Saturday, March 25, 2017

ಕಗ್ಗದಿಂದ ಶುಭ ಕೋರಿಕೆ

ಘನವಾದ ನಿದ್ದೆ.. ಆಗಸದಲ್ಲಿಯೇ ತೇಲುತ್ತಿರುವ ಅನುಭವ..ಪ್ರಪಂಚದ ಪರಿವೆ ಇಲ್ಲದ ನಿದ್ದೆ..

ವೈದ್ಯರು ಅರಿವಳಿಕೆ ಕೊಟ್ಟು ಶಸ್ತ್ರ ಚಿಕಿತ್ಸೆ ಮಾಡಿದ ಮೇಲೆ, ಅರಿವಳಿಕೆಯ ಸತ್ವ / ಶಕ್ತಿ ಕಡಿಮೆ ಆಗುತ್ತಿದ್ದ ಹಾಗೆ ನೋವು ಅರಿವಾಗುವ ಹಾಗೆ, ನಿದ್ದೆಯ ಮಂಪರು ಕಡಿಮೆ ಆಗುತ್ತಿರುವ ಅನುಭವ..

ಮೊಬೈಲ್  ಫೋನ್ ಸದ್ದು ಮಾಡುತ್ತಿತ್ತು.. ಫೋನ್ ತಲೆಗೆ ಒಂದು ಬಿಟ್ಟು ಮತ್ತೆ ನಿದ್ದೆಗೆ ಜಾರಲು ಯತ್ನಿಸುತ್ತಿದ್ದೆ.. !

ಸಂಪಿನ ಆಟೋಮ್ಯಾಟಿಕ್ ಮೋಟಾರು ಶುರುವಾಯಿತು.. ಬೆಳಗಿನ ನಾಲ್ಕು ಘಂಟೆಯ ಆ ಶಾಂತ ನಿಶ್ಯಬ್ಧ ವಾತಾವರಣದಲ್ಲಿ ಮೋಟಾರಿನ ಸದ್ದು.. ಬಹಳ ತೊಂದರೆ ಕೊಡುತ್ತಿತ್ತು.. ಹೊದ್ದುಕೊಂಡಿದ್ದ ಹೊದಿಕೆಯನ್ನು ಬಲವಾಗಿ ಕಿವಿಗೆ ಮುಚ್ಚಿಕೊಂಡು ಮುಸುಗು ಹಾಕಿ ಮತ್ತೆ ನಿದ್ದೆಗೆ ಜಾರಿದೆ..

ಅನತಿ ಸಮಯದಲ್ಲಿ ಮೋಟಾರ್ ನಿಂತಿತು.. ಸದ್ಯ ನಿದ್ದೆ ಮಾಡಬಹುದು ಎಂದು ಮತ್ತೆ ನಿದ್ದೆಗೆ ಜಾರಿದರೆ..

ಟಕ್ ಟಾಕ್ ಟಕ್ ಟಾಕ್ ಗಡಿಯಾರದ ಸದ್ದು.. ಛೇ ಇದೇನಪ್ಪ.. ಇಷ್ಟೊಂದು ಕಾಟ ಕೊಡುತ್ತಿದೆ.. ಎಂದು ಕತ್ತಲಿನಲ್ಲಿಯೇ, ತಡಕಾಡುತ್ತಾ ಆ ಗಡಿಯಾರವನ್ನು ಬಟ್ಟೆಯ ಸಂಧಿಯೊಳಗೆ ಇಟ್ಟು ..  ಅದರ ಮೇಲೆ ಇನ್ನೊಂದಿಷ್ಟು ಬಟ್ಟೆ ಇಟ್ಟೆ .. ಸದ್ದು ಅಡಗಿತು.

ನಿಧಾನವಾಗಿ ಕಣ್ಣು  ರೆಪ್ಪೆಗಳು ಭಾರವಾಗಿ...  ಬೆಂಗಳೂರಿನಲ್ಲಿ ಬಂದ್ ಆದಾಗ ತನ್ನಿಂತಾನೇ ಮುಚ್ಚಿಕೊಳ್ಳುವ ಅಂಗಡಿಗಳ ಶಟರ್ ತರಹ ನಿಧಾನವಾಗಿ ಮುಚ್ಚಿಕೊಂಡವು..

ಟಕ್ ಟಕ್ ಟಕ್ ಮತ್ತೆ ಸದ್ದು.. ಆದರೆ ಈ ಬಾರಿ ಗಡಿಯಾರದಲ್ಲ.. ಬದಲಿಗೆ ವಾಕಿಂಗ್ ಸ್ಟಿಕ್ಕಿನ ಶಬ್ದ.. !

ನಮ್ಮ ಮನೆಯಲ್ಲಿ ಯಾರಿದ್ದಾರೆ ಎಂದುಕೊಳ್ಳುತ್ತಲೇ ನಿದ್ದೆಗೆ ಜಾರಿದೆ..

ಪಕ್ಕೆಯನ್ನು ತಿವಿದಂತೆ ಆಯಿತು.. ಮಗ್ಗುಲು ಬದಲಿಸಿದೆ.. ಆ ಕಡೆ ಪಕ್ಕೆಗೂ ಮತ್ತೆ ತಿವಿದಂತೆ ಆಯಿತು..

ಛೇ ಇದೇನಪ್ಪ ಇದು ಇವತ್ತು ಸ್ವಲ್ಪ ನಿದ್ದೆ ಮಾಡೋಣ ಅಂದರೆ ಹೀಗೆಲ್ಲಾ ಆಗುತ್ತಿದೆ. ಫೋನ್, ಗಡಿಯಾರ, ಮೋಟಾರು ಈಗ ವಾಕಿಂಗ್ ಸ್ಟಿಕ್ ಯಾರೂ ನನಗೆ ನಿದ್ದೆ ಮಾಡಲು ಬಿಡುತ್ತಿಲ್ಲ ಎಂದು ಕೋಪದಲ್ಲಿಯೇ ದಿಗ್ಗನೆ ಎದ್ದೆ..

ಸುತ್ತ ಮುತ್ತಲು ಕಪ್ಪು ಕತ್ತಲೆಯೇ ತುಂಬಿತ್ತು. .ಕಣ್ಣಗಲಿಸಿ ನೋಡಿದೆ.. ಸೊಳ್ಳೆಯನ್ನು ಓಡಿಸಲು ಹಾಕಿದ್ದ ಯಂತ್ರದ ಪುಟ್ಟ ಕೆಂಪು ದೀಪ ಎದುರುಗಡೆಯಿಂದ ಕಾಣುತ್ತಿತ್ತು.. ಅರೆ ಇದೇನಿದು.. ಸೊಳ್ಳೆ ಓಡಿಸುವ / ನಿಯಂತ್ರಿಸುವ ಯಂತ್ರ ನಾ ಮಲಗುವ ಹಾಸಿಗೆ ಕಡೆಯ ಗೋಡೆಯ ಮೇಲಿದೆ. ಇದು ಹೇಗೆ ಎದುರಿಗೆ ಕಾಣಿಸುತ್ತಿದೆ.. ಏನಪ್ಪಾ ಇದು.. ಎಂದು ಮತ್ತೆ ತೀಕ್ಷ್ಣ ದೃಷ್ಟಿಯಿಂದ ನೋಡಿದೆ..ಗೋಡೆಯ ತಗುಲಿಸಿದ್ದ ಸೊಳ್ಳೆ ಓಡಿಸುವ ಯಂತ್ರದ ಬೆಳಕು ಎದುರಿನಿಂದ ಪ್ರತಿಫಲನವಾಗುತ್ತಿದೆ..

ಅರಿವಾಗಲಿಲ್ಲ.. ಕತ್ತಲಲ್ಲೇ ತಡಕಾಡುತ್ತಾ.. ದೀಪ ಹಾಕಿದೆ.. ಜಗ್ ಜಗ್ ಸದ್ದು ಮಾಡುತ್ತಾ ದೀಪ ಹತ್ತಿಕೊಂಡಿತು.. ಕೋಲನ್ನು ಊರಿಕೊಂಡು ಒಂದು ಹಿರಿಯ ಜೀವ ನಿಂತಿದೆ..ಅವರ ಕನ್ನಡಕದಿಂದ ಆ ಬೆಳಕು ಪ್ರತಿಫಲನವಾಗುತ್ತಿದೆ..

ನೋಡು ನೋಡುತ್ತಲೇ ಬೆವರಲು ಶುರು ಮಾಡಿದೆ. ಹಾಕಿದ ಬಾಗಿಲು.. ನನ್ನ ಮಡದಿ ರಾತ್ರಿ ಯಾರಾದರೂ ಬಾಗಿಲು ತಟ್ಟಿದರೆ.. ನನ್ನನ್ನೇ ಎಬ್ಬಿಸಿ ತೆರೆಯಲು ಹೇಳುತ್ತಾಳೆ .. ಪರಿಚಯಸ್ಥರು, ನೆಂಟರು, ಬಂಧು ಮಿತ್ರರು ಯಾರಾದರೂ ಸರಿಯೇ.. ನಾನೇ ಬಾಗಿಲು ತೆರೆಯಬೇಕು.. ಏನಪ್ಪಾ ಇದು .. ಎಂದು ಪಕ್ಕದ ರೂಮಿಗೆ ಹೋಗಿ ನೋಡಿದೆ. ಅಲ್ಲಿ ಮಗಳು ಮತ್ತು ಮಡದಿ ನೆಮ್ಮದಿಯ ನಿದ್ರೆಯಲ್ಲಿದ್ದಾರೆ ..

ಮತ್ತೆ ಆ ವ್ಯಕ್ತಿ  ನಿಂತಲ್ಲಿಗೆ ಬಂದೆ.. ಸ್ವಲ್ಪ ಬೆವರು, ಗಾಬರಿ, ತೊದಲು ನುಡಿಗಳು.. ಯಾರಲ್ಲಿ ಯಾರು ನೀವು.. ಹೇಗೆ ಬಂದಿರಿ.. ಈ ಸಾಲುಗಳನ್ನು ಹೇಳಲು ಅನೇಕ ಬಾರಿ ಒಣಗಿದ್ದ ಗಂಟಲನ್ನು ಸರಿಮಾಡಿಕೊಂಡಿದ್ದೆ ..

ಆ ವ್ಯಕ್ತಿ ನಿಧಾನವಾಗಿ ಇತ್ತ ಕಡೆ ತಿರುಗಿತು. ಬೋಳು ತಲೆ, ದಪ್ಪನೆ ಕನ್ನಡಕ, ಬಿಳಿ ಜುಬ್ಬಾ ಬಿಳಿ ಪಂಚೆ.. ಬೊಚ್ಚು ಬಾಯಿ... ಗಂಟಲಲ್ಲಿದ್ದ ಕಡೆ ಹನಿಯೂ ಒಣಗಿತು.. ಗಾಬರಿಯಿಂದ ಹೆದರಿಕೆಯಾಗಿ!

"ಅಜ್ಜಾ.. ಅಜ್ಜಾ.. ನೀವು.. ಅರೆ ಇದೇನಿದು.. ಯಾಕೆ.. ಹೇಗೆ.. ಯಾವಾಗ.. ಅರೆ.. ಛೆ.. ಓಹ್.. ಏನಪ್ಪಾ ... .. ಅಲ್ಲಾ.. ತಾತ. ಅದು.. ಹಾಗಲ್ಲ.. "

"ಮಗೂ ಶ್ರೀಕಾಂತಾ.. ಯಾಕಿಷ್ಟು ಗಾಬರಿ.. ಹೆದರಬೇಡ.. ನಾ ನಿನಗೆ ತೊಂದರೆ ಕೊಡೋಲ್ಲ.. ಐದು ದಿನಗಳ ಹಿಂದೆ ಮಲಗಿದ್ದ ನೀನು ಎದ್ದೆ ಇಲ್ಲವಲ್ಲ.. ಅದಕ್ಕೆ ನನಗೆ ಗಾಬರಿಯಾಯಿತು.. ಅಂತಹ ಗಾಢ ನಿದ್ದೆ ಏತಕ್ಕೆ.. "

"ಆಆಹ್ ಏನಂದಿರಿ.. ನಾ ಮಲಗಿ ನಾಲ್ಕು ದಿನವಾಯಿತೇ.. ಏನಾಯಿತು ನನಗೆ... ಅಯ್ಯೋ ಕಣ್ಣುಗಳು ಯಾವುದೋ ಬೆಟ್ಟವನ್ನು ಹೊತ್ತು ನಿಂತಂತೆ ಭಾರವಾಗಿದೆ.. ನಿಜವೇ ಅಜ್ಜ.. ಇಂದು ಯಾವ ತಾರೀಕು.. ಏನಿದು... "

"ಮಗೂ ಇಂದು ೨೫ನೇ ತಾರೀಕು ಮಾರ್ಚ್ ಮಾಸ.. . "

"ಛೆ ಅಜ್ಜ.. ಎಂಥಹ ಕೆಲಸವಾಯಿತು.. ನಮ್ಮ ಗುರುಗಳು... ೬೨ನೇ ವರ್ಷದ ಹರ್ಷದ ಸಂಭ್ರಮದಲ್ಲಿದ್ದರು.. ಅವರಿಗೆ ನಾ ಶುಭಾಶಯಗಳನ್ನು ಸಲ್ಲಿಸಬೇಕಿತ್ತು.. ಬೇಸರವಾಗುತ್ತಿದೆ.. "

"ಮಗೂ.. ಮಹಾಭಾರತದಲ್ಲಿ ಧರ್ಮಕ್ಕೆ ಜಯವಾಗಬೇಕು ಎಂದು ಶ್ರೀ ಕೃಷ್ಣ ಸೂರ್ಯನನ್ನು ಕೊಂಚ ಮರೆಮಾಡಿದ್ದ.. ಈಗ ನಾನು ಅದೇ ರೀತಿ ದಿನಸೂಚಿಯನ್ನು ಕೊಂಚ ಹಿಂದಕ್ಕೆ ಕರೆದೊಯ್ಯುತ್ತೇನೆ.. ಆಗೋ ನೋಡು ಸೂರ್ಯನು ಕೂಡ ಒಪ್ಪಿಕೊಂಡು ಚಂದ್ರನ ಜೊತೆ ಹೆಗಲ ಮೇಲೆ ಕೈ ಹಾಕಿಕೊಂಡು ಹಿಂದಕ್ಕೆ ಚಲಿಸುತ್ತಿದ್ದಾನೆ.. ಬೇಗನೆ ನಿನ್ನ ಶುಭಾಶಯಗಳನ್ನು ದಾಖಲಿಸು.. ಪ್ರಪಂಚ ಏಳುವ  ಮುಂಚೆ ಈ ಕೆಲಸ ಆಗಬೇಕು.. ಕಮಾನ್ ಶ್ರೀಕಾಂತ ಕಮಾನ್"

"ಅಜ್ಜ..ಈಗಲೇ ಶುರುಮಾಡುತ್ತೇನೆ.. "

ಚಕ್ ಎಂದು ಹಾಸಿಗೆಯಿಂದ ಎದ್ದು.. ಮೊರೆ ತೊಳೆದು. ತನ್ನ ಬಾಸ್ ತನ್ನ ಅಪ್ಪನಿಗೆ, ಮತ್ತು ಶ್ರೀ ಕೃಷ್ಣನಿಗೆ, ಗಣಪನಿಗೆ ನಮಿಸಿ.. ಇಷ್ಟದೇವತೆಗಳನ್ನು ಮನದಲ್ಲಿಯೇ ಸ್ಮರಿಸಿ..

"ಗುರುಗಳೇ .. ಕಗ್ಗ ಎನ್ನುವ ಕಬ್ಬಿಣದ ಕಡಲೆ ಎಂದುಕೊಂಡ ಹಲವಾರು ಮಂದಿಗೆ ಸರಳವಾಗಿ ತಾಕುವಂತೆ, ಓದಿದ ಪ್ರತಿಯೊಬ್ಬರ ಅನುಭವದ ಮಜಲಿಗೆ ತಾಕುವಂತೆ, ಬುದ್ಧಿಮತ್ತೆಗೆ ಅರಿವಾಗುವಂತೆ, ಅವರ ಮನಸ್ಸಿಗೆ ನಾಟುವಂತೆ ಪ್ರತಿ ಮುಕ್ತಕಗಳ ಪದಗಳನ್ನು ವಿಂಗಡಿಸಿ, ಅದರ ಅರ್ಥ ವಿಸ್ತಾರವನ್ನು ಹೇಳುತ್ತಾ, ನಿಮ್ಮ ಬದುಕಿನಲ್ಲಿ ನೀವು ಕಂಡುಕೊಂಡ ಸತ್ಯದ ಅನುಭವದ ಮಾರ್ಗದಲ್ಲಿ ದೊರಕಿದ ಅಮೃತವನ್ನು ಕ್ರೂಢೀಕರಿಸಿ ನಮ್ಮೆಲ್ಲರಿಗೂ ಹಂಚುತ್ತಿರುವ ನಿಮಗೆ ಧನ್ಯವಾದಗಳು.. ಕಗ್ಗ ಎಂಬ ವಿಷಯವನ್ನು ಬರಿ ಕಡಲೆ ಎನಿಸದೆ ಇಷ್ಟವಾಗುವ ನಿಟ್ಟಿನಲ್ಲಿ ಬರೆದು ಹಂಚಿರುವ ನಿಮ್ಮ ಬುದ್ಧಿಮತ್ತೆಗೆ, ಅದಕ್ಕೆ ಸಿಕ್ಕ ಗೌರವಗಳಿಗೆ ತಲೆ ಬಾಗುತ್ತಲೇ ನಿಮಗೆ ಜನುಮದಿನಕ್ಕೆ ಶುಭಕರವಾದ ಆಶಯಗಳನ್ನು ಅಜ್ಜನ ಅಮೃತ ಹಸ್ತದಲ್ಲಿ ತಲುಪಿಸಲು ಪ್ರಯತ್ನ ಪಡುತ್ತಿದ್ದೇನೆ.. "

ನಿಮ್ಮ ಜನುಮದಿನಕ್ಕೆ ಶುಭಾಶಯಗಳು ರವಿ ಗುರುಗಳೇ"

ಅಲ್ಲಿಯೇ ನಿಂತಿದ್ದ ಅಜ್ಜ, ತಮ್ಮ ವಾಕಿಂಗ್ ಸ್ಟಿಕ್ಕಿನ ತುದಿಯಿಂದ ನನ್ನ ತಲೆಗೆ ಮೆಲ್ಲಗೆ ಕುಟ್ಟಿ.. ಸರಿ ಮಗೂ.. ನನ್ನ್ನ ಶುಭಾಶೀರ್ವಾದವನ್ನು ರವಿಗೆ ನಿನ್ನ ಬರಹದ ಮೂಲಕ ತಲುಪಿಸು.. ನನ್ನ ಜನುಮದಿನಕ್ಕೂ ಅವನ ಜನುಮದಿನಕ್ಕೂ ನಾಲ್ಕು ದಿನಗಳ ಅಂತರ.. ಹಾಗೆ ನಾಲ್ಕನೇ ಪುಸ್ತಕ ಕಗ್ಗ ರಸಧಾರೆ ಕೂಡ ಬೇಗ ಬರಲಿ ಎಂದು ಹೇಳಿ ಬಿಡು. ನಾ ಹೋಗಿ ಬರುತ್ತೇನೆ.. ಮತ್ತೆ ನಾಲ್ಕನೇ ಪುಸ್ತಕದ ಬಿಡುಗಡೆ ಸಮಾರಂಭಕ್ಕೆ ಬರುತ್ತೇನೆ.. ಜೊತೆಯಲ್ಲಿ ಈ ಬಾರಿ ಆ ಸಮಾರಂಭದ ವಿವರಗಳನ್ನು ನಾನೇ ನೀಡುತ್ತೇನೆ ಎಂದು ರವಿಗೆ ಹೇಳಿಬಿಡು.. "

ವಾವ್ ಅಜ್ಜ ಖಂಡಿತ ತಿಳಿಸುತ್ತೇನೆ.. ನಿಮ್ಮ ಅಕ್ಷರಗಳಲ್ಲಿ ಸಮಾರಂಭದ ವಿವರ.. ಕೇಳಿದರೆ ಮೈಜುಮ್ ಎನ್ನುತ್ತದೆ.. ಇನ್ನೂ ಅದು ಹೇಗೆ ಇರುತ್ತೆ ಎನ್ನುವ ಕುತೂಹಲ ಹೆಚ್ಚಾಗುತ್ತಿದೆ.. ಆಗಲಿ ಅಜ್ಜ ನಿಮ್ಮ ಆಶೀರ್ವಾದಗಳನ್ನು ತಲುಪಿಸುತ್ತೇನೆ.. "

ಅಜ್ಜ ಟೋಯ್ ಅಂತ ಮಾಯವಾದರು..  ಪ್ರಪಂಚ ಇನ್ನೂ ಎದ್ದಿರಲಿಲ್ಲ.. ಮಾರ್ಚ್ ೨೧ ನೇ ದಿನಕ್ಕೆ ಕಾಲಿಡುತಿತ್ತು..
ಆದರೆ ತಾಂತ್ರಿಕ ದೋಷದಿಂದ.. ಈ ಲೇಖನ ಪ್ರಪಂಚಕ್ಕೆ ಬರುವ ಹೊತ್ತಿಗೆ ೯೬ ಘಂಟೆಗಳು ಉರುಳಿ ಹೋಗಿತ್ತು!!!

ರವಿ ಗುರುಗಳೇ ಜನುಮದಿನಕ್ಕೆ ಶುಭಾಶಯಗಳು!!!


(ನಿಮ್ಮ ಕ್ಷಮೆ ಕೋರುತ್ತಾ ಅಜ್ಜನ ಹಾಗೂ ನಿಮ್ಮ ಭಾವ ಚಿತ್ರವನ್ನು ಒಂದೇ ಚೌಕಟ್ಟಿನಲ್ಲಿ ಬಂಧಿಸಿದ್ದೇನೆ.. ಅಜ್ಜ ನಿಮ್ಮ ಕಡೆ ನೋಡುತ್ತಾ ನಿಮಗೆ ಶುಭಾಶೀರ್ವಾದ ಕೋರುತ್ತಲೇ ಇರುತ್ತಾರೆ ಎನ್ನುವುದನ್ನು ಸಾಂಕೇತಿಕವಾಗಿ ತೋರಿಸಲು ಈ ಪ್ರಯತ್ನ.. ಇದು ಖಂಡಿತ ನಿಮಗೆ ಮುಜುಗರ ತರಲು ಮಾಡಿರುವುದಲ್ಲ... ಹಾಗೆನಿಸಿದರೆ.. ಈ ಚಿತ್ರವನ್ನು ತೆಗೆ ಶ್ರೀಕಾಂತ ಎಂದು ಹೇಳಲು ಪೂರ್ಣ ಅಧಿಕಾರಯುತ ಪ್ರೀತಿ ನಿಮಗಿದೆ)


Thursday, February 9, 2017

ದೇವರು ನಕ್ಕೆ ನಗುತ್ತಾನೆ - ೩

ಡಾಕ್ಟರ್ ಹತ್ತಿರ ಒಬ್ಬ ಓಡೋಡಿ ಬಂದ..
ಡಾಕ್ಟರಿಗೆ ಗಾಬರಿ.. "ಏನಾಯ್ತಪ್ಪ"
ನಮ್ಮ ಪಕ್ಕದ ಮನೆಯಲ್ಲಿ ರಕ್ತದ ಒತ್ತಡ ನೋಡುವ ಯಂತ್ರವನ್ನು ತಂದಿದ್ದರು
ನನಗೆ ಕುತೂಹಲ.. "ಅವರ ಮನೆಗೆ ಹೋಗಿ ನನ್ನದು ರಕ್ತದ ಒತ್ತಡ ನೋಡಿರಿ" ಎಂದೇ

ಆಗ ಸಂಜೆ ಎಂಟು ಮೂವತ್ತು.. ಅವರ ಮನೆಯಲ್ಲಿ ಜೀ ಕನ್ನಡ ಓಡುತ್ತಿತ್ತು..
ಓಹ್ ಸಾಹೇಬ್ರು ಬನ್ನಿ ಬನ್ನಿ.. ಅಂತ ಒಳಗೆ ಕರೆದರು..
ಟಿವಿ ನೋಡುತ್ತಾ.. ಹಾಗೆ ಪರೀಕ್ಷೆ ಮಾಡಿಸಿದೆ..
ಆ ಯಂತ್ರದಲ್ಲಿದ್ದ ಪಾದರಸ ಕೆಳಗೆ ಇಳಿಯುತ್ತಲೇ ಇಲ್ಲ. ಬದಲಿಗೆ ಮೇಲಕ್ಕೆ ಅಂಟಿಕೊಂಡು ಬಿಟ್ಟಿತ್ತು..
ಸುಮಾರು ಹೊತ್ತು ನಾನು ನೋಡುತ್ತಲೇ ಇದ್ದೆ.. ಆದರೆ ಆ ಪಾದರಸ ಕೆಳಗೆ ಇಳಿಯುತ್ತಲೇ ಇಲ್ಲ..

ಆರೋಗ್ಯ ಸರಿ ಇದೆ.. ರಕ್ತ ಒತ್ತಡಕ್ಕೆ ಎಂದೂ ಒಳಗಾದವನಲ್ಲ.. ಗಾಬರಿ ಆಯಿತು ಅದಕ್ಕೆ ನಿಮ್ಮ ಹತ್ತಿರ ಬಂದೆ..

ಡಾಕ್ಟರ್ ಸಮಯ ನೋಡಿಕೊಂಡರು.. ರಾತ್ರಿ ೯.೩೦ ಆಗಿತ್ತು.. ಚಂದನ ವಾಹಿನಿ ಓಡುತ್ತಿತ್ತು..
ಬಾಪ್ಪಾ ಕೂತುಕೋ.. ಎಂದು ಹೇಳಿ.. ಟಿವಿ ಧ್ವನಿಯನ್ನು ದೊಡ್ಡದು ಮಾಡಿ.. ರಕ್ತದ ಒತ್ತಡ ಪರೀಕ್ಷಿಸಿದರು.. ಸರಿಯಾಗಿತ್ತು...

ಇನ್ನೈದು ನಿಮಿಷ ಬಿಟ್ಟು .. ಮತ್ತೆ ನೋಡಿದರು...  ಆಗಲೂ  ಸರಿಯಾಗಿತ್ತು..

ನಾಳೆ ಸಂಜೆ ಬಾ ಅಂದರು..

ಮತ್ತೆ ಮಾರನೇ ದಿನ ಎಂಟು ಮೂವತ್ತಕ್ಕೆ ಡಾಕ್ಟರ್ ಬಳಿ ಹೋದ.. ಸ್ವಾಗತಕಾರಿಣಿ .. ಜೀ ಕನ್ನಡ ಹಾಕಿ ಮೊಬೈಲ್ ನಲ್ಲಿ ಆಟವಾಡುತ್ತಿದ್ದರು..

ರಕ್ತದ ಒತ್ತಡದ ಯಂತ್ರದಲ್ಲಿ ಮತ್ತೆ ಪಾದರಸ ಮೆಲ್ಲನೆ ಮೇಲಕ್ಕೆ ಏರಿ ಅಲ್ಲೇ ಅಟಕಾಯಿಸಿಕೊಂಡಿತ್ತು.. ಅರೆ ಡಾಕ್ಟರ್ ಅವರಿಗೂ ಆಶ್ಚರ್ಯ.. ಅಷ್ಟರಲ್ಲಿ ವಿದ್ಯುತ್ ಹೋಯಿತು.. ದೀಪಗಳು ಒಮ್ಮೆ ಆರಿ ಮತ್ತೆ ಹೊತ್ತಿಕೊಂಡಿತು.. ಟಿವಿಯಲ್ಲಿ ಚಂದನ ಬಂದಿತು..

ರಕ್ತದ ಒತ್ತಡ ಪರೀಕ್ಷೆ ಮಾಡಿದರು... ಸರಿಯಾಗಿತ್ತು..

ಸ್ವಾಗತಕಾರಿಣಿ ಜೀ ಕನ್ನಡ ಹಾಕಿದರು.. ಮತ್ತೆ ವ್ಯತ್ಯಾಸ..

ಆಗ ತಿಳಿಯಿತು..

ಡಾಕ್ಟರ್ ಜೋರಾಗಿ ನಗಲು ಶುರುಮಾಡಿದರು..

ನೋಡಪ್ಪ ಈ ರೋಗಕ್ಕೆ ಎರಡೇ ಚಿಕಿತ್ಸೆ
೧) ನನ್ನ ಕ್ಲಿನಿಕ್ ನಲ್ಲಿ ರಾತ್ರಿ ೮.೩೦ ರಿಂದ ೯.೦೦ ಕ್ಕೆ ರಕ್ತದ ಒತ್ತಡ ಪರೀಕ್ಷೆ ಮಾಡಿಸಿಕೊಳ್ಳಬೇಡ.. ಚಂದನ ವಾಹಿನಿ       ಓಡುತ್ತಿದ್ದರೆ ಮಾತ್ರ ಪರೀಕ್ಷಿಸಿಕೋ.. ಜೀ ಕನ್ನಡ ಹಾಕಿದ್ದರೆ.. ಒಂಭತ್ತು ಘಂಟೆಯಾದ ಮೇಲೆ ಬಾ

೨) ಇಲ್ಲವೇ .. ನೀ ಪರೀಕ್ಷೆ ಮಾಡಿಸಿಕೊಳ್ಳುವಾಗ.. ಟಿವಿಯನ್ನು ಬಂದ್ ಮಾಡಿ ಅಂತ ಹೇಳು..

ದೇವರು ಕಿರೀಟವನ್ನು ಒಮ್ಮೆ ತೆಗೆದುಕೊಂಡು.. ತಲೆ ಕೆರೆದುಕೊಂಡ.. ಆಮೇಲೆ ಗೊತ್ತಾಯಿತು .. ಫ್ರೇಮ್ ಹಾಕಿದ್ದ ಫೋಟೋದ ಒಳಗಿಂದಲೇ ಜೋರಾಗಿ ನಗಲು ಶುರು ಮಾಡಿದ.. ತನ್ನ ಹೆಬ್ಬೆರಳನ್ನು ಕೆಳಗಿನ ಚಿತ್ರದಂತೆ ತೋರಿಸಿ.. ಮತ್ತೆ ಫ್ರೇಮ್ ಒಳಗೆ ಮರೆಯಾದ.. !

ಯಾಕೆ ಗೊತ್ತೇ.. ಪ್ರತಿ ರಾತ್ರಿ ಜೀ ಕನ್ನಡ ವಾಹಿನಿಯನ್ನು ೮.೩೦ ರಿಂದ ೯. ೦೦ ಕ್ಕೆ ನೋಡಿರಿ ಒಮ್ಮೆ :-)

Wednesday, January 25, 2017

ದೇವರು ನಕ್ಕೆ ನಗುತ್ತಾನೆ - ೨

ದೇವರು ನಗುತ್ತಾನೆ.. ಇದು ನಾ ಪ್ರಾಥಮಿಕ ಶಾಲೆಯಲ್ಲಿ ಓದಿದ ಪಾಠದ ಹೆಸರು. ದೃಷ್ಟಾ೦ತ ಕಥೆಗಳ ಒಂದು ಗುಚ್ಛ ಆ ಪಾಠ. ಅದನ್ನು ಓದಿದ್ದು ಪರಿಣಾಮಕಾರಿಯಾಗಿ ತಲೆಯೊಳಗೆ ಕೂತು ಬಿಟ್ಟಿದೆ. ಹೀಗೆ ನನಗೆ ವಿಚಿತ್ರ, ನಗು ಬರಿಸುವಂಥಹ ಸನ್ನಿವೇಶಗಳನ್ನು ಕಂಡರೆ, ಗಮನಕ್ಕೆ ಬಂದರೆ.. ತಲೆಯೆತ್ತಿ ಆಗಸ ನೋಡುತ್ತೇನೆ ಅಲ್ಲಿ ಸೊಂಟದ ಮೇಲೆ ಕೈಯಿಟ್ಟುಕೊಂಡು ಆ ದೈವ ನಗುತ್ತಿರುವಂತೆ ಭಾಸವಾಗುತ್ತದೆ.
ಚಿತ್ರ ಕೃಪೆ : ಗೂಗಲೇಶ್ವರ

ಘಟನೆ ೧
ಸುಮಾರು ವರ್ಷಗಳ ಅಭ್ಯಾಸ.. ಜನವರಿ ಒಂದನೇ ತಾರೀಕು ಕುಲದೈವ ವೆಂಕಟರಮಣನ ದೇವಾಲಯಕ್ಕೆ ಹೋಗುವುದು. ಹೀಗೆ ಈ ಜನವರಿ ಒಂದನೇ ತಾರೀಕು ಬೆಂಗಳೂರಿನ ಪ್ರಸಿದ್ಧ ವೆಂಕಟೇಶ್ವರನ ದೇಗುಲಕ್ಕೆ ಹೋಗಿದ್ದೆ. ಯಥಾಪ್ರಕಾರ ಸಾಲು ಸಾಲು ಜನರಿದ್ದರು. ಗಡಿಬಿಡಿ ಮಾಡಿಕೊಳ್ಳದೆ ಸರತಿ ಸಾಲಿನಲ್ಲಿ ನಿಂತಿದ್ದೆ. ಸುಮಾರು ಒಂದು ಘಂಟೆ ಮೇಲಾಗಿತ್ತು ಸಾಲಿನಲ್ಲಿ ನಿಂತು, ಗಲಿಬಿಲಿ ಇರಲಿಲ್ಲ.. ಕೆಲವು ಮಂದಿ ಬೇಸರ ಮಾಡಿಕೊಂಡು ಅಲ್ಲಿಯೇ ಕೈಮುಗಿದು ವಾಪಸ್ ಹೋಗಿದ್ದು ಉಂಟು. ಇನ್ನೂ ಕೆಲವರು ಆಗಲಿ ಅದು ಎಷ್ಟು ಹೊತ್ತು ಆದರೂ ಸರಿ.. ದೇವನ ದರ್ಶನ ಮಾಡಿಕೊಂಡೆ ಹೋಗೋಣ ಅಂತ ನಿಂತಿದ್ದರು. ಆಗ ತಾನೇ ೫೦೦ ಮತ್ತು ೧೦೦೦ ನೋಟಿನ ಕಥೆ ಮುಗಿದು ಎರಡು ದಿನವಾಗಿತ್ತು.. ಜನರಿಗೆ ಮಾತಿಗೊಂದು ವಿಷಯ ಬೇಕಿತ್ತು ಅಲ್ಲವೇ..

"ಏಟಿಎಂ ಮುಂದೆ ನಿಲ್ಲುತ್ತೇವೆ.. ಈ ಸರತಿ ಯಾವ ಮಹಾ ಅಲ್ವೇ ಸರ್.. ನಿಲ್ಲೋಣ ಬಿಡಿ ಮೋದಿ ದೇಶಕ್ಕೆ ಒಳ್ಳೇದು ಮಾಡಲು ತಂದ ನಿರ್ಧಾರಕ್ಕೆ ನಾವು ಬೆಂಬಲ ಸೂಚಿಸಿದ್ದೇವೆ.. ಈ ಸರತಿ ಸಾಲು ನಮ್ಮ ಮನಕ್ಕೆ ಒಳ್ಳೆಯದು ಆಗಲಿ ಎನ್ನುವ ಆಶಯಕ್ಕೆ ನಿಲ್ಲಲಾರೆವೆ.. "

ತರ್ಕವೇನೋ ಚೆನ್ನಾಗಿತ್ತು.. ಆದರೆ ಆ ಐವತ್ತ್ತು ದಿನ ಈ ಮಂದಿ ಮೋದಿಯನ್ನು ಬಯ್ದಿರಲಿಲ್ಲವೇ ಎನ್ನುವುದು ಯಕ್ಷ ಪ್ರಶ್ನೆಯಾಗಿತ್ತು.. ದೇವಾಲಯದ ಗೋಪುರದ ಕಡೆ ಕಣ್ಣು ಹಾಯಿಸಿದೆ.. ಗೋಪುರದಲ್ಲಿದ್ದ ದೇವರ ಮೂರ್ತಿಗಳು ಕಿಸಕ್ಕನೆ ನಕ್ಕ ಅನುಭವ.. ಆ ಸದ್ದಿಗೆ ಗೋಪುರದಲ್ಲಿ ಮನೆಮಾಡಿದ್ದ ಪಾರಿವಾಳಗಳು ಪುರ್ ಅಂತ ಹಾರಿದವು..

ದೇವಸ್ಥಾನದ ಪ್ರಾಕಾರದಲ್ಲಿದ್ದ ದೇವರ ಚಿತ್ರ ನೋಡಿದೆ.. ಅಭಯ ಹಸ್ತ ತೋರುತ್ತಿದ್ದ ವೆಂಕಟೇಶ.. ತನ್ನ ಕೈಯನ್ನು ಹಾಗೆ ಬಾಯಿಗೆ ಅಡ್ಡವಾಗಿ ಇಟ್ಟುಕೊಂಡು ನಕ್ಕ ಹಾಗೆ ಅನ್ನಿಸಿತು..

ಘಟನೆ ೨ 
ಸುಮಾರು ಹೊತ್ತು ಕಾದ ಮೇಲೆ.. ಅರ್ಚಕ ಸಿಬ್ಬಂದಿ  "ಭಕ್ತಾದಿಗಳೇ.. ಅಲಂಕಾರ ಮುಗಿಯಿತು.. ಇನ್ನೇನು ಕೆಲವೇ ಕ್ಷಣಗಳಲ್ಲಿ ದರ್ಶನ ಮಾಡಬಹುದು.. ಅಭಿಷೇಕಕ್ಕೆ ಬರೆಸಿದವರು ಮತ್ತು .. ಪೂಜೆ ಮಾಡಿಸುವವರು ಇನ್ನು ಸ್ವಲ್ಪ ಹೊತ್ತು ಕಾಯಬೇಕು.. ಮಂಗಳಾರತಿಯಾದ ಮೇಲೆ ಪ್ರಸಾದ ಕೊಡುತ್ತೇವೆ.. ಮಿಕ್ಕವರು ಬರಿ ದರ್ಶನ ಮಾಡಬೇಕೆಂದಿರುವವರು ದರ್ಶನ ಮಾಡಿ ಸಾಗಬಹುದು.. "

ಸರತಿ ಸಾಲಿನಲ್ಲಿ ಸಂಚಲನ ಮೂಡಿತು. .. ಕೆಲವರು ಬದಿಗೆ ನಿಂತು ಹಿಂದಿದ್ದವರಿಗೆ ದಾರಿ ಬಿಟ್ಟುಕೊಟ್ಟರು.. ಮಿಕ್ಕವರು ಮೆಲ್ಲಗೆ ಸಾಗುತ್ತಿದ್ದರು.. ಒಂದು ವ್ಯಕ್ತಿ ಕೈ ಬೆರಳು ತುಂಬಾ ಉಂಗುರಗಳು.. ಕತ್ತಿಗೆ ದೊಡ್ಡ ದಪ್ಪನಾದ ಸರ.. ಕೈಗೆ ಕಡಗ ತೊಟ್ಟಿತ್ತು.. ಹಣೆಗೆ ಉದ್ದವಾದ ಕುಂಕುಮ.. ಒಟ್ಟಿನಲ್ಲಿ ದೇವರಿಗೆ ಒಮ್ಮೆಲೇ ಕಸಿವಿಸಿ ಮಾಡಬೇಕಿನ್ನುಸುವಂಥಹ ರೂಪ...

ಮನದಲ್ಲಿ ದೈವ ಧ್ಯಾನ ಮಾಡುತ್ತಿದ್ದರೂ... ಈ ದೃಶ್ಯ ಕಂಡು ಮನದೊಳಗೆ ಹಾಸ್ಯ ರಸ ಉಕ್ಕುತ್ತಿತ್ತು.. ದೇವಸ್ಥಾನದ ಆವರಣದಲ್ಲಿ ವಿಷ್ಣುವಿನ ದಶಾವತಾರದ ಮೂರ್ತಿಗಳು ಇದ್ದವು.. ಈ ವ್ಯಕ್ತಿಯನ್ನು ಒಮ್ಮೆ ನೋಡಿ.. ಒಂದು ಮೂರ್ತಿ ತನ್ನ ಆಭರಣಗಳೆಲ್ಲ ಸರಿ ಇದೆಯೇ ಅಥವಾ ಏನಾದರೂ ಮಿಸ್ ಆಗಿದೆಯೇ ಎಂದು ನೋಡಿಕೊಂಡ ಪರಿಯನ್ನು ನೋಡಿ ಪಕ್ಕದ ಮೂರ್ತಿ ಕಿಸಕ್ಕನೆ ನಕ್ಕಿತು..
ಚಿತ್ರ ಕೃಪೆ : ಗೂಗಲೇಶ್ವರ
ಆಗಸ ಕಾಣುತ್ತಿರಲಿಲ್ಲ.. ಕಿಟಕಿಯಾಚೆ ಸುಮ್ಮನೆ ಗಮನಿಸಿದೆ.. ದೇವರು ಕ್ಲೋಸ್ ಅಪ್ ಸ್ಮೈಲ್ ಕೊಟ್ಟಾ.. ನನ್ನ ಮೇಲಿರಬೇಕಾದ ಆಭರಣಗಳು ಈ ವ್ಯಕ್ತಿಯ ಮೇಲಿದ್ದದ್ದು ನೋಡಿ ನಗೆಯೊಂತೂ ಬಂದಿತ್ತು ಆ ಮಹಾಮಹಿಮನಿಗೆ :-)

ಘಟನೆ - ೩
ಆ ಆಭರಣದ ಡಬ್ಬಿಯ ತರಹ ಇದ್ದ ವ್ಯಕ್ತಿ.. ಯಾರೋ ಒಬ್ಬರಿಗೆ ಕರೆ ಮಾಡುತ್ತಾ... "ನೀವು ಬನ್ನಿ ಸರ್... ಅದೆಷ್ಟು ಉದ್ದದ ಸಾಲೇ ಇರಲಿ.. ವೆಂಕಟೇಶ್ವರನ ದರ್ಶನ ನಾ ಮಾಡಿಸುತ್ತೇನೆ.. ಬಾಗಿಲಲ್ಲಿ ನನ್ನ ಹೆಸರು ಹೇಳಿ.. ನನ್ನ ಮೊಬೈಲಿಗೆ ಕರೆಮಾಡಿ.. ಮಿಕ್ಕದ್ದು ನನಗೆ ಬಿಡಿ.. "

ಆ ಕಡೆಯ ವ್ಯಕ್ತಿಗೆ ಅದೇನು ಮುಜುಗರವಾಗಿತ್ತೋ ಏನೋ.. ಅದೇನು ಹೇಳಿದನೋ ಕಾಣೆ.. ಆದರೆ ಈ ಆಭರಣದ ಡಬ್ಬಿ "ಸರ್ ಅದೆಕ್ಕೆನೂ  ನೀವು ಯೋಚಿಸಬೇಡಿ.. ನೀವು ಬನ್ನಿ.. ದರ್ಶನ ನನಗೆ ಬಿಡಿ.. "

ನಾ "ನಗಲಾರದೇ ಅಳಲಾರದೇ ತೊಳಲಾಡಿದೆ ಜೀವ" ಅಣ್ಣಾವ್ರ ಶ್ರುತಿ ಸೇರಿದಾಗ ಹಾಡು ನೆನಪಿಗೆ ಬಂತು.. ನಾನು ನಕ್ಕೆ.. ಹಸುವಿಗೆ ಒರಗಿಕೊಂಡು ಕೊಳಲು ಊದುತ್ತಿದ್ದ ಶ್ರೀ ಕೃಷ್ಣನ ಮೂರ್ತಿ.. ಉಡುಪಿ ಕೃಷ್ಣನ ಹಾಗೆ ನನಗೆ ವಿರುದ್ಧ ದಿಕ್ಕಿಗೆ ಮುಖ ಮಾಡಿಕೊಂಡು "ಅಲೆ ಅಲೆ... ನಾನೇ ದೇವರು. ನಾನೆ ಎಲ್ಲರನ್ನು ನೋಡಿಕೊಳ್ಳುತ್ತೇನೆ.. ನಾನೇ ಒಂದು ದಿನ ಆ ರೀತಿಯಲ್ಲಿ ಹೇಳಿಕೊಂಡಿಲ್ಲ.. ಇದ್ಯಾರಪ್ಪಾ ಈ ಆಭರಣದ ಪೆಟ್ಟಿಗೆ ಹೀಗೆ ಹೇಳುತ್ತಿದೆ" ಎಂದು ನಕ್ಕು ನಕ್ಕು ಸುರಿಯುತ್ತಿದ್ದ ಆನಂದ ಭಾಷ್ಪವನ್ನು ಒರೆಸಿಕೊಂಡ ಅನ್ನಿಸಿತು.. !

ಘಟನೆ - ೪
ಅಮ್ಮನ ಆರೋಗ್ಯ ತಪಾಸಣೆಗೆ  ಕರೆದುಕೊಂಡು ಹೋದಾಗ.. ವೈದ್ಯರು ಅಮ್ಮನಿಗೆ ಹೇಳಿದರು "ನೀವು  ಮಲಗಿದ್ದಾಗ ತಕ್ಷಣ ದಡಕ್ ಅಂತ ಏಳಬಾರದು.. ಕೂತಿದ್ದವರು ಚಕ್ ಅಂತ ಎದ್ದು ನಿಲ್ಲಬಾರದು.. ಯಾರಾದರೂ ಕರೆದರೆ ತಕ್ಷಣ ಆ ಕಡೆಗೆ ತಿರುಗಬಾರದು.. ಈ ವಯಸ್ಸಿನಲ್ಲಿ ನೀವು ಮಾಡುವ ಪ್ರತಿಕ್ರಿಯೆಗೆ ನಿಮ್ಮ ಮೆದುಳು ಪ್ರತಿಕ್ರಿಯೆ ನೀಡಲು ಸ್ವಲ್ಪ ಹೊತ್ತಾಗುತ್ತದೆ.. ನಿಮ್ಮ ಅಚಾನಕ್ ಪ್ರತಿಕ್ರಿಯೆಗೆ ತಕ್ಷಣ ಸ್ಪಂದನ ಸಿಗುವುದಿಲ್ಲ.. ಹಾಗಾಗಿ ನಿಮ್ಮ ಮೆದುಳಿಗೆ ಸಂದೇಶ ರವಾನಿಸುವುದು ತಡವಾಗುತ್ತದೆ ಅಷ್ಟರಲ್ಲಿ ನೀವು ಪ್ರತಿಕ್ರಿಯೆಗೆ ಒಳಗಾಗಿ ಬಿಟ್ಟರೆ ಅದಕ್ಕೆ ಗೊಂದಲವಾಗುತ್ತದೆ.. ಆಗ ನಿಮಗೆ ತಲೆಸುತ್ತಿದ ಅನುಭವ.. ಅಥವಾ ಎದ್ದು ನಿಂತ ತಕ್ಷಣ ರಪ್ ಅಂತ ಬೀಳುತ್ತೀನಿ ಅನ್ನುವ ಅನುಭವ ಅಥವಾ ಕೆಲವೊಮ್ಮೆ ಬೀಳಲೂಬಹುದು.. " ಎಂದರು.. ಮತ್ತೆ ಹೇಗೆ ನಿಧಾನವಾಗಿ ತಿರುಗಬೇಕು.. ಹೇಗೆ ನಿಧಾನವಾಗಿ ನಿಲ್ಲಬೇಕು ಎಂದು ತೋರಿಸಿದರು.. ಅಮ್ಮನಿಗೆ ಅರ್ಥವಾಯಿತು..ಸುಮ್ಮನೆ ನಕ್ಕರು..

ಹೊರಗೆ ಬರುವಾಗ.. ನನ್ನ ತರಲೆ ಬುದ್ದಿಗೆ ಒಂದು ವಿಚಾರ ಹೊಳೆಯಿತು,, "ಅಮ್ಮಾ ನೀನು ಮಹಾದೇವಿ ಧಾರವಾಹಿ ನೋಡುತ್ತೀಯಲ್ಲವೇ.. ಅಲ್ಲಿನ ಪ್ರತಿಪಾತ್ರಗಳು ತಮಗೆ ಎರಡೆರಡು ಜನ್ಮ ಇದೆ ಎನ್ನುವ ರೀತಿಯಲ್ಲಿ ನಿಧಾನವಾಗಿ ಚಲಿಸುತ್ತವೆ.. ಮಾತಾಡುತ್ತವೆ.. ನೀನು ಹಾಗೆ ಮಾಡು ... "ಜಾಜಿ ಇಲ್ಲಿ ಬಾ ಎಂದು ಕರೆದರೆ" ಮೈನಸ್ ೫ ಕಿಮಿ ವೇಗದಲ್ಲಿ ಜಾಜಿ ಬರುತ್ತಾಳೆ.. ಬಂಗಾರಿ ಬೇಗ ಬಾರೋ ಅಂದರೆ ತಾನು ಬರಲು ಸಿದ್ಧವಾಗುವ ಮೊದಲೇ ಕೆನ್ನೆಯಲ್ಲಿ ಮೂಡುವ  ಗುಳಿಗಳನ್ನು ತೋರಿಸುತ್ತಾ ಆಮೇಲೆ ಮೈನಸ್ ೧೦ ಕಿಮಿ ವೇಗದಲ್ಲಿ ಓಡಲು ಶುರುಮಾಡುತ್ತಾನೆ.. .. " ಇನ್ನೂ ಹೇಳುತ್ತಿದ್ದೆ ಅಷ್ಟರಲ್ಲಿ ತಲೆಯ ಮೇಲೆ ಟಪ್ ಅಂತ ಏನೋ ಬಿತ್ತು.. ನಾನು ಜಾಜಿಯ ತರಹ ನಿಧಾನವಾಗಿ ತಿರುಗಿದೆ.. ಅಮ್ಮ ನನ್ನ ತಲೆಗೆ ಒಂದು ಬಿಟ್ಟಿದ್ದರು ಸರಿಯಾಗಿ.. :-)
ಚಿತ್ರ ಕೃಪೆ : ಗೂಗಲೇಶ್ವರ 

"ಯಾಕಮ್ಮ .. "ಹುಸಿ ಮುನಿಸಿನಿಂದ ಕೇಳಿದೆ..
"ಅಲ್ಲಿ ನೋಡು ಮಂಗಾ" ಅಂತ ಅಮ್ಮ ಆಸ್ಫತ್ರೆಯ ಹಜಾರದಲ್ಲಿದ್ದ ಗಣಪನ ಮೂರ್ತಿಯನ್ನು ತೋರಿಸಿದರು..
ಆ ವಿನಾಯಕ..
"ನೋಡು ಶ್ರೀ ನಿನಗೆ ತಾಳ್ಮೆ ಕಲಿಯಬೇಕೆಂದರೆ ೧) ಸತ್ಯ ಹರಿಶ್ಚಂದ್ರನ ಕಥೆ ಕೇಳು
                                                                ೨) ಶ್ರೀಕೃಷ್ಣನ ಕಥೆ ಓದು
                                                                 ೩) ಕನ್ನಡದ ಜೀ ಟಿ.ವಿಯಲ್ಲಿ ಬರುವ ಮಹಾದೇವಿ ಧಾರವಾಹಿ ನೋಡು..

ಜೋರಾಗಿ ನಗಲು ಶುರುಮಾಡಿದೆ.. ಗಣಪನು ನಕ್ಕ.. ತಕ್ಷಣ... ತನ್ನ ಸೊಂಡಿಲನ್ನು ಮೇಲೆ ಮಾಡಿ ಉಶ್ .. ಸದ್ದು ಇದು ಆಸ್ಪತ್ರೆ ಎಂದು ಹೇಳುತ್ತಾ ತಾನೇ ನಕ್ಕ!!!