Monday, January 26, 2015

ನಾವಿಂದು ಹಾಡುವ ಹಾಡಿಗೆ ಕೊನೆ ಇಲ್ಲಾ !!!!

ಅನುಮಾನ ಬಂತು..

ತಲೆ ಎತ್ತಿ ನೋಡಿದೆ..

ಭೀಮ ಗೋಲ್ಡ್ ಪ್ಯಾಲೇಸ್ ಅಂಗಡಿಯ ಜಾಹಿರಾತಿನಂತೆ ಎಲ್ಲವೂ ಸುವರ್ಣಮಯವಾಗಿ ಹೊಳೆಯುತ್ತಿದೆ..

ಕಣ್ಣುಜ್ಜಿಕೊಂಡೆ.. ಚಿವುಟಿಕೊಂಡೆ.. ಇಲ್ಲ ನಿಜ ನಿಜ..

ಇದು ನನ್ನ ಅನುಭವ.. ಅರೆ ಇದೇನಿದು ಬರಿ ಟ್ರೈಲರ್ ಅಂದ್ರಾ ಬನ್ನಿ ನನ್ನ ಜೊತೆ.. ಹಾಗೆಯೇ ಒಂದು ವಾರದ ಹಿಂದಕ್ಕೆ ಅಲ್ಲ ಅಲ್ಲ ನಾಲ್ಕೈದು ದಶಕಗಳ ಹಿಂದಕ್ಕೆ ಕರೆದೊಯ್ಯವೆ!!!!

ಸಂಗೀತದ ಗಂಧ ಗಾಳಿ ಗೊತ್ತಿರದ ನನಗೆ ಕೊಳಲು, ಗಿಟಾರ್, ತಬಲಾ, ವೀಣೆ ಈ ವಾಧ್ಯಗಳ ಸಂಗೀತ ಎಂದರೆ ವಿಪರೀತ ಪ್ರೀತಿ.. ಸಂತೋಷಕ್ಕೆ ಹಾಡು ಸಂತೋಷಕ್ಕೆ ಈ ಹಾಡಿಗೆ ಗಿಟಾರ್ ಬಳಸಿರುವ ರೀತಿ, ಅನೇಕ ಹಾಡುಗಳಿಗೆ ತಬಲಾ ಧ್ವನಿ, ಉಪಾಸನೆಯ ವೀಣೆಯ ಝೇಂಕಾರ, ರಣಧೀರ ಚಿತ್ರದ ಕೊಳಲಿನ ಜಾದೂ (ಹಿಂದಿಯ ಹೀರೋ ಚಿತ್ರಕ್ಕಿಂತ ಕನ್ನಡದಲ್ಲಿ ಅತ್ಯತ್ತಮವಾಗಿದೆ) ಇವೆನ್ನೆಲ್ಲ ಕಣ್ಣಾರೆ ನೋಡಬೇಕು, ಕಿವಿಯಾರೆ ಕೇಳಬೇಕು ಎನ್ನುವ ಹಂಬಲ ನನ್ನನ್ನು ಬೆಂಬಲಿಸುತ್ತಲೇ ಇತ್ತು..

ಸಾಕು ಸಾಕು ಪೀಠಿಕೆ.. ವಿಷಯಕ್ಕೆ ಬರುತ್ತೇನೆ

ಸತ್ಯ ಲೋಕದಲ್ಲಿ ಸರಸ್ವತಿಯ ಸುಳಿವೇ ಇಲ್ಲ.. ಕಾದು ಕಾದು ಸುಸ್ತಾದ ಚತುರ್ಮುಖ ಬ್ರಹ್ಮ ತನ್ನ ಮಡದಿಯನ್ನು ಹುಡುಕಿಕೊಂಡು ಭುವಿಗೆ ಬಂದೆ ಬಿಟ್ಟಾ.. ಭುವಿಗೆ ಕಾಲಿಟ್ಟ ಮೇಲೆ.. ಎಲ್ಲಾ ಮಾನವರ ಹಾಗೆಯೇ ಆಗಿ ಬಿಡುತ್ತಾರೆ ಎಂಬ ಪ್ರತೀತಿಗೆ ವಿರುದ್ಧವಾಗಿ ವಿಧಾತಾ ದೇವತ್ವನ್ನು ಉಳಿಸಿಕೊಂಡಿದ್ದ. ಆದರೆ ಮಾನವ ಲೋಕದ ಕಟ್ಟು ಪಾಡನ್ನು ಮುರಿಯಲು ಇಷ್ಟ ಪಡದೆ.. ಕಳೆದು ಹೋದ ವಸ್ತುವನ್ನು ಹುಡುಕಲು ಆರಕ್ಷಕ ಠಾಣೆಗೆ ಬಂದು.. ಅಲ್ಲಿದ್ದ ದಫ್ಫೆದಾರನ ಬಳಿ ಬಂದು.. ನನ್ನ ಮಡದಿ ಭೂಲೋಕಕ್ಕೆ ಬಂದಿರಬಹುದು... ಇದು ಆಕೆಯ ಭಾವಚಿತ್ರ.. ದಯಮಾಡಿ ಹುಡುಕಿಕೊಡಿ ಎಂದು ಅರ್ಜಿಯನ್ನು ಬರೆದುಕೊಟ್ಟರು.

ಆರಕ್ಷಕ ಸಿಬ್ಬಂಧಿ ಒಂದು ಕ್ಷಣವೂ ಕಣ್ಣನ್ನು ಮಿಟುಕಿಸದೆ.. ಆ ಚಿತ್ರವನ್ನು ಮೇಜಿನ ಮೇಲೆ ಇತ್ತು.. ಶಿರಸ ಪ್ರಣಾಮ ಮಾಡಿ.. ಈ ತಾಯಿಯನ್ನು ನೋಡದವರು ಯಾರಿದ್ದಾರೆ.. ಸ್ವಲ್ಪ ಹೊತ್ತು ಕುಳಿತುಕೊಳ್ಳಿ..ಎಂದು ಒಳಗೆ ಹೋಗುತ್ತಾರೆ.

ಗಣಕಯಂತ್ರದಲ್ಲಿ ಟಪ ಟಪ ಮಾಡಿ ನೋಡುತ್ತಾರೆ.. ಉಪಗ್ರಹದ ಮೂಲಕ ಒದಗಿ ಬಂದ ಚಿತ್ರದಲ್ಲಿ ದೊರೆತ ಮಾಹಿತಿ ಪ್ರಕಾರ, ಕಶ್ಯಪ ಬ್ರಹ್ಮನ ಪಿತನನ್ನು ಕರೆದುಕೊಂಡು ಬನಶಂಕರಿ ತರಕಾರಿ ಮಾರುಕಟ್ಟೆಯ ಬಳಿ ಒಂದು ಮನೆಯ ಮೇಲಿನ ಮಹಡಿಗೆ ಕರೆದೊಯ್ಯುತ್ತಾರೆ. ಬ್ರಹ್ಮನ ಒಂದು ಕ್ಷಣ ಅವಕ್ಕಾಗಿ ನೋಡುತ್ತಾರೆ.

ತಾಯಿ ಶಾರದೆ ಲೋಕ ಪೂಜಿತೆ ಒಳಗೆ ಕೂತಿರುವ ಪರಿಕರಗಳು!!!

ಅಲ್ಲಿ ನೋಡಿದರೆ ಸರಸ್ವತಿಯ ರೂಪವೇ ಬದಲಾಗಿ ಬಿಟ್ಟಿದೆ.. ಚಪ್ಪಾಳೆಯ ಸದ್ದಿಗೆ ಎಂಟು ಕಿವಿಗಳು ಗುಯ್ ಅನ್ನುತ್ತಿದ್ದವು ಪಿತಾಮಹನಿಗೆ.

ಕಾರಣ.. ತಬಲದಲ್ಲಿ ಜಾದು ಮಾಡುವ ಶ್ರೀ ವೇಣುಗೋಪಾಲ್, ಗಿಟಾರ್ ನಲ್ಲಿ ಹೃದಯ ಮಿಡಿಸುವ ಶ್ರೀ ಶ್ರೀನಿವಾಸ ಆಚಾರ್ ದಮ್ಮುರ್,  ಶಬ್ಬಾಶ್ ಎನ್ನಿಸುವ ಬೇಸ್ ಗಿಟಾರಿನ ಸ್ಪೆಷಲಿಸ್ಟ್ ಶ್ರೀ ಕ್ಯಾಲೇಬ್ , ಕೀ ಬೋರ್ಡ್ ನಲ್ಲಿ ಮನಸ್ಸಿನ ಎಲ್ಲಾ ಚಿಂತೆಗಳ ಬೀಗವನ್ನು ಕಿತ್ತೊಗೆಸುವಂತಹ ಸಂಗೀತ ತೆಗೆಯುವ ಶ್ರೀ ಉಮೇಶ್ ಕೀ ಬೋರ್ಡ್, ರಿದಂ ಪ್ಯಾಡ್ ನಲ್ಲಿ ಕೂತಲ್ಲೇ ಕುಣಿಸುವ ಶ್ರೀ ಪದ್ಮನಾಭ ಕಾಮತ್, ಇವರೆಲ್ಲ ಮಾಡುತ್ತಿದ್ದ ಜಾದೂವನ್ನು ಶುಭ ಆಶೀರ್ವಾದ ನೀಡುತ್ತಾ ನೋಡುತ್ತಾ ಕುಳಿತಿದ್ದಳು ಆ ತಾಯಿ ಶಾರದೆ,



ಒಂದೇ ಎರಡೇ.. ಅನೇಕಾನೇಕ ಹಾಡುಗಳು ಗಂಗಾವತರಣದ ಹಾಗೆ ಹರಿಯುತ್ತಲೇ ಸಾಗಿತು.

ಮನಕ್ಕೆ ಆನಂದ ನೀಡುವುದು.. ವಾದ್ಯ ಗೋಷ್ಠಿ ನುಡಿಸುತ್ತಾ.. ನುಡಿಸುತ್ತಾ .. ಒಂದು ಸುಂದರ ಹಾಡಿನ ಸಾಲು ಇಣುಕಿದಾಗ ಸಿಗುತ್ತಲ್ಲ ಆ ಸಂತೋಷ.. ಪಾಯಸ ಕುಡಿಯುವಾಗ ಮಧ್ಯೆ ಮಧ್ಯೆ ಸಿಗುವ ದ್ರಾಕ್ಷಿ, ಗೋಡಂಬಿಯ ಹಾಗೆ.. ಅಬ್ಬಾ ಅನ್ನಿಸುತ್ತಿತ್ತು. ಅರೆ ಈ ಹಾಡು ನನಗೆ ಗೊತ್ತು ಅನ್ನಿಸುವಷ್ಟರಲ್ಲಿ ಇನ್ನೊಂದು ಜಾದುಗಾರರ ಹಾಡು ಹರಿದು ಬರುತ್ತಿತ್ತು.

ಒಮ್ಮೆ ಗಿಟಾರಿನ ಕಡೆ ನೋಡಿದರೆ, ಇನ್ನೊಮ್ಮೆ ರಿದಂ ಪ್ಯಾಡ್.. ಏನ್ ಸರ್ ಅಲ್ಲೇ ನೋಡ್ತಾ ಇದ್ದೀರಾ.. ಇಲ್ಲಿ ನೋಡಿ ಅಂತ ಕೀ ಬೋರ್ಡ್ ಮ್ಯಾಜಿಕ್ ಶುರು ಆಗೋದು.. ತದಿಂ ತದಿಂ ಅಂತ ತಬಲಾ ಮನದೊಳಗೆ ಇಳಿದು ಬಿಡುತ್ತಿತ್ತು. ಸರ್ ನನ್ನ ಜಾದೂನು ನೋಡಿ ಅಂತ ಬೇಸ್ ಗಿಟಾರ್ ಇಡಿ ಕಾರ್ಯಕ್ರಮದಲ್ಲಿ ಗುಪ್ತಗಾಮಿನಿಯ ಹಾಗೆ ಹರಿಯುತ್ತಲೇ ಇತ್ತು.,

ಸಿಹಿ ಅಂಗಡಿ ಹೊಕ್ಕ ಮಗುವಿನಂತೆ.. ಒಂದು ರುಚಿಯಾದರೆ, ಇನ್ನೊಂದು ಲೊಟ್ಟೆ ಹೊದೆದಷ್ಟು ಸಂತೋಷ ಕೊಡುತ್ತಿತ್ತು, ಇನ್ನೊಂದು ಯಮ್ಮಿ ಅನ್ನುವ ಹಾಗೆ ಮಾಡಿಸಿದರೆ, ಮಗದೊಂದು ಅಬ್ಬಾ ಅಂತ ಕಣ್ಣಲ್ಲಿ ದೇವಗಂಗೆ ಹರಿಸುತ್ತಿತ್ತು. 

ಏ ರಾತೇ ಏ ಮೌಸಂ ನದಿ ಕಾ ಕಿನಾರ

ಬಾರೆ ಬಾರೆ ಚಂದದ ಚಲುವಿನ ತಾರೆ

ಫಲ್ ಫಲ್ ದಿಲ್ ಕೆ ಪಾಸ್ ತುಮ್

ಗಜಮುಖನೆ ಜಯತು ಗಜನಾಥನೆ (ಕುಮಾರಿ ಶ್ರಾವ್ಯ ಹಾಗೂ ಕುಮಾರಿ ಅಕ್ಷತ ಗಾಯನದ ಸುಧೆ)

ಓ ಓ ಸಜನ (ಕುಮಾರಿ ಹಿರಣ್ಮಯಿ ಶರ್ಮ)

ಚುರಾಲಿಯ (ನೆರೆದಿದ್ದವು ಹುಚ್ಚೆದ್ದು ಕುಣಿಯುವ ಹಾಗೆ ಮಾಡಿದ್ದು ಈ ಹಾಡಿನ ವಿಶೇಷತೆ)

ಮುಚ್ಚು ಮರೆಯಿಲ್ಲದೆ (ಸ್ವರ್ಗದ ಸಭೆಯಲ್ಲಿ ಗಾಯಕರಾಗಿರುವ ಶ್ರೀ ರಾಜು ಅನಂತಸ್ವಾಮಿಯವರ ನೆನಪಿಗೆ - ಕುಮಾರೀ ಶ್ರಾವ್ಯ)

ಒಲವಿನ ಪ್ರಿಯಲತೆ (ಪಿ ಬಿ ಎಸ್ ಅವರ ಶ್ರೇಷ್ಠ ಗೀತೆ ಮತ್ತು ಅವರಿಗೆ ಅತಿ ಇಷ್ಟವಾದ ಗೀತೆ)

ಎಕ್ ಪ್ಯಾರ್ ಕ ನಗ್ಮಾ ಹೇ

ತಬಲದ ಒಂದು ನಾದ ಹಾಡಿನ ಯಶಸ್ಸಿಗೆ ಕಾರಣವಾದ ಚೈತ್ರದ ಪ್ರೇಮಾಂಜಲಿಯ ಒಂದು ತುಣುಕು

ದಿಲ್ ಚೀಸ್ ಕ್ಯಾ ಹೈ (ಕುಮಾರಿ ಹಿರಣ್ಮಯಿ ಶರ್ಮ ಗಾಯನ )

ಸುನ್ ರಾ ಹೇ (ಕುಮಾರಿ ಹಿರಣ್ಮಯಿ ಶರ್ಮ ಗಾಯನ)

ದೆಖಾನ ಹಾಯ್ (ಬಾಂಬೆ ಟು ಗೋವಾ ಚಿತ್ರದ ಕುಣಿಸುವ ಹಾಡು ಶ್ರೀ ಆದಿತ್ಯ ವಿಠಲ್ ಅವರ ಸುಮಧುರ ಸ್ಪೂರ್ತಿದಾಯಕ ಕಂಠ ಸಿರಿಯಲ್ಲಿ)

ಕುಣಿಸಿ ಕುಣಿಸಿ ತಣಿಸಿದ "ಕಮಲಿ ಕಮಲಿ"  (ಕುಮಾರಿ ಶ್ರಾವ್ಯ ಹಾಗೂ ಕುಮಾರಿ ಅಕ್ಷತ ಗಾಯನ)

ಗಿಟಾರಿನ ಜಾದೂ "ನಿಲೆ ನಿಲೇ ಅಂಬರ್ ಪರ್"

ದೋ ಫಲ್ ಮೇ

ತೂ ಮಿಲೇ ದಿಲ್ ಖಿಲೇ

ಚುಪ್ ಕೈಸೆ ರಾತ್ ಕೆ (ಕುಮಾರಿ ಹಿರಣ್ಮಯಿ)

ಎಂದೆಂದೂ ನಿನ್ನನು ಮರೆತು

ದಂ ಮಾರೋ ದಂ

ದುನಿಯಾ ಮೇ ಲೋಗೊಂಕೋ

ಲೈಲಾ ಹೊ ಲೈಲಾ

ಎಲ್ಲಿರುವೆ ಮಾನವ ಕಾಡುವ ರೂಪಸಿಯೇ

ಎದೆ ತುಂಬಿ ಹಾಡುವೆನು

ಹೀಗೆ ಒಂದು ಹಾಡಿನ ನಂತರ ಇನ್ನೊಂದು.. ಸಾಗುತ್ತಲೇ ಇತ್ತು.. ಚಪ್ಪಾಳೆ ಸದ್ದಿಗೆ ಅಂಬರವೆ ತೂತಾಗಿ ಬಿಟ್ಟಿತೇನೋ ಅನ್ನಿಸುವಷ್ಟು ಕಾಡುತ್ತಿತ್ತು ಸಂಗೀತ ಮೆರವಣಿಗೆ.

ಊಟ ಸಿದ್ಧವಾಗಿದೆ ಅಂತ ಹೇಳುತ್ತಲೇ ಇದ್ದರೂ.. ಮೊದಲು ಕಿವಿಗೆ ಮತ್ತು ಹೃದಯಕ್ಕೆ ನಂತರ ಹೊಟ್ಟೆಗೆ ಅನ್ನುವ ಅಭಿಮತ ಎಲ್ಲರದಾಗಿತ್ತು... ಎದ್ದು ಹೋಗಲು ಯಾರಿಗೂ ಮನಸ್ಸಿಲ್ಲ.. ಸಂಗೀತದ ವಾದ್ಯಗಳು ಕೂಡ ಇನ್ನಷ್ಟು ಬೇಕು ಎಂದು ಕೇಳುತ್ತಿದ್ದವು ಅನ್ನಿಸುತ್ತಿತು.

ಹಣೆಬರಹ ಬರೆಯುವ ಬ್ರಹ್ಮ ಅಂದು ತನ್ನ ನಾಲ್ಕು ಹಣೆಗಳನ್ನೇ ತಾಳ ಮಾಡಿಕೊಂಡು ತನ್ನ ಎಂಟು ಕೈಗಳಿಂದ ತಾಳ ಹಾಕುತ್ತಿದ್ದನು. ಆ ವಾದ್ಯಗಳಲ್ಲಿ, ಮತ್ತು ಆ ಕಲಾವಿದರ ಬೆರಳುಗಳಲ್ಲಿ, ಕೈಗಳಲ್ಲಿ ನೆಲೆಸಿದ್ದ ಸರಸ್ವತಿ ಕೂಡ ಆನಂದಭಾಷ್ಪ ತುಳುಕಿಸಿದ್ದು ಸುಳ್ಳಲ್ಲ.

ತೂಕದ ಹೆಜ್ಜೆ ಹಾಕುತ್ತಾ ತಾಯಿ ಶಾರದೆ ಎದ್ದು ನಿಂತಾಗ, ಬ್ರಹ್ಮನ ಕಣ್ಣಲ್ಲೂ ಜಿನುಗಿತು ಭಾಷ್ಪ.
ಆಯೋಜಕರ ಪರಿವಾರ 

ಸರಸ್ವತಿ ಪುತ್ರರು

ಸರಸ್ವತಿ ಲೋಕದಲ್ಲಿ ಒಂದು ಕ್ಷಣ 

ಮೊದಲ ಬಾರಿಗೆ ನನ್ನ ಕ್ಯಾಮೆರ ಕೆಲಸ ಮಾಡಲು ನಿರಾಕರಿಸಿತು.. ಶ್ರೀ ನಾ ಸಂಗೀತ ಸ್ವಾದ ಅನುಭವಿಸುತ್ತೇನೆ.. ದಯವಿಟ್ಟು ನನ್ನನು ಸುಮ್ಮನೆ ಇರಲು ಬಿಡು ಎಂದಿತು.. ಹಾಗಾಗಿ ಚಿತ್ರಗಳು ಕಡಿಮೆಯಾಯಿತು!!!

ಪ್ರಸಾದ್ ಎಂ ಎಸ್ .. ತಮ್ಮ ಹೆಸರನ್ನು ಪ್ರಸಾದ್ ಮ್ಯೂಸಿಕಲ್ ಸಂಜೆ ಎಂದು ಬದಲಾಯಿಕೊಳ್ಳಬೇಕಾಗುತ್ತದೆ ಅಷ್ಟು ಸುಂದರವಾಗಿತ್ತು ಹದಿನೇಳನೆ ತಾರೀಕು ಶನಿವಾರದ ಸಂಜೆ.

ಈ ಸಂಜೆಯನ್ನು ಸುಂದರವಾದ ಗುಂಗಿನಲ್ಲಿ ಕಳೆಯುವಂತೆ ಮಾಡಿದ ಪ್ರಸಾದ್ ಅವರಿಗೆ ಜನುಮದಿನಕ್ಕೆ ಶುಭ ಕೋರಲು ತಾಯಿ ಶಾರದೆ ಅಲ್ಲಿಯೇ ಮಹಡಿಯಲ್ಲಿ ನೆಲೆಸಿ ನನ್ನ ಕೀ ಬೋರ್ಡ್ ಗೆ ಬರಲು ನಿರಾಕರಿಸಿದ್ದರಿಂದ ತಡವಾಯಿತು.

ಪ್ರಸಾದ್ ನಿಮ್ಮ ಸುಂದರ ಅನುಭವವನ್ನು ನಮಗೂ ಸಹ ಹಂಚಿಕೊಂಡದ್ದು, ಸರಸ್ವತಿ ಪುತ್ರರನ್ನು ಪರಿಚಯಿಸಿದ್ದು, ಅವರೊಡನೆ ಆಡಿದ ಕೆಲವು ಮಾತುಗಳು, ಅವರು ಕೊಟ್ಟ ಹಸ್ತ ಲಾಘವ..ಇನ್ನು ಹಾಗೆ ಉಳಿದುಬಿಟ್ಟಿದೆ.

ನಿಮ್ಮ ಜನುಮದಿನಕ್ಕೆ ನಿಮ್ಮ ಬದಲು ನೀವು ಆಯೋಜಿಸಿದ್ದ ಕಾರ್ಯಕ್ರಮದ ಬಗ್ಗೆ ಬರೆಯುವಂತೆ ತಾಯಿ ಶಾರದೆ ಮಾಡಿದ್ದಾಳೆ ಅಂದರೆ ಯೋಚಿಸಿ ಇನ್ನೂ ಆ ಗುಂಗಿನಿಂದ ಹೊರ ಬಂದಿಲ್ಲ ಎಂದು..

ಹುಟ್ಟು ಹಬ್ಬದ ಶುಭಾಶಯಗಳು ಪ್ರಸಾದ.. ಹೀಗೆ ನಿಮ್ಮ ಸಂಗೀತದ ಪ್ರಸಾದ ಹರಿಯುತ್ತಲೇ ಇರಲಿ.. !!!!