Monday, December 17, 2018

ಬನ್ರೀ ಅಂಗೇ ಹೋಗಿಬರುಮಾ - ೩ಕೆ ಸಡಗರ ಸಂಭ್ರಮ ಸಂತಸ ೨೦೧೮

"ಯಾರಿ.. ಬನ್ರಪ್ಪ.. ಬೇಗ ಬನ್ರಪ್ಪ.. ನಿಮಗೇನು ಅರಿಶಿನ ಕುಂಕುಮ ಕೊಟ್ಟು ಕರೀಬೇಕಾ.. ಬನ್ರೀ ಹತ್ತಿ.. " ಬಸ್ ಸ್ಟಾಪಿನಲ್ಲಿದ್ದವ ಕೂಗುತಿದ್ದ.. ಹತ್ತಬೇಕೆಂದು ಮೊದಲೇ ಬುಕ್ ಮಾಡಿದ್ದವರು ಲಘುಬಗೆಯಿಂದ ಬಸ್ಸಿನೊಳಗೆ ಆಗಲೇ ನಿರ್ಧಾರಿತ ಸೀಟಿನಲ್ಲಿ ಕುಳಿತಾಗಿತ್ತು.. ಇನ್ನೊಂದಷ್ಟು ಸೀಟುಗಳು ಖಾಲಿ ಇದ್ದವು.. ಅದೇನು ಚಿಕ್ಕ ಬಸ್ಸಲ್ಲ ಸುಮಾರು ೧೦೦-೧೨೦ ಮಂದಿಗೆ ಆಸನದ ವ್ಯವಸ್ಥೆ ಇದ್ದ ಬಸ್ಸದು..

ಡ್ರೈವರ್ ಪೊಂ ಪೊಂ ಅಂತ ಹಾರ್ನ್ ಮಾಡುತ್ತಲೇ.. ಬಸ್ಸು ಮೆಲ್ಲಗೆ ಮುಂದೆ ಸಾಗಲು ಹವಣಿಸುತ್ತಿತ್ತು.. ಬಸ್ ನಿಲ್ದಾಣದಲ್ಲಿದ್ದ ಇನ್ನಷ್ಟು ಮಂದಿ ಬಸ್ಸಿನೊಳಗೆ ನುಗ್ಗಿದರು.. ಬಸ್ಸು ಈಗ ಜೇನಿನ ಗೂಡಾಗಿತ್ತು.. ಒಬ್ಬರಿಗೊಬ್ಬರು.. ಒಬ್ಬರಿಂದ ಒಬ್ಬರು ಎನ್ನುವ ನೀತಿಪಾಠ ಕೇಳಿಕೊಂಡೆ.. ಅದನ್ನು ತಮ್ಮ ಜೀವನದಲ್ಲಿಯೇ ಅಳವಡಿಸಿಕೊಂಡವರು ಇದ್ದುದರಿಂದ.. ತೊಂದರೆ ಇರಲಿಲ್ಲ..


ಸರಿ ಬಸ್ಸು ಹೊರಟಿತು.. ಅಲ್ಲಿದ್ದ ಒಬ್ಬ ಸಹಚಾಲಕ "ನೋಡ್ರಪ್ಪಾ..ಎಲ್ಲರಿಗೂ ಸೀಟ್ ಬೆಲ್ಟ್ ಹಾಕಿಕೊಳ್ಳಿ.. ನಿಮ್ಮ ಕೈಗಡಿಯಾರವನ್ನು ಕೊಂಚ ಹಿಂದಕ್ಕೆ ತಿರುಗಿಸಿ ಮತ್ತೆ ಒಮ್ಮೆ ಒತ್ತಿಬಿಡಿ.. ನಿಮ್ಮ ಮೊಬೈಲನ್ನು ಆನ್ ಮಾಡಿದರೂ ಆಫ್ ಮಾಡಿದರೂ ವ್ಯತ್ಯಾಸವಿಲ್ಲ ಕಾರಣ ಅಲ್ಲಿ ನೆಟ್ವರ್ಕ್ ಸಿಗೋಲ್ಲ.. ನೆಟ್ವರ್ಕ್ ಸಿಕ್ಕರೂ ನೀವೇ ಮಾತಾಡೋಲ್ಲ.. ನಿಮ್ಮ ನಿಮ್ಮ ಬೂಟುಗಳನ್ನು ಇಲ್ಲಿಯೇ ಬಿಟ್ಟು ಬನ್ನಿ.. ಅಲ್ಲಿ ಪಾದರಕ್ಷೆಗಳಿಗೆ ಪ್ರವೇಶವಿಲ್ಲ"


ಎಲ್ಲರೂ ಒಮ್ಮೆ ಅಕ್ಕ ಪಕ್ಕದವರ ಮೊಗವನ್ನು ನೋಡಿದರು. .. ಯಾರಿಗೂ ಸ್ಪಷ್ಟತೆ ಇರಲಿಲ್ಲ.. ಹೇಳಿದ ಹಾಗೆ ಮಾಡಿದರು..
ಬಸ್ಸು ಮೆಲ್ಲಗೆ ಹಿಂದಕ್ಕೆ ಚಲಿಸತೊಡಗಿತು.. ಅದರ ಜೊತೆಗೆ ಕೈಗಡಿಯಾರವೂ ಹಿಂದಕ್ಕೆ ಓಡತೊಡಗಿತು.. ಸುಮಾರು ಘಂಟೆಗಳ ಪಯಣ.. ಒಂದು ಅರಣ್ಯದ ಹೆಬ್ಬಾಗಿಲಿನ ಹತ್ತಿರ ಬಸ್ಸು ನಿಂತಿತು..

ಒಂದು ದೊಡ್ಡ ಗುರುಕುಲ.. ದೊಡ್ಡ ಬೇಲಿ ಹಾಕಿದ್ದ ಆಶ್ರಮ.. ಅಲ್ಲಲ್ಲಿ ನೀರು ಹರಿಯುತ್ತಿದ್ದರಿಂದ.. ಬೂಟುಗಳನ್ನು ತೊಳೆದುಕೊಂಡೆ ಬಂದಿದ್ದರು.. ಗಮ್ ಬೂಟುಗಳನ್ನು ಹೊರಗೆ ಬಿಟ್ಟು ಹೆಜ್ಜೆ ಹಾಕಿದರು..  ಅಲ್ಲೊಂದು ಪುಟ್ಟ ಗುಡಿ.. ಆ ದೇವರಿಗೆ ನಮಸ್ಕರಿಸಿ.. ಎಲ್ಲರೂ ಆಶ್ರಮದ ಆವರಣಕ್ಕೆ ಹೊಕ್ಕರು..

ಅಲ್ಲೊಂದು ದೀಪದ ಕಂಬಕ್ಕೆ ಹೂವು ಸುತ್ತಿ.. ಅಲಂಕರಿಸಿದ್ದರು.. ಬಸ್ಸಿನಲ್ಲಿ ಬಂದಿದ್ದ ಮುಖ್ಯ ಅತಿಥಿಗಳು, ಪದಾಧಿಕಾರಿಗಳು ಸೇರಿ ದೀಪ ಬೆಳಗಿದರು.. ಅಲ್ಲಿಂದ ಸ್ವಲ್ಪ ಮುಂದಕ್ಕೆ ಒಂದು ಅರಳಿಕಟ್ಟೆಯ ಕಡೆಗೆ ಹೆಜ್ಜೆ ಹಾಕಿದರು..


ಅಲ್ಲೊಬ್ಬರು ಗಾಯಕಿ.. ಮಧುರಕಂಠದಿಂದ ಪ್ರಾರ್ಥನೆ ಗೀತೆಯನ್ನು ಹಾಡಿದರು.. !


ಹಿರಿಯ ಆದಿ ಕವಿಗಳು.. ಮುಂದುವರೆದ ಪರಂಪರೆಯಲ್ಲಿ ಭಾಷೆಯ ಬೆಳಗಿದ, ಬೆಳೆಸಿದ ಸಾಹಿತಿಗಳು, ಕವಿಗಳು, ಸಾಹಿತ್ಯವನ್ನು ಪೋಷಿಸಿದ್ದ ರಾಜ ಮಹಾರಾಜರು, ನಾಟಕಕಾರರು ಎಲ್ಲರೂ ಇದ್ದರು.. ನಮ್ಮ ಗುರುಗಳಾದ ಶ್ರೀ ಮಂಜುನಾಥ ಕೊಳ್ಳೇಗಾಲ ಅವರು ಅಲ್ಲಿದ್ದ ಮಹನೀಯರಿಗೆಲ್ಲ ದೀರ್ಘದಂಡ ನಮಸ್ಕಾರ ಹಾಕಿದರು.. ಆ ಮಹನೀಯರೆಲ್ಲ "ಶ್ರೀ ಮಂಜುನಾಥ ಅವರೇ ನಮ್ಮೆಲ್ಲರ  ಸಾಹಿತ್ಯವನ್ನು ಓದಿ ಅದರ ಬಗ್ಗೆ ನೀವು ಮಾತಾಡುವ ಶೈಲಿ ನಮಗೆಲ್ಲ ಇಷ್ಟವಾಗಿದೆ.. ಹಾಗಾಗಿ ಇಂದು ನಿಮಗೆ ಒಂದು ಗುರುತರವಾದ ಹೊಣೆಗಾರಿಕೆ ಕೊಟ್ಟಿದ್ದೇವೆ.. ಕನ್ನಡ ಭಾಷೆಯ ಆರಂಭ, ಅದು ನೆಡೆದು ಬಂದ ಹಾದಿ, ಭಾಷೆಯ ಉಳಿವು ಈ ರೀತಿಯ ಒಂದು ವಿಷಯವನ್ನು ಕನ್ನಡ ಭಾಷೆಯ ಆದಿಕಾಲದಿಂದ ನೀವಿರುವ ಕಾಲದ ತನಕ ಗಜ ಮಾರ್ಗದಿ ಸಾಗಿ ಬಂದ ವಿವರವನ್ನು ನಿಮ್ಮ ಜೊತೆ ಬಂದವರಿಗೆಲ್ಲ ಹೇಳಬೇಕು ಮತ್ತು ನಮಗೂ ನಿಮ್ಮ ಕಾಲಘಟ್ಟದಲ್ಲಿ ಕನ್ನಡ ಹೇಗಿದೆ ಎನ್ನುವ ಪರಿಚಯವೂ ಆಗಬೇಕು.. ಇದು ನಮಗೆ ನೀವು ಕೊಡುವ ಗುರುದಕ್ಷಿಣೆ ಎಂದರು ಒಕ್ಕೊರಲಿನಿಂದ.. "ಕಣ್ಣಲ್ಲಿ ಆನಂದಭಾಷ್ಪ ತುಂಬಿಕೊಂಡು.. ಮತ್ತೊಮ್ಮೆ ಹಿರಿಯರಿಗೆ ನಮಸ್ಕರಿಸಿ.. ನಮ್ಮೆಲ್ಲರ ಗುರುಗಳು, ಮೇಷ್ಟ್ರು ಎಂದು ಪ್ರಖ್ಯಾತರಾಗಿರುವ  ಶ್ರೀ ಮಂಜುನಾಥ ಕೊಳ್ಳೇಗಾಲ ಅವರಿಂದ ಒಂದು ಚಿಂತನ ಮಂಥನ ಕಾರ್ಯಕ್ರಮ ಶುರುವಾಯಿತು.. ಅವರ ಮಾತುಗಳು ಕೇಳಲು ಚಂದ.. ಅವರು ಹೇಳಿದ ಮಾತು "ನಾ ಹುಟ್ಟುವ ಮೊದಲು ಸಾವಿರಾರು ವರ್ಷಗಳ ಹಿಂದೆ ಇದ್ದ ಭಾಷೆ.. ನಾ ಆಳಿದ ಮೇಲೂ ಸಾವಿರಾರು ವರ್ಷಗಳ ಕಾಲ ಇರುವ ಭಾಷೆ ಕನ್ನಡ.. ಇದರ ಬಗ್ಗೆ ಹೇಳಿದಷ್ಟು ಮುಗಿಯದು.. " ವಾಹ್ ಸರಳ ಮಾತುಗಳಲ್ಲಿ ಕನ್ನಡ ಭಾಷೆಯ ಹಿರಿಮೆಯನ್ನು ಸಾರಿದರು. ಜೊತೆಯಲ್ಲಿ ಬಂದವರು ತಮಗೆ ಇದ್ದ ಕೆಲವು ಪ್ರಶ್ನೆಗಳಿಗೆ ಉತ್ತರವನ್ನು ಕೇಳಿದಾಗ.. ಅದಕ್ಕೆ ಉತ್ತರಿಸಿದ ರೀತಿ ಸಮಯೋಚಿತವಾಗಿತ್ತು..

ಶ್ರೀಮತಿ ತೇಜಸ್ವಿನಿ ಹೆಗಡೆ ಸಾಹಿತ್ಯ ಲೋಕದಲ್ಲಿ ಒಂದು ದೊಡ್ಡ ಹೆಸರು.. ಕವಯತ್ರಿ, ಬರಹಗಾರರಾದ ಇವರು ಅನೇಕ ಪುಸ್ತಕಗಳನ್ನು ಹೊರತಂದಿದ್ದಾರೆ.. ಇವರ ಪ್ರತಿಭೆಗೆ ಒಂದು ಬಂಗಾರದ ಚೌಕಟ್ಟು ತಂದಿದ್ದು ಈ ಸಮಾರಂಭದಲ್ಲಿ ಅವರನ್ನು ಗೌರವಿಸಿದ್ದು.. ಆಕೆಯ ಕಣ್ಣಲ್ಲಿ ಮಾತನಾಡಲಾಗದಷ್ಟು ಖುಷಿ.. ಮಾತುಗಳೇ ಹೊರಬರುತ್ತಿರಲಿಲ್ಲ.. ಆ ಸುಂದರ ಕ್ಷಣಗಳನ್ನು ಅನುಭವಿಸಿದ ನಾವೆಲ್ಲರೂ ಧನ್ಯ ಎಂದು ಕೊಂಡೆವು..ಎಲ್ಲರಿಗೂ ವಂದನೆಗಳನ್ನು ತಿಳಿಸಿ ತಮ್ಮ ಮಾತನ್ನು ಮುಗಿಸಿದಾಗ ಎಲ್ಲರೂ ಕರತಾಡನದಿಂದ ತಮ್ಮ ಖುಷಿಯನ್ನು ವ್ಯಕ್ತಪಡಿಸಿದರು.. ನಂತರ ಜರುಗಿದ್ದು ಇನ್ನೊಂದು ಮುಖ್ಯ ಘಟ್ಟ..

ಹವ್ಯಾಸಕ್ಕೆ ಬರೆಯುವವರು, ಖುಷಿಗಾಗಿ ಬರೆಯುವುವರು, ಬರೆಯುತ್ತಲೇ ಇರುವವರ ಕವಿತೆಗಳನ್ನು ಆರಿಸಿ ನೆಡೆಸಿದ ಕವಿಯುಲಿ ಕಾರ್ಯಕ್ರಮ ಇನ್ನಷ್ಟು ಸೊಗಸಾಗಿತ್ತು.. ಶ್ರೀ ಶಶಿಕಿರಣ್ ಮುಲ್ಲೂರು ಅವರ ಒಂದು ಚಿತ್ರಕ್ಕೆ ಕವನ ಬರೆಯಿರಿ ಎನ್ನುವ " ನಮ್ಮ ಚಿತ್ರ ನಿಮ್ಮ ಕವನ" ಸ್ಪರ್ಧೆಗೆ ಬಂದಿದ್ದ ಹಲವಾರು ಕವನಗಳಲ್ಲಿ ಕೆಲವನ್ನು ಆರಿಸಿಕೊಂಡು ಕವಿಗಳ/ಕವಯತ್ರಿಯರ ಧ್ವನಿಯಲ್ಲಿಯೇ ತಾವು ರಚಿಸಿದ ಕವನಗಳನ್ನು ವಾಚಿಸುವ ಕಾರ್ಯಕ್ರಮ.. ಬಂದಿದ್ದ ಕವಿಗಳಿಗೆ/ಕವಯತ್ರಿಯರಿಗೆ ಖುಷಿಯೋ ಖುಷಿ.. ಅಂತಹ ಮಹನೀಯರ ಮುಂದೆ ತಾವು ಬರೆದ ಕವಿತಾವಾಚನ ಬಹುಜನ್ಮದ ಪುಣ್ಯಫಲ ಎನ್ನುವಂತೆ ಒಬ್ಬೊಬ್ಬರೇ ತಮ್ಮ ಕವನಗಳನ್ನು ವಾಚಿಸಿದರು.. ಒಂದಕ್ಕಿಂತ ಒಂದು ಅದ್ಭುತ.. ಎನ್ನುವಂತಿತ್ತು..

ಇಷ್ಟೇ ಅಲ್ಲ ಇನ್ನೂ ಇದೆ ಅಂತ ಎಲ್ಲರೂ ಕೂತೆ ಇದ್ದರು.. ಶ್ರೀ ಗೌತಮ್ ಕುತ್ತೆತ್ತೂರ್ ಅವರು ಬರೆದ "ನೀ ಹಾಡಾದರೆ ನಾ ಶ್ರುತಿಯಾಗುವೆ (ಸಮಗ್ರ) ಪುಸ್ತಕವನ್ನು ಪ್ರತಿಲಿಪಿ - ಕನ್ನಡ ವಿಭಾಗದ ಮುಖ್ಯಸ್ಥರಾದ ಶ್ರೀಯುತ ಅಕ್ಷಯ್ ಬಾಳೆಗೆರೆ ಅವರಿಂದ ಲೋಕಾರ್ಪಣೆಯಾಯಿತು.. ಆ ಪುಸ್ತಕದ ಬಗ್ಗೆ ಲೇಖಕರು ಮತ್ತು ಪ್ರತಿಲಿಪಿ ವಿಭಾಗದ ಬಗ್ಗೆ ಪ್ರಕಾಶಕರು ವಿವರಿಸಿದರು..ಕವನ ಸ್ಪರ್ಧೆಯಲ್ಲಿ ಆಯ್ಕೆಯಾದ ಕವನಗಳ ಕತೃಗಳಿಗೆ ಅಭಿನಂದನಾ ಪತ್ರ  ಮತ್ತು ಸ್ಪರ್ಧೆಯಲ್ಲಿ ಗೆದ್ದವರಿಗೆ ನೆನಪಿನ ಕಾಣಿಕೆಗಳನ್ನು ವಿತರಿಸಿದರು..

ಎಲ್ಲರಿಗೂ ಸಂತೋಷ.. ಸಡಗರ ಎಲ್ಲರ ಮನತುಂಬಿತ್ತು.. ಕಾಡಿನಲ್ಲಿದ್ದ ಪ್ರಾಣಿ ಪಕ್ಷಿಗಳು ಸಂತಸಗೊಂಡವು... ಅವುಗಳ ಕಲರವ ಕಾರ್ಯಕ್ರಮಕ್ಕೆ ಇನ್ನಷ್ಟು ಮೆರುಗು ನೀಡಿತ್ತು..

ಇಷ್ಟೇನಾ ಅಂದಾಗ.. ರಾಮಾಯಣದ ಲವಕುಶ ಸೇರಿಕೊಂಡು ಅಶ್ವಮೇಧದ ಕುದುರೆಯನ್ನು ಕಟ್ಟಿ ಹಾಕುವ "ಹಯಬಂಧನ" ಎಂಬ ಪ್ರಸಂಗವನ್ನು ಅಚ್ಚುಕಟ್ಟಾಗಿ ಯಕ್ಷಗಾನ ಕಲೆಯಲ್ಲಿ ಮೂಡಿಸಿದವರು ಗಾಣಸೌರಭ ಯಕ್ಷಗಾನ ಕಲಾವೃಂದದ ಮಕ್ಕಳು.. ಯಕ್ಷಗಾನ ಗಂಡುಕಲೆಯೆಂದು ಹೇಳುತ್ತಾರೆ.. ಅದಕ್ಕೆ ಬೇಕಾದ ಶರೀರ, ಶಾರೀರ.. ಆ ಉಡುಗೆತೊಡುಗೆಗಳು ಅಬ್ಬಾ.. ಆ ಮಣಭಾರದ ವೇಷಭೂಷಣದ ಜೊತೆಯಲ್ಲಿ ಅಭಿನಯಿಸೋದು, ಸಂಭಾಷಣೆ ಒಪ್ಪಿಸೋದು.. ಗರ ಗರ ಅಂತ ತಿರುಗುವ, ಸುತ್ತುವ, ಸದಾ ಓಡಾಡುತ್ತಲೇ ಇರುವ ಪಾತ್ರಧಾರಿಗಳ ಹುಮ್ಮಸ್ಸು, ಮತ್ತು ಅವರ ಉತ್ಸಾಹ, ಶಕ್ತಿ ಅಬ್ಬಾ ಅಬ್ಬಾ ಚಪ್ಪಾಳೆ ತಟ್ಟಿ ತಟ್ಟಿ ಎಲ್ಲರ ಕೈಗಳಿಗೆ ನೋವು ಬಂದಿತ್ತೆ ಹೊರತು.. ಆ ಕಲಾವಿದರ ಮೊಗದಲ್ಲಿ ಒಂದು ಬೆವರಿನ ಹನಿ, ಒಂದು ಆಯಾಸದ ತುಣುಕು ಕಾಣಸಿಗಲಿಲ್ಲ.. ಆ ಕಲಾದೇವಿಯ ಮಕ್ಕಳಿಗೆ ಒಂದು ನಮೋನಮಃ.. ಮತ್ತು ಭಾಗವತರಿಗೆ, ಚಂಡೆ, ಮತ್ತು ಪಕ್ಕವಾದ್ಯದ ಪ್ರವೀಣರಿಗೆ ಅಭಿನಂದನೆಗಳು ಎಂದು ಎಲ್ಲರೂ ಹೇಳಿದರು..


ಅಧ್ಯಕ್ಷ ಸ್ಥಾನದಲ್ಲಿ ಇದ್ದ ಸತೀಶ ನಾಯಕರು.. ಪಕ್ಕ ಕವಿಗಳ ಧಿರಿಸಿನಲ್ಲಿದ್ದರು.. ಕಾರ್ಯಕ್ರಮದ ಬಗ್ಗೆ ಮಾತಾಡಿದರು, ಧನ್ಯವಾದಗಳನ್ನು ಅರ್ಪಿಸಿದರು..

ಕಡೆಯಲ್ಲಿ ನೆರೆದಿದ್ದವರೆಲ್ಲ ಗುಂಪಾಗಿ ಹಿರಿಯ ಸಾಹಿತಿಗಳು, ಕವಿಗಳು, ನಾಟಕಕಾರರ ಜೊತೆಯಲ್ಲಿ ಒಂದು ಚಿತ್ರ ಬರೆಸೋಣ ಅಂತ.. ಅಲ್ಲಿದ್ದ ಚಿತ್ರಕಾರರಿಗೆ ಹೇಳಿದರು.. ಆ ಚಿತ್ರಕಾರ ಕುಂಚ, ಬಣ್ಣ, ದೊಡ್ಡ ವಸ್ತ್ರ ತರಲು ಓಡಿದ.. ಅಷ್ಟರೊಳಗೆ ಆ ಸಾಹಿತಿಗಳು.. ಬೇಡಪ್ಪ ಬೇಡ.. ನಾವೆಲ್ಲಾ ಹಾಗೆ ನಿಮ್ಮೊಳಗೆ ಸೇರಿಕೊಂಡು ಬಿಡುತ್ತೇವೆ ಎಂದು ಬಂದಿದ್ದವರಿಗೆ ಯಾರು ಯಾರು ಇಷ್ಟವೋ ಅವರೊಳಗೆ ಆ ಮಹನೀಯರು ಸೇರಿಕೊಂಡು ಬಿಟ್ಟರು..

ಸರಿ.. ಹಾಗೆ ಎಲ್ಲರೂ ವೇದಿಕೆಯ ಮೇಲೆ ಬಂದು.. ಒಂದು ಚಿತ್ರ ತೆಗೆಸಿಕೊಂಡಾಗ ಸಾರ್ಥಕ ಭಾಗ ಎಲ್ಲರ ಮನದಲ್ಲಿ.. ಅಡಿಕೆ ಹಾಳೆಯಲ್ಲಿ ಎಲ್ಲರೂ ಊಟ ಸೇವಿಸಿ ನಿರ್ಗಮಿಸಲು ಹೊರಟಾಗ.. ಗಡಿಯಾರ ನೋಡಿಕೊಂಡರು.. ಅರೆ ನಮ್ಮ ಕಾಲಘಟ್ಟಕ್ಕೆ ಬಂದು ಬಿಟ್ಟಿದ್ದೇವೆ.. ಇದು ಹೇಗೆ ಎಂದು ಎಲ್ಲರೂ ಆಶ್ಚರ್ಯ ಚಕಿತರಾಗಿದ್ದಾಗ ಅಶರೀರವಾಣಿ ನುಡಿಯಿತು..

"ಕನ್ನಡಾಭಿಮಾನಿಗಳೇ.. ನಿಮ್ಮ ಈ ನಾಡು ನುಡಿಯ ಬಗ್ಗೆ ಇರುವ ಕಾಳಜಿಗೆ ಒಂದು ದೊಡ್ಡ ನಮನಗಳು.. ನಿಮ್ಮ ಈ ಶ್ರಮ, ಪರಿಶ್ರಮ ಸದಾ ಯಶಸ್ಸಿನೆಡೆಗೆ ಸಾಗುತ್ತಲೇ ಇರಲಿ .. ನೋಡಿ ನಿಮ್ಮ ಈ ಗುಂಪಿನ ನಾಯಕಿಗೆ ಸದಾ ಆಶೀರ್ವಾದದ ಬೆಳಕು ಸದಾ ಬೀರುತ್ತಲೇ ಇರುತ್ತೇನೆ..


"ನಿಮಗೆಲ್ಲ ಶುಭವಾಗಲಿ.. ಇದೆ ರೀತಿಯ ಸಮಾರಂಭಗಳು, ಸಡಗರಗಳು ತುಂಬಿ ಹರಿಯುತ್ತಲೇ ಇರಲಿ.. ನೀವು ಬಸ್ಸಿನಲ್ಲಿ ಬಂದದ್ದು.. ಕಾಲಘಟ್ಟದ ಹಿಂದಕ್ಕೆ.. ಅಂದರೆ ಭಾಷೆಯ ಆರಂಭದ ದಿನಗಳಿಗೆ.. ಭಾಷೆ ಬೆಳೆಯುತ್ತಾ ಹೋದ ಹಾಗೆ ನೀವು ಕೂಡ ಮುಂದೆ ಮುಂದೆ ಬರುತ್ತಲೇ ಇದ್ರಿ. .. ಹೊಸಕನ್ನಡ ಕವಿತೆಗಳು, ಮಾತುಗಳು, ಯಕ್ಷಗಾನ ಇವುಗಳೆಲ್ಲ ಬಂದ್ದದ್ದರಿಂದ ಹಾಗೇ ನಿಮ್ಮ ಕಾಲಘಟ್ಟಕ್ಕೆ ಬಂದು ಬಿಟ್ಟಿದ್ದೀರಿ.. ನಿಮ್ಮ ವಾಚುಗಳು ನೋಡಿ ಸರಿಯಾದ ಸಮಯ ತೋರಿಸುತ್ತಿದೆ.. ಯಾಕೆ ಗೊತ್ತಾ "ಈ ಸಮಯ ಆನಂದಮಯ" ಅಂತ ಕರುನಾಡ ಅಭಿಮಾನಿಗಳ ದೇವರುಗಳ ದೇವರು ಹೇಳಿರುವ ಹಾಡಿನಂತೆ ಸುಂದರ ಸಮಯವಿದು.. ಈ ಕ್ಷಣಗಳನ್ನು ನಿಮ್ಮ ಕಣ್ಣ ಮುಂದೆ ತರಲು ಆ ಛಾಯಾಗ್ರಾಹಕರು ಪ್ರಯತ್ನ ಪಟ್ಟಿದ್ದಾರೆ ನೋಡಿ.. ಆನಂದಪಡಿ ಶುಭವಾಗಲಿ.. "

3K - ರಾಜ್ಯೋತ್ಸವ ಸಂಭ್ರಮ : 16.12.2018 - ಎಲ್ಲರಿಗೂ ಆತ್ಮೀಯ ಸ್ವಾಗತ :)

೩ಕೆ ತಂಡಕ್ಕೆ ಒಂದು ಅಭಿನಂದನೆ ಸಲ್ಲಿಸುತ್ತಾ, ತೆರೆಮರೆಯಲ್ಲಿ ಪರಿಶ್ರಮಿಸಿದ ಎಲ್ಲರಿಗೂ ಅಭಿನಂದನೆಗಳನ್ನು ಮತ್ತು ಧನ್ಯವಾದಗಳನ್ನು ಸಲ್ಲಿಸುವ ಒಂದು ಪುಟ್ಟ ಪ್ರಯತ್ನ ಈ ಲೇಖನ.. ೩ಕೆ ಚಿರಾಯುವಾಗಲಿ.. ಶುಭವಾಗಲಿ ..ಕನ್ನಡವೇ ಗೆಲ್ಲೋದು.. ಕನ್ನಡವೇ ಉಳಿಯೋದು.. !!!

18 comments:

 1. ಕಾರ್ಯಕ್ರಮದ ಪೂರ್ಣ ಅನುಭೂತಿ ಸಿಕ್ಕಿತು... ಧನ್ಯವಾದ ಸರ್... ಬ್ಲಾಗ್ ಹೀಗೇ ಜೀವಂತವಾಗಿರಲಿ... ನನ್ನ ಬ್ಗಾಗ್ ಗೆ ಬನ್ನಿ... ಕವನ ಇದೆ... dinakarmoger.blogspot.com

  ReplyDelete
  Replies
  1. ಧನ್ಯವಾದಗಳು ದಿನಕರ್.. ಬ್ಲಾಗ್ ಜೀವಂತವಾಗಿಯೇ ಇರುತ್ತೆ.. ಅದೇ ಅಲ್ಲವೇ ಸ್ಫೂರ್ತಿ ಕೊಡುವ ಸೆಲೆ

   Delete
 2. Est chennagi bardiddira Anna.. Nija.. Ond olle karyakrama...

  ReplyDelete
 3. ಕೆಲಸ ಬಾಹುಳ್ಯದಿಂದ ತಲೆ ತಪ್ಪಿಸಿಕೊಳ್ಳುವಂತಹ ನೋವು ಮರೆಸಲು ಇಂತಹ ಕಣ್ಣಿಗೆ ಕಟ್ಟುವಂತಹ ಅದ್ಭುತ ಚಿತ್ರ ಬರಹ.
  ಶ್ರೀಮಾನ್ ಬರಹಗಳ ಶೈಲಿ ಮತ್ತು ಅದರ ಆಪ್ತ ಭಾವ, ವಾರೇವ್ಹಾ...

  ReplyDelete
  Replies
  1. ಮಿಸ್ ಆಗುತ್ತಲೇ ಇರುತ್ತದೆ.. ಹೊತ್ತು ಮಾಡಿಕೊಳ್ಳಬೇಕು ಬದರಿ ಸರ್..
   ಧನ್ಯವಾದಗಳು

   Delete
 4. ಎಂದಿನಂತೆ, ನಿಮ್ಮದೇ ಶೈಲಿಯಲ್ಲಿ ಅಕ್ಕರೆಯಿಂದ ವಿವರವನ್ನು ಕಟ್ಟಿಕೊಟ್ಟಿದ್ದೀರಿ. ನಿಮ್ಮನ್ನು ಭೇಟಿಯಾದದ್ದು ಸಂತೋಷವಾಯಿತು.

  ReplyDelete
  Replies
  1. ಧನ್ಯವಾದಗಳು ಗುರುಗಳೇ

   Delete
 5. ಮತ್ತೊಮ್ಮೆ ನಾ ಅದೇ ಬಸ್ಸು ಹತ್ತಿ ಪಯಣ ಮುಗಿಸಿ ಸಂಭ್ರಮಿಸಿದ ಅನುಭವವಾದಂತಾಯಿತು. ಯುವ ಜನಾಂಗದ ಉತ್ಸಾಹ ನಿಜಕ್ಕೂ ಸ್ಪೂರ್ತಿದಾಯಕವಾಗಿತ್ತು. ಕನ್ನಡತಿ ಸುರಕ್ಷಿತವಾಗಿದ್ದಾಳೆಂಬ ಭಾವ ಮೂಡಿತು. ಉತ್ತಮ ವಿವರಣೆ. ಈ ಸಂಭ್ರಮಕ್ಕೆ ಕಾರಣೀಭೂತರಾದ ಎಲ್ಲ ಮಹನೀಯರುಗಳಿಗೂ ಅಭಿನಂದನೆಗಳು. ಕನ್ನಡಮ್ಮನ ತೇರು ಹೀಗೆ ಸಂಭ್ರಮ, ಸಂತಸದೊಂದಿಗೆ ಸದಾ ನಗು ನಗುತ್ತ ಸಾಗುತ್ತಲಿರಲಿ.

  ReplyDelete
  Replies
  1. ಆಹಾ .. ನೀವೆಲ್ಲಾ ಇದ್ರಿ.. ಅದೇ ಶೋಭೆ ಕೊಟ್ಟಿತು.. ಧನ್ಯವಾದಗಳು ಶ್ರೀ ಪಾದ್ ಮಂಜುನಾಥ್ ಸರ್

   Delete
 6. ಶ್ರೀ 3K ಸಂಭ್ರಮದ ಕುರಿತಾಗಿ ಬರೆದಿರುವ ಬರಹ ನಿಜಕ್ಕೂ ಬಹಳ ಸೊಗಸಾಗಿದೆ ನಮ್ಮ ಮುಂದೆ ಕಣ್ಣಿಗೆ ಕಟ್ಟಿದ ಹಾಗೆ ಇದೆ ಸುಂದರ ಚಿತ್ರಗಳ ಅಳವಡಿಕೆ ಬರಹಕ್ಕೆ ವಿಶೇಷ ಮೆರಗು ತಂದು ಕೊಟ್ಟಿದೆ ಓದಿದವರಿಗೆ ಬರಹಗಾರರ ಹಾಗೂ ಇತರರ ಪರಿಚಯ ಕೂಡ ನಿನ್ನ ಬರವಣಿಗೆಯಿಂದ ದೊರೆಯುತ್ತದೆ ಒಟ್ಟಿನಲ್ಲಿ ಒಂದು ಸುಂದರವಾದ blog ಶ್ರೀ ..... ನಿನ್ನ ಬರಹಗಳು ಹೀಗೆ ಸಾಗಲಿ ಎಂದು ಆಶಿಸುವೆ ಶುಭವಾಗಲಿ

  ReplyDelete
  Replies
  1. ಧನ್ಯವಾದಗಳು ಪಿಬಿಎಸ್ ಸೊಗಸಾದ ಪ್ರತಿಕ್ರಿಯೆ.. ಓದುಗರಿಗೆ ಇಷ್ಟ ನಮಗೆ ಖುಷಿ

   Delete
 7. ಶ್ರೀಕಾಂತ,
  ಮೊತ್ತಮೊದಲಿಗೆ, ಎಂದೂ ಆಪ್ತವಾಗುವ ನಿನ್ನ ಅಕ್ಷರಗಳಿಗೆ ಅಭಿನಂದನೆಗಳು. ಬಹಳ ಚೆನ್ನಾಗಿ ಬರೆದಿದ್ದೀಯ ಅಂತ ನಿನಗೆ ಹೇಳೋದು ನನ್ನ ಮಟ್ಟಿಗೆ ಓವರ್ ಯೂಸ್ಡ್ ಟರ್ಮ್. ಆದರೂ ಪರ್ಯಾಯ ಕಾಣದೆ ಮತ್ತೊಮ್ಮೆ "ಬಹಳ ಚೆನ್ನಾಗಿ ಬರೆದಿದ್ದೀಯ" ಅನ್ನೋದೇ ನನ್ನ ಬತ್ತಳಿಕೆಯಲ್ಲಿರೋ ಏಕೈಕ ಬಾಣ!
  ೩ಕೆ ಕನ್ನಡ ರಾಜ್ಯೋತ್ಸವದ ಸ್ತಬ್ಧ ಚಿತ್ರಗಳು ನಿನ್ನ ಅಕ್ಷರಗಳಿಂದ ಚಾಲನೆ ಪಡೆದಿವೆ. ಇಡಿ ಕಾರ್ಯಕ್ರಮದ ಎಲ್ಲ ಎಳೆಗಳನ್ನೂ ಕಾಣಿಸಿ, ಅಲ್ಲಿಗೆ ಬಂದಿದ್ದವರಿಗೆ ಒಂದು ಮೆಲುಕು; "ನನಗೆ ತಪ್ಪಿಹೋಯ್ತಲ್ಲ" ಎನ್ನುವ ನನ್ನಂತೆ ಬರೆದಿದ್ದವರ ಕೊರಗನ್ನ "ಅಲ್ಲಿದ್ದಿದ್ರೆ ಮತ್ತೂ ಚೆನ್ನಾಗಿತ್ತಲ್ಲ" ಅನ್ನುವಂತೆ ಮಾಡಿದ್ದೀಯ! ಓದಿ ಸಂತೋಷವಾಯ್ತು‌
  ಆದರೆ, ಒಂದೇ ವಿವರ ಒಗಟಾಗಿ ನೀನು ಉಳಿಸಿದ್ದಂದ್ರೆ ಆಶ್ರಮದ ಹೆಸರು! ಅದು ಉದ್ದೇಶಿತವಾಗಿ ಬಿಟ್ಟೆಯೋ ಅಥವಾ ತಪ್ಪಿಹೋಗಿದೆಯೋ ತಿಳೀಲಿಲ್ಲ!

  ReplyDelete
  Replies
  1. ಏನು ಗುರುವೇ ಅದ್ಭುತ ಪ್ರತಿಕ್ರಿಯೆ.. ಧನ್ಯವಾದಗಳು ಮನಸ್ಸು ಹಕ್ಕಿಯ ಹಾಗೆ ಹಾರುತ್ತಿದೆ

   Delete