Tuesday, December 12, 2017

ಹೀಗೊಂದು ಭಾವ ಲಹರಿ

ಮಹಾಭಾರತದಲ್ಲಿ ಕುರುಕ್ಷೇತ್ರ ಯುದ್ಧದ ನಿರ್ಧಾರ ಕೊನೆಹಂತಕ್ಕೆ ತಲುಪಿರುತ್ತದೆ.. ಯುದ್ಧ ಬಿಟ್ಟರೆ ಅನ್ಯ ಮಾರ್ಗವಿಲ್ಲ ಎಂದು ತೀರ್ಮಾನವಾದ ಸಮಯ ..  ಪಾಂಡವರು ಮತ್ತು ಕೌರವರು ತಮ್ಮ ತಮ್ಮ ಶಕ್ತಿಯನ್ನು ಹೆಚ್ಚಿಸಿಕೊಳ್ಳುವಲ್ಲಿ ತಮ್ಮ ಸಮಯವನ್ನು ತೊಡಗಿಸಿಕೊಂಡಿರುತ್ತಾರೆ. ಕೌರವರು ಶಕ್ತಿಶಾಲಿ ರಾಜ ಮಹಾರಾಜರುಗಳ ಸಹಾಯ ಹಸ್ತವನ್ನು ಪ್ರೀತಿಯಿಂದಲೋ, ಹೆದರಿಸಿಯೋ ಅಥವಾ ತಂತ್ರಗಾರಿಕೆಯಿಂದಲೋ ತಮ್ಮ ಕಡೆಗೆ ಸೆಳೆದುಕೊಳ್ಳುವುದರಲ್ಲಿ ಸಫಲರಾಗಿರುತ್ತಾರೆ.. 

ಇದರಲ್ಲಿ ಒಂದು ಘಟನೆ.. ಮದ್ರ ದೇಶದ ಮಹಾರಾಜ ಶಲ್ಯ ತನ್ನ ತಂಗಿ ಮಾದ್ರಿಯ ಮಕ್ಕಳಾದ ನಕುಲ ಸಹದೇವರು ಇರುವ ಪಾಂಡವರ ಪಕ್ಷಕ್ಕೆ ಸಹಾಯ ನೀಡಲು ತನ್ನ ಸಮಸ್ತ ಸೈನ್ಯದೊಡನೆ ಕುರುಕ್ಷೇತ್ರದ ಕಡೆಗೆ ಸಾಗುತ್ತಿರುತ್ತಾನೆ.. ಇದನ್ನು ತಿಳಿದ ಶಕುನಿ ಮೆಲ್ಲಗೆ ದುರ್ಯೋಧನನಿಗೆ ಶಲ್ಯನ ಸೇನೆಗೆ ಮತ್ತು ಸೈನಿಕರಿಗೆ ವಿಶಿಷ್ಟ ಅತಿಥಿ ಉಪಚಾರ ಮಾಡು.. ಆದರೆ ಅದನ್ನು ನೀನು ಮಾಡುತ್ತಿದ್ದೀಯ ಎಂದು ತಿಳಿಯದ ಹಾಗೆ ನೋಡಿಕೋ ಎನ್ನುತ್ತಾನೆ.. 

ಶಕುನಿ ಹೇಳಿದ ಮಾತನ್ನು ಕೇಳುತ್ತಿದ್ದ ಮಂದ ಮತೀಯ ಆದರೆ ಛಲವಾದಿಯಾಗಿದ್ದ ದುರ್ಯೋಧನ.. ತನ್ನ ಸೇನೆ ಗೆಲ್ಲಲೇಬೇಕೆಂಬ ಛಲವಿದ್ದದರಿಂದ ಹಾಗೆಯೇ ಮಾಡುತ್ತಾನೆ.. ಇದನ್ನರಿಯದ ಶಲ್ಯ,  ಅತಿಥಿ ಸತ್ಕಾರವನ್ನು ಮಾಡುತ್ತಿರುವುದು ಪಾಂಡವರು ಎಂಬ ಭ್ರಮೆಯಲ್ಲಿ ಖುಷಿಯಾಗಿರುತ್ತಾನೆ.... ಆದರೆ ವಸ್ತುಸ್ಥಿತಿ ಅರಿಯುವಷ್ಟರಲ್ಲಿ ದುರ್ಯೋಧನನ ಉಪ್ಪಿನ ಋಣಕ್ಕೆ ಅಧೀನನಾಗಿ ತನಗೆ ಇಷ್ಟವಿಲ್ಲದೆ ಇದ್ದರೂ ಕೌರವರ ಪರವಾಗಿ ಪಾಂಡವರ ವಿರುದ್ಧ ಯುದ್ಧ ಮಾಡಲು ನಿಲ್ಲುತ್ತಾನೆ.. .. 

ಇಲ್ಲಿ ಶಲ್ಯ ಮಾಡಬಹುದಾಗಿದ್ದು ತನ್ನ ಸೇನೆಗೆ ಅತಿಥಿ ಸತ್ಕಾರ ಸಿಕ್ಕಾಗ ಇದರ ಕತೃ ಯಾರು, ಯಾವ ಕಾರಣಕ್ಕೆ ಸಹಾಯಕ್ಕೆ ಮಾಡುತ್ತಿದ್ದಾರೆ.. ಇದರ ಒಳಾರ್ಥವೇನು, ಇದರಲ್ಲಿ ಏನಾದರೂ ಸಂಚಿದೆಯೇ ಹೀಗೆ ನಾನಾ ರೀತಿಯಿಂದ ಯೋಚಿಸಿ ಅತಿಥಿ ಸತ್ಕಾರ ಸ್ವೀಕರಿಸಬೇಕಿತ್ತು .. ಆದರೆ ತಾನು ಅಂದುಕೊಂಡಿದ್ದು ಸರಿ .. ಇದು ಪಾಂಡವರದೇ ಆತಿಥ್ಯ ಎನ್ನುವ ಒಂದು ತಪ್ಪು ಭ್ರಮೆಯಲ್ಲಿ .. ಆ ಆತಿಥ್ಯವನ್ನು ಸ್ವೀಕರಿಸುತ್ತಾನೆ.. ಮುಂದೆ ನೆಡೆದದ್ದೆಲ್ಲಾ ಉಲ್ಟಾ.. 

ಮಾಧ್ಯಮಗಳು ಶಲ್ಯ ಅಥವಾ ದುರ್ಯೋಧನನ ರೀತಿಯಲ್ಲಿ ವರ್ತಿಸಬಾರದು.. ವಸ್ತುನಿಷ್ಠವಾಗಿ ಇರುವ ವಿಷಯವನ್ನು ಸರಿಯಾದ ದಿಕ್ಕಿನಲ್ಲಿ ಇದೆಯೇ.. ಇದನ್ನು ಬಿತ್ತರಿಸಿದರೆ ಸಮಾಜಕ್ಕೆ ಎಳ್ಳಷ್ಟಾದರೂ ಉಪಯೋಗವಿದೆಯೇ.. ಇದನ್ನು ಯಾಕೆ ಬಿತ್ತರಿಸಬೇಕು ಎನ್ನುವ  ಸ್ಪಷ್ಟತೆ ಇದ್ದರೇ ಅಥವಾ ಇದ್ದಾಗ ಅನುಕೂಲ.. ಎತ್ತು ಈಯಿತು ಅಂದರೆ ಕೊಟ್ಟಿಗೆಗೆ ಕಟ್ಟು ಎನ್ನುವಂತೆ.. ಅಂದಿನ ದಿನಕ್ಕೆ ಜನಪ್ರಿಯತೆಯ ಮೈಲಿಗಲ್ಲು ದಾಟುವ ಹಾದಿ ಹಿಡಿಯಬಾರದು.. 

ಜನಸಾಮಾನ್ಯರಿಗೆ ಯಾವ ಸುದ್ದಿ ಬೇಕು, ಇಂತಹ ಸುದ್ದಿ ಬೇಕು ಎಂದು ವಿಚಾರ ಮಾಡುವುದಕ್ಕಿಂತ.. ಸಮಾಜದಲ್ಲಿ ನೆಡೆಯುತ್ತಿರುವ ಸಾಮಾಜಿಕ ಕಳಕಳಿಯುಳ್ಳ ವಸ್ತು ವಿಷಯವನ್ನು ಜನಮಾನಸದಲ್ಲಿ ಬಿತ್ತಬೇಕು.. 

ನಾನು ೮೦ರ ದಶಕದ ಆರಂಭದಲ್ಲಿ ಮಯೂರದಲ್ಲಿ ಓದಿದ್ದೆ.... ಅಂದು ಹೆಣ್ಣಿನ ಓರೇ ನೋಟ.. ಗೆಜ್ಜೆ ಸದ್ದಿಗೆ ಮಾನವ ವಿಚಲಿತನಾಗುತ್ತಿದ್ದ.. ಆದರೆ ಇಂದು ಗೆಜ್ಜೆ ಸದ್ದು, ಓರೇ ನೋಟ ಸಾಕಾಗುವುದಿಲ್ಲ.... ಇದು ಸುಮಾರು ೩೭ ವರ್ಷಗಳ ಹಿಂದೆ ಓದಿದ್ದು.. ಆದರೆ ಇಂದಿಗೂ ಅನ್ವಯಿಸುತ್ತದೆ..

ಇಂದು ಯಾವುದೇ ಮಾಧ್ಯಮ ನೋಡಿದರು ಅದು ಮುದ್ರಣವಾಗಿರಬಹುದು ಇಲ್ಲವೇ ದೃಶ್ಯ ಮಾಧ್ಯಮವಾಗಿರಬಹುದು.. ಹಠಾತ್ ನಶೆಯೇರುವಂಥಹ ಕಾರ್ಯಕ್ರಮದ ವಿವರಣೆಯೇ ಪ್ರಾಧಾನ್ಯತೆ ಪಡೆದುಕೊಂಡಿರುತ್ತದೆ.. 

ಸುಮ್ಮನೆ ಹಾಗೆ ಪ್ರಶ್ನೆ ಕೇಳಿದರೆ ಜನರು ಬದಲಾಗಿದ್ದಾರೆ ಅವರಿಗೆ ಇಂತಹ ದೃಶ್ಯಗಳೇ ಇಂತಹ ವಿಷಯಗಳೇ ಬೇಕು ಎಂಬ ಹಾರಿಕೆ ಉತ್ತರ ನೀಡುತ್ತಾರೆ.. 

ನಾ ಹೇಳುವ ಮಾತು ಎಂದರೆ.. ಮಂದಿಯ ಯೋಚನೆ ಬದಲಾಗಿಲ್ಲ.. ಅದನ್ನು ಬಿತ್ತರಿಸುವ ಮಾಧ್ಯಮದ ಅಭಿರುಚಿ ಬದಲಾಗಿದೆ..ಅದರಿಂದ ಜನರ ಅಭಿರುಚಿಯೂ ಹದಗೆಟ್ಟಿದೆ..  ಪ್ರತಿ ದೇಶದ ಭವಿಷ್ಯ ನಿನ್ನೆಯ ವೃತ್ತ ಪತ್ರಿಕೆಯಲ್ಲಿದೆ ಎಂದು ಓದಿದ್ದೆ ಶಾಲೆಯಲ್ಲಿದ್ದಾಗ.. ಹೌದು ಎಷ್ಟು ನಿಜ.. ವೃತ್ತ ಪತ್ರಿಕೆಗಳು ದೇಶದ ಇತಿಹಾಸ, ವಾಣಿಜ್ಯ, ಕ್ರೀಡಾರಂಗ, ರಾಜಕೀಯ, ಕಲೆ ಮುಂತಾದ ವಿಷಯಗಳ ಬಗ್ಗೆ ಸಮಗ್ರ ಚಿತ್ರಣ ನೀಡುತ್ತಾ.. ಸಮಾಜ ಹೀಗಿದೆ .. ಆದರೆ ಅದನ್ನು ಹೀಗೆ ಸರಿ ಮಾಡಬಹುದು ಎನ್ನುವ ಅಭಿಪ್ರಾಯ ಮೂಡಿಸುವ ನಿಟ್ಟಿನಲ್ಲಿ ಕಾರ್ಯನಿರತವಾದಾಗ.. ಜನ ಸಾಮಾನ್ಯರಿಗೆ ಹೌದಲ್ಲ ನಮ್ಮ ದೇಶದಲ್ಲಿ ಹೀಗೆಲ್ಲ ಆಗುತ್ತಿದೆ.. ದೇಶದಲ್ಲಿ ಇಂತಹ ಅದ್ಭುತ ಸಂಪತ್ತು ತುಂಬಿದೆ.. ಇದನ್ನು ಸಮರ್ಪಕವಾಗಿ ಉಪಯೋಗಿಸಿದಾಗ ದೇಶದ ಪ್ರಗತಿ ಕಾಣುತ್ತದೆ ಎನ್ನುವ ಸತ್ಯವನ್ನು ಅರಿತುಕೊಳ್ಳುತ್ತಾರೆ.. 

ಇಲ್ಲಿ ಯಾವುದೇ ಪ್ರಜೆಯಾದರೂ ಮಾಧ್ಯಮಗಳ ಜೊತೆ ನಿಲ್ಲುವುದು ದಿನದಲ್ಲಿ ಕಡಿಮೆ ಪ್ರಮಾಣದಲ್ಲಿ.. ಕಾರಣ ಅವನದೇ ಆದ ಸಾಂಸಾರಿಕ ಗೊಂದಲಗಳು, ಭವಿಷ್ಯದ ಬಗ್ಗೆ ಇರುವ ಹೆದರಿಕೆ, ಜವಾಬ್ಧಾರಿಗಳು ಹೀಗೆ ನೂರಾರು, ಸಾವಿರಾರು ಸಮಸ್ಯೆಗಳ ಜೊತೆಯಲ್ಲಿ ಈಜಾಡುತ್ತಿದ್ದಾಗ.. ತನ್ನ ಉತ್ತಮ ಜವಾಬ್ಧಾರಿಯನ್ನು ಮರೆತು ಕೇವಲ ಯಶಸ್ಸಿನ ಏಣಿಯನ್ನೇ ಮಾನದಂಡವಾಗಿಟ್ಟುಕೊಂಡು ಬೇಡದ ವಿಷಯವನ್ನು ರಂಜನೀಯವಾಗಿ ಬಿತ್ತರಿಸಿ / ಮುದ್ರಿಸಿ ಪ್ರಜೆಗಳನ್ನು ಹಾದಿ ತಪ್ಪಿಸುವ ಇಲ್ಲವೇ ಇರುವ ಗೊಂದಲಗಳನ್ನು ಇನ್ನಷ್ಟು ಹೆಚ್ಚಿಸುವ ಕಾರ್ಯಕ್ಕೆ ಕೈ ಹಾಕುವುದು ತಪ್ಪಾಗುತ್ತದೆ.. 

ಅದೆಲ್ಲ ಸರಿ ಇದಕ್ಕೆ ಏನೂ ಮಾಡಬೇಕಪ್ಪ.. ಬರಿ ಹರಿಕಥೆ ಮಾಡಿದರೆ ಸಮಸ್ಯೆಗಳಿಗೆ ಉತ್ತರ ಸಿಗಬಹುದೇ ಎಂದರೆ ಖಂಡಿತ ಉತ್ತರ ಸಿಗೋಲ್ಲ, ಬದಲಿಗೆ ಸಮಾಜಕ್ಕೆ ಹಂಚುವ ವಿಷಯವನ್ನು ಸರಿಯಾದ ಮಾನದಂಡದಲ್ಲಿ ಬಿತ್ತರಿಸುವ ಶಕ್ತಿ ತಮಗೆ ಇದೆ ಎನ್ನುವದನ್ನು ಜನತೆಗೆ ತೋರಿಸಬೇಕು.. ಅಯ್ಯೋ ಬಿಡು ಎಷ್ಟು ಮಾಡಿದರೂ ಅಷ್ಟೇ ಎನ್ನುವ ಧೋರಣೆ ಮಾಧ್ಯಮಗಳಲ್ಲಿ ಬರಬಾರದು.. 

ಬೆಳಿಗ್ಗೆ ಎದ್ದು  ಸುದ್ದಿವಾಹಿನಿಗಳಲ್ಲಿ.. ಬರಿ ಸುದ್ದಿವಾಹಿನಿಯೇ ದೂರದರ್ಶನ ಎಂದು ಹೇಳಿದರೆ ಒಳ್ಳೆಯದೇನೋ ಅಥವಾ ವೃತ್ತ ಪತ್ರಿಕೆಯಲ್ಲಿ ಸುದ್ದಿಯನ್ನು ನೋಡುವ ಅಥವಾ ಓದುವ ಜನಸಾಮಾನ್ಯನ ಹೃದಯಕ್ಕೆ ಭಯಬೀತರಾಗುವಂಥಹ ಕೊಲೆ, ಸುಲಿಗೆ, ಭ್ರಷ್ಟಾಚಾರ, ಮೋಸ, ದಗಾ ಎನ್ನುವ ನೂರಾರು ಋಣಾತ್ಮಕ ವಿಷಯಗಳನ್ನು ಬಲವಂತವಾಗಿ ತುರುಕಿ.. ಅರೆ ನಮ್ಮ ಸಮಾಜ ಇರುವುದೇ ಹೀಗೆ..ಉಪಯೋಗವಿಲ್ಲ.. ನಾ ಒಬ್ಬ ಯಾಕೆ ಹಾಗಿರಬೇಕು.. ಹೀಗಿರಬೇಕು ಎನ್ನುವ ಕಾಡುವಂತಹ ಪ್ರಶ್ನೆಗಳಿಗೆ ಉತ್ತರ ನಿಲುಕದೆ.. ಆ ಕೆಟ್ಟ ವ್ಯವಸ್ಥೆಯಲ್ಲಿ ತಾನು ಒಂದಾಗುವುದೇ ಬಾಳಿನ ಕರ್ತವ್ಯ ಎನ್ನುವಂತಹ ನಿರ್ಧಾರಕ್ಕೆ ಬರುತ್ತಾನೆ.. ಇದಲ್ಲವೇ ಅಪಾಯದ ಮಟ್ಟ.. 

ಮತ್ತೊಮ್ಮೆ ಮಹಾಭಾರತದ ಎಳೆಯನ್ನು ಇಲ್ಲಿ ತರಲು ಇಚ್ಛಿಸುತ್ತೇನೆ.. ಕುರುಕ್ಷೇತ್ರ ಯುದ್ಧ ಮುಗಿಯುತ್ತದೆ.. ಅರ್ಜುನ ಮತ್ತು ಭೀಮ ಅಸಾಮಾನ್ಯ ಕಲಿಗಳಂತೆ ಹೋರಾಡಿ ಪಾಂಡವರ ವಿಜಯದಲ್ಲಿ ಮುಖ್ಯ ಪಾತ್ರವಹಿಸಿರುತ್ತಾರೆ.. ಇದನ್ನು ಮಾನವ ಸಹಜ ಅಹಂ ಬರುತ್ತದೆ.. ನನ್ನಿಂದ ನನ್ನಿಂದ ಎಂದು ವಾಗ್ವಾದ ಶುರುವಾಗುತ್ತದೆ.. ಆಗ ಜಗನ್ನಾಟಕ ಸೂತ್ರಧಾರಿ ಶ್ರೀ ಕೃಷ್ಣ.. ಬರ್ಬರೀಕಾನನ್ನ ಕೇಳು ಎನ್ನುತ್ತಾನೆ.. ಆಗ ಬರ್ಬರೀಕಾ  " ಕುರುಕ್ಷೇತ್ರದಲ್ಲಿ ಅಧರ್ಮಿಗಳನ್ನು ಕೊಲ್ಲುತ್ತಿದ್ದುದು ನನಗೆ ಕಂಡ ಹಾಗೆ ಬರಿ ಸುದರ್ಶನ ಚಕ್ರ ಒಂದೇ.... ಅದು ಶ್ರೀಕೃಷ್ಣನದು.. ಹಾಗಾಗಿ ಕುರುಕ್ಷೇತ್ರ ಗೆದ್ದದ್ದು ಶ್ರೀಕೃಷ್ಣನಿಂದಲೇ ಹೊರತು ನಿಮ್ಮಿಂದ ಅಲ್ಲ ಎಂದು ಭೀಮಾರ್ಜುನರಿಗೆ ಹೇಳುತ್ತಾನೆ.. ಮುಂದೆ ಏನಾಗುತ್ತದೆ..  ಅದು ಇಲ್ಲಿನ ವಿಷಯಕ್ಕೆ ಹೊಂದುವುದಿಲ್ಲ.. ಆದರೆ ಈ ಮಾಧ್ಯಮಗಳು ಯಾರದೋ ಕಾಣದ ಕೈಯಿನ ಮರ್ಜಿಗೆ ಒಳಪಟ್ಟು ಕೆಲಸ ಮಾಡುತ್ತಿರುತ್ತದೆ ಎನ್ನುವುದಕ್ಕೆ ಈ ಉದಾಹರಣೆ ನೀಡಿದೆ.. 

ಕಾಣದ ಕೈಗಳು ತಮ್ಮ ಬೆಳೆಯನ್ನು ಬೇಯಿಸಿಕೊಳ್ಳಲು ಸೃಷ್ಟಿ ಮಾಡುವ ಈ ಮಾಧ್ಯಮಗಳಿಗೆ ದೇಶದ ಪ್ರಗತಿ, ಒಳಿತು ಬೇಕಿಲ್ಲ, ಬದಲಿಗೆ ರಂಗುರಂಗಿನ ವಿಷಯವನ್ನು ತುಂಬಿ ಜನಪ್ರಿಯತೆ ಹೆಚ್ಚಿಸಿಕೊಂಡು ಜಾಹೀರಾತಿನಿಂದ ಬೆಳೆಯುವ ಆಸೆ.. ಹೀಗಿರುವಾಗ ಸಮಾಜಕ್ಕೆ ಒಳ್ಳೆಯದಾಗಬೇಕೆಂದರೆ.. ಕಣ್ಣು ಮುಚ್ಚಿಕೊಂಡು "ಯದಾ ಯದಾ ಹಿ ಧರ್ಮಸ್ಯ..... " ಹೇಳುತ್ತಾ ಕೂರಬೇಕು.. 

ಡಾ. ರಾಜಕುಮಾರ್ ಅವರ ಜ್ವಾಲಾಮುಖಿ ಚಿತ್ರದ "ಹೇಳುವುದು ಒಂದು ಮಾಡುವುದು ಇನ್ನೊಂದು ನಂಬುವುದು ಹೇಗೋ ಕಾಣೆ ಪದ್ಮಾವತಿಪತಿ ತಿರುಪತಿ ಶ್ರೀವೆಂಕಟಾಚಲಪತಿ" ಹಾಡಿನಂತೆ ಜನಸಾಮಾನ್ಯನ ಮನಸ್ಸನ್ನು ಗೊಂದಲಮಯವಾಗಿ ಮೂಡಿಸುತ್ತಾರೆ. 

ಒಂದು ತಿಂಗಳು ದೃಶ್ಯ ಮಾಧ್ಯಮಗಳನ್ನೂ , ಮುದ್ರಣ ಮಾಧ್ಯಮಗಳನ್ನು ಋಣಾತ್ಮಕ ಸುದ್ದಿಗಳನ್ನೂ ಬಿತ್ತರಿಸುವುದನ್ನು ನಿಲ್ಲಿಸಿಬಿಟ್ಟರೆ  ಜೊತೆಯಲ್ಲಿ ಪ್ರಜೆಗಳಿಗೆ ಸುದ್ದಿಯೇ ಒಂದು ಅತಿಥಿಯಾದರೆ ಆಗ ಪ್ರಜಾಪ್ರಭುತ್ವದಲ್ಲಿ ಎಂಥಹ ಬದಲಾವಣೆ ಬರಬಹುದು ನೋಡಿ.. ಅಪರಾಧ, ಕೊಲೆ, ಸುಲಿಗೆ, ದರೋಡೆ, ಲಂಚ, ರಾಜಕೀಯ, ಮೋಸ ಇದ್ಯಾವೂ ಋಣಾತ್ಮಕ ಅಂಶಗಳು ಅವನನ್ನು ಕಾಡುವುದಿಲ್ಲ.. ನನ್ನ ಸಮಾಜ ಚೆನ್ನಾಗಿದೆ ಎನ್ನುವ ಹಂತಕ್ಕೆ ಬರುತ್ತಾನೆ.. 

ಅದೇ ರೀತಿ ಇನ್ನೊಂದು ತಿಂಗಳು ಬರಿ ಧನಾತ್ಮಕತೆಯಿಂದ ಕೂಡಿರುವ ವಿಷಯಗಳನ್ನು ಮಾತ್ರ ಬಿತ್ತರಿಸಲು ಅನುವು ಮಾಡಿಕೊಟ್ಟರೆ.. ಜನಸಾಮಾನ್ಯನ ಮನಸ್ಸು ಹತ್ತಿಯಂತೆ ಹಗುರಾಗಿರುತ್ತದೆ.. ಹೌದು ತನ್ನ ಸಂಸಾರದ ಸುಖ ದುಃಖಗಳನ್ನೂ ನುಂಗಿಕೊಂಡು.. ಅರೆರೇ ಜೀವನವನ್ನು ಹೀಗೂ ಸಾಗಿಸಬಹುದು.. ಹಾಗೆಯೇ ನಾ ಅಂದುಕೊಂಡಷ್ಟು ರೀತಿಯಲ್ಲಿ ಪ್ರಪಂಚವಿಲ್ಲ ಎನ್ನುವ ನಿರ್ಧಾರಕ್ಕೆ ಬರುತ್ತಾನೆ.. 

ಬದಲಾವಣೆ ಅವನಲ್ಲಿ ಕಾಣಸಿಗುತ್ತದೆ.. "ನಾ" ಹೋದರೆ ಹೋದೆನು ಎನ್ನುವ ಕನಕದಾಸರ ನುಡಿಯಂತೆ.. ನಾ ಒಳ್ಳೆಯವನಾದರೆ ಜಗತ್ತು ಒಳ್ಳೆಯದಾಗಿಯೇ ಕಾಣಿಸುತ್ತದೆ ಎನ್ನುವ ಮನೋಭಾವನೆಗೆ ಆವನು ಬರುತ್ತಾನೆ.. ಸಹಜ ಸುಂದರ ನಟ ಅನಂತ್ ನಾಗ್ ಅವರ ಬೆಳದಿಂಗಳ ಬಾಲೆ ಚಿತ್ರದಲ್ಲಿ ಹೇಳುತ್ತಾರೆ.. 
"ಮನುಜ ನಾಲ್ಕು ಹಂತಗಳಲ್ಲಿ ಬೆಳೆಯುತ್ತಾನೆ 
ನಾ ಚೆನ್ನಾಗಿಲ್ಲ ಪ್ರಪಂಚವೂ ಚೆನ್ನಾಗಿಲ್ಲ 
ನಾ ಚೆನ್ನಾಗಿದ್ದೇನೆ ಪ್ರಪಂಚ ಚೆನ್ನಾಗಿಲ್ಲ 
ನಾ ಚೆನ್ನಾಗಿಲ್ಲ ಪ್ರಪಂಚ ಚೆನ್ನಾಗಿದೆ 

ಆದರೆ ನಾಲ್ಕನೇ ಹಂತದಲ್ಲಿ 
ನಾನೂ ಚೆನ್ನಾಗಿದ್ದೇನೆ.. ಪ್ರಪಂಚವೂ ಚೆನ್ನಾಗಿದೆ 

ನಾವುಗಳು ಈ ನಾಲ್ಕನೇ ಹಂತಕ್ಕೆ ಬರಬೇಕು ಎನ್ನುತ್ತಾರೆ.. ಎಷ್ಟು ನಿಜ ಅಲ್ಲವೇ ನೋಡುವ ನೋಟ ಚೆನ್ನಾಗಿದ್ದರೆ ಎಲ್ಲವೂ ಸುಂದರವಾಗಿರುತ್ತದೆ ಎನ್ನುವ ಮಾತುಗಳು ಬಂದಿರುವುದು ಹೀಗೆ.. 

ಮಾಧ್ಯಮಗಳು ಸಮಾಜಕ್ಕೆ ಕಣ್ಣಿದ್ದ ಹಾಗೆ.. ಆ ಕಣ್ಣುಗಳು ಜನ ಸಾಮಾನ್ಯರಿಗೆ ಬೇಡದ ವಿಷಯಗಳನ್ನು ಬಿತ್ತರಮಾಡಿ ಅವನ ಮಾನಸ ಸರೋವರವನ್ನು ರಾಡಿಗೊಳಿಸುವ ಬದಲು....  ಬಾರಪ್ಪ ನಾ ನಿನಗೆ ಒಂದು ಸುಂದರ ಸಮಾಜದ ಪರಿಕಲ್ಪನೆಯನ್ನು ಬಿತ್ತುವ ಕೆಲಸ ಮಾಡುತ್ತೇನೆ.. ಅದಕ್ಕೆ ನಿನ್ನ ಸಹಯೋಗವೂ ಇರಲಿ ಎಂದಾಗ 

"ಜಗವೇ ಒಂದು ರಣರಂಗ"
ಎಂದು ಹಾಡುವ ಬದಲು 
ಜಗವೇ ಒಂದು ಸತ್ಯ ಸಂಘ 

ಎನ್ನುವ ಪರಿಭಾಷೆಗೆ ಮನುಜನ ಮನಸ್ಸು ಹೊಂದಿಕೊಳ್ಳುತ್ತಾ ಸಾಗುತ್ತದೆ ..  ಸುದ್ದಿ ಎಂದರೆ ಬರಿ ಋಣಾತ್ಮಕವಾಗಿಯೇ ಇರಬೇಕು.. ಹಾಗಿದ್ದರೆ ಮಾತ್ರ ಯಶಸ್ಸು ಅಂಗೈಯಲ್ಲಿ ಎನ್ನುವ ಭ್ರಮೆಯನ್ನು ಕಳಚಿ ಹೊರಬಂದಾಗ ಮಾತ್ರ ಉಳಿವು... ಇಲ್ಲವೇ ಅಳಿವು.. 

ಮೇಯರ್ ಮುತ್ತಣ್ಣ ಚಿತ್ರದಲ್ಲಿ ದೇಶದ ಬಡತನವನ್ನು ಎತ್ತಿ ಹಿಡಿದು ಅದಕ್ಕೆ ರಂಗು ತುಂಬಿ ಬಹುಮಾನ ಪ್ರಶಂಸೆ  ಗಿಟ್ಟಿಸಿಕೊಳ್ಳುವ ಹಾದಿಯಲ್ಲಿದ್ದ ನಾಯಕಿಗೆ ಅಣ್ಣಾವ್ರು ಹೇಳುವ ಮಾತು "ನಾವು ಮಾಡುವ ಕೆಲಸ ನಾಲ್ಕು ಜನಕ್ಕೆ ಉಪಯೋಗವಾಗಬೇಕು.. " ಎನ್ನುವ ಮಾತು ಈ ಹೊತ್ತಿಗೆ ಎಷ್ಟು ನಿಜ ಅಲ್ಲವೇ.. !!!

ಬೆಳೆಯುವ ಮಕ್ಕಳಿಗೆ ಈ ಮಾಧ್ಯಮಗಳು ಕೊಡುವ ಜ್ಞಾನವಾದರೂ ಏನೂ.. ಅದು ಎಲ್ಲರಿಗೂ ಗೊತ್ತಿದೆ.. ಮಕ್ಕಳನ್ನು ದೇಶದ ಆಸ್ತಿ ಮಾಡಬೇಕಾದರೆ ಮಕ್ಕಳಿಗೆ ಸುಂದರ ಪರಿಸರ ಕಟ್ಟಿಕೊಡುವ ಹೊಣೆ ಮಾಧ್ಯಮಗಳದ್ದು ಆಗಿರುತ್ತದೆ.. ಒಳ್ಳೆಯ ವಿಷಯ, ಒಳ್ಳೆಯ ಬರವಣಿಗೆ, ಒಳ್ಳೆಯ ನೀತಿ ವಿಷಯ.. ವಸ್ತುನಿಷ್ಠ ವರದಿಗಳು, ಜೊತೆಯಲ್ಲಿ ಹಿಂಸೆ, ಕ್ರೌರ್ಯವನ್ನು ವೈಭವೀಕರಿಸದೆ..ಕಾನೂನಿನ ಬಗ್ಗೆ ತಿಳುವಳಿಕೆ ನೀಡುವ ನಿಟ್ಟಿನಲ್ಲಿ ಈ ಮಾಧ್ಯಮಗಳು ದುಡಿದರೆ ಆಗ ಚಂದವಳ್ಳಿ ತೋಟದ ಚಿತ್ರದ ಅಂತಿಮ ದೃಶ್ಯದಲ್ಲಿ ಹೇಳುವ ಮಾತು ನೆನಪಿಗೆ ಬರುತ್ತದೆ "ಅಣ್ಣ ತಮ್ಮ ಒಂದಾಗಿದ್ದಾರೆ ಮನೆ ಒಂದಾಗಿರುತ್ತದೆ.. ಮನೆ ಮನೆ ಒಂದಾಗಿದ್ದಾರೆ ಊರು ಒಂದಾಗಿರುತ್ತದೆ.. ಊರು ಊರು ಒಂದಾಗಿದ್ದಾರೆ ರಾಜ್ಯ ಒಂದಾಗಿರುತ್ತದೆ.. ರಾಜ್ಯ ರಾಜ್ಯ ಒಂದಾಗಿದ್ದಾರೆ ದೇಶ ಸುಭಿಕ್ಷವಾಗಿರುತ್ತದೆ... ಭಯಂಕರ ಆಶಾವಾದ ಮಾತು ನನದಾಗಿರಬಹುದು.. ಆದರೆ ನಾಳೆ ಎನ್ನುವುದು ನಮಗೆ ಅರಿವಿಲ್ಲ ಮತ್ತು  ಅದರ ಬಗ್ಗೆ ಯೋಜನೆ ಇಲ್ಲ ಅಂದರೆ ಮನೆಯಾಗಲಿ, ಊರಾಗಲಿ, ಹಳ್ಳಿಯಾಗಲಿ, ಊರಾಗಲಿ, ರಾಜ್ಯವಾಗಲಿ, ದೇಶವಾಗಲಿ ಮುಂದುವರೆಯಲು ಕಷ್ಟವಾಗುತ್ತದೆ.. ಅಂತಹ ತಿಳಿಯಾದ  ಸಮಾಜವನ್ನು ಸೃಷ್ಟಿಸುವ ಹೊಣೆಗಾರಿಕೆ ಮಾಧ್ಯಮಗಳದ್ದು ಅಲ್ಲವೇ.. 

ಸಮಾಜಕ್ಕೆ ಕನ್ನಡಿಯಾಗಬೇಕಾದ ಸುದ್ದಿ ಮಾಧ್ಯಮಗಳು, ದೃಶ್ಯಮಾಧ್ಯಮಗಳು, ಮುದ್ರಣ ಮಾಧ್ಯಮಗಳು ಒಡೆದ ಬಿಂಬವನ್ನು ತೋರಿಸುವ ಬದಲು.. ಮನಸ್ಸಿನ ಭಾವನೆಯನ್ನು ಕೆರಳಿಸುವಂಥಹ ವಿಷಯಗಳನ್ನು ಪ್ರಕಟ ಮಾಡುವ ಬದಲು.. ಮನಸ್ಸು ಒಂದು ಹೂವಿನಂತೆ ಅದಕೆ ಬೇಕಾಗುವ ತಿಳಿಯಾದ ನೀರಿನಂತಹ ವಿಷಯಗಳನ್ನು ಧಾರೆಯೆರೆದು ಮಲ್ಲಿಗೆ ಹೂವನ್ನು ಬೆಳೆಸುವುದರಲ್ಲಿ ಅವುಗಳ ಶಕ್ತಿ ಅಡಗಿದೆ ಎನ್ನುವುದು ನನ್ನ ಮಾತು :-)

4 comments:

  1. ​ವಾಹ್ ಸುಂದರವಾದ ಬರವಣಿಗೆ ಶ್ರೀ
    ಇಂದಿನ ಪೀಳಿಗೆಯ ಜನರು ಇದನ್ನರಿತು ನಡೆದರೆ ನಿಜಕ್ಕೂ ಒಳ್ಳೆಯ ಬದಲಾವಣೆ ಸಾಧ್ಯ ನಿನ್ನ ಈ ಬರಹ ಮತ್ತು ಬರಹದ ಶೈಲಿ ಬರವಣಿಗೆಯಲ್ಲಿನ ಹಿಡಿತ ನಿಜವಾಗಿಯೂ ಶ್ಲಾಘನೀಯ ಶ್ರೀ.... ನಿನ್ನ ಬರವಣಿಗೆ ಹೀಗೆ ಸಾಗಲಿ ಎಂದು ಹಾರೈಸುವೆ

    ReplyDelete