿರುಗಿದ  "ಅಲ್ಲ ಲೇ.. ಅವನನ್ನು ಕೊಲೆ ಮಾಡುವಂತದ್ದು ಏನಾಗಿತ್ತೋ.. "

"ಸರ್ ಕಾರಣ ಇರಲಿ, ಹೇಳುತ್ತೇನೆ, ಮೊದಲು ಹೇಳಿ, ನಾನೇ ಅಂತ ಹೇಗೆ ಗೊತ್ತಾಯ್ತು?"

"ನೋಡು ತಿಮ್ಮ. ಪ್ರಪಂಚದಲ್ಲಿ ಸುಳಿವು ಇಲ್ಲದೆ ಅಪರಾಧ ಮಾಡಲು ಸಾಧ್ಯವೇ ಇಲ್ಲ.. ದೇವಸ್ಥಾನದ ಹತ್ತಿರ ಕೋತಿಯ ಕೈಗೆ ಸಿಕ್ಕಿದ ಪೊಟ್ಟಣದಲ್ಲಿ ನಿನ್ನ ಇಷ್ಟವಾದ ನೀಲಿ ಬಣ್ಣದ ಪುಡಿಯಿತ್ತು.. ಆ ಕಾಗದ ಇನ್ಯಾವುದು ಅಲ್ಲ.. ನಿಮ್ಮ ಮನೆಯಲ್ಲಿ ಮೂರು ತಿಂಗಳ ಹಿಂದೆ ನೀನೆ ಆಯೋಜಿಸಿದ್ದ ಅಭಿನಂದನಾ ಕಾರ್ಯಕ್ರಮದ ತಿದ್ದುಪಡಿ ಆಗದೆ ಇದ್ದ ಪಾಂಪ್ಲೆಟ್ ಅದು.. ನಿನಗೆ ಗೊತ್ತಿದೆ.. ನಿನ್ನ ಅಪ್ಪನ ಹೆಸರು ತಪ್ಪಾಗಿ ಪ್ರಿಂಟ್ ಆಗಿದೆ ಎಂದು.. ಆ ಪ್ರಿಂಟಿಂಗ್ ಪ್ರೆಸ್ ಮಾಲೀಕನಿಗೆ ಅವನ ಪ್ರೆಸ್ಸಿನಲ್ಲಿದ್ದ ಅಚ್ಚಿನಿಂದ ಹೊಡೆದು ಬಂದಿದ್ದೆ.. ಮತ್ತು ಆ ಪಾಂಪ್ಲೆಟ್ ಹೊರಗೆ ಬರಬಾರದು ಎಂದು ಅವಷ್ಟನ್ನು ನೀನೆ ಪ್ರೆಸ್ಸಿಗೆ ಹೋಗಿ ಹೊತ್ತುಕೊಂಡು ಮನೆಗೆ ತಂದಿದ್ದೆ. ಆ ಪಾಂಪ್ಲೆಟ್ ದೇವಸ್ಥಾನದ ಮೆಟ್ಟಿಲ ಮೇಲೆ ಸಿಕ್ಕಿದಾಗ ಇದರಲ್ಲಿ ನಿನ್ನ ಕೈವಾಡ ಇರಬಹುದು ಎಂಬ ಅನುಮಾನ ಬಂತು.. ಸತ್ತ ವ್ಯಕ್ತಿಯ ದೇಹದಲ್ಲಿಅಫೀಮು ತುಂಬಾ ಹೆಚ್ಚಿದೆ ಎಂದು ರಿಪೋರ್ಟ್ ಹೇಳುತ್ತಿತ್ತು. ಪೊಟ್ಟಣದಲ್ಲಿ ಅದರ ಅಂಶ ಕಂಡು ಬಂದಿದ್ದು.... ಕೋತಿ ಆ ಪೊಟ್ಟಣವನ್ನು ಬಿಡಿಸಲು ಯತ್ನಿಸಿ.. ಅಫೀಮನ್ನು ಯಾವುದೊ ಪುಡಿ ಎಂದು ತನ್ನ ಮೂಗಿನ ಹತ್ತಿರ ಇಟ್ಟುಕೊಂಡಾಗ.. ಅದು ಪೆದ್ದು ಪೆದ್ದಾಗಿ ಎಲ್ಲಾ ಕಡೆ ನೋಡುತ್ತಾ.. ತಲೆ ಗಿರ್ ಎನ್ನುವಂತೆ ಬಿತ್ತು.. ಆಗ ಅನುಮಾನ ನಿಜವಾಯಿತು.. ಅದಕ್ಕೆ ಸೀದಾ ನಿಮ್ಮ ಮನೆಗೆ ಬಂದೆ.. ನೀನು ಬಂಡ ಮಾಡಿದ್ದು ತಪ್ಪಾದರೂ.. ಏನೂ ಆಗೇ ಇಲ್ಲ ಎನ್ನುವಂತೆ ಕೂತಿದ್ದೆ.. ನಿನ್ನ ಪಕ್ಕದಲ್ಲಿ ಅದೇ ಪಾಂಪ್ಲೆಟ್.. ಅದರೊಳಗೆ ಅದೇ ಮತ್ತು ಬರುವ ಅಫೀಮಿನ ಪುಡಿ.. ನನ್ನ ಲೆಕ್ಕ ಸರಿಯಾಗಿದೆ ಎನಿಸಿತು"

"ಹೌದು ಸರ್ ಮೊನ್ನೆ ದೇವಸ್ಥಾನಕ್ಕೆ ಹೋಗೋಣ ಎಂದು ಮೆಟ್ಟಿಲು ಹತ್ತಿ ಹೋಗಿದ್ದೆ.. ಹೋಗುವಾಗ ನನ್ನ ಜೇಬಿಂದ ಪೊಟ್ಟಣ ಬಿದ್ದಿದೆ ಅನ್ಸುತ್ತೆ"

ಮತ್ತೆ ತಿಮ್ಮ ಏನೂ ಮಾತಾಡದೆ ಸೆಲ್ ಒಳಗೆ ಹೋಗಿ ತಾನೇ ಬಾಗಿಲು ಹಾಕಿಕೊಂಡ!!!

ಶ್ರೀಕಾಂತ್ ಸ್ಟೇಷನಲ್ಲಿ ಕೂತು.. ಟಿವಿ ಆನ್ ಮಾಡಿದಾಗ ಹೊಸದಿಗಂತ ವಾಹಿನಿಯಲ್ಲಿ ೩ಕೆ ತಂಡದ ದಶಮಾನೋತ್ಸವ ಕಾರ್ಯಕ್ರಮದ ತುಣುಕು ಬರುತ್ತಿತ್ತು.. ಶಂಕರಪ್ಪ ಅದ್ಭುತ ನಿರೂಪಕ.. ಸ್ವಲ್ಪ ಹಳ್ಳಿ ಭಾಷೆ, ಜೋರು.. ೩ಕೆ ತಂಡದ ದಶಮಾನೋತ್ಸವ ಕಾರ್ಯಕ್ರಮದ ಬಗ್ಗೆ ಸರಳವಾಗಿ ಅಂದಿನ ಕಾರ್ಯಕ್ರಮವನ್ನು ಕಣ್ಣೆದುರಿಗೆ ತಂದು ಕೊಟ್ಟ ಶಂಕರಪ್ಪನಿಗೆ ಕರೆ ಮಾಡಿ ಮೆಚ್ಚುಗೆಯ ಮಾತುಗಳನ್ನು ಹೇಳಿ.. . ಅದನ್ನು ನಿರೂಪಿಸಿದ ಶಂಕರಪ್ಪನವರ ಬುದ್ಧಿಮತ್ತೆಗೆ ಮತ್ತೊಮ್ಮೆ ಶಭಾಷ್ ಹೇಳುತ್ತಾ.. ಮನದಲ್ಲಿಯೇ ೩ಕೆ ತಂಡಕ್ಕೆ ಶುಭವಾಗಲಿ ಎಂದು ಹಾರೈಸಿದ.. !

Monday, September 2, 2019

ದೇವರು ನಕ್ಕೆ ನಗುತ್ತಾನೆ - ೫

ಕೃಪೆ : ಗೂಗಲೇಶ್ವರ 


ಮನೆಯ ದೇವರುಗಳ ವಿಗ್ರಹಗಳನ್ನು, ದೇವರ ಮನೆಯನ್ನು ಸ್ವಚ್ಛಮಾಡುತ್ತಿದ್ದೆ.. ನನ್ನ ಮಗಳು.. ಅಪ್ಪ ಕುಂಕುಮ ಕೊಡಬೇಕು.. ಅಂತ ಪ್ರಶ್ನಾರ್ಥಕ ಚಿನ್ಹೆ ಮೊಗದಲ್ಲಿ ಮೂಡಿಸಿದಳು.. ಪರ್ಸ್ನಲ್ಲಿದೆ ಅಂದೇ.. ನೋಡಿದಳು.. ಹಬ್ಬದ ಮಾರನೇ ದಿನದ ಕೆ ಆರ್ ಮಾರುಕಟ್ಟೆಯಂತಿತ್ತು.. ಬರಿ ಬಿಲ್ಲುಗಳು, ಚೀಟಿಗಳು.. ಆಗ ನೆನಪಾಯಿತು.. ಹಿಂದಿನ ದಿನ  ಎ ಟಿ ಎಂ ಇಂದ ಹಣ ತೆಗೆದುಕೊಳ್ಳಲು ಮರೆತಿದ್ದೆ..

ಕೃಪೆ : ಗೂಗಲೇಶ್ವರ 

ಸರಿ.. ಅದೇ ಧಿರಿಸಿನಲ್ಲಿ.. ಅಂದರೆ ಮಗುಟ, ಶಲ್ಯದಲ್ಲಿಯೇ ಬೈಕ್ ಹತ್ತಿದೆ.. ಹಣೆಯಲ್ಲಿ ಗೋಪಿಚಂದನ, ವಿಭೂತಿ ಪಟ್ಟೆ, ಕೊರಳಲ್ಲಿ ಜಪ ಮಣಿ, ಕೈಯಲ್ಲಿ ಬೆಳ್ಳಿಯ ಬಳೆ ಇತ್ತು.. ನನ್ನ ಪಾಡಿಗೆ ನಾ ಗಾಡಿಯಲ್ಲಿ ಹೋಗುತ್ತಿದ್ದೆ.. ಸ್ವಲ್ಪ ದೂರ ಹೋಗುವಷ್ಟರಲ್ಲಿ ಯಾರೋ ಇನ್ನೊಂದು ಬೈಕಿನಲ್ಲಿ ಹೋಗುತ್ತಿದ್ದವ ಕೈ ಬೀಸಿದಂತಾಯಿತು.. ಯಾರೋ ಇರಬಹುದು ಎಂದು.. ನನ್ನ ಪಾಡಿಗೆ ನಾ ಮುಂದೆ ಹೋದೆ.. ದಾರಿಗಟ್ಟ ಹಾಕಿ.. "ಸ್ವಾಮಿಗಳೇ.. ಎಲ್ಲಾ ಸೆಟ್ ಅಪ್ ಮಾಡಿದ್ದೀವಿ.. ನೀವು ಸುಮ್ಮನೆ ಬಂದು ಮಂತ್ರ ಹೇಳಿ ಪೂಜೆ ಮಾಡಿದರೆ ಆಯ್ತು.. ಬನ್ನಿ ದಕ್ಷಿಣೆಯನ್ನು ಕೊಡುತ್ತೀವಿ.. "

ಕೃಪೆ : ಗೂಗಲೇಶ್ವರ 

ಬೈಕ್ ಸದ್ದು ಮಾಡುತ್ತಲೇ ಇತ್ತು.. ಆದರೆ ಅದರ ನಗು ನನಗೆ ಕೇಳುತ್ತಿತ್ತು.. ಶ್ರೀ ಸರಿಯಾಗಿ ತಗಲು ಹಾಕಿದ್ದಾರೆ.. ನೋಡೋಣ ಅದೆಂಗೆ ಬಿಡಿಸಿಕೊಳ್ತೀಯಾ.. ಅಂತ ಅನ್ನುವ ಹಾಗೆ ಭಾಸವಾಯಿತು..

"ಸರ್.. ಕ್ಷಮಿಸಿ.. ನನಗೆ ಅಭ್ಯಾಸವಿಲ್ಲ.. "

"ಸ್ವಾಮಿಗಳೇ ಅಂಗನ್ನ ಬೇಡಿ.. ಮುಖದಲ್ಲಿ ಸ್ವಾಮಿಗಳ ಕಳೆ ಇದೆ.. ನೀವು ನೋಡೋಕೆ ಥೇಟ್ ಸ್ವಾಮಿಗಳ ತರಹವೇ ಇದ್ದೀರಾ.. ಬನ್ನಿ ಸ್ವಾಮಿ ಒಂದು ಹತ್ತು ನಿಮಿಷ ಅಷ್ಟೇ"

"ಇಲ್ಲ ಸರ್. ನಾನು ಸಂಧ್ಯಾವಂದನೆ ಮಾಡೋಕೆ ಕೂತಿದ್ದೆ. ತಕ್ಷಣ ಯಾವುದೋ ಕೆಲಸ ನೆನಪಾಯಿತು.. ಹಾಗೆ ಬಂದಿದ್ದೀನಿ.. ಮಂತ್ರಗಳು ಬರುತ್ತೆ.. ಆದರೆ ಪೂಜೆ ಮಾಡಿಸಿ ಅಭ್ಯಾಸವಿಲ್ಲ.. ದಯವಿಟ್ಟು ಕ್ಷಮಿಸಿ"

"ಇಲ್ಲ ಸ್ವಾಮಿಗಳೇ ನೀವು ಬಂದಿದ್ದ್ರೆ ಚನ್ನಾಗಿತ್ತು.. ನಿಮ್ಮಲ್ಲಿ ಒಳ್ಳೆಯ ಸ್ವಾಮಿಗಳ ಕಳೆ ಇದೆ.. ಇರಲಿ ಬಿಡಿ.. ಪರವಾಗಿಲ್ಲ

"ಥ್ಯಾಂಕ್ಸ್ ಸರ್"

ಎನ್ನುತ್ತಾ ಗಾಡಿ ಬಿಟ್ಟೆ..

ದಾರಿಯುದ್ದಕ್ಕೂ ನಗುತ್ತಲೇ ಬರುತ್ತಿದ್ದೆ.. ದಾರಿಹೋಕರೆಲ್ಲ.. ನನ್ನ ಪೋಷಾಕು ಅಚ್ಚರಿಯಿಂದ ಗಮನಿಸುತ್ತಿದ್ದರೆ.. ಇನ್ನೂ ಕೆಲವರು ನಾನೊಬ್ಬನೇ ನಗುತ್ತ ಬರುತ್ತಿದ್ದದ್ದು (ಕೈಲಿ ಮೊಬೈಲು ಇಲ್ಲ.. ಕಿವಿಗೆ ಇಯರ್ ಫೋನ್ ಇಲ್ಲ.. ಆದರೂ ನಗುತ್ತಿದೆ ಪ್ರಾಣಿ ) ಕಂಡು ಅಯ್ಯೋ ಇವಯ್ಯಂಗೆ ತಿಕ್ಲು ಅನ್ನ್ಸುತ್ತೆ ಅಂತ ಅಂದುಕೊಂಡಿದ್ದರು..

ಮನೆಗೆ ಬಂದು ಬೈಕ್ ನಿಲ್ಲಿಸಿ.. ಯಥಾ ಪ್ರಕಾರ ಅದರ ತಲೆ ಸವರಿದೆ... "ಶಭಾಷ್ ಶ್ರೀ.. ಸುಮ್ಮನೆ ದುಡ್ಡಿನ ಆಸೆಗೆ ಅಲ್ಲಿ ಹೋಗಿ ಒಂದಷ್ಟು ಮಂತ್ರ ಹೇಳಿ ದುಡ್ಡು ವಸೂಲಿ ಮಾಡದೆ.. ನಿಜ ಹೇಳಿ.. ನಿನಗೂ ಮತ್ತು ಅವರಿಗೂ ಆಗಬಹುದಾದ ಮುಜುಗರ ತಪ್ಪಿಸೋದು ಅಷ್ಟೇ ಅಲ್ಲ.. ದೇವರಿಗೆ ಮೋಸ ಮಾಡಲಿಲ್ಲ.. ಶಭಾಷ್" ಅಂದ ಹಾಗೆ ಭಾಸವಾಯಿತು..

ಮನೆಯೊಳಗೇ ಬಂದು.. ಗಣಪನ ಫೋಟೋ ನೋಡಿದೆ.. ದೇವರು ನಕ್ಕ ಹಾಗೆ ಭಾಸವಾಯಿತು..

ಕೃಪೆ : ಗೂಗಲೇಶ್ವರ 

ಮುಂದಿನ ಒಂದು ವರ್ಷದೊಳಗೆ ದೇವರ ಪೂಜೆ ಮಾಡಿಸುವಷ್ಟು ಮಂತ್ರಗಳನ್ನು ಕಲಿಯಲೇ ಬೇಕು ಎಂಬ ದೃಢ ನಿರ್ಧಾರ ಮನದೊಳಗೆ ಮೂಡಿತು.. !

ಸಮವಸ್ತ್ರ, ಪೋಷಾಕು, ಆ attitude ಕೆಲವೊಮ್ಮೆ ಅಚ್ಚರಿ ಹುಟ್ಟಿಸುತ್ತದೆ!!!

Saturday, April 6, 2019

ಮನದ ತಂತಿ ಮೀಟುವ ತಂತಿಸೇವೆ!!!

"ಸರ್ ಒಬ್ಬರು ಬರ್ತಾಲೆ ಇದ್ದಾರೆ.. ಇಲ್ಲ ಆ ರೀತಿಯ ವ್ಯವಸ್ಥೆ ಈಗ ಇಲ್ಲ ಅಂದ್ರೂ ಕೇಳಿಲ್ಲ.. ಹೇಳಿ ಹೇಳಿ ಸಾಕಾಗಿದೆ.. ನೀವೊಮ್ಮೆ ಹೇಳಿ ಸರ್.. "

ಆ ಜಮಾನದವರಿಗೆ ಬಂದವರು ಯಾರು ಅಂತ ಗೊತ್ತಿತ್ತು.. ಆದರೆ ಬದಲಾದ ಜಮಾನಕ್ಕೆ ಆ ವ್ಯಕ್ತಿ ಯಾರೂ ಅನ್ನುವ ಗೊಂದಲವಿದ್ದರೂ.. ಕೆಲಸದ ಒತ್ತಡ.. ಅಂಗೈಯಲ್ಲಿಯೇ ಅರಮನೆ ಕಟ್ಟುವ ಉಸಾಬರಿ..  ಎದೆಗಾರಿಕೆ ಇದ್ದರೂ.. ಬಂದವರಾರೂ ಎನ್ನುವ ಅರಿವಿರಲಿಲ್ಲ.. ಹಾಗಾಗಿ ಎಲ್ಲರಿಗೂ ಹೇಳುವ ಹಾಗೆ ಅದೇ ಧಾಟಿಯಲ್ಲಿಯೇ ಉತ್ತರ ಕೊಟ್ಟಿದ್ದರು..

ಆದರೆ ಬಂದ ವ್ಯಕ್ತಿ ಸಮಚಿತ್ತದಿಂದ.. ಆತನ ಎಲ್ಲಾ ಮಾತುಗಳನ್ನು ಕೇಳುತ್ತಾ.. ಮತ್ತೆ ಮುಂದಿನ ಕೌಂಟರ್ ಹತ್ತಿರ ಇದ್ದ ಮ್ಯಾನೇಜರ್ ಹತ್ತಿರ ಮಾತಾಡೋಕೆ ಹೋದರು..

ಆತ ಗುರುತು ಹಿಡಿದ.. "ಬನ್ನಿ ಸರ್ ಕುಳಿತುಕೊಳ್ಳಿ.. ಏನು ಸಮಾಚಾರ.. ಏನಾಗಬೇಕಿತ್ತು.. ಹೇಳಿ.. ಅದು ಬಿಡಿ ಆತ ಸ್ವಲ್ಪ ಮುಂಗೋಪಿ.. ಅವರ ಪರವಾಗಿ ನಾ ಕ್ಷಮೆ ಕೋರುತ್ತೇನೆ.. ಬಿಡಿ.. ಅದರ ಬಗ್ಗೆ ಯೋಚನೆ ಬೇಡ.. ಹೇಳಿ ಏನು ಸಹಾಯಬೇಕು.. ನನ್ನಿಂದ ಏನಾಗಬೇಕು ಹೇಳಿ.."

"ಈ ಪತ್ರವನ್ನು ತಂತಿ ಮೂಲಕ ತಲುಪಿಸಬೇಕು.. ತಂತಿ ಸೇವೆ ನಿಂತು ಹೋಗಿದೆ ಅಂತ ನನಗೆ ಹೇಗೆ ತಿಳಿಯಬೇಕು.. ಆದರೆ ಬೇಜಾರಿಲ್ಲ.. ಆದರೆ ಇದೊಂದು ವಿಷಯಕ್ಕೆ ತಂತಿ ಸೇವೆಗೆ ಅನುಕೂಲಮಾಡಿ ಕೊಡಬಹುದೇ.. ಹೇಳಿ"

ಚಿತ್ರಕೃಪೆ : ಗೂಗಲೇಶ್ವರ 

"ಸರ್ ನೀವು ಇಷ್ಟು ಕೇಳಿಕೊಳ್ಳಬೇಕೇ.. ಹೌದು ತಂತಿ ಸೇವೆ ಲಭ್ಯವಿಲ್ಲ.. ಆದರೆ ಆ ಯಂತ್ರ ಚಾಲನೆಯಲ್ಲಿಯೇ ಇದೆ.. ಜೊತೆಯಲ್ಲಿ ತಂತಿ ಸೇವೆ ಮಂಡಲಿಗೆ ನಾನು ಅಧ್ಯಕ್ಷ ಆಗಿರೋದರಿಂದ.. ಒಂದು ವಿಶೇಷ ಸೌಲಭ್ಯವಿದೆ… ಅದನ್ನು ಉಪಯೋಗಿಸಬಹುದು… ಬನ್ನಿ ಮಾಡೋಣ.. ಕೊಡಿ ನಿಮ್ಮ ಪತ್ರ.. ಆದರೆ ಇದಕ್ಕೆ ನಿಮ್ಮ ಬಳಿ ದುಡ್ಡು ಪಡೆದುಕೊಳ್ಳೋಲ್ಲಾ… ಎರಡು ಕಾರಣಕ್ಕೆ.. ಒಂದು ತಂತಿ ಸೇವೆ ನಿಂತಿರುವುದರಿಂದ.. ಅದರಲ್ಲಿ ಬಂದ ಹಣವನ್ನು ಎಲ್ಲೂ ತೋರಿಸಲಿಕ್ಕೆ ಆಗೋಲ್ಲ.. ಎರಡನೆಯದು ನೀವು ನನ್ನ ಮೆಚ್ಚಿನ ವ್ಯಕ್ತಿ ಹಾಗಾಗಿ. ನಿಮ್ಮ ಬಳಿ ದುಡ್ಡು ಪಡೆಯೋಲ್ಲ.. "

"ಸರಿ ಕಣಪ್ಪ.. ನಿಮ್ಮಿಚ್ಛೆಯಂತೆಯೇ ಆಗಲಿ.. ಇದೆ ಆ ಪತ್ರ ತೆಗೆದುಕೊಳ್ಳಿ.. ಹಾಗೆ ಟಂಕಿಸಿ ಕಳಿಸಿ.."

ಚಿತ್ರಕೃಪೆ : ಗೂಗಲೇಶ್ವರ 

ಮ್ಯಾನೇಜರ್ ಆ ಪತ್ರವನ್ನು ಓದುತ್ತಾ ಓದುತ್ತ ಅವರ ಮನಸ್ಸು ಅರಳಿತು..

 ತಂತಿಯನ್ನು ಟಂಕಿಸಿ.. "ಒಮ್ಮೆ ನೋಡಿ ಸರಿಯಾಗಿದೆಯೇ" ಎಂದರು.. ಆ ವ್ಯಕ್ತಿ ಕನ್ನಡಕ ಸರಿ ಮಾಡಿಕೊಳ್ಳುತ್ತಾ ತುಸು ಜೋರಾಗಿಯೇ ಓದಿದರು...

                                                                  *******
ಪದಗಳ ವಿಸ್ತಾರ ಹಾಕುತ್ತಾ
ಅರ್ಥಗಳ ವಿಸ್ತಾರವನ್ನು ಹೆಚ್ಚಿಸುತ್ತ
ಹೆಚ್ಚಿದ ಭಾವವನ್ನು ಅನುಭವಿಸುತ್ತಾ
ಅನುಭವವನ್ನು ವಿವರಿಸುತ್ತಾ ಸಾಗಿದ ಮಂಕುತಿಮ್ಮ।।


ಜೀವನದಲ್ಲಿ ಸಿಕ್ಕಿದ ನೋವು ನಲಿವುಗಳಲ್ಲಿ
ನಲಿವನ್ನು ಪದಗಳಾಗಿ ಜೋಡಿಸುತ್ತ
ಜೋಡಿಸಿಕೊಂಡ ಜೀವನದಿ
ಜೀವ ನದಿಯನ್ನು ಹರಿಸುತ್ತಾ ಸಾಗಿಸುವ ಮಂಕುತಿಮ್ಮ।।

"ಪ್ರೀತಿಯ ರವಿ.. ನಿನ್ನ ಜನುಮದಿನಕ್ಕೆ ಈ ತಂತಿಸೇವೆಯಿಂದ ಸಂದೇಶ ಕಲಿಸೋಣ ಅಂತ ಪ್ರಯತ್ನ ಪಟ್ಟೆ.. ಆದರೆ ದಿನವೂ ಈ ಅಂಚೆ ತಂತಿ ಕಚೇರಿಗೆ ಬರೋದು.. ದಿನವೂ ಇವರ ಅದೇ ಉತ್ತರವನ್ನು ಕೇಳೋದು.. ವಾಪಾಸ್ ಹೋಗೋದು ಇದೆ ಆಯಿತು.. ಮಾರ್ಚ್ ಇಪ್ಪತ್ತೊಂದರಿಂದ ದಿನವೂ ಇದೆ ಕತೆಯಾಗಿತ್ತು.. ನಿನ್ನೆ ಏಪ್ರಿಲ್ ಐದರಂದು.. ಮತ್ತೊಮ್ಮೆ ಪ್ರಯತ್ನ ಮಾಡೋಣ ಅಂತ ಬಂದಾಗ ನನ್ನ ಹಳೆ ಶಿಷ್ಯ ಸಿಕ್ಕಿದ.. ಅವನ ಮೂಲಕ ನಿನಗೆ ಜನುಮದಿನದ ಶುಭಾಶಯಗಳನ್ನು ತಲುಪಿಸುತ್ತಿದ್ದೇನೆ.. ಹೌದು ಅವತ್ತೇ ಬರಬೇಕಿತ್ತು.. ಆದರೂ ನನ್ನನ್ನು ಗುರು ಎಂದು ಪೂಜಿಸುವ ನಿನಗೆ ನನ್ನ ಆಶೀರ್ವಾದ ಸದಾ ಇದ್ದೆ ಇರುತ್ತದೆ.. ತಡವಾದರೇನು.. ಅಡೆತಡೆಯಿಲ್ಲದೆ ಬರುವ ಸಿಗುವ ನನ್ನ ಆಶೀರ್ವಾದ ಸದಾ ನಿನಗೆ.. "

"ಜನುಮದಿನದಂದು ನಿನ್ನ ನೆಚ್ಚಿನ ಗೆಳೆಯರು, ಸಹೋದರ ಸಹೋದರಿಯರ ಶುಭಾಶಯಗಳ ಅಲೆಗಳಲ್ಲಿ ನೀ ಕೊಚ್ಚಿ ಹೋಗಿದ್ದು ನನ್ನ ಶಿಷ್ಯನಿಂದ ಗೊತ್ತಾಯಿತು.. ಮತ್ತೊಮ್ಮೆ ನನ್ನ ಕಡೆಯಿಂದ.. ಜನುಮದಿನದ ವರ್ಷ ಸುಂದರವಾಗಿರಲಿ.. ನಿನ್ನ ಆರೋಗ್ಯ, ಐಶ್ವರ್ಯ, ಪ್ರೀತಿ, ಮಮತೆ ಎಲ್ಲವೂ ವೃದ್ಧಿಯಾಗಲಿ.. ಶುಭವಾಗಲಿ.. "

ಇಂತಿ ನಿನ್ನ ಪ್ರೀತಿಯ ಗುರು 
ಡಿ ವಿ ಜಿ
                                                                     *****

ಮ್ಯಾನೇಜರ್ ಈ ತಂತಿ ಸೇವೆಯನ್ನು ಶ್ರೀ ರವಿ ತಿರುಮಲೈ ಅವರಿಗೆ ತಲುಪಿಸುವ ಕಾರ್ಯವನ್ನು ಸರಾಗವಾಗಿ ಮುಗಿಸಿದರು..

                                                                    ********
"ಗುರುಗಳೇ ಜನುಮದಿನಕ್ಕೆ ಶುಭಾಶಯಗಳನ್ನು ತಲುಪಿಸಲು ಬಹಳ ತಡವಾಯಿತು… ಕಾರಣಗಳು ನೂರಾರು.. ತಡವಾಗಿದೆ ಎನ್ನೋದು ನಿಜ.. ತಡವಾದ ಶುಭಾಶಯಗಳನ್ನು ಒಪ್ಪಿಸಿಕೊಳ್ಳಿ.. ಹರಸಿ.. ಆಶೀರ್ವದಿಸಿ.. ಶುಭವಾಗಲಿ !!!"