Wednesday, January 25, 2017

ದೇವರು ನಕ್ಕೆ ನಗುತ್ತಾನೆ - ೨

ದೇವರು ನಗುತ್ತಾನೆ.. ಇದು ನಾ ಪ್ರಾಥಮಿಕ ಶಾಲೆಯಲ್ಲಿ ಓದಿದ ಪಾಠದ ಹೆಸರು. ದೃಷ್ಟಾ೦ತ ಕಥೆಗಳ ಒಂದು ಗುಚ್ಛ ಆ ಪಾಠ. ಅದನ್ನು ಓದಿದ್ದು ಪರಿಣಾಮಕಾರಿಯಾಗಿ ತಲೆಯೊಳಗೆ ಕೂತು ಬಿಟ್ಟಿದೆ. ಹೀಗೆ ನನಗೆ ವಿಚಿತ್ರ, ನಗು ಬರಿಸುವಂಥಹ ಸನ್ನಿವೇಶಗಳನ್ನು ಕಂಡರೆ, ಗಮನಕ್ಕೆ ಬಂದರೆ.. ತಲೆಯೆತ್ತಿ ಆಗಸ ನೋಡುತ್ತೇನೆ ಅಲ್ಲಿ ಸೊಂಟದ ಮೇಲೆ ಕೈಯಿಟ್ಟುಕೊಂಡು ಆ ದೈವ ನಗುತ್ತಿರುವಂತೆ ಭಾಸವಾಗುತ್ತದೆ.
ಚಿತ್ರ ಕೃಪೆ : ಗೂಗಲೇಶ್ವರ

ಘಟನೆ ೧
ಸುಮಾರು ವರ್ಷಗಳ ಅಭ್ಯಾಸ.. ಜನವರಿ ಒಂದನೇ ತಾರೀಕು ಕುಲದೈವ ವೆಂಕಟರಮಣನ ದೇವಾಲಯಕ್ಕೆ ಹೋಗುವುದು. ಹೀಗೆ ಈ ಜನವರಿ ಒಂದನೇ ತಾರೀಕು ಬೆಂಗಳೂರಿನ ಪ್ರಸಿದ್ಧ ವೆಂಕಟೇಶ್ವರನ ದೇಗುಲಕ್ಕೆ ಹೋಗಿದ್ದೆ. ಯಥಾಪ್ರಕಾರ ಸಾಲು ಸಾಲು ಜನರಿದ್ದರು. ಗಡಿಬಿಡಿ ಮಾಡಿಕೊಳ್ಳದೆ ಸರತಿ ಸಾಲಿನಲ್ಲಿ ನಿಂತಿದ್ದೆ. ಸುಮಾರು ಒಂದು ಘಂಟೆ ಮೇಲಾಗಿತ್ತು ಸಾಲಿನಲ್ಲಿ ನಿಂತು, ಗಲಿಬಿಲಿ ಇರಲಿಲ್ಲ.. ಕೆಲವು ಮಂದಿ ಬೇಸರ ಮಾಡಿಕೊಂಡು ಅಲ್ಲಿಯೇ ಕೈಮುಗಿದು ವಾಪಸ್ ಹೋಗಿದ್ದು ಉಂಟು. ಇನ್ನೂ ಕೆಲವರು ಆಗಲಿ ಅದು ಎಷ್ಟು ಹೊತ್ತು ಆದರೂ ಸರಿ.. ದೇವನ ದರ್ಶನ ಮಾಡಿಕೊಂಡೆ ಹೋಗೋಣ ಅಂತ ನಿಂತಿದ್ದರು. ಆಗ ತಾನೇ ೫೦೦ ಮತ್ತು ೧೦೦೦ ನೋಟಿನ ಕಥೆ ಮುಗಿದು ಎರಡು ದಿನವಾಗಿತ್ತು.. ಜನರಿಗೆ ಮಾತಿಗೊಂದು ವಿಷಯ ಬೇಕಿತ್ತು ಅಲ್ಲವೇ..

"ಏಟಿಎಂ ಮುಂದೆ ನಿಲ್ಲುತ್ತೇವೆ.. ಈ ಸರತಿ ಯಾವ ಮಹಾ ಅಲ್ವೇ ಸರ್.. ನಿಲ್ಲೋಣ ಬಿಡಿ ಮೋದಿ ದೇಶಕ್ಕೆ ಒಳ್ಳೇದು ಮಾಡಲು ತಂದ ನಿರ್ಧಾರಕ್ಕೆ ನಾವು ಬೆಂಬಲ ಸೂಚಿಸಿದ್ದೇವೆ.. ಈ ಸರತಿ ಸಾಲು ನಮ್ಮ ಮನಕ್ಕೆ ಒಳ್ಳೆಯದು ಆಗಲಿ ಎನ್ನುವ ಆಶಯಕ್ಕೆ ನಿಲ್ಲಲಾರೆವೆ.. "

ತರ್ಕವೇನೋ ಚೆನ್ನಾಗಿತ್ತು.. ಆದರೆ ಆ ಐವತ್ತ್ತು ದಿನ ಈ ಮಂದಿ ಮೋದಿಯನ್ನು ಬಯ್ದಿರಲಿಲ್ಲವೇ ಎನ್ನುವುದು ಯಕ್ಷ ಪ್ರಶ್ನೆಯಾಗಿತ್ತು.. ದೇವಾಲಯದ ಗೋಪುರದ ಕಡೆ ಕಣ್ಣು ಹಾಯಿಸಿದೆ.. ಗೋಪುರದಲ್ಲಿದ್ದ ದೇವರ ಮೂರ್ತಿಗಳು ಕಿಸಕ್ಕನೆ ನಕ್ಕ ಅನುಭವ.. ಆ ಸದ್ದಿಗೆ ಗೋಪುರದಲ್ಲಿ ಮನೆಮಾಡಿದ್ದ ಪಾರಿವಾಳಗಳು ಪುರ್ ಅಂತ ಹಾರಿದವು..

ದೇವಸ್ಥಾನದ ಪ್ರಾಕಾರದಲ್ಲಿದ್ದ ದೇವರ ಚಿತ್ರ ನೋಡಿದೆ.. ಅಭಯ ಹಸ್ತ ತೋರುತ್ತಿದ್ದ ವೆಂಕಟೇಶ.. ತನ್ನ ಕೈಯನ್ನು ಹಾಗೆ ಬಾಯಿಗೆ ಅಡ್ಡವಾಗಿ ಇಟ್ಟುಕೊಂಡು ನಕ್ಕ ಹಾಗೆ ಅನ್ನಿಸಿತು..

ಘಟನೆ ೨ 
ಸುಮಾರು ಹೊತ್ತು ಕಾದ ಮೇಲೆ.. ಅರ್ಚಕ ಸಿಬ್ಬಂದಿ  "ಭಕ್ತಾದಿಗಳೇ.. ಅಲಂಕಾರ ಮುಗಿಯಿತು.. ಇನ್ನೇನು ಕೆಲವೇ ಕ್ಷಣಗಳಲ್ಲಿ ದರ್ಶನ ಮಾಡಬಹುದು.. ಅಭಿಷೇಕಕ್ಕೆ ಬರೆಸಿದವರು ಮತ್ತು .. ಪೂಜೆ ಮಾಡಿಸುವವರು ಇನ್ನು ಸ್ವಲ್ಪ ಹೊತ್ತು ಕಾಯಬೇಕು.. ಮಂಗಳಾರತಿಯಾದ ಮೇಲೆ ಪ್ರಸಾದ ಕೊಡುತ್ತೇವೆ.. ಮಿಕ್ಕವರು ಬರಿ ದರ್ಶನ ಮಾಡಬೇಕೆಂದಿರುವವರು ದರ್ಶನ ಮಾಡಿ ಸಾಗಬಹುದು.. "

ಸರತಿ ಸಾಲಿನಲ್ಲಿ ಸಂಚಲನ ಮೂಡಿತು. .. ಕೆಲವರು ಬದಿಗೆ ನಿಂತು ಹಿಂದಿದ್ದವರಿಗೆ ದಾರಿ ಬಿಟ್ಟುಕೊಟ್ಟರು.. ಮಿಕ್ಕವರು ಮೆಲ್ಲಗೆ ಸಾಗುತ್ತಿದ್ದರು.. ಒಂದು ವ್ಯಕ್ತಿ ಕೈ ಬೆರಳು ತುಂಬಾ ಉಂಗುರಗಳು.. ಕತ್ತಿಗೆ ದೊಡ್ಡ ದಪ್ಪನಾದ ಸರ.. ಕೈಗೆ ಕಡಗ ತೊಟ್ಟಿತ್ತು.. ಹಣೆಗೆ ಉದ್ದವಾದ ಕುಂಕುಮ.. ಒಟ್ಟಿನಲ್ಲಿ ದೇವರಿಗೆ ಒಮ್ಮೆಲೇ ಕಸಿವಿಸಿ ಮಾಡಬೇಕಿನ್ನುಸುವಂಥಹ ರೂಪ...

ಮನದಲ್ಲಿ ದೈವ ಧ್ಯಾನ ಮಾಡುತ್ತಿದ್ದರೂ... ಈ ದೃಶ್ಯ ಕಂಡು ಮನದೊಳಗೆ ಹಾಸ್ಯ ರಸ ಉಕ್ಕುತ್ತಿತ್ತು.. ದೇವಸ್ಥಾನದ ಆವರಣದಲ್ಲಿ ವಿಷ್ಣುವಿನ ದಶಾವತಾರದ ಮೂರ್ತಿಗಳು ಇದ್ದವು.. ಈ ವ್ಯಕ್ತಿಯನ್ನು ಒಮ್ಮೆ ನೋಡಿ.. ಒಂದು ಮೂರ್ತಿ ತನ್ನ ಆಭರಣಗಳೆಲ್ಲ ಸರಿ ಇದೆಯೇ ಅಥವಾ ಏನಾದರೂ ಮಿಸ್ ಆಗಿದೆಯೇ ಎಂದು ನೋಡಿಕೊಂಡ ಪರಿಯನ್ನು ನೋಡಿ ಪಕ್ಕದ ಮೂರ್ತಿ ಕಿಸಕ್ಕನೆ ನಕ್ಕಿತು..
ಚಿತ್ರ ಕೃಪೆ : ಗೂಗಲೇಶ್ವರ
ಆಗಸ ಕಾಣುತ್ತಿರಲಿಲ್ಲ.. ಕಿಟಕಿಯಾಚೆ ಸುಮ್ಮನೆ ಗಮನಿಸಿದೆ.. ದೇವರು ಕ್ಲೋಸ್ ಅಪ್ ಸ್ಮೈಲ್ ಕೊಟ್ಟಾ.. ನನ್ನ ಮೇಲಿರಬೇಕಾದ ಆಭರಣಗಳು ಈ ವ್ಯಕ್ತಿಯ ಮೇಲಿದ್ದದ್ದು ನೋಡಿ ನಗೆಯೊಂತೂ ಬಂದಿತ್ತು ಆ ಮಹಾಮಹಿಮನಿಗೆ :-)

ಘಟನೆ - ೩
ಆ ಆಭರಣದ ಡಬ್ಬಿಯ ತರಹ ಇದ್ದ ವ್ಯಕ್ತಿ.. ಯಾರೋ ಒಬ್ಬರಿಗೆ ಕರೆ ಮಾಡುತ್ತಾ... "ನೀವು ಬನ್ನಿ ಸರ್... ಅದೆಷ್ಟು ಉದ್ದದ ಸಾಲೇ ಇರಲಿ.. ವೆಂಕಟೇಶ್ವರನ ದರ್ಶನ ನಾ ಮಾಡಿಸುತ್ತೇನೆ.. ಬಾಗಿಲಲ್ಲಿ ನನ್ನ ಹೆಸರು ಹೇಳಿ.. ನನ್ನ ಮೊಬೈಲಿಗೆ ಕರೆಮಾಡಿ.. ಮಿಕ್ಕದ್ದು ನನಗೆ ಬಿಡಿ.. "

ಆ ಕಡೆಯ ವ್ಯಕ್ತಿಗೆ ಅದೇನು ಮುಜುಗರವಾಗಿತ್ತೋ ಏನೋ.. ಅದೇನು ಹೇಳಿದನೋ ಕಾಣೆ.. ಆದರೆ ಈ ಆಭರಣದ ಡಬ್ಬಿ "ಸರ್ ಅದೆಕ್ಕೆನೂ  ನೀವು ಯೋಚಿಸಬೇಡಿ.. ನೀವು ಬನ್ನಿ.. ದರ್ಶನ ನನಗೆ ಬಿಡಿ.. "

ನಾ "ನಗಲಾರದೇ ಅಳಲಾರದೇ ತೊಳಲಾಡಿದೆ ಜೀವ" ಅಣ್ಣಾವ್ರ ಶ್ರುತಿ ಸೇರಿದಾಗ ಹಾಡು ನೆನಪಿಗೆ ಬಂತು.. ನಾನು ನಕ್ಕೆ.. ಹಸುವಿಗೆ ಒರಗಿಕೊಂಡು ಕೊಳಲು ಊದುತ್ತಿದ್ದ ಶ್ರೀ ಕೃಷ್ಣನ ಮೂರ್ತಿ.. ಉಡುಪಿ ಕೃಷ್ಣನ ಹಾಗೆ ನನಗೆ ವಿರುದ್ಧ ದಿಕ್ಕಿಗೆ ಮುಖ ಮಾಡಿಕೊಂಡು "ಅಲೆ ಅಲೆ... ನಾನೇ ದೇವರು. ನಾನೆ ಎಲ್ಲರನ್ನು ನೋಡಿಕೊಳ್ಳುತ್ತೇನೆ.. ನಾನೇ ಒಂದು ದಿನ ಆ ರೀತಿಯಲ್ಲಿ ಹೇಳಿಕೊಂಡಿಲ್ಲ.. ಇದ್ಯಾರಪ್ಪಾ ಈ ಆಭರಣದ ಪೆಟ್ಟಿಗೆ ಹೀಗೆ ಹೇಳುತ್ತಿದೆ" ಎಂದು ನಕ್ಕು ನಕ್ಕು ಸುರಿಯುತ್ತಿದ್ದ ಆನಂದ ಭಾಷ್ಪವನ್ನು ಒರೆಸಿಕೊಂಡ ಅನ್ನಿಸಿತು.. !

ಘಟನೆ - ೪
ಅಮ್ಮನ ಆರೋಗ್ಯ ತಪಾಸಣೆಗೆ  ಕರೆದುಕೊಂಡು ಹೋದಾಗ.. ವೈದ್ಯರು ಅಮ್ಮನಿಗೆ ಹೇಳಿದರು "ನೀವು  ಮಲಗಿದ್ದಾಗ ತಕ್ಷಣ ದಡಕ್ ಅಂತ ಏಳಬಾರದು.. ಕೂತಿದ್ದವರು ಚಕ್ ಅಂತ ಎದ್ದು ನಿಲ್ಲಬಾರದು.. ಯಾರಾದರೂ ಕರೆದರೆ ತಕ್ಷಣ ಆ ಕಡೆಗೆ ತಿರುಗಬಾರದು.. ಈ ವಯಸ್ಸಿನಲ್ಲಿ ನೀವು ಮಾಡುವ ಪ್ರತಿಕ್ರಿಯೆಗೆ ನಿಮ್ಮ ಮೆದುಳು ಪ್ರತಿಕ್ರಿಯೆ ನೀಡಲು ಸ್ವಲ್ಪ ಹೊತ್ತಾಗುತ್ತದೆ.. ನಿಮ್ಮ ಅಚಾನಕ್ ಪ್ರತಿಕ್ರಿಯೆಗೆ ತಕ್ಷಣ ಸ್ಪಂದನ ಸಿಗುವುದಿಲ್ಲ.. ಹಾಗಾಗಿ ನಿಮ್ಮ ಮೆದುಳಿಗೆ ಸಂದೇಶ ರವಾನಿಸುವುದು ತಡವಾಗುತ್ತದೆ ಅಷ್ಟರಲ್ಲಿ ನೀವು ಪ್ರತಿಕ್ರಿಯೆಗೆ ಒಳಗಾಗಿ ಬಿಟ್ಟರೆ ಅದಕ್ಕೆ ಗೊಂದಲವಾಗುತ್ತದೆ.. ಆಗ ನಿಮಗೆ ತಲೆಸುತ್ತಿದ ಅನುಭವ.. ಅಥವಾ ಎದ್ದು ನಿಂತ ತಕ್ಷಣ ರಪ್ ಅಂತ ಬೀಳುತ್ತೀನಿ ಅನ್ನುವ ಅನುಭವ ಅಥವಾ ಕೆಲವೊಮ್ಮೆ ಬೀಳಲೂಬಹುದು.. " ಎಂದರು.. ಮತ್ತೆ ಹೇಗೆ ನಿಧಾನವಾಗಿ ತಿರುಗಬೇಕು.. ಹೇಗೆ ನಿಧಾನವಾಗಿ ನಿಲ್ಲಬೇಕು ಎಂದು ತೋರಿಸಿದರು.. ಅಮ್ಮನಿಗೆ ಅರ್ಥವಾಯಿತು..ಸುಮ್ಮನೆ ನಕ್ಕರು..

ಹೊರಗೆ ಬರುವಾಗ.. ನನ್ನ ತರಲೆ ಬುದ್ದಿಗೆ ಒಂದು ವಿಚಾರ ಹೊಳೆಯಿತು,, "ಅಮ್ಮಾ ನೀನು ಮಹಾದೇವಿ ಧಾರವಾಹಿ ನೋಡುತ್ತೀಯಲ್ಲವೇ.. ಅಲ್ಲಿನ ಪ್ರತಿಪಾತ್ರಗಳು ತಮಗೆ ಎರಡೆರಡು ಜನ್ಮ ಇದೆ ಎನ್ನುವ ರೀತಿಯಲ್ಲಿ ನಿಧಾನವಾಗಿ ಚಲಿಸುತ್ತವೆ.. ಮಾತಾಡುತ್ತವೆ.. ನೀನು ಹಾಗೆ ಮಾಡು ... "ಜಾಜಿ ಇಲ್ಲಿ ಬಾ ಎಂದು ಕರೆದರೆ" ಮೈನಸ್ ೫ ಕಿಮಿ ವೇಗದಲ್ಲಿ ಜಾಜಿ ಬರುತ್ತಾಳೆ.. ಬಂಗಾರಿ ಬೇಗ ಬಾರೋ ಅಂದರೆ ತಾನು ಬರಲು ಸಿದ್ಧವಾಗುವ ಮೊದಲೇ ಕೆನ್ನೆಯಲ್ಲಿ ಮೂಡುವ  ಗುಳಿಗಳನ್ನು ತೋರಿಸುತ್ತಾ ಆಮೇಲೆ ಮೈನಸ್ ೧೦ ಕಿಮಿ ವೇಗದಲ್ಲಿ ಓಡಲು ಶುರುಮಾಡುತ್ತಾನೆ.. .. " ಇನ್ನೂ ಹೇಳುತ್ತಿದ್ದೆ ಅಷ್ಟರಲ್ಲಿ ತಲೆಯ ಮೇಲೆ ಟಪ್ ಅಂತ ಏನೋ ಬಿತ್ತು.. ನಾನು ಜಾಜಿಯ ತರಹ ನಿಧಾನವಾಗಿ ತಿರುಗಿದೆ.. ಅಮ್ಮ ನನ್ನ ತಲೆಗೆ ಒಂದು ಬಿಟ್ಟಿದ್ದರು ಸರಿಯಾಗಿ.. :-)
ಚಿತ್ರ ಕೃಪೆ : ಗೂಗಲೇಶ್ವರ 

"ಯಾಕಮ್ಮ .. "ಹುಸಿ ಮುನಿಸಿನಿಂದ ಕೇಳಿದೆ..
"ಅಲ್ಲಿ ನೋಡು ಮಂಗಾ" ಅಂತ ಅಮ್ಮ ಆಸ್ಫತ್ರೆಯ ಹಜಾರದಲ್ಲಿದ್ದ ಗಣಪನ ಮೂರ್ತಿಯನ್ನು ತೋರಿಸಿದರು..
ಆ ವಿನಾಯಕ..
"ನೋಡು ಶ್ರೀ ನಿನಗೆ ತಾಳ್ಮೆ ಕಲಿಯಬೇಕೆಂದರೆ ೧) ಸತ್ಯ ಹರಿಶ್ಚಂದ್ರನ ಕಥೆ ಕೇಳು
                                                                ೨) ಶ್ರೀಕೃಷ್ಣನ ಕಥೆ ಓದು
                                                                 ೩) ಕನ್ನಡದ ಜೀ ಟಿ.ವಿಯಲ್ಲಿ ಬರುವ ಮಹಾದೇವಿ ಧಾರವಾಹಿ ನೋಡು..

ಜೋರಾಗಿ ನಗಲು ಶುರುಮಾಡಿದೆ.. ಗಣಪನು ನಕ್ಕ.. ತಕ್ಷಣ... ತನ್ನ ಸೊಂಡಿಲನ್ನು ಮೇಲೆ ಮಾಡಿ ಉಶ್ .. ಸದ್ದು ಇದು ಆಸ್ಪತ್ರೆ ಎಂದು ಹೇಳುತ್ತಾ ತಾನೇ ನಕ್ಕ!!!

2 comments:

 1. Veena Hs ChandrashekharFebruary 5, 2017 at 10:47 PM

  ಹಾಸ್ಯ ಎಲ್ಲಿದ್ದರೂ ಉಕ್ಕುತ್ತದೆ ಎನ್ನುವುದನ್ನು ಚೆನ್ನಾಗಿ ನಿರೂಪಣೆ ಮಾಡಿದ್ದೀಯಾ
  ನನಗೆ ತುಂಬಾ ಇಷ್ಟವಾದದ್ದು ಘಟನೆ ೩, ೪.
  ತಲೆಯ ಮೇಲೆ ಏಟು ಬಿದ್ದಾಗ ಪ್ರಶ್ನೆಗಳೆಲ್ಲಾ ಆಚೆ ಬಂದವೋ ಇಲ್ಲಾ ಇನ್ನೊಂದಿಷ್ಟು ಪ್ರಶ್ನೆಗಳು ಮೂಡಿದವೋ ಗೊತ್ತಾಗಲಿಲ್ಲ
  ಮನೆಯಲ್ಲಿ ಪಕ್ಕವಾದ್ಯಗಳು ಇರುವಾಗ ಸಂಗೀತ ಕಚೇರಿಗೆ ಮಾತ್ರ ಅವಕಾಶ ಹಾಗಾಗಿ ಕಾಮೆಂಟ್ ತಡವಾಗಿ ಏನಂತೀಯಾ.. ?

  ReplyDelete
 2. ಜೀವನದಲ್ಲಿ ನಗಲು ಇಚ್ಚಿಸುವವರು ಎಂತಹ ಪರಿಸ್ಥಿತಿಯಲ್ಲಿ ಅದಕ್ಕೆ ಕಾರಣ ಹುಡುಕಬಲ್ಲರು ಅನ್ನೋದಕ್ಕೆ ನೀವು ಸಾಕ್ಷಿ. ಅಂದಹಾಗೆ ನೀವು ಇಷ್ಟು ಹೇಳಿದ ಮೇಲೆ ಮಹಾದೇವಿ ನೋಡಲೇ ಬೇಕು ನಾನು. :D

  ReplyDelete