Wednesday, June 18, 2014

ಜನುಮ ಜನುಮದ ಅನುಬಂಧ.....!

ಅಣ್ಣಾವ್ರ ಹಾಲು ಜೇನು ಚಿತ್ರದ ಹಾಡು ಜೋರಾಗಿ ನನ್ನ ಕಾರಿನಲ್ಲಿ ಬರುತ್ತಿತ್ತು... 

"ಶ್ರೀ ರಂಗನಾಥನಂತೆ ಮಲಗಿಹ ನಿನ್ನ ಕಂಡೆ.. ಆನೆಯ ಮೇಲೆ ಅಂಬಾರಿ ಕಂಡೆ...  ಅಂಬಾರಿ ಒಳಗೆ ನಿಮ್ಮನ್ನೇ ಕಂಡೆ.. ನನ್ನೇ ನಾ ಕಂಡೆ.. ನಿಮ್ಮೊಳಗೆ ನನ್ನೇ ನಾ ಕಂಡೆ.. "

ಕಾರ್ ಸ್ಟೀರಿಯೋ ಯಾಕೋ ನನ್ನ ಕಡೆಯೇ ನೋಡಿ.. ಅಣಕಿಸಿದಂತೆ ಭಾಸವಾಯಿತು.. "ಏನೋ ಶ್ರೀಕಾಂತ ಇದು... ಚಿ. ಉದಯಶಂಕರ್  ಬರೆದಿರುವ ಸಾಹಿತ್ಯವೆ ಬೇರೆ ನಿನ್ನ ಕಾರಿನಲ್ಲಿ ಬರುತ್ತಿರುವ ಸಾಹಿತ್ಯವೇ ಬೇರೆ.. ಏನಿದರ ಕಥೆ.. ನೋಡು ಶ್ರೀ ಸುಮ್ಮನೆ ನೇರವಾಗಿ ಕಥೆ ಹೇಳುವುದಾದರೆ ಹೇಳು.. ನೀನು ನಿನ್ನ ವಿಚಿತ್ರ ಶೈಲಿಯಲ್ಲಿ ಕಥೆ ಹೇಳುವುದಾದರೆ ನಾ ಕೇಳಲು ಸಿದ್ದನಿಲ್ಲ.. "

"ಇಲ್ಲಪ್ಪ.. ಸುಮ್ಮನೆ ಮೆಗಾ ಧಾರಾವಾಹಿ ತರಹ ರಬ್ಬರ್ ಮಾಡೋಲ್ಲ.. ಸಂಕ್ಷಿಪ್ತವಾಗಿಯೇ ಹೇಳಿ ಬಿಡುತ್ತೇನೆ..  "

"ಹಾ ಸರಿ.. ಶುರು ಮಾಡು"

"ಮೈಸೂರು ರಾಜ್ಯ ಎಂದೇ ಹೆಸರಾಗಿದ್ದ ಒಂದು ಕಾಲದ ಸಾಂಸ್ಕೃತಿಕ ನಗರಿ... ಇನ್ನೂ ರಾಜ ಪರಂಪರೆಯನ್ನು ಜೀವಂತವಾಗಿ ಉಳಿಸಿಕೊಂಡ ಹಲವು ಪ್ರದೇಶಗಳಲ್ಲಿ ಇದು ಕೂಡ ಒಂದು.. ಮಲ್ಲಿಗೆ ಹೂವು, ಸಿಹಿ ತಿನಿಸು, ರೇಷ್ಮೆ ಸೀರೆ ಇವೆಲ್ಲ ಪ್ರಖ್ಯಾತಗೊಂಡಿದ್ದವು.. ಆದರೆ ಅವಕ್ಕೆಲ್ಲ ಮೈಸೂರು ಎನ್ನುವ ಪದವನ್ನು ತಮ್ಮೊಳಗೆ ಸೇರಿಸಿಕೊಂಡು ಅದನ್ನು ಒಂದು ಬ್ರಾಂಡ್ ಮಾಡಿಬಿಟ್ಟವು.. "

"ಹಾ ಮುಂದೆ"

"ಹಾಗೆಯೇ ನಮ್ಮ ಬ್ಲಾಗ್ ಲೋಕದಲ್ಲಿ ಮೈಸೂರು ಎಂದರೆ ಧುತ್ ಅಂತ ಎದುರಿಗೆ ಬರುವುದು.. ನಿಮ್ಮೊಳಗೆ ನಾನು.. ನಿಮ್ಮೊಳಗೊಬ್ಬ ನಾನು.. ನಿಮ್ಮೊಳಗೊಬ್ಬ ಬಾಲೂ ಅಂತ ನಸು ನಗುತ್ತಾ.. ಅರ್ಜುನ ತನ್ನ ಬತ್ತಳಿಕೆಯಿಂದ ಹಸ್ತಿನಾಪುರದಲ್ಲಿ ವಿಧ್ಯಾಭ್ಯಾಸ ಮುಗಿಸಿಕೊಂಡು ಬಂದ  ಮೇಲೆ ಅನೇಕ ಚಮತ್ಕಾರಗಳನ್ನು ತೋರಿದ ಹಾಗೆ.. ಇವರು ಕೂಡ ಸದಾ ಕ್ಯಾಮೆರ ಧಾರಿ.. ಇವರ ದೃಷ್ಟಿಗೆ ಬೀಳದ ಸುಂದರ ಸನ್ನಿವೇಶಗಳು ಇರಲು ಸಾಧ್ಯವೇ ಇಲ್ಲ ಅನ್ನುವಷ್ಟು ಕರಾರುವಾಕ್ ಇವರ ಛಾಯಗ್ರಾಹಕ ಶಕ್ತಿ.. "

"ಹಾ... "

"ರಾಮ, ಅರ್ಜುನ, ಏಕಲವ್ಯ ಇವರೆಲ್ಲ ಶಭ್ದವೇದಿ ವಿಧ್ಯೆಯಲ್ಲಿ ನಿಪುಣರು.. ಹಾಗೆಯೇ ಇವರು ಕೂಡ .. ಅದು ಎಲ್ಲಿರುತ್ತಾರೆ.. ಹೇಗೆ ಚಿತ್ರ ತೆಗೆಯುತ್ತಾರೆ.. ಆ ದೇವನಿಗೆ ಗೊತ್ತು.. ಆ ಚಿತ್ರಗಳನ್ನು ತೆಗೆದು.. ಅದನ್ನು ಪರಿಷ್ಕರಿಸಿ... ಅದಕ್ಕೆ ಒಪ್ಪುವ ಹಾಗೆ ಪದಗಳ ಪೋಷಾಕು ತೊಡಿಸಿ.. ಅವರ ಅಭಿಮಾನಿಗಳ ಮುಂದೆ ಇಟ್ಟಾಗ.. ಹಸಿದವರ ಮುಂದೆ ಇಡುವ ಊಟದಷ್ಟೇ ಸೊಗಸು.."

"ಓಹೊ.. ಸರಿ ಸರಿ ಈಗ ಅರ್ಥವಾಯಿತು.. ನಿನ್ನ ಕಾರು ಮೈಸೂರು ರಸ್ತೆಯಲ್ಲಿ ಸಾಗುತ್ತಿದೆ.. ಅದಕ್ಕೆ ಹಾಡಿನ ಸಾಲುಗಳು ಕೂಡ ಅವರಿಗೆ ಅಭಿನಂದನೆಗಳನ್ನು ಸಲ್ಲಿಸುತ್ತಿವೆ.. ಅಲ್ಲವೇ..ಶ್ರೀ "

"ಹೌದು ನೀ ಹೇಳಿದ್ದು ಸರಿ.. ಮೈಸೂರು ಪಾಕ್, ಮೈಸೂರು ಮಲ್ಲಿಗೆ, ಮೈಸೂರು ಸಿಲ್ಕ್ ಜೊತೆಯಲ್ಲಿ ಮೈಸೂರು ಬಾಲಣ್ಣ ಎಂದೇ ಹೆಸರಾಗಿರುವ ಬಾಲೂ ಸರ್.. ನಮ್ಮ ಆತ್ಮೀಯ ಬಳಗದ ಪ್ರಮುಖರು.. ಅದಕ್ಕೆ ಮೈಸೂರು ಮತ್ತೆ ಬಾಲೂ ಸರ್ ಎರಡಕ್ಕೂ ಬಿಡಿಸಲಾರದ ನಂಟು.. ಬಾಲೂ ಸರ್ ಎಂದರೆ... ಶ್ರೀ ರಂಗನಾಥ ಕೂಡ ಒಮ್ಮೆ ಎದ್ದು ಆಶೀರ್ವಾದ ನೀಡುತ್ತಾರೆ"

"ಶ್ರೀ.. ನಿನ್ನ ಶೈಲಿಯಲ್ಲಿ.. ಅವರು ನಿನಗೆಷ್ಟು ಆಪ್ತರು.. ದಯಮಾಡಿ ಹೇಳು.. ಇದು ನಿನ್ನ ಶೈಲಿಯಲ್ಲಿಯೇ ಇರಬೇಕು.. "

"ಖಂಡಿತ ಹೇಳುತ್ತೇನೆ ..  ಶ್ರೀ ಪುಟ್ಟಣ್ಣ ಕಣಗಾಲ್ ಅವರ ಚಿತ್ರಗಳ ಬಗ್ಗೆ ನನಗೆ ಅರಿವಾದ ವಿಚಾರಗಳನ್ನು ಬರೆಯಲು ಶುರು ಮಾಡಿ ತಿಂಗಳುಗಳೇ ಆಗಿದ್ದವು.. ಕೆಲಸದ ಒತ್ತಡದಿಂದ ಮುಂದುವರೆಸಲು ಆಗಿರಲಿಲ್ಲ... ಒಂದು ಮುಸುಕಿನ ಹೊತ್ತು.. 

"ಲೋ ಶ್ರೀ.. ಶ್ರೀಕಾಂತ.. ಏಳೋ.. ಯಾಕೋ ನನ್ನ ಚಿತ್ರಗಳ ಬಗ್ಗೆ ಬರೆಯುವುದು ನಿಲ್ಲಿಸಿಬಿಟ್ಟಿದ್ದೀಯ.... ನೀ ಬರೆವ ಬರಹಗಳಿಗೆ ಕಾಯುತ್ತಿರುವೆ.. " ಯಾರೋ ಕೂಗಿದಂತೆ ಭಾಸವಾಯಿತು.. ಕಣ್ಣು ಬಿಟ್ಟೆ.. ಗಾಬರಿ ಆಶ್ಚರ್ಯ.. ಎದುರಿಗೆ ಪುಟ್ಟಣ್ಣ ಕಣಗಾಲ್.. 

"ಗುರುಗಳೇ ನಮಸ್ಕಾರ.. ಏನಿದು.. ಮಾಯೆ.. "

"ನಿನ್ನ ಬ್ಲಾಗ್ ನೋಡುತ್ತಿದ್ದೆ.. ಬೆಳ್ಳಿ ಮೋಡ, ಮಲ್ಲಮ್ಮನ ಪವಾಡ ಆದ ಮೇಲೆ ಮುಂದಿನ ಚಿತ್ರದ ಬಗ್ಗೆ ಬರೆದೆ ಇಲ್ಲ ಅದಕ್ಕೆ ನೆನಪಿಸಲು ಬಂದೆ.. " 

ನಾ ಏನೋ ಹೇಳಲು ಬಾಯಿ ತೆರೆದೇ.. ತಕ್ಷಣ.. ಒಂದು ಆತ್ಮೀಯ ಹಸ್ತ ನನ್ನ ಹೆಗಲ ಮೇಲೆ ಬಂತು.. ನನ್ನ ಬೆನ್ನು ತಟ್ಟಿ "ಪುಟ್ಟಣ್ಣಾಜಿ.. ದಯಮಾಡಿ ಶ್ರೀಕಾಂತ್ ಜಿ ಯನ್ನು ಬಯ್ಯಬೇಡಿ.. ಅವರು ಬರೆಯುತ್ತಾರೆ.. ನಿಮ್ಮ ಎಲ್ಲಾ ಚಿತ್ರಗಳ ಬಗ್ಗೆ ಅವರು ಬರೆಯುತ್ತಾರೆ.. ನಾ ಅವರ ಬೆನ್ನ ಹಿಂದೆ ಇರುತ್ತೇನೆ.. ಕೆಲಸದ ಒತ್ತಡ ಅಪಾರವಾಗಿದೆ.. ಹಾಗಾಗಿ ಅವರಿಗೆ ಬರೆಯಲು ಸಾಧ್ಯವಾಗಿಲ್ಲ.. ನಿಮ್ಮ ಎಲ್ಲಾ ಚಿತ್ರಗಳ ಬಗ್ಗೆ ಅವರು ಬರೆದೆ ಬರೆಯುತ್ತಾರೆ ಅದರ ಜವಾಬ್ಧಾರಿ ನನ್ನದು.. " ಎಂದರು ಬಾಲೂ ಸರ್.. 

"ಓಕೆ ಬಾಲೂಜಿ.. ನಿಮ್ಮ ಅಭಿಮಾನದ ಅಭಯ ಹಸ್ತ ಶ್ರೀಕಾಂತನ ತಲೆಯ ಮೇಲೆ ಇದೆ.. ಹಾಗಾಗಿ ನಾ ಏನೂ ಹೇಳುವುದಿಲ್ಲ.. ಹಾಗೆಯೇ ನಾ ಹುಟ್ಟಿದ ಊರನ್ನು ನೋಡುವ ಅವನ ಕನಸನ್ನು ನನಸು ಮಾಡಿದ್ದು ನೀವು... ನನ್ನ ತಮ್ಮ ನರಸಿಂಹ ಶಾಸ್ತ್ರಿಯ ಹತ್ತಿರ ಬೆಳ್ಳಿಮೋಡದ ಚಿತ್ರೀಕರಣದ ಕಥೆಯನ್ನು ಲೋಕಕ್ಕೆ ತಿಳಿಯುವಂತೆ ಮಾಡಿದ್ದು ನೀವು.. ನಿಮ್ಮ ಬಗ್ಗೆ ನನಗೆ ಅಪಾರ ಗೌರವ.. ಸರಿ ನಾ ಹೋಗಿ ಬರುವೆ.. ಬೇಗ ಬೇಗ ಲೇಖನವನ್ನು ಬರೆಯಲು ಹಿತವಾದ ಒತ್ತಡವನ್ನು ಶ್ರೀ ಮೇಲೆ ಹಾಕಿ.. " ನಸು ನಗುತ್ತಾ ಪುಟ್ಟಣ್ಣ ಕಣಗಾಲ್ ಹೊರಟೆ ಬಿಟ್ಟರು.. 

ಶ್ರೀ ಪುಟ್ಟಣ್ಣ ಕಣಗಾಲ್ ಅವರ ಸಹೋದರ ಶ್ರೀ ನರಸಿಂಹ ಶಾಸ್ತ್ರಿ ಅವರ ಜೊತೆಯಲ್ಲಿ
(ಚಿತ್ರ ಕೃಪೆ - ಬಾಲೂ ಸರ್ )

ಬಿಟ್ಟ ಕಣ್ಣು ಬಿಟ್ಟ ಹಾಗೆಯೇ ಇತ್ತು... ಕನಸೋ ನನಸೋ ಒಂದು ಅರಿಯದು.. 

"ಹೀಗೆ.. ಒಬ್ಬರ ಕನಸ್ಸನ್ನು ನನಸು ಮಾಡಲು ಇವರು ಪಡುವ ಶ್ರಮ.. ಆ ಕನಸು ಅವರದೇ ಎಂದು ಅದನ್ನು ಹೆಗಲ ಮೇಲೆ ಹೊತ್ತು ನನಸು ಮಾಡುವ ತಾಕತ್ ನಮ್ಮ ಬಾಲೂ ಸರ್ ಅವರದು.. ಹಾಗಾಗಿ... ಪುಟ್ಟಣ್ಣ ಅವರು ಓಡಾಡಿದ ಜಾಗವನ್ನು ನೋಡಿ ಬರಲೇ ಬೇಕು ಎಂಬ ಹಠ ಹೊತ್ತ ಕನಸ್ಸನ್ನು ನನಸು ಮಾಡಿದ್ದು ಅಲ್ಲದೆ... ಕನಸಲ್ಲಿ ಪುಟ್ಟಣ್ಣ ಅವರು ನನ್ನನ್ನು ಹುಸಿ ಮುನಿಸಿನಿಂದ ಗದರಿಸಲು ಬಂದರೆ ಅಲ್ಲಿಯೂ ಕೂಡ ತಾವು ಬಂದು ನನ್ನನ್ನು ಬೆಂಬಲಿಸಿದರು.. ಇದಕ್ಕಿಂತ ಆತ್ಮೀಯತೆ ಇರಲು ಸಾಧ್ಯವೇ.. "

ಕಾರ್ ಸ್ಟೀರಿಯೋ ಒಂದು ಕ್ಷಣ ಮೌನ.. ಸಾಕ್ಷಾತ್ಕಾರ ಚಿತ್ರದ.. "ಜನುಮ ಜನುಮದ ಅನುಬಂಧ.. ಹೃದಯ ಹೃದಯಗಳ ಪ್ರೇಮಾನುಬಂಧ.. " ಹಾಡು ಶುರುವಾಯಿತು... 

ಇಂಥಹ ಸುಮಧುರ ಪ್ರೀತಿ ವಿಶ್ವಾಸ ಅಭಿಮಾನ ಎಲ್ಲವನ್ನು ಆ ಪುಟ್ಟ ನಗುವಿನಲ್ಲಿ ತುಂಬಿಕೊಂಡು ಸದಾ ಎಲ್ಲರನ್ನೂ ನಗಿಸುತ್ತಾ.. ಎಲ್ಲೋ ಒಂದು ಸಣ್ಣ ಝರಿಯಾಗಿ ಹುಟ್ಟುವ ಒಂದು ಒರತೆ.. ಹಾದಿಯಲ್ಲಿ ಸಿಕ್ಕಿದ್ದನ್ನೆಲ್ಲ ತನ್ನ ಒಡಲಲ್ಲಿ ಸೇರಿಸಿಕೊಂಡು ಸಮುದ್ರ ಆಗುವ ಹಾಗೆ.. ನಮ್ಮ ಬಾಲೂ ಸರ್ ತಮ್ಮ  ಮುಗ್ಧ ಪ್ರೀತಿಯಲ್ಲಿ ನಮ್ಮೆಲ್ಲರನ್ನೂ ಬರಸೆಳೆದುಕೊಂಡು ನಗು ನಗುತ್ತಾ ಸ್ನೇಹ ಪ್ರೀತಿ ಹಂಚುವ ಅವರ ಆತ್ಮೀಯ ಪ್ರೀತಿಯ ಪರಿಗೆ ನಮ್ಮ ಸಲಾಂ.. 

ಇಂದು ಅವರ ಜನುಮದ ದಿನ... ಅವರ ಬಗ್ಗೆ ಚುಟುಕು ಪ್ರೀತಿಯ ಪದಗಳನ್ನು ಬರೆಯುವುದು ಅಕ್ಷರಗಳಿಗೆ ಸಿಕ್ಕ ಗೌರವ ಅನ್ನಿಸುತ್ತದೆ.. ನಾ ಬರೆಯದೆ ಹೋದರೂ ಅಕ್ಷರಗಳೇ ಸಾಲಾಗಿ ನಿಂತು.. ಶ್ರೀ ನಾವೂ ಹೀಗೆ ಒಬ್ಬರಿಗೊಬ್ಬರು ಜೊತೆಯಲ್ಲಿ ನಿಲ್ಲುತ್ತೇವೆ.. ಅದೇ ಒಂದು ಲೇಖನವಾಗಿ ಬಿಡುತ್ತದೆ.. ಅನ್ನುತ್ತವೆ.. 

ಬಾಲೂ ಸರ್ ನಿಮ್ಮ ಜಗದಗಲದ ಪ್ರೀತಿ ವಿಶ್ವಾಸಕ್ಕೆ ನಾವೆಲ್ಲಾ ಚಿರಋಣಿಗಳು.. ನಿಮ್ಮ ಹುಟ್ಟು ಹಬ್ಬದ ಬ್ಲಾಗ್ ಜಗತ್ತಿನ ಒಂದು ಸಂಭ್ರಮಕ್ಕೆ ಸಂಭ್ರಮ...  ಬ್ಲಾಗ್ ಜಗತ್ತಿನ ಎಲ್ಲಾ ಹೃದಯಗಳಿಗೂ ನಿಮ್ಮ ಪ್ರೀತಿ ತಲುಪುತ್ತಿದೆ.. . ನಮ್ಮೆಲ್ಲರ ಆತ್ಮೀಯ ಶುಭ ಹಾರೈಕೆಗಳು ನಿಮ್ಮ ಸುಂದರ ದಿನವನ್ನು ಇನ್ನಷ್ಟು ಸುಂದರವಾಗಿ ಬೆಳಗಲಿ.. 

ಫೇಸ್ ಬುಕ್ ನ ಸಮಯದ ಗೆರೆಯನ್ನು ಬಂಧಿ ಮಾಡಿರಬಹುದು.. ಆದರೆ ನಮ್ಮೆಲ್ಲರ ಹೃದಯದಲ್ಲಿ ಅವರು ಮೂಡಿಸಿರುವ ಪ್ರೀತಿಯ ಗೆರೆಯನ್ನು ಬಂಧಿ ಮಾಡಲು ಸಾಧ್ಯವೇ ಇಲ್ಲ.. ನಮ್ಮ ಅಭಿಮಾನಪೂರಿತ ಮಾತುಗಳು ಅವರನ್ನು ತಲುಪಿಯೇ ತಲುಪುತ್ತದೆ.. 
ನಮ್ಮೊಡನೆ ಇರುವ ಸುಂದರ ಮನಸ್ಸಿನ ಬೇಟೆಗಾರ
(ಚಿತ್ರ ಕ್ರುಪ್ತೆ - ಬಾಲೂ ಸರ್)

ಹುಟ್ಟು ಹಬ್ಬದ ಶುಭಾಶಯಗಳು ಬಾಲೂ  ಸರ್.. !!!

Monday, May 19, 2014

ಕರಿಮಣಿ...ರಿಮಣಿ.. ಮಣಿಕಾಂತ.. ಸಾಧನೆಯ ಗಣಿ !!!.

ಚಿನ್ನ ಬೆಳ್ಳಿ ಎಂಬ ಲೋಹಗಳು ಬರಿ ಲೋಹಗಳಾಗಿದ್ದಾಗ.. ಮದುವೆಯಾದ ಹೆಣ್ಣು ಮಕ್ಕಳು ಕರಿಮಣಿ.. ರಸಗುಂಡು.. ಮಾಂಗಲ್ಯ ಇವನ್ನೆಲ್ಲ ಅರಿಶಿನದಲ್ಲಿ ಅದ್ದಿದ ದಾರದಲ್ಲಿ ಪೋಣಿಸಿ ಅದನ್ನು ಧರಿಸಿದಾಗ ಅವರ ಮೊಗದಲ್ಲಿ ಬೆಳಗುತಿದ್ದ ಆನಂದ..

ಆಹಾ ಆಹಾ ಅದನ್ನು ವರ್ಣಿಸಲು ವರ್ಣಮಾಲೆಯು ಸೋಲೊಪ್ಪಿಕೊಳ್ಳುತ್ತದೆ!!!

ಈ ಲೋಕದಲ್ಲಿ ಈ ಕಲಿಯುವ ಯುಗದಲ್ಲಿ ಸರ್ವಜ್ಣನೆ ಹೇಳಿದ ಹಾಗೆ ಬಲ್ಲವರಿಂದ ಕಲಿತು ವಿದ್ಯೆ ಎಂಬಾ ಮಹಾಪರ್ವತದಲ್ಲಿ ಕೂತೆ ಎನ್ನುವಂತೆ ಸುತ್ತ ಮುತ್ತಲು ಕಾಣುವ ಕತ್ತಲಲ್ಲಿ ಬೆಳಕನ್ನು ಹುಡುಕಿ ಆ ಬೆಳಕಿನ ದೀಪವನ್ನು ಹತ್ತಾರು ಮಾನಸ ಲೋಕಕ್ಕೆ ಒಯ್ಯುವ ತಾಕತ್ ಎಲ್ಲರಲ್ಲೂ ಇರುತ್ತ್ತದೆ.. ಅದನ್ನು ಅಳವಡಿಸಿ ಬೆಳೆಸಿಕೊಳ್ಳಬೇಕು..

ಬೆಳದಿಂಗಳ ಬಾಲೆ ಚಿತ್ರದಲ್ಲಿ ಅನಂತ್ ನಾಗ್ ಹೇಳುತ್ತಾರೆ ಮಾನವ ನಾಲ್ಕು ಹಂತದಲ್ಲಿ ಬೆಳೆಯುತ್ತಾನೆ..

ನಾ ಚೆನ್ನಾಗಿಲ್ಲ ಪ್ರಪಂಚ ಚೆನ್ನಾಗಿಲ್ಲ
ನಾ ಚೆನ್ನಾಗಿಲ್ಲ ಪ್ರಪಂಚ ಚೆನ್ನಾಗಿದೆ
ನಾ ಚೆನ್ನಾಗಿದ್ದೇನೆ ಪ್ರಪಂಚ ಚೆನ್ನಾಗಿಲ್ಲ
ನಾನು ಚೆನ್ನಾಗಿದ್ದೇನೆ ಪ್ರಪಂಚವೂ ಚೆನ್ನಾಗಿದೆ

ನಿಜವಾಗಿಯೂ ಈ ಮಾತುಗಳು ನನ್ನನ್ನೂ  ತುಂಬಾ ಕಾಡುತ್ತವೆ..

ಏನೋ ಶ್ರೀ ಇದು.. ಈ ಪಾಟಿ ಗರಗಸ ಅಂದುಕೊಂಡ್ರಾ.. ಇರಿ ಇರಿ ವಿಷಯ ಇದೆ..

****
ವಸುದೇವನಿಗೆ ಅಶರೀರವಾಣಿ ನುಡಿಯುತ್ತದೆ.. "ವತ್ಸ.. ಈಗ ಜನಿಸುವ ಮಗುವನ್ನು ಯಶೋದೆ ಬಳಿಗೆ ಬಿಡು.. ಅಲ್ಲಿಯೇ ಬೆಳೆಯಲಿ.. .. ಈ ಕೆಲಸ ಈ ಕ್ಷಣ ಆಗಬೇಕು"

ಸರಿ.. ವಸುದೇವನಿಗೆ ಅಶರೀರವಾಣಿ ಒಂದು ಘಂಟಾ ನಾದವಾಯಿತು.. ಸರಿ ಮಗುವನ್ನು ಹೊತ್ತು ನಡೆದೆ ಬಿಟ್ಟಾ..

ಜೋರಾದ ಮಳೆ.. ಘರ್ಜನೆ ಮಾಡುತ್ತಿದ್ದ ಮೋಡಗಳು, ಪೃಥ್ವಿಗೆ ಬರಿ ಸೂರ್ಯನಲ್ಲ ಬೆಳಕು ಕೊಡೋದು ನಾನು ಕೂಡ ಅನ್ನುವಂತೆ ಮಿಂಚು ಅವಾಗವಾಗ ತನ್ನ ಇರುವನ್ನು ತೋರಿಸುತ್ತಿತ್ತು...

ಗಕ್ಕನೆ ನಿಂತ ವಸುದೇವ.. ಕಾರಣ ಸೊಕ್ಕಿ ಉಕ್ಕಿ ಹರಿಯುತ್ತಿದ್ದ ಯಮುನೆ ತುಂಬಿ ಹರಿಯುತ್ತಿದ್ದಳು.. ವಸುದೇವ ಪ್ರಾರ್ಥಿಸಲಿಲ್ಲ ಆದರೆ ಲೋಕ ಕಲ್ಯಾಣಕ್ಕೆ ಅವತಾರ ಪುರುಷನ ಜನನವಾಗಿತ್ತು.. ಅಲ್ಲಿ ರೇ.. ಇಲ್ಲಾ ಎನ್ನುವ ಪದಗಳಿಗೆ ಅವಕಾಶವೇ ಇರಲಿಲ್ಲ..
ಯಮುನೆ ಹೆಣ್ಣು ಮಕ್ಕಳ ಬೈ ತಲೆಯಂತೆ ದಾರಿ ಮಾಡಿಕೊಟ್ಟಳು.. ಉಕ್ಕಿ ಹರಿಯುತ್ತಿದ್ದ ಯಮುನೆಯ ಮಧ್ಯೆ ನಿಧಾನವಾಗಿ ಹೆಜ್ಜೆ ಇಡುತ್ತಾ ಸಾಗಿದ.. ತಲೆಯ ಮೇಲೆ ಸೂರಾಗಿ ಆದಿ ಶೇಷನೆ ಬರುತ್ತಿದ್ದ.. !!

ಗೋಕುಲಕ್ಕೆ ಬಂದು.. ನಂದನ ಮನೆಯಲ್ಲಿ ಯಶೋದೆಯನ್ನು ಹುಡುಕಲು ಶುರು ಮಾಡಿದ.. ಯಶೋದೆ ಇಲ್ಲಾ..

ವಸುದೇವನಿಗೆ ಗಾಬರಿ.. ಅಯ್ಯೋ ಈಗ ಏನು ಮಾಡುವುದು ಎಂದು

ಮತ್ತೆ ಅಶರೀರವಾಣಿ "ವತ್ಸ ಗಾಬರಿ ಬೇಡ.. ಲೋಕಕಲ್ಯಾಣಕ್ಕೆ ಅವತಾರ ಎತ್ತಿರುವ ಈ ಮಹಾಪುರುಷ ಹೊಣೆ ನನ್ನದು.. ಯಶೋದೆ ಮಮತಾಮಯಿ .. ಸುಖ ನಿದ್ರೆಯಲ್ಲಿ ಇದ್ದಾಳೆ .. ನೀನು ಆ ಮಗುವನ್ನು ಇಲ್ಲಿಯೇ ಬಿಡು. ಸ್ವಲ್ಪ ಹೊತ್ತು ವಿರಮಿಸಿಕೋ.. ನಂತರ ನೀನು ಮಥುರಕ್ಕೆ ಹೊರಡಬಹುದು... ಇದರ ಮಧ್ಯೆ ಈ ಪುಸ್ತಕವನ್ನು ಓದು.. ಆಯಾಸ ಕಡಿಮೆ ಆಗುತ್ತದೆ...

ಅಲ್ಲಿ ಇಲ್ಲಿ ನೋಡಿದ ಮೇಲೆ.. ಅಲ್ಲಿ ಕೆಲವು ಪುಟಗಳು ಕಾಣಿಸಿದವು .

ಮೊದಲ ನೌಕೆ.
ಬಂಧುಗಳು..  ಮಿತ್ರರು.. ಸಹೃದಯ ಓದುಗರು..ಸಿನೆಮಾಸಕ್ತರು.. ಸಾಹಿತ್ಯ ಅಭಿರುಚಿಯುಳ್ಳವರು.. ತಮ್ಮೊಳಗೆ ಒಂದು ಪ್ರಪಂಚವನ್ನು ತೆರೆದಿಡುವ ಬ್ಲಾಗ್  ಮಿತ್ರರು ಹೆಜ್ಜೆ ಇಡುತ್ತಾ ಬೆಂದಕಾಳೂರಿನ ಜೆ. ಸಿ ರಸ್ತೆಯಲ್ಲಿನ ರವಿಂದ್ರ ಕಲಾಕ್ಷೇತ್ರಕ್ಕೆ ದಾಂಗುಡಿ ಇಡುತ್ತಿದ್ದರು.. ನಕ್ಕು ನಲಿಯುವ ಮಾತುಗಳು, ಬಹಳ ದಿನಗಳಾದ ಮೇಲೆ ಭೇಟಿ ಮಾಡುವ ಗೆಳೆಯರು.. ಇವರ ಕಲರವಕ್ಕೆ ಕಲಾಕ್ಷೇತ್ರ ಸಾಕ್ಷಿಯಾಗಿತ್ತು.. ಸುಂದರ ವಧುವಂತೆ ಸಜ್ಜಾಗಿತ್ತು ಕಲಾಕ್ಷೇತ್ರ.. !

ಎರಡನೇ ದೋಣಿ 
ವೇದಿಕೆ ಸಜ್ಜಾಗಿತ್ತು.. ಮುದ್ದು ಪುಟಾಣಿಗಳಿಬ್ಬರು ಕೆಲ ನಿಮಿಷಗಳ ಕಾಲ ಎಲ್ಲರನ್ನು ನಿಬ್ಬೆರಗು ಗೊಳಿಸಿ ಮಾಡಿದ ನೃತ್ಯ ಆಹಾ ವರ್ಣಿಸಲು ಎರಡು ಮಾತಿಲ್ಲ.. ಇಡಿ ಕಾರ್ಯಕ್ರಮದ ಕೇಂದ್ರ ಬಿಂಧುವಿನ ಕುಡಿ ಆ ಎರಡು ಪುಟಾಣಿಗಳಲ್ಲಿ ಒಂದಾಗಿತ್ತು.
ಅಂಗೀಕ ಅಭಿನಯ,, ಆ ಮುದ್ರೆಗಳು, ಹಾವ ಭಾವ, ತಾಳಕ್ಕೆ ತಕ್ಕಂತೆ ಇಡುತ್ತಿದ್ದ ನೃತ್ಯದ ಮತ್ತುಗಳು ಆಹಾ.. ಸೂಪರ್ ಸೂಪರ್ ಅನ್ನಿಸುವಂತೆ ಮಾಡಿದ್ದವು.

ಮೂರನೇ ಹಾಯಿ ದೋಣಿ
ನೆರೆದಿದ್ದ ಸಹೃದಯ ಮಿತ್ರರಿಗೆ ಬರಿ ಉಪಚಾರ ಮಾತ್ರವಲ್ಲ ಉಪಹಾರವೂ ಇತ್ತು.. ಉಪಹಾರ ನಾಲಿಗೆಯನ್ನು ತಣಿಸಿದರೆ ಸೊಗಸಾದ ಉಪಾಸನ ಮೋಹನ್ ತಂಡದಿಂದ ಕಿವಿಗಳಿಗೆ ರಸದೌತಣ ಒದಗಿಸಿತು. ಪುಂಕಾನುಪುಂಕವಾಗಿ ಅರಳಿದ ಗೀತೆಗಳು ಒಂದಕ್ಕಿಂತ ಒಂದು ಮಧುರ ಅಮರ. ಮನತುಂಬಿ ಹಾಡಿದಾಗ ಕರ್ಣವೂ ಕೂಡ ಕಿವಿ ತುಂಬಿ ಕೇಳುತ್ತದೆ ಎನ್ನುತ್ತಾರೆ.. ಆ ಮಾತು ನಿಜವೆಂಬ ಅರಿವಾಯಿತು.

ಹುಟ್ಟು ಹಾಕುತ್ತಾ ಸಾಗಿದ ಯಾನ
ಅಲ್ಲಿದ್ದವರಿಗೆಲ್ಲಾ ಎರಡು ಯೋಚನೆ.. ಒಂದು "ನಮೋ" ದೇಶವನ್ನು ಹೇಗೆ ಮುನ್ನೆಡೆಸುತ್ತಾರೆ.. ಎರಡನೆಯದು ತೀರದ ಭಾವ ಯಾನ ಯಾವಾಗ ಅನಾವರಣಗೊಳ್ಳಲಿದೆ..

ಯೋಚನೆಯೇ ಬೇಡ.. ಮೊದಲನೆಯದು ನಡೆಯಲು ನಂಬಿಕೆ ವಿಶ್ವಾಸಗಳು ಬೇಕು.. ಎರಡನೆಯದನ್ನು ಅನುಭವಿಸಲು ಭಾವುಕ ಮನಸ್ಸು ಇರಬೇಕು.  ಅದು ಶತಃಸಿದ್ಧವಾಗಿತ್ತು. ಕಾರಣ ಅಲ್ಲಿದ್ದವರೆಲ್ಲ ಸುಂದರ ಮನದ ಸುಮಧುರ ಕುಸುಮಗಳು.
ಪ್ರಖ್ಯಾತ ತಾರೆ ಶ್ರೀ ಪ್ರಕಾಶ್ ರೈ ಜ್ಯೋತಿ ಬೆಳಗಿದರು.. ಅವರ ಜೊತೆಯಲ್ಲಿ ಹೆಸರಾದ ನಿರ್ದೇಶಕ ಶ್ರೀ ಯೋಗರಾಜ್ ಭಟ್, ತಮ್ಮ ಸುಂದರ ಉಡುಗೆ ತೊಡುಗೆಗೆ ಹೆಸರಾದ ಶ್ರೀ ವಿಶ್ವೇಶರ ಭಟ್.. ಇವರೆಲ್ಲ ಒಬ್ಬರಾದ ಮೇಲೆ ಒಬ್ಬರು ಜ್ಯೋತಿ ಬೆಳಗಿಸಿ ಕಾರ್ಯಕ್ರಮವನ್ನು ಶುರು ಮಾಡಿದರು.

ಅಂತಃಕರಣದ ಅಲೆಗಳ ಮೇಲೆ ಯಾನ 
ತಾನು ಬೆಳಕಿಗೆ ಬಂದರೆ ಸಾಕು ಅನ್ನದೆ ಬೆಳಕಲ್ಲಿದ್ದು ಬೆಳಕಿಗೆ ಬರಲು ಯೋಚಿಸದ ಹಲವಾರು ಸಾಧಕರನ್ನು ತಮ್ಮ ಅಕ್ಷರಗಳ ಲೋಕದಿಂದ ಪರಿಚಯಿಸುತ್ತಾ ಅವರ ಸಾಧನೆಗಳ ಪಕ್ಷಿನೋಟ ಕೊಡುತ್ತಾ, ಅವರನ್ನು ವೇದಿಕೆಗೆ ಬರಮಾಡಿಕೊಂಡು ನಾಲ್ಕು ಜನರ ಮಧ್ಯೆದಲ್ಲಿ ನಿಲಿಸಿ ನೂರಾರು ಅಭಿಮಾನಿಗಳ ಸಮ್ಮುಖದಲ್ಲಿ ಅವರನ್ನು ಗೌರವಿಸಿ ಕಿರುಕಾಣಿಕೆ ನೀಡಿದ್ದು ಸ್ವಾಗತಾರ್ಹ ಕಾರ್ಯಕ್ರಮ.

ಆ ಸಾಧಕರ ಪರಿಶ್ರಮ, ಅವರ ಧೃಡ ಮನಸ್ಸು, ನಾ ಇದ್ದರೇ ನಿಮ್ಮೆಲ್ಲರನ್ನು ಗುರಿ ತಲುಪಿಸುತ್ತೇನೆ ಎನ್ನುವಂಥಹ ಗಟ್ಟಿ ಧ್ಯೇಯ ಇವುಗಳ ಸಮಾಗಮವೇ ಶ್ರೀ ಮೆಡಿಸಿನ್ ಬಾಬ, ಐ ಕ್ಯಾನ್ ಜೀವಿ, ಹೀಗೆ ಹಲವಾರು ಸಾಧಕರನ್ನು ರಂಗದ ಮೇಲೆ ನಿಲ್ಲಿಸಿದ್ದು ಶ್ಲಾಘನೀಯ ಶ್ರಮ.

ನಾ ಗೆದ್ದರೆ ಗೆಲುವು ನನದು ಎನ್ನುವ ಈ ಲೋಕದಲ್ಲಿ ನಾ ಗೆದ್ದಿದ್ದರೆ ಆ ಗೆಲುವು ನನದಲ್ಲ ನಿಮದು ನನ್ನ ಕುಟುಂಬದ್ದು ನನ್ನ ಬಂಧು ಮಿತ್ರರದ್ದು ಎನ್ನುತ್ತಾ ತಮ್ಮ ಗೆಲುವಿನ ಲೋಕದಲ್ಲಿ ಜೊತೆಯಲ್ಲಿ ನೆರಳಾಗಿ ನಿಂತ ಎಲ್ಲರನ್ನೂ ಪರಿಚಯಿಸಿ ಅಭಿನಂದಿಸಿದ್ದು ಸೂಪರ್ ಸೂಪರ್ ಎನ್ನುವಂತೆ ಮಾಡಿತ್ತು.

ತಂದೆ ತಾಯಿ, ಗುರುಗಳು, ಸುಮಧುರ ಮನಸ್ಸಿನ ಕವಿಗಳು, ದಾರಿ ತೋರಿದವರು, ದಾರಿ ಹಾಕಿ ಕೊಟ್ಟವರು, ದಾರಿ ಮಾಡಿಕೊಟ್ಟವರು ಎಲ್ಲರನ್ನು ಸ್ಮರಿಸುತ್ತಾ ಅವರಿಗೆ ಕಿರುಕಾಣಿಕೆ ಸಲ್ಲಿಸಿದ್ದು ಇಡಿ ಕಾರ್ಯಕ್ರಮದ ವಿಶೇಷ.

ವಸುದೇವನ ಆ ಚಿಕ್ಕ ಚಿಕ್ಕ ಪತ್ರಗಳನ್ನು ಓದಿದ ಮೇಲೆ ಸುಸ್ತು ಆಯಾಸ ಎಲ್ಲವೂ ಹೂವಿನ ಹಾಗೆ ಹಗುರಾಗಿತ್ತು.. ಅರೆ ಇದೇನಿದು ಈ ರೀತಿಯ ಕಾರ್ಯಕ್ರಮವೂ ಇರುವುದೇ.. ಲೋಕ ಕಲ್ಯಾಣಕ್ಕೆ ಅವತಾರವೆತ್ತಿರುವ ಈ ಪುಣ್ಯ ಪುರುಷನ ಸನ್ನಿಧಾನದಲ್ಲಿ ಈ ರೀತಿಯ ಸುಂದರ ವಿವರ..
ಅವನ ಮನಸ್ಸು ಹಕ್ಕಿಯ ಹಾಗೆ ಹಾರಾಡತೊಡಗಿತು..

ಸರಿ ಅಲ್ಲಿಂದ ಹೊರಟ ವಾಸುದೇವ ಯಮುನೆ ಹತ್ತಿರ ಮತ್ತೆ ಬಂದಾಗ.. ಯಮುನೆ ಹೇಳಿದಳು ವಸುದೇವ ನಾ ನಿನಗೆ ದಾರಿ ಮಾಡಿಕೊಟ್ಟೆ ಎಂಬ ಅಹಂ ನನ್ನ ಕಾಡುತ್ತಿತ್ತು ಆದರೆ.. ಆ ಕಾರ್ಯಕ್ರಮದ ಬಗ್ಗೆ ನೀನು ಓದಿ.. ನಿನ್ನ ಮನದಲ್ಲಾಗುತ್ತಿರುವ ಅಲೆಗಳ ಯಾನ ನೋಡಿದಾಗ ಆಹಾ ಇಂತಹ ಸುಮಧುರ ಮನಗಳು ಸುರಿಸುವ ಆನಂದ ಭಾಷ್ಪದಿಂದ ನನ್ನ ಒಡಲು ತುಂಬಿ ಹರಿಯುತ್ತಿದೆ ಎನ್ನಿಸುತ್ತಿದೆ..

ಕಂದಾ ವಾಸುದೇವ.. ಇಂತಹ ಸುಂದರ ಹೂವಿನ ಮನಸ್ಸಿನ ಜೀವಿಯನ್ನು ನಾ ನಿನ್ನ ಮನದಲ್ಲಿ ಕಂಡಿದ್ದು ನನಗೆ ಬಲು ಸಂತಸವನ್ನು ಹೊತ್ತು ತಂದಿದೆ.. ಅವರ ಜನುಮದಿನಕ್ಕೆ ಈ ಲೇಖನ ಒಂದು ಸುಂದರ ಚೌಕಟ್ಟು ಎನ್ನುವುದು ಬಹಳ ಸುಂದರ ಅನುಭವ.

ಭಾವ ತೀರ ಯಾನದ ನಾವಿಕ ಮಣಿಕಾಂತ್ ಅವರ ಸುಂದರ ಪರಿಶ್ರಮ ಈ ಕಾರ್ಯಕ್ರಮದ ಪ್ರತಿ ಕ್ಷಣದಲ್ಲೂ ಮಾರ್ಧನಿಸುತ್ತಿತ್ತು ಅನ್ನಿಸುತ್ತಿದೆ.. ವತ್ಸ ಇವರ ಈ ಮನೋಜ್ಞ ಕಾರ್ಯ ಎಲ್ಲರನ್ನು ಎಲ್ಲವನ್ನೂ ತಲುಪಲಿ ಮತ್ತು ಅವರ ಈ ಸುಂದರ ಜನುಮದಿನ ಸದಾ ಆನಂದವನ್ನು ಹೊತ್ತು ಹೊತ್ತು ತರಲಿ ಎಂದು ಹಾರೈಸುತ್ತೇನೆ.

**********

ಇಡಿ ಕಾರ್ಯಕ್ರಮ ಒಂದು ಶಿಸ್ತಿನ ಕವಾಯತು ನಡೆದಂತೆ ನಡೆಯಿತು. ಮಾತಾಡಿದ ಪ್ರತಿ ಅತಿಥಿಗಳು, ತಮ್ಮ ಭಾವವನ್ನು ಹರವಿಕೊಂಡದ್ದು ಒಂದು ಉತ್ತಮ ಕಾರ್ಯಕ್ರಮ ಹೀಗೆ ಇರಬೇಕು ಎನ್ನಿಸುವಂತೆ ತೆರೆದಿಟ್ಟಿತು.

ಮಣಿಕಾಂತ್  ಸರ್ ನಿಮ್ಮ ನಿರ್ಮಲ ನೆಗೆ ಎಷ್ಟು ತೂಕಬದ್ಧವಾಗಿದೆಯೋ ಅಷ್ಟೇ ನಿಮ್ಮ ಹೂವಿನ ಮನಸ್ಸು ಕೂಡ.. ನಿಮ್ಮ ಕಾರ್ಯಕ್ರಮಕ್ಕೆ ಅಪಾರ ಸಂಖ್ಯೆಯಲ್ಲಿ ಬಂದಿದ್ದ ಅಭಿಮಾನಿಗಳು ನಿಮ್ಮ ಈ ಪ್ರೀತಿ ವಿಶ್ವಾಸಕ್ಕೆ ಸಾಕ್ಷಿ. ಅಲ್ಲಿ ನಡೆದ ಪ್ರತಿಕ್ಷಣವನ್ನು ದಾಖಲಿಸಬೇಕು ಎಂಬ ಹಂಬಲ ನನ್ನದು. ಆದ್ರೆ ಚಿತ್ರಗಳು ಹೇಳುವ ಕಥೆ ಕೆಲವೊಮ್ಮೆ ಅಕ್ಷರಗಳು ಹೇಳಲಾರವು ಅನ್ನಿಸಿತು . ಹಾಗಾಗಿ ಇಡಿ ಕಾರ್ಯಕ್ರಮದ ತುಣುಕುಗಳನ್ನು ಚಿತ್ರಗಳನ್ನಾಗಿ ಇಲ್ಲಿಯೇ ಹರಡಿ ಬಿಟ್ಟಿದ್ದೇನೆ. .














ನಿಮ್ಮ ಜನುಮದಿನಕ್ಕೆ ನಿಮ್ಮದೇ ಸಮಾರಂಭದಲ್ಲಿ ಅನಾವರಣಗೊಂಡ ಭಾವ ತೀರ ಯಾನ ಎನ್ನುವ ಸುಂದರ ಹೊತ್ತಿಗೆಯಂತೆ  ಪ್ರತಿ ಪುಟವೂ ನವ ನವೀನ.. ಹಾಗೆಯೇ ನಿಮ್ಮ ಅತಿ ಅತಿ ಮಧುರಾತಿ ಮಧುರ ಮನಸ್ಸು ಈ ಕಾರ್ಯವನ್ನು ಇನ್ನಷ್ಟು ಘಮ ಗುಟ್ಟುವಂತೆ ಮಾಡಿದ್ದು ನಿಮ್ಮ ಹಾಗೂ ನಿಮ್ಮ ತಂಡದ ತಾಕತ್ತು.

ನಿಮಗೆ ಜನುಮದಿನ ಶುಭಾಶಯಗಳನ್ನು ಕೋರುತ್ತಾ ನೀವು ಕಂಡ ಕನಸ್ಸೆಲ್ಲಾ ನನಸಾಗಲಿ ನನಸೆಲ್ಲ ಸೊಗಸಾಗಿರಲಿ ಎಂದು ಆಶಿಸುವ ನಿಮ್ಮೆಲ್ಲರ ಅಭಿಮಾನಿಗಳು!!!

ಜನುಮದಿನದ ಶುಭಾಶಯಗಳು ಮಣಿಕಾಂತ್ ಸರ್ !!!

Wednesday, May 7, 2014

DFR - ನಿಮಗಿದೋ ..... !!!!

"ಭಾರತ ಭೂಶಿರ ಮಂದಿರ ಸುಂದರಿ ಭುವನ ಮನೋಹರಿ ಕನ್ಯಾಕುಮಾರಿ" ಈ ಹಾಡು ಉಪಾಸನೆ ಚಿತ್ರದ್ದು.. ಈ ಹಾಡಿನ ಸಾಹಿತ್ಯ, ಸಂಗೀತ, ಆರತಿ ತನ್ಮಯಳಾಗಿ ವೀಣೆ ನುಡಿಸುವ ನಟನೆ.. ಬೆಳಕಿನ ಸಂಯೋಜನೆ.. ಆಹಾ ಅತಿ ಸುಂದರ..

ಇಂತಹ ಒಂದು ತನ್ಮಯತೆಯನ್ನು ಮತ್ತೆ ಕಂಡಿದ್ದು.. ಅಣ್ಣಾವ್ರ ಕವಿರತ್ನ ಕಾಳಿದಾಸ ಚಿತ್ರದಲ್ಲಿ ಕಾಳಿ ಮಾತೆಯನ್ನು ಕಂಡಾಗ ಅಣ್ಣಾವ್ರ ಮುಖದಲ್ಲಿನ ಆ ಅಭಿನಯ.. ತನಗಿಂತಲೂ ಕಿರಿಯಳಾದ ಮತ್ತು ಪರಭಾಷೆಯ ಚಿತ್ರದಲ್ಲಿ ಉತ್ತಮ ಪಾತ್ರಗಳಿಲ್ಲದೇ ಯಾವುದೋ ಯಾವುದೋ ಸಣ್ಣ ಪುಟ್ಟ ಪಾತ್ರಗಳಲ್ಲಿ ನಟಿಸುತ್ತ ಇದ್ದ ನಳಿನಿಯಲ್ಲಿ ಕಾಳಿ ಮಾತೆಯನ್ನು ಕಂಡು ಅವಳ ಕಾಲನ್ನು ಮುಟ್ಟಿ ನಮಸ್ಕರಿಸುವುದು ಕಾಲ ಮೇಲೆಯೇ ತಲೆಯಿಟ್ಟು ಮಲಗುವುದು..

ಆಹಾ ಅಂಥಹ ನಟನೆ.. ಅಣ್ಣಾವ್ರಿಗೆ ಮಾತ್ರ ಸಾಧ್ಯ..

"ಮಾತೆ ಜಗನ್ಮಾತೆ ಸನ್ನಿಧಾನದಲ್ಲಿ ನಿಂತು ನಿನ್ನಿಂದ ವರ ಪಡೆದ ನನ್ನ ಮನಸ್ಸಿಗೆ ಸಂತೋಷ ತಂದ ಆ ಘಳಿಗೆ ಸುವರ್ಣ ಘಳಿಗೆ" ಎಂದರು ಕಾಳಿದಾಸ

ಕಾಳಿಮಾತೆ "ಹೌದು ಕಾಳಿದಾಸ ನಿನ್ನಂತಹ ಭಕ್ತರು ಇರುವಾಗ ನನ್ನ ಅಸ್ತಿತ್ವ ಇದ್ದೆ ಇರುತ್ತದೆ"

ಯಾಕೋ ಕ್ಷಣ ಕಾಲ ಕಾಳಿದಾಸ ಮೂಕನಾಗಿದ್ದರು..ಅದನ್ನು ಮನಗಂಡ ಮಾತೆ

"ಅರೆ ಮಗು ಏನಾಯಿತು.. ಯಾಕೆ ಸುಮ್ಮನಾದೆ.. ಮೌನಕ್ಕೆ ಶರಣಾದೆ.. ?"

"ಕಾಳಿಯೇ ನನ್ನ ಮುಂದೆ ನಿಂತಿರುವಾಗ.. ಈ ದಾಸನಿಗೆ ಮತ್ತೇನು ಚಿಂತೆ ಮಾತೆ.. ಆದರೆ ನನ್ನ ಮನಸ್ಸಿಗೆ ಒಂದು ಯೋಚನೆ
ತಲೆ ತಿನ್ನುತ್ತಿದೆ.. "

"ಅದೇನು ಕೇಳು ಮಗು.. ನಾನಿರುವೆ ನಿನ್ನ ಪ್ರಶ್ನೆಗಳಿಗೆ ಉತ್ತರ ನೀಡಲು.. "

"ಮಾತೆ ನಿನ್ನನ್ನು ಮೊದಲು ನೋಡಿದಾಗ.. ನನಗೆ ಭಯವೂ ಆಗಲಿಲ್ಲ.. ಗಂಟಲು ಕೂಡ ಬತ್ತಲ್ಲಿಲ್ಲ.. ಆದರೆ ಭಕ್ತಿಯಿಂದ ಮನಸ್ಸು ಹಕ್ಕಿಯಾಗಿತ್ತು.. ನಿನ್ನ ಮೊದಲು ಏನೆಂದು ಹೆಸರಿಸಲಿ ಎಂಬ ತರ್ಕಕ್ಕೆ ಮನದಲ್ಲಿ ಉತ್ತರವಿಲ್ಲದೆ ತಡಕಾಡುತ್ತಿತ್ತು.

"ಹೌದು ಮಗು.. ನಿನಗಾದ ಅನುಭವವೇ ಹಲವರಿಗೆ ಆಗಿದೆ ಆಗುತ್ತದೆ.. ಆಗುತ್ತಿರುತ್ತದೆ.. ಕಲ್ಮಶವಿಲ್ಲದ.. ಮನಪೂರ್ತಿ ನಗುತ್ತಾ ಎಲ್ಲರೊಡನೆ ತಾನು ಒಂದು ಎಂದು ಬೆರೆಯುವ ಮನಸ್ಸು ಎಂದಿಗೂ ಹಾಗೆ ಇರುತ್ತದೆ.. "

ಮಾತೆ ಇಂತಹ ಅನುಭವ ಎಲ್ಲರಿಗೂ ಆಗುತ್ತದೆ ಎಂದು ಹೇಳಿದೆಯಲ್ಲ.. ಅದಕ್ಕೆ ಏನಾದರೂ ಉತ್ತಮ ನಿದರ್ಶನಗಳು ಇವೆಯೇ.. ಅಥವಾ ಇದು ಸಾಧ್ಯವೇ..

"ಖಂಡಿತ ಸಾಧ್ಯ ಇದೆ ಕಾಳಿದಾಸ.. ವಿಜಯನಗರವಾಸಿ ಶ್ರೀ ಕೆಲವು ದಿನಗಳ ಹಿಂದೆ ಇವರ ಮನೆಗೆ ಹೋಗಿ ತನ್ನ ತಂಗಿ ಸಂಧ್ಯಾಳ ಮದುವೆಯ ಕರೆಯೋಲೆ ಪತ್ರ ಕೊಡಲು ಹೋದಾಗ.. ಅವರ ವ್ಯಕ್ತಿತ್ವದ ಪ್ರಭೆಯಲ್ಲಿ ಮಿಂದು ಹೊರಗೆ ಬಂದಾಗ ಅವನಲ್ಲಿ ಮೂಡಿದ ಮಾತುಗಳು ನೋಡು ಹೀಗಿವೆ"

"ರೂಪ ಅವರನ್ನು ಅಕ್ಕ ಎನ್ನಲೇ, ತಂಗಿ ಎನ್ನಲೇ, ಅತ್ತಿಗೆ ಎನ್ನಲೇ... ....
ಛೆ ಛೆ ಯಾಕಿಷ್ಟು ಗೊಂದಲ ಮನದಲ್ಲಿ ..
ತಡಿ ತಡಿ ಮಾತೆ ಜಗನ್ಮಾತೆ..
ಅಕ್ಕ, ತಂಗಿ, ಅತ್ತಿಗೆ ಇವಕ್ಕೆಲ್ಲ ಮೀರಿದ ಒಂದು ಭಾಂದವ್ಯ ಇದೆ...
ಅದೇ ಮಾತೆ .... ಗುರು ಮಾತೆ.. ...
ಕಾಳಿದಾಸನಿಗೆ ಆದ ಅನುಭವ ಇಂದು ನನಗಾಯಿತು..
ನನಗೆ ಸಿಕ್ಕ ಗುರುಮಾತೆ ನೀವು ರೂಪ..
ಇಂದು ನಿಮ್ಮ ಮುಂದೆ ಕುಳಿತು ಮಾತಾಡುತ್ತಿದ್ದಾಗ ಕಾಳಿದಾಸನಿಗೆ ತನ್ನ ಜಗನ್ಮಾತೆ ಮುಂದೆ ನಿಂತು  ಶ್ಯಾಮಲಾ ದಂಡಕ ಹಾಡಿದಾಗ ಸಿಕ್ಕ ಅನಿರ್ವಚನೀಯ ಅನುಭವ ನನಗಾಯಿತು...
ಹಾಟ್ಸ್ ಆಫ್ ರೂಪ ಹಾಟ್ಸ್ ಆಫ್..
ನಿಮಗೆ ಶಿರಬಾಗಿ ನಮಿಸುವೆ.. ನಿಮ್ಮನ್ನು ಗುರುಮಾತೆ ಎಂದು ಕರೆಯಲು ನನಗೆ ಅತೀವ ಆನಂದವಾಗುತ್ತಿದೆ...
ದೇವರೇ ನನಗಾಗಿ ಕಳಿಸಿದ ಸ್ನೇಹಿತೆ ಎಂದು ಹೇಳಲು ಹೆಮ್ಮೆ ಎನ್ನಿಸುತ್ತಿದೆ.. ನಿಮ್ಮನ್ನು DFR ಎಂದು ಕರೆಯಲೇ.. "

"ಮಾತೆ ಮಾತೆ ನನಗೆ ಮಾತೆ ಹೊರಡುತ್ತಿಲ್ಲ... ಶ್ರೀ ಸೌಖ್ಯವಾಗಿರಲಿ.. ತನ್ನ ಗುರುಮಾತೆಯ ಕುಟುಂಬಕ್ಕೆ ಸದಾ ಒಳ್ಳೆಯದಾಗಲಿ.. ಅಭಿವೃದ್ಧಿ, ಶಾಂತಿ ಎಲ್ಲವೂ  ಒಲಿಯಲಿ ಎಂದು ಹಾರೈಸುತ್ತೇನೆ ಕಾಳಿ ಮಾತೆ.... ಅದು ಸರಿ ಈ DFR ಅಂದರೆ ಏನು ಮಾತೆ" ಎಂದರು ಕಾಳಿದಾಸ...

"ಹೌದು ಕಾಳಿದಾಸ ನಿನ್ನ ಮಾತು ಅಕ್ಷರಶಃ ಸತ್ಯ.. ನಿನಗೆ ನನ್ನ ನೋಡಿದಾಗ ಆದ ಆನಂದ ಅಂದು ಶ್ರೀಗೆ ಆಯಿತು...ಮತ್ತೆ DFR ಅಂದರೆ  Devine Friend Roopa.. ಅಂದರೆ ದೈವಿಕ ಸ್ನೇಹಿತೆ ರೂಪ"

"ಅಬ್ಬಾ.. ಕೆಲವು ಅಕ್ಷರಗಳನ್ನು ಜೊತೆಯಲ್ಲಿ ನಿಲ್ಲಿಸಿದಾಗ ಎಂಥಹ ನುಡಿಮುತ್ತುಗಳಿಗೆ ಜನ್ಮ ನೀಡುತ್ತವೆ..ಸುಂದರ ಮಾತುಗಳು.. ಮಾತೆ ಇಷ್ಟವಾಯಿತು.. "

"ಇನ್ನೂ ಇದೆ ಕಾಳಿದಾಸ.. ಈ DFR ಕೈಗೆ ಸುಮ್ಮನೆ ಕೈ ಗಡಿಯಾರವನ್ನು ಕಟ್ಟಿ ಕೊಳ್ಳುತ್ತಾರೆ ಅಷ್ಟೇ.. ಅದರಲ್ಲಿ ಎಷ್ಟು ಘಂಟೆಗಳಿವೆ ಎಂದು ನಾನು ಅನೇಕಾ ಬಾರಿ ನೋಡಲು ಸೋತ್ತಿದ್ದೇನೆ.. ಕಾರಣ ಗೊತ್ತೇ"

"ಏನು ಮಾತೆ ಆ ಕಾರಣ...  ರಾಜಕಾರಣ"

"ಊರಾಚೆ ಎನ್ನಬಹುದಾದ ಬಹು ಅಂತರರಾಷ್ಟ್ರೀಯ ಕಂಪನಿಯಲ್ಲಿ ಕೆಲಸ.. ಸುಂದರ ಅರಳು ಪ್ರತಿಭೆಗಳ ಶರಧಿ... ಕ ಕ ಕ ಕುಟುಂಬದ ಒಡತಿ.. ಅರಳುತ್ತಿದೆ ಅರಳುತ್ತಿದೆ ಎಂದು ಹೇಳುವ "ಅರಳು" ಶಾಲೆಗೆ ಸ್ಫೂರ್ತಿ..ಹಲವಾರು ದೇವರ ಮಕ್ಕಳಿಗೆ ಮಾತೃ ಸ್ವರೂಪಿಣಿ.. ಮತ್ತೆ"

"ಕಾಳಿ ಮಾತೆ.. ಈ ಮೇಲಿನ ಮಾತುಗಳನ್ನು ಕೇಳಿ ದಣಿವಾರಿಸಿಕೊಳ್ಳುತ್ತಿದ್ದೇನೆ.... ಅಬ್ಬಾ ಮಾತೆ ಒಂದು ಮಾತು ಹೇಳಲೇ.. "

"ಹೇಳು ಕಂದಾ"

"ಈ DFR ಬಗ್ಗೆ ಮುಂಚೆ ನನಗೆ ಅರಿವಾಗಿದ್ದರೆ.. ನಿನ್ನ ಬಳಿ ಬೇಡುವುದರ ಬದಲು ಅವರ ಬಳಿಯೇ ವಿದ್ಯಾ ಬುದ್ದಿ ಮಾತ್ರವಲ್ಲದೆ... ಎಷ್ಟೇ ಸಾಧಿಸಿದರೂ ನನ್ನ ತಲೆ ನನ್ನ ಭುಜದ ಮೇಲೆ ಸದಾ ಇರಲಿ DFR ತರಹ ಎಂದು ಬೇಡಿಕೊಳ್ಳುತ್ತಿದ್ದೆ"

"ಆಹಾ.. ಮಗು ಕಾಳಿದಾಸ ಎಂಥಹ ಸುಮಧುರ ಯೋಚನೆ.. ಹೌದು ಮಗು.. ಇವತ್ತು ನೋಡು ಅವರ ಜನುಮದಿನಕ್ಕೆ ಹರಿದು ಬರುವ ಅಭಿಮಾನ ಪೂರಿತ ಮಾತುಗಳು.. ನನ್ನ ಮತ್ತು DFR ಅನುಬಂಧ..ಅವರ ಮುಂಗೈ ಮಣಿಕಟ್ಟಿನ ಮೇಲೆ ಇರುವ ಹಚ್ಚೆಯ ತರಹ.."

"ಅದರಲ್ಲೇನೂ ವಿಶೇಷ ಮಾತೆ "  



"ಜೀವನದಲ್ಲಿ ಕಷ್ಟಕ್ಕೆ ಸುಖಕ್ಕೆ ತಲೆಬಾಗುವುದನ್ನು ಕಲಿಸಿದ ಅಮ್ಮನ ಹೆಸರು ಮಡಿಸುವ ಭಾಗದಲ್ಲಿದ್ದರೆ ...ಜೀವನದಲ್ಲಿ ಬರುವ ಎಲ್ಲ ಸಾಧನೆಗಳಿಗೂ, ಪರೀಕ್ಷೆಗಳಿಗೂ ನೆಟ್ಟಗೆ ನಿಲ್ಲಬೇಕೆಂದು ಕಲಿಸುವ ಪಾಠ ಬಾಗುವುದಕ್ಕಾಗದ ಭಾಗದಲ್ಲಿದೆ.. ಹಾಗೆಯೇ ಕಲಿಸಿದ ಪಾಠ...  ಕಲಿಸುವ ಪಾಠ ಇವರೆಡರ ಮಧ್ಯೆ ನಿಲ್ಲುವುದೇ ಮಮತೆ, ಪ್ರೀತಿ, ಮಮಕಾರ.. ಅದರ ಚಿನ್ಹೆ ಅದರ ಮಧ್ಯೆ"

"ಕಾಳಿದಾಸ ಮಾತೆ .... ಅಮೋಘ ಅಮೋಘ.. ಸುಂದರ ಅತಿ ಸುಂದರ.. "

ಇಂತಹ ಸುಮಧುರ ಮನಸ್ಸಿನ DFR ಅವರ ಹುಟ್ಟು ಹಬ್ಬಕ್ಕೆ ಈ ಸುಂದರ ಲೇಖನವನ್ನು ನಾನು ಶ್ರೀ ಒಳಗೆ ಕೂತು ಬರೆಸುತ್ತಿದ್ದೇನೆ ಮಗು.. ಕಾಳಿದಾಸ.. ನೋಡು ಶ್ರೀ ಯನ್ನು ಹೇಗೆ ನಿಂತಿದ್ದಾನೆ..  ಮತ್ತು ಅವನ ಮನದೊಳಗಿನ ಮಾತು ಹೀಗಿವೆ

"ರೂಪ ದಯಮಾಡಿ ತಪ್ಪು ತಿಳಿಯಬೇಡಿ.....  ನಿಮ್ಮ ಜೊತೆ ಇಂದು ಮಾತಾಡುತ್ತ ಕುಳಿತಾಗ ನನ್ನ  ಮನಸ್ಸಲ್ಲಿ ಮೂಡಿದ ಮಾತುಗಳು ಈ ಲೇಖನವಾಗಿದೆ.. .. ನನ್ನ ಮನದಲ್ಲೇ ನಿಮ್ಮ ಮನಸ್ಸಿಗೆ ಕೈ ಮುಗಿಯುತ್ತಲೇ ಇತ್ತು ದೇವರ ಮುಂದೆ ನಿಂತ ಭಕ್ತನ ಹಾಗೆ... ಜನುಮ ದಿನದ ಶುಭಾಶಯಗಳು DFR"

"Wish you happy birthday DFR"

"right.. right .. Thank you Sri....!!!"

ಕಾಳಿಮಾತೆ ಮತ್ತು ಕಾಳಿದಾಸ ಇಬ್ಬರೂ ಅಂತರ್ದಾನವಾಗುತ್ತಾರೆ..

ಭೂಲೋಕದ ಸಮಸ್ತ ಜನತೆ ತಮ್ಮ ಅಭಿಮಾನ ಪೂರಿತ ಮಾತುಗಳಿಂದ ರೂಪ ಸತೀಶ್ ಅವರಿಗೆ ಶುಭಾಶಯಗಳನ್ನು ಕೋರುತ್ತಾ.. ಹೇಳುತ್ತಾರೆ ಇಂತಹ ಒಂದು ಸುಮಧುರ ಮನಸ್ಸಿನ ಡಾರ್ವಿನ್ ಸಿದ್ಧಾಂತದ ಮಾನವತ ಜೀವ.. ನಭೂತೋ ನಭವಿಷ್ಯತಿ.. !!! 

Friday, April 11, 2014

ಅಂಗಳದಲ್ಲಿ ಕನ್ನಡಿಯ ಬಿಂಬ.....!

"ನವ ವಸಂತದ ಗಾಳಿ ಬೀಸಲು ಮಾವು ಚಿಗುರಿತು ಆಗಲೇ.. ಮೌನ ಮರೆಯಲು ಮಧುರ ಗೀತೆಯ ಮತ್ತೆ ಹಾಡಿದು ಕೋಗಿಲೆ" ವಿಷ್ಣು ಅಭಿನಯದ ಚಿತ್ರಗಳಲ್ಲಿ ಹಾಡುಗಳು ಸುಮಧುರ ಎನ್ನಿಸುವಂಥಹ ಚಿತ್ರಗಳಲ್ಲಿ "ಮತ್ತೆ ಹಾಡಿದು ಕೋಗಿಲೆ" ಚಿತ್ರವೂ ಒಂದು.

"ವಸಂತ ಮಾಸ ಬಂದಾಗ ಮಾವು ಚಿಗುರಲೇ ಬೇಕು" ಅಣ್ಣಾವ್ರ ಸುಮಾರಾದ ಚಿತ್ರಗಳಲ್ಲೂ ಹಾಡುಗಳು ಭರ್ಜರಿಯಾಗಿರುತ್ತಿದ್ದವು. ಅಂತಹ ಒಂದು ಸುಮಾರಾದ ಚಿತ್ರ "ಗುರಿ". ಆದರೆ ಎಲ್ಲಾ ಹಾಡುಗಳು ಸೂಪರ್ ಹಿಟ್.

"ಅಣ್ಣಾ.. ಏನಾಗಿದೆ ನಿಮಗೆ.. ಅಮಾವಾಸ್ಯೆ ಈಚಿಗೆ ತಾನೇ ಕಳೆಯಿತು.. " ತಂಗಿಯಾಗಿ ಬಂದು ಮಗಳೇ ಆಗಿ ಹೋಗಿರುವ ಮುದ್ದು ಪುಟಾಣಿ ಕಿರುಚುತಿತ್ತು..

"ಇರೋ.... ನಿನ್ನ ಗೊಂದಲ ಅರ್ಥವಾಗುತ್ತಿದೆ.. ಅಲ್ಲಿಗೆ ಬರುತ್ತೇನೆ ಎಂದು ಹೊರಟೆ.

                                                                              ***

"ಶ್ರೀಕಾಂತ್. ಮಂಜುನಾಥ್ ಸರ್ .. . ಸೂಪರ್ ಸರ್... ಸುಂದರ ಮಾತುಗಳು... "

"ಶ್ರೀಕಾಂತ್ ಅಣ್ಣ.. ಸೂಪರ್ ಮಾತುಗಳು.. ಸೂಪರ್ ಕಾಮೆಂಟ್"

"ಶ್ರೀಕಾಂತಣ್ಣ.. ನಿಮ್ಮ ಮಾತುಗಳು ಕೇಳೋಕೆ ತುಂಬಾ ಇಷ್ಟವಾಗುತ್ತದೆ"

"ಅಣ್ಣಾ.. ನಿಮ್ಮ ಪ್ರತಿಕ್ರಿಯೆ ಸೂಪರ್ ಇರುತ್ತೆ ... ಹೇಗೆ ಬರೆಯುತ್ತೀರಿ"

ಅರೆ ಇದೇನು ರಾಮ ಕೋಟಿ ಅಂದು ಕೊಂಡಿರಾ.. ಇಲ್ಲ ಇಲ್ಲ

ನನ್ನ ಪುಟ್ಟಿ ನನ್ನ ಜೊತೆ ಮಾತಾಡಲು ಆರಂಭಿಸಿದ್ದು ಹೀಗೆ.. ಡಾರ್ವಿನ್ ಸಿದ್ಧಾಂತದ ಹಾಗೆ ಹಂತಹಂತವಾಗಿ ವಿಕಸಿತವಾಗಿ ಉದ್ದನೆಯ ಹೆಸರು ಅದಕ್ಕೆ ಇರುವ ಬಾಲಂಗೋಚಿ ಕ್ರಮೇಣ ಮರೆಯಾಗಿ.. ಈಗ ಬರಿಯ ಅಣ್ಣನಾಗಿ ಉಳಿದುಕೊಂಡಿರುವ ನನಗೆ ಸಿಕ್ಕ ಒಂದು ಅದ್ಭುತ ಕನ್ನಡಿ ನನ್ನ ಪ್ರೀತಿಯ ಪುಟ್ಟಿ..

ಅಣ್ಣ ನಿಮ್ಮೊಬ್ಬರನ್ನೇ ನಾ ಬರಿ ಅಣ್ಣಾ ಎನ್ನುವುದು.. ಅಂತ ಹೇಳುತ್ತಲೇ ಮನಸ್ಸನ್ನಾವರಿಸಿದ ಸುಮಧುರ ಮನಸ್ಸಿನ ಪ್ರತಿಬಿಂಬ ಈ ಪುಟ್ಟಿ  .. ಪ್ರೀತಿಯಿಂದ .......  ಎನ್ನುವ ನಾನು ಸುಮಾರು ಬಾರಿ ಯೋಚಿಸಿದೆ.. ಇವಳು ಏಕೆ ನನ್ನ ಪ್ರತಿಬಿಂಬವಾದಳು ..  ಹೀಗೆ ಆದಳು.. ಹೇಗೆ ಆದಳು  ಅಂಥಾ... ಅದಕ್ಕೆ ಅವಳೇ ಕೊಟ್ಟ ಉತ್ತರ..

"ಅಣ್ಣ ಇನ್ನು ಮೇಲೆ.. ನೀವು ಬ್ಲಾಗ್ ಓದಿ ಕಾಮೆಂಟ್ ಹಾಕಿದರೆ.. ನಾ ಹಾಕೋಲ್ಲ ... ಇಲ್ಲವೇ ನೀವು ಬರೆದ ಕಾಮೆಂಟ್ ಓದದೆ ನಾ ಕಾಮೆಂಟ್ ಹಾಕುವೆ.. " ಅಷ್ಟು ಒಂದಕ್ಕೊಂದು ತಾಳೆಯಾಗುತ್ತಿತ್ತು ನಮ್ಮ ಮಾತುಗಳು.. ಪ್ರತಿ ಬ್ಲಾಗಿನಲ್ಲೂ ನಾವಿಬ್ಬರು ಪೈಪೋಟಿ ಮಾಡುತ್ತಿದ್ದೆವು ಯಾರು ಮೊದಲು ಕಾಮೆಂಟ್ ಮಾಡುತ್ತಾರೆ ಎಂದು.. ಯಾಕೆ ಅಂದ್ರೆ ಇಬ್ಬರೂ ೫೦ ಕಿಮಿ ದೂರದಲ್ಲಿ ಕೂತಿದ್ದರೂ ಬರೆಯುತ್ತಿದ್ದ ಭಾವಗಳು.. ಪಸರುತ್ತಿದ್ದ ಪದಗಳು.. ಒಂದೇ "ಮುಖ"ದ ನಾಣ್ಯಗಳಾಗುತ್ತಿದ್ದವು..

ಇಂತಹ ಸುಮಧುರ ಸಹೋದರಿಯನ್ನು ಕೊಟ್ಟ ಆ ಮಾತಾ ಪಿತೃಗಳಿಗೆ ಧನ್ಯವಾದ ಸಲ್ಲಿಸುತ್ತೇನೆ.. ಇಂತಹ ಒಂದು ಕಲಾ ಸಾಗರಕ್ಕೆ ನಾ ಅಣ್ಣ ಎನ್ನುವ ಭಾವವೇ ನನಗೆ ಕೊಂಬು ಮೂಡಿಸುತ್ತದೆ.. ಕಲೆ, ಚಿತ್ರಕಲೆ, ಕಾಫಿ ಕಲೆ, ಕಸೂತಿ, ರಂಗವಲ್ಲಿ, ಗೋಡೆಯ ಮೇಲೆ ಬಿಡಿಸುವ ಕಲೆ.. ದಾರ, ಬಳೆ, ಪ್ಲಾಸ್ಟಿಕ್., ಟಿಶ್ಯೂ ಕಾಗದ.. ಅಯ್ಯೋ ಇವಳ ಕೈಯಲ್ಲಿ ಏನು ಸಿಕ್ಕರೂ.. ಆ ಪದಾರ್ಥಗಳೇ ಶರಣಾಗಿ ತಮ್ಮ ರೂಪವನ್ನು ಬಿಟ್ಟುಕೊಟ್ಟು ಇನ್ನೊಂದು ಸುಂದರ ಪರಕಾಯ ಪ್ರವೇಶ ಮಾಡಲು ಅಣಿಯಾಗುತ್ತವೆ. 

ಆನೆ ನೆಡೆದು ಹೋದರೆ ಮಿಕ್ಕ ಪ್ರಾಣಿಗಳಿಗೆ ದಾರಿ ಅನಾಯಾಸ ಎಂದು ಹೇಳುತ್ತಾರೆ.. ಹಾಗೆ ಪ್ರತಿಭಾ ಗಜ ಪರ್ವತ ನನ್ನ ಮುದ್ದಿನ ಪುಟ್ಟಿ. ಇವಳ ಪ್ರತಿಭೆ ದಾಖಲಿಸುತ್ತಾ ಹೋದರೆ ಈ ಲೇಖನ ಮಹಾಭಾರತವಾಗುತ್ತದೆ..

ಇಂದು ಈ ಪುಟ್ಟಿಯ ಜನುಮದಿನ.. ತನ್ನ ಅಂಗಳದಲ್ಲಿ ನನಗೆ ಅಣ್ಣನ ಸ್ಥಾನ ಕೊಟ್ಟು.. ನಾವಿಬ್ಬರೂ ಅಣ್ಣ ತಂಗಿಯರಷ್ಟೇ ಅಲ್ಲದೆ ಬಿಂಬ ಪ್ರತಿಬಿಂಬ ಆಗಿರುವ ನಮಗೆ.. ಜನುಮದಿನದ ಶುಭಾಷಯಗಳನ್ನು ಹೇಳಿದರೆ.. ನನಗೆ ನಾನೇ ಹೇಳಿಕೊಂಡಂತೆ.

ದೇವರಿಗೆ ನಾ ಕೈಮುಗಿದರೆ ಅವಳು ಮುಗಿದಂತೆ.. ಅವಳು ಪ್ರಾರ್ಥಿಸಿದರೆ ನಾ ಪ್ರಾರ್ಥಿಸಿದಂತೆ..

ಭಗವಂತ ಇಂತಹ ಸುಮಧುರ ಪ್ರತಿಭಾ ಪರ್ವತ ನನಗೆ ಅಣ್ಣನ ಸ್ಥಾನ ನೀಡಿದ ಈ ಗುಣದ ಗಣಿಯ ಜೀವನದ ಅಂಗಳದಲ್ಲಿ ಅಚ್ಚಳಿಯದ ರಂಗವಲ್ಲಿ ಎಂಬ ಸುಖ,  ಸಂತೋಷ,  ಆರೋಗ್ಯ,  ಕೀರ್ತಿ ಹಾಗೆಯೇ ತನ್ನ ಕಲೆ ವಿಶ್ವದ ಮೂಲೆ ಮೂಲೆಯಲ್ಲೂ ಅರಳುವಂತೆ ಮಾಡುವ ಹೊಣೆ ನಿನ್ನದು ಎನ್ನುವ ಆಶಯ ನನ್ನದು...

ಈ ಪುಟ್ಟಿ ಬ್ಲಾಗ್ ಲೋಕದ ಕರಿಘಟ್ಟ ಪ್ರವಾಸದ ತಿರುವುಗಳಲ್ಲಿ ಸಿಕ್ಕ ಸುಮಧುರ ಅಂಗಳದ ಒಡತಿ..

ನೀನು ನಿನ್ನ ಜೀವನದ ತಿರುವುಗಳಲ್ಲಿ ಸದಾ ನಗುತ್ತಿರು..

ಹುಟ್ಟು ಹಬ್ಬದ ಶುಭಾಶಯಗಳು ಸಂಧ್ಯಾ ಪುಟ್ಟಿ..

ಛಾಯಾಗ್ರಾಹಕರು - ಶಿವೂ ಸರ್
(ಅಪ್ಪಣೆ ಇಲ್ಲದೆ ಸಂಧ್ಯಾ ಪುಟ್ಟಿ ಪ್ರೊಫೈಲ್ ನಿಂದ ತೆಗೆದು ಹಾಕಿರುವೆ.. 
ಕ್ಷಮೆ ಕೇಳಿದರೆ ನನಗೆ ನಾನೇ ಕ್ಷಮೆ ಕೇಳಿದ ಹಾಗೆ.. ಹ ಹ ಹ )
                                                                              
                                                                             **** 
ನವ ವಸಂತದ ಗಾಳಿ ಬೀಸಲು ಮಾವು ಚಿಗುರಿತು ಆಗಲೇ 
ವಸಂತ ಕಾಲದ ಬಂದಾಗ.. ಗುರಿಯ ಸೇರಲೇ ಬೇಕು
ಅಂಗಳದಲ್ಲಿ ರಂಗವಲ್ಲಿ ಮೂಡಲೇ ಬೇಕು 
ಸಂಧ್ಯೆಯ ರಂಗು ರಂಗವಲ್ಲಿಯಾಗಲೇ ಬೇಕು 
ಸಂಧ್ಯೆಯಂಗಳದಿ ನಲಿವ ಹೂವಾಗಲೇ ಬೇಕು.. 

ಅಣ್ಣಾ... !!!!!!!

ಮಾತಿಲ್ಲಾ ಕಥೆಯಿಲ್ಲ ಬರಿ ರೋಮಾಂಚನ.. 

****

Friday, March 21, 2014

ಗೀತೆ ಗೀತಾ ಗೀತೆಗಳು.... ಮತ್ತು ಬಡವನ ಗೀತೆಗಳು....

ಗೀತೋಪದೇಶ ಮುಗಿದಿತ್ತು ... ಆದರೂ ಪಾರ್ಥ ಮುಖದಲ್ಲಿ ಚಿಂತೆಯ ಕಾರ್ಮೋಡ... ಕೃಷ್ಣ ನಗುಮೊಗದಿಂದ ಹುಬ್ಬನ್ನು ಮೇಲೇರಿಸಿ ಪಾರ್ಥನತ್ತ ದೃಷ್ಟಿ ಹರಿಸಿದ!!!

ಪರಮಾತ್ಮ ನನ್ನ ಅನುಮಾನವನ್ನು ಪರಿಹರಿಸು!!!

ಪಾರ್ಥ : ಕೃಷ್ಣ.. ವಾಸುದೇವ.. ಕುರುಕ್ಷೇತ್ರದಲ್ಲಿ ನನಗೆ ಬಂದ ಅನುಮಾನ ಕಲಿಯುಗದಲ್ಲಿ ಬಂದರೆ ಏನು ಮಾಡುವುದು..

ಕೃಷ್ಣ : ದ್ವಾಪರದಲ್ಲಿ ನಾ ಉಲಿದ ಭಗವದ್ಗೀತೆ ಕಲಿಯುಗದಲ್ಲಿ ಕಗ್ಗವಾಗಿ ಅರಳಿದೆ..

ಪಾರ್ಥ : ಹೌದೆ ಅದರ ಬಗ್ಗೆ ಇನ್ನಷ್ಟು ಹೇಳು ಕೃಷ್ಣ

ಕೃಷ್ಣ : ಕಳೆದ ವಾರ ತಾನೇ ಅದರ ಕತೃ ನೂರ ಇಪ್ಪತೇಳನೆಯ ಜನುಮದಿನೋತ್ಸವ ಜರುಗಿತು..

ಪಾರ್ಥ : ಅವರ ಹೆಸರೇನು ವಾಸುದೇವ?

ಕೃಷ್ಣ : ಅವರು ಡಿ ವಿ ಜಿ ಅಂತ.. ನಮ್ಮ ಪಿತಾಮಹ ಭೀಷ್ಮ ಇಲ್ಲವೇ ಹಾಗೆಯೇ ಕರುನಾಡಿಗೆ ಅವರು ಕೂಡ ಹಾಗೆಯೆ.. ಅವರು ರಚಿಸಿದ ಮಂಕುತಿಮ್ಮನ ಕಗ್ಗ ಬಡವನ್ಗೀತೆ ಎಂಬ ಹೆಸರಿಂದಲೇ ಹೆಸರುವಾಸಿ..

ಕಗ್ಗ ಪಿತಾಮಹ - ಶ್ರೀ ಡಿ ವಿ ಜಿ (ಚಿತ್ರಕೃಪೆ - ತಿರುಮಲೈ ರವಿ ಸರ್

ಪಾರ್ಥ : ನನಗೆ ಸಿಗಬಹುದೇ ಒಂದು ಪ್ರತಿ

ಕೃಷ್ಣ : ಅದು ಸಿಗುತ್ತದೆ.. ಅದರ ಜೊತೆಯಲ್ಲಿಯೇ.. ಅದನ್ನು ಇನ್ನಷ್ಟು ಸರಳಗೊಳಿಸಿ. ಅದಕ್ಕೆ ಪ್ರಸ್ತಾರ ಹಾಕಿ.. ಅದರ ಅರ್ಥವನ್ನು ವಿವರಿಸಿ.. ತನ್ನ ಜೀವನದಲ್ಲಿ ಕಂಡು ಓದಿ ತಿಳಿದು ನಲಿದು ಇತರರಿಗೂ ಹಂಚುವ ಸುಂದರ ಮನಸ್ಸಿನ ಶ್ರೀ ರವಿ ತಿರುಮಲೈ.. "ಕಗ್ಗ ರಸಧಾರೆ" ಎನ್ನುವ ಅಮೃತವನ್ನು ಹಂಚುತ್ತಿದ್ದಾರೆ.. ಪಾರ್ಥ.. ನಿನ್ನ ಪ್ರಶ್ನೆ ಎಂಥಹ ದಿನ ಬಂದಿದೆ ಗೊತ್ತೇ

ಪಾರ್ಥ : ಏನು ವಾಸುದೇವ?

ಕೃಷ್ಣ : ಇಂದು ಶ್ರೀ ರವಿ ತಿರುಮಲೈ ಅವರ ಜನುಮ ದಿನ.. ಅವರ ಬಂಧು ಬಳಗ.. ಸ್ನೇಹಿತರು ನಿನ್ನೆಯಿಂದಲೇ ಕಾಯುತ್ತಿದ್ದಾರೆ.. ಅವರಿಗೆ ಶುಭ ಕೋರುವುದಕ್ಕಾಗಿ.. ನಡಿ ನಡಿ ನಾವು ಅವರಿಗೆ ಶುಭ ಕೋರೋಣ..

ಪಾರ್ಥ : ನನಗೆ ದಾರಿ ತೋರಿದ ನೀನು.. ಇಂದು ರಥವನ್ನು ನಾ ಓಡಿಸುತ್ತೇನೆ.. ಅವರ ದರುಶನ ಭಾಗ್ಯ ನನಗೂ ಆಗಲಿ..

ಕೃಷ್ಣ : ಆದರೆ ನಿನಗೆ ಅವರ ಮನೆಯ ಹಾದಿ ಗೊತ್ತೇ ಪಾರ್ಥ?

ಪಾರ್ಥ : ಇದೋ ಈ ಬಾಣಕ್ಕೆ.. "ಕಗ್ಗ ರಸಧಾರೆ.. ಕಗ್ಗ ರಸಧಾರೆ" ಎಂದು ಮಂತ್ರವನ್ನು ಉಪದೇಶಿಸಿ ಬಿಡುತ್ತೇನೆ.. ಅದು ಅಲ್ಲಿಗೆ ಕರೆದೊಯ್ಯುತ್ತದೆ...

ಕೃಷ್ಣ : ಆಹಾ ಎಂಥಹ ಸುಂದರ ಆಲೋಚನೆ.. ಭಗವದ್ಗೀತೆ ಉಲಿದ ನಾನು.. ಪಾರ್ಥಸಾರಥಿ ಆಗುವ ಬದಲು ಪಾರ್ಥನೆ ಸಾರಥಿಯಾಗಿದ್ದಾನೆ.. ತುಂಬಾ ಸಂತಸದಾಯಕ ವಿಷಯ.. ನಡೆ ಪಾರ್ಥ..

ಪಾರ್ಥ ಮತ್ತು ಪಾರ್ಥಸಾರಥಿ ಇಬ್ಬರೂ ಬರುತ್ತಾರೆ.. ಬಾಣ ನಿಂತ ಕಡೆ ಅವರು ನಿಲ್ಲುತ್ತಾರೆ..

ಅಲ್ಲಿ ನೋಡಿದರೆ..

ದೇವಸ್ಥಾನದ ಗೋಪುರವೇ ನಾಚುವಂಥ ಪ್ರಶಾಂತತೆ ಮುಖದಲ್ಲಿ..

ನಾಚಿ ಬಾಡಿದ ಗೋಪುರ.. ಅದರ ಮುಂದೆ ನಮ್ಮ ರವಿ ಸರ್ (ಚಿತ್ರಕೃಪೆ - ರವಿ ಸರ್)

ಸಾಧನೆ ಎನ್ನಿಸಿದರೂ ಧೈನ್ಯತಾ ಭಾವ ಮನದಲ್ಲಿ..

ಏನಿಲ್ಲ ಸರ್ ನನ್ನ ಸಾಧನೆ ಎನ್ನುವ ರವಿ ಸರ್ (ಚಿತ್ರ ಕೃಪೆ - ರವಿ ಸರ್)

ಇನ್ನಷ್ಟು ಸಾಧಿಸಬೇಕು ಎನ್ನುವ ಹಸಿವು ಕಂಗಳಲ್ಲಿ..

ಸಾಧನೆಗೆ ಕೊನೆಯಿಲ್ಲ ಎನ್ನುವ ರವಿ ಸರ್ (ಚಿತ್ರ ಕೃಪೆ - ರವಿ ಸರ್)

ಮುಂದಿನ ಕಗ್ಗ ರಸಧಾರೆಯ ಬಿಡುಗಡೆಗೆ ತಹ ತಹಸುತ್ತಿರುವ ಅಭಿಮಾನಿ ಬಳಗ..

ಇರಮ್ಮ.. ಕಗ್ಗ ಧಾರೆ ಪುಸ್ತಕ ತಗೊಂಡು ಬರ್ತೀನಿ ಇರಮ್ಮ  - (ಚಿತ್ರಕೃಪೆ - ಅಂತರ್ಜಾಲ)

ಆಹಾ ಇಂಥ ಸ್ನೇಹಮಯಿ ಹುಟ್ಟು ಹಬ್ಬಕ್ಕೆ ನಾವಿಂದು ಬಂದದ್ದು
. ................................
. ................................
. ................................
. ................................
. ................................

ಬಿಡು ಪಾರ್ಥ ಅದನ್ನು ಹೇಳೋದೇ ಬೇಡ..

ನೋಡು ಅಶ್ವಗಳು ಕೂಡ ಕಿವಿ ನಿಮಿರಿಸಿಕೊಂಡು.. ಕಗ್ಗ ರಸಧಾರೆಯನ್ನು ಸವಿಯಲು ಕಾಯುತ್ತಿವೆ..

ಪಾರ್ಥಸಾರಥಿ ಮತ್ತು ಪಾರ್ಥಸಾರಥಿಯ ಸಾರಥಿ ಇಬ್ಬರೂ ರಥದಿಂದ ಇಳಿದು..

"ನಿಮ್ಮ ಕಗ್ಗ ರಸಧಾರೆ ಗಂಗಾವತರಣದ ಹಾಗೆ ಸದಾ ಹರಿಯುತ್ತಿರಲಿ.. ಜಗತ್ತಿನ ಮೂಲೆ ಮೂಲೆಗೂ ನಿಮ್ಮ ಬರಹ ತಲುಪಲಿ.. ಯಶಸ್ಸು.. ಅಭಿಮಾನದ ಹೊಳೆಯಲ್ಲಿ ಸದಾ ಮೀಯುತ್ತಿರಲಿ ನಿಮ್ಮ ಮನಸ್ಸು.. ಶುಭವಾಗಲಿ ಶ್ರೀ ರವಿ ತಿರುಮಲೈ ಅವರೇ"

ಅಶ್ವಗಳಿಗೆ ಇನ್ನಷ್ಟು ಹೊತ್ತು ಅಲ್ಲಿರಲು ಆಸೆಯಾಗಿತ್ತು.. ಆದರೆ ಮತ್ತೆ ಕಾಯಕಕ್ಕೆ ಹೋಗಬೇಕಾಗಿದ್ದರಿಂದ ಒಲ್ಲದ ಮನಸ್ಸಿನಿಂದ ಹೊರಟವು..

ರವಿ ಅವರಿಗೆ ಸಂತಸದಿಂದ.. ಇಂಥ ಆನಂದ ನಾ ತಾಳಲಾರೆ.. ಇನ್ನು ಮಾತಲ್ಲಿ ನಾ ಹೇಳಲಾರೆ... ಎಂದು ಹಾಡಿತು.. 

ಕಗ್ಗ ರಾಸಧಾರೆಯನ್ನು ಹರಿಸುತ್ತಾ ಎಲ್ಲರ ಪ್ರೀತಿ ಅಭಿಮಾನವನ್ನು ಕೈ ಕಟ್ಟಿ ಸ್ವೀಕರಿಸುತ್ತಾ.. ತಮ್ಮ ಅಭಿಮಾನಿ ಬಳಗದಲ್ಲಿ ರವಿ ಸರ್.. ರವಿಯಣ್ಣ.. ರವಿ ಗುರುಗಳೇ ಎಂದೇ ಬಿರುದಾಂಕಿತರಾದ ರವಿ ತಿರುಮಲೈ ಸರ್ ನಿಮಗೆ ಜನುಮದದಿನದ ಶುಭಾಶಯಗಳು..

ಶುಭವಾಗಲಿ ಎಂಬ ಹಾರೈಕೆ ನಮ್ಮದು.. ಶುಭವಾಗಲಿ ಎಂಬ ಹಾರೈಕೆ ನಿಮ್ಮಿಂದ ನಮಗೆ ಸಿಕ್ಕಾಗ ನಮ್ಮ ಜನುಮ ಪಾವನ..

ಆದಷ್ಟು ಬೇಗ ಕಗ್ಗ ರಸಧಾರೆ ಹರಿಯಲಿ.. ಕಾಯುತ್ತಿರುವ ನಿಮ್ಮವ ಹರಿ ಹರ (ಶ್ರೀಕಾಂತ್ ಮಂಜುನಾಥ್...)
.
ಹುಟ್ಟು ಹಬ್ಬದ ಶುಭಾಶಯಗಳು ಗುರುಗಳೇ.... !!!!