Wednesday, June 18, 2014

ಜನುಮ ಜನುಮದ ಅನುಬಂಧ.....!

ಅಣ್ಣಾವ್ರ ಹಾಲು ಜೇನು ಚಿತ್ರದ ಹಾಡು ಜೋರಾಗಿ ನನ್ನ ಕಾರಿನಲ್ಲಿ ಬರುತ್ತಿತ್ತು... 

"ಶ್ರೀ ರಂಗನಾಥನಂತೆ ಮಲಗಿಹ ನಿನ್ನ ಕಂಡೆ.. ಆನೆಯ ಮೇಲೆ ಅಂಬಾರಿ ಕಂಡೆ...  ಅಂಬಾರಿ ಒಳಗೆ ನಿಮ್ಮನ್ನೇ ಕಂಡೆ.. ನನ್ನೇ ನಾ ಕಂಡೆ.. ನಿಮ್ಮೊಳಗೆ ನನ್ನೇ ನಾ ಕಂಡೆ.. "

ಕಾರ್ ಸ್ಟೀರಿಯೋ ಯಾಕೋ ನನ್ನ ಕಡೆಯೇ ನೋಡಿ.. ಅಣಕಿಸಿದಂತೆ ಭಾಸವಾಯಿತು.. "ಏನೋ ಶ್ರೀಕಾಂತ ಇದು... ಚಿ. ಉದಯಶಂಕರ್  ಬರೆದಿರುವ ಸಾಹಿತ್ಯವೆ ಬೇರೆ ನಿನ್ನ ಕಾರಿನಲ್ಲಿ ಬರುತ್ತಿರುವ ಸಾಹಿತ್ಯವೇ ಬೇರೆ.. ಏನಿದರ ಕಥೆ.. ನೋಡು ಶ್ರೀ ಸುಮ್ಮನೆ ನೇರವಾಗಿ ಕಥೆ ಹೇಳುವುದಾದರೆ ಹೇಳು.. ನೀನು ನಿನ್ನ ವಿಚಿತ್ರ ಶೈಲಿಯಲ್ಲಿ ಕಥೆ ಹೇಳುವುದಾದರೆ ನಾ ಕೇಳಲು ಸಿದ್ದನಿಲ್ಲ.. "

"ಇಲ್ಲಪ್ಪ.. ಸುಮ್ಮನೆ ಮೆಗಾ ಧಾರಾವಾಹಿ ತರಹ ರಬ್ಬರ್ ಮಾಡೋಲ್ಲ.. ಸಂಕ್ಷಿಪ್ತವಾಗಿಯೇ ಹೇಳಿ ಬಿಡುತ್ತೇನೆ..  "

"ಹಾ ಸರಿ.. ಶುರು ಮಾಡು"

"ಮೈಸೂರು ರಾಜ್ಯ ಎಂದೇ ಹೆಸರಾಗಿದ್ದ ಒಂದು ಕಾಲದ ಸಾಂಸ್ಕೃತಿಕ ನಗರಿ... ಇನ್ನೂ ರಾಜ ಪರಂಪರೆಯನ್ನು ಜೀವಂತವಾಗಿ ಉಳಿಸಿಕೊಂಡ ಹಲವು ಪ್ರದೇಶಗಳಲ್ಲಿ ಇದು ಕೂಡ ಒಂದು.. ಮಲ್ಲಿಗೆ ಹೂವು, ಸಿಹಿ ತಿನಿಸು, ರೇಷ್ಮೆ ಸೀರೆ ಇವೆಲ್ಲ ಪ್ರಖ್ಯಾತಗೊಂಡಿದ್ದವು.. ಆದರೆ ಅವಕ್ಕೆಲ್ಲ ಮೈಸೂರು ಎನ್ನುವ ಪದವನ್ನು ತಮ್ಮೊಳಗೆ ಸೇರಿಸಿಕೊಂಡು ಅದನ್ನು ಒಂದು ಬ್ರಾಂಡ್ ಮಾಡಿಬಿಟ್ಟವು.. "

"ಹಾ ಮುಂದೆ"

"ಹಾಗೆಯೇ ನಮ್ಮ ಬ್ಲಾಗ್ ಲೋಕದಲ್ಲಿ ಮೈಸೂರು ಎಂದರೆ ಧುತ್ ಅಂತ ಎದುರಿಗೆ ಬರುವುದು.. ನಿಮ್ಮೊಳಗೆ ನಾನು.. ನಿಮ್ಮೊಳಗೊಬ್ಬ ನಾನು.. ನಿಮ್ಮೊಳಗೊಬ್ಬ ಬಾಲೂ ಅಂತ ನಸು ನಗುತ್ತಾ.. ಅರ್ಜುನ ತನ್ನ ಬತ್ತಳಿಕೆಯಿಂದ ಹಸ್ತಿನಾಪುರದಲ್ಲಿ ವಿಧ್ಯಾಭ್ಯಾಸ ಮುಗಿಸಿಕೊಂಡು ಬಂದ  ಮೇಲೆ ಅನೇಕ ಚಮತ್ಕಾರಗಳನ್ನು ತೋರಿದ ಹಾಗೆ.. ಇವರು ಕೂಡ ಸದಾ ಕ್ಯಾಮೆರ ಧಾರಿ.. ಇವರ ದೃಷ್ಟಿಗೆ ಬೀಳದ ಸುಂದರ ಸನ್ನಿವೇಶಗಳು ಇರಲು ಸಾಧ್ಯವೇ ಇಲ್ಲ ಅನ್ನುವಷ್ಟು ಕರಾರುವಾಕ್ ಇವರ ಛಾಯಗ್ರಾಹಕ ಶಕ್ತಿ.. "

"ಹಾ... "

"ರಾಮ, ಅರ್ಜುನ, ಏಕಲವ್ಯ ಇವರೆಲ್ಲ ಶಭ್ದವೇದಿ ವಿಧ್ಯೆಯಲ್ಲಿ ನಿಪುಣರು.. ಹಾಗೆಯೇ ಇವರು ಕೂಡ .. ಅದು ಎಲ್ಲಿರುತ್ತಾರೆ.. ಹೇಗೆ ಚಿತ್ರ ತೆಗೆಯುತ್ತಾರೆ.. ಆ ದೇವನಿಗೆ ಗೊತ್ತು.. ಆ ಚಿತ್ರಗಳನ್ನು ತೆಗೆದು.. ಅದನ್ನು ಪರಿಷ್ಕರಿಸಿ... ಅದಕ್ಕೆ ಒಪ್ಪುವ ಹಾಗೆ ಪದಗಳ ಪೋಷಾಕು ತೊಡಿಸಿ.. ಅವರ ಅಭಿಮಾನಿಗಳ ಮುಂದೆ ಇಟ್ಟಾಗ.. ಹಸಿದವರ ಮುಂದೆ ಇಡುವ ಊಟದಷ್ಟೇ ಸೊಗಸು.."

"ಓಹೊ.. ಸರಿ ಸರಿ ಈಗ ಅರ್ಥವಾಯಿತು.. ನಿನ್ನ ಕಾರು ಮೈಸೂರು ರಸ್ತೆಯಲ್ಲಿ ಸಾಗುತ್ತಿದೆ.. ಅದಕ್ಕೆ ಹಾಡಿನ ಸಾಲುಗಳು ಕೂಡ ಅವರಿಗೆ ಅಭಿನಂದನೆಗಳನ್ನು ಸಲ್ಲಿಸುತ್ತಿವೆ.. ಅಲ್ಲವೇ..ಶ್ರೀ "

"ಹೌದು ನೀ ಹೇಳಿದ್ದು ಸರಿ.. ಮೈಸೂರು ಪಾಕ್, ಮೈಸೂರು ಮಲ್ಲಿಗೆ, ಮೈಸೂರು ಸಿಲ್ಕ್ ಜೊತೆಯಲ್ಲಿ ಮೈಸೂರು ಬಾಲಣ್ಣ ಎಂದೇ ಹೆಸರಾಗಿರುವ ಬಾಲೂ ಸರ್.. ನಮ್ಮ ಆತ್ಮೀಯ ಬಳಗದ ಪ್ರಮುಖರು.. ಅದಕ್ಕೆ ಮೈಸೂರು ಮತ್ತೆ ಬಾಲೂ ಸರ್ ಎರಡಕ್ಕೂ ಬಿಡಿಸಲಾರದ ನಂಟು.. ಬಾಲೂ ಸರ್ ಎಂದರೆ... ಶ್ರೀ ರಂಗನಾಥ ಕೂಡ ಒಮ್ಮೆ ಎದ್ದು ಆಶೀರ್ವಾದ ನೀಡುತ್ತಾರೆ"

"ಶ್ರೀ.. ನಿನ್ನ ಶೈಲಿಯಲ್ಲಿ.. ಅವರು ನಿನಗೆಷ್ಟು ಆಪ್ತರು.. ದಯಮಾಡಿ ಹೇಳು.. ಇದು ನಿನ್ನ ಶೈಲಿಯಲ್ಲಿಯೇ ಇರಬೇಕು.. "

"ಖಂಡಿತ ಹೇಳುತ್ತೇನೆ ..  ಶ್ರೀ ಪುಟ್ಟಣ್ಣ ಕಣಗಾಲ್ ಅವರ ಚಿತ್ರಗಳ ಬಗ್ಗೆ ನನಗೆ ಅರಿವಾದ ವಿಚಾರಗಳನ್ನು ಬರೆಯಲು ಶುರು ಮಾಡಿ ತಿಂಗಳುಗಳೇ ಆಗಿದ್ದವು.. ಕೆಲಸದ ಒತ್ತಡದಿಂದ ಮುಂದುವರೆಸಲು ಆಗಿರಲಿಲ್ಲ... ಒಂದು ಮುಸುಕಿನ ಹೊತ್ತು.. 

"ಲೋ ಶ್ರೀ.. ಶ್ರೀಕಾಂತ.. ಏಳೋ.. ಯಾಕೋ ನನ್ನ ಚಿತ್ರಗಳ ಬಗ್ಗೆ ಬರೆಯುವುದು ನಿಲ್ಲಿಸಿಬಿಟ್ಟಿದ್ದೀಯ.... ನೀ ಬರೆವ ಬರಹಗಳಿಗೆ ಕಾಯುತ್ತಿರುವೆ.. " ಯಾರೋ ಕೂಗಿದಂತೆ ಭಾಸವಾಯಿತು.. ಕಣ್ಣು ಬಿಟ್ಟೆ.. ಗಾಬರಿ ಆಶ್ಚರ್ಯ.. ಎದುರಿಗೆ ಪುಟ್ಟಣ್ಣ ಕಣಗಾಲ್.. 

"ಗುರುಗಳೇ ನಮಸ್ಕಾರ.. ಏನಿದು.. ಮಾಯೆ.. "

"ನಿನ್ನ ಬ್ಲಾಗ್ ನೋಡುತ್ತಿದ್ದೆ.. ಬೆಳ್ಳಿ ಮೋಡ, ಮಲ್ಲಮ್ಮನ ಪವಾಡ ಆದ ಮೇಲೆ ಮುಂದಿನ ಚಿತ್ರದ ಬಗ್ಗೆ ಬರೆದೆ ಇಲ್ಲ ಅದಕ್ಕೆ ನೆನಪಿಸಲು ಬಂದೆ.. " 

ನಾ ಏನೋ ಹೇಳಲು ಬಾಯಿ ತೆರೆದೇ.. ತಕ್ಷಣ.. ಒಂದು ಆತ್ಮೀಯ ಹಸ್ತ ನನ್ನ ಹೆಗಲ ಮೇಲೆ ಬಂತು.. ನನ್ನ ಬೆನ್ನು ತಟ್ಟಿ "ಪುಟ್ಟಣ್ಣಾಜಿ.. ದಯಮಾಡಿ ಶ್ರೀಕಾಂತ್ ಜಿ ಯನ್ನು ಬಯ್ಯಬೇಡಿ.. ಅವರು ಬರೆಯುತ್ತಾರೆ.. ನಿಮ್ಮ ಎಲ್ಲಾ ಚಿತ್ರಗಳ ಬಗ್ಗೆ ಅವರು ಬರೆಯುತ್ತಾರೆ.. ನಾ ಅವರ ಬೆನ್ನ ಹಿಂದೆ ಇರುತ್ತೇನೆ.. ಕೆಲಸದ ಒತ್ತಡ ಅಪಾರವಾಗಿದೆ.. ಹಾಗಾಗಿ ಅವರಿಗೆ ಬರೆಯಲು ಸಾಧ್ಯವಾಗಿಲ್ಲ.. ನಿಮ್ಮ ಎಲ್ಲಾ ಚಿತ್ರಗಳ ಬಗ್ಗೆ ಅವರು ಬರೆದೆ ಬರೆಯುತ್ತಾರೆ ಅದರ ಜವಾಬ್ಧಾರಿ ನನ್ನದು.. " ಎಂದರು ಬಾಲೂ ಸರ್.. 

"ಓಕೆ ಬಾಲೂಜಿ.. ನಿಮ್ಮ ಅಭಿಮಾನದ ಅಭಯ ಹಸ್ತ ಶ್ರೀಕಾಂತನ ತಲೆಯ ಮೇಲೆ ಇದೆ.. ಹಾಗಾಗಿ ನಾ ಏನೂ ಹೇಳುವುದಿಲ್ಲ.. ಹಾಗೆಯೇ ನಾ ಹುಟ್ಟಿದ ಊರನ್ನು ನೋಡುವ ಅವನ ಕನಸನ್ನು ನನಸು ಮಾಡಿದ್ದು ನೀವು... ನನ್ನ ತಮ್ಮ ನರಸಿಂಹ ಶಾಸ್ತ್ರಿಯ ಹತ್ತಿರ ಬೆಳ್ಳಿಮೋಡದ ಚಿತ್ರೀಕರಣದ ಕಥೆಯನ್ನು ಲೋಕಕ್ಕೆ ತಿಳಿಯುವಂತೆ ಮಾಡಿದ್ದು ನೀವು.. ನಿಮ್ಮ ಬಗ್ಗೆ ನನಗೆ ಅಪಾರ ಗೌರವ.. ಸರಿ ನಾ ಹೋಗಿ ಬರುವೆ.. ಬೇಗ ಬೇಗ ಲೇಖನವನ್ನು ಬರೆಯಲು ಹಿತವಾದ ಒತ್ತಡವನ್ನು ಶ್ರೀ ಮೇಲೆ ಹಾಕಿ.. " ನಸು ನಗುತ್ತಾ ಪುಟ್ಟಣ್ಣ ಕಣಗಾಲ್ ಹೊರಟೆ ಬಿಟ್ಟರು.. 

ಶ್ರೀ ಪುಟ್ಟಣ್ಣ ಕಣಗಾಲ್ ಅವರ ಸಹೋದರ ಶ್ರೀ ನರಸಿಂಹ ಶಾಸ್ತ್ರಿ ಅವರ ಜೊತೆಯಲ್ಲಿ
(ಚಿತ್ರ ಕೃಪೆ - ಬಾಲೂ ಸರ್ )

ಬಿಟ್ಟ ಕಣ್ಣು ಬಿಟ್ಟ ಹಾಗೆಯೇ ಇತ್ತು... ಕನಸೋ ನನಸೋ ಒಂದು ಅರಿಯದು.. 

"ಹೀಗೆ.. ಒಬ್ಬರ ಕನಸ್ಸನ್ನು ನನಸು ಮಾಡಲು ಇವರು ಪಡುವ ಶ್ರಮ.. ಆ ಕನಸು ಅವರದೇ ಎಂದು ಅದನ್ನು ಹೆಗಲ ಮೇಲೆ ಹೊತ್ತು ನನಸು ಮಾಡುವ ತಾಕತ್ ನಮ್ಮ ಬಾಲೂ ಸರ್ ಅವರದು.. ಹಾಗಾಗಿ... ಪುಟ್ಟಣ್ಣ ಅವರು ಓಡಾಡಿದ ಜಾಗವನ್ನು ನೋಡಿ ಬರಲೇ ಬೇಕು ಎಂಬ ಹಠ ಹೊತ್ತ ಕನಸ್ಸನ್ನು ನನಸು ಮಾಡಿದ್ದು ಅಲ್ಲದೆ... ಕನಸಲ್ಲಿ ಪುಟ್ಟಣ್ಣ ಅವರು ನನ್ನನ್ನು ಹುಸಿ ಮುನಿಸಿನಿಂದ ಗದರಿಸಲು ಬಂದರೆ ಅಲ್ಲಿಯೂ ಕೂಡ ತಾವು ಬಂದು ನನ್ನನ್ನು ಬೆಂಬಲಿಸಿದರು.. ಇದಕ್ಕಿಂತ ಆತ್ಮೀಯತೆ ಇರಲು ಸಾಧ್ಯವೇ.. "

ಕಾರ್ ಸ್ಟೀರಿಯೋ ಒಂದು ಕ್ಷಣ ಮೌನ.. ಸಾಕ್ಷಾತ್ಕಾರ ಚಿತ್ರದ.. "ಜನುಮ ಜನುಮದ ಅನುಬಂಧ.. ಹೃದಯ ಹೃದಯಗಳ ಪ್ರೇಮಾನುಬಂಧ.. " ಹಾಡು ಶುರುವಾಯಿತು... 

ಇಂಥಹ ಸುಮಧುರ ಪ್ರೀತಿ ವಿಶ್ವಾಸ ಅಭಿಮಾನ ಎಲ್ಲವನ್ನು ಆ ಪುಟ್ಟ ನಗುವಿನಲ್ಲಿ ತುಂಬಿಕೊಂಡು ಸದಾ ಎಲ್ಲರನ್ನೂ ನಗಿಸುತ್ತಾ.. ಎಲ್ಲೋ ಒಂದು ಸಣ್ಣ ಝರಿಯಾಗಿ ಹುಟ್ಟುವ ಒಂದು ಒರತೆ.. ಹಾದಿಯಲ್ಲಿ ಸಿಕ್ಕಿದ್ದನ್ನೆಲ್ಲ ತನ್ನ ಒಡಲಲ್ಲಿ ಸೇರಿಸಿಕೊಂಡು ಸಮುದ್ರ ಆಗುವ ಹಾಗೆ.. ನಮ್ಮ ಬಾಲೂ ಸರ್ ತಮ್ಮ  ಮುಗ್ಧ ಪ್ರೀತಿಯಲ್ಲಿ ನಮ್ಮೆಲ್ಲರನ್ನೂ ಬರಸೆಳೆದುಕೊಂಡು ನಗು ನಗುತ್ತಾ ಸ್ನೇಹ ಪ್ರೀತಿ ಹಂಚುವ ಅವರ ಆತ್ಮೀಯ ಪ್ರೀತಿಯ ಪರಿಗೆ ನಮ್ಮ ಸಲಾಂ.. 

ಇಂದು ಅವರ ಜನುಮದ ದಿನ... ಅವರ ಬಗ್ಗೆ ಚುಟುಕು ಪ್ರೀತಿಯ ಪದಗಳನ್ನು ಬರೆಯುವುದು ಅಕ್ಷರಗಳಿಗೆ ಸಿಕ್ಕ ಗೌರವ ಅನ್ನಿಸುತ್ತದೆ.. ನಾ ಬರೆಯದೆ ಹೋದರೂ ಅಕ್ಷರಗಳೇ ಸಾಲಾಗಿ ನಿಂತು.. ಶ್ರೀ ನಾವೂ ಹೀಗೆ ಒಬ್ಬರಿಗೊಬ್ಬರು ಜೊತೆಯಲ್ಲಿ ನಿಲ್ಲುತ್ತೇವೆ.. ಅದೇ ಒಂದು ಲೇಖನವಾಗಿ ಬಿಡುತ್ತದೆ.. ಅನ್ನುತ್ತವೆ.. 

ಬಾಲೂ ಸರ್ ನಿಮ್ಮ ಜಗದಗಲದ ಪ್ರೀತಿ ವಿಶ್ವಾಸಕ್ಕೆ ನಾವೆಲ್ಲಾ ಚಿರಋಣಿಗಳು.. ನಿಮ್ಮ ಹುಟ್ಟು ಹಬ್ಬದ ಬ್ಲಾಗ್ ಜಗತ್ತಿನ ಒಂದು ಸಂಭ್ರಮಕ್ಕೆ ಸಂಭ್ರಮ...  ಬ್ಲಾಗ್ ಜಗತ್ತಿನ ಎಲ್ಲಾ ಹೃದಯಗಳಿಗೂ ನಿಮ್ಮ ಪ್ರೀತಿ ತಲುಪುತ್ತಿದೆ.. . ನಮ್ಮೆಲ್ಲರ ಆತ್ಮೀಯ ಶುಭ ಹಾರೈಕೆಗಳು ನಿಮ್ಮ ಸುಂದರ ದಿನವನ್ನು ಇನ್ನಷ್ಟು ಸುಂದರವಾಗಿ ಬೆಳಗಲಿ.. 

ಫೇಸ್ ಬುಕ್ ನ ಸಮಯದ ಗೆರೆಯನ್ನು ಬಂಧಿ ಮಾಡಿರಬಹುದು.. ಆದರೆ ನಮ್ಮೆಲ್ಲರ ಹೃದಯದಲ್ಲಿ ಅವರು ಮೂಡಿಸಿರುವ ಪ್ರೀತಿಯ ಗೆರೆಯನ್ನು ಬಂಧಿ ಮಾಡಲು ಸಾಧ್ಯವೇ ಇಲ್ಲ.. ನಮ್ಮ ಅಭಿಮಾನಪೂರಿತ ಮಾತುಗಳು ಅವರನ್ನು ತಲುಪಿಯೇ ತಲುಪುತ್ತದೆ.. 
ನಮ್ಮೊಡನೆ ಇರುವ ಸುಂದರ ಮನಸ್ಸಿನ ಬೇಟೆಗಾರ
(ಚಿತ್ರ ಕ್ರುಪ್ತೆ - ಬಾಲೂ ಸರ್)

ಹುಟ್ಟು ಹಬ್ಬದ ಶುಭಾಶಯಗಳು ಬಾಲೂ  ಸರ್.. !!!

11 comments:

  1. ನಮ್ಮ ಮನಸ್ಸಿನ ಭಾವಗಳನ್ನು ತುಂಬ ಚಂದವಾಗಿ ಬರೆದಿದ್ದೀರಿ.... ನಿಮ್ಮ ಬರವಣಿಗೆಗೆ... ನಿಮ್ಮ ಸ್ನೇಹದ ಪ್ರೀತಿಗೆ ನಮ್ಮ ಸಲಾಮ್...

    ReplyDelete
  2. ನಮ್ ಬಾಲಣ್ಣಾ ಅಂದರೆ ಪ್ರೀತಿ...

    ಅವರು ಸ್ನೇಹಿತರನ್ನು ಪ್ರೀತಿಸುತ್ತಾರೆ...
    ಸಹೋದರ.. ಸಹೋದರಿಯರನ್ನು ಪ್ರೀತಿಸುತ್ತಾರೆ..

    ಅವರಿಗೆ ಇತಿಹಾಸವೆಂದರೆ ಬಲು ಆಸಕ್ತಿ...

    ಎಲ್ಲಿ ಹೋದರೂ ಅವರೊಡನೆ ಅವರ ಕ್ಯಾಮರಾ ಇದ್ದೇ ಇರುತ್ತದೆ...
    ಹತ್ತು ಹಲವಾರು ಆಸಕ್ತಿ.. ಹವ್ಯಾಸ ಅವರಿಗೆ..

    ಬದುಕನ್ನು ಪ್ರೀತಿಸುತ್ತಾರೆ..
    ಬದುಕಿನ ಬಗೆಗಿನ ಅವರ ಪ್ರೀತಿ ನಮಗೆಲ್ಲ ಒಂದು ಆದರ್ಶ...

    ನಾವೆಲ್ಲ ಅವರ ಸ್ನೇಹದ.. ಪ್ರೀತಿಯ ಹೂ ಮಳೆಯಲ್ಲಿ ಮಿಂದವರು...

    ನಮ್ಮ ಪ್ರೀತಿಯ ಬಾಲಣ್ಣ ಅವರ ಜನ್ಮ ದಿನ ಇವತ್ತು..

    ಹುಟ್ಟು ಹಬ್ಬದ ಶುಭಾಶಯಗಳು ಬಾಲಣ್ಣಾ..

    ನಿಮ್ಮೆಲ್ಲ
    ಆಸೆ...
    ಕನಸುಗಳು ನನಸಾಗಲಿ...

    ReplyDelete
  3. ಶ್ರೀ ನಿಮ್ಮ ಕಾರು ಸುಮಾರು ಮಾತಾಡುತ್ತೆ.... :) ಆತ್ಮಿಯರ ಹುಟ್ಟು ಹಬ್ಬಕ್ಕೆ ಇನ್ನೊಂದು ಆತ್ಮೀಯವಾದ ಕೊಡುಗೆ... ಸೂಪರ್ ಆಗಿದೆ.

    ಹುಟ್ಟು ಹಬ್ಬದ ಶುಭಾಶಯಗಳು ಬಾಲಣ್ಣಾ .. ನಿಮ್ಮ ನಗು ಸದಾ ಬೆಳಗಲಿ :)

    ReplyDelete
  4. ಅಣ್ಣಯ್ಯಾ.. ಚಂದ ಮತ್ತು ಚಂದ..
    ಹುಟ್ಟು ಹಬ್ಬದ ಶುಭಾಶಯಗಳು ಬಾಲಣ್ಣಾ...

    ReplyDelete
  5. Sri, you are a Master :)
    ಸದಾ ಹಸನ್ಮುಖಿ, ಸ್ನೇಹಮಯಿ, ಎಲ್ಲರೊಂದಿಗೂ ಪ್ರೀತಿ ಮಮತೆ ವಿಶ್ವಾಸ ಬೆಸೆಯುವ
    ನಮ್ಮೆಲ್ಲರ ನೆಚ್ಚಿನ ಬಾಲಣ್ಣ - ನಿಮಗೆ "Happy Happy Birthday"

    ReplyDelete
  6. ಬೆಳಗಿನ ತಿಂಡಿ ಮುಗಿಸಿ ಪೇಪರ್ ಕೈಗಿರಿಸಿಕೊಂಡವಳನ್ನು ನನ್ನ ಫೋನ್ " ನನ್ನನ್ನೇ ನೋಡದೆ ಪೇಪರ್ ನೋಡ್ತಿಯಾ ?" ಅಂತ ಸದ್ದು ಮಾಡಿತು . ಸರಿ ಏನಮ್ಮ ನಿನ್ನ ರಗಳೆ ಅಂತ ಮೊಬೈಲ್ ನೋಡಿದ್ರೆ ಜಿ ಟಾಕ್ ಸಂದೇಶ ... ಜೊತೆಗೊಂದು ಲಿಂಕು ... ಪಾಯಿಂಟ್ ಪಂಚರಂಗಿಯದು ... ಪಂಚರಂಗಿಯಲ್ಲಿ ಪಾಯಿಂಟ್ ಇದೆ ಅಂದಮೇಲೆ ಯಾವುದೋ "ಅಕ್ಷರ ಕಾಮಬಿಲ್ಲು " ಇಲ್ಲದೆ ಹೋಗುತ್ತಾ ?? ಸೊ ಪೇಪರ್ ಮೂಲೆಗಿಟ್ಟು ಸೀದಾ ಪಾಯಿಂಟ್ ಪಂಚರಂಗಿ ಆಕಾಶಕ್ಕೆ .... :) ನೋಡಿದರೆ ಬಾಲಣ್ಣ ನ ಹುಟ್ಟುಹಬ್ಬಕ್ಕಾಗಿ ಪಂಚರಂಗಿಯ ಆಗಸದ ತುಂಬಾ ರಂಗೋ ರಂಗು ...

    ಇಲ್ಲಿದೆ ನನ್ನದೂ ಒಂದು ಹಾರೈಕೆಯ ರಂಗು...
    ಹ್ಯಾಪಿ ಬರ್ತ್ ಡೇ ಅಣ್ಣಯ್ಯ ....

    ReplyDelete
  7. ನಿನ್ನೊಲುಮೆಯಿಂದಲೇ ಬಾಳು ಬೆಳಕಾಗಿರಲು
    ಎನ್ನುತ್ತಾ ಬ್ಲಾಗ್ ಲೋಕ
    ಎತ್ತಿ ಮುದ್ದಾಡುವ ಮಗುವಿನಂತಹ ಮನಸ್ಸಿನ
    ಬಾಲಣ್ಣನ ಜನುಮದಿನದಕ್ಕೆ ಒಳ್ಳೆಯ ಬ್ಲಾಗ್ ಕೊಡುಗೆ.

    ReplyDelete
  8. ಶ್ರೀ... ನೀಮಗೆ ನೀವೇ ಸಾಟಿ... ಬೊಂಬಾಟ್ ಗಿಫ್ಟ್ ಹುಟ್ಟು ಹಬ್ಬಕ್ಕೆ... ಬಾಲಣ್ಣ ಹುಟ್ಟು ಹಬ್ಬದ ಶುಭಾಶಯಗಳು ಸದಾ ಕಾಲಿನಲ್ಲಿ ಚಕ್ರ ಕಟ್ಟಿಕೊಂಡು ಮತ್ತಷ್ಟು ಊರೂರು ಸುತ್ತಿ ಮಾಹಿತಿಗಳನ್ನ ನೀಡುತ್ತಲಿರಿ.

    ReplyDelete
  9. ಶ್ರೀಕಾಂತ್ ಏನು ಹೇಳಲಿ ನಿಮ್ಮ ಪ್ರೀತಿಗೆ . ಬೆಲೆಕಟ್ಟಲಾಗದ ವಿಶ್ವಾಸದ ಹೊರೆಯನ್ನು ಹೊರಿಸಿದ್ದೀರಿ . ನಿಮ್ಮ ಪ್ರೀತಿಯ ಜೇನಿನ ಹೊಳೆಯಲ್ಲಿ ಮೀಯುವುದಷ್ಟೇ ನನಗೆ ಪುಣ್ಯದ ಕಾರ್ಯ. ಹೃದಯ ತುಂಬಿಬಂದ ಈ ಕ್ಷಣ , ಮರೆಯಲಾರೆ. ತಾಯಿ ಸರಸ್ವತಿ ಆಶೀರ್ವಾದ ನಿಮಗಿರು ನಿಮ್ಮ ಪದಗಳಿಗೆ ಸಾಟಿ ಸಿಗದು.

    ನಿಮ್ಮ ಶುಭ ಹಾರೈಕೆ ನನ್ನ ಜನುಮದಿನಕ್ಕೆ ಮೆರುಗು ತಂದಿತು . ಧನ್ಯವಾದಗಳು ನಿಮಗೆ ಹಾಗು ನಿಮ್ಮ ಪ್ರೀತಿಯ ಹಾರೈಕೆಗಳಿಗೆ . . ನಿಮ್ಮ ಪ್ರೀತಿಗೆ ಮನ ತುಂಬಿಬಂದಿದೆ . ನನ್ನ ಕೃತಜ್ಞತಾ ಪೂರ್ವಕ ಧನ್ಯವಾದಗಳನ್ನು ಸ್ವೀಕರಿಸಿ

    ReplyDelete

  10. ಆತ್ಮೀಯ ಗೆಳೆಯರೇನಿಮ್ಮ ಶುಭ ಹಾರೈಕೆ ನನ್ನ ಜನುಮದಿನಕ್ಕೆ ಮೆರುಗು ತಂದಿತು . ಧನ್ಯವಾದಗಳು ನಿಮಗೆ ಹಾಗು ನಿಮ್ಮ ಪ್ರೀತಿಯ ಹಾರೈಕೆಗಳಿಗೆ . ಪ್ರತೀಯೊಬ್ಬರಿಗೂ ವಯಕ್ತಿಕವಾಗಿ ಧನ್ಯವಾದ ಹೇಳಲು ಆಗದೆ ಇರುವುದಕ್ಕೆ ಬೆಸರವಿದೆ. ದಯವಿಟ್ಟು ಇದನ್ನೇ ವಯಕ್ತಿಕ ವಾಗಿ ಧನ್ಯವಾದ ಎಂದು ಸ್ವೀಕರಿಸಿ . ನಿಮ್ಮ ಪ್ರೀತಿಗೆ ಮನ ತುಂಬಿಬಂದಿದೆ .

    ReplyDelete
  11. ಶ್ರೀಕಾಂತ್ ಸರ್,
    ನಿಮ್ಮ ಬ್ಲಾಗಿನಗ ಇದು ನನ್ನ ಮೊದಲ ಕಾಮೆಂಟ್.
    ನನಗ ಖುಷಿ ವಿಷಯ ಅಂದ್ರ, ಇವತ್ತು ಶ್ರೀ ಬಾಲು ಸರ್ ಅವರ ಜನ್ಮ ದಿನ, ಅವರಿಗೆ ಜನ್ಮದಿನದ ಶುಭಾಶಯಗಳು.

    ನಿಮ್ಮ ಬರವಣಿಗೆ ಶೈಲಿ ಮತ್ತ ಸಂಭಂಧಗಳ ಕಾಳಜಿ ಅದ್ಭುತ.
    ಶುಭಾಶಯಗಳು

    ನಮಸ್ಕಾರ
    ದಯಾನಂದ್ ಬ್ಯಾಡಗಿ

    ReplyDelete