Thursday, August 8, 2013

ಹಾಗೆಯೇ ಆರಿಸಿಕೊಂಡೆ ಆಗ ಮೂಡಿಬಂದದ್ದು .......!!!





























***********
"ಅರೆ ಇದೇನಿದು ಏನಾಯ್ತು ಅಣ್ಣಯ್ಯ? ಬರಿ ಖಾಲಿ ಖಾಲಿ?"

"ಹೌದು ಕಣೋ.. ಕೀಲಿ ಮನೆಯಲ್ಲಿ ಬರೆಯುತ್ತಾ ಹೋದೆ.. ಅಕ್ಷರ ಬಣ್ಣ ಬಣ್ಣ ಇರಲಿ ಅಂತ ಕೆಲ ಬಣ್ಣವನ್ನು ಆಯ್ಕೆ ಮಾಡಿಕೊಂಡೆ.. ಆದರೆ ಆ ವರ್ಣ ಚಕ್ರ ಒಮ್ಮೆ ಗಿರ್ರ್ ಅಂತ ತಿರುಗಿತು..ಹಾಗೆಯೇ ಆರಿಸಿಕೊಂಡೆ ಆಗ ಮೂಡಿಬಂದದ್ದು ಮೂಡಬಿದ್ರಿಯ ಶುಭ್ರ ಬಿಳುಪಿನ ಬಣ್ಣ.."

"ಸಾವಿರ ಕಂಭದ ಬಸದಿಯ ಊರಲ್ಲಿ ಉಗಮವಾದ ಕೂಸು.. ಉದ್ಯಾನ ನಗರಿಯಲ್ಲಿ ಮೌನರಾಗದಲ್ಲಿ ಹಾಡುತ್ತಾ ಕನಸು ಕಂಗಳನ್ನು ಬಿಡುತ್ತಾ ಅನೇಕರ ಅಣ್ಣಂದಿರ ಹೃದಯ ಕಮಲದಲ್ಲಿ ಮುದ್ದಿನ ಪುಟ್ಟಿಯಾಗಿ ನಿಂತಿರುವ ಪುಟ್ಟಿ ಸುಷ್ಮಾಳಿಗೆ ಹುಟ್ಟು ಹಬ್ಬದ ಶುಭಾಶಯಗಳು... ಸುಂದರ ನಗುವಿನ ಪುಟ್ಟ ತಂಗಿಯ ದೊಡ್ಡ ಕನಸುಗಳು ಕೆನ್ನೆಯಲ್ಲಿನ ಗುಳಿಯಂತೆಯೇ ಸುಂದರವಾದ ನನಸಾಗಲಿ.. ಬೆಸುಗೆ ಬೆಸುಗೆ ಜೀವನವೆಲ್ಲಾ ಸುಂದರ ಬೆಸುಗೆ... ಎನ್ನುವಂತೆ ಮುದ್ದಿನ ತಂಗಿಯಾದ ಪುಟ್ಟಿ ಸುಷ್ಮಾಳಿಗೆ ಶುಭ ಹಾರೈಕೆಗಳು... ಹುಟ್ಟು ಹಬ್ಬದ ಶುಭಾಶಯಗಳು... "

"ಧನ್ಯವಾದಗಳು ಅಣ್ಣಯ್ಯ.. ತುಂಬಾ ಖುಷಿಯಾಗುತ್ತಿದೆ.. ಬ್ಲಾಗ್ ಲೋಕದಲ್ಲಿ ಸಿಕ್ಕಿರುವ ಅನೇಕ ಸಹೃದಯರ ಸ್ನೇಹ ಪುಷ್ಪ ನನ್ನ ಪಾಲಿಗೆ ಸಿಕ್ಕಿರುವುದು ನನ್ನ ಪುಣ್ಯ ಅಣ್ಣಯ್ಯ.. "

"ಮತ್ತೆ ಹೇಗೆ ಕಳೆದೆ ನಿನ್ನ ಹುಟ್ಟು ಹಬ್ಬದ ದಿನವನ್ನ ಹೇಗಿತ್ತು... ?"

"ಚೆನ್ನಾಗಿತ್ತು ಅಣ್ಣಯ್ಯ.. .. ಆಫೀಸ್ ನಲ್ಲಿ ಸಹೋದ್ಯೋಗಿಗಳು.. ನನ್ನ ಗೆಳತಿಯರು, ಬ್ಲಾಗ್ ಲೋಕದ ತಾರೆಗಳು ಎಲ್ಲರೂ  ಕರೆ ಮಾಡಿ ಶುಭಾಷಯ ಕೋರಿದರು.. ಇದಕ್ಕಿಂತ ಬೇರೆ ಏನು ಬೇಕು ಅಣ್ಣಯ್ಯ ಅಲ್ವ.. ದೂರದ ಊರಿಂದ ಬಂದು ಇಲ್ಲಿಯೇ ಬೆಳೆಯುತ್ತಿರುವ ನನಗೆ ನಿಮ್ಮೆಲ್ಲರ ಅಭಿಮಾನದ ಪ್ರೀತಿಯೇ ನನಗೆ ಬೆಳೆಯಲು ದಾರಿ ತೋರುತ್ತಿದೆ.. ತುಂಬಾ ಖುಷಿಯಾಗುತ್ತಿದೆ ಅಣ್ಣಯ್ಯ.. ಆದರೂ....  "

"ಹ ಹ ಹ.. ನಿನ್ನ ಮನದಲ್ಲಿರುವ ಗೊಂದಲ ನನಗೆ ಅರ್ಥವಾಗುತ್ತಿದೆ... ಎಲ್ಲಿ ಒಮ್ಮೆ ಮುಂದೇ ನೋಡು.. "

"ಏನಿದೆ ಅಣ್ಣಯ್ಯ.. " ಎನುತ್ತಾ ಮುಂದೆ ತಿರುಗಿ ನೋಡಿದರೆ......... :-)

ಕಣ್ಣ ಮುಂದೆ.. ಸಾವಿರ ಕಂಬಗಳು ಮುಂದೆ ದೀಪಾವಳಿಯ ಪಟಾಕಿಗಳು, ನಕ್ಷತ್ರ ಕಡ್ಡಿಗಳು, ಹೂವಿನ ಕುಂಡಗಳು  ಬೆಳಗಲು ಶುರುಮಾಡಿದವು.. ಪುಟ್ಟಿ ಸುಷ್ಮಾಳ ಕಣ್ಣಲ್ಲಿ ಮಿಂಚು..
************
ರಾಮನ ವಾನರ ಸೇನೆ ರಾಮೇಶ್ವರದ ಧನುಷ್ಕೋಟಿಯ ಹತ್ತಿರ ಬೀಡು ಬಿಟ್ಟಿತ್ತು..... ಸಾಗರವನ್ನು ಲಂಘಿಸಿ ಸೀತಾ ಮಾತೆಯ ದರುಶನ ಮಾಡಿ ಅವರ ಕ್ಷೇಮ ಸಮಾಚಾರವನ್ನು ಹೇಳಬೇಕಿತ್ತು.. ಆದರೆ ಸಾಗರವನ್ನು ದಾಟಲು ಯಾರು ಸಮರ್ಥರಿರಲಿಲ್ಲ.. ಆದರೆ ಎಲ್ಲರೂ ಆಗ ಮಾಡುತ್ತಿದೆ, ಈಗ ಮಾಡುತ್ತಿದ್ದೆ.. ಅದು ಇದು ಅಂತ ಸಬೂಬು ಹೇಳುತ್ತಾ ತಮ್ಮ ಪರಾಕ್ರಮ(?) ಕೊಚ್ಚಿಕೊಳ್ಳುತ್ತಿದ್ದರು... 


ಒಂದು ದೊಡ್ಡ ಬಂಡೆಯ ಮೇಲೆ ಹನುಮಂತ ಸುಮ್ಮನೆ ಕುಳಿತ್ತಿದ್ದ.. ಅದನ್ನ ನೋಡಿದ ಜಾಂಬುವಂತ.. "ಅಲ್ಲಾ ಹನುಮ ಎಲ್ಲರೂ ಅದು ಇದು ಅಂತ ಮಾತಾಡುತಿದ್ದಾರೆ ಆದರೆ ನೀನು ಮಾತ್ರ ತುಟಿ ಪಿಟಿಕ್ ಅನ್ನದೆ ಕುಳಿತಿರುವೆ.. ನಿನಗೆ ಶಕ್ತಿ ಇದೆ, ನಿನ್ನಲ್ಲಿ ಆತ್ಮ ವಿಶ್ವಾಸವಿದೆ, ಛಲವಿದೆ, ನಿನ್ನ ಸಹೋದರರ ಒಳಿತನ್ನು ಯೋಚಿಸುವ ಒಲವಿದೆ, ವಿನಯವಿದೆ ಇನ್ನು ಯಾಕೆ ಯೋಚನೆ.. ಹೊರಡು ವೀರ ಹೊರಡು... " ಎಂದು ಹೇಳುತ್ತಾ ಹನುಮನನ್ನು ಹುರಿದುಂಬಿಸಲು ಯತ್ನಿಸಿದ ಜಾಂಬುವಂತ. 

ಅದಕ್ಕೆ ಏನು ಪ್ರತಿಸ್ಪಂದಿಸದ ಹನುಮ.. "ಅಣ್ಣಾ ಜಾಂಬುವಂತ ನನ್ನ ವಿಚಾರ ಬಿಡು.. ನೋಡು ನನ್ನಷ್ಟೇ ಛಲವಿರುವ, ಶಕ್ತಿಯಿರುವ, ವಿನಯವಿರುವ, ಭ್ರಾತೃ ಮಮತೆ ತುಂಬಿಕೊಂಡಿರುವ, ಆತ್ಮ ವಿಶ್ವಾಸವಿರುವ ಒಂದು ಮುದ್ದು ಕಂದ ಅಲ್ಲಿ ಕುಳಿತಿದೆ.. ತನ್ನೆಲ್ಲ ಶಕ್ತಿಯನ್ನು ಒಗ್ಗೂಡಿಸಿಕೊಂಡು ಸಹಸ್ರ ಬಸದಿಯ ಊರಿಂದ ರವಿ ಮೂಡುವ ದಿಕ್ಕಿನ ತಟದಿಂದ ಉದ್ಯಾನನಗರಿಗೆ ಬಂದು ಎಲ್ಲರ ಮುದ್ದಿನ ತಂಗಿಯಾಗಿ, ಮಗಳಾಗಿ ಮಿಂಚುತ್ತಿರುವ ಆ ಪುಟ್ಟಿಯನ್ನು ನೋಡು.. ಆ ಮಗುವಿಗೆ ನಮ್ಮೆಲ್ಲರ ಆಶೀರ್ವಾದ ಬೇಕಿದೆ.. ಅಲ್ಲವೇ... ಸೀತಾಮಾತೆಯನ್ನು ಹುಡುಕಿ ಬರುವೆ.. ಹಾಗೆಯೇ ಈ ಮಗುವಿಗೆ ಶುಭವಾಗಲಿ ಎಂದು ಹೇಳಬೇಕು ಅಲ್ವೇ" 


"ನಿನ್ನ ಮಾತು ನಿಜ ಹನುಮ.. ಹೌದು ಮನುಜ ಕುಲದಲ್ಲಿ ಹುಟ್ಟಿದ ಮೇಲೆ ಅವರದ್ದು ಸಾಹಸ ಬದುಕು.. ಮೌನರಾಗದಲ್ಲಿ, ಅದೇ ತಾಳದಲ್ಲಿ, ಎರಡು ಕಣ್ಣಲ್ಲಿ ಕಾಣುವ ಕನಸು ತುಂಬಾ ಇಷ್ಟವಾಗುತ್ತೆ.. ಆ ಕನಸುಗಳೆಲ್ಲ ನನಸಾಗಲಿ ಎಂದು ಹಾರೈಸುತ್ತೇನೆ.. ಅಲ್ಲಿ ನೋಡು ಆ ವಾನರರು ಒಂದು ಕಲ್ಲನ್ನು ರಾಮ ಎಂದು ಹೇಳಿ ನೀರಿಗೆ ಹಾಕಿದರೆ ತೇಲುತ್ತದೆ.. ಹಾಗೆಯೇ ನಗು ನಗುತ್ತಾ ಬಂದ ಜೀವನವನ್ನು ಸ್ವೀಕರಿಸಿ.. ಅಣ್ಣಾವ್ರ "ನಗುತಾ ನಲಿ ನಲಿ ಏನೇ ಆಗಲಿ" ಹಾಡಿನಂತೆ ಇದ್ದರೇ ಜೀವನದ ಹಾದಿ ಮಂಜಿನ ಹನಿಗಳನ್ನು ಹೊದ್ದು ಮಲಗಿರುವ ಹೂವಿನ ಹಾದಿಯಂತೆ ಇರುತ್ತದೆ" 

"ಹೌದು ಜಾಂಬುವಂತ.. ಆ ಪುಟ್ಟಿಗೆ ಸುಮಧುರ ಶುಭಾಶಯಗಳನ್ನು ಹೇಳುತ್ತಲೇ.. ಆ ಮಗುವಿನ ಆಸೆ ಆಕಾಂಕ್ಷೆ, ಗುರಿ ಎಲ್ಲವೂ  ಶ್ರೀ ರಾಮನ ಬಾಣದಂತೆ ಸರಿಯಾದ ಗುರಿ ಸೇರಲಿ ಎಂದು ಹಾರೈಸೋಣ.. ಪುಟ್ಟಿ ಸುಷ್ಮಾ ಹುಟ್ಟು ಹಬ್ಬದ ಶುಭಾಶಯಗಳು... "
***********
ಇದೀಗ ಬಂದ ಸುದ್ದಿ.. ಸುಷ್ಮಾ ಪುಟ್ಟಿ ಈ ಲೇಖನ ಓದಿದ ಮೇಲೆ ಜೋರಾಗಿ ನಕ್ಕಿದ್ದನ್ನ ಕೇಳಿದ ರಾಮನಗರದ ಹಾದಿಯಲ್ಲಿರುವ ಕೆಂಗಲ್ ಹನುಮಂತರಾಯ ಒಮ್ಮೆ ಜೋರಾಗಿ ನಕ್ಕನಂತೆ ಹಾಗೂ ಆಶೀರ್ವಾದವಾಗಿ ಒಮ್ಮೆ ಕೆಂಗಲ್ ನಲ್ಲಿನ ಹನುಮಂತನ ದೇವಸ್ಥಾನಕ್ಕೆ ಭೇಟಿ ನೀಡಬೇಕು ಎಂದು ಆದೇಶಪೂರ್ವಕವಾಗಿ ಆಶೀರ್ವಾದ ನೀಡಿದನಂತೆ!!!!!

Thursday, July 11, 2013

ಸಡಗರದಿಂದಾ ಗಗನದ ಅಂಚಿಂದ........!

ಭಕ್ತ ಅಂಬರೀಷ ತನ್ನ ರಾಜ್ಯದ ಹಿತಕ್ಕಾಗಿ ಮಳೆಯಿಲ್ಲದೆ ಬೆಂಡಾಗಿದ್ದ ಇಳೆಯನ್ನು ತಣಿಸುವುದಕ್ಕಾಗಿ, ಮಳೆಯನ್ನು ಸುರಿಸಲು ಇಂದ್ರಾದಿದೇವತೆಗಳಿಗೆ ಮೊರೆ ಹೊಕ್ಕು ಬೃಹತ್ ಯಜ್ಞವನ್ನು ಕೈಗೊಂಡಿದ್ದ.. ವರುಣ ದೇವನನ್ನು ತೃಪ್ತಿ ಪಡಿಸಲು ಯಜ್ಞದ ಹವ್ವಿಸ್ಸಿನ ಜೊತೆಯಲ್ಲಿ ಮಂತ್ರಗಳು, ಶ್ಲೋಕಗಳು, ಹಾಡುಗಳು ಎಲ್ಲವೂ ಮೇಳೈಸಿದ್ದವು....

ಯಜ್ಞ ಕುಂಡದಲ್ಲಿ ಅಗ್ನಿ ದೇವ ಪ್ರತ್ಯಕ್ಷನಾಗಿದ್ದ.. ತುಪ್ಪ, ಸಮಿತ್ತುಗಳು ಹೇರಳವಾಗಿ ಗಾಡಿಗಟ್ಟಲೆ ಕುಂಡದ ಸುತ್ತಾ ರಾಶಿ ಬಿದ್ದಿದ್ದವು .. ಹೋತ್ರಿಗಳು ಭಕ್ತಿ ಪರವಶರಾಗಿ  ಮಂತ್ರಗಳನ್ನು ಪಠಣ ಮಾಡುತ್ತಿದ್ದರು. ವೇದಮಂತ್ರಗಳ ಘೋಷಗಳು  ಅಂಬರ ಮುಟ್ಟುತ್ತಿತ್ತು..

ಯಾಗ ಮಾಡುತ್ತಲೇ ಭಕ್ತ ಅಂಬರೀಷ ದೇವತೆಗಳನ್ನು ಮೆಚ್ಚಿಸಲು ಅನೇಕ ಪದ್ಯಗಳನ್ನು, ಸುಂದರ ಕವನಗಳನ್ನು ಹಾಡಲು ಶುರುಮಾಡಿದ ...

"ಸ್ವರಗಳ ಮಾಧುರ್ಯ ರಾಗದ ಸೌಂದರ್ಯ
ಮೃಗಗಳ ತಣಿಸೆ ಖಗಗಳ ಕುಣಿಸೆ
ಸಡಗರದಿಂದಾ ಗಗನದ ಅಂಚಿಂದ
ಆ….ಆ….ಆ….ಆ…
ಸಡಗರದಿಂದಾ ಗಗನದ ಅಂಚಿಂದ
ಸುರರು ಬಂದು ಹರಿಯ ಕಂಡು ಹರುಷದಿ
ಭುವಿಯೆ ಸ್ವರ್ಗ ಭುವಿಯೆ ಸ್ವರ್ಗ ಎನುತಿರಲು
ನಾದಮಯ ಈ ಲೋಕವೆಲ್ಲಾ"

ಹಾಡಿನ ಗಾಯನ, ಪದಗಳ ಜೋಡಣೆ, ರಾಗ ಎಲ್ಲವೂ ದೇವತೆಗಳನ್ನು ಮಂತ್ರ ಮುಗ್ಧರನ್ನಾಗಿಸಿತು. ಬೇರೆ ದಾರಿ ಕಾಣದೆ ಭುವಿಗಿಳಿದು ಬಂದರು..

"ಭಕ್ತ ಅಂಬರೀಷ.. ನಿನ್ನ ಗಾನ ಸುಧೆ, ನಿನ್ನ ಪರಿಶ್ರಮ, ಯಜ್ಞ ಯಾಗಾದಿಗಳಿಂದ ನಮ್ಮನ್ನು ತೃಪ್ತಿ ಪಡಿಸಿದ್ದೀಯ.. ನಿನಗೆ ಏನು ವರ ಬೇಕೋ ಕೇಳಿಕೋ"

"ದೇವತೆಗಳೇ.. ನಿಮ್ಮ ಆಗಮನದಿಂದ ನನ್ನ ಹಾಗು ನಾಡಿನ ಪ್ರಜೆಗಳ ಜನ್ಮ ಪಾವನವಾಯಿತು .ನನ್ನ ಭಾಗ್ಯ ನಿಮ್ಮನ್ನು ನೋಡಲು ಸಾಧ್ಯವಾಗಿದ್ದು.. ನನ್ನ ಬೇಡಿಕೆಗಳು ಬಹಳ ಸರಳ... ಈ ಯಜ್ಞ ಯಾಗಾದಿಗಳಿಂದ ಸಂತೃಪ್ತರಾಗಿ ವರುಣ ಮಳೆರಾಯನನ್ನು ಖಂಡಿತ ಕಳಿಸುತ್ತಾನೆ.. ಆ ನಂಬಿಕೆ ಇದೆ ಎನಗೆ.. ಅದು ಬಿಟ್ಟು ಬೇರೆ ವರ ಕೇಳಲೇ"

"ಅಗತ್ಯವಾಗಿ ಭಕ್ತ.. ನಿನ್ನ ಭಕ್ತಿಗೆ ಮೆಚ್ಚಿದ್ದೇವೆ ಏನೇ ಕೇಳಿದರೂ ಅದು ಸಿಗುತ್ತದೆ"

"ಮೊದಲನೆಯ ವರ.... ನೋಡಿ ಇದುವರೆವಿಗೂ ನಾ ಹಾಡಿದ ಅನೇಕ ಕವಿತೆಗಳನ್ನು ಬರೆದಿರುವ,  ಭಾರತ ಮಾತೆಯ ಪುಣ್ಯಕ್ಷೇತ್ರದ ಹೆಸರಾದ,  ನಮ್ಮ ಆಸ್ಥಾನ ಕವಿ ಬದರಿನಾಥರ ಮೇಲೆ.... ಶ್ರೀ ಬದರಿನಾಥನ ಅನುಗ್ರಹ ನಮ್ಮ  ಸದಾ ಇರಬೇಕು..  "

"ತಥಾಸ್ತು"

"ಎರಡನೆಯ ವರ.... ಪ್ರತಿವಾರವೂ ಬರೆಯುವ,  ಲೋಕದಲ್ಲಿ ನಡೆಯುವ ಘಟನೆಗಳ,  ಕವಿತೆಗಳು ಎಲ್ಲಾ ಕಡೆಯೂ ಸಿಗುವಂತಾಗಬೇಕು"

"ತಥಾಸ್ತು"

"ಮೂರನೆಯ ವರ....  ಮುದ್ರಣಗೊಂಡ ಇವರ ಕವಿತೆಗಳ ಹೊತ್ತಿಗೆ... ವಿಶ್ವದಗಲಕ್ಕೂ ಪಸರಿಸಿ ಕೊಲ್ಲಾಪುರದಲ್ಲಿ ನೆಲೆಸಿರುವ ಶ್ರೀ ಲಕ್ಷ್ಮಿ ದೇವಿಯೂ ಇವರ ಮನೆಯಲ್ಲಿ ಸದಾ ನಗು ನಗುತ್ತಿರಬೇಕು"

"ತಥಾಸ್ತು.. ಭಕ್ತ ಅಂಬರೀಷ.. ನಿನಗಾಗಿ ನಿನ್ನ ನಾಡಿನ ಜನತೆಗಾಗಿ ಏನು ಕೇಳಲಿಲ್ಲ... ಬದಲಿಗೆ ಸುಂದರ ಮನಸ್ಸಿನ ಬದರಿನಾಥರ ಬಗ್ಗೆ ಎಲ್ಲವನ್ನು ಕೇಳಿದೆ.. ಏನು ಇದಕ್ಕೆ ಕಾರಣ?"

"ದೇವತೆಗಳೇ.. ನನ್ನಿಂದ ನಡೆಸಿದ ಯಜ್ಞ ಯಾಗಾದಿಗಳಿಂದ ತೃಪ್ತಿ ಹೊಂದಿ ನನ್ನ ನಾಡನ್ನು ಪ್ರಜೆಗಳನ್ನು ಹರಸುತ್ತೀರಾ.. ಆ ವಿಷಯ ನಾ ಬಲ್ಲೆ..ಆದರೆ ಇಂತಹ ಒಬ್ಬ ಸಹೃದಯಿ ಗೆಳೆಯನನ್ನು ಹೊಂದಿರುವ ಹದಿನೈದನೆ ಲೋಕ ಬ್ಲಾಗ್ ಲೋಕದಲ್ಲಿ, ವಿಶಿಷ್ಟ ಪ್ರತಿಭೆಯಿಂದ,  ತನ್ನ ಕವಿತೆಗಳ ಮೂಲಕ ಜಗದಗಲ ನಡೆಯುತ್ತಿರುವ ವಿಷಯಗಳನ್ನು ಸುಂದರ ಪದಗಳಲ್ಲಿ ನೇಯ್ದು ಬರೆಯುತ್ತಿರುವ ಕವಿತೆಗಳು ಎಲ್ಲರ ಪ್ರಶಂಸೆಗೆ ಪಾತ್ರವಾಗಿವೆ. ಅದನ್ನು ಎಲ್ಲರೂ ಜತನದಿಂದ ತಮ್ಮ ಬಳಿಯಲ್ಲಿ ಇಟ್ಟುಕೊಳ್ಳಲು ಸದಾ ಓದಲು ಮುದ್ರಣಗೊಂಡ ಪ್ರತಿಗಳ ರೂಪದಲ್ಲಿ ಎಲ್ಲರನ್ನು ಸೇರಬೇಕು ಹಾಗೆಯೇ ಮಹಾವಿಷ್ಣುವಿನ ಹಾಗೂ ಶ್ರೀ ಲಕ್ಷ್ಮಿಯ ಕೃಪೆ ಸದಾ ಇರಬೇಕು.. ಅದಕ್ಕಾಗಿಯೆ ನಮ್ಮ ಆಸ್ಥಾನದ ಕವಿ ಬದರಿನಾಥರ ಬಗ್ಗೆ ವರಗಳನ್ನು ಕೇಳಿದ್ದು"

"ತಥಾಸ್ತು.. ನಿನ್ನ ಮಾತಿಗೆ ಮೆಚ್ಚಿದ್ದೇವೆ.. ಅಂಬರೀಷ ನಿನ್ನ ನಾಡು, ಜನತೆ ಸುಭೀಕ್ಷವಾಗಿರುವುದು ಅಷ್ಟೇ ಅಲ್ಲದೆ ನಿನ್ನ ಎಲ್ಲಾ ಆಸೆ ಆಕಾಂಕ್ಷೆಗಳು ಸಂಪೂರ್ಣವಾಗಿ ನೆರವೇರಲಿ ಹಾಗೆ ಬದರಿನಾಥರ ಎಲ್ಲ ಕವಿತೆಗಳು ಎಲ್ಲರ ಮನೆ ಮನ ಮುಟ್ಟಲಿ ಶ್ರೀ ವಿಷ್ಣುವಿನ ಹಾಗೂ ಮಹಾಲಕ್ಷ್ಮಿಯ ಅನುಗ್ರಹ ಸದಾ ಅವರ ಕುಟುಂಬದ ಮೇಲಿರಲಿ" ಎಂದು ಹೇಳಿ ದೇವತೆಗಳು ಅಂತರ್ದಾನರಾದರು...

ಭಕ್ತ ಅಂಬರೀಷನ ಕಣ್ಣಲ್ಲಿ ಧಾರಾಕಾರವಾಗಿ ಹರಿಯುತಿದ್ದ ಆನಂದ ಭಾಷ್ಪ.. ಪಕ್ಕದಲ್ಲೇ ವಿನೀತರಾಗಿ ನಿಂತಿದ್ದ ಬದರಿನಾಥರು ಸಂತಸದಲ್ಲಿ ಆನಂದಭಾಷ್ಪದ ಮಜ್ಜನದಲ್ಲಿ ತೋಯ್ದು ತೊಪ್ಪೆಯಾಗಿದ್ದರು.

"ಅಂಬರೀಷ ಮಹಾಪ್ರಭು ನಿಮ್ಮ ಆಶೀರ್ವಾದಕ್ಕೆ ನಾ ಏನು ಹೇಳಲಿ... ನಿಮ್ಮ ಒಲುಮೆ ಸದಾ ಹೀಗೆ ಇರಲಿ.. ನನ್ನ ಕವಿತೆಗಳನ್ನು ಓದಿ, ನಲಿದು, ಹಾಡಿ  ಹರಸಿದ್ದೀರ.. ನಿಮ್ಮ ಒಲುಮೆಗೆ ನಾ ಶರಣಾದೆ"

"ಬದರಿನಾಥ.. ನೀವು ಸುಂದರ ಮನದ ಕವಿಗಳು ನಿಮ್ಮ ಒಲುಮೆ, ಗೆಳೆತನ ಬ್ಲಾಗ್ ಲೋಕದ ಒಂದು ಶಕ್ತಿ.. ದೇವತೆಗಳೇ ನಿಮಗೆ ಹರಸಿ ಹೋಗಿದ್ದಾರೆ.. ಇನ್ನು ನಿಮಗೆ ಯಾವ ಆತಂಕವೂ ಇರುವುದಿಲ್ಲ.. ಇಂದಿನ ಹುಟ್ಟು ಹಬ್ಬದ ಸಂಭ್ರಮದಲ್ಲಿ ತೇಲಾಡಿ ಈಜಾಡಿ ಆನಂದಿಸಿ.. ನಿಮ್ಮ ನಗು ಸದಾ ನಿಮ್ಮ ಮುಖದಲ್ಲಿರಲಿ... ಹುಟ್ಟು ಹಬ್ಬದ ಶುಭಾಶಯಗಳು ಬದರಿನಾಥ" ಎಂದು ಮತ್ತೊಮ್ಮೆ ಭಕ್ತ ಅಂಬರೀಷ ಹೇಳಿದಾಗ ಬದರಿನಾಥರ ಮೊಗದಲ್ಲಿ ಹೇಳಲಾರದ ಸಂತಸ ಗಂಗೆಯಾಗಿ ಹೃದಯದ ಲೋಕದಿಂದ ಕಣ್ಣಿನ ಲೋಕದ ಮಾರ್ಗವಾಗಿ ಧರಣಿಗೆ ತಲುಪಿದಳು..

"ಇಂತಹ ಪ್ರಭುಗಳನ್ನು ಪಡೆದ ನಾನೆ ಧನ್ಯ.. ಬ್ಲಾಗ್ ಲೋಕದ ತಾರೆಗಳ ಆಶೀರ್ವಾದದಿಂದ,  ನೀವು ದೇವತೆಗಳಿಂದ ಕರುಣಿಸಿದ ವರದ ಆಶೀರ್ವಾದದ ಬಲದಿಂದ ಇನ್ನಷ್ಟು ಕವನಗಳು ಹೊರಬರಲು ಸಹಾಯವಾಗುತ್ತದೆ... "


"ಬದರಿನಾಥ ಶುಭವಾಗಲಿ.. ನಿಮ್ಮ ಕನಸೆಲ್ಲ ನನಸಾಗಲಿ.. ಮುದ್ರಿತಗೊಂಡ ಒಂದು ಪ್ರತಿಯನ್ನು ಈ ವಿಳಾಸಕ್ಕೆ ತಪ್ಪದೆ ಕಳಿಸಬೇಕು.. ಅಲ್ಲಿಯೇ ನಾ ಕಾಯುತ್ತಿರುವೆ"

"ಭಕ್ತ ಅಂಬರೀಷ"
ಅರಮನೆ ಮನೆ ಸಂಖ್ಯೆ : ಓಂ
ಲೇಖನಗಳ ಮುಖ್ಯ ರಸ್ತೆ
ಕವನಗಳ ಬೀದಿ
ಕಥಾಸಾಗರ
ಬ್ಲಾಗ್ ಲೋಕ
ವಸುಂಧರೆ

"ಖಂಡಿತ ಮಹಾಪ್ರಭು... ಖಂಡಿತ ಕಳಿಸುವೆ.. ಹಾಗೆಯೇ ನನ್ನ ಜನುಮದಿನಕ್ಕೆ ನೀವು ಕರುಣಿಸಿದ ವರದ ಮೂಟೆ ಸಿಹಿಯಾದ ಸಕ್ಕರೆ ಮೂಟೆ... !"

***********************

ಬ್ಲಾಗ್ ಲೋಕದ ಸಮಸ್ತ ಜನತೆಗಳ ಪರವಾಗಿ ಹಬ್ಬದ ಶುಭಾಶಯಗಳು ಬದರಿ ಸರ್.. ನಿಮ್ಮ ಕನಸೆಲ್ಲ ಹಕ್ಕಿಯಾಗಿ ಹಾರಿ ಹೊಸ ಹೊಸ ಕನಸುಗಳ ಜೊತೆ ನನಸಾದ ಸಡಗರ ಸಂಭ್ರಮಗಳನ್ನು ತರಲಿ.. ಶುಭವಾಗಲಿ"

 ಶುಭಮಸ್ತು 

*************************

Monday, June 17, 2013

ಸಾಮೀ ಎದ್ದು ಕೂತವ್ನಂತೆ!!!

ಜನರೆಲ್ಲಾ ಎದ್ದು ಬಿದ್ದು ಓಡುತ್ತಿದ್ದರು.. !

ಇತರರಿಗೆ ಆಶ್ಚರ್ಯವಾಯಿತು... ವೇಗವಾಗಿ ಓಡುತ್ತಿದ್ದ ಒಬ್ಬನನ್ನು ಬಲವಂತವಾಗಿ ಹಿಡಿದು "ಏನಪ್ಪಾ?...  ಏನಾಯ್ತು? ಯಾಕೆ ಹೀಗೆ ದೆವ್ವ ಕಂಡವರ ಹಾಗೆ ಓಡ್ತಾ ಇದ್ದೀರಾ?"  ಅಂತ ಕೇಳಿದ ಒಬ್ಬ. 

ಏದುಸಿರು ಬಿಡುತ್ತಾ "ಸಾಮೀ ಎದ್ದು ಕೂತವ್ನಂತೆ?... ಬಿಡಿ ಸಾಮೀ ನಾನು ಹೋಗ್ಬೇಕು" ಅಂತ ಬಲವಂತವಾಗಿ ಬಿಡಿಸಿಕೊಂಡು ಓಡಲು ಶುರು ಮಾಡಿದ... ಮತ್ತೆ ಅವನ ಹಿಂದೆ ಓಡಿ ಹೋಗಿ ಹಿಡಿದುಕೊಂಡು, 

"ಏನಪ್ಪಾ... ಸರಿಯಾಗಿ ಅರ್ಥವಾಗುವಂತೆ ಕನ್ನಡದಲ್ಲಿ ಹೇಳಬಾರದೇ.. ದಯಮಾಡಿ ಹೇಳಪ್ಪ" ಅಂತ ಅಂಗಲಾಚಿದ,

"ಸಾಮೇ ಬುಡಿ ಸಾಮೇ ನನ್ನ" ಅಂತ ಕೊಸರಾಡಿದ... ಹಿಡಿದವನು ಪಟ್ಟು ಬಿಡಲಿಲ್ಲ.. 

"ಸಾಮಿ.. ನೀವೂ ಬನ್ನಿ ನಾ ಅಲ್ಲಿಗೆ ಹೋಯ್ತಾ ಇವ್ನೀ.. " ಅಂತ ಆತನನ್ನು ಕರೆದೊಯ್ದಾ!

ಎಲ್ಲರೂ ದೇವಸ್ಥಾನದೊಳಗೆ  ಬಂದರು.. ಅಲ್ಲಿನ ಅರ್ಚಕರು ಗಡ ಗಡ ನಡುಗುತ್ತಿದ್ದರು... ಒಮ್ಮೆ ಗರ್ಭ ಗುಡಿಯ ಕಡೆ ನೋಡುತ್ತಾರೆ ಇನ್ನೊಮ್ಮೆ ಜನಗಳ ಕಡೆ ನೋಡುತ್ತಾರೆ.... 

ಅಲ್ಲಿ ನೆರೆದಿದ್ದ ಜನರಿಗೆ ಆಶ್ಚರ್ಯ... ಭಯ... ಎಲ್ಲವೂ ಒಮ್ಮೆಲೇ...! ಏನಾಯ್ತಪ್ಪ? ಅಂತ ಹುಬ್ಬನ್ನು ಮೇಲೆ ಮಾಡಿ ಅರ್ಚಕರಿಗೆ ಕಣ್ಣು ಸನ್ನೆಯಲ್ಲೇ ಕೇಳಿದರು

ಅರ್ಚಕರು ನಡುಗುವ ತನುವಿಂದ.. ಕಣ್ಣನ್ನು ಗರ್ಭಗುಡಿಯ ಕಡೆ ತೋರಿಸಿದರು... 

ಅಲ್ಲಿನ ದೃಶ್ಯ ನೋಡಿ ಜನಗಳ ಕೈಗಳು, ತುಟಿಗಳು, ಕಾಲುಗಳು ನಡುಕ ಹತ್ತಿದವು.. ಇದ್ದದರಲ್ಲಿ ಧೈರ್ಯವಂತರಂತಿದ್ದ  ಒಬ್ಬರು ಗರ್ಭ ಗುಡಿಯ ಒಳಗೆ ಹೋಗಿಯೇ ಬಿಟ್ಟರು.. ಅಲ್ಲಿನ ದೃಶ್ಯ ನೋಡಿ ಅವರ ಕಣ್ಣುಗಳು ತುಂಬಿಬಂದವು... 

ಕಣ್ಣನ್ನು ಒರೆಸಿಕೊಂಡು  ನಡುಗುವ ಕೈಗಳಿಂದ ರಂಗನಾಥನಿಗೆ ಸಾಷ್ಟ್ರಾಂಗ ನಮಸ್ಕಾರ ಮಾಡಿ "ದೇವನೇ ಏನಪ್ಪಾ ಇದು ನಿನ್ನ ಲೀಲೆ... ಸನಕ ಸನಂದಾದಿಗಳಿಗೆ ಸಿಕ್ಕದ ಭಾಗ್ಯ ನನಗೆ ಸಿಕ್ಕುವಂತೆ ಮಾಡಿದೆ.. ದೇವನೇ ನಿನ್ನ ಕರುಣೆ ಸದಾ ನಮ್ಮೆಲ್ಲರ ಮೇಲೂ ಇರಲಿ ತಂದೆ" ಎನ್ನುತ್ತಾ ಹೊರಗೆ ಬಂದು.. 

ಅಲ್ಲಿನ ಅರ್ಚಕರನ್ನು ಕರೆದು "ಬನ್ನಿ ಸ್ವಾಮೀ ಒಳಗೆ ಹೋಗಿ ಬನ್ನಿ" ಎಂದರು..  

"ಸರ್ ನೀವು ಬಂದರೆ ಮಾತ್ರ ನಾವು ಒಳಗೆ ಬರುತ್ತೇವೆ... !"ಎಂದರು ಅರ್ಚಕರು.. 

"ಸರಿ ನಡೆಯಿರಿ ಬರುತ್ತೇನೆ" ಎಂದು ಮತ್ತೆ ಗರ್ಭಗುಡಿಯೊಳಗೆ ಬಂದರು

ಅರ್ಚಕರಿಗೆ ಕಣ್ಣ ಮುಂದೆ ನೆಡೆಯುತ್ತಿರುವುದು ನಿಜವೋ...... ಸುಳ್ಳೋ.... ಪವಾಡವೋ...  ತಿಳಿಯುತ್ತಿಲ್ಲ.. ಕಣ್ಣಿನ ಎವೆ ಕೂಡ ಮಿಟುಕಿಸದೆ  ನೋಡುತ್ತಲೇ ಇದ್ದರು.. !

ಧೈರ್ಯವಂತರಾಗಿದ್ದ ಅವರು ಧೈರ್ಯ ಮಾಡಿ ಕೇಳಿಯೇ ಬಿಟ್ಟರು 

"ಏನು ಸ್ವಾಮೀ..ನಿನ್ನ ಲೀಲೆ ...  ಧರೆಗಿಳಿದು ಬಂದ ಕಾರಣ ತಿಳಿಯುತ್ತಿಲ್ಲ...." 

ಪ್ರಸನ್ನ ಚಿತ್ತನಾದ ಶ್ರೀ ರಂಗನಾಥ ಸ್ವಾಮೀ .. ಅಲ್ಲಿಯೇ ಕುಳಿತಿದ್ದ ಶ್ರೀ ಲಕ್ಷ್ಮಿಯ ಕಡೆ ನೋಡಿ ಮುಗುಳು ನಗೆ ಬೀರಿದರು.. 

ಆಗ ಶ್ರೀಲಕ್ಷ್ಮೀ "ಭಕ್ತ.. ಸ್ವಾಮಿಗೆ ಮುಂಜಾನೆ ಏನು ಅನ್ನಿಸಿತೋ ಏನೋ.. ಅಚಾನಕ್ಕಾಗಿ ಶ್ರೀಲಕ್ಷ್ಮಿ ಕಾಲು ಒತ್ತಿದ್ದು ಸಾಕು ಅಲ್ಲಿಯೇ ಇರುವ ಲ್ಯಾಪ್-ಟಾಪ್ ಕೊಡು" ಎಂದರು.. 

ನಾನು ಆಶ್ಚರ್ಯಚಕಿತಳಾಗಿ  "ಯಾಕೆ ಸ್ವಾಮೀ.. ಏನಾಯಿತು ನಾಥ" ಎಂದು ಕೇಳಿದೆ 

ಅದಕ್ಕೆ ಸ್ವಾಮಿಯು "ಲಕ್ಷ್ಮಿ.. ಯಾಕೋ ಮಲಗಿ ಮಲಗಿ ಸಾಕಾಗಿದೆ ಶ್ರೀರಂಗಪಟ್ಟಣದ ಚರಿತ್ರೆಯನ್ನು ಒಮ್ಮೆ ಓದುವ ಆಸೆ ಮೂಡುತ್ತಿದೆ.. ಅದಕ್ಕಾಗಿ  ಲ್ಯಾಪ್-ಟಾಪ್ ಬೇಕು" ಅಂತ ಹೇಳಿದರು 

"ಹೇಗೆ ನೋಡುತ್ತೀರಿ ಸ್ವಾಮಿ" ಎಂದೇ ನಾನು

"ಮೈಸೂರಿನಲ್ಲಿರುವ ನಿಮ್ಮೊಳಗೊಬ್ಬ ಬಾಲೂ ಎನ್ನುವವರು ಶ್ರೀರಂಗಪಟ್ಟಣದ ಕಲ್ಲು ಕಲ್ಲಿನ ಇತಿಹಾಸವನ್ನು ಬಿಡಿಸಿ ಇಟ್ಟಿದ್ದಾರೆ ಅವರ ಕಾವೇರಿ ರಂಗ !!!! ಎನ್ನುವ ಬ್ಲಾಗಿನಲ್ಲಿ... ಶ್ರೀರಂಗಪಟ್ಟಣದ ಅಧಿನಾಯಕನಾದ ನನ್ನ ಚರಿತೆ.. ನನ್ನ ನೆಲವನ್ನು ಸುತ್ತುವರೆದಿರುವ ಕಾವೇರಿ ಮಾತೆಯ ಇತಿಹಾಸ.. ಈ ಕ್ಷೇತ್ರದ ಸ್ಥಳ ಪುರಾಣ.. ಇಲ್ಲಿ ಆಳಿದ ರಾಜ ಮಹಾರಾಜರ ಚರಿತ್ರೆ.. ನನ್ನ ಮಡದಿ ಭೂದೇವಿಯಲ್ಲಿ ಅಡಗಿರುವ  ವಿಸ್ಮಯಗಳು ಎಲ್ಲವೂ ಈ ಬ್ಲಾಗಿನಲ್ಲಿ ಅನಾವರಣಗೊಂಡಿದೆ.. ವಿದೇಶದಿಂದ ಬಂದಿದ್ದ ಮಹಿಳೆಯೊಬ್ಬರಿಗೆ ಈ ಪ್ರದೇಶದ ಇತಿಹಾಸವನ್ನು ಮಕ್ಕಳಿಗೆ ಹೇಳುವಂತೆ ವರ್ಣಿಸಿರುವ ಅವರ ಬರಹದ ಮಹತ್ವ..  ಓದಿಯೇ ತಿಳಿಯಬೇಕು.. ನನ್ನ ಆಶೀರ್ವಾದದ ಬಲದಿಂದ ಈ ಕಾವೇರಿ-ರಂಗನ ಇತಿಹಾಸ ಮುದ್ರಣ ರೂಪದಲ್ಲಿ ಬಂದು ಸಮಸ್ತ ಕುಲಕೋಟಿಗೂ ತಲುಪುವಂತೆ ಆಗುತ್ತದೆ.."

ಬಾಲೂ ಸರ್ ಅವರ ಕಾವೇರಿ-ರಂಗ ಬ್ಲಾಗಿನ ಕೊಂಡಿ http://shwethadri.blogspot.in/
"ಒಹ್.. ಹೌದಾ ಸ್ವಾಮೀ ನಿಮ್ಮ ಮಾತುಗಳನ್ನ ಕೇಳಿ ಕ್ಷೀರಸಾಗರದ ಕ್ಷೀರವನ್ನು ಕುಡಿದಷ್ಟೇ ಸಂತಸವಾಗುತ್ತಿದೆ.. ಅಂದ ಹಾಗೆ ಬೆಳಿಗ್ಗೆ ದಿನಸೂಚಿ ನೋಡಿದೆ.. ಇಂದು ಆ ಮಹನೀಯರ ಹುಟ್ಟು ಹಬ್ಬ ಅಲ್ಲವೇ ಸ್ವಾಮೀ?"

"ಹೌದು ಲಕ್ಷ್ಮಿ.. ಅದಕ್ಕಾಗಿಯೆ ಆ ಭಕ್ತನ ನೋಡಲು ನಾನು ಇಂದು ಎದ್ದು ಕೂತಿದ್ದು.. ನೋಡು ಗರ್ಭಗುಡಿಯ ಒಳಗೆ ಧೈರ್ಯ ಮಾಡಿ ಬಂದ ಇವರೇ ಅವರು ... ಮೈಸೂರು ಪ್ರಾಂತ್ಯದ  ತನ್ನ ಗೆಳೆಯರ ಬಳಗದಲ್ಲಿ ಬಾಲೂ ಸರ್.. ಬಾಲಣ್ಣ ಎಂದು ಖ್ಯಾತಿಯಾಗಿರುವ  ಬಾಲಸುಬ್ರಮಣ್ಯ... ಎಲ್ಲರೊಳಗೊಬ್ಬ ಸುಂದರ ಜೀವಿ ಈ ಬಾಲೂ!"

ನಮ್ಮ ಹೆಮ್ಮೆಯ ನಲ್ಮೆಯ ಬಾಲೂ ಸರ್  (ಚಿತ್ರ ಕೃಪೆ - ಪ್ರಕಾಶ ಹೆಗಡೆ)
"ಭಕ್ತ ಇಂದಿನ ನಿಮ್ಮ ಹುಟ್ಟು ಹಬ್ಬಕ್ಕೆ ನಾವಿಬ್ಬರು ನಿಮ್ಮ ಕಾವೇರಿ-ರಂಗ ಬ್ಲಾಗನ್ನು ಓದಿ ಸಂತೋಷಿಸಿದ್ದೇವೆ.. ಆದಷ್ಟು ಬೇಗ ಇದು ಮುದ್ರಣ ರೂಪದಲ್ಲಿ ಮೂಡಿಬರಲೆಂದು ಆಶೀರ್ವದಿಸುತ್ತಾ... ಹಾಗೆಯೇ ಆಯಸ್ಸು, ಆರೋಗ್ಯ,  ಗೆಳೆಯರ ಪ್ರೀತಿ, ವಿಶ್ವಾಸ ,ಐಶ್ವರ್ಯ,  ಕುಟುಂಬದ ಸೌಖ್ಯ ಎಲ್ಲವೂ ಇರುವುದಕ್ಕಿಂತ ಹೆಚ್ಚಿಗೆ ಸಿಗಲಿ ಎಂದು ಹಾರೈಸುವೆ"  ಎಂದಾನಾ ದೇವಾದಿದೇವ!

ದಾರಿಯ  ಮಾಡಿ ಗರ್ಭ ಗುಡಿಯೊಳಗೆ ಬಂದಿದ್ದ ಬಾಲೂ ಸರ್ ಕಂಗಳನ್ನು ತುಂಬಿಕೊಂಡು.. ದೇವ ಕೃತಾರ್ಥನಾದೆ.. ನಿಮ್ಮ ಈ ಆಶೀರ್ವಾದ ನನಗೆ ಸಹಸ್ರ ಆನೆಬಲ ತಂದಿದೆ.. ಖಂಡಿತ ನಿಮ್ಮ ಹಾರೈಕೆಯಂತೆ ಕಾವೇರಿ ರಂಗನ ಮೊದಲ ಪ್ರತಿಯನ್ನು ನಿಮಗೆ ಅರ್ಪಿಸುತ್ತೇನೆ " ಎಂದು ಸಾಷ್ಟ್ರಂಗ ಪ್ರಣಾಮ ಮಾಡಿದರು.

ಬಾಲೂ ಸರ್ ಇಂತಹ ಶ್ರೀರಂಗಪಟ್ಟಣದ ಉತ್ಕೃಷ್ಠ ಇತಿಹಾಸದ ಪುಟಗಳನ್ನೂ ನಮಗೆ ಪರಿಚಯಿಸಿರುವ.... ಹಾಗೆಯೇ ಅನೇಕ ಪ್ರೇಕ್ಷಣೀಯ ಸ್ಥಳಗಳ ಬಗ್ಗೆ ಪರಿಚಯ ಮಾಡಿಕೊಟ್ಟಿರುವ ನಿಮಗೆ ಹುಟ್ಟು ಹಬ್ಬದ ಶುಭಾಶಯಗಳು.. ನಿಮ್ಮನ್ನು ಗೆಳೆಯರನ್ನಾಗಿ ಪಡೆದ ನಾವೇ ಭಾಗ್ಯವಂತರು ....!

ಹುಟ್ಟು ಹಬ್ಬದ ಶುಭಕಾಮನೆಗಳೊಂದಿಗೆ ಬ್ಲಾಗ್ ಹಾಗು ಫೇಸ್ ಬುಕ್ ಬಳಗ ನಿಮಗೆ ಶುಭಾಶಯಗಳನ್ನು ಕೋರಿ ಅಭಿನಂದಿಸುತ್ತದೆ!!!

Sunday, December 9, 2012

" ಅವಳು ಮತ್ತೊಬ್ಬಳು " ರಶ್ಮಿ (ತೆಂಡೂಲ್ಕರ್) ಕಾಸರಗೋಡು - 09.12.12

ಚಿಕ್ಕವನಾಗಿದ್ದಾಗಿನಿಂದಲೂ ನಮ್ಮ ದೇಶದ ಅ(ನ)ಧಿಕೃತ ರಾಷ್ಟ್ರೀಯ ಆಟವೇ ಆಗಿ ಹೋಗಿರುವ ಕ್ರಿಕೆಟ್ ಬಗ್ಗೆ ತುಸು ಕಾಳಜಿ ಇತ್ತು...೧೯೮೩ ರಲ್ಲಿ ಕಪಿಲ್ ಡೆವಿಲ್ಸ್ ವಿಶ್ವ ಕಪ್ ಗೆದ್ದಾಗ ಅದು ಇನ್ನಷ್ಟು ಹೆಚ್ಚಿತು.  ಆಗ ಪಿಂಚ್ ಹಿಟ್ಟರ್ ಆಟವನ್ನು ಶುರು ಮಾಡಿದ್ದ ಕೃಷ್ಣಮಾಚಾರಿ ಶ್ರೀಕಾಂತ್ ತುಂಬಾ ಪ್ರಸಿದ್ಧಿಯಾಗಿದ್ದರು. ನನ್ನ ಶಾಲಾ ದಿನಗಳಲ್ಲಿ ನನ್ನ ಸಹಪಾಟಿಗಳು ನನ್ನ ಕೆ.ಎಂ. ಶ್ರೀಕಾಂತ್ ಅನ್ನುವ ಬದಲು  ಕೃಷ್ಣಮಾಚಾರಿ ಶ್ರೀಕಾಂತ್ ಎಂದು ಕರೆಯುತಿದ್ದಿದ್ದು ಬಾಣಲೆಯಲ್ಲಿ ಪೂರಿ ಉಬ್ಬಿದಷ್ಟೇ ಸುಲಭವಾಗಿ ಮನಸ್ಸು ಹಾರಾಡುತಿತ್ತು....

ಅರೆ ಏನೋ ಬರೆಯುತಿದ್ದಾನೆ ಈ ಕ(ವಿ)ಪಿರಾಯ ಎಂದು ಮುನಿಸಿಕೊಳ್ಳಬೇಡಿ...ತನ್ನ ಹೆಸರಿನ ಜೊತೆಗೆ ತನ್ನ ನೆಚ್ಚಿನ ಕ್ರಿಕೆಟ್ ಆಟಗಾರನ ಹೆಸರನ್ನು ಸೇರಿಸಿಕೊಂಡು ಕಿಚ್ಚೆಬ್ಬೆಸಿಕೊಳ್ಳುವಷ್ಟು ಕ್ರೀಡಾಭಿಮಾನ ಮೆರೆಯುತ್ತಿರುವ                                      ರಶ್ಮಿ (ತೆಂಡೂಲ್ಕರ್) ಕಾಸರಗೋಡು ಅವರ ಎರಡನೇ ಕೃತಿಯಾದ " ಅವಳು ಮತ್ತೊಬ್ಬಳು " ಲೋಕಾರ್ಪಣೆ ಸಮಾರಂಭಕ್ಕೆ ಹೋದಾಗ ಮನದಲ್ಲಿ ಹಾರಾಡಿದ ಮಾತುಗಳು ಈ ಲೇಖನಕ್ಕೆ ಮುನ್ನುಡಿಯಾಯಿತು.

ಕ್ರಿಕೆಟ್ ಅಂಗಣದಂತೆ ನಿಧಾನವಾಗಿ ಪುಸ್ತಕ ಪ್ರೇಮಿಗಳು, ಬ್ಲಾಗ್ ಲೋಕದ ತಾರೆಗಳು, ಜಗಮಗಿಸುವ ಸಿನಿಮಾ, ರಂಗಭೂಮಿಯ ನಕ್ಷತ್ರಗಳು ಪತ್ರಿಕಾ ಲೋಕದ ಧ್ರುವತಾರೆಗಳು, ಕನ್ನಡ ಸಾಹಿತ್ಯ ಪರಿಷತ್ತಿನ ಮಾಂತ್ರಿಕ ಸ್ಪರ್ಶ ಉಳ್ಳವರು ಎಲ್ಲರೂ ನಿಧಾನವಾಗಿ ಆಸೀನರಾಗುತಿದ್ದರು.

ಮುದ್ದು ಪುಟಾಣಿಯ ಸುಮಧುರ ಗೀತೆಯೊಂದಿಗೆ ಶುರುವಾದ ಕಾರ್ಯಕ್ರಮ ನಿಧಾನವಾಗಿ ಕಾವೇರತೊಡಗಿತು...ಶ್ರೀಮತಿ. ಸುಮತಿಯವರ ಸುಲಲಿತ ನಿರೂಪಣೆ ಸುಶ್ರಾವ್ಯ ಸಂಗೀತ ನಾದದಂತೆ ನಾವು ತಲೆದೂಗುವಂತೆ ಉಲಿಯುತ್ತಿತ್ತು...ನಂತರ ವೇದಿಕೆಯ ಮೇಲಿನ ಪ್ರತಿಯೊಬ್ಬ ಗಣ್ಯರ ಪರಿಚಯ, ಅವರ ಸಾಧನೆಗಳು, ಪರಿಶ್ರಮಗಳು, ಅದರ ಮಜಲುಗಳನ್ನ ಸುಲಲಿತವಾಗಿ ಪರಿಚಯ ಮಾಡಿಕೊಟ್ಟ ಅವರ ಪ್ರತಿಭೆ ಅಭಿನಂದನೀಯ.

ಮೊದಲಿಗೆ ಮಾತು ಆರಂಭಿಸಿದ ಕಿರುತೆರೆ ಹಾಗೂ ರಂಗಭೂಮಿ ಖ್ಯಾತಿಯ ಶ್ರೀಮತಿ. ಜಯಲಕ್ಷ್ಮಿ ಪಾಟೀಲ್ ಪುಸ್ತಕದ ಭಾವ ಪರಿಚಯವನ್ನು ಮಾಡಿಕೊಟ್ಟರು. ಮಹಿಳೆ ಎನ್ನುವ ಒಂದು ಪದವೇ ಸಾಕು ಶಕ್ತಿ ತುಂಬಲು, ಅಂತಹ ಅನೇಕ ಮಹಿಳಾ ಮಣಿಗಳ ಪುಸ್ತಕದ ಬಗ್ಗೆ ಹೇಳಿದ ಮಾತುಗಳು ಒಂದೊಂದು ನುಡಿಮುತ್ತುಗಳು.

ನಂತರ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರು ಶ್ರೀ. ಪುಂಡಲೀಕ ಹಾಲಂಬಿಯವರು ಕನ್ನಡ ನಾಡು, ಬರವಣಿಗೆ ಭಾಷೆ, ಲೇಖಕಿಯ ಪರಿಶ್ರಮ ಎಲ್ಲದರ ಬಗ್ಗೆ ಹೊರಬಂದ ಮಾತುಗಳು ಯಾವುದೇ ಸಾಧನೆಯ ಹಾದಿಯಲ್ಲಿರುವ ವ್ಯಕ್ತಿಗೆ ಜೀವ ಚೈತನ್ಯ ತುಂಬುವ ಹುಮ್ಮಸ್ಸಿನ ಶಕ್ತಿಯುತ ಔಷಧಿ.

ಬಣ್ಣದ ಜಗತ್ತು ವರ್ಣಮಯ ಅಲ್ಲಿ ಎಲ್ಲವು ಕನಸುಗಳ ಲೋಕವೇ ಎನ್ನುವ ಮಾತನ್ನು ಆಡುತ್ತಲೇ ತಮ್ಮೊಳಗಿನ ಓದುಗಾರ್ತಿಯನ್ನ ಪರಿಚಯ ಮಾಡಿಕೊಟ್ಟ ಕನ್ನಡದ ಪ್ರತಿಭೆ ನೀತು ಅವರ ನಿರರ್ಗಳ ಮಾತು ಸಿನಿಮಾ ಜಗತ್ತಿನ ಹಾಯಿ ದೋಣಿಯಲ್ಲಿ ಪಯಣಿಸಿದ ಅನುಭವ ಮೂಡಿಸಿ ಕೊಟ್ಟಿತು.

ಕನ್ನಡ ಪ್ರಭದ ಶ್ರೀ. ರಾಧಾಕೃಷ್ಣ ಭಡ್ತಿ ಅವರಿಗೆ ನೀರಿನಿಂದ ನೀರೆಯರ ಬಗ್ಗೆ ಮಾತಾಡುವ ಬಡ್ತಿ ಕೊಡಿಸಿದ ಈ ಸಮಾರಂಭದಲ್ಲಿ  ಅವರ ಮಾತುಗಳು ಬ್ಲಾಗ್ ಲೋಕ, ಸಾಹಿತ್ಯ ಲೋಕ, ಪತ್ರಿಕಾ ರಂಗ, ಭಾಷೆಯ ಅಭಿಮಾನ ವಿಷಯಗಳು ನಿರಾಳವಾಗಿ ನಮ್ಮ ಮನದಲ್ಲಿ ಹರಿದಾಡಲು ಶುರುಮಾಡಿದವು..

ಅಧ್ಯಕ್ಷ ಸ್ಥಾನದಲ್ಲಿದ್ದ ಹಿರಿಯ ಪತ್ರಕರ್ತರಾದ ಶ್ರೀ. ಜೋಗಿಯವರ ವಾಸ್ತವ ಮಾತುಗಳು, ಮಹಾಭಾರತದ ಸಣ್ಣ ಕತೆಯನ್ನು ವಾಸ್ತವಕ್ಕೆ ಹೋಲಿಸಿ ಮಾತಾಡಿದ ರೀತಿ ಗಮನಸೆಳೆಯಿತು.

ಇನ್ನೇನು ವಿಶೇಷ ಕಾರ್ಯಕ್ರಮವಿದೆ ಎನ್ನುವಾಗ ಮಹಿಳ ಮಣಿ ಕ್ರಿಕೆಟ್ ಬ್ಯಾಟನ್ನು ಬಿಟ್ಟು ಮೈಕ್ ಮುಂದೆ ನಿಂತರು.  ಈಗಿನ ಟ್ವೆಂಟಿ -೨೦ ಹೊಡಿ ಬಡಿ ಆಟಕ್ಕಿಂತ ರಭಸವಾಗಿದ್ದ ಮಾತುಗಳು ಶುರುವಾದವು ಲೇಖಕಿ ರಶ್ಮಿ ಕಾಸರಗೋಡು ಅವರಿಂದ.  ನಾವು ಬರಿ ಸಚಿನ್ ಸ್ಟ್ರೈಟ್ ಡ್ರೈವ್ ಬೌಂಡರಿ, ಸಿಕ್ಸರ್ ನೋಡಿದ್ದ ನಮಗೆ ಈ ಚುರುಕು ಮಾತುಗಳು, ಹೃದಯದಿಂದ ಮೂಡಿಬಂದ ಅನುಭಾವ ಅನಿಸಿಕೆಗಳು ವಾಹ್ ಎನ್ನುವಂತೆ ಮಾಡಿತು. ಈಕೆ ಬರಿ ಲೇಖಕಿ ಮಾತ್ರವಲ್ಲ ಅದ್ಭುತ ಮಾತುಗಾರ್ತಿ ಎನ್ನುವುದು ಅವರೇ ಹೇಳಿದ ಆಶುಭಾಷಣ ಸ್ಪರ್ಧೆಗಳ ಮಾತುಗಳಿಂದ ಧೃಡಪಟ್ಟಿತ್ತು...ಸ್ಲಾಗ್ ಓವರಿನ ಬ್ಯಾಟಿಂಗಿನಂತೆ ರನ್ನಗಳನ್ನ ರಶ್ಮಿಬಾರಿಸಿಬಿಟ್ಟರು....

ಸುಂದರ, ಸರಳ, ಕಾರ್ಯಕ್ರಮವನ್ನು ಅಭಿಮಾನ, ಗೆಳೆತನ, ವಿಶ್ವಾಸ ಇವುಗಳನ್ನೆಲ್ಲ ತುಂಬಿಕೊಂಡು ಬಂದಿದ್ದವರಿಗೆ ಒಂದು ಭಾನುವಾರ ಬೆಳಗನ್ನು ಅಚ್ಚುಕಟ್ಟಾಗಿ ಸಾರ್ಥಕತೆಯಿಂದ ಕಳೆದ ಬಗ್ಗೆ ಹೆಮ್ಮೆಯಿತ್ತು. ನೆಮ್ಮದಿಯಿಂದ ತುಂಬಿಬಂದ ಭಾರವಾದ ಹೃದಯಗಳನ್ನು ಹೊತ್ತು ತಮ್ಮ ತಮ್ಮ ಮನೆಗೆ ತೆರೆಳುತಿದ್ದಾಗ ಅಲ್ಲೇ ನಿಂತು ನೋಡುತಿದ್ದ ರಶ್ಮಿ...ಸಚಿನ್ ಶತಕ ಬಾರಿಸಿದಾಗ ಆಗಸಕ್ಕೆ ಮುಖ ಮಾಡಿ ಧನ್ಯತೆಯನ್ನು ಅನುಭವಿಸುತ್ತಿದ್ದ ರೀತಿ ನೆನಪಿಗೆ ಬಂತು.

ಈ ಸುಂದರ ಕಾರ್ಯಕ್ರಮಕ್ಕೆ ಹಾಜರಾಗಲು ಸೂಚಿಸಿದ ಇಟ್ಟಿಗೆ ಸಿಮೆಂಟ್ ಬ್ಲಾಗಿನ ಶ್ರೀ ಪ್ರಕಾಶ ಹೆಗಡೆಯವರಿಗೆ ವಂದನೆಗಳು.

ರಶ್ಮಿ ನಿಮ್ಮ ಎಲ್ಲ ಪ್ರಯತ್ನಗಳಲ್ಲಿ ಸಾಧನೆಗಳ ಹಾದಿಯಲ್ಲಿ ಯಶ ನಿಮ್ಮದಾಗಲಿ ಸೂರ್ಯನ ಯಶಸ್ಸಿನ ರಶ್ಮಿ ನಿಮ್ಮ ಬಾಲ ಪಥದಲ್ಲಿ ಸದಾ ಪಸರಿಸುತ್ತಿರಲಿ ಎನ್ನುವ ಹಾರೈಕೆಯೊಂದಿಗೆ ನಿಮ್ಮ ಎರಡನೇ ಕೃತಿ "ಅವಳು ಮತ್ತೊಬ್ಬಳು" ಲೋಕರ್ಪನೆಯ ಸಂಧರ್ಭದಲ್ಲಿ  ಬ್ಲಾಗ್ ಲೋಕದ ಸ್ನೇಹಮಯ ಹೃದಯಗಳ ಪರವಾಗಿ ಶುಭಕೊರುತಿದ್ದೇನೆ..

Friday, November 16, 2012

ಸಂಸಾರ ಸಾಗರದಲ್ಲಿ ಬೆಳ್ಳಿ ಹಬ್ಬದ ಸಂಭ್ರಮದಲ್ಲಿ ಅಜಾದ್ ಸರ್ ಮತ್ತು ಅಬಿದ ಮೇಡಂ!


ಮೀನು ಸಡಗರದಿಂದ ಓಡಾಡುತ್ತಿತ್ತು..ಅಲ್ಲೇ ನಿಧಾನವಾಗಿ ಬರುತಿದ್ದ ಬಟಾಣಿ ಕೇಳಿತು 

"ಏನಪ್ಪಾ ಮೀನಣ್ಣ..ಏನು ಬಹಳ ಖುಷಿಯಲ್ಲಿದ್ದೀಯ?"

"ಹೌದು ಬಟಾಣಿ..ಇವತ್ತು ಸುಮಧುರ ದಿನ..ನಿನಗೆ ಕಾಯ್ತಾ ಇದ್ದೆ"

"ಏನಪ್ಪಾ ಅದು ನಾನು ನೀನು ಎಷ್ಟು ಒಳ್ಳೆಯ ಗೆಳೆಯರು...ನನಗೆ ದಯವಿಟ್ಟು ಹೇಳು?"

"ನಮ್ಮ ಜೀವನವನ್ನು ಅಭ್ಯಸಿಸಿ..ನಾವು ಬರಿ ತಿನ್ನಲಷ್ಟೇ ಅಲ್ಲ ..ಅಧ್ಯಯನಕ್ಕೂ ನೆರವಾಗುತ್ತೇವೆ.ಅಂತ ತಿಳಿದ ಅನೇಕರಲ್ಲೊಬ್ಬರು ನಮ್ಮ ಪ್ರೀತಿಯ ಡಾಕ್ಟರ್ ಅಜಾದ್...ಅವರಿಂದ ನಮಗೂ ಒಂದು ಹೆಸರು..ನಮ್ಮಿಂದ ಅವರಿಗೂ ಒಂದು ಗೌರವ.. ಅಲ್ಲವೇ.."

"ಹೌದು ಮೀನಣ್ಣ..ನನ್ನ ಸಿಪ್ಪೆಯಿಂದ  ಬೇರ್ಪಡಿಸಿ ಪಾತ್ರೆಯಲ್ಲಿ ಹಾಕಿ ಬೇಯಿಸಿ ಮುಗಿಸುತ್ತಿದ್ದ ಜನರ ಮಧ್ಯೆ ... ನನ್ನನ್ನು ಪುಸ್ತಕದ ಪುಟದ ಮೇಲೆ ನನ್ನ ಮುದ್ದಾದ ಬೈತಲೆ ತೆಗೆದುಕೊಂಡಿರುವ ಚಿತ್ರ ಹಾಕಿ..ನನ್ನನ್ನು ಜಗಜ್ಜಾಹಿರು ಮಾಡಿದ ಕವಿ ಅಜಾದ್ ಬಹು ಅಪರೂಪದ ವ್ಯಕ್ತಿ.. ಅವರು ಅಂದರೆ ನನಗೆ ಬಹಳ ಇಷ್ಟ..ಗೌರವ..."

ಬಟಾಣಿ ಚಿಕ್ಕಿ!

"ಹೌದು ಬಟಾಣಿ...ಜಲನಯನ ಅಂತ ಕರೆದು ನನ್ನನ್ನು ಪದಗಳ ಶರಧಿಯಲ್ಲಿ ಈಜಾಡಲು ಬಿಟ್ಟಿದ್ದಾರೆ..."


ಜಲ ನಯನ! 

"ಮೀನಣ್ಣ ಇಂದು ಅವರು ಸಂಸಾರ ಸಾಗರದ ಬೆಳ್ಳಿ ಹಬ್ಬದ  ಸಂಭ್ರಮದಲ್ಲಿದ್ದಾರೆ...ಅಜಾದ್ ಸರ್ ಮತ್ತು ಅವರ ಸಂಸಾರದ ಸಾರಥಿ ಅಬಿದ ಮೇಡಂ ಮತ್ತು ಅವರ ಸುಖಿ ಸಂಸಾರಕ್ಕೆ ಶುಭಕಾಮನೆಗಳು...ಸದಾ ಅವರ ಸಂಸಾರ... ಸುಖ ಸಂಸಾರದ ಸಾಗರದಲ್ಲಿ ನೆಮ್ಮದಿ ಎನ್ನುವ ಮೀನು...ಬಟಾಣಿ ಎನ್ನುವ ಸಂತಸದ ಜೊತೆ ಚಿಕ್ಕಿ ಚುಕ್ಕಿ ಬಿಡಿಸುತ್ತ ಸಂಭ್ರಮಿಸಲಿ. ಎಂದು ಹಾರೈಸೋಣ..ಬಾ ಗೆಳೆಯ..."


ಸುಂದರ ಸಂಸಾರ!

"ಹೈ...ಬಟಾಣಿ..ಎಷ್ಟು ಸುಂದರವಾದ ಪದಗಳನ್ನು ಜೋಡಿಸಿ ಶುಭಾಶಯಗಳನ್ನು ಸಿದ್ಧ ಮಾಡಿದೀಯ..ನೀನು ನನ್ನ ಗೆಳೆಯ ಎನ್ನುವುದಕ್ಕೆ ನನಗೆ ಹೆಮ್ಮೆ ಎನಿಸುತ್ತಿದೆ.."

ಅಜಾದ್ ಸರ್..ಅಬಿದ ಮೇಡಂ..ವೈವಾಹಿಕ ಜೀವನದ ಬೆಳ್ಳಿಯ ಹಬ್ಬದಲ್ಲಿ ನಿಮ್ಮ ಸುಖಿ ಸಂಸಾರ ಸುವರ್ಣ ಪಥದತ್ತ ಸಾಗಲಿ..ಎಂದು ಬ್ಲಾಗ್ ಲೋಕದ ಎಲ್ಲ ನಕ್ಷತ್ರಗಳ ಜೊತೆಯಲ್ಲಿ ನಿಮ್ಮ ಮಿತ್ರರಾದ ಮೀನಣ್ಣ ಹಾಗು ಬಟಾಣಿ ನಿಮಗೆ ಈ ಸಂತಸದ ಘಳಿಗೆಯಲ್ಲಿ  ಶುಭಾಶಯಗಳನ್ನು ಕೋರುತಿದ್ದೇವೆ!!!

Thursday, August 23, 2012

ಕನ್ನಡನಾಡಿನ ರನ್ನದ ರತುನ-ಶತಮಾನದ ಅಜ್ಜಯ್ಯ ಪ್ರೊ.ಜಿ.ವಿ


"ಶತಮಾನಂ ಭವತಿ  
ಶತಾಯುಹ್  ಪುರುಷಃ  ಶತೇಂದ್ರಿಯಃ  
ಆಯುಶ್ಯೇವೆಂದ್ರಿಯೇ  ಪ್ರತಿತಿಷ್ಠತಿ"

ಚಿಕ್ಕ ವಯಸ್ಸಿನಿಂದಲೂ ಈ  ಶ್ಲೋಕ ಮಾತಾ-ಪಿತೃ, ಗುರುಹಿರಿಯರಿಗೆ ನಮಸ್ಕರಿಸಿದಾಗೆಲ್ಲ ಕಿವಿಯ ಮೇಲೆ ಬೀಳುತ್ತಿತ್ತು..

ಯಾರಾದರು ನೂರು ವಸಂತಗಳನ್ನು ಹೇಗೆ ಜೀವನ ಮಾಡಿ ಸುಖಿಸುತ್ತಾರೆ...ಇದೆಲ್ಲ ಸಾಧ್ಯವೇ....ಯಾರಾದರು ಕಣ್ಣಿಗೆ ಕಾಣುವ ಉದಾಹರಣೆಗಳು ಇದೆಯಾ ಎಂದು ಕೊಳ್ಳುತಿದ್ದಾಗ ತಟ್ಟನೆ ನೆನಪಿಗೆ ಬರುತಿದ್ದುದು ನಮ್ಮ ಕರುನಾಡಿನ ಮಾಂತ್ರಿಕ ತಾಂತ್ರಿಕ ಮೇಧಾವಿ ಸರ್. ಎಂ.ವಿ...ಅವರ ನಂತರ ಶ್ರೀ ಶಿವಕುಮಾರ ಸ್ವಾಮಿಗಳು ...ಕಾಯಕವೇ ಕೈಲಾಸ ಎಂಬುದನ್ನು ಅಚ್ಚುಕಟ್ಟಾಗಿ ಪಾಲಿಸಿಕೊಂಡು ಬಂದಿದ್ದ ಈ ಮಹನೀಯರು ಸದಾ ಸ್ಮರಣೀಯರು..

ಸರಿ ನೂರು ಯುಗಾದಿ ಹಬ್ಬವನ್ನು ನೋಡಲು ಹೇಗಿರಬೇಕು..ಎನ್ನುವ ಪ್ರಶ್ನೆ ಬಂದಾಗ...

೧. ಜೀವನದಲ್ಲಿ ಶಿಸ್ತು ಅಳವಡಿಸಿಕೊಂಡರೆ ಸಾಕು
೨. ಆಟದಲ್ಲಿ, ಪಾಠದಲ್ಲಿ, ಜೀವನದಲ್ಲಿ ಕ್ರಮ ಬದ್ಧವಾಗಿದ್ದರೆ ಸಾಕು..
೩. ಇಷ್ಟವಾದ ಕೆಲಸವನ್ನು ಕಷ್ಟವಾದರೂ ಸರಿ ಮಾಡಬೇಕು
೪. ಅಡ-ತಡೆಗಳು ದಾಟಿದರೆ ಅಲ್ಲವೇ ಮನುಜನ ಜನುಮದ ಗುರಿ ಸಾಧ್ಯ..
೫. ಇವಕ್ಕೆಲ್ಲ ಸಾಥ್ ನೀಡುವುದು ನಮ್ಮ ದೇಹ..ಅದನ್ನೇ ಶಿಸ್ತಿನಲ್ಲಿ ಇಟ್ಟರೆ..ಮೇಲೆ ಹೇಳಿದ ಎಲ್ಲವು ಸಾಧ್ಯ..

ಅಲ್ಲವೇ ಎಂದು ನನಗೆ ನಾನೇ ಕೇಳಿದಾಗ...ಹೌದು ಹೌದು ಎಂದಿತು ನನ್ನ ಮನಸು...ಯಾಕೆಂದರೆ...ಕಳೆದ ವರುಷ ನಡೆದ ಕನ್ನಡ ಸಾಹಿತ್ಯ ಸಮ್ಮೇಳನ ಬೆಂಗಳೂರಿನಲ್ಲಿ ನಡೆದಾಗ ಶತಕದ ಸಮೀಪದ ಪ್ರಾಯದ ಯುವ ಮನಸನ್ನು ನೋಡಿದ ತಣ್ಣನೆ ಅನುಭವವಾಯಿತು...
ಚಿತ್ರ ಕೃಪೆ - ಅಂತರ್ಜಾಲ
 ಕನ್ನಡಾಂಬೆಯ ಹೆಮ್ಮೆಯ ಪುತ್ರ..ಪ್ರೊ.ಜಿ.ವೆಂಕಟಸುಬ್ಬಯ್ಯ..ಸರಿ ಸುಮಾರು ೪-೫ ತಲೆಮಾರಿನ ಜನತೆಯನ್ನು ನೋಡಿರುವವರು..ತಮ್ಮೆಲ್ಲ ಸಮಯವನ್ನು ಕನ್ನಡದ ಪದಗಳ ಅಮೃತ ಕಡಲಲ್ಲಿ ಮುಳುಗಿ ಕನ್ನಡಾಭಿಮಾನಿಗಳನ್ನು ದಡಕ್ಕೆ ಸೇರಿಸುತ್ತಿರುವ ಈ ಮಹಾನ್ ಚೇತನ..ಇಂದು ನಮ್ಮ ಭೂರಮೆಯನ್ನು ಅಲಂಕರಿಸಿ ಒಂದು ಶತಮಾನ ಆಯಿತು..
ಚಿತ್ರ ಕೃಪೆ - ಅಂತರ್ಜಾಲ -  ಸತೀಶ್ ಶೃಂಗೇರಿ 
ಮೇಲೆ ಹೇಳಿದ ಆ ಶ್ಲೋಕಕ್ಕೆ ಇನ್ನೊಂದು ಪರ್ಯಾಯ ಸೂಚಿಸಲು ಬಹುಶಃ ಬ್ರಹ್ಮರ್ಷಿ ವಿಶ್ವಾಮಿತ್ರರೆ ಬರಬೇಕೇನೋ!!!...
ಯಾಕೆಂದರೆ..ಆ ಶ್ಲೋಕದಲ್ಲಿರುವ ಪ್ರತಿಯೊಂದು ಪದಕ್ಕೆ ಅರ್ಥಸಹಿತ ಸಾಕ್ಷ್ಯವಾಗಿರುವ ನಮ್ಮ ನೆಚ್ಚಿನ ಅಜ್ಜಯ್ಯ ಜಿ.ವಿ. ಆ ಶ್ಲೋಕವನ್ನು ಅಮರಗೊಳಿಸಿದ್ದಾರೆ...
ಅವರ ಪೀಳಿಗೆಯಲ್ಲೇ ಹುಟ್ಟಿರುವ ನಮಗೆ,  ಅವರ ಜೀವನಶೈಲಿ ಮಾದರಿಯಾಗಿರಲಿ...

ಅಜ್ಜಯ್ಯನ ಬಗ್ಗೆ ಬರೆಯೋಣ ಅಂದಾಗ..ನನ್ನ ಮನಸಾಕ್ಷಿ ನನ್ನ ದೇಹದಿಂದ ಹೊರಗೆ ಬಂದು ನಿಂತು...ಕಿರುಚಿತು..

"ಆನೆಯ ಎತ್ತರಕ್ಕೆ ಹೊಗಳಲು ಪದಗಳು ತಲುಪಲು ಸಾಧ್ಯವೇ...
ಮಿಂಚಿನ ಕಣ್ಣು ಕೋರೈಸುವ ಕಾಂತಿಯ ಮುಂದೆ ಮಿನುಗುವ ದೀಪವೆ...
ಲಕ್ಷಾಧೀಶ ಆಗಿದ್ದರೆನಂತೆ ಮಾತಾಡುವಾಗ ಪದಗಳಿಗೆ ತಿಣುಕಾಡಿದಂತೆ 
ಆಗುತ್ತದೆ..ಸುಮ್ಮನೆ ಶುಭಾಶಯಗಳನ್ನು ಕೋರಿಬಿಡು.." ಅಂದಿತು..

ಅಲ್ಲವೇ ಎಷ್ಟು ನಿಜ..ಮನಸಾಕ್ಷಿ ಮಾತು..!

ಅಜ್ಜಯ್ಯ ನಿಮಗೆ ಶತಮಾನದ ಸಹಸ್ರ ನಮಸ್ಕಾರಗಳು, ಅಭಿನಂದನೆಗಳು...ಹಾಗೂ ಹುಟ್ಟು ಹಬ್ಬದ ಶುಭಾಶಯಗಳು 

ಕನ್ನಡದನಾಡಿನ ರನ್ನದ ರತುನ...ಇವರ ಬಗ್ಗೆ ಲೇಖನ..ನನ್ನ ಪಾಯಿಂಟ್ ಪಂಚರಂಗಿ ಬ್ಲಾಗಿನ ಸುವರ್ಣ ಕಾಣಿಕೆ..ವಾಹ್...ನನ್ನ ಬ್ಲಾಗ್ ಜೀವನ ಧನ್ಯವಾಯಿತು...!!!!

Saturday, July 14, 2012

ರಾಮು ಮಾವ ಭಾರತಿ ಅತ್ತೆ ವೈವಾಹಿಕ ಜೀವನದ ಬೆಳ್ಳಿ ಹಬ್ಬ


ಇಪ್ಪತ್ತೈದು ...
ವಸಂತಗಳು ನೋಡಿದ ವಯಸ್ಸು...
ವರ್ಷಗಳು ಸಾಗಿದ ಉದ್ಯೋಗ...
ವಾರಗಳು ಓಡಿದ ಚಲನ ಚಿತ್ರ...
ಸಂಚಿಕೆ ಬಿಡುಗಡೆಯಾದ ಪತ್ರಿಕೆ... 
ಇಪ್ಪತ್ತೈದು ...ರಜತ...ಬೆಳ್ಳಿ...ಸಂಭ್ರಮ...

ಈ ಪದವೇ ಎಷ್ಟು ಚಂದ ಕೇಳಲು...
ರಾಮು ಮಾವ ಅವರ ಮಾತಾ ಪಿತೃಗಳು (ನಂಜಪ್ಪ ಹಾಗು ವೆಂಕಟಲಕ್ಷ್ಮಮ್ಮ )
ಇವೆಲ್ಲ ನಮ್ಮ ಮಾನಸ ಪಟಲದಲ್ಲಿ ಹಾಗೆಯೇ ಉಳಿದುಬಿಡುತ್ತದೆ..

ಅಂತಹ ಒಂದು ಬೆಳ್ಳಿ ಹಬ್ಬದ ಸಂಭ್ರಮದಲ್ಲಿ ಮಿಂದು ಎದ್ದ ದಂಪತಿಗಳು 
ಸಡಗರದಿಂದ ಓಡಾಡಿ ಬಂಧು ಮಿತ್ರರನ್ನು ಕರೆದು 
ಯಾರಿಗೂ ಗುಟ್ಟು ಬಿಟ್ಟುಕೊಡದೆ..
ಬಂದವರೆಲ್ಲರೂ ಸಿಹಿ ಭೂರಿ ಭೋಜನ ಉಂಡು... 
ಎಲೆ ಅಡಿಕೆ ಮೆದ್ದು ಹಾಯಾಗಿ ಕುಳಿತು 
ಲೋಕಾರೂಡಿ ಮಾತಾಡುತಿದ್ದಾಗ 
ತಣ್ಣಗೆ ಅಂದಿನ ಸಂಭ್ರಮದ ವಿಚಾರ ಹೇಳಿದಾಗ 
ಎಲ್ಲರಿಗೂ ಹಾಗೆ ಆನಂದಸಾಗರದಲ್ಲಿ ತೇಲಿದ ಅನುಭವ..

ವಿವಾಹ ಬಂಧನ ಎಷ್ಟು ಸುಮಧುರ, ಮಧುರ, ಅಮರ 
ಇದನ್ನು ನೋಡಿ ಸಂತಸಪಡಬೇಕಾದ ಸುಂದರ ಸಂಸಾರ 
ನಮ್ಮ ರಾಮು ಮಾವ ಹಾಗು ಭಾರತಿ ಅತ್ತೆ ಅವರದು...
ಮಾತಾ-ಪಿತೃಗಳ ಸದಾ ಆಶೀರ್ವಾದದ ಅಭಯಹಸ್ತ
ವೆಚ್ಚಕ್ಕೆ ಸ್ವಲ್ಪ ಹೊನ್ನು..
ಮನ, ಮನೆ  ಮೆಚ್ಚಿದ ಮನದನ್ನೆ...
ಮನವರಿತ ಸುತ..
ಎಲ್ಲವನ್ನು ಒಂದೇ ಸೂರಿನಡಿ ಇರಿಸಿಕೊಂಡ  "ಕಲ್ಲೇಶ"ನ  ಕೃಪೆ...
ಇವೆಲ್ಲ ಇರುವಾಗ ಸ್ವರ್ಗದ ಹಂಗೇಕೆ..
ಕಲ್ಲೇಶ ಕೃಪಾ.
ರಾಮು ಮಾವ..ಭಾರತಿ ಅತ್ತೆ..
ಎಂದೆಂದೂ ಹೀಗೆ ನಗಬೇಕು ..
ಎಲ್ಲರ ಬಾಳಲ್ಲಿ ಆನಂದ ತರಬೇಕು...
ಸ್ವರ್ಗ ನಾಚುತ್ತ ಕಾಲಡಿ ಬರಬೇಕು...
ಎಂದೂ ಜೊತೆಯಾಗಿ ನೀವು ಹೀಗೆ ಇರಬೇಕು... 
ರಾಮು ಮಾವ, ಭಾರತಿ ಅತ್ತೆ , ಭಾರ್ಗವ 
ರಾಮು ಮಾವ ಭಾರತಿ ಅತ್ತೆ ನಿಮ್ಮ ವೈವಾಹಿಕ ಜೀವನದ ಬೆಳ್ಳಿ ಹಬ್ಬಕ್ಕೆ ನಿಮ್ಮ ಪ್ರೀತಿಯ ಅಕ್ಕ-ಭಾವ (ವಿಶಾಲು-ಮಂಜಣ್ಣ) ಅವರಿಂದ ಒಂದು ನೆನಪಿನ ಕಾಣಿಕೆ...