Sunday, December 17, 2017

ಜೀವ ಮೀಟುವ ಸ್ವರ.. ಜೀವ ಸ್ವರದಿಂದ ---- ಒಂದು ಸಂಗೀತ ಸಂಜೆ

ಲೋ ಶ್ರೀ.. ಹಾಡಿನಲ್ಲಿಯೇ ಒಂದು ಕತೆ ಬರೆದುಕೊಡೋ... ಕಾಣದ ಕಡಲಿನ ಜೊತೆಯಲ್ಲಿ ತೇಲುತ್ತಾ ಪಯಣ ಮಾಡುವಾಗ ಮೂಡಿಬಂದ ಒಂದು ಕೋರಿಕೆ .. ನೋಡ್ತೀನಪ್ಪ.. ಒಳಗಿನ ಬಾಸ್ ಹೇಳಿದರೆ.. ಅವರು ಹೇಳಿದಂತೆ ಬರೆಯುತ್ತೇನೆ.. ನನ್ನದೇನಿದೆ. ಹೇಳುವವ ಒಳಗಿದ್ದಾರೆ.. ನಾ ಬರಿ ಉಕ್ತಲೇಖನ ತೆಗೆದುಕೊಳ್ಳುವವ ಅಷ್ಟೇ.. !!!

******

ವಿಜಯ್ ಮತ್ತು ವಿಜಯ ಅದ್ಭುತ ಸ್ನೇಹಿತರು.. ಪರಿಚಯ ಸ್ನೇಹಕ್ಕೆ ತಿರುಗಿ.. ಸ್ನೇಹ ಪ್ರೀತಿಯ ರಂಗನ್ನು ತುಂಬಿಕೊಳ್ಳುತ್ತಿತ್ತು..ಅದೇ ರಂಗು ಬಾನನ್ನು ತುಂಬಿ.. ದಿನಕರ ನನ್ನ ಕೆಲಸ ಆಯಿತು ಎಂದು ಮನೆಗೆ ಹೊರಡುವ ಸಮಯದಲ್ಲಿ ಕಡಲ ಕಿನಾರೆಯಲ್ಲಿ ಕುಳಿತು ವಿಜಯ್ ವಿಜಯನನ್ನು ಕೇಳಿದ.. 

"ಕಣೆ.. ಯಾವಾಗ ನಿನ್ನ ಮನೆಗೆ ಬರಲಿ.. ನಿನ್ನ ನೋಡಬೇಕು ಅನ್ನಿಸಿದರೆ ಯಾವಾಗ ಬರಬಹುದು ಪ್ಲೀಸ್ ಹೇಳು"

ಸಿನಿಮಾ ಹಾಡುಗಳ ಹುಚ್ಚು ಹಿಡಿದಿದ್ದ ವಿಜಯ ಅದೇ ದಾಟಿಯಲ್ಲಿ "ಜಬ್ ದೀಪ್ ಜಲೇ ಆನಾ... ಜಬ್ ಶಾಮ್ ಧಲೇ ಆನಾ"
ತಲೆ ಕೆರೆದುಕೊಂಡ ವಿಜಯ್.. ಹಾಗೆ ವಿಜಯಳ ಮೊಗದ ಸೌಂದರ್ಯವನ್ನು ನೋಡುತ್ತಾ ಕೂತಿದ್ದ.. ಅವಳು ಹೇಳಿದ್ದ ಸಮ್ಮತಿಯ ಮಾತು ಅವನ ಹೃದಯದಲ್ಲಿ ಸರಿಗಮ ಹಾಡಿಸುತ್ತಿತ್ತು.. 

"ಕಣೆ.. ಲಗ್ ಜಾ ಗಲೇ ಲಗ್ ಜಾ ಗಲೇ ಕೀ ಫಿರ್ ಯಹ್ ಹಸೀನ್ ರಾತ್ ಹೋ .. ನಿನ್ನ ಮಾತಿಗೆ ಒಂದು ಅಪ್ಪುಗೆ ನಿನಗೆ"
ವಿಜಯ.. ನಿನ್ನ ಮೊದಲ ಬಾರಿಗೆ ಕಂಡಾಗ ನನ್ನಲ್ಲಿ ಉಕ್ಕಿ ಬಂದ ಹಾಡು ಯಾವುದು ಗೊತ್ತೇ.. ಬೆಳದಿಂಗಳೊಂದು ಹೆಣ್ಣಾಗಿ ಬಂದಂತೆ ಕಂಡೆ .. ಅದ್ಯಾಕೋ ಗೊತ್ತಿಲ್ಲ ಪ್ರಥಮ ನೋಟದಲ್ಲಿಯೇ ಪ್ರೇಮ, ಪ್ರೀತಿ ಅಂತ ಬರಿ ಕಥೆ ಹೇಳ್ತಾರೆ ಅಂದುಕೊಂಡಿದ್ದೆ ಆದರೆ ಅದು ನಿಜ ಅಂತ ನಿನ್ನ ನೋಡಿದ ಮೇಲೆ ಅರಿವಾಯಿತು.. ಅದೇ ಖುಷಿಯಲ್ಲಿ ನಿನಗೆ ಬರೆದದ್ದು ಮೊದಲ ಪ್ರೇಮ ಪತ್ರ ಅದು ಯಾವ ಹಾಡು ಹೇಳುತ್ತಾ ಗೊತ್ತಾ.. ಲಿಕ್ ಹೇ ಜೋ ಕತ್ ತುಜೆ.. ಆ  ಹಾಡು ಮತ್ತು ನಿನಗೆ ಬರೆದ ಪತ್ರದ ಪ್ರತಿಯನ್ನು ಓದಿ ಓದಿ ಖುಷಿ ಪಟ್ಟಿದ್ದೆ .. 

ಆ ಪತ್ರದ ಬಗ್ಗೆ ಆಫೀಸಿನಲ್ಲಿ ಹೇಗೋ ಗೊತ್ತಾಗಿ.. ನನ್ನ ಕಿಚಾಯಿಸಿದಾಗ.. ನಾ ನಿನಗೆ ಹೇಳಿದ್ದು "ಆಜ್ ಕಲ್ ತೆರೆ ಮೇರೇ ಪ್ಯಾರ್ ಪೇ ಚರ್ಚೆ ಹರ್ ಝುಬಾನ್ ಫಾರ್ ಸಬ್ಕೋ  ಮಾಲೂಮ್ ಹೇ ಔರ್ ಸಬ್ಕೋ ಖಬರ್ ಹೋಗಯೀ... " ನೀನು ತೋ ಕ್ಯಾ" ಎಂದು ಹೇಳಿ ನೀ ನನಗೆ ಧೈರ್ಯ ತುಂಬಿದ್ದೇ.. 

"ಹೌದು ಕಣೋ ವಿಜಯ್.. ನೀ ಸಿಗುವ ತನಕ ನನ್ನ ಮನಸ್ಸು ಬರಿಕಾಗದವಾಗಿತ್ತು .. ನೀ ಬಂದ ಮೇಲೆ ಕೋರಾ ಕಾಗಜ್ ಥಾ ಏ ಮ್ಯಾನ್ ಮೇರಾ ಲಿಕ್ ಲಿಯಾ ನಾಮ್ ಉಸ್ಪೇ ತೇರಾ.. "

"ಕಣೆ ನೀ ಅಂದು  ಒಪ್ಪಿಗೆ ಕೊಟ್ಟ ದಿನ . ಆಫೀಸಿನಲ್ಲಿ ಖುಷಿಯಿಂದ ಓಡಾಡಿದ್ದೆ .. ಅಂದಿನ ಕೆಲಸವೆಲ್ಲಾ ಹೂವಿನ ಸರ ಎತ್ತಿದಂತೆ ಆಗಿತ್ತು.. ಎಲ್ಲೆಲ್ಲಿ ನೋಡಲಿ ನಿನ್ನನ್ನೇ ಕಾಣುವೆ ಎಂದು ಹಾಡುತ್ತಾ ಖುಷಿಯಿಂದ ಕೆಲಸಾ ಸಾಗಿತ್ತು.. ನಾ ಕುಶಿಯಾಗಿದ್ದನ್ನ ನೋಡಿ..ನನ್ನ ಸಹೋದ್ಯೋಗಿ.. ಲೋ ಬಾಬೂಜಿ ಧೀರೆ ಚಲನಾ.. ಸಾಂನೆ ಝರಾ ಸಂಬಲ್ನ  ಎಂದಳು ನಾನು ಅದಕ್ಕೆ ತಲೆ ಕೆಡಿಸಿಕೊಳ್ಳಲಿಲ್ಲ ... ತಕ್ಷಣ ನಾ ಮಾಡಿದ ಕೆಲಸ.. ಕ್ಯಾಂಟೀನಿಗೆ ಹೋಗಿ .. ಒಂದು ಸ್ಟ್ರಾಂಗ್ ಕಾಫಿ ಕೂಡಿದೆ.. ನಿನಗೆ ಕರೆ ಮಾಡಿದೆ ನಿನ್ನ ಮೊಬೈಲ್ ಹಲೋ ಟ್ಯೂನ್  ಕಭಿ ಕಭಿ ಮೇರೇ ದಿಲ್ ಮೇ ಖಯಾಲ್ ಆತಾ ಹೇ ಕೆ ಜೈ ತುಜುಕೋ ಬನಾಯ ಗಯಾ ಹೇ ಮೇರೇಲಿಯೇ... ಅಲ್ವೇನೆ

ನಿನ್ನ ಮಾತಿಗೆ ಏನು ಹೇಳಲಿ ವಿಜಯ್ ನಗುವ ನಯನ ಮಧುರ ಮೌನ..ಮೌನಂ ಸಮ್ಮತಿ ಲಕ್ಷಣಂ ಅಲ್ಲವೇ ..  ರಾತ್ರಿ ಮಲಗಿದರೆ ಒಂದೇ ರಾಗ ಕೌನ್ ಹೇ ಜೋ ಸಪನೋ ಮೇ ಆಯಾ.. ನಿದ್ದೆಯಿಂದ ಎದ್ದು ಕಣ್ಣು ಬಿಟ್ಟರೆ ನಿನ್ನ ಹೆಸರೇ.. ಮತ್ತೆ ಕಣ್ಣು ಮುಚ್ಚಿ ನಿದ್ದೆ ಮಾಡಿದರೆ ಅದೇ ಹಾಡು.. ನಿಧಾನಕ್ಕೆ ನಿದ್ದೆಯಲ್ಲೂ ನೀನೆ.. ಕನಸಲ್ಲೂ ನೀನೆ.. ಬಾನಲ್ಲೂ ನೀನೆ ಭುವಿಯಲ್ಲೂ ನೀನೆ ಎಲ್ಲೆಲ್ಲೂ ನೀನೆ ನನ್ನಲ್ಲೂ ನೀನೆ.. ಬೆಳದಿಂಗಳಿನ ರಾತ್ರಿ ಎದ್ದು ಮನೆಯ ಹೊರಗಿನ ಅಂಗಳದಲ್ಲಿ ನೆಡೆಯುತ್ತಿದ್ದರೆ ನಾವಿಬ್ಬರು ಕೈ ಕೈ ಹಿಡಿದುಕೊಂಡು  ಮರಳಿನ ದಂಡೆಯ ಮೇಲೆ ಬೆಳದಿಂಗಳಿನಲ್ಲಿ ಆಜಾ ಸನಮ್ ಮಧುರ್ ಚಾಂದಿನಿ ಹೈ ಹಮ್ ಹಾಡುತ್ತಾ ಹೋದಂತೆ ಭಾಸವಾಗುತ್ತದೆ .. 

ಹೀಗೆ ಮಾತಾಡುತ್ತಾ ಕೂತಿದ್ದರು.. ಬಾನಿನ ರಂಗು ದಟ್ಟವಾಗುತ್ತ ಹೋಗುತ್ತಿತ್ತು.. ಜನಸಂಖ್ಯೆ ಹೆಚ್ಚುತ್ತಲೇ ಇತ್ತು.. ಜೊತೆಯಲ್ಲಿ ಹಣ್ಣು, ತಿಂಡಿ, ತಿನಿಸುಗಳನ್ನು ಮಾರುವವರು ಕೂಡ.. ಇದರ ಜೊತೆಯಲ್ಲಿ ಕೆಲವರ ಕಲಾಗಾರಿಕೆಯೂ ಮೂಡಿ ಬರುತ್ತಿತ್ತು .. ಕೊಳಲು ಮಾರುವವ.. ಸುಶ್ರಾವ್ಯವಾಗಿ ಎಹೆಸಾನ್ ತೇರಾ ಹೋಗಾ ಮುಜುಪರ್.. ಹಾಡು ನುಡಿಸಿಕೊಂಡು ಹೋಗುತ್ತಿದ್ದ.. 
ಕೇಳಲು ಮಧುರವಾಗಿತ್ತು.. 

ವಿಜಯ ಎದ್ದು ನಿಂತು.. "ಕಣೋ ಬಾರೋ ಹಾಗೆ ಒಂದು ವಾಕಿಂಗ್ ಹೋಗಿ ಬರೋಣ.. " ವಿಜಯ್ ಕೈ ಕೊಡೆ ಅಂದ .. ಜೊತೆಯಲಿ ಜೊತೆಯಲಿರುವೆನು ಹೀಗೆ ಎಂದು..ಕಣ್ಣು ಮಿಟುಕಿಸಿದ.. 

ಕಣ್ಣು ಮಿಟುಕಿಸಬೇಡ ಕಣೋ.. ನನ್ನೆದೆ ಚುರಾಲಿಯ ಹೇ ತುಂನೇ ಜೋ ದಿಲ್ ಕೋ.. ನಜರ್ ನಹಿ ಚುರಾನಾ ಸನಮ್ ಹಾಡು ಹಾಡಲುಶುರುಮಾಡುತ್ತದೆ .. 

ಜೋ ವಾದಕಿಯಾ ಹೊ ನಿಭಾನ ಪಡೆಗಾ ಕೊಳಲಿನವ ಈ ಮಧುರ ಗೀತೆಯನ್ನು ನುಡಿಸುತ್ತಾ ಹೋದ ವಿಜಯ ವಿಜಯ್ ಇಬ್ಬರೂ ಗೊಳ್ ಎಂದು ನಗಲು ಶುರು ಮಾಡಿದರು.. ಅದೆಂಗೆ ಅವನಿಗೆ ಗೊತ್ತಾಯಿತು ನಾವಿಬ್ಬರು ಮಾತಾಡಬೇಕಿದ್ದುದು.. 
ಕಾಕತಾಳೀಯ ಕಣೋ.. ಆದರೆ ಎಷ್ಟು ಸರಿಯಾದ ಸಮಯಕ್ಕೆ ಆ ಹಾಡು ಬಂತಲ್ವಾ.. ಸೂಪರ್ ಸೂಪರ್.. 

ಇನ್ನೂ ಕೈ ಚಾಚಿಕೊಂಡು ಕೂತೆ ಇದ್ದ ವಿಜಯ್ ನಾ ನೋಡಿ.. ಪಿಯಾ ತೂ ಅಬ್ ತೋ ಆಜಾ ಎಂದಳು.. ವಿಜಯ್ ಇನ್ನೂ ಯಾವುದೇ ಗುಂಗಿನಲ್ಲಿಯೇ ಕಳೆದುಹೋಗಿದ್ದ.. ಹಿಂದಿನ ನೆನಪುಗಳು ಅವನಿಗೆ ಖುಷಿ ನೀಡುತ್ತಿತ್ತು ..  ಕೈಯನ್ನು ಹಿಂದಕ್ಕೆ ತೆಗೆದುಕೊಂಡು ಪುಕಾರುತಾ ಚಲಾ ಹೂ ಮೇ ಎಂದು ನಿಧಾನವಾಗಿ ಮರಳಿನ ಮೇಲೆ ಹೆಜ್ಜೆ ಇಡುತ್ತಾ ಹೊರಟಳು ವಿಜಯ.. 

ಏ ಮೇರಾ ದಿಲ್ ಯಾರ್ ಕಾ ದೀವಾನಾ ಎಂದು ಕೂಗುತ್ತಾ ವಿಜಯಾಳ ಹಿಂದೆ ಓಡಿದ  ವಿಜಯ್.. ದಿನಕರ ಭುವಿಯಿಂದ ಕಡಲಿನೊಳಗೆ ಜಾರಿಹೋಗಿದ್ದ .. ಕತ್ತಲೆ ತುಂಬಿತ್ತು .. ತಣ್ಣಗೆ ಗಾಳಿ ಬೀಸುತ್ತಿತ್ತು .. ಕಡಲಿನ ಅಲೆಗಳ ಮೊರೆತ.. ವಿಜಯ್ ಮೊಬೈಲ್ ಏ ರಾತೇ ಏ ಮೌಸಮ್ ನದೀ ಕಾ ಕಿನಾರ ಏ ಚಂಚಲ್ ಹವಾ ಎಂದು ಕೂಗುತ್ತಿತ್ತು..ಮೊಬೈಲ್ ತೆಗೆದ ಅನಾಮಧೇಯ  ಕರೆ.. ಯಾರ ಹೆಸರೋ ಗೊತ್ತಿಲ್ಲ.. ನಾಮ್ ಗಮ್ ಜಾಯೆಗಾ ಎಂದು ಕೊಳ್ಳುತ್ತಾ ಹಲೋ ಎಂದ.. ಜೋಕೇ ನಾ ಬಳ್ಳಿಯ ಮಿಂಚು .. ಲೋ ವಿಜಯ್ ನಾನು ಕಣೋ.. ಗೊತ್ತಾಗಲಿಲ್ವ .. ಸುಮ್ಮನೆ ರೇಗಿಸೋಕೆ ಆ ರೀತಿಯ ಹಾಡು ಹೇಳಿದೆ.. ಇದು ನಮ್ಮ ಪಕ್ಕದ ಆಫೀಸಿನ ನಂಬರ್ .. ಅಂದ ಹಾಗೆ.. ಕಸ್ಟಮರ್ ಫೋನ್ ಮಾಡಿದ್ದರು.. ಒಂದು ಪ್ರಾಬ್ಲಮ್ ಇದೆ ಅಂತೇ.. ಇಮೇಲ್ ಕಳಿಸಿದ್ದಾರಂತೆ ಬಾಸ್  ನಿನಗೆ ಹೇಳೋಕೆ ಹೇಳಿದರು.. ಅದಕ್ಕೆ ಕರೆ ಮಾಡಿದೆ .. ಓಕೆ . ಮೇಡಂ ಜೊತೆ ಇದ್ದೀಯಲ್ವ... ಎಂಜಾಯ್.. have a nice evening ಕಣೋ"

ಧನ್ಯವಾದಗಳು ಅಂತ ಕೂಡ ಹೇಳಲಿಲ್ಲ.. ವಿಜಯ ಆಗಲೇ ಬಲು ಮುಂದಕ್ಕೆ ಸಾಗಿದ್ದಳು .. ದೀವಾನಾ ಹುವಾ ಬಾದಲ್ .. ಅಲ್ಲ ಅಲ್ಲ ದೀವಾನಾ ಹುವಾ ಪಾಗಲ್ .. ಕಣೆ ನಿಂತ್ಕೊಳೋ.. ಓಡುತ್ತಾ ಹೋಗೋ ಹೋಗಿ ಕೈ ಹಿಡಿದು ನಿಲ್ಲಿಸಿದ .. .. ನೋಡು ಕಣೆ.. ಕಾಣದ ಕಡಲಿಗೆ ಹಂಬಲಿಸಿದ ಮನ ನಮ್ಮಿಬ್ಬರದು ಅಲ್ಲಾ  ಸರಿಯಾಗಿ ಯೋಚಿಸಿ ಹೆಜ್ಜೆ ಇಡುತ್ತಿದ್ದೇವೆ .. ನಮ್ಮ ಬಾಳಿನಲ್ಲಿ ಹಾಡಿದರೆ .. ಅದು ಒಂದೇ ಹಾಡು.. ಸಂತೋಷಕ್ಕೆ ಹಾಡು ಸಂತೋಷಕ್ಕೆ.. ಅಷ್ಟೇ.. ನಾನು ಒಪ್ಪಿಯಾಯಿತು... ನೀನು ಒಪ್ಪಿಯಾಗಿದೆ .. ನಮ್ಮಿಬ್ಬರ ದುಡಿಮೆ ನಮ್ಮ ಸುಂದರ ಪರಿವಾರ ಕಟ್ಟಿಕೊಳ್ಳಲು ಬೇಕಾದಷ್ಟು.. ನನ್ನ ನಿನ್ನ ಮನೆಯವರು ಆಗಲೇ "ಕುಲದಲ್ಲಿ ಕೀಳ್ಯಾವುದೋ ಹುಚ್ಚಪ್ಪ" ಅಂತ ಹೇಳಿದ್ದಾರೆ ಆದರೆ ನಮ್ಮಿಬ್ಬರ ಜಾತಿಗಳು ಒಂದೇ.. ಮತ ಒಂದೇ.. ಹಾಗಾಗಿ ಯೋಚನೆ ಎನ್ನುವ ತರ್ಕಕ್ಕೆ ಅವಕಾಶವೇ ಇಲ್ಲ.. 

ತಿರುಗಿದ ವಿಜಯ.. "ಕಣೋ.. ನಿನಗೆ ಇದುವರೆಗೂ ಹೇಳದೆ ಸತಾಯಿಸಿದ್ದ ಒಂದೇ ಮಾತು .. ಈಗ ಹೇಳುತ್ತೇನೆ.. ಐ ಲವ್ ಯು.. ನಾ ನಿನ್ನ ಪ್ರೀತಿಸುತ್ತೇನೆ.. "

ವಿಜಯ್ ಮರು ಮಾತಾಡದೆ ಗಟ್ಟಿಯಾಗಿ ತಬ್ಬಿಕೊಂಡ.. ಕೊಳಲು ಮಾರುವವನು .. "ಕಂಗಳು ವಂದನೆ ಹೇಳಿದೆ ಹೃದಯವು ತುಂಬಿ ಹಾಡಿದೆ.. ಆಡದೆ ಉಳಿದಿಹ ಮಾತು ನೂರಿದೆ"

ಇಬ್ಬರ ಅಪ್ಪುಗೆ ಗಟ್ಟಿಯಾಯಿತು .. ಇಬ್ಬರ  ಕಣ್ಣಲ್ಲೂ ಹನಿಗಳು.. ಆನಂದದ ಹನಿಗಳು.. !!!

****
 ಮಾಮೂಲಿ ದಿನವಾಗಿತ್ತು.. ಸರಿ ಏನೂ ಕೆಲಸವಿರಲಿಲ್ಲ.. ಆದಷ್ಟು ಹಾಡು ಕೇಳೋಣ ಅಂತ ಮನಸ್ಸು ಮಾಡಿದ್ದೆ.. ಬೆಳಿಗ್ಗೆ ನಿತ್ಯ ಕರ್ಮಗಳನ್ನೆಲ್ಲ ಮುಗಿಸಿ.. ತಿಂಡಿ ತಿಂದು ಕಾಲು ಚಾಚಿ ಕೂತಿದ್ದಾಗ.. ಗೆಳೆಯ ಗುರುಪ್ರಸಾದ್ ಕರೆ.. ಶ್ರೀಕಾಂತಣ್ಣ... ಸಂಜೆ ೫.೩೦ ರಿಂದ ೮.೩೦ ತನಕ ಕನ್ನಡ ಮತ್ತು ಹಿಂದಿ ಹಾಡುಗಳ ಕಾರ್ಯಕ್ರಮವಿದೆ.. ಮನೆಯ ಹತ್ತಿರವೇ.. ಬರ್ತೀರಾ.. ನೀವು ಬಂದರೆ ಚೆನ್ನಾಗಿರುತ್ತೆ ಅಂದರು.. 

ಹಾಡುಗಳು..ಅದರಲ್ಲೂ ಹಳೆಯ ಹಾಡುಗಳು ಎಂದರೆ ಮೈಯೆಲ್ಲಾ ಕಿವಿ ನನಗೆ.. ಎರಡನೇ ಮಾತಿಗೆ ಅವಕಾಶವೇ ಇಲ್ಲ.. ಬರ್ತೀನಿ ಅಂದೇ..ಮನೆಯನ್ನು ತಲುಪಲು ನಕ್ಷೆ ಕಳಿಸಿದ್ದರು.. ಅದರ ಜಾಡು ಹಿಡಿದು ಐದಕ್ಕೆ ಅವರ ಮನೆಯ ಮುಂದೆ.. 

ಅವರ ಮನೆಯ ಪರಿಚಯ.. ಉಭಯಕುಶಲೋಪರಿ ಸಾಂಪ್ರತ ... ಹತ್ತು ನಿಮಿಷದಲ್ಲಿ ಸಭಾಂಗಣದಲ್ಲಿ ಇದ್ದೆವು .. zeal fitness ನಾಗರಭಾವಿ ಇವರು ಆಯೋಜಿಸಿದ್ದ ಮಧುರ ಸಂಗೀತ ಕಾರ್ಯಕ್ರಮ ಎಂದು ಗೊತ್ತಾಯಿತು.. ಮೊದಲ ಸ್ವಲ್ಪ ಹೊತ್ತು ಆಯೋಜಕರ ಫಿಟ್ನೆಸ್ ಕೇಂದ್ರದ ಪರಿಚಯ.. ಮುಂದೆ ಹತ್ತನೇ ನಿಮಿಷ.. ಸಂಗೀತದ ಆಣೆಕಟ್ಟು ಒಡೆಯಲಾಯಿತು.. ಮುಂದೆ ಹರಿದಿದ್ದು ಬರೋಬ್ಬರಿ ೨೭ ಗೀತಾ ಮಾಧುರ್ಯ.. ಬಹುಪಾಲು ಹಿಂದಿ.. ಕೆಲವು ಕನ್ನಡ ಹಾಡುಗಳ ಮಾಲೆ ಕಟ್ಟಲಾಗಿತ್ತು.. ಕನ್ನಡದ ಹಾಡುಗಳು ಕೆಲವೇ ಕೆಲವಾದರೂ ಅದು ಕೊಟ್ಟ ಪ್ರತಿಕ್ರಿಯೆ ಅದ್ಭುತವಾಗಿತ್ತು.. ಸಂಗೀತಕ್ಕೆ ಭಾಷೆಯ ಒತ್ತಡ ಇಲ್ಲ.. ಅಲ್ಲವೇ.. 

ಮುಂದೆ ಹರಿದಿದ್ದು .. ಬೊಂಬಾಟ್ ಹಾಡುಗಳು.. ಗಾಯಕ ಶ್ರೀ ಮಹೇಶ್ ಪ್ರಿಯದರ್ಶನ್, ಗಾಯಕ ಸುಧೀರ್, ಗಾಯಕಿ ಶೃತಿ, ಗಾಯಕಿ ಅನುರಾಧ ಭಟ್.. ಮತ್ತು ಸ್ಪೆಷಲ್ ಗಾಯಕ ಶ್ರೀ ಚೈತನ್ಯ.. ಬರಿ ಹಾಡು ಕಷ್ಟ ಅಲ್ಲವೇ ಅದಕ್ಕೆ ಬೇಕಾಗಿದ್ದು ಸೊಗಸಾದ ವಾದ್ಯ ವೃಂದ.. ಪ್ರತಿಭಾ ಗಣಿಗಳೇ ವೇದಿಕೆಯಲ್ಲಿ ಇದ್ದರು.. ಕೀಬೋರ್ಡ್ ಶ್ರೀ ಕೃಷ್ಣ ಉಡುಪ, ಇನ್ನೊಂದು ಕೀ ಬೋರ್ಡ್ ಶ್ರೀ ಹರ್ಷ, ಕೊಳಲು ಶ್ರೀ ರಮೇಶ್, ಡ್ರಮ್ಸ್ ಶ್ರೀ ಕೃಷ್ಣ, ಡೋಲಕ್ ಶ್ರೀ ಶಿವಮೂರ್ತಿ, ಮತ್ತು ತಬಲಾ ಶ್ರೀ ಪ್ರದ್ಯುಮ್ನ..

ಒಂದಾದ ಮೇಲೆ ಒಂದರಂತೆ ಬರೋಬ್ಬರಿ ಇಪ್ಪತೇಳು ಹಾಡುಗಳು ಅನುಕ್ರಮವಾಗಿ ಮೂಡಿಬಂತು.. ಆ ಹಾಡುಗಳ ಪಟ್ಟಿ ಈ ಕೆಳಕಂಡಂತೆ.. 

೦೧) ಜಬ್ ದೀಪ್ ಜಲೇ ಆನಾ... ಜಬ್ ಶಾಮ್ ಧಲೇ ಆನಾ (ಶೃತಿ ಮತ್ತು ಸುಧೀರ್)
೦೨) ಲಗ್ ಜಾ ಗಲೇ ಲಗ್ ಜಾ ಗಲೇ ಕೀ ಫಿರ್ ಯಹ್ ಹಸೀನ್ ರಾತ್ ಹೋ (ಶೃತಿ)
೦೩) ಬೆಳದಿಂಗಳೊಂದು ಹೆಣ್ಣಾಗಿ ಬಂದಂತೆ ಕಂಡೆ (ಮಹೇಶ್)
೦೪) ಲಿಕ್ ಹೇ ಜೋ ಕತ್ ತುಜೆ (ಸುಧೀರ್)
೦೫) ಆಜ್ ಕಲ್ ತೆರೆ ಮೇರೇ ಪ್ಯಾರ್ (ಸುಧೀರ್ ಮತ್ತು ಅನುರಾಧ ಭಟ್)
೦೬) ಕೋರಾ ಕಾಗಜ್ ಥಾ ಏ ಮ್ಯಾನ್ ಮೇರಾ ಲಿಕ್ ಲಿಯಾ ನಾಮ್ ಉಸ್ಪೇ ತೇರಾ (ಮಹೇಶ್ ಮತ್ತು ಶೃತಿ)
೦೭) ಎಲ್ಲೆಲ್ಲಿ ನೋಡಲಿ ನಿನ್ನನ್ನೇ ಕಾಣುವೆ (ಸುಧೀರ್ ಮತ್ತು ಅನುರಾಧ ಭಟ್)
೦೮) ಬಾಬೂಜಿ ಧೀರೆ ಚಲನಾ.. ಸಾಂನೆ ಝರಾ ಸಂಬಲ್ನ(ಶೃತಿ)
೦೯) ಕಭಿ ಕಭಿ ಮೇರೇ ದಿಲ್ ಮೇ  (ಸುಧೀರ್ ಮತ್ತು ಅನುರಾಧ ಭಟ್)
೧೦) ನಗುವ ನಯನ ಮಧುರ ಮೌನ (ಮಹೇಶ್ ಮತ್ತು ಶೃತಿ)
೧೧) ಕೌನ್ ಹೇ ಜೋ ಸಪನೋ ಮೇ ಆಯಾ (ಸುಧೀರ್)
೧೨) ಬಾನಲ್ಲೂ ನೀನೆ ಭುವಿಯಲ್ಲೂ ನೀನೆ ಎಲ್ಲೆಲ್ಲೂ ನೀನೆ ನನ್ನಲ್ಲೂ ನೀನೆ (ಶೃತಿ)
೧೩) ಆಜಾ ಸನಮ್ ಮಧುರ್ ಚಾಂದಿನಿ ಹೈ ಹಮ್ (ಮಹೇಶ್ ಮತ್ತು ಶೃತಿ)
೧೪) ಎಹೆಸಾನ್ ತೇರಾ ಹೋಗಾ ಮುಜುಪರ್ (ಮಹೇಶ್)
೧೫) ಜೊತೆಯಲಿ ಜೊತೆಯಲಿರುವೆನು ಹೀಗೆ ಎಂದು (ಮಹೇಶ್ ಮತ್ತು ಶೃತಿ)
೧೬) ಚುರಾಲಿಯ ಹೇ ತುಂನೇ ಜೋ ದಿಲ್ ಕೋ (ಸುಧೀರ್ ಮತ್ತು ಶೃತಿ)
೧೭) ಜೋ ವಾದಕಿಯಾ ಹೊ ನಿಭಾನ ಪಡೆಗಾ (ಮಹೇಶ್ ಮತ್ತು ಅನುರಾಧ)
೧೮) ಪಿಯಾ ತೂ ಅಬ್ ತೋ ಆಜಾ (ಮಹೇಶ್, ಶೃತಿ ,ಮತ್ತು ಸುಧೀರ್)
೧೯) ಪುಕಾರುತಾ ಚಲಾ ಹೂ ಮೇ  (ಸುಧೀರ್) 
೨೦) ಏ ಮೇರಾ ದಿಲ್ ಯಾರ್ ಕಾ ದೀವಾನಾ (ಅನುರಾಧ)
೨೧) ಏ ರಾತೇ ಏ ಮೌಸಮ್ ನದೀ ಕಾ ಕಿನಾರ ಏ ಚಂಚಲ್ ಹವಾ (ಚೈತನ್ಯ ಮತ್ತು ಶೃತಿ)
೨೨) ನಾಮ್ ಗಮ್ ಜಾಯೆಗಾ  (ಮಹೇಶ್ ಮತ್ತು ಶೃತಿ)
೨೩) ಜೋಕೇ ನಾ ಬಳ್ಳಿಯ ಮಿಂಚು (ಶೃತಿ)
೨೪) ದೀವಾನಾ ಹುವಾ ಬಾದಲ್ (ಸುಧೀರ್ ಮತ್ತು ಅನುರಾಧ)
೨೫) ಕಾಣದ ಕಡಲಿಗೆ ಹಂಬಲಿಸಿದ ಮನ (ಮಹೇಶ್)
೨೬) ಸಂತೋಷಕ್ಕೆ ಹಾಡು ಸಂತೋಷಕ್ಕೆ (ಮಹೇಶ್)
೨೭) ಕುಲದಲ್ಲಿ ಕೀಳ್ಯಾವುದೋ ಹುಚ್ಚಪ್ಪ (ಮಹೇಶ್, ಸುಧೀರ್ ಮತ್ತು ಸಂಗಡಿಗರು)

ಪ್ರತಿಯೊಂದು ಹಾಡಿಗೂ ಪ್ರೇಕ್ಷಕರ ಪ್ರತಿಕ್ರಿಯೆ.. ಇನ್ನೊಮ್ಮೆ ಇನ್ನೊಮ್ಮೆ ಇನ್ನೊಂದು ಸಲ ಎಂದು ಹೇಳಿಬರುತ್ತಿದ್ದ ಬೇಡಿಕೆ.. ಒಂದು ಅದ್ಭುತ ಸಂಗೀತ ಸಂಜೆಗೆ ಸಾಕ್ಷಿಯಾಗಿತ್ತು.. ಮೂರು ಘಂಟೆಗಳು ಮೂರು ನಿಮಿಷ ಕಳೆದ ಹಾಗೆ ಸಾಗಿತ್ತು.. 
ಪ್ರತಿಯೊಬ್ಬ ಕಲಾವಿದರ ಪರಿಶ್ರಮ ಎದ್ದು ಕಾಣುತ್ತಿತ್ತು... ಚುಟುಕು  ಚುಟುಕಾಗಿ ವೇದಿಕೆಗೆ ಬಂದು ಹಾಡುಗಳ ಹೆಸರು ಮತ್ತು ಗಾಯಕರ ಹೆಸರಿನ ಜೊತೆಯಲ್ಲಿ ಆ ಹಾಡಿನ ಜೊತೆ ತಳುಕು  ಹಾಕಿಕೊಂಡಿದ್ದ ಚಿಕ್ಕ ಚಿಕ್ಕ ಸಂಗತಿಗಳನ್ನು ಕನ್ನಡ, ಇಂಗ್ಲಿಷ್, ಮತ್ತು  ಹಿಂದಿ ಭಾಷೆಯಲ್ಲಿ ಬಿತ್ತರಿಸುತ್ತಿದ್ದ ನಿರೂಪಕಿಯ ಮಾತುಗಳು ಸೊಗಸಾಗಿದ್ದವು.. ಇಡೀ ಕಾರ್ಯಕ್ರಮದಲ್ಲಿ ಕಂಡು ಬಂದಿದ್ದು ಅಚ್ಚುಕಟ್ಟುತನ.. ಒಂದು ನಿಮಿಷ ಬಿಡುವಿಲ್ಲದೆ ೨೭ ಹಾಡುಗಳನ್ನ ಹಾಡಿದ ಗಾಯಕರು.. ಜೊತೆಯಲ್ಲಿ ಅಷ್ಟು ಹಾಡುಗಳಿಗೆ ದಣಿವರಿಯದೆ ಸಂಗೀತ ನೀಡಿದ ಸಂಗೀತಗಾರರಿಗೆ ಈ ಅಕ್ಷರಗಳ ಮೂಲಕ ಧನ್ಯವಾದಗಳನ್ನು ಅರ್ಪಿಸುತ್ತಿದ್ದೇನೆ..

 ಮಂದ ಸ್ಥಾಯಿ ಉಚ್ಚ ಸ್ಥಾಯಿ.. ಯುಗಳ ಗೀತೆ, ಯಾವುದೇ  ಹಾಡು ಕೊಡಿ ಚಚ್ಚಿ ಬಿಸಾಕುತ್ತಿದ್ದ ಗಾಯಕಿ ಶೃತಿ.. ಅವರ ಧ್ವನಿಯ ಏರಿಳಿತ ಸೂಪರ್ ಇತ್ತು.. ಒಂದೆರಡು ಹಾಡು  ಕೇಳಿದ ತಕ್ಷಣ..  ಮುಂದಿನ ಹಾಡು ಇದು ಎಂದು  ತಕ್ಷಣ ನಮಗೆ ಗಾಯಕಿ ಶೃತಿ ಎನ್ನುವುದು ಮನಸ್ಸಿಗೆ ಬರುತ್ತಿತ್ತು.. ಮತ್ತು ಅದು ನಿಜವೂ ಆಗುತ್ತಿತ್ತು.. ಈ  ಗಾಯಕಿಯ ಪ್ರತಿಭೆಗೊಂದು ಸಲಾಂ..

ಭಾವಗೀತೆ, ಕುಣಿಯುವ ಹಾಡು, ಭಾವಪೂರ್ಣ ಹಾಡು, ರಮಣೀಯ ಪ್ರೇಮಗೀತೆ.. ಎಲ್ಲದ್ದಕ್ಕೂ ಸೈ ಎಂದು ಹಾಡುತ್ತಿದ್ದ ಮಹೇಶ್ ಪ್ರಿಯದರ್ಶನ್ ಅದ್ಭುತ.. ಅವರ ಎನರ್ಜಿ ಕಂಡು ನನಗೆ ಅವರ ಹಸ್ತ ಲಾಘವ ಮಾಡುವ ಆಸೆ ಆಗುತ್ತಿತ್ತು.. ಆದರೆ ಒಂದಾದ ಮೇಲೆ ಒಂದು ಹಾಡುಗಳು ಬರುತ್ತಲೇ ಇದ್ದವು.. ಜೊತೆಯಲ್ಲಿ ವೇದಿಕೆಯ ಮೇಲೆ ಹತ್ತಿ  ನಾಚಿಕೆ.. ಮತ್ತು ಸಭಾ ಮರ್ಯಾದೆ ನನ್ನನ್ನು ಹಿಂದಕ್ಕೆ ಉಳಿಸಿತು.. ಕಡೆಯಲ್ಲಿ ಕುಲದಲ್ಲಿ ಕೀಳ್ಯಾವುದೋ ಹಾಡಿಗೆ ಪಾದಕ್ಕೆ ಪಾದರಸ ಕಟ್ಟಿಕೊಂಡಂತೆ ಕುಣಿದದ್ದು ಸೂಪರ್ ಇತ್ತು.. ಮಹೇಶ್ ಸರ್ ನಿಮಗೆ ಒಂದು ಸಲ್ಯೂಟ್..

ಹಿಂದಿ ಹಾಡುಗಳ ಉಚ್ಚಾರಣೆ.. ಅದಕ್ಕೆ ಬೇಕಾದ ಭಾವ.. ಗಟ್ಟಿ ಧ್ವನಿ.. ಸರಾಗವಾಗಿ ಹಾಡುತ್ತಿದ್ದ ಶೈಲಿ  ಸುಧೀರ್ ಅವರದ್ದು.. ಅನೇಕ ಹಾಡುಗಳನ್ನು ಸರಾಗವಾಗಿ ಹಾಡಿದ ಸುಧೀರ್.. ಅವರ ಧ್ವನಿ ಇಷ್ಟವಾಯಿತು .. ಹಾಡುವಾಗ ತನ್ಮಯವಾಗಿ ಹಾಡುತ್ತಿದ್ದ ರೀತಿಗೆ ಅಭಿನಂದನೆಗಳು..

ಮರೆಯಲ್ಲಿ ನಿಂತು ಹಾಡುವ ರೀತಿಯಲ್ಲಿ ಹಾಡಿದ ಅನುರಾಧ.. ಎಲ್ಲಾ ಗಾಯಕ ಜೋಡಿಯ ಜೊತೆಗೆ ಸರಾಗವಾಗಿ ಹಾಡುತ್ತಿದ್ದುದು ಸಂಗೀತ ಸಂಜೆಗೆ  ಮೆರುಗು ನೀಡುತ್ತಿತ್ತು.. ಈಕೆಯ ಧ್ವನಿಯ ಇಂಚರ ಇಷ್ಟವಾಗುತ್ತಿತ್ತು .. ಇನ್ನಷ್ಟು ಹಾಡುಗಳು  ಚೆನ್ನಾಗಿರುತ್ತಿತ್ತು ಅನ್ನಿಸುತ್ತಿತ್ತು.... ಈ ಗಾಯಕಿಯ ಧ್ವನಿಗೆ ಒಂದು ಸಲಾಂ..

ಈ ಸಂಗೀತ ಸಂಜೆಗೆ ಇನ್ನೊಂದು ಆಶ್ಚರ್ಯ ಕಾಡಿತ್ತು..  ಚಿತ್ರಕೂಟ ಶಾಲೆಯ ಮುಖ್ಯಸ್ಥರಾದ ಶ್ರೀ ಚೈತನ್ಯ ಅವರು ಹಾಡಿದ್ದು.. ಸರಳ ಸಂಗೀತದ ಏ ರಾತೇ ಏ ಮೌಸಮ್ ಹಾಡಿಗೆ ಶೃತಿಯೊಡನೆ ಹಾಡಿದ್ದು ಎಲ್ಲರಲ್ಲಿಯೂ ಖುಷಿಯ ವಾತಾವರಣ ಮೂಡಿಸಿತು..

ಒಂದು ಸುಂದರ ಸಂಜೆಯನ್ನು ಕಳೆದ ಅನುಭವ ನನಗೆ.. ಇದಕ್ಕೆ ಕಾರಣ ಗೆಳೆಯ ಗುರುಪ್ರಸಾದ್.. ಈ ಕಾರ್ಯಕ್ರಮವನ್ನು ಆಯೋಜಿಸಿದ್ದ Zeal fitness ಸಂಸ್ಥೆ, ಚಿತ್ರಕೂಟ ಶಾಲೆಯ ಆಡಳಿತ ವರ್ಗ.. ಜೊತೆಯಲ್ಲಿ ಅದ್ಭುತ ಸಾತ್ ಕೊಟ್ಟ ಜೀವ ಸ್ವರ ತಂಡದ ಸಂಗೀತ ಪರಿಶ್ರಮ.. 

ಇದೆ ಕಾರ್ಯಕ್ರಮದಲ್ಲಿ ಮೊದಲನೇ ವಾರ್ಷಿಕೋತ್ಸವ ಆಚರಿಸಿದ Zeal fitness ಸಂಸ್ಥೆಗೆ ಶುಭಾಶಯಗಳನ್ನು ಕೋರುತ್ತಾ ಇಂದಿನ ಕಾರ್ಯಕ್ರಮದ ಕೆಲವು ತುಣುಕುಗಳು ನಿಮಗಾಗಿ.. 


















ಸೊಗಸಾದ ಗಾಯನ.. ಸೊಗಸಾದ ಸಂಗೀತ.. ಒಂದು ಶನಿವಾರದ ಸಂಜೆಯನ್ನು ಸಾರ್ಥಕತೆಯಿಂದ ಕಳೆದ ಅನುಭವ.. ಇದಕ್ಕೆ  ಕಾರಣರಾದ ಗೆಳೆಯ ಗುರುಪ್ರಸಾದ್ ಅವರಿಗೆ ಅನಂತ ಧನ್ಯವಾದಗಳು ಮತ್ತು ಈ ಲೇಖನವನ್ನು ಗುರುಪ್ರಸಾದ್ ಅವರ ಜೊತೆಗಿನ ಗೆಳೆತನಕ್ಕೆ ಒಂದು ಉಡುಗೊರೆ 

Tuesday, December 12, 2017

ಹೀಗೊಂದು ಭಾವ ಲಹರಿ

ಮಹಾಭಾರತದಲ್ಲಿ ಕುರುಕ್ಷೇತ್ರ ಯುದ್ಧದ ನಿರ್ಧಾರ ಕೊನೆಹಂತಕ್ಕೆ ತಲುಪಿರುತ್ತದೆ.. ಯುದ್ಧ ಬಿಟ್ಟರೆ ಅನ್ಯ ಮಾರ್ಗವಿಲ್ಲ ಎಂದು ತೀರ್ಮಾನವಾದ ಸಮಯ ..  ಪಾಂಡವರು ಮತ್ತು ಕೌರವರು ತಮ್ಮ ತಮ್ಮ ಶಕ್ತಿಯನ್ನು ಹೆಚ್ಚಿಸಿಕೊಳ್ಳುವಲ್ಲಿ ತಮ್ಮ ಸಮಯವನ್ನು ತೊಡಗಿಸಿಕೊಂಡಿರುತ್ತಾರೆ. ಕೌರವರು ಶಕ್ತಿಶಾಲಿ ರಾಜ ಮಹಾರಾಜರುಗಳ ಸಹಾಯ ಹಸ್ತವನ್ನು ಪ್ರೀತಿಯಿಂದಲೋ, ಹೆದರಿಸಿಯೋ ಅಥವಾ ತಂತ್ರಗಾರಿಕೆಯಿಂದಲೋ ತಮ್ಮ ಕಡೆಗೆ ಸೆಳೆದುಕೊಳ್ಳುವುದರಲ್ಲಿ ಸಫಲರಾಗಿರುತ್ತಾರೆ.. 

ಇದರಲ್ಲಿ ಒಂದು ಘಟನೆ.. ಮದ್ರ ದೇಶದ ಮಹಾರಾಜ ಶಲ್ಯ ತನ್ನ ತಂಗಿ ಮಾದ್ರಿಯ ಮಕ್ಕಳಾದ ನಕುಲ ಸಹದೇವರು ಇರುವ ಪಾಂಡವರ ಪಕ್ಷಕ್ಕೆ ಸಹಾಯ ನೀಡಲು ತನ್ನ ಸಮಸ್ತ ಸೈನ್ಯದೊಡನೆ ಕುರುಕ್ಷೇತ್ರದ ಕಡೆಗೆ ಸಾಗುತ್ತಿರುತ್ತಾನೆ.. ಇದನ್ನು ತಿಳಿದ ಶಕುನಿ ಮೆಲ್ಲಗೆ ದುರ್ಯೋಧನನಿಗೆ ಶಲ್ಯನ ಸೇನೆಗೆ ಮತ್ತು ಸೈನಿಕರಿಗೆ ವಿಶಿಷ್ಟ ಅತಿಥಿ ಉಪಚಾರ ಮಾಡು.. ಆದರೆ ಅದನ್ನು ನೀನು ಮಾಡುತ್ತಿದ್ದೀಯ ಎಂದು ತಿಳಿಯದ ಹಾಗೆ ನೋಡಿಕೋ ಎನ್ನುತ್ತಾನೆ.. 

ಶಕುನಿ ಹೇಳಿದ ಮಾತನ್ನು ಕೇಳುತ್ತಿದ್ದ ಮಂದ ಮತೀಯ ಆದರೆ ಛಲವಾದಿಯಾಗಿದ್ದ ದುರ್ಯೋಧನ.. ತನ್ನ ಸೇನೆ ಗೆಲ್ಲಲೇಬೇಕೆಂಬ ಛಲವಿದ್ದದರಿಂದ ಹಾಗೆಯೇ ಮಾಡುತ್ತಾನೆ.. ಇದನ್ನರಿಯದ ಶಲ್ಯ,  ಅತಿಥಿ ಸತ್ಕಾರವನ್ನು ಮಾಡುತ್ತಿರುವುದು ಪಾಂಡವರು ಎಂಬ ಭ್ರಮೆಯಲ್ಲಿ ಖುಷಿಯಾಗಿರುತ್ತಾನೆ.... ಆದರೆ ವಸ್ತುಸ್ಥಿತಿ ಅರಿಯುವಷ್ಟರಲ್ಲಿ ದುರ್ಯೋಧನನ ಉಪ್ಪಿನ ಋಣಕ್ಕೆ ಅಧೀನನಾಗಿ ತನಗೆ ಇಷ್ಟವಿಲ್ಲದೆ ಇದ್ದರೂ ಕೌರವರ ಪರವಾಗಿ ಪಾಂಡವರ ವಿರುದ್ಧ ಯುದ್ಧ ಮಾಡಲು ನಿಲ್ಲುತ್ತಾನೆ.. .. 

ಇಲ್ಲಿ ಶಲ್ಯ ಮಾಡಬಹುದಾಗಿದ್ದು ತನ್ನ ಸೇನೆಗೆ ಅತಿಥಿ ಸತ್ಕಾರ ಸಿಕ್ಕಾಗ ಇದರ ಕತೃ ಯಾರು, ಯಾವ ಕಾರಣಕ್ಕೆ ಸಹಾಯಕ್ಕೆ ಮಾಡುತ್ತಿದ್ದಾರೆ.. ಇದರ ಒಳಾರ್ಥವೇನು, ಇದರಲ್ಲಿ ಏನಾದರೂ ಸಂಚಿದೆಯೇ ಹೀಗೆ ನಾನಾ ರೀತಿಯಿಂದ ಯೋಚಿಸಿ ಅತಿಥಿ ಸತ್ಕಾರ ಸ್ವೀಕರಿಸಬೇಕಿತ್ತು .. ಆದರೆ ತಾನು ಅಂದುಕೊಂಡಿದ್ದು ಸರಿ .. ಇದು ಪಾಂಡವರದೇ ಆತಿಥ್ಯ ಎನ್ನುವ ಒಂದು ತಪ್ಪು ಭ್ರಮೆಯಲ್ಲಿ .. ಆ ಆತಿಥ್ಯವನ್ನು ಸ್ವೀಕರಿಸುತ್ತಾನೆ.. ಮುಂದೆ ನೆಡೆದದ್ದೆಲ್ಲಾ ಉಲ್ಟಾ.. 

ಮಾಧ್ಯಮಗಳು ಶಲ್ಯ ಅಥವಾ ದುರ್ಯೋಧನನ ರೀತಿಯಲ್ಲಿ ವರ್ತಿಸಬಾರದು.. ವಸ್ತುನಿಷ್ಠವಾಗಿ ಇರುವ ವಿಷಯವನ್ನು ಸರಿಯಾದ ದಿಕ್ಕಿನಲ್ಲಿ ಇದೆಯೇ.. ಇದನ್ನು ಬಿತ್ತರಿಸಿದರೆ ಸಮಾಜಕ್ಕೆ ಎಳ್ಳಷ್ಟಾದರೂ ಉಪಯೋಗವಿದೆಯೇ.. ಇದನ್ನು ಯಾಕೆ ಬಿತ್ತರಿಸಬೇಕು ಎನ್ನುವ  ಸ್ಪಷ್ಟತೆ ಇದ್ದರೇ ಅಥವಾ ಇದ್ದಾಗ ಅನುಕೂಲ.. ಎತ್ತು ಈಯಿತು ಅಂದರೆ ಕೊಟ್ಟಿಗೆಗೆ ಕಟ್ಟು ಎನ್ನುವಂತೆ.. ಅಂದಿನ ದಿನಕ್ಕೆ ಜನಪ್ರಿಯತೆಯ ಮೈಲಿಗಲ್ಲು ದಾಟುವ ಹಾದಿ ಹಿಡಿಯಬಾರದು.. 

ಜನಸಾಮಾನ್ಯರಿಗೆ ಯಾವ ಸುದ್ದಿ ಬೇಕು, ಇಂತಹ ಸುದ್ದಿ ಬೇಕು ಎಂದು ವಿಚಾರ ಮಾಡುವುದಕ್ಕಿಂತ.. ಸಮಾಜದಲ್ಲಿ ನೆಡೆಯುತ್ತಿರುವ ಸಾಮಾಜಿಕ ಕಳಕಳಿಯುಳ್ಳ ವಸ್ತು ವಿಷಯವನ್ನು ಜನಮಾನಸದಲ್ಲಿ ಬಿತ್ತಬೇಕು.. 

ನಾನು ೮೦ರ ದಶಕದ ಆರಂಭದಲ್ಲಿ ಮಯೂರದಲ್ಲಿ ಓದಿದ್ದೆ.... ಅಂದು ಹೆಣ್ಣಿನ ಓರೇ ನೋಟ.. ಗೆಜ್ಜೆ ಸದ್ದಿಗೆ ಮಾನವ ವಿಚಲಿತನಾಗುತ್ತಿದ್ದ.. ಆದರೆ ಇಂದು ಗೆಜ್ಜೆ ಸದ್ದು, ಓರೇ ನೋಟ ಸಾಕಾಗುವುದಿಲ್ಲ.... ಇದು ಸುಮಾರು ೩೭ ವರ್ಷಗಳ ಹಿಂದೆ ಓದಿದ್ದು.. ಆದರೆ ಇಂದಿಗೂ ಅನ್ವಯಿಸುತ್ತದೆ..

ಇಂದು ಯಾವುದೇ ಮಾಧ್ಯಮ ನೋಡಿದರು ಅದು ಮುದ್ರಣವಾಗಿರಬಹುದು ಇಲ್ಲವೇ ದೃಶ್ಯ ಮಾಧ್ಯಮವಾಗಿರಬಹುದು.. ಹಠಾತ್ ನಶೆಯೇರುವಂಥಹ ಕಾರ್ಯಕ್ರಮದ ವಿವರಣೆಯೇ ಪ್ರಾಧಾನ್ಯತೆ ಪಡೆದುಕೊಂಡಿರುತ್ತದೆ.. 

ಸುಮ್ಮನೆ ಹಾಗೆ ಪ್ರಶ್ನೆ ಕೇಳಿದರೆ ಜನರು ಬದಲಾಗಿದ್ದಾರೆ ಅವರಿಗೆ ಇಂತಹ ದೃಶ್ಯಗಳೇ ಇಂತಹ ವಿಷಯಗಳೇ ಬೇಕು ಎಂಬ ಹಾರಿಕೆ ಉತ್ತರ ನೀಡುತ್ತಾರೆ.. 

ನಾ ಹೇಳುವ ಮಾತು ಎಂದರೆ.. ಮಂದಿಯ ಯೋಚನೆ ಬದಲಾಗಿಲ್ಲ.. ಅದನ್ನು ಬಿತ್ತರಿಸುವ ಮಾಧ್ಯಮದ ಅಭಿರುಚಿ ಬದಲಾಗಿದೆ..ಅದರಿಂದ ಜನರ ಅಭಿರುಚಿಯೂ ಹದಗೆಟ್ಟಿದೆ..  ಪ್ರತಿ ದೇಶದ ಭವಿಷ್ಯ ನಿನ್ನೆಯ ವೃತ್ತ ಪತ್ರಿಕೆಯಲ್ಲಿದೆ ಎಂದು ಓದಿದ್ದೆ ಶಾಲೆಯಲ್ಲಿದ್ದಾಗ.. ಹೌದು ಎಷ್ಟು ನಿಜ.. ವೃತ್ತ ಪತ್ರಿಕೆಗಳು ದೇಶದ ಇತಿಹಾಸ, ವಾಣಿಜ್ಯ, ಕ್ರೀಡಾರಂಗ, ರಾಜಕೀಯ, ಕಲೆ ಮುಂತಾದ ವಿಷಯಗಳ ಬಗ್ಗೆ ಸಮಗ್ರ ಚಿತ್ರಣ ನೀಡುತ್ತಾ.. ಸಮಾಜ ಹೀಗಿದೆ .. ಆದರೆ ಅದನ್ನು ಹೀಗೆ ಸರಿ ಮಾಡಬಹುದು ಎನ್ನುವ ಅಭಿಪ್ರಾಯ ಮೂಡಿಸುವ ನಿಟ್ಟಿನಲ್ಲಿ ಕಾರ್ಯನಿರತವಾದಾಗ.. ಜನ ಸಾಮಾನ್ಯರಿಗೆ ಹೌದಲ್ಲ ನಮ್ಮ ದೇಶದಲ್ಲಿ ಹೀಗೆಲ್ಲ ಆಗುತ್ತಿದೆ.. ದೇಶದಲ್ಲಿ ಇಂತಹ ಅದ್ಭುತ ಸಂಪತ್ತು ತುಂಬಿದೆ.. ಇದನ್ನು ಸಮರ್ಪಕವಾಗಿ ಉಪಯೋಗಿಸಿದಾಗ ದೇಶದ ಪ್ರಗತಿ ಕಾಣುತ್ತದೆ ಎನ್ನುವ ಸತ್ಯವನ್ನು ಅರಿತುಕೊಳ್ಳುತ್ತಾರೆ.. 

ಇಲ್ಲಿ ಯಾವುದೇ ಪ್ರಜೆಯಾದರೂ ಮಾಧ್ಯಮಗಳ ಜೊತೆ ನಿಲ್ಲುವುದು ದಿನದಲ್ಲಿ ಕಡಿಮೆ ಪ್ರಮಾಣದಲ್ಲಿ.. ಕಾರಣ ಅವನದೇ ಆದ ಸಾಂಸಾರಿಕ ಗೊಂದಲಗಳು, ಭವಿಷ್ಯದ ಬಗ್ಗೆ ಇರುವ ಹೆದರಿಕೆ, ಜವಾಬ್ಧಾರಿಗಳು ಹೀಗೆ ನೂರಾರು, ಸಾವಿರಾರು ಸಮಸ್ಯೆಗಳ ಜೊತೆಯಲ್ಲಿ ಈಜಾಡುತ್ತಿದ್ದಾಗ.. ತನ್ನ ಉತ್ತಮ ಜವಾಬ್ಧಾರಿಯನ್ನು ಮರೆತು ಕೇವಲ ಯಶಸ್ಸಿನ ಏಣಿಯನ್ನೇ ಮಾನದಂಡವಾಗಿಟ್ಟುಕೊಂಡು ಬೇಡದ ವಿಷಯವನ್ನು ರಂಜನೀಯವಾಗಿ ಬಿತ್ತರಿಸಿ / ಮುದ್ರಿಸಿ ಪ್ರಜೆಗಳನ್ನು ಹಾದಿ ತಪ್ಪಿಸುವ ಇಲ್ಲವೇ ಇರುವ ಗೊಂದಲಗಳನ್ನು ಇನ್ನಷ್ಟು ಹೆಚ್ಚಿಸುವ ಕಾರ್ಯಕ್ಕೆ ಕೈ ಹಾಕುವುದು ತಪ್ಪಾಗುತ್ತದೆ.. 

ಅದೆಲ್ಲ ಸರಿ ಇದಕ್ಕೆ ಏನೂ ಮಾಡಬೇಕಪ್ಪ.. ಬರಿ ಹರಿಕಥೆ ಮಾಡಿದರೆ ಸಮಸ್ಯೆಗಳಿಗೆ ಉತ್ತರ ಸಿಗಬಹುದೇ ಎಂದರೆ ಖಂಡಿತ ಉತ್ತರ ಸಿಗೋಲ್ಲ, ಬದಲಿಗೆ ಸಮಾಜಕ್ಕೆ ಹಂಚುವ ವಿಷಯವನ್ನು ಸರಿಯಾದ ಮಾನದಂಡದಲ್ಲಿ ಬಿತ್ತರಿಸುವ ಶಕ್ತಿ ತಮಗೆ ಇದೆ ಎನ್ನುವದನ್ನು ಜನತೆಗೆ ತೋರಿಸಬೇಕು.. ಅಯ್ಯೋ ಬಿಡು ಎಷ್ಟು ಮಾಡಿದರೂ ಅಷ್ಟೇ ಎನ್ನುವ ಧೋರಣೆ ಮಾಧ್ಯಮಗಳಲ್ಲಿ ಬರಬಾರದು.. 

ಬೆಳಿಗ್ಗೆ ಎದ್ದು  ಸುದ್ದಿವಾಹಿನಿಗಳಲ್ಲಿ.. ಬರಿ ಸುದ್ದಿವಾಹಿನಿಯೇ ದೂರದರ್ಶನ ಎಂದು ಹೇಳಿದರೆ ಒಳ್ಳೆಯದೇನೋ ಅಥವಾ ವೃತ್ತ ಪತ್ರಿಕೆಯಲ್ಲಿ ಸುದ್ದಿಯನ್ನು ನೋಡುವ ಅಥವಾ ಓದುವ ಜನಸಾಮಾನ್ಯನ ಹೃದಯಕ್ಕೆ ಭಯಬೀತರಾಗುವಂಥಹ ಕೊಲೆ, ಸುಲಿಗೆ, ಭ್ರಷ್ಟಾಚಾರ, ಮೋಸ, ದಗಾ ಎನ್ನುವ ನೂರಾರು ಋಣಾತ್ಮಕ ವಿಷಯಗಳನ್ನು ಬಲವಂತವಾಗಿ ತುರುಕಿ.. ಅರೆ ನಮ್ಮ ಸಮಾಜ ಇರುವುದೇ ಹೀಗೆ..ಉಪಯೋಗವಿಲ್ಲ.. ನಾ ಒಬ್ಬ ಯಾಕೆ ಹಾಗಿರಬೇಕು.. ಹೀಗಿರಬೇಕು ಎನ್ನುವ ಕಾಡುವಂತಹ ಪ್ರಶ್ನೆಗಳಿಗೆ ಉತ್ತರ ನಿಲುಕದೆ.. ಆ ಕೆಟ್ಟ ವ್ಯವಸ್ಥೆಯಲ್ಲಿ ತಾನು ಒಂದಾಗುವುದೇ ಬಾಳಿನ ಕರ್ತವ್ಯ ಎನ್ನುವಂತಹ ನಿರ್ಧಾರಕ್ಕೆ ಬರುತ್ತಾನೆ.. ಇದಲ್ಲವೇ ಅಪಾಯದ ಮಟ್ಟ.. 

ಮತ್ತೊಮ್ಮೆ ಮಹಾಭಾರತದ ಎಳೆಯನ್ನು ಇಲ್ಲಿ ತರಲು ಇಚ್ಛಿಸುತ್ತೇನೆ.. ಕುರುಕ್ಷೇತ್ರ ಯುದ್ಧ ಮುಗಿಯುತ್ತದೆ.. ಅರ್ಜುನ ಮತ್ತು ಭೀಮ ಅಸಾಮಾನ್ಯ ಕಲಿಗಳಂತೆ ಹೋರಾಡಿ ಪಾಂಡವರ ವಿಜಯದಲ್ಲಿ ಮುಖ್ಯ ಪಾತ್ರವಹಿಸಿರುತ್ತಾರೆ.. ಇದನ್ನು ಮಾನವ ಸಹಜ ಅಹಂ ಬರುತ್ತದೆ.. ನನ್ನಿಂದ ನನ್ನಿಂದ ಎಂದು ವಾಗ್ವಾದ ಶುರುವಾಗುತ್ತದೆ.. ಆಗ ಜಗನ್ನಾಟಕ ಸೂತ್ರಧಾರಿ ಶ್ರೀ ಕೃಷ್ಣ.. ಬರ್ಬರೀಕಾನನ್ನ ಕೇಳು ಎನ್ನುತ್ತಾನೆ.. ಆಗ ಬರ್ಬರೀಕಾ  " ಕುರುಕ್ಷೇತ್ರದಲ್ಲಿ ಅಧರ್ಮಿಗಳನ್ನು ಕೊಲ್ಲುತ್ತಿದ್ದುದು ನನಗೆ ಕಂಡ ಹಾಗೆ ಬರಿ ಸುದರ್ಶನ ಚಕ್ರ ಒಂದೇ.... ಅದು ಶ್ರೀಕೃಷ್ಣನದು.. ಹಾಗಾಗಿ ಕುರುಕ್ಷೇತ್ರ ಗೆದ್ದದ್ದು ಶ್ರೀಕೃಷ್ಣನಿಂದಲೇ ಹೊರತು ನಿಮ್ಮಿಂದ ಅಲ್ಲ ಎಂದು ಭೀಮಾರ್ಜುನರಿಗೆ ಹೇಳುತ್ತಾನೆ.. ಮುಂದೆ ಏನಾಗುತ್ತದೆ..  ಅದು ಇಲ್ಲಿನ ವಿಷಯಕ್ಕೆ ಹೊಂದುವುದಿಲ್ಲ.. ಆದರೆ ಈ ಮಾಧ್ಯಮಗಳು ಯಾರದೋ ಕಾಣದ ಕೈಯಿನ ಮರ್ಜಿಗೆ ಒಳಪಟ್ಟು ಕೆಲಸ ಮಾಡುತ್ತಿರುತ್ತದೆ ಎನ್ನುವುದಕ್ಕೆ ಈ ಉದಾಹರಣೆ ನೀಡಿದೆ.. 

ಕಾಣದ ಕೈಗಳು ತಮ್ಮ ಬೆಳೆಯನ್ನು ಬೇಯಿಸಿಕೊಳ್ಳಲು ಸೃಷ್ಟಿ ಮಾಡುವ ಈ ಮಾಧ್ಯಮಗಳಿಗೆ ದೇಶದ ಪ್ರಗತಿ, ಒಳಿತು ಬೇಕಿಲ್ಲ, ಬದಲಿಗೆ ರಂಗುರಂಗಿನ ವಿಷಯವನ್ನು ತುಂಬಿ ಜನಪ್ರಿಯತೆ ಹೆಚ್ಚಿಸಿಕೊಂಡು ಜಾಹೀರಾತಿನಿಂದ ಬೆಳೆಯುವ ಆಸೆ.. ಹೀಗಿರುವಾಗ ಸಮಾಜಕ್ಕೆ ಒಳ್ಳೆಯದಾಗಬೇಕೆಂದರೆ.. ಕಣ್ಣು ಮುಚ್ಚಿಕೊಂಡು "ಯದಾ ಯದಾ ಹಿ ಧರ್ಮಸ್ಯ..... " ಹೇಳುತ್ತಾ ಕೂರಬೇಕು.. 

ಡಾ. ರಾಜಕುಮಾರ್ ಅವರ ಜ್ವಾಲಾಮುಖಿ ಚಿತ್ರದ "ಹೇಳುವುದು ಒಂದು ಮಾಡುವುದು ಇನ್ನೊಂದು ನಂಬುವುದು ಹೇಗೋ ಕಾಣೆ ಪದ್ಮಾವತಿಪತಿ ತಿರುಪತಿ ಶ್ರೀವೆಂಕಟಾಚಲಪತಿ" ಹಾಡಿನಂತೆ ಜನಸಾಮಾನ್ಯನ ಮನಸ್ಸನ್ನು ಗೊಂದಲಮಯವಾಗಿ ಮೂಡಿಸುತ್ತಾರೆ. 

ಒಂದು ತಿಂಗಳು ದೃಶ್ಯ ಮಾಧ್ಯಮಗಳನ್ನೂ , ಮುದ್ರಣ ಮಾಧ್ಯಮಗಳನ್ನು ಋಣಾತ್ಮಕ ಸುದ್ದಿಗಳನ್ನೂ ಬಿತ್ತರಿಸುವುದನ್ನು ನಿಲ್ಲಿಸಿಬಿಟ್ಟರೆ  ಜೊತೆಯಲ್ಲಿ ಪ್ರಜೆಗಳಿಗೆ ಸುದ್ದಿಯೇ ಒಂದು ಅತಿಥಿಯಾದರೆ ಆಗ ಪ್ರಜಾಪ್ರಭುತ್ವದಲ್ಲಿ ಎಂಥಹ ಬದಲಾವಣೆ ಬರಬಹುದು ನೋಡಿ.. ಅಪರಾಧ, ಕೊಲೆ, ಸುಲಿಗೆ, ದರೋಡೆ, ಲಂಚ, ರಾಜಕೀಯ, ಮೋಸ ಇದ್ಯಾವೂ ಋಣಾತ್ಮಕ ಅಂಶಗಳು ಅವನನ್ನು ಕಾಡುವುದಿಲ್ಲ.. ನನ್ನ ಸಮಾಜ ಚೆನ್ನಾಗಿದೆ ಎನ್ನುವ ಹಂತಕ್ಕೆ ಬರುತ್ತಾನೆ.. 

ಅದೇ ರೀತಿ ಇನ್ನೊಂದು ತಿಂಗಳು ಬರಿ ಧನಾತ್ಮಕತೆಯಿಂದ ಕೂಡಿರುವ ವಿಷಯಗಳನ್ನು ಮಾತ್ರ ಬಿತ್ತರಿಸಲು ಅನುವು ಮಾಡಿಕೊಟ್ಟರೆ.. ಜನಸಾಮಾನ್ಯನ ಮನಸ್ಸು ಹತ್ತಿಯಂತೆ ಹಗುರಾಗಿರುತ್ತದೆ.. ಹೌದು ತನ್ನ ಸಂಸಾರದ ಸುಖ ದುಃಖಗಳನ್ನೂ ನುಂಗಿಕೊಂಡು.. ಅರೆರೇ ಜೀವನವನ್ನು ಹೀಗೂ ಸಾಗಿಸಬಹುದು.. ಹಾಗೆಯೇ ನಾ ಅಂದುಕೊಂಡಷ್ಟು ರೀತಿಯಲ್ಲಿ ಪ್ರಪಂಚವಿಲ್ಲ ಎನ್ನುವ ನಿರ್ಧಾರಕ್ಕೆ ಬರುತ್ತಾನೆ.. 

ಬದಲಾವಣೆ ಅವನಲ್ಲಿ ಕಾಣಸಿಗುತ್ತದೆ.. "ನಾ" ಹೋದರೆ ಹೋದೆನು ಎನ್ನುವ ಕನಕದಾಸರ ನುಡಿಯಂತೆ.. ನಾ ಒಳ್ಳೆಯವನಾದರೆ ಜಗತ್ತು ಒಳ್ಳೆಯದಾಗಿಯೇ ಕಾಣಿಸುತ್ತದೆ ಎನ್ನುವ ಮನೋಭಾವನೆಗೆ ಆವನು ಬರುತ್ತಾನೆ.. ಸಹಜ ಸುಂದರ ನಟ ಅನಂತ್ ನಾಗ್ ಅವರ ಬೆಳದಿಂಗಳ ಬಾಲೆ ಚಿತ್ರದಲ್ಲಿ ಹೇಳುತ್ತಾರೆ.. 
"ಮನುಜ ನಾಲ್ಕು ಹಂತಗಳಲ್ಲಿ ಬೆಳೆಯುತ್ತಾನೆ 
ನಾ ಚೆನ್ನಾಗಿಲ್ಲ ಪ್ರಪಂಚವೂ ಚೆನ್ನಾಗಿಲ್ಲ 
ನಾ ಚೆನ್ನಾಗಿದ್ದೇನೆ ಪ್ರಪಂಚ ಚೆನ್ನಾಗಿಲ್ಲ 
ನಾ ಚೆನ್ನಾಗಿಲ್ಲ ಪ್ರಪಂಚ ಚೆನ್ನಾಗಿದೆ 

ಆದರೆ ನಾಲ್ಕನೇ ಹಂತದಲ್ಲಿ 
ನಾನೂ ಚೆನ್ನಾಗಿದ್ದೇನೆ.. ಪ್ರಪಂಚವೂ ಚೆನ್ನಾಗಿದೆ 

ನಾವುಗಳು ಈ ನಾಲ್ಕನೇ ಹಂತಕ್ಕೆ ಬರಬೇಕು ಎನ್ನುತ್ತಾರೆ.. ಎಷ್ಟು ನಿಜ ಅಲ್ಲವೇ ನೋಡುವ ನೋಟ ಚೆನ್ನಾಗಿದ್ದರೆ ಎಲ್ಲವೂ ಸುಂದರವಾಗಿರುತ್ತದೆ ಎನ್ನುವ ಮಾತುಗಳು ಬಂದಿರುವುದು ಹೀಗೆ.. 

ಮಾಧ್ಯಮಗಳು ಸಮಾಜಕ್ಕೆ ಕಣ್ಣಿದ್ದ ಹಾಗೆ.. ಆ ಕಣ್ಣುಗಳು ಜನ ಸಾಮಾನ್ಯರಿಗೆ ಬೇಡದ ವಿಷಯಗಳನ್ನು ಬಿತ್ತರಮಾಡಿ ಅವನ ಮಾನಸ ಸರೋವರವನ್ನು ರಾಡಿಗೊಳಿಸುವ ಬದಲು....  ಬಾರಪ್ಪ ನಾ ನಿನಗೆ ಒಂದು ಸುಂದರ ಸಮಾಜದ ಪರಿಕಲ್ಪನೆಯನ್ನು ಬಿತ್ತುವ ಕೆಲಸ ಮಾಡುತ್ತೇನೆ.. ಅದಕ್ಕೆ ನಿನ್ನ ಸಹಯೋಗವೂ ಇರಲಿ ಎಂದಾಗ 

"ಜಗವೇ ಒಂದು ರಣರಂಗ"
ಎಂದು ಹಾಡುವ ಬದಲು 
ಜಗವೇ ಒಂದು ಸತ್ಯ ಸಂಘ 

ಎನ್ನುವ ಪರಿಭಾಷೆಗೆ ಮನುಜನ ಮನಸ್ಸು ಹೊಂದಿಕೊಳ್ಳುತ್ತಾ ಸಾಗುತ್ತದೆ ..  ಸುದ್ದಿ ಎಂದರೆ ಬರಿ ಋಣಾತ್ಮಕವಾಗಿಯೇ ಇರಬೇಕು.. ಹಾಗಿದ್ದರೆ ಮಾತ್ರ ಯಶಸ್ಸು ಅಂಗೈಯಲ್ಲಿ ಎನ್ನುವ ಭ್ರಮೆಯನ್ನು ಕಳಚಿ ಹೊರಬಂದಾಗ ಮಾತ್ರ ಉಳಿವು... ಇಲ್ಲವೇ ಅಳಿವು.. 

ಮೇಯರ್ ಮುತ್ತಣ್ಣ ಚಿತ್ರದಲ್ಲಿ ದೇಶದ ಬಡತನವನ್ನು ಎತ್ತಿ ಹಿಡಿದು ಅದಕ್ಕೆ ರಂಗು ತುಂಬಿ ಬಹುಮಾನ ಪ್ರಶಂಸೆ  ಗಿಟ್ಟಿಸಿಕೊಳ್ಳುವ ಹಾದಿಯಲ್ಲಿದ್ದ ನಾಯಕಿಗೆ ಅಣ್ಣಾವ್ರು ಹೇಳುವ ಮಾತು "ನಾವು ಮಾಡುವ ಕೆಲಸ ನಾಲ್ಕು ಜನಕ್ಕೆ ಉಪಯೋಗವಾಗಬೇಕು.. " ಎನ್ನುವ ಮಾತು ಈ ಹೊತ್ತಿಗೆ ಎಷ್ಟು ನಿಜ ಅಲ್ಲವೇ.. !!!

ಬೆಳೆಯುವ ಮಕ್ಕಳಿಗೆ ಈ ಮಾಧ್ಯಮಗಳು ಕೊಡುವ ಜ್ಞಾನವಾದರೂ ಏನೂ.. ಅದು ಎಲ್ಲರಿಗೂ ಗೊತ್ತಿದೆ.. ಮಕ್ಕಳನ್ನು ದೇಶದ ಆಸ್ತಿ ಮಾಡಬೇಕಾದರೆ ಮಕ್ಕಳಿಗೆ ಸುಂದರ ಪರಿಸರ ಕಟ್ಟಿಕೊಡುವ ಹೊಣೆ ಮಾಧ್ಯಮಗಳದ್ದು ಆಗಿರುತ್ತದೆ.. ಒಳ್ಳೆಯ ವಿಷಯ, ಒಳ್ಳೆಯ ಬರವಣಿಗೆ, ಒಳ್ಳೆಯ ನೀತಿ ವಿಷಯ.. ವಸ್ತುನಿಷ್ಠ ವರದಿಗಳು, ಜೊತೆಯಲ್ಲಿ ಹಿಂಸೆ, ಕ್ರೌರ್ಯವನ್ನು ವೈಭವೀಕರಿಸದೆ..ಕಾನೂನಿನ ಬಗ್ಗೆ ತಿಳುವಳಿಕೆ ನೀಡುವ ನಿಟ್ಟಿನಲ್ಲಿ ಈ ಮಾಧ್ಯಮಗಳು ದುಡಿದರೆ ಆಗ ಚಂದವಳ್ಳಿ ತೋಟದ ಚಿತ್ರದ ಅಂತಿಮ ದೃಶ್ಯದಲ್ಲಿ ಹೇಳುವ ಮಾತು ನೆನಪಿಗೆ ಬರುತ್ತದೆ "ಅಣ್ಣ ತಮ್ಮ ಒಂದಾಗಿದ್ದಾರೆ ಮನೆ ಒಂದಾಗಿರುತ್ತದೆ.. ಮನೆ ಮನೆ ಒಂದಾಗಿದ್ದಾರೆ ಊರು ಒಂದಾಗಿರುತ್ತದೆ.. ಊರು ಊರು ಒಂದಾಗಿದ್ದಾರೆ ರಾಜ್ಯ ಒಂದಾಗಿರುತ್ತದೆ.. ರಾಜ್ಯ ರಾಜ್ಯ ಒಂದಾಗಿದ್ದಾರೆ ದೇಶ ಸುಭಿಕ್ಷವಾಗಿರುತ್ತದೆ... ಭಯಂಕರ ಆಶಾವಾದ ಮಾತು ನನದಾಗಿರಬಹುದು.. ಆದರೆ ನಾಳೆ ಎನ್ನುವುದು ನಮಗೆ ಅರಿವಿಲ್ಲ ಮತ್ತು  ಅದರ ಬಗ್ಗೆ ಯೋಜನೆ ಇಲ್ಲ ಅಂದರೆ ಮನೆಯಾಗಲಿ, ಊರಾಗಲಿ, ಹಳ್ಳಿಯಾಗಲಿ, ಊರಾಗಲಿ, ರಾಜ್ಯವಾಗಲಿ, ದೇಶವಾಗಲಿ ಮುಂದುವರೆಯಲು ಕಷ್ಟವಾಗುತ್ತದೆ.. ಅಂತಹ ತಿಳಿಯಾದ  ಸಮಾಜವನ್ನು ಸೃಷ್ಟಿಸುವ ಹೊಣೆಗಾರಿಕೆ ಮಾಧ್ಯಮಗಳದ್ದು ಅಲ್ಲವೇ.. 

ಸಮಾಜಕ್ಕೆ ಕನ್ನಡಿಯಾಗಬೇಕಾದ ಸುದ್ದಿ ಮಾಧ್ಯಮಗಳು, ದೃಶ್ಯಮಾಧ್ಯಮಗಳು, ಮುದ್ರಣ ಮಾಧ್ಯಮಗಳು ಒಡೆದ ಬಿಂಬವನ್ನು ತೋರಿಸುವ ಬದಲು.. ಮನಸ್ಸಿನ ಭಾವನೆಯನ್ನು ಕೆರಳಿಸುವಂಥಹ ವಿಷಯಗಳನ್ನು ಪ್ರಕಟ ಮಾಡುವ ಬದಲು.. ಮನಸ್ಸು ಒಂದು ಹೂವಿನಂತೆ ಅದಕೆ ಬೇಕಾಗುವ ತಿಳಿಯಾದ ನೀರಿನಂತಹ ವಿಷಯಗಳನ್ನು ಧಾರೆಯೆರೆದು ಮಲ್ಲಿಗೆ ಹೂವನ್ನು ಬೆಳೆಸುವುದರಲ್ಲಿ ಅವುಗಳ ಶಕ್ತಿ ಅಡಗಿದೆ ಎನ್ನುವುದು ನನ್ನ ಮಾತು :-)

Tuesday, November 28, 2017

3ಕೆ.. ಅಲ್ಲ ಅಲ್ಲ.. ೩ತ .. ಕರುನಾಡ ರಾಜ್ಯೋತ್ಸವ

ಇದೇನ್ಲಾ ಓಸಾದಾಗಿ ಏನೋ ಏಳಾಕೆ ಒಂಟೆ ಅಂದ್ರ.. ಔದು.. ಔದು..

3ಕೆ ಅಂದ್ರೆ.. ಕನ್ನಡ ಕಥನ ಕವನ... ಕಥೆ ಕವನ ಕಾವ್ಯ.. ಕಥೆ ಕಾದಂಬರಿ ಕನ್ನಡ... ಎಂಗೆ ಲಾಗಾ ಹಾಕಿದರೂ ಕಾಲು  ಕೆಳಗೆ ಅನ್ನುವಂತೆ ಮೂರು ಬಗೆಯಲ್ಲಿ ಕ ಅಕ್ಷರಗಳು ಜೊತೆಯಾಗಿ ನಿಂತು ೩ಕೆ ಎಂದು ಸಾರುತ್ತವೆ....

ಅದೆಲ್ಲ ಸರಿ ೩ತ ಅಂದ್ರಲ್ಲ  ಅದಕ್ಕೆ ಹೇಳಿ ಅಂದ್ರಾ.. ಈ ಲೇಖನದ  ಕೊನೆ ಭಾಗವನ್ನು ನೋಡಿ.. ಅಲ್ಲಿ ಉತ್ತರ ಸಿಗುತ್ತದೆ..
ಅರೆ ಅರೆ ಇರಿ ಸ್ವಾಮೀ ಜರ್ ಅಂಥಾ ಸ್ಕ್ರೋಲ್ ಮಾಡಬೇಡಿ.. ಒಸಿ ಸಮಾಧಾನ ಇರಲಿ.. ಅಲ್ಲವೇ..

ಫಿಲಂ ಕಡೆತನಕ ನೋಡಿದರೆ ಸ್ವಾರಸ್ಯ.. ನೋಡಿ...  ಅಯ್ಯೋ...  ಓದಿ ಆಮೇಲೆ ಗೊತ್ತಾಗುತ್ತದೆ..
೩ತ ಅಂದ್ರೆ ಏನೂ ಅಂತ.. !!!

******

ನೋಡು ನೋಡುತ್ತಲೇ ಒಂದು ವರ್ಷದ ಉದ್ದಿನ ಮೂಟೆ ಉರುಳೇ ಹೋಯಿತು.. ಕಳೆದ ವರ್ಷ ಇದೆ ನವೆಂಬರ್ ೨೬ ರಂದು... ಉತ್ಸಾಹ ತುಂಬಿದ ಹಬ್ಬದ ವಾತಾವರಣ ಇದೆ ಅಂಗಳದಲ್ಲಿ ಮೂಡಿತ್ತು... ಅದನ್ನು ಇನ್ನೊಂದು ಹಂತಕ್ಕೆ ಕರೆದೊಯ್ಯುವ ನಿಟ್ಟಿನಲ್ಲಿ ಈ ದಿನ ಸಾಗಿತ್ತು ..
ಅನತಿದೂರದಿಂದಲೇ ಆಹ್ವಾನಿಸುವ ಫಲಕ 

ಹೊಟ್ಟೆ ತುಂಬಿದವರಿಗೆ ಹಸಿವಿನ ಅರ್ಥವಾಗೋಲ್ಲ
ಹಸಿವಿದ್ದವರಿಗೆ ಸುಖದ ಅನುಭವವಿರೋಲ್ಲ!
ಹಸಿವಿನಲ್ಲಿ ಸುಖವುಂಡವರು ಜ್ಞಾನಿಗಳು
ದುಃಖದಲ್ಲಿ ನಗುವ ಕಂಡವರು ತತ್ವಜ್ಞಾನಿಗಳು!

ನಿಜ ಅನ್ನಿಸುತ್ತದೆ.. ದೇವರಿಗೆ ಸವಾಲು ಹಾಕುವ ಬದಲು.. ದೇವರ ಮೇಲಿನ ನಂಬಿಕೆಯ ಹೆಗಲ ಮೇಲೆ ಕೈಹಾಕಿ..

"ನೋಡು ಶಿವ..
ಕಷ್ಟ ಕೊಡುತ್ತೀಯಾ
ಕ್ವಾಟ್ಲೆ ಕೊಡುತ್ತೀಯಾ
ಜೀವನ ರೋಸತ್ತಿ ಹೋಗುವಂತೆ ಮಾಡ್ತೀಯ
ಮಾಡು ತೊಂದರೆ ಇಲ್ಲ
ಆದರೆ
ಒಂದು ಮಾತು ನಿನಗೆ..
ಈ ದೇಹ ಮನಸ್ಸು ಎಂದೂ ಬಾಗದು
ಕಷ್ಟ ಕೊಡುವಾಗ
ನಿಭಾಯಿಸುವ ಕಲೆಯನ್ನು
ನಿಭಾಯಿಸುವಾಗ
ತಾಳ್ಮೆಯನ್ನು
ತಾಳ್ಮೆಯ ಜೊತೆಯಲ್ಲಿ
ನಗುವನ್ನು ಕೊಡುವುದಾದರೆ
ನನ್ನ ಜೋಳಿಗೆಯಲ್ಲಿ ಕಷ್ಟಗಳೆಂಬ ಜ್ಞಾನ ದೀವಟಿಗೆಯನ್ನು ಹಾಕು .. ಇಲ್ಲವಾದರೆ ರೈಟ್ ಹೇಳು.."

ಈ ರೀತಿಯ ಮಾತುಗಳು ಹೇಳಬೇಕಾದರೆ.. ತಾಕತ್ತು ಬೇಕು.. ಅದು  ಸುಮ್ಮನೆ ಬರುವುದಿಲ್ಲ..

"ಬೆಟ್ಟ ಕೊರೆದು
ದಾರಿ ಮಾಡಿ
ನೀರು ನುಗ್ಗೋ ಹಾಗೆ
ಮುಂದೆ ನುಗ್ಗಿ
ಹೋದ್ರೆ ತಾನೇ ದಾರಿ ಕಾಣೋದು ನಮ್ಗೆ"

ಎನ್ನುವ ನಾಗರಹೊಳೆ ಚಿತ್ರದ ಹಾಡಿನಂತೆ.. ನುಗ್ಗಿ ನೆಡೆದಾಗ ಭಗವಂತನು ಸೊಂಟ ಬಾಗಿಸಿ ದಾರಿ ದೀಪವಾಗುತ್ತಾನೆ ಎನ್ನುತ್ತದೆ ಜಾನಪದ ಮಾತುಗಳು..

ಏನಪ್ಪಾ ಇದು "ಮಾಮರವೆಲ್ಲೋ ಕೋಗಿಲೆಯೆಲ್ಲೂ.. ಏನೀ ಸ್ನೇಹ ಸಂಬಂಧ.. ಎಲ್ಲಿಹದೊ ಈ ಅನುಬಂಧ" ಎನ್ನುವ ಹಾಡಿನಂತೆ.. ಇದನ್ನು ಜೋಡಿಸಿಸುವುದು ಏಕೇ ಅಂತೀರಾ.. ಇಲ್ಲೇ ಇರೋದು ನೋಡಿ ಮಜಾ..

ಒಂದು ಗ್ರಾಮದಿ ಹೊರಗಿನ ಪ್ರಪಂಚ ಕಾಣದ ಒಂದು ಮುಗ್ಧ ಜೋಡಿ... ತಮ್ಮ ಸಂಧ್ಯಾಕಾಲದಲ್ಲಿ ನೂರಾರು ಭಾವನೆಗಳ ಮಧ್ಯೆ.. ನೂರಾರು ಭಾವನೆಗಳ ನಡುವಲ್ಲಿ...  ಬೆಂದ ಮನೆಯಲ್ಲಿ ಗಳು ಹಿರಿದದ್ದೇ ಲಾಭ ಎನ್ನುವಂತೆ ಇವರ ಪರಿಸ್ಥಿತಿಯನ್ನು ದುರುಪಯೋಗ ಪಡಿಸಿಕೊಂಡ ಪಿತಾಮಹರುಗಳ ನಡುವಲ್ಲಿ ಇದ್ದರೂ.. ತಮ್ಮ ಕಲೆಯೇ ಮೈಯೆತ್ತಿ ಬಂದಂತೆ ಅದರೊಡನೆ ಒಡನಾಡುತ್ತಾ ತಮ್ಮ ಬವಣೆಯ ಬಟ್ಟೆಯನ್ನು ಪದಗಳ ಶಾಖದಲ್ಲಿ ಒಣಗಿಸಿಕೊಂಡು ಸಾರ್ಥಕ ಬದುಕು ನೆಡೆಸುತ್ತಿರುವ             ಶ್ರೀ ತಂಬೂರಿ ಜವರಯ್ಯ ಮತ್ತು ಶ್ರೀಮತಿ ಬೋರಮ್ಮನವರ ತತ್ವ ಪದಗಳ ಸುನಾಮಿಗೆ ಮನಸ್ಸು ಮೂಕವಾಗಿದ್ದು ಸಹಜ..
ಇಂತಹ  ಕಲಾವಿದರ  ಹೃದಯದಲ್ಲಿ ಶಾರದೆ ಇರುತ್ತಾಳೆ ಸದಾ 
ಅಂಗಳಕ್ಕೆ ಕಾಲಿಟ್ಟೊಡನೆ ಆಜಾದ್ ಸರ್ ಅವರ ಆತ್ಮೀಯ ಆಲಿಂಗನ.. ಬಾಲೂ ಸರ್ ಅವರ ಶಬ್ದವೇದಿ ಛಾಯಾಚಿತ್ರಣ.. DFR ಅವರ ಆತ್ಮೀಯ ಆಹ್ವಾನ.. ೩ಕೆ ತಂಡದ ಸದಸ್ಯರಿಂದ ಆತ್ಮೀಯ ಸ್ವಾಗತ.. ಮನಸ್ಸು ಮೂಕವಾಗಿತ್ತು.. ಮನಕ್ಕೆ ಮೂಲೆಯೊಂದು ಹುಡುಕುತ್ತಿದ್ದ ಸಂದರ್ಭದಲ್ಲಿ ಸ್ನೇಹದ ಪರಿಧಿಯಲ್ಲಿ ನನ್ನ ಸೇರಿಸಿಕೊಂಡು.. "ಶ್ರೀ ವೃತ್ತದಲ್ಲಿ ಮೂಲೆ ಇರೋಲ್ಲ .. ವ್ಯಾಸದಲ್ಲಿ  ನಿಂತಾಗ ನಿನ್ನ ಹವ್ಯಾಸವೇ ನಿನಗೆ ತ್ರಿಜ್ಯವಾಗಿ ಆ ವೃತ್ತದ ಎಲ್ಲೆಯನ್ನು ಮುಟ್ಟುತ್ತೀಯಾ" ಎಂದಿತು ಮನದ ವಾಣಿ..

... ಕಾರ್ಯಕ್ರಮದ ಆರಂಭವನ್ನು ಶುರುಮಾಡಿದ ಅರುಣ್.. ನಾಡಗೀತೆಗೆ ಜೊತೆಯಾಗುವಂತೆ ಮಾಡಿದರು.. ನಂತರ ಒಂಬತ್ತು ವರ್ಷಗಳ ಹಿಂದೆ ಇದೆ ದಿನ ಉಗ್ರವಾದಿಗಳ ಜೊತೆ ಹೋರಾಡುತ್ತಾ ತಮ್ಮ ಪ್ರಾಣವನ್ನೇ ಬಲಿಕೊಟ್ಟ ಭಾರತದ ವೀರ ಮಕ್ಕಳ ನೆನಪಿಗೆ ಒಂದು ಅರೆ ಘಳಿಗೆ ಮೌನದ ವಾತಾವರಣ ನಿರ್ಮಾಣ ಮಾಡಿ ಅವರ ನಿಸ್ವಾರ್ಥ ಸೇವೆಗೆ ಒಂದು ಗೌರವ ಸೂಚಿಸಿದ ಮೇಲೆ.. ದೀಪಂ ಜ್ಯೋತಿ ಪರಬ್ರಹ್ಮ ಎನ್ನುತ್ತಾ ದೀಪ ಬೆಳಗಿ.. ನಂತರ ಪ್ರಾರ್ಥನೆ ಗೀತೆ ಶ್ರೀಮತಿ ಉಷಾ ಉಮೇಶ ಅವರಿಂದ ಮೊದಲಾಯಿತು..

ವೇದಿಕೆಯಲ್ಲಿ ಆಸೀನರಾಗಿದ್ದವರೆಲ್ಲ ಘಟಾನುಘಟಿಗಳೇ..
ವೇದಿಕೆಯಲ್ಲಿ ಪ್ರತಿಭಾ ಪ್ರಚಂಡರು
ಈ ೩ಕೆ ತಂಡವೇ ಹಾಗೆ.. ಎಲ್ಲರೂ ಜೇನುಗೂಡಿನಂತೆ ತಮ್ಮ ಪಾಡಿಗೆ ಕಾಯಕ ಮಾಡುತ್ತಾ.. ಹೆಸರಿಗೆ ಆಸೆ ಪಡದೆ.. ಪ್ರತಿಭೆಗಳನ್ನು  ಗುರುತಿಸಿ.. ಆ ಕಲೆಗೆ.. ಕಲಾವಿದರಿಗೆ ಗೌರವ ಸಲ್ಲಿಸುವ ಪರಿ..... ಕಂಡು ನನ ಮನಸಿಗೆ ಬಂದದ್ದು

"ಜೇನುಗೂಡು ಆಗುವುದು
ಅನೇಕ ಜೇನುನೊಣಗಳಿಂದ
ಅನೇಕ ಜೇನುನೊಣಗಳು
ಅಲೆದು ಅಳೆದು ಹೂವಿನ ಹನಿಯನ್ನ
ಮೂಡಿಸುತ್ತದೆ ಜೇನಿನ ಗೂಡನ್ನ... ।

ಹನಿಹನಿಯಾಗಿದ್ದ ಸಿಹಿಯನ್ನು ಜೇನು ಮಾಡಿ
ಮನುಜರಿಗೆ ಹಂಚುವ ಕಾಯಕ ಮಾಡುವ ಆ ಜೇನುಗೂಡಿಗೂ
ಕರುನಾಡಿನ ಅಕ್ಷರವ ಅಕ್ಕರೆ ತುಂಬಿಸಿ ಪಸರಿಸುವ
ಈ ೩ಕೆ ತಂಡಕ್ಕೂ ಸಾಮ್ಯತೆ ಬಹಳ ಬಹಳ!!!

ಹೇಳಬೇಕಾದ್ದು ಸಾವಿರಾರು.. ಹೇಳೋದು ನೂರಾರು.. ಮನಸ್ಸಲ್ಲಿ ಕೂರುವುದು ಹತ್ತಾರು.. ಹೌದು ಎಷ್ಟು ನಿಜ ಈ ಮಾತು... ಸಂತ ಶಿಶುನಾಳ ಶರೀಫರನ್ನು ಕೆಲವೇ ಪದಗಳಲ್ಲಿ .. ಕೆಲವೇ ನಿಮಿಷಗಳಲ್ಲಿ ಪ್ರಸ್ತುತ ಪಡಿಸುವುದು ಸಾಗರವನ್ನು ಒಂದು ಬೊಗಸೆಯಲ್ಲಿ ಹಿಡಿದಂತೆ.. ಆದರೆ ಈ ಸಾಹಸವನ್ನು ನಮ್ಮೆಲ್ಲರ ಗುರುಗಳು ಶ್ರೀ ಮಂಜುನಾಥ ಕೊಳ್ಳೇಗಾಲ ಅವರು ಮಾಡಿದರು.. ಇದು ಸುಮ್ಮನೆ ಮಾತಾಡಿದುದು ಅಲ್ಲಾ.. ಬರಿ ಪರಿಚಯವೂ ಅಲ್ಲ.. ಸಂತರ ಸಮಗ್ರಹ ಸಾಹಿತ್ಯವನ್ನು.. ಸಂತರ ಜೀವನವನ್ನು ಕೆಲವು ನಿಮಿಷಗಳಲ್ಲಿ ಹಿಡಿದಿಟ್ಟ ಬಗೆ ಚೆನ್ನಾಗಿತ್ತು..

ಶರೀಫರ ಕೆಲವು ಆಯ್ದ ಪದಗಳನ್ನು ಸತೀಶ್ ನಾಯಕ್ ಮತ್ತು ಉಷಾ ಉಮೇಶ್ ಹಾಡಿದರು.. ಅದನ್ನು ಮತ್ತೆ ಹಿಂಜಿಸಿದ್ದು ಗುರುಗಳು.. ಅದರ ಅರ್ಥವಿಸ್ತಾರ.. ಅದರ ಒಳ ಮುಖವನ್ನು ಪರಿಚಯ ಮಾಡಿಕೊಟ್ಟದ್ದು ಸುಂದರವಾಗಿತ್ತು.. ಶರೀಫರ ಹಾಡು ಕೇಳುತ್ತೇವೆ.. ತಲೆದೂಗುತ್ತೇವೆ.. ಮನನ ಮಾಡುತ್ತೇವೆ.. ಮುಂದೆ ಅಂದರೆ? .. ಈ ಮುಂದೆ ಎನ್ನುವ ಪ್ರಶ್ನೆಗೆ ಉತ್ತರ ಸಿಕ್ಕಿದ್ದು ಮಂಜುನಾಥ್ ಸರ್ ಅವರ ವಿಶ್ಲೇಷಣೆಯಿಂದ..

ಕಿರುತೆರೆ ಪ್ರತಿಭೆ ಶ್ರೀ ತೇಜಸ್ವಿ ಅವರು ೩ಕೆ ತಂಡಕ್ಕೆ ಮೊದಲಿಂದಲೂ ಚಿರಪರಿಚಿತ.... ಅವರ ಚುಟುಕು ಮಾತಿನಲ್ಲಿ ನನ್ನ ಗಮನ ಸೆಳೆದದ್ದು.. ಕನ್ನಡ ಭಾಷೆಗೆ ಅಳಿವಿಲ್ಲ... ಅದು ಇಂದಿಗೂ ನಿಲ್ಲುತ್ತದೆ ಉಳಿಯುತ್ತದೆ.. ಬೆಳೆಯುತ್ತಲೇ ಇರುತ್ತದೆ.... ತಾವು ನೆಡೆದು ಬಂದ ಹಾದಿಯನ್ನು ಚುಟುಕಾಗಿ ವಿವರಿಸುತ್ತಾ.. ವಿನಯವಿದ್ದಾಗ ಶಿಖರ ಏರಬಹುದು ಎನ್ನುವುದರ ಪ್ರತಿಬಿಂಬವಾಗಿ ಕಂಡರು..

ಸಮಯ ಕಳೆದದ್ದು ಅರಿವಾಗಲಿಲ್ಲ.. ಮನದಲ್ಲಿ ಕೂತ ಶರೀಫರ ತತ್ವ ಪದಾರ್ಥಗಳಿಗೆ ಮಿತಿಯಿರಲಿಲ್ಲ... ಅನುಭವದ ಪಾಕವನ್ನು ನಮ್ಮಲ್ಲಿ ಹಂಚಿಕೊಂಡ ಮಾತುಗಳಿಗೆ ಕೊನೆಯಿರಲಿಲ್ಲ

ಆ ಗುಂಗಿನಲ್ಲಿ ಇದ್ದ ನಮ್ಮನ್ನು.. ಬನ್ರಪ್ಪ.. ಇನ್ನೊಂದು ಲೋಕಕ್ಕೆ ಕರೆದೋಯ್ತೀವಿ.. ನೋಡಿ ಇದೆ... ಹಾ ಇದೆ ಬಸ್ಸನ್ನು ಹತ್ತಿ ಎಂದು ಅವರ ಜೊತೆಯಲ್ಲಿ ನಮ್ಮನ್ನು ಅರ್ಧಘಂಟೆಗೂ ಮಿಕ್ಕು ಸುತ್ತಾಡಿಸಿದರು ಶ್ರೀ ತಂಬೂರಿ ಜವರಯ್ಯ ಮತ್ತು ಶ್ರೀಮತಿ ಬೋರಮ್ಮ ದಂಪತಿಗಳು..

ವಾಹ್.. ತಂಬೂರಿ ಮೀಟುತ್ತ.. ಅವರ ಕಂಚಿನ ಕಂಠದಲ್ಲಿ ಮೂಡುತ್ತಿದ್ದ ತತ್ವಪದಗಳು ಎಷ್ಟು ಸರಳವಾಗಿದ್ದವು ಅಂದರೆ.. ಅರೆ ಪದಗಳನ್ನು ಇಷ್ಟು ನಾಜೂಕಾಗಿ.. ಸಲೀಸಾಗಿ ಹಾಡಬಹುದೇ ಎನ್ನಿಸುತ್ತಿತ್ತು.. ಆದರೆ ಪ್ರತಿ ತತ್ವಪದಗಳ ಸಾಲುಗಳಲ್ಲಿ ಅಡಗಿ ಕೂತಿರುತ್ತಿದ್ದ ಅರ್ಥಗಳು.. ಪಾರಮಾರ್ಥಿಕ ತತ್ವಗಳು ಅರೆ ವಾಹ್ ಅನಿಸುವಂತೆ ಮಾಡುತ್ತಿದ್ದವು..

                                                 ಎಲ್ಲಿಂದ ನೀ ಬಂದೆ  ಏನ್ ತಂದೆ


                                                              ಬೆಟ್ಟದ ರಾಯ ಕುಣಿದಾಡ್ತಿತ್ತ..

                                                             ಮಾತು.. ಪದ.. ಹಾಡು.. ತತ್ವ.. 

                                                       

                                                                ಬಿದ್ದಿಯಬ್ಬೇ ಮುದುಕಿ ಬಿದ್ದಿಯಬ್ಬೇ

ಪ್ರತಿಯೊಂದು ತತ್ವ ಪದಗಳನ್ನು ಹಾಡಿದ ಮೇಲೆ ಸಿಗುತ್ತಿದ್ದ ಕರತಾಡನಗಳಿಗೆ ದಂಪತಿಗಳು ಹೇಳುತ್ತಿದ್ದದು.. ಈ ಚಪ್ಪಾಳೆಗಳೇ ನಮಗೆ ಉತ್ತೇಜನ ನೀಡುವ ಟಾನಿಕ್ಕು ಎನ್ನುವ ಅರ್ಥ ಬರುವ ಮಾತುಗಳನ್ನು ಹೇಳುತ್ತಿದ್ದರು..

ಅವರ ತತ್ವ ಪದಗಳಲ್ಲಿ ನನಗೆ ಕಾಣುತ್ತಿದ್ದುದು..
ಜೀವನ ಸುಂದರವಾಗಿದೆ
ಜೀವನ ದೇವರು ಕೊಟ್ಟ ಭಿಕ್ಷೆ
ಜೀವನ ನಮ್ಮ ಕೈಯಲ್ಲಿದೆ
ಜೀವನ ಒಂದು ಉದ್ಯಾನವನ
ಜೀವನ ಒಂದು ಜೀವಿಸುವ ವನ

"ಕಷ್ಟ ಕಾರ್ಪಣ್ಯಗಳು ಬರುತ್ತವೆ..ಕೆಲವು ಇರುತ್ತವೆ .. ಕೆಲವು ಹೋಗುತ್ತವೆ.. ಇನ್ನೂ ಕೆಲವು ಮಂಡಾಟ ಮಾಡಿಕೊಂಡು ನಮ್ಮನ್ನು ಗೋಳು ಹುಯ್ಕೊತಾವೆ... ಆದರೆ ಆಗ ನಾವು ಭಗವಂತನಲ್ಲಿ ಬೇಡಿಕೊಳ್ಳುವ ಪರಿ ಹೇಗಿರುತ್ತೆ ಅಂದರೆ... ನೋಡು ಶಿವ ಕಷ್ಟಕೋಟಲೆಗಳನ್ನು ಕೊಡು.. ಬೇಡ ಅನ್ನೋಲ್ಲ .. ಅದು ನಮ್ಮ ನಮ್ಮ ಪಾಪ ಪುಣ್ಯಗಳ ಲೆಕ್ಕಕ್ಕೆ ಸಂಬಂಧ ಪಟ್ಟಿದ್ದು.. ಆದರೆ ಅದನ್ನು ಕೊಡುವಾಗ ಅದರ ಜೊತೆಯಲ್ಲಿ.. ಆ ಕಷ್ಟಗಳನ್ನು ಎದುರಿಸುವ.. ಜಯಿಸುವ.. ಮನೋಸ್ಥೈರ್ಯವನ್ನು ಕೊಡು.. ಉತ್ತರವಿದ್ದಾಗ ಪ್ರಶ್ನೆಗಳು ಇರಲೇ ಬೇಕು.. ಪ್ರಶ್ನೆ ಇದೆ ಎಂದರೆ ಅದಕ್ಕೆ ಉತ್ತರ ನೀ ಸಿದ್ಧಮಾಡಿರಲೇ ಬೇಕು.. ಏನಂತೀಯಾ"
ಹೀಗೆ ದೇವರ ಜೊತೆಯಲ್ಲಿ ಹುಸಿಮುನಿಸಿನಿಂದ.. ಹಾಗೆಯೇ ದೋಸ್ತಿ ಮಾಡಿಕೊಂಡು ಮುನ್ನುಗ್ಗಬೇಕು..

ನಾಗರಹೊಳೆ ಚಿತ್ರದಲ್ಲಿ ಬರುವ ಹಾಡಿನ ಸಾಲಿನಂತೆ
"ಬೆಟ್ಟ ಕೊರೆದು ದಾರಿ ಮಾಡಿ
ನೀರು ನುಗ್ಗೋ ಹಾಗೆ..
ಮುಂದೆ ನುಗ್ಗಿ ಹೋದ್ರೆ ತಾನೇ
ದಾರಿ ಕಾಣೋದು ನಮ್ಗೆ...
ಇಲ್ಲೇ ಸ್ವರ್ಗ ..
ಇಲ್ಲೇ ನರಕ
ಮೇಲೇನಿಲ್ಲ ಸುಳ್ಳು
ಹುಟ್ಟು ಸಾವು ಎರಡರ ಮಧ್ಯೆ
ಮೂರು ದಿನದ ಬಾಳು"

ಈ ದಂಪತಿಗಳ ಹಾಸ್ಯ ಮಿಶ್ರಿತ ಮಾತುಗಳು.. ಜೊತೆಯಲ್ಲಿ ಅವರ ಸಂಸಾರದಲ್ಲಿ ತಾವುಂಡ ನೋವನ್ನು, ನೋವು
ಎಂದುಕೊಳ್ಳದೆ ಅದನ್ನು ಭಗವಂತನ ದಯೆ ಎಂದು ಹೇಳುತ್ತಾ ಜೀವನದ ಸಾರ್ಥಕತೆಯನ್ನು ಬಿಂಬಿಸುತ್ತಿರುವ ಈ ದಂಪತಿಗಳಿಗೆ ಕರುನಾಡಿನ ಸರ್ಕಾರ ರಾಜ್ಯೋತ್ಸವ ಪ್ರಶಸ್ತಿ ಕೊಟ್ಟು.. ಆ ಪ್ರಶಸ್ತಿಯ ಹಿರಿಮೆಯನ್ನು ಹೆಚ್ಚು ಮಾಡಿಕೊಂಡಿತು..

ಈ ಕಾರ್ಯಕ್ರಮದ ಅಧ್ಯಕ್ಷತೆವಹಿಸಿದ್ದ ಶ್ರೀ ಮಹೇಶ್ ಮೂರ್ತಿ ಸೂರತ್ಕಲ್ ಅವರ ಮಾತುಗಳು ಈ ಸಮಾರಂಭಕ್ಕೆ ಕಲಶ ತೊಡಿಸಿತ್ತು.. ಈ ತಂಡಕ್ಕೆ ಅಧ್ಯಕ್ಷರು ರೂಪಕ್ಕ ಅವರು.. ಇನ್ನು ನನ್ನನ್ನು ಇಲ್ಲಿ ಕೂರಿಸಿದ್ದಾರೆ ಅಷ್ಟೇ.. ನಾವೆಲ್ಲರೂ ಅವರ ಮಾರ್ಗದರ್ಶನದಲ್ಲಿ ಹೆಜ್ಜೆ ಇಡುತ್ತಿದ್ದೇವೆ.. ವಿನಯವಂತಿಕೆ ಎಂದರೆ ಇದೆ ಅಲ್ಲವೇ..

ಪ್ರಶಸ್ತಿಗೆ ಒಂದು ಗೌರವ 
ನಮ್ಮ ಸುಮಧುರ ಮನಸ್ಸಿನ ೩ಕೆ ತಂಡ.. ಈ ಕಲಾವಿದರನ್ನು ಗೌರವಿಸಿ ತಾಯಿ ಭುವನೇಶ್ವರಿಗೆ ಒಂದು ಸುಂದರ ನೆನಪಿನ ಕಾಣಿಕೆಯನ್ನು ಅರ್ಪಿಸಿದ್ದು ಈ ವರ್ಷದ ರಾಜ್ಯೋತ್ಸವದ ವಿಶೇಷತೆ ಅಂತ ನನ್ನ ಮನಸ್ಸಿಗೆ ಅನಿಸಿತು..

ನಾ ಕಂಡ ಅತ್ಯುತ್ತಮ ತಂಡ.. ೩ಕೆ 
"ಶರಣು ಶರಣಾರ್ಥಿ ಎನ್ನುತ್ತಾರೆ ಜಂಗಮರು... ಅಂದರೆ ಶರಣರಿಗೆ ಶರಣು ಮತ್ತು ಆ ಶರಣರಲ್ಲಿ ಮನೆಮಾಡಿರುವ ಆ ಪರಶಿವನಿಗೆ ಶರಣು ಅಂತ .. ದೇವರು ಕೂಡ ಹೇಳುವುದು ಅದನ್ನೇ.. ನೀ ನನಗೆ ಕೈಮುಗಿ ಸಂತಸ ಪಡುತ್ತೇನೆ.. ಆದರೆ ನನ್ನ  ಭಕ್ತನಿಗೆ ನೀ ಕೈ ಮುಗಿದರೆ.. ನೀ ಎರಡು ಜೀವಕ್ಕೆ ಶರಣಾಗುತ್ತೀಯ.. ಒಂದು ಭಕ್ತನಿಗೆ.. ಇನ್ನೊಂದು ಆ ಭಕ್ತನಲ್ಲಿ ಇರುವ ನನಗೆ.. "

ಹೌದು.. ನೀ ಮಾಯೆಯೋ ನಿನ್ನೊಳಗೆ ಮಾಯೆಯೋ ಎನ್ನುವ ಕನಕ ದಾಸರ ಪದದಂತೆ.. ಒಂದಕ್ಕೊಂದು ಹಾಸು ಹೊಕ್ಕಾಗಿ ನಿಲ್ಲುವ ಪರಿ.. ಅನುಭವಿಸಿದರೇ ಮಾತ್ರ ಅರಿವಾಗುತ್ತೆ.. "ಕೋಡಗನ ಕೋಳಿ ನುಂಗಿತ್ತಾ"  ಎನ್ನುತ್ತಾ.. ಅದು ಕೊಡಗಲ್ಲನ ಕೋಳಿ ನುಂಗಿತ್ತಾ.. ಅಂದರೆ ಒಂದರೊಳಗೆ ಒಂದು ಸೇರಿಕೊಳ್ಳುವ.. ಅಥವಾ ನಾವುಗಳು ನಮ್ಮತನದೊಳಗೆ ಸೇರಿಕೊಳ್ಳುವ ಒಂದು ವಿಶಿಷ್ಟ ಪರಿ.. ಎನ್ನುತ್ತಾ ಆ ತತ್ವ ಪದದ ವಿಸ್ತರಣೆ ಮಾಡಿದ್ದು.. ಈ ದಂಪತಿಗಳ ತತ್ವ ಪದಗಳು.. ಇವರಿಗೆ ಗೌರವ ಪ್ರಧಾನ ಮಾಡಿದ ರೀತಿ... ಅರೆ ಒಂದು ಪುಟ್ಟ ಕಾರ್ಯಕ್ರಮ ನಮ್ಮ ಪುಟ್ಟ ಮನಸ್ಸಲ್ಲಿ ಇಷ್ಟು ದೊಡ್ಡದಾಗಿ ಕೂರಬಹುದೇ ಎನ್ನುವಾಗ ಮೂಡಿ ಬಂದ ಪದ ಹೀಗಿದೆ

ಕೋಡಗನ ಕೋಳಿ ನುಂಗಿತ್ತ ನೋಡವ್ವ ತಂಗಿ
ಕೋಡಗನ ಕೋಳಿ ನುಂಗಿತ್ತಾ
ತತ್ವ ಪದಗಳು ಮನದೊಳಗೆ ಇಳೀತಾ ತಂಗಿ
ಮನದೊಳಗೆ ತತ್ವ ಪದಗಳು ಇಳಿದಿತ್ತಾ

ದಂಪತಿಗಳು ಹೇಳಿದ ಅರ್ಥ ನುಂಗಿ
ಗುರುಗಳು ಪೇಳಿದ ಮಾತುಗಳ ನುಂಗಿ
ಬಂದ ಸ್ನೇಹಿತರ ಪ್ರೀತಿಯ ನುಂಗಿ
ಕಡೆಯಲ್ಲಿ ಸಮೋಸ ಅಂಬಡೆ ನುಂಗಿತ್ತಾ ತಂಗಿ

ಕೋಡಗನ ಕೋಳಿ ನುಂಗಿತ್ತಾ!!!!

ಸುಮಾರು ಮೂರು ತಾಸುಗಳ ಈ ಕಾರ್ಯಕ್ರಮ ಹೈವೇ ನಲ್ಲಿ ಸಾಗುವ ಬಂಡಿಯಂತೆ.. ಸಲೀಸಾಗಿ ಸಾಗಿತು.. ಮಧ್ಯೆ ಮಧ್ಯೆ ತುಸು ನವಿರಾದ ಹಾಸ್ಯ.. ಚುಟುಕುಗಳು.. ಸಾಗುತ್ತಿದ್ದವು..

ತಂಡದ ಪ್ರತಿಯೊಬ್ಬರ ಪರಿಶ್ರಮ ಕಾರ್ಯಕ್ರಮ ಅಚ್ಚುಕಟ್ಟಿನಲ್ಲಿ ಕಾಣುತ್ತಿತ್ತು.. ಲೇಖನದಲ್ಲಿ ಹೆಸರಿಸದೆ ಇದ್ದರೂ ಅವರ ಪರಿಶ್ರಮಕ್ಕೆ ಕೊರತೆ ಇರಲಿಲ್ಲ.. ಎಲ್ಲವೂ ಸೂತ್ರಬದ್ಧ.. " ನಾಯಕ ನಾನೇ ನನ್ನ ಕಥೆಗೆ" ಎನ್ನುವ ಸಾಲನ್ನು ಸ್ವಲ್ಪ ಉಲ್ಟಾ ಪಲ್ಟಾ ಮಾಡಿದಾಗ ಸಿಗುವ ಹಾಡು

ನಾವಿಂದು ಹಾಡುವ ಹಾಡಿಗೆ ಕೊನೆಯಿಲ್ಲ
ಕೊನೆಯಿಲ್ಲ ಈ ಸಂಭ್ರಮಕ್ಕೆ ಕಾರಣ ನೀವೇಯೆಲ್ಲಾ
ನೀವೇಯೆಲ್ಲಾ ಎಲ್ಲ ಮನಸ್ಸಿಟ್ಟು ಬಂದೀರಿ
ಬಂದಿರಿ ನಮ್ಮ ಕರಗಳಿಗೆ ಜೊತೆಯಾದಿರಿ
ಜೊತೆಯಾದಿರಿ ಸಂಭ್ರಮಕ್ಕೆ ಕಾರಣರಾದಿರಿ..
ಕಾರಣರಾದಿರಿ ಆದ್ರಿ ನಮ್ಮ ಕಥೆಗೆ ನೀವೇ ನಾಯಕ
ನಾಯಕ ನೀವೇ ನಮ್ಮ ಕಥೆಗೆ..ನಿರ್ದೇಶಕ ಆ ಭಗವಂತ
ಭಗವಂತ ಆಡಿಸಿದ ಹಾಗೆ ಆಡುವ ಹಾಡುವ ಮಕ್ಕಳು ನಾವೆಲ್ಲಾ.. !!!
ಮಹನೀಯರ ಜೊತೆಯಲ್ಲಿ ೩ಕೆ ತಂಡ 

ಈ ಕರುನಾಡಿನ ಸಂಭ್ರಮವನ್ನು ಬರಿ ಒಂದು ಉತ್ಸವ ಎಂದು ಪರಿಗಣಿಸದೆ ಪ್ರತಿಭೆಗಳನ್ನು ಗುರುತಿಸುವ ಗೌರವಿಸುವ ಕಾರ್ಯ ನೆಡೆಯಿತು... ಪ್ರಬಂಧ ಸ್ಪರ್ಧೆ ಆಯೋಜಿಸಿ ಪ್ರತಿಭೆಗಳನ್ನು ಗುರುತಿಸಿದ್ದು ವಿಶೇಷವಾಗಿತ್ತು.. ಶ್ರೀ ಪ್ರಕಾಶ್ ಜಿಂಗಾಡೆ ಮೊದಲನೇ ಬಹುಮಾನ.. ಮಂಜುನಾಥ ಹಿಲಿಯಾಣ ಎರಡನೇ ಬಹುಮಾನ ಮತ್ತು ಸಮಾಧಾನಕರ ಬಹುಮಾನ ದೃಷ್ಟಿ ಎಸ್ ಅವರಿಗೆ ಸಿಕ್ಕಿತು..
 ಮೊದಲನೇ ಬಹುಮಾನ 

ಎರಡನೇ ಬಹುಮಾನ 

ಸಮಾಧಾನಕರ ಬಹುಮಾನ 
ಈ ಕರುನಾಡಿನ ಸಂಭ್ರಮಕ್ಕೆ ಜೊತೆ ನಿಂತವರು ಹಲವಾರು ಮಧುರ ಮನಸ್ಸುಗಳು.. ಎಲೆ ಮರೆಯ ಕಾಯಿಗಳ ಹಾಗೆ ಸದ್ದಿಲ್ಲದೇ ತಮ್ಮ ಸೇವೆಯನ್ನು ಮಾಡುತ್ತಾ ಬಂದವರು ಈ ಕಾರ್ಯಕ್ರಮದ ಯಶಸ್ಸಿಗೆ ಕಾರಣರಾಗಿ ೩ಕೆ ತಂಡದ ಇನ್ನೊಂದು ಮೈಲುಗಲ್ಲನ್ನು ಸ್ಥಾಪಿಸಿದರು..
ಒಂದು ದೊಡ್ಡ ಪರಿವಾರ 

ಈ ತಂಡಕ್ಕೆ ಒಂದು ಅಮೂಲ್ಯ ಚಿತ್ರವನ್ನು ಗುರುತಾಗಿ ನೋಡಬೇಕೆಂದು ಹಂಬಲಿಸುತ್ತಿದ್ದ ನನ್ನ ಮನಸ್ಸಿಗೆ ಕಂಡದ್ದು ಈ ಚಿತ್ರ.. ಮುತ್ತುರತ್ನಗಳನ್ನು ಪೋಣಿಸಿದ ಮಾಲಿಕೆಯೇ ಈ ೩ಕೆ ತಂಡ!!!

ಮುತ್ತುರತ್ನಗಳು ಈ ತಂಡದವರು 
ಒಂದು ಪುಟ್ಟ ಮಾತಿನೊಂದಿಗೆ ಈ ಲೇಖನ ಮುಗಿಸುತ್ತೇನೆ.. ಆರಂಭದಲ್ಲಿ ಹೇಳಿದ್ದೆ.. ಇದು ೩ಕೆ ಅಲ್ಲಾ.. ೩ತ ಅಂತ ಅಂದರೆ
ತ್ವ..
ಮಾಷೆ..
ತ್ವಜ್ಯೋತಿ

ಈ ಮೂರು ಒಂದೇ ಕಡೆ ಸಿಕ್ಕ ತಾಣ ಈ ಕಾರ್ಯಕ್ರಮ.. 

Saturday, September 30, 2017

ದಶದಿನ.. ದಶ ವರ್ಣ.. ದಶ ರಂಗೋಲಿ

ಬದುಕು ಸುಂದರವಾಗಬೇಕಾದರೆ ನೋಡುವ ನೋಟ ಸುಂದರವಾಗಿರಬೇಕು.. ಸೌಂದರ್ಯ ಎನ್ನುವುದು ಮನದಲ್ಲಿದೆ.. ಕಾಣುವ ನೋಟದಲ್ಲಿದೆ.. ಮನವು ಸುಂದರವಾಗಿದ್ದರೆ ಮನೆಯು ಸುಂದರ.. ವಿಚಿತ್ರವಾದ ವಾದದ ಸರಣಿ ಎನ್ನಿಸುತ್ತದೆ ಅಲ್ಲವೇ.. ಇದೆ ಕುತೂಹಲ ದೇವಲೋಕದಲ್ಲೊಮ್ಮೆ ಆಯಿತು.. ಅದರ ಬಗ್ಗೆ ಒಂದು ಚಿಕ್ಕ ಲೇಖನ.. ನಿಮ್ಮ ಕಣ್ಣ ಮುಂದೆ..

ವಿಜಯದಶಮಿಯ ದಿನ ಇಂದ್ರ ಸಭೆಯನ್ನು ಕರೆದ.. ಎಲ್ಲರೂ  ಬರಲೇಬೇಕು ಎಂಬ ಆಗ್ರಹ ಕೂಡ ಇದ್ದದರಿಂದ ತಪ್ಪಿಸಿಕೊಳ್ಳುವ ಅವಕಾಶವೇ ಇಲ್ಲ.. ಎಲ್ಲರೂ ಬಂದರು.. ಸಮಾಧಾನವಾಗಲಿಲ್ಲ.. ಏನೋ ಕಾಣೆಯಾಗಿದೆ ಅಥವಾ ಕೊಂಚ ಕಡಿಮೆ ಆಗಿದೆ.. ಅನ್ನಿಸಿತು..

ಇಂದ್ರನ ಸಭೆಯನ್ನು ತಳಿರು ತೋರಣಗಳಿಂದ ಅಲಂಕರಿಸಲಾಗಿತ್ತು.. ಹೆಜ್ಜೆ ಹೆಜ್ಜೆಗೂ ದೀಪಗಳ ಸಾಲು.. ಶೋಭೆಯನ್ನು ಹೆಚ್ಚಿಸಿತ್ತು.. ಆದರೂ ಇಂದ್ರನ ಹಣೆಯಲ್ಲಿ ಮೂಡಿದ್ದ ಗೆರೆಗಳು ಕೆಳಗಿಳಿದಿರಲಿಲ್ಲ... ಎಲ್ಲರೂ ಸಿದ್ಧರಾಗಿದ್ದರೂ ಇಂದ್ರ ಸಭೆಯನ್ನು ನೆಡೆಸಲು ಮಾನಸಿಕವಾಗಿ ಸಿದ್ಧವಾಗಿರಲಿಲ್ಲ..

ದೇವಗುರು ಬೃಹಸ್ಪತಿ ಒಮ್ಮೆ ಇಂದ್ರನ ಮುಖವನ್ನು ಕೂಲಂಕುಷವಾಗಿ ಪರಿಶೀಲನೆ ಮಾಡಿದರು.. ಅಲ್ಲಿಯೇ ಇದ್ದ ನಾರದ ಮಹರ್ಷಿಗಳಿಗೆ ಕಣ್ಣು ಸನ್ನೆ ಮಾಡಿ ಹತ್ತಿರಕ್ಕೆ ಕರೆದು ಕಿವಿಯಲ್ಲಿ ಗುಸುಗುಸು ಮಾತಾಡಿದರು..

"ನಾರಾಯಣ ನಾರಾಯಣ" ನಾರದರು ಹೊರಟೇಬಿಟ್ಟರು ೩೦೦ ಕ್ಷಣಗಳಲ್ಲಿ ಬರುತ್ತೇನೆ ಎಂದು ಹೇಳುತ್ತಾ ತಮ್ಮ ತಂಬೂರಿಯೊಂದಿಗೆ ತೆರಳಿದರು..

ಬೃಹಸ್ಪತಿ ಇಂದ್ರನಿಗೆ.. "ನೀ ಕೊಂಚ ವಿರಮಿಸಿಕೊಂಡು ಬಾ.. ನಾವೆಲ್ಲಾ ಇಲ್ಲಿಯೇ ಇರುತ್ತೇವೆ.. ೪೦೦ ಕ್ಷಣಗಳು ಕಳೆದ ಮೇಲೆ ಬಾ"

ಮರು ಮಾತಿಲ್ಲದೆ ಇಂದ್ರ ಶಚೀದೇವಿಯೊಡನೆ ತನ್ನ ಕೋಣೆಗೆ ಹೊರಟ...

ಇತ್ತ ನಾರದರು.. ತಮ್ಮ ಬಳಿಯಿದ್ದ ಪಂಚಾಂಗವನ್ನು ಒಮ್ಮೆ ನೋಡಿದರು... ಆಶ್ವಯುಜ ಮಾಸ ಹುಟ್ಟಿತ್ತು.. ಕರುನಾಡಿನಲ್ಲಿ ದಸರೆಯ ಸಂಭ್ರವಿದೆ ಎಂಬ ವಿಷಯ ತಿಳಿದಿತ್ತು.. ಪ್ರತಿದಿನವೂ ನವದುರ್ಗೆಯರನ್ನು ಆರಾಧಿಸುವ ವಿಷಯ ಲೋಕಸಂಚಾರ ಮಾಡುವ ನಾರದರ ಗಮನದಲ್ಲಿತ್ತು..

ಸರಿ ಏನಾದರೂ ಮಾಡೋಣ ಅಂತ.. "ನಾರಾಯಣ ನಾರಾಯಣ" ಎಂದು ಹೇಳುತ್ತಲೇ ಬೃಹಸ್ಪತಿ ಹೇಳಿದ್ದ ಮಾತುಗಳು ಒಂದೊಂದಾಗಿ ಕಣ್ಣ ಮುಂದೆ ಬಂತು..

ಮನಸ್ಸು ತಹಬದಿಗೆ ಇಲ್ಲದಾಗ.. ಏನೋ ಬದಲಾವಣೆ ಬೇಕು ಎನಿಸಿದಾಗ.. ಮನದಲ್ಲಿದ್ದ ಚುಕ್ಕೆಗಳನ್ನು ಒಂದೊಂದಾಗಿ ಸೇರಿಸುತ್ತಾ ಹೋಗಬೇಕು.. ಸಪ್ತರ್ಷಿ ಮಂಡಲ ಕೂಡ ಹೀಗೆಯೇ ಇದೆ ಅಲ್ಲವೇ.. ಏಳು ನಕ್ಷತ್ರಗಳು ಒಂದಕ್ಕೆ ಒಂದು ಸರಳ ರೇಖೆಯಲ್ಲಿ ನಿಂತಾಗ ಸೊಗಸಾಗಿದೆ ಎನ್ನುವ ಮಾತು ಅರಿವಾಯಿತು..

ವಿಜಯದಶಮಿಯಿಂದ ಒಂದು ಹೆಜ್ಜೆ ಹಿಂದಕ್ಕೆ ಹೋಗೋಣ ಅನ್ನಿಸಿ ನಾರದ ಶುರುಮಾಡಿದರು..

ನೀಲಿ ನೀಲಿ ಆಗಸದಿ ತುಂಬಿರುವ ಮೋಡಗಳೇ.. ಬನ್ನಿ ಜೊತೆಯಲ್ಲಿ ನಾವು ನಿಲ್ಲೋಣ ಎಂದಿತು ರೇಖೆಗಳು. .. ಆಗಸದಿ ಮೂಡಿದ ಚಿತ್ರವನ್ನ ನಾರದರು ಹಾಗೆಯೇ ಇಂದ್ರನ ಸಭೆಯ ಬಾಗಿಲಿನ ಬಳಿ ಕಾಣುವಂತೆ ಮಾಡಿದರು.. ಚಕ್ರದೊಳಗೆ ಚಕ್ರ ಬಣ್ಣದೊಳಗೆ ಬಣ್ಣ.. ಗೆರೆಯೊಳಗೆ ಗೆರೆಗಳು.. ಒಂದಕ್ಕೆ ಒಂದು ಹೆಣೆದುಕೊಂಡು ಇಂದ್ರನಿಗೆ ಸಂತಸ ಮೂಡಿಸಲು ಸಜ್ಜಾಗಿ ನಿಂತವು..
ವಿಜಯ ಸಾಧಿಸುವ ವಿಜಯ ಮಾಲೆ ಸೂಸುವ ಹೆಜ್ಜೆ 
ಮಹಾನವಮಿ.. ಒಂಭತ್ತನೆಯ ದಿನ.. ಯಂತ್ರಗಳು ಮಂತ್ರಗಳ ಮಜ್ಜನದಿ ನಿಲ್ಲುವ ಸಮಯ..ಆಯುಧಗಳು ಹೊಳಪಿನಿಂದ ಕಾಣುವ ಸಮಯ.. ನೀಲಿ ಸೋದರಬಣ್ಣವಾಗಿದ್ದ ಈ ಪರ್ಪಲ್ ಬಣ್ಣ ಬಿಳಿಯ ಜೊತೆಯಲ್ಲಿ ಸೇರಿಕೊಂಡು ತನ್ನ ಹೊಸವಿನ್ಯಾಸದಲ್ಲಿ  ಇಂದ್ರ ಒಂಭತ್ತನೆಯ ಹೆಜ್ಜೆಗೆ ಸ್ವಾಗತ ನೀಡಲು ನಿಂತವು..
ಒಂಬತ್ತು ಒಂಬತ್ತು ಒಂಬತ್ತು.. ನವಗ್ರಹಗಳ ಹೆಜ್ಜೆ 

ಶಕ್ತಿ ದೇವತೆಯ ಆರಾಧನೆ.. ಮನಕ್ಕೆ ಶಕ್ತಿ ನೀಡುವ ಈ ದೇವಿಯ ದಿನ.. ಮಧ್ಯದಲ್ಲಿ ದೇವಿಯ ಪ್ರಸನ್ನವಾದ ಮುಖ.. ಸುತ್ತಲೂ ಆಕೆಯ ಹೆಸರಿನ ಮಂತ್ರಗುಚ್ಛ.. ಅದನ್ನು ಸುತ್ತುವರಿದ ಸುಂದರ ವೃತ್ತ ದೇವಿಯ ಸೊಬಗನ್ನು ಇಮ್ಮಡಿಗೊಳಿಸಿತ್ತು.. ಇಂದ್ರನ ಎಂಟನೇ ಹೆಜ್ಜೆಗೆ ಸನ್ನದ್ಧಳಾಗಿ ನಿಂತವು..
ಶಕ್ತಿಶಾಲಿ ಹೆಜ್ಜೆ ಎಂಟನೇ ಮೈಲಿಗಲ್ಲು 
ಬದುಕಲು ವಿದ್ಯೆ ಬೇಕು.. ವಿದ್ಯೆ ಕಲಿಯಲು ಶಾರದೆಯ ಅನುಗ್ರಹವಿರಬೇಕು.. ಮಯೂರ ಬರಿ ವಾಹನಮಾತ್ರವಲ್ಲ.. ಸೊಬಗಿಗೂ ಹೆಸರಾಗಿದ್ದು ಎಲ್ಲರಿಗೂ ಗೊತ್ತು.. ವೀಣೆಯನ್ನು ಹಿಡಿದೇ ಬಂದ ಮಯೂರ ಸರಸ್ವತಿಯನ್ನು ತನ್ನ ಜೊತೆಯಲ್ಲಿ ಕರೆದುತಂದಿತ್ತು.. ಇಂದ್ರನ ಏಳನೇ ಹೆಜ್ಜೆಗೆ ಸಾಕ್ಷಿಯಾಗಲು ಬಂದವು..
ಸಪ್ತಮಾತ್ರಿಕೆಯರಿಗೆ ಮೀಸಲು ಏಳನೇ ಹೆಜ್ಜೆ 
ಇಂದ್ರ ಆರನೇ ಹೆಜ್ಜೆಗೆ ಹೇಗೆ ಅಲಂಕರಿಸೋಣ ಎಂದು ಯೋಚಿಸುತ್ತಿದ್ದಾಗ ಮೂಡಿ ಬಂದದ್ದು ಸರಳಾವಾದ ಆಯತಾಕಾರದ ಚಿತ್ತಾರವಿರುವ ಪಟ್ಟಿ.. ಮೂಲೆ ಮೂಲೆಗೆ ನಿಂತಿದ್ದ ತೋರಣದ ಮಾದರಿಯ ಚಿತ್ರಗಳು ಮಧ್ಯದಲ್ಲಿ ಪದುಮಾಲಂಕಾರ ನಾನಿರುವೆ ಎಂದಿತು..
ಶಿಸ್ತಾಗಿ ನಿಂತಿರುವ ಆರನೇ ಹೆಜ್ಜೆ ಗುರುತು 
ನೀರಿನಲ್ಲಿ ಗಾಳಿಯಂತೆ ತೇಲುವ ಹಂಸ... ಶುಭ್ರತೆಗೆ ಹೆಸರುವಾಸಿ.. ಮನಸ್ಸು ಹಕ್ಕಿಯ ಹಾಗೆ ಹಾರಬೇಕು.. ಅದಕ್ಕೆ ನೀರಿನಲ್ಲಿ ತೇಲುವ ಶಕ್ತಿ ಇರಬೇಕು.. ಎನ್ನುತ್ತಾ ಇಂದ್ರ ಐದನೇ ಪಾದದ ಗುರುತು ಹಂಸದಷ್ಟೇ ಶುಭ್ರವಾಗಿರಬೇಕು... ಮತ್ತೆ ಸುಂದರವಾಗಿರಬೇಕು ಎನ್ನುತ್ತಾ ಚೌಕಟ್ಟಾಗಿ ನಿಂತವು..
ಐದನೇ ಪಾದದ ಗುರುತಿಗೆ ನಿಂತ ಚಿತ್ರ 
ದೇಹವನ್ನು ನಿಯಂತ್ರಿಸುವ ನರ ಮಂಡಲಗಳು ಮಾನವನ್ನಾಗಲಿ, ದೇವರನ್ನಾಗಲಿ ಬೆಳೆಸುವ ಉಳಿಸುವ ಹೊಣೆಯನ್ನು ಹೊತ್ತಿರುತ್ತವೆ.. ಕ್ಲಿಷ್ಟಕರವಾದ ಈ ಸಮೂಹ ನಿಜವಾಗಿಯೂ ಕೆಲವೊಮ್ಮೆ ತಾಳ್ಮೆಗೆ ಬಹಳ ಕೆಲಸಕೊಡುತ್ತವೆ.. ಆದರೆ ನಿಧಾನವಾಗಿ ಪರಿಪರಿಯಾಗಿ ಬಿಡಿಸುತ್ತ ಹೋದ ಹಾಗೆ ನಾಲ್ಕನೇ ಹೆಜ್ಜೆ ಗುರುತು ವಿಶಿಷ್ಟವಾಗಿಯೇ ಮೂಡಿ ಬರುತ್ತದೆ..
ನಾಲ್ಕನೇ ಹೆಜ್ಜೆ ಗರ ಗರ 
ಇಂದ್ರನ ಐರಾವತ ಸುಮ್ಮನೆ ನಿಂತಿತ್ತು .. ಕಬ್ಬುಗಳು, ಬಾಳೆಹಣ್ಣು ಯಥೇಚ್ಛವಾಗಿ ತಿಂದಿದ್ದರೂ ಅದಕ್ಕೆ ತನ್ನ ಬಂಧುಬಳಗವನ್ನ ನೋಡಬೇಕೆಂಬ ಆಸೆಯಿತ್ತು.. ಅದರ ಮನದಲ್ಲಿದ್ದ ಆಶೆಯನ್ನು ನಾರದರು ಗುರುತಿಸಿ.. ಐರಾವತದ ಬಂಧುಬಳಗವನ್ನು ಕರೆದು ತಂದರು.. ಐರಾವತ ಖುಷಿಯಾಗಿ ಇಂದ್ರನ ಮೂರನೇ ಹೆಜ್ಜೆಯ ಸಪ್ಪಳಕ್ಕೆ ಕಾದು ನಿಂತವು..
ಮೂರನೇ ಹೆಜ್ಜೆ ಗಜ ಪಾದ
ಇಂದ್ರನು ಕೋಣೆಯಿಂದ ಹೊರಗೆ ಬರುವಾಗ ತಾಪ ಹೆಚ್ಚಾಗಿದ್ದರೆ ಅವನಿಗೆ ಹೇಗಪ್ಪಾ ತಂಗಾಳಿ ಬೀಸುವುದು ಎಂದು ಯೋಚಿಸುತ್ತಿದ್ದಾಗ.. ವಾಯು ದೇವಾ ಗರ ಗರ ತಿರುಗುತ್ತಾ ಬಂದು ನಿಂತ.. ವಾಯು ದೇವಾ ಬಂದಾಗ ಹಸಿರಿನ ಸಿರಿಯೆ ಬರುತ್ತವೆ ಅಲ್ಲವೇ... ಎರಡನೇ ಹೆಜ್ಜೆಗೆ ನಾವೇ ಸಾಟಿ ಎಂದವು..
ಎರಡನೇ ಹೆಜ್ಜೆ ಅಚ್ಚಾದಾಗ 
ಕತ್ತಲೆಯಿಂದ ಬೆಳಕಿಗೆ ಬರುವಾಗ ಕಣ್ಣ ಮುಂದೆ ನಕ್ಷತ್ರಗಳು ಕಾಣುತ್ತವೆ ಅಲ್ಲವೇ.. ಆ ನಕ್ಷತ್ರಗಳು ದೀಪದ ಬೆಳಕಿನಲ್ಲಿ ಇನ್ನಷ್ಟು ಸೊಗಸಾಗಿ ಕಾಣಿಸಬೇಕು ಎಂದು ತಮ್ಮ ಪ್ರಕಾಶವನ್ನೆಲ್ಲ ಧಾರೆಯೆರೆದು ಮೊದಲ ಹೆಜ್ಜೆಯನ್ನು ಜಗಮಗವಾಗಿಸಲು ಬಿಳಿ ಹಳದಿಯ ವರ್ಣಮಯವಾಗಿ ನಿಂತವು..
ಮೊದಲನೆಯ ಹೆಜ್ಜೆಗೆ ಸಿಂಗಾರ 

ಬೃಹಸ್ಪತಿ.. ಶಂಖವನ್ನು ಊದಿಸಲು ಹೇಳಿದರು..

ಫೂಮ್ ಫೂಮ್ ಎನ್ನುತ್ತಾ ಶಂಖವಾದ್ಯದ ಮೂಲಕ .. ಇಂದ್ರ ತನ್ನ ಮಡದಿ ಶಚೀದೇವಿಯೊಡನೆ ತನ್ನ ಕೋಣೆಯಿಂದ ಮೊದಲ ಹೆಜ್ಜೆ ಇಟ್ಟ.. ಹಣೆಯ ಮೇಲಿದ್ದ ಮೊದಲ ಗೆರೆ ಮಾಯವಾಯಿತು.. ಹೀಗೆ ಹತ್ತು ಹೆಜ್ಜೆಗಳು.. ಇಂದ್ರನ ಹಣೆ  ಸೀಮೆಂಟು ರಸ್ತೆಯಂತೆ... ಸುಕ್ಕು ಸುಕ್ಕಾಗಿದ್ದ ಬಟ್ಟೆಯನ್ನು ಇಸ್ತ್ರಿ ಪೆಟ್ಟಿಗೆಯಿಂದ ಉಜ್ಜಿದಂತೆ... ಸುಕ್ಕುಗಳೆಲ್ಲ ಮಾಯವಾಯಿತು..

ಇಂದ್ರ ಮೊದಲಿನಂತಾದ.. ಎಲ್ಲರೂ ಖುಷಿ ಸಂಭ್ರಮದಿಂದ ನಲಿದರು.. ಸಭೆಯಲ್ಲಿ ಎಲ್ಲರೂ ಖುಷಿಯಿಂದ ಪಾಲ್ಗೊಂಡರು.. ಇಂದ್ರ ಖುಷಿ.. ಎಲ್ಲರೂ ಖುಷಿ.. ನಾರದ :"ನಾರಾಯಣ ನಾರಾಯಣ" ಎಂದಾಗ.. ದೇವಗುರು ಬೃಹಸ್ಪತಿ ಒಂದು ಬಾರಿ ಕಣ್ಣು ಹೊಡೆದು ಇಂದ್ರನ ನೋಡಿ ನಕ್ಕರು.. ಇಂದ್ರನಿಗೆ ಗೊತ್ತಾಯಿತು..

"ಈ ಸುಂದರ ಚಿತ್ತಾರಗಳನ್ನು ರಚಿಸಿದ ಆ "ದೇವಿ"ಗೆ ಮನದಲ್ಲಿಯೇ ನಮಿಸಿದರು ಮತ್ತು ಶುಭ ಹಾರೈಕೆಯಿಂದ ಸದಾ ಸಂತಸದಿಂದ ಇರುವ ವರವನ್ನು ನೀಡಿದರು..

(ಆಶ್ವಯುಜ ಸುಕ್ಲ ಪಕ್ಷದ ಪಾಡ್ಯ ದಿನ ಫೇಸ್ಬುಕ್ ನಲ್ಲಿ ನನ್ನ ತಮ್ಮನ ಹೆಂಡತಿ ಆಶಾ ಸರ್ಜಾ ಅವರ ರಂಗೋಲಿ ನೋಡಿದಾಗ ಅನ್ನಿಸಿತು.. ಹತ್ತು ದಿನಗಳ ರಂಗೋಲಿಯನ್ನು ಸೇರಿಸಿ ಒಂದು ಲೇಖನ ಮಾಡೋಣ ಅಂತ.. ರಂಗೋಲಿಯ ಚಿತ್ರಗಳನ್ನು ಲೇಖನಕ್ಕೆ ಉಪಯೋಗಿಸಿಕೊಳ್ಳಲು ಅನುಮತಿ ನೀಡಿದ ಆಶಾ ದೇವಿಯವರಿಗೆ ಧನ್ಯವಾದಗಳನ್ನು ಅರ್ಪಿಸುತ್ತ ಈ ಲೇಖನ ನಿಮ್ಮ ಮಡಿಲಿಗೆ ಹಾಕುತ್ತಿದ್ದೇನೆ..

(ಶ್ರೀಮತಿ ಆಶಾ ಸರ್ಜಾ ಅವರ ಬಗ್ಗೆ ನನ್ನ ಮಾತು.. ಇವರನ್ನು ದೇವಿ ಎಂದು ಕರೆಯುತ್ತೇನೆ.. ಮುದ್ದು ಸಹೋದರಿಯಾಗಿರುವ ಈ ಪ್ರತಿಭಾ ಕಾರಂಜಿ ಕಂಗಳಲ್ಲಿ ಇರುವ ಹೊಳಪು ಮತ್ತು ಕೈ ಬೆರಳುಗಳಲ್ಲಿ ಇರುವ ಜಾದೂ ಇವರಿಗೆ ದೇವಿ ಎಂಬ ಹೆಸರನ್ನು ನೀಡಿದೆ .. ರಂಗೋಲಿ ಪುಡಿ ಇವರಿಗೆ ಕಾಯುತ್ತಿರುತ್ತವೆ.. ಇದು ಉತ್ಪ್ರೇಕ್ಷೆಯಲ್ಲ ನಿಜವಾದ ಮಾತು.. ನನ್ನ ಮಾತು ಸುಳ್ಳು ಎಂದರೆ ಮೇಲಿನ ರಂಗೋಲಿ ಚಿತ್ರಗಳನ್ನು ನೀವೇ ನೋಡಿ.. ಒಪ್ಪಿಕೊಳ್ಳಿ... ಈಕೆ ನಮ್ಮ ಕೊರವಂಗಲದ ಕುಟುಂಬದಲ್ಲಿರುವುದು  ನಿಜಕ್ಕೂ ಹೆಮ್ಮೆಯ ವಿಚಾರ.. ದೇವಿ ನಿಮಗೆ  ಅಭಿನಂದನೆಗಳು)

Monday, June 12, 2017

Sumದೀಪ ಸಿಂಚNaaaaaaaa.... !

"ಸಂದೀಪದ ಅಲೆಗಳ ಮೇಲೆ ಮೌನದ ಮೆರವಣಿಗೆ
ಆ ಆ ಇ ಈ ಕಲಿಸಲು ಹೋಗುವರು ಹಳ್ಳಿಯ ಮನೆ ಮನೆಗೆ
ಲಾ ಲಾ ಲಾ ಲಾ ಲಾ ಲಾ ಲಾ ಲಾ
ಯಾರೀ ನೀವು ಮೌನದ ಹುಡುಗ ಯಾರಿಗೆ ಕಾದಿರುವೆ
ಇನೋವಾ ಕ್ಯಾಬಿನಲ್ಲಿ ಕೂತು ಮೌನವಾಗಿರುವೆ.."

ಇವರನ್ನು ಮೊದಲು ನೋಡಿದಾಗ ಮತ್ತು ಇವರೇನಾ ನಾ ಮೊದಲು ನೋಡಿದ್ದು ಎನ್ನುವ ಭಾವಗಳ ನಡುವೆ .. ಮಾತು ಮೌನಗಳ ನಡುವೆ ಹೀಗೆ ಒಂದಕ್ಕೊಂದು ಸಂಬಂಧವಿಲ್ಲದೆ ಹಾಡು ಮನದಲ್ಲಿ ಮೂಡಿತ್ತು..

"ಅಲೆಮಾರಿಗಳು" ತಂಡ ಜನನವಾಗೋದಕ್ಕೆ ಇವರೇ ಒಂದು ಕಾರಣಕರ್ತರು.. ಹಾಗೆಯೇ ನಾ ಮನಸ್ಸಿಗೆ ಬಂದಂತೆ ಮಾತಾಡೋದು ನೋಡಿ.. ಶ್ರೀಕಾಂತ್.. ಇದನ್ನೆಲ್ಲಾ ನೀವು ಒಂದು ಕಡೆ ಬರೀಬೇಕು.. ಅಂತ ಹೇಳಿ.. ಈ ಬ್ಲಾಗ್ ಶುರುಮಾಡೋಕೂ ಇವರೇ ಕಾರಣ.. ಪಾಯಿಂಟ್ ಪಂಚರಂಗಿ ಅಂತ ನಾಮಕರಣವಾದಾಗ ಅತಿ ಸಂತೋಷ ಪಟ್ಟ ಪ್ರಜೆ ಇವರು..

ನಾವು ಮಾತಾಡಿದ್ದು ಬಹಳ ಬಹಳ ಕಡಿಮೆ.. ಕ್ಯಾಬ್ ನಲ್ಲಿದ್ದಾಗ, ಕೆಲವೊಮ್ಮೆ ದೂರವಾಣಿ ಕರೆಗಳು.. ಟ್ರಿಪ್ ನಲ್ಲಿ ಹೀಗೆ ಯಾವುದೇ ರೂಪದಲ್ಲಿಯೂ ಅಥವಾ ಸ್ಥಳಗಳಲ್ಲಿಯೂ ಕೆಲವೇ ಕೆಲವು ಮಾತುಗಳು.. ಅದು ಹಿತ ಮಿತ.. ಆದರೆ ನನ್ನ ಬಗ್ಗೆ ಅಪಾರವಾದ ನಂಬಿಕೆ.. ನನಗೂ ಹಾಗೆಯೇ ...

ನಾನೂ ಹಳ್ಳಕ್ಕೆ ಬೀಳುತ್ತಿದ್ದೇನೆ.. ದಯಮಾಡಿ ಬರಬೇಕು ಎಂದಾಗ.. ಸೂಪರ್ ಸಂದೀಪ್.. ಜೀವನದಲ್ಲಿ ಖುಷಿನೇ ಎಲ್ಲಾ ಅಲ್ಲ.. ಮದುವೆನೂ ಆಗಬೇಕು ಎಂದು ಕಾಲು ಎಳೆದಿದ್ದೇ.. !!!

ಸಕ್ಕರೆ ನಾಡಲ್ಲಿ ಆರತಕ್ಷತೆ ಎಂದಾಗ.. ಮುಲಾಜಿಲ್ಲದೆ ನನ್ನ ಮನೆಯ ಪರಿವಾರದವರು.. ಖಂಡಿತ ಹೋಗೋಣ  "ಶ್ರೀ"ಎಂದಿದ್ದಳು.. ನಾ ಓಕೇ ಅಂದಿದ್ದೆ (ಗೃಹಮಂತ್ರಿಗೆ ಇಲ್ಲ ಅನ್ನುವುದುಂಟೆ).. ಆದರೆ ಅಚಾನಕ್ ಮನೆಗೆ ಬಂದ "ಅನಾರೋಗ್ಯ" ಎಂಬ ಅತಿಥಿ ಗೃಹಮಂತಿಗೆ ಗೃಹಬಂಧನ ಮಾಡಿಬಿಟ್ಟಿತು.. ನೀವೊಬ್ಬರೇ ಹೋಗಿ ಬನ್ನಿ.. ಹಸಿರು ನಿಶಾನೆ ತೋರಿಸಿಯೇ ಬಿಟ್ಟಿದ್ದಳು..

ಆಫೀಸ್ ಕೆಲಸ.. ಗಡಿಬಿಡಿ.. ಆರತಕ್ಷತೆಯ ಕಾರ್ಯಕ್ರಮದ ಕಡೆಗೆ ಗಮನ ಹರಿಸಿರಲಿಲ್ಲ.. ನಮ್ಮ ವಾಟ್ಸಾಪ್ ಅಲೆಮಾರಿಗಳು ತಂಡಕ್ಕೂ ಸುಮ್ಮನೆ ಒಂದು ಸಂದೇಶ ಹಾಕಿದ್ದೆ.. ಯಾರು ಯಾರು ಬರುತ್ತೀರಾ ಅಂತ.. ಆದರೆ ಅವರವರ ಲೋಕ.. ಕಚೇರಿಯ ಒತ್ತಡ.. ವಿಮುಖರನ್ನಾಗಿ ಮಾಡಿತ್ತು ಅನ್ನಿಸುತ್ತದೆ..

"ಗುರುಗಳೇ.. ಯಾವಾಗ. ಹೇಗೆ.. ನಾ ಬರುತ್ತೇನೆ.. " ನಿಖಿತಾ ಅಲಿಯಾಸ್ ದರ್ಶನ ಕರೆವಾಣಿ ಮತ್ತೆ ಶನಿವಾರ ಜೂನ್ ಹತ್ತರ ಕಡೆ ಮುಖ ಮಾಡುವಂತೆ ಮಾಡಿತ್ತು.. ಹೋಗೋಣ ಬನ್ನಿ ಎಂದಿದ್ದೆ.. ಹೇಗಾದರೂ ಸರಿ.. ನೆಡೆದು.. ಕಾರು.. ಬಸ್ಸು.. ಬೈಕು.. ರೈಲು.. ಹೇಗಾದರೂ ಸರಿಯೇ ಎಂದಿದ್ದೆ.. ಲೋಕಾಭಿರಾಮವಾಗಿ.. !!!

"ಗುರುಗಳೇ.. ನಾ ಬರುತ್ತೇನೆ ಜೊತೆಯಲ್ಲಿ ಹೋಗೋಣ.. " ಶರವೇಗದ ಸರದಾರ ಹರೀಶ್ ಮಾತು.. ಮುಂದೆ ಆಲೋಚನೆಯೇ ಇಲ್ಲ.. ಕೌನ್  ಬನೇಗಾ ಕರೋಡ್ ಪತಿ ಸ್ಪರ್ಧೆಯಲ್ಲಿ ಆಯ್ಕೆಗಳೆಲ್ಲ ಮುಗಿದಿದ್ದು ಅಚಾನಕ್ ಸುಲಭ ಪ್ರಶ್ನೆ ಬಂದ ಹಾಗೆ..  ನಮ್ಮ ಮನೆಯ ಹತ್ತಿರ ಸಂಜೆ ಐದು ಮೂವತ್ತು ಕಣ್ಣು ಹೊಡೆಯುತ್ತಾ ನಿಂತಿತ್ತು ಅವರ ಕಾರು..

"ಹರೀಶ್ ಕೆಳಗೆ ಇಳಿಯಿರಿ.. "

"ಯಾಕೆ?"

"ನೀವು ಇಳಿಯಿರಿ ಮೊದಲು.. " ಗಾಬರಿ ಮೊಗದಲ್ಲಿ ಹರೀಶ್ ಕೆಳಗೆ ಇಳಿದರು.. ಒಂದು ಕರಡಿ ಅಪ್ಪುಗೆ ಕೊಟ್ಟೆ..ಈಗ ನೆಡೆಯಿರಿ ಮಂಡ್ಯಕ್ಕೆ ಅಂದೇ.. ಹೊಟ್ಟೆ ಹಿಡಿದುಕೊಂಡು ನಗಲು ಶುರುಮಾಡಿದರು..

ಅಲ್ಲಿಂದ ಶುರುವಾಯಿತು.. ಶರವೇಗದ ಸರದಾರನ ಜೊತೆಯಲ್ಲಿ ಒಂದು ಅದ್ಭುತ ಪಯಣ..

ಮಾತು. ಕಥೆ.. ನಗೆ.. ತಮಾಷೆ.. ಕಾಲು ಎಳೆಯುವಿಕೆ.. ಎಲ್ಲವೂ ಮುಂದಿನ ೯೦ ಕಿಮೀಗಳ ರಸ್ತೆಯಲ್ಲಿ ಮೈಲುಗಲ್ಲುಗಳಾಗಿ ನಿಂತು ಹಲ್ಲು ಬಿಡುತ್ತಿದ್ದವು.. ಸುಸ್ತು ಅನ್ನುವ ಪದವೇ ನಮಗೆ ಗೊತ್ತಾಗಲಿಲ್ಲ.. ಅವತ್ತು ನಾನು, ನಿಖಿತಾ (ದರ್ಶನ್) ಮತ್ತು ಹರೀಶ್ ನಮ್ಮ ನಮ್ಮ ಕೆಲಸಗಳಲ್ಲಿ ಸುಸ್ತಾಗುವಷ್ಟು ತಿರುಗಾಡಿದ್ದೆವು.. ತಂಪಾದ ಗಾಳಿಗೆ ನಿದ್ದೆ ಬರಬಹುದೇನೋ ಎನ್ನುವಂತಾಗಿತ್ತು .. ಆದರೆ ಅದಕ್ಕೆ ಅವಕಾಶವೇ ಇರಲಿಲ್ಲ.. ಆ ಪಾಟಿ ಮಾತುಗಳು..

ಸರ್.. ಇಷ್ಟು ವರ್ಷ ಏನು ಕಳೆದುಕೊಂಡಿದ್ದೆ ಇವಾಗ ಅರ್ಥವಾಗುತ್ತಿದೆ ಎಂದರು ಹರೀಶ್.. ಕಳೆದುಕೊಳ್ಳುವ ಅವಕಾಶವೇ ಇಲ್ಲ.. ಹರೀಶ್.. ನಾವೆಲ್ಲಾ.. ಜಂಗಮವಾಣಿಯಾದರೆ ಹತ್ತು ಸಂಖ್ಯೆ ಅಥವಾ ಸ್ಥಿರವಾಣಿಯಾದರೆ ಎಂಟು ಸಂಖ್ಯೆ ಅಷ್ಟೇ ದೂರ.. ವಾಟ್ಸಾಪ್, ಫೇಸ್ಬುಕ್ ಅದು ಇದು ಇದ್ದೆ ಇದೆ.. ಅಲ್ಲವೇ..

ದಾರಿಯುದ್ದಕ್ಕೂ.. ಹಲವಾರು ಪೋಸ್ಟರ್ ಗಳು ನಮ್ಮನ್ನು ಸ್ವಾಗತಿಸುತ್ತಿದ್ದವು.. ಕೈಮುಗಿದುಕೊಂಡ  ಭಂಗಿ.. ನಗುತ್ತಿರುವ ಭಂಗಿ.. ನಾವೆಲ್ಲರೂ ನಿಮ್ಮ ಜೊತೆ ಅನ್ನುವ ಭಂಗಿ.. ಹೀಗೆ.. ಸಾರ್ಥಕ ಶನಿವಾರ ಎಂದು ಮನಸ್ಸಿಗೆ ಅನ್ನಿಸಿಬಿಟ್ಟಿತ್ತು..

ಆರತಕ್ಷತೆ.. ಆಗಲೇ ಅಣ್ಣಾವ್ರ ಹಾಡಿನ ಹಿನ್ನೆಲೆಯಲ್ಲಿ "ಹೊಸ ಬಾಳಿನ ಹೊಸಿಲಲ್ಲಿ ನಿಂತಿರುವ ನವ ಜೋಡಿಗೆ ಶುಭವಾಗಲಿ" ಎಂದು ಹರಸಿಕೊಂಡು .. ನವ ದಂಪತಿಗಳು .. ಬಂದವರಿಗೆ, ಫೋಟೋದವರಿಗೆ, ವಿಡಿಯೋದವರಿಗೆ ದಂತ ಪಂಕ್ತಿಗಳ ಪ್ರದರ್ಶನದ ಸವಾಲನ್ನು  ಸ್ವೀಕರಿಸಿ ಆಗಲೇ ಅರ್ಧ ಘಂಟೆಯಾಗಿತ್ತು..

ಒಳಗೆ ಹೆಜ್ಜೆ ಇಟ್ಟೆವು.. ಸಿಸ್ಕೋದ ಹಲವಾರು ಸ್ನೇಹಿತರು ಸಿಕ್ಕಿದ್ರು.. ಉಭಯ ಕುಶೋಲೋಪರಿ ಸಾಂಪ್ರತ ಮುಗಿಸಿ.. ಮೆಲ್ಲಗೆ ಸಂಭ್ರಮದ ತೇರಿನಲ್ಲಿ ಕೂತಿರುವ ವಧುವರರನ್ನು ಒಂದಷ್ಟು ಕಿಚಾಯಿಸಿ ಶುಭ ಹಾರೈಸೋಣ ಅಂತ ಇಡೀ ದಂಡೇ ನುಗ್ಗಿತು..
ವಿಡಿಯೋ ಮತ್ತು ಛಾಯಾಚಿತ್ರಕಾರನಿಗೆ ಸಮಸ್ಯೆ ಶುರುವಾಯಿತು.. ಎಲ್ಲಿಂದ ಎಲ್ಲಿ ತನಕ ಕವರ್ ಮಾಡಬೇಕು ಎಂಬ ಗೊಂದಲ.. ಅಮೀರ್ ಖಾನ್ ಅಂದು ಸಿನಿಮಾ ಮಾಡೋ ಹಾಗಿದ್ದರೆ.. "ಎಲ್ಲಿ  ಸೆ ಎಲ್ಲಿ ತಕ್"  ಅಂತ ಹೆಸರಿಡ್ತಾ ಇದ್ದಾ ಅನ್ಸುತ್ತೆ... :-)

ಸುಮಧುರ ಹಾಡುಗಳನ್ನು ರಸಮಂಜರಿ ರೂಪದಲ್ಲಿ ಹಾಡುತ್ತಿದ್ದರು.. ಆಗ ಕೆಲವು ವಿಷಯಗಳು ಗೋಚರವಾಯಿತು.. ಅಥವಾ ಜ್ಞಾನೋದಯವಾಯಿತು...
ತಬಲಾ ವಾದಕನ ಎರಡು ಕೈಗಳ ಬೆರಳುಗಳು.. ನರ್ತನಮಾಡುತ್ತಿತ್ತು..
ರಿದಮ್ ಪ್ಯಾಡ್ ಎರಡು ಕೈಗಳಲ್ಲಿ ಕೋಲಿನ ಮೂಲಕ ಸಂಗೀತದ ಅಲೆಗಳನ್ನು ಸೃಷ್ಟಿಸುತ್ತಿತ್ತು..
ಕೀ ಬೋರ್ಡ್ ತನ್ನ ಹಲವಾರು ಮನೆಗಳಲ್ಲಿ ಅಡಗಿಸಿಕೊಂಡಿದ್ದ ಸ ರಿ ಗ ಮ ಪ ಗಳನ್ನು ಬಿತ್ತರಿಸುತ್ತಿತ್ತು
ಸ್ಯಾಕ್ಸೋಫೋನ್ ಮಾರುತವನ್ನು ತನ್ನ ಒಡಲಿಗೆ ಬಿಟ್ಟುಕೊಂಡು.. ಅಲ್ಲಿಂದ ಹೊರಡಿಸುತ್ತಿದ್ದ ನಾದಕ್ಕೆ ಕೈ ಮುಗಿಯುವ ಅನ್ನಿಸಿತು..





ಎರಡು ಕೈಗಳು.. ಜೊತೆ.. ಜೋಡಿ.. ಪೇರ್.. ಅಂತಹ ಸುಮಧುರ ಸಮಯ ಇನ್ನೊಂದು ವಿಚಾರ ಹೇಳುತ್ತಿತ್ತು... ಸಂದೀಪ್ ಮತ್ತು ಸಿಂಚನ.. ಆರತಕ್ಷತೆಯಲ್ಲಿ ಮಿಂಚುತ್ತಿದ್ದ  ಈ ಜೋಡಿ ತಮ್ಮ ಮನದಲ್ಲಿಯೇ ಹೇಳಿಕೊಳ್ಳುತ್ತಿತ್ತು

"ಜೊತೆಯಲಿ ಜೊತೆ ಜೊತೆಯಲಿ ಹೀಗೆ ಎಂದು"
"ಜೊತೆಯಾಗಿ ಹಿತವಾಗಿ ಸೇರಿ ನೆಡೆವ ಸೇರಿ ನುಡಿವ"
"ಜೊತೆ ಜೊತೆಯಲಿ ಪ್ರೀತಿ ಜೊತೆಯಲಿ ಅನುದಿನ ಬಯಸಿ ಬಯಸಿ"

ಸಂಗೀತ, ಗಾಯನ.. ಎಲ್ಲವೂ ಹಿತಮಿತವಾಗಿ ಮೂಡಿಬರುತ್ತಿತ್ತು.. ಆ ಸುಧೆಯನ್ನು ಸವಿಯುತ್ತಿದ್ದಾಗ.. ಸಿಸ್ಕೋ ಸಹೋದ್ಯೋಗಿಗಳಿಗೆ ಹೊಳೆದದ್ದು.. "ಅಭಿನಯ ಧೀರೇಂದ್ರ ಗೋಪಾಲ್" ಎಂದು ನಾ ಹೆಸರಿಟ್ಟಿರುವ ಶ್ರೀ ಚೇತನ್ ಅವರ ಒಂದು ಕಿರು ಮಿಮಿಕ್ರಿ ಕಾರ್ಯಕ್ರಮ ಯಾಕೆ ಮಾಡಬಾರದು ಎಂದು..

ಭಾಸ್ಕರ್ ಮತ್ತು ಅವರ ಸ್ನೇಹಿತರು.. ಆ ರಸಮಂಜರಿ ಕಾರ್ಯಕ್ರಮದ ರೂವಾರಿಗಳನ್ನು ಒಪ್ಪಿಸಿಯೇ ಬಿಟ್ಟರು.. ಅಲ್ಲಿಂದ ಶುರುವಾಯಿತು ಹದಿನೈದು ನಿಮಿಷಗಳ ಭರ್ಜರಿ ಔತಣ.. ಸಿನಿ ತಾರೆಗಳು ಆ ಛತ್ರಕ್ಕೆ ನುಗ್ಗಿ ಬಂದಿದ್ದರು.. ಸಮಯದ ಅಭಾವ.. ಆದ್ದರಿಂದ ಅಣ್ಣಾವ್ರು, ಟೈಗರ್ ಪ್ರಭಾಕರ್, ಜಗ್ಗೇಶ್, ಶಿವಣ್ಣ, ಬಾಲಣ್ಣ, ಅಂಬಿ ಹಾಗೂ ಶಂಕರಣ್ಣ ಆರತಕ್ಷತೆಗೆ ಬಂದು ಹರಸಿದರು.. ವಿಡಿಯೋ ತುಣುಕು ಸಿಕ್ಕಾಪಟ್ಟೆ ದೊಡ್ಡದ್ದರಿಂದ ಇಲ್ಲಿ ಹಂಚಿಕೊಳ್ಳಲು ಕಷ್ಟವಾಗುತ್ತಿದೆ.. ನನ್ನ ಸ್ನೇಹಿತರು ಟೆಕ್ ಜ್ಞಾನಿಗಳು ಆ ವಿಡಿಯೋವನ್ನು ಸಂಕುಚಿತಗೊಳಿಸಿ ಹಾಕುತ್ತಾರೆ ಎನ್ನುವ ನಂಬಿಕೆ ನನ್ನದು..

ಸಂದೀಪ್ ಅವರಿಗೆ ಏನಾದರೂ ಉಡುಗೊರೆ ಕೊಡೋಣ ಅಂದರೆ.. ಸಂಕೋಚದ ತುಂಬಿದ ಮನುಷ್ಯ ಅವರು.. ಎಲ್ಲರಿಗೂ ಹೇಳಿದ್ದರು ನಿಮ್ಮ ಉಪಸ್ಥಿತಿಯೇ ಉಡುಗೊರೆ ಎಂದು.. ಆದರೆ ನನಗೆ ಏನೂ ತೋಚದಾಯಿತು.. ಇನ್ನೇನು ಆರತಕ್ಷತೆಗೆ ಕೆಲವೇ ಘಂಟೆಗಳು ಉಳಿದಿದ್ದವು.. ಆ ಗಡಿಬಿಡಿಯಲ್ಲಿ ಹೇಗೂ ಒಂದು ಕಿರಿದಾದ ಶುಭಕೋರಿಕಾ ಪತ್ರವನ್ನು ತಲುಪಿಸಿದೆವು..

ಅದನ್ನು ನೋಡಿ ಖುಷಿ ಪಟ್ಟ ಸಂದೀಪ್ ತನ್ನ ಮದುವೆಯ ಸಡಗರದ ಮದ್ಯೆ  ನನಗೆ ಕರೆಮಾಡಿದ್ದು.. ಆ ಉಡುಗೊರೆಗಿಂತಾ ಹೆಚ್ಚು ಖುಷಿ ನೀಡಿತು .. ಗೆಳೆತನ ಅಂದರೆ ಅದೇ ಅಲ್ಲವೇ..

ಭರ್ಜರಿ ಊಟವಾಗಿತ್ತು.. ಎಲ್ಲರೂ ಹೆಬ್ಬಾವಾಗಿದ್ದೆವು.. ಊಟ ಮಾಡಿ ಸುಸ್ತಾಗಿ ಹೋಗಿತ್ತು.. ಹೊರಗೆ ಗಾಳಿಯಲ್ಲಿ ನಿಂತು ಲೋಕಾಭಿರಾಮವಾಗಿ ಮಾತಾಡುತ್ತಾ.. ನಕ್ಕು ನಕ್ಕು ಇನ್ನಷ್ಟು ಸುಸ್ತಾದೆವು.. ಈ ಕಡೆ ಊಟದಿಂದ ಹೊಟ್ಟೆ ಕನ್ನಂಬಾಡಿ ಕಟ್ಟೆಯಾಗಿದ್ದರೆ.. ನಕ್ಕು ನಕ್ಕು ಕೆರೆ ತೊಣ್ಣೂರು ಆಗಿತ್ತು ನಮ್ಮ ಕಣ್ಣುಗಳು.. !!!

ಊಟ ಮುಗಿದಿತ್ತು.. ಸುಮ್ಮನೆ ಮೇಲೆ ಬಂದೆವು.. "ನಾಗಮಂಡಲ" ಚಿತ್ರದ.. ನಮ್ಮ ಗುರುಗಳು ಕಳೆದ ವರ್ಷ ಸ್ವರ್ಗಕ್ಕೆ ಆಹ್ವಾನ ಸಿಕ್ಕಿದ ಶ್ರೀ ಗೋಪಾಲ ವಾಜಪೇಯಿ ಅವರ ಸಾಹಿತ್ಯ "ಕಂಬದಾ ಮ್ಯಾಲಿನ ಗೊಂಬೆಯೇ" ಈ ಹಾಡು ಶುರುವಾಯಿತು.. ಅದನ್ನ ವಿಡಿಯೋ ಮಾಡೋಣ ಎನ್ನುವ ನನ್ನ ಅತಿ ಮೂರ್ಖತನದ ಉತ್ಸಾಹಕ್ಕೆ ಬಲಿಯಾಗಿದ್ದು ವಿದ್ಯುತ್ ವೈರ್ ಗಳು.. ಸೂಪರ್ ಆಗಿ ಶುರುಮಾಡಿದ್ದರು ಗಾಯಕಿ.. ಆದರೆ ನನ್ನ ಮಂಕುತನದಿಂದ ಆ ಹಾಡು ಮತ್ತೆ ಶುರುವಾಗಿದ್ದು ಒಂದೈದು ನಿಮಿಷ ಆದ ಮೇಲೆ.. ಕ್ಷಮಾಪಣೆ ಕೇಳಿದೆ.. ಹೇಳಿದೆ .. ಆದರೂ ... :-(

ವೈರನ್ನು ತುಳಿದು.. ವಿದ್ಯುತ್ ಪೂರೈಕೆ ಮೈಕಿಗೆ ಹೋಗದ ಕಾರಣ.. ಎಲ್ಲರ ಕೇಂದ್ರ ಬಿಂದುವಾಗಿದ್ದೆ.. ತಲೆ ತಗ್ಗಿಸಿಕೊಂಡು ಕಂಬವನ್ನು ಸುತ್ತಿಕೊಂಡು ಬಂದಾಗ.. ಸಿಸ್ಕೋದ ಗೆಳೆಯ "ಏನ್ ಸರ್ ನಿಮ್ಮ ಕಾಲಲ್ಲಿ ಪವರ್" ಅಂದಾಗ ತಲೆ ಎತ್ತಿ ನೋಡಿದೆ..ಕೆಟ್ಟದಾಗಿ ಹಲ್ಲು ಬಿಟ್ಟೆ "ಪವಾರ್ ಸ್ಟಾರ್" ಅಂದೇ.. ಮನದಲ್ಲಿ ನೋವು.. ತುಟಿಯಲ್ಲಿ ನಗು.. :-)

ಹೊರಗೆ ಬಂದೆವು.. !!!

ಮನೋಜ್ಞ ಅಲಿಯಾಸ್ ಜೂನಿಯರ್ ಅಣ್ಣಾವ್ರು.. ಸಿಕ್ಕಿದ್ದು ಖುಷಿ ಪಡಲು ಇನ್ನಷ್ಟು ಕಾರಣವಾಗಿತ್ತು.. ಮಾರ್ಗದರ್ಶಿ ಮಂಜು ಶಂಕರ್, ಚಿನಕುರಳಿ ಅವಿನಾಶ್, ಎನಿರ್ಜಟಿಕ್ ಸಿದ್ದು, ಸುಂದರ ವೀರು, ಚಟುವಟಿಕಾ ರತ್ನ ಭಾಸ್ಕರ್, ಹಡಿ ತರಲೆ ಮತ್ತು ಪ್ರತಿಭಾವಂತ ಕಾರ್ತಿಕ್, ಮತ್ತೆ ಇನ್ನೂ ಕೆಲವು ಹೆಸರು ನನಗೆ ಗೊತ್ತಿರದ ಸ್ನೇಹಿತರು.. ನಕ್ಕಿದ್ದೆ ಭಾಗ್ಯ ಎನ್ನುವಂತಾಗಿತ್ತು..
ರವಿಕಾಂತ್ ಪರಿವಾರ, ಸೋಮ ಮತ್ತು ಅವನ ಮಂಗಳೂರು ಪ್ರವಾಸದ ಕಥಾನಕ.. ಒಂದೇ ಎರಡೇ.. ಇದರ ಮದ್ಯೆ ನಿಕಿತಾ ಅಲಿಯಾಸ್ ದರ್ಶನ ಅವರ ಕುಮಾರಪರ್ವತದ  ಸಾಹಸಗಳು.. ಇವೆಲ್ಲಾ ಸುಮಾರು ಒಂದೂವರೆ ಘಂಟೆ ಬಿತ್ತರ ಗೊಂಡಿತ್ತು ನಮ್ಮ ಮನಸ್ಸಿನ ಸರ್ವರ್ ಸ್ಟೋರೇಜ್ ಇಂದಾ.. ಸೀದಾ ನೇರ ಪ್ರಸಾರ..

ಆಗಲೇ ಗಡಿಯಾರ ಹತ್ತು ಘಂಟೆ ಕನ್ಲಾ.. ಅಂತ ಕಿರುಚುತಿತ್ತು.. ಸರಿ ಹೊರಡೋಣ ಅಂತ.. ಬೆಂಗಳೂರು ದಾರಿ ಹಿಡಿದೆವು.. ನಾ ಮನದಲ್ಲಿ ಲೆಕ್ಕ ಹಾಕುತ್ತಿದ್ದೆ.. ೯೦ ಕಿಮೀಗಳು.. ಅಂದರೆ.. ಸರಿ ಸುಮಾರು ರಾತ್ರಿ ಹನ್ನೆರಡು ಮೂವತ್ತು ಮನೆ ಸೇರಬಹುದು.. ನನ್ನ ಮನೆಯ ಬಾಗಿಲಿಗೆ ಕಾರು ಬಂದಾಗ.. ಗಡಿಯಾರ ನೋಡಿಕೊಂಡೆ.. ಸೆಕೆಂಡ್ ಮುಳ್ಳು ಗರ ಗರ ತಿರುಗುತ್ತಿತ್ತು.. ನಿಮಿಷದ ಮುಳ್ಳು ಹೊಡಿ ಮಗ ಹೊಡಿ ಮಗ ಬಿಡಬೇಡ ಅವನ್ನಾ ಅಂತ ಸೆಕೆಂಡ್ ಮುಳ್ಳನ್ನು ಚೇಸ್ ಮಾಡುತ್ತಿತ್ತು.. ಘಂಟೆಯ ಮುಳ್ಳು ಮಾತ್ರ ಬಿಡ್ರಲೇ.. ನಾ ಬರಿ ಮುಂದಿನ ಸಂಖ್ಯೆಗೆ ಮಾತ್ರ ಹೋಗೋಕೆ ವೀಸಾ ಇರೋದು ಎಂದಿತು..

ಕಾರಣ ಅಂದ್ರೆ.. ಸೂಜಿಗಲ್ಲಿನ ಹಾಗೆ ಕಾರು ಚಲಾಯಿಸುತ್ತಿದ್ದ ಶರವೇಗದ ಸರದಾರ ಹರೀಶ್..  ಮಾತಾಡುತ್ತಲೇ ಇದ್ದರು.. ಆದರೆ ವೇಗದ ಮುಳ್ಳು ನೂರಲ್ಲೇ ಅಟಕಾಯಿಸಿಕೊಂಡಿತ್ತು.. ಆದ್ರೆ ಒಂದು ಕಡೆಯೂ ಜರ್ಕ್ ಇಲ್ಲ.. ಟರ್ರ್ರ್ರ್ ಅಂತ ಬ್ರೇಕ್ ಇಲ್ಲ.. ದಬಕ್ ಅಂತ ನಿಲ್ಲಿಸಲಿಲ್ಲ.. ಕಾರು ಲೀಲಾಜಾಲವಾಗಿ ಬೆಂಗಳೂರಿನ ರಸ್ತೆಯಲ್ಲಿ ನುಗ್ಗುತ್ತಿತ್ತು..

ಹರೀಶ್ ಅವರಿಗೆ ವಂದನೆ ಸಲ್ಲಿಸುತ್ತಾ.. ನಮ್ಮ ಪ್ರೀತಿಯ ಸಿಸ್ಕೋ ಸಹೋದ್ಯೋಗಿ  ಅಲಿಯಾಸ್ ಗೆಳೆಯರ ಅದ್ಭುತ ಸಮಾಗಮದ ಈ ಸಂದೀಪ್-ಸಿಂಚನ  ಅರತಕ್ಷತೆಯ ಸರೋವರದಲ್ಲಿ ಮಿಂದು ಬಂದದ್ದು ಸೋನೇ ಫೆ ಸುಹಾಗ ಆಗಿತ್ತು..

ಬಲು ದಿನಗಳ ನಂತರ.. ಉಂಡಿದ್ದು ಕಡಿಮೆ ನಕ್ಕಿದ್ದು ಜಾಸ್ತಿ ಎನ್ನುವ ಹಂತಕ್ಕೆ ಬಂದಿದ್ದೆವು..

ನನ್ನ ಪ್ರೀತಿಯ ಗೆಳೆಯ ಮತ್ತು ನಮ್ಮೆಲ್ಲರ ಅದ್ಭುತ ಗೆಳೆಯ ಸಂದೀಪ್.. ಜೀವನದ ಮಹೋನ್ನತ ತಿರುವಿನಲ್ಲಿ ಹೆಜ್ಜೆ ಹಾಕುತ್ತಿದ್ದಾರೆ.. ಅವರ ಜೊತೆಯಲ್ಲಿ ಏಳು ಹೆಜ್ಜೆ ಹಾಕಿ ನೆಡೆದ ಸಿಂಚನ ಅವರಿಗೆ ನಮ್ಮೆಲ್ಲರ ಕಡೆಯಿಂದ ಶುಭಾಶಯಗಳನ್ನು ಕೋರೋಣ..

ಮೃದುಮಾತಿನ ಸಂದೀಪ್..
ಮೃದು ಹೃದಯದ ಸಂದೀಪ್
ನಾ someದೀಪ್ ಎನ್ನದೆ
ನಾ sumದೀಪ್ ಎನ್ನುತ್ತಾ
ನಮ್ಮ ಗೆಳೆತನದ ಹೂ ಬನದಲ್ಲಿ ಮೃದು ಹೂವಾಗಿ ಅರಳಿ
ಜೀವನದ ಪಥದಲ್ಲಿ ಪುಷ್ಪ ಮಾಲೆಯಾಗಿ ನಿಂತಿರುವ ಸಂದೀಪ್ ಅವರಿಗೆ ಮದುವೆಯ ಸಂಭ್ರಮದ ಶುಭಾಶಯಗಳು..


ಇದು ಟ್ರೋಲ್ / ಟ್ರಾಲ್ /  ಟ್ರಾಲಿ ಅಲ್ಲಾ..

ಇದು ಗೆಳೆತನದ ಟೋಲ್ ಗೇಟ್.. :-)

ಮತ್ತೊಮ್ಮೆ ಈ ಮಧುರ ಮಧುರ ನೆನಪಿನ ಈ ಕಾರ್ಯಕ್ರಮವನ್ನು ಸವಿಯೋಣ.. ಮೆಲುಕು ಹಾಕೋಣ.. ನೀವೆಲ್ಲರೂ ನನ್ನ ಜೊತೆಯಲ್ಲಿ ಇರುತ್ತೀರಾ ಅಲ್ಲವೇ.. !!!..

ಇರುತ್ತೀರಾ ಅಲ್ಲಾ.. ಇದು ನಿಮ್ಮ ಡ್ಯೂಟಿ ಇದ್ದೆ ಇರ್ತೀರ (ಇದು ಸಂದೀಪ್ ಡೈಲಾಗ್)!!!!

Saturday, March 25, 2017

ಕಗ್ಗದಿಂದ ಶುಭ ಕೋರಿಕೆ

ಘನವಾದ ನಿದ್ದೆ.. ಆಗಸದಲ್ಲಿಯೇ ತೇಲುತ್ತಿರುವ ಅನುಭವ..ಪ್ರಪಂಚದ ಪರಿವೆ ಇಲ್ಲದ ನಿದ್ದೆ..

ವೈದ್ಯರು ಅರಿವಳಿಕೆ ಕೊಟ್ಟು ಶಸ್ತ್ರ ಚಿಕಿತ್ಸೆ ಮಾಡಿದ ಮೇಲೆ, ಅರಿವಳಿಕೆಯ ಸತ್ವ / ಶಕ್ತಿ ಕಡಿಮೆ ಆಗುತ್ತಿದ್ದ ಹಾಗೆ ನೋವು ಅರಿವಾಗುವ ಹಾಗೆ, ನಿದ್ದೆಯ ಮಂಪರು ಕಡಿಮೆ ಆಗುತ್ತಿರುವ ಅನುಭವ..

ಮೊಬೈಲ್  ಫೋನ್ ಸದ್ದು ಮಾಡುತ್ತಿತ್ತು.. ಫೋನ್ ತಲೆಗೆ ಒಂದು ಬಿಟ್ಟು ಮತ್ತೆ ನಿದ್ದೆಗೆ ಜಾರಲು ಯತ್ನಿಸುತ್ತಿದ್ದೆ.. !

ಸಂಪಿನ ಆಟೋಮ್ಯಾಟಿಕ್ ಮೋಟಾರು ಶುರುವಾಯಿತು.. ಬೆಳಗಿನ ನಾಲ್ಕು ಘಂಟೆಯ ಆ ಶಾಂತ ನಿಶ್ಯಬ್ಧ ವಾತಾವರಣದಲ್ಲಿ ಮೋಟಾರಿನ ಸದ್ದು.. ಬಹಳ ತೊಂದರೆ ಕೊಡುತ್ತಿತ್ತು.. ಹೊದ್ದುಕೊಂಡಿದ್ದ ಹೊದಿಕೆಯನ್ನು ಬಲವಾಗಿ ಕಿವಿಗೆ ಮುಚ್ಚಿಕೊಂಡು ಮುಸುಗು ಹಾಕಿ ಮತ್ತೆ ನಿದ್ದೆಗೆ ಜಾರಿದೆ..

ಅನತಿ ಸಮಯದಲ್ಲಿ ಮೋಟಾರ್ ನಿಂತಿತು.. ಸದ್ಯ ನಿದ್ದೆ ಮಾಡಬಹುದು ಎಂದು ಮತ್ತೆ ನಿದ್ದೆಗೆ ಜಾರಿದರೆ..

ಟಕ್ ಟಾಕ್ ಟಕ್ ಟಾಕ್ ಗಡಿಯಾರದ ಸದ್ದು.. ಛೇ ಇದೇನಪ್ಪ.. ಇಷ್ಟೊಂದು ಕಾಟ ಕೊಡುತ್ತಿದೆ.. ಎಂದು ಕತ್ತಲಿನಲ್ಲಿಯೇ, ತಡಕಾಡುತ್ತಾ ಆ ಗಡಿಯಾರವನ್ನು ಬಟ್ಟೆಯ ಸಂಧಿಯೊಳಗೆ ಇಟ್ಟು ..  ಅದರ ಮೇಲೆ ಇನ್ನೊಂದಿಷ್ಟು ಬಟ್ಟೆ ಇಟ್ಟೆ .. ಸದ್ದು ಅಡಗಿತು.

ನಿಧಾನವಾಗಿ ಕಣ್ಣು  ರೆಪ್ಪೆಗಳು ಭಾರವಾಗಿ...  ಬೆಂಗಳೂರಿನಲ್ಲಿ ಬಂದ್ ಆದಾಗ ತನ್ನಿಂತಾನೇ ಮುಚ್ಚಿಕೊಳ್ಳುವ ಅಂಗಡಿಗಳ ಶಟರ್ ತರಹ ನಿಧಾನವಾಗಿ ಮುಚ್ಚಿಕೊಂಡವು..

ಟಕ್ ಟಕ್ ಟಕ್ ಮತ್ತೆ ಸದ್ದು.. ಆದರೆ ಈ ಬಾರಿ ಗಡಿಯಾರದಲ್ಲ.. ಬದಲಿಗೆ ವಾಕಿಂಗ್ ಸ್ಟಿಕ್ಕಿನ ಶಬ್ದ.. !

ನಮ್ಮ ಮನೆಯಲ್ಲಿ ಯಾರಿದ್ದಾರೆ ಎಂದುಕೊಳ್ಳುತ್ತಲೇ ನಿದ್ದೆಗೆ ಜಾರಿದೆ..

ಪಕ್ಕೆಯನ್ನು ತಿವಿದಂತೆ ಆಯಿತು.. ಮಗ್ಗುಲು ಬದಲಿಸಿದೆ.. ಆ ಕಡೆ ಪಕ್ಕೆಗೂ ಮತ್ತೆ ತಿವಿದಂತೆ ಆಯಿತು..

ಛೇ ಇದೇನಪ್ಪ ಇದು ಇವತ್ತು ಸ್ವಲ್ಪ ನಿದ್ದೆ ಮಾಡೋಣ ಅಂದರೆ ಹೀಗೆಲ್ಲಾ ಆಗುತ್ತಿದೆ. ಫೋನ್, ಗಡಿಯಾರ, ಮೋಟಾರು ಈಗ ವಾಕಿಂಗ್ ಸ್ಟಿಕ್ ಯಾರೂ ನನಗೆ ನಿದ್ದೆ ಮಾಡಲು ಬಿಡುತ್ತಿಲ್ಲ ಎಂದು ಕೋಪದಲ್ಲಿಯೇ ದಿಗ್ಗನೆ ಎದ್ದೆ..

ಸುತ್ತ ಮುತ್ತಲು ಕಪ್ಪು ಕತ್ತಲೆಯೇ ತುಂಬಿತ್ತು. .ಕಣ್ಣಗಲಿಸಿ ನೋಡಿದೆ.. ಸೊಳ್ಳೆಯನ್ನು ಓಡಿಸಲು ಹಾಕಿದ್ದ ಯಂತ್ರದ ಪುಟ್ಟ ಕೆಂಪು ದೀಪ ಎದುರುಗಡೆಯಿಂದ ಕಾಣುತ್ತಿತ್ತು.. ಅರೆ ಇದೇನಿದು.. ಸೊಳ್ಳೆ ಓಡಿಸುವ / ನಿಯಂತ್ರಿಸುವ ಯಂತ್ರ ನಾ ಮಲಗುವ ಹಾಸಿಗೆ ಕಡೆಯ ಗೋಡೆಯ ಮೇಲಿದೆ. ಇದು ಹೇಗೆ ಎದುರಿಗೆ ಕಾಣಿಸುತ್ತಿದೆ.. ಏನಪ್ಪಾ ಇದು.. ಎಂದು ಮತ್ತೆ ತೀಕ್ಷ್ಣ ದೃಷ್ಟಿಯಿಂದ ನೋಡಿದೆ..ಗೋಡೆಯ ತಗುಲಿಸಿದ್ದ ಸೊಳ್ಳೆ ಓಡಿಸುವ ಯಂತ್ರದ ಬೆಳಕು ಎದುರಿನಿಂದ ಪ್ರತಿಫಲನವಾಗುತ್ತಿದೆ..

ಅರಿವಾಗಲಿಲ್ಲ.. ಕತ್ತಲಲ್ಲೇ ತಡಕಾಡುತ್ತಾ.. ದೀಪ ಹಾಕಿದೆ.. ಜಗ್ ಜಗ್ ಸದ್ದು ಮಾಡುತ್ತಾ ದೀಪ ಹತ್ತಿಕೊಂಡಿತು.. ಕೋಲನ್ನು ಊರಿಕೊಂಡು ಒಂದು ಹಿರಿಯ ಜೀವ ನಿಂತಿದೆ..ಅವರ ಕನ್ನಡಕದಿಂದ ಆ ಬೆಳಕು ಪ್ರತಿಫಲನವಾಗುತ್ತಿದೆ..

ನೋಡು ನೋಡುತ್ತಲೇ ಬೆವರಲು ಶುರು ಮಾಡಿದೆ. ಹಾಕಿದ ಬಾಗಿಲು.. ನನ್ನ ಮಡದಿ ರಾತ್ರಿ ಯಾರಾದರೂ ಬಾಗಿಲು ತಟ್ಟಿದರೆ.. ನನ್ನನ್ನೇ ಎಬ್ಬಿಸಿ ತೆರೆಯಲು ಹೇಳುತ್ತಾಳೆ .. ಪರಿಚಯಸ್ಥರು, ನೆಂಟರು, ಬಂಧು ಮಿತ್ರರು ಯಾರಾದರೂ ಸರಿಯೇ.. ನಾನೇ ಬಾಗಿಲು ತೆರೆಯಬೇಕು.. ಏನಪ್ಪಾ ಇದು .. ಎಂದು ಪಕ್ಕದ ರೂಮಿಗೆ ಹೋಗಿ ನೋಡಿದೆ. ಅಲ್ಲಿ ಮಗಳು ಮತ್ತು ಮಡದಿ ನೆಮ್ಮದಿಯ ನಿದ್ರೆಯಲ್ಲಿದ್ದಾರೆ ..

ಮತ್ತೆ ಆ ವ್ಯಕ್ತಿ  ನಿಂತಲ್ಲಿಗೆ ಬಂದೆ.. ಸ್ವಲ್ಪ ಬೆವರು, ಗಾಬರಿ, ತೊದಲು ನುಡಿಗಳು.. ಯಾರಲ್ಲಿ ಯಾರು ನೀವು.. ಹೇಗೆ ಬಂದಿರಿ.. ಈ ಸಾಲುಗಳನ್ನು ಹೇಳಲು ಅನೇಕ ಬಾರಿ ಒಣಗಿದ್ದ ಗಂಟಲನ್ನು ಸರಿಮಾಡಿಕೊಂಡಿದ್ದೆ ..

ಆ ವ್ಯಕ್ತಿ ನಿಧಾನವಾಗಿ ಇತ್ತ ಕಡೆ ತಿರುಗಿತು. ಬೋಳು ತಲೆ, ದಪ್ಪನೆ ಕನ್ನಡಕ, ಬಿಳಿ ಜುಬ್ಬಾ ಬಿಳಿ ಪಂಚೆ.. ಬೊಚ್ಚು ಬಾಯಿ... ಗಂಟಲಲ್ಲಿದ್ದ ಕಡೆ ಹನಿಯೂ ಒಣಗಿತು.. ಗಾಬರಿಯಿಂದ ಹೆದರಿಕೆಯಾಗಿ!

"ಅಜ್ಜಾ.. ಅಜ್ಜಾ.. ನೀವು.. ಅರೆ ಇದೇನಿದು.. ಯಾಕೆ.. ಹೇಗೆ.. ಯಾವಾಗ.. ಅರೆ.. ಛೆ.. ಓಹ್.. ಏನಪ್ಪಾ ... .. ಅಲ್ಲಾ.. ತಾತ. ಅದು.. ಹಾಗಲ್ಲ.. "

"ಮಗೂ ಶ್ರೀಕಾಂತಾ.. ಯಾಕಿಷ್ಟು ಗಾಬರಿ.. ಹೆದರಬೇಡ.. ನಾ ನಿನಗೆ ತೊಂದರೆ ಕೊಡೋಲ್ಲ.. ಐದು ದಿನಗಳ ಹಿಂದೆ ಮಲಗಿದ್ದ ನೀನು ಎದ್ದೆ ಇಲ್ಲವಲ್ಲ.. ಅದಕ್ಕೆ ನನಗೆ ಗಾಬರಿಯಾಯಿತು.. ಅಂತಹ ಗಾಢ ನಿದ್ದೆ ಏತಕ್ಕೆ.. "

"ಆಆಹ್ ಏನಂದಿರಿ.. ನಾ ಮಲಗಿ ನಾಲ್ಕು ದಿನವಾಯಿತೇ.. ಏನಾಯಿತು ನನಗೆ... ಅಯ್ಯೋ ಕಣ್ಣುಗಳು ಯಾವುದೋ ಬೆಟ್ಟವನ್ನು ಹೊತ್ತು ನಿಂತಂತೆ ಭಾರವಾಗಿದೆ.. ನಿಜವೇ ಅಜ್ಜ.. ಇಂದು ಯಾವ ತಾರೀಕು.. ಏನಿದು... "

"ಮಗೂ ಇಂದು ೨೫ನೇ ತಾರೀಕು ಮಾರ್ಚ್ ಮಾಸ.. . "

"ಛೆ ಅಜ್ಜ.. ಎಂಥಹ ಕೆಲಸವಾಯಿತು.. ನಮ್ಮ ಗುರುಗಳು... ೬೨ನೇ ವರ್ಷದ ಹರ್ಷದ ಸಂಭ್ರಮದಲ್ಲಿದ್ದರು.. ಅವರಿಗೆ ನಾ ಶುಭಾಶಯಗಳನ್ನು ಸಲ್ಲಿಸಬೇಕಿತ್ತು.. ಬೇಸರವಾಗುತ್ತಿದೆ.. "

"ಮಗೂ.. ಮಹಾಭಾರತದಲ್ಲಿ ಧರ್ಮಕ್ಕೆ ಜಯವಾಗಬೇಕು ಎಂದು ಶ್ರೀ ಕೃಷ್ಣ ಸೂರ್ಯನನ್ನು ಕೊಂಚ ಮರೆಮಾಡಿದ್ದ.. ಈಗ ನಾನು ಅದೇ ರೀತಿ ದಿನಸೂಚಿಯನ್ನು ಕೊಂಚ ಹಿಂದಕ್ಕೆ ಕರೆದೊಯ್ಯುತ್ತೇನೆ.. ಆಗೋ ನೋಡು ಸೂರ್ಯನು ಕೂಡ ಒಪ್ಪಿಕೊಂಡು ಚಂದ್ರನ ಜೊತೆ ಹೆಗಲ ಮೇಲೆ ಕೈ ಹಾಕಿಕೊಂಡು ಹಿಂದಕ್ಕೆ ಚಲಿಸುತ್ತಿದ್ದಾನೆ.. ಬೇಗನೆ ನಿನ್ನ ಶುಭಾಶಯಗಳನ್ನು ದಾಖಲಿಸು.. ಪ್ರಪಂಚ ಏಳುವ  ಮುಂಚೆ ಈ ಕೆಲಸ ಆಗಬೇಕು.. ಕಮಾನ್ ಶ್ರೀಕಾಂತ ಕಮಾನ್"

"ಅಜ್ಜ..ಈಗಲೇ ಶುರುಮಾಡುತ್ತೇನೆ.. "

ಚಕ್ ಎಂದು ಹಾಸಿಗೆಯಿಂದ ಎದ್ದು.. ಮೊರೆ ತೊಳೆದು. ತನ್ನ ಬಾಸ್ ತನ್ನ ಅಪ್ಪನಿಗೆ, ಮತ್ತು ಶ್ರೀ ಕೃಷ್ಣನಿಗೆ, ಗಣಪನಿಗೆ ನಮಿಸಿ.. ಇಷ್ಟದೇವತೆಗಳನ್ನು ಮನದಲ್ಲಿಯೇ ಸ್ಮರಿಸಿ..

"ಗುರುಗಳೇ .. ಕಗ್ಗ ಎನ್ನುವ ಕಬ್ಬಿಣದ ಕಡಲೆ ಎಂದುಕೊಂಡ ಹಲವಾರು ಮಂದಿಗೆ ಸರಳವಾಗಿ ತಾಕುವಂತೆ, ಓದಿದ ಪ್ರತಿಯೊಬ್ಬರ ಅನುಭವದ ಮಜಲಿಗೆ ತಾಕುವಂತೆ, ಬುದ್ಧಿಮತ್ತೆಗೆ ಅರಿವಾಗುವಂತೆ, ಅವರ ಮನಸ್ಸಿಗೆ ನಾಟುವಂತೆ ಪ್ರತಿ ಮುಕ್ತಕಗಳ ಪದಗಳನ್ನು ವಿಂಗಡಿಸಿ, ಅದರ ಅರ್ಥ ವಿಸ್ತಾರವನ್ನು ಹೇಳುತ್ತಾ, ನಿಮ್ಮ ಬದುಕಿನಲ್ಲಿ ನೀವು ಕಂಡುಕೊಂಡ ಸತ್ಯದ ಅನುಭವದ ಮಾರ್ಗದಲ್ಲಿ ದೊರಕಿದ ಅಮೃತವನ್ನು ಕ್ರೂಢೀಕರಿಸಿ ನಮ್ಮೆಲ್ಲರಿಗೂ ಹಂಚುತ್ತಿರುವ ನಿಮಗೆ ಧನ್ಯವಾದಗಳು.. ಕಗ್ಗ ಎಂಬ ವಿಷಯವನ್ನು ಬರಿ ಕಡಲೆ ಎನಿಸದೆ ಇಷ್ಟವಾಗುವ ನಿಟ್ಟಿನಲ್ಲಿ ಬರೆದು ಹಂಚಿರುವ ನಿಮ್ಮ ಬುದ್ಧಿಮತ್ತೆಗೆ, ಅದಕ್ಕೆ ಸಿಕ್ಕ ಗೌರವಗಳಿಗೆ ತಲೆ ಬಾಗುತ್ತಲೇ ನಿಮಗೆ ಜನುಮದಿನಕ್ಕೆ ಶುಭಕರವಾದ ಆಶಯಗಳನ್ನು ಅಜ್ಜನ ಅಮೃತ ಹಸ್ತದಲ್ಲಿ ತಲುಪಿಸಲು ಪ್ರಯತ್ನ ಪಡುತ್ತಿದ್ದೇನೆ.. "

ನಿಮ್ಮ ಜನುಮದಿನಕ್ಕೆ ಶುಭಾಶಯಗಳು ರವಿ ಗುರುಗಳೇ"

ಅಲ್ಲಿಯೇ ನಿಂತಿದ್ದ ಅಜ್ಜ, ತಮ್ಮ ವಾಕಿಂಗ್ ಸ್ಟಿಕ್ಕಿನ ತುದಿಯಿಂದ ನನ್ನ ತಲೆಗೆ ಮೆಲ್ಲಗೆ ಕುಟ್ಟಿ.. ಸರಿ ಮಗೂ.. ನನ್ನ್ನ ಶುಭಾಶೀರ್ವಾದವನ್ನು ರವಿಗೆ ನಿನ್ನ ಬರಹದ ಮೂಲಕ ತಲುಪಿಸು.. ನನ್ನ ಜನುಮದಿನಕ್ಕೂ ಅವನ ಜನುಮದಿನಕ್ಕೂ ನಾಲ್ಕು ದಿನಗಳ ಅಂತರ.. ಹಾಗೆ ನಾಲ್ಕನೇ ಪುಸ್ತಕ ಕಗ್ಗ ರಸಧಾರೆ ಕೂಡ ಬೇಗ ಬರಲಿ ಎಂದು ಹೇಳಿ ಬಿಡು. ನಾ ಹೋಗಿ ಬರುತ್ತೇನೆ.. ಮತ್ತೆ ನಾಲ್ಕನೇ ಪುಸ್ತಕದ ಬಿಡುಗಡೆ ಸಮಾರಂಭಕ್ಕೆ ಬರುತ್ತೇನೆ.. ಜೊತೆಯಲ್ಲಿ ಈ ಬಾರಿ ಆ ಸಮಾರಂಭದ ವಿವರಗಳನ್ನು ನಾನೇ ನೀಡುತ್ತೇನೆ ಎಂದು ರವಿಗೆ ಹೇಳಿಬಿಡು.. "

ವಾವ್ ಅಜ್ಜ ಖಂಡಿತ ತಿಳಿಸುತ್ತೇನೆ.. ನಿಮ್ಮ ಅಕ್ಷರಗಳಲ್ಲಿ ಸಮಾರಂಭದ ವಿವರ.. ಕೇಳಿದರೆ ಮೈಜುಮ್ ಎನ್ನುತ್ತದೆ.. ಇನ್ನೂ ಅದು ಹೇಗೆ ಇರುತ್ತೆ ಎನ್ನುವ ಕುತೂಹಲ ಹೆಚ್ಚಾಗುತ್ತಿದೆ.. ಆಗಲಿ ಅಜ್ಜ ನಿಮ್ಮ ಆಶೀರ್ವಾದಗಳನ್ನು ತಲುಪಿಸುತ್ತೇನೆ.. "

ಅಜ್ಜ ಟೋಯ್ ಅಂತ ಮಾಯವಾದರು..  ಪ್ರಪಂಚ ಇನ್ನೂ ಎದ್ದಿರಲಿಲ್ಲ.. ಮಾರ್ಚ್ ೨೧ ನೇ ದಿನಕ್ಕೆ ಕಾಲಿಡುತಿತ್ತು..
ಆದರೆ ತಾಂತ್ರಿಕ ದೋಷದಿಂದ.. ಈ ಲೇಖನ ಪ್ರಪಂಚಕ್ಕೆ ಬರುವ ಹೊತ್ತಿಗೆ ೯೬ ಘಂಟೆಗಳು ಉರುಳಿ ಹೋಗಿತ್ತು!!!

ರವಿ ಗುರುಗಳೇ ಜನುಮದಿನಕ್ಕೆ ಶುಭಾಶಯಗಳು!!!


(ನಿಮ್ಮ ಕ್ಷಮೆ ಕೋರುತ್ತಾ ಅಜ್ಜನ ಹಾಗೂ ನಿಮ್ಮ ಭಾವ ಚಿತ್ರವನ್ನು ಒಂದೇ ಚೌಕಟ್ಟಿನಲ್ಲಿ ಬಂಧಿಸಿದ್ದೇನೆ.. ಅಜ್ಜ ನಿಮ್ಮ ಕಡೆ ನೋಡುತ್ತಾ ನಿಮಗೆ ಶುಭಾಶೀರ್ವಾದ ಕೋರುತ್ತಲೇ ಇರುತ್ತಾರೆ ಎನ್ನುವುದನ್ನು ಸಾಂಕೇತಿಕವಾಗಿ ತೋರಿಸಲು ಈ ಪ್ರಯತ್ನ.. ಇದು ಖಂಡಿತ ನಿಮಗೆ ಮುಜುಗರ ತರಲು ಮಾಡಿರುವುದಲ್ಲ... ಹಾಗೆನಿಸಿದರೆ.. ಈ ಚಿತ್ರವನ್ನು ತೆಗೆ ಶ್ರೀಕಾಂತ ಎಂದು ಹೇಳಲು ಪೂರ್ಣ ಅಧಿಕಾರಯುತ ಪ್ರೀತಿ ನಿಮಗಿದೆ)


Thursday, February 9, 2017

ದೇವರು ನಕ್ಕೆ ನಗುತ್ತಾನೆ - ೩

ಡಾಕ್ಟರ್ ಹತ್ತಿರ ಒಬ್ಬ ಓಡೋಡಿ ಬಂದ..
ಡಾಕ್ಟರಿಗೆ ಗಾಬರಿ.. "ಏನಾಯ್ತಪ್ಪ"
ನಮ್ಮ ಪಕ್ಕದ ಮನೆಯಲ್ಲಿ ರಕ್ತದ ಒತ್ತಡ ನೋಡುವ ಯಂತ್ರವನ್ನು ತಂದಿದ್ದರು
ನನಗೆ ಕುತೂಹಲ.. "ಅವರ ಮನೆಗೆ ಹೋಗಿ ನನ್ನದು ರಕ್ತದ ಒತ್ತಡ ನೋಡಿರಿ" ಎಂದೇ

ಆಗ ಸಂಜೆ ಎಂಟು ಮೂವತ್ತು.. ಅವರ ಮನೆಯಲ್ಲಿ ಜೀ ಕನ್ನಡ ಓಡುತ್ತಿತ್ತು..
ಓಹ್ ಸಾಹೇಬ್ರು ಬನ್ನಿ ಬನ್ನಿ.. ಅಂತ ಒಳಗೆ ಕರೆದರು..
ಟಿವಿ ನೋಡುತ್ತಾ.. ಹಾಗೆ ಪರೀಕ್ಷೆ ಮಾಡಿಸಿದೆ..
ಆ ಯಂತ್ರದಲ್ಲಿದ್ದ ಪಾದರಸ ಕೆಳಗೆ ಇಳಿಯುತ್ತಲೇ ಇಲ್ಲ. ಬದಲಿಗೆ ಮೇಲಕ್ಕೆ ಅಂಟಿಕೊಂಡು ಬಿಟ್ಟಿತ್ತು..
ಸುಮಾರು ಹೊತ್ತು ನಾನು ನೋಡುತ್ತಲೇ ಇದ್ದೆ.. ಆದರೆ ಆ ಪಾದರಸ ಕೆಳಗೆ ಇಳಿಯುತ್ತಲೇ ಇಲ್ಲ..

ಆರೋಗ್ಯ ಸರಿ ಇದೆ.. ರಕ್ತ ಒತ್ತಡಕ್ಕೆ ಎಂದೂ ಒಳಗಾದವನಲ್ಲ.. ಗಾಬರಿ ಆಯಿತು ಅದಕ್ಕೆ ನಿಮ್ಮ ಹತ್ತಿರ ಬಂದೆ..

ಡಾಕ್ಟರ್ ಸಮಯ ನೋಡಿಕೊಂಡರು.. ರಾತ್ರಿ ೯.೩೦ ಆಗಿತ್ತು.. ಚಂದನ ವಾಹಿನಿ ಓಡುತ್ತಿತ್ತು..
ಬಾಪ್ಪಾ ಕೂತುಕೋ.. ಎಂದು ಹೇಳಿ.. ಟಿವಿ ಧ್ವನಿಯನ್ನು ದೊಡ್ಡದು ಮಾಡಿ.. ರಕ್ತದ ಒತ್ತಡ ಪರೀಕ್ಷಿಸಿದರು.. ಸರಿಯಾಗಿತ್ತು...

ಇನ್ನೈದು ನಿಮಿಷ ಬಿಟ್ಟು .. ಮತ್ತೆ ನೋಡಿದರು...  ಆಗಲೂ  ಸರಿಯಾಗಿತ್ತು..

ನಾಳೆ ಸಂಜೆ ಬಾ ಅಂದರು..

ಮತ್ತೆ ಮಾರನೇ ದಿನ ಎಂಟು ಮೂವತ್ತಕ್ಕೆ ಡಾಕ್ಟರ್ ಬಳಿ ಹೋದ.. ಸ್ವಾಗತಕಾರಿಣಿ .. ಜೀ ಕನ್ನಡ ಹಾಕಿ ಮೊಬೈಲ್ ನಲ್ಲಿ ಆಟವಾಡುತ್ತಿದ್ದರು..

ರಕ್ತದ ಒತ್ತಡದ ಯಂತ್ರದಲ್ಲಿ ಮತ್ತೆ ಪಾದರಸ ಮೆಲ್ಲನೆ ಮೇಲಕ್ಕೆ ಏರಿ ಅಲ್ಲೇ ಅಟಕಾಯಿಸಿಕೊಂಡಿತ್ತು.. ಅರೆ ಡಾಕ್ಟರ್ ಅವರಿಗೂ ಆಶ್ಚರ್ಯ.. ಅಷ್ಟರಲ್ಲಿ ವಿದ್ಯುತ್ ಹೋಯಿತು.. ದೀಪಗಳು ಒಮ್ಮೆ ಆರಿ ಮತ್ತೆ ಹೊತ್ತಿಕೊಂಡಿತು.. ಟಿವಿಯಲ್ಲಿ ಚಂದನ ಬಂದಿತು..

ರಕ್ತದ ಒತ್ತಡ ಪರೀಕ್ಷೆ ಮಾಡಿದರು... ಸರಿಯಾಗಿತ್ತು..

ಸ್ವಾಗತಕಾರಿಣಿ ಜೀ ಕನ್ನಡ ಹಾಕಿದರು.. ಮತ್ತೆ ವ್ಯತ್ಯಾಸ..

ಆಗ ತಿಳಿಯಿತು..

ಡಾಕ್ಟರ್ ಜೋರಾಗಿ ನಗಲು ಶುರುಮಾಡಿದರು..

ನೋಡಪ್ಪ ಈ ರೋಗಕ್ಕೆ ಎರಡೇ ಚಿಕಿತ್ಸೆ
೧) ನನ್ನ ಕ್ಲಿನಿಕ್ ನಲ್ಲಿ ರಾತ್ರಿ ೮.೩೦ ರಿಂದ ೯.೦೦ ಕ್ಕೆ ರಕ್ತದ ಒತ್ತಡ ಪರೀಕ್ಷೆ ಮಾಡಿಸಿಕೊಳ್ಳಬೇಡ.. ಚಂದನ ವಾಹಿನಿ       ಓಡುತ್ತಿದ್ದರೆ ಮಾತ್ರ ಪರೀಕ್ಷಿಸಿಕೋ.. ಜೀ ಕನ್ನಡ ಹಾಕಿದ್ದರೆ.. ಒಂಭತ್ತು ಘಂಟೆಯಾದ ಮೇಲೆ ಬಾ

೨) ಇಲ್ಲವೇ .. ನೀ ಪರೀಕ್ಷೆ ಮಾಡಿಸಿಕೊಳ್ಳುವಾಗ.. ಟಿವಿಯನ್ನು ಬಂದ್ ಮಾಡಿ ಅಂತ ಹೇಳು..

ದೇವರು ಕಿರೀಟವನ್ನು ಒಮ್ಮೆ ತೆಗೆದುಕೊಂಡು.. ತಲೆ ಕೆರೆದುಕೊಂಡ.. ಆಮೇಲೆ ಗೊತ್ತಾಯಿತು .. ಫ್ರೇಮ್ ಹಾಕಿದ್ದ ಫೋಟೋದ ಒಳಗಿಂದಲೇ ಜೋರಾಗಿ ನಗಲು ಶುರು ಮಾಡಿದ.. ತನ್ನ ಹೆಬ್ಬೆರಳನ್ನು ಕೆಳಗಿನ ಚಿತ್ರದಂತೆ ತೋರಿಸಿ.. ಮತ್ತೆ ಫ್ರೇಮ್ ಒಳಗೆ ಮರೆಯಾದ.. !

ಯಾಕೆ ಗೊತ್ತೇ.. ಪ್ರತಿ ರಾತ್ರಿ ಜೀ ಕನ್ನಡ ವಾಹಿನಿಯನ್ನು ೮.೩೦ ರಿಂದ ೯. ೦೦ ಕ್ಕೆ ನೋಡಿರಿ ಒಮ್ಮೆ :-)

Wednesday, January 25, 2017

ದೇವರು ನಕ್ಕೆ ನಗುತ್ತಾನೆ - ೨

ದೇವರು ನಗುತ್ತಾನೆ.. ಇದು ನಾ ಪ್ರಾಥಮಿಕ ಶಾಲೆಯಲ್ಲಿ ಓದಿದ ಪಾಠದ ಹೆಸರು. ದೃಷ್ಟಾ೦ತ ಕಥೆಗಳ ಒಂದು ಗುಚ್ಛ ಆ ಪಾಠ. ಅದನ್ನು ಓದಿದ್ದು ಪರಿಣಾಮಕಾರಿಯಾಗಿ ತಲೆಯೊಳಗೆ ಕೂತು ಬಿಟ್ಟಿದೆ. ಹೀಗೆ ನನಗೆ ವಿಚಿತ್ರ, ನಗು ಬರಿಸುವಂಥಹ ಸನ್ನಿವೇಶಗಳನ್ನು ಕಂಡರೆ, ಗಮನಕ್ಕೆ ಬಂದರೆ.. ತಲೆಯೆತ್ತಿ ಆಗಸ ನೋಡುತ್ತೇನೆ ಅಲ್ಲಿ ಸೊಂಟದ ಮೇಲೆ ಕೈಯಿಟ್ಟುಕೊಂಡು ಆ ದೈವ ನಗುತ್ತಿರುವಂತೆ ಭಾಸವಾಗುತ್ತದೆ.
ಚಿತ್ರ ಕೃಪೆ : ಗೂಗಲೇಶ್ವರ

ಘಟನೆ ೧
ಸುಮಾರು ವರ್ಷಗಳ ಅಭ್ಯಾಸ.. ಜನವರಿ ಒಂದನೇ ತಾರೀಕು ಕುಲದೈವ ವೆಂಕಟರಮಣನ ದೇವಾಲಯಕ್ಕೆ ಹೋಗುವುದು. ಹೀಗೆ ಈ ಜನವರಿ ಒಂದನೇ ತಾರೀಕು ಬೆಂಗಳೂರಿನ ಪ್ರಸಿದ್ಧ ವೆಂಕಟೇಶ್ವರನ ದೇಗುಲಕ್ಕೆ ಹೋಗಿದ್ದೆ. ಯಥಾಪ್ರಕಾರ ಸಾಲು ಸಾಲು ಜನರಿದ್ದರು. ಗಡಿಬಿಡಿ ಮಾಡಿಕೊಳ್ಳದೆ ಸರತಿ ಸಾಲಿನಲ್ಲಿ ನಿಂತಿದ್ದೆ. ಸುಮಾರು ಒಂದು ಘಂಟೆ ಮೇಲಾಗಿತ್ತು ಸಾಲಿನಲ್ಲಿ ನಿಂತು, ಗಲಿಬಿಲಿ ಇರಲಿಲ್ಲ.. ಕೆಲವು ಮಂದಿ ಬೇಸರ ಮಾಡಿಕೊಂಡು ಅಲ್ಲಿಯೇ ಕೈಮುಗಿದು ವಾಪಸ್ ಹೋಗಿದ್ದು ಉಂಟು. ಇನ್ನೂ ಕೆಲವರು ಆಗಲಿ ಅದು ಎಷ್ಟು ಹೊತ್ತು ಆದರೂ ಸರಿ.. ದೇವನ ದರ್ಶನ ಮಾಡಿಕೊಂಡೆ ಹೋಗೋಣ ಅಂತ ನಿಂತಿದ್ದರು. ಆಗ ತಾನೇ ೫೦೦ ಮತ್ತು ೧೦೦೦ ನೋಟಿನ ಕಥೆ ಮುಗಿದು ಎರಡು ದಿನವಾಗಿತ್ತು.. ಜನರಿಗೆ ಮಾತಿಗೊಂದು ವಿಷಯ ಬೇಕಿತ್ತು ಅಲ್ಲವೇ..

"ಏಟಿಎಂ ಮುಂದೆ ನಿಲ್ಲುತ್ತೇವೆ.. ಈ ಸರತಿ ಯಾವ ಮಹಾ ಅಲ್ವೇ ಸರ್.. ನಿಲ್ಲೋಣ ಬಿಡಿ ಮೋದಿ ದೇಶಕ್ಕೆ ಒಳ್ಳೇದು ಮಾಡಲು ತಂದ ನಿರ್ಧಾರಕ್ಕೆ ನಾವು ಬೆಂಬಲ ಸೂಚಿಸಿದ್ದೇವೆ.. ಈ ಸರತಿ ಸಾಲು ನಮ್ಮ ಮನಕ್ಕೆ ಒಳ್ಳೆಯದು ಆಗಲಿ ಎನ್ನುವ ಆಶಯಕ್ಕೆ ನಿಲ್ಲಲಾರೆವೆ.. "

ತರ್ಕವೇನೋ ಚೆನ್ನಾಗಿತ್ತು.. ಆದರೆ ಆ ಐವತ್ತ್ತು ದಿನ ಈ ಮಂದಿ ಮೋದಿಯನ್ನು ಬಯ್ದಿರಲಿಲ್ಲವೇ ಎನ್ನುವುದು ಯಕ್ಷ ಪ್ರಶ್ನೆಯಾಗಿತ್ತು.. ದೇವಾಲಯದ ಗೋಪುರದ ಕಡೆ ಕಣ್ಣು ಹಾಯಿಸಿದೆ.. ಗೋಪುರದಲ್ಲಿದ್ದ ದೇವರ ಮೂರ್ತಿಗಳು ಕಿಸಕ್ಕನೆ ನಕ್ಕ ಅನುಭವ.. ಆ ಸದ್ದಿಗೆ ಗೋಪುರದಲ್ಲಿ ಮನೆಮಾಡಿದ್ದ ಪಾರಿವಾಳಗಳು ಪುರ್ ಅಂತ ಹಾರಿದವು..

ದೇವಸ್ಥಾನದ ಪ್ರಾಕಾರದಲ್ಲಿದ್ದ ದೇವರ ಚಿತ್ರ ನೋಡಿದೆ.. ಅಭಯ ಹಸ್ತ ತೋರುತ್ತಿದ್ದ ವೆಂಕಟೇಶ.. ತನ್ನ ಕೈಯನ್ನು ಹಾಗೆ ಬಾಯಿಗೆ ಅಡ್ಡವಾಗಿ ಇಟ್ಟುಕೊಂಡು ನಕ್ಕ ಹಾಗೆ ಅನ್ನಿಸಿತು..

ಘಟನೆ ೨ 
ಸುಮಾರು ಹೊತ್ತು ಕಾದ ಮೇಲೆ.. ಅರ್ಚಕ ಸಿಬ್ಬಂದಿ  "ಭಕ್ತಾದಿಗಳೇ.. ಅಲಂಕಾರ ಮುಗಿಯಿತು.. ಇನ್ನೇನು ಕೆಲವೇ ಕ್ಷಣಗಳಲ್ಲಿ ದರ್ಶನ ಮಾಡಬಹುದು.. ಅಭಿಷೇಕಕ್ಕೆ ಬರೆಸಿದವರು ಮತ್ತು .. ಪೂಜೆ ಮಾಡಿಸುವವರು ಇನ್ನು ಸ್ವಲ್ಪ ಹೊತ್ತು ಕಾಯಬೇಕು.. ಮಂಗಳಾರತಿಯಾದ ಮೇಲೆ ಪ್ರಸಾದ ಕೊಡುತ್ತೇವೆ.. ಮಿಕ್ಕವರು ಬರಿ ದರ್ಶನ ಮಾಡಬೇಕೆಂದಿರುವವರು ದರ್ಶನ ಮಾಡಿ ಸಾಗಬಹುದು.. "

ಸರತಿ ಸಾಲಿನಲ್ಲಿ ಸಂಚಲನ ಮೂಡಿತು. .. ಕೆಲವರು ಬದಿಗೆ ನಿಂತು ಹಿಂದಿದ್ದವರಿಗೆ ದಾರಿ ಬಿಟ್ಟುಕೊಟ್ಟರು.. ಮಿಕ್ಕವರು ಮೆಲ್ಲಗೆ ಸಾಗುತ್ತಿದ್ದರು.. ಒಂದು ವ್ಯಕ್ತಿ ಕೈ ಬೆರಳು ತುಂಬಾ ಉಂಗುರಗಳು.. ಕತ್ತಿಗೆ ದೊಡ್ಡ ದಪ್ಪನಾದ ಸರ.. ಕೈಗೆ ಕಡಗ ತೊಟ್ಟಿತ್ತು.. ಹಣೆಗೆ ಉದ್ದವಾದ ಕುಂಕುಮ.. ಒಟ್ಟಿನಲ್ಲಿ ದೇವರಿಗೆ ಒಮ್ಮೆಲೇ ಕಸಿವಿಸಿ ಮಾಡಬೇಕಿನ್ನುಸುವಂಥಹ ರೂಪ...

ಮನದಲ್ಲಿ ದೈವ ಧ್ಯಾನ ಮಾಡುತ್ತಿದ್ದರೂ... ಈ ದೃಶ್ಯ ಕಂಡು ಮನದೊಳಗೆ ಹಾಸ್ಯ ರಸ ಉಕ್ಕುತ್ತಿತ್ತು.. ದೇವಸ್ಥಾನದ ಆವರಣದಲ್ಲಿ ವಿಷ್ಣುವಿನ ದಶಾವತಾರದ ಮೂರ್ತಿಗಳು ಇದ್ದವು.. ಈ ವ್ಯಕ್ತಿಯನ್ನು ಒಮ್ಮೆ ನೋಡಿ.. ಒಂದು ಮೂರ್ತಿ ತನ್ನ ಆಭರಣಗಳೆಲ್ಲ ಸರಿ ಇದೆಯೇ ಅಥವಾ ಏನಾದರೂ ಮಿಸ್ ಆಗಿದೆಯೇ ಎಂದು ನೋಡಿಕೊಂಡ ಪರಿಯನ್ನು ನೋಡಿ ಪಕ್ಕದ ಮೂರ್ತಿ ಕಿಸಕ್ಕನೆ ನಕ್ಕಿತು..
ಚಿತ್ರ ಕೃಪೆ : ಗೂಗಲೇಶ್ವರ
ಆಗಸ ಕಾಣುತ್ತಿರಲಿಲ್ಲ.. ಕಿಟಕಿಯಾಚೆ ಸುಮ್ಮನೆ ಗಮನಿಸಿದೆ.. ದೇವರು ಕ್ಲೋಸ್ ಅಪ್ ಸ್ಮೈಲ್ ಕೊಟ್ಟಾ.. ನನ್ನ ಮೇಲಿರಬೇಕಾದ ಆಭರಣಗಳು ಈ ವ್ಯಕ್ತಿಯ ಮೇಲಿದ್ದದ್ದು ನೋಡಿ ನಗೆಯೊಂತೂ ಬಂದಿತ್ತು ಆ ಮಹಾಮಹಿಮನಿಗೆ :-)

ಘಟನೆ - ೩
ಆ ಆಭರಣದ ಡಬ್ಬಿಯ ತರಹ ಇದ್ದ ವ್ಯಕ್ತಿ.. ಯಾರೋ ಒಬ್ಬರಿಗೆ ಕರೆ ಮಾಡುತ್ತಾ... "ನೀವು ಬನ್ನಿ ಸರ್... ಅದೆಷ್ಟು ಉದ್ದದ ಸಾಲೇ ಇರಲಿ.. ವೆಂಕಟೇಶ್ವರನ ದರ್ಶನ ನಾ ಮಾಡಿಸುತ್ತೇನೆ.. ಬಾಗಿಲಲ್ಲಿ ನನ್ನ ಹೆಸರು ಹೇಳಿ.. ನನ್ನ ಮೊಬೈಲಿಗೆ ಕರೆಮಾಡಿ.. ಮಿಕ್ಕದ್ದು ನನಗೆ ಬಿಡಿ.. "

ಆ ಕಡೆಯ ವ್ಯಕ್ತಿಗೆ ಅದೇನು ಮುಜುಗರವಾಗಿತ್ತೋ ಏನೋ.. ಅದೇನು ಹೇಳಿದನೋ ಕಾಣೆ.. ಆದರೆ ಈ ಆಭರಣದ ಡಬ್ಬಿ "ಸರ್ ಅದೆಕ್ಕೆನೂ  ನೀವು ಯೋಚಿಸಬೇಡಿ.. ನೀವು ಬನ್ನಿ.. ದರ್ಶನ ನನಗೆ ಬಿಡಿ.. "

ನಾ "ನಗಲಾರದೇ ಅಳಲಾರದೇ ತೊಳಲಾಡಿದೆ ಜೀವ" ಅಣ್ಣಾವ್ರ ಶ್ರುತಿ ಸೇರಿದಾಗ ಹಾಡು ನೆನಪಿಗೆ ಬಂತು.. ನಾನು ನಕ್ಕೆ.. ಹಸುವಿಗೆ ಒರಗಿಕೊಂಡು ಕೊಳಲು ಊದುತ್ತಿದ್ದ ಶ್ರೀ ಕೃಷ್ಣನ ಮೂರ್ತಿ.. ಉಡುಪಿ ಕೃಷ್ಣನ ಹಾಗೆ ನನಗೆ ವಿರುದ್ಧ ದಿಕ್ಕಿಗೆ ಮುಖ ಮಾಡಿಕೊಂಡು "ಅಲೆ ಅಲೆ... ನಾನೇ ದೇವರು. ನಾನೆ ಎಲ್ಲರನ್ನು ನೋಡಿಕೊಳ್ಳುತ್ತೇನೆ.. ನಾನೇ ಒಂದು ದಿನ ಆ ರೀತಿಯಲ್ಲಿ ಹೇಳಿಕೊಂಡಿಲ್ಲ.. ಇದ್ಯಾರಪ್ಪಾ ಈ ಆಭರಣದ ಪೆಟ್ಟಿಗೆ ಹೀಗೆ ಹೇಳುತ್ತಿದೆ" ಎಂದು ನಕ್ಕು ನಕ್ಕು ಸುರಿಯುತ್ತಿದ್ದ ಆನಂದ ಭಾಷ್ಪವನ್ನು ಒರೆಸಿಕೊಂಡ ಅನ್ನಿಸಿತು.. !

ಘಟನೆ - ೪
ಅಮ್ಮನ ಆರೋಗ್ಯ ತಪಾಸಣೆಗೆ  ಕರೆದುಕೊಂಡು ಹೋದಾಗ.. ವೈದ್ಯರು ಅಮ್ಮನಿಗೆ ಹೇಳಿದರು "ನೀವು  ಮಲಗಿದ್ದಾಗ ತಕ್ಷಣ ದಡಕ್ ಅಂತ ಏಳಬಾರದು.. ಕೂತಿದ್ದವರು ಚಕ್ ಅಂತ ಎದ್ದು ನಿಲ್ಲಬಾರದು.. ಯಾರಾದರೂ ಕರೆದರೆ ತಕ್ಷಣ ಆ ಕಡೆಗೆ ತಿರುಗಬಾರದು.. ಈ ವಯಸ್ಸಿನಲ್ಲಿ ನೀವು ಮಾಡುವ ಪ್ರತಿಕ್ರಿಯೆಗೆ ನಿಮ್ಮ ಮೆದುಳು ಪ್ರತಿಕ್ರಿಯೆ ನೀಡಲು ಸ್ವಲ್ಪ ಹೊತ್ತಾಗುತ್ತದೆ.. ನಿಮ್ಮ ಅಚಾನಕ್ ಪ್ರತಿಕ್ರಿಯೆಗೆ ತಕ್ಷಣ ಸ್ಪಂದನ ಸಿಗುವುದಿಲ್ಲ.. ಹಾಗಾಗಿ ನಿಮ್ಮ ಮೆದುಳಿಗೆ ಸಂದೇಶ ರವಾನಿಸುವುದು ತಡವಾಗುತ್ತದೆ ಅಷ್ಟರಲ್ಲಿ ನೀವು ಪ್ರತಿಕ್ರಿಯೆಗೆ ಒಳಗಾಗಿ ಬಿಟ್ಟರೆ ಅದಕ್ಕೆ ಗೊಂದಲವಾಗುತ್ತದೆ.. ಆಗ ನಿಮಗೆ ತಲೆಸುತ್ತಿದ ಅನುಭವ.. ಅಥವಾ ಎದ್ದು ನಿಂತ ತಕ್ಷಣ ರಪ್ ಅಂತ ಬೀಳುತ್ತೀನಿ ಅನ್ನುವ ಅನುಭವ ಅಥವಾ ಕೆಲವೊಮ್ಮೆ ಬೀಳಲೂಬಹುದು.. " ಎಂದರು.. ಮತ್ತೆ ಹೇಗೆ ನಿಧಾನವಾಗಿ ತಿರುಗಬೇಕು.. ಹೇಗೆ ನಿಧಾನವಾಗಿ ನಿಲ್ಲಬೇಕು ಎಂದು ತೋರಿಸಿದರು.. ಅಮ್ಮನಿಗೆ ಅರ್ಥವಾಯಿತು..ಸುಮ್ಮನೆ ನಕ್ಕರು..

ಹೊರಗೆ ಬರುವಾಗ.. ನನ್ನ ತರಲೆ ಬುದ್ದಿಗೆ ಒಂದು ವಿಚಾರ ಹೊಳೆಯಿತು,, "ಅಮ್ಮಾ ನೀನು ಮಹಾದೇವಿ ಧಾರವಾಹಿ ನೋಡುತ್ತೀಯಲ್ಲವೇ.. ಅಲ್ಲಿನ ಪ್ರತಿಪಾತ್ರಗಳು ತಮಗೆ ಎರಡೆರಡು ಜನ್ಮ ಇದೆ ಎನ್ನುವ ರೀತಿಯಲ್ಲಿ ನಿಧಾನವಾಗಿ ಚಲಿಸುತ್ತವೆ.. ಮಾತಾಡುತ್ತವೆ.. ನೀನು ಹಾಗೆ ಮಾಡು ... "ಜಾಜಿ ಇಲ್ಲಿ ಬಾ ಎಂದು ಕರೆದರೆ" ಮೈನಸ್ ೫ ಕಿಮಿ ವೇಗದಲ್ಲಿ ಜಾಜಿ ಬರುತ್ತಾಳೆ.. ಬಂಗಾರಿ ಬೇಗ ಬಾರೋ ಅಂದರೆ ತಾನು ಬರಲು ಸಿದ್ಧವಾಗುವ ಮೊದಲೇ ಕೆನ್ನೆಯಲ್ಲಿ ಮೂಡುವ  ಗುಳಿಗಳನ್ನು ತೋರಿಸುತ್ತಾ ಆಮೇಲೆ ಮೈನಸ್ ೧೦ ಕಿಮಿ ವೇಗದಲ್ಲಿ ಓಡಲು ಶುರುಮಾಡುತ್ತಾನೆ.. .. " ಇನ್ನೂ ಹೇಳುತ್ತಿದ್ದೆ ಅಷ್ಟರಲ್ಲಿ ತಲೆಯ ಮೇಲೆ ಟಪ್ ಅಂತ ಏನೋ ಬಿತ್ತು.. ನಾನು ಜಾಜಿಯ ತರಹ ನಿಧಾನವಾಗಿ ತಿರುಗಿದೆ.. ಅಮ್ಮ ನನ್ನ ತಲೆಗೆ ಒಂದು ಬಿಟ್ಟಿದ್ದರು ಸರಿಯಾಗಿ.. :-)
ಚಿತ್ರ ಕೃಪೆ : ಗೂಗಲೇಶ್ವರ 

"ಯಾಕಮ್ಮ .. "ಹುಸಿ ಮುನಿಸಿನಿಂದ ಕೇಳಿದೆ..
"ಅಲ್ಲಿ ನೋಡು ಮಂಗಾ" ಅಂತ ಅಮ್ಮ ಆಸ್ಫತ್ರೆಯ ಹಜಾರದಲ್ಲಿದ್ದ ಗಣಪನ ಮೂರ್ತಿಯನ್ನು ತೋರಿಸಿದರು..
ಆ ವಿನಾಯಕ..
"ನೋಡು ಶ್ರೀ ನಿನಗೆ ತಾಳ್ಮೆ ಕಲಿಯಬೇಕೆಂದರೆ ೧) ಸತ್ಯ ಹರಿಶ್ಚಂದ್ರನ ಕಥೆ ಕೇಳು
                                                                ೨) ಶ್ರೀಕೃಷ್ಣನ ಕಥೆ ಓದು
                                                                 ೩) ಕನ್ನಡದ ಜೀ ಟಿ.ವಿಯಲ್ಲಿ ಬರುವ ಮಹಾದೇವಿ ಧಾರವಾಹಿ ನೋಡು..

ಜೋರಾಗಿ ನಗಲು ಶುರುಮಾಡಿದೆ.. ಗಣಪನು ನಕ್ಕ.. ತಕ್ಷಣ... ತನ್ನ ಸೊಂಡಿಲನ್ನು ಮೇಲೆ ಮಾಡಿ ಉಶ್ .. ಸದ್ದು ಇದು ಆಸ್ಪತ್ರೆ ಎಂದು ಹೇಳುತ್ತಾ ತಾನೇ ನಕ್ಕ!!!