ಕಚೇರಿಯ ಕೆಲಸದ ಒತ್ತಡ ಒಮ್ಮೊಮ್ಮೆ ಕುತ್ತಿಗೆ ಮಟ್ಟಕ್ಕೆ ಬರುತ್ತಿತ್ತು.. ಆ ಒತ್ತಡ ನಿವಾರಿಸಿಕೊಳ್ಳೋಕೆ ನನಗೆ ಸಹಾಯ ಮಾಡುತ್ತಿದ್ದದು ಚಲನ ಚಿತ್ರಗಳು.. ಮನೆಗೆ ಬಂದೊಡನೆ ಯಾವುದಾದರೂ ಅಣ್ಣಾವ್ರ ಚಿತ್ರಗಳನ್ನು ನೋಡಿದರೆ ಸಾಕು ಮತ್ತೆ ಮಾಮೂಲಿನ ಸ್ಥಿತಿಗೆ ಬಂದು ಬಿಡುತ್ತಿದ್ದೆ.
ನನ್ನ ಅತ್ಯಂತ ಪ್ರೀತಿಯ ಚಿತ್ರಗಳಲ್ಲಿ ಒಂದು ಶಂಕರ್ ಗುರು.. ಅಣ್ಣಾವ್ರ ಜಾದೂ ಈ ಚಿತ್ರವನ್ನು ಐವತ್ತಕ್ಕೂ ಹೆಚ್ಚು ಬಾರಿ ನೋಡಿಸಿದೆ. ಚಿತ್ರ ನೋಡುತ್ತಿದೆ... ಜೀಪು ಬಂತು.. ಅಣ್ಣಾವ್ರ ಸ್ನೇಹಿತರು ಬಂದರು, ಶುಭಾಶಯಗಳನ್ನು ಕೋರಿದರು.. ಅವರೆಲ್ಲ ಹೋದ ಮೇಲೆ ಶುರುವಾಯಿತು.. ಸುಂದರ ಹಾಡು.. ಹೊಂಗೆಯ ನೆರಳು
"ಬೆಳಗಿನ ಬಿಸಿಲು ಚೆನ್ನಾ.. ಹೊಂಗೆಯ ನೆರಳು ಚೆನ್ನಾ.. ಗೆಳತಿಯೆ ನಿನ್ನ ಸ್ನೇಹ ಚಿನ್ನಕ್ಕಿಂತ ಚೆನ್ನಾ" ಅಣ್ಣಾವ್ರ ಈ ಹಾಡು ಗುನುಗುನಿಸುತ್ತಾ ನೋಡುತ್ತಿದ್ದಾಗ.. ಟನ್ ಅಂಥಾ ಮೊಬೈಲ್ ಸದ್ದು ಮಾಡಿತು.. ನೋಡಿದೆ.. 3K ಕಥನ ಸಂಕಲನಕ್ಕೆ ಹೆಸರು "ಹೊಂಗೆ ಮರದಡಿ ನಮ್ಮ ನಿಮ್ಮ ಕತೆಗಳು"... ಮನಸ್ಸಿಗೆ ಆನಂದ ತಾಳಲಾಗದೆ ಆ ಒಂದು ಕ್ಷಣ ಮನಸ್ಸು ಮಗುವಿನಂತೆ ನಲಿದಾಡಿತು.
ಇಂಥಹ ಒಂದು ಸುಂದರ ಹೆಸರಿನ ಪುಸ್ತಕ ನನ್ನ ಕಪಾಟನ್ನು ಬೆಳಗಲಿದೆ ಎನ್ನುವ ಸಂತೋಷ ಇನ್ನಷ್ಟು ಖುಷಿಯನ್ನು ಹೆಚ್ಚು ಮಾಡಿತ್ತು.
ಭಾನುವಾರ ೨೯ ನವೆಂಬರ್ ೨೦೧೫ ದಿನಕ್ಕೆ ಕಾಯುತ್ತಿತ್ತು ಮನಸ್ಸು.
ಬೆಳಗಿನ ಲಘು ಉಪಹಾರ, ಮದುವೆ ಮನೆಯಲ್ಲಿನ ಸಡಗರ.. ಬಂದವರನ್ನು ವಿಚಾರಿಸಿಕೊಳ್ಳುವ ಪರಿ, ಅರೆ ಇದು ನಮ್ಮ ಮನೆಯ ಸಮಾರಂಭವೇ ಆಗಿ ಹೋಗಿತ್ತು.
ಆರೋಗ್ಯದ ಕಾರಣ ಗುರುಗಳು ಗೋಪಾಲ ವಾಜಪೇಯಿ ಅವರ ಅನುಪಸ್ಥಿತಿಯಲ್ಲಿ ಕಾರ್ಯಕ್ರಮ ಜರುಗಿತು. ಸುಂದರ ಪ್ರಾರ್ಥನಾ ಗೀತೆಯೊಂದಿಗೆ ಆರಂಭವಾದ ಕಾರ್ಯಕ್ರಮ ಸುಂದರ ಪಥದಲ್ಲಿ ಸಾಗಿತು.
ಶ್ರೀ ಜೋಗಿ ಅವರ ಕಥಾ ಸಂಕಲನದ ಬಗ್ಗೆ ಚುಟುಕು ಮಾತುಗಳು, ಕಥೆಗಳಲ್ಲಿನ ಇಷ್ಟವಾದ ಭಾವಗಳು, ಕಾದಂಬರಿ ಎನ್ನುವುದಕ್ಕಿಂತ ಈ ರೀತಿಯ ಪುಟ್ಟ ಪುಟ್ಟ ಕಥೆಗಳ ಸಂಕಲನ ಓದುಗರನ್ನು ಹಿಡಿದಿಡುತ್ತದೆ ಮತ್ತು ತಲುಪುತ್ತದೆ ಎನ್ನುವ ಮಾತುಗಳು ಇಷ್ಟವಾದವು. ಹಿರಿಯ ಕವಿಗಳ, ಸಾಹಿತಿಗಳ ಕಥಾ ರೂಪಕವನ್ನು ಈ ನಿಟ್ಟಿನಲ್ಲಿ ಉದಾಹರಿಸಿದ ಅವರ ಮಾತಿನ ಝರಿ ಸೊಗಸಾಗಿತ್ತು.
ಶ್ರೀ ಮಂಜುನಾಥ ಕೊಳ್ಳೇಗಾಲ ಅವರು, ಈ ಕಥೆಗಳನ್ನು ಓದಿದ ಬಗೆ, ಅದನ್ನು ಆರಿಸಿದ ಬಗೆ ಹೇಳಿದರು. ಇದಕ್ಕಿಂತ ಮೊದಲು ಕಥೆಗಳು ಶುರುವಾದ ಬಗೆ, ತಂದೆ ತಾಯಿಯಿಂದ ಮಕ್ಕಳಿಗೆ ಕಥೆ ಹೇಳುವ ಪರಂಪರೆ, ಇದು ಬೆಳೆದು ಬಂದ ಹಾದಿಯ ಬಗ್ಗೆ ವಿವರಿಸಿದರು. ಅವರ ಮಾತುಗಳು "ಮೊದಲು ಅಪ್ಪನ ಮೂಲಕ ಮಾತಾಡುತ್ತಿದ್ದ ಕಥೆಗಳು, ಅಪ್ಪ ಕೊಟ್ಟ ಒಂದು ಹಠಾತ್ ತಿರುವಿನಿಂದ ಕಥೆಗಳು ನನ್ನ ಬಳಿ ಮಾತನಾಡಲು ಶುರುಮಾಡಿದವು". ಅದ್ಭುತ ಮಾತುಗಳು. ಈ ಪರಂಪರೆಯನ್ನು ಖಂಡಿತ ನಮ್ಮ ಮಕ್ಕಳ ಪೀಳಿಗೆಗೆ ಹೇಳಿಕೊಡಬೇಕು ಎನ್ನುವ ಅವರ ಮಾತುಗಳು ನಿಜಕ್ಕೂ ಗಮನಿಸಬೇಕಾಗಿದೆ. ಪುರಾಣ ಕಥೆಗಳಲ್ಲಿ ಬರುವ ರಾಕ್ಷಸ, ದೇವತೆಗಳು, ದೆವ್ವ, ಪಿಶಾಚಿಗಳು, ಗಂಧರ್ವ, ಕಿನ್ನರ, ಕಿಂಪುರುಷ ಇವರುಗಳ ಬಗ್ಗೆ ಹೇಳಿದಾಗ ಮಕ್ಕಳಿಗೆ ಆಸಕ್ತಿ ಹುಟ್ಟುತ್ತದೆ ಎಂದಾಗ ಹೌದು ಎನ್ನುತ್ತಾ ಹೃದಯ ಅವರಿಗೆ ಸಲಾಂ ಹೇಳಿತು.
ನನ್ನ ಪಕ್ಕದಲ್ಲಿಯೇ ಕೂತಿದ್ದ ಡಾಕ್ಟರ್ ಡಿ ಟಿ ಕೃಷ್ಣಮೂರ್ತಿ ಅವರ ಹೇಳಿದರು "ಶ್ರೀ ಮಕ್ಕಳಿಗೆ ಕಥೆಗಳನ್ನು ಹೇಳುತ್ತಾ ಹೋದ ಹಾಗೆಲ್ಲ, ಮಕ್ಕಳ ನರವ್ಯೂಹ ಜಾಗೃತಿಗೊಳ್ಳುತ್ತದೆ, ವಿಕಸನಗೊಳ್ಳುತ್ತದೆ, ಯೋಚನಾ ಲಹರಿ ವಿಕಸಿತವಾಗುತ್ತದೆ. ಇದನ್ನೆಲ್ಲಾ ಜಗತ್ತಿನ ವಿಜ್ಞಾನಿಗಳು ಸಂಶೋಧನೆ ಮಾಡಿದ್ದಾರೆ ಮತ್ತು ಮಾಡುತಿದ್ದಾರೆ ಎಂದಾಗ ಅಜ್ಜಿ ಹೇಳಿದ ಕಥೆಗಳು ಅಥವಾ ಹಳ್ಳಿ ಮನೆಯಲ್ಲಿ ಚಳಿಗಾಲದ ರಾತ್ರಿಯಲ್ಲಿ ಮನೆಮುಂದಿನ ಚಳಿ ಕಾಯಿಸುವ ಬೆಂಕಿ ಕೆಂಡದ ಮುಂದೆ ಅಜ್ಜ ಹೇಳುತ್ತಿದ್ದ ಕಥೆಗಳಲ್ಲಿನ ಗಮ್ಮತ್ತು ಅರಿವಾಗುತ್ತಾ ಹೋಯಿತು.
ಹೊರಗೆ ಬಂದೆ ನಗುವಿನ ಸರದಾರ ನವೀನ ಕೇಳಿದೆ.. ಈ ಹೆಸರನ್ನು ಯಾರು ಸೂಚಿಸಿದ್ದು ಎಂದು. ಅವರ ಉತ್ತರ ಸೂಪರ್ ಆಗಿತ್ತು. ಇದು ನಮ್ಮ ತಂಡದಿಂದ ಅನುಮೋದನೆ ಹೆಸರು. ಯಾಕೆ ಅಂದರೆ ಜಗುಲಿ ಮೇಲೆ, ಇಲ್ಲವೇ ಅರಳಿ ಮರದ ಕೆಳಗೆ, ಇಲ್ಲವೇ, ಬೇಸಿಗೆಯಲ್ಲಿ ಹೊಂಗೆ ಮರದ ನೆರಳಲ್ಲಿ ಚಿಕ್ಕ ಪುಟ್ಟ ಹರಟೆಗಳು ಕಥೆಗಳಾಗಿ ಬದಲಾಗುತ್ತವೆ, ಅಂಥಹ ಹೆಸರು ಬೇಕು ಎಂದು ಈ ಕಥಾ ಸಂಕಲನಕ್ಕೆ ಇಟ್ಟೆವು ಎಂದರು. ಹೌದು ಅರ್ಥವತ್ತಾದ ಹೆಸರು.
ಈ ಸಂಕಲನಕ್ಕೆ ಕಥೆಗಳನ್ನು ಬರೆದುಕೊಟ್ಟ ಎಲ್ಲಾ ಕಥೆಗಾರರಿಗೂ ನೆನಪಿನ ಕಾಣಿಕೆ ಕೊಟ್ಟು ಗೌರವಿಸಿದರು. ಹಾಗೆ ಎಲ್ಲಾ ಕಥೆಗಾರ ಜೊತೆಯಲ್ಲಿನ ಒಂದು ಚಿತ್ರ ನೆನಪಿನಲ್ಲಿ ಸಂಚಿಕೆಯಲ್ಲಿ ದಾಖಲಾಯಿತು.
ಕನ್ನಡ ಕನ್ನಡ ಎಂದು ಕೂಗಾಡದೆ ಸದ್ದಿಲ್ಲದೇ ತಮ್ಮ ಪಾಡಿಗೆ ಕನ್ನಡಾಂಬೆಯ ಸೇವೆ ಮಾಡುತ್ತಿರುವ ಅಜಾತ ಶತ್ರು ನಮ್ಮೆಲ್ಲರ ಪ್ರೀತಿಯ ಹರಿಣಿ ಮೇಡಂ ಅವರಿಗೆ ರಾಜ್ಯೋತ್ಸವ ಪ್ರಶಸ್ತಿ ಕೊಟ್ಟು, ಪ್ರಶಸ್ತಿಗೆ ಗೌರವ ತಂದು ಕೊಟ್ಟಿದ್ದು ಈ 3K ತಂಡ.
ಹರಿಣಿ ಮೇಡಂ ಅವರ ಬಳಿ ಇರದ ಮಾಹಿತಿ ಇಲ್ಲ ಎಂದು ಹೇಳಿದರೆ ತಪ್ಪಿಲ್ಲ. ಪ್ರವಾಸದ ಕಥನಗಳು, ಸಂಸ್ಕೃತಿಯ ಬಗೆಗಿನ ತಿಳುವಳಿಕೆ, ಪೌರಾಣಿಕ ಕಥನಗಳು, ಹಬ್ಬ ಹರಿದಿನಗಳ ಬಗ್ಗೆ ಮಾಹಿತಿ, ಭಾಷೆಯ ಬಗೆಗಿನ ಪ್ರೀತಿ ಎಲ್ಲವೂ ಸೇರಿರುವ ಒಂದು ಅದ್ಭುತ ಹೃದಯ ಹರಿನಿಂ ಮೇಡಂ ಅವರದು. ಇಂಥವರಿಗೆ ಸಂದ ಗೌರವದಿಂದ ತಾಯಿ ಭುವನೇಶ್ವರಿ ಹೆಮ್ಮೆಯಿಂದ ಈ ಪ್ರಶಸ್ತಿಯನ್ನು ಬೆನ್ನು ತಟ್ಟಿ ಹರಸುವುದೊಂತು ಖಂಡಿತವಾದ ಮಾತು.
ಸಮೂಹದ ಕವಿಗಳಿಂದ ಕವಿತಾ ಸ್ಪರ್ಧೆಯನ್ನು ಏರ್ಪಡಿಸಿ ಕರುನಾಡಿನ ಸಾಹಿತಿ ಜಯಂತ್ ಕಾಯ್ಕಿಣಿ ಅವರಿಂದ ಆಯ್ಕೆ ಮಾಡಿಸಿ ಕವಿಗಳಿಗೆ ಬಹುಮಾನ ಕೊಟ್ಟಿದ್ದು ಇನ್ನೊಂದು ವಿಶೇಷ.
ಒಂದು ಸರಳ ಆದರೆ ಆತ್ಮೀಯ ಸಮಾರಂಭ ಎಂದರೆ ಹೀಗೆಯೇ ಇರಬೇಕು ಎನ್ನುವ ಪಂಕ್ತಿಗೆ ತಕ್ಕ ಉದಾಹರಣೆ ಈದಿನದ ಕಾರ್ಯಕ್ರಮ. ಬಂದವರ ಮೊಗದಲ್ಲಿ ಸಂತಸ, ಹೃದಯದಲ್ಲಿ ಹೇಳಲಾರದ ಕನ್ನಡ ಭಾಷೆಯ ಬಗ್ಗೆ ಗೌರವ, ಒಂದು ಸಾರ್ಥಕ ಕ್ಷಣಗಳನ್ನು ಕಳೆದ ಹೆಮ್ಮೆ ಎಲ್ಲರಲ್ಲೂ ಮನೆ ಮಾಡಿತ್ತು.
ಈ ಕಾರ್ಯಕ್ರಮದಲ್ಲಿ ತೆಗೆದ ಎಲ್ಲಾ ಚಿತ್ರಗಳು ಸುಂದರ ಅತಿ ಸುಂದರ.. ಆದರೆ ದೇವಸ್ಥಾನದ ಪ್ರಸಾದದ ಹಾಗೆ ಸ್ವಲ್ಪ ಮಾತ್ರ ಬಡಿಸಿದ್ದೇನೆ, ಮಿಕ್ಕವು ಫೇಸ್ಬುಕ್ ಕೊಂಡಿಯಲ್ಲಿ ಸಿಗುತ್ತದೆ.
3K ತಂಡಕ್ಕೆ ಶಿರಬಾಗಿ ನಮಿಸುತ್ತಾ, ಅಭಿನಂದನೆ ಹಾಗೂ ಧನ್ಯವಾದಗಳನ್ನು ಒಮ್ಮೆಲೇ ಹೇಳುತ್ತಿದ್ದೇನೆ.
"ಎಂದರೋ ಮಹಾನುಭಾವುಲು ಅಂದರೀಕಿ ವಂದನಮು"