Saturday, March 25, 2017

ಕಗ್ಗದಿಂದ ಶುಭ ಕೋರಿಕೆ

ಘನವಾದ ನಿದ್ದೆ.. ಆಗಸದಲ್ಲಿಯೇ ತೇಲುತ್ತಿರುವ ಅನುಭವ..ಪ್ರಪಂಚದ ಪರಿವೆ ಇಲ್ಲದ ನಿದ್ದೆ..

ವೈದ್ಯರು ಅರಿವಳಿಕೆ ಕೊಟ್ಟು ಶಸ್ತ್ರ ಚಿಕಿತ್ಸೆ ಮಾಡಿದ ಮೇಲೆ, ಅರಿವಳಿಕೆಯ ಸತ್ವ / ಶಕ್ತಿ ಕಡಿಮೆ ಆಗುತ್ತಿದ್ದ ಹಾಗೆ ನೋವು ಅರಿವಾಗುವ ಹಾಗೆ, ನಿದ್ದೆಯ ಮಂಪರು ಕಡಿಮೆ ಆಗುತ್ತಿರುವ ಅನುಭವ..

ಮೊಬೈಲ್  ಫೋನ್ ಸದ್ದು ಮಾಡುತ್ತಿತ್ತು.. ಫೋನ್ ತಲೆಗೆ ಒಂದು ಬಿಟ್ಟು ಮತ್ತೆ ನಿದ್ದೆಗೆ ಜಾರಲು ಯತ್ನಿಸುತ್ತಿದ್ದೆ.. !

ಸಂಪಿನ ಆಟೋಮ್ಯಾಟಿಕ್ ಮೋಟಾರು ಶುರುವಾಯಿತು.. ಬೆಳಗಿನ ನಾಲ್ಕು ಘಂಟೆಯ ಆ ಶಾಂತ ನಿಶ್ಯಬ್ಧ ವಾತಾವರಣದಲ್ಲಿ ಮೋಟಾರಿನ ಸದ್ದು.. ಬಹಳ ತೊಂದರೆ ಕೊಡುತ್ತಿತ್ತು.. ಹೊದ್ದುಕೊಂಡಿದ್ದ ಹೊದಿಕೆಯನ್ನು ಬಲವಾಗಿ ಕಿವಿಗೆ ಮುಚ್ಚಿಕೊಂಡು ಮುಸುಗು ಹಾಕಿ ಮತ್ತೆ ನಿದ್ದೆಗೆ ಜಾರಿದೆ..

ಅನತಿ ಸಮಯದಲ್ಲಿ ಮೋಟಾರ್ ನಿಂತಿತು.. ಸದ್ಯ ನಿದ್ದೆ ಮಾಡಬಹುದು ಎಂದು ಮತ್ತೆ ನಿದ್ದೆಗೆ ಜಾರಿದರೆ..

ಟಕ್ ಟಾಕ್ ಟಕ್ ಟಾಕ್ ಗಡಿಯಾರದ ಸದ್ದು.. ಛೇ ಇದೇನಪ್ಪ.. ಇಷ್ಟೊಂದು ಕಾಟ ಕೊಡುತ್ತಿದೆ.. ಎಂದು ಕತ್ತಲಿನಲ್ಲಿಯೇ, ತಡಕಾಡುತ್ತಾ ಆ ಗಡಿಯಾರವನ್ನು ಬಟ್ಟೆಯ ಸಂಧಿಯೊಳಗೆ ಇಟ್ಟು ..  ಅದರ ಮೇಲೆ ಇನ್ನೊಂದಿಷ್ಟು ಬಟ್ಟೆ ಇಟ್ಟೆ .. ಸದ್ದು ಅಡಗಿತು.

ನಿಧಾನವಾಗಿ ಕಣ್ಣು  ರೆಪ್ಪೆಗಳು ಭಾರವಾಗಿ...  ಬೆಂಗಳೂರಿನಲ್ಲಿ ಬಂದ್ ಆದಾಗ ತನ್ನಿಂತಾನೇ ಮುಚ್ಚಿಕೊಳ್ಳುವ ಅಂಗಡಿಗಳ ಶಟರ್ ತರಹ ನಿಧಾನವಾಗಿ ಮುಚ್ಚಿಕೊಂಡವು..

ಟಕ್ ಟಕ್ ಟಕ್ ಮತ್ತೆ ಸದ್ದು.. ಆದರೆ ಈ ಬಾರಿ ಗಡಿಯಾರದಲ್ಲ.. ಬದಲಿಗೆ ವಾಕಿಂಗ್ ಸ್ಟಿಕ್ಕಿನ ಶಬ್ದ.. !

ನಮ್ಮ ಮನೆಯಲ್ಲಿ ಯಾರಿದ್ದಾರೆ ಎಂದುಕೊಳ್ಳುತ್ತಲೇ ನಿದ್ದೆಗೆ ಜಾರಿದೆ..

ಪಕ್ಕೆಯನ್ನು ತಿವಿದಂತೆ ಆಯಿತು.. ಮಗ್ಗುಲು ಬದಲಿಸಿದೆ.. ಆ ಕಡೆ ಪಕ್ಕೆಗೂ ಮತ್ತೆ ತಿವಿದಂತೆ ಆಯಿತು..

ಛೇ ಇದೇನಪ್ಪ ಇದು ಇವತ್ತು ಸ್ವಲ್ಪ ನಿದ್ದೆ ಮಾಡೋಣ ಅಂದರೆ ಹೀಗೆಲ್ಲಾ ಆಗುತ್ತಿದೆ. ಫೋನ್, ಗಡಿಯಾರ, ಮೋಟಾರು ಈಗ ವಾಕಿಂಗ್ ಸ್ಟಿಕ್ ಯಾರೂ ನನಗೆ ನಿದ್ದೆ ಮಾಡಲು ಬಿಡುತ್ತಿಲ್ಲ ಎಂದು ಕೋಪದಲ್ಲಿಯೇ ದಿಗ್ಗನೆ ಎದ್ದೆ..

ಸುತ್ತ ಮುತ್ತಲು ಕಪ್ಪು ಕತ್ತಲೆಯೇ ತುಂಬಿತ್ತು. .ಕಣ್ಣಗಲಿಸಿ ನೋಡಿದೆ.. ಸೊಳ್ಳೆಯನ್ನು ಓಡಿಸಲು ಹಾಕಿದ್ದ ಯಂತ್ರದ ಪುಟ್ಟ ಕೆಂಪು ದೀಪ ಎದುರುಗಡೆಯಿಂದ ಕಾಣುತ್ತಿತ್ತು.. ಅರೆ ಇದೇನಿದು.. ಸೊಳ್ಳೆ ಓಡಿಸುವ / ನಿಯಂತ್ರಿಸುವ ಯಂತ್ರ ನಾ ಮಲಗುವ ಹಾಸಿಗೆ ಕಡೆಯ ಗೋಡೆಯ ಮೇಲಿದೆ. ಇದು ಹೇಗೆ ಎದುರಿಗೆ ಕಾಣಿಸುತ್ತಿದೆ.. ಏನಪ್ಪಾ ಇದು.. ಎಂದು ಮತ್ತೆ ತೀಕ್ಷ್ಣ ದೃಷ್ಟಿಯಿಂದ ನೋಡಿದೆ..ಗೋಡೆಯ ತಗುಲಿಸಿದ್ದ ಸೊಳ್ಳೆ ಓಡಿಸುವ ಯಂತ್ರದ ಬೆಳಕು ಎದುರಿನಿಂದ ಪ್ರತಿಫಲನವಾಗುತ್ತಿದೆ..

ಅರಿವಾಗಲಿಲ್ಲ.. ಕತ್ತಲಲ್ಲೇ ತಡಕಾಡುತ್ತಾ.. ದೀಪ ಹಾಕಿದೆ.. ಜಗ್ ಜಗ್ ಸದ್ದು ಮಾಡುತ್ತಾ ದೀಪ ಹತ್ತಿಕೊಂಡಿತು.. ಕೋಲನ್ನು ಊರಿಕೊಂಡು ಒಂದು ಹಿರಿಯ ಜೀವ ನಿಂತಿದೆ..ಅವರ ಕನ್ನಡಕದಿಂದ ಆ ಬೆಳಕು ಪ್ರತಿಫಲನವಾಗುತ್ತಿದೆ..

ನೋಡು ನೋಡುತ್ತಲೇ ಬೆವರಲು ಶುರು ಮಾಡಿದೆ. ಹಾಕಿದ ಬಾಗಿಲು.. ನನ್ನ ಮಡದಿ ರಾತ್ರಿ ಯಾರಾದರೂ ಬಾಗಿಲು ತಟ್ಟಿದರೆ.. ನನ್ನನ್ನೇ ಎಬ್ಬಿಸಿ ತೆರೆಯಲು ಹೇಳುತ್ತಾಳೆ .. ಪರಿಚಯಸ್ಥರು, ನೆಂಟರು, ಬಂಧು ಮಿತ್ರರು ಯಾರಾದರೂ ಸರಿಯೇ.. ನಾನೇ ಬಾಗಿಲು ತೆರೆಯಬೇಕು.. ಏನಪ್ಪಾ ಇದು .. ಎಂದು ಪಕ್ಕದ ರೂಮಿಗೆ ಹೋಗಿ ನೋಡಿದೆ. ಅಲ್ಲಿ ಮಗಳು ಮತ್ತು ಮಡದಿ ನೆಮ್ಮದಿಯ ನಿದ್ರೆಯಲ್ಲಿದ್ದಾರೆ ..

ಮತ್ತೆ ಆ ವ್ಯಕ್ತಿ  ನಿಂತಲ್ಲಿಗೆ ಬಂದೆ.. ಸ್ವಲ್ಪ ಬೆವರು, ಗಾಬರಿ, ತೊದಲು ನುಡಿಗಳು.. ಯಾರಲ್ಲಿ ಯಾರು ನೀವು.. ಹೇಗೆ ಬಂದಿರಿ.. ಈ ಸಾಲುಗಳನ್ನು ಹೇಳಲು ಅನೇಕ ಬಾರಿ ಒಣಗಿದ್ದ ಗಂಟಲನ್ನು ಸರಿಮಾಡಿಕೊಂಡಿದ್ದೆ ..

ಆ ವ್ಯಕ್ತಿ ನಿಧಾನವಾಗಿ ಇತ್ತ ಕಡೆ ತಿರುಗಿತು. ಬೋಳು ತಲೆ, ದಪ್ಪನೆ ಕನ್ನಡಕ, ಬಿಳಿ ಜುಬ್ಬಾ ಬಿಳಿ ಪಂಚೆ.. ಬೊಚ್ಚು ಬಾಯಿ... ಗಂಟಲಲ್ಲಿದ್ದ ಕಡೆ ಹನಿಯೂ ಒಣಗಿತು.. ಗಾಬರಿಯಿಂದ ಹೆದರಿಕೆಯಾಗಿ!

"ಅಜ್ಜಾ.. ಅಜ್ಜಾ.. ನೀವು.. ಅರೆ ಇದೇನಿದು.. ಯಾಕೆ.. ಹೇಗೆ.. ಯಾವಾಗ.. ಅರೆ.. ಛೆ.. ಓಹ್.. ಏನಪ್ಪಾ ... .. ಅಲ್ಲಾ.. ತಾತ. ಅದು.. ಹಾಗಲ್ಲ.. "

"ಮಗೂ ಶ್ರೀಕಾಂತಾ.. ಯಾಕಿಷ್ಟು ಗಾಬರಿ.. ಹೆದರಬೇಡ.. ನಾ ನಿನಗೆ ತೊಂದರೆ ಕೊಡೋಲ್ಲ.. ಐದು ದಿನಗಳ ಹಿಂದೆ ಮಲಗಿದ್ದ ನೀನು ಎದ್ದೆ ಇಲ್ಲವಲ್ಲ.. ಅದಕ್ಕೆ ನನಗೆ ಗಾಬರಿಯಾಯಿತು.. ಅಂತಹ ಗಾಢ ನಿದ್ದೆ ಏತಕ್ಕೆ.. "

"ಆಆಹ್ ಏನಂದಿರಿ.. ನಾ ಮಲಗಿ ನಾಲ್ಕು ದಿನವಾಯಿತೇ.. ಏನಾಯಿತು ನನಗೆ... ಅಯ್ಯೋ ಕಣ್ಣುಗಳು ಯಾವುದೋ ಬೆಟ್ಟವನ್ನು ಹೊತ್ತು ನಿಂತಂತೆ ಭಾರವಾಗಿದೆ.. ನಿಜವೇ ಅಜ್ಜ.. ಇಂದು ಯಾವ ತಾರೀಕು.. ಏನಿದು... "

"ಮಗೂ ಇಂದು ೨೫ನೇ ತಾರೀಕು ಮಾರ್ಚ್ ಮಾಸ.. . "

"ಛೆ ಅಜ್ಜ.. ಎಂಥಹ ಕೆಲಸವಾಯಿತು.. ನಮ್ಮ ಗುರುಗಳು... ೬೨ನೇ ವರ್ಷದ ಹರ್ಷದ ಸಂಭ್ರಮದಲ್ಲಿದ್ದರು.. ಅವರಿಗೆ ನಾ ಶುಭಾಶಯಗಳನ್ನು ಸಲ್ಲಿಸಬೇಕಿತ್ತು.. ಬೇಸರವಾಗುತ್ತಿದೆ.. "

"ಮಗೂ.. ಮಹಾಭಾರತದಲ್ಲಿ ಧರ್ಮಕ್ಕೆ ಜಯವಾಗಬೇಕು ಎಂದು ಶ್ರೀ ಕೃಷ್ಣ ಸೂರ್ಯನನ್ನು ಕೊಂಚ ಮರೆಮಾಡಿದ್ದ.. ಈಗ ನಾನು ಅದೇ ರೀತಿ ದಿನಸೂಚಿಯನ್ನು ಕೊಂಚ ಹಿಂದಕ್ಕೆ ಕರೆದೊಯ್ಯುತ್ತೇನೆ.. ಆಗೋ ನೋಡು ಸೂರ್ಯನು ಕೂಡ ಒಪ್ಪಿಕೊಂಡು ಚಂದ್ರನ ಜೊತೆ ಹೆಗಲ ಮೇಲೆ ಕೈ ಹಾಕಿಕೊಂಡು ಹಿಂದಕ್ಕೆ ಚಲಿಸುತ್ತಿದ್ದಾನೆ.. ಬೇಗನೆ ನಿನ್ನ ಶುಭಾಶಯಗಳನ್ನು ದಾಖಲಿಸು.. ಪ್ರಪಂಚ ಏಳುವ  ಮುಂಚೆ ಈ ಕೆಲಸ ಆಗಬೇಕು.. ಕಮಾನ್ ಶ್ರೀಕಾಂತ ಕಮಾನ್"

"ಅಜ್ಜ..ಈಗಲೇ ಶುರುಮಾಡುತ್ತೇನೆ.. "

ಚಕ್ ಎಂದು ಹಾಸಿಗೆಯಿಂದ ಎದ್ದು.. ಮೊರೆ ತೊಳೆದು. ತನ್ನ ಬಾಸ್ ತನ್ನ ಅಪ್ಪನಿಗೆ, ಮತ್ತು ಶ್ರೀ ಕೃಷ್ಣನಿಗೆ, ಗಣಪನಿಗೆ ನಮಿಸಿ.. ಇಷ್ಟದೇವತೆಗಳನ್ನು ಮನದಲ್ಲಿಯೇ ಸ್ಮರಿಸಿ..

"ಗುರುಗಳೇ .. ಕಗ್ಗ ಎನ್ನುವ ಕಬ್ಬಿಣದ ಕಡಲೆ ಎಂದುಕೊಂಡ ಹಲವಾರು ಮಂದಿಗೆ ಸರಳವಾಗಿ ತಾಕುವಂತೆ, ಓದಿದ ಪ್ರತಿಯೊಬ್ಬರ ಅನುಭವದ ಮಜಲಿಗೆ ತಾಕುವಂತೆ, ಬುದ್ಧಿಮತ್ತೆಗೆ ಅರಿವಾಗುವಂತೆ, ಅವರ ಮನಸ್ಸಿಗೆ ನಾಟುವಂತೆ ಪ್ರತಿ ಮುಕ್ತಕಗಳ ಪದಗಳನ್ನು ವಿಂಗಡಿಸಿ, ಅದರ ಅರ್ಥ ವಿಸ್ತಾರವನ್ನು ಹೇಳುತ್ತಾ, ನಿಮ್ಮ ಬದುಕಿನಲ್ಲಿ ನೀವು ಕಂಡುಕೊಂಡ ಸತ್ಯದ ಅನುಭವದ ಮಾರ್ಗದಲ್ಲಿ ದೊರಕಿದ ಅಮೃತವನ್ನು ಕ್ರೂಢೀಕರಿಸಿ ನಮ್ಮೆಲ್ಲರಿಗೂ ಹಂಚುತ್ತಿರುವ ನಿಮಗೆ ಧನ್ಯವಾದಗಳು.. ಕಗ್ಗ ಎಂಬ ವಿಷಯವನ್ನು ಬರಿ ಕಡಲೆ ಎನಿಸದೆ ಇಷ್ಟವಾಗುವ ನಿಟ್ಟಿನಲ್ಲಿ ಬರೆದು ಹಂಚಿರುವ ನಿಮ್ಮ ಬುದ್ಧಿಮತ್ತೆಗೆ, ಅದಕ್ಕೆ ಸಿಕ್ಕ ಗೌರವಗಳಿಗೆ ತಲೆ ಬಾಗುತ್ತಲೇ ನಿಮಗೆ ಜನುಮದಿನಕ್ಕೆ ಶುಭಕರವಾದ ಆಶಯಗಳನ್ನು ಅಜ್ಜನ ಅಮೃತ ಹಸ್ತದಲ್ಲಿ ತಲುಪಿಸಲು ಪ್ರಯತ್ನ ಪಡುತ್ತಿದ್ದೇನೆ.. "

ನಿಮ್ಮ ಜನುಮದಿನಕ್ಕೆ ಶುಭಾಶಯಗಳು ರವಿ ಗುರುಗಳೇ"

ಅಲ್ಲಿಯೇ ನಿಂತಿದ್ದ ಅಜ್ಜ, ತಮ್ಮ ವಾಕಿಂಗ್ ಸ್ಟಿಕ್ಕಿನ ತುದಿಯಿಂದ ನನ್ನ ತಲೆಗೆ ಮೆಲ್ಲಗೆ ಕುಟ್ಟಿ.. ಸರಿ ಮಗೂ.. ನನ್ನ್ನ ಶುಭಾಶೀರ್ವಾದವನ್ನು ರವಿಗೆ ನಿನ್ನ ಬರಹದ ಮೂಲಕ ತಲುಪಿಸು.. ನನ್ನ ಜನುಮದಿನಕ್ಕೂ ಅವನ ಜನುಮದಿನಕ್ಕೂ ನಾಲ್ಕು ದಿನಗಳ ಅಂತರ.. ಹಾಗೆ ನಾಲ್ಕನೇ ಪುಸ್ತಕ ಕಗ್ಗ ರಸಧಾರೆ ಕೂಡ ಬೇಗ ಬರಲಿ ಎಂದು ಹೇಳಿ ಬಿಡು. ನಾ ಹೋಗಿ ಬರುತ್ತೇನೆ.. ಮತ್ತೆ ನಾಲ್ಕನೇ ಪುಸ್ತಕದ ಬಿಡುಗಡೆ ಸಮಾರಂಭಕ್ಕೆ ಬರುತ್ತೇನೆ.. ಜೊತೆಯಲ್ಲಿ ಈ ಬಾರಿ ಆ ಸಮಾರಂಭದ ವಿವರಗಳನ್ನು ನಾನೇ ನೀಡುತ್ತೇನೆ ಎಂದು ರವಿಗೆ ಹೇಳಿಬಿಡು.. "

ವಾವ್ ಅಜ್ಜ ಖಂಡಿತ ತಿಳಿಸುತ್ತೇನೆ.. ನಿಮ್ಮ ಅಕ್ಷರಗಳಲ್ಲಿ ಸಮಾರಂಭದ ವಿವರ.. ಕೇಳಿದರೆ ಮೈಜುಮ್ ಎನ್ನುತ್ತದೆ.. ಇನ್ನೂ ಅದು ಹೇಗೆ ಇರುತ್ತೆ ಎನ್ನುವ ಕುತೂಹಲ ಹೆಚ್ಚಾಗುತ್ತಿದೆ.. ಆಗಲಿ ಅಜ್ಜ ನಿಮ್ಮ ಆಶೀರ್ವಾದಗಳನ್ನು ತಲುಪಿಸುತ್ತೇನೆ.. "

ಅಜ್ಜ ಟೋಯ್ ಅಂತ ಮಾಯವಾದರು..  ಪ್ರಪಂಚ ಇನ್ನೂ ಎದ್ದಿರಲಿಲ್ಲ.. ಮಾರ್ಚ್ ೨೧ ನೇ ದಿನಕ್ಕೆ ಕಾಲಿಡುತಿತ್ತು..
ಆದರೆ ತಾಂತ್ರಿಕ ದೋಷದಿಂದ.. ಈ ಲೇಖನ ಪ್ರಪಂಚಕ್ಕೆ ಬರುವ ಹೊತ್ತಿಗೆ ೯೬ ಘಂಟೆಗಳು ಉರುಳಿ ಹೋಗಿತ್ತು!!!

ರವಿ ಗುರುಗಳೇ ಜನುಮದಿನಕ್ಕೆ ಶುಭಾಶಯಗಳು!!!


(ನಿಮ್ಮ ಕ್ಷಮೆ ಕೋರುತ್ತಾ ಅಜ್ಜನ ಹಾಗೂ ನಿಮ್ಮ ಭಾವ ಚಿತ್ರವನ್ನು ಒಂದೇ ಚೌಕಟ್ಟಿನಲ್ಲಿ ಬಂಧಿಸಿದ್ದೇನೆ.. ಅಜ್ಜ ನಿಮ್ಮ ಕಡೆ ನೋಡುತ್ತಾ ನಿಮಗೆ ಶುಭಾಶೀರ್ವಾದ ಕೋರುತ್ತಲೇ ಇರುತ್ತಾರೆ ಎನ್ನುವುದನ್ನು ಸಾಂಕೇತಿಕವಾಗಿ ತೋರಿಸಲು ಈ ಪ್ರಯತ್ನ.. ಇದು ಖಂಡಿತ ನಿಮಗೆ ಮುಜುಗರ ತರಲು ಮಾಡಿರುವುದಲ್ಲ... ಹಾಗೆನಿಸಿದರೆ.. ಈ ಚಿತ್ರವನ್ನು ತೆಗೆ ಶ್ರೀಕಾಂತ ಎಂದು ಹೇಳಲು ಪೂರ್ಣ ಅಧಿಕಾರಯುತ ಪ್ರೀತಿ ನಿಮಗಿದೆ)