Thursday, December 29, 2016

ಮೈ3.ಶಾರದೆ, ಸರಸ್ವತಿ ಮತ್ತು ಗುರುನಾಥರು

ಜೀವನದಲ್ಲಿ ಅದ್ಭುತಗಳು ಹೇಗೆ ಹೇಗೆ ದಾಪುಗಾಲು ಇಡುತ್ತಾ ಬರುತ್ತವೆ ಎನ್ನುವ ಅರಿವು ಬಹಳ ಕಡಿಮೆ ಅನಿಸುತ್ತದೆ.. ಅದು ಹೇಗೆ ಬಂದರೆ ಹಾಗೆ ಸ್ವೀಕರಿಸುತ್ತೇವೆ ಎಂದು ನಿಂತರೆ, ಅದು ತೋರುವ ಹಾದಿಯ ಪಯಣವೇ ಸೊಗಸು.

ಅಪ್ಪ ಅಮ್ಮನಿಗೆ ಮಕ್ಕಳ ಏಳಿಗೆಯಲ್ಲಿಯೇ ಸಂತಸ.. ಮಕ್ಕಳಿಗೆ ಅಪ್ಪ ಅಮ್ಮನ ಕಣ್ಣಲ್ಲಿ ಸಂತಸ ಕಂಡರೆ ಬದುಕು ಸಾರ್ಥಕ ಎನ್ನುವ ಭಾವ.

ಗೆಳೆತನ, ಸ್ನೇಹ, ಜೊತೆಗಾರ, ಜೊತೆಗಾತಿ ಈ ನುಡಿಮುತ್ತುಗಳು ಜೀವನದಲ್ಲಿ ನೆಡೆಯುವಾಗ ಸಿಗುವ ಹೊನ್ನಿನ ಕುಸುಮಗಳು.

ಮೈತ್ರಿ ಎಂದು ಹೆಸರಿಟ್ಟು..ನನ್ನ ಮೈತ್ರಿ My Three ಜೊತೆಗೆ ಎಂದು ನಿಂತ ನನ್ನ ಚಿಕ್ಕಪ್ಪ.. ಅವರಿಗೆ ಜೊತೆಯಾದದ್ದು ಶಾರದೆ, ಸರಸ್ವತಿ ಮತ್ತು ಗುರುನಾಥರು.

ಶಾರದೆ ಬಾಳಸಂಗಾತಿಯಾಗಿ ಬಂದು ನಿಂತರು.. ಸರಸ್ವತಿ ಪುಸ್ತಕರೂಪದಲ್ಲಿ ಬಂದರು..ಗುರುನಾಥರು ಚಿಕ್ಕಪ್ಪನ ಬಾಳ ಪಥಕ್ಕೆ ದಾರಿ ದೀಪವಾಗಿ ನಿಂತರು.

ಶಾರದೆ ನನ್ನ ಚಿಕ್ಕಮ್ಮ ಅಕ್ಷರಶಃ ಶಾರದೆಯೇ ಹೌದು. ಅವರ ಕಲಾವಂತಿಕೆ, ಮನೆಯಲ್ಲಿನ ಅಚ್ಚುಕಟ್ಟು, ಶಿಸ್ತು ಬದ್ಧ ಜೀವನ ಇವೆಲ್ಲವೂ ಚಿಕ್ಕಪ್ಪನಿಗೆ ವರವಾಗಿ ಬಂದಿದೆ ಎಂದರೆ ಖಂಡಿತ ಇದು ಉತ್ಪ್ರೇಕ್ಷೆಯಲ್ಲ. ಮೈತ್ರಿ ಎನ್ನುವ ಆ ದೇವಾಲಯವನ್ನು ಹೊಕ್ಕರೆ ಕಣ್ಣಿಗೆ ಕಾಣುವುದು ಶಿಸ್ತು, ಅಚ್ಚುಕಟ್ಟು ಮತ್ತು ಸೊಗಸಾದ ವಿನ್ಯಾಸದಲ್ಲಿ ಮೂಡಿಬಂದಿರುವ ದೇಗುಲಕ್ಕೆ ಒಮ್ಮೆ ಕೈಮುಗಿಯದೇ ಯಾರೂ ಹೊರಗೆ ಬರುವುದಿಲ್ಲ.

ಚಿಕ್ಕಪ್ಪ, ತಮ್ಮ ಭಾಷಾ ಪ್ರೌಢಿಮೆ,  ಅಂದು ಕೊಂಡಿದ್ದನ್ನು ಸಾಧಿಸುವ ಛಲ, ಕಲಿಕೆಯ ರಾಕ್ಷಸ ಹಸಿವು ಅವರನ್ನು ಒಬ್ಬ ಸರಳಜೀವಿಯನ್ನಾಗಿ ಮಾಡಿದೆ. ತಂದೆ ತಾಯಿಯಿಂದ ಬಂದ ಜ್ಞಾನ ಭಕ್ತಿಯ ಬಳುವಳಿಯನ್ನು ಅಷ್ಟೇ ಸಮಂಜಸ ರೀತಿಯಲ್ಲಿ ತಮ್ಮ ಜೀವನಕ್ಕೂ ಅಳವಳಿಸಿಕೊಂಡು, ಎಲ್ಲಿಯೂ ಎಲ್ಲೇ ಮೀರದೆ, ಆದರೆ ಕಲಿಕೆಗೆ ಎಲ್ಲೇ ಎಲ್ಲಿದೆ ಎಂದು ಪ್ರಶ್ನಿಸುತ್ತಲೇ, ತಮ್ಮ ಜೀವನದಲ್ಲಿ ಬಂದ ಪ್ರತಿ ಸವಾಲಿನ ಘಟನೆಯೂ ಕೂಡ ಅವರ ಮುಂದೆ ಮಂಡಿಯೂರಿ ಕೂರುವ ಹಾಗೆ ಮಾಡಿಸಿಕೊಂಡ ತಾಳ್ಮೆ ಹಾಗೂ ಛಲಭರಿತ ಸಾಧನೆ ನನ್ನ ಚಿಕ್ಕಪ್ಪನದು.

ಕಳೆದ ೨೨ನೇ ಡಿಸೆಂಬರ್ ೨೦೧೬ ಇಸವಿ.. ಒಂದು ಅದ್ಭುತ ದಿನ ಅವರ ಬಾಳಿನಲ್ಲಿ ಮೂಡಿ ಬಂತು. ೬೦ ಸಂವತ್ಸರಗಳನ್ನು ದಾಟಿ ಸಾಧಿಸುವ ಛಲಗಾರರಿಗೆ ಸ್ಪೂರ್ತಿಯಾಗಿ ನಿಂತದ್ದು ಅಂದಿನ ವಿಶೇಷ. ಅಪ್ಪ ಅಮ್ಮ ತಮ್ಮ ಮಕ್ಕಳ ಏಳಿಗೆಯನ್ನು ನೋಡುವುದು, ಅವರ ಬಾಲ್ಯ, ಯೌವನಾವಸ್ಥೆ, ಮದುವೆ, ಮಕ್ಕಳು ಹೀಗೆ ಜೀವನದ ಅನೇಕ ಮಗ್ಗುಲಗಳನ್ನು ನೋಡುವುದು ಸಹಜ.

ಈ ೬೦ ರ ಸಂಭ್ರಮಕ್ಕೆ ಸಾಕ್ಷಿಯಾಗಿ ನಿಲ್ಲುವುದು, ಜೀವನವನ್ನು ಇನ್ನೊಮ್ಮೆ ತಿರುಗಿ ನೋಡಿಕೊಳ್ಳುವ ಅವಕಾಶ. ಮಕ್ಕಳಿಗೆ 
ತಮ್ಮ ಮಾತಾ ಪಿತೃಗಳು ಮಧುರ ಬಂಧನದಲ್ಲಿ ಸೇರಿದ್ದನ್ನು ತಮ್ಮ ಕಣ್ಣಾರೆ ಕಾಣುವ ಅವಕಾಶ. ಮಾಂಗಲ್ಯಧಾರಣೆ, ಸಪ್ತಪದಿ, ಹಣೆಗೆ ರಕ್ಷೆ.. ವಾಹ್ ಇವೆಲ್ಲ ಪೂರ್ವ ಜನ್ಮದ ಪುಣ್ಯ ಎನ್ನಬೇಕು.

ಈ ಸಂದರ್ಭದಲ್ಲಿ ನನ್ನ ತಂದೆಯವರ ಭೀಮವ್ರತ ಶಾಂತಿ ಸಂಭ್ರಮದಲ್ಲಿ ನನ್ನ ಮೆಚ್ಚಿನ ಚಿಕ್ಕಪ್ಪ ಶಿವಮೊಗ್ಗೆಯಲ್ಲಿರುವ ಸೋಮಶೇಖರ್ ಅರ್ಥಾತ್ ಸೋಮಿ ಚಿಕ್ಕಪ್ಪ ನನ್ನ ಅಪ್ಪನಿಗೆ ಹೇಳಿದ್ದು ನೆನಪಿಗೆ ಬರುತ್ತದೆ "ಮಂಜಣ್ಣ.. ಇಂತಹ ಮಕ್ಕಳನ್ನು ಪಡೆಯೋಕೆ ಪುಣ್ಯ ಮಾಡಿದ್ದೆ ಕಣೋ.. " ಈ ಮಾತನ್ನು ಕೇಳಿದ ಅಪ್ಪ ಕಣ್ಣಲ್ಲಿ ನೀರು ತುಂಬಿಕೊಂಡದ್ದು ಮರೆಯಲಾಗದ ದೃಶ್ಯ ಎನಗೆ.

ಅದೇ ರೀತಿಯಲ್ಲಿ ಪ್ರಕಾಶ್ ಚಿಕ್ಕಪ್ಪ ಈ ಷಷ್ಠಿಪೂರ್ತಿ ಸಂಭ್ರಮದಲ್ಲಿ ಅವರ ಕಣ್ಣುಗಳು ತುಂಬಿಯೇ ಇದ್ದವು. ಒಂದು ಏಳು ಬೀಳಿನ ಜೀವನದ ಹಾದಿಯಲ್ಲಿ ಗೆಲುವಿನಷ್ಟೇ ಸೋಲನ್ನು ಉಂಡಿದ್ದರು, ಆ ಸೋಲು ಕಡೆಗೆ ತನ್ನ ಎದುರಿಗೆ ಸೋತಿದ್ದನ್ನು ನೋಡಿದ ಸುವರ್ಣ ಘಳಿಗೆ ಅದು.

"ಒಂದು ಬೆಚ್ಚನೆ ಗೂಡಿರಲು.. " ಇದು ಸರ್ವಜ್ಞನ ವಚನ.. ಇದನ್ನು ಅಕ್ಷರಶಃ ತಮ್ಮ ಜೀವನದಲ್ಲಿ ಕಂಡ ಚಿಕ್ಕಪ್ಪ ಆ ಸಂಭ್ರಮದ ಘಳಿಗೆಯಲ್ಲಿ ಸಂತಸದಿಂದ ಆನಂದಭಾಷ್ಪ ಹರಿಯುತ್ತಲೇ ಇತ್ತು.

ಮಂತ್ರಘೋಷಗಳ ನಡುವೆ, ಮಾಂಗಲ್ಯಧಾರಣೆ, ಹಿರಿಯರ ಆಶೀರ್ವಾದ, ಇದಕ್ಕೂ ಮುನ್ನ ಗಂಗಾಜಲದಿಂದ ಮಂತ್ರೋಕ್ತ ಜಳಕ.. ವಾಹ್ ಇಂತಹ ಭಾಗ್ಯ ಯಾರಿಗುಂಟು ಯಾರಿಗಿಲ್ಲ..

ಚಿಕ್ಕಪ್ಪ ಚಿಕ್ಕಮ್ಮ ನಿಮ್ಮ ಜೀವನದ ಸಾಧನೆಯ ಗೆಲುವಿನ ಮಜಲು ಇದು. ಈ ಸುಂದರ ಸಮಯದಲ್ಲಿ ನಮ್ಮೆಲ್ಲರ ಶಿರದ ಮೇಲೆ ನಿಮ್ಮ ಅಭಯಾಶೀರ್ವಾದ ಸದಾ ಇರಲಿ.. !

ಮಕ್ಕಳಾದ ನರಸಿಂಹ ಪ್ರಸಾದ್ ವಿನಯ್ ಭಾರದ್ವಾಜ್ ಮತ್ತು ಅವರ ಮನದನ್ನೆಯರಾದ ರಮ್ಯಾ ಮತ್ತು ತೇಜಸ್ವಿನಿ ಅವರ ಶ್ರಮ ಈ ಸಮಾರಂಭದಲ್ಲಿ ಎದ್ದು ಕಾಣುತ್ತಿತ್ತು. ಪ್ರತಿಯೊಂದರಲ್ಲಿಯೂ ಅಚ್ಚಕಟ್ಟು, ಬಂದವರನ್ನು ಗಮನಿಸಿಕೊಳ್ಳುವ ರೀತಿ ಸುಂದರವಾಗಿತ್ತು. ಸುಸಜ್ಜಿತವಾದ ಕಾರ್ಯಕ್ರಮದ ರೂಪುರೇಷೆ ಅಚ್ಚುಕಟ್ಟಾಗಿ ಇದ್ದುದ್ದರಿಂದ ಈ ಕಾರ್ಯಕ್ರಮ ಹೂವಿನ ಸರದಂತೆ ಘಮ ಘಮಿಸಿದ್ದು ಸುಳ್ಳಲ್ಲ.

ಚಿಕ್ಕಪ್ಪ ನಿಮಗೆ ೬೦ ವಸಂತಗಳು ತುಂಬಿದ ಜನುಮದಿನಕ್ಕೆ ಶುಭಾಶಯಗಳನ್ನು ಕೋರುತ್ತಾ, ಷಷ್ಠಿಪೂರ್ತಿ ಶಾಂತಿಯಲ್ಲಿ ಮಿಂದು ತೇಲುತ್ತಿರುವ ನಿಮ್ಮ ಕುಟುಂಬಕ್ಕೆ ನಮ್ಮೆಲ್ಲರ ಕಡೆಯಿಂದ ಹಾರ್ಧಿಕ ಅಭಿನಂದನೆಗಳು.


ಈ ಶುಭಸಂದರ್ಭದಲ್ಲಿ ಸತತ ೨೫ ವರ್ಷಗಳಿಂದ ತಾವು ಅನುಭವಿಸಿದ್ದು, ಓದಿದ್ದು, ಕೇಳಿದ್ದು, ಪ್ರವಚನ ಮಾಡಿದ್ದು ಎಲ್ಲವೂ ಒಂದು ಚಿಕ್ಕಪ್ಪನ ಬಾಳಿನಲ್ಲಿ ಪಾತ್ರವಾಗಿ.. ಅದು ಪತ್ರದ ರೂಪ ತಾಳಿ ಓದುಗರನ್ನು ತಲುಪುತ್ತಿತ್ತು. ೨೦೧೫ ರಲ್ಲಿ ಹಂಸ ಅಂಚೆಯಾಗಿ ಓದುಗರ ಮನೆ ಮನಸ್ಸು ಮುಟ್ಟಿದ್ದ ಆ ಲೇಖನಗಳು ಭೋಜ ಪತ್ರೆಯ ಹಾಗೆ ಕಾಗದದ ಮೇಲೆ ಮುದ್ರಣಗೊಂಡು ಹೊತ್ತಿಗೆಯಾದ ಸಂಭ್ರಮವೂ ಸೇರಿದ್ದು ಸಿಹಿಯಾದ ಪಾಯಸಕ್ಕೆ ದ್ರಾಕ್ಷಿ ಗೋಡಂಬಿಯಂತೆ ಸೇರಿತ್ತು.


ಇಂತಹ ತಂದೆ ತಾಯಿಯರನ್ನು ಪಡೆಯಲು ಮಕ್ಕಳು ಪುಣ್ಯ ಮಾಡಿರಬೇಕು
ಇಂತಹ ಮಕ್ಕಳನ್ನು ಪಡೆಯೋಕೆ ತಂದೆ ತಾಯಿಯರು ಪುಣ್ಯ ಮಾಡಿರಬೇಕು..
ಇಂತಹ ಸಮಾರಂಭದಲ್ಲಿ ಪಾಲ್ಗೊಳ್ಳಲು ನಾವು ಪುಣ್ಯಮಾಡಿರಬೇಕು..
ಸಪ್ತರ್ಷಿ ಮಂಡಲದಂತೆ ಎಲ್ಲವೂ ಪೂರ್ವನಿಯೋಜಿತವಾಗಿದ್ದಂತೆ ಭಾಸವಾಯಿತು.


ಗುರುನಾಥರ ಒಂದು ಅಮರವಾಣಿ ನೆನಪಿಗೆ ಬಂತು "ಇದು ನೀ ಇತ್ತ ಮಹೂರ್ತವಲ್ಲ.. ಆ ದೇವನಿತ್ತ ಮತ್ತು ದೇವನಿಟ್ಟ ಮಹೂರ್ತಕ್ಕೆ ನೀ ಹೆಜ್ಜೆ ಹಾಕಿದ್ದೀಯಾ"



ಈ ಮೇಲೀನ  ಮಾತುಗಳು ಎಷ್ಟು ನಿಜ ಅಲ್ಲವೇ .. ಜೀವನವೆಂಬ ನದಿಯ ಜಾಡು ಹಿಡಿದು ಜ್ಞಾನವೆಂಬ ಕಡಲನ್ನು ಸೇರುವ ತವಕ ಎಲ್ಲರಿಗೂ ಇರುತ್ತೆ ಅಲ್ಲವೇ.. !!!

Sunday, November 27, 2016

೩ಕೆ..... ಭಾವ ಹಾಸ್ಯ ಕವಿಯಾನದಲ್ಲಿ....!

ಬಾಲ್ಯದಲ್ಲಿ ಕಲ್ಲು, ಮಣ್ಣು, ಕಡ್ಡಿ, ಕಸ ಎಲ್ಲವನ್ನೂ ಸೇರಿಸಿಕೊಂಡು ಮನೆ ಕಟ್ಟುವ ಆಟ, ಇಲ್ಲವೇ ಅಡಿಗೆ ಗುಡಿಗೆ ಆಟ.. ಇವೆಲ್ಲವೂ ನಮ್ಮ ಶಕ್ತ್ಯಾನುಸಾರ ಸಿಕ್ಕ ಪರಿಕರಗಳಲ್ಲಿ ನಮ್ಮ ಮನಸ್ಸಿಗೆ ಸಂತಸ ಕೊಡುವ ರೀತಿಯಲ್ಲಿ ಹವ್ಯಾಸಗಳನ್ನು ಬೆಳೆಸಿಕೊಂಡು ಬಂದಿದ್ದ ನೆನಪು ಎಲ್ಲರಿಗೂ ಇದ್ದೆ ಇದೆ.

ಕನ್ನಡದ ವರ್ಣಮಾಲೆಯಲ್ಲಿರುವ ಅಕ್ಷರಗಳನ್ನು ಒಂದು ಸವಿ ಮುತ್ತಿನಹಾರದಂತೆ ಪೋಣಿಸಿ ತಾಯಿ ಭುವನೇಶ್ವರಿಗೆ ಒಂದು ಮಾಲೀಕೆಯನ್ನು ಅರ್ಪಿಸುವುದು ಅಡಿಗೆ ಗುಡಿಗೆ ಆಡಿದಷ್ಟೇ ಸುಲಭ ಅನ್ನಿಸಿದರೂ, ಅದಕ್ಕೆ ಬೇಕಾಗುವ ಪರಿಶ್ರಮ, ಶಿಸ್ತು, ತಮ್ಮ ಕಾರ್ಯದಲ್ಲಿನ ಅಚಲವಾದ ನಂಬಿಕೆಗಳು ಬೆಟ್ಟದಷ್ಟೇ ಎತ್ತರಕ್ಕೆ ಇರಬೇಕು.

ನಾ ಕಂಡ ಹಾಗೆ ನಾಲ್ಕು ವರ್ಷಗಳಿಂದ ಈ ಸುಂದರ ಮನದ ತಂಡವನ್ನು ಗಮನಿಸಿಕೊಂಡು ಬರುತ್ತಿದ್ದೇನೆ.. ಇಲ್ಲಿ ನನಗೆ ಅನ್ನಿಸಿದ್ದು ಹೀಗೆ.....

ಇರುವೆ ಸಾಲುಗಳನ್ನು ನೋಡಿದಾಗ ನಮ್ಮ ಅನುಭವಕ್ಕೆ ಬರುತ್ತದೆ.. ಶಿಸ್ತು ಬದ್ಧ ಸರತಿ ಸಾಲಿನಲ್ಲಿ ಚಲಿಸುತ್ತವೆ, ಅವಕ್ಕೆ ಒಬ್ಬ ಮುಂದಾಳತ್ವ ಹೊರುವ ನಾಯಕ ಇರುತ್ತಾನೆ. ಅವನ ಮಾರ್ಗದರ್ಶನದಲ್ಲಿ ಸಾಗುತ್ತವೆ.. ಜೊತೆಯಲ್ಲಿಯೇ ತಾವು ಮಾಡಬೇಕಾದ ಕಾರ್ಯವನ್ನು ಅಚ್ಚುಕಟ್ಟಾಗಿ ಮಾಡಿ ಮುಗಿಸುತ್ತವೆ.. ಎಲ್ಲವೂ ಈ ಕಾರ್ಯದಲ್ಲಿ ಭಾಗಿಯಾಗಿರುತ್ತವೆ,   ಕೆಲಸ ಮಾಡುತ್ತಾ ನಿರ್ಧರಿಸುವುದಿಲ್ಲ, ನಿರ್ಧರಿಸಿ ಕೆಲಸಕ್ಕೆ ಕೈಹಾಕುತ್ತವೆ..  ಎಲ್ಲರಿಗೂ ಸಮಾನ ಜವಾಬ್ಧಾರಿಗಳು ಇರುತ್ತವೆ.. ಯಾರೂ ಹೆಚ್ಚಲ್ಲ, ಯಾರೂ ಕಡಿಮೆಯಲ್ಲ..ತಮ್ಮ ಕೆಲಸ ಮುಗಿದಾಗಷ್ಟೇ ಇವು ಕೊಂಚಕಾಲ ವಿರಮಿಸಿಕೊಳ್ಳುತ್ತವೆ..

ಹಾಗೆ ನಮ್ಮ ಸುಂದರ ಮನದ ೩ಕೆ ತಂಡ ಕೂಡ..

ಕನ್ನಡ ತಾಯಿಗೆ ಅಕ್ಷರಗಳ ಪುಷ್ಪಮಾಲಿಕೆಯನ್ನು ಅರ್ಪಿಸಲು ನಿರ್ಧರಿಸಿದ ದಿನಾಂಕ ೨೬. ೧೧. ೨೦೧೬ ಶನಿವಾರ. ಆದರೆ ಇದಕ್ಕೆ ಪೂರ್ವಸಿದ್ಧತೆ ಹಲವು ವಾರಗಳ ಮುಂಚೆಯೇ ನಿರ್ಧರಿತವಾಗಿತ್ತು. ಕವಿತೆಗಳನ್ನು ರಚಿಸಲು ಪ್ರೇರೇಪಿಸಿ, ಅದಕ್ಕೆ ಸೂಕ್ತ ಬಹುಮಾನವನ್ನು ರೂಪಿಸಿ, ಆಯ್ಕೆಯಲ್ಲಿ ಮೊದಲ ಸಾಲಿನಲ್ಲಿ ನಿಂತ ಕವಿತೆಗಳನ್ನು ವಾಚಿಸುವ ಅವಕಾಶ ಕೊಟ್ಟು, ತಾವು ಮಾತ್ರ ವೇದಿಕೆಯ ಒಂದು ಮೂಲೆಯಲ್ಲಿ ನಿಂತು ಸಂತಸ ಪಡುವ ಮಲ್ಲಿಗೆ ಹೂವಿನ ಮನಸ್ಸು ಈ ತಂಡದ್ದು.

ಆಹ್ವಾನಿಸಿದ ಕವಿತಾ ತರಂಗಳಲ್ಲಿ ಕೆಲವು ತರಂಗಳನ್ನು ಆರಿಸಿ, ಆ ಕವಿತೆಗಳ ಮೇಲೆ ತೇಲುವ ಮನಸ್ಸು ಮಾಡಿದ್ದು ಸುಂದರವಾದ ಕಾರ್ಯಕ್ರಮಕ್ಕೆ ಚಾಲ್ತಿ ನೀಡಿತ್ತು. ಆರಂಭಿಕ ಪ್ರಾರ್ಥನೆ ಗೀತೆ, ದೀಪಬೆಳಗುವ ಶುಭ ಕಾರ್ಯ, ನಂತರ ಕವಿತಾ ವಾಚನ. ಹೀಗೆ ಶುರುವಿಟ್ಟು ಈ ಸುಂದರ ಕ್ಷಣಗಳನ್ನು ನಗೆಗಡಲಿಗೆ ಕೊಂಡಯ್ದದ್ದು ಕನ್ನಡ ಕೈ ಬಿರುದಾಂಕಿತ ಟಿಪಿಕಲ್ ಅಥವಾ ಟಿ ಪಿ ಕೈಲಾಸಂ ಅವರ ಹೊತ್ತಿಗೆಗಳಿಂದ ಮಸ್ತಕಕ್ಕೆ ನಶೆ ಏರಿಸುವ ಹಾಸ್ಯ ಪ್ರಸಂಗಗಳು. ಅಚ್ಚುಕಟ್ಟಾಗಿ ಮಾತಾಡಿದ ಹೆಮ್ಮೆಯ ಗುರುಗಳು ಶ್ರೀ ಮಂಜುನಾಥ್  ಕೊಳ್ಳೇಗಾಲ ಅವರು, ಆ ಕ್ಷಣಕ್ಕೆ ನಮ್ಮನ್ನು ಟಿಪಿಕಲ್ ಕಾಲಘಟ್ಟಕ್ಕೆ ಕರೆದೊಯ್ದಿದ್ದರು.

ನಮ್ಮ ಹೆಮ್ಮೆಯ ಗುರುಗಳ ಭಾಷೆ, ಅದರ ಪ್ರಯೋಗ, ಹಾಸ್ಯವನ್ನು ಹಾಸ್ಯವಾಗಿಯೇ ಹೇಳುವ ಅವರ ಶೈಲಿ, ಅದ್ಭುತ ಎನ್ನಿಸಿತು, ಕೈಲಾಸಂ ಅವರ ಅನೇಕ ಪ್ರಹಸನಗಳ ತುಣುಕನ್ನು ನಮ್ಮ ಕಣ್ಣ ಮುಂದೆ, ಕಿವಿಯ ತಮಟೆಯ ಮೇಲೆ ಹಾಗೆ ತಂದು ಕೂರಿಸಿದ್ದು, ನಮ್ಮ ಗುರುಗಳ ಭಾಷೆಯ ಮೇಲಿನ ಹಿಡಿತಕ್ಕೆ ಒಂದು ಸಾಕ್ಷಿ. ಇನ್ನೂ ಕೇಳುವ ಹಂಬಲ ಇತ್ತು, ಅದನ್ನು ಅರಿತೋ ಏನೋ, ಕೈಲಾಸಂ ಅವರ ಒಂದು ಪ್ರಹಸನವನ್ನು ೩ಕೆ ತಂಡದ ಪಟಾಲಂಗಳನ್ನು ಬಳಸಿಕೊಂಡು ರಂಗಕ್ಕೆ ತರುವ ಹಂಬಲ ಇದೆ ಎಂದಾಗ.. ಇಡೀ ೩ಕೆ ತಂಡವೇ ಓಕೆ ಎಂದು ಅಂಗೀಕರಿಸಿತು. ಆ ಮಹತ್ ಸಮಯಕ್ಕೆ ಕಣ್ಣು ಕಿವಿ ಬಿಟ್ಟುಕೊಂಡು ಕಾಯುತ್ತಿದ್ದೇನೆ!

ಅಮ್ಮ ಅಂದರೆ ಅಮ್ಮ, ಅಪ್ಪ ಅಂದರೆ ಅಪ್ಪ, ಯಾನ ಅಂದರೆ ಪ್ರಯಾಣ ಎಂಬ ಮಾತುಗಳಷ್ಟೇ ಗೊತ್ತಿದ್ದ ನಮಗೆ, ಅಮ್ಮ ಅಂದರೆ ತನ್ನ ಕಂದನಿಗೆ ಸಿಹಿ ಸುಳ್ಳುಗಳನ್ನು ಹೇಳಿ, ಭರವಸೆ ತುಂಬಿ ಮಕ್ಕಳಿಗೆ ಉದಾತ್ತ ಮನಸ್ಸನ್ನು ಬೆಳೆಸುವ ಒಂದು ಮಮತಾ ಮಯಿ ಎಂದು ತೋರಿಸುವ "ಅಮ್ಮ ಹೇಳಿದ ಎಂಟು ಸುಳ್ಳುಗಳು" ಕತೃ.
ಅಪ್ಪ ಎಂದರೆ ಶಕ್ತಿ ಯುಕ್ತಿ ತುಂಬಿಸಿ ಹುರಿದುಂಬಿಸಿ ಆಕಾಶದಷ್ಟೇ ವಿಶಾಲ ತನ್ನ ಮನಸ್ಸು ಎಂದು ತೋರಿಸುವ "ಅಪ್ಪ ಅಂದರೆ ಆಕಾಶ".. ಬರಿ ಯಾನ ಮಾಡಬೇಡಿ, ಭಾವ ತೀರದಲ್ಲಿ ಪಯಣಿಸಿ ಎಂದು ಹೇಳುತ್ತಲೇ "ಭಾವ ತೀರಾ ಯಾನ" ಹೊತ್ತಿಗೆಯನ್ನು ತಂದು, ಹಾಡು ಹುಟ್ಟುವಾಗ ಸಂದರ್ಭ ಹೇಗಿರುತ್ತದೆ ಎಂದು "ಹಾಡು ಹುಟ್ಟಿದ ಸಮಯ"ವನ್ನು ತಮ್ಮ ಅಕ್ಷರಗಳ ಗಡಿಯಾರದಲ್ಲಿ ತೋರಿಸಿದ ಶ್ರೀ ಮಣಿಕಾಂತ್ ರವರಿಗೆ ವರ್ಷದ ರಾಜ್ಯೋತ್ಸವ ಪ್ರಶಸ್ತಿ ಕೊಟ್ಟು ಗೌರವಿಸಿದ್ದು ಪ್ರಶಸ್ತಿಗೆ ಒಂದು ಗೌರವ ಸಿಕ್ಕಿದಂತೆ ಆಗಿತ್ತು.

ಅಲ್ಲಿಗೆ ಬಂದಿದ್ದ ಕವಿಗಳ ಕೃತಿಗಳ ವಾಚನ, ಸಮಯ ಸಾಲದೇ ಬಾರದ ಕವಿಗಳ ಕೃತಿಗಳನ್ನು ನೂತನ್ ರವರು ವಾಚಿಸಿದ್ದು ಸುಲಲಿತವಾಗಿತ್ತು.

ಉತ್ಸಾಹ ಪುಟಿಯುವ ಯುವಕ ಶಶಿ ಗೋಪಿನಾಥ್ ಅವರ ಚುಟುಕು ಹಾಸ್ಯ, ನೃತ್ಯ, ಕನ್ನಡದ ಚಿತ್ರ ರಂಗದ ಕಲಾವಿದರ ಅಣುಕು ಕಾರ್ಯಕ್ರಮ ಚೆನ್ನಾಗಿತ್ತು. ಇದರ ಮಧ್ಯೆ ಊಟದಲ್ಲಿ ಉಪ್ಪಿನಕಾಯಿ ಎನ್ನುವ ಹಾಗೆ ಅರುಣ್ ಶೃಂಗೇರಿ ಅವರ ಚುಟುಕು ಅಣುಕು ಕಾರ್ಯಕ್ರಮ ಉಪ್ಪಿನಕಾಯಿಯಷ್ಟೇ ಸವಿಯಾಗಿತ್ತು.

ಸ್ಪಟಿಕದಲ್ಲಿ ಲೋಪವಿರೋದಿಲ್ಲ, ಕಲೆಇರೋದಿಲ್ಲ.. ಹಾಗೆ ೩ಕೆ ತಂಡದ ಕಾರ್ಯಕ್ರಮದಲ್ಲಿಯೂ ಪೂರ್ಣಚಂದ್ರನಂತೆ ಪ್ರಕಾಶಿಸುವ ಹೊಂಬೆಳಕು ಸದಾ ಇದ್ದೆ ಇರುತ್ತದೆ ಎನ್ನುವುದಕ್ಕೆ ಇನ್ನೊಂದು ಸಾಕ್ಷಿ ಈ ಸಮಾರಂಭ.. ! 

ಈ ಕಾರ್ಯಕ್ರಮದ ಬಗ್ಗೆ ಮಾತಾಡಲು, ಬರೆಯಲು ಹೋಗುವುದಕ್ಕಿಂತ.. ಈ ಕಾರ್ಯಕ್ರಮದಲ್ಲಿ ನಾ ಕಂಡು ಕೊಂಡ ಸರಳ ತತ್ವಗಳು ಮನಸ್ಸಿಗೆ ಮುದ ಕೊಡುತ್ತದೆ.

ಪುಟ್ಟ ಪುಟ್ಟ ಹೆಜ್ಜೆ ದಿಟ್ಟ ಹೆಜ್ಜೆ ಆಗಿಯೇ ಆಗುತ್ತದೆ
ಅಲೆಗಳು ಅಕ್ಕ ಪಕ್ಕದಲ್ಲಿರುವ ವಸ್ತುಗಳನ್ನು ತನ್ನ ತೆಕ್ಕೆಯಲ್ಲಿ ಸೆಳೆದುಕೊಂಡು ಸಾಗುವಹಾಗೆ, ಈ ಸುಮಧುರ ಮನಸ್ಸಿನ ತಂಡ ತಾವು ಮಾಡುವ ಅವರ ಮಾತಿನಲ್ಲಿಯೇ ಹೇಳುವ "ಅಳಿಲು ಸೇವೆ" ಯಲ್ಲಿ ನಮ್ಮನ್ನೆಲ್ಲ ಸೆಳೆದುಕೊಂಡು ಸಾಗುತ್ತಿರುವುದು ಶ್ಲಾಘನೀಯ
ಪ್ರತಿಭೆಗಳಿಗೆ ಒಂದು ಉತ್ತಮ ವೇದಿಕೆ ಕಲ್ಪಿಸುತ್ತಾ, ತಾವು ಮಾಡುವ ಕಾರ್ಯವನ್ನು ದೂರದಲ್ಲಿ ಕುಳಿತು ನೋಡುತ್ತಾ, ಮಿಕ್ಕವರಿಗೆ ಅವಕಾಶ ನೀಡುವ ಅತ್ಯುತ್ತಮ ಮನಸ್ಸ್ಸು ಈ ಜೇನುಮನದ ತಂಡದ್ದು.

ಒಂದು ಸುಂದರ ಸಂಜೆಯನ್ನು ಅಷ್ಟೇ ಸಾರ್ಥಕತೆಯಿಂದ ಕಳೆದ ಅನುಭವ ನನ್ನ ಮನದಿಂದ ಮೂಡಿದ ಭಾವಗಳು ಅಕ್ಷರಗಳಾಗಿ, ಪದಗಳಾಗಿ ಮೇಲಿನ ಲೇಖನದಲ್ಲಿ ಹರಡಿಕೊಂಡಿದೆ. 

Wednesday, July 13, 2016

ದೇವರು ನಕ್ಕೆ ನಗುತ್ತಾನೆ - ೧

ಸುಮಾರು ಎರಡು ಘಂಟೆಗಳ ಅಂತರದಲ್ಲಿ ಎರಡು ಅಂತರಂಗ ಬಹಿರಂಗ ಶುದ್ಧಿ ಮಾಡುವಂತಹ ದೇವರ ನಗು ಕೇಳಿಸಿಕೊಂಡೆ.. 

**************

ಘಟನೆ - ೧

ಜೀವನ ಯಾವಾಗ ಸಾರ್ಥಕ ಅನ್ನಿಸೋದು...... ಭಗವಂತನ ಆಶೀರ್ವಾದದ ಕಿರಣಗಳು ತಲುಪಿದಾಗ

ಅಂಥ ಒಂದು ಘಟನೆ

ನಮ್ಮ ಆಫೀಸ್ ಗೆ ಹೊಸ ಉಗ್ರಾಣ ಬಾಡಿಗೆಗೆ ತೆಗೆದುಕೊಂಡವು

ಅಲ್ಲಿದ್ದ ಕಾವಲುಗಾರನ ಹತ್ತಿರ ಮಾತಾಡುತ್ತಿದ್ದೆ

ಏನಾದರೂ ಕೆಲಸ ಕೊಡಿ ಸರ್ ಎಂದರು

ಅದು ಇದು ಮಾತಾಡುತ್ತ ...ಪರಿವಾರದ ಬಗ್ಗೆ ಕೇಳಿದೆ...(ನಾ ಹಾಗೆ ಎಲ್ಲರನ್ನೂ ಕೇಳೋಲ್ಲ..ಇಂದು ಯಾಕೆ ಕೇಳಿದೆ ಗೊತ್ತಿಲ್ಲ...)

ಹೆಂಡತಿ ಕ್ಯಾನ್ಸರ್‌ಗೆ ತುತ್ತಾಗಿ ೮ ತಿಂಗಳು ಮುಂಚೆ ಸತ್ತು ಹೋದಳು

ನನಗೆ ಓದು ಬರಹ ಬರೋಲ್ಲ

ಮಕ್ಕಳು ಓದಲಿ ಅಂತ ಆಸೆ...

ಇರೋಕೆ ಮನೆ ಅಂತ ಇಲ್ಲ

ಚಿಕ್ಕ ಮನೆ ಮಾಡಬೇಕು ಹುಡಕಬೇಕು... ಹೀಗೆ ಸಂಕೋಚದಿಂದಲೇ ತಮ್ಮ ಕುಟುಂಬದ ಬಗ್ಗೆ  ಪುಟ್ಟ ವಿವರಣೆ ನೀಡಿದರು 

ಮಕ್ಕಳು ಏನು ಓದುತ್ತಾ ಇದ್ದಾರೆ ಎಂದೆ..

ಚಿಕ್ಕವನು ಎಂಟನೆ ತರಗತಿ,  ದೊಡ್ಡವನು ಸಿವಿಲ್ ಇಂಜಿನೀಯರಿಂಗ್ ಮೊದಲನೆ ವರ್ಷ ಅಂದರು...

ಒಂದು ಕ್ಷಣ.. ನಾ ಹಾಗೆ ನಿಂತೆ.. ತಕ್ಷಣ ಮತ್ತೆ ಸಹಜ ಸ್ಥಿತಿಗೆ ಬಂದು, ಅವರ, ಮಣ್ಣಿನ ಕೆಲಸ ಮಾಡಿ, ಗಲೀಜಾಗಿದ್ದ ಬಟ್ಟೆಯನ್ನು ಗಮನಿಸದೆ ಆಲಂಗಿಸಿದೆ.. ಅವರು  ಆ ಕ್ಷಣವನ್ನು ಸಂಭ್ರಮಿಸಿದರು. 

ತಲೆ ಎತ್ತಿ ನೋಡಿದೆ ದೇವರು ನಕ್ಕು ಒಮೆ ಕಣ್ಣು ಮಿಟುಕಿಸಿದ....ತನ್ನ ಇರುವನ್ನು ಆಗಸದಿಂದ ಧುಮುಕುತ್ತಾ ಇರುವ ಕಿರಣಗಳನ್ನು ಭುವಿಗೆ ಬಿಟ್ಟು ಸಂತೈಸಿದ ಹಾಗೆಯೇ ಸಂತಸಪಟ್ಟ. 

ತುಮಕೂರು ರಸ್ತೆಯಲ್ಲಿ ತೆಗೆದ ಚಿತ್ರ

**********
ಘಟನೆ - ೨

ದೇವರು ಯಾಕೋ ಇಂದು ಇನ್ನೊಮ್ಮೆ ನಗುತ್ತಿದ್ದ 

ಆಫೀಸ್ ಮುಗಿಸಿಕೊಂಡು ಕ್ಯಾಬ್ ಇಳಿದು ಮನೆ ಕಡೆ ಹೆಜ್ಜೆ ಹಾಕುತ್ತಿದ್ದೆ 

ಬೆನ್ನಿಗೆ,  ಝಾನ್ಸಿ ರಾಣಿ ಲಕ್ಷ್ಮಿಬಾಯಿ ಕಟ್ಟಿಕೊಂಡ ಹಾಗೆ, ಲ್ಯಾಪ್ಟಾಪ್ ಬ್ಯಾಗ್ 
ಕೈಯಲ್ಲಿ ಕತ್ತಿಯ ಬದಲು ಊಟದ ಡಬ್ಬಿ.. 
ಇನ್ನೊಂದು ಕೈಯಲ್ಲಿ, ಆಗಷ್ಟೇ ಗೋಪಾಲ ವಾಯಪೇಯಿ ಸರ್ .. ನಾನು ಹಾಕಿದ ಒಂದು ಪೋಸ್ಟಿನ ಕಾಗುಣಿತ ತಿದ್ದಿ ಹೇಳಿ ಸಂದೇಶ ಕಳಿಸಿದ್ದರು.. ಅದನ್ನು ಸರಿಪಡಿಸಿದ ಮೇಲೆ, ಮೊಬೈಲನ್ನು ಹಿಡಿದುಕೊಂಡು,  ಅವರ ಗುಂಗಿನಲ್ಲಿಯೇ ಜವಾರಿ ಭಾಷೆ ಅದು ಇದು ಎಂದು ಅವರ ಪೋಸ್ಟ್ ಗಳನ್ನು ನೆನಪು ಮಾಡಿಕೊಂಡು ಹೋಗುತ್ತಿದೆ 

ರಂಗು ರಂಗಿನ ಚಿತ್ತಾರ ಮೂಡಿಸಿದ್ದ ಆಗಸ ನೋಡುತ್ತಾ ಸುತ್ತಾ ಮುತ್ತಾ ನೋಡುತ್ತಾ  ಮನೆ ಕಡೆಗೆ ಹೆಜ್ಜೆ ಹಾಕುತ್ತಿದ್ದೆ 

"ಸರ್ ಸರ್.. "

ಯಾರೋ ಕೂಗಿದ ಹಾಗೆ ಅನ್ನಿಸಿತು.. 

ಕರೆಬಂದ ಕಡೆ ತಿರುಗಿ ಏನು ಅಂಥ ಹುಬ್ಬು ಹಾರಿಸಿದೆ 

ಊಟದ ಡಬ್ಬಾ ನೀವೇ ತೆಗೆದುಕೊಂಡು ಹೋಗ್ತೀರಾ ಅಂಥ ಒಂದು ಅಪರಿಚಿತ ವ್ಯಕ್ತಿ ಕೇಳಿತು 

"ಹೌದು" ಎಂದೇ 

"ನಾವು ಒಂದು ಜವಾರಿ ಹೋಟೆಲ್ ಮಾಡಿದ್ದೇವೆ.. ತಿಂಡಿ ಊಟ ಎಲ್ಲಾ ಜವಾರಿ ಸ್ಟೈಲ್ ನಲ್ಲಿ ಕೊಡುತ್ತೇವೆ.. ಪ್ರತಿದಿನವೂ ಬನ್ನಿ ಸರ್"

ನಾ ಒಮ್ಮೆ ತಲೆ ಎತ್ತಿ ನೋಡಿದೆ.. ದೇವರು ಶ್ರೀ ಮಜಾ ಮಾಡು ಅಂದ ಹಾಗೆ ಅನ್ನಿಸಿತು.. ನಕ್ಕೆ 

"ಇಲ್ಲ ಸರ್ ನನ್ನ ಹೆಂಡ್ರವ್ವ ಊಟ ತಿಂಡಿ ಮಾಡಿಕೊಡುತ್ತಾಳೆ" ಅಂದೆ..

ಆ ವ್ಯಕ್ತಿ ಈ ಉತ್ತರ ನಿರೀಕ್ಷಿಸಿರಲಿಲ್ಲ ಒಮ್ಮೆ ಅವರ ಮುಖ ನೋಡಿದೆ.. 

ನೂರು ಕಣ್ಣು ಸಾಲದು ನಿಮ್ಮ ನೋಡಲು ಅನ್ನುವ ಅಣ್ಣಾವ್ರ ಹಾಡು ನೆನಪಿಗೆ ಬಂತು.. 
"ಓಹ್ ಹೌದಾ.. " ಅಂಥ ದೀರ್ಘ ಉಸಿರು ಬಿಟ್ಟರು.. 

ಅವರ ಆ ಉಸಿರಿನಲ್ಲಿ ೧) ನನಗೆ ಮದುವೆ ಆಗಿಲ್ಲ ಅನ್ನುವ ಅರ್ಥವಿತ್ತೇ 
                          ೨) ಓಹ್ ಹೆಂಡ್ರವ್ವ ಅಡಿಗೆ ಮಾಡಿಕೊಡ್ತಾಳೆ. ಎಷ್ಟು ಪುಣ್ಯವಂತನಪ್ಪ ಅಂದುಕೊಂಡ್ರಾ 
                          ೩) ಪಾಪಿ ಮುಂಡೇದು.. ಹೋಟೆಲನ್ನಲ್ಲಿ ತಿನ್ನೋಕೆ ದುಡ್ಡು ಎಲ್ಲಿ ಇರುತ್ತೆ.. ತಾನೇ ಮನೇಲಿ ಕೆಟ್ಟದಾಗಿ ಮಾಡಿಕೊಂಡು.. ನನ್ನ ಹತ್ತಿರ ಕಥೆ ಹೇಳುತ್ತಾ ಇದೆ... ಎಂದು ಕೊಂಡರೇ.. 

ಯಾವುದು ಗೊತ್ತಾಗ್ಲಿಲ್ಲಾ...

ಆದರೆ ತಲೆ ಎತ್ತಿ ನೋಡಿದಾಗ.. ದೇವರು ಮುಸಿ ಮುಸಿ ನಗುತ್ತಿದ್ದದು ತುಸು ಜೋರಾಗಿಯೇ ಕೇಳಿಸಿತು.. 

ಹಹ್ಹಹಹಹಹಃ 

Tuesday, June 21, 2016

ಬಾಲೂ ಸರ್.. ಹಹಹಹ..

"ನಾರಾಯಣ ನಾರಾಯಣ... "

ಅರೆ ಏನಿದು..  ದೇವಲೋಕದಲ್ಲಿ ಯಾರೂ ಇಲ್ಲ.. ಇರಿ ಬ್ರಹ್ಮ ದೇವನ ಹತ್ತಿರ  ಹೋಗಿ ಬರ್ತೀನಿ.. ಅಲ್ಲೂ ಖಾಲಿ ಖಾಲಿ.. ವೈಕುಂಠ  ಸಪ್ತ ದ್ವಾರವನ್ನು ದಾಟಿ ಒಳಗೆ ಹೋಗಿ ನೋಡಿದರೆ.. ಆದಿಶೇಷನೂ ಇಲ್ಲ, ರಮಾ ಮತ್ತು ಆಕೆಯ ಕಾಂತನೂ ಇಲ್ಲ.. ನಡುಗುತ್ತಲೇ ಮಂಜಿನ ಕೈಲಾಸಕ್ಕೆ ಹೊಕ್ಕರೆ.. ನಂದಿ ಒಂದೇ ಬೇಜಾರಲ್ಲಿ ಕೂತಿತ್ತು.

"ಓಹ್ ಏನಪ್ಪಾ ಇದು.. ಏನಾಯಿತು.. " ಏನೋ ಸಮಸ್ಯೆ ಇದೆ ಏನಾಯಿತು ಎಂದು ಕೈಲಾಸದ ಮಂಜಿನ ಒಂದು ಮಂಜಿನ ಗೆಡ್ದೆಗೆ ಒಂದು ದಿನಸೂಚಿ ತಗಲಾಕಿತ್ತು..

ನಾರದರ ಕಣ್ಣು ಅಂದಿನ ದಿನಾಂಕ ನೋಡಿದಾಗ.. ಮೊಗದಲ್ಲಿ ಸಣ್ಣ ನಗು .. ಹಾಗೆ ಎರಡು ಹಾಳೆಗಳನ್ನು ಹರಿದರು.. ದಿನಾಂಕ ೨೧ ಎಂದು ತೋರುತ್ತಿತ್ತು..

ನಂದಿ ಕಿವಿಯಲ್ಲಿ ಹೋಗಿ ಮೆಲ್ಲಗೆ ಹೇಳಿದರು.. ನಂದಿ ಇಂದು ತಾರೀಕು ೨೧ ಎಂದು ಜೋರಾಗಿ ಹೇಳು..

ದೇವಲೋಕದ ಬಂಧುಗಳೇ.. ಸ್ವರ್ಗಲೋಕದ ನಿವಾಸಿಗಳೇ.. ಆ ದಿನ ದಾಟಿಯಾಗಿದೆ.. ಇಂದು ತಾರೀಕು ೨೧  ಜೂನ್ ೨೦೧೬.. ನೀವೆಲ್ಲಾ ಹೊರಗೆ ಬರಬಹುದು.. ಬೇಗನೆ ಬನ್ನಿ..


ಉಫ಼್ಫ಼್ ಉಫ಼್ಫ಼್ಫ಼್ ಎಂದು ನಿಧಾನವಾಗಿ ಉಸಿರು ಬಿಟ್ಟು.. ಎಲ್ಲರೂ ನಗೊಮೊಗ ಹೊತ್ತು ತಾವಿದ್ದ ತಾಣದಿಂದ ಹೊರಗೆ ಬಂದರು.

ಫಳ್ ಅಂತ ಒಂದು ಬೆಳಕು ತೂರಿ ಬಂತು..

ಅಯ್ಯೋ ಇಷ್ಟು ದಿನ ನಾವು ಮರೆಯಲ್ಲಿ ಇವರಿಗೆ ಕಾಣದೆ ಇದ್ದದ್ದು ವ್ಯರ್ಥವಾಯಿತು.. .. ಇವರು ಅಹಲ್ಯೆ ಶ್ರೀ ರಾಮನಿಗೆ ಕಾದ ಹಾಗೆ, ಶಬರಿ ರಘುರಾಮನಿಗೆ ಕಾದು ಕುಳಿತಿದ್ದ ಹಾಗೆ.. ಕ್ಯಾಮೆರ ಹಿಡಿದು ಕೊಂಡು ನಮಗಾಗಿ ಕಾಯುತ್ತಲೇ ಇದ್ದಾರೆ.. ಇವರ ತಾಳ್ಮೆಗೆ ಒಂದು ಶಭಾಶ್ ಹೇಳಲೇ ಬೇಕು. ಜ಼ೊತೆಯಲ್ಲಿ ಇವರಿಗೆ ಸುಂದರವಾದ ಶುಭಾಶಯಗಳನ್ನು ಕೋರುತ್ತಿದ್ದೇವೆ..

ಬಾಲಸುಬ್ರಮಣ್ಯ ಅವರೇ.. ನಿಮ್ಮ ತಾಳ್ಮೆಗೆ ಒಂದು ಜೈ.. ನಾವು ನೆಲೆನಿಂತ ತಾಣದ ಬಗ್ಗೆ ನಮಗಿಂತ ಚೆನ್ನಾಗಿಯೇ ತಿಳಿದು, ಗ್ರಂಥಗಳನ್ನು, ಗೆಜೆಟ್ ಗಳನ್ನೂ ಓದಿ, ಬಲ್ಲವರಿಂದ ಮಾಹಿತಿ ಕಲೆಹಾಕಿ.. ಜೇನುನೊಣ ಊರಲ್ಲಿರುವ ಎಲ್ಲಾ ಹೂಗಳ ಮಕರಂದವನ್ನು ಕಲೆಹಾಕಿ, ಅದ್ಭುತವಾದ ರಸವತ್ತಾದ ಜೇನುಗೂಡನ್ನು ಕಟ್ಟುವ ಹಾಗೆ, ನೀವು ಆ ಮಾಹಿತಿಯನ್ನು ನಿಮ್ಮ "ನಿಮ್ಮೊಳಗೊಬ್ಬ ಬಾಲು" ಎನ್ನುವ ಸುಂದರ ಅಂಕಣದಲ್ಲಿ ಮನಮುಟ್ಟುವಂತೆ ವಿವರಿಸುವ ನಿಮ್ಮ ಪರಿಗೆ ನಾವೆಲ್ಲಾರೂ ಬಹುಪರಾಕ್ ಹೇಳುತ್ತೇವೆ..

ನಿಮ್ಮ ಜನುಮದಿನ ಸುಂದರವಾಗಿದ್ದು ಗೊತ್ತಾಯಿತು.. ಎಲ್ಲರೂ ನಿಮ್ಮ ಆರೋಗ್ಯಕ್ಕೆ, ಉತ್ಸಾಹಕ್ಕೆ, ನಿಮ್ಮ ಗೆಳೆತನಕ್ಕೆ ಶುಭ ಕೋರಿದ್ದಾರೆ.. ಈಗ ನಮ್ಮಸರದಿ .

ನಿಮ್ಮ ಪ್ರತಿದಿನದ ಶುಭ ಮುಂಜಾನೆ ಶುಭಾಷಯ ಪತ್ರ ಫೇಸ್ಬುಕ್ ನಲ್ಲಿ ಮತ್ತೆ ಶುರುವಾಗಬೇಕು .. ಈ ಪತ್ರ ನಿಮ್ಮ ಸ್ನೇಹಲೋಕದ ವಲಯದಲ್ಲಿ ಉತ್ಸಾಹ ತುಂಬುತ್ತದೆ, ಚೈತನ್ಯ ನೀಡುತ್ತದೆ .. ಮತ್ತೆ ನೀವು ಶುರುಮಾಡಲೇ ಬೇಕು..  ಇದು ನಮ್ಮೆಲ್ಲರ ಆಜ್ಞೆ ಮತ್ತು ಶುಭ ಆಶೀರ್ವಾದ..

ಮತ್ತೆ ನೀವು ಮೊದಲಿನಂತೆಯೇ ಬೇಗ ಆಗುತ್ತೀರಿ ಮತ್ತು ಅದಕ್ಕೆ ಈ ನಿಮ್ಮ ಬೆಳಗಿನ ಶುಭಪತ್ರ ನಿಮಗೆ ಸಹಾಯ ಮಾಡುತ್ತದೆ ..

ಮುಂದಿನ  ಜನುಮದಿನದ ಹೊತ್ತಿಗೆ ನೀವು ನಿಮ್ಮ ಆರೋಗ್ಯ, ಉದ್ಯೋಗ, ನಿಮ್ಮ ಬರಹಗಳ ಅಂಕಣ, ಶ್ರೀ ರಂಗಪಟ್ಟಣದ ಬಗ್ಗೆ ಹೊತ್ತಿಗೆ.. ಎಲ್ಲವೂ ಸಮಾಗಮಿಸುತ್ತದೆ..


ಮತ್ತೊಮ್ಮೆ ಜನುಮದಿನಕ್ಕೆ ಶುಭಾಶಯಗಳು.. !!!

Sunday, May 15, 2016

ಸಂತ್ಯಾಗ ನಿಂತಾರಾ - ಗೋಪಾಲ್ ವಾಜಪೇಯಿ ಸರ್

ಬೆಳಿಗ್ಗೆ ಎದ್ದೆ..

ರೇಡಿಯೋ ಎಫ್ ಎಂ ೯೨.೭ ನಲ್ಲಿ "ಕಾಲವನ್ನು ತಡೆಯೋರು ಯಾರೂ .. ಗಾಳಿಯನ್ನು ಹಿಡಿಯೋರು ಯಾರೂ ಇಲ್ಲ".. ಮನಸ್ಸು ಎಲ್ಲೋ ಹಿಂದಕ್ಕೆ ಹೋಯಿತು..

ಸ್ವಲ್ಪ ಹೊತ್ತು ಕಾಣದ ಕಡಲಿನಲ್ಲಿ ಸುತ್ತಾಡಿದ ಮನಸ್ಸು ಮತ್ತೆ ಭುವಿಗೆ ಬಂದದ್ದು.. ಅಣ್ಣಾವ್ರ ಪ್ರೇಮದ ಕಾಣಿಕೆ ಚಿತ್ರದ ಗೀತೆಯಲ್ಲಿ "ಹುಟ್ಟು ಸಾವು ಬಾಳಿನಲ್ಲಿ ಎರಡು ಕೊನೆಗಳು.. ಬಯಸಿದಾಗ ಕಾಣದಿರುವ ಎರಡು ಮುಖಗಳು".. ಅರೆ ಅಣ್ಣಾವ್ರು ಒಂದೆರಡು ಸಾಲುಗಳಲ್ಲಿ ಎಷ್ಟೊಂದು ಬ್ರಹ್ಮಾಂಡ ತುಂಬುವ ಸಂದೇಶ ಹೇಳಿದ್ದಾರೆ ಅನ್ನಿಸಿತು!

ಮನಸ್ಸು ತಹಬದಿಗೆ ಬಂತು "ನಗುತಾ ನಲಿ ನಲಿ ಏನೇ ಆಗಲಿ.. " ಹಾಡು ಮತ್ತೆ ನನ್ನನ್ನು ಮಾಮೂಲಿ ಸ್ಥಿತಿಗೆ ತಂದಿತು.

ಕಣ್ಣು ಮುಚ್ಚಿ ಕೂತೆ ಸ್ವಲ್ಪ ಹೊತ್ತು..

"ಶ್ರೀಕಾಂತ್.. ಪೀಠಿಕೆ ಹಾಕದೆ ನೀವು ಏನು ಹೇಳೋಕೂ ಆಗೋಲ್ಲ ಆಲ್ವಾ.. ಒಂದು ಪೀಠಿಕೆ ಹಾಕೇ ಬಿಟ್ಟಿದ್ದೀರ.. ಹಾಗೆ ಒಂದು ಕಾರ್ಯಕ್ರಮದ ಜಲಕ್ ಕೊಟ್ಟು ಬಿಡಿ"

ಕಣ್ಣು ತೆಗೆದ.. ಕಾಣಲಿಲ್ಲ ಏನೂ... ಮತ್ತೆ ಕಣ್ಣು ಮುಚ್ಚಿದೆ..

ಕಳೆದ ಬಾರಿ ಗೋಪಾಲ ವಾಜಪೇಯಿ ಗುರುಗಳ ಪುಸ್ತಕ ಬಿಡುಗಡೆಗೊಂಡಾಗ ಹರಿಣಿ ಮೇಡಂ ಜೊತೆ ನಾನು ಬಂದಿದ್ದೆ.. ಅವರು ಬಹಳ ಕುಶಿ ಪಟ್ಟಿದ್ದರು... ಇಂದು ಬೆಳಿಗ್ಗೆ ಯಾಕೋ ಗೊತ್ತಿಲ್ಲ ಅವರ ನೆನಪು ಕಾಡುತ್ತಿತ್ತು.. ಪ್ರಾಯಶಃ ಅದೇ ಕಾರಣ ಮೇಲಿನ ಗೀತೆಗಳು ಮೂಡಿ ಬಂದು ನನ್ನ ಮನಸ್ಸೊಳಗೆ ಹರಿಣಿ ಮೇಡಂ ಕೂತು ಈ ಕಾರ್ಯಕ್ರಮದ ಬಗ್ಗೆ ವಿವರ ಕೇಳುತ್ತಿದ್ದಾರೆ ಅನ್ನಿಸಿತು.

ಹರಿಣಿ ಮೇಡಂ... ಖಂಡಿತ ಹೇಳುತ್ತೇನೆ..

*****

ಭಾನುವಾರ ಬೆಳಿಗ್ಗೆ ಸುಮಾರು ಹನ್ನೊಂದಕ್ಕೆ ಕಾರ್ಯಕ್ರಮಕ್ಕೆ ಒಬ್ಬೊಬ್ಬರೇ ಬರಲು ಶುರುಮಾಡಿದರು. ಕಣ್ಣಿನ ಶಸ್ತ್ರ ಚಿಕಿತ್ಸೆಗೆ ಒಳಗಾಗಿ ಡಿಎಂಕೆ ಪಕ್ಷದ ಅಭ್ಯರ್ಥಿಯಂತಿದ್ದ ನಮ್ಮ ಗುರುಗಳು ವಾಜಪೇಯಿ ಸರ್ ನಿಧಾನವಾಗಿ ಕಾರಿಂದ ಇಳಿದು ಬಂದು ನೆರೆದಿದ್ದ ಮಿತ್ರರನ್ನು ಮಾತಾಡಿಸಿದರು. 

ಅವರ ಜೀವದ ಗೆಳೆಯರು, ಅವರ ಜೊತೆಗೆ ಹೆಗಲು ಕೊಟ್ಟು ದುಡಿದಿದ್ದ ಸಹೋದ್ಯೋಗಿಗಳು, ಅವರು ಹಿರಿಯರಾಗಿದ್ದರೂ, ತಮಗಿಂತ ಅರ್ಧಷ್ಟು ವಯೋಮಾನದವರನ್ನು ತಮ್ಮ ಗೆಳೆಯರು ಎಂದು ಪರಿಚಯಿಸುತ್ತಾ, ಕಿರಿಯರ ಹೆಗಲ ಮೇಲೆ ಕೈ ಇಟ್ಟುಕೊಂಡು ಮಾತಾಡಿಸುತ್ತಿದ್ದ ಪರಿ ಸೊಗಸಾಗಿತ್ತು. 

ಅತಿಥಿಗಳು ಈ ಕೆಳಗಿನವರು 
  •  ಮಲೆಗಳಲ್ಲಿ ಮದುಮಗಳು ನಾಟಕವನ್ನು ಪುಸ್ತಕದಿಂದ ರಂಗಕ್ಕೆ ಕರೆತಂದವರು, ಜೊತೆಯಲ್ಲಿಯೇ ರಂಗಶಾಲೆಗೇ ಹೊಸ ಆಯಾಮ ನೀಡುತ್ತಿರುವ, ಮತ್ತು ಸಾಧನೆ ಮಾಡಿರುವ, ಮಾಡುತ್ತಿರುವ ಶ್ರೀ ಬಸವಲಿಂಗಯ್ಯ, 
  • ಶ್ರೀ ಸೇತುರಾಂ ಅವರ ಮಂಥನ ಎಂಬ ಮಂಥನ ಧಾರಾವಾಹಿಯಲ್ಲಿ ಮಠದ ಗುರುಗಳಾಗಿ ಅದ್ಭುತ ಅಭಿನಯ ನೀಡಿದ್ದ ಶ್ರೀ ಸಿ ಗುಂಡಣ್ಣ 
  • ನನ್ನ ಇಷ್ಟ ದೈವ ನಿರ್ದೇಶಕರಾದ ಶ್ರೀ ಪುಟ್ಟಣ್ಣ ಕಣಗಾಲ್ ಅವರು ಶುಭಮಂಗಳ ಚಿತ್ರದಲ್ಲಿ ಮಗ್ಗಿ, ಲೆಕ್ಕದ ಹಾಡನ್ನು ಒಬ್ಬ ಬ್ಯಾಂಕ್ ನಲ್ಲಿ ಕೆಲಸ ಮಾಡುವವರಿಂದಲೇ ಹಾಡು ಬೇಕು ಎಂದು  "ನಾಲ್ಕೊಂದ್ಲ ನಾಲ್ಕು ನಾಲ್ಕೆರಡ್ಲ ಎಂಟು"ಹಾಡಿನ ಕತೃ ಶ್ರೀ ಎಂ ಏನ್ ವ್ಯಾಸರಾವ್ ಅವರು.. 
ಇವರ ಜೊತೆಯಲ್ಲಿ ನಮ್ಮ ಗುರುಗಳು ಶ್ರೀ ಗೋಪಾಲ ವಾಜಪೇಯಿ ಅವರ ಬಗ್ಗೆ... ಮಹಾನ್ ತಾರೆಗಳೊಂದಿಗೆ, ಪ್ರತಿಭೆಗಳೊಂದಿಗೆ ಹೆಗಲು ತಾಕಿಸಿ ಓಡಾಡಿ, ಆ ದಿಗ್ಗಜರ ಜಲಕ್ ಅನುಭವವನ್ನು ತಮ್ಮ ಎಲ್ಲಾ ಬರವಣಿಗೆಗಳಲ್ಲಿ, ಕೆಲವು ಚಿತ್ರಗಳಲ್ಲಿ ತೋರಿಸಿರುವ ಇವರು, ಅವರ ಮುಂದೇ ಏನೂ ಅಲ್ಲದ ನನ್ನನ್ನು ಆತ್ಮೀಯವಾಗಿ ಮಾತಾಡಿಸಿ, ಎಲ್ಲರೆದುರು ಪರಿಚಯ ಮಾಡಿಸಿ, ನನ್ನೊಳಗೆ ನಾನು ಬೀಗುವಂತೆ ಮಾಡುವ ಇವರು ನಿಜವಾಗಿಯೂ ನಮ್ಮ ನಡುವೆ ಇರುವ ಚೈತನ್ಯದ ಚಿಲುಮೆ. 

ಕಾರ್ಯಕ್ರಮಕ್ಕೆ ಅತಿಥಿಗಳನ್ನು ಅಂಗಣಕ್ಕೆ ಆಹ್ವಾನ ಮಾಡಿದ ಮೇಲೆ, ಗೋಪಾಲ್ ಸರ್ ಅವರ ಜೀವದ ಗೆಳೆಯರಲ್ಲಿ ಒಬ್ಬರಾದ ಶ್ರೀಪತಿ ಅವರಿಂದ ಪ್ರಾರ್ಥನಾ ಗೀತ ಅನ್ನುವುದಕ್ಕಿಂತ ಒಂದು ಅದ್ಭುತ ರಂಗ ಗೀತೆಯಿಂದ ಕಾರ್ಯಕ್ರಮಕ್ಕೆ ಚಾಲ್ತಿ ನೀಡಿದರು.

ಕಾರ್ಯಕ್ರಮದಲ್ಲಿ ಗಡಿಬಿಡಿ ಕಂಡು ಕಾಣದಂತೆ ಇದ್ದಾಗ ಅದನ್ನು ತಿಳಿಯಾಗಿಸಿದವರು ಶ್ರೀ ಬಸವಲಿಂಗಯ್ಯ ಅವರು.. "ಸಂತೆಯಲ್ಲಿ ನಿಂತ ಮೇಲೆ ಗಡಿಬಿಡಿ ಆಗಬೇಕಾದ್ದೇ, ಅದಕ್ಕೆ ಮುಜುಗರ ಬೇಡ" ಎನ್ನುತ್ತಾ ಕಬೀರನ ಒಂದು ಪುಟವನ್ನೇ ಹಾಗೆ ಬಿಚ್ಚಿಟ್ಟರು. ದೇಹವನ್ನು ಒಂದು ಚಾದರ್ ಗೆ ಹೋಲಿಸಿದ್ದಾನೆ ಆ ಕಬೀರ ಎಂದರು.. 

(ತಕ್ಷಣ ಹರಿಣಿ ಮೇಡಂ ಮದ್ಯೆ ನನ್ನ ಜೊತೆ ಮಾತಾಡಿ.. ಶ್ರೀಕಾಂತ್ ಇವಾಗ ಅರಿವಾಯಿತು ನೀವು ಆರಂಭದಲ್ಲಿ ಹಾಕಿದ ಕೆಲವು ಗೀತೆಗಳ ಸಂದೇಶ.. ಸೂಪರ್ ಸೂಪರ್ ಮುಂದುವರೆಸಿ)

 ನಿರರ್ಗಳವಾಗಿ ಕಬೀರನ ಜೊತೆಯಲ್ಲಿ ನಮ್ಮನ್ನು ಐದಾರು ಶತಮಾನಗಳ ಹಿಂದಕ್ಕೆ ಕರೆದೊಯ್ದು ದರುಶನ ಮಾಡಿಸಿದ ಶ್ರೀ ಬಸವಲಿಂಗಯ್ಯ ಅವರ ಮಾತಿನ ಸರಮಾಲೆಗೆ ಅರ್ಥವಿತ್ತು. ಸುಂದರವಾಗಿತ್ತು. ಮುತ್ತಿನಹಾರವನ್ನು ಪೋಣಿಸಿದಂತೆ ಮಾತಿನ ಭಂಡಾರ ಸೊಗಸಾಗಿ ಹೊಳೆಯುತ್ತಿತ್ತು. ಈ ಕೃತಿ ಸಂತ್ಯಾಗೆ ನಿಂತಾನ ಕಬೀರ ನಾಟಕ ಅನುವಾದಗೊಂಡು ರಂಗಕ್ಕೆ ಏರಲು ಕಾರಣ ಕರ್ತರು ಅವರೇ ಎಂದು ಗೊತ್ತಾದಾಗ ಸಂತೋಷವಾಯಿತು. ತಮ್ಮ ಮತ್ತು ಗೋಪಾಲ್ ಸರ್ ಅವರ ಗೆಳೆತನ, ಪರಿಚಯದ ಒಂದು ಚಿಕ್ಕ ಪುಟವನ್ನು ನಮ್ಮಲ್ಲಿ ಹಂಚಿಕೊಂಡರು. 


ನಂತರ ಮಾತಾಡಿದ ಶ್ರೀ ಸಿ ಗುಂಡಣ್ಣ ಅವರು, ಕಬೀರನ ದೋಹಾಗಳ ಬಗ್ಗೆ, ಗೋಪಾಲ್ ಸರ್ ಮತ್ತು ತಮ್ಮ ಗೆಳೆತನ, ಜೊತೆಯಲ್ಲಿ ಬಸವಲಿಂಗಯ್ಯ ಅವರ ಜೊತೆಗಿನ ನಂಟು, ಎಂ ಏನ್ ವ್ಯಾಸರಾವ್ ಅವರ ಜೊತೆಗಿನ ಒಡನಾಟ, ಇವುಗಳ ಬಗ್ಗೆ ಚುಟುಕಾಗಿ ವಿವರಿಸಿ ತಮ್ಮ ಮಾತನ್ನು ಸುಂದರವಾದ ಚೌಕಟ್ಟಿನೊಳಗೆ ನಿಲ್ಲಿಸಿದರು. 

ಅಧ್ಯಕ್ಷ ಸ್ಥಾನದಲ್ಲಿ ಕೂತಿದ್ದ ಶ್ರೀ ಎಂ ಏನ್ ವ್ಯಾಸರಾವ್ ಅವರು ಕಬೀರನ ಬಗ್ಗೆ, ಈ ನಾಟಕದ ಬಗ್ಗೆ, ಅನುವಾದದ ಬಗ್ಗೆ ಎಲ್ಲವನ್ನು ತಿಳಿ ತಿಳಿಯಾಗಿ ಹೇಳುತ್ತಾ, ಒಂದು ಒಳ್ಳೆಯ ಒಡನಾಟ ಎಂಥಹ ಅದ್ಭುತ ಕಾರ್ಯವನ್ನು ಮಾಡಿಸುತ್ತದೆ ಎಂದು ಹೇಳುತ್ತಾ, ತಮಗೆ ಅರಿವಿಗೆ ಬಂದ ವಿಚಾರಗಳನ್ನು ಸಂಕ್ಷಿಪ್ತವಾಗಿ ಹೇಳಿದರು. 

ಇವರಿಗಿಂತ ಕೊಂಚ ಹೊತ್ತು ಮುಂಚೆ ಮಾತಾಡಿದ ಗೋಪಾಲ್ ಸರ್ ಅವರು, ತಮ್ಮ ಕೆಲಸದ ಆರಂಭದ ದಿನಗಳ ಬಗ್ಗೆ ಹೇಳುತ್ತಾ, ಈ ನಾಟಕ ಅನುವಾದ ಮಾಡುವ ಸುವರ್ಣ ಘಳಿಗೆಯನ್ನು ನೆನೆಸಿಕೊಳ್ಳುತ್ತಾ, ಒತ್ತಡದಲ್ಲಿ ಎಷ್ಟೊಂದು ಸುಂದರ ಕೆಲಸಗಳು, ಸಾಧನೆಗಳು ಆಗುತ್ತದೆ ಎನ್ನುವುದನ್ನು ತಮ್ಮ ಶೈಲಿಯಲ್ಲಿ ತಿಳಿಸಿದರು.  ತಮ್ಮ ಗೆಳೆಯರ ಸಹಕಾರವನ್ನು ಪರಿಚಯಿಸುತ್ತಾ, ಅವರೆನ್ನಲ್ಲಾ ವೇದಿಕೆಗೆ ಕರೆದು ಈ ದಿನ ಬಿಡುಗಡೆಗೊಂಡ ಕೃತಿಯನ್ನು ಗೌರವ ಪೂರ್ವಕವಾಗಿ ಕೊಟ್ಟು ತಮ್ಮ ಗೆಳೆತನಕ್ಕೆ ಸುವರ್ಣ ಚೌಕಟ್ಟನ್ನು ಹಾಕಿದರು. 

ಪ್ರತಿಭಾ ಖನಿಗಳ ಹಸ್ತದಿಂದ ನನಗೂ ಒಂದು ಕೃತಿಯನ್ನು ಕೊಡಿಸಿದ್ದು ಮನದೊಳಗೆ ನಾನು ಕುಣಿದಾಡುವಂತೆ ಮಾಡಿತು ಎಂದರೆ ನನ್ನ ಮಾತು ಸುಳ್ಳಲ್ಲ. 

ಯಾಜಿ ಪ್ರಕಾಶನದ ಶ್ರೀ ಗಣೇಶ್ ಯಾಜಿ ಅವರು ತಮ್ಮ ಈ ಸಾಹಸಕ್ಕೆ ಜೊತೆಯಾದವರೆನ್ನಲ್ಲ ನೆನೆಸಿಕೊಂಡು ಅವರ ಶುಭ ಆಶೀರ್ವಾದಗಳು ಹೀಗೆ ಸದಾ ಇರಲಿ ಎಂದು ಹೇಳುತ್ತಾ ಈ ಚಿಕ್ಕ ಚೊಕ್ಕ ಕಾರ್ಯಕ್ರಮಕ್ಕೆ ತೆರೆ ಎಳೆದರು. 

ಹಮ್ಮು ಬಿಮ್ಮು ಇಲ್ಲದ ಸರಳ ವಿರಳ ಎನ್ನುವಂಥ ಈ ಕಾರ್ಯಕ್ರಮ ಶುರುವಾಗಿದ್ದು ಮಾತು ಮುಕ್ತಾಯಗೊಂಡಿದ್ದರ ನಡುವೆ ಕಂಡದ್ದು ಸರಳ ಗೆಳೆತನ, ವಿಶ್ವಾಸ, ಮತ್ತು ಪ್ರತಿಭೆಯ ಮೇಲೆ ಅಚಲ ನಂಬಿಕೆ ಜೊತೆಯಲ್ಲಿ ಸಾಧನೆ ಶಿಖರ ಏರಿದರು ಜೊತೆಯಲ್ಲಿ ಹೆಜ್ಜೆ ಹಾಕುತ್ತಾ ಸಾಗುತ್ತಿದ್ದ ವಿನಯವಂತಿಕೆ. 

ಸಂತೆಯಲ್ಲಿ ನಿಂತ ಕಬೀರ ಹೇಳಿರುವ ಸರಳ ಮಾತುಗಳಲ್ಲಿನ ಸಂದೇಶಗಳನ್ನು ಈ ಭುವಿಯಲ್ಲಿರುವ ಎಲ್ಲರರೂ ಅಳವಡಿಸಿಕೊಂಡರೆ ಜೀವನ ಚಿತ್ರದಲ್ಲಿ ಅಣ್ಣಾವ್ರು  ಹಾಡಿದಂತೆ "ಭುವಿಯೆ ಸರ್ಗ ಭುವಿಯೆ ಸ್ವರ್ಗ ಎನುತಿಹರು.. ನಾದಮಯ ಈ ಲೋಕವೆಲ್ಲಾ ನಾದಮಯ"

ಸುಂದರ ಚಿಕ್ಕ ಚೊಕ್ಕ ಕಾರ್ಯಕಮದಲ್ಲಿ ಭಾಗವಹಿಸಲಿಕ್ಕೆ ಅವಕಾಶವಿತ್ತ ಶ್ರೀ ಗೋಪಾಲ್ ವಾಜಪೇಯಿ ಅವರಿಗೆ ಧನ್ಯವಾದಗಳು ಅರ್ಪಿಸಿ ನಾ ಅಲ್ಲಿಂದ ಹೊರಟೆ.... :-)

*****

ಶ್ರೀಕಾಂತ್ ನಿಮಗೆ ಧನ್ಯವಾದಗಳು.. ಕಳೆದ ಸಾರಿಯ ಗೋಪಾಲ್ ಸರ್ ಅವರ ಪುಸ್ತಕ ಬಿಡುಗಡೆ ನಾ ನಿಮ್ಮ ಜೊತೆ ಬಂದಿದ್ದೆ.. ಆದರೆ ಈ ಕಾರ್ಯಕ್ರಮಕ್ಕೆ ಕಬೀರ ಹೇಳಿದ ಚಾದರ್ ನನ್ನ ಬಳಿಯಲ್ಲಿ ಇರದೇ ಹೋಯಿತು.. ಅದನ್ನು ಆ ದೇವ ತನ್ನ ಬಳಿಗೆ ಒಯ್ದು ಬಿಟ್ಟಾ.. ಹಾಗಾಗಿ ನಿಮ್ಮ ಮನದೊಳಗೆ ಕೂತು ಈ ಕಾರ್ಯಕ್ರಮವನ್ನು ಅನುಭವಿಸಬೇಕು ಎಂಬಾ ಆಸೆಯಾಯಿತು. ಹಾಗಾಗಿ ನನಗೆ ಈ ಕಾರ್ಯಕ್ರಮವನ್ನು ನೋಡಲಿಕ್ಕೆ, ಅನುಭವಿಸಲಿಕ್ಕೆ ಅವಕಾಶ ಮಾಡಿಕೊಟ್ಟ ಆ ದೇವನಿಗೆ ನಮಸ್ಕರಿಸುತ್ತೇನೆ. ಮತ್ತೆ... 

ಮೇಡಂ ನನಗೆ ಧನ್ಯವಾದಗಳನ್ನು ಹೇಳಬೇಡಿ.. ಗುರುಗಳ ಮೇಲಿನ ಗೌರವ ಭಕ್ತಿ ನನಗೆ ಈ ಕೆಲಸ ಮಾಡಲು ಅನುಕೂಲ ಮಾಡಿಕೊಟ್ಟಿತು. ಅವರಿಗಾಗಿ ಬಂದೆ, ಅವರಿಗಾಗಿ ನಿಂದೆ.. ಗುರುಗಳು ಹೇಳಿದರೆ ಶ್ರೀಕಾಂತ ಕೂಡ ಸಂತ್ಯಾಗ ಏನೂ ಎಲ್ಲಿ ಬೇಕಾದರೂ ನಿಂತಾನಾ...ಬರ್ತಾನಾ.. :-)

ಹರಿಣಿ ಮೇಡಂ ಅಲ್ಲಿಯೇ ಬೆಳಗುತ್ತಿದ್ದ ದೀಪದೊಳಗೆ ಸಾಗುತ್ತಾ ಹೋದಂತೆ.. ಒಂದು ಚಿಕ್ಕ ಬಿಂಧುವಾಗಿ ಹೊಳೆಯುವ ತಾರೆಯಾಗಿ ನಿಂತು ಬಿಟ್ಟರು.. 

ಒಂದು ಸುಮಧುರ ಕಾರ್ಯಕ್ರಮಕ್ಕೆ ಭೇಟಿ ಕೊಟ್ಟ ಕುಶಿ ಕೊಟ್ಟ ಪರಿ ಒಂದು ಕಡೆಯಾದರೆ.. ನನ್ನ ನೆಚ್ಚಿನ ಹರಿಣಿ ಮೇಡಂ ನನ್ನೊಳಗೆ ನುಗ್ಗಿ ಬಂದು ಬರೆಸಿದರು ಎನ್ನುವ ಸಂತಸ ಇನ್ನೊಂದು ಕಡೆ.. ಡಬಲ್ ಧಮಾಕ.. 

ಗುರುಗಳೇ ಗೋಪಾಲ್ ವಾಜಪೇಯಿ  ಸರ್ ನಿಮಗೆ ಮತ್ತು ನಿಮ್ಮ ಸ್ನೇಹ ಭಂಡಾರಕ್ಕೆ ನನ್ನ ಧನ್ಯವಾದಗಳು...!!!

Saturday, May 7, 2016

DFR ಹಾಯ್ ಬೆಳಗು - ಶ್ರೀ

ಅಣ್ಣಾವ್ರ "ಹೇ ದಿನಕರ ಶುಭಕರ ಧರೆಗೆ ಬಾ" ಹಾಡು ಬರುತ್ತಿತ್ತು..

ಅರೆ ಅರೆ.. ಯಾರೂ ಕೂಗುತ್ತಿದ್ದಾರೆ, ಇರಪ್ಪ ಇರಪ್ಪ, ನೋಡೋಣ ಎಂದು, ಭಾಸ್ಕರ ತನ್ನ ಕೊನೆಯ ಬಾಗಿಲನ್ನು ತೆಗೆದ.. ಅದು ಕಿರ್ ಎಂದು ಸದ್ದು ಮಾಡಿತು..

"ಹಾಯ್ ಬೆಳಗು" ಎನ್ನುತ್ತಾ ಒಂದು ಕೋಗಿಲೆ ಕಂಠ ಉಳಿಯಿತು..

ಅರೆ ಇದೇನಿದು DFR ನೀವು ಇಲ್ಲಿಗೆ ಬಂದಿದ್ದೀರಿ.. ಏನ್ ಸಮಾಚಾರ..

"ನೋಡಿ Rav's  (DFR ರವಿಯನ್ನು ಕರೆಯುವ ರೀತಿ).. ಇವತ್ತು ಹಿಮಾಲಯದಲ್ಲಿ ಹೆಜ್ಜೆ ಇಟ್ಟೇ.. ಯಾಕೋ ನೀ ಇನ್ನು ಬಂದಿರಲ್ಲಿಲ್ಲ.. ಅದಕ್ಕೆ ನಿನ್ನ ಮೀಟ್ ಮಾಡಿ, ನಿನಗೆ ಶುಭಕೋರಿ.. ಒಂದು ಸಂದೇಶ ಹೇಳೋಣ ಅಂತ ಬಂದೆ.. "

"ಹೇಳಿ DFR"

"ಹಿಮಾಲಯದಲ್ಲಿ ನೀವು ನಿಮ್ಮ ಮನೆಯಿಂದ ಹೆಚ್ಚು ಬೇಡ ಕಡಿಮೆಯೂ ಬೇಡ ಆ ರೀತಿಯ ಶಾಖ ಮತ್ತು ಬೆಳಕನ್ನು ನೀಡಿ.. ನನಗೆ ನನ್ನ ಮತ್ತು ಸಹ ಚಾರಣಿಗರಿಗೆ ಈ ಚಾರಣ ಸುಸ್ತಾಗದಂತೆ, ಮತ್ತು ನಿನ್ನ ಕಣ್ಬೇಳಕಲ್ಲಿ ಭೂರಮೆ ಸುಂದರವಾಗಿ ಕಾಣುವಂತೆ ಮಾತು.. ಸುಮಾರು ಸೆಲ್ಫಿ ತಗೊಳಿದಿದೆ.. "

"ಇದನ್ನ ನೀವು ಹೇಳಬೇಕೇ DFR ಖಂಡಿತ ಹಾಗೆ ಮಾಡುತ್ತೇನೆ.. ನಿಮ್ಮ ಚಾರಣ ಸುಂದರವಾಗಿರಲಿ.. ಶುಭವಾಗಲಿ.. "

ಅರುಣ ಸೂರ್ಯದೇವನಿಗೆ ಕಾಯುತ್ತಿದ್ದ.. ರಥದತ್ತ ಸೂರ್ಯ ದೇವ ಬರುತ್ತಿದ್ದಂತೆ, ರಥವೂ ನಿಧಾನವಾಗಿ ಸಾಗತೊಡಗಿತು..

ಇತ್ತ DFR ತನ್ನ ಸಹ ಚಾರಣಿಗರ ಜೊತೆಯಲ್ಲಿ ಚಾರಣದ ವೇಳಾ ಪಟ್ಟಿಯ ಪ್ರಕಾರ ಬೇಸ್ ಕ್ಯಾಂಪ್ ಕಡೆಗೆ ಹೊರಟರು.

ಅಲ್ಲಿ ಸುರಕ್ಷತಾ ಸಿಬ್ಬಂಧಿ, ತಪಾಸಣೆ ಮಾಡುತ್ತಾ ಸುಮಾರು ನೂರಾರು ಯಾತ್ರಿಕರನ್ನು, ಚಾರಣಿಗರನ್ನು ತಪಸಾನೆ ಮಾಡುತ್ತಲೇ, ನಗುಮೊಗದಿಂದಲೇ ಎಲ್ಲರಿಗೂ ಶುಭ ಹಾರೈಸುತ್ತಾ ಕಳಿಸುತ್ತಿದ್ದರು.

"ನಾರಾಯಣ ನಾರಾಯಣ" ಧ್ವನಿ ಕೇಳಿ ಎಲ್ಲರೂ ಚಕಿತಗೊಂಡರು.

ನಾರದ ಮಹಾಮುನಿ ಅಲ್ಲಿ ನಗುಮೊಗದಿಂದ ಒಂದು ಫಲಕವನ್ನು ಹಿಡಿದು ನಿಂತಿದ್ದರು.

DFR ನಾರದ ಮುನಿಗೆ ನಮಸ್ಕರಿಸಿ, ನಾರದ ಮುನಿಗಳೇ.. "ಏನು ಸಮಾಚಾರ, ಫಲಕದಲ್ಲಿ ನನ್ನ ಹೆಸರು ಏಕಿದೆ, ಹೇಳಿ ಏನು ಸಮಾಚಾರ"

"DFR ನಿಮಗೆ HMT ಕಾರ್ಖಾನೆ ಮುಚ್ಚುತ್ತಲಿರುವುದು, ಮತ್ತು ಕೆಲವು ಘಟಕಗಳು ಮುಚ್ಚಿರುವುದು ನಿಮಗೆ ಗೊತ್ತೇ ಇದೆ. ಧರಣಿಮಂಡಲ ಮಧ್ಯದೊಳಗೆ  ಮೆರೆಯುತಿರುವ ಕರ್ನಾಟಕದ ರಾಜಧಾನಿ ಬೆಂಗಳೂರಿನ ಜಾಲಹಳ್ಳಿ ಬಳಿಯ HMT ಕಾರ್ಖಾನೆಯ ಮುಂದೆ ಲಕ್ಷಾಂತರ ಮಂದಿ ಧರಣಿ ಹೂಡಿದ್ದಾರೆ, ಅದಕ್ಕೆ ನೀವು ಬರಬೇಕಂತೆ"

"ಅರೆ... ಮುನಿಗಳೇ.. ಅದು ಹೇಗೆ ಸಾಧ್ಯ, ನಾನು ಚಾರಣಕ್ಕೆ ಬಂದಿದ್ದೇನೆ, ಜೊತೆಯಲ್ಲಿಯೇ, ಆ ಕಾರ್ಖಾನೆ ಮುಚ್ಚಿರುವುದು ಆಡಳಿತ ಮಂಡಳಿಯ ಸಮಸ್ಯೆ, ನಾನು ಏನು ಮಾಡಲಿ, ನನ್ನನ್ನು ಏಕೆ ಬರಲು ಹೇಳುತ್ತಿದ್ದಾರೆ. ಕಾರಣ ಗೊತ್ತಾಗುತ್ತಿಲ್ಲ"

"DFR,, ಚಾರಣದ ಬಗ್ಗೆ ನೀವೇನು ಯೋಚನೆ ಮಾಡಬೇಡಿ.. ಬನ್ನೇರುಘಟ್ಟದ ಬಳಿಯಲ್ಲಿರುವ ಚಂಪಕಧಾಮ ದೇವಸ್ಥಾನದ ಅಂಜನೇಯ ನಮಗಾಗಿ ಪುಷ್ಪಕ ವಿಮಾನ ತಂದಿದ್ದಾರೆ, ಅದರಲ್ಲಿ ಯೋಜನಾಗಟ್ಟಲೆ ದೂರವನ್ನು ಕ್ಷಣಮಾತ್ರದಲ್ಲಿ ತಲುಪಬಹುದು.. ಕೇವಲ ಮೂವತ್ತು ನಿಮಿಷ ಅಷ್ಟೇ.. ನಾನು ನಿಮ್ಮ ಸಹಚಾರಣಿಗರಿಗೆ ಹೇಳುತ್ತೇನೆ.. ಮತ್ತು ೧೮೦೦ ಕ್ಷಣಗಳಲ್ಲಿ ನಿಮ್ಮನ್ನು ವಾಪಾಸ್ ಇಲ್ಲಿಗೆ ಕರೆದುಕೊಂಡು ಬರುವ ಜವಾಬ್ಧಾರಿ ನನ್ನದು.. ಮತ್ತು ಹನುಮನದು. ಯೋಚಿಸಬೇಡಿ"

"ರೈಟ್.. ಓಕೆ ನಾರದ ಮುನಿಗಳೇ.. "

"ಡಿಯರ್ ಫ್ರೆಂಡ್ಸ್.. ನಾನು ನಿಮ್ಮೆಲ್ಲರ ನಾಯಕಿ 3ಕ ತಂಡದ ಒಡತಿ, ಅನೇಕ ಸಾಮಾಜಿಕ ಕಾರ್ಯಕ್ರಮಗಳಲ್ಲಿ ತನ್ನನ್ನೇ ತೊಡಗಿಸಿಕೊಂಡು ಸಮಾಜಮುಖಿಯಾಗಿರುವ, ಮತ್ತು ತಾನು ಸ್ಪೂರ್ತಿಗೊಂಡು, ಇತರರಿಗೂ ಆ ಸ್ಫೂರ್ತಿ ಸಾಂಕ್ರಾಮಿಕವಾಗಿ ಹಬ್ಬುವಂತೆಮಾಡಿ  ಮೇಕ್ A ಡಿಫರೆನ್ಸ್ ಅನ್ನುತ್ತಾ ಹತ್ತು ಹಲವು ಕಾರ್ಯಕ್ರಮಗಳನ್ನು ಮಾಡುತ್ತಿರುವ ನಿಮ್ಮೆಲ್ಲರ ಅಧಿನಾಯಕಿ DFR ಅವರನ್ನು ಕೇವಲ ೧೮೦೦ ಸೆಕೆಂಡ್ಸ್ ಅಂದರೆ ೩೦ ನಿಮಿಷ ಬೆಂಗಳೂರಿನ ಜಾಲಹಳ್ಳಿ ಬಳಿಯ HMT ಕೈ ಗಡಿಯಾರ ಕಾರ್ಖಾನೆಗೆ ಕರೆದೊಯುತ್ತೇನೆ. ೩೧ ನಿಮಿಷಕ್ಕೆ ಅಂದರೆ ೧೮೦೧ ಕ್ಷಣಕ್ಕೆ ನಾವು ಇಲ್ಲಿಯೇ ಇರುತ್ತೇವೆ, ಓಕೆ ನಾ"

"ಓಕೆ ಓಕೆ.. ರೂಪಕ್ಕ, ರೂಪ ಮೇಡಂ, ರೂಪ ಹೋಗಿ ಬನ್ನಿ.. ನೀವು ಬರುವ ತನಕ ನಾವಿಲ್ಲೇ ಕೂತಿರುತ್ತೇವೆ" ಎಂದರು ಸಹಚಾರಣಿಗರು.

ಹನುಮ ದೇವರು ತಂದ ಪುಷ್ಪಕ ವಿಮಾನದಲ್ಲಿ, ನಾರದ ಮುನಿಗಳು, ಹನುಮ ದೇವರು, ಮತ್ತು DFR ಕುಳಿತು ಹಿಮಾಲಯದಿಂದ ಬೆಂಗಳೂರಿನ ಕಡೆಗೆ ಹಾರಿದರು.. DFR ಕೈಯಲ್ಲಿ HMT ಕೈಗಡಿಯಾರ ಒಂದು ಮುಗುಳುನಗೆ ನಕ್ಕು, ಅಬ್ಬಾ, ಅಂತೂ ನನ್ನ ಸಮಸ್ಯೆ ಬಗೆ ಹರಿಯಿತು ಎಂದು ಸಂತಸದಿಂದ ಕುಣಿಯುತ್ತಿತ್ತು.


ಮುಂದೆ ಏನಾಗುತ್ತೆ.. ಎರಡನೇ ಭಾಗದಲಿ ನೋಡಿ.. ಹಾಯ್ ಬೆಳಗು - ನಿವ್ಸ್   ಹುರ್ರಾ....

(ಅದ್ಭುತ ಬರಹಗಾರ್ತಿ ಮತ್ತು ಸ್ನೇಹಿತೆ ನಿವೇದಿತ ಚಿರಂತನ್ ಅವರು ಕೊಟ್ಟ ಒಂದು ಸಲಹೆ.. ಶ್ರೀ ಇಂದು ನಮ್ಮಿಬ್ಬರ ಮತ್ತು ನೂರಾರು ಸ್ನೇಹಿತರ ಸ್ಪೂರ್ತಿಯ ಚಿಲುಮೆ ರೂಪ ಸತೀಶ್ ಅಲಿಯಾಸ್ ನಿಮ್ಮ DFR ಮತ್ತು ನನ್ನ ರೂಪಕ್ಕ ಅವರ ಹುಟ್ಟು ಹಬ್ಬಕ್ಕೆ ಒಂದು ಉಡುಗೊರೆ ಕೊಡೋಣ.. ನಾ ಬ್ಲಾಗ್ ಶುರು ಮಾಡುತ್ತೀನಿ ನೀವು ಅದನ್ನು ಕಂಪ್ಲೀಟ್ ಮಾಡಿ.. ಇಲ್ಲ ನೀವು ಬರೆಯಿರಿ ನಾ ಕಂಪ್ಲೀಟ್ ಮಾಡುತ್ತೀನಿ ಅಂದ್ರು.. ವಾಹ್ ಅನ್ನಿಸಿತು ಒಂದು ಅದ್ಭುತ ಐಡಿಯಾ.. ಸರಿ ಸವಾಲಿಗೆ ಸಿದ್ಧವಾಯಿತು.. ಅದರ ಫಲವೇ.. ಎರಡು ಬ್ಲಾಗ್ ಗಳು DFR ಹುಟ್ಟು ಹಬ್ಬಕ್ಕೆ ಉಡುಗೊರೆಯಾಗಿ ನಿಮ್ಮ ಕಣ್ಣ ಮುಂದೆ.. ಧನ್ಯವಾದಗಳು CB..)


(DFR  ಈ ಹೆಸರೇ ಸಾಕು ಉತ್ಸಾಹದ ಚಿಲುಮೆಗೆ ಇನ್ನೊಂದು ಹೆಸರು.. 
ಏನು ಬರೆಯುವುದು ಎನ್ನುವ ಗೊಂದಲವಿರಲ್ಲಿಲ್ಲ.. ಬ್ಲಾಗ್ ಟೈಟಲ್ ಕೂಡ ಮೊದಲೇ ನಿರ್ಧಾರವಾಗಿತ್ತು 
೨೩ನೆ ಫೆಬ್ರವರಿ ೨೦೧೬ ... ಮುಂಜಾವು DFR ನನಗೆ ಶುಭಾಷಯ ಕೋರಿದ್ದು.. ಹೀಗೆ 
ಶ್ರೀ "ಹಾಯ್ ಬೆಳಗು"..
ಆಗ ಅವರಿಗೆ ಹೇಳಿದ್ದೆ ಇದೆ ಪದಗಳನ್ನು ಟೈಟಲ್ ಆಗಿ ಮಾಡಿ ಒಂದು ಲೇಖನ ಬರೆಯುತ್ತೇನೆ ಎಂದು 
ಇಂದು ಆ ಸುದಿನ ಬಂದಿದೆ.. ಅದೇ ಹೆಸರಿನಲ್ಲಿ ಒಂದು ಬ್ಲಾಗ್ ಬರೆದಿದ್ದೇನೆ..)