Wednesday, January 28, 2026

Raja & Burman... The Ultimate Jam!!!

ಕನ್ನಡವೋ ಇಂಗ್ಲೀಸೋ ಅಂತ ಗೊಂದಲವಿದ್ದಾಗ.. ತಾಯಿ ಮೊದಲು ಆಮೇಲೆ ಮಿಕ್ಕಿದ್ದು ಅಂತ ಮನಸ್ಸು ಹೇಳಿತು.. ಅಂಗಾಗಿ ಕನ್ನಡಲ್ಲಿ ಬರೆಯುವ ಅಂತ ನಿರ್ಧಾರವಾಯ್ತು.. 

ಮಹೇಶ್ ಮತ್ತು ಶ್ರುತಿ ಡಿಸೆಂಬರ್ ಹದಿನಾರು ೨೦೧೭ರಲ್ಲಿ ಒಂದು ಸಂಗೀತ ಸಂಜೆ ಜೀವ ಸ್ವರ ತಂಡದಿಂದ ಕಾರ್ಯಕ್ರಮದಲ್ಲಿ ಪರಿಚಯವಾದ ಸ್ನೇಹ.. ಅದು ಅದ್ಭುತ ಗೆಳೆತನಕ್ಕೆ ತಿರುಗಿ ಅಲೆಮಾರಿಯಾಗಿದ್ದ ನನಗೆ ಅನೇಕ ಚಾರಣಗಳಲ್ಲಿ ಜೊತೆಯಾದವರು. 

ಇವರದು ಸುಂದರ ಕುಟುಂಬ..ಸಂಗೀತ ಕುಟುಂಬ ಅಂದರೂ ತಪ್ಪಿಲ್ಲ.. ಅವರ ಪುಟ್ಟ ತುಂಟ ಮಗ ಮೊಬೈಲಿನಲ್ಲಿ ಆಟವಾಡೋದು ಇದ್ದರೂ.. ಯು ಟ್ಯೂಬ್ ನಲ್ಲಿ ಶಾಸ್ತ್ರೀಯ ಸಂಗೀತ ಹಾಕಿಕೊಂಡು ಅದರ ಜೊತೆ ಹಾಡುವುದು.. ಇವರ ಪರಂಪರೆಯನ್ನು ಮುಂದುವರೆಸುವ ಎಲ್ಲಾ ಲಕ್ಷಣಗಳು ಕಾಣುತ್ತಿವೆ.. ಅದಕ್ಕೆ ಅಲ್ಲವೇ ಹೇಳೋದು ಬೆಳೆಯುವ ಪೈರು ಮೊಳಕೆಯಲ್ಲಿ ಅಂತ.. 

ಶ್ರೀಕಿ ನೀನು ಬರಬೇಕು.. (ಸರ್ ಸರ್ ಅಂತ ಇದ್ದ ಪರಿಚಯ.. ಹೋಗೋ ಬಾರೋ ಹಂತಕ್ಕೆ ಬಂದಿದೆ ಎಂದರೆ ನೋಡಿ ಗೆಳೆತನ ಒಂದು ಝರಿಯ ತರಹ ಸಣ್ಣ ಒರತೆಯಲ್ಲಿ ಶುರುವಾಗಿ ಜಲಪಾತವಾಗಿ ಸಾಗರ ಸೇರುತ್ತದೆ.. "ಸ್ನೇಹದ ಕಡಲಲ್ಲಿ ನೆನಪಿನ ದೋಣಿಯಲಿ ಪಯಣಿಗ ನಾನಮ್ಮ" ನನ್ನ ಆರಾಧ್ಯ ದೈವ ಶ್ರೀ ಪುಟ್ಟಣ್ಣ ಕಣಗಾಲ್ ಅವರ ಶುಭಮಂಗಲದ ಹಾಡು ನೆನಪಿಗೆ ಬಂತು)

ಬರ್ತೀನಿ.. ಬರೋಕೆ ಎಲ್ಲಾ ಪ್ರಯತ್ನ ಮಾಡುವೆ ಅಂತ ಆಶ್ವಾಸನೆ ಕೊಟ್ಟೆ.. ಬದುಕಿನ ಜಂಜಾಟದಲ್ಲಿ ಸ್ವಲ್ಪ ಮನಃಶಾಂತಿ ಬೇಕಿತ್ತು.. ಬದಲಾವಣೆ ಬೇಕಿತ್ತು.. ಇಂತಹ ಕಾರ್ಯಕ್ರಮವನ್ನು ಹೃದಯದಿಂದ ಸಂಭ್ರಮಿಸುವ ನನ್ನ ಮನದನ್ನೆ ಊರಿಗೆ ಹೋಗಿದ್ದಳು.. ಆ ಬೇಜಾರಿತ್ತು.. ಅವಳಿದ್ದಿದ್ದರೆ ಆ ಸಂಗೀತ ಸಂಭ್ರಮದಲ್ಲಿ ಅವಳನ್ನು ಹಿಡಿಯುವುದು ನನಗೆ ಕಷ್ಟವಾಗುತಿತ್ತು.. ಇರಲಿ ಇರಲಿ.. ಹೊರಟೆ ನನ್ನ ಸದ್ದಿಲ್ಲದೇ ಸಂಭ್ರಮಿಸುವ ನನ್ನ ಗೆಳತೀ ಅರ್ಥಾತ್ ಮಗಳ ಜೊತೆ ಹೊರಟೆ. 

ಎಲ್ಲರೂ ಅಪರಿಚಿತರು ಸಭಾಂಗಣದಲ್ಲಿ ನೆರೆದಿದ್ದರು.. ಎಲ್ಲರೂ ಅಪರಿಚಿತರೇ ಆದರೆ ಎಲ್ಲರನ್ನೂ ಬಂಧಿಸಿದ್ದು ಸಂಗೀತದ ಸೆಳೆತ ಅದರಲ್ಲೂ ಇಬ್ಬರು ದಿಗ್ಗಜರು.. 

ಒಬ್ಬರು ಮಾಮೂಲಿ ಎನಿಸುವ ಸಂಗೀತಕ್ಕೆ ಅನೇಕಾನೇಕ ವಿಭಿನ್ನವಾದ ಸದ್ದು ಮಾಡಬಲ್ಲ ಉಪಕರಣಗಳಿಂದ ನಾದದ ಜಾದೂ ಮಾಡುವ ಶ್ರೀ ರಾಹುಲ್ ದೇವ್ ಬರ್ಮನ್.. (ಮೇರೇ ಸಾಂನೆ ವಾಲೀ ಕಿಡಕಿ ಹಾಡಿನಲ್ಲಿ ಬಾಚಣಿಗೆ, ಡಬ್ಬ.. ಚುರಾಲಿಯ ಚಿತ್ರದಲ್ಲಿ ಗಾಜಿನ ಲೋಟ, ಮೆಹಬೂಬ ಮೆಹಬೂಬ ಹಾಡಿನಲ್ಲಿ ಖಾಲಿ ಗಾಜಿನ ಸೀಸೆಯನ್ನು ಊದಿ ಬರುವ ನಾದ)

ಇನ್ನೊಬ್ಬರು ಸವಾಲು ಹಾಕಿದರೆ ಅದಕ್ಕೆ ತಕ್ಕಂತೆ ಸವಾಲು ಗೆದ್ದು ಅವರು ಕೇಳಿದ್ದಕ್ಕಿಂತ ಅದ್ಭುತ ಸಂಗೀತ ಕೊಡುವ ಮಾಂತ್ರಿಕ ಶ್ರೀ ಇಳಯರಾಜ (ನನಗೆ ನೆನಪಿದ್ದಂತೆ ಸಂಧ್ಯಾರಾಗಂ ಸಿನೆಮಾದ ಹಿನ್ನೆಲೆ ಸಂಗೀತಕ್ಕೆ ಬರಿ ಕೊಳಲು ಮಾತ್ರ ಉಪಯೋಗಿಸಿದ್ದರು ಅಂತ.. ತಪ್ಪಿದ್ದರೆ ತಿದ್ದಿ .. ಅಗ್ನಿ ನಕ್ಷತ್ರಂ ಚಿತ್ರದ ರಾಜ ರಾಜಾಧಿರಾಜ ಹಾಡಿನಲ್ಲಿ ಬರಿ ಡ್ರಮ್ ಮತ್ತು ಅದರ ಜೊತೆವಾದ್ಯಗಳನ್ನು ಮಾತ್ರ ಉಪಯೋಗಿಸಿದ್ದು. ಕನ್ನಡದ ಗೀತಾ ಚಿತ್ರದ ಕೇಳದೆ ನಿಮಗೀಗ ಹಾಡಿನಲ್ಲಿ ವಯೊಲಿನ್ ವಾದ್ಯಗಾರರಿಗೆ ವಯೊಲಿನ್ ಕೆಳಗೆ ಇಟ್ಟು ಬರಿ ಬಾಯಲ್ಲಿ "ಜುಂಜುಂ ತನನ ನಾ" ಸದ್ದು ಮಾಡಿಸಿ ಹಾಡನ್ನು ಗೆಲ್ಲಿಸಿದ್ದು.. ಅಣ್ಣಾವ್ರ ಚಿತ್ರಗಳ ಹಾಡಿನಲ್ಲಿಯೇ ತೀರಾ ವಿಶಿಷ್ಟ್ರವಾದ ಸಂಗೀತ ಕೊಟ್ಟಿದ್ದು ನೀ ನನ್ನ ಗೆಲ್ಲಲಾರೆ ಚಿತ್ರದ ಹಾಡುಗಳ ಸಂಗೀತ.. ಹೀಗೆ ಒಂದೇ ಎರಡೇ)  

ಈ ಕಾರ್ಯಕ್ರಮದ ಹೆಸರು ರಾಜ & ಬರ್ಮನ್ ಅಲ್ಟಿಮೇಟ್ ಜಾಮ್ ಅಂತ ಅಡ್ಡ ಪಂಕ್ತಿ ಇದ್ದ ಈ ಕಾರ್ಯಕ್ರಮ ಅದ್ಭುತ ಪ್ರತಿಭೆಗಳ ಸಮಾಗಮ.. ಒಬ್ಬೊಬ್ಬರು ಅವರವರ ಕಾರ್ಯಕ್ಷೇತ್ರದಲ್ಲಿ ಘಟಾನುಘಟಿಗಳು.. ಅವರೆಲ್ಲ ಒಂದು ಛಾವಣಿಯ ಅಡಿ ಸೇರಿದ ಮೇಲೆ ಸಂಗೀತ ಬರ್ಸಾತ್ ಅಂದರೆ ಸಂಗೀತ ಮಳೆಯೇ ಬರಬೇಕಲ್ಲವೇ.. ಅದೇ ಬಂದಿದ್ದು.. 

ಸಿಗರೇಟು ಹಚ್ಚಿಕೊಂಡ ಸಿ ಐ ಡಿ ವಿಜಯ್ ಕ್ರೈಂ ಅಂದರೆ ಅಪರಾಧ ನೆಡೆದ ಜಾಗದಲ್ಲಿ ಸುಮಾರು ಹೊತ್ತು ನಿಂತಿದ್ದ.. ಅಪರಾಧ ನೆಡೆದ ಬಗ್ಗೆ ಸುಳಿವು ಹುಡುಕಿದಷ್ಟು ಸಿಗುವುದು ಕಠಿಣವಾಗುತ್ತಲೇ ಇತ್ತು.. ಅದಕ್ಕೆ ಸ್ವಲ್ಪ ವಿರಾಮಕ್ಕೆ ಅಂತ ಹೊರಗೆ ಬಂದು ಸಿಗರೇಟು ಹಚ್ಚಿದ್ದ.. 

ಪಕ್ಕದ ಕಟ್ಟಡದಲ್ಲಿ ಜೋರಾದ ಸಂಗೀತ ತರಂಗಗಳು ಕೇಳುತ್ತಿದ್ದವು.. ಸರಿ ಒಂದು ನಿಮಿಷ ನೋಡಿ ಬರೋಣ ಅಂತ ಆ ಚುಮುಚುಮು ಚಳಿಯಲ್ಲಿದ್ದರೂ ಅರ್ಧ ಸೇದಿದ್ದ ಸಿಗರೇಟು ಬಿಸಾಕಿ ಸಂಗೀತ ಕಾರ್ಯಕ್ರಮಕ್ಕೆ ಬಂದ.. 

ಆಗಲೇ ವೇದಿಕೆಯಲ್ಲಿ ಉದ್ಘಾಟನೆ ಮಾಡಿದ್ದೆ ಅನ್ನುವ ಕುರುಹು ಸೂಚಿಸಿದ್ದ ದೀಪದ ಕಂಬ ಇತ್ತು.. ಸಂಗೀತಮಯ ಯಾತ್ರೆ ಶುರುವಾಗಿತ್ತು.. 

ವಿರಾಮಕ್ಕೆಂದು ಬಂದಿದ್ದರೂ.. ಅವನ ತಲೆಯೊಳಗೆ ಅಪರಾಧಿ ಯಾರು. ಹೇಗೆ ಕಂಡು ಹಿಡಿಯೋದು ಇದೆ ತಲೆಯೊಳಗೆ ಓಡುತ್ತಿತ್ತು. ಎಷ್ಟೇ ಆದರೂ ವೃತ್ತಿ ಅಲ್ಲವೇ.. 

ಸುಮ್ಮನೆ ಕಂಬಕ್ಕೆ ಒರಗಿಕೊಂಡು ನಿಂತು ಕಾರ್ಯಕ್ರಮ ನೋಡುತ್ತಿದ್ದವ .. ವಂದೇ ಮಾತರಂ ಹಾಡು ಶುರುವಾದ ತಕ್ಷಣ.. ಏಕ್ ದಂ ಖಡಕ್ ಆಗಿ ನಿಂತ.. ಹಾಡು ಪೂರ್ಣವಾದಂತೆ ತುಟಿಯಂಚಿನಲ್ಲಿ ನಗೂ ಎಂದಿದೆ ಮಂಜಿನ ಬಿಂದು  ಎಂಬ ಮಾತಿನಂತೆ ನಗು ಸುಳಿಯಿತು.. ಏನೋ ಹೊಳೆಯಿತು.. ಅಪರಾಧ ನೆಡೆದ ಮಾಹಿತಿಯನ್ನು ಪೂರ್ತಿ ಮತ್ತೆ ಮೊದಲಿಂದ ಯೋಚಿಸ ತೊಡಗಿದ.. ಹೊರಗೆ ಸಣ್ಣ ಮಳೆ ಅದಕ್ಕೆ ತಕ್ಕಂತೆ ಈ ಹಾಡು ವೇದಿಕೆಯಿಂದ .. ರಿಂ ಜಿಮ್ ಗಿರೆ ಸಾವನ್ ಬರುತ್ತಿತ್ತು.. 

ಆಪಾದಿತರು ಯಾರು ಅಂತ ಗೊತ್ತಿಲ್ಲ.. ಆದರೆ ಅಲ್ಲಿದ್ದ ಸೆಕ್ಯೂರಿಟಿ ಗಾರ್ಡ್ ಹೇಳಿದ ವಿಚಾರಗಳು ತಲೆಯೊಳಗೆ ರುಬ್ಬುತ್ತಿತ್ತು.. ಮಾತೆ ಮಂತ್ರಮು ಮನಸೇ  ಬಂಧಮು.. ತಲೆಯೊಳಗೆ ಏನೋ ದಿಗ್ಗನೆ ಬಲ್ಬ್ ಹತ್ತಿದ ಹಾಗೆ ಆಯ್ತು. 

ಇದು ಸುಮ್ಮನೆ ನೆಡೆದಿರೋ ಘಟನೆಯಲ್ಲ. ಇದರ ಹಿಂದೆ ಏನೋ ಉದ್ದೇಶ ಇದೆ.. ಸೆಕ್ಯೂರಿಟಿ ಗಾರ್ಡ್ ಹೇಳುತ್ತಲೇ ಇದ್ದ ಸರ್ ಕಳ್ಳತನ ಏನೂ ನೆಡೆದ ಸೂಚನೆಯಿಲ್ಲ ಆದರೆ ಅಲ್ಲಿರುವ ಸಾಕ್ಷಿಗಳು ಹೇಳುತ್ತಿವೆ ಚುರಾಲಿಯ ಅಂತ .. ಯಾಕೋ ಮತ್ತೆ ತಲೆ ಮೊಸರಿನ ಗಡಿಗೆಯಾಯಿತು.. ಮತ್ತೆ ಹೊರಕ್ಕೆ ಬಂದ.. ಸಭಾಂಗಣದಲ್ಲಿ ದಂ ಮಾರೋ ದಂ ಹಾಡು  .. ಇವನ ಕೈಯಲ್ಲಿ ದಂ... ಹಹಹಹ 

ಸರಿ ಒಂದಷ್ಟು ಹೊಗೆ ಹೊರಗೆ ಹೋದ ಮೇಲೆ .. ಅವನಿಗೆ ಗೊತ್ತಾಯಿತು.. ಇದು ನಾ ಒಬ್ಬನೇ ಆಗೋಲ್ಲ ಬದಲಿಗೆ ಸುಳಿವುಗಳ  ಜೊತೆಯಲಿ ಜೊತೆಯಲಿ ಸಾಗಿದರೆ ಮಾತ್ರ ಈ ಕೇಸಿಗೊಂದು ತಾರ್ಕಿಕ ಅಂತ್ಯ ಕೊಡಬಹುದು ಅಂತ  .. .. ಇಳಯನಿಲ ಪೊಝೀಗಿರತೇ ಅರ್ಥಾತ್ ಬೆಳೆಯುತ್ತಿರುವ ಚಂದಿರ  ಹೊಳೆಯುತ್ತಿದ್ದಾನೆ ಅಂದರೆ ತನ್ನ ಕೇಸಿಗೆ ಸುಳಿವು ಸಿಗುತ್ತಿದೆ.. ಎಂದು ಒಂದಷ್ಟು ಖುಷಿಯಾಯಿತು..

ಅಷ್ಟರಲ್ಲಿ ಅವನ ಮೊಬೈಲ್ ಕೂಗತೊಡಗಿತು.. ತನ್ನ ಪ್ರೇಯಸಿ.. ಅವನ ಹೃದಯ ಬಡಿತ ಏರಿತು.. ಅದಕ್ಕೆ ತಕ್ಕ ಹಾಗೆ ಓ ಮೇರೇ ದಿಲ್ ಕೆ ಚೈನ್ .. ಅದರಲ್ಲಿನ ಒಂದು ಸಾಲು "ತುಂ ಜೋ ಪಕಡಲೋ ಹಾಥ್ ಮೇರಾ ದುನಿಯಾ ಬದಲ್ ಸಕ್ಕತಾ ಹೂ ಮೇ" ವಾಹ್.. ಥ್ಯಾಂಕ್ ಯು ಕಣೆ.. ಒಂದು ಕೇಸಿನ ಮೇಲೆ ಇದ್ದೀನಿ ಆಮೇಲೆ ಮಾಡ್ತೀನಿ ಅಂತ ಫೋನ್ ಕಟ್ ಮಾಡಿದ.. 

ಅವನಿಗೆ ಸಿಕ್ಕಿದ ಸುಳಿವು... ಹೊಳೆದ ಸೂಚನೆಗಳು .. ಅದಕ್ಕೆ ಸಿಗಬಹುದಾದ ಮಾರ್ಗ .. ಎಲ್ಲವೂ ಒಂದು ಹಂತಕ್ಕೆ ಅವನಿಗೆ ಖುಷಿ ಕೊಡುತ್ತಿತ್ತು.. ಅವನಿಗಿಷ್ಠವಾದ ದೈವ ಶಿವನಿಗೆ ಮನದಲ್ಲಿಯೇ ವಂದಿಸಿದ.. ಪ್ರಾರ್ಥಿಸಿದ.. ಓಂ ಶಿವೋಹಂ .. ಬಾಲ್ಯದಲ್ಲಿ ಚಿನ್ನ ತಾಯ್ವಳ ಅಂದರೆ ಚಿನ್ನದಂತಹ ತನ್ನ ತಾಯಿ ಕಳಿಸಿದ ಶ್ಲೋಕವದು.. ತನಗೆ ಸಂಕಷ್ಟವಾದಾಗೆಲ್ಲ ಶಿವನನ್ನು ನೆನೆಸಿಕೊಂಡು ಪ್ರಾರ್ಥಿಸುತಿದ್ದ .. ಆಗ ಶಿವನೇ ತನ್ನ ಮುಂದೆ ಬಂದು ನಿಂತು ಬಾಹೋ ಮೇ ಚಲಿ ಆವ್ ಅಂತ ಎರಡೂ ಕೈಯಿಂದ ತನ್ನನ್ನು ಅಪ್ಪಿಕೊಂಡು ಸಂತೈಸುತ್ತಿದ್ದ ಅನ್ನುವ ಅನುಭವ ಸದಾ ಆಗುತಿತ್ತು ಈ ಶ್ಲೋಕವನ್ನು ಹೇಳಿಕೊಂಡಾಗ..  ಏನೇ ಸವಾಲು ಇದ್ದರೂ.. ಏನೇ ಸಂಕಷ್ಟಗಳು ಇದ್ದರೂ "ಏ ಜಿಂದಗಿ ಗಲೇ ಲಗಾಲೆ"  ಅಂತ ಖುಷಿಯಿಂದ ಹಾಡುತ್ತಿದ್ದದ್ದು ನೆನಪಿಗೆ ಬಂದು ತನ್ನ ಪ್ರೇಯಸಿ ಯಾವಾಗಲೂ ನನ್ನನು ಕಂಡು "ಯಾವ ಶಿಲ್ಪಿ ಕಂಡ ಕನಸು ನೀನೋ.. ನನ್ನ ಜೀವ ನೀನು.. ನಿನ್ನ ಪ್ರಾಣ ನಾನು ದೇವರಾಣೆ ನಂಬು ನನ್ನನೂ" ಅಂತ ಹಾಡಿದಾಗೆಲ್ಲ  ನಾನು ಕಡಿಮೆ ಏನೂ ಇರದೇ "ಪಿಯ ತೂ ಅಬ್ ತೋ ಆಜಾ" ಅವಳಿಗಿಷ್ಟವಾದ ಹಾಡನ್ನು ನಾ ಹಾಡುತಿದ್ದೆ..  ಆಗ ಅವಳ ಮೊಗದಲ್ಲಿ ಕಾಣುತ್ತಿದ್ದದ್ದು "ನಗುವ ನಯನ ಮಧುರ ಮೌನ"  .. ಮನಸಿನ ಅಣುಅಣುವಲ್ಲಿಯೂ  ಪಂಚಮವೇದವಾಗಿದ್ದ ಪ್ರೇಮದ ನಾದ ವೇದಂ ಅಣುಅಣುವುಲು ಅಂತ ಮುದ್ದಾದ ಅನುಭವ ಕೊಡುತ್ತಿತ್ತು.. .. 

ಅರೆ ಇದೇನು ಕೇಸಿನ ವಿಷಯ ಬಿಟ್ಟು ಬೇರೇನೋ ಯೋಚನೆ ಮಾಡುತ್ತಿದ್ದೇನೆ.. ಅಂತ ಮತ್ತೆ ಸಿಗರೇಟ್ ಹಚ್ಚಿದ.. ಹಾಡಿನ ಸಂಜೆ ಮುಂದುವರೆದಿತ್ತು.. ಹಾಡಬೇಕು ಅಂದು ಕೊಂಡು ಆದರೆ ಸಮಯದ ಅಭಾವದಿಂದ ಹಾಡಲು ಆಗದ ಮಧುರ ಹಾಡುಗಳ ತುಣುಕು ತುಣುಕುಗಳನ್ನು ಸೇರಿಸಿ ಗುಂಪು ಗುಂಪು ಹಾಡು ಅಂದರೆ medley of songs ಹಾಡುತ್ತಿದ್ದರು.. ಒಂದಕ್ಕಿಂತ ಒಂದು ಅದ್ಭುತವಾದ ಹಾಡುಗಳು.. ಮನಸ್ಸಿಗೆ ಮುದ ಕೊಡುತ್ತಿತ್ತು.. ಯಾಕೋ ಅಲ್ಲಿಂದ ಹೊರಡೋಕೆ ಮನಸ್ಸು ಆಗುತ್ತಿರಲಿಲ್ಲ.. ಬಲವಂತವಾಗಿ ಹೆಜ್ಜೆ ಹೊರಗಿಡಲು ಹೋದರೆ ಸಂಗೀತ ವಾದ್ಯಗಳ ಮಹಾಸಂಗಮ instrumental medley ಶುರು ಮಾಡಿದರು.. ತಬಲಾ, ಟ್ಯಾಂಗೋ, ಗಿಟಾರ್, ರಿದಮ್ ಪ್ಯಾಡ್, ಕೀ ಬೋರ್ಡ್.. ಇವುಗಳ ಜೊತೆಯಲ್ಲಿ ಡ್ರಮ್ಸ್.. ಆಹಾ ಅದ್ಭುತ ಸಂಗೀತ ಸುರಿಮಳೆ ನೆಡೆದಿತ್ತು.. 

ಮನಸ್ಸಿಗೆ ಸ್ವಲ್ಪ ಮೌನ ಬೇಕು ಅನಿಸಿತು.. ಮೌನ ಮೇಲುನೋಯಿ ಹಾಡು ಮನಸ್ಸಿಗೆ ಒಂದು ಮಟ್ಟಿಗೆ ಸಮಾಧಾನ ತಂದು ಕೊಟ್ಟಿತು..   ಸಮುದ್ರದಲ್ಲಿ ದಡದಲ್ಲಿ ನಿಂತು ಅಲೆಗಳ ಅಬ್ಬರಗಳ ಮುಂದೆ ಮನಸ್ಸನ್ನು ಹತೋಟಿಗೆ ತರುತ್ತಾ ತನ್ನ ಪ್ರೇಯಸಿಯನ್ನು ಒಮ್ಮೆ ನೆನೆದು "ಸಾಗರ ಕಿನಾರೆ ದಿಲ್ ಏ ಪುಕಾರೆ"  ಅಂತ ಮನಸ್ಸಲ್ಲಿ ಹಾಡಿಕೊಂಡ.

ಸತತವಾಗಿ ಸುಮಾರು ಏಳೆಂಟು ದಿನಗಳಿಂದ ಅದು ಇದು ಕೇಸು.. ತನಿಖೆ, ಅದರ ಸುಳಿವುಗಳ ಮಧ್ಯೆ ಪರಿಹಾರ, ಅದಕ್ಕೆ ಒಂದು ತಿರುವು ಹೀಗೆ ನೊರೆಂಟು ತಾಕಲಾಟಗಳಲ್ಲಿ ಅವನಿಗೆ ನಿದ್ದೆ ಒಂದು ಮರೀಚಿಕೆಯಾಗಿತ್ತು.. ಅದನ್ನು ಅರಿತಿದ್ದ ಅವಳು ಅವನಿಗೆ ದಿನವೂ ಮಲಗುವ ಮುಂಚೆ.. "ನೋಡು ವಿಜಯ್ ನೀನು ನನ್ನ ಮಡಿಲಲ್ಲಿ ಮಲಗಿದ್ದೀಯ ಅಂತ ಭಾವಿಸಿಕೊ.. ನಾನು ಈ ಲಾಲಿಹಾಡನ್ನು ಹೇಳುತ್ತೇನೆ ನೀನು ನಿದ್ದೆ ಮಾಡುವಿಯಂತೆ.. ಸರಿ ನಾ" ಮಕ್ಕಳಾಟ ಅನ್ನಿಸಬಹುದು. ಭಾವಗಳ ಹುಚ್ಚು ಎನ್ನ ಬಹುದು ಆದರೆ ಪ್ರತಿ ನಿತ್ಯ ಅವು ಮಲಗುವ ಮುಂಚೆ ಸುರ್ ಮೈ ಅಕ್ಕಿಯೋ ಮೇ ಹಾಡು ಕೇಳಿಯೇ ಮಲಗುತ್ತಿದ್ದದ್ದು . 

ಕೆಲವೊಮ್ಮೆ ಮಧ್ಯ ರಾತ್ರಿ ಎಚ್ಚರವಾಗಿಬಿಡುತ್ತಿತ್ತು..  ಅಪರಾಧಿಗಳನ್ನು ಹುಡುಕುತ್ತಾ "ಜಾನೇ ಜಾ ಡುಂಡೂತ ಫಿರ್ ರಹ.. ಯು ತುಮ್ ರಾತ್ ದಿನ್ ಮೇ ಯಹಾ ಸೆ ವಹಾ" ಅಂದು ಹಾಡಿಕೊಂಡು ಬೈಕ್ ಹತ್ತಿ ರಾತ್ರಿಯೆಲ್ಲಾ ಹುಡುಕುತಿದ್ದದ್ದು ಉಂಟು.. ಅಪರಾಧಿಗಳಿಗೆ ಗೊತ್ತಿತ್ತು ವಿಜಯ್ ಒಬ್ಬ ಖಡಕ್ ಅಧಿಕಾರಿ ನಮ್ಮನ್ನು ಹುಡುಕುತ್ತ ಹಾಡುತ್ತಾ ಬಚ್ಚನಾ ಏ ಹಸೀನೋ ಅಂತ ಬಂದೆ ಬರುತ್ತಾನೆ. ಅಂತ.. 

ಇಷ್ಟೆಲ್ಲಾ ಕಷ್ಟ ಪಟ್ಟು.. ಹಗಲು ರಾತ್ರಿ ಪರಿಶ್ರಮ ಪಟ್ಟು ಕೇಸನ್ನು ತಾರ್ಕಿಕವಾಗಿ ಮುಗಿಸಿದಾಗ ಅವನಿಗರಿವಿಲ್ಲದೆ ಹಾಡು ಸಂತೋಷಕ್ಕೆ ಹಾಡು ಸಂತೋಷಕ್ಕೆ ಅಂತ ಜೋರಾಗಿ ಹಾಡಿಕೊಂಡು ಖುಷಿ ಪಡುತ್ತಿದ್ದ... 

ಇಂದು ಹಾಗೆ ಆಯಿತು.. ಐದಾರು ಸಿಗರೇಟುಗಳು.. ಸೆಕ್ಯೂರಿಟಿ ಗಾರ್ಡ್ ಹೇಳಿದ ಮಾತುಗಳು.. ತನ್ನ ತಲೆಯೊಳಗೆ ಮೂಡಿದ ವಿಚಾರ ಸರಣಿಗಳು.. ಹಾಡಿನ ಸಂಭ್ರಮ.. ಹಾಡಿನ ಮಧ್ಯೆ ತನ್ನ ಬಾಲ್ಯ, ತನ್ನ ಪ್ರೇಯಸಿ.. ತನ್ನ ವೃತ್ತಿ.. ಅವುಗಳ ಕೇಸುಗಳು .. ಅಪರಾಧಿಗಳ ಹೃದಯದಲ್ಲಿ ಮೂಡಿಸಿದ್ದ ಭಯ.. ಎಲ್ಲವೂ ಅವನಿಗೆ ಹೊಸ ಚೈತನ್ಯ ತಂದುಕೊಟ್ಟಿತು.. ಸಂಗೀತ ಸಂಜೆಯೂ ಮುಗಿದಿತ್ತು.. ತನ್ನ ಕೇಸಿಗೂ ಒಂದು ಅಂತ್ಯ ಸಿಕ್ಕಿತ್ತು.. ಅಪರಾಧಿಯನ್ನು ಹಿಡಿದು ಸಲಾಕೆಗಳ ಹಿಂದೆ ನಿಲ್ಲಿಸಲು ಸಂತೋಷಕ್ಕೆ ಈ ಕೇಸು ಸಂತೋಷಕ್ಕೆ ಅಂತ ಹಾಡಿಕೊಂಡು ಜೀಪು ಹತ್ತಿದ.. 

                                                                   **************
ನನ್ನ ಬೈಕೋತಾ ಇದ್ದೀರಾ ಆಲ್ವಾ... ಸಿ ಐ ಡಿ ಕೇಸಿನ ವಿಚಾರ ಏನಾಯ್ತು ಅಂತ.. ಅರೆ ಬಿಡ್ರಿ ವಿಜಯ್ ಗಟ್ಟಿ ಆಫೀಸರ್ ಹೇಗೋ ಆ ಕೇಸನ್ನು ಮುಗಿಸುತ್ತಾನೆ.. ಅವನಿಗೆ ಇನ್ನೊಂದು ಮೆಡಲ್.. ಇನ್ನೊಂದು ಪ್ರಮೋಷನ್, ಇನ್ನಷ್ಟು ಹೆಸರು.. ಇದು ಅವನ ವೃತ್ತಿ ಬದುಕಿನಲ್ಲಿ ಮಾಮೂಲಿ.. ಜೊತೆಗೆ ಪ್ರೇಯಸಿಯ ಜೊತೆ ಪ್ರೀತಿಯ ಮಾತುಗಳು.. ಅಮ್ಮನ ಆರೈಕೆ.. ಮೂವತ್ತರ ಆಸುಪಾಸಿನಲ್ಲಿದ್ದಾನೆ.. ಮುಂದಿನ ವರ್ಷ ಮದುವೆ ಫಿಕ್ಸ್ ಆಗಿದೆ.. ಹೊಸ ಬದುಕು ಶುರುವಾಗುತ್ತದೆ.. 

ಆದರೆ ಇಲ್ಲಿ ಹೇಳ್ರಿ.. ಇಡೀ ಸಭಾಂಗಣವನ್ನೇ ಕುಣಿಸಿದ ಮಹೇಶ್ ಶ್ರುತಿ ಅವರ ತಂಡ.. ನೆರೆದಿದ್ದ ನೂರಾರು ಸಂಗೀತ ಪ್ರಿಯರು ಸಾರ್ಥಕ ಭಾವದಿಂದ ಗಾಯಕರ ತಂಡವನ್ನು ಅಭಿನಂದಿಸಿ, ಅವರ ಜೊತೆಗೆ ಸೆಲ್ಫಿ ತೆಗೆದುಕೊಂಡು ... ಫೋಟೋಗಳಿಗೆ ನೂಕು ನುಗ್ಗುಲು ಇದ್ದರೂ ಬೇಸರಿಸದೆ .. ಎಲ್ಲರಿಗೂ ಮುಗುಳುನಗೆ ಬೀರುತ್ತಾ.. ಸಂಗೀತ ರಸಿಕರಿಗೆ ಅಭಿನಂದನೆ ಸಲ್ಲಿಸೋದು.. ಮತ್ತೆ ಸಂಗೀತ ವಾದ್ಯಗಾರರನ್ನು ಪರಿಚಯ ಮಾಡಿಕೊಂಡು ಅವರ ಪ್ರತಿಭೆಯನ್ನು ಹೇಳುವುದು.. ಇವೆಲ್ಲವೂ ನಮ್ಮ ಸಂಭ್ರಮಕ್ಕೆ ಹೆಚ್ಚಿನ ಮೈಲೇಜ್ ನೀಡುತ್ತದೆ ಅಲ್ಲವೇ.. 

ನಿಜ.. ಹಾಡಿದ ಅಷ್ಟು ಹಾಡುಗಳೂ ಅದ್ಭುತವಾಗಿದ್ದವು.. ರಾಜ ಬರ್ಮನ್ ಜುಗಲ್ಬಂದಿ ಒಂದು ಅದ್ಭುತ ಕ್ಷಣಗಳು.. ಹೇಳುತ್ತಾರೆ ಎರಡು ಮಾದಗಜಗಳು ಸೆಣೆಸಾಡಿದರೆ ಹುಲ್ಲುಗಳಿಗೆ ಸಂಭ್ರಮವಂತೆ ಕಾರಣ ಅವುಗಳ ಕಾಲುತುಳಿತದಲ್ಲಿ ಮತ್ತೆ ಹೊಸ ಚೈತನ್ಯ ತುಂಬಿಕೊಂಡು ನಿಲ್ಲಬಹುದು ಅಂತ. .. ನಿಜವಲ್ಲವೇ ಬಳಲಿ ಬೆಂಡಾದ.. ಒತ್ತಡಗಳ ಹಿಮಾಲಯಗಳನ್ನೇ ಹೆಗಲಿಗೆ ಏರಿಸಿಕೊಂಡು, ವೃತ್ತಿ ಬದುಕಿನ ಸಮಸ್ಯೆಗಳು ಎಲ್ಲವನ್ನೂ ಒಂದು ಕಡೆ ಕಟ್ಟಿಟ್ಟು ನಲಿಯುವ ಈ ಕ್ಷಣಗಳು ಬದುಕಿಗೆ ಸಂಭ್ರಮ ನೀಡುತ್ತದೆ.. ಮತ್ತು ಸಂಭ್ರಮದ ಪ್ರಮಾಣವನ್ನು ಹೆಚ್ಚಿಸುತ್ತದೆ. 

ಮಹೇಶ್ ಅದ್ಭುತ ಹಾಡುಗಾರ. ಜೇನು ದನಿಯ ಗಾಯಕ ಅಂತ ನಾ ಸದಾ ಹೇಳುತ್ತಿರುತ್ತೇನೆ.. ಅವರ ಧ್ವನಿಯಲ್ಲಿ ಕಾಣದ ಕಡಲಿಗೆಹಾಡನ್ನು ಸುಮಾರು ಎರಡೂ ಮೂರು ಸಾವಿರ ಎತ್ತರದ ಬೆಟ್ಟದ ಮೇಲೆ ಕೂತು ಕೇಳಿದ್ದು ಅದ್ಭುತ ಅನುಭವ.. 

ಶೃತಿ  .. ಇವರ ಸಂಗೀತ ಶೃತಿ .. ಶ್ರುತಿಗೆ ಸಂಗೀತ ಎರಡಕ್ಕೂ ಇವರು ಸಲ್ಲುವವರು.. ಇವರನ್ನು ನೋಡಿದರೆ ಅರೆ ಈಕೆ ಎತ್ತರದ ಸ್ಥಾಯಿಯಲ್ಲಿ ಹಾಡಬಲ್ಲರೇ ಎಂದು ಕೊಂಚ ಅನುಮಾನಿಸಿದರೆ ಮುಗೀತು ಪಿಯ ತೂ ಅಬ್ ತೊ ಆಜಾ ಹಾಡನ್ನು ಕೇಳಿ.. ಹಾಗೂ ಅನೇಕ ಕಾರ್ಯಕ್ರಮಗಳಲ್ಲಿ ಇವರ ಎತ್ತರದ ಸ್ಥಾಯಿಯಲ್ಲಿ ಉಲಿಯುವ ಹಾಡುಗಳನ್ನು ಕೇಳಿದ್ದೇನೆ.. 
 
ಸುನೀತಾ ಮುರಳಿ ಅಲಿಯಾಸ್ ಜೋಗಿ ಸುನೀತಾ.. ಅಬ್ಬಬ್ಬಾ ನವಿರಾದ ಗೀತೆಗಳನ್ನು ಕೇಳುವಾಗ ಇಂತಹ ಧ್ವನಿ ಅನಿಸುತ್ತದೆ.. ಹಾಗೆಯೇ ದಂ ಮಾರೋ ದಂ ಹಾಡುಗಳನ್ನು ಕೇಳುವಾಗ ಇವರ ರೇಂಜ್ ಗೊತ್ತಾಗುತ್ತದೆ.. ಅದ್ಭುತ ಗಾಯಕಿ 

ಚಿನ್ಮಯ್ ... ಆಗಿನ ರಿಯಲ್ ಸಂಗೀತ ಪ್ರತಿಭೆಗಳನ್ನು ಹೊರತರುತ್ತಿದ್ದ ಸಂಗೀತದ ರಿಯಾಲಿಟಿ ಷೋಗಳಲ್ಲಿ ಗೆದ್ದು ಎಲ್ಲರ ಮನಸ್ಸಿನಲ್ಲಿ ಕೂತಿದ್ದ ಚಿನ್ಮಯ್ ಇಲ್ಲಿ ಎಲ್ಲಾ ತರಹದ ಹಾಡುಗಳಿಗೂ ಸಾತ್ ಕೊಡುತ್ತಿದ್ದದ್ದು ಮತ್ತು ಸಂಗೀತ ರಸಿಕರನ್ನು ಸಂಗೀತ ಅಲೆಯಲ್ಲಿ ತೇಲಾಡಿಸಿದ್ದು ಅದ್ಭುತವಾಗಿತ್ತು.. ಬಚ್ನ ಏ ಹಸಿನೋ .. ಇಡೀ ಸಭಾಂಗಣವೇ ಕುಣಿಯುತಿತ್ತು.. ಸುರ್ ಮೈ ಅಕ್ಕಿಯೋ ಮೇ ಹಾಡಿನಲ್ಲಿ ಎಲ್ಲರೂ ಲಾಲಿ ಹಾಡಿಗೆ ತೂಗಾಡುತ್ತಿದ್ದರು.. 

ಸಂಗೀತ ಮಾಂತ್ರಿಕರು ವಾದ್ಯಗಳ ಜೊತೆಯಲ್ಲಿದ್ದರು.. ಎಲ್ಲರ ಹೆಸರುಗಳು ಪರಿಚಯವಿರಲಿಲ್ಲ.. ಆದರೆ ಅದ್ಭುತ ಮಾಂತ್ರಿಕರಿಗೆ ಒಂದು ನಮನ ನನ್ನ ಮತ್ತು ಎಲ್ಲಾ ಸಂಗೀತ ಪ್ರಿಯರ ಪ್ರಪಂಚದಿಂದ.. 

ಒಂದು ಸುಂದರ ಸಂಜೆ ಅದ್ಭುತವಾಗಿ ಕಳೆದದ್ದು ಸಂತಸ ತಂದಿತು.. ಬೆಳದಿಂಗಳ ಮಳೆಯಲ್ಲಿ ಮಿಂದ ಅನುಭವ.. ಬದುಕಿಗೆ ಇನ್ನಷ್ಟು ಉತ್ಸಾಹ ತುಂಬಿಕೊಳ್ಳಲು ಕಾರಣವಾಯಿತು.. 

ಅದಕ್ಕಾಗಿ ಈ ಸುಂದರ ಸಂಜೆಯನ್ನು ಆಯೋಜಿಸಿದ್ದ, ಪ್ರಾಯೋಜಿಸಿದ್ದ ಎಲ್ಲಾ ಸಂಗೀತ ಮನಗಳಿಗೆ ಅಭಿನಂದನೆಗಳು.. ಇನ್ನೂ ಹೆಚ್ಚಿನ ಯಶಸ್ಸು, ಕೀರ್ತಿ, ಐಶ್ವರ್ಯ ಎಲ್ಲವನ್ನೂ ಆ ಭಗವಂತ ನೀಡಲಿ ಎಂದು ಹಾರೈಸುತ್ತೇನೆ..