ಬದುಕು ಸುಂದರವಾಗಬೇಕಾದರೆ ನೋಡುವ ನೋಟ ಸುಂದರವಾಗಿರಬೇಕು.. ಸೌಂದರ್ಯ ಎನ್ನುವುದು ಮನದಲ್ಲಿದೆ.. ಕಾಣುವ ನೋಟದಲ್ಲಿದೆ.. ಮನವು ಸುಂದರವಾಗಿದ್ದರೆ ಮನೆಯು ಸುಂದರ.. ವಿಚಿತ್ರವಾದ ವಾದದ ಸರಣಿ ಎನ್ನಿಸುತ್ತದೆ ಅಲ್ಲವೇ.. ಇದೆ ಕುತೂಹಲ ದೇವಲೋಕದಲ್ಲೊಮ್ಮೆ ಆಯಿತು.. ಅದರ ಬಗ್ಗೆ ಒಂದು ಚಿಕ್ಕ ಲೇಖನ.. ನಿಮ್ಮ ಕಣ್ಣ ಮುಂದೆ..
ವಿಜಯದಶಮಿಯ ದಿನ ಇಂದ್ರ ಸಭೆಯನ್ನು ಕರೆದ.. ಎಲ್ಲರೂ ಬರಲೇಬೇಕು ಎಂಬ ಆಗ್ರಹ ಕೂಡ ಇದ್ದದರಿಂದ ತಪ್ಪಿಸಿಕೊಳ್ಳುವ ಅವಕಾಶವೇ ಇಲ್ಲ.. ಎಲ್ಲರೂ ಬಂದರು.. ಸಮಾಧಾನವಾಗಲಿಲ್ಲ.. ಏನೋ ಕಾಣೆಯಾಗಿದೆ ಅಥವಾ ಕೊಂಚ ಕಡಿಮೆ ಆಗಿದೆ.. ಅನ್ನಿಸಿತು..
ಇಂದ್ರನ ಸಭೆಯನ್ನು ತಳಿರು ತೋರಣಗಳಿಂದ ಅಲಂಕರಿಸಲಾಗಿತ್ತು.. ಹೆಜ್ಜೆ ಹೆಜ್ಜೆಗೂ ದೀಪಗಳ ಸಾಲು.. ಶೋಭೆಯನ್ನು ಹೆಚ್ಚಿಸಿತ್ತು.. ಆದರೂ ಇಂದ್ರನ ಹಣೆಯಲ್ಲಿ ಮೂಡಿದ್ದ ಗೆರೆಗಳು ಕೆಳಗಿಳಿದಿರಲಿಲ್ಲ... ಎಲ್ಲರೂ ಸಿದ್ಧರಾಗಿದ್ದರೂ ಇಂದ್ರ ಸಭೆಯನ್ನು ನೆಡೆಸಲು ಮಾನಸಿಕವಾಗಿ ಸಿದ್ಧವಾಗಿರಲಿಲ್ಲ..
ದೇವಗುರು ಬೃಹಸ್ಪತಿ ಒಮ್ಮೆ ಇಂದ್ರನ ಮುಖವನ್ನು ಕೂಲಂಕುಷವಾಗಿ ಪರಿಶೀಲನೆ ಮಾಡಿದರು.. ಅಲ್ಲಿಯೇ ಇದ್ದ ನಾರದ ಮಹರ್ಷಿಗಳಿಗೆ ಕಣ್ಣು ಸನ್ನೆ ಮಾಡಿ ಹತ್ತಿರಕ್ಕೆ ಕರೆದು ಕಿವಿಯಲ್ಲಿ ಗುಸುಗುಸು ಮಾತಾಡಿದರು..
"ನಾರಾಯಣ ನಾರಾಯಣ" ನಾರದರು ಹೊರಟೇಬಿಟ್ಟರು ೩೦೦ ಕ್ಷಣಗಳಲ್ಲಿ ಬರುತ್ತೇನೆ ಎಂದು ಹೇಳುತ್ತಾ ತಮ್ಮ ತಂಬೂರಿಯೊಂದಿಗೆ ತೆರಳಿದರು..
ಬೃಹಸ್ಪತಿ ಇಂದ್ರನಿಗೆ.. "ನೀ ಕೊಂಚ ವಿರಮಿಸಿಕೊಂಡು ಬಾ.. ನಾವೆಲ್ಲಾ ಇಲ್ಲಿಯೇ ಇರುತ್ತೇವೆ.. ೪೦೦ ಕ್ಷಣಗಳು ಕಳೆದ ಮೇಲೆ ಬಾ"
ಮರು ಮಾತಿಲ್ಲದೆ ಇಂದ್ರ ಶಚೀದೇವಿಯೊಡನೆ ತನ್ನ ಕೋಣೆಗೆ ಹೊರಟ...
ಇತ್ತ ನಾರದರು.. ತಮ್ಮ ಬಳಿಯಿದ್ದ ಪಂಚಾಂಗವನ್ನು ಒಮ್ಮೆ ನೋಡಿದರು... ಆಶ್ವಯುಜ ಮಾಸ ಹುಟ್ಟಿತ್ತು.. ಕರುನಾಡಿನಲ್ಲಿ ದಸರೆಯ ಸಂಭ್ರವಿದೆ ಎಂಬ ವಿಷಯ ತಿಳಿದಿತ್ತು.. ಪ್ರತಿದಿನವೂ ನವದುರ್ಗೆಯರನ್ನು ಆರಾಧಿಸುವ ವಿಷಯ ಲೋಕಸಂಚಾರ ಮಾಡುವ ನಾರದರ ಗಮನದಲ್ಲಿತ್ತು..
ಸರಿ ಏನಾದರೂ ಮಾಡೋಣ ಅಂತ.. "ನಾರಾಯಣ ನಾರಾಯಣ" ಎಂದು ಹೇಳುತ್ತಲೇ ಬೃಹಸ್ಪತಿ ಹೇಳಿದ್ದ ಮಾತುಗಳು ಒಂದೊಂದಾಗಿ ಕಣ್ಣ ಮುಂದೆ ಬಂತು..
ಮನಸ್ಸು ತಹಬದಿಗೆ ಇಲ್ಲದಾಗ.. ಏನೋ ಬದಲಾವಣೆ ಬೇಕು ಎನಿಸಿದಾಗ.. ಮನದಲ್ಲಿದ್ದ ಚುಕ್ಕೆಗಳನ್ನು ಒಂದೊಂದಾಗಿ ಸೇರಿಸುತ್ತಾ ಹೋಗಬೇಕು.. ಸಪ್ತರ್ಷಿ ಮಂಡಲ ಕೂಡ ಹೀಗೆಯೇ ಇದೆ ಅಲ್ಲವೇ.. ಏಳು ನಕ್ಷತ್ರಗಳು ಒಂದಕ್ಕೆ ಒಂದು ಸರಳ ರೇಖೆಯಲ್ಲಿ ನಿಂತಾಗ ಸೊಗಸಾಗಿದೆ ಎನ್ನುವ ಮಾತು ಅರಿವಾಯಿತು..
ವಿಜಯದಶಮಿಯಿಂದ ಒಂದು ಹೆಜ್ಜೆ ಹಿಂದಕ್ಕೆ ಹೋಗೋಣ ಅನ್ನಿಸಿ ನಾರದ ಶುರುಮಾಡಿದರು..
ನೀಲಿ ನೀಲಿ ಆಗಸದಿ ತುಂಬಿರುವ ಮೋಡಗಳೇ.. ಬನ್ನಿ ಜೊತೆಯಲ್ಲಿ ನಾವು ನಿಲ್ಲೋಣ ಎಂದಿತು ರೇಖೆಗಳು. .. ಆಗಸದಿ ಮೂಡಿದ ಚಿತ್ರವನ್ನ ನಾರದರು ಹಾಗೆಯೇ ಇಂದ್ರನ ಸಭೆಯ ಬಾಗಿಲಿನ ಬಳಿ ಕಾಣುವಂತೆ ಮಾಡಿದರು.. ಚಕ್ರದೊಳಗೆ ಚಕ್ರ ಬಣ್ಣದೊಳಗೆ ಬಣ್ಣ.. ಗೆರೆಯೊಳಗೆ ಗೆರೆಗಳು.. ಒಂದಕ್ಕೆ ಒಂದು ಹೆಣೆದುಕೊಂಡು ಇಂದ್ರನಿಗೆ ಸಂತಸ ಮೂಡಿಸಲು ಸಜ್ಜಾಗಿ ನಿಂತವು..
|
ವಿಜಯ ಸಾಧಿಸುವ ವಿಜಯ ಮಾಲೆ ಸೂಸುವ ಹೆಜ್ಜೆ |
ಮಹಾನವಮಿ.. ಒಂಭತ್ತನೆಯ ದಿನ.. ಯಂತ್ರಗಳು ಮಂತ್ರಗಳ ಮಜ್ಜನದಿ ನಿಲ್ಲುವ ಸಮಯ..ಆಯುಧಗಳು ಹೊಳಪಿನಿಂದ ಕಾಣುವ ಸಮಯ.. ನೀಲಿ ಸೋದರಬಣ್ಣವಾಗಿದ್ದ ಈ ಪರ್ಪಲ್ ಬಣ್ಣ ಬಿಳಿಯ ಜೊತೆಯಲ್ಲಿ ಸೇರಿಕೊಂಡು ತನ್ನ ಹೊಸವಿನ್ಯಾಸದಲ್ಲಿ ಇಂದ್ರ ಒಂಭತ್ತನೆಯ ಹೆಜ್ಜೆಗೆ ಸ್ವಾಗತ ನೀಡಲು ನಿಂತವು..
|
ಒಂಬತ್ತು ಒಂಬತ್ತು ಒಂಬತ್ತು.. ನವಗ್ರಹಗಳ ಹೆಜ್ಜೆ |
ಶಕ್ತಿ ದೇವತೆಯ ಆರಾಧನೆ.. ಮನಕ್ಕೆ ಶಕ್ತಿ ನೀಡುವ ಈ ದೇವಿಯ ದಿನ.. ಮಧ್ಯದಲ್ಲಿ ದೇವಿಯ ಪ್ರಸನ್ನವಾದ ಮುಖ.. ಸುತ್ತಲೂ ಆಕೆಯ ಹೆಸರಿನ ಮಂತ್ರಗುಚ್ಛ.. ಅದನ್ನು ಸುತ್ತುವರಿದ ಸುಂದರ ವೃತ್ತ ದೇವಿಯ ಸೊಬಗನ್ನು ಇಮ್ಮಡಿಗೊಳಿಸಿತ್ತು.. ಇಂದ್ರನ ಎಂಟನೇ ಹೆಜ್ಜೆಗೆ ಸನ್ನದ್ಧಳಾಗಿ ನಿಂತವು..
|
ಶಕ್ತಿಶಾಲಿ ಹೆಜ್ಜೆ ಎಂಟನೇ ಮೈಲಿಗಲ್ಲು |
ಬದುಕಲು ವಿದ್ಯೆ ಬೇಕು.. ವಿದ್ಯೆ ಕಲಿಯಲು ಶಾರದೆಯ ಅನುಗ್ರಹವಿರಬೇಕು.. ಮಯೂರ ಬರಿ ವಾಹನಮಾತ್ರವಲ್ಲ.. ಸೊಬಗಿಗೂ ಹೆಸರಾಗಿದ್ದು ಎಲ್ಲರಿಗೂ ಗೊತ್ತು.. ವೀಣೆಯನ್ನು ಹಿಡಿದೇ ಬಂದ ಮಯೂರ ಸರಸ್ವತಿಯನ್ನು ತನ್ನ ಜೊತೆಯಲ್ಲಿ ಕರೆದುತಂದಿತ್ತು.. ಇಂದ್ರನ ಏಳನೇ ಹೆಜ್ಜೆಗೆ ಸಾಕ್ಷಿಯಾಗಲು ಬಂದವು..
|
ಸಪ್ತಮಾತ್ರಿಕೆಯರಿಗೆ ಮೀಸಲು ಏಳನೇ ಹೆಜ್ಜೆ |
ಇಂದ್ರ ಆರನೇ ಹೆಜ್ಜೆಗೆ ಹೇಗೆ ಅಲಂಕರಿಸೋಣ ಎಂದು ಯೋಚಿಸುತ್ತಿದ್ದಾಗ ಮೂಡಿ ಬಂದದ್ದು ಸರಳಾವಾದ ಆಯತಾಕಾರದ ಚಿತ್ತಾರವಿರುವ ಪಟ್ಟಿ.. ಮೂಲೆ ಮೂಲೆಗೆ ನಿಂತಿದ್ದ ತೋರಣದ ಮಾದರಿಯ ಚಿತ್ರಗಳು ಮಧ್ಯದಲ್ಲಿ ಪದುಮಾಲಂಕಾರ ನಾನಿರುವೆ ಎಂದಿತು..
|
ಶಿಸ್ತಾಗಿ ನಿಂತಿರುವ ಆರನೇ ಹೆಜ್ಜೆ ಗುರುತು |
ನೀರಿನಲ್ಲಿ ಗಾಳಿಯಂತೆ ತೇಲುವ ಹಂಸ... ಶುಭ್ರತೆಗೆ ಹೆಸರುವಾಸಿ.. ಮನಸ್ಸು ಹಕ್ಕಿಯ ಹಾಗೆ ಹಾರಬೇಕು.. ಅದಕ್ಕೆ ನೀರಿನಲ್ಲಿ ತೇಲುವ ಶಕ್ತಿ ಇರಬೇಕು.. ಎನ್ನುತ್ತಾ ಇಂದ್ರ ಐದನೇ ಪಾದದ ಗುರುತು ಹಂಸದಷ್ಟೇ ಶುಭ್ರವಾಗಿರಬೇಕು... ಮತ್ತೆ ಸುಂದರವಾಗಿರಬೇಕು ಎನ್ನುತ್ತಾ ಚೌಕಟ್ಟಾಗಿ ನಿಂತವು..
|
ಐದನೇ ಪಾದದ ಗುರುತಿಗೆ ನಿಂತ ಚಿತ್ರ |
ದೇಹವನ್ನು ನಿಯಂತ್ರಿಸುವ ನರ ಮಂಡಲಗಳು ಮಾನವನ್ನಾಗಲಿ, ದೇವರನ್ನಾಗಲಿ ಬೆಳೆಸುವ ಉಳಿಸುವ ಹೊಣೆಯನ್ನು ಹೊತ್ತಿರುತ್ತವೆ.. ಕ್ಲಿಷ್ಟಕರವಾದ ಈ ಸಮೂಹ ನಿಜವಾಗಿಯೂ ಕೆಲವೊಮ್ಮೆ ತಾಳ್ಮೆಗೆ ಬಹಳ ಕೆಲಸಕೊಡುತ್ತವೆ.. ಆದರೆ ನಿಧಾನವಾಗಿ ಪರಿಪರಿಯಾಗಿ ಬಿಡಿಸುತ್ತ ಹೋದ ಹಾಗೆ ನಾಲ್ಕನೇ ಹೆಜ್ಜೆ ಗುರುತು ವಿಶಿಷ್ಟವಾಗಿಯೇ ಮೂಡಿ ಬರುತ್ತದೆ..
|
ನಾಲ್ಕನೇ ಹೆಜ್ಜೆ ಗರ ಗರ |
ಇಂದ್ರನ ಐರಾವತ ಸುಮ್ಮನೆ ನಿಂತಿತ್ತು .. ಕಬ್ಬುಗಳು, ಬಾಳೆಹಣ್ಣು ಯಥೇಚ್ಛವಾಗಿ ತಿಂದಿದ್ದರೂ ಅದಕ್ಕೆ ತನ್ನ ಬಂಧುಬಳಗವನ್ನ ನೋಡಬೇಕೆಂಬ ಆಸೆಯಿತ್ತು.. ಅದರ ಮನದಲ್ಲಿದ್ದ ಆಶೆಯನ್ನು ನಾರದರು ಗುರುತಿಸಿ.. ಐರಾವತದ ಬಂಧುಬಳಗವನ್ನು ಕರೆದು ತಂದರು.. ಐರಾವತ ಖುಷಿಯಾಗಿ ಇಂದ್ರನ ಮೂರನೇ ಹೆಜ್ಜೆಯ ಸಪ್ಪಳಕ್ಕೆ ಕಾದು ನಿಂತವು..
|
ಮೂರನೇ ಹೆಜ್ಜೆ ಗಜ ಪಾದ |
ಇಂದ್ರನು ಕೋಣೆಯಿಂದ ಹೊರಗೆ ಬರುವಾಗ ತಾಪ ಹೆಚ್ಚಾಗಿದ್ದರೆ ಅವನಿಗೆ ಹೇಗಪ್ಪಾ ತಂಗಾಳಿ ಬೀಸುವುದು ಎಂದು ಯೋಚಿಸುತ್ತಿದ್ದಾಗ.. ವಾಯು ದೇವಾ ಗರ ಗರ ತಿರುಗುತ್ತಾ ಬಂದು ನಿಂತ.. ವಾಯು ದೇವಾ ಬಂದಾಗ ಹಸಿರಿನ ಸಿರಿಯೆ ಬರುತ್ತವೆ ಅಲ್ಲವೇ... ಎರಡನೇ ಹೆಜ್ಜೆಗೆ ನಾವೇ ಸಾಟಿ ಎಂದವು..
|
ಎರಡನೇ ಹೆಜ್ಜೆ ಅಚ್ಚಾದಾಗ |
ಕತ್ತಲೆಯಿಂದ ಬೆಳಕಿಗೆ ಬರುವಾಗ ಕಣ್ಣ ಮುಂದೆ ನಕ್ಷತ್ರಗಳು ಕಾಣುತ್ತವೆ ಅಲ್ಲವೇ.. ಆ ನಕ್ಷತ್ರಗಳು ದೀಪದ ಬೆಳಕಿನಲ್ಲಿ ಇನ್ನಷ್ಟು ಸೊಗಸಾಗಿ ಕಾಣಿಸಬೇಕು ಎಂದು ತಮ್ಮ ಪ್ರಕಾಶವನ್ನೆಲ್ಲ ಧಾರೆಯೆರೆದು ಮೊದಲ ಹೆಜ್ಜೆಯನ್ನು ಜಗಮಗವಾಗಿಸಲು ಬಿಳಿ ಹಳದಿಯ ವರ್ಣಮಯವಾಗಿ ನಿಂತವು..
|
ಮೊದಲನೆಯ ಹೆಜ್ಜೆಗೆ ಸಿಂಗಾರ |
ಬೃಹಸ್ಪತಿ.. ಶಂಖವನ್ನು ಊದಿಸಲು ಹೇಳಿದರು..
ಫೂಮ್ ಫೂಮ್ ಎನ್ನುತ್ತಾ ಶಂಖವಾದ್ಯದ ಮೂಲಕ .. ಇಂದ್ರ ತನ್ನ ಮಡದಿ ಶಚೀದೇವಿಯೊಡನೆ ತನ್ನ ಕೋಣೆಯಿಂದ ಮೊದಲ ಹೆಜ್ಜೆ ಇಟ್ಟ.. ಹಣೆಯ ಮೇಲಿದ್ದ ಮೊದಲ ಗೆರೆ ಮಾಯವಾಯಿತು.. ಹೀಗೆ ಹತ್ತು ಹೆಜ್ಜೆಗಳು.. ಇಂದ್ರನ ಹಣೆ ಸೀಮೆಂಟು ರಸ್ತೆಯಂತೆ... ಸುಕ್ಕು ಸುಕ್ಕಾಗಿದ್ದ ಬಟ್ಟೆಯನ್ನು ಇಸ್ತ್ರಿ ಪೆಟ್ಟಿಗೆಯಿಂದ ಉಜ್ಜಿದಂತೆ... ಸುಕ್ಕುಗಳೆಲ್ಲ ಮಾಯವಾಯಿತು..
ಇಂದ್ರ ಮೊದಲಿನಂತಾದ.. ಎಲ್ಲರೂ ಖುಷಿ ಸಂಭ್ರಮದಿಂದ ನಲಿದರು.. ಸಭೆಯಲ್ಲಿ ಎಲ್ಲರೂ ಖುಷಿಯಿಂದ ಪಾಲ್ಗೊಂಡರು.. ಇಂದ್ರ ಖುಷಿ.. ಎಲ್ಲರೂ ಖುಷಿ.. ನಾರದ :"ನಾರಾಯಣ ನಾರಾಯಣ" ಎಂದಾಗ.. ದೇವಗುರು ಬೃಹಸ್ಪತಿ ಒಂದು ಬಾರಿ ಕಣ್ಣು ಹೊಡೆದು ಇಂದ್ರನ ನೋಡಿ ನಕ್ಕರು.. ಇಂದ್ರನಿಗೆ ಗೊತ್ತಾಯಿತು..
"ಈ ಸುಂದರ ಚಿತ್ತಾರಗಳನ್ನು ರಚಿಸಿದ ಆ "ದೇವಿ"ಗೆ ಮನದಲ್ಲಿಯೇ ನಮಿಸಿದರು ಮತ್ತು ಶುಭ ಹಾರೈಕೆಯಿಂದ ಸದಾ ಸಂತಸದಿಂದ ಇರುವ ವರವನ್ನು ನೀಡಿದರು..
(ಆಶ್ವಯುಜ ಸುಕ್ಲ ಪಕ್ಷದ ಪಾಡ್ಯ ದಿನ ಫೇಸ್ಬುಕ್ ನಲ್ಲಿ ನನ್ನ ತಮ್ಮನ ಹೆಂಡತಿ ಆಶಾ ಸರ್ಜಾ ಅವರ ರಂಗೋಲಿ ನೋಡಿದಾಗ ಅನ್ನಿಸಿತು.. ಹತ್ತು ದಿನಗಳ ರಂಗೋಲಿಯನ್ನು ಸೇರಿಸಿ ಒಂದು ಲೇಖನ ಮಾಡೋಣ ಅಂತ.. ರಂಗೋಲಿಯ ಚಿತ್ರಗಳನ್ನು ಲೇಖನಕ್ಕೆ ಉಪಯೋಗಿಸಿಕೊಳ್ಳಲು ಅನುಮತಿ ನೀಡಿದ ಆಶಾ ದೇವಿಯವರಿಗೆ ಧನ್ಯವಾದಗಳನ್ನು ಅರ್ಪಿಸುತ್ತ ಈ ಲೇಖನ ನಿಮ್ಮ ಮಡಿಲಿಗೆ ಹಾಕುತ್ತಿದ್ದೇನೆ..
(ಶ್ರೀಮತಿ ಆಶಾ ಸರ್ಜಾ ಅವರ ಬಗ್ಗೆ ನನ್ನ ಮಾತು.. ಇವರನ್ನು ದೇವಿ ಎಂದು ಕರೆಯುತ್ತೇನೆ.. ಮುದ್ದು ಸಹೋದರಿಯಾಗಿರುವ ಈ ಪ್ರತಿಭಾ ಕಾರಂಜಿ ಕಂಗಳಲ್ಲಿ ಇರುವ ಹೊಳಪು ಮತ್ತು ಕೈ ಬೆರಳುಗಳಲ್ಲಿ ಇರುವ ಜಾದೂ ಇವರಿಗೆ ದೇವಿ ಎಂಬ ಹೆಸರನ್ನು ನೀಡಿದೆ .. ರಂಗೋಲಿ ಪುಡಿ ಇವರಿಗೆ ಕಾಯುತ್ತಿರುತ್ತವೆ.. ಇದು ಉತ್ಪ್ರೇಕ್ಷೆಯಲ್ಲ ನಿಜವಾದ ಮಾತು.. ನನ್ನ ಮಾತು ಸುಳ್ಳು ಎಂದರೆ ಮೇಲಿನ ರಂಗೋಲಿ ಚಿತ್ರಗಳನ್ನು ನೀವೇ ನೋಡಿ.. ಒಪ್ಪಿಕೊಳ್ಳಿ... ಈಕೆ ನಮ್ಮ ಕೊರವಂಗಲದ ಕುಟುಂಬದಲ್ಲಿರುವುದು ನಿಜಕ್ಕೂ ಹೆಮ್ಮೆಯ ವಿಚಾರ.. ದೇವಿ ನಿಮಗೆ ಅಭಿನಂದನೆಗಳು)